ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 5

“ಕ್ರಿಸ್ತ ತೋರಿಸಿದ ಪ್ರೀತಿ ನಮ್ಮನ್ನ ಒತ್ತಾಯ ಮಾಡುತ್ತೆ”

“ಕ್ರಿಸ್ತ ತೋರಿಸಿದ ಪ್ರೀತಿ ನಮ್ಮನ್ನ ಒತ್ತಾಯ ಮಾಡುತ್ತೆ”

‘ಕ್ರಿಸ್ತ ತೋರಿಸಿದ ಪ್ರೀತಿ ನಮ್ಮನ್ನ ಒತ್ತಾಯ ಮಾಡುತ್ತೆ. [ಹಾಗಾಗಿ] ಜೀವಿಸುವವರು ಇನ್ಮುಂದೆ ತಮಗಾಗಿ ಜೀವಿಸಬಾರದು.’​—2 ಕೊರಿಂ. 5:14, 15.

ಗೀತೆ 5 ನಮಗೆ ಆದರ್ಶಪ್ರಾಯನಾದ ಕ್ರಿಸ್ತನು

ಈ ಲೇಖನದಲ್ಲಿ ಏನಿದೆ? a

1-2. (ಎ) ಯೇಸು ಭೂಮಿ ಮೇಲಿದ್ದಾಗ ಮಾಡಿದ ಸೇವೆ ಬಗ್ಗೆ ನೆನಸಿಕೊಂಡ್ರೆ ನಮಗೆ ಏನು ಅನಿಸುತ್ತೆ? (ಬಿ) ನಾವು ಈ ಲೇಖನದಲ್ಲಿ ಏನು ಕಲಿತೀವಿ?

 ನಮ್ಮವರು ಯಾರಾದ್ರೂ ತೀರಿಕೊಂಡಾಗ ನಮಗೆ ತುಂಬ ಬೇಜಾರಾಗುತ್ತೆ. ಅವರು ಕೊನೇ ಕ್ಷಣಗಳಲ್ಲಿ ಹೇಳಿದ ಮಾತುಗಳನ್ನ ನೆನಸಿಕೊಂಡು ಅಳ್ತೀವಿ. ಅದರಲ್ಲೂ ಅವರು ತುಂಬ ಕಷ್ಟ ಅನುಭವಿಸಿ ತೀರಿಕೊಂಡ್ರೆ ಇನ್ನೂ ದುಃಖ ಆಗುತ್ತೆ. ಆದ್ರೆ ಸಮಯ ಹೋದ ಹಾಗೆ, ಅವರ ಜೊತೆ ಕಳೆದ ಸಂತೋಷದ ಕ್ಷಣಗಳು ನಮ್ಮ ನೆನಪಿಗೆ ಬರುತ್ತೆ. ಅವರು ನಮಗೆ ಕಲಿಸಿದ ಒಳ್ಳೊಳ್ಳೆ ವಿಷಯಗಳನ್ನ, ಧೈರ್ಯ ತುಂಬಿಸೋಕೆ ಆಡಿದ ಮಾತುಗಳನ್ನ ನೆನಸಿಕೊಂಡು ಸಂತೋಷ ಪಡ್ತೀವಿ.

2 ಅದೇ ತರ ಸ್ಮರಣೆಯ ಸಮಯದಲ್ಲಿ, ಯೇಸು ನಮಗೋಸ್ಕರ ಕೊಟ್ಟ ಬಿಡುಗಡೆ ಬೆಲೆ ಬಗ್ಗೆ ನಾವು ಯೋಚನೆ ಮಾಡ್ತೀವಿ. ಯೇಸು ಎಷ್ಟು ಕಷ್ಟ ಅನುಭವಿಸಿ ಸತ್ತನು ಅಂತ ನೆನಸಿಕೊಂಡು ನಮಗೆ ತುಂಬ ದುಃಖ ಆಗುತ್ತೆ. (1 ಕೊರಿಂ. 11:24, 25) ಆದ್ರೆ ಇನ್ನೊಂದು ಕಡೆ, ಆತನು ಭೂಮಿಯಲ್ಲಿ ಇದ್ದಾಗ ಏನೆಲ್ಲಾ ಮಾಡಿದನು, ಜನರಿಗೆ ಏನೆಲ್ಲಾ ಕಲಿಸಿದನು ಅನ್ನೋದನ್ನ ನೆನಸಿಕೊಂಡಾಗ ಖುಷಿಯಾಗುತ್ತೆ. ಅಷ್ಟೇ ಅಲ್ಲ, ಈಗ ಆತನು ಏನು ಮಾಡ್ತಿದ್ದಾನೆ, ಮುಂದೆ ನಮಗೋಸ್ಕರ ಏನು ಮಾಡ್ತಾನೆ ಅನ್ನೋದನ್ನ ನೆನಸಿಕೊಂಡಾಗ ನಮಗೆ ಇನ್ನೂ ಖುಷಿಯಾಗುತ್ತೆ. ಆತನು ತೋರಿಸಿರೋ ಈ ಪ್ರೀತಿಗೆ ಥ್ಯಾಂಕ್ಸ್‌ ಹೇಳಬೇಕು ಅಂತ ನಿಮಗೆ ಅನಿಸಲ್ವಾ? ಹಾಗಾದ್ರೆ, ನಾವು ಹೇಗೆಲ್ಲಾ ಥ್ಯಾಂಕ್ಸ್‌ ಹೇಳಬಹುದು ಅಂತ ಈ ಲೇಖನದಲ್ಲಿ ನೋಡೋಣ.

ಯೇಸು ತರ ನಡಕೊಳ್ಳಿ

3. ಬಿಡುಗಡೆ ಬೆಲೆಗೆ ನಾವು ಯಾಕೆ ಋಣಿಗಳಾಗಿದ್ದೀವಿ?

3 ಯೇಸು ಭೂಮಿಯಲ್ಲಿ ಇದ್ದಾಗ, ದೇವರ ಆಳ್ವಿಕೆಯಲ್ಲಿ ಸಿಗೋ ಆಶೀರ್ವಾದಗಳ ಬಗ್ಗೆ ಜನರಿಗೆ ಕಲಿಸಿದನು. ಆತನು ಇದನ್ನ ಕಲಿಸಿದ್ದಕ್ಕೆ ನಾವು ತುಂಬ ಋಣಿಗಳಾಗಿದ್ದೀವಿ. ಅಷ್ಟೇ ಅಲ್ಲ, ಯೇಸು ಸತ್ತಾಗ ನಮಗೋಸ್ಕರ ತನ್ನ ಪ್ರಾಣನ ಬಿಡುಗಡೆ ಬೆಲೆಯಾಗಿ ಕೊಟ್ಟನು. ಇದ್ರಿಂದ ನಾವು ಯೆಹೋವ ಮತ್ತು ಯೇಸು ಜೊತೆ ಒಳ್ಳೆ ಸ್ನೇಹ ಬೆಳೆಸಿಕೊಳ್ಳೋಕೆ ಆಗಿದೆ. ಯೇಸು ಮೇಲೆ ನಂಬಿಕೆ ಇಟ್ರೆ ಮುಂದೆ ಭೂಮಿ ಮೇಲೆ ಶಾಶ್ವತವಾಗಿ ಜೀವಿಸೋ ಅವಕಾಶ ಸಿಗುತ್ತೆ. ತೀರಿಹೋಗಿರೋ ನಮ್ಮ ಸಂಬಂಧಿಕರನ್ನ ಮತ್ತೆ ನೋಡೋಕೂ ಆಗುತ್ತೆ. (ಯೋಹಾ. 5:28, 29; ರೋಮ. 6:23) ಇದನ್ನೆಲ್ಲಾ ನಾವು ನೆನಸಿಕೊಂಡಾಗ ಯೆಹೋವ ಮತ್ತು ಯೇಸು ಮೇಲೆ ಪ್ರೀತಿ ಉಕ್ಕಿಬರುತ್ತೆ. ಈ ಆಶೀರ್ವಾದಗಳನ್ನ ಪಡಕೊಳ್ಳೋಕೆ ನಮಗೆ ಯೋಗ್ಯತೆನೂ ಇಲ್ಲ, ಅವರ ಋಣನ ತೀರಿಸೋಕೂ ನಮ್ಮಿಂದ ಆಗಲ್ಲ. (ರೋಮ. 5:8, 20, 21) ಆದ್ರೆ ನಾವು ಅವರಿಗೆ ತುಂಬ ಥ್ಯಾಂಕ್ಸ್‌ ಹೇಳ್ತೀವಿ ಅಂತ ನಮ್ಮ ಜೀವನದಲ್ಲಿ ತೋರಿಸಿಕೊಡಬಹುದು. ಹೇಗೆ?

ಮಗ್ದಲದ ಮರಿಯಳ ಉದಾಹರಣೆ ನಿಮಗೆ ಹೇಗೆ ಸ್ಫೂರ್ತಿ ತುಂಬುತ್ತೆ? (ಪ್ಯಾರ 4-5 ನೋಡಿ)

4. ಯೇಸು ಮಾಡಿದ ಸಹಾಯಕ್ಕೆ ತಾನು ಋಣಿಯಾಗಿದ್ದೀನಿ ಅಂತ ಮಗ್ದಲದ ಮರಿಯ ಹೇಗೆ ತೋರಿಸಿಕೊಟ್ಟಳು? (ಚಿತ್ರ ನೋಡಿ.)

4 ಮಗ್ದಲದ ಮರಿಯಳ ಉದಾಹರಣೆ ನೋಡಿ. ಅವಳ ಒಳಗೆ 7 ಕೆಟ್ಟ ದೇವದೂತರು ಸೇರಿಕೊಂಡಿದ್ರು. ಅದ್ರಿಂದ ಅವಳು ತುಂಬ ಕಷ್ಟ ಅನುಭವಿಸುತ್ತಿದ್ದಳು. ಜೀವನ ಪೂರ್ತಿ ಹೀಗೆ ನೋವನ್ನ ಅನುಭವಿಸಬೇಕೇನೋ ಅಂತ ಅಂದುಕೊಂಡಿದ್ದಳು. ಆದ್ರೆ ಯೇಸು ಆ ಕೆಟ್ಟ ದೇವದೂತರನ್ನ ಬಿಡಿಸಿದನು. ಈ ಸಹಾಯಕ್ಕೆ ತಾನು ಚಿರಋಣಿ ಆಗಿರಬೇಕು ಅಂತ ಅವಳಿಗೆ ಅನಿಸಿರುತ್ತೆ ಅಲ್ವಾ? ಅದಕ್ಕೆ ಅವಳು ಯೇಸುವಿನ ಶಿಷ್ಯಳಾದಳು. ತನ್ನ ಸಮಯ, ಶಕ್ತಿ ಮತ್ತು ಆಸ್ತಿಯನ್ನ ಮುಡಿಪಾಗಿಟ್ಟು ಯೇಸುಗೆ ಸಿಹಿಸುದ್ದಿ ಸಾರೋಕೆ ಸಹಾಯ ಮಾಡಿದಳು. (ಲೂಕ 8:1-3) ಯೇಸು ಮುಂದೆ ಇದಕ್ಕಿಂತ ದೊಡ್ಡ ಗಿಫ್ಟ್‌ ಕೊಡ್ತಾನೆ ಅಂತ ಅವಳು ಯೋಚನೆನೂ ಮಾಡಿರಲ್ಲ. ‘ಆತನ ಮೇಲೆ ನಂಬಿಕೆ ಇಡುವವರಿಗೆ’ ಶಾಶ್ವತ ಜೀವ ಸಿಗಲಿ ಅಂತ ತನ್ನ ಪ್ರಾಣನೇ ಕೊಡ್ತಾನೆ ಅನ್ನೋದು ಅವಳಿಗೆ ಗೊತ್ತಿರಲಿಲ್ಲ. (ಯೋಹಾ. 3:16) ಆದ್ರೂ ಅವಳು ತಾನು ಯೇಸುಗೆ ಋಣಿಯಾಗಿದ್ದೀನಿ ಅಂತ ತೋರಿಸಿಕೊಟ್ಟಳು. ಹಿಂಸಾ ಕಂಬದ ಮೇಲೆ ಯೇಸು ಕಷ್ಟಪಡ್ತಾ ಇದ್ದಾಗ ಅವಳು ಅಲ್ಲೇ ಇದ್ದಳು. ಅಲ್ಲಿದ್ದವರಿಗೆ ಸಮಾಧಾನ ಮಾಡಿದಳು. (ಯೋಹಾ. 19:25) ಯೇಸು ಸತ್ತ ಮೇಲೆ, ಅವನ ದೇಹಕ್ಕೆ ಸುಗಂಧ ದ್ರವ್ಯ ಹಚ್ಚೋಕೆ ಇಬ್ಬರು ಸ್ತ್ರೀಯರ ಜೊತೆ ಅವಳೂ ಅವನ ಸಮಾಧಿಯ ಹತ್ರ ಹೋದಳು. (ಮಾರ್ಕ 16:1, 2) ಅವಳು ತೋರಿಸಿದ ಈ ಪ್ರೀತಿಗೆ ಯೆಹೋವ ಅವಳನ್ನ ಆಶೀರ್ವದಿಸಿದನು. ಎಷ್ಟೋ ಅಪೊಸ್ತಲರಿಗೆ ಸಿಗದೆ ಇದ್ದ ಅವಕಾಶ ಅವಳಿಗೆ ಸಿಕ್ತು. ಯೇಸು ಮತ್ತೆ ಜೀವಂತವಾಗಿ ಎದ್ದು ಬಂದ ಮೇಲೆ ಅವಳಿಗೆ ಕಾಣಿಸಿಕೊಂಡನು, ಅವಳನ್ನ ಮಾತಾಡಿಸಿದನು.—ಯೋಹಾ. 20:11-18.

5. ನಾವು ಯೆಹೋವ ಮತ್ತು ಯೇಸುಗೆ ಋಣಿಯಾಗಿದ್ದೀವಿ ಅಂತ ಹೇಗೆ ತೋರಿಸಿಕೊಡೋದು?

5 ಯೆಹೋವ ಮತ್ತು ಯೇಸುಗೆ ನಾವು ಋಣಿಯಾಗಿದ್ದೀವಿ ಅಂತ ಹೇಗೆ ತೋರಿಸಿಕೊಡೋದು? ನಾವು ನಮ್ಮ ಸಮಯ, ಶಕ್ತಿ, ಹಣವನ್ನ ಯೆಹೋವನ ಸೇವೆಗೆ ಉಪಯೋಗಿಸಬಹುದು. ಉದಾಹರಣೆಗೆ ರಾಜ್ಯ ಸಭಾಗೃಹಗಳನ್ನ ಕಟ್ಟೋಕೆ ಮತ್ತು ಅದನ್ನ ಒಳ್ಳೇ ಸ್ಥಿತಿಯಲ್ಲಿ ಇಟ್ಟುಕೊಳ್ಳೋಕೆ ನಾವು ನಮ್ಮಿಂದಾಗೋ ಎಲ್ಲಾ ಸಹಾಯ ಮಾಡಬಹುದು.

ಯೆಹೋವ-ಯೇಸು ಮೇಲೆ ಪ್ರೀತಿ ಇದ್ರೆ ಬೇರೆಯವರನ್ನೂ ಪ್ರೀತಿಸ್ತೀವಿ

6. ಬಿಡುಗಡೆ ಬೆಲೆ ಒಬ್ಬೊಬ್ಬರಿಗೂ ಕೊಟ್ಟಿರೋ ಗಿಫ್ಟ್‌ ಅಂತ ಯಾಕೆ ಅನಿಸುತ್ತೆ?

6 ಯೆಹೋವ ಮತ್ತು ಯೇಸು ನಮ್ಮನ್ನ ಎಷ್ಟು ಪ್ರೀತಿಸ್ತಾರೆ ಅಂತ ಯೋಚನೆ ಮಾಡುವಾಗ ನಮಗೂ ಅವರನ್ನ ಪ್ರೀತಿಸಬೇಕು ಅನಿಸುತ್ತೆ. (1 ಯೋಹಾ. 4:10, 19) ಯೇಸು ನಮಗೋಸ್ಕರ ಅಲ್ಲ, ನನಗೋಸ್ಕರ ಪ್ರಾಣ ಕೊಟ್ಟನು ಅಂತ ನೆನಸಿಕೊಂಡಾಗ ಆ ಪ್ರೀತಿ ಇನ್ನೂ ಜಾಸ್ತಿಯಾಗುತ್ತೆ. ಅಪೊಸ್ತಲ ಪೌಲನಿಗೂ ಹೀಗೇ ಅನಿಸ್ತು. ಅವನು ಗಲಾತ್ಯದವರಿಗೆ ಬರೆದ ಪತ್ರದಲ್ಲಿ, “[ದೇವರ ಮಗ] ನನ್ನನ್ನ ಪ್ರೀತಿಸಿ ನನಗೋಸ್ಕರ ತನ್ನ ಜೀವವನ್ನೇ ಕೊಟ್ಟ” ಅಂತ ಹೇಳಿದ. (ಗಲಾ. 2:20) ಯೆಹೋವ ಬಿಡುಗಡೆ ಬೆಲೆಯ ಏರ್ಪಾಡು ಮಾಡಿದ್ರಿಂದನೇ ನಾವು ಆತನಿಗೆ ಹತ್ರ ಆಗೋಕೆ, ಆತನ ಫ್ರೆಂಡ್‌ ಆಗೋ ಅವಕಾಶ ಸಿಕ್ಕಿದೆ. (ಯೋಹಾ. 6:44) ಯೆಹೋವ ನಿಮ್ಮಲ್ಲಿ ಏನೋ ಒಳ್ಳೇದನ್ನ ನೋಡಿದ್ದಾನೆ. ನಿಮ್ಮನ್ನ ಫ್ರೆಂಡ್‌ ಮಾಡಿಕೊಳ್ಳೋಕೆ ತನ್ನ ಮಗನನ್ನೇ ಕೊಟ್ಟಿದ್ದಾನೆ ಅಂತ ನೆನಸಿಕೊಂಡಾಗ ನಿಮಗೆ ಹೇಗನಿಸುತ್ತೆ? ಈಗ ಯೆಹೋವನ ಮೇಲೆ, ಯೇಸು ಮೇಲೆ ನಿಮಗೆ ಪ್ರೀತಿ ಇನ್ನೂ ಜಾಸ್ತಿಯಾಗಲ್ವಾ? ಖಂಡಿತ ಜಾಸ್ತಿಯಾಗುತ್ತೆ. ಆ ಪ್ರೀತಿ ಏನನ್ನ ಮಾಡೋಕೆ ನಿಮ್ಮನ್ನ ಒತ್ತಾಯ ಮಾಡುತ್ತೆ?

ಯೆಹೋವ ಮತ್ತು ಯೇಸು ಮೇಲೆ ನಮಗೆ ಪ್ರೀತಿ ಇದ್ರೆ ದೇವರ ಸಂದೇಶವನ್ನ ಎಲ್ಲಾ ಜನರಿಗೂ ಸಾರ್ತೀವಿ (ಪ್ಯಾರ 7 ನೋಡಿ)

7. ಚಿತ್ರದಲ್ಲಿ ತೋರಿಸಿರೋ ಹಾಗೆ ನಾವೆಲ್ಲರೂ ಯೆಹೋವ ಮತ್ತು ಯೇಸುವನ್ನ ಪ್ರೀತಿಸ್ತೀವಿ ಅಂತ ಹೇಗೆ ತೋರಿಸ್ತೀವಿ? (2 ಕೊರಿಂಥ 5:14, 15; 6:1, 2)

7 ಯೆಹೋವ ಮತ್ತು ಯೇಸು ಮೇಲೆ ನಮಗೆ ಪ್ರೀತಿ ಇದ್ರೆ ನಾವು ಬೇರೆಯವರನ್ನೂ ಪ್ರೀತಿಸ್ತೀವಿ. (2 ಕೊರಿಂಥ 5:14, 15; 6:1, 2 ಓದಿ.) ಅದಕ್ಕೆ ನಾವು ಸಿಹಿಸುದ್ದಿ ಸಾರುತ್ತೀವಿ. ನಾವು ಈ ಕೆಲಸವನ್ನ ಚೆನ್ನಾಗಿ ಮಾಡೋಕೆ ನಮ್ಮಿಂದ ಆಗೋದನ್ನೆಲ್ಲಾ ಮಾಡ್ತೀವಿ. “ಎಲ್ಲ ತರದ ಜನ್ರು ರಕ್ಷಣೆ ಪಡಿಬೇಕು, ಸತ್ಯದ ಬಗ್ಗೆ ಸರಿಯಾದ ಜ್ಞಾನ ಪಡ್ಕೊಬೇಕು” ಅನ್ನೋದೇ ಯೆಹೋವನ ಇಷ್ಟ. (1 ತಿಮೊ. 2:4) ಹಾಗಾಗಿ ಜನರ ಹಿನ್ನೆಲೆ, ಸಂಸ್ಕೃತಿ ಯಾವುದೇ ಆಗಿರಲಿ, ಅವರು ಶ್ರೀಮಂತರಾಗಿರಲಿ, ಬಡವರಾಗಿರಲಿ ಎಲ್ಲರಿಗೂ ಸಿಹಿಸುದ್ದಿ ಹೇಳ್ತೀವಿ.

8. ನಮ್ಮ ಸಹೋದರ ಸಹೋದರಿಯರಿಗೆ ಹೇಗೆಲ್ಲಾ ಪ್ರೀತಿ ತೋರಿಸ್ತೀವಿ?

8 ನಾವು ದೇವರನ್ನ ಮತ್ತು ಯೇಸುವನ್ನ ಪ್ರೀತಿಸಿದ್ರೆ ನಮ್ಮ ಸಹೋದರ ಸಹೋದರಿಯರನ್ನೂ ಪ್ರೀತಿಸ್ತೀವಿ. (1 ಯೋಹಾ. 4:21) ಅವರ ಬಗ್ಗೆ ಯೋಚನೆ ಮಾಡ್ತಾ ಅವರಿಗೆ ಸಹಾಯ ಮಾಡೋಕೆ ಯಾವಾಗಲೂ ರೆಡಿ ಇರ್ತೀವಿ. ಅವರಿಗೆ ಕಷ್ಟಗಳು ಬಂದಾಗ ಆಸರೆಯಾಗಿ ಇರ್ತೀವಿ. ಅವರ ಮನೆಯವರು ಯಾರಾದ್ರೂ ತೀರಿಹೋದಾಗ ಸಮಾಧಾನ ಮಾಡ್ತೀವಿ. ಹುಷಾರಿಲ್ಲದೆ ಇದ್ದಾಗ ಅವರನ್ನ ಹೋಗಿ ನೋಡಿ, ಬೇಕಾದ ಸಹಾಯ ಮಾಡ್ತೀವಿ. ಅವರು ಬೇಜಾರಲ್ಲಿದ್ದಾಗ ಧೈರ್ಯ ತುಂಬ್ತೀವಿ. (2 ಕೊರಿಂ. 1:3-7; 1 ಥೆಸ. 5:11, 14) ಅವರಿಗೋಸ್ಕರ ಯಾವಾಗಲೂ ಪ್ರಾರ್ಥನೆ ಮಾಡ್ತೀವಿ. ಯಾಕಂದ್ರೆ “ನೀತಿವಂತರು ಅಂಗಲಾಚಿ ಮಾಡೋ ಪ್ರಾರ್ಥನೆಗೆ ತುಂಬ ಶಕ್ತಿ ಇದೆ” ಅಂತ ಬೈಬಲೇ ಹೇಳುತ್ತೆ.—ಯಾಕೋ. 5:16.

9. ನಾವು ನಮ್ಮ ಸಹೋದರ ಸಹೋದರಿಯರನ್ನ ಪ್ರೀತಿಸ್ತೀವಿ ಅಂತ ಇನ್ನೂ ಹೇಗೆ ತೋರಿಸಬಹುದು?

9 ಸಹೋದರ ಸಹೋದರಿಯರ ಮೇಲೆ ಪ್ರೀತಿ ಇದ್ರೆ, ನಾವು ಮನಸ್ತಾಪಗಳನ್ನ ಬೇಗ ಬಗೆಹರಿಸಿಕೊಳ್ತೀವಿ. ಅದಕ್ಕೆ ನಾವು ಅವರನ್ನ ಕ್ಷಮಿಸೋಕೆ ಯೆಹೋವನ ತರ ಯಾವಾಗಲೂ ರೆಡಿ ಇರಬೇಕು. ನಮ್ಮನ್ನ ಕ್ಷಮಿಸೋಕೆ ಯೆಹೋವ ತನ್ನ ಮಗನನ್ನೇ ಕೊಟ್ಟಿದ್ದಾನೆ ಅಂದಮೇಲೆ ನಾವು ಸಹೋದರ ಸಹೋದರಿಯರ ತಪ್ಪನ್ನ ಕ್ಷಮಿಸಬೇಕು ಅಲ್ವಾ? ಕ್ಷಮಿಸೋದ್ರ ಬಗ್ಗೆ ಯೇಸು ಹೇಳಿದ ಒಂದು ಉದಾಹರಣೆಯನ್ನ ನೆನಪಿಸಿಕೊಳ್ಳಿ. ಒಬ್ಬ ಸೇವಕ ರಾಜನ ಹತ್ರ ಜಾಸ್ತಿ ಸಾಲ ಮಾಡಿದ್ದ. ಅದನ್ನ ಆ ರಾಜ ಮನ್ನಾ ಮಾಡಿಬಿಟ್ಟ. ಆದ್ರೆ ಆ ಸೇವಕನ ಹತ್ರ ಇನ್ನೊಬ್ಬ ಸೇವಕ ಸ್ವಲ್ಪ ಸಾಲ ಮಾಡಿದ್ದ. ಅವನ ಸಾಲವನ್ನ ಈ ಸೇವಕ ಮನ್ನಾ ಮಾಡಲಿಲ್ಲ. (ಮತ್ತಾ. 18:23-35) ಬೇರೆಯವರ ತಪ್ಪುಗಳು ಆ ಸಾಲ ಇದ್ದ ಹಾಗೆ. ನಾವು ಅವನ್ನ ಮನ್ನಾ ಮಾಡಿಬಿಡಬೇಕು, ಅಂದ್ರೆ ಕ್ಷಮಿಸಿಬಿಡಬೇಕು. ಸಭೆಯಲ್ಲಿ ಯಾರಾದ್ರೂ ನಿಮ್ಮ ಮನಸ್ಸು ನೋಯಿಸಿದ್ದಾರಾ? ಹಾಗಾದ್ರೆ ಈ ವರ್ಷದ ಸ್ಮರಣೆ ಬರೋ ಮುಂಚೆ ನೀವೇ ಅವರ ಹತ್ರ ಹೋಗಿ ಮಾತಾಡಿ ಸರಿಮಾಡ್ಕೊಳ್ಳಿ. (ಮತ್ತಾ. 5:23, 24) ಹೀಗೆ ಮಾಡಿದಾಗ ನಮಗೆ ಯೆಹೋವ ಮತ್ತು ಯೇಸು ಮೇಲೆ ಪ್ರೀತಿ ಇದೆ ಅಂತ ತೋರಿಸ್ತೀವಿ.

10-11. ಯೆಹೋವ ಮತ್ತು ಯೇಸು ಮೇಲೆ ಪ್ರೀತಿ ಇದೆ ಅಂತ ಹಿರಿಯರು ಹೇಗೆ ತೋರಿಸಿಕೊಡಬಹುದು? (1 ಪೇತ್ರ 5:1, 2)

10 ಯೆಹೋವ ಮತ್ತು ಯೇಸು ಮೇಲೆ ತಮಗೆ ಪ್ರೀತಿ ಇದೆ ಅಂತ ಹಿರಿಯರು ಹೇಗೆ ತೋರಿಸ್ತಾರೆ? ಯೇಸುವಿನ ಕುರಿಗಳನ್ನ ಅಂದ್ರೆ ಸಹೋದರ ಸಹೋದರಿಯರನ್ನ ಪ್ರೀತಿಯಿಂದ ನೋಡಿಕೊಳ್ತಾರೆ. (1 ಪೇತ್ರ 5:1, 2 ಓದಿ.) ಈ ಪಾಠವನ್ನೇ ಯೇಸು ಅಪೊಸ್ತಲ ಪೇತ್ರನಿಗೆ ಕಲಿಸಿದ. ಯೇಸು ಸಾಯೋ ಮುಂಚೆ ‘ಅವನು ಯಾರಂತಾನೇ ನಂಗೊತ್ತಿಲ್ಲ’ ಅಂತ ಪೇತ್ರ 3 ಸಲ ಹೇಳಿದ. ಆದ್ರೆ ಆಮೇಲೆ ಪೇತ್ರ, ತನಗೆ ಯೇಸು ಮೇಲೆ ಪ್ರೀತಿ ಇದೆ ಅಂತ ತೋರಿಸೋಕೆ ಕಾಯ್ತಾ ಇದ್ದ. ಅದಕ್ಕೆ ಯೇಸು ಜೀವಂತವಾಗಿ ಎದ್ದು ಬಂದಮೇಲೆ ಪೇತ್ರನ ಹತ್ರ “ಯೋಹಾನನ ಮಗನಾದ ಸೀಮೋನ, ನೀನು ನನ್ನನ್ನ ಪ್ರೀತಿಸ್ತೀಯಾ?” ಅಂತ ಕೇಳಿದನು. ಪೇತ್ರ ಯೇಸುಗೋಸ್ಕರ ಏನು ಮಾಡೋಕೂ ರೆಡಿ ಇದ್ದ. ಅದಕ್ಕೆ ಯೇಸು ಅವನಿಗೆ “ನನ್ನ ಚಿಕ್ಕ ಕುರಿಗಳಿಗೆ ಕುರುಬನಾಗಿರು” ಅಂದನು. (ಯೋಹಾ. 21:15-17) ಯೇಸು ಹೇಳಿದ ಹಾಗೆ ಪೇತ್ರ ಸಹೋದರ ಸಹೋದರಿಯರನ್ನ ಜೀವನಪೂರ್ತಿ ಚೆನ್ನಾಗಿ ನೋಡಿಕೊಂಡ. ಯೇಸು ಮೇಲೆ ತನಗೆ ಪ್ರೀತಿ ಇದೆ ಅಂತ ನಿರೂಪಿಸಿದ.

11 ಹಿರಿಯರು ಕೂಡ ಪೇತ್ರನ ತರ ಒಳ್ಳೇ ಕುರುಬರಾಗಿ ನಡ್ಕೊಳ್ತಾರೆ. ಹಿರಿಯರೇ, ಸ್ಮರಣೆಯ ಸಮಯದಲ್ಲಿ ಕುರಿಗಳಿಗೆ ನೀವು ಹೇಗೆಲ್ಲಾ ಪ್ರೀತಿ ತೋರಿಸಬಹುದು? ಆಗಾಗ ಪರಿಪಾಲನಾ ಭೇಟಿಗಳನ್ನ ಮಾಡಿ. ಕೆಲವರು ಯೆಹೋವನ ಸೇವೆಯನ್ನ ನಿಲ್ಲಿಸಿ ತುಂಬ ಸಮಯ ಆಗಿರುತ್ತೆ. ಅಂಥವರನ್ನ ಭೇಟಿ ಮಾಡಿ ಯೆಹೋವನ ಹತ್ರ ವಾಪಸ್‌ ಬರೋಕೆ ಸಹಾಯ ಮಾಡಿ. (ಯೆಹೆ. 34:11, 12) ಅಷ್ಟೇ ಅಲ್ಲ, ಕ್ರಿಸ್ತನ ಮರಣದ ಸ್ಮರಣೆಗೆ ಬಂದಿರೋ ಬೈಬಲ್‌ ವಿದ್ಯಾರ್ಥಿಗಳನ್ನ, ಹೊಸಬರನ್ನ ನೀವೇ ಹೋಗಿ ಮಾತಾಡಿಸಿ. ಇದನ್ನೆಲ್ಲ ಮಾಡುವಾಗ, ಅವರು ಯೇಸು ಮೇಲೆ ನಂಬಿಕೆ ಬೆಳೆಸಿಕೊಂಡು ಆತನ ಶಿಷ್ಯರಾಗ್ತಾರೆ.

ಕ್ರಿಸ್ತನ ಮೇಲೆ ಪ್ರೀತಿಯಿದ್ರೆ ಧೈರ್ಯವಾಗಿ ಇರ್ತೀವಿ

12. ಯೇಸು ಸಾಯೋ ಹಿಂದಿನ ರಾತ್ರಿ ಆಡಿದ ಮಾತುಗಳಿಂದ ನಮಗೆ ಹೇಗೆ ಧೈರ್ಯ ಸಿಗುತ್ತೆ? (ಯೋಹಾನ 16:32, 33)

12 ಯೇಸು ಸಾಯೋ ಹಿಂದಿನ ರಾತ್ರಿ ತನ್ನ ಶಿಷ್ಯರಿಗೆ “ಲೋಕದಲ್ಲಿ ನಿಮಗೆ ಕಷ್ಟ-ತೊಂದರೆ ಬರುತ್ತೆ. ಆದ್ರೆ ಭಯಪಡಬೇಡಿ! ಯಾಕಂದ್ರೆ ನಾನು ಈ ಲೋಕವನ್ನ ಗೆದ್ದಿದ್ದೀನಿ. ಧೈರ್ಯವಾಗಿರಿ!” ಅಂದನು. (ಯೋಹಾನ 16:32, 33 ಓದಿ.) ಕಷ್ಟಗಳು ಬಂದ್ರೂ ಯೇಸು ಯಾಕೆ ಧೈರ್ಯವಾಗಿದ್ದನು? ಯೆಹೋವನಿಗೆ ನಂಬಿಗಸ್ತನಾಗಿ ಇರೋಕೆ ಆತನಿಗೆ ಹೇಗೆ ಸಾಧ್ಯ ಆಯ್ತು? ಯೆಹೋವ ಸಹಾಯ ಮಾಡ್ತಾನೆ ಅನ್ನೋ ನಂಬಿಕೆ ಆತನಿಗಿತ್ತು. ತನ್ನ ಶಿಷ್ಯರಿಗೂ ಅದೇ ತರದ ಕಷ್ಟಗಳು ಬರುತ್ತೆ ಅಂತ ಯೇಸುಗೆ ಗೊತ್ತಿತ್ತು. ಅದಕ್ಕೆ ಯೆಹೋವನ ಹತ್ರ ‘ಅವರನ್ನ ಕಾಪಾಡು’ ಅಂತ ಬೇಡಿಕೊಂಡ. (ಯೋಹಾ. 17:11) ಇದು ನಮಗೆ ತುಂಬ ಧೈರ್ಯ ಕೊಡುತ್ತೆ. ಯಾಕಂದ್ರೆ ನಮ್ಮನ್ನ ವಿರೋಧಿಸುವವರು ಯಾರೇ ಆಗಿರಲಿ, ಎಷ್ಟೇ ದೊಡ್ಡವರಾಗಿರಲಿ ಅವರಿಗಿಂತ ಯೆಹೋವ ತುಂಬ ಶಕ್ತಿಶಾಲಿ. (1 ಯೋಹಾ. 4:4) ಯೆಹೋವ ಎಲ್ಲ ನೋಡ್ತಾ ಇದ್ದಾನೆ. ನಮಗೆ ಸಹಾಯ ಮಾಡೇ ಮಾಡ್ತಾನೆ. ಹಾಗಾಗಿ ನಾವು ಭಯಪಡೋ ಅವಶ್ಯಕತೆ ಇಲ್ಲ, ಧೈರ್ಯವಾಗಿ ಇರಬೇಕು.

13. ಅರಿಮಥಾಯದ ಯೋಸೇಫ ಹೇಗೆ ಧೈರ್ಯ ತೋರಿಸಿದ?

13 ಅರಿಮಥಾಯದ ಯೋಸೇಫನ ಉದಾಹರಣೆ ನೋಡಿ. ಅವನು ಹಿರೀಸಭೆ ಅಂದ್ರೆ ಯೆಹೂದ್ಯರ ಸರ್ವೋಚ್ಛ ನ್ಯಾಯಾಲಯದಲ್ಲಿ ಒಬ್ಬ ಸದಸ್ಯನಾಗಿದ್ದ. ಹಾಗಾಗಿ ಸಮಾಜದಲ್ಲಿ ಅವನಿಗೆ ಒಳ್ಳೇ ಸ್ಥಾನ ಇತ್ತು. ಜನರು ಅವನಿಗೆ ತುಂಬ ಗೌರವ ಕೊಡ್ತಿದ್ರು. ಯೇಸು ದೇವರ ಸರ್ಕಾರದ ಬಗ್ಗೆ ಹೇಳಿದಾಗ ಅವನಿಗೆ ತುಂಬ ಇಷ್ಟ ಆಗಿತ್ತು. ಯೇಸು ಮೇಲೆ ನಂಬಿಕೆನೂ ಬೆಳೆಸಿಕೊಂಡಿದ್ದ. ಆದ್ರೆ ಅಪೊಸ್ತಲ ಯೋಹಾನ ಹೇಳೋ ತರ “ಯೆಹೂದ್ಯರಿಗೆ ಭಯಪಟ್ಟು ಈ ವಿಷ್ಯ ಗುಟ್ಟಾಗಿ ಇಟ್ಟಿದ್ದ.” (ಯೋಹಾ. 19:38) ಯಾಕಂದ್ರೆ ಅವನಿಗೆ ತನ್ನ ಸ್ಥಾನಮಾನ ಹೋಗಿಬಿಡುತ್ತೆ ಅನ್ನೋ ಭಯ ಇತ್ತು. ಆದ್ರೆ ಯೇಸು ಸತ್ತ ಮೇಲೆ ತಾನು ಯೇಸುವಿನ ಶಿಷ್ಯ ಅನ್ನೋದನ್ನ ಗುಟ್ಟಾಗಿ ಇಡಲಿಲ್ಲ. “ಧೈರ್ಯದಿಂದ ಪಿಲಾತನ ಹತ್ರ ಹೋಗಿ ಯೇಸುವಿನ ದೇಹ ಕೊಡು ಅಂತ ಕೇಳ್ಕೊಂಡ.”—ಮಾರ್ಕ 15:42, 43.

14. ಬೇರೆಯವರು ಏನು ಅಂದುಕೊಳ್ತಾರೋ ಅನ್ನೋ ಭಯ ನಿಮಗಿದ್ರೆ ಏನು ಮಾಡಬೇಕು?

14 ಯೋಸೇಫನ ತರ ನಿಮಗೂ ಬೇರೆಯವರು ಏನು ಅಂದುಕೊಳ್ತಾರೋ ಅನ್ನೋ ಭಯ ಇದ್ಯಾ? ಸ್ಕೂಲಲ್ಲಿ ಅಥವಾ ಕೆಲಸದ ಜಾಗದಲ್ಲಿ ‘ನಾನೊಬ್ಬ ಯೆಹೋವನ ಸಾಕ್ಷಿ’ ಅಂತ ಹೇಳಿಕೊಳ್ಳೋಕೆ ಹೆದರಿಕೆ ಆಗುತ್ತಾ? ಬೇರೆಯವರು ಏನು ಅಂದುಕೊಳ್ತಾರೋ ಅನ್ನೋ ಭಯದಿಂದ ಪ್ರಚಾರಕರಾಗೋಕೆ, ದೀಕ್ಷಾಸ್ನಾನ ತಗೊಳ್ಳೋಕೆ ಹಿಂದೆಮುಂದೆ ನೋಡ್ತಿದ್ದೀರಾ? ನೀವು ಮಾಡ್ತಿರೋ ನಿರ್ಧಾರ ಸರಿ ಅಂತ ನಿಮಗೆ ಚೆನ್ನಾಗಿ ಗೊತ್ತು. ಹಾಗಾಗಿ ಬೇರೆಯವರಿಗೆ ಹೆದರಿಕೊಂಡು ಸರಿಯಾಗಿ ಇರೋದನ್ನ ಮಾಡದೇ ಇರಬೇಡಿ. ಯೆಹೋವ ದೇವರ ಹತ್ರ ‘ನಿನಗೆ ಇಷ್ಟ ಆಗೋದನ್ನ ಮಾಡೋಕೆ ಧೈರ್ಯ ಕೊಡಪ್ಪಾ’ ಅಂತ ಪ್ರಾರ್ಥನೆ ಮಾಡ್ತಾ ಇರಿ. ಯೆಹೋವ ನಿಮ್ಮ ಪ್ರಾರ್ಥನೆಗೆ ಉತ್ತರ ಕೊಡ್ತಾನೆ. ಆಗ ನಿಮಗೆ ಧೈರ್ಯ ಬರುತ್ತೆ.—ಯೆಶಾ. 41:10, 13.

ಸೋತುಹೋಗದೆ ಸಂತೋಷವಾಗಿ ಸೇವೆ ಮಾಡ್ತಾ ಇರಿ

15. ಯೇಸು ಮತ್ತೆ ಜೀವಂತವಾಗಿ ಎದ್ದು ಬಂದ ಮೇಲೆ ಶಿಷ್ಯರಿಗೆ ಹೇಗನಿಸ್ತು ಮತ್ತು ಇದ್ರಿಂದ ಅವರು ಏನು ಮಾಡಿದ್ರು? (ಲೂಕ 24:52, 53)

15 ಯೇಸು ತೀರಿಹೋದಾಗ ಶಿಷ್ಯರಿಗೆ ತುಂಬ ದುಃಖ ಆಯ್ತು. ಅವರು ತಮ್ಮ ಬೆಸ್ಟ್‌ ಫ್ರೆಂಡ್‌ನ ಕಳ್ಕೊಂಡಿದ್ರು. (ಲೂಕ 24:17-21) ಅಷ್ಟೇ ಅಲ್ಲ, ಅವರಿಗೆ ಮುಂದೆ ಏನು ಮಾಡಬೇಕು ಅಂತನೂ ತೋಚಲಿಲ್ಲ. ಆದ್ರೆ ಯೇಸು ಮತ್ತೆ ಜೀವಂತವಾಗಿ ಎದ್ದು ಬಂದ ಮೇಲೆ ಶಿಷ್ಯರ ಹತ್ರ ಮಾತಾಡಿದನು. ಅವರಿಗೆ, ಬೈಬಲಲ್ಲಿರೋ ಭವಿಷ್ಯವಾಣಿಗಳನ್ನ ತಾನು ಹೇಗೆ ನೆರವೇರಿಸ್ತಾ ಇದ್ದೀನಿ ಅಂತ ವಿವರಿಸಿದನು. ಸಿಹಿಸುದ್ದಿ ಸಾರೋ ಜವಾಬ್ದಾರಿಯನ್ನೂ ಕೊಟ್ಟನು. (ಲೂಕ 24:26, 27, 45-48) ಯೇಸು ಸ್ವರ್ಗಕ್ಕೆ ಹೋಗೋ ಮುಂಚೆ 40 ದಿನ ಶಿಷ್ಯರ ಜೊತೆ ಇದ್ದನು. ಅವರಿಗೆ ಧೈರ್ಯ ತುಂಬಿದನು. ತಾನು ಕೊಟ್ಟ ಕೆಲಸವನ್ನ ಮಾಡೋಕೆ ಅವರಿಗೆ ಸಹಾಯ ಮಾಡ್ತೀನಿ ಅಂತ ಮಾತು ಕೊಟ್ಟನು. ಇದ್ರಿಂದ ಅವರು ತಮ್ಮ ದುಃಖನೆಲ್ಲಾ ಮರೆತು ಯೇಸು ಕೊಟ್ಟ ಕೆಲಸವನ್ನ ಸಂತೋಷವಾಗಿ ಮಾಡಕ್ಕಾಯ್ತು. ಅದನ್ನ ಅವರು ಜೀವನಪೂರ್ತಿ ಮಾಡಿದ್ರು.—ಲೂಕ 24:52, 53 ಓದಿ; ಅ. ಕಾ. 5:42.

16. ನಾವು ಯೇಸುವಿನ ಶಿಷ್ಯರ ತರ ಇರೋಕೆ ಏನು ಮಾಡಬೇಕು?

16 ನಾವು ಯೇಸುವಿನ ಶಿಷ್ಯರ ತರ ಇರೋಕೆ ಏನು ಮಾಡಬೇಕು? ಯೆಹೋವನನ್ನು ಆರಾಧಿಸೋಕೆ ಸ್ಮರಣೆಯ ದಿನ ಬರಲಿ ಅಂತ ಕಾಯಬೇಕಾಗಿಲ್ಲ. ಯಾವಾಗಲೂ ಆತನ ಸೇವೆ ಮಾಡ್ತಾ ಸಂತೋಷವಾಗಿ ಇರಬಹುದು. ನಮ್ಮ ಜೀವನದಲ್ಲಿ ದೇವರ ಸೇವೆನೇ ಮುಖ್ಯವಾಗಿ ಇರಬೇಕು. ಸಿಹಿಸುದ್ದಿ ಸಾರೋಕೆ, ಕೂಟಗಳಿಗೆ ಹೋಗೋಕೆ ಮತ್ತು ಕುಟುಂಬ ಆರಾಧನೆ ಮಾಡೋಕೆ ನಮ್ಮ ಕೆಲಸ ಅಡ್ಡಬರದೇ ಇರೋ ತರ ನೋಡಿಕೊಳ್ಳಬೇಕು. ಹಣ-ಆಸ್ತಿ ಹಿಂದೆ ಹೋಗಬಾರದು. ಬದಲಿಗೆ ಸಭೆ ಕೆಲಸಗಳನ್ನ ಮಾಡೋಕೆ, ಹೆಚ್ಚು ಅಗತ್ಯ ಇರೋ ಕಡೆ ಹೋಗಿ ಸೇವೆ ಮಾಡೋಕೆ ಗುರಿ ಇಡಬೇಕು. ಇದನ್ನೆಲ್ಲ ಮಾಡೋಕೆ ನಮಗೆ ಕೆಲವೊಮ್ಮೆ ಕಷ್ಟ ಆಗಬಹುದು. ಆದ್ರೆ ನಾವು ಅದಕ್ಕೋಸ್ಕರ ತುಂಬ ಪ್ರಯತ್ನ ಮಾಡುವಾಗ ಯೆಹೋವ ನಮ್ಮನ್ನ ಆಶೀರ್ವದಿಸ್ತಾನೆ.—ಜ್ಞಾನೋ. 10:22; ಮತ್ತಾ. 6:32, 33.

ಯೆಹೋವ ಮತ್ತು ಯೇಸು ನಿಮಗೋಸ್ಕರ ಏನು ಮಾಡಿದ್ದಾರೆ ಅಂತ ಸ್ಮರಣೆ ಸಮಯದಲ್ಲಿ ಯೋಚನೆ ಮಾಡಿ (ಪ್ಯಾರ 17 ನೋಡಿ)

17. ಈ ವರ್ಷದ ಸ್ಮರಣೆ ಸಮಯದಲ್ಲಿ ನೀವೇನು ಮಾಡಬೇಕು ಅಂದ್ಕೊಂಡಿದ್ದೀರ? (ಚಿತ್ರ ನೋಡಿ.)

17 ಏಪ್ರಿಲ್‌ 4ನೇ ತಾರೀಕು ಮಂಗಳವಾರ ಕ್ರಿಸ್ತನ ಮರಣದ ಸ್ಮರಣೆ ಮಾಡೋಕೆ ನಾವೆಲ್ಲರೂ ಕಾಯ್ತಾ ಇದ್ದೀವಿ. ಹಾಗಂತ ಯೆಹೋವ ಮತ್ತು ಯೇಸು ತೋರಿಸಿದ ಪ್ರೀತಿಯನ್ನ ನೆನಪಿಸಿಕೊಳ್ಳೋಕೆ ಆ ದಿನ ಬರಲಿ ಅಂತ ಕಾಯ್ತಾ ಇರಬೇಡಿ. ಯೇಸು ಭೂಮಿಯಲ್ಲಿ ಇದ್ದಾಗ ನಮಗೋಸ್ಕರ ಏನೆಲ್ಲ ಮಾಡಿದನು, ನಮಗೋಸ್ಕರ ಯಾಕೆ ತನ್ನ ಪ್ರಾಣ ಕೊಟ್ಟನು ಅಂತ ಈಗಿಂದನೇ ಯೋಚನೆ ಮಾಡೋಕೆ ಶುರುಮಾಡಿ. ಆ ಘಟನೆಗಳನ್ನೆಲ್ಲ ಓದೋಕೆ ಸಮಯ ಮಾಡಿಕೊಳ್ಳಿ. ಅವು ಹೊಸ ಲೋಕ ಭಾಷಾಂತರ ಬೈಬಲ್‌ನ ಪರಿಶಿಷ್ಟ ಬಿ12ರಲ್ಲಿ ಇದೆ. ಅದರಲ್ಲಿ “ಯೇಸುವಿನ ಭೂಜೀವನದ ಕೊನೇ ವಾರ” ಅನ್ನೋ ಚಾರ್ಟ್‌ ನೋಡಿ. ಇದನ್ನೆಲ್ಲ ಓದುವಾಗ ಯೆಹೋವ ಮತ್ತು ಯೇಸು ನಮಗೋಸ್ಕರ ಎಷ್ಟು ದೊಡ್ಡ ತ್ಯಾಗ ಮಾಡಿದ್ದಾರೆ ಅಂತ ಗೊತ್ತಾಗುತ್ತೆ. ಅವರ ಮೇಲಿರೋ ಪ್ರೀತಿ ಇನ್ನೂ ಜಾಸ್ತಿ ಆಗುತ್ತೆ. ನಮಗೆ ಧೈರ್ಯ ಸಿಗುತ್ತೆ, ಖುಷಿ ಸಿಗುತ್ತೆ. ಆಮೇಲೆ ಅವರು ಮಾಡಿರೋ ತ್ಯಾಗಕ್ಕೆ ನೀವು ಹೇಗೆಲ್ಲ ಥ್ಯಾಂಕ್ಸ್‌ ಹೇಳಬಹುದು ಅಂತ ಯೋಚನೆ ಮಾಡಿ. ಸ್ಮರಣೆ ಸಮಯದಲ್ಲಿ ನೀವು ಆತನಿಗೆ ತೋರಿಸೋ ಪ್ರೀತಿ ನೋಡಿ ಯೇಸು ನಿಮ್ಮನ್ನ ತುಂಬ ಮೆಚ್ಚಿಕೊಳ್ತಾನೆ, ಖುಷಿ ಪಡ್ತಾನೆ.—ಪ್ರಕ. 2:19.

ಗೀತೆ 84 “ನನಗೆ ಮನಸ್ಸುಂಟು”

a ಯೇಸು ಭೂಮಿಯಲ್ಲಿದ್ದಾಗ ಏನು ಮಾಡಿದನು ಮತ್ತು ನಮಗೋಸ್ಕರ ಯಾಕೆ ಪ್ರಾಣ ಕೊಟ್ಟನು ಅಂತ ನಾವು ಸ್ಮರಣೆಯ ಸಮಯದಲ್ಲಿ ಯೋಚಿಸ್ತೀವಿ. ಅಷ್ಟೇ ಅಲ್ಲ, ಯೇಸು ಮತ್ತು ಯೆಹೋವ ನಮಗೆ ತೋರಿಸಿರೋ ಪ್ರೀತಿಯನ್ನ ನೆನಸಿಕೊಳ್ತೀವಿ. ಆಗ ಅವರಿಬ್ಬರಿಗೂ ನಾವು ಋಣಿಗಳಾಗಿ ಇರಬೇಕು ಅಂತ ನಮಗೆ ಅನಿಸುತ್ತೆ. ಅವರ ಮೇಲಿರೋ ಪ್ರೀತಿ ಇನ್ನೂ ಜಾಸ್ತಿಯಾಗುತ್ತೆ. ಈ ಪ್ರೀತಿ ನಮ್ಮನ್ನ, ಸಹೋದರ ಸಹೋದರಿಯರಿಗೆ ಪ್ರೀತಿ ತೋರಿಸೋಕೆ, ಏನೇ ಕಷ್ಟ ಬಂದ್ರೂ ಧೈರ್ಯವಾಗಿ ಎದುರಿಸೋಕೆ ಮತ್ತು ಸಂತೋಷದಿಂದ ಸೇವೆ ಮಾಡೋಕೆ “ಒತ್ತಾಯ ಮಾಡುತ್ತೆ.”