ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 3

ಗೀತೆ 35 ಹೆಚ್ಚು ಪ್ರಮುಖ ವಿಷಯಗಳನ್ನು ಮಾಡೋಣ

ದೇವರನ್ನೂ ಕೇಳಿ, ನಿರ್ಧಾರ ಮಾಡಿ!

ದೇವರನ್ನೂ ಕೇಳಿ, ನಿರ್ಧಾರ ಮಾಡಿ!

“ಯೆಹೋವನ ಭಯನೇ ಜ್ಞಾನದ ಆರಂಭ. ಅತಿ ಪವಿತ್ರನಾದ ದೇವರ ಜ್ಞಾನನೇ ವಿವೇಚನೆ.”ಜ್ಞಾನೋ. 9:10.

ಈ ಲೇಖನದಲ್ಲಿ ಏನಿದೆ?

ಒಳ್ಳೇ ನಿರ್ಧಾರಗಳನ್ನ ಮಾಡೋಕೆ ಜ್ಞಾನ, ತಿಳುವಳಿಕೆ ಮತ್ತು ವಿವೇಚನೆ ಹೇಗೆ ಸಹಾಯ ಮಾಡುತ್ತೆ ಅಂತ ನೋಡೋಣ.

1. ನಾವೆಲ್ಲ ಜೀವನದಲ್ಲಿ ಏನು ಮಾಡ್ಲೇಬೇಕು?

 ನಾವೆಲ್ರೂ ಒಂದಲ್ಲ ಒಂದು ನಿರ್ಧಾರನ ಮಾಡ್ತಾನೇ ಇರ್ತೀವಿ. ಉದಾಹರಣೆಗೆ ಏನು ಅಡುಗೆ ಮಾಡೋದು, ಎಷ್ಟೊತ್ತಿಗೆ ಮಲಗೋದು ಅನ್ನೋದೆಲ್ಲ ಚಿಕ್ಕಪುಟ್ಟ ನಿರ್ಧಾರಗಳು. ಆದ್ರೆ ಇನ್ನೂ ಕೆಲವು ನಿರ್ಧಾರಗಳನ್ನ ಮಾಡೋದು ಅಷ್ಟು ಸುಲಭ ಅಲ್ಲ. ಯಾಕಂದ್ರೆ ಅದು ನಮ್ಮ ಆರೋಗ್ಯದ ಮೇಲೆ, ಸಂತೋಷದ ಮೇಲೆ, ಕುಟುಂಬದ ಮೇಲೆ, ನಾವು ಮಾಡೋ ಆರಾಧನೆ ಮೇಲೆ ಪ್ರಭಾವ ಬೀರುತ್ತೆ. ಹಾಗಾಗಿ ಯಾವುದೇ ನಿರ್ಧಾರ ಮಾಡಿದ್ರೂ ಅದ್ರಿಂದ ನಮಗೆ, ನಮ್ಮ ಕುಟುಂಬಕ್ಕೆ ಒಳ್ಳೇದಾಗಬೇಕು ಅಂತ ಆಸೆ ಪಡ್ತೀವಿ. ಎಲ್ಲಕ್ಕಿಂತ ಹೆಚ್ಚಾಗಿ ಅದು ಯೆಹೋವನಿಗೆ ಇಷ್ಟ ಆಗಬೇಕು ಅಂತ ಬಯಸ್ತೀವಿ.—ರೋಮ. 12:1, 2.

2. ವಿವೇಕದಿಂದ ನಿರ್ಧಾರ ಮಾಡೋಕೆ ಯಾವ ಮೂರು ಹೆಜ್ಜೆಗಳು ಸಹಾಯ ಮಾಡುತ್ತೆ?

2 ವಿವೇಕದಿಂದ ನಿರ್ಧಾರ ಮಾಡೋಕೆ ಮೂರು ವಿಷ್ಯಗಳನ್ನ ಮಾಡಬೇಕು. (1) ಎಲ್ಲ ವಿಷ್ಯಗಳನ್ನ ತಿಳ್ಕೊಳ್ಳಬೇಕು, (2) ಯೆಹೋವನ ಯೋಚ್ನೆ ಏನು ಅಂತ ಅರ್ಥಮಾಡ್ಕೊಳ್ಳಬೇಕು, (3) ನಿಮಗಿರೋ ಆಯ್ಕೆಗಳನ್ನೆಲ್ಲ ತೂಗಿ ನೋಡಬೇಕು. ಇದನ್ನ ಮಾಡೋದು ಹೇಗೆ ಅಂತ ಈ ಲೇಖನದಲ್ಲಿ ನೋಡೋಣ. ಈ ಹೆಜ್ಜೆಗಳು ನಮ್ಮ ವಿವೇಚನಾ ಶಕ್ತಿಯನ್ನ ಬೆಳೆಸ್ಕೊಳ್ಳೋಕೆ ಹೇಗೆ ಸಹಾಯ ಮಾಡುತ್ತೆ ಅಂತಾನೂ ನೋಡೋಣ.—ಜ್ಞಾನೋ. 2:11.

ಎಲ್ಲಾ ವಿಷ್ಯಗಳನ್ನ ತಿಳ್ಕೊಬೇಕು

3. ನಿರ್ಧಾರ ಮಾಡೋ ಮುಂಚೆ ಎಲ್ಲಾ ವಿಷ್ಯಗಳನ್ನ ತಿಳ್ಕೊಳ್ಳೋದು ಯಾಕೆ ತುಂಬ ಮುಖ್ಯ ಅನ್ನೋದಕ್ಕೆ ಉದಾಹರಣೆ ಕೊಡಿ.

3 ಒಳ್ಳೆ ನಿರ್ಧಾರಗಳನ್ನ ಮಾಡಬೇಕಂದ್ರೆ ಮೊದ್ಲು ಎಲ್ಲಾ ವಿಷ್ಯಗಳನ್ನ ತಿಳ್ಕೊಳ್ಳೋದು ತುಂಬ ಮುಖ್ಯ. ಯಾಕೆ? ನೀವು ಹುಷಾರಿಲ್ಲದೆ ಡಾಕ್ಟರ್‌ ಹತ್ರ ಹೋಗಿದ್ದೀರ ಅಂದ್ಕೊಳ್ಳಿ. ಅವರು ನಿಮ್ಮ ಹತ್ರ ಏನೂ ಕೇಳದೆ ಮಾತ್ರೆಗಳನ್ನ ಬರೆದ್ಕೊಡ್ತಾರಾ? ಇಲ್ಲ ಅಲ್ವಾ. ನಿಮಗೆ ಏನ್‌ ಆಯ್ತು, ಯಾಕೆ ಈ ತರ ಆಗ್ತಿದೆ, ಯಾವಾಗೆಲ್ಲಾ ಆಗ್ತಿದೆ ಅಂತ ಪ್ರಶ್ನೆಗಳನ್ನ ಕೇಳಿ ನಿಮ್ಮನ್ನ ಚೆನ್ನಾಗಿ ತಿಳ್ಕೊಳ್ತಾರೆ. ಅದೇ ತರ ನೀವೂ ಒಂದು ಒಳ್ಳೆ ನಿರ್ಧಾರ ಮಾಡಬೇಕಂದ್ರೆ, ಮೊದ್ಲು ಅದಕ್ಕೆ ಸಂಬಂಧಪಟ್ಟ ಎಲ್ಲಾ ವಿಷ್ಯಗಳನ್ನ ತಿಳ್ಕೊಬೇಕು. ಇದನ್ನ ಹೇಗೆ ಮಾಡೋದು?

4. ನಿರ್ಧಾರ ಮಾಡೋ ಮುಂಚೆ ಎಲ್ಲಾ ವಿಷ್ಯಗಳನ್ನ ತಿಳ್ಕೊಳ್ಳೋಕೆ ನೀವೇನು ಮಾಡಬೇಕು? (ಜ್ಞಾನೋಕ್ತಿ 18:13) (ಚಿತ್ರ ನೋಡಿ.)

4 ವಿಷ್ಯಗಳನ್ನ ತಿಳ್ಕೊಳ್ಳೋಕಿರೋ ಸುಲಭ ದಾರಿ ಪ್ರಶ್ನೆ ಕೇಳೋದು. ಉದಾಹರಣೆಗೆ ನಿಮ್ಮನ್ನ ಒಂದು ಪಾರ್ಟಿಗೆ ಕರೆದಿದ್ದಾರೆ ಅಂದ್ಕೊಳ್ಳಿ. ನೀವು ಅಲ್ಲಿಗೆ ಹೋಗಬೇಕಾ ಬೇಡ್ವಾ ಅಂತ ಹೇಗೆ ನಿರ್ಧಾರ ಮಾಡ್ತೀರಾ? ಆ ಪಾರ್ಟಿನ ಯಾರು ಮಾಡ್ತಿದ್ದಾರೆ ಅನ್ನೋದು ನಿಮಗೆ ಗೊತ್ತಿಲ್ಲ ಅಂದ್ರೆ, ನಿಮ್ಮನ್ನ ಕರೆದವ್ರ ಹತ್ರ ಈ ಪ್ರಶ್ನೆಗಳನ್ನ ಕೇಳಿ: ಈ ಪಾರ್ಟಿಲಿ ಏನು ನಡೆಯುತ್ತೆ? ಅದು ಯಾವಾಗ ನಡೆಯುತ್ತೆ? ಎಷ್ಟು ಜನ ಬರ್ತಾರೆ? ಯಾರೆಲ್ಲ ಬರ್ತಾರೆ? ಪಾರ್ಟಿಲಿ ಏನೆಲ್ಲಾ ಮಾಡ್ತಾರೆ? ಅಲ್ಲಿ ಡ್ರಿಂಕ್ಸ್‌ ಕೊಡ್ತಾರಾ? ಇದಕ್ಕೆಲ್ಲಾ ಉತ್ರ ಸಿಕ್ಕಿದಾಗ ನೀವೊಂದು ಒಳ್ಳೆ ನಿರ್ಧಾರ ಮಾಡೋಕಾಗುತ್ತೆ.ಜ್ಞಾನೋಕ್ತಿ 18:13 ಓದಿ.

ಪ್ರಶ್ನೆಗಳನ್ನ ಕೇಳಿ ಎಲ್ಲ ವಿಷ್ಯಗಳನ್ನ ತಿಳ್ಕೊಳ್ಳಿ (ಪ್ಯಾರ 4 ನೋಡಿ) a


5. ನೀವು ವಿಷ್ಯಗಳನ್ನ ತಿಳ್ಕೊಂಡ ನಂತ್ರ ಇನ್ನೇನು ಮಾಡಬೇಕು?

5 ಆಮೇಲೆ ಚೆನ್ನಾಗಿ ಯೋಚ್ನೆ ಮಾಡಿ. ಉದಾಹರಣೆಗೆ ಬೈಬಲ್‌ ನಿಯಮಗಳನ್ನ ಪಾಲಿಸದವರು ಆ ಪಾರ್ಟಿಗೆ ಬರಬಹುದು, ಅಲ್ಲಿ ಮಿತಿ ಇಲ್ಲದೆ ಡ್ರಿಂಕ್ಸ್‌ನ ಕೊಡಬಹುದು ಅಂತ ನಿಮಗೆ ಗೊತ್ತಾಗುತ್ತೆ ಅಂದ್ಕೊಳ್ಳಿ. ಆಗ ನೀವು ‘ಆ ಪಾರ್ಟಿಲಿ ಜನ ಕುಡಿದು ಮತ್ತೇರುತ್ತಾರಾ, ಜಗಳ ಆಡ್ತಾರಾ, ಅನೈತಿಕವಾಗಿ ನಡ್ಕೊಳ್ತಾರಾ?’ ಅಂತ ಯೋಚಿಸಿ. (1 ಪೇತ್ರ 4:3) ‘ಈ ಪಾರ್ಟಿಗೆ ಹೋದ್ರೆ ಮೀಟಿಂಗ್‌, ಸೇವೆ ಮಿಸ್‌ ಆಗುತ್ತಾ?’ ಅಂತನೂ ಯೋಚ್ನೆ ಮಾಡಿ. ಈ ತರ ಮಾಡ್ದಾಗ ಯಾವ ನಿರ್ಧಾರ ಮಾಡಿದ್ರೆ ಚೆನ್ನಾಗಿರುತ್ತೆ ಅಂತ ನಿಮಗೆ ಗೊತ್ತಾಗುತ್ತೆ. ಅದ್ರ ಜೊತೆಗೆ, ನಿಮಗೆ ಸರಿ ಅನಿಸೋದು ಯೆಹೋವ ದೇವರಿಗೂ ಸರಿ ಅನಿಸುತ್ತಾ ಅಂತ ತಿಳ್ಕೊಬೇಕು.—ಜ್ಞಾನೋ. 2:6.

ಯೆಹೋವನ ಯೋಚ್ನೆ ಏನಂತ ಅರ್ಥ ಮಾಡ್ಕೊಬೇಕು

6. ನಾವು ಯೆಹೋವನ ಸಹಾಯಕ್ಕಾಗಿ ಪ್ರಾರ್ಥನೆ ಮಾಡಬೇಕು ಅಂತ ಯಾಕೋಬ 1:5 ಯಾಕೆ ಹೇಳುತ್ತೆ?

6 ಒಂದು ವಿಷ್ಯದ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ ಅಂತ ತಿಳ್ಕೊಳ್ಳೋಕೆ ಪ್ರಾರ್ಥನೆ ಮಾಡಿ. ಯಾಕಂದ್ರೆ ಒಂದು ನಿರ್ಧಾರ ಮಾಡೋಕೆ ಬೇಕಿರೋ ‘ವಿವೇಕನ ಕೊಡ್ತೀನಿ’ ಅಂತ ಆತನೇ ಮಾತು ಕೊಟ್ಟಿದ್ದಾನೆ. ಅದನ್ನ “ಬೇಜಾರು ಮಾಡ್ಕೊಳ್ಳದೆ ಎಲ್ರಿಗೂ ಉದಾರವಾಗಿ” ಕೊಡ್ತಾನೆ ಅಂತ ಬೈಬಲ್‌ನಲ್ಲಿದೆ.ಯಾಕೋಬ 1:5 ಓದಿ.

7. ನಿಮ್ಮ ಪ್ರಾರ್ಥನೆಗೆ ಯೆಹೋವ ಕೊಡೋ ಉತ್ರ ತಿಳ್ಕೊಳ್ಳೋಕೆ ಏನು ಮಾಡಬೇಕು? ಉದಾಹರಣೆ ಕೊಡಿ.

7 ಯೆಹೋವನಿಗೆ ಪ್ರಾರ್ಥನೆ ಮಾಡಿದ ಮೇಲೆ ಹೇಗೆ ಉತ್ರ ಕೊಡ್ತಾನೆ ಅಂತ ಗಮನಿಸಿ. ಉದಾಹರಣೆಗೆ, ನೀವೊಂದು ಊರಿಗೆ ಹೋಗ್ತಿರ ಅಂದ್ಕೊಳಿ, ಆದ್ರೆ ಅಡ್ರೆಸ್‌ ಕಳ್ಕೊಂಡು ಬಿಟ್ಟಿದ್ದೀರ. ಆಗ ಒಬ್ಬ ವ್ಯಕ್ತಿ ಹತ್ರ ದಾರಿ ಕೇಳ್ತೀರ. ಆ ವ್ಯಕ್ತಿ ಉತ್ರ ಹೇಳೋ ಮುಂಚೆನೇ ನೀವು ಅಲ್ಲಿಂದ ಹೋಗಿ ಬಿಡಲ್ಲ ಅಲ್ವಾ? ಆ ವ್ಯಕ್ತಿ ಹೇಳುವಾಗ ಗಮನ ಕೊಟ್ಟು ಕೇಳಿಸ್ಕೊಳ್ತೀರ ತಾನೇ? ಅದೇ ತರನೇ ನಿಮ್ಮ ಪ್ರಾರ್ಥನೆಗೆ ಯೆಹೋವ ದೇವರು ಯಾವ ಉತ್ರ ಕೊಡ್ತಾನೆ ಅಂತ ತಿಳ್ಕೊಳ್ಳೋಕೆ ಬೈಬಲಲ್ಲಿರೋ ನೀತಿನಿಯಮಗಳನ್ನ, ಆಜ್ಞೆಗಳನ್ನ ಹುಡುಕಬೇಕು. ಇದನ್ನ ಹೇಗೆ ಮಾಡೋದು? ಉದಾಹರಣೆಗೆ ಪಾರ್ಟಿಗೆ ಹೋಗೋ ವಿಷ್ಯನೇ ತಗೊಳಿ. ಮೋಜುಮಸ್ತಿ ಮಾಡೋ ಪಾರ್ಟಿಗಳ ಬಗ್ಗೆ, ಕೆಟ್ಟ ಸಹವಾಸದ ಬಗ್ಗೆ, ನಮ್ಮ ಆಸೆಗಳಿಗಿಂತ ದೇವರ ಆಳ್ವಿಕೆಗೆ ಮೊದಲ ಸ್ಥಾನ ಕೊಡೋದ್ರ ಬಗ್ಗೆ ಬೈಬಲ್‌ ಏನೆಲ್ಲ ಹೇಳುತ್ತೆ ಅಂತ ಹುಡುಕಿ ತಿಳ್ಕೊಳಿ.—ಮತ್ತಾ. 6:33; ರೋಮ. 13:13; 1 ಕೊರಿಂ. 15:33.

8. ಯೆಹೋವನ ಯೋಚ್ನೆನ ತಿಳ್ಕೊಳ್ಳೋಕೆ ನಿಮಗೆ ಬೇರೆ ಯಾವ ಸಹಾಯ ಇದೆ? (ಚಿತ್ರ ನೋಡಿ.)

8 ಕೆಲವು ಸಲ ಯೆಹೋವನ ಯೋಚ್ನೆ ಏನಂತ ತಿಳ್ಕೊಳ್ಳೋಕೆ ನಮಗೆ ಬೇರೆಯವ್ರ ಸಹಾಯನೂ ಬೇಕಾಗಬಹುದು. ಅದಕ್ಕೆ ಅನುಭವ ಇರೋ ಸಹೋದರ ಸಹೋದರಿಯರನ್ನ ಕೇಳಬಹುದು. ಆದ್ರೆ ನಾವೇ ಸ್ವಂತವಾಗಿ ಸಂಶೋಧನೆ ಮಾಡಿದ್ರೆ ನಮಗೆ ಜಾಸ್ತಿ ಪ್ರಯೋಜನ ಆಗುತ್ತೆ. ಉದಾಹರಣೆಗೆ, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ ಮತ್ತು ಬಾಳಿಗೆ ಬೆಳಕಾಗೋ ಬೈಬಲ್‌ ವಚನಗಳು ಅನ್ನೋ ಪುಸ್ತಕಗಳಲ್ಲಿ ನಮಗೆ ಸಹಾಯ ಮಾಡೋ ಸಾವಿರಾರು ವಿಷ್ಯಗಳಿವೆ. ನಾವು ಯಾರ ಹತ್ರನೇ ಸಹಾಯ ಪಡ್ಕೊಳ್ಳಲಿ ಎಲ್ಲೇ ಹುಡುಕಲಿ ನಮ್ಮ ಗುರಿ ಯೆಹೋವನ ಮನಸ್ಸನ್ನ ಖುಷಿಪಡಿಸೋ ತರ ನಿರ್ಧಾರ ಮಾಡೋದೇ ಅನ್ನೋದನ್ನ ಮನಸ್ಸಲ್ಲಿಡಬೇಕು.

ಯೆಹೋವನ ಯೋಚ್ನೆ ಏನಂತ ತಿಳ್ಕೊಳ್ಳಿ (ಪ್ಯಾರ 8 ನೋಡಿ) b


9. ನಾವು ಮಾಡೋ ನಿರ್ಧಾರ ಯೆಹೋವನಿಗೆ ಇಷ್ಟ ಆಗುತ್ತಾ ಇಲ್ವಾ ಅಂತ ನಮಗೆ ಹೇಗೆ ಗೊತ್ತಾಗುತ್ತೆ? (ಎಫೆಸ 5:17)

9 ನಾನು ಮಾಡ್ತಿರೋ ನಿರ್ಧಾರ ಯೆಹೋವನಿಗೆ ಇಷ್ಟ ಆಗ್ತಿದ್ಯಾ ಇಲ್ವಾ ಅಂತ ಹೇಗೆ ಅರ್ಥ ಮಾಡ್ಕೊಳ್ಳೋದು? ಇದಕ್ಕಾಗಿ ನಾವು ಮೊದ್ಲು ಯೆಹೋವನ ಬಗ್ಗೆ ತಿಳ್ಕೊಬೇಕು. “ಅತಿ ಪವಿತ್ರನಾದ ದೇವರ ಜ್ಞಾನನೇ ವಿವೇಚನೆ” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋ. 9:10) ಅಂಥ ವಿವೇಚನೆ ಬೇಕಾದ್ರೆ ದೇವರಲ್ಲಿ ಯಾವ ಗುಣಗಳಿವೆ, ಆತನ ಉದ್ದೇಶ ಏನು, ಆತನಿಗೆ ಏನಿಷ್ಟ, ಏನಿಷ್ಟ ಇಲ್ಲ ಅಂತೆಲ್ಲ ನಾವು ತಿಳ್ಕೊಬೇಕು. ಆಮೇಲೆ, “ನನ್ನ ಫ್ರೆಂಡಾಗಿರೋ ಯೆಹೋವನಿಗೆ ನಾನು ಈ ನಿರ್ಧಾರ ತಗೊಂಡ್ರೆ ಇಷ್ಟ ಆಗುತ್ತಾ ಇಷ್ಟ ಆಗಲ್ವಾ?” ಅಂತ ಕೇಳ್ಕೊಬೇಕು.ಎಫೆಸ 5:17 ಓದಿ.

10. ನಮ್ಮವರು ಹೇಳೋ ತರ ನಡ್ಕೊಳೋದಕ್ಕಿಂತ ಯೆಹೋವ ಹೇಳೋ ತರ ನಡ್ಕೊಳೋದೇ ಯಾಕೆ ಮುಖ್ಯ?

10 ‘ನಾವು ಒಂದನ್ನ ಪಡ್ಕೊಬೇಕಾದ್ರೆ ಇನ್ನೊಂದನ್ನ ಕಳ್ಕೊಬೇಕಾಗುತ್ತೆ’ ಅನ್ನೋ ಮಾತಿನ ತರ ಯೆಹೋವನನ್ನ ಖುಷಿಪಡಿಸೋಕೆ ಕೆಲವೊಮ್ಮೆ ನಾವು ನಮ್ಮವರಿಗೇ ಬೇಜಾರು ಮಾಡಬೇಕಾಗುತ್ತೆ. ಉದಾಹರಣೆಗೆ, ಮದ್ವೆ ವಯಸ್ಸಿಗೆ ಬಂದಿರೋ ಮಗಳಿಗೆ ಅಪ್ಪಅಮ್ಮ ‘ಶ್ರೀಮಂತ ಹುಡುಗನನ್ನ ಮದುವೆ ಆಗು’ ಅಂತ ಹೇಳಬಹುದು. ಹುಡುಗನಿಗೆ ಯೆಹೋವನ ಜೊತೆ ಒಳ್ಳೆ ಸಂಬಂಧ ಇಲ್ಲ ಅಂದ್ರೂ ‘ಹಣ ಇರೋನಿಗೆ ಕೊಟ್ರೆ ಮಗಳ ಜೀವನ ಸೆಟೆಲ್‌ ಆಗುತ್ತೆ’ ಅಂತ ಅವರು ಅಂದ್ಕೊಳ್ಳಬಹುದು. ಆದ್ರೆ ಹುಡುಗಿ ಏನು ಮಾಡಬೇಕು? ಅವಳು, ‘ಈ ವ್ಯಕ್ತಿ ಯೆಹೋವನ ಜೊತೆ ನನಗಿರೋ ಸಂಬಂಧನ ನಿಜವಾಗ್ಲೂ ಬಲಪಡಿಸ್ತಾನಾ? ನಾನು ಯಾವ ನಿರ್ಧಾರ ಮಾಡಿದ್ರೆ ಯೆಹೋವ ದೇವರಿಗೆ ಖುಷಿ ಆಗುತ್ತೆ?’ ಅಂತ ಕೇಳ್ಕೊಬೇಕು. ಇದಕ್ಕೆ ಉತ್ರ ಮತ್ತಾಯ 6:33ರಲ್ಲಿದೆ. ಅಲ್ಲಿ ಎಲ್ಲ ಕ್ರೈಸ್ತರು ‘ಜೀವನದಲ್ಲಿ ದೇವರ ಆಳ್ವಿಕೆಗೆ . . . ಯಾವಾಗ್ಲೂ ಮೊದಲ ಸ್ಥಾನ ಕೊಡಬೇಕು’ ಅಂತ ಹೇಳುತ್ತೆ. ನಾವು ನಮ್ಮ ಅಪ್ಪಅಮ್ಮನಿಗೆ, ಸ್ನೇಹಿತರಿಗೆ ತುಂಬ ಬೆಲೆ ಕೊಡೋದಾದ್ರೂ ಯೆಹೋವನನ್ನ ಖುಷಿ ಪಡಿಸೋದೆ ನಮ್ಮ ಜೀವನದಲ್ಲಿ ಮುಖ್ಯ ಆಗಿರಬೇಕು.

ಆಯ್ಕೆಗಳನ್ನೆಲ್ಲ ತೂಗಿ ನೋಡಬೇಕು

11. ಆಯ್ಕೆಗಳನ್ನ ತೂಗಿ ನೋಡೋಕೆ ಯಾವ ಗುಣ ಸಹಾಯ ಮಾಡುತ್ತೆ? (ಫಿಲಿಪ್ಪಿ 1:9, 10)

11 ಎಲ್ಲ ನೀತಿನಿಯಮಗಳನ್ನ ನೋಡಿದ ಮೇಲೆ ನಿಮಗಿರೋ ಆಯ್ಕೆಗಳನ್ನ ತೂಗಿ ನೋಡಬೇಕು. (ಫಿಲಿಪ್ಪಿ 1:9, 10 ಓದಿ.) ಯಾವ ಆಯ್ಕೆ ಮಾಡಿದ್ರೆ ಏನಾಗುತ್ತೆ ಅಂತ ತಿಳ್ಕೊಳ್ಳೋಕೆ ವಿವೇಚನೆ ನಿಮಗೆ ಸಹಾಯ ಮಾಡುತ್ತೆ. ಒಂದೊಂದು ಸಲ ಈ ತರ ತಿಳ್ಕೊಳ್ಳೋದು ತುಂಬ ಸುಲಭ. ಆದ್ರೆ ಇನ್ನೂ ಕೆಲವು ಸಲ ಕಷ್ಟ. ಅಂಥ ಸನ್ನಿವೇಶದಲ್ಲಿ ಸರಿ ಯಾವುದು ಅಂತ ತಿಳ್ಕೊಂಡು ನಿರ್ಧಾರ ಮಾಡೋಕೆ ವಿವೇಚನೆ ಸಹಾಯ ಮಾಡುತ್ತೆ.

12-13. ವಿವೇಚನೆ ಬಳಸಿ ಸರಿಯಾಗಿರೋ ಕೆಲ್ಸನ ಹೇಗೆ ಆಯ್ಕೆ ಮಾಡೋದು?

12 ಉದಾಹರಣೆಗೆ ನೀವು ಕುಟುಂಬ ನೋಡ್ಕೊಳ್ಳೋಕೆ ಒಂದು ಕೆಲ್ಸ ಹುಡುಕ್ತಿದ್ದೀರ ಅಂತ ಅಂದ್ಕೊಳ್ಳಿ. ನಿಮಗೆ ಎರಡು ಕೆಲ್ಸ ಸಿಕ್ಕಿದೆ. ಈ ಎರಡೂ ಕೆಲ್ಸದ ಬಗ್ಗೆ ನೀವು ಎಲ್ಲ ವಿಷ್ಯಗಳನ್ನ ತಿಳ್ಕೊಳ್ತೀರ. ಯಾವ ತರದ ಕೆಲ್ಸ ಇದು? ಕೆಲ್ಸ ಎಷ್ಟೊತ್ತು ಇರುತ್ತೆ? ಕೆಲ್ಸಕ್ಕೆ ಎಷ್ಟು ದೂರ ಹೋಗಬೇಕು ಅಂತೆಲ್ಲ ತಿಳ್ಕೊಳ್ತೀರ. ಈ ಎರಡೂ ಕೆಲ್ಸಗಳು ಬೈಬಲ್‌ ಪ್ರಕಾರ ತಪ್ಪಲ್ಲ ಅಂತ ನಿಮಗೆ ಗೊತ್ತಾಯ್ತು. ಆದ್ರೆ ಈ ಎರಡರಲ್ಲಿ ನಿಮಗೆ ಒಂದು ಕೆಲ್ಸ ಇಷ್ಟ ಆಗುತ್ತೆ. ಅಲ್ಲಿ ಕೆಲ್ಸನೂ ಚೆನ್ನಾಗಿದೆ, ಸಂಬಳನೂ ಜಾಸ್ತಿ ಇದೆ. ‘ಇಷ್ಟಾದ್ರೆ ಸಾಕಪ್ಪ’ ಅಂತ ನೀವು ಆ ಕೆಲ್ಸ ಆಯ್ಕೆ ಮಾಡಿಬಿಡಬಹುದಾ? ಇಲ್ಲ, ನೀವು ಕೊನೆ ನಿರ್ಧಾರ ಮಾಡೋ ಮುಂಚೆ ಗಮನಿಸಬೇಕಾಗಿರೋ ಇನ್ನೂ ಕೆಲವು ವಿಷ್ಯಗಳಿವೆ.

13 ಉದಾಹರಣೆಗೆ, ಈ ಕೆಲ್ಸ ಮಾಡಿದ್ರೆ ಮೀಟಿಂಗ್‌ ಹೋಗೋಕೆ ಕಷ್ಟ ಆಗುತ್ತಾ? ಕುಟುಂಬಕ್ಕೆ ಸಮಯ ಕೊಡೋಕಾಗುತ್ತಾ? ಅವ್ರಿಗೆ ಯೆಹೋವನ ಬಗ್ಗೆ ಕಲಿಸೋಕೆ ಆಗುತ್ತಾ? ಅಂತ ಕೇಳ್ಕೊಬೇಕು. ಈ ಪ್ರಶ್ನೆಗಳನ್ನ ಕೇಳ್ಕೊಂಡ್ರೆ ಹಣಕ್ಕಿಂತ ‘ತುಂಬ ಮುಖ್ಯವಾದ ವಿಷ್ಯಕ್ಕೆ’ ಅಂದ್ರೆ ಆರಾಧನೆಗೆ, ಕುಟುಂಬಕ್ಕೆ ಸಮಯ ಕೊಡೋಕೆ ಆಗುತ್ತೆ. ಇದನ್ನೆಲ್ಲ ಮನಸ್ಸಲ್ಲಿಟ್ಟು ನಿರ್ಧಾರ ಮಾಡಿದ್ರೆ ಯೆಹೋವ ದೇವರಿಗೂ ಇಷ್ಟ ಆಗುತ್ತೆ, ಅದನ್ನ ಖಂಡಿತ ಆಶೀರ್ವದಿಸ್ತಾನೆ.

14. ಬೇರೆಯವ್ರನ್ನ ಎಡವಿಸದೇ ಇರೋಕೆ ವಿವೇಚನೆ ಮತ್ತು ಪ್ರೀತಿ ಹೇಗೆ ಸಹಾಯ ಮಾಡುತ್ತೆ?

14 ನಾವೊಂದು ನಿರ್ಧಾರ ಮಾಡೋ ಮುಂಚೆ ಬೇರೆಯವ್ರಿಗೆ ಅದ್ರ ಬಗ್ಗೆ ಹೇಗನಿಸುತ್ತೆ ಅಂತ ಯೋಚ್ನೆ ಮಾಡೋಕೂ ವಿವೇಚನೆ ಸಹಾಯ ಮಾಡುತ್ತೆ. ಹೀಗೆ ಮಾಡಿದ್ರೆ ನಾವು “ಯಾರನ್ನೂ ಎಡವಿಸಲ್ಲ.” (ಫಿಲಿ. 1:10) ನಾವು ಯಾವ ತರ ಬಟ್ಟೆ ಹಾಕಬೇಕು, ಯಾವ ಹೇರ್‌ ಸ್ಟೈಲ್‌ ಮಾಡಬೇಕು ಅನ್ನೋದು ನಮ್ಮ ವೈಯಕ್ತಿಕ ವಿಷ್ಯ ನಿಜ. ಆದ್ರೆ ಆಗ್ಲೂ ನಾವು ವಿವೇಚನೆ ತೋರಿಸಬೇಕು. ಉದಾಹರಣೆಗೆ, ನಮ್ಮ ಬಟ್ಟೆ, ಹೇರ್‌ ಸ್ಟೈಲ್‌ ತಪ್ಪಿಲ್ಲದೇ ಇರಬಹುದು, ಅದು ನಮಗಿಷ್ಟ ಇರಬಹುದು. ಆದ್ರೆ ಅದನ್ನ ನೋಡಿದಾಗ ನಮ್ಮ ಸಭೆಯವ್ರಿಗೆ, ಬೇರೆಯವ್ರಿಗೆ ಒಂಥರಾ ಅನಿಸ್ತಿದ್ಯಾ? ಮುಜುಗರ ಆಗ್ತಿದ್ಯಾ? ನಮಗೆ ವಿವೇಚನೆ ಇದ್ರೆ ಬೇರೆಯವ್ರ ಭಾವನೆಗಳಿಗೆ ಬೆಲೆ ಕೊಡ್ತೀವಿ. ಪ್ರೀತಿ ಇದ್ರೆ ಬರೀ ನಮ್ಮ ಬಗ್ಗೆನೇ ಯೋಚಿಸದೇ ‘ಬೇರೆಯವ್ರ’ ಬಗ್ಗೆನೂ ಯೋಚಿಸ್ತೀವಿ. ಯಾರನ್ನೂ ಎಡವಿಸದೆ ಇರೋ ತರ ಬಟ್ಟೆ ಹಾಕ್ತೀವಿ. (1 ಕೊರಿಂ. 10:23, 24, 32; 1 ತಿಮೊ. 2:9, 10) ಹೀಗೆ ನಾವು ಎಲ್ರನ್ನ ತುಂಬ ಪ್ರೀತಿಸ್ತೀವಿ, ಗೌರವಿಸ್ತೀವಿ ಅಂತ ತೋರಿಸ್ಕೊಡ್ತೀವಿ.

15. ದೊಡ್ಡ ನಿರ್ಧಾರ ಮಾಡೋ ಮುಂಚೆ ಇನ್ನೂ ಏನು ಮಾಡಿದ್ರೆ ಚೆನ್ನಾಗಿರುತ್ತೆ?

15 ನೀವೊಂದು ದೊಡ್ಡ ನಿರ್ಧಾರ ಮಾಡ್ತಿರೋದಾದ್ರೆ ಅದ್ರ ಪ್ರಕಾರ ನಡ್ಕೊಳ್ಳೋಕೆ ಏನೆಲ್ಲ ಮಾಡಬೇಕು ಅಂತ ಯೋಚ್ನೆ ಮಾಡಿ. ಅದಕ್ಕೇ ಯೇಸು, ನಿರ್ಧಾರ ಮಾಡೋ ಮುಂಚೆ ಕೂತು ‘ಲೆಕ್ಕ ಹಾಕಬೇಕು’ ಅಂತ ಹೇಳಿದ್ದಾನೆ. (ಲೂಕ 14:28) ಹಾಗಾಗಿ ‘ಈ ನಿರ್ಧಾರದ ಪ್ರಕಾರ ನಡ್ಕೊಳ್ಳೋಕೆ ನಾನು ಎಷ್ಟು ಟೈಮ್‌ ಕೊಡಬೇಕು, ಎಷ್ಟೆಲ್ಲ ಹಣ ಖರ್ಚು ಮಾಡಬೇಕು, ಬೇರೆ ಏನೆಲ್ಲ ಮಾಡಬೇಕಾಗುತ್ತೆ’ ಅಂತ ಯೋಚ್ನೆ ಮಾಡಿ. ಇನ್ನು ಕೆಲವು ಸಲ ನಿಮ್ಮ ಕುಟುಂಬದವ್ರ ಹತ್ರನೂ ಅದ್ರ ಬಗ್ಗೆ ಮಾತಾಡಬೇಕಾಗುತ್ತೆ. ಆಗ ಈ ನಿರ್ಧಾರದ ಪ್ರಕಾರ ನಡ್ಕೊಳ್ಳೋಕೆ ಅವ್ರ ಸಹಾಯನೂ ಕೇಳಿ. ಇದನ್ನೆಲ್ಲ ಯೋಚ್ನೆ ಮಾಡೋದ್ರಿಂದ ಏನು ಪ್ರಯೋಜನ ಗೊತ್ತಾ? ನಿಮ್ಮ ನಿರ್ಧಾರದಲ್ಲಿ ಇನ್ನೂ ಏನಾದ್ರೂ ಬದಲಾವಣೆ ಮಾಡ್ಕೊಬೇಕಾ ಅಥವಾ ನಿಮ್ಮ ನಿರ್ಧಾರನೇ ಬದಲಾಯಿಸಬೇಕಾ ಅಂತ ಗೊತ್ತಾಗುತ್ತೆ. ಜೊತೆಗೆ, ನಿಮ್ಮ ಕುಟುಂಬದವ್ರ ಹತ್ರ ಮಾತಾಡಿದಾಗ ಮತ್ತು ಅವರು ಕೊಡೋ ಸಲಹೆಗಳಿಗೆ ನೀವು ಬೆಲೆ ಕೊಟ್ಟಾಗ ನಿಮ್ಮ ನಿರ್ಧಾರದ ಪ್ರಕಾರ ನಡ್ಕೊಳ್ಳೋಕೆ ಅವ್ರೂ ಕೈಲಾದ ಸಹಾಯ ಮಾಡ್ತಾರೆ.—ಜ್ಞಾನೋ. 15:22.

ಯೆಹೋವ ಇಷ್ಟಪಡೋ ನಿರ್ಧಾರ ಮಾಡಿ

16. ನಮ್ಮ ನಿರ್ಧಾರನ ಆಶೀರ್ವದಿಸು ಅಂತ ಪ್ರಾರ್ಥಿಸೋ ಮುಂಚೆ ನಾವು ಏನು ಮಾಡಿರಬೇಕು? (“ ಯೆಹೋವನಿಗೆ ಇಷ್ಟ ಆಗೋ ನಿರ್ಧಾರ ಮಾಡೋಕೆ . . . ” ಅನ್ನೋ ಚೌಕ ನೋಡಿ.)

16 ಈ ಲೇಖನದಲ್ಲಿ ಹೇಳಿರೋ ಎಲ್ಲ ಹೆಜ್ಜೆಗಳನ್ನ ನೀವು ತಗೊಂಡಿದ್ರೆ ವಿವೇಕದಿಂದ ಒಂದೊಳ್ಳೆ ನಿರ್ಧಾರ ಮಾಡೋಕೆ ರೆಡಿಯಾಗಿದ್ದೀರ ಅಂತ ಅರ್ಥ. ಯಾಕಂದ್ರೆ ಈ ನಿರ್ಧಾರ ಮಾಡೋದಕ್ಕೆ ಮೊದ್ಲೇ ನೀವು ಎಲ್ಲ ವಿಷ್ಯಗಳನ್ನ ತಿಳ್ಕೊಂಡ್ರಿ, ಬೈಬಲಲ್ಲಿರೋ ನೀತಿನಿಯಮಗಳನ್ನ ಹುಡುಕಿ ನೋಡಿದ್ರಿ. ಹಾಗಾಗಿ ಈಗ ನೀವು ‘ನನ್ನ ನಿರ್ಧಾರನ ಆಶೀರ್ವದಿಸಪ್ಪಾ’ ಅಂತ ಯೆಹೋವನ ಹತ್ರ ಕೇಳಿದ್ರೆ ಆತನು ಖಂಡಿತ ಉತ್ರ ಕೊಡ್ತಾನೆ.

17. ನಾವು ಸರಿಯಾಗಿರೋ ನಿರ್ಧಾರ ಮಾಡೋಕೆ ಏನು ಮಾಡಬೇಕು?

17 ನಿಮ್ಮ ಜೀವನದಲ್ಲಿ ನೀವು ತುಂಬ ಒಳ್ಳೇ ನಿರ್ಧಾರಗಳನ್ನ ಮಾಡಿರಬಹುದು. ಆದ್ರೆ ನೆನಪಿಡಿ, ನೀವು ನಿಮ್ಮ ಅನುಭವದ ಮೇಲೆ, ಜ್ಞಾನದ ಮೇಲೆ ಭರವಸೆ ಇಡದೆ ಯೆಹೋವನ ಸಹಾಯ ಕೇಳಿದ್ರೆ ಒಳ್ಳೇ ನಿರ್ಧಾರ ಮಾಡ್ತೀರ. ಯಾಕಂದ್ರೆ ಯೆಹೋವ ಮಾತ್ರ ನಿಜವಾದ ಜ್ಞಾನ, ತಿಳುವಳಿಕೆ, ವಿವೇಚನೆಯನ್ನ ಕೊಡ್ತಾನೆ. ಇದ್ರಿಂದ ನಮಗೆ ವಿವೇಕ ಸಿಗುತ್ತೆ. (ಜ್ಞಾನೋ. 2:1-5) ಈ ವಿವೇಕದಿಂದ ನಾವು ಸರಿಯಾದ ನಿರ್ಧಾರ ಮಾಡ್ತೀವಿ, ಯೆಹೋವನ ಮನಸ್ಸನ್ನೂ ಖುಷಿ ಪಡಿಸ್ತೀವಿ.—ಕೀರ್ತ. 23:2, 3.

ಗೀತೆ 28 ಯೆಹೋವನ ಸ್ನೇಹವನ್ನು ಗಳಿಸೋಣ

a ಚಿತ್ರ ವಿವರಣೆ: ‘ಪಾರ್ಟಿಗೆ ಬನ್ನಿ’ ಅಂತ ಬಂದಿರೋ ಇನ್ವಿಟೇಷನ್‌ ಬಗ್ಗೆ ಯುವ ಸಹೋದರ ಸಹೋದರಿಯರು ಮಾತಾಡ್ತಿದ್ದಾರೆ.

b ಚಿತ್ರ ವಿವರಣೆ: ಪಾರ್ಟಿಗೆ ಹೋಗಬೇಕಾ ಬೇಡ್ವಾ ಅಂತ ನಿರ್ಧಾರ ಮಾಡೋಕೆ ಒಬ್ಬ ಸಹೋದರ ಸಂಶೋಧನೆ ಮಾಡ್ತಿದ್ದಾನೆ.