ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 4

ಕ್ರಿಸ್ತನ ಮರಣವನ್ನ ಸ್ಮರಿಸೋಕೆ ನಾವು ಮಾಡೋ ಪ್ರಯತ್ನವನ್ನ ಯೆಹೋವ ಆಶೀರ್ವದಿಸ್ತಾನೆ

ಕ್ರಿಸ್ತನ ಮರಣವನ್ನ ಸ್ಮರಿಸೋಕೆ ನಾವು ಮಾಡೋ ಪ್ರಯತ್ನವನ್ನ ಯೆಹೋವ ಆಶೀರ್ವದಿಸ್ತಾನೆ

“ನನ್ನನ್ನ ನೆನಪಿಸ್ಕೊಳ್ಳೋಕೆ ಇದನ್ನ ಮಾಡ್ತಾ ಇರಿ.”​—ಲೂಕ 22:19.

ಗೀತೆ 8 ಕರ್ತನ ಸಂಧ್ಯಾ ಭೋಜನ

ಈ ಲೇಖನದಲ್ಲಿ ಏನಿದೆ? a

1-2. ಪ್ರತಿವರ್ಷ ನಾವು ತಪ್ಪದೇ ಸ್ಮರಣೆಗೆ ಯಾಕೆ ಹೋಗ್ತೀವಿ?

 ನಾವೆಲ್ಲರೂ ಶಾಶ್ವತ ಜೀವ ಪಡ್ಕೊಬೇಕು ಅಂತ ಯೇಸು ಸುಮಾರು 2,000 ವರ್ಷಗಳ ಹಿಂದೆ ತನ್ನ ಪ್ರಾಣವನ್ನೇ ಕೊಟ್ಟನು. ಈ ಪ್ರೀತಿಯನ್ನ ನೆನಸಿಕೊಳ್ತಾ ಇರಿ ಅಂತ ಆತನು ಶಿಷ್ಯರಿಗೆ ತಾನು ಸಾಯೋ ಹಿಂದಿನ ರಾತ್ರಿ ಆಜ್ಞೆ ಕೊಟ್ಟನು. ತಾನು ಮಾಡಿದ ತ್ಯಾಗವನ್ನ, ದ್ರಾಕ್ಷಾಮದ್ಯ ಮತ್ತು ರೊಟ್ಟಿ ಇಟ್ಕೊಂಡು ಹೇಗೆ ಸ್ಮರಿಸಬೇಕು ಅಂತನೂ ತೋರಿಸಿಕೊಟ್ಟನು.—1 ಕೊರಿಂ. 11:23-26.

2 ನಾವು ಯೇಸುವನ್ನ ತುಂಬ ಪ್ರೀತಿಸೋದ್ರಿಂದ ಆತನ ಆಜ್ಞೆಯನ್ನ ಪಾಲಿಸ್ತೀವಿ. (ಯೋಹಾ. 14:15) ಪ್ರತಿವರ್ಷ ಸ್ಮರಣೆಯ ಸಮಯದಲ್ಲಿ ಯೇಸು ಮಾಡಿರೋ ತ್ಯಾಗಕ್ಕೆ ನಾವು ಋಣಿಗಳು ಅಂತ ತೋರಿಸ್ತೀವಿ. ಅದಕ್ಕೆ ನಾವು ಯೆಹೋವ ದೇವರಿಗೆ ಪ್ರಾರ್ಥನೆ ಮಾಡಿ ಯೇಸುವನ್ನ ಕೊಟ್ಟಿದ್ದಕ್ಕೆ ಥ್ಯಾಂಕ್ಸ್‌ ಹೇಳ್ತೀವಿ. ಯೇಸು ಪ್ರಾಣ ಕೊಟ್ಟಿದ್ರಿಂದ ನಮಗೆ ಹೇಗೆಲ್ಲ ಒಳ್ಳೇದಾಗಿದೆ ಅಂತ ಚೆನ್ನಾಗಿ ಯೋಚನೆ ಮಾಡ್ತೀವಿ. ಆತನು ಮಾಡಿರೋ ಈ ತ್ಯಾಗದ ಬಗ್ಗೆ ತುಂಬ ಜನರಿಗೆ ಹೇಳ್ತೀವಿ. ಅವರನ್ನೂ ಈ ಕಾರ್ಯಕ್ರಮಕ್ಕೆ ಕರಿತೀವಿ. ನಾವೂ ತಪ್ಪದೇ ಹೋಗ್ತೀವಿ.

3. ನಾವು ಈ ಲೇಖನದಲ್ಲಿ ಏನು ಕಲಿತೀವಿ?

3 ನಾವು ಈ ಲೇಖನದಲ್ಲಿ ಏನು ಕಲಿತೀವಿ? ಯೆಹೋವನ ಸಾಕ್ಷಿಗಳು 1) ಯೇಸು ಹೇಳಿಕೊಟ್ಟ ತರಾನೇ ಆತನ ಮರಣವನ್ನ ಸ್ಮರಿಸೋಕೆ, 2) ಬೇರೆಯವರನ್ನೂ ಆ ಕಾರ್ಯಕ್ರಮಕ್ಕೆ ಕರಿಯೋಕೆ, 3) ಏನೇ ತೊಂದ್ರೆ ಬಂದ್ರೂ ತಪ್ಪದೇ ಅದಕ್ಕೆ ಹಾಜರಾಗೋಕೆ ಏನೆಲ್ಲ ಪ್ರಯತ್ನ ಮಾಡಿದ್ದಾರೆ ಅಂತ ನೋಡೋಣ.

ಯೇಸು ಹೇಳಿಕೊಟ್ಟ ತರ ಮಾಡೋಕೆ ಮತ್ತೆ ಶುರುಮಾಡಿದ್ರು

4. (ಎ) ಪ್ರತಿವರ್ಷ ಸ್ಮರಣೆಯ ಭಾಷಣದಲ್ಲಿ ನಾವು ಏನು ಕೇಳಿಸಿಕೊಳ್ತೀವಿ? (ಬಿ) ಇದನ್ನೆಲ್ಲ ಹೇಳಿಕೊಟ್ಟಿದ್ದಕ್ಕೆ ನಾವು ಯೆಹೋವನಿಗೆ ಯಾಕೆ ಥ್ಯಾಂಕ್ಸ್‌ ಹೇಳಬೇಕು? (ಲೂಕ 22:19, 20)

4 ಪ್ರತಿವರ್ಷ ಸ್ಮರಣೆಯ ಕಾರ್ಯಕ್ರಮದಲ್ಲಿ ಬೈಬಲ್‌ ಆಧಾರಿತ ಭಾಷಣ ಇರುತ್ತೆ. ಅಲ್ಲಿ ಕೆಲವು ಪ್ರಶ್ನೆಗಳಿಗೆ ನಮಗೆ ಉತ್ತರ ಸಿಗುತ್ತೆ. ಮನುಷ್ಯರಿಗೆ ಯಾಕೆ ಬಿಡುಗಡೆ ಬೆಲೆ ಬೇಕು, ಒಬ್ಬ ವ್ಯಕ್ತಿ ತನ್ನ ಪ್ರಾಣ ಕೊಟ್ಟಿದ್ರಿಂದ ತುಂಬ ಜನರ ಪಾಪ ಹೇಗೆ ಪರಿಹಾರ ಆಗುತ್ತೆ, ಅಲ್ಲಿರೋ ರೊಟ್ಟಿ ಮತ್ತು ದ್ರಾಕ್ಷಾಮದ್ಯ ಏನರ್ಥ ಕೊಡುತ್ತೆ, ಅವನ್ನ ಯಾರು ತಗೊಳ್ತಾರೆ ಅನ್ನೋ ಪ್ರಶ್ನೆಗಳಿಗೆ ಉತ್ತರ ಸಿಗುತ್ತೆ. (ಲೂಕ 22:19, 20 ಓದಿ.) ಅಷ್ಟೇ ಅಲ್ಲ ಈ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವವರ ಜೀವನ ಮುಂದೆ ಎಷ್ಟು ಚೆನ್ನಾಗಿರುತ್ತೆ ಅನ್ನೋದರ ಬಗ್ಗೆನೂ ಈ ಭಾಷಣದಲ್ಲಿ ಕೇಳಿಸಿಕೊಳ್ತೀವಿ. ಅದನ್ನ ಕಲ್ಪಿಸಿಕೊಂಡಾಗ ನಮಗೆ ಸಂತೋಷ ಆಗುತ್ತೆ. (ಯೆಶಾ. 35:5, 6; 65:17, 21-23) ಇದನ್ನೆಲ್ಲ ನಮಗೆ ತಿಳಿಸಿದ್ದಕ್ಕೆ ನಾವು ಯೆಹೋವನಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ. ಯಾಕಂದ್ರೆ ಎಷ್ಟೋ ಜನರಿಗೆ ಇದೆಲ್ಲ ಗೊತ್ತೇ ಇಲ್ಲ. ಯೇಸು ಮಾಡಿರೋ ತ್ಯಾಗಕ್ಕೆ ಅವರು ಬೆಲೆನೇ ಕೊಡ್ತಿಲ್ಲ. ಯೇಸು ತನ್ನ ಮರಣವನ್ನ ಹೇಗೆ ಸ್ಮರಿಸಬೇಕು ಅಂತ ಹೇಳಿಕೊಟ್ಟಿದ್ದಾನೋ ಆ ತರ ಅವರು ಮಾಡ್ತಾ ಇಲ್ಲ. ಯಾಕೆ?

5. ಯೇಸುವಿನ ಅಪೊಸ್ತಲರು ತೀರಿಹೋದ ಮೇಲೆ ಆತನ ಮರಣವನ್ನ ಸ್ಮರಿಸೋ ರೀತಿ ಹೇಗೆ ಬದಲಾಗಿ ಹೋಗಿದೆ?

5 ಯೇಸುವಿನ ಅಪೊಸ್ತಲರಲ್ಲಿ ತುಂಬ ಜನ ತೀರಿಹೋದ ಮೇಲೆ ಸಭೆ ಒಳಗೆ ಸುಳ್ಳು ಕ್ರೈಸ್ತರು ನುಸುಳಿದ್ರು. (ಮತ್ತಾ. 13:24-27, 37-39) ಅವರು “ಶಿಷ್ಯರನ್ನ ತಮ್ಮ ಕಡೆ ಎಳ್ಕೊಳ್ಳೋಕೆ ತಪ್ಪುತಪ್ಪಾಗಿ ಏನೇನೋ” ಕಲಿಸೋಕೆ ಶುರುಮಾಡಿದ್ರು. (ಅ. ಕಾ. 20:29, 30) “ಕ್ರಿಸ್ತ ತುಂಬ ಜನ್ರ ಪಾಪಗಳನ್ನ ಹೊತ್ಕೊಳ್ಳೋಕೆ ಒಂದೇ ಒಂದು ಸಲ ತನ್ನನ್ನ ಅರ್ಪಿಸಿದ” ಅಂತ ಬೈಬಲ್‌ ಹೇಳುತ್ತೆ. (ಇಬ್ರಿ. 9:27, 28) ಆದ್ರೆ ಆ ಸುಳ್ಳು ಕ್ರೈಸ್ತರು, ಜನರ ಪಾಪ ಪರಿಹಾರ ಆಗೋಕೆ ಕ್ರಿಸ್ತ ತನ್ನನ್ನ ಒಂದು ಸಲ ಅರ್ಪಿಸಿಕೊಂಡ್ರೆ ಸಾಕಾಗಲ್ಲ. ತುಂಬ ಸಲ ಅರ್ಪಿಸಿಕೊಳ್ಳಬೇಕು ಅಂತ ಕಲಿಸಿದ್ರು. ಎಷ್ಟೋ ಮುಗ್ಧ ಜನರು ಇದನ್ನ ನಂಬಿಬಿಟ್ಟಿದ್ದಾರೆ. ಹಾಗಾಗಿ ಕೆಲವೊಂದು ಕ್ಯಾಥೊಲಿಕ್‌ ಚರ್ಚುಗಳಲ್ಲಿ ಪ್ರತಿದಿನ “ಮಾಸ್‌” ಅಂತ ಆಚರಿಸ್ತಾರೆ. b ಇನ್ನು ಕೆಲವು ಪಂಗಡದವರು ವರ್ಷದಲ್ಲಿ ತುಂಬ ಸಲ ಯೇಸು ಕ್ರಿಸ್ತನ ಮರಣವನ್ನ ಸ್ಮರಿಸ್ತಾರೆ. ಆದ್ರೆ ಅದನ್ನ ಯಾಕೆ ಮಾಡ್ತಾರೆ ಅಂತಾನೇ ಅವರು ಅರ್ಥ ಮಾಡಿಕೊಂಡಿಲ್ಲ. ಕೆಲವರು “ಯೇಸು ಕ್ರಿಸ್ತ ಸತ್ತಿದ್ರಿಂದ ನನ್ನ ಪಾಪಗಳಿಗೆ ಹೇಗೆ ಕ್ಷಮೆ ಸಿಗುತ್ತೆ?” ಅಂತನೂ ಕೇಳ್ತಾರೆ. ಇದಕ್ಕೆ ಕಾರಣ ಏನು? ಒಂದು ಕಾರಣ ಏನಂದ್ರೆ, ಯೇಸು ಪ್ರಾಣ ಕೊಟ್ಟಿರೋದ್ರಿಂದ ನಮ್ಮ ಪಾಪಗಳಿಗೆ ಕ್ಷಮೆ ಸಿಗಲ್ಲ ಅಂತ ಜನರು ಅವರ ತಲೆಯಲ್ಲಿ ತುಂಬಿಸಿಬಿಟ್ಟಿದ್ದಾರೆ. ಅದಕ್ಕೆ ಅವರಿಗೆ ಹಾಗೆ ಅನಿಸುತ್ತೆ. ಆದ್ರೆ ಯೇಸುವಿನ ನಿಜವಾದ ಶಿಷ್ಯರು, ಯೇಸು ಯಾಕೆ ಪ್ರಾಣ ಕೊಟ್ಟನು ಮತ್ತು ಆತನ ಮರಣವನ್ನ ಸರಿಯಾದ ರೀತಿಯಲ್ಲಿ ಸ್ಮರಿಸೋದು ಹೇಗೆ ಅಂತ ಜನರಿಗೆ ಕಲಿಸಿದ್ರು. ಹೇಗೆ ಅಂತ ನೋಡೋಣ.

6. ಬೈಬಲ್‌ ವಿದ್ಯಾರ್ಥಿಗಳಿಗೆ 1872ರಷ್ಟಕ್ಕೆ ಯಾವ ಸತ್ಯ ಗೊತ್ತಾಯ್ತು?

6 ಚಾರ್ಲ್ಸ್‌ ಟೇಸ್‌ ರಸಲ್‌ ಮತ್ತು ಇನ್ನೂ ಕೆಲವು ಬೈಬಲ್‌ ವಿದ್ಯಾರ್ಥಿಗಳು 1870ರಲ್ಲಿ ಬೈಬಲನ್ನ ಚೆನ್ನಾಗಿ ಅಧ್ಯಯನ ಮಾಡೋಕೆ ಶುರುಮಾಡಿದ್ರು. ಯೇಸುವಿನ ತ್ಯಾಗದಿಂದ ಏನೆಲ್ಲ ಪ್ರಯೋಜನ ಆಗುತ್ತೆ ಮತ್ತು ಆತನ ಮರಣವನ್ನ ಸರಿಯಾದ ರೀತಿಯಲ್ಲಿ ಸ್ಮರಿಸೋದು ಹೇಗೆ ಅಂತ ತಿಳುಕೊಳ್ಳೋಕೆ ತುಂಬ ಪ್ರಯತ್ನಪಟ್ರು. 1872ರಷ್ಟರಲ್ಲಿ ಅವರಿಗೆ ಸತ್ಯ ಏನು ಅಂತ ಗೊತ್ತಾಯ್ತು. ಯೇಸು ತನ್ನ ಪ್ರಾಣವನ್ನ ಎಲ್ಲ ಮನುಷ್ಯರಿಗೋಸ್ಕರ ಕೊಟ್ಟನು ಅಂತ ಅವರಿಗೆ ಗೊತ್ತಾಯ್ತು. ಅವರು ಈ ವಿಷ್ಯವನ್ನ ಎಲ್ಲ ಜನರಿಗೂ ತಿಳಿಸಬೇಕಂತ ಇಷ್ಟಪಟ್ರು. ಅದಕ್ಕೆ ಅದನ್ನ ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ, ನ್ಯೂಸ್‌ ಪೇಪರ್‌ಗಳಲ್ಲಿ ಪ್ರಿಂಟ್‌ ಮಾಡಿಸಿದ್ರು. ಆಮೇಲೆ, ಒಂದನೇ ಶತಮಾನದ ಕ್ರೈಸ್ತರ ತರ ವರ್ಷಕ್ಕೆ ಒಂದು ಸಲ ಯೇಸು ಕ್ರಿಸ್ತನ ಮರಣದ ಸ್ಮರಣೆಯನ್ನ ಮಾಡೋಕೆ ಶುರುಮಾಡಿದ್ರು.

7. ಹಿಂದೆ ಇದ್ದ ಬೈಬಲ್‌ ವಿದ್ಯಾರ್ಥಿಗಳು ಅಧ್ಯಯನ ಮಾಡಿದ್ರಿಂದ ನಮಗೆ ಹೇಗೆ ಒಳ್ಳೇದಾಗ್ತಿದೆ?

7 ಎಷ್ಟೋ ವರ್ಷಗಳ ಹಿಂದೆ ಆ ಬೈಬಲ್‌ ವಿದ್ಯಾರ್ಥಿಗಳು ಹಾಕಿದ ಪ್ರಯತ್ನದಿಂದ ನಮಗೆ ಇವತ್ತು ಪ್ರಯೋಜನ ಆಗ್ತಿದೆ. ಯೇಸು ಯಾಕೆ ತನ್ನ ಪ್ರಾಣ ಕೊಟ್ಟನು, ಆತನು ಈ ತ್ಯಾಗ ಮಾಡಿದ್ರಿಂದ ಈಗ ಹೇಗೆ ಒಳ್ಳೇದಾಗ್ತಿದೆ, ಮುಂದೆ ಹೇಗೆ ಒಳ್ಳೇದಾಗುತ್ತೆ ಅಂತ ಯೆಹೋವನ ಸಹಾಯದಿಂದ ನಮಗೆ ಗೊತ್ತಾಗಿದೆ. (1 ಯೋಹಾ. 2:1, 2) ಅಷ್ಟೇ ಅಲ್ಲ, ಯಾರೆಲ್ಲ ಯೆಹೋವನಿಗೆ ಇಷ್ಟ ಆಗೋ ತರ ನಡಕೊಳ್ತಾರೋ ಅವರಿಗೆ ಮುಂದೆ ಆತನು ಆಶೀರ್ವಾದಗಳನ್ನ ಕೊಡ್ತಾನೆ ಅಂತ ನಾವು ಬೈಬಲಿಂದ ಕಲಿತಿದ್ದೀವಿ. ಕೆಲವರಿಗೆ ಸ್ವರ್ಗದಲ್ಲಿ ಅಮರ ಜೀವನ ಸಿಗುತ್ತೆ. ಮಿಕ್ಕಿದವರಿಗೆ ಈ ಭೂಮಿ ಮೇಲೆ ಶಾಶ್ವತ ಜೀವ ಸಿಗುತ್ತೆ. ಇದನ್ನೆಲ್ಲ ನೋಡಿದಾಗ, ಯೆಹೋವನಿಗೆ ನಮ್ಮ ಮೇಲೆ ತುಂಬ ಪ್ರೀತಿ ಇದೆ, ಯೇಸು ಮಾಡಿದ ಆ ತ್ಯಾಗದಿಂದ ನಮಗೆ ತುಂಬ ಪ್ರಯೋಜನ ಆಗ್ತಿದೆ ಅಂತ ಅರ್ಥ ಮಾಡಿಕೊಳ್ತೀವಿ. ಆಗ ಯೆಹೋವ ದೇವರಿಗೆ ಇನ್ನೂ ಹತ್ರ ಆಗ್ತೀವಿ. (1 ಪೇತ್ರ 3:18; 1 ಯೋಹಾ. 4:9) ಹಿಂದೆ ಇದ್ದ ಬೈಬಲ್‌ ವಿದ್ಯಾರ್ಥಿಗಳು ಕ್ರಿಸ್ತನ ಸ್ಮರಣೆಗೆ ಬೇರೆಯವರನ್ನೂ ಕರೆದ್ರು. ಇವತ್ತು ನಾವು ಕೂಡ ಅದನ್ನೇ ಮಾಡಬೇಕು.

ಸ್ಮರಣೆಗೆ ಬೇರೆಯವರನ್ನೂ ಕರೆಯೋಣ

ಸ್ಮರಣೆಯ ಅಭಿಯಾನದಲ್ಲಿ ಜಾಸ್ತಿ ಸೇವೆ ಮಾಡೋಕೆ ನೀವೇನು ಮಾಡಬಹುದು? (ಪ್ಯಾರ 8-10 ನೋಡಿ) e

8. ಯೆಹೋವನ ಜನರು ಬೇರೆಯವರನ್ನ ಸ್ಮರಣೆಗೆ ಕರೆಯೋಕೆ ಏನೆಲ್ಲ ಮಾಡಿದ್ದಾರೆ? (ಚಿತ್ರ ನೋಡಿ.)

8 ಆಗಿನ ಕಾಲದಿಂದಲೂ ಯೆಹೋವನ ಜನರು ಕ್ರಿಸ್ತನ ಮರಣದ ಸ್ಮರಣೆಗೆ ಬೇರೆಯವರನ್ನೂ ಕರೀತಾ ಬಂದಿದ್ದಾರೆ. ಅವರು 1881ರಲ್ಲಿ ಕಾವಲಿನಬುರುಜುವಿನಲ್ಲಿ, ಒಂದು ಪ್ರಕಟಣೆ ಮಾಡಿ ಅಮೇರಿಕದಲ್ಲಿ ಇರೋ ಎಲ್ಲಾ ಸಹೋದರ ಸಹೋದರಿಯರನ್ನ ಸ್ಮರಣೆಗೆ ಕರೆದ್ರು. ಅವರೆಲ್ಲ ಪೆನ್ಸಿಲ್ವೇನಿಯದ ಅಲೆಗನಿ ನಗರದಲ್ಲಿರೋ ಒಂದು ಮನೇಲಿ ಸೇರಿಬಂದ್ರು. ಮುಂದಿನ ವರ್ಷಗಳಲ್ಲಿ, ಎಲ್ಲರಿಗೂ ಅವರವರ ಸಭೆಯಲ್ಲೇ ಸ್ಮರಣೆಯ ಕಾರ್ಯಕ್ರಮ ಮಾಡೋಕೆ ಹೇಳಿದ್ರು. ಆಮೇಲೆ 1940ರ ಮಾರ್ಚ್‌ನಲ್ಲಿ, ಪ್ರಚಾರಕರಿಗೆ ಟೆರಿಟೊರಿಯಲ್ಲಿ ಯಾರಿಗೆಲ್ಲ ಬರೋಕೆ ಇಷ್ಟ ಇದ್ಯೋ ಅವರನ್ನೆಲ್ಲ ಕರೆಯಿರಿ ಅಂತ ಹೇಳಿದ್ರು. 1960ರಲ್ಲಿ ಸ್ಮರಣೆಗೆ ಜನರನ್ನ ಕರೆಯೋಕೆ ಅಂತಾನೇ ಮೊದಲನೇ ಸಲ ಆಮಂತ್ರಣ ಪತ್ರಗಳನ್ನ ಬೆತೆಲ್‌ನಲ್ಲಿ ಪ್ರಿಂಟ್‌ ಮಾಡಿ ಸಭೆಗಳಿಗೆ ಕೊಟ್ರು. ಅಲ್ಲಿಂದ ಇಲ್ಲಿ ತನಕ ನಾವು ಕೋಟಿಗಟ್ಟಲೆ ಆಮಂತ್ರಣ ಪತ್ರಗಳನ್ನ ಜನರಿಗೆ ಹಂಚಿದ್ದೀವಿ. ನಾವ್ಯಾಕೆ ಇಷ್ಟೊಂದು ಜನರನ್ನ ಸ್ಮರಣೆಗೆ ಕರೀತಾ ಇದ್ದೀವಿ?

9-10. (ಎ) ನಾವು ಸ್ಮರಣೆಗೆ ಯಾರನ್ನೆಲ್ಲ ಕರಿತೀವಿ? (ಬಿ) ಇದ್ರಿಂದ ಅವರಿಗೆ ಏನು ಪ್ರಯೋಜನ ಆಗುತ್ತೆ? (ಯೋಹಾನ 3:16)

9 ಯೆಹೋವ ಮತ್ತು ಯೇಸು ನಮಗೋಸ್ಕರ ಏನೆಲ್ಲ ಮಾಡಿದ್ದಾರೆ ಅನ್ನೋದನ್ನ ಅರ್ಥಮಾಡಿಸೋಕೆ ನಾವು ಜನರನ್ನ ಸ್ಮರಣೆಗೆ ಕರಿತೀವಿ. (ಯೋಹಾನ 3:16 ಓದಿ.) ಅವರು ಆ ಕಾರ್ಯಕ್ರಮದಲ್ಲಿ ಏನನ್ನ ನೋಡ್ತಾರೋ, ಕೇಳಿಸಿಕೊಳ್ತಾರೋ ಅದ್ರಿಂದ ಅವರಿಗೆ ಯೆಹೋವನ ಬಗ್ಗೆ ಜಾಸ್ತಿ ಕಲಿಯೋಕೆ ಮನಸ್ಸಾಗಬಹುದು. ಮುಂದೆ ಅವರೂ ಯೆಹೋವನ ಆರಾಧಕರಾಗಬಹುದು. ಅದಕ್ಕೇ ನಾವು ಅವರನ್ನ ಕರಿತೀವಿ.

10 ತುಂಬ ವರ್ಷಗಳ ಹಿಂದೆ ಯೆಹೋವ ಸೇವೆ ನಿಲ್ಲಿಸಿರುವವರನ್ನ ನಾವು ಸ್ಮರಣೆಗೆ ಕರಿತೀವಿ. ಈ ರೀತಿ ಕರೆದಾಗ, ಅವರ ಮೇಲೆ ಯೆಹೋವ ದೇವರಿಗೆ ಎಷ್ಟು ಪ್ರೀತಿ ಇದೆ ಅಂತ ಅವರು ಅರ್ಥಮಾಡಿಕೊಳ್ತಾರೆ. ಅವರು ಸ್ಮರಣೆಗೆ ಬಂದಾಗ, ಮುಂಚೆ ಸಂತೋಷವಾಗಿ ಯೆಹೋವನ ಸೇವೆ ಮಾಡ್ತಾ ಇದ್ದಿದ್ದನ್ನ ನೆನಪಿಸಿಕೊಳ್ತಾರೆ. ಅವರನ್ನ ನೋಡಿ ನಮಗೂ ಖುಷಿ ಆಗುತ್ತೆ. ನಾವೀಗ ಮೋನಿಕ ಅವರ ಅನುಭವ ನೋಡೋಣ. c ಅವರು ಯೆಹೋವನ ಸೇವೆಯನ್ನ ನಿಲ್ಲಿಸಿ ತುಂಬ ವರ್ಷ ಆಗಿತ್ತು. ಕೊರೊನಾ ಸಮಯದಲ್ಲಿ ಅವರು ಮತ್ತೆ ಪ್ರಚಾರಕರಾದ್ರು. 2021ರ ಕ್ರಿಸ್ತನ ಮರಣದ ಸ್ಮರಣೆಗೂ ಬಂದ್ರು. ಅವರು ಹೇಳಿದ್ದು: “ಆ ಸ್ಮರಣೆಯ ಕಾರ್ಯಕ್ರಮವನ್ನ ಮರೆಯೋಕೇ ಆಗಲ್ಲ. ಯೆಹೋವ ಮತ್ತು ಯೇಸು ನನಗೋಸ್ಕರ ಎಷ್ಟೋ ಒಳ್ಳೇ ವಿಷಯಗಳನ್ನ ಮಾಡಿದ್ದಾರೆ. ಅದಕ್ಕೆಲ್ಲ ಥ್ಯಾಂಕ್ಸ್‌ ಹೇಳಬೇಕು ಅಂತ ಅನಿಸ್ತು. ಅದಕ್ಕೇ ನಾನು ತುಂಬ ಜನರನ್ನ ಸ್ಮರಣೆಗೆ ಕರೆದೆ. ಈ ರೀತಿ ಜನರನ್ನ ಸ್ಮರಣೆಗೆ ಕರೆದು 20 ವರ್ಷಗಳಾಗಿತ್ತು.” (ಕೀರ್ತ. 103:1-4) ನಾವು ಸ್ಮರಣೆಗೆ ಕರೆದವರಲ್ಲಿ ಕೆಲವರು ಬರ್ತಾರೆ, ಕೆಲವರು ಬರಲ್ಲ. ಆದ್ರೆ ಅವರನ್ನ ಕರೆಯೋಕೆ ನಾವು ಮಾಡೋ ಪ್ರಯತ್ನ ನೋಡಿ ಯೆಹೋವ ದೇವರಿಗೆ ತುಂಬ ಖುಷಿ ಆಗುತ್ತೆ. ಅದನ್ನ ಮನಸ್ಸಲ್ಲಿಟ್ಟು ನಾವು ಆದಷ್ಟು ಜನರನ್ನ ಕರೆಯೋಣ.

11. ಯೆಹೋವ ನಮ್ಮ ಕೆಲಸವನ್ನ ಆಶೀರ್ವದಿಸ್ತಾ ಇದ್ದಾನೆ ಅಂತ ಹೇಗೆ ಹೇಳಬಹುದು? (ಹಗ್ಗಾಯ 2:7)

11 ನಾವು ಮಾಡ್ತಿರೋ ಈ ಕೆಲಸವನ್ನ ಯೆಹೋವ ಆಶೀರ್ವದಿಸ್ತಾ ಇದ್ದಾನೆ ಅಂತ ಹೇಳಬಹುದು. ಹೇಗೆ? 2021ರಲ್ಲಿ ಕೊರೊನಾ ಕಾಯಿಲೆ ಇದ್ದದ್ರಿಂದ ಸ್ಮರಣೆಗೆ ಎಲ್ಲರೂ ಸೇರಿಬರೋಕೆ ಕಷ್ಟ ಆಯ್ತು. ಆದ್ರೂ 2,13,67,603 ಜನರು ಸ್ಮರಣೆಗೆ ಹಾಜರಾದ್ರು. ಅಂದ್ರೆ ಇಡೀ ಲೋಕದಲ್ಲಿ ಯೆಹೋವನ ಸಾಕ್ಷಿಗಳು ಎಷ್ಟು ಜನ ಇದ್ದಾರೋ ಅದಕ್ಕಿಂತ ಎರಡುವರೆ ಪಟ್ಟು ಜಾಸ್ತಿ ಜನ ಬಂದಿದ್ರು. ಇಷ್ಟು ಜನ ಬಂದಿದ್ದನ್ನ ನೋಡಿದಾಗ ಯೆಹೋವನಿಗೆ ಎಷ್ಟು ಖುಷಿ ಆಗಿರುತ್ತೆ ಅಲ್ವಾ? ಅಲ್ಲಿ ಬಂದಿದ್ದ ಒಬ್ಬೊಬ್ಬರನ್ನೂ ಆತನು ನೋಡಿರುತ್ತಾನೆ. (ಲೂಕ 15:7; 1 ತಿಮೊ. 2:3, 4) ಈ ಮುಂಚೆ ಸ್ಮರಣೆಗೆ ಬಂದ ಎಷ್ಟೋ ಜನರು ಬೈಬಲ್‌ ಕಲಿಯೋಕೆ ಶುರು ಮಾಡಿದ್ದಾರೆ. ಹಾಗಾಗಿ ಸ್ಮರಣೆಗೆ ಜನರನ್ನ ಕರೆದಾಗ, ಒಳ್ಳೇ ಮನಸ್ಸಿರೋ ಜನರನ್ನ ಹುಡುಕೋಕೆ ಯೆಹೋವ ನಮಗೆ ಸಹಾಯ ಮಾಡ್ತಾನೆ.—ಹಗ್ಗಾಯ 2:7 ಓದಿ.

ತೊಂದರೆಗಳು ಇದ್ರೂ ತಪ್ಪದೇ ಹಾಜರಾಗೋಣ

ಸ್ಮರಣೆಗೆ ಬರೋಕೆ ನಾವು ಮಾಡೋ ಪ್ರಯತ್ನನ ಯೆಹೋವ ಆಶೀರ್ವದಿಸ್ತಾನೆ (ಪ್ಯಾರ 12 ನೋಡಿ) f

12. ಸ್ಮರಣೆಗೆ ಬರೋಕೆ ನಮಗೆ ಯಾಕೆ ಕಷ್ಟ ಆಗಬಹುದು? (ಚಿತ್ರ ನೋಡಿ.)

12 ಕೊನೇ ದಿನಗಳಲ್ಲಿ ತುಂಬ ಕಷ್ಟಗಳು ಬರುತ್ತೆ ಅಂತ ಯೇಸು ಮುಂಚೆನೇ ಹೇಳಿದ್ದನು. ಸ್ವಂತ ಮನೆಯವರೇ ನಮ್ಮನ್ನ ವಿರೋಧಿಸ್ತಾರೆ, ಹಿಂಸೆ ಬರುತ್ತೆ, ಯುದ್ಧಗಳು ಆಗುತ್ತೆ, ಅಂಟುರೋಗಗಳು ಬರುತ್ತೆ, ಇನ್ನೂ ಬೇರೆಬೇರೆ ತೊಂದರೆಗಳು ಬರುತ್ತೆ ಅಂತ ಹೇಳಿದ್ದನು. (ಮತ್ತಾ. 10:36; ಮಾರ್ಕ 13:9; ಲೂಕ 21:10, 11) ಇಂಥ ತೊಂದರೆಗಳಿಂದ ಕೆಲವೊಮ್ಮೆ ಕ್ರಿಸ್ತನ ಮರಣದ ಸ್ಮರಣೆಗೆ ಹಾಜರಾಗೋಕೆ ನಮಗೆ ಕಷ್ಟ ಆಗಬಹುದು. ಆದ್ರೂ ಸ್ಮರಣೆಗೆ ಬರೋಕೆ ನಮ್ಮ ಸಹೋದರ ಸಹೋದರಿಯರು ಏನೆಲ್ಲ ಮಾಡಿದ್ರು, ಅವರಿಗೆ ಯೆಹೋವ ಹೇಗೆ ಸಹಾಯ ಮಾಡಿದನು ಅಂತ ಈಗ ನೋಡೋಣ.

13. (ಎ) ಸ್ಮರಣೆಯ ಕಾರ್ಯಕ್ರಮ ಮಾಡೋಕೆ ಆರ್ಥರ್‌ ಏನೆಲ್ಲಾ ಮಾಡಿದ್ರು? (ಬಿ) ಅವರನ್ನ ಯೆಹೋವ ಹೇಗೆ ಆಶೀರ್ವದಿಸಿದನು?

13 ಜೈಲ್‌ನಲ್ಲಿ ಇದ್ದಾಗಲೂ ನಮ್ಮ ಸಹೋದರ ಸಹೋದರಿಯರು ಕ್ರಿಸ್ತನ ಮರಣದ ಸ್ಮರಣೆಯನ್ನ ಮಾಡಿದ್ದಾರೆ. ಅವರಲ್ಲಿ ಒಬ್ಬರು ಸಹೋದರ ಆರ್ಥರ್‌. 2020ರ ಸ್ಮರಣೆಯ ಸಮಯದಲ್ಲಿ ಅವರು ಜೈಲಲ್ಲಿ ಇದ್ರು. ಆ ಕೋಣೆಯಲ್ಲಿ ಅವರನ್ನೂ ಸೇರಿಸಿ 5 ಜನ ಇದ್ರು. ಆ ಕೋಣೆ ತುಂಬ ಚಿಕ್ಕದಾಗಿತ್ತು. ಅದು ಬರೀ 183 ಚದರ ಅಡಿ ಇತ್ತು. ಪರಿಸ್ಥಿತಿ ಈ ತರ ಇದ್ರೂ ಸಹೋದರ ಆರ್ಥರ್‌ ಕ್ರಿಸ್ತನ ಸ್ಮರಣೆಯನ್ನ ಮಾಡೋಕೆ ಬೇಕಾದ ವಸ್ತುಗಳನ್ನ ರೆಡಿ ಮಾಡಿಕೊಂಡ್ರು. ಅವರಿಗೆ ಅವರೇ ಸ್ಮರಣೆಯ ಭಾಷಣ ಕೊಡೋಕೆ ತಯಾರಿನೂ ಮಾಡಿಕೊಂಡ್ರು. ಆ ಕೋಣೆಯಲ್ಲಿದ್ದ ನಾಲ್ಕು ಜನ ತುಂಬ ಸಿಗರೇಟ್‌ ಸೇದ್ತಾ ಇದ್ರು, ಕೆಟ್ಟ ಮಾತುಗಳನ್ನ ಆಡ್ತಿದ್ರು. ಅದಕ್ಕೆ ಆ ಸಹೋದರ ಅವರ ಹತ್ರ ಹೋಗಿ ‘ಸಿಗರೇಟ್‌ ಸೇದದೆ, ಕೆಟ್ಟಮಾತು ಆಡದೆ ಸ್ವಲ್ಪ ಹೊತ್ತು ಇರಕ್ಕಾಗುತ್ತಾ, ಪ್ಲೀಸ್‌? ಬರೀ ಒಂದು ತಾಸು ಅಷ್ಟೇ’ ಅಂತ ಕೇಳಿಕೊಂಡ್ರು. ಅದಕ್ಕೆ ಅವರೆಲ್ಲ ಒಪ್ಪಿಕೊಂಡ್ರು. ಆದ್ರೆ ಕ್ರಿಸ್ತನ ಸ್ಮರಣೆ ಬಗ್ಗೆ ಆ ಸಹೋದರ ವಿವರಿಸೋಕೆ ಹೋದಾಗ ಬೇಡ ಅಂದುಬಿಟ್ರು. ಆದ್ರೆ ಸ್ಮರಣೆ ಕಾರ್ಯಕ್ರಮ ಮುಗಿದ ಮೇಲೆ ಅವರೇ ಬಂದು ಆ ಸಹೋದರನ ಹತ್ರ ಕೇಳಿ ತಿಳುಕೊಂಡ್ರು.

14. ಕೊರೊನಾ ಕಾಯಿಲೆ ಹರಡ್ತಿದ್ದಾಗಲೂ ಸಹೋದರರು ಕ್ರಿಸ್ತನ ಮರಣದ ಸ್ಮರಣೆಯನ್ನ ಮಾಡೋಕೆ ಏನೆಲ್ಲಾ ಮಾಡಿದ್ರು?

14 ಕೊರೊನಾ ಕಾಯಿಲೆ ತುಂಬ ಹರಡ್ತಾ ಇದ್ದಿದ್ರಿಂದ ಸಭೆಗಳಿಗೆ ಹೋಗಿ ಕ್ರಿಸ್ತನ ಮರಣದ ಸ್ಮರಣೆ ಕಾರ್ಯಕ್ರಮವನ್ನ ಮಾಡೋಕೆ ಆಗಲಿಲ್ಲ. ಅದಕ್ಕೆ ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಮಾಡಿದ್ವಿ. d ಆದ್ರೆ ಇಂಟರ್ನೆಟ್‌ ಸೌಲಭ್ಯ ಇಲ್ಲದಿರೋ ಕಡೆ ಆ ಭಾಷಣವನ್ನ ಟಿ.ವಿ ಮತ್ತು ರೇಡಿಯೋದಲ್ಲಿ ಪ್ರಸಾರ ಮಾಡಲಾಯ್ತು. ಅಷ್ಟೇ ಅಲ್ಲ, ದೂರದೂರದಲ್ಲಿರೋ ನಮ್ಮ ಸಹೋದರರಿಗೋಸ್ಕರ ಬ್ರಾಂಚ್‌ ಆಫೀಸ್‌ಗಳು ಒಂದು ಏರ್ಪಾಡು ಮಾಡಿದ್ವು. ಸ್ಮರಣೆಯ ಭಾಷಣವನ್ನ 500ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ರೆಕಾರ್ಡ್‌ ಮಾಡಿದ್ರು. ಇದನ್ನ ಆ ಹಳ್ಳಿಗಳಲ್ಲಿ ಇರುವವರಿಗೆ ಸಹೋದರರು ತಲುಪಿಸಿದ್ರು. ಇದ್ರಿಂದ ಎಲ್ರೂ ಕ್ರಿಸ್ತನ ಮರಣದ ಸ್ಮರಣೆಯನ್ನ ಮಾಡೋಕಾಯ್ತು.

15. ಸೂಸನ್‌ನಿಂದ ನೀವೇನು ಕಲಿತ್ರಿ?

15 ಕುಟುಂಬದವರು ವಿರೋಧ ಮಾಡಿದಾಗ ಕೆಲವರಿಗೆ ಕ್ರಿಸ್ತನ ಮರಣದ ಸ್ಮರಣೆಗೆ ಬರೋಕೆ ಕಷ್ಟ ಆಗುತ್ತೆ. 2021ರಲ್ಲಿ ಸ್ಮರಣೆಗೆ ಬರೋಕೆ ಸೂಸನ್‌ಗೂ ಕಷ್ಟ ಆಯ್ತು? ಅವರು ಬೈಬಲ್‌ ಕಲಿತಾ ಇದ್ದಿದ್ದು ಅವರ ಕುಟುಂಬದವರಿಗೆ ಇಷ್ಟ ಇರಲಿಲ್ಲ. ಹಾಗಾಗಿ ‘ಈ ಸಲ ಕ್ರಿಸ್ತನ ಮರಣದ ಸ್ಮರಣೆಗೆ ಹಾಜರಾಗೋಕೆ ಆಗಲ್ಲ’ ಅಂತ ತನಗೆ ಬೈಬಲ್‌ ಕಲಿಸ್ತಿದ್ದ ಸಹೋದರಿಗೆ ಹೇಳಿದ್ರು. ಆಗ ಆ ಸಹೋದರಿ ಅವಳಿಗೆ ಲೂಕ 22:44ನ್ನ ಓದಿ ವಿವರಿಸಿದ್ರು. ‘ನಾವು ಯೇಸು ತರ ಇರಬೇಕು, ಯೇಸು ಕಷ್ಟ ಬಂದಾಗ ಯೆಹೋವ ದೇವರಿಗೆ ಪ್ರಾರ್ಥಿಸಿದನು, ಅದೇ ತರ ನೀನೂ ಯೆಹೋವನಿಗೆ ಪ್ರಾರ್ಥನೆ ಮಾಡು. ಆತನ ಮೇಲೆ ನಂಬಿಕೆಯಿಡು. ಆತನು ನಿನಗೆ ಸಹಾಯ ಮಾಡೇ ಮಾಡ್ತಾನೆ’ ಅಂತ ಧೈರ್ಯ ತುಂಬಿದ್ರು. ಮಾರನೇ ದಿನ ಸೂಸನ್‌, ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನ ರೆಡಿ ಮಾಡಿಕೊಂಡಳು. jw.orgನಲ್ಲಿ ಅವತ್ತಿನ ಮಾರ್ನಿಂಗ್‌ ವರ್ಷಿಪ್‌ ನೋಡಿದಳು. ಆಮೇಲೆ ಸಾಯಂಕಾಲ ತನ್ನ ರೂಮ್‌ನಲ್ಲಿ ಕೂತ್ಕೊಂಡು ಫೋನಿಂದ ಸ್ಮರಣೆಯ ಕಾರ್ಯಕ್ರಮ ಕೇಳಿಸಿಕೊಂಡಳು. ‘ನೀವು ನಿನ್ನೆ ನನಗೆ ತುಂಬ ಧೈರ್ಯ ತುಂಬಿದ್ರಿ. ಸ್ಮರಣೆಯ ಕಾರ್ಯಕ್ರಮಕ್ಕೆ ಹಾಜರಾಗೋಕೆ ನನ್ನಿಂದ ಆಗೋದನ್ನೆಲ್ಲ ನಾನು ಮಾಡಿದೆ. ಮಿಕ್ಕಿದ್ದನ್ನ ಯೆಹೋವ ದೇವರು ಮಾಡಿದ್ರು. ನನಗೆ ಎಷ್ಟು ಖುಷಿಯಾಗ್ತಿದೆ ಗೊತ್ತಾ? ಯೆಹೋವ ದೇವರಿಗೆ ನಾನು ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ’ ಅಂತ ಸೂಸನ್‌ ತನಗೆ ಬೈಬಲ್‌ ಕಲಿಸ್ತಿದ್ದ ಸಹೋದರಿಗೆ ಹೇಳಿದಳು. ನಿಮಗೂ ಈ ತರ ತೊಂದರೆಗಳಾದಾಗ ಯೆಹೋವ ಸಹಾಯ ಮಾಡೇ ಮಾಡ್ತಾನೆ.

16. ಕ್ರಿಸ್ತನ ಮರಣದ ಸ್ಮರಣೆಗಾಗಿ ನಾವು ಹಾಕೋ ಪ್ರಯತ್ನನ ಯೆಹೋವ ಯಾಕೆ ಆಶೀರ್ವದಿಸ್ತಾನೆ? (ರೋಮನ್ನರಿಗೆ 8:31, 32)

16 ಕ್ರಿಸ್ತನ ಮರಣದ ಸ್ಮರಣೆಗೆ ಬರೋಕೆ ನಾವು ಹಾಕೋ ಪ್ರಯತ್ನವನ್ನ ಯೆಹೋವ ಗಮನಿಸ್ತಾನೆ. ಯೆಹೋವ ನಮಗೋಸ್ಕರ ತನ್ನ ಮಗನನ್ನೇ ಕೊಟ್ಟಿದ್ದಕ್ಕೆ ನಾವೆಷ್ಟು ಋಣಿಗಳಾಗಿದ್ದೀವಿ ಅಂತ ತೋರಿಸೋಣ. ಹಾಗಾಗಿ ಈ ವರ್ಷದ ಕ್ರಿಸ್ತನ ಮರಣದ ಸ್ಮರಣೆಗೆ ನಾವು ತಪ್ಪದೇ ಹೋಗೋಣ. ಆದಷ್ಟು ಜನರನ್ನ ಕರೆಯೋಣ. ಆಗ ನಮ್ಮ ಪ್ರಯತ್ನಗಳನ್ನ ಯೆಹೋವ ಆಶೀರ್ವದಿಸ್ತಾನೆ.—ರೋಮನ್ನರಿಗೆ 8:31, 32 ಓದಿ.

ಗೀತೆ 149 ವಿಮೋಚನಾ ಮೌಲ್ಯಕ್ಕಾಗಿ ಕೃತಜ್ಞತೆ

a 2023ರ ಏಪ್ರಿಲ್‌ 4ನೇ ತಾರೀಕು ಅಂದ್ರೆ ಮಂಗಳವಾರ ಯೇಸು ಕ್ರಿಸ್ತನ ಮರಣವನ್ನ ಸ್ಮರಿಸೋಕೆ ಕೋಟಿಗಟ್ಟಲೆ ಜನ ಸೇರಿ ಬರ್ತಾರೆ. ಅವರಲ್ಲಿ ಕೆಲವರು ಮೊದಲನೇ ಸಲ ಆ ಕಾರ್ಯಕ್ರಮಕ್ಕೆ ಬಂದಿರ್ತಾರೆ. ಇನ್ನು ಕೆಲವರು ಯೆಹೋವನ ಸೇವೆ ಮಾಡೋದನ್ನ ನಿಲ್ಲಿಸಿ ವರ್ಷಗಳೇ ಆಗಿರುತ್ತೆ. ಅಂಥವರು ಕೂಡ ಬಂದಿರ್ತಾರೆ. ಇನ್ನು ಕೆಲವರು ಎಷ್ಟೇ ತೊಂದರೆಗಳಿದ್ರೂ ಅದನ್ನ ತಪ್ಪಿಸಲ್ಲ. ಯೆಹೋವನಿಗೆ ಎಲ್ಲರ ಪರಿಸ್ಥಿತಿನೂ ಚೆನ್ನಾಗಿ ಅರ್ಥ ಆಗುತ್ತೆ. ಹಾಗಾಗಿ ಸ್ಮರಣೆಗೆ ಬರೋಕೆ ನಿಮ್ಮಿಂದ ಆಗೋದನ್ನೆಲ್ಲ ಮಾಡುವಾಗ ಯೆಹೋವ ನಿಮ್ಮನ್ನ ತುಂಬ ಮೆಚ್ಚಿಕೊಳ್ತಾನೆ.

b ಚರ್ಚಿನವರು ಇದನ್ನ ಆಚರಿಸುವಾಗ ಅಲ್ಲಿರೋ ರೊಟ್ಟಿ ಯೇಸುವಿನ ದೇಹವಾಗಿ, ದ್ರಾಕ್ಷಾಮದ್ಯ ಆತನ ರಕ್ತವಾಗಿ ಬದಲಾಗುತ್ತೆ ಅಂತ ನಂಬ್ತಾರೆ. ಹಾಗಾಗಿ ಯಾವಾಗೆಲ್ಲ ಅವರು ಆ ದ್ರಾಕ್ಷಾಮದ್ಯ ಮತ್ತು ರೊಟ್ಟಿಯನ್ನ ತಗೊಳ್ತಾರೋ ಅವಾಗೆಲ್ಲ ಯೇಸು ಪ್ರಾಣ ಕೊಟ್ಟ ಹಾಗಿರುತ್ತೆ ಅಂತ ಅವರು ಅಂದುಕೊಂಡಿದ್ದಾರೆ.

c ಕೆಲವರ ಹೆಸರು ಬದಲಾಗಿದೆ.

d jw.orgನಲ್ಲಿ “2021 ಸ್ಮರಣೆಯ ಕಾರ್ಯಕ್ರಮ” (ಇಂಗ್ಲಿಷ್‌) ಅನ್ನೋ ಲೇಖನಗಳನ್ನ ಓದಿ.

e ಚಿತ್ರ ವಿವರಣೆ: 1960ರಿಂದ ಇಲ್ಲಿ ತನಕ ಕ್ರಿಸ್ತನ ಮರಣದ ಸ್ಮರಣೆಯ ಆಮಂತ್ರಣ ಪತ್ರವನ್ನ ಮುದ್ರಿಸಲಾಗಿದೆ. ಈಗ ಎಲೆಕ್ಟ್ರಾನಿಕ್‌ ಪ್ರತಿಗಳೂ ಸಿಗುತ್ತೆ.

f ಚಿತ್ರ ವಿವರಣೆ: ದೊಂಬಿ ಗಲಾಟೆ ನಡೀತಾ ಇರುವಾಗಲೂ ಸೋದರ ಸೋದರಿಯರು ಕ್ರಿಸ್ತನ ಮರಣದ ಸ್ಮರಣೆಯನ್ನ ಮಾಡ್ತಿದ್ದಾರೆ.