ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 4

ಗೀತೆ 18 ವಿಮೋಚನಾ ಬಲಿಗಾಗಿ ಚಿರಋಣಿ!

ಪ್ರೀತಿ ನ್ಯಾಯಕ್ಕೆ ಸಾಕ್ಷಿಯಾದ ಬಿಡುಗಡೆ ಬೆಲೆ

ಪ್ರೀತಿ ನ್ಯಾಯಕ್ಕೆ ಸಾಕ್ಷಿಯಾದ ಬಿಡುಗಡೆ ಬೆಲೆ

“ನಮ್ಮ ಮೇಲೆ ಎಷ್ಟು ಪ್ರೀತಿ ಇದೆ ಅಂತ ತೋರಿಸಿದ್ದಾನೆ.”1 ಯೋಹಾ. 4:9.

ಈ ಲೇಖನದಲ್ಲಿ ಏನಿದೆ?

ಬಿಡುಗಡೆ ಬೆಲೆ ಯೆಹೋವ ಮತ್ತು ಯೇಸುವಿನಲ್ಲಿರೋ ಸೊಗಸಾದ ಗುಣಗಳನ್ನ ಕಲಿಸುತ್ತೆ. ಅವು ಯಾವುದು ಅಂತ ನೋಡೋಣ.

1. ಪ್ರತಿವರ್ಷ ಕ್ರಿಸ್ತನ ಮರಣದ ಸ್ಮರಣೆಗೆ ಹಾಜರಾಗೋದು ಯಾಕೆ ಮುಖ್ಯ?

 ಬಿಡುಗಡೆ ಬೆಲೆ ನಿಜವಾಗ್ಲೂ ಬೆಲೆಕಟ್ಟಲಾಗದ ಉಡುಗೊರೆ! (2 ಕೊರಿಂ. 9:15) ಯಾಕಂದ್ರೆ ಅದಕ್ಕಾಗಿ ಯೇಸು ನಮಗೋಸ್ಕರ ಪ್ರಾಣನೇ ಕೊಡಬೇಕಾಯ್ತು. ಇದ್ರಿಂದ ಸರ್ವಶಕ್ತನಾಗಿರೋ ಯೆಹೋವನ ಜೊತೆ ನಾವೆಲ್ರೂ ಫ್ರೆಂಡ್‌ ಆಗೋ ಅವಕಾಶ ಸಿಕ್ತು. ಅಷ್ಟೇ ಅಲ್ಲ ಶಾಶ್ವತವಾಗಿ ಜೀವಿಸೋ ದಾರಿನೂ ತೆರೀತು. ಈ ಬಿಡುಗಡೆ ಬೆಲೆಯ ಹಿಂದಿರೋ ಕಾರಣ ಯೆಹೋವನ ಅಪಾರ ಪ್ರೀತಿನೇ! (ರೋಮ. 5:8) ಹಾಗಾಗಿ ನಾವು ಆತನಿಗೆ ಪ್ರತಿಕ್ಷಣ ಋಣಿಗಳಾಗಿರಬೇಕು. ನಾವು ಹೀಗೆ ಋಣಿಯಾಗಿರಬೇಕು, ಬಿಡುಗಡೆ ಬೆಲೆನ ಹಗುರವಾಗಿ ತಗೋಬಾರದು ಅನ್ನೋದೇ ಯೇಸುವಿನ ಮನದಾಳದ ಆಸೆ. ಈ ಕಾರಣಕ್ಕಾಗಿನೇ ನಾವು ಪ್ರತಿವರ್ಷ ಕ್ರಿಸ್ತನ ಮರಣದ ಸ್ಮರಣೆ ಮಾಡಬೇಕು ಅನ್ನೋ ಆಜ್ಞೆನ ಯೇಸು ಕೊಟ್ಟಿದ್ದಾನೆ.—ಲೂಕ 22:19, 20.

2. ಈ ಲೇಖನದಲ್ಲಿ ಏನು ಕಲಿತೀವಿ?

2 ಈ ವರ್ಷ ಸ್ಮರಣೆ ಶನಿವಾರ, ಏಪ್ರಿಲ್‌ 12, 2025ರಂದು ನಡೆಯುತ್ತೆ. ಈಗಾಗ್ಲೇ ನೀವು ಅಲ್ಲಿಗೆ ಬರೋಕೆ ಪ್ಲಾನ್‌ ಮಾಡ್ತಿದ್ದೀರ ಅಂತ ನಮಗೆ ಚೆನ್ನಾಗಿ ಗೊತ್ತು. ಆದ್ರೆ ಇಲ್ಲಿವರೆಗೂ ಯೆಹೋವ ಮತ್ತು ಯೇಸು ನಮಗೋಸ್ಕರ ಏನು ಮಾಡಿದ್ದಾರೆ ಅಂತ ಸ್ಮರಣೆ ಮುಂಚೆ ಮತ್ತು ಆದ್ಮೇಲೆ ಯೋಚ್ನೆ ಮಾಡೋಕೆ ದಯವಿಟ್ಟು ಸಮಯ ಮಾಡ್ಕೊಳ್ಳಿ. ಆಗ ಅದ್ರಿಂದ ನಿಮ್ಗೆ ಇನ್ನೂ ಜಾಸ್ತಿ ಪ್ರಯೋಜನ ಸಿಗುತ್ತೆ. ಈ ಲೇಖನದಲ್ಲಿ, ಬಿಡುಗಡೆ ಬೆಲೆಯಿಂದ ಯೆಹೋವನ ಬಗ್ಗೆ ಮತ್ತು ಯೇಸು ಬಗ್ಗೆ ನಮಗೆ ಏನು ಗೊತ್ತಾಗುತ್ತೆ ಅಂತ ಕಲಿತೀವಿ. ಮುಂದಿನ ಲೇಖನದಲ್ಲಿ, ಬಿಡುಗಡೆ ಬೆಲೆಯಿಂದ ನಮಗೇನು ಪ್ರಯೋಜನ ಇದೆ? ಅಷ್ಟೇ ಅಲ್ಲ ಅದಕ್ಕೆ ಋಣಿಯಾಗಿರೋಕೆ ನಾವು ಏನು ಮಾಡಬೇಕು ಅಂತಾನೂ ಕಲಿತೀವಿ.

ಯೆಹೋವನ ಬಗ್ಗೆ ಏನು ಕಲಿಸುತ್ತೆ?

3. ಒಬ್ಬ ವ್ಯಕ್ತಿಯ ಸಾವಿಂದ ಕೋಟ್ಯಾಂತರ ಜನ್ರಿಗೆ ಹೇಗೆ ಬಿಡುಗಡೆ ಸಿಗುತ್ತೆ? (ಚಿತ್ರ ನೋಡಿ.)

3 ಬಿಡುಗಡೆ ಬೆಲೆ ಯೆಹೋವನ ನ್ಯಾಯವನ್ನ ಎತ್ತಿ ತೋರಿಸುತ್ತೆ. (ಧರ್ಮೋ. 32:4) ಅದನ್ನ ಹೇಗೆ ಹೇಳಬಹುದು? ಉದಾಹರಣೆಗೆ ನೀವೇ ಯೋಚ್ನೆ ಮಾಡಿ, ಆದಾಮ ಮಾತು ಕೇಳದೆ ಇದ್ದಿದ್ರಿಂದ ನಮ್ಮೆಲ್ರಿಗೂ ಪಾಪ ಮತ್ತು ಸಾವು ಬಂತು. (ರೋಮ. 5:12) ಅದ್ರಿಂದ ಯೆಹೋವ ನಮ್ಮೆಲ್ರನ್ನೂ ಬಿಡಿಸೋಕೆ ಯೇಸುನ ಕೊಟ್ಟು ಬಿಡುಗಡೆ ಬೆಲೆಯ ಏರ್ಪಾಡನ್ನ ಮಾಡಿದನು. ಆದ್ರೆ ಒಬ್ಬ ಪರಿಪೂರ್ಣ ವ್ಯಕ್ತಿ ಕೋಟ್ಯಾಂತರ ಜನ್ರನ್ನ ಪಾಪ ಮತ್ತು ಸಾವಿಂದ ಹೇಗೆ ಬಿಡಿಸೋಕೆ ಆಗುತ್ತೆ? ಇದ್ರ ಬಗ್ಗೆ ಪೌಲ, “ಒಬ್ಬ [ಆದಾಮ] ಮಾತು ಕೇಳದೆ ಇದ್ದಿದ್ರಿಂದ ತುಂಬ ಜನ ಪಾಪಿಗಳಾದ್ರು. ಹಾಗೇ ಒಬ್ಬ [ಯೇಸು] ಮಾತು ಕೇಳಿದ್ರಿಂದ ತುಂಬ ಜನ ನೀತಿವಂತರು ಆಗ್ತಾರೆ” ಅಂತ ಹೇಳಿದ. (ರೋಮ. 5:19; 1 ತಿಮೊ. 2:6) ಒಬ್ಬ ಪರಿಪೂರ್ಣ ವ್ಯಕ್ತಿ ದೇವರ ಮಾತನ್ನ ಕೇಳದೆ ಇದ್ದಿದ್ರಿಂದ ನಮ್ಮೆಲ್ರಿಗೂ ಪಾಪ ಮತ್ತು ಸಾವು ಬಂದ ತರನೇ ಒಬ್ಬ ಪರಿಪೂರ್ಣ ವ್ಯಕ್ತಿ ದೇವರ ಮಾತನ್ನ ಕೇಳಿದ್ರಿಂದ ನಮ್ಮೆಲ್ರಿಗೂ ಬಿಡುಗಡೆ ಸಿಕ್ತು.

ಒಬ್ಬ ಮನುಷ್ಯನಿಂದ ಎಲ್ರಿಗೂ ಪಾಪ, ಸಾವು ಬಂತು. ಇನ್ನೊಬ್ಬನಿಂದ ಬಿಡುಗಡೆ ಸಿಕ್ತು (ಪ್ಯಾರ 3 ನೋಡಿ)


4. ಆದಾಮನ ಮಕ್ಕಳಲ್ಲಿ ನಿಯತ್ತಾಗಿ ಇದ್ದವ್ರಿಗಾದ್ರೂ ಆಗ್ಲೇ ಯೆಹೋವ ಶಾಶ್ವತ ಜೀವ ಯಾಕೆ ಕೊಡ್ಲಿಲ್ಲ?

4 ‘ನಮ್ಮನ್ನ ಕಾಪಾಡೋಕೆ ಯೇಸು ನಿಜವಾಗ್ಲೂ ಸಾಯಬೇಕಿತ್ತಾ? ಆದಾಮ ಪಾಪ ಮಾಡಿ ಸತ್ರೂ ಅವನ ಮಕ್ಕಳಲ್ಲಿ ನಿಯತ್ತಾಗಿ ಇದ್ದವ್ರಿಗಾದ್ರೂ ಆಗ್ಲೇ ಶಾಶ್ವತ ಜೀವ ಕೊಡಬಹುದಿತ್ತಲ್ಲಾ? ಇಷ್ಟು ಮಾಡಿದ್ರೆ ಎಲ್ಲಾ ಸರಿ ಆಗಿ ಬಿಡ್ತಿತ್ತು’ ಅಂತ ನಮಗೆ ಅನಿಸಬಹುದು. ಆದ್ರೆ ಯೆಹೋವನ ದೃಷ್ಟಿಯಲ್ಲಿ ಅದು ನ್ಯಾಯ ಅಲ್ಲ. ಯಾಕಂದ್ರೆ, ಒಂದುವೇಳೆ ಯೆಹೋವ ಹಾಗೆ ಮಾಡಿಬಿಟ್ಟಿದ್ದಿದ್ರೆ ಆದಾಮ ತಪ್ಪೇ ಮಾಡ್ಲಿಲ್ಲ, ಅವನ ಮಕ್ಕಳು ಪಾಪಿಗಳೇ ಅಲ್ಲ ಅನ್ನೋ ತರ ಆಗ್ತಿತ್ತು. ಆದ್ರೆ ಅದು ನಿಜ ಅಲ್ಲ ಅಲ್ವಾ?

5. ಯೆಹೋವ ಯಾವಾಗ್ಲೂ ನ್ಯಾಯವಾಗೇ ನಡ್ಕೊಳ್ತಾನೆ ಅಂತ ನಾವು ಯಾಕೆ ಗ್ಯಾರಂಟಿ ಆಗಿ ಹೇಳಬಹುದು?

5 ಒಂದುವೇಳೆ ಜನ ಹೇಳೋ ತರಾನೇ, ಯೆಹೋವ ನ್ಯಾಯನ ಪಕ್ಕಕ್ಕೆ ಇಟ್ಟು ಆದಾಮನ ಅಪರಿಪೂರ್ಣ ಮಕ್ಕಳಿಗೆ ಆಗ್ಲೇ ಶಾಶ್ವತ ಜೀವ ಕೊಟ್ಟು ಬಿಟ್ಟಿದ್ದಿದ್ರೆ ಏನಾಗ್ತಿತ್ತು? ‘ದೇವರು ಮುಂದೆನೂ ನ್ಯಾಯವಾಗಿ ನಡ್ಕೊಳ್ತಾನಾ? ಏನೇನೋ ಆಶೀರ್ವಾದ ಕೊಡ್ತೀನಿ ಅಂತ ನಮಗೆ ಮಾತು ಕೊಟ್ಟಿದ್ದಾನೆ. ಅದನ್ನೆಲ್ಲ ಮಾಡದೆ ಮಧ್ಯದಲ್ಲೇ ಕೈ ಎತ್ತಿಬಿಡ್ತಾನಾ?’ ಅಂತ ಜನ ಯಾವಾಗ್ಲೂ ದೇವರ ಬಗ್ಗೆ ಅನುಮಾನ ಪಡ್ತಿದ್ರು. ಆದ್ರೆ ಈಗ, ನಾವು ಆ ತರ ಅನುಮಾನ ಪಡೋ ಅವಶ್ಯಕತೆನೇ ಇಲ್ಲ. ಯಾಕಂದ್ರೆ ಯೆಹೋವ ಕೊಟ್ಟ ಮಾತನ್ನ ಯಾವತ್ತೂ ತಪ್ಪಲ್ಲ. ನ್ಯಾಯವಾಗಿ ನಡ್ಕೊಳ್ಳೋಕೆ ‘ಯಾವ ತ್ಯಾಗ ಬೇಕಾದ್ರೂ ಮಾಡ್ತೀನಿ’ ಅಂತ ಈಗಾಗ್ಲೇ ತೋರಿಸ್ಕೊಟ್ಟಿದ್ದಾನೆ. ಅದಕ್ಕೇ ಅಲ್ವಾ, ತನ್ನ ಒಬ್ಬನೇ ಮುದ್ದಿನ ಮಗನನ್ನ ನಮಗೋಸ್ಕರ ಕೊಟ್ಟಿದ್ದು. ಯೆಹೋವ ಯಾವಾಗ್ಲೂ ನ್ಯಾಯವಾಗೇ ನಡ್ಕೊಳ್ತಾನೆ ಮತ್ತು ಸರಿಯಾಗಿ ಇರೋದನ್ನೇ ಮಾಡ್ತಾನೆ ಅನ್ನೋದ್ರಲ್ಲಿ ಡೌಟೇ ಇಲ್ಲ.

6. ಬಿಡುಗಡೆ ಬೆಲೆಯಿಂದ ನಮಗೆ ಹೇಗೆ ಯೆಹೋವನ ಪ್ರೀತಿ ಬಗ್ಗೆನೂ ಗೊತ್ತಾಗುತ್ತೆ? (1 ಯೋಹಾನ 4:9, 10)

6 ಬಿಡುಗಡೆ ಬೆಲೆಯಿಂದ ಯೆಹೋವ ಎಷ್ಟು ನ್ಯಾಯವಂತ ದೇವರು ಅಂತ ನಾವು ಅರ್ಥ ಮಾಡ್ಕೊಂಡ್ವಿ. ಅದಷ್ಟೇ ಅಲ್ಲ ಯೆಹೋವನ ಪ್ರೀತಿ ಸಮುದ್ರದಷ್ಟು ಆಳವಾಗಿದೆ ಅಂತನೂ ಅದ್ರಿಂದ ಗೊತ್ತಾಗುತ್ತೆ. (ಯೋಹಾ. 3:16; 1 ಯೋಹಾನ 4:9, 10 ಓದಿ.) ಯೆಹೋವ ತನ್ನ ಒಬ್ಬನೇ ಮಗನನ್ನ ಕಳಿಸಿ ನಮಗೋಸ್ಕರ ಸಾಯೋಕೆ ಬಿಟ್ಟಿದ್ದು ನಾವು ಶಾಶ್ವತವಾಗಿ ಜೀವಿಸಬೇಕು ಅಂತ. ಅದಷ್ಟೇ ಅಲ್ಲ ನಮ್ಮಲ್ಲಿ ಪ್ರತಿಯೊಬ್ರೂ ಆತನ ಕುಟುಂಬದಲ್ಲಿ ಸೇರಬೇಕು ಅನ್ನೋದೇ ಯೆಹೋವನ ಆಸೆ ಅಂತ ತೋರಿಸ್ಕೊಟ್ಟನು. ಹೇಗೆ? ಆದಾಮ ಪಾಪ ಮಾಡಿದಾಗ ಯೆಹೋವ ಅವನನ್ನ ತನ್ನ ಕುಟುಂಬದಿಂದ ಹೊರಗೆ ಹಾಕಿಬಿಟ್ಟನು. ಇದ್ರಿಂದ, ನಾವ್ಯಾರೂ ಹುಟ್ತಾನೇ ಯೆಹೋವನ ಕುಟುಂಬದ ಭಾಗ ಆಗ್ಲಿಲ್ಲ! ಆದ್ರೆ ಆತನು ಬಿಡುಗಡೆ ಬೆಲೆ ಕೊಟ್ಟಿದ್ರಿಂದ ಆತನ ಮೇಲೆ ನಂಬಿಕೆ ಇಟ್ಟು ಆತನ ಮಾತು ಕೇಳೋ ಎಲ್ಲಾ ಜನ್ರನ್ನ ಮುಂದೆ ಒಂದಿನ ತನ್ನ ಕುಟುಂಬಕ್ಕೆ ಸೇರಿಸ್ಕೊಳ್ತಾನೆ. ಅಷ್ಟೇ ಅಲ್ಲಈಗಿಂದಾನೇ ಯೆಹೋವ ನಮ್ಮ ಪಾಪಗಳನ್ನ ಕ್ಷಮಿಸ್ತಿದ್ದಾನೆ. ಇದ್ರಿಂದ ನಾವು ಆತನ ಜೊತೆ, ನಮ್ಮ ಸಹೋದರ ಸಹೋದರಿಯರ ಜೊತೆ ಒಳ್ಳೆ ಸ್ನೇಹ ಸಂಬಂಧನ ಬೆಳೆಸ್ಕೊಬಹುದು. ಇದೆಲ್ಲ ನೋಡಿದ್ರೆ ಯೆಹೋವ ನಮ್ಮೇಲೆ ಪ್ರೀತಿಯ ಮಳೆನೇ ಸುರಿಸಿದ್ದಾನೆ ಅನಿಸಲ್ವಾ?—ರೋಮ. 5:10, 11.

7. ಯೆಹೋವನಿಗೆ ನಮ್ಮೇಲೆ ಎಷ್ಟು ಪ್ರೀತಿ ಇದೆ ಅಂತ ನಿಮಗೆ ಅನಿಸುತ್ತೆ?

7 ಬಿಡುಗಡೆ ಬೆಲೆ ಕೊಡೋಕೆ ಯೆಹೋವ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಆ ನೋವನ್ನ ಅರ್ಥ ಮಾಡ್ಕೊಂಡ್ರೆ ಯೆಹೋವ ನಮ್ಮನ್ನ ಎಷ್ಟು ಪ್ರೀತಿಸ್ತಾನೆ ಅಂತ ಗೊತ್ತಾಗುತ್ತೆ. ಕಷ್ಟ ಬಂದ್ರೆ ಯಾವ ಮನುಷ್ಯನೂ ದೇವ್ರಿಗೆ ನಿಯತ್ತಾಗಿ ಆರಾಧನೆ ಮಾಡಲ್ಲ ಅಂತ ಸೈತಾನ ಸವಾಲು ಹಾಕಿದ. ಆದ್ರೆ ಅದು ಸುಳ್ಳು ಅಂತ ಸಾಬೀತು ಮಾಡೋಕೆ ಯೆಹೋವ ತನ್ನ ಸ್ವಂತ ಮಗನನ್ನೇ ನರಳಾಡಿ ಸಾಯೋಕೆ ಬಿಟ್ಕೊಟ್ಟನು. (ಯೋಬ 2:1-5; 1 ಪೇತ್ರ 2:21) ಸ್ವಲ್ಪ ಕಲ್ಪಿಸ್ಕೊಳ್ಳಿ, ಯೇಸು ಸಾಯೋದನ್ನ ಯೆಹೋವ ಸ್ವರ್ಗದಿಂದ ನೋಡ್ತಿದ್ದಾನೆ. ಧರ್ಮ ಗುರುಗಳು ಯೇಸುನ ಮಾತ್‌ಮಾತಿಗೂ ಆಡ್ಕೊಂಡು ನಗಾಡ್ತಿದ್ದಾರೆ. ಸೈನಿಕರು ಆತನಿಗೆ ಚಿತ್ರ ಹಿಂಸೆ ಕೊಡ್ತಿದ್ದಾರೆ. ಮಾಂಸ ಕಿತ್ತು ಬರೋ ತರ ಹೊಡಿತ್ತಿದ್ದಾರೆ. ಕೈಕಾಲಿಗೆ ಮೊಳೆ ಹೊಡೆದು ಕಂಬಕ್ಕೆ ನೇತು ಹಾಕ್ತಿದ್ದಾರೆ. ಇದೆಲ್ಲ ಆಗ್ತಾ ಇದ್ದಿದ್ದು ತನ್ನ ಒಬ್ಬನೇ ಮಗನಿಗೆ, ತನ್ನ ಮುದ್ದಿನ ಮಗನಾದ ಯೇಸುಗೆ! ಹೀಗೆ ಯೇಸು ಒದ್ದಾಡಿ ಒದ್ದಾಡಿ ಸಾಯೋದನ್ನ ನೋಡುವಾಗ ಯೆಹೋವನಿಗೆ ಹೃದಯನೇ ಒಡೆದು ಹೋಗಿರುತ್ತೆ ಅಲ್ವಾ? (ಮತ್ತಾ. 27:28-31, 39) ವಿರೋಧಿಗಳಲ್ಲಿ ಕೆಲವರು, “ದೇವರಿಗೆ ಇವನು ಬೇಕು ಅಂತಿದ್ರೆ ದೇವರೇ ಇವನನ್ನ ಕಾಪಾಡಲಿ” ಅಂದ್ರು. (ಮತ್ತಾ. 27:42, 43) ಯೆಹೋವ ಮನಸ್ಸು ಮಾಡಿದ್ರೆ ಚಿಟ್ಕೆ ಹೊಡಿಯೋಷ್ಟರಲ್ಲಿ ಯೇಸುನ ಕಾಪಾಡಬಹುದಿತ್ತು. ಒಂದುವೇಳೆ, ಯೆಹೋವ ಹಾಗೆ ಮಾಡಿದಿದ್ರೆ ನಮಗೆ ಬಿಡುಗಡೆ ಬೆಲೆ ಸಿಕ್ತಿತ್ತಾ ಹೇಳಿ? ಇಲ್ಲ ಅಲ್ವಾ? ಅದಕ್ಕೇ ಯೆಹೋವ ನಮಗೋಸ್ಕರ ನೋವನ್ನೆಲ್ಲ ನುಂಗಿಕೊಂಡು ತನ್ನ ಸ್ವಂತ ಮಗ ನರಳಾಡಿ ಸಾಯೋವಾಗ ಮೌನವಾಗಿದ್ದನು.

8. ತನ್ನ ಒಬ್ಬನೇ ಮಗ ನರಳಾಡಿ ಸಾಯೋದನ್ನ ನೋಡುವಾಗ ಯೆಹೋವನಿಗೆ ನಿಜವಾಗ್ಲೂ ನೋವಾಗಿರುತ್ತಾ? ವಿವರಿಸಿ. (ಚಿತ್ರ ನೋಡಿ.)

8 ಯೆಹೋವ ತನ್ನ ಮುದ್ದಿನ ಮಗ ಸಾಯೋದನ್ನ ನೋಡಿನೂ ಸುಮ್ಮನಿದ್ದ ಅಂದ ತಕ್ಷಣ ಅವನಿಗೆ ಭಾವನೆನೇ ಇಲ್ಲ ಅಂತ ನಾವು ಅಂದ್ಕೊಳ್ಳಬಾರದು. ಯಾಕಂದ್ರೆ ಯೆಹೋವ ತನ್ನನ್ನ ಹೊಲುವಂತ ರೀತಿಯಲ್ಲಿ ನಮ್ಮನ್ನ ಸೃಷ್ಟಿ ಮಾಡಿದ್ದಾನೆ. ನಮಗೆ ನೋವಾಗುತ್ತೆ, ದುಃಖ ಆಗುತ್ತೆ, ನಮಗೆ ಭಾವನೆ ಇದೆ ಅಂದ್ರೆ ಯೆಹೋವನಿಗೂ ಗ್ಯಾರಂಟಿ ಭಾವನೆಗಳಿರುತ್ತೆ ಅಲ್ವಾ? ಅದಕ್ಕೆ ಬೈಬಲ್‌, ಯೆಹೋವನನ್ನ ಜನ “ನೋಯಿಸಿದ್ರು” “ಸಂಕಟಪಡಿಸಿದ್ರು” ಅಂತ ಕೆಲವು ಕಡೆ ಹೇಳುತ್ತೆ. (ಕೀರ್ತ. 78:40, 41) ಇದನ್ನ ಅರ್ಥ ಮಾಡ್ಕೊಳ್ಳೋಕೆ ಅಬ್ರಹಾಮ ಮತ್ತು ಇಸಾಕನ ಬಗ್ಗೆ ನಾವು ನೋಡೋಣ. ಒಂದುಸಲ ಯೆಹೋವ ಅಬ್ರಹಾಮನಿಗೆ ‘ನಿನ್ನ ಮಗನನ್ನ ನನಗೆ ಬಲಿ ಕೊಡು’ ಅಂತ ಕೇಳಿದನು. (ಆದಿ. 22:9-12; ಇಬ್ರಿ. 11:17-19) ಅಬ್ರಹಾಮ ಇಸಾಕನನ್ನ ಬಲಿ ಕೊಡೋಕೆ ರೆಡಿ ಆದಾಗ ಅವನಿಗೆ ಹೇಗೆ ಅನಿಸಿರುತ್ತೆ? ತನ್ನ ಸ್ವಂತ ಮಗನನ್ನೇ ಕೊಲ್ಲೋಕೆ ಕೈಯಲ್ಲಿ ಚಾಕು ಹಿಡ್ಕೊಂಡಾಗ ಮೈ ಕೈ ನಡುಗಿರುತ್ತೆ, ಕಣ್ಣೀರು ತುಂಬಿರುತ್ತೆ, ಎದೆನೇ ಒಡೆದು ಹೋಗಿರುತ್ತೆ. ಅಬ್ರಹಾಮನಿಗೇ ಇಷ್ಟು ನೋವಾಯ್ತು ಅಂದ್ಮೇಲೆ ತನ್ನ ಒಬ್ಬನೇ ಮಗನನ್ನ ಭಯಭಕ್ತಿ ಇಲ್ಲದೆ ಇರೋ ಕ್ರೂರ ಜನ ಚಿತ್ರಹಿಂಸೆ ಕೊಟ್ಟು ಕೊಲ್ಲುವಾಗ ಯೆಹೋವನಿಗೆ ಇನ್ನೆಷ್ಟು ನೋವಾಗಿರಲ್ಲ ಹೇಳಿ!—jw.orgನಲ್ಲಿ ಅವರ ನಂಬಿಕೆಯನ್ನು ಅನುಕರಿಸಿ—ಅಬ್ರಹಾಮ, ಭಾಗ 2 ಅನ್ನೋ ವಿಡಿಯೋ ನೋಡಿ.

ತನ್ನ ಮುದ್ದು ಮಗ ನರಳಾಡಿ ಸಾಯೋದನ್ನ ನೋಡಿದಾಗ ಯೆಹೋವನಿಗೆ ಹೃದಯನೇ ಒಡೆದುಹೋಯ್ತು (ಪ್ಯಾರ 8 ನೋಡಿ)


9. ಯೆಹೋವನ ಪ್ರೀತಿ ಬಗ್ಗೆ ರೋಮನ್ನರಿಗೆ 8:32, 38, 39 ಏನು ಕಲಿಸುತ್ತೆ?

9 ಇಲ್ಲಿವರೆಗೂ ನಾವೇನು ಕಲಿತ್ವಿ? ಯೆಹೋವನಷ್ಟು ನಮ್ಮನ್ನ ಈ ಭೂಮಿಯಲ್ಲಿ ಯಾರೂ ಪ್ರೀತಿಸೋಕೆ ಆಗಲ್ಲ! ಅದು ನಮ್ಮ ಅಪ್ಪ-ಅಮ್ಮನೇ ಆಗ್ಲಿ, ರಕ್ತ ಹಂಚ್ಕೊಂಡು ಹುಟ್ಟಿರೋ ಅಣ್ಣ ತಮ್ಮನೇ ಆಗ್ಲಿ, ಪ್ರಾಣ ಸ್ನೇಹಿತರೇ ಆಗ್ಲಿ! (ರೋಮನ್ನರಿಗೆ 8:32, 38, 39 ಓದಿ.) ನಿಮ್ಮ ಮೇಲೆ ನಿಮಗೆ ಎಷ್ಟು ಪ್ರೀತಿ ಇದೆ? ನೀವು ನಿಮ್ಮನ್ನ ಪ್ರೀತಿಸೋದಕ್ಕಿಂತ ಜಾಸ್ತಿ ಯೆಹೋವ ನಿಮ್ಮನ್ನ ಪ್ರೀತಿಸ್ತಾನೆ! ನಿಮಗೆ, ಶಾಶ್ವತವಾಗಿ ಬದುಕಬೇಕು ಅನ್ನೋ ಆಸೆ ಇದ್ಯಾ? ನೀವು ಶಾಶ್ವತವಾಗಿ ಬದುಕಬೇಕು ಅನ್ನೋ ಆಸೆ ನಿಮಗಿಂತ ಜಾಸ್ತಿ ಯೆಹೋವನಿಗೆ ಇದೆ! ನಿಮ್ಮ ತಪ್ಪುಗಳಿಗೆಲ್ಲ ಕ್ಷಮೆ ಸಿಗಬೇಕು ಅಂತ ನೀವು ಕಾಯ್ತಿದ್ದೀರಾ? ನಿಮ್ಮನ್ನ ಕ್ಷಮಿಸಬೇಕು ಅಂತ ನಿಮಗಿಂತ ಜಾಸ್ತಿ ಯೆಹೋವ ಕಾಯ್ತಿದ್ದಾನೆ! ನಮ್ಮನ್ನ ಇಷ್ಟು ಪ್ರೀತಿಸೋ ಯೆಹೋವ, ಬಿಡುಗಡೆ ಬೆಲೆ ಮೇಲೆ ನಾವು ನಂಬಿಕೆ ಇಡಬೇಕು ಮತ್ತು ಆತನು ಹೇಳೋ ತರ ನಡ್ಕೊಳ್ಳಬೇಕು ಅಂತ ಕೇಳ್ತಿದ್ದಾನಷ್ಟೇ. ಬಿಡುಗಡೆ ಬೆಲೆ ಯೆಹೋವನ ಪ್ರೀತಿಗೆ ಹಿಡಿದ ಕನ್ನಡಿ ಅಂತನೇ ಹೇಳಬಹುದು. ಈಗ ನಾವು ಯೆಹೋವನ ಪ್ರೀತಿ ಬಗ್ಗೆ ಎಷ್ಟೇ ಕಲಿತ್ರೂ ಅದು ಸಾಸಿವೆ ಕಾಳಷ್ಟೇ, ಹೊಸ ಲೋಕದಲ್ಲಿ ಬೆಟ್ಟದಷ್ಟು ಕಲಿತೀವಿ!—ಪ್ರಸಂ. 3:11.

ಯೇಸು ಬಗ್ಗೆ ಏನು ಗೊತ್ತಾಗುತ್ತೆ?

10. (ಎ) ಯೇಸುವಿನ ಮನಸ್ಸು ಛಿದ್ರ ಛಿದ್ರ ಆಗೋಕೆ ಏನು ಕಾರಣ? (ಬಿ) ಯೆಹೋವನ ಮೇಲೆ ಬಂದ ಆರೋಪ ಸುಳ್ಳು ಅಂತ ಯೇಸು ಹೇಗೆ ಸಾಬೀತು ಮಾಡಿದನು? (“ ಸುಳ್ಳು ಅಂತ ಸಾಬೀತು ಮಾಡಿದನು” ಅನ್ನೋ ಚೌಕ ನೋಡಿ.)

10 ಯೇಸುಗೆ ಯೆಹೋವ ಅಂದ್ರೆ, ಆತನ ಹೆಸ್ರು ಅಂದ್ರೆ ಪಂಚಪ್ರಾಣ. (ಯೋಹಾ. 14:31) ಅಂಥ ಯೇಸು ಮೇಲೆ ಜನ ಎಂಥ ಆರೋಪ ಹಾಕ್ಬಿಟ್ರು? ‘ಈ ಯೇಸು, ದೇವರ ಹೆಸ್ರನ್ನ ಹಾಳು ಮಾಡ್ತಿದ್ದಾನೆ. ಸರ್ಕಾರದ ವಿರುದ್ಧ ದೊಡ್ಡ ಅಪರಾಧ ಮಾಡಿದ್ದಾನೆ’ ಅಂತ ಹೇಳಿದ್ರು. ‘ಇದ್ರಿಂದ ನನ್ನ ತಂದೆ ಹೆಸ್ರು ಹಾಳಾಗುತ್ತಲ್ಲ’ ಅಂತ ಯೇಸುವಿನ ಮನಸ್ಸು ಛಿದ್ರಛಿದ್ರ ಆಗೋಯ್ತು. ಅದಕ್ಕೇ ಯೇಸು ಪ್ರಾರ್ಥನೆಯಲ್ಲಿ “ಅಪ್ಪಾ, ಆಗೋದಾದ್ರೆ ಈ ಬಟ್ಟಲನ್ನ ನನ್ನಿಂದ ತೆಗೆದುಬಿಡು” ಅಂತ ಕೇಳ್ಕೊಂಡ. (ಮತ್ತಾ. 26:39) ಇಷ್ಟೆಲ್ಲಾ ಕಷ್ಟ ಆದ್ರೂ ಯೇಸು ಕೊನೆ ಉಸಿರಿರೋ ತನಕ ನಿಯತ್ತಾಗಿದ್ದ! ತನ್ನ ತಂದೆ ಮೇಲೆ ಸೈತಾನ ಹಾಕಿದ ಒಂದೊಂದು ಆರೋಪನೂ ಸುಳ್ಳು ಅಂತ ಸಾಬೀತು ಮಾಡಿದನು.

11. ಜನ್ರ ಮೇಲೆ ಪ್ರೀತಿ ಇದೆ ಅಂತ ಯೇಸು ಹೇಗೆ ತೋರಿಸಿದನು? (ಯೋಹಾನ 13:1)

11 ಯೇಸುಗೆ ಮನುಷ್ಯರು ಅಂದ್ರೂ ತುಂಬಾ ಇಷ್ಟ. ಅದ್ರಲ್ಲೂ ಅವನ ಮಾತಿನ ಪ್ರಕಾರ ನಡ್ಕೊಳ್ಳೋರಂದ್ರೆ ಪಂಚಪ್ರಾಣ. (ಜ್ಞಾನೋ. 8:31; ಯೋಹಾನ 13:1 ಓದಿ.) ಅದನ್ನ ಹೇಗೆ ಹೇಳಬಹುದು? ಯೇಸುಗೆ ಮುಂಚೆನೇ ‘ಭೂಮಿಲಿ ತುಂಬಾ ಕಷ್ಟಪಡಬೇಕಾಗುತ್ತೆ. ಜನ್ರು ನನಗೆ ಚಿತ್ರಹಿಂಸೆ ಕೊಡ್ತಾರೆ. ನಾನು ನರಳಿ ನರಳಿ ಸಾಯಬೇಕಾಗುತ್ತೆ’ ಅಂತ ಗೊತ್ತಿತ್ತು. ಆದ್ರೂ ಅವನು ಭೂಮಿಗೆ ಬಂದನು! ‘ಏನೋ ಕಣ್ಮುಚ್ಚಿ ಎಲ್ಲನೂ ಸಹಿಸ್ಕೊಂಡು ಬಿಡೋಣ’ ಅಂತ ಅಂದ್ಕೊಂಡಿಲ್ಲ. ಯೇಸು ಅದನ್ನೆಲ್ಲ ಸಹಿಸ್ಕೊಂಡಿದ್ದು ನಮ್ಮಲ್ಲಿ ಒಬ್ಬೊಬ್ಬರ ಮೇಲೆ ಇಟ್ಟಿರೋ ಪ್ರೀತಿಯಿಂದನೇ! ಅದಕ್ಕೇ ಮನಸ್ಸು ಕೊಟ್ಟು ಸಿಹಿಸುದ್ದಿ ಸಾರಿದನು, ಬೇರೆಯವ್ರಿಗೆ ದೇವರ ಬಗ್ಗೆ ಕಲಿಸಿದನು. ಅವ್ರಿಗೆ ಸಹಾಯ ಮಾಡಿದನು. ಅಷ್ಟೇ ಅಲ್ಲ, ಸಾಯೋ ಹಿಂದಿನ ರಾತ್ರಿನೂ ಸಮಯ ಮಾಡ್ಕೊಂಡು ತನ್ನ ಶಿಷ್ಯರ ಕಾಲು ತೊಳೆದನು. ಅವ್ರಿಗೆ ಬೇಕಾಗಿರೋ ಬುದ್ಧಿವಾದ ಹೇಳಿ, ಬಲ, ಸಾಂತ್ವನ ಕೊಟ್ಟನು. (ಯೋಹಾ. 13:12-15) ಅದಷ್ಟೇ ಅಲ್ಲ, ಹಿಂಸಾ ಕಂಬದ ಮೇಲಿರುವಾಗ್ಲೂ ಒಂದೊಂದು ಉಸಿರು ತಗೊಳ್ಳೋಕೆ ಕಷ್ಟ ಆಗ್ತಿರುವಾಗ್ಲೂ ಪಕ್ಕದಲ್ಲಿದ್ದ ಅಪರಾಧಿಗೆ ದೇವರ ಆಳ್ವಿಕೆಲಿ ಬದುಕೋ ಅವಕಾಶ ಸಿಗುತ್ತೆ ಅಂತ ಹೇಳಿದನು. ತನ್ನ ತಾಯಿನ ಇನ್ಮುಂದೆ ಯಾರು ನೋಡ್ಕೊಬೇಕು ಅನ್ನೋ ಏರ್ಪಾಡನ್ನೂ ಮಾಡಿದನು. (ಲೂಕ 23:42, 43; ಯೋಹಾ. 19:26, 27) ಯೇಸು ಒಂದುಸಲ ಪ್ರಾಣ ಕೊಟ್ಟು ಪ್ರೀತಿ ತೋರಿಸಿದಷ್ಟೇ ಅಲ್ಲ, ಬದುಕಿದ ಒಂದೊಂದು ಕ್ಷಣನೂ ನಮ್ಮ ಮೇಲೆ ಪ್ರೀತಿ ಇದೆ ಅಂತ ತೋರಿಸಿದನು.

12. ಯೇಸು ನಮಗೋಸ್ಕರ ಜೀವ ಕೊಟ್ಟು ಕೈ ತೊಳ್ಕೊಂಡು ಬಿಟ್ನಾ?

12 ಯೇಸು ನಮ್ಮೆಲ್ರಿಗೋಸ್ಕರ “ಎಲ್ಲ ಕಾಲಕ್ಕೂ ಒಂದು ಸಾರಿ ಸತ್ತು” ಕೈತೊಳ್ಕೊಂಡು ಬಿಟ್ನಾ? ಇಲ್ಲ. (ರೋಮ. 6:10) ಇವತ್ತಿಗೂ ನಮ್ಮೆಲ್ರಿಗೆ ಪ್ರೀತಿ ತೋರಿಸ್ತಿದ್ದಾನೆ, ತ್ಯಾಗಗಳನ್ನ ಮಾಡ್ತಿದ್ದಾನೆ. ಅದನ್ನ ಹೇಗೆ ಹೇಳಬಹುದು? ನಾವೆಲ್ರೂ ಬಿಡುಗಡೆ ಬೆಲೆಯಿಂದ ಪ್ರಯೋಜನ ಪಡ್ಕೊಳೋಕೆ ಯೇಸು ತುಂಬಾ ವಿಷ್ಯಗಳನ್ನ ಮಾಡ್ತಿದ್ದಾನೆ. ಯೇಸು ರಾಜನಾಗಿ, ಮಹಾ ಪುರೋಹಿತನಾಗಿ, ಸಭೆಯ ಯಜಮಾನನಾಗಿ ತುಂಬಾ ಕೆಲಸಗಳನ್ನ ಮಾಡ್ತಿದ್ದಾನೆ. (1 ಕೊರಿಂ. 15:25; ಎಫೆ. 5:23; ಇಬ್ರಿ. 2:17) ಇದ್ರ ಜೊತೆಗೆ ಅಭಿಷಿಕ್ತರನ್ನ, ದೊಡ್ಡ ಗುಂಪಿನವ್ರನ್ನೆಲ್ಲ ಒಟ್ಟು ಸೇರಿಸಬೇಕಿದೆ. ಇದನ್ನೆಲ್ಲ ಮಹಾಸಂಕಟ ಮುಗಿಯೋ ಮುಂಚೆ ಮಾಡಿ ಮುಗಿಸಬೇಕಿದೆ. a (ಮತ್ತಾ. 25:32; ಮಾರ್ಕ 13:27) ಅಷ್ಟೇ ಅಲ್ಲ, ಯೆಹೋವನಿಗೆ ನಾವು ನಿಯತ್ತಾಗಿರೋಕೆ ಏನೆಲ್ಲ ಮಾಡಬೇಕು ಅಂತ ಕೊನೆ ದಿನಗಳಲ್ಲಿ ನಂಬಿಗಸ್ತ ಆಳಿನ ಮೂಲಕ ಕಲಿಸ್ತಾನೇ ಇದ್ದಾನೆ. (ಮತ್ತಾ. 24:45) ಮುಂದೆ ಸಾವಿರ ವರ್ಷದ ಆಳ್ವಿಕೆಯಲ್ಲಾದ್ರೂ ಯೇಸು ರೆಸ್ಟ್‌ ಮಾಡ್ತಾನಾ? ಇಲ್ಲ. ಆಗ್ಲೂ ನಮಗೆ ಏನು ಬೇಕು, ಏನು ಬೇಡ ಅಂತ ತಿಳ್ಕೊಂಡು ನಮಗೆ ಬೇಕಾಗಿರೋದನ್ನೆಲ್ಲ ಕೊಡ್ತಾನೆ. ಇದನ್ನೆಲ್ಲ ನೋಡಿದ್ರೆ ಯೆಹೋವ ಬರೀ ಯೇಸು ಪ್ರಾಣನ ನಮಗೋಸ್ಕರ ಕೊಟ್ಟಿದ್ದಷ್ಟೇ ಅಲ್ಲ. ಯೇಸುವಿನ ಇಡೀ ಜೀವನಾನೇ ನಮಗೋಸ್ಕರ ಕೊಟ್ಟು ಬಿಟ್ಟಿದ್ದಾನೆ.

ಕಲಿತಾನೇ ಇರಿ!

13. ಯೆಹೋವ ಮತ್ತು ಯೇಸುನ ಪ್ರೀತಿಸೋಕೆ ಹೊಸ ಕಾರಣಗಳನ್ನ ಹುಡುಕೋಕೆ ಏನು ಮಾಡಬೇಕು?

13 ಯೆಹೋವ ಮತ್ತು ಕ್ರಿಸ್ತ ಯೇಸು ನಮ್ಮ ಮೇಲೆ ಇಟ್ಟಿರೋ ಪ್ರೀತಿ ಚಿನ್ನದ ಗಣಿ ತರ. ಅದನ್ನ ಅಗೆದಷ್ಟು ಅಂದ್ರೆ, ಅದರ ಬಗ್ಗೆ ಯೋಚನೆ ಮಾಡಿದಷ್ಟೂ ಅವ್ರ ಪ್ರೀತಿ ಬಗ್ಗೆ ನಾವು ಕಲಿತಾನೇ ಇರ್ತೀವಿ. ಅದಕ್ಕೇ ಈ ವರ್ಷದ ಸ್ಮರಣೆ ಸಮಯದಲ್ಲಿ ಮತ್ತಾಯ, ಮಾರ್ಕ, ಲೂಕ, ಯೋಹಾನ ಪುಸ್ತಕಗಳಲ್ಲಿ ಯಾವುದಾದ್ರೂ ಒಂದು ಅಥವಾ ಎರಡನ್ನ ಓದಿ. ಹಾಗಂತ ಒಂದೇ ಸಲ ಜಾಸ್ತಿ ಓದೋಕೆ ಹೋಗಬೇಡಿ. ನಿಧಾನಕ್ಕೆ ಓದಿ. ಸ್ವಲ್ಪನೇ ಓದಿ, ಆದ್ರೆ ಪ್ರತಿ ಸಲ ಓದುವಾಗ ಯೆಹೋವ ಮತ್ತು ಯೇಸುನ ಜಾಸ್ತಿ ಪ್ರೀತಿಸೋಕೆ ಹೊಸ ಕಾರಣ ಸಿಗುತ್ತಾ ಅಂತ ಹುಡುಕಿ. ಅದನ್ನ ಬೇರೆಯವ್ರ ಹತ್ರನ್ನೂ ಹಂಚ್ಕೊಳ್ಳೋಕೆ ಮರಿಬೇಡಿ.

14. ಬಿಡುಗಡೆ ಬೆಲೆ ಬಗ್ಗೆ ಮತ್ತು ಬೇರೆ ವಿಷ್ಯಗಳ ಬಗ್ಗೆ ಕಲಿತಾ ಇರೋಕೆ ಸಂಶೋಧನೆ ಹೇಗೆ ಸಹಾಯ ಮಾಡುತ್ತೆ? (ಕೀರ್ತನೆ 119:97) (ಚಿತ್ರ ನೋಡಿ.)

14 ನೀವು ತುಂಬಾ ವರ್ಷದಿಂದ ಸತ್ಯದಲ್ಲಿದ್ರೆ ದೇವರ ನ್ಯಾಯ, ಪ್ರೀತಿ ಮತ್ತು ಬಿಡುಗಡೆ ಬೆಲೆ ಅನ್ನೋ ವಿಷ್ಯಗಳು ನಿಮಗೆ ಹೊಸದೇನಲ್ಲ! ಆದ್ರಿಂದ ನಿಮಗೆ ಒಂದೊಂದು ಸಲ, ‘ಅದ್ರ ಬಗ್ಗೆ ಕಲಿಯೋಕೆ ಇನ್ನೂ ಹೊಸ ವಿಷ್ಯ ಏನಿರುತ್ತೆ?’ ಅಂತ ಅನಿಸಬಹುದು. ಆಕಾಶಕ್ಕೆ ಹೇಗೆ ಕೊನೆನೇ ಇಲ್ವೋ ಹಾಗೇ ಈ ತರದ ವಿಷ್ಯಗಳ ಬಗ್ಗೆ ಕಲಿಯೋಕೂ ಕೊನೆನೇ ಇಲ್ಲ. ಹಾಗಾಗಿ ನೀವೇನು ಮಾಡಬೇಕು? ನಮ್ಮ ಪ್ರಕಾಶನಗಳಲ್ಲಿ ಸಮುದ್ರದಷ್ಟು ಜ್ಞಾನ ಇದೆ. ಅದನ್ನೆಲ್ಲ ಜಾಸ್ತಿ ಓದೋಕೆ ಟ್ರೈ ಮಾಡಿ. ನೀವು ಓದುವಾಗ ಯಾವುದಾದ್ರೂ ವಿಷ್ಯ ಅರ್ಥ ಆಗಿಲ್ಲಾಂದ್ರೆ ಸಂಶೋಧನೆ ಮಾಡಿ ಅದ್ರ ಬಗ್ಗೆ ತಿಳ್ಕೊಳ್ಳಿ. ಆಮೇಲೆ ಯೆಹೋವನ ಬಗ್ಗೆ, ಯೇಸು ಬಗ್ಗೆ ಮತ್ತು ಅವ್ರ ಪ್ರೀತಿ ಬಗ್ಗೆ ನೀವು ಕಲ್ತಿರೋ ವಿಷ್ಯದಿಂದ ನಿಮಗೇನು ಗೊತ್ತಾಗುತ್ತೆ ಅಂತ ಯೋಚ್ನೆ ಮಾಡಿ.ಕೀರ್ತನೆ 119:97 ಓದಿ.

ನಾವೆಷ್ಟೇ ವರ್ಷದಿಂದ ಸತ್ಯದಲ್ಲಿದ್ರೂ ಬಿಡುಗಡೆ ಬೆಲೆ ಬಗ್ಗೆ ಹೊಸ-ಹೊಸ ವಿಷ್ಯ ಕಲಿತಾ ಇರಬಹುದು (ಪ್ಯಾರ 14 ನೋಡಿ)


15. ಬೈಬಲಲ್ಲಿರೋ ಹೊಸ ಹೊಸ ವಜ್ರಗಳನ್ನ ಯಾಕೆ ಹುಡುಕ್ತಾ ಇರಬೇಕು?

15 ಪ್ರತಿಸಲ ಓದಿದಾಗ ಹೊಸ ವಿಷ್ಯ ಸಿಕ್ಕಿಲ್ಲಾಂದ್ರೆ ಬೇಜಾರ್‌ ಮಾಡ್ಕೋಬೇಡಿ. ಯಾಕಂದ್ರೆ ಚಿನ್ನ ಹುಡುಕೋರಿಗೂ ಅಗೆದಾಗೆಲ್ಲ ಚಿನ್ನ ಸಿಗಲ್ಲ. ಒಂದು ಮೂಗುತಿಯಷ್ಟು ಚಿಕ್ಕ ಚಿನ್ನ ಹುಡುಕೋಕೇ ಅವರು ಗಂಟೆಗಟ್ಟಲೆ ವಾರಗಟ್ಟಲೆ ಕಷ್ಟಪಡಬೇಕಾಗುತ್ತೆ. ಆದ್ರೂ ಬಿಟ್ಕೊಡದೆ ಹುಡುಕ್ತಾನೇ ಇರ್ತಾರೆ. ಯಾಕಂದ್ರೆ ಅದರ ಬೆಲೆ ಅವ್ರಿಗೆ ಗೊತ್ತು. ಆದ್ರೆ ಬೈಬಲಲ್ಲಿರೋ ವಿಷ್ಯಗಳು ಚಿನ್ನಕ್ಕಿಂತ ಅಮೂಲ್ಯವಾಗಿರೋ ವಜ್ರದ ತರ! (ಕೀರ್ತ. 119:127; ಜ್ಞಾನೋ. 8:10) ಹಾಗಾಗಿ ನಾವು ಸೋತು ಹೋಗದೆ ಬೈಬಲ್‌ ಓದ್ತಾ, ಬೈಬಲ್‌ ರತ್ನಗಳನ್ನ ಹುಡುಕ್ತಾ ಇರೋಣ.—ಕೀರ್ತ. 1:2.

16. ಯೆಹೋವ ಮತ್ತು ಯೇಸು ಬಗ್ಗೆ ಕಲಿತ ಮೇಲೆ ನಾವೇನು ಮಾಡಬೇಕು?

16 ಕಲಿತಾ ಹೋದಂಗೆ ಪಾಲಿಸ್ತಾ ಇರೋಕೂ ಪ್ರಯತ್ನ ಹಾಕಿ. ಉದಾಹರಣೆಗೆ, ಯೆಹೋವನ ನ್ಯಾಯದ ಬಗ್ಗೆ ಕಲಿತ ಮೇಲೆ ನೀವೂ ನ್ಯಾಯವಾಗಿ ನಡ್ಕೊಳ್ಳಿ. ಯಾವತ್ತೂ ಭೇದಭಾವ ಮಾಡೋಕೆ ಹೋಗಬೇಡಿ. ಯೇಸು, ಯೆಹೋವನನ್ನ ಮತ್ತು ನಿಮ್ಮನ್ನ ಪ್ರೀತಿಸ್ತಾನೆ ಅಂತ ಕಲಿತ ಮೇಲೆ ನೀವು ಕಷ್ಟ ಆದ್ರೂ ಯೆಹೋವನಿಗೆ ಇಷ್ಟ ಆಗೋ ತರ ನೋಡ್ಕೊಳ್ಳಿ. ನಷ್ಟ ಆದ್ರೂ ಸಹೋದರರಿಗೆ ನಿಷ್ಠರಾಗಿ ನಡ್ಕೊಳ್ಳಿ. ಸಿಹಿಸುದ್ದಿ ಸಾರಿ ಜನ್ರಿಗೆ ಬಿಡುಗಡೆ ಬೆಲೆ ಬಗ್ಗೆ ತಿಳಿಸಿ ಅವ್ರನ್ನ ಸಾವಿನ ದವಡೆಯಿಂದ ಬಿಡಿಸಿ!

17. ಮುಂದಿನ ಲೇಖನದಲ್ಲಿ ನಾವೇನು ಕಲಿತೀವಿ?

17 ಬಿಡುಗಡೆ ಬೆಲೆ ಬಗ್ಗೆ ನೀವು ಜಾಸ್ತಿ ಕಲಿತಷ್ಟು ಯೆಹೋವನ ಮೇಲೆ ಮತ್ತು ಯೇಸು ಮೇಲೆ ನಿಮಗೆ ಪ್ರೀತಿ ಜಾಸ್ತಿ ಆಗುತ್ತೆ. ಅವ್ರಿಗೂ ನಿಮ್ಮ ಮೇಲೆ ಪ್ರೀತಿ ಜಾಸ್ತಿ ಆಗುತ್ತೆ. (ಯೋಹಾ. 14:21; ಯಾಕೋ. 4:8) ಆದ್ರಿಂದ ಬಿಡುಗಡೆ ಬೆಲೆ ಬಗ್ಗೆ ಕಲಿಯೋಕೆ ನಮಗೆ ಸಿಗೋ ಒಂದೊಂದು ಅವಕಾಶನೂ ಬಿಡದೆ ಬಳಸ್ಕೊಳ್ಳೋಣ. ಮುಂದಿನ ಲೇಖನದಲ್ಲಿ ಬಿಡುಗಡೆ ಬೆಲೆಯಿಂದ ನಮಗೆ ಸಿಗೋ ಇನ್ನೂ ಕೆಲವು ಪ್ರಯೋಜನಗಳ ಬಗ್ಗೆ ನೋಡೋಣ. ಯೆಹೋವನ ಪ್ರೀತಿಗೆ ನಾವು ಇನ್ನೂ ಹೇಗೆ ಋಣಿಯಾಗಿರೋದು ಅಂತ ಕಲಿಯೋಣ.

ಗೀತೆ 107 ಯೆಹೋವನ ಅಪ್ಪಟ ಪ್ರೀತಿ

a ಎಫೆಸ 1:10ರಲ್ಲಿ ಪೌಲ ಹೇಳಿದ ‘ಸ್ವರ್ಗದಲ್ಲಿರೋ ವಿಷ್ಯಗಳನ್ನ’ ಒಟ್ಟುಗೂಡಿಸೋದು ಮತ್ತು ಮತ್ತಾಯ 24:31 ಹಾಗೂ ಮಾರ್ಕ 13:27ರಲ್ಲಿ ಹೇಳಿದ ‘ಆರಿಸ್ಕೊಂಡಿರೋರನ್ನ’ ಒಟ್ಟುಗೂಡಿಸೋದು ಎರಡೂ ಬೇರೆಬೇರೆ. ಪೌಲ ಹೇಳಿದ್ದು, ಯೆಹೋವ ಪವಿತ್ರಶಕ್ತಿಯಿಂದ ಅಭಿಷಿಕ್ತರನ್ನ ಆಯ್ಕೆ ಮಾಡ್ಕೊಳ್ಳೋ ಸಮಯದ ಬಗ್ಗೆ. ಆದ್ರೆ ಯೇಸು ಹೇಳಿದ್ದು ಮಹಾ ಸಂಕಟದಲ್ಲಿ ಭೂಮಿಯಲ್ಲಿ ಉಳಿದಿರೋ ಅಭಿಷಿಕ್ತರನ್ನ ಒಟ್ಟುಗೂಡಿಸೋ ಸಮಯದ ಬಗ್ಗೆ.