ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 2

‘ಯೋಚಿಸೋ ವಿಧಾನವನ್ನ ಬದಲಾಯಿಸಿಕೊಳ್ಳಿ’

‘ಯೋಚಿಸೋ ವಿಧಾನವನ್ನ ಬದಲಾಯಿಸಿಕೊಳ್ಳಿ’

“ದೇವರು ನಿಮ್ಮ ಯೋಚಿಸೋ ವಿಧಾನವನ್ನ ಬದಲಾಯಿಸೋಕೆ ಬಿಟ್ಟುಕೊಡಿ. ಆಗ ದೇವರು ಇಷ್ಟಪಡೋ ವಿಷ್ಯಗಳು ಯಾವಾಗ್ಲೂ ಒಳ್ಳೇದಾಗಿ, ಪರಿಪೂರ್ಣವಾಗಿ, ಸರಿಯಾಗಿ ಇರುತ್ತೆ ಅಂತ ಪರೀಕ್ಷಿಸಿ ಅರ್ಥ ಮಾಡ್ಕೊಳ್ತೀರ.”​—ರೋಮ. 12:2.

ಗೀತೆ 69 ನಿನ್ನ ಮಾರ್ಗಗಳನ್ನು ನನಗೆ ತಿಳಿಸು

ಈ ಲೇಖನದಲ್ಲಿ ಏನಿದೆ? a

1-2. ದೀಕ್ಷಾಸ್ನಾನ ಆದಮೇಲೂ ನಾವೇನು ಮಾಡ್ತಾ ಇರಬೇಕು ಮತ್ತು ಯಾಕೆ?

 ನೀವು ಎಷ್ಟು ಸಲ ನಿಮ್ಮ ಮನೆಯನ್ನ ಕ್ಲೀನ್‌ ಮಾಡ್ತಿರ? ಮನೆಗೆ ಬಂದ ಹೊಸದ್ರಲ್ಲಿ ನೀವು ಮೂಲೆಮೂಲೆನೂ ಗುಡಿಸಿ ಒರೆಸುತ್ತೀರ. ಒಂದುಸಲ ಮಾಡಿ ಆಮೇಲೆ ಬಿಟ್ಟುಬಿಟ್ರೆ ಏನಾಗುತ್ತೆ? ಎಲ್ಲಾ ಕಡೆ ಧೂಳು ತುಂಬುತ್ತೆ. ಹಾಗಾಗಿ, ನಿಮ್ಮ ಮನೆ ಚೆನ್ನಾಗಿ ಇರಬೇಕಂದ್ರೆ ನೀವು ಯಾವಾಗಲೂ ಕ್ಲೀನ್‌ ಮಾಡ್ತಾ ಇರಬೇಕು.

2 ಮನೆ ತರ ನಮ್ಮ ಮನಸ್ಸನ್ನೂ ಕ್ಲೀನಾಗಿ ಇಟ್ಕೊಬೇಕು. ನಮ್ಮಲ್ಲಿರೋ ಕೆಟ್ಟ ಯೋಚನೆಗಳನ್ನ, ಗುಣಗಳನ್ನ ಬದಲಾಯಿಸ್ಕೊಬೇಕು. ಇದನ್ನ ನಾವು ದೀಕ್ಷಾಸ್ನಾನ ಆಗೋ ಮುಂಚೆ ಮಾಡಿರುತ್ತೀವಿ. ‘ನಮ್ಮ ದೇಹ ಮತ್ತು ಹೃದಯದಿಂದ ಎಲ್ಲ ಕೊಳೆ ತೆಗೆದು ನಮ್ಮನ್ನ ಶುದ್ಧ ಮಾಡಿಕೊಳ್ಳೋಕೆ’ ತುಂಬ ಪ್ರಯತ್ನ ಹಾಕಿರುತ್ತೀವಿ. (2 ಕೊರಿಂ. 7:1) ಆದ್ರೆ ನಾವು ಅದನ್ನ ಅಲ್ಲಿಗೇ ನಿಲ್ಲಿಸಬಾರದು. ಅಪೊಸ್ತಲ ಪೌಲ ಹೇಳಿದ ಹಾಗೆ ನಮ್ಮ “ಯೋಚ್ನೆ ಮತ್ತು ನಡತೆಯನ್ನ ಬದಲಾಯಿಸ್ಕೊಳ್ತಾ ಇರಬೇಕು.” (ಎಫೆ. 4:23) ಯಾಕೆ? ಅದನ್ನ ನಾವು ಮಾಡಿಲ್ಲ ಅಂದ್ರೆ ಧೂಳು, ಕೊಳೆ ತರ ಇರೋ ಈ ಲೋಕದ ಕೆಟ್ಟ ವಿಷ್ಯಗಳು ನಮ್ಮಲ್ಲಿ ಬೇಗ ತುಂಬಿಕೊಳ್ಳುತ್ತೆ. ಆ ತರ ಯಾವತ್ತೂ ಆಗಬಾರದು. ನಮ್ಮನ್ನ ನೋಡಿದ್ರೆ ಯೆಹೋವ ದೇವರಿಗೆ ಇಷ್ಟ ಆಗಬೇಕು. ಅದಕ್ಕೆ ನಾವು ಯಾವ ತರ ಯೋಚನೆ ಮಾಡ್ತೀವಿ, ನಮ್ಮ ಗುಣಗಳೇನು, ಆಸೆಗಳೇನು ಅಂತ ಆಗಾಗ ನಮ್ಮನ್ನೇ ಕೇಳ್ಕೊಬೇಕು.

‘ಯೋಚಿಸೋ ವಿಧಾನವನ್ನ ಬದಲಾಯಿಸಿಕೊಳ್ತಾ ಇರಿ’

3. ‘ಯೋಚಿಸೋ ವಿಧಾನವನ್ನ ಬದಲಾಯಿಸೋದು’ ಅನ್ನೋದರ ಅರ್ಥ ಏನು? (ರೋಮನ್ನರಿಗೆ 12:2)

3 ಯೋಚಿಸೋ ವಿಧಾನವನ್ನ ಬದಲಾಯಿಸಿಕೊಳ್ತಾ ಇರೋಕೆ ನಾವೇನು ಮಾಡಬೇಕು? (ರೋಮನ್ನರಿಗೆ 12:2 ಓದಿ.) ಮೊದಲು ನಾವು, ಅದರ ಅರ್ಥ ಏನಂತ ತಿಳ್ಕೊಬೇಕು. ‘ಯೋಚಿಸೋ ವಿಧಾನವನ್ನ ಬದಲಾಯಿಸೋದು’ ಅನ್ನೋದಕ್ಕೆ ಇರೋ ಗ್ರೀಕ್‌ ಪದದ ಅರ್ಥ, “ಯೋಚಿಸೋ ರೀತಿಯನ್ನ ಹೊಸದು ಮಾಡಿಕೊಳ್ತಾ ಇರೋದು” ಅಂತ. ಉದಾಹರಣೆಗೆ, ಮನೆ ಕ್ಲೀನ್‌ ಮಾಡುವಾಗ ನಾವು ಬರೀ ಮೇಲೆ ಮೇಲೆ ಕ್ಲೀನ್‌ ಮಾಡಿದ್ರೆ ಸಾಕಾಗಲ್ಲ. ಹಾಳಾಗಿರೋ ವಸ್ತುಗಳನ್ನ ಬಿಸಾಕಿ, ಹೊಸ ವಸ್ತುಗಳನ್ನ ತಂದು ಇಡ್ತೀವಿ. ಅದೇ ತರ ನಾವು ಒಂದೆರಡು ಒಳ್ಳೇ ಕೆಲಸಗಳನ್ನ ಮಾಡಿದ್ರೆ ಸಾಕಾಗಲ್ಲ. ನಮ್ಮ ಮನಸ್ಸಲ್ಲಿ ಏನಿದೆ ಅಂತ ಮೊದಲು ಯೋಚನೆ ಮಾಡಬೇಕು, ಆಮೇಲೆ ಬದಲಾಗಬೇಕು. ಅಂದ್ರೆ ‘ಯೆಹೋವನ ನೀತಿ-ನಿಯಮಗಳನ್ನ ನಾನು ಪಾಲಿಸ್ತಾ ಇದ್ದೀನಾ’ ಅಂತ ಆಗಾಗ ನಮ್ಮನ್ನೇ ಕೇಳ್ಕೊಬೇಕು. ಏನಾದ್ರೂ ಬದಲಾವಣೆ ಮಾಡ್ಕೊಬೇಕು ಅಂತ ಗೊತ್ತಾದ ತಕ್ಷಣ ಅದನ್ನ ಮಾಡಬೇಕು. ಇದನ್ನ ಜೀವನ ಪೂರ್ತಿ ಮಾಡ್ತಾ ಇರಬೇಕು.

ಓದು ಮತ್ತು ಕೆಲಸದ ಬಗ್ಗೆ ನೀವು ಮಾಡೋ ನಿರ್ಧಾರಗಳು ನಿಮಗೆ ದೇವರ ಸೇವೆನೇ ಮುಖ್ಯ ಅಂತ ತೋರಿಸುತ್ತಾ? (ಪ್ಯಾರ 4-5 ನೋಡಿ) c

4. ಈ ಲೋಕ ನಮ್ಮನ್ನ ರೂಪಿಸದೇ ಇರೋಕೆ ನಾವೇನು ಮಾಡಬೇಕು?

4 ನಾವು ಪರಿಪೂರ್ಣರಾದ ಮೇಲೆ ಯೆಹೋವ ದೇವರಿಗೆ ಇಷ್ಟ ಆಗೋ ತರ ನಡಕೊಳ್ಳೋದು ತುಂಬ ಸುಲಭ. ಆದ್ರೆ ಅಲ್ಲಿ ತನಕ ನಾವು ಆತನಿಗೆ ಇಷ್ಟ ಆಗೋ ತರ ನಡಕೊಳ್ಳೋಕೆ ಪ್ರಯತ್ನ ಮಾಡ್ತಾ ಇರಬೇಕು. ಅದನ್ನೇ ಪೌಲ ರೋಮನ್ನರಿಗೆ 12:2ರಲ್ಲಿ ಹೇಳಿದ. ಯೆಹೋವ ದೇವರಿಗೆ ಇಷ್ಟ ಆಗೋ ತರ ನಡಕೊಳ್ಳಬೇಕಂದ್ರೆ ಮೊದಲು ನಾವು, ಯೋಚಿಸೋ ವಿಧಾನವನ್ನ ಬದಲಾಯಿಸಿಕೊಳ್ಳಬೇಕು. ಅಂದ್ರೆ ಈ ಲೋಕ ನಮ್ಮನ್ನ ರೂಪಿಸೋಕೆ ಬಿಡಬಾರದು. ಯೆಹೋವ ದೇವರ ತರ ಯೋಚನೆ ಮಾಡೋಕೆ ಕಲಿಯಬೇಕು. ನಾವು ಗುರಿಗಳನ್ನ ಇಡುವಾಗ ಅಥವಾ ಏನಾದ್ರೂ ತೀರ್ಮಾನಗಳನ್ನ ಮಾಡುವಾಗ ‘ನಾನು ಯೆಹೋವ ದೇವರನ್ನ ಆರಾಧಿಸದ ಜನರ ತರ ಯೋಚನೆ ಮಾಡ್ತೀನಾ ಅಥವಾ ಯೆಹೋವನ ತರ ಯೋಚನೆ ಮಾಡ್ತೀನಾ?’ ಅಂತ ನಮ್ಮನ್ನೇ ಕೇಳ್ಕೊಬೇಕು.

5. ಯೆಹೋವನ ದಿನ ಹತ್ರ ಇದೆ ಅನ್ನೋದನ್ನ ನಂಬ್ತೀವಿ ಅಂತ ಹೇಗೆ ತೋರಿಸಿ ಕೊಡಬಹುದು? (ಚಿತ್ರ ನೋಡಿ.)

5 ಒಂದು ಉದಾಹರಣೆ ನೋಡಿ. “ಯೆಹೋವನ ದಿನ ಬರುತ್ತೆ ಅನ್ನೋದನ್ನ ಮನಸ್ಸಲಿಟ್ಟು ಕಾಯ್ತಾ ಇರಿ” ಅಂತ ದೇವರು ಹೇಳಿದ್ದಾನೆ. (2 ಪೇತ್ರ 3:12) ಹಾಗಾಗಿ, ‘ಈ ಲೋಕ ಬೇಗ ಅಂತ್ಯ ಆಗುತ್ತೆ ಅನ್ನೋದನ್ನ ನಾನು ಮನಸ್ಸಲ್ಲಿಟ್ಟುಕೊಂಡಿದ್ದೀನಿ ಅಂತ ಜೀವನದಲ್ಲಿ ತೋರಿಸ್ತಿದ್ದೀನಾ? ವಿದ್ಯಾಭ್ಯಾಸ ಮತ್ತು ಕೆಲಸಕ್ಕಿಂತ ಯೆಹೋವ ದೇವರ ಸೇವೆನೇ ಮುಖ್ಯ ಅಂತ ನಾನು ಮಾಡೋ ನಿರ್ಧಾರಗಳಿಂದ ತೋರಿಸ್ತಿದ್ದೀನಾ? ನಾನು ಯಾವಾಗಲೂ ನನ್ನ ಬಗ್ಗೆನೇ, ನನ್ನ ಕುಟುಂಬನ ಸಾಕೋದರ ಬಗ್ಗೆನೇ ಯೋಚನೆ ಮಾಡ್ತಾ ಇರ್ತೀನಾ? ಅಥವಾ ಯೆಹೋವ ನಮ್ಮನ್ನ ನೋಡ್ಕೊಳ್ತಾನೆ ಅಂತ ನಂಬ್ತೀನಾ?’ ಅಂತ ನಮ್ಮನ್ನೇ ಕೇಳ್ಕೊಬೇಕು. ಯೆಹೋವನಿಗೆ ಇಷ್ಟ ಆಗೋ ತರ ನಡಕೊಳ್ಳೋಕೆ ನಾವು ಮಾಡೋ ಪ್ರಯತ್ನವನ್ನ ನೋಡಿದಾಗ, ಆತನಿಗೆ ಎಷ್ಟು ಖುಷಿಯಾಗುತ್ತೆ ಅಂತ ಸ್ವಲ್ಪ ಯೋಚನೆ ಮಾಡಿ ನೋಡಿ.—ಮತ್ತಾ. 6:25-27, 33; ಫಿಲಿ. 4:12, 13.

6. ನಾವೇನು ಮಾಡ್ತಾ ಇರಬೇಕು?

6 ನಾವು ಯಾವ ತರ ಯೋಚನೆ ಮಾಡ್ತಾ ಇದ್ದೀವಿ ಅನ್ನೋದನ್ನ ಆಗಾಗ ಪರೀಕ್ಷೆ ಮಾಡಿಕೊಳ್ತಾ ಇರಬೇಕು. ಆಮೇಲೆ ಅದಕ್ಕೆ ತಕ್ಕ ಹಾಗೆ ಬದಲಾವಣೆ ಮಾಡಿಕೊಳ್ತಾ ಇರಬೇಕು. ಪೌಲ ಕೊರಿಂಥದವರಿಗೆ “ನೀವು ಕ್ರೈಸ್ತ ನಂಬಿಕೆಗೆ ತಕ್ಕ ಹಾಗೆ ಜೀವಿಸ್ತಾ ಇದ್ದೀರಾ ಇಲ್ವಾ ಅಂತ ಪರೀಕ್ಷಿಸ್ಕೊಳ್ತಾ ಇರಿ, ನೀವು ಎಂಥವರಾಗಿದ್ದೀರ ಅಂತ ನಿಮ್ಮನ್ನೇ ಕೇಳಿಕೊಳ್ತಾ ಇರಿ” ಅಂತ ಹೇಳಿದ. (2 ಕೊರಿಂ. 13:5) ‘ಕ್ರೈಸ್ತ ನಂಬಿಕೆಗೆ ತಕ್ಕ ಹಾಗೆ ಜೀವಿಸೋದು’ ಅಂದ್ರೆ ಕೂಟಗಳಿಗೆ ಹೋಗೋದು, ಸಿಹಿಸುದ್ದಿ ಸಾರೋದು ಮಾತ್ರ ಅಲ್ಲ. ನಾವು ಅದನ್ನೆಲ್ಲಾ ಯಾಕೆ ಮಾಡ್ತಿದ್ದೀವಿ, ನಮ್ಮ ಆಸೆಗಳೇನು, ನಮ್ಮ ಉದ್ದೇಶಗಳೇನು ಅಂತನೂ ಯೋಚನೆ ಮಾಡಬೇಕು. ಅದಕ್ಕೆ ನಾವು ಬೈಬಲನ್ನ ಓದಬೇಕು. ಯೆಹೋವನ ತರ ಯೋಚನೆ ಮಾಡೋಕೆ ಕಲಿಬೇಕು. ಆಮೇಲೆ ಆತನಿಗೆ ಇಷ್ಟ ಆಗೋ ತರ ನಡಕೊಳ್ಳಬೇಕು. ಆಗ ನಮ್ಮ ಯೋಚಿಸೋ ವಿಧಾನವನ್ನ ಬದಲಾಯಿಸಿಕೊಳ್ತಾ ಇದ್ದೀವಿ ಅಂತ ತೋರಿಸ್ತೀವಿ.—1 ಕೊರಿಂ. 2:14-16.

‘ಹೊಸ ವ್ಯಕ್ತಿತ್ವ ಹಾಕಿಕೊಳ್ಳಿ’

7. (ಎ) ಎಫೆಸ 4:31, 32 ಹೇಳೋ ತರ ನಾವೇನು ಮಾಡಬೇಕು? (ಬಿ) ಇದನ್ನ ಮಾಡೋಕೆ ಯಾಕೆ ಕಷ್ಟ ಆಗಬಹುದು?

7 ಎಫೆಸ 4:31, 32 ಓದಿ. ನಾವು ನಮ್ಮ ಯೋಚಿಸೋ ವಿಧಾನವನ್ನ ಬದಲಾಯಿಸಿಕೊಳ್ಳೋದರ ಜೊತೆಗೆ “ಹೊಸ ವ್ಯಕ್ತಿತ್ವವನ್ನ ಬಟ್ಟೆ ತರ ಹಾಕಬೇಕು.” (ಎಫೆ. 4:24) ಇದರ ಅರ್ಥ ನಾವು ಜೀವನದಲ್ಲಿ ಬದಲಾವಣೆಗಳನ್ನ ಮಾಡಿಕೊಳ್ಳಬೇಕು. ನಮ್ಮಲ್ಲಿರೋ ಕೆಲವು ಕೆಟ್ಟ ಗುಣಗಳನ್ನ ಉದಾಹರಣೆಗೆ ದ್ವೇಷ, ಕೋಪ, ಕ್ರೋಧ ಇದನ್ನೆಲ್ಲ ಬಿಟ್ಟುಬಿಡೋಕೆ ತುಂಬ ಪ್ರಯತ್ನ ಹಾಕಬೇಕು. ಯಾಕಂದ್ರೆ ಇಂಥ ಗುಣಗಳು ನಮಗೆ ಚಿಕ್ಕ ವಯಸ್ಸಿಂದಲೇ ಬಂದಿರುತ್ತೆ. ಬೈಬಲ್‌ ಕೂಡ “ಮನುಷ್ಯನ ಹೃದಯದ ಆಸೆಗಳು ಕೆಟ್ಟದ್ರ ಕಡೆಗೆ ವಾಲುತ್ತೆ” ಅಂತ ಹೇಳುತ್ತೆ. (ಆದಿ. 8:21) ಅದಕ್ಕೆ ದೀಕ್ಷಾಸ್ನಾನ ಆದಮೇಲೂ ಕೆಟ್ಟ ಗುಣಗಳನ್ನ ಬಿಟ್ಟುಬಿಡೋಕೆ ನಾವು ಪ್ರಯತ್ನ ಮಾಡ್ತಾನೇ ಇರಬೇಕು. ಇದನ್ನ ಅರ್ಥ ಮಾಡಿಕೊಳ್ಳೋಕೆ ಒಂದು ಅನುಭವ ನೋಡೋಣ.

8-9. ಹಳೇ ವ್ಯಕ್ತಿತ್ವವನ್ನ ನಾವು ಯಾಕೆ ತೆಗೆದುಹಾಕ್ತಾ ಇರಬೇಕು? ಒಂದು ಉದಾಹರಣೆ ಕೊಡಿ.

8 ಸ್ಟೀಫನ್‌ ಅನ್ನೋ ಸಹೋದರನಿಗೆ ಮೂಗಿನ ತುದಿಯಲ್ಲೇ ಕೋಪ ಇತ್ತು. ಅವರು ಹೇಳೋದು: “ದೀಕ್ಷಾಸ್ನಾನ ಆದಮೇಲೂ ನನ್ನಲ್ಲಿ ಕೋಪ ಇದೆ ಅಂತ ಗೊತ್ತಾಯ್ತು. ಯಾಕಂದ್ರೆ ಒಂದಿನ ನಾನು ಮನೆಮನೆ ಸೇವೆ ಮಾಡ್ತಿದ್ದಾಗ ಒಬ್ಬ ಕಳ್ಳ, ನನ್ನ ಕಾರ್‌ನಿಂದ ರೇಡಿಯೋ ಕದ್ದುಕೊಂಡು ಓಡ್ತಿದ್ದ. ನಾನು ಅವನನ್ನ ಅಟ್ಟಿಸ್ಕೊಂಡು ಹೋದೆ. ಇನ್ನೇನು ಅವನನ್ನ ಹಿಡಿಬೇಕು ಅನ್ನುವಷ್ಟರಲ್ಲಿ ಅವನು ರೇಡಿಯೋ ಬಿಸಾಕಿ ಓಡಿಬಿಟ್ಟ. ಇದರ ಬಗ್ಗೆ ನಾನು ಸಹೋದರರ ಹತ್ರ ಹೇಳ್ತಿದ್ದಾಗ ಒಬ್ಬ ಹಿರಿಯ ‘ಸ್ಟೀಫನ್‌, ಒಂದುವೇಳೆ ಆ ಕಳ್ಳ ಕೈಗೆ ಸಿಕ್ಕಿದಿದ್ರೆ ನೀನೇನು ಮಾಡ್ತಿದ್ದೆ?’ ಅಂತ ಕೇಳಿದ್ರು. ಆಗ ನನಗೆ, ನಾನಿನ್ನೂ ಬದಲಾಗಬೇಕು, ಕೋಪ ಮಾಡಿಕೊಳ್ಳೋದನ್ನ ಬಿಟ್ಟು ಶಾಂತಿಯಿಂದ ಇರೋಕೆ ಕಲಿಬೇಕು ಅಂತ ಗೊತ್ತಾಯ್ತು.” b

9 ಸ್ಟೀಫನ್‌ ಅವರ ಅನುಭವದಿಂದ ನಾವೇನು ತಿಳಿದುಕೊಳ್ತೀವಿ? ನಾವು ಪೂರ್ತಿ ಬದಲಾಗಿಬಿಟ್ಟಿದ್ದೀವಿ, ನಮ್ಮಲ್ಲಿ ಕೆಟ್ಟ ಗುಣಗಳು ಯಾವುದೂ ಇಲ್ಲ ಅಂತ ಕೆಲವೊಮ್ಮೆ ಅಂದ್ಕೊಳ್ತೀವಿ. ಆದ್ರೆ ಆ ಗುಣಗಳು ನಮ್ಮಲ್ಲಿ ಇನ್ನೂ ಇರುತ್ತೆ. ನಮಗೆ ಗೊತ್ತೇ ಆಗಲ್ಲ. ಕೆಲವೊಮ್ಮೆ ಆ ಗುಣಗಳನ್ನ ತೋರಿಸಿಬಿಡ್ತೀವಿ. ನಿಮಗೂ ಹೀಗೆ ಆಗಿರಬಹುದು. ಹಾಗೆ ಆದಾಗ ನೀವು ನಿಮ್ಮನ್ನೇ ಕೆಟ್ಟವರು ಅಂತ ಅಂದ್ಕೊಳ್ಳಬೇಡಿ. ಯಾಕಂದ್ರೆ ಅಪೊಸ್ತಲ ಪೌಲ ಕೂಡ “ನಾನು ಒಳ್ಳೇದು ಮಾಡೋಕೆ ಹೋಗ್ತೀನಿ, ಆದ್ರೆ ನನ್ನೊಳಗೆ ಕೆಟ್ಟದೇ ಇದೆ” ಅಂತ ಹೇಳಿದ. (ರೋಮ. 7:21-23) ನಾವು ಅಪರಿಪೂರ್ಣರು. ಅದಕ್ಕೆ ಕೆಟ್ಟ ಗುಣಗಳು ಧೂಳಿನ ತರ ನಮ್ಮ ಮನಸ್ಸಲ್ಲಿ ಮತ್ತೆ ಬಂದು ತುಂಬಿಕೊಳ್ಳುತ್ತೆ. ಅದನ್ನ ಕ್ಲೀನ್‌ ಮಾಡೋಕೆ ನಾವು ಆಗಾಗ ಪ್ರಯತ್ನ ಮಾಡ್ತಾ ಇರಬೇಕು. ಹೇಗೆ?

10. ಕೆಟ್ಟ ಗುಣಗಳನ್ನ ತೆಗೆದುಹಾಕೋಕೆ ನಾವೇನು ಮಾಡಬೇಕು? (1 ಯೋಹಾನ 5:14, 15)

10 ನಿಮಗೆ ಯಾವ ಗುಣಗಳನ್ನ ಬಿಡೋಕೆ ಕಷ್ಟ ಆಗ್ತಿದ್ಯೋ ಅದರ ಬಗ್ಗೆ ಯೆಹೋವನ ಹತ್ರ ಹೇಳಿ. ಆತನು ಸಹಾಯ ಮಾಡೇ ಮಾಡ್ತಾನೆ ಅಂತ ನಂಬಿ ಪ್ರಾರ್ಥನೆ ಮಾಡಿ. (1 ಯೋಹಾನ 5:14, 15 ಓದಿ.) ನೀವು ಪ್ರಾರ್ಥನೆ ಮಾಡಿದ ತಕ್ಷಣ ಯೆಹೋವ ನಿಮ್ಮಲ್ಲಿರೋ ಆ ಕೆಟ್ಟ ಗುಣಗಳನ್ನ ಕಿತ್ತು ಬಿಸಾಕಲ್ಲ. ಆದ್ರೆ ಆ ಗುಣಗಳನ್ನ ನೀವು ತೋರಿಸದೇ ಇರೋಕೆ ಶಕ್ತಿ ಕೊಡ್ತಾನೆ. (1 ಪೇತ್ರ 5:10) ನೀವು ಕೂಡ ನಿಮ್ಮ ಪ್ರಾರ್ಥನೆಗೆ ತಕ್ಕ ಹಾಗೆ ನಡಕೊಳ್ಳಬೇಕು. ಅಂದ್ರೆ ನೀವು ಯಾವ ಗುಣಗಳನ್ನ ಬಿಡಬೇಕು ಅಂತ ಪ್ರಯತ್ನ ಮಾಡ್ತಾ ಇದ್ದೀರೋ ಅಂಥ ಗುಣಗಳಿಗೆ ಕುಮ್ಮಕ್ಕು ಕೊಡೋ ಟಿವಿ ಪ್ರೋಗ್ರಾಮ್‌ಗಳನ್ನ, ಸಿನಿಮಾಗಳನ್ನ ನೋಡಬೇಡಿ. ಅಂಥ ಕಥೆಗಳನ್ನ ಓದಬೇಡಿ. ಕೆಟ್ಟ ಆಸೆಗಳ ಬಗ್ಗೆನೇ ಯಾವಾಗಲೂ ಯೋಚನೆ ಮಾಡ್ತಾ ಇರಬೇಡಿ.—ಫಿಲಿ. 4:8; ಕೊಲೊ. 3:2.

11. ಹೊಸ ವ್ಯಕ್ತಿತ್ವವನ್ನ ಹಾಕೊಳ್ತಾ ಇರೋಕೆ ನಾವು ಏನು ಮಾಡಬೇಕು?

11 ನಾವು ಹಳೇ ವ್ಯಕ್ತಿತ್ವವನ್ನ ತೆಗೆದುಹಾಕೋದು ಮಾತ್ರ ಅಲ್ಲ, ಹೊಸದನ್ನ ಹಾಕೊಳ್ತಾ ಇರಬೇಕು. ಅದಕ್ಕೆ ನಾವೇನು ಮಾಡಬೇಕು? ಯೆಹೋವ ದೇವರ ಗುಣಗಳನ್ನ ಬೆಳೆಸಿಕೊಳ್ಳೋ ಗುರಿ ಇಡಬೇಕು. (ಎಫೆ. 5:1, 2) ಉದಾಹರಣೆಗೆ, ಯೆಹೋವ ಬೇರೆಯವರನ್ನ ಕ್ಷಮಿಸಿದ ಒಂದು ಘಟನೆಯನ್ನ ಬೈಬಲ್‌ನಲ್ಲಿ ಓದ್ತಾ ಇದ್ದೀರ ಅಂದ್ಕೊಳ್ಳಿ. ಆಗ ‘ನಾನೂ ಯೆಹೋವನ ತರಾನೇ ಬೇರೆಯವರನ್ನ ಕ್ಷಮಿಸ್ತೀನಾ?’ ಅಂತ ನಿಮ್ಮನ್ನೇ ಕೇಳಿಕೊಳ್ಳಿ. ಯೆಹೋವ ಬಡವರಿಗೆ ಸಹಾಯ ಮಾಡಿದ್ದರ ಬಗ್ಗೆ, ಕರುಣೆ ತೋರಿಸಿದ್ದರ ಬಗ್ಗೆ ಓದುವಾಗ ‘ನಾನೂ ಸಹೋದರ ಸಹೋದರಿಯರಿಗೆ ಸಹಾಯ ಮಾಡ್ತೀನಾ, ಕರುಣೆ ತೋರಿಸ್ತೀನಾ?’ ಅಂತ ಯೋಚನೆ ಮಾಡಿ. ನಿಜ, ನಮಗೆ ಈ ಗುಣಗಳೆಲ್ಲ ರಾತ್ರೋರಾತ್ರಿ ಬಂದುಬಿಡಲ್ಲ. ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತೆ. ಅದಕ್ಕಾಗಿ ನಾವು ತಾಳ್ಮೆಯಿಂದ ಪ್ರಯತ್ನ ಮಾಡ್ತಾ ಇರಬೇಕು. ಹೀಗೆ ನಾವು ಹೊಸ ವ್ಯಕ್ತಿತ್ವ ಹಾಕೊಳ್ತಾ ಇದ್ರೆ, ಯೋಚಿಸೋ ವಿಧಾನವನ್ನ ಬದಲಾಯಿಸಿಕೊಳ್ತೀವಿ.

12. ಬೈಬಲಿಗೆ ಜನರ ಜೀವನವನ್ನ ಬದಲಾಯಿಸೋ ಶಕ್ತಿ ಇದೆ ಅಂತ ಸ್ಟೀಫನ್‌ ಹೇಗೆ ಅರ್ಥ ಮಾಡಿಕೊಂಡ್ರು?

12 ಸಹೋದರ ಸ್ಟೀಫನ್‌ ಕೂಡ ಹೊಸ ವ್ಯಕ್ತಿತ್ವವನ್ನ ಹಾಕೊಂಡ್ರು. ಅವರು ಹೇಳಿದ್ದು: “ದೀಕ್ಷಾಸ್ನಾನ ಆದಾಗಿಂದ ಇಲ್ಲಿ ತನಕ ಎಷ್ಟೋ ಸಂದರ್ಭದಲ್ಲಿ ನನಗೆ ಕೋಪ ನೆತ್ತಿಗೇರಿದೆ. ಆಗ ಅಲ್ಲಿಂದ ಜಾಗ ಖಾಲಿ ಮಾಡಿಬಿಡ್ತಿದ್ದೆ ಅಥವಾ ಪರಿಸ್ಥಿತಿ ಕೈಮೀರಿ ಹೋಗದೇ ಇರೋ ತರ ನೋಡಿಕೊಳ್ತಿದ್ದೆ. ನಾನು ಮಾಡ್ತಿದ್ದ ಪ್ರಯತ್ನ ನೋಡಿ ನನ್ನ ಹೆಂಡತಿ ಮತ್ತು ಇನ್ನೂ ಎಷ್ಟೋ ಜನ ಖುಷಿಪಡ್ತಿದ್ರು. ನಾನಿಷ್ಟು ಬದಲಾಗಿದ್ದೀನಾ ಅಂತ ನನಗೇ ನಂಬೋಕೆ ಆಗಲಿಲ್ಲ. ಆದ್ರೆ ಇದು ಯಾವುದೂ ನನ್ನ ಸ್ವಂತ ಶಕ್ತಿಯಿಂದ ಆಗಲಿಲ್ಲ. ಇದಕ್ಕೆಲ್ಲ ಬೈಬಲೇ ಕಾರಣ. ಬೈಬಲಿಗೆ ಜನರ ಜೀವನವನ್ನ ಬದಲಾಯಿಸೋ ಶಕ್ತಿ ಇದೆ ಅನ್ನೋದಕ್ಕೆ ನಾನೇ ಸಾಕ್ಷಿ.”

ಕೆಟ್ಟ ಆಸೆಗಳು ನಿಮ್ಮನ್ನ ಸೋಲಿಸೋಕೆ ಬಿಡಬೇಡಿ

13. ಸರಿಯಾಗಿ ಇರೋದನ್ನ ಮಾಡೋಕೆ ನಮಗೆ ಯಾವುದು ಸಹಾಯ ಮಾಡುತ್ತೆ? (ಗಲಾತ್ಯ 5:16)

13 ಗಲಾತ್ಯ 5:16 ಓದಿ. ಸರಿಯಾಗಿ ಇರೋದನ್ನ ಮಾಡೋಕೆ ನಾವು ಪ್ರಯತ್ನ ಮಾಡ್ತಿರುವಾಗ ಯೆಹೋವ ನಮಗೆ ಪವಿತ್ರ ಶಕ್ತಿ ಕೊಟ್ಟು ಸಹಾಯ ಮಾಡ್ತಾನೆ. ನಾವು ಆತನ ವಾಕ್ಯವನ್ನ ಓದಿದಾಗ ಆ ಪವಿತ್ರ ಶಕ್ತಿ ನಮ್ಮನ್ನ ರೂಪಿಸೋಕೆ ಬಿಟ್ಟುಕೊಡ್ತೀವಿ. ನಾವು ಕೂಟಗಳಿಗೆ ಹೋದಾಗಲೂ ನಮಗೆ ಪವಿತ್ರ ಶಕ್ತಿ ಸಿಗುತ್ತೆ. ಸರಿಯಾಗಿ ಇರೋದನ್ನ ಮಾಡೋಕೆ ನಮ್ಮ ತರಾನೇ ಎಷ್ಟೋ ಸಹೋದರ ಸಹೋದರಿಯರು ತುಂಬ ಪ್ರಯತ್ನ ಮಾಡ್ತಿದ್ದಾರೆ. ಅವರ ಜೊತೆ ನಾವು ಸಮಯ ಕಳೆಯುವಾಗ ಪ್ರೋತ್ಸಾಹ ಸಿಗುತ್ತೆ. (ಇಬ್ರಿ. 10:24, 25; 13:7) ‘ಕೆಟ್ಟ ಆಸೆಗಳನ್ನ ತೆಗೆದುಹಾಕೋಕೆ ಸಹಾಯ ಮಾಡಪ್ಪಾ’ ಅಂತ ನಾವು ಯೆಹೋವನ ಹತ್ರ ಅಂಗಲಾಚಿ ಬೇಡಬೇಕು. ಆಗ ಆತನು ಪವಿತ್ರ ಶಕ್ತಿ ಕೊಟ್ಟು ಸಹಾಯ ಮಾಡ್ತಾನೆ, ನಾವು ಸೋತುಹೋಗಲ್ಲ. ಇದನ್ನೆಲ್ಲ ಮಾಡಿದಾಗ ನಮ್ಮಲ್ಲಿರೋ ಕೆಟ್ಟ ಆಸೆಗಳು ಮಾಯ ಆಗಲ್ಲ ನಿಜ. ಆದ್ರೆ ನಾವು ಅದಕ್ಕೆ ಬಲಿಬೀಳದೆ ಸರಿಯಾಗಿ ಇರೋದನ್ನೇ ಮಾಡೋಕೆ ನಮಗೆ ಸಹಾಯ ಸಿಗುತ್ತೆ. ಗಲಾತ್ಯ 5:16ರಲ್ಲಿ ಹೇಳೋ ಹಾಗೆ ಪವಿತ್ರಶಕ್ತಿಯ ಮಾರ್ಗದರ್ಶನಕ್ಕೆ ತಕ್ಕ ಹಾಗೆ ನಾವು ನಡಕೊಳ್ತಾ ಇದ್ರೆ, “ದೇಹದ ಆಸೆಗಳ ಪ್ರಕಾರ ನಡ್ಕೊಳಲ್ಲ.”

14. ನಾವ್ಯಾಕೆ ಒಳ್ಳೇ ವಿಷಯಗಳ ಬಗ್ಗೆ ಯಾವಾಗಲೂ ಯೋಚನೆ ಮಾಡ್ತಾ ಇರಬೇಕು?

14 ಯೆಹೋವನ ಜೊತೆಗಿರೋ ನಮ್ಮ ಸ್ನೇಹನ ಗಟ್ಟಿಮಾಡಿಕೊಳ್ಳೋಕೆ ನಾವು ಒಂದು ಸಲ ಶುರುಮಾಡಿದ್ರೆ ಆ ರೂಢಿನ ಬಿಟ್ಟುಬಿಡಬಾರದು. ಅದರ ಜೊತೆಗೆ, ಒಳ್ಳೇ ವಿಷಯಗಳ ಬಗ್ಗೆ ಯಾವಾಗಲೂ ಯೋಚನೆ ಮಾಡ್ತಾ ಇರಬೇಕು. ಯಾಕಂದ್ರೆ ಕೆಟ್ಟ ಆಸೆಗಳು, ಹೊಂಚು ಹಾಕಿಕೊಂಡು ಕಾಯ್ತಾ ಇರೋ ಶತ್ರು ಇದ್ದ ಹಾಗೆ. ಅವಕಾಶ ಸಿಕ್ಕಿದ ತಕ್ಷಣ ನಮ್ಮಲ್ಲಿ ಮತ್ತೆ ಬಂದುಬಿಡುತ್ತೆ. ದೀಕ್ಷಾಸ್ನಾನ ಆದಮೇಲೂ ನಮಗೆ ಇಂಥ ಕೆಟ್ಟ ಆಸೆಗಳು ಬರಬಹುದು. ಇದ್ರಿಂದ ಜೂಜಾಟ, ವಿಪರೀತವಾದ ಕುಡಿತ ಅಥವಾ ಅಶ್ಲೀಲ ಚಿತ್ರಗಳನ್ನ ನೋಡೋ ಚಟಕ್ಕೆ ನಾವು ಬಿದ್ದುಬಿಡಬಹುದು. (ಎಫೆ. 5:3, 4) ಇದಕ್ಕೆ ಒಬ್ಬ ಯುವ ಸಹೋದರನ ಉದಾಹರಣೆ ನೋಡಿ. “ಹುಡುಗರ ಮೇಲೆ ನನಗಿದ್ದ ಕೆಟ್ಟ ಆಸೆಯನ್ನ ತೆಗೆದುಹಾಕೋಕೆ ನಾನು ತುಂಬ ಕಷ್ಟ ಪಡ್ತಿದ್ದೆ. ಹೋಗ್ತಾ ಹೋಗ್ತಾ ಇದೆಲ್ಲ ಸರಿ ಹೋಗುತ್ತೆ ಅಂತ ಅಂದ್ಕೊಂಡಿದ್ದೆ. ಆದ್ರೆ ಅಂಥ ಆಸೆಗಳು ನನಗೆ ಈಗಲೂ ಬರ್ತಾ ಇದೆ” ಅಂತ ಅವನು ಹೇಳ್ತಾನೆ. ನಿಮಗೂ ಕೆಟ್ಟ ಆಸೆಗಳಿದ್ರೆ ಅದನ್ನ ತೆಗೆದುಹಾಕೋಕೆ ಯಾವುದು ಸಹಾಯ ಮಾಡುತ್ತೆ?

ಕೆಟ್ಟ ಆಸೆಗಳಿಗೆ ಸೋತುಹೋಗಬೇಡಿ; ಬೇರೆಯವರೂ ಇಂಥ ಆಸೆಗಳ ವಿರುದ್ಧ ಹೋರಾಡಿ ಗೆದ್ದಿದ್ದಾರೆ (ಪ್ಯಾರ 15-16 ನೋಡಿ)

15. “ಎಲ್ಲ ಜನ್ರಿಗೆ” ಕೆಟ್ಟ ಆಸೆಗಳು ಬರೋದು ಸಹಜ ಅಂತ ಕೇಳಿದಾಗ ನಿಮಗೆ ಏನು ಅನ್ಸುತ್ತೆ? (ಚಿತ್ರ ನೋಡಿ.)

15 “ಎಲ್ಲ ಜನ್ರಿಗೆ ಕಷ್ಟಗಳು ಬರೋ ಹಾಗೇ ನಿಮಗೂ ಕಷ್ಟ ಬಂದಿದೆ” ಅಂತ ಬೈಬಲ್‌ ಹೇಳುತ್ತೆ. (1 ಕೊರಿಂ. 10:13ಎ) ಹಾಗಾಗಿ ನಿಮ್ಮ ತರಾನೇ ತುಂಬ ಜನ ಕೆಟ್ಟ ಆಸೆಗಳ ವಿರುದ್ಧ ಹೋರಾಡ್ತಾ ಇದ್ದಾರೆ. ಕೊರಿಂಥದಲ್ಲಿದ್ದ ಸಹೋದರ ಸಹೋದರಿಯರೂ ಇಂಥ ಆಸೆಗಳ ವಿರುದ್ಧ ಹೋರಾಡ್ತಿದ್ರು. ಅವರಲ್ಲಿ ಕೆಲವರು ಯೆಹೋವನ ಬಗ್ಗೆ ಕಲಿಯೋ ಮುಂಚೆ ವ್ಯಭಿಚಾರಿಗಳಾಗಿದ್ರು, ಸಲಿಂಗಕಾಮಿಗಳಾಗಿದ್ರು, ಕುಡುಕರಾಗಿದ್ರು. (1 ಕೊರಿಂ. 6:9-11) ಆದ್ರೆ ಅವರು ದೀಕ್ಷಾಸ್ನಾನ ತಗೊಂಡ ಮೇಲೆ ಆ ಕೆಟ್ಟ ಆಸೆಗಳೆಲ್ಲ ಹೊರಟುಹೋಯ್ತಾ? ಇಲ್ಲ. ಅವರು ಅಭಿಷಿಕ್ತ ಕ್ರೈಸ್ತರಾಗಿದ್ರೂ ಅಪರಿಪೂರ್ಣ ಮನುಷ್ಯರೇ. ಹಾಗಾಗಿ ಅವರಲ್ಲೂ ಆಗಾಗ ಕೆಟ್ಟ ಆಸೆಗಳು ಬರ್ತಾ ಇತ್ತು. ಅದನ್ನ ಅವರು ತೆಗೆದುಹಾಕೋಕೆ ತುಂಬ ಪ್ರಯತ್ನ ಮಾಡ್ತಾ ಇದ್ರು. ಇದನ್ನ ಕೇಳಿದಾಗ ನಮಗೂ ಸಮಾಧಾನ ಆಗುತ್ತೆ. ಯಾಕಂದ್ರೆ ನಮ್ಮ ತರಾನೇ ಅವರೂ ಕೆಟ್ಟ ಆಸೆಗಳ ವಿರುದ್ಧ ಹೋರಾಡಿದ್ದಾರೆ ಮತ್ತು ಗೆದ್ದಿದ್ದಾರೆ. ಹಾಗಾಗಿ “ಲೋಕದ ಎಲ್ಲ ಕಡೆ ಇರೋ ನಿಮ್ಮ ಸಹೋದರರು ಇಂಥ ಕಷ್ಟಗಳನ್ನೇ ಅನುಭವಿಸ್ತಿದ್ದಾರೆ ಅಂತ ಅರ್ಥ ಮಾಡ್ಕೊಂಡು ಧೈರ್ಯವಾಗಿರಿ.” ಆಗ ನಿಮ್ಮ ನಂಬಿಕೆ ಗಟ್ಟಿಯಾಗಿರುತ್ತೆ.—1 ಪೇತ್ರ 5:9.

16. ನಾವು ಯಾವ ತರ ಯೋಚನೆ ಮಾಡಬಾರದು ಮತ್ತು ಯಾಕೆ?

16 ‘ನಾನೆಷ್ಟು ಕಷ್ಟ ಪಡ್ತಿದ್ದೀನಿ ಅಂತ ನನಗೆ ಮಾತ್ರ ಗೊತ್ತು. ಅದನ್ನ ಯಾರೂ ಅರ್ಥ ಮಾಡ್ಕೊಳ್ಳೋಕೆ ಆಗಲ್ಲ’ ಅಂತ ಯಾವತ್ತೂ ಯೋಚನೆ ಮಾಡಬೇಡಿ. ಆ ತರ ಮಾಡಿದ್ರೆ ನಿಮಗೆ ಆ ಕೆಟ್ಟ ಯೋಚನೆಗಳನ್ನ ತೆಗೆದುಹಾಕೋಕೆ ಕಷ್ಟ ಆಗುತ್ತೆ, ನೀವು ಸೋತುಹೋಗ್ತೀರ. ಅದರ ಬದಲು ಬೈಬಲ್‌ ಏನು ಹೇಳುತ್ತೆ ಅನ್ನೋದಕ್ಕೆ ಗಮನ ಕೊಡಿ. “ದೇವರು ನಂಬಿಗಸ್ತನು, ನಿಮಗೆ ಸಹಿಸ್ಕೊಳ್ಳೋಕೆ ಆಗದೇ ಇರುವಷ್ಟರ ಮಟ್ಟಿಗೆ ಕಷ್ಟ ಬರೋಕೆ ಆತನು ಬಿಡಲ್ಲ. ಕಷ್ಟ ಬಂದಾಗ ಅದನ್ನ ನೀವು ಸಹಿಸ್ಕೊಳ್ಳೋಕೆ ಬೇಕಾದ ಸಹಾಯವನ್ನೂ ಆತನು ಕೊಡ್ತಾನೆ.” (1 ಕೊರಿಂ. 10:13ಬಿ) ಹಾಗಾಗಿ ನಿಮ್ಮಲ್ಲಿರೋ ಕೆಟ್ಟ ಆಸೆ ಎಷ್ಟೇ ಬಲವಾಗಿದ್ರೂ ಯೆಹೋವನಿಗೆ ಇಷ್ಟ ಆಗೋ ತರ ನಡಕೊಳ್ಳೋಕೆ ನಿಮ್ಮಿಂದ ಆಗುತ್ತೆ. ಯಾಕಂದ್ರೆ ಕೆಟ್ಟ ಆಸೆಗಳು ಬಂದ್ರೂ ಸರಿಯಾಗಿ ಇರೋದನ್ನ ಮಾಡೋಕೆ ಯೆಹೋವ ನಿಮಗೆ ಶಕ್ತಿ ಕೊಡ್ತಾನೆ.

17. ನಮಗೆ ಕೆಟ್ಟ ಆಸೆಗಳು ಬಂದ್ರೂ ನಾವೇನು ಮಾಡಕ್ಕಾಗುತ್ತೆ?

17 ನಾವು ಅಪರಿಪೂರ್ಣರು. ಹಾಗಾಗಿ ನಮಗೆ ಕೆಟ್ಟ ಆಸೆಗಳೇ ಬರದೇ ಇರೋ ತರ ತಡಿಯೋಕೆ ನಮ್ಮಿಂದ ಆಗಲ್ಲ. ಆದ್ರೆ ಅಂಥ ಆಸೆಗಳಿಗೆ ಬಲಿಬೀಳದೆ ನಾವು ಹುಷಾರಾಗಿ ಇರಕ್ಕಾಗುತ್ತೆ. ಯೋಸೇಫನಿಗೂ ಪೋಟೀಫರನ ಹೆಂಡತಿ ಒತ್ತಾಯ ಮಾಡಿದಾಗ ಅವನು ಅವಳ ಆಸೆಗೆ ಮಣಿಯಲಿಲ್ಲ, ಅಲ್ಲಿಂದ ಓಡಿಹೋದ. (ಆದಿ. 39:12) ಅವನು ಸರಿಯಾದ ನಿರ್ಧಾರನೇ ಮಾಡಿದ. ನಿಮ್ಮಿಂದನೂ ಅವನ ತರ ಇರಕ್ಕಾಗುತ್ತೆ.

ಛಲ ಬಿಡಬೇಡಿ

18-19. ನಾವು ಯೋಚಿಸೋ ವಿಧಾನವನ್ನ ಬದಲಾಯಿಸಿಕೊಳ್ತಾ ಇದ್ದೀವಾ ಅಂತ ತಿಳುಕೊಳ್ಳೋಕೆ ಯಾವ ಪ್ರಶ್ನೆಗಳನ್ನ ಕೇಳ್ಕೊಬೇಕು?

18 ಯೋಚಿಸೋ ವಿಧಾನವನ್ನ ಬದಲಾಯಿಸಿಕೊಳ್ಳೋಕೆ ನಾವೇನು ಮಾಡಬೇಕು? ಯೆಹೋವ ದೇವರಿಗೆ ಇಷ್ಟ ಆಗೋ ತರ ಯಾವಾಗಲೂ ಯೋಚನೆ ಮಾಡಬೇಕು ಮತ್ತು ಅದೇ ತರ ನಡಕೊಳ್ತಾ ಇರಬೇಕು. ಇದನ್ನ ಮಾಡ್ತಿದ್ದೀವಾ ಇಲ್ವಾ ಅಂತ ತಿಳುಕೊಳ್ಳೋಕೆ ನಾವು ಆಗಾಗ ಈ ಪ್ರಶ್ನೆಗಳನ್ನ ಕೇಳಿಕೊಳ್ಳಬೇಕು: ‘ನಾವು ಕೊನೇ ದಿನಗಳಲ್ಲಿ ಇದ್ದೀವಿ ಅನ್ನೋದು ನನಗೆ ಗೊತ್ತಿದೆ ಅನ್ನೋ ರೀತಿಯಲ್ಲೇ ನಾನು ಜೀವನ ಮಾಡ್ತಿದ್ದೀನಾ? ಹೊಸ ವ್ಯಕ್ತಿತ್ವ ಹಾಕೊಂಡೇ ಇರೋಕೆ ನಾನು ಪ್ರಯತ್ನ ಮಾಡ್ತಾ ಇದ್ದೀನಾ? ದೇಹದ ಆಸೆಗಳಿಗೆ ಬಲಿಬೀಳದೆ ಇರೋಕೆ ಯೆಹೋವ ಕೊಡೋ ಪವಿತ್ರ ಶಕ್ತಿಯ ಸಹಾಯ ಪಡಕೊಳ್ತಿದ್ದೀನಾ?’

19 ಈ ತರ ಪ್ರಶ್ನೆಗಳನ್ನ ಕೇಳಿಕೊಂಡಾಗ ಏನಾದ್ರೂ ಬದಲಾವಣೆಗಳನ್ನ ಮಾಡ್ಕೊಬೇಕು ಅನಿಸಿದ್ರೆ ಬೇಜಾರು ಮಾಡ್ಕೊಬೇಡಿ. ಯಾಕಂದ್ರೆ ನಾವ್ಯಾರೂ ಪರಿಪೂರ್ಣರಲ್ಲ. ಹಾಗಾಗಿ ಫಿಲಿಪ್ಪಿ 3:16ರಲ್ಲಿರೋ ತತ್ವ ಪಾಲಿಸೋಣ. “ನಾವು ಎಷ್ಟರ ಮಟ್ಟಿಗೆ ಪ್ರಗತಿ ಮಾಡ್ತಾ ಬಂದಿದ್ದೀವೋ ಅದೇ ದಾರೀಲಿ ಮುಂದುವರಿಯೋಣ.” ಹೀಗೆ ನಾವು ಯೋಚಿಸೋ ವಿಧಾನವನ್ನ ಬದಲಾಯಿಸಿಕೊಳ್ಳೋಕೆ ಪ್ರಯತ್ನ ಮಾಡ್ತಾ ಇರೋಣ. ಆಗ ಯೆಹೋವನಿಗೆ ತುಂಬ ಖುಷಿಯಾಗುತ್ತೆ, ಆತನು ನಮ್ಮನ್ನ ಆಶೀರ್ವದಿಸ್ತಾನೆ.

ಗೀತೆ 52 ನಿನ್ನ ಹೃದಯವನ್ನು ಕಾಪಾಡಿಕೋ

a ಈ ಲೋಕ ನಿಮ್ಮನ್ನ ರೂಪಿಸೋಕೆ ಬಿಡಬೇಡಿ ಅಂತ ಅಪೊಸ್ತಲ ಪೌಲ ಆಗಿನ ಕ್ರೈಸ್ತರಿಗೆ ಹೇಳಿದ. ಹಾಗಾಗಿ ನಮ್ಮನ್ನೂ ಈ ಲೋಕ ರೂಪಿಸೋಕೆ ನಾವು ಬಿಡಬಾರದು. ಯಾಕಂದ್ರೆ ಕೆಲವೊಮ್ಮೆ ಈ ಲೋಕದ ಜನರ ತರ ನಾವು ತಪ್ಪಾಗಿ ಯೋಚನೆ ಮಾಡಿಬಿಡ್ತೀವಿ. ಒಂದುವೇಳೆ ನಾವು ಯೆಹೋವನಿಗೆ ಇಷ್ಟವಾಗದ ರೀತಿಯಲ್ಲಿ ಯೋಚನೆ ಮಾಡ್ತಿದ್ದೀವಿ ಅಂತ ಗೊತ್ತಾದ್ರೆ ತಕ್ಷಣ ಬದಲಾಯಿಸಿಕೊಳ್ಳಬೇಕು. ಅದನ್ನ ಹೇಗೆ ಮಾಡೋದು ಅಂತ ಈ ಲೇಖನದಲ್ಲಿ ನೋಡೋಣ.

b 2015, ಜುಲೈ 1ರ ಕಾವಲಿನಬುರುಜುವಿನಲ್ಲಿ (ಇಂಗ್ಲಿಷ್‌) “ನನ್ನ ಜೀವನನೇ ಹಾಳುಮಾಡಿಕೊಳ್ತಿದ್ದೆ” ಅನ್ನೋ ಲೇಖನ ನೋಡಿ.

c ಚಿತ್ರ ವಿವರಣೆ: ಪೂರ್ಣ ಸಮಯದ ಸೇವೆ ಮಾಡಬೇಕಾ ಅಥವಾ ಇನ್ನೂ ಜಾಸ್ತಿ ಓದೋಕೆ ಹೋಗಬೇಕಾ ಅಂತ ಒಬ್ಬ ಯುವ ಸಹೋದರ ಯೋಚನೆ ಮಾಡ್ತಾ ಇದ್ದಾನೆ.