ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 2

ಗೀತೆ 132 ನನ್ನ ಸಂಗಾತಿ

ಗಂಡಂದಿರೇ, ನಿಮ್ಮ ಹೆಂಡತಿಯನ್ನ ಪ್ರೀತಿಸಿ ಗೌರವಿಸಿ

ಗಂಡಂದಿರೇ, ನಿಮ್ಮ ಹೆಂಡತಿಯನ್ನ ಪ್ರೀತಿಸಿ ಗೌರವಿಸಿ

“ಗಂಡಂದಿರೇ, . . . ಅವ್ರಿಗೆ ಗೌರವ ಕೊಡಿ.”1 ಪೇತ್ರ 3:7.

ಈ ಲೇಖನದಲ್ಲಿ ಏನಿದೆ?

ಗಂಡಂದಿರು ತಮ್ಮ ಹೆಂಡತಿ ಮೇಲೆ ಪ್ರೀತಿ ಇದೆ, ಗೌರವ ಇದೆ ಅಂತ ತೋರಿಸೋಕೆ ಹೇಗೆ ಮಾತಾಡಬೇಕು, ಹೇಗೆ ನಡ್ಕೊಬೇಕು?

1. ಯೆಹೋವ ಮದುವೆ ಏರ್ಪಾಡನ್ನ ಯಾಕೆ ಮಾಡಿದ್ದಾನೆ?

 ‘ಯೆಹೋವ ಖುಷಿಯಾಗಿರೋ ದೇವರು.’ ನಾವೆಲ್ರೂ ಕೂಡ ಖುಷಿಯಾಗಿರಬೇಕು ಅಂತ ಆತನು ಆಸೆಪಡ್ತಾನೆ. (1 ತಿಮೊ. 1:11) ಜೀವನದಲ್ಲಿ ನಾವು ಖುಷಿಯಾಗಿ ಇರೋಕೆ ಆತನು ನಮಗೆ ಎಷ್ಟೋ ವರಗಳನ್ನ ಕೊಟ್ಟಿದ್ದಾನೆ. (ಯಾಕೋ. 1:17) ಅದ್ರಲ್ಲೊಂದು ಮದುವೆ. ಒಂದು ಗಂಡು-ಹೆಣ್ಣು ಮದುವೆ ಆದಾಗ ‘ಒಬ್ರಿಗೊಬ್ರು ಗೌರವ ಕೊಡ್ತೀವಿ, ಪ್ರೀತಿಸ್ತೀವಿ, ಒಬ್ರನ್ನೊಬ್ರು ಚೆನ್ನಾಗಿ ನೋಡ್ಕೊಳ್ತೀವಿ’ ಅಂತ ಮಾತು ಕೊಡ್ತಾರೆ. ಮಾತು ಕೊಟ್ಟ ತರಾನೇ ನಡ್ಕೊಂಡಾಗ ಅವರು ನಿಜವಾಗ್ಲೂ ಖುಷಿಯಾಗಿ ಇರ್ತಾರೆ.—ಜ್ಞಾನೋ. 5:18.

2. ಇವತ್ತು ಜನ್ರ ಮದುವೆ ಜೀವನ ಹೇಗಾಗಿಬಿಟ್ಟಿದೆ?

2 ಇವತ್ತಿನ ಲೋಕದಲ್ಲಿ ಜನ ಮದುವೆ ದಿನ ಕೊಟ್ಟ ಮಾತನ್ನ ಮರೆತುಹೋಗಿ ನಡ್ಕೊಳ್ತಿದ್ದಾರೆ. ಅದಕ್ಕೆ ಅವ್ರ ಕುಟುಂಬಗಳಲ್ಲಿ ಸಂತೋಷನೇ ಇಲ್ಲ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟ ಒಂದು ವರದಿಯಲ್ಲಿ, ‘ತುಂಬ ಜನ ಗಂಡಂದಿರು ಅವ್ರವ್ರ ಹೆಂಡ್ತಿನ ಹೊಡಿತಾರೆ-ಬಡಿತಾರೆ, ಕೆಟ್ಟಕೆಟ್ಟದಾಗಿ ಬೈತಾರೆ, ಮನಸ್ಸಿಗೆ ನೋವಾಗೋ ತರ ನಡ್ಕೊಳ್ತಾರೆ’ ಅಂತ ಹೇಳುತ್ತೆ. ಕೆಲವು ಗಂಡಂದಿರು ಜನ್ರ ಮುಂದೆ ಹೆಂಡ್ತಿ ಹತ್ರ ಗೌರವದಿಂದ ಮಾತಾಡ್ತಾರೆ. ಆದ್ರೆ ಮನೇಲಿ ಮೂರು ಕಾಸಿನ ಬೆಲೆ ಕೊಡಲ್ಲ. ಅದ್ರಲ್ಲೂ ಗಂಡ ಅಶ್ಲೀಲ ವಿಷ್ಯಗಳನ್ನ ನೋಡುವಾಗ ಹೆಂಡ್ತಿಗೆ ‘ನನ್ನ ಗಂಡನಿಗೆ ನಿಜವಾಗ್ಲೂ ನನ್ನ ಮೇಲೆ ಪ್ರೀತಿ ಇದ್ಯಾ’ ಅನ್ನೋ ಸಂಶಯ ಬಂದು ಅವ್ರ ಸಂಸಾರದಲ್ಲಿ ಖುಷಿ ಕಣ್ಮರೆ ಆಗ್ತಿದೆ.

3. ಕೆಲವು ಗಂಡಂದಿರು ಹೆಂಡ್ತಿ ಹತ್ರ ತಪ್ಪಾಗಿ ನಡ್ಕೊಳ್ಳೋಕೆ ಕಾರಣ ಏನು?

3 ಗಂಡಂದಿರು ಯಾಕೆ ಈ ತರ ತಪ್ಪಾಗಿ ನಡ್ಕೊಳ್ತಾರೆ? ಇದಕ್ಕೆ ತುಂಬ ಕಾರಣ ಇದೆ. ಒಂದು, ಅವ್ರನ್ನ ಬೆಳೆಸಿರೋ ತಂದೆ ಕೂಡ ಇದೇ ತರ ನಡ್ಕೊಂಡಿರೋದನ್ನ ಅವರು ನೋಡಿರಬಹುದು. ಅದಕ್ಕೆ ಈ ತರ ನಡ್ಕೊಳ್ಳೋದು ಮಾಮೂಲಿ ಅಂತ ಅಂದ್ಕೊಂಡಿರಬಹುದು. ಇನ್ನೊಂದು, ಅವ್ರ ಸುತ್ತಮುತ್ತ ಇರೋ ಜನ್ರು ಕೂಡ ಆ ತರ ನಡ್ಕೊಳ್ಳೋದನ್ನ ಅವರು ನೋಡಿರ್ತಾರೆ. ‘ನಾನು ಗಂಡಸು, ನಾನೇ ಈ ಮನೆಗೆ ಬಾಸು’ ಅಂತ ಹೆಂಡ್ತಿಗೆ ತೋರಿಸ್ಕೊಳ್ಳೋಕೆ ಅವಳ ಹತ್ರ ಒರಟಾಗಿ ನಡ್ಕೊಳ್ತಾರೆ. ಅದೂ ಅಲ್ಲದೆ ತುಂಬ ಗಂಡಸ್ರಿಗೆ ಅವ್ರ ಕೋಪನ, ಅವ್ರ ಭಾವನೆಗಳನ್ನ ಹೇಗೆ ಕಂಟ್ರೋಲ್‌ ಮಾಡೋದು ಅಂತ ಚಿಕ್ಕವಯಸ್ಸಿಂದ ಯಾರೂ ಹೇಳ್ಕೊಟ್ಟಿರಲ್ಲ. ಇದ್ರ ಜೊತೇಲಿ ಕೆಲವು ಗಂಡಂದಿರು ಅಶ್ಲೀಲ ವಿಷ್ಯಗಳನ್ನ ನೋಡೋದನ್ನ ಚಟ ಮಾಡ್ಕೊಂಡಿದ್ದಾರೆ. ಇದ್ರಿಂದ ಹೆಂಗಸ್ರ ಬಗ್ಗೆ ಮತ್ತು ಸೆಕ್ಸ್‌ ಬಗ್ಗೆ ತಪ್ಪಾಗಿ ಯೋಚ್ನೆ ಮಾಡೋದನ್ನ ಕಲಿತುಬಿಟ್ಟಿದ್ದಾರೆ. ಗಾಯದ ಮೇಲೆ ಬರೆ ಎಳೆದ ಹಾಗೆ ಕೊರೊನಾ ಸಮಯ ಬೇರೆ ಬಂತು. ಆಗಿಂದ ಇಂಥ ವಿಷ್ಯಗಳೆಲ್ಲ ಜಾಸ್ತಿ ಆಗಿಬಿಟ್ಟಿದೆ ಅಂತ ಒಂದು ವರದಿ ಹೇಳುತ್ತೆ. ನಿಜ, ಕೊಡೋಕೆ ನೂರು ಕಾರಣ ಇರಬಹುದು. ಹಾಗಂತ, ಗಂಡಸ್ರು ಈ ತರ ನಡ್ಕೊಳ್ಳೋದು ಯಾವುದೇ ಕಾರಣಕ್ಕೂ ಸರಿ ಅಲ್ವೇ ಅಲ್ಲ.

4. ಕ್ರೈಸ್ತ ಗಂಡಂದಿರು ಯಾವ ವಿಷ್ಯದಲ್ಲಿ ಹುಷಾರಾಗಿರಬೇಕು? ಯಾಕೆ?

4 ಈ ಕೆಟ್ಟ ಲೋಕ ಸ್ತ್ರೀಯರ ಬಗ್ಗೆ ತಪ್ಪಾಗಿ ಯೋಚ್ನೆ ಮಾಡುತ್ತೆ. ಯೆಹೋವನ ಆರಾಧನೆ ಮಾಡೋ ಗಂಡಂದಿರು ಸ್ತ್ರೀಯರ ಬಗ್ಗೆ ಆ ತರ ಯೋಚ್ನೆ ಮಾಡದಿರೋ ಹಾಗೆ ನೋಡ್ಕೊಬೇಕು. a ಯಾಕಂದ್ರೆ ನಾವು ಏನು ಯೋಚಿಸ್ತೀವೋ ಅದೇ ತರನೇ ನಡ್ಕೊಳ್ತೀವಿ. ಅದಕ್ಕೇ ಪೌಲ ರೋಮ್‌ನಲ್ಲಿದ್ದ ಅಭಿಷಿಕ್ತ ಕ್ರೈಸ್ತರನ್ನ ಎಚ್ಚರಿಸ್ತಾ “ಈ ಲೋಕ ನಿಮ್ಮನ್ನ ರೂಪಿಸೋಕೆ ಬಿಡಬೇಡಿ” ಅಂತ ಹೇಳಿದ. (ರೋಮ. 12:1, 2) ಪೌಲ ಈ ಮಾತನ್ನ ರೋಮ್‌ನಲ್ಲಿದ್ದ ಸಭೆಯವ್ರಿಗೆ ಹೇಳಿದಾಗ ಈಗಾಗ್ಲೆ ಅವರು ಸತ್ಯಕ್ಕೆ ಬಂದು ತುಂಬ ವರ್ಷ ಆಗಿತ್ತು. ಹಾಗಿದ್ರೂ ಕೆಲವರು ಲೋಕದಲ್ಲಿದ್ದ ಪದ್ಧತಿಗಳನ್ನ, ಯೋಚ್ನೆಗಳನ್ನ ಕಲಿತುಬಿಟ್ಟಿದ್ರು ಅಂತ ಅನ್ಸುತ್ತೆ. ಅದಕ್ಕೆ ಅವ್ರೆಲ್ರೂ ತಮ್ಮ ಆಲೋಚನೆಯನ್ನ, ನಡತೆಯನ್ನ ಬದಲಾಯಿಸ್ಕೊಬೇಕು ಅಂತ ಅವನು ಬುದ್ಧಿಮಾತು ಹೇಳ್ತಾನೆ. ಪೌಲ ಅವತ್ತು ಕೊಟ್ಟ ಬುದ್ಧಿವಾದ ಇವತ್ತು ಎಲ್ಲಾ ಗಂಡಂದಿರಿಗೂ ಅನ್ವಯಿಸುತ್ತೆ. ಆದ್ರೆ ಬೇಜಾರಿನ ವಿಷ್ಯ ಏನಂದ್ರೆ ಕೆಲವು ಗಂಡಂದಿರು ಹೆಂಡ್ತಿನ ಹೊಡಿತಾರೆ-ಬಡಿತಾರೆ, ಅವ್ರ ಜೊತೆ ತಪ್ಪಾಗಿ ನಡ್ಕೊಳ್ತಾರೆ. b ಇದನ್ನ ನೋಡಿದಾಗ ಯೆಹೋವನಿಗೆ ಹೇಗನಿಸುತ್ತೆ? ಒಬ್ಬ ಕ್ರೈಸ್ತ ಗಂಡ ತನ್ನ ಹೆಂಡ್ತಿ ಜೊತೆ ಹೇಗೆ ನಡ್ಕೊಬೇಕು? ಇದಕ್ಕೆ ಉತ್ರ ಈ ಲೇಖನದ ಮುಖ್ಯ ವಚನದಲ್ಲಿದೆ.

5. ಒಂದನೇ ಪೇತ್ರ 3:7ರಲ್ಲಿ ಹೇಳಿರೋ ತರ ಒಬ್ಬ ಗಂಡ ಹೆಂಡ್ತಿ ಜೊತೆ ಹೇಗೆ ನಡ್ಕೊಬೇಕು?

5 ಒಂದನೇ ಪೇತ್ರ 3:7 ಓದಿ. ಗಂಡಂದಿರು ಹೆಂಡ್ತಿಗೆ ಗೌರವ ಕೊಡಬೇಕು ಅಂತ ಯೆಹೋವ ಆಜ್ಞೆ ಕೊಟ್ಟಿದ್ದಾನೆ. ಹೆಂಡ್ತಿಗೆ ಗೌರವ ಕೊಡೋ ಗಂಡ ಮಾತಲ್ಲಿ, ನಡತೆಯಲ್ಲಿ ಅದನ್ನ ತೋರಿಸಬೇಕು. ಅವಳ ಜೊತೆ ದಯೆಯಿಂದ, ಪ್ರೀತಿಯಿಂದ ನಡ್ಕೊಬೇಕು. ಅದಕ್ಕೆ ಈ ಲೇಖನದಲ್ಲಿ ಒಬ್ಬ ಕ್ರೈಸ್ತ ಗಂಡ ತನ್ನ ಹೆಂಡ್ತಿಗೆ ಗೌರವ ಕೊಡೋಕೆ ಏನು ಮಾಡಬಾರದು, ಏನು ಮಾಡಬೇಕು ಅಂತ ನೋಡೋಣ.

ಗಂಡಂದಿರು ಏನು ಮಾಡಬಾರದು?

6. ಹೆಂಡ್ತಿಗೆ ಹೊಡೆದು ಹಿಂಸೆ ಕೊಡೋ ಗಂಡನ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ? (ಕೊಲೊಸ್ಸೆ 3:19)

6 ಹೊಡಿಯೋದು ಬಡಿಯೋದು ಮಾಡಬಾರದು. ಹಿಂಸೆ ಕೊಡೋರನ್ನ ಯೆಹೋವ ದ್ವೇಷಿಸ್ತಾನೆ. (ಕೀರ್ತ. 11:5) ಹೆಂಡ್ತಿಗೆ ಹೊಡೆದು ಹಿಂಸೆ ಕೊಡೋದನ್ನ ಯೆಹೋವ ಒಪ್ಪೋದೇ ಇಲ್ಲ ಅಂತ ಬೈಬಲಿಂದ ಗೊತ್ತಾಗುತ್ತೆ. (ಮಲಾ. 2:16; ಕೊಲೊಸ್ಸೆ 3:19 ಓದಿ.) ಈ ಲೇಖನದ ಮುಖ್ಯ ವಚನ, 1 ಪೇತ್ರ 3:7ರಲ್ಲಿ ಹೇಳೋ ಹಾಗೆ ಗಂಡ, ಹೆಂಡ್ತಿ ಜೊತೆ ಸರಿಯಾಗಿ ನಡ್ಕೊಂಡಿಲ್ಲಾಂದ್ರೆ ಯೆಹೋವನ ಜೊತೆ ಅವನಿಗಿರೋ ಸಂಬಂಧನೇ ಅವನು ಹಾಳು ಮಾಡ್ಕೊಳ್ತಾನೆ. ಅಂಥವನ ಪ್ರಾರ್ಥನೆಯನ್ನ ಯೆಹೋವ ಕೇಳದೆ ಇರಬಹುದು.

7. ಎಫೆಸ 4:31, 32ರಲ್ಲಿ ಹೇಳೋ ಹಾಗೆ ಗಂಡ ಯಾವ ತರ ಮಾತಾಡಬಾರದು? (“ಪದ ವಿವರಣೆ” ನೋಡಿ.)

7 ಕಿರಿಚೋದು, ಬಯ್ಯೋದು ಮಾಡಬಾರದು. ಕೆಲವು ಗಂಡಂದಿರು ಕೋಪದಿಂದ ಹೆಂಡ್ತಿಗೆ ಬಾಯಿಗೆ ಬಂದ ಹಾಗೆ ಬೈತಾರೆ, ಚುಚ್ಚಿಚುಚ್ಚಿ ಮಾತಾಡ್ತಾರೆ. ಆದ್ರೆ “ಕೋಪ, ಕ್ರೋಧ, ಕಿರಿಚಾಟ, ಬೈಗುಳ” c ಇದನ್ನೆಲ್ಲ ಯೆಹೋವ ದ್ವೇಷಿಸ್ತಾನೆ. (ಎಫೆಸ 4:31, 32 ಓದಿ.) ಯೆಹೋವ ದೇವರಿಗೆ ಎಲ್ಲಾ ಕೇಳಿಸುತ್ತೆ. ನಾಲ್ಕು ಗೋಡೆಗಳ ಮಧ್ಯದಲ್ಲಿ ಹೆಂಡ್ತಿ ಜೊತೆ ಗಂಡ ಹೇಗೆ ಮಾತಾಡ್ತಾನೆ, ನಡ್ಕೊಳ್ತಾನೆ ಅನ್ನೋದನ್ನ ಯೆಹೋವ ಗಮನಿಸ್ತಾನೆ. ಹೆಂಡ್ತಿ ಹತ್ರ ಕೂಗಾಡ್ತಾ ಕಿರಿಚಾಡ್ತಾ ಮಾತಾಡೋ ಗಂಡ ತನ್ನ ಮದುವೆ ಜೀವನನೂ ಹಾಳು ಮಾಡ್ಕೊಳ್ತಾನೆ, ಯೆಹೋವನ ಜೊತೆ ಇರೋ ಸ್ನೇಹನೂ ಕಳ್ಕೊಳ್ತಾನೆ.—ಯಾಕೋ. 1:26.

8. (ಎ) ಅಶ್ಲೀಲ ವಿಷ್ಯಗಳ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ? (ಬಿ) ಯಾಕೆ?

8 ಅಶ್ಲೀಲ ಚಿತ್ರ, ವಿಡಿಯೋ ನೋಡಬಾರದು. ಅಶ್ಲೀಲ ವಿಷ್ಯಗಳ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ? ಆತನು ಅದನ್ನ ದ್ವೇಷಿಸ್ತಾನೆ. ಅಶ್ಲೀಲ ವಿಷ್ಯಗಳನ್ನ ನೋಡೋ ಒಬ್ಬ ಗಂಡ ಯೆಹೋವನ ಜೊತೆ ಇರೋ ಸ್ನೇಹನ ಕಳ್ಕೊಳ್ತಾನೆ, ತನ್ನ ಹೆಂಡತಿಯನ್ನೂ ಗೌರವಿಸಲ್ಲ. d ಒಬ್ಬ ಗಂಡ ತನ್ನ ಹೆಂಡ್ತಿಗೆ ತನ್ನ ನಡತೆಯಿಂದ ಮಾತ್ರ ಅಲ್ಲ ತನ್ನ ಯೋಚ್ನೆಯಲ್ಲೂ ನಿಯತ್ತಾಗಿರಬೇಕು ಅಂತ ಯೆಹೋವ ಇಷ್ಟಪಡ್ತಾನೆ. ಅದಕ್ಕೇ ಯೇಸು, ಒಬ್ಬ ವ್ಯಕ್ತಿ ಕೆಟ್ಟ ಉದ್ದೇಶದಿಂದ ಒಬ್ಬ ಸ್ತ್ರೀನ ನೋಡ್ತಾ ಇದ್ರೆ ಅವನು ಈಗಾಗ್ಲೇ “ಹೃದಯದಲ್ಲಿ ಅವಳ ಜೊತೆ ವ್ಯಭಿಚಾರ ಮಾಡಿದ್ದಾನೆ” ಅಂತ ಹೇಳಿದನು. eಮತ್ತಾ. 5:28, 29.

9. ಗಂಡ ತನ್ನ ಹೆಂಡ್ತಿ ಒಪ್ಪದಿರೋ ಕೆಲವು ಲೈಂಗಿಕ ಕ್ರಿಯೆಗಳಿಗೆ ಒತ್ತಾಯಿಸೋದನ್ನ ಯೆಹೋವ ಯಾಕೆ ಸಹಿಸಲ್ಲ?

9 ಹೆಂಡ್ತಿ ಒಪ್ಪದ ಕೆಲವು ಲೈಂಗಿಕ ಕ್ರಿಯೆಗಳಿಗೆ ಅವಳನ್ನ ಒತ್ತಾಯಿಸಬಾರದು. ಕೆಲವು ಗಂಡಂದಿರು ಹೆಂಡ್ತಿ ಜೊತೆ ಹೀಗೆ ಕೆಟ್ಟದಾಗಿ ನಡ್ಕೊಳ್ತಾರೆ. ಆಕೆಯ ಮನಸಾಕ್ಷಿಗೆ ನೋವಾಗೋ ತರ ಮಾಡ್ತಾರೆ. ಗಂಡ ಈ ತರ ಸ್ವಾರ್ಥವಾಗಿ ನಡ್ಕೊಂಡ್ರೆ ಆಕೆಯ ಭಾವನೆಗಳಿಗೆ ಬೆಲೆ ಕೊಡದೆ ನಡ್ಕೊಂಡ್ರೆ ಯೆಹೋವನಿಗೆ ಒಂಚೂರೂ ಇಷ್ಟ ಆಗಲ್ಲ. ಗಂಡ ತನ್ನ ಹೆಂಡ್ತಿನ ಪ್ರೀತಿಸಬೇಕು, ಅವಳ ಜೊತೆ ದಯೆಯಿಂದ ನಡ್ಕೊಬೇಕು, ಅವಳ ಭಾವನೆನ ಗೌರವಿಸಬೇಕು ಅಂತ ಯೆಹೋವ ಬಯಸ್ತಾನೆ. (ಎಫೆ. 5:28, 29) ಈಗಾಗ್ಲೆ ಒಬ್ಬ ಕ್ರೈಸ್ತ ಗಂಡ ತನ್ನ ಹೆಂಡ್ತಿನ ಹೊಡಿತಿದ್ರೆ ಬೈತಿದ್ರೆ ಆಕೆಗೆ ಇಷ್ಟ ಇಲ್ಲದಿರೋ ಕೆಲವು ಲೈಂಗಿಕ ಕ್ರಿಯೆಗಳಿಗೆ ಒತ್ತಾಯಿಸಿದ್ರೆ ಅಥವಾ ಅಶ್ಲೀಲ ವಿಷ್ಯಗಳನ್ನ ನೋಡ್ತಿದ್ರೆ ಏನು ಮಾಡಬೇಕು? ಅವನು ತನ್ನ ಯೋಚ್ನೆನ ನಡತೆನ ಹೇಗೆ ಬದಲಾಯಿಸ್ಕೊಬೇಕು?

ನಡತೆ ಬದಲಾಯಿಸ್ಕೊಳ್ಳೋಕೆ ಗಂಡ ಏನು ಮಾಡಬೇಕು?

10. ಯೇಸುನ ನೋಡಿ ಗಂಡಂದಿರು ಏನು ಕಲಿಬಹುದು?

10 ಗಂಡ ಹೆಂಡ್ತಿ ಜೊತೆ ತಪ್ಪಾಗಿ ನಡ್ಕೊಳ್ತಿದ್ರೆ ಬದಲಾಗೋಕೆ ಏನು ಮಾಡಬೇಕು? ಯೇಸುವಿನ ಮಾದರಿಯನ್ನ ಅನುಸರಿಸಬೇಕು. ಯೇಸುಗೆ ಮದುವೆ ಆಗದಿದ್ರೂ ಯೇಸು ತನ್ನ ಶಿಷ್ಯರ ಜೊತೆ ಹೇಗೆ ನಡ್ಕೊಂಡ ಅನ್ನೋದನ್ನ ನೋಡಿದ್ರೆ ಗಂಡ ತನ್ನ ಹೆಂಡ್ತಿ ಜೊತೆ ಹೇಗೆ ನಡ್ಕೊಬೇಕು ಅಂತ ಗೊತ್ತಾಗುತ್ತೆ. (ಎಫೆ. 5:25) ಉದಾಹರಣೆಗೆ, ಯೇಸು ಅಪೊಸ್ತಲರ ಹತ್ರ ಹೇಗೆ ಮಾತಾಡಿದ, ಹೇಗೆ ನಡ್ಕೊಂಡ ಅನ್ನೋದನ್ನ ನೋಡೋಣ ಬನ್ನಿ.

11. ಯೇಸು ಅಪೊಸ್ತಲರ ಜೊತೆ ಹೇಗೆ ನಡ್ಕೊಂಡನು? ಹೇಗೆ ನಡ್ಕೊಳ್ಳಲಿಲ್ಲ?

11 ಯೇಸು ಅಪೊಸ್ತಲರ ಜೊತೆ ಯಾವಾಗ್ಲೂ ದಯೆಯಿಂದ ನಡ್ಕೊಳ್ತಿದ್ದನು, ಗೌರವದಿಂದ ಮಾತಾಡ್ತಿದ್ದನು. ಅವ್ರನ್ನ ಯಾವತ್ತೂ ಬೈಲಿಲ್ಲ, ಅವ್ರ ಮೇಲೆ ಯಾವತ್ತೂ ದಬ್ಬಾಳಿಕೆ ಮಾಡ್ಲಿಲ್ಲ. ಯೇಸು ಅವ್ರಿಗೆ ಪ್ರಭುವಾಗಿದ್ರೂ, ಗುರು ಆಗಿದ್ರೂ ತನಗೆ ಅಧಿಕಾರ ಇದೆ ಅಂತ ತೋರಿಸ್ಕೊಳ್ಳೋಕೆ ತನ್ನ ಶಕ್ತಿ ಪ್ರದರ್ಶನ ಮಾಡಲಿಲ್ಲ. ಬದ್ಲಿಗೆ ದೀನತೆಯಿಂದ ಅವ್ರ ಸೇವೆ ಮಾಡಿದನು. (ಯೋಹಾ. 13:12-17) ಒಂದು ಸಲ ಯೇಸು ಶಿಷ್ಯರಿಗೆ “ನನ್ನಿಂದ ಕಲಿರಿ. ಆಗ ನಿಮಗೆ ಹೊಸಬಲ ಸಿಗುತ್ತೆ. ಯಾಕಂದ್ರೆ ನಾನು ಮೃದುಸ್ವಭಾವ, ದೀನಮನಸ್ಸು ಇರುವವನು” ಅಂತ ಹೇಳಿದನು. (ಮತ್ತಾ. 11:28-30) ನೋಡಿದ್ರಾ, ಯೇಸುವಿನಲ್ಲಿ ಮೃದು ಸ್ವಭಾವ ಇತ್ತು. ಮೃದು ಸ್ವಭಾವ ಇರೋ ವ್ಯಕ್ತಿ ಕೈಲಾಗದಿರೋ ವ್ಯಕ್ತಿ ಅಲ್ಲ. ಬದ್ಲಿಗೆ ಅವನ ಒಳಗಡೆ ತನ್ನ ಭಾವನೆಗಳನ್ನ ನಿಯಂತ್ರಿಸ್ಕೊಳ್ಳೋ ಶಕ್ತಿ ಇರುತ್ತೆ. ಅಂಥ ವ್ಯಕ್ತಿನ ಯಾರೇ ಕೆಣಕಿದ್ರೂ ರೇಗಿಸಿದ್ರೂ ತನ್ನಲ್ಲಿರೋ ಶಾಂತಿ ಸಮಾಧಾನನ ಅವನು ಕಳ್ಕೊಳ್ಳಲ್ಲ.

12. ಯೇಸು ಬೇರೆಯವ್ರ ಹತ್ರ ಹೇಗೆ ಮಾತಾಡ್ತಿದ್ದನು?

12 ಯೇಸುವಿನ ಮಾತು ಜನ್ರಿಗೆ ಪ್ರೋತ್ಸಾಹದ ಚಿಲುಮೆ ಆಗಿತ್ತು. ಕೇಳಿಸ್ಕೊಳ್ಳೋ ಜನ್ರ ಮನಸ್ಸಿಗೆ ಮುದ ನೀಡ್ತಿತ್ತು. ಯೇಸು ಯಾವತ್ತೂ ತನ್ನ ಶಿಷ್ಯರ ಹತ್ರ ಒರಟಾಗಿ ಮಾತಾಡ್ಲೇ ಇಲ್ಲ. (ಲೂಕ 8:47, 48) ಆತನನ್ನ ವಿರೋಧಿಸೋರು ಆತನನ್ನ ಅವಮಾನಿಸಿದ್ರೂ ರೇಗಿಸಿದ್ರೂ ಯೇಸು ಅಂತೂ ಅವ್ರಿಗೆ ತಿರುಗಿ “ಅವಮಾನ ಮಾಡಲಿಲ್ಲ.” (1 ಪೇತ್ರ 2:21-23) ಕೆಲವೊಂದು ಸಲ ವಿರೋಧಿಗಳಿಗೆ ಕಟುವಾಗಿ ಮಾತಾಡಿ ಬಾಯಿ ಮುಚ್ಚಿಸೋ ಬದ್ಲು ತಾಳ್ಕೊಂಡು ಸುಮ್ಮನೆ ಇದ್ದುಬಿಟ್ಟ. (ಮತ್ತಾ. 27:12-14) ಕ್ರೈಸ್ತ ಗಂಡಂದಿರು ಹೇಗೆ ನಡ್ಕೊಬೇಕು ಅನ್ನೋದಕ್ಕೆ ಯೇಸು ಎಂಥ ಒಳ್ಳೇ ಮಾದರಿ ಅಲ್ವಾ?

13. ಮತ್ತಾಯ 19:4-6ರಲ್ಲಿ ಹೇಳಿರೋ ತರ ಗಂಡ ತನ್ನ ಹೆಂಡ್ತಿಗೆ ಅಂಟ್ಕೊಂಡು ಇರೋಕೆ ಏನು ಮಾಡಬೇಕು? (ಚಿತ್ರ ನೋಡಿ.)

13 “[ಗಂಡ] ತನ್ನ ಹೆಂಡತಿ ಜೊತೆ ಇರ್ತಾನೆ” ಅಂತ ತನ್ನ ತಂದೆ ಹೇಳಿದ ಮಾತು ಯೇಸುಗೆ ಗೊತ್ತಿತ್ತು. ಅದಕ್ಕೇ ಗಂಡಂದಿರು ಹೆಂಡ್ತಿಗೆ ಕೊನೇ ತನಕ ನಿಯತ್ತಾಗಿ ಇರಬೇಕು ಅಂತ ಯೇಸು ಹೇಳಿದ್ದಾನೆ. (ಮತ್ತಾಯ 19:4-6 ಓದಿ.) “ಜೊತೆ ಇರ್ತಾನೆ” ಅನ್ನೋ ಪದಕ್ಕೆ ಗ್ರೀಕ್‌ ಭಾಷೇಲಿ “ಅಂಟ್ಕೊಂಡು ಇರ್ತಾನೆ” ಅಂತ ಅರ್ಥ ಬರೋ ಕ್ರಿಯಾ ಪದವನ್ನ ಬಳಸಿದ್ದಾರೆ. ಅಂದ್ರೆ ಗಮ್‌ ಹಾಕಿದಾಗ ಎರಡು ವಸ್ತುಗಳು ಹೇಗೆ ಅಂಟ್ಕೊಂಡು ಇರುತ್ತೋ ಹಾಗೆನೇ ಗಂಡ-ಹೆಂಡ್ತಿಯ ಬಾಂಧವ್ಯನೂ ಬಲವಾಗಿ ಅಂಟ್ಕೊಂಡು ಇರಬೇಕು ಅಂತ ಅರ್ಥ. ಈ ಬಾಂಧವ್ಯ ಹಾಳಾದ್ರೆ ಗಂಡ-ಹೆಂಡ್ತಿ ಇಬ್ರಿಗೂ ತೊಂದ್ರೆನೇ. ಗಂಡ ಈ ಬಾಂಧವ್ಯ ಹಾಳಾಗದೇ ಇರೋ ತರ ಹೇಗೆ ನೋಡ್ಕೊಬೇಕು? ಎಲ್ಲಾ ತರದ ಅಶ್ಲೀಲ ಸಾಹಿತ್ಯದಿಂದ ದೂರ ಇರಬೇಕು. ಅದಕ್ಕೆ ಅವನು “ಅಯೋಗ್ಯ ವಿಷ್ಯಗಳನ್ನ ನೋಡದ” ಹಾಗೆ ತಕ್ಷಣ ತನ್ನ ದೃಷ್ಟಿನ ಪಕ್ಕಕ್ಕೆ ತಿರುಗಿಸ್ಕೊಬೇಕು. (ಕೀರ್ತ. 119:37) ಇನ್ನೊಂದು ಮಾತಲ್ಲಿ ಹೇಳೋದಾದ್ರೆ ತನ್ನ ಹೆಂಡ್ತಿನ ಬಿಟ್ಟು ಬೇರೆ ಯಾವುದೇ ಸ್ತ್ರೀನ ಕೆಟ್ಟ ದೃಷ್ಟಿಯಿಂದ ನೋಡದೇ ಇರೋಕೆ ತನ್ನ ಕಣ್ಣುಗಳ ಜೊತೆ ಒಪ್ಪಂದ ಮಾಡ್ಕೊಬೇಕು.—ಯೋಬ 31:1, ಪಾದಟಿಪ್ಪಣಿ.

ನಿಯತ್ತಿರೋ ಗಂಡ ಅಶ್ಲೀಲ ವಿಷ್ಯಗಳ ಕಡೆ ಕಣ್ಣೆತ್ತೂ ನೋಡಲ್ಲ (ಪ್ಯಾರ 13 ನೋಡಿ) g


14. ತಪ್ಪಾಗಿ ನಡ್ಕೊಳ್ತಿರೋ ಗಂಡ ಯೆಹೋವನ ಜೊತೆ, ತನ್ನ ಹೆಂಡ್ತಿ ಜೊತೆ ತನ್ನ ಸಂಬಂಧನ ಸರಿ ಮಾಡ್ಕೊಳ್ಳೋಕೆ ಯಾವೆಲ್ಲ ಹೆಜ್ಜೆಗಳನ್ನ ತಗೊಬೇಕು?

14 ಹೆಂಡ್ತಿನ ಹೊಡಿಯೋ, ಕೆಟ್ಟದಾಗಿ ಬಯ್ಯೋ ವ್ಯಕ್ತಿ ಯೆಹೋವನ ಜೊತೆ ಮತ್ತು ಹೆಂಡ್ತಿ ಜೊತೆ ತನ್ನ ಸಂಬಂಧನ ಸರಿ ಮಾಡ್ಕೊಬೇಕು. ಇದನ್ನ ಮಾಡೋಕೆ ಏನೆಲ್ಲ ಹೆಜ್ಜೆ ತಗೊಬೇಕು? ಒಂದು, ತನ್ನಲ್ಲಿ ಒಂದು ಗಂಭೀರ ಸಮಸ್ಯೆ ಇದೆ ಅಂತ ಅವನು ಅರ್ಥ ಮಾಡ್ಕೊಬೇಕು. ಯೆಹೋವನಿಗೆ ಯಾವುದೂ ಮರೆಯಾಗಿಲ್ಲ, ಎಲ್ಲಾ ನೋಡ್ತಿದ್ದಾನೆ ಅಂತ ಅವನು ನೆನಪಿಡಬೇಕು. (ಕೀರ್ತ. 44:21; ಪ್ರಸಂ. 12:14; ಇಬ್ರಿ. 4:13) ಎರಡು, ಹೆಂಡ್ತಿ ಜೊತೆ ತಪ್ಪಾಗಿ ನಡ್ಕೊಳ್ಳೋದನ್ನ ನಿಲ್ಲಿಸಬೇಕು. ತನ್ನ ನಡತೆಯನ್ನ ಬದಲಾಯಿಸ್ಕೊಬೇಕು. (ಜ್ಞಾನೋ. 28:13) ಮೂರು, ಹೆಂಡ್ತಿ ಹತ್ರ ಯೆಹೋವನ ಹತ್ರ ಕ್ಷಮೆ ಕೇಳಬೇಕು. ಅವರು ಕ್ಷಮಿಸೋ ತರ ನಡ್ಕೊಬೇಕು. (ಅ. ಕಾ. 3:19) ಬದಲಾಗೋಕೆ ಬಯಕೆಯನ್ನ ಕೊಡಪ್ಪಾ ಅಂತ ಯೆಹೋವನ ಹತ್ರ ಬೇಡ್ಕೊಬೇಕು. ತನ್ನ ಯೋಚ್ನೆನ, ಮಾತನ್ನ, ಕ್ರಿಯೆಗಳನ್ನ ನಿಯಂತ್ರಣದಲ್ಲಿ ಇಟ್ಕೊಳ್ಳೋಕೆ ಸಹಾಯ ಕೇಳಬೇಕು. (ಕೀರ್ತ. 51:10-12; 2 ಕೊರಿಂ. 10:5; ಫಿಲಿ. 2:13) ನಾಲ್ಕು, ಮಾಡಿದ ಪ್ರಾರ್ಥನೆಗೆ ತಕ್ಕ ಹಾಗೆ ನಡ್ಕೊಬೇಕು. ಎಲ್ಲಾ ತರದ ಹಿಂಸೆ, ಕೆಟ್ಟ ಮಾತುಗಳನ್ನ ದ್ವೇಷಿಸೋಕೆ ಪ್ರಯತ್ನ ಮಾಡ್ತಾ ಇರಬೇಕು. (ಕೀರ್ತ. 97:10) ಐದು, ಸಭೇಲಿರೋ ಹಿರಿಯರ ಹತ್ರ ತಕ್ಷಣ ಸಹಾಯ ಪಡ್ಕೊಬೇಕು. (ಯಾಕೋ. 5:14-16) ಆರು, ಮುಂದೆ ಈ ತರ ತಪ್ಪುಗಳನ್ನ ಮಾಡದೆ ಇರೋಕೆ ತನ್ನ ನಡತೆಯನ್ನ ಬದಲಾಯಿಸ್ಕೊಳ್ಳೋಕೆ ಏನೆಲ್ಲ ಮಾಡಬೇಕು ಅಂತ ಪ್ಲ್ಯಾನ್‌ ಮಾಡಬೇಕು. ಒಬ್ಬ ಗಂಡ ಅಶ್ಲೀಲ ವಿಷ್ಯಗಳನ್ನ ನೋಡೋದನ್ನ ನಿಲ್ಲಿಸಬೇಕಾದ್ರೂ ಇದೇ ಹೆಜ್ಜೆಗಳನ್ನ ಪಾಲಿಸಬೇಕು. (ಕೀರ್ತ. 37:5) ಗಂಡ ಈ ಹೆಜ್ಜೆಗಳನ್ನ ತಗೊಂಡ್ರೆ ಅವನು ಬದಲಾಗೋಕೆ ಯೆಹೋವ ಸಹಾಯ ಮಾಡ್ತಾನೆ. ಹೆಂಡ್ತಿನ ಗೌರವಿಸಬೇಕು ಅಂತ ಅವನು ಆಕೆಗೆ ನೋವಾಗೋ ವಿಷ್ಯಗಳನ್ನ ನಿಲ್ಲಿಸಿದ್ರೆ ಮಾತ್ರ ಸಾಕಾಗಲ್ಲ. ಬದಲಿಗೆ ಹೆಂಡ್ತಿನ ಮಾತಲ್ಲಿ, ನಡತೆಯಲ್ಲಿ ಪ್ರೀತಿಸೋಕೆ, ಗೌರವಿಸೋಕೆ ಕಲಿಬೇಕು. ಅವನು ಅದನ್ನ ಹೇಗೆ ಮಾಡಬಹುದು?

ಹೆಂಡ್ತಿನ ಪ್ರೀತಿಸೋದು, ಗೌರವಿಸೋದು ಹೇಗೆ?

15. ಗಂಡ ಮನಸ್ಸಲ್ಲಿರೋ ಪ್ರೀತಿನ ಹೆಂಡ್ತಿಗೆ ಹೇಗೆ ತೋರಿಸಬಹುದು?

15 ಮನಸ್ಸಲ್ಲಿ ಎಷ್ಟು ಪ್ರೀತಿ ಇದೆ ಅಂತ ತೋರಿಸಿ. ಮದುವೆ ಮಾಡ್ಕೊಂಡು ಖುಷಿಖುಷಿಯಾಗಿರೋ ಕೆಲವು ಗಂಡಂದಿರು ಹೆಂಡ್ತಿ ಮೇಲೆ ಎಷ್ಟು ಪ್ರೀತಿ ಇದೆ ಅಂತ ಪ್ರತಿದಿನ ತೋರಿಸ್ತಾರೆ. (1 ಯೋಹಾ. 3:18) ಚಿಕ್ಕಚಿಕ್ಕ ವಿಷ್ಯದಲ್ಲೂ ಗಂಡ ತನ್ನ ಹೆಂಡ್ತಿ ಮೇಲೆ ಎಷ್ಟು ಪ್ರೀತಿ-ಕಾಳಜಿ ಇದೆ ಅಂತ ತೋರಿಸಬಹುದು. ಉದಾಹರಣೆಗೆ, ಕೈ ಹಿಡ್ಕೊಂಡು ಮಾತಾಡೋದು, ಪ್ರೀತಿಯಿಂದ ಅಪ್ಕೊಳ್ಳೋದು, ಕೆಲಸಕ್ಕೆ ಹೋದಾಗ ‘ಹೇಗಿದ್ದೀಯಾ, ಊಟ ಆಯ್ತಾ, ಏನ್‌ ಮಾಡ್ತಾ ಇದ್ದೀಯಾ’ ಅಂತ ಮೆಸೆಜ್‌ ಮಾಡಬಹುದು. ಅಥವಾ ಫೋನ್‌ ಮಾಡಿ ಮಾತಾಡಬಹುದು. ಹೆಂಡ್ತಿ ಮೇಲೆ ಎಷ್ಟು ಪ್ರೀತಿ ಇದೆ ಅಂತ ಅರ್ಥ ಮಾಡಿಸೋಕೆ ಆಗಾಗ ಒಂದು ಗ್ರೀಟಿಂಗ್‌ ಕಾರ್ಡ್‌ ಬರೆದು ಕೊಡಬಹುದು. ಗಂಡ ಈ ತರ ಚಿಕ್ಕಚಿಕ್ಕ ವಿಷ್ಯಗಳಲ್ಲೂ ಹೆಂಡ್ತಿ ಮೇಲಿರೋ ಪ್ರೀತಿನ ತೋರಿಸಿದ್ರೆ ಆಕೆಗೆ ಗೌರವ ಕೊಟ್ಟ ಹಾಗೆ ಆಗುತ್ತೆ. ಅವ್ರ ಮದುವೆಯ ಬಂಧ ಇನ್ನೂ ಗಟ್ಟಿ ಆಗುತ್ತೆ.

16. ಗಂಡ ತನ್ನ ಹೆಂಡ್ತಿನ ಯಾಕೆ ಮನಸಾರೆ ಮೆಚ್ಕೊಬೇಕು?

16 ಮನಸಾರೆ ಮೆಚ್ಕೊಳ್ಳಿ. ಹೆಂಡ್ತಿನ ಪ್ರೀತಿಸೋ ಗಂಡ ಅವಳೆಷ್ಟು ಅಮೂಲ್ಯ, ತನ್ನ ಜೀವನದಲ್ಲಿ ಅವಳೆಷ್ಟು ಮುಖ್ಯ ಅನ್ನೋದನ್ನ ಮಾತಲ್ಲೂ ಹೇಳ್ತಾ ಇರ್ತಾನೆ. ಇದನ್ನ ಮಾಡೋ ಒಂದು ವಿಧ, ಹೆಂಡ್ತಿ ಅವಳಿಗೆ ಮಾಡ್ತಿರೋ ಸಹಾಯನ, ಸಪೋರ್ಟನ್ನ ನೆನಸ್ಕೊಂಡು ಬಾಯಿತುಂಬ ಹೊಗಳೋದು. (ಕೊಲೊ. 3:15) ಹೀಗೆ ಗಂಡ ಮನಸಾರೆ ಮೆಚ್ಕೊಂಡಾಗ ಅವಳ ಮನಸ್ಸು ಅರಳುತ್ತೆ. ಗಂಡ ನನ್ನನ್ನ ಪ್ರೀತಿಸ್ತಾನೆ, ಗೌರವಿಸ್ತಾನೆ ಅನ್ನೋ ಭರವಸೆ ಅವಳಿಗೆ ಸಿಗುತ್ತೆ.—ಜ್ಞಾನೋ. 31:28.

17. ಗಂಡ ತನ್ನ ಹೆಂಡ್ತಿ ಜೊತೆ ದಯೆಯಿಂದ, ಗೌರವದಿಂದ ಹೇಗೆ ನಡ್ಕೊಳ್ತಾನೆ?

17 ದಯೆ ಮತ್ತು ಗೌರವದಿಂದ ನಡ್ಕೊಳ್ಳಿ. ಹೆಂಡ್ತಿನ ಪ್ರೀತಿಸೋ ಗಂಡ ಅವಳನ್ನ ಯೆಹೋವನಿಂದ ಸಿಕ್ಕಿದ ಬೆಲೆ ಕಟ್ಟಲಾಗದ ನಿಧಿ ತರ, ಅಪರೂಪದ ಹವಳದ ತರ ನೋಡ್ತಾನೆ. (ಜ್ಞಾನೋ. 18:22; 31:10) ಅದಕ್ಕೇ ಎಲ್ಲಾ ಸಂದರ್ಭದಲ್ಲೂ ಮುಖ್ಯವಾಗಿ ಅವ್ರ ಲೈಂಗಿಕ ಜೀವನದಲ್ಲೂ ಹೆಂಡ್ತಿ ಜೊತೆ ದಯೆಯಿಂದ, ಗೌರವದಿಂದ ನಡ್ಕೊಳ್ತಾನೆ. ಹೆಂಡ್ತಿ ಒಪ್ಪದ ಕೆಲವು ಲೈಂಗಿಕ ಕ್ರಿಯೆಗಳನ್ನ ಮಾಡೋಕೆ ಒತ್ತಾಯ ಮಾಡಲ್ಲ. ಆಕೆಗೆ ಮುಜುಗರ ಆಗೋ ತರ ನಡ್ಕೊಳ್ಳಲ್ಲ. ಆಕೆಯ ಮನಸಾಕ್ಷಿಗೆ ನೋವಾಗೋ ತರ ಏನೂ ಮಾಡಲ್ಲ. f ಅದೇ ತರ ಅವನು ಯೆಹೋವನ ಮುಂದೆನೂ ಒಳ್ಳೇ ಮನಸಾಕ್ಷಿನ ಕಾಪಾಡ್ಕೊಳ್ತಾನೆ.—ಅ. ಕಾ. 24:16.

18. ಗಂಡಂದಿರು ಏನು ಮಾಡೋಕೆ ದೃಢ ನಿರ್ಧಾರ ಮಾಡಬೇಕು? (“ ಹೆಂಡ್ತಿನ ಗೌರವಿಸೋ ನಾಲ್ಕು ವಿಧ” ಅನ್ನೋ ಚೌಕ ನೋಡಿ.)

18 ಗಂಡಂದಿರೇ, ಹೆಂಡ್ತಿನ ಗೌರವಿಸೋದು ಯೆಹೋವನ ದೃಷ್ಟಿಯಲ್ಲಿ ತುಂಬ ಮುಖ್ಯ. ಇದನ್ನ ಮಾಡೋಕೆ ನೀವು ನಿಮ್ಮ ಮಾತಲ್ಲಿ, ನಡತೆಯಲ್ಲಿ ಹಾಕೋ ಎಲ್ಲಾ ಪ್ರಯತ್ನವನ್ನ ಯೆಹೋವ ತುಂಬ ಮೆಚ್ಕೊಳ್ತಾನೆ. ಹಾಗಾಗಿ ಹೆಂಡ್ತಿಗೆ ನೋವಾಗೋ, ಅವಮಾನ ಆಗೋ ಯಾವುದೇ ವಿಷ್ಯನ ಮಾಡಲ್ಲ ಅಂತ ನಿರ್ಧಾರ ಮಾಡಿ. ಆಕೆಯ ಜೊತೆ ದಯೆಯಿಂದ, ಗೌರವದಿಂದ, ಪ್ರೀತಿಯಿಂದ ನಡ್ಕೊಳ್ಳೋಕೆ ನಿಮ್ಮ ಕೈಯಲ್ಲಿ ಆಗೋದ್ದನ್ನೆಲ್ಲ ಮಾಡಿ. ಇದನ್ನೆಲ್ಲ ನೀವು ಮಾಡಿದ್ರೆ ಆಕೆನ ನೀವೆಷ್ಟು ಪ್ರೀತಿಸ್ತೀರ, ಆಕೆ ನಿಮಗೆಷ್ಟು ಅಮೂಲ್ಯ ಅನ್ನೋದನ್ನ ತೋರಿಸ್ಕೊಡ್ತೀರ. ಹಾಗಾಗಿ ಗಂಡಂದಿರೇ, ನಿಮ್ಮ ಹೆಂಡ್ತಿನ ಪ್ರೀತಿಸಿ, ಗೌರವಿಸಿ! ಹೀಗೆ ಮಾಡ್ತಿದ್ರೆ ನೀವು ಯೆಹೋವನ ಜೊತೆ ಇರೋ ಸಂಬಂಧನ ಕಳ್ಕೊಳ್ಳಲ್ಲ, ಕಾಪಾಡ್ಕೊಳ್ತೀರ.—ಕೀರ್ತ. 25:14.

ಗೀತೆ 106 ಪ್ರೀತಿಯೆಂಬ ಗುಣವನ್ನು ಬೆಳೆಸಿಕೊಳ್ಳುವುದು

a ಜನವರಿ, 2024ರ ಕಾವಲಿನಬುರುಜುವಿನಲ್ಲಿರೋ “ಯೆಹೋವ ದೇವರ ತರ ನೀವೂ ಸ್ತ್ರೀಯರನ್ನ ಗೌರವಿಸಿ” ಅನ್ನೋ ಲೇಖನ ಓದಿ.

b ನೀವು ಮನೇಲಿ ಕಿರುಕುಳ ಅನುಭವಿಸಿರೋದಾದ್ರೆ jw.org ಮತ್ತು JW ಲೈಬ್ರರಿಯಲ್ಲಿ “ಇತರ ವಿಷಯಗಳು” ಅನ್ನೋ ಭಾಗದಲ್ಲಿರೋ “ಮನೆಯಲ್ಲಿ ಕಿರುಕುಳ—ಮೆಟ್ಟಿನಿಲ್ಲಲು ಸಹಾಯ” ಅನ್ನೋ ಲೇಖನ ಓದಿ.

c ಪದ ವಿವರಣೆ: “ಕಿರಿಚಾಟ, ಬೈಗುಳ.” ಇದ್ರಲ್ಲಿ ಅವಮಾನ ಆಗೋ ತರ ಅಡ್ಡ ಹೆಸ್ರಿಟ್ಟು ಕರಿಯೋದು, ಒರಟಾಗಿ, ನೋವಾಗೋ ತರ ಆಡ್ಕೊಳ್ಳೋದು ಗೇಲಿಮಾಡೋದು ಸೇರಿದೆ. ಇದ್ರಲ್ಲಿ ಆ ವ್ಯಕ್ತಿಯಲ್ಲಿ ನಿಮಗೇನು ಇಷ್ಟ ಆಗಲ್ವೋ ಅದನ್ನ ಎತ್ತಿ ತೋರಿಸೋಕೆ ಯಾವಾಗ್ಲೂ ಆಡುವಂಥ ಕೀಳಾದ ಮಾತುಗಳು ಸೇರಿದೆ.

d jw.org ಮತ್ತು JW ಲೈಬ್ರರಿಯಲ್ಲಿ ಪೋರ್ನೊಗ್ರಫಿ ಕ್ಯಾನ್‌ ಶ್ಯಾಟರ್‌ ಯುವರ್‌ ಮ್ಯಾರೇಜ್‌ ಅನ್ನೋ ಇಂಗ್ಲಿಷ್‌ ಲೇಖನ ನೋಡಿ.

e ಗಂಡ ಅಶ್ಲೀಲ ವಿಷ್ಯಗಳನ್ನ ನೋಡ್ತಿದ್ರೆ ಹೆಂಡತಿ ಏನು ಮಾಡಬೇಕು ಅನ್ನೋದರ ಬಗ್ಗೆ ತಿಳ್ಕೊಳ್ಳೋಕೆ ಆಗಸ್ಟ್‌, 2023ರ ಕಾವಲಿನಬುರುಜುವಿನಲ್ಲಿರೋ “ನಿಮ್ಮ ಸಂಗಾತಿ ಅಶ್ಲೀಲ ಚಿತ್ರ ನೋಡಿದ್ರೆ ಏನು ಮಾಡಬೇಕು?” ಅನ್ನೋ ಲೇಖನ ಓದಿ.

f ಗಂಡ-ಹೆಂಡ್ತಿಯ ಲೈಂಗಿಕ ಜೀವನದಲ್ಲಿ ಯಾವುದು ಶುದ್ಧ ಯಾವುದು ಅಶುದ್ಧ, ಯಾವುದು ಸರಿ ಯಾವುದು ತಪ್ಪು, ಯಾವುದನ್ನ ಮಾಡಬೇಕು ಯಾವುದನ್ನ ಮಾಡಬಾರದು ಅಂತ ಬೈಬಲ್‌ ಹೇಳಲ್ಲ. ಈ ವಿಷ್ಯದಲ್ಲಿ ಗಂಡ-ಹೆಂಡ್ತಿನೇ ಒಬ್ರಿಗೊಬ್ರು ಮಾತಾಡಿ ನಿರ್ಧಾರ ಮಾಡಬೇಕು. ಅವರು ಮಾಡೋ ಆ ನಿರ್ಧಾರ ಯೆಹೋವನಿಗೆ ಗೌರವ ತರೋ ತರ, ಒಬ್ರಿಗೊಬ್ರು ಸಂತೋಷ-ತೃಪ್ತಿ ಪಡಿಸೋ ತರ, ಶುದ್ಧ ಮನಸಾಕ್ಷಿ ಕಾಪಾಡ್ಕೊಳ್ಳೋ ತರ ಇರಬೇಕು. ಸಾಮಾನ್ಯವಾಗಿ ಗಂಡ-ಹೆಂಡ್ತಿ ತಮ್ಮ ಲೈಂಗಿಕ ಜೀವನದಲ್ಲಿ ನಡಿಯೋ ಕೆಲವು ಸೂಕ್ಷ್ಮ ವಿಷ್ಯಗಳನ್ನ ಬೇರೆಯವ್ರ ಹತ್ರ ಮಾತಾಡೋಕೆ ಹೋಗಲ್ಲ.

g ಚಿತ್ರ ವಿವರಣೆ: ಒಬ್ಬ ಸಹೋದರನನ್ನ ಅವನ ಜೊತೆ ಕೆಲಸ ಮಾಡೋರು ಅಶ್ಲೀಲ ವಿಷ್ಯಗಳಿರೋ ಮ್ಯಾಗಜೀನ್‌ ನೋಡೋಕೆ ಒತ್ತಾಯ ಮಾಡ್ತಿದ್ದಾರೆ.