ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 3

ಗೀತೆ 63 ಸದಾ ನಿಷ್ಠರು

ಕಷ್ಟದ ಸಮಯದಲ್ಲಿ ಯೆಹೋವ ನಿಮ್ಮ ಕೈ ಹಿಡಿತಾನೆ

ಕಷ್ಟದ ಸಮಯದಲ್ಲಿ ಯೆಹೋವ ನಿಮ್ಮ ಕೈ ಹಿಡಿತಾನೆ

“ಆ ದಿನಗಳಲ್ಲಿ ಸ್ಥಿರತೆಯನ್ನ ಕೊಡುವವನು [ಯೆಹೋವನೇ].”ಯೆಶಾ. 33:6.

ಈ ಲೇಖನದಲ್ಲಿ ಏನಿದೆ?

ಕಷ್ಟದ ಸಮಯದಲ್ಲಿ ಯೆಹೋವ ಕೊಡೋ ಸಹಾಯ ಪಡ್ಕೊಳ್ಳೋಕೆ ನಾವೇನು ಮಾಡಬೇಕು ಅಂತ ನೋಡೋಣ.

1-2. ಯೆಹೋವನ ಸೇವಕರಿಗೆ ಯಾವೆಲ್ಲ ಕಷ್ಟಗಳು ಬರಬಹುದು?

 ಕೆಲವು ಘಟನೆಗಳು ನಮ್ಮ ಜೀವನನ ಅಲ್ಲೋಲ ಕಲ್ಲೋಲ ಮಾಡಿಬಿಡುತ್ತೆ. ಉದಾಹರಣೆಗೆ ಲೂಯಿಸ್‌ a ಅನ್ನೋ ಸಹೋದರನ ಜೀವನದಲ್ಲಿ ಏನಾಯ್ತು ನೋಡಿ. ಅವ್ರಿಗೆ ಕ್ಯಾನ್ಸರ್‌ ಬಂತು. ಆಗ ಡಾಕ್ಟರ್‌ ಅವ್ರ ಹತ್ರ ‘ನೀವಿನ್ನು ಸ್ವಲ್ಪ ತಿಂಗಳಷ್ಟೇ ಬದುಕೋದು’ ಅಂತ ಹೇಳಿದ್ರು. ಮೋನಿಕ ಅನ್ನೋ ಸಹೋದರಿಯ ಗಂಡ ಹಿರಿಯರಾಗಿದ್ರು. ಅವ್ರಿಬ್ರು ಯೆಹೋವನ ಸೇವೆನ ಖುಷಿಖುಷಿಯಾಗಿ ಮಾಡ್ತಿದ್ರು. ಆದ್ರೆ ಅವ್ರ ಗಂಡ ಎಷ್ಟೋ ವರ್ಷಗಳಿಂದ ದೊಡ್ಡ ತಪ್ಪು ಮಾಡ್ತಿದ್ದಾರೆ ಅಂತ ಅವ್ರಿಗೆ ಆಮೇಲೆ ಗೊತ್ತಾಯ್ತು. ಮದುವೆಯಾಗಿಲ್ಲದ ಸಹೋದರಿ ಒಲಿವಿಯಾ ಬಗ್ಗೆ ನೋಡಿ. ಅವ್ರ ಊರಲ್ಲಿ ಚಂಡಮಾರುತ ಬಂದಾಗ ಬೇರೆ ಕಡೆ ಹೋಗಬೇಕಾಯ್ತು. ಆದ್ರೆ ಅವರು ವಾಪಸ್‌ ಅವ್ರ ಊರಿಗೆ ಬಂದಾಗ ಅವ್ರ ಮನೆ ಪೂರ್ತಿ ಕುಸಿದುಹೋಗಿಬಿಟ್ಟಿತ್ತು. ಒಂದೇ ಕ್ಷಣದಲ್ಲಿ ಇವ್ರೆಲ್ರ ಜೀವನ ತಲೆಕೆಳಗಾಗಿಬಿಡ್ತು. ನಿಮ್ಮ ಜೀವನದಲ್ಲೂ ಇದೇ ತರ ಯಾವುದಾದ್ರೂ ಘಟನೆಗಳು ನಡೆದಿದ್ಯಾ?

2 ಇವತ್ತು ನಮಗೂ ಎಲ್ಲಾ ಜನ್ರಿಗೆ ಬರೋ ಕಷ್ಟಗಳು ಬರುತ್ತೆ. ಅಷ್ಟೇ ಅಲ್ಲ, ಯೆಹೋವನ ಸೇವಕರಾಗಿರೋದ್ರಿಂದ ನಮಗೆ ಹಿಂಸೆ ವಿರೋಧಗಳೂ ಬರುತ್ತೆ. ಹಾಗಂತ ಯೆಹೋವ ನಮಗೆ ಬರೋ ಕಷ್ಟಗಳನ್ನ ತಡಿಯಲ್ಲ. ಆದ್ರೆ ಅಂಥ ಸಂದರ್ಭಗಳಲ್ಲಿ ನಾವು ಖುಷಿಯಾಗಿರೋಕೆ, ಸರಿಯಾದ ತೀರ್ಮಾನ ಮಾಡೋಕೆ ಮತ್ತು ಆತನಿಗೆ ನಿಯತ್ತಾಗಿರೋಕೆ ಸಹಾಯ ಮಾಡ್ತೀನಿ ಅಂತ ಮಾತು ಕೊಟ್ಟಿದ್ದಾನೆ. (ಯೆಶಾ. 41:10) ಹಾಗಾಗಿ ಆತನು ಯಾವ 4 ವಿಧಗಳಲ್ಲಿ ಸಹಾಯ ಮಾಡ್ತಾನೆ ಅಂತ ಈ ಲೇಖನದಲ್ಲಿ ನೋಡೋಣ. ಅಷ್ಟೇ ಅಲ್ಲ, ಆತನು ಕೊಡೋ ಸಹಾಯನ ಪಡ್ಕೊಳ್ಳೋಕೆ ನಾವೇನು ಮಾಡಬೇಕು ಅಂತನೂ ನೋಡೋಣ.

ಯೆಹೋವ ನಿಮ್ಮನ್ನ ಕಾಯ್ತಾನೆ

3. ನಮ್ಮ ಜೀವನದಲ್ಲಿ ಕಹಿ ಘಟನೆಗಳಾದಾಗ ನಮ್ಮಿಂದ ಏನು ಮಾಡಕ್ಕಾಗಲ್ಲ?

3 ನಮಗೆ ಹೇಗನಿಸುತ್ತೆ? ನಮ್ಮ ಜೀವನದಲ್ಲಿ ಕಹಿ ಘಟನೆಗಳು ನಡೆದಾಗ ನಮಗೆ ಸರಿಯಾಗಿ ಯೋಚಿಸೋಕೆ ಆಗಲ್ಲ, ಸರಿಯಾದ ತೀರ್ಮಾನ ಮಾಡೋಕೂ ಆಗಲ್ಲ. ಯಾಕೆ? ಯಾಕಂದ್ರೆ ನಾವು ಅಷ್ಟು ನೋವಲ್ಲಿ ಮುಳುಗಿ ಹೋಗಿರ್ತೀವಿ. ಮುಂದೆ ಏನಾಗುತ್ತೋ ಅಂತ ಯೋಚಿಸ್ತಾ ಇರ್ತೀವಿ. ಅಷ್ಟೇ ಅಲ್ಲ, ನಮ್ಮ ಜೀವನಾನೇ ಕತ್ತಲಾಗಿಬಿಟ್ಟಿದೆ, ದಾರಿಗಳೆಲ್ಲ ಮುಚ್ಚಿ ಹೋಗಿಬಿಟ್ಟಿದೆ ಅಂತ ಅನಿಸುತ್ತೆ. ಸಹೋದರಿ ಒಲಿವಿಯಾಗೂ ಹೀಗೇ ಅನಿಸ್ತು. “ಚಂಡಮಾರುತದಿಂದ ನನ್ನ ಮನೆ ಕುಸಿದುಬಿದ್ದಾಗ ನನಗೆ ದಿಕ್ಕೇ ತೋಚದ ಹಾಗಾಯ್ತು. ಎಲ್ಲ ಕಳ್ಕೊಂಡುಬಿಟ್ಟೆ ಅಂತ ಅನಿಸ್ತು” ಅಂತ ಅವರು ಹೇಳ್ತಾರೆ. ಮೋನಿಕ ಅವ್ರ ಗಂಡ ಮೋಸ ಮಾಡಿದಾಗ ಅವಳಿಗೆ ಹೇಗನಿಸ್ತು ಅಂತ ಅವ್ರ ಮಾತಲ್ಲೇ ಕೇಳಿ: “ನನಗೆ ತುಂಬ ಬೇಜಾರಾಯ್ತು. ನನ್ನ ಎದೆನೇ ಒಡೆದುಹೋಯ್ತು. ಎಲ್ಲ ಮುಂಚಿನ ತರ ಮತ್ತೆ ಆಗೋದೇ ಇಲ್ಲ ಅಂತ ಅನಿಸ್ತು. ಈ ತರ ಆಗುತ್ತೆ ಅಂತ ನಾನು ಕನಸು ಮನಸ್ಸಲ್ಲೂ ಅಂದ್ಕೊಂಡಿರಲಿಲ್ಲ” ಅಂತ ಅವಳು ಹೇಳ್ತಾಳೆ. ನಮಗೂ ಈ ತರ ಚಿಂತೆ ಆದಾಗ ಯೆಹೋವ ಏನು ಮಾಡ್ತೀನಿ ಅಂತ ಮಾತುಕೊಟ್ಟಿದ್ದಾನೆ?

4. ಫಿಲಿಪ್ಪಿ 4:6, 7ರಲ್ಲಿ ಯೆಹೋವ ಏನಂತ ಮಾತುಕೊಟ್ಟಿದ್ದಾನೆ?

4 ಯೆಹೋವ ಏನು ಮಾಡ್ತಾನೆ? ನಿಮ್ಮ ಮನಸ್ಸಿಗೆ “ಶಾಂತಿ” ಕೊಡ್ತೀನಿ ಅಂತ ಯೆಹೋವ ಮಾತುಕೊಟ್ಟಿದ್ದಾನೆ. (ಫಿಲಿಪ್ಪಿ 4:6, 7 ಓದಿ.) ನಾವು ಯೆಹೋವನ ಜೊತೆ ಒಳ್ಳೇ ಫ್ರೆಂಡ್‌ಶಿಪ್‌ ಬೆಳೆಸ್ಕೊಂಡಾಗ ನಮಗೆ ಈ ಶಾಂತಿ ಸಿಗುತ್ತೆ ಅಥವಾ ಮನಸ್ಸಿಗೆ ಸಮಾಧಾನ ಆಗುತ್ತೆ. ಈ ಶಾಂತಿ ನಮ್ಮ ‘ತಿಳುವಳಿಕೆಗೂ ಮೀರಿದ್ದು’ ಅಂತ ಬೈಬಲ್‌ ಹೇಳುತ್ತೆ. ಅಂದ್ರೆ ನಾವು ಅಂದ್ಕೊಂಡಿದ್ದಕ್ಕಿಂತ ಜಾಸ್ತಿ ಶಾಂತಿ ಮತ್ತು ಸಮಾಧಾನ ಸಿಗುತ್ತೆ. ನೀವು ಯಾವುದಾದ್ರೂ ಒಂದು ವಿಷ್ಯಕ್ಕೋಸ್ಕರ ಯೆಹೋವನ ಹತ್ರ ತುಂಬ ಪ್ರಾರ್ಥನೆ ಮಾಡಿದ್ದೀರಾ? ಆಗ ನಿಮಗೆ ಹೇಗನಿಸ್ತು? ದೇವರು ನಿಮ್ಮ ಮನಸ್ಸಿಗೆ “ಶಾಂತಿ” ಕೊಟ್ಟನಲ್ವಾ?

5. ಯೆಹೋವ ಹೇಗೆ ನಮ್ಮ ಹೃದಯನ, ಯೋಚ್ನೆನ ಕಾಯ್ತಾನೆ?

5 ಆ ವಚನದಲ್ಲಿ ಯೆಹೋವ ನಮಗೆ ಶಾಂತಿ ಕೊಡ್ತಾನೆ ಅಂತಷ್ಟೇ ಹೇಳ್ತಿಲ್ಲ, ನಮ್ಮ “ಹೃದಯನ, ಯೋಚ್ನೆನ ಕಾಯ್ತಾನೆ” ಅಂತನೂ ಹೇಳುತ್ತೆ. ಹಿಂದಿನ ಕಾಲದಲ್ಲಿ “ಕಾಯೋದು” ಅನ್ನೋ ಪದದ ಮೂಲ ಪದವನ್ನ ಸೈನಿಕರು ಕಾಯೋದನ್ನ ವರ್ಣಿಸೋಕೆ ಬಳಸ್ತಿದ್ರು. ತಮ್ಮ ದೇಶನ ಯಾರೂ ಆಕ್ರಮಣ ಮಾಡಬಾರದು ಅಂತ ಇಡೀ ರಾತ್ರಿ ಈ ಸೈನಿಕರು ಪಟ್ಟಣದ ಬಾಗಿಲ ಹತ್ರ ಕಾಯ್ತಿದ್ರು. ಇದ್ರಿಂದ ಜನ್ರೆಲ್ಲ ಹಾಯಾಗಿ, ನೆಮ್ಮದಿಯಾಗಿ ನಿದ್ರೆ ಮಾಡ್ತಿದ್ರು. ಅದೇ ತರ ಯೆಹೋವ ನಮ್ಮ ಹೃದಯನ, ಯೋಚ್ನೆನ ಕಾಯ್ತಾನೆ. ಆಗ ನಮಗೆ ಆತನು ನಮ್ಮನ್ನ ಕಾಪಾಡ್ತಾನೆ ಅನ್ನೋ ನಂಬಿಕೆನೂ ಬರುತ್ತೆ, ಸಮಾಧಾನನೂ ಆಗುತ್ತೆ. (ಕೀರ್ತ. 4:8) ಆದ್ರೆ ಕೆಲವು ಸಲ ನಾವು ಪ್ರಾರ್ಥನೆ ಮಾಡಿದ ತಕ್ಷಣ ನಮ್ಮ ಸಮಸ್ಯೆಗಳು ಹೋಗದೆ ಇರಬಹುದು. ಹಾಗಿದ್ರೂ ಹನ್ನಗೆ ಮನಶ್ಶಾಂತಿ ಸಿಕ್ಕಿದ ತರ ನಮಗೂ ಮನಶ್ಶಾಂತಿ ಸಿಗುತ್ತೆ. (1 ಸಮು. 1:16-18) ಆಗ ನಮಗೆ ಸರಿಯಾಗಿ ಯೋಚ್ನೆ ಮಾಡೋಕೆ ಮತ್ತು ಸರಿಯಾದ ತೀರ್ಮಾನ ತಗೊಳ್ಳೋಕೆ ಆಗುತ್ತೆ.

ದೇವರು ನಿಮಗೆ “ಶಾಂತಿಯನ್ನ” ಕೊಟ್ಟು ನಿಮ್ಮ ಹೃದಯನ, ಯೋಚ್ನೆನ ಕಾಯೋ ವರೆಗೂ ಪ್ರಾರ್ಥನೆ ಮಾಡ್ತಾ ಇರಿ (ಪ್ಯಾರ 4-6 ನೋಡಿ)


6. ದೇವರು ಕೊಡೋ ಶಾಂತಿ ನಿಮಗೆ ಸಿಗಬೇಕಂದ್ರೆ ಏನು ಮಾಡಬೇಕು? (ಚಿತ್ರನೂ ನೋಡಿ.)

6 ನಾವೇನು ಮಾಡಬೇಕು? ಆಪತ್ತು ಬಂದಾಗ ಜನ್ರು ಸೈನಿಕರನ್ನ ಕರೀತಿದ್ರು. ಅದೇ ತರ ಸಮಸ್ಯೆಗಳಾದಾಗ ನಾವೂ ಯೆಹೋವನನ್ನ ಕರೀಬೇಕು. ಅಂದ್ರೆ ಮನಶ್ಶಾಂತಿ ಸಿಗೋ ವರೆಗೂ ಆತನ ಹತ್ರ ಪ್ರಾರ್ಥನೆ ಮಾಡ್ತಾ ಇರಬೇಕು. (ಲೂಕ 11:9; 1 ಥೆಸ. 5:17) ಲೂಯಿಸ್‌ ಇನ್ನು ಸ್ವಲ್ಪ ತಿಂಗಳಲ್ಲೇ ತೀರಿಹೋಗ್ತಾರೆ ಅಂತ ಅವ್ರಿಗೂ ಅವ್ರ ಹೆಂಡತಿಗೂ ಗೊತ್ತಾದಾಗ ಏನು ಮಾಡಿದ್ರು? “ಆ ಪರಿಸ್ಥಿತಿಲಿ ಚಿಕಿತ್ಸೆ ತಗೊಳ್ಳೋದ್ರ ಬಗ್ಗೆ ಮತ್ತು ಬೇರೆ ವಿಷ್ಯಗಳ ಬಗ್ಗೆ ತೀರ್ಮಾನ ತಗೊಳ್ಳೋಕೆ ತುಂಬನೇ ಕಷ್ಟ ಆಗ್ತಿತ್ತು. ಆದ್ರೆ ನಾವು ಪದೇಪದೇ ಪ್ರಾರ್ಥನೆ ಮಾಡ್ತಾ ಇದ್ದಿದ್ರಿಂದ ನಮಗೆ ಮನಶ್ಶಾಂತಿ ಸಿಕ್ತು” ಅಂತ ಲೂಯಿಸ್‌ ಹೇಳಿದ್ರು. ಅವ್ರಿಬ್ರು ಯೆಹೋವನ ಹತ್ರ “ನಮಗೆ ಮನಶ್ಶಾಂತಿ ಕೊಡು, ಸರಿಯಾದ ತೀರ್ಮಾನ ಮಾಡೋಕೆ ವಿವೇಕ ಕೊಡು” ಅಂತ ಯಾವಾಗ್ಲೂ ಪ್ರಾರ್ಥನೆ ಮಾಡ್ತಿದ್ರು. ಈ ತರ ಮಾಡಿದ್ರಿಂದ ಅವ್ರಿಗೆ ಯೆಹೋವ ಕೊಡೋ ಸಹಾಯ ನೋಡೋಕೆ ಆಯ್ತು. ನಿಮಗೂ ಕಷ್ಟಗಳು ಬಂದಾಗ ಯೆಹೋವ ನಿಮ್ಮ ಹೃದಯನ, ಯೋಚ್ನೆನ ಕಾಯಬೇಕಂದ್ರೆ, ಶಾಂತಿ ಕೊಡಬೇಕಂದ್ರೆ ಯಾವಾಗ್ಲೂ ಪ್ರಾರ್ಥನೆ ಮಾಡ್ತಾ ಇರಿ.—ರೋಮ. 12:12.

ಸ್ಥಿರವಾಗಿ ನಿಲ್ಲೋಕೆ ಯೆಹೋವ ನಿಮಗೆ ಸಹಾಯ ಮಾಡ್ತಾನೆ

7. ನಮಗೆ ಕಷ್ಟಗಳು ಬಂದಾಗ ಹೇಗನಿಸುತ್ತೆ?

7 ನಮಗೆ ಹೇಗನಿಸುತ್ತೆ? ಸಮಸ್ಯೆಗಳು ಬಂದಾಗ ನಮಗೆ ಮುಂಚಿನ ತರ ಇರೋಕೆ ತುಂಬ ಕಷ್ಟ ಆಗಿಬಿಡುತ್ತೆ. ಅಂದ್ರೆ ನಮ್ಮ ಭಾವನೆಗಳು, ಅನಿಸಿಕೆಗಳು, ನಡ್ಕೊಳ್ಳೋ ರೀತಿ ಎಲ್ಲ ಬದಲಾಗಿಬಿಡುತ್ತೆ. ಸಮುದ್ರದಲ್ಲಿ ಬಿರುಗಾಳಿ ಬಂದಾಗ ಒಂದು ಹಡಗು ಆ ಕಡೆ ಈ ಕಡೆ ಹೇಗೆ ತೇಲಾಡುತ್ತೋ ಹಾಗೇ ನಮ್ಮ ಭಾವನೆಗಳೂ ಆಗಿಬಿಡುತ್ತೆ. ಸಹೋದರಿ ಆ್ಯನಾಗೂ ಅವ್ರ ಗಂಡ ತೀರಿಕೊಂಡಾಗ ಇದೇ ತರ ಅನಿಸ್ತು. ಅವರು ಇದ್ರ ಬಗ್ಗೆ ಹೀಗೆ ಹೇಳ್ತಾರೆ: “ಇಲ್ಲಿಗೇ ಎಲ್ಲ ಮುಗಿದುಹೋಯ್ತು ಅಂತ ಅನಿಸ್ತು. ನನ್ನ ಜೀವನನೇ ಖಾಲಿಖಾಲಿ ಆಗೋಯ್ತು. ಒಂದೊಂದು ಸಲ ನನ್ನ ಮೇಲೇ ನನಗೆ ತುಂಬ ಬೇಜಾರಾಗ್ತಿತ್ತು. ಅವರು ನನ್ನನ್ನ ಬಿಟ್ಟುಹೋದ್ರಲ್ಲಾ ಅಂತ ಕೋಪನೂ ಬರ್ತಿತ್ತು” ಅಂತ ಹೇಳ್ತಾರೆ. ಅಷ್ಟೇ ಅಲ್ಲ, ಆ್ಯನಾಗೆ ತಾನು ಒಂಟಿ ಅನಿಸ್ತಿತ್ತು. ಕೆಲವು ತೀರ್ಮಾನಗಳನ್ನ ತಗೊಳ್ಳೋಕೆ ಅವ್ರಿಗೆ ತುಂಬ ಕಷ್ಟ ಆಗ್ತಿತ್ತು. ಯಾಕಂದ್ರೆ ಈ ಮುಂಚೆ ಲೂಯಿಸೇ ಎಲ್ಲನೂ ನೋಡ್ಕೊಳ್ತಿದ್ರು. ಆದ್ರೆ ಈಗ ಆ್ಯನಾನೇ ಪ್ರತಿಯೊಂದನ್ನೂ ನೋಡ್ಕೊಳ್ಳೋ ಪರಿಸ್ಥಿತಿ ಬಂದುಬಿಡ್ತು. ಕೆಲವೊಂದು ಸಲ ಅವ್ರಿಗೆ ಸಮುದ್ರದ ಬಿರುಗಾಳಿಯಲ್ಲಿ ಸಿಕ್ಕಿಹಾಕೊಂಡ ಹಾಗೆ ಅನಿಸ್ತಿತ್ತು. ಇಂಥ ಭಾವನೆಗಳು ನಮ್ಮನ್ನ ಕಿತ್ತು ತಿನ್ನುವಾಗ ಯೆಹೋವ ಹೇಗೆ ಸಹಾಯ ಮಾಡ್ತಾನೆ?

8. ಯೆಶಾಯ 33:6ರಲ್ಲಿ ಯೆಹೋವ ಏನು ಮಾಡ್ತೀನಿ ಅಂತ ಮಾತುಕೊಟ್ಟಿದ್ದಾನೆ?

8 ಯೆಹೋವ ಏನು ಮಾಡ್ತಾನೆ? ಆತನು ಸ್ಥಿರವಾಗಿ ನಿಲ್ಲೋಕೆ ಸಹಾಯ ಮಾಡ್ತೀನಿ ಅಂತ ನಮಗೆ ಮಾತುಕೊಟ್ಟಿದ್ದಾನೆ. (ಯೆಶಾಯ 33:6 ಓದಿ.) ಬಿರುಗಾಳಿ ಬಂದಾಗ ಹಡಗು ಆ ಕಡೆ ಈ ಕಡೆ ತೇಲಾಡ್ತಾ ಇರುತ್ತೆ. ಆದ್ರೆ ಆ ಹಡಗು ಸ್ಥಿರವಾಗಿ ನಿಲ್ಲೋಕೆ ಆ ಹಡಗಿನ ಕೆಳಗಿರೋ ಕೀಲ್‌ಗಳು ಅಥವಾ ಲೋಹದ ರೆಕ್ಕೆಗಳು ಸಹಾಯ ಮಾಡುತ್ತೆ. ಇದ್ರಿಂದ ಆ ಹಡಗಿನಲ್ಲಿರೋ ಪ್ರಯಾಣಿಕರು ಸುರಕ್ಷಿತವಾಗಿರೋಕೆ ಆಗುತ್ತೆ. ಆದ್ರೆ ಆ ಕೀಲ್‌ಗಳು ಸರಿಯಾಗಿ ಕೆಲಸ ಮಾಡಬೇಕಂದ್ರೆ ಹಡಗು ಮುಂದೆ ಹೋಗ್ತಾನೇ ಇರಬೇಕು. ಅದೇ ತರ ನಮಗೆ ಕಷ್ಟಗಳು ಬಂದ್ರೂ ಯೆಹೋವನ ಸೇವೆನ ನಂಬಿಕೆಯಿಂದ ಮಾಡ್ತಾ ಮುಂದೆ ಹೋಗ್ತಿದ್ರೆ ಯೆಹೋವ ನಮ್ಮನ್ನ ಸ್ಥಿರವಾಗಿ ನಿಲ್ಲಿಸ್ತಾನೆ.

ಸ್ಥಿರವಾಗಿ ನಿಲ್ಲೋಕೆ ಸಂಶೋಧನಾ ಸಾಧನಗಳನ್ನ ಬಳಸಿ (ಪ್ಯಾರ 8-9 ನೋಡಿ)


9. ನಮ್ಮ ಭಾವನೆಗಳನ್ನ ಹಿಡಿತದಲ್ಲಿ ಇಟ್ಕೊಳ್ಳೋಕೆ ಯಾವುದು ಸಹಾಯ ಮಾಡುತ್ತೆ? (ಚಿತ್ರನೂ ನೋಡಿ.)

9 ನಾವೇನು ಮಾಡಬೇಕು? ಭಾವನೆಗಳು ನಮ್ಮನ್ನ ಕಿತ್ತು ತಿನ್ನುವಾಗ ನಾವು ಪ್ರಾರ್ಥನೆ ಮಾಡಬೇಕು. ಕೂಟಗಳಿಗೆ ಹೋಗಬೇಕು, ಸಿಹಿಸುದ್ದಿ ಸಾರಬೇಕು. ಇದೆಲ್ಲ ಮುಂಚಿನ ತರ ಮಾಡೋಕೆ ನಮಗೆ ಕಷ್ಟ ಆಗಬಹುದು. ಆದ್ರೆ ಯೆಹೋವ ಯಾವತ್ತೂ ನಮ್ಮ ಕೈಯಿಂದ ಆಗದೆ ಇರೋದನ್ನ ಕೇಳಲ್ಲ ಅನ್ನೋದನ್ನ ನೆನಪಿಡಿ. (ಲೂಕ 21:1-4 ಹೋಲಿಸಿ.) ನಮ್ಮ ಭಾವನೆಗಳನ್ನ ಹಿಡಿತದಲ್ಲಿ ಇಟ್ಕೊಳ್ಳೋಕೆ ಯೆಹೋವ ನಮಗೆ ಸಹಾಯ ಮಾಡ್ತಾನೆ. ಅದಕ್ಕೇ ತನ್ನ ವಾಕ್ಯನ, ಪ್ರಕಾಶನಗಳನ್ನ, ವಿಡಿಯೋಗಳನ್ನ ನಮಗೆ ಕೊಟ್ಟಿದ್ದಾನೆ. ನಮಗೆ ಬೇಕಾದ ವಿಷ್ಯಗಳನ್ನ ಹುಡುಕೋಕೆ JW ಲೈಬ್ರರಿ ಆ್ಯಪ್‌ ಮತ್ತು ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಸಹಾಯ ಮಾಡುತ್ತೆ. ಮೋನಿಕ ಅವ್ರ ಭಾವನೆಗಳು ಅವ್ರನ್ನ ಕಿತ್ತು ತಿನ್ನೋಕೆ ಶುರು ಮಾಡಿದಾಗ ಇದೇ ಸಾಧನಗಳನ್ನ ಅವರು ಬಳಸ್ಕೊಂಡ್ರು. ಅದ್ರಲ್ಲಿ ಸಿಕ್ಕ ಸಲಹೆಗಳಿಂದ ಅವ್ರಿಗೆ ತುಂಬ ಪ್ರಯೋಜನ ಆಯ್ತು. ಉದಾಹರಣೆಗೆ ಅವರು “ಕೋಪ,” “ಮೋಸ,” “ನಿಯತ್ತು” ಅನ್ನೋ ವಿಷ್ಯಗಳ ಬಗ್ಗೆ ಹುಡುಕ್ತಿದ್ರು. ಅವ್ರಿಗೆ ಸಮಾಧಾನ ಆಗೋ ವರೆಗೂ ಆ ವಿಷ್ಯಗಳ ಬಗ್ಗೆ ಓದ್ತಿದ್ರು. “ಮೊದಮೊದ್ಲು ನಾನು ಈ ವಿಷ್ಯಗಳ ಬಗ್ಗೆ ಓದಿದಾಗ ನನಗೆ ಅಷ್ಟೇನೂ ಸಮಾಧಾನ ಆಗ್ಲಿಲ್ಲ. ಆದ್ರೆ ನಾನು ಓದೋದನ್ನ ಮುಂದುವರೆಸ್ತಾ ಹೋದ ಹಾಗೆ ಯೆಹೋವ ನನ್ನನ್ನ ಅಪ್ಕೊಂಡ ಹಾಗೆ ಅನಿಸ್ತು. ನನ್ನ ಭಾವನೆಗಳನ್ನ ಅರ್ಥ ಮಾಡ್ಕೊಳ್ತಾನೆ, ನನಗೆ ಸಹಾಯ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾನೆ ಅಂತ ಅರ್ಥ ಆಯ್ತು” ಅಂತ ಮೋನಿಕ ಹೇಳ್ತಾರೆ. ಮೋನಿಕಾಗೆ ಸಹಾಯ ಮಾಡಿದ ತರ ಯೆಹೋವ ನಿಮಗೂ ಭಾವನೆಗಳನ್ನ ಹಿಡಿತದಲ್ಲಿ ಇಟ್ಕೊಳ್ಳೋಕೆ ಸಹಾಯ ಮಾಡ್ತಾನೆ. ಅಷ್ಟೇ ಅಲ್ಲ, ಸಮಾಧಾನ ಆಗೋ ವರೆಗೂ ನಿಮ್ಮ ಕೈಬಿಡಲ್ಲ.—ಕೀರ್ತ. 119:143, 144.

ಯೆಹೋವ ನಿಮಗೆ ಆಸರೆ ಆಗಿರ್ತಾನೆ

10. ನಮ್ಮ ಜೀವನದಲ್ಲಿ ನೆನಸದೇ ಇರೋ ಘಟನೆಗಳು ನಡೆದಾಗ ನಮಗೆ ಹೇಗನಿಸಬಹುದು?

10 ನಮಗೆ ಹೇಗನಿಸುತ್ತೆ? ಕನಸು ಮನಸ್ಸಲ್ಲೂ ನೆನಸದೇ ಇರೋ ಘಟನೆಗಳು ನಮ್ಮ ಜೀವನದಲ್ಲಿ ನಡೆದಾಗ ನಾವು ತುಂಬ ಕುಗ್ಗಿಹೋಗ್ತೀವಿ. ನಮಗೆ ಏನು ಮಾಡೋಕೂ ಮನಸ್ಸಾಗಲ್ಲ. ಒಬ್ಬ ಓಟಗಾರ ಚೆನ್ನಾಗಿ ಓಡ್ತಾ ಇರ್ತಾನೆ. ಆದ್ರೆ ಬಿದ್ದಾಗ ಅವನಿಗೆ ನಡಿಯೋಕೂ ಕಷ್ಟ ಆಗುತ್ತೆ. ಅದೇ ತರ ನಮಗೆ ಕಷ್ಟಗಳು ಬಂದಾಗ ಈ ಮುಂಚೆ ನಾವು ಖುಷಿಖುಷಿಯಾಗಿ ಮಾಡ್ತಿದ್ದ ಕೆಲಸನ ಈಗ ಮಾಡೋಕೇ ಆಗ್ತಿಲ್ಲ ಅಂತ ಅನಿಸಬಹುದು. ಎಲೀಯನ ತರ ನಮಗೆ ಎದ್ದೇಳೋಕೇ ಆಗಲ್ಲ, ಮಲಗಬೇಕು ಅಂತ ಅನಿಸಬಹುದು. (1 ಅರ. 19:5-7) ಅಂಥ ಸಮಯದಲ್ಲಿ ಯೆಹೋವ ಹೇಗೆ ಸಹಾಯ ಮಾಡ್ತಾನೆ?

11. ಯೆಹೋವ ನಮಗೆ ಸಹಾಯ ಮಾಡೋ ಇನ್ನೊಂದು ವಿಧ ಯಾವುದು? (ಕೀರ್ತನೆ 94:18)

11 ಯೆಹೋವ ಏನು ಮಾಡ್ತಾನೆ? ಆತನು ನಮಗೆ ಆಸರೆಯಾಗಿ ಇರ್ತೀನಿ ಅಂತ ಮಾತು ಕೊಟ್ಟಿದ್ದಾನೆ. (ಕೀರ್ತನೆ 94:18 ಓದಿ.) ಓಟಗಾರನಿಗೆ ಏಟಾದಾಗ ಹೇಗೆ ಅವನಿಗೆ ಇನ್ನೊಬ್ರ ಸಹಾಯ ಬೇಕೋ ಹಾಗೆ ನಮಗೂ ಯೆಹೋವನ ಸೇವೆ ಮಾಡ್ತಾ ಇರೋಕೆ ಆತನ ಸಹಾಯ ಬೇಕು. ಅದಕ್ಕೇ ಆತನು ನಮಗೆ “ನಾನು, ನಿನ್ನ ದೇವರಾದ ಯೆಹೋವ, ನಿನ್ನ ಬಲಗೈಯನ್ನ ಹಿಡ್ಕೊಂಡಿದ್ದೀನಿ, ‘ಹೆದರಬೇಡ, ನಾನು ನಿನಗೆ ಸಹಾಯ ಮಾಡ್ತೀನಿ’ ಅಂತ ನಾನೇ ನಿನಗೆ ಹೇಳ್ತಿದ್ದೀನಿ” ಅಂತ ಮಾತು ಕೊಟ್ಟಿದ್ದಾನೆ. (ಯೆಶಾ. 41:13) ದಾವೀದನಿಗೂ ಕಷ್ಟ ಬಂದಾಗ ಯೆಹೋವ ಸಹಾಯ ಮಾಡಿದನು. ಅದಕ್ಕೇ ಅವನು “ನಿನ್ನ ಬಲಗೈ ನನಗೆ ಆಸರೆಯಾಗಿದೆ” ಅಂತ ಹೇಳಿದ. (ಕೀರ್ತ. 18:35) ಆದ್ರೆ ಯೆಹೋವ ನಮಗೆ ಹೇಗೆ ಆಸರೆಯಾಗಿ ಇರ್ತಾನೆ?

ನಿಮ್ಮ ಕುಟುಂಬದವರು, ಸ್ನೇಹಿತರು ಮತ್ತು ಹಿರಿಯರು ಕೊಡೋ ಸಹಾಯ ಪಡ್ಕೊಳ್ಳಿ (ಪ್ಯಾರ 11-13 ನೋಡಿ)


12. ನಾವು ಕುಗ್ಗಿಹೋದಾಗ ಯಾರಿಂದ ಯೆಹೋವ ನಮಗೆ ಸಹಾಯ ಮಾಡ್ತಾನೆ?

12 ಯೆಹೋವ ನಮಗೆ ಬೇರೆಯವ್ರಿಂದನೂ ಸಹಾಯ ಮಾಡ್ತಾನೆ. ಉದಾಹರಣೆಗೆ, ದಾವೀದ ಕುಗ್ಗಿಹೋದಾಗ ಯೋನಾತಾನ ಸಾಂತ್ವನದ ಮಾತುಗಳನ್ನ ಹೇಳಿ ಅವನಿಗೆ ಪ್ರೋತ್ಸಾಹ ಕೊಡೋ ತರ ಯೆಹೋವ ಮಾಡಿದನು. (1 ಸಮು. 23:16, 17) ಅಷ್ಟೇ ಅಲ್ಲ, ಎಲೀಯನಿಗೆ ಸಹಾಯ ಮಾಡೋಕೆ ಯೆಹೋವ ಎಲೀಷನನ್ನ ನೇಮಿಸಿದನು. (1 ಅರ. 19:16, 21; 2 ಅರ. 2:2) ಅದೇ ತರ ಇವತ್ತು ನಮಗೂ ಯೆಹೋವ ಸಹಾಯ ಮಾಡ್ತಾನೆ. ಆತನು ನಮ್ಮ ಕುಟುಂಬದವ್ರಿಗೆ, ಸ್ನೇಹಿತರಿಗೆ ಮತ್ತು ಹಿರಿಯರಿಗೆ ಸಹಾಯ ಮಾಡೋ ಮನಸ್ಸು ಕೊಡ್ತಾನೆ. ಆದ್ರೆ ನಾವು ತುಂಬ ಕುಗ್ಗಿಹೋದಾಗ ಒಂಟಿಯಾಗಿ ಇರಬೇಕು, ಯಾರ ಸಹಾಯನೂ ಬೇಡ ಅಂತ ಅನಿಸೋದು ಸಹಜ. ಹಾಗಿದ್ರೂ ನಮಗೆ ಯೆಹೋವನ ಸಹಾಯ ಸಿಗಬೇಕಂದ್ರೆ ಏನು ಮಾಡಬೇಕು?

13. ಯೆಹೋವ ಕೊಡೋ ಸಹಾಯ ಪಡ್ಕೊಳ್ಳೋಕೆ ನಾವೇನು ಮಾಡಬೇಕು? (ಚಿತ್ರನೂ ನೋಡಿ.)

13 ನಾವೇನು ಮಾಡಬೇಕು? ಒಬ್ರೇ ಇರಬೇಡಿ. ನಾವು ಒಬ್ರೇ ಇದ್ದಷ್ಟು ನಮ್ಮ ಬಗ್ಗೆ ಮತ್ತು ನಮ್ಮ ಕಷ್ಟಗಳ ಬಗ್ಗೆನೇ ಯೋಚಿಸ್ತಾ ಇರ್ತೀವಿ. ಆ ತರ ನಾವು ಮಾಡಿದ್ರೆ ಸರಿಯಾದ ತೀರ್ಮಾನಗಳನ್ನ ತಗೊಳ್ಳೋಕೆ ಆಗಲ್ಲ. (ಜ್ಞಾನೋ. 18:1) ಒಂದೊಂದು ಸಲ ನಮಗೆ ಒಂಟಿಯಾಗಿ ಇರ್ಬೇಕು ಅಂತ ಅನಿಸುತ್ತೆ ನಿಜ. ಆದ್ರೆ ತುಂಬ ಸಮಯದ ವರೆಗೂ ಒಂಟಿಯಾಗಿರೋದು ಒಳ್ಳೇದಲ್ಲ. ನಾವು ಹಾಗೆ ಮಾಡಿದ್ರೆ ಯೆಹೋವ ಕೊಡೋ ಸಹಾಯ ನಮಗೆ ಬೇಡ ಅಂತ ಹೇಳಿದ ಹಾಗಿರುತ್ತೆ. ಹಾಗಾಗಿ ಸಮಸ್ಯೆಯಿಂದ ಹೊರಗೆ ಬರೋಕೆ ಯೆಹೋವ ನಿಮ್ಮ ಕುಟುಂಬದವ್ರಿಂದ, ಸ್ನೇಹಿತರಿಂದ, ಹಿರಿಯರಿಂದ ಸಹಾಯ ಮಾಡ್ತಾನೆ. ಹಾಗಾಗಿ ಅವ್ರ ಜೊತೆ ಮಾತಾಡಿ, ಯೆಹೋವ ನಿಮಗೆ ಸಹಾಯ ಮಾಡೋಕೆ ಬಿಟ್ಕೊಡಿ.—ಜ್ಞಾನೋ. 17:17; ಯೆಶಾ. 32:1, 2.

ಯೆಹೋವ ನಮಗೆ ಸಾಂತ್ವನ ಕೊಡ್ತಾನೆ

14. ಯಾವೆಲ್ಲ ಕಾರಣಗಳಿಂದ ನಮಗೆ ಭಯ ಆಗುತ್ತೆ?

14 ನಮಗೆ ಹೇಗನಿಸುತ್ತೆ? ಕೆಲವೊಮ್ಮೆ ನಮ್ಮ ಜೀವನದಲ್ಲಿ ತುಂಬ ಭಯಪಡೋ ಸನ್ನಿವೇಶಗಳು ಬಂದುಬಿಡಬಹುದು. ಹಿಂದಿನ ಕಾಲದಲ್ಲಿ ಯೆಹೋವನಿಗೆ ನಿಯತ್ತಾಗಿ ಸೇವೆ ಮಾಡ್ತಿದ್ದವ್ರಿಗೂ ನಮ್ಮ ತರಾನೇ ಕಷ್ಟಗಳು ಬಂತು. ಶತ್ರುಗಳು ಅವ್ರನ್ನ ಆಕ್ರಮಣ ಮಾಡ್ತಿದ್ರು, ಇನ್ನೂ ಬೇರೆಬೇರೆ ಕಾರಣಗಳಿಂದ ಅವ್ರಿಗೆ ಭಯ, ಕಳವಳ ಆಗಿತ್ತು. (ಕೀರ್ತ. 18:4; 55:1, 5) ಇವತ್ತು ನಾವೂ ಶಾಲೆಯಲ್ಲಿ, ಕೆಲಸದ ಜಾಗದಲ್ಲಿ ವಿರೋಧ, ಹಿಂಸೆ ಎದುರಿಸ್ತೀವಿ. ಅಷ್ಟೇ ಅಲ್ಲ ಕುಟುಂಬದವ್ರಿಂದ ಮತ್ತು ಸರ್ಕಾರದಿಂದನೂ ನಮಗೆ ತೊಂದ್ರೆಗಳಾಗುತ್ತೆ. ಯಾವುದಾದ್ರೂ ದೊಡ್ಡ ಕಾಯಿಲೆಯಿಂದ ನಾವು ಇನ್ನೇನು ಸತ್ತು ಹೋಗ್ತೀವಿ ಅಂತ ಗೊತ್ತಾದಾಗಂತೂ ತುಂಬ ಭಯ ಆಗಬಹುದು. ಈ ತರ ಆದಾಗ ದಿಕ್ಕೇ ತೋಚದಿರೋ ಪುಟ್ಟ ಮಗು ತರ ಆಗಿಬಿಡ್ತೀವಿ. ಇಂಥ ಪರಿಸ್ಥಿತಿಯಲ್ಲಿ ಯೆಹೋವ ನಮಗೆ ಹೇಗೆ ಸಹಾಯ ಮಾಡ್ತಾನೆ?

15. ನಮಗೆ ಭಯ ಆದಾಗ ಕೀರ್ತನೆ 94:19ರಲ್ಲಿ ಹೇಳೋ ತರ ಯೆಹೋವ ಏನು ಮಾಡ್ತಾನೆ?

15 ಯೆಹೋವ ಏನು ಮಾಡ್ತಾನೆ? ಆತನು ನಮಗೆ ಸಾಂತ್ವನ, ಸಮಾಧಾನ ಕೊಡ್ತಾನೆ. (ಕೀರ್ತನೆ 94:19 ಓದಿ.) ಕೀರ್ತನೆಗಾರ ಹೇಳಿದ ಮಾತನ್ನ ಅರ್ಥ ಮಾಡ್ಕೊಳ್ಳೋಕೆ ಈ ಉದಾಹರಣೆ ನೋಡಿ. ಒಬ್ಬ ಚಿಕ್ಕ ಹುಡುಗಿಗೆ ಗುಡುಗಿನ ಶಬ್ಧ ಕೇಳಿ ನಿದ್ದೆನೇ ಬರ್ತಿಲ್ಲ, ತುಂಬ ಹೆದರಿಬಿಟ್ಟಿದ್ದಾಳೆ ಅಂದ್ಕೊಳ್ಳಿ. ಆಗ ಅವಳ ಅಪ್ಪ ಅವಳನ್ನ ಅಪ್ಕೊಂಡು ಅವಳು ಮಲಗೋ ವರೆಗೂ ತೋಳಲ್ಲೇ ಎತ್ಕೊಂಡಿರ್ತಾನೆ. ಗುಡುಗಿನ ಶಬ್ಧ ಕೇಳಿಸ್ತಿದ್ರೂ ಅಪ್ಪ ತನ್ನ ಹತ್ರ ಇದ್ದಾರೆ ಅಂತ ಗೊತ್ತಾಗೋದ್ರಿಂದ ಅವಳು ನೆಮ್ಮದಿಯಾಗಿ ನಿದ್ದೆ ಮಾಡ್ತಾಳೆ. ತಾನು ಸುರಕ್ಷಿತವಾಗಿದ್ದೀನಿ ಅಂತ ಆ ಮಗುಗೆ ಅನಿಸುತ್ತೆ. ಅದೇ ತರ ನಮಗೂ ಭಯಪಡಿಸೋ ಸನ್ನಿವೇಶಗಳು ನಮ್ಮ ಜೀವನದಲ್ಲಿ ಬಂದ್ರೆ ಯೆಹೋವ ಅಪ್ಪನನ್ನ ನಾವು ತಬ್ಕೊಬೇಕು. ನಮಗೆ ಸಾಂತ್ವನ, ಸಮಾಧಾನ ಆಗೋ ವರೆಗೂ ಯೆಹೋವ ನಮ್ಮನ್ನ ತನ್ನ ತೋಳಲ್ಲಿ ಎತ್ಕೊಳ್ತಾನೆ. ಹಾಗಿದ್ರೆ ಯೆಹೋವ ಕೊಡೋ ಸಾಂತ್ವನ ಪಡ್ಕೊಳ್ಳೋಕೆ ನಾವೇನು ಮಾಡಬೇಕು?

ಯೆಹೋವ ತನ್ನ ವಾಕ್ಯದಿಂದ ನಿಮಗೆ ಕೊಡೋ ಸಹಾಯ ಪಡ್ಕೊಳ್ಳಿ (ಪ್ಯಾರ 15-16 ನೋಡಿ)


16. ಯೆಹೋವ ಕೊಡೋ ಸಾಂತ್ವನ ಪಡ್ಕೊಳ್ಳೋಕೆ ನಾವೇನು ಮಾಡಬೇಕು? (ಚಿತ್ರನೂ ನೋಡಿ.)

16 ನಾವೇನು ಮಾಡಬೇಕು? ಯಾವಾಗ್ಲೂ ಯೆಹೋವನಿಗೆ ಪ್ರಾರ್ಥನೆ ಮಾಡಬೇಕು. ಆತನ ವಾಕ್ಯವಾದ ಬೈಬಲನ್ನ ಓದಬೇಕು. (ಕೀರ್ತ. 77:1, 12-14) ಈ ರೂಢಿ ಇದ್ರೆ ಭಯ, ಆತಂಕ ಅಥವಾ ಚಿಂತೆ ಆದಾಗ ತಕ್ಷಣ ನೀವು ಯೆಹೋವನ ಸಹಾಯ ಕೇಳ್ತೀರ. ಆತನ ಹತ್ರ ನಿಮ್ಮ ಭಾವನೆಗಳನ್ನ ಹೇಳ್ಕೊಳ್ತೀರ. ನಿಮಗ್ಯಾಕೆ ಭಯ ಆಗ್ತಿದೆ ಅಂತ ಮನಸ್ಸುಬಿಚ್ಚಿ ಮಾತಾಡ್ತೀರ. ಅಷ್ಟೇ ಅಲ್ಲ, ಯೆಹೋವ ನಿಮ್ಮ ಹತ್ರ ಮಾತಾಡೋಕೆ ಬಿಟ್ಕೊಡ್ತೀರ, ಅಂದ್ರೆ ತನ್ನ ವಾಕ್ಯದಿಂದ ಕೊಡೋ ಸಾಂತ್ವನ ಪಡ್ಕೊಳ್ತೀರ. (ಕೀರ್ತ. 119:28) ಕೆಲವೊಮ್ಮೆ ನಿಮಗೆ ಭಯ ಆದಾಗ ಸಾಂತ್ವನ ಕೊಡೋ ಸರಿಯಾದ ವಚನಗಳು ಬೈಬಲಿಂದ ಸಿಗುತ್ತೆ. ಆಗ ನಿಮಗೆ ಸಮಾಧಾನ ಆಗುತ್ತೆ. ಉದಾಹರಣೆಗೆ ಯೋಬ, ಕೀರ್ತನೆ ಮತ್ತು ಜ್ಞಾನೋಕ್ತಿ ಪುಸ್ತಕದಲ್ಲಿ ನಿಮಗೆ ಪ್ರೋತ್ಸಾಹ ಸಿಗೋ ವಚನಗಳು ಅಥವಾ ಮಾತುಗಳು ಇವೆ. ಅದನ್ನ ನೀವು ಓದಬಹುದು. ಅಷ್ಟೇ ಅಲ್ಲ, ಮತ್ತಾಯ 6ನೇ ಅಧ್ಯಾಯದಲ್ಲಿ ಯೇಸು ಹೇಳಿದ ಮಾತುಗಳಿಂದನೂ ನಿಮಗೆ ಸಾಂತ್ವನ ಸಿಗುತ್ತೆ. ಹಾಗಾಗಿ ನೀವು ಬೈಬಲ್‌ ಓದಿ, ಯೆಹೋವನಿಗೆ ಪ್ರಾರ್ಥಿಸಿ. ಆಗ ಆತನು ಕೊಡೋ ಸಾಂತ್ವನವನ್ನ ನಿಮಗೆ ಪಡ್ಕೊಳ್ಳೋಕೆ ಆಗುತ್ತೆ.

17. ನಮಗೆ ಯಾವ ನಂಬಿಕೆ ಇರಬೇಕು?

17 ನಮ್ಮ ಜೀವನನೇ ತಲೆಕೆಳಗಾಗೋ ಪರಿಸ್ಥಿತಿ ಬಂದ್ರೂ ನಾವು ಒಂಟಿಯಲ್ಲ, ಯೆಹೋವ ನಮ್ಮ ಜೊತೆ ಇರ್ತಾನೆ. (ಕೀರ್ತ. 23:4; 94:14) ಅಷ್ಟೇ ಅಲ್ಲ, ‘ನಾನು ನಿಮ್ಮನ್ನ ಕಾಯ್ತೀನಿ, ನೀವು ಸ್ಥಿರವಾಗಿ ನಿಲ್ಲೋಕೆ ಸಹಾಯ ಮಾಡ್ತೀನಿ, ನಿಮಗೆ ಆಸರೆಯಾಗಿ ಇರ್ತೀನಿ, ನಿಮಗೆ ಸಾಂತ್ವನ ಕೊಡ್ತೀನಿ’ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. ಅದಕ್ಕೇ ಯೆಹೋವನ ಬಗ್ಗೆ ಯೆಶಾಯ 26:3ರಲ್ಲಿ “ನಿನ್ನ ಮೇಲೆ ಸಂಪೂರ್ಣವಾಗಿ ಆತುಕೊಳ್ಳುವವರನ್ನ ನೀನು ಸಂರಕ್ಷಿಸ್ತೀಯ. ನೀನು ಅವ್ರಿಗೆ ಕೊನೆ ಆಗದ ಶಾಂತಿ ಕೊಡ್ತೀಯ, ಯಾಕಂದ್ರೆ ಅವರು ನಿನ್ನ ಮೇಲೆ ಭರವಸೆ ಇಟ್ಟಿದ್ದಾರೆ” ಅಂತ ಹೇಳುತ್ತೆ. ಹಾಗಾಗಿ ಯೆಹೋವನನ್ನ ಪೂರ್ತಿಯಾಗಿ ನಂಬಿ, ಆತನು ಕೊಡೋ ಸಹಾಯ ಪಡ್ಕೊಳ್ಳಿ. ಹೀಗೆ ಮಾಡಿದ್ರೆ ಕಷ್ಟದ ಕಾರ್ಮೋಡಗಳೇ ನಮ್ಮ ಜೀವನದಲ್ಲಿ ಬಂದ್ರೂ ಯೆಹೋವನಿಂದ ಬಲ ಪಡ್ಕೊಳ್ತೀವಿ.

ನೀವೇನು ಹೇಳ್ತೀರಾ?

  • ನಮಗೆ ಯಾವಾಗ ಯೆಹೋವನ ಸಹಾಯ ಬೇಕೇಬೇಕು?

  • ಕಷ್ಟದ ಸಮಯದಲ್ಲಿ ಯೆಹೋವ ಯಾವ 4 ವಿಧಗಳಲ್ಲಿ ನಮಗೆ ಸಹಾಯ ಮಾಡ್ತಾನೆ?

  • ಯೆಹೋವನ ಸಹಾಯ ಪಡ್ಕೊಬೇಕಂದ್ರೆ ನಾವೇನು ಮಾಡಬೇಕು?

ಗೀತೆ 112 ಮಹಾ ದೇವರಾದ ಯೆಹೋವನು

a ಕೆಲವ್ರ ಹೆಸ್ರು ಬದಲಾಗಿದೆ.