ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 1

ಗೀತೆ 29 ಬಾಳುವೆವು ನಮ್ಮ ನಾಮದಂತೆ

ಯೆಹೋವನಿಗೆ ಘನತೆ, ಗೌರವ ಕೊಡಿ

ಯೆಹೋವನಿಗೆ ಘನತೆ, ಗೌರವ ಕೊಡಿ

2025ರ ವರ್ಷವಚನ: “ಯೆಹೋವನ ಹೆಸ್ರಿಗೆ ಕೊಡಬೇಕಾದ ಗೌರವವನ್ನ ಕೊಡಿ.”ಕೀರ್ತ. 96:8.

ಈ ಲೇಖನದಲ್ಲಿ ಏನಿದೆ?

ಯೆಹೋವನಿಗೆ ಕೊಡಬೇಕಾದ ಘನತೆ, ಗೌರವವನ್ನ ನಾವು ಹೇಗೆ ಕೊಡಬಹುದು ಅಂತ ಈ ಲೇಖನದಲ್ಲಿ ನೋಡೋಣ.

1. ಇವತ್ತು ತುಂಬ ಜನ್ರಿಗೆ ಯಾವುದು ಮುಖ್ಯ ಆಗಿಬಿಟ್ಟಿದೆ?

 “ನಾನು, ನಾನು, ನಾನು!” ಇವತ್ತು ಜನ ಬರೀ ತಮ್ಮ ಬಗ್ಗೆನೇ ಯೋಚ್ನೆ ಮಾಡ್ತಾರೆ. ಇಡೀ ಪ್ರಪಂಚ ತಮ್ಮ ಕಡೆ ತಿರುಗಿ ನೋಡಬೇಕಂತ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಬಗ್ಗೆನೇ ಕೊಚ್ಕೊಳ್ತಾರೆ, ಏನೇನೋ ಸಾಹಸಗಳನ್ನ ಮಾಡೋಕೆ ಹೋಗ್ತಾರೆ. ಆದ್ರೆ ಇಡೀ ಪ್ರಪಂಚನ ಸೃಷ್ಟಿ ಮಾಡಿರೋ ಯೆಹೋವ ದೇವರಿಗೆ ಗೌರವ ಕೊಡೋರು ತುಂಬ ಕಮ್ಮಿ ಆಗಿಬಿಟ್ಟಿದ್ದಾರೆ. ಹಾಗಾಗಿ ನಾವು ಈ ಲೇಖನದಲ್ಲಿ, ಯೆಹೋವನಿಗೆ ಗೌರವ ಕೊಡೋದಂದ್ರೆ ಏನು? ಆತನಿಗೆ ಗೌರವ ಕೊಡೋಕೆ ಯಾವ ಕಾರಣ ಇದೆ? ಯೆಹೋವನಿಗೆ ಕೊಡಬೇಕಾದ ಗೌರವವನ್ನ ನಾವು ಕೊಡೋದು ಹೇಗೆ? ಭವಿಷ್ಯದಲ್ಲಿ ಆತನು ತನ್ನ ಹೆಸ್ರಿಗೆ ಗೌರವ ಬರೋ ತರ ಏನು ಮಾಡ್ತಾನೆ? ಅಂತ ನೋಡೋಣ.

ಯೆಹೋವನಿಗೆ ಗೌರವ ಕೊಡೋದಂದ್ರೆ ಏನು?

2. ಸಿನಾಯಿ ಬೆಟ್ಟದ ಹತ್ರ ಯೆಹೋವ ತನ್ನ ಮಹಿಮೆ, ವೈಭವನ ಹೇಗೆ ತೋರಿಸಿದನು? (ಚಿತ್ರ ನೋಡಿ.)

2 ಗೌರವ ಅಂದ್ರೇನು? ಬೈಬಲಲ್ಲಿ ಒಬ್ಬ ವ್ಯಕ್ತಿಯ ಮಹಿಮೆ, ವೈಭವವನ್ನ ವರ್ಣಿಸೋಕೆ ಗೌರವ ಅನ್ನೋ ಪದನ ಬಳಸಲಾಗಿದೆ. ಯೆಹೋವನಿಗೆ ಎಷ್ಟು ಘನತೆ, ಮಹಿಮೆ, ವೈಭವ ಇದೆ ಅಂತ ಇಸ್ರಾಯೇಲ್ಯರಿಗೆ ತೋರಿಸೋಕೆ ಅವ್ರನ್ನ ಈಜಿಪ್ಟಿಂದ ಕರ್ಕೊಂಡ ಬಂದ ಸ್ವಲ್ಪದ್ರಲ್ಲೇ ಒಂದು ಅದ್ಭುತ ಘಟನೆ ನಡೀತು. ನಾವೀಗ ಅದನ್ನ ಚಿತ್ರಿಸ್ಕೊಳ್ಳೋಣ. ಲಕ್ಷಾಂತರ ಇಸ್ರಾಯೇಲ್ಯರು ಬಾನೆತ್ತರದ ಸಿನಾಯಿ ಬೆಟ್ಟದ ಬುಡದಲ್ಲಿ ದೇವರ ಮಾತನ್ನ ಕೇಳೋಕೆ ನಿಂತಿದ್ದಾರೆ. ಕಪ್ಪುಕಪ್ಪಾಗಿರೋ ಒಂದು ದೊಡ್ಡ ಮೋಡ ಇಡೀ ಬೆಟ್ಟನ ಮುಚ್ಕೊಳ್ಳುತ್ತೆ. ತಕ್ಷಣ ಒಂದು ಭಯಂಕರ ಭೂಕಂಪ ಆಗುತ್ತೆ. ಇಡೀ ಬೆಟ್ಟ ನಡುಗುತ್ತೆ. ಧಗಧಗ ಅಂತ ಉರಿಯೋ ಬೆಂಕಿ ಚಿಮ್ಮುತ್ತೆ. ಜೊತೆಗೆ, ಗುಡುಗು, ಮಿಂಚು, ಕೊಂಬುಗಳ ಆರ್ಭಟಕ್ಕೆ ಜನ್ರು ನಿಂತಿರೋ ನೆಲ ಕುಸಿಯೋ ತರ ಆಗುತ್ತೆ. ಅವ್ರ ಕಿವಿಯಲ್ಲಿ ಆ ಆರ್ಭಟ ಬಿಟ್ರೆ ಬೇರೇನೂ ಕೇಳಿಸಲ್ಲ. (ವಿಮೋ. 19:16-18; 24:17; ಕೀರ್ತ. 68:8) ಇದನ್ನೆಲ್ಲ ಇಸ್ರಾಯೇಲ್ಯರು ಕಣ್ಣು ಮಿಟುಕಿಸದೆ ನೋಡ್ತಾ ನಿಂತಿದ್ದಿರಬಹುದು. ಯೆಹೋವನ ಮಹಿಮೆ, ಘನತೆ, ಗೌರವ ನೋಡಿ ಅವ್ರ ಮೈಜುಂ ಅಂದಿರುತ್ತೆ ಅಲ್ವಾ?

ಸಿನಾಯಿ ಬೆಟ್ಟದಲ್ಲಿ ಇಸ್ರಾಯೇಲ್ಯರಿಗೆ ಯೆಹೋವ ದೇವರು ತನಗೆ ಎಷ್ಟು ಮಹಿಮೆ ಘನತೆ ಇದೆ ಅಂತ ತೋರಿಸ್ಕೊಟ್ಟನು (ಪ್ಯಾರ 2 ನೋಡಿ)


3. ನಾವು ಯೆಹೋವನಿಗೆ ಹೇಗೆ ಗೌರವ ಕೊಡಬಹುದು?

3 ನಾವು ಯೆಹೋವನಿಗೆ ಗೌರವ ಕೊಡೋದು ಹೇಗೆ? ಆತನ ಮಹಿಮೆ, ಘನತೆ ಆಕಾಶದಷ್ಟು ವಿಶಾಲವಾಗಿದೆ. ಅದನ್ನ ನಾವು ಬೇರೆಯವ್ರಿಗೆ ಹೇಳಬೇಕು. ಆತನಿಗೆಷ್ಟು ಶಕ್ತಿ ಇದೆ, ಆತನಲ್ಲಿರೋ ಒಳ್ಳೊಳ್ಳೇ ಗುಣಗಳೇನು ಅಂತ ಜನ್ರಿಗೆ ಸಾರಿ ಹೇಳಬೇಕು. ಅಷ್ಟೇ ಅಲ್ಲ ನಾವೇನೇ ಸಾಧನೆ ಮಾಡಿದ್ರೂ ‘ಅದು ಯೆಹೋವನಿಂದಾನೇ, ಯೆಹೋವನೇ ಕಾರಣ!’ ಅಂತ ಕೀರ್ತಿನೆಲ್ಲಾ ಆತನಿಗೇ ಸಲ್ಲಿಸಬೇಕು. (ಯೆಶಾ. 26:12) ಇದನ್ನೇ ರಾಜ ದಾವೀದ ಮಾಡಿದ. ಅವನು ಇಡೀ ಇಸ್ರಾಯೇಲ್ಯರ ಸಭೆ ಮುಂದೆ “ಯೆಹೋವನೇ ನೀನೊಬ್ಬನೇ ಗೌರವ, ಬಲ, ತೇಜಸ್ಸು, ವೈಭವ, ಘನತೆಗೆ ಅರ್ಹ. ಯಾಕಂದ್ರೆ ಆಕಾಶದಲ್ಲಿ, ಭೂಮಿಯಲ್ಲಿ ಇರೋದೆಲ್ಲ ನಿಂದೇ” ಅಂತ ಪ್ರಾರ್ಥಿಸಿದನು. “ಆಗ ಇಡೀ ಸಭೆಯವರು . . . ಯೆಹೋವನನ್ನ ಹೊಗಳಿದ್ರು.” ಯೆಹೋವನಿಗೆ ಗೌರವ ಕೊಡೋದ್ರಲ್ಲಿ ನಮಗೆ ದಾವೀದ ಎಷ್ಟು ಒಳ್ಳೇ ಮಾದರಿ ಅಲ್ವಾ?—1 ಪೂರ್ವ. 29:11, 20.

4. ಯೇಸು ಹೇಗೆ ಯೆಹೋವನಿಗೆ ಗೌರವ ಕೊಟ್ಟನು?

4 ದಾವೀದ ಅಷ್ಟೇ ಅಲ್ಲ ಯೇಸುನೂ ನಮಗೆ ಒಳ್ಳೇ ಮಾದರಿ. ಆತನು ಭೂಮೀಲಿದ್ದಾಗ ಯೆಹೋವನಿಗೆ ಹೇಗೆ ಗೌರವ ಕೊಟ್ಟನು? ಯೇಸು ಮಾಡ್ತಿದ್ದ ಒಂದೊಂದು ಅದ್ಭುತನೂ ತನ್ನ ಸ್ವಂತ ಶಕ್ತಿಯಿಂದ ಅಲ್ಲ, ಯೆಹೋವನ ಶಕ್ತಿಯಿಂದಾನೇ ಅಂತ ಒಪ್ಕೊಳ್ತಿದ್ದನು. (ಮಾರ್ಕ 5:18-20) ಅಷ್ಟೇ ಅಲ್ಲ ಯೆಹೋವನ ಬಗ್ಗೆ ಬಾಯ್ತುಂಬ ಮಾತಾಡ್ತಿದ್ದನು. ದೇವರ ಒಳ್ಳೇ ಗುಣಗಳ ಬಗ್ಗೆ ಹೇಳ್ತಿದ್ದನು. ಜನ್ರ ಜೊತೆ ಚೆನ್ನಾಗಿ ನಡ್ಕೊಳ್ತಿದ್ದನು. ಹೀಗೆ ಯೇಸು ಯೆಹೋವನಿಗೆ ಗೌರವ ಕೊಟ್ಟನು. ಒಂದಿನ ಯೇಸು ಸಭಾಮಂದಿರದಲ್ಲಿ ಕಲಿಸ್ತಿದ್ದನು. ಅಲ್ಲಿ 18 ವರ್ಷಗಳಿಂದ ಕೆಟ್ಟ ದೇವದೂತ ಹಿಡಿದಿದ್ದ ಒಬ್ಬ ಸ್ತ್ರೀನೂ ಕೂತ್ಕೊಂಡು ಕೇಳಿಸ್ಕೊಳ್ತಾ ಇದ್ದಳು. ಅವಳ ಬೆನ್ನು ಬಾಗಿ ಹೋಗಿತ್ತು. ಅವಳಿಗೆ ನೆಟ್ಟಗೆ ನಿಲ್ಲೋಕೇ ಆಗ್ತಿರಲಿಲ್ಲ. ಇದ್ರಿಂದ ಅವಳು ತುಂಬ ಕಷ್ಟಪಡ್ತಿದ್ದಳು. ಇದನ್ನ ನೋಡಿದಾಗ ಯೇಸುಗೆ ಕರುಳು ಚುರ್‌ ಅಂತು. ಆತನು ಅವಳ ಹತ್ರ ಹೋಗಿ “ಅಮ್ಮಾ, ನಿನ್ನ ರೋಗ ವಾಸಿ ಆಯ್ತು” ಅಂತ ಹೇಳಿದನು. ಅವಳ ಮೇಲೆ ಕೈಗಳನ್ನಿಟ್ಟಾಗ ಅವಳು ತಕ್ಷಣ ನೆಟ್ಟಗೆ ನಿಂತಳು. ಆಮೇಲೆ ಅವಳು “ದೇವರನ್ನ ಹೊಗಳೋಕೆ ಶುರುಮಾಡಿದಳು.” (ಲೂಕ 13:10-13) ಹೀಗೆ 18 ವರ್ಷಗಳಿಂದ ಅವಳು ಪಟ್ಟ ಕಷ್ಟಕ್ಕೆ ಯೆಹೋವನಿಂದ ಮುಕ್ತಿ ಸಿಕ್ತು. ಅದಕ್ಕೆ ಅವಳ ಮನಸ್ಸು ತುಂಬಿ ಬಂದು ಆ ಗೌರವನ್ನೆಲ್ಲ ಯೆಹೋವನಿಗೆ ಕೊಟ್ಟಳು. ನಾವೂ ಇದನ್ನೇ ಮಾಡಬೇಕು.

ನಾವು ಯೆಹೋವನಿಗೆ ಯಾಕೆ ಗೌರವ ಕೊಡಬೇಕು?

5. ಯೆಹೋವನ ತರ ಬೇರೆ ಯಾರೂ ಇಲ್ಲ ಅಂತ ನಾವ್ಯಾಕೆ ಹೇಳ್ತೀವಿ?

5 ಒಂದು, ಇಡೀ ವಿಶ್ವದಲ್ಲಿ ಯೆಹೋವನ ತರ ಬೇರೆ ಯಾರೂ ಇಲ್ಲ. ಇದನ್ನ ಹೇಳೋಕೆ ನಮಗೆ ಒಂದಾ ಎರಡಾ ಸಾವಿರಾರು ಕಾರಣಗಳಿವೆ. ಯೆಹೋವ ಸರ್ವಶಕ್ತ, ಆತನ ಶಕ್ತಿಗೆ ಮಿತಿನೇ ಇಲ್ಲ. (ಕೀರ್ತ. 96:4-7) ಆತನಲ್ಲಿ ಎಷ್ಟು ವಿವೇಕ ಇದೆ ಅಂತ ಆತನು ಸೃಷ್ಟಿ ಮಾಡಿರೋ ವಿಷ್ಯಗಳಿಂದ ಗೊತ್ತಾಗುತ್ತೆ. ನಮ್ಮ ಪ್ರತಿ ಉಸಿರಿಗೂ, ನಾವು ಬದುಕ್ತಿರೋ ಒಂದೊಂದು ದಿನಕ್ಕೂ ಯೆಹೋವನೇ ಕಾರಣ. (ಪ್ರಕ. 4:11) ಆತನು ನಿಷ್ಠಾವಂತ. (ಪ್ರಕ. 15:4) ಯೆಹೋವ ಕೊಟ್ಟ ಮಾತನ್ನ ತಪ್ಪಲ್ಲ, ಆತನು ಅಂದ್ಕೊಂಡ ಹಾಗೆನೇ ಎಲ್ಲಾನೂ ಮಾಡ್ತಾನೆ. (ಯೆಹೋ. 23:14) “ಬೇರೆ ದೇಶಗಳಲ್ಲಿರೋ ಎಲ್ಲ ವಿವೇಕಿಗಳಲ್ಲಿ, ಅವ್ರ ಎಲ್ಲ ಸಾಮ್ರಾಜ್ಯಗಳಲ್ಲಿ ನಿನ್ನ ಹಾಗೆ ಒಬ್ರೂ ಇಲ್ಲ” ಅಂತ ಪ್ರವಾದಿ ಯೆರೆಮೀಯ ಯೆಹೋವನನ್ನ ಹಾಡಿ ಹೊಗಳಿದ. (ಯೆರೆ. 10:6, 7) ಅವನ ತರ ಯೆಹೋವ ದೇವರನ್ನ ಹಾಡಿ ಹೊಗಳೋಕೆ ನಮಗೂ ಎಷ್ಟೋ ಕಾರಣಗಳಿವೆ. ಅದಕ್ಕೇ ನಾವು ಆತನಿಗೆ ಗೌರವ ಕೊಡ್ತೀವಿ, ಆತನನ್ನ ತುಂಬ ಪ್ರೀತಿಸ್ತೀವಿ.

6. ನಾವ್ಯಾಕೆ ಯೆಹೋವನನ್ನ ಪ್ರೀತಿಸ್ತೀವಿ?

6 ಎರಡು, ನಾವು ಯೆಹೋವನನ್ನ ತುಂಬ ಪ್ರೀತಿಸ್ತೀವಿ. ನಮ್ಮ ಪ್ರೀತಿಗೆ ಆತನಲ್ಲಿರೋ ನೂರಾರು ಗುಣಗಳೇ ಸ್ಫೂರ್ತಿ. ಉದಾಹರಣೆಗೆ ಆತನ ಹೃದಯದಲ್ಲಿ ಕರುಣೆ, ಕನಿಕರ ತುಂಬಿದೆ. (ಕೀರ್ತ. 103:13; ಯೆಶಾ. 49:15) ನಮಗೆ ಒಂಚೂರು ನೋವಾದ್ರೂ ಆತನು ತಡ್ಕೊಳ್ಳಲ್ಲ. ಆತನ ಕಣ್ಣಲ್ಲಿ ನೀರೇ ಬಂದುಬಿಡುತ್ತೆ. (ಜೆಕ. 2:8) ‘ನನ್ನ ಬಗ್ಗೆ ಕಲೀರಿ, ಕಷ್ಟದಲ್ಲೂ ಸುಖದಲ್ಲೂ ನಿಮ್ಮ ಕೈ ಹಿಡಿಯೋ ಫ್ರೆಂಡ್‌ ಆಗ್ತೀನಿ’ ಅಂತ ಆತನು ನಮಗೆ ಮಾತು ಕೊಟ್ಟಿದ್ದಾನೆ. (ಕೀರ್ತ. 25:14; ಅ. ಕಾ. 17:27) ಅಷ್ಟೇ ಅಲ್ಲ ಆತನಲ್ಲಿ ದೀನತೆ ಎಷ್ಟರ ಮಟ್ಟಿಗಿದೆ ಅಂದ್ರೆ “ಆಕಾಶ ಭೂಮಿಯನ್ನ ನೋಡೋಕೆ ಆತನು ಕೆಳಗೆ ಬಗ್ತಾನೆ, ದೀನನನ್ನ ಧೂಳಿಂದ ಎಬ್ಬಿಸ್ತಾನೆ” ಅಂತ ಬೈಬಲ್‌ ಹೇಳುತ್ತೆ. (ಕೀರ್ತ. 113:6, 7) ಇಂಥ ಚಿನ್ನದಂಥ ಯೆಹೋವನನ್ನ ಪ್ರೀತಿಸದೇ, ಗೌರವಿಸದೇ ಹೇಗೆ ಸುಮ್ಮನೆ ಇರಕ್ಕಾಗುತ್ತೆ ಹೇಳಿ?—ಕೀರ್ತ. 86:12.

7. ನಮಗೆ ಯಾವ ವಿಶೇಷ ಅವಕಾಶ ಇದೆ?

7 ಮೂರು, ಎಲ್ರೂ ಯೆಹೋವನ ಬಗ್ಗೆ ಸತ್ಯ ತಿಳ್ಕೊಬೇಕು ಅಂತ ಆಸೆ ಪಡ್ತೀವಿ. ಯಾಕಂದ್ರೆ ಇವತ್ತು ಲೋಕದಲ್ಲಿ ಎಷ್ಟೋ ಜನ್ರು ಸೈತಾನ ಯೆಹೋವನ ಬಗ್ಗೆ ಕಟ್ಟಿರೋ ಸುಳ್ಳಿನ ಮೂಟೆನ ಹೊತ್ಕೊಂಡಿದ್ದಾರೆ. ಸೈತಾನ ಅವ್ರ ಮನಸ್ಸನ್ನ ಕುರುಡು ಮಾಡಿದ್ದಾನೆ. (2 ಕೊರಿಂ. 4:4) ಅದು ಹೇಗೆ? ‘ಯೆಹೋವನಷ್ಟು ಕ್ರೂರಿ, ಕೋಪಿಷ್ಟ ಈ ಲೋಕದಲ್ಲಿ ಬೇರೆ ಯಾರೂ ಇಲ್ಲ, ಯೆಹೋವ ನಮ್ಮ ಬಗ್ಗೆ ಒಂಚೂರೂ ಯೋಚ್ನೆನೇ ಮಾಡಲ್ಲ, ನಾವು ಅನುಭವಿಸ್ತಿರೋ ಒಂದೊಂದು ಕಷ್ಟಕ್ಕೂ, ನಾವು ಹಾಕ್ತಿರೋ ಒಂದೊಂದು ಕಣ್ಣೀರಿಗೂ ಅವನೇ ಕಾರಣ’ ಅಂತ ಸೈತಾನ ಜನ್ರನ್ನ ನಂಬಿಸಿದ್ದಾನೆ. ಸೈತಾನ ಅದೆಷ್ಟೇ ಸುಳ್ಳು ಹೇಳಿದ್ರೂ ‘ನಮ್ಮ ಯೆಹೋವ ಎಂಥ ದೇವರು’ ಅಂತ ನಮಗೆ ಚೆನ್ನಾಗಿ ಗೊತ್ತು. ಹಾಗಾಗಿ ಜನ್ರಿಗೆ ಆತನ ಬಗ್ಗೆ ಸತ್ಯ ಹೇಳೋ, ಆತನೆಷ್ಟು ಒಳ್ಳೆಯವನು ಅಂತ ಅರ್ಥ ಮಾಡಿಸೋ ಅವಕಾಶ ನಮಗಿದೆ. (ಯೆಶಾ. 43:10) ಇಷ್ಟೊತ್ತು, ನಾವು ಯೆಹೋವನಿಗೆ ಯಾಕೆ ಗೌರವ ಕೊಡಬೇಕು ಅಂತ ಕಲಿತ್ವಿ. ಈಗ, ನಾವು ಯೆಹೋವನಿಗೆ ಹೇಗೆ ಗೌರವ ಕೊಡಬೇಕು ಅಂತ ಕಲಿಯೋಣ. ಕೀರ್ತನೆ 96 ಯೆಹೋವ ದೇವರಿಗೆ ಗೌರವ ಕೊಡೋದ್ರ ಬಗ್ಗೆ ತಿಳಿಸುತ್ತೆ. ಹಾಗಾಗಿ ಅದ್ರಲ್ಲಿರೋ ಕೆಲವು ಮಾತುಗಳನ್ನ ನಾವೀಗ ಚರ್ಚೆ ಮಾಡೋಣ.

ನಾವು ಯೆಹೋವನಿಗೆ ಹೇಗೆ ಗೌರವ ಕೊಡಬೇಕು?

8. ಯೆಹೋವ ದೇವ್ರಿಗೆ ಗೌರವ ಕೊಡೋಕೆ ನಾವೇನು ಮಾಡಬೇಕು? (ಕೀರ್ತನೆ 96:1-3)

8 ಕೀರ್ತನೆ 96:1-3 ಓದಿ. ನಾವು ಜನ್ರಿಗೆ ಯೆಹೋವನ ಒಳ್ಳೇತನದ ಬಗ್ಗೆ ಹೇಳಬೇಕು. ಈ ವಚನಗಳಲ್ಲಿ “ಯೆಹೋವನಿಗೆ ಹಾಡಿ,” “ಆತನ ಹೆಸ್ರನ್ನ ಸ್ತುತಿಸಿ,” “ಆತನ ರಕ್ಷಣೆಯ ಕೆಲಸಗಳ ಬಗ್ಗೆ ಪ್ರತಿದಿನ ಸಿಹಿಸುದ್ದಿ ಸಾರಿ,” “ಜನಾಂಗಗಳ ಮಧ್ಯ ಆತನ ಗೌರವದ ಬಗ್ಗೆ ಘೋಷಿಸಿ” ಅಂತಿದೆ. ನಾವು ಹೀಗೆ ಮಾಡಿದ್ರೆ ಯೆಹೋವನ ಹೆಸ್ರಿಗೆ ಗೌರವ ಕೊಟ್ಟ ಹಾಗಿರುತ್ತೆ. ಹಿಂದಿನ ಕಾಲದಲ್ಲಿದ್ದ ಯೆಹೂದ್ಯರು ಮತ್ತು ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ಯೆಹೋವನ ಬಗ್ಗೆ ಸತ್ಯ ಹೇಳೋಕೆ ಯಾವತ್ತೂ ಹಿಂದೆ ಮುಂದೆ ನೋಡಲಿಲ್ಲ. ಅವರು ಸಿಕ್ತಿದ್ದ ಒಂದೊಂದು ಅವಕಾಶನೂ ಬಳಸ್ಕೊಂಡು ಯೆಹೋವ ತಮಗೆ ಎಷ್ಟೆಲ್ಲಾ ಒಳ್ಳೇದು ಮಾಡಿದ್ದಾನೆ ಅಂತ ಹೇಳ್ತಿದ್ರು. ಅಷ್ಟೇ ಅಲ್ಲ ಆತನ ಹೆಸ್ರಿನ ಪರವಾಗಿ ನಿಂತ್ರು, ಆತನನ್ನ ಯಾವತ್ತೂ ಬಿಟ್ಕೊಡಲಿಲ್ಲ. (ದಾನಿ. 3:16-18; ಅ. ಕಾ. 4:29) ಇದನ್ನ ನಾವು ಹೇಗೆ ಮಾಡಬಹುದು?

9-10. (ಎ) ಆ್ಯಂಜಲೀನ ಏನು ಮಾಡಿದ್ರು? (ಬಿ) ನಾವು ಅವ್ರಿಂದ ಏನು ಕಲಿತೀವಿ? (ಚಿತ್ರ ನೋಡಿ.)

9 ಈ ತರ ಯೆಹೋವನ ಹೆಸ್ರಿಗೆ ಗೌರವ ತಂದಿರೋ ಒಬ್ಬ ಸಹೋದರಿಯ ಅನುಭವ ನೋಡೋಣ. ಅವ್ರ ಹೆಸ್ರು ಆ್ಯಂಜಲೀನ, a ಅವರು ಅಮೆರಿಕಾದವರು. ಅವರು ಒಂದು ಕಂಪನಿಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರ್ಕೊಂಡ್ರು. ಕೆಲಸಕ್ಕೆ ಹೊಸದಾಗಿ ಸೇರ್ಕೊಂಡವರು ತಮ್ಮನ್ನ ಪರಿಚಯ ಮಾಡ್ಕೊಳ್ಳೋಕೆ ಅಲ್ಲಿ ಒಂದು ಮೀಟಿಂಗ್‌ ಮಾಡಿದ್ರು. ಆ ಮೀಟಿಂಗಲ್ಲಿ ಕೆಲವು ಫೋಟೋಗಳನ್ನ ತೋರಿಸೋಕೆ ಆ್ಯಂಜಲೀನ ರೆಡಿ ಮಾಡ್ಕೊಂಡ್ರು. ಅದನ್ನ ತೋರಿಸಿ ‘ನಾನೊಬ್ಬ ಯೆಹೋವನ ಸಾಕ್ಷಿ. ಅದಕ್ಕೆ ನಾನು ಖುಷಿ ಖುಷಿಯಾಗಿದ್ದೀನಿ’ ಅಂತ ಹೇಳಬೇಕು ಅಂದ್ಕೊಂಡಿದ್ರು. ಆದ್ರೆ ಇವ್ರಿಗಿಂತ ಮುಂಚೆ ತನ್ನ ಬಗ್ಗೆ ಹೇಳ್ಕೊಂಡ ವ್ಯಕ್ತಿ, ‘ನಾನು ಯೆಹೋವನ ಸಾಕ್ಷಿಗಳ ಕುಟುಂಬದಲ್ಲಿ ಬೆಳೆದೆ’ ಅಂತ ಹೇಳಿದ. ಅವನು ಸಾಕ್ಷಿಗಳು ನಂಬೋ ವಿಷ್ಯಗಳ ಬಗ್ಗೆ ತಪ್ಪುತಪ್ಪಾಗಿ ಹೇಳ್ತಾ ಸಾಕ್ಷಿಗಳನ್ನ ಆಡ್ಕೊಂಡ. “ಇದನ್ನೆಲ್ಲಾ ಕೇಳಿಸ್ಕೊಂಡಾಗ ನನ್ನ ಎದೆ ಡವಡವ ಅಂತ ಬಡ್ಕೊತ್ತಿತ್ತು. ಆದ್ರೆ ಯಾರೋ ಮೂರನೇ ವ್ಯಕ್ತಿ ನಮ್ಮ ಅಪ್ಪ ಯೆಹೋವನ ಬಗ್ಗೆ ತಪ್‌ತಪ್ಪಾಗಿ ಮಾತಾಡ್ತಿದ್ರೆ ನಾನು ಕೇಳಿಸ್ಕೊಂಡು ಸುಮ್ನೇ ಇರಬೇಕಾ? ಅಥವಾ ಯೆಹೋವನ ಬಗ್ಗೆ ಸತ್ಯ ಹೇಳಿ ಆತನ ಪರ ನಿಲ್ಲಬೇಕಾ ಅಂತ ಯೋಚ್ನೆ ಮಾಡ್ದೆ” ಅಂತಾರೆ ಆ್ಯಂಜಲೀನ.

10 ಈ ತರ ಆ್ಯಂಜಲೀನ ಯೋಚಿಸ್ತಾ ಇರೋವಾಗ ಆ ವ್ಯಕ್ತಿಯ ಮಾತು ಮುಗಿತಾ ಬರುತ್ತೆ. ಆಗ ಆ್ಯಂಜಲೀನ ತನ್ನ ಮನಸ್ಸಲ್ಲೇ ಚಿಕ್ಕ ಪ್ರಾರ್ಥನೆ ಮಾಡ್ಕೊಂಡು ತನ್ನ ಮಾತನ್ನ ಶುರು ಮಾಡ್ತಾಳೆ. ಅವಳು ಆ ವ್ಯಕ್ತಿಯನ್ನ ಗೌರವದಿಂದ ನೋಡ್ತಾ “ನಿಮ್ಮ ತರಾನೇ ನಾನು ಯೆಹೋವನ ಸಾಕ್ಷಿಯಾಗಿ ಬೆಳೆದೆ. ಇವತ್ತಿನವರೆಗೂ ಸಾಕ್ಷಿಯಾಗೇ ಇದ್ದೀನಿ” ಅಂತ ಹೇಳ್ತಾಳೆ. ಅವಳ ಎದೆ ಡವಡವ ಅಂತ್ತಿದ್ರೂ ನಗ್‌ ನಗ್ತಾ ಮಾತಾಡಿದ್ಲು. ಅವಳು ಅಧಿವೇಶನದಲ್ಲಿ ತೆಗೆದ ಒಳ್ಳೊಳ್ಳೆ ಫೋಟೋಗಳನ್ನ ತೋರಿಸ್ತಾ ಎಷ್ಟು ಖುಷಿಯಾಗಿದ್ದೀನಿ ಅಂತ ಹೇಳಿದಳು. ಆಮೇಲೆ ನಾವು ಬೈಬಲನ್ನ ಯಾಕೆ ನಂಬ್ತೀವಿ, ಹೇಗೆ ನಂಬ್ತೀವಿ ಅಂತ ಯಾರಿಗೂ ನೋವಾಗದೇ ಇರೋ ತರ ವಿವರಿಸಿದಳು. (1 ಪೇತ್ರ 3:15) ಮುಂದೇನಾಯ್ತು ಗೊತ್ತಾ? ಆ್ಯಂಜಲೀನಳ ಮಾತು ಮುಗಿಯೋಷ್ಟರಲ್ಲಿ ಆ ವ್ಯಕ್ತಿಯ ಮನಸ್ಸು ಕರಗಿತ್ತು. ಅದಕ್ಕೆ ಅವನು, ‘ಯೆಹೋವನ ಸಾಕ್ಷಿಯಾಗಿದ್ದಾಗ ನಾನೂ ತುಂಬ ಖುಷಿಯಾಗಿದ್ದೆ’ ಅಂತ ಹೇಳಿದ. ಇದನ್ನೆಲ್ಲಾ ನೋಡಿ ಆ್ಯಂಜಲೀನ, “ನಾವು ಯೆಹೋವನ ಪರ ನಿಂತ್ಕೊಳ್ಳಲೇಬೇಕು. ನಾವೇನಾದ್ರೂ ಜೀವನದಲ್ಲಿ ದೊಡ್ಡ ಸಾಧನೆ ಮಾಡ್ತೀವಂದ್ರೆ ಅದು ಆತನ ಪರವಾಗಿ ಮಾತಾಡೋದೇ” ಅಂದ್ರು. ನಮಗೂ ಆ್ಯಂಜಲೀನ ತರ ಅವಕಾಶ ಇದೆ. ಬೇರೆಯವರು ಯೆಹೋವನ ಬಗ್ಗೆ ಕೆಟ್ಟದಾಗಿ ಮಾತಾಡೋವಾಗ ನಾವು ಆತನ ಪರ ಧೈರ್ಯವಾಗಿ ನಿಂತ್ಕೊಬೇಕು.

ನಮ್ಮ ಮಾತಿಂದ ಯೆಹೋವನಿಗೆ ಗೌರವ ಕೊಡ್ತೀವಿ (ಪ್ಯಾರ 9, 10 ನೋಡಿ) b


11. ಮುಂಚೆ ಇಂದಾನೂ ಯೆಹೋವನ ಸೇವಕರು ಹೇಗೆಲ್ಲಾ ಕಾಣಿಕೆಗಳನ್ನ ಕೊಟ್ಟಿದ್ದಾರೆ? (ಕೀರ್ತನೆ 96:8)

11 ಕೀರ್ತನೆ 96:8 ಓದಿ. ನಮ್ಮ ಹತ್ರ ಇರೋದನ್ನ ಯೆಹೋವನಿಗೆ ಕೊಡಬೇಕು. ಹಿಂದಿನ ಕಾಲದಲ್ಲಿ ಮತ್ತು ಇವತ್ತೂ ಯೆಹೋವನ ಜನ್ರು ತಮ್ಮ ಹತ್ರ ಇರೋ ಹಣ ಆಸ್ತಿ ವಸ್ತುಗಳನ್ನ ಯೆಹೋವನಿಗೆ ಕೊಡ್ತಾ ಬಂದಿದ್ದಾರೆ. (ಜ್ಞಾನೋ. 3:9) ಉದಾಹರಣೆಗೆ, ಇಸ್ರಾಯೇಲ್ಯರು ಆಲಯವನ್ನ ಕಟ್ಟೋಕೆ, ಅದನ್ನ ಚೆನ್ನಾಗಿ ಇಟ್ಕೊಳ್ಳೋಕೆ ಕೈ ತುಂಬಿ ಚೆಲ್ಲೋಷ್ಟು ಕಾಣಿಕೆಗಳನ್ನ ಕೊಟ್ರು. (2 ಅರ. 12:4, 5; 1 ಪೂರ್ವ. 29:3-9) ಯೇಸು ಮತ್ತು ಆತನ ಅಪೊಸ್ತಲರ ಸೇವೆ ಮಾಡೋಕೆ ಕೆಲವು ಶಿಷ್ಯರು ತಮ್ಮ ‘ಹಣ-ಆಸ್ತಿ ಖರ್ಚು ಮಾಡಿದ್ರು.’ (ಲೂಕ 8:1-3) ಅಷ್ಟೇ ಅಲ್ಲ ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ಬೇರೆ ಸಹೋದರ ಸಹೋದರಿಯರಿದ್ದ ಕಡೆ ವಿಪತ್ತಾದಾಗ ಪರಿಹಾರ ಕಳಿಸಿ ಕೈಲಾದಷ್ಟು ಸಹಾಯ ಮಾಡಿದ್ರು. (ಅ. ಕಾ. 11:27-29) ಇವತ್ತು ನಾವೂ ಧಾರಾಳವಾಗಿ, ಮನಸಾರೆ ಕಾಣಿಕೆಗಳನ್ನ ಕೊಡಬೇಕು. ಆಗ ಯೆಹೋವನಿಗೆ ಗೌರವ ಕೊಟ್ಟ ಹಾಗೆ ಇರುತ್ತೆ.

12. ನಾವು ಕೊಡೋ ಕಾಣಿಕೆಗಳಿಂದ ಯೆಹೋವನಿಗೆ ಹೇಗೆ ಗೌರವ ಸಿಗುತ್ತೆ? (ಚಿತ್ರ ನೋಡಿ.)

12 ಕಾಣಿಕೆ ಕೊಡೋದ್ರಿಂದ ಯೆಹೋವನ ಹೆಸ್ರಿಗೆ ಹೇಗೆ ಗೌರವ ಬಂತು ಅನ್ನೋದಕ್ಕೆ ಒಂದು ಉದಾಹರಣೆ ನೋಡೋಣ. 2020ರಲ್ಲಿ ಜಿಂಬಾಬ್ವೆಯಲ್ಲಿ ಬರ ಬಂತು. ಅದು ತುಂಬ ಸಮಯದವರೆಗೂ ಇತ್ತು. ಇದ್ರಿಂದ ಲಕ್ಷಾಂತರ ಜನ ಒಂದು ಹೊತ್ತು ಊಟಕ್ಕೂ ಪರದಾಡೋ ಪರಸ್ಥಿತಿ ಬಂತು. ನಮ್ಮ ಸಹೋದರಿ ಪ್ರಿಸ್ಕಗೂ ಹೀಗೆ ಆಯ್ತು. ಆದ್ರೂ ಅವರು ಮುಂಚಿನ ತರಾನೇ ಪ್ರತಿ ಬುಧವಾರ ಮತ್ತು ಶುಕ್ರವಾರ ತಪ್ಪದೇ ಸೇವೆಗೆ ಹೋಗ್ತಿದ್ರು. ಬೇರೆಯವರು ಆ ದಿನ ಉಳುಮೆ ಮಾಡ್ತಿದ್ರೂ ಇವರು ಸೇವೆಗೆ ಹೋಗ್ತಿದ್ರು. ಅದಕ್ಕೆ ಅಕ್ಕಪಕ್ಕದ ಜನ “ನೋಡ್ತಾ ಇರು, ಸೇವೆ ಸೇವೆ ಅಂತ ಹೋಗ್ತಾ ಇದ್ರೆ ನಿಂಗೆ ಸಾವೇ ಗತಿ” ಅಂತ ಆಡ್ಕೊತ್ತಿದ್ರು. ಆಗ ಪ್ರಿಸ್ಕ “ನಮ್ಮ ಯೆಹೋವ ದೇವರು ಯಾವತ್ತೂ ನನ್ನ ಕೈ ಬಿಡಲ್ಲ” ಅಂತ ಹೇಳಿದ್ರು. ಸ್ವಲ್ಪ ಸಮಯದಲ್ಲೇ ಬರದಿಂದ ಕಷ್ಟಪಡ್ತಿರೋ ನಮ್ಮ ಸಹೋದರ ಸಹೋದರಿಯರಿಗೆ ಬೇಕಾಗಿರೋ ನೀರು, ಊಟ, ಬಟ್ಟೆನ ನಮ್ಮ ಸಂಘಟನೆ ಕೊಡ್ತು. ಇದನ್ನೆಲ್ಲಾ ನಮ್ಮ ಸಹೋದರರ ಕಾಣಿಕೆಯಿಂದ ಮಾಡೋಕಾಯ್ತು. ಅದನ್ನ ನೋಡಿದಾಗ ಆ ಅಕ್ಕಪಕ್ಕದವರು “ನೀನು ಹೇಳಿದ ಹಾಗೇ ನಿಮ್ಮ ಯೆಹೋವ ದೇವರು ನಿನ್ನ ಕೈ ಬಿಡಲಿಲ್ಲ. ನಾವೂ ಆ ದೇವ್ರ ಬಗ್ಗೆ ಕಲಿಬೇಕು” ಅಂತ ಹೇಳಿದ್ರು. ಆಮೇಲೆ ಅವಳಿಂದ ಏಳು ಜನ ಮೀಟಿಂಗ್‌ ಬರೋಕೆ ಶುರು ಮಾಡಿದ್ರು.

ಮನಸಾರೆ ಕಾಣಿಕೆಗಳನ್ನ ಕೊಡೋ ಮೂಲಕ ನಾವು ಯೆಹೋವನಿಗೆ ಗೌರವ ಕೊಡ್ತೀವಿ (ಪ್ಯಾರ 12 ನೋಡಿ) c


13. ನಮ್ಮ ನಡತೆ ಹೇಗೆ ಯೆಹೋವನಿಗೆ ಗೌರವ ತರುತ್ತೆ? (ಕೀರ್ತನೆ 96:9)

13 ಕೀರ್ತನೆ 96:9 ಓದಿ. ನಮ್ಮ ನಡತೆ ಚೆನ್ನಾಗಿರಬೇಕು. ದೇವಾಲಯದಲ್ಲಿ ಕೆಲಸ ಮಾಡೋ ಎಲ್ರೂ ಒಳಗೆ ಹೋಗೋ ಮುಂಚೆ ಕೈ ಕಾಲುಗಳನ್ನ ತೊಳ್ಕೊಳ್ಳಲೇ ಬೇಕಿತ್ತು. (ವಿಮೋ. 40:30-32) ಅವ್ರ ತರ ನಾವು ನೀಟಾಗಿ ಇರೋದು ತುಂಬ ಮುಖ್ಯ. ಆದ್ರೆ ಅದಕ್ಕಿಂತ ನಾವು ಮನಸ್ಸೊಳಗೆ ಹೇಗೆ ಇದ್ದೀವಿ ಅನ್ನೋದು ಇನ್ನೂ ಮುಖ್ಯ. (ಕೀರ್ತ. 24:3, 4; 1 ಪೇತ್ರ 1:15, 16) ಅದಕ್ಕೆ ಹಳೇ ವ್ಯಕ್ತಿತ್ವನ ತೆಗೆದು ಹಾಕಬೇಕು ಅಂದ್ರೆ ಕೆಟ್ಟ ಗುಣಗಳನ್ನ ಬಿಟ್ಟುಬಿಡಬೇಕು. ಆಮೇಲೆ, “ಹೊಸ ವ್ಯಕ್ತಿತ್ವ” ಹಾಕೊಳ್ಳಬೇಕು ಅಂದ್ರೆ ಯೆಹೋವನಿಗೆ ಇಷ್ಟ ಆಗೋ ತರ ಯೋಚ್ನೆ ಮಾಡಬೇಕು, ಆತನಲ್ಲಿರೋ ಗುಣಗಳನ್ನ ನಾವೂ ತೋರಿಸಬೇಕು. (ಕೊಲೊ. 3:9, 10) ಯೆಹೋವನ ಸಹಾಯ ಇದ್ರೆ ಎಂಥವರು ಬೇಕಾದ್ರೂ ಒಳ್ಳೇ ವ್ಯಕ್ತಿ ಆಗ್ತಾರೆ. ತುಂಬ ಕೋಪ ಇದ್ದವರು, ಅನೈತಿಕ ಜೀವನ ನಡೆಸ್ತಿದ್ದವರು ಕೂಡ ಬದಲಾಗ್ತಾರೆ.

14. ಜ್ಯಾಕ್‌ ಅನುಭವದಿಂದ ನೀವೇನು ಕಲಿತ್ರಿ? (ಚಿತ್ರ ನೋಡಿ.)

14 ಈ ತರ ಬದಲಾದವ್ರಲ್ಲಿ ಜ್ಯಾಕ್‌ ಕೂಡ ಒಬ್ರು. ಅವರು ಎಷ್ಟು ಕ್ರೂರಿ ಆಗಿದ್ರು ಅಂದ್ರೆ ಜನ ಅವ್ರ ಹೆಸ್ರು ಕೇಳಿದ್ರೆನೇ ನಡುಗ್ತಿದ್ರು. ಅದಕ್ಕೆ ಕೆಲವರು ಅವ್ರನ್ನ ರಾಕ್ಷಸ ಅಂತಾನೇ ಕರೀತಿದ್ರು. ಅವರು ತುಂಬಾ ಕ್ರೈಮ್‌ಗಳನ್ನ ಮಾಡಿದ್ರಿಂದ ಕೋರ್ಟ್‌ ಅವ್ರಿಗೆ ಮರಣದಂಡನೆ ತೀರ್ಪು ಕೊಡ್ತು. ಆ ಸಮಯದಲ್ಲಿ ಜೈಲಿಗೆ ಬಂದು ಬೈಬಲ್‌ ಕಲಿಸ್ತಿದ್ದ ಸಹೋದರನ ಹತ್ರ ಬೈಬಲ್‌ ಕಲಿಯೋಕೆ ಜ್ಯಾಕ್‌ ಒಪ್ಕೊಂಡ್ರು. ಕಲೀತಿದ್ದ ಒಂದೊಂದೇ ವಿಷ್ಯಗಳನ್ನ ಪಾಲಿಸ್ತಾ ಹಳೇ ವ್ಯಕ್ತಿತ್ವವನ್ನ ಪೂರ್ತಿಯಾಗಿ ತೆಗೆದುಹಾಕಿ ದೀಕ್ಷಾಸ್ನಾನ ತಗೊಂಡ್ರು. ಕೊನೆಗೂ ಜ್ಯಾಕ್‌ಗೆ ಮರಣ ದಂಡನೆ ಕೊಡೋ ದಿನ ಬಂದೇ ಬಿಡ್ತು. ಆಗ ಅಲ್ಲಿದ್ದ ಪೊಲೀಸರು “ಇಂಥಾ ಒಳ್ಳೇ ವ್ಯಕ್ತಿಗೆ ಸಾವು ಬರ್ತಿದ್ಯಲ್ಲಾ” ಅಂತ ಕಣ್ಣೀರು ಹಾಕಿದ್ರು. ಅವ್ರಲ್ಲೊಬ್ರು “ಮುಂಚೆ ಈ ಜೈಲಲ್ಲಿ ಜ್ಯಾಕ್‌ನಷ್ಟು ಕೆಟ್ಟ ವ್ಯಕ್ತಿ ಬೇರೆ ಯಾರೂ ಇರ್ಲಿಲ್ಲ. ಆದ್ರೆ ಈಗ ಅವನಷ್ಟು ಒಳ್ಳೇ ವ್ಯಕ್ತಿ ಹುಡುಕಿದ್ರೂ ಸಿಗಲ್ಲ” ಅಂದ್ರು. ಜ್ಯಾಕ್‌ ಸತ್ತು ಮಾರನೇ ವಾರ ಏನಾಯ್ತು ಗೊತ್ತಾ? ಆ ವಾರ ನಡೆದ ಕೂಟಕ್ಕೆ ಒಬ್ಬ ಹೊಸ ಕೈದಿನೂ ಬಂದಿದ್ದ! ಯಾಕೆ? ಜ್ಯಾಕ್‌ ಇಷ್ಟರ ಮಟ್ಟಿಗೆ ಬದಲಾಗಿದ್ದನ್ನ ನೋಡಿ ‘ಇಷ್ಟು ಒಳ್ಳೇ ದೇವರು ಯಾರಪ್ಪಾ, ಆತನ ಬಗ್ಗೆ ಕಲಿಯೋಕೆ ನಾನೇನು ಮಾಡಬೇಕು’ ಅಂತ ತಿಳ್ಕೊಳ್ಳೋಕೆ ಬಂದಿದ್ದ. ಇಂಥ ಉದಾಹರಣೆಗಳು ನಮ್ಮ ಒಳ್ಳೆ ನಡತೆ ಯೆಹೋವನಿಗೆ ಎಷ್ಟು ಗೌರವ ತರುತ್ತೆ ಅಂತ ತೋರಿಸುತ್ತೆ ಅಲ್ವಾ?—1 ಪೇತ್ರ 2:12.

ಒಳ್ಳೆ ನಡತೆಯಿಂದ ನಾವು ಯೆಹೋವನಿಗೆ ಗೌರವ ಕೊಡ್ತೀವಿ (ಪ್ಯಾರ 14 ನೋಡಿ) d


ಯೆಹೋವ ತನಗೆ ಗೌರವ ಬರೋಕೆ ಮುಂದೆ ಏನು ಮಾಡ್ತಾನೆ?

15. ಭವಿಷ್ಯದಲ್ಲಿ ಯೆಹೋವ ತನ್ನ ಹೆಸ್ರಿಗೆ ಗೌರವ ಬರೋ ತರ ಏನೆಲ್ಲಾ ಮಾಡ್ತಾನೆ? (ಕೀರ್ತನೆ 96:10-13)

15 ಕೀರ್ತನೆ 96:10-13 ಓದಿ. ಮುಂದೆ ಯೆಹೋವ ತನ್ನ ಹೆಸ್ರಿಗೆ ಗೌರವ ಬರೋ ತರ ಏನು ಮಾಡ್ತಾನೆ? ಕೀರ್ತನೆ 96 ಯೆಹೋವ ನ್ಯಾಯವಾಗಿ ತೀರ್ಪು ಮಾಡೋ ರಾಜ ಅಂತ ಹೇಳುತ್ತೆ. ಆತನು ಭೂಮಿಗೆ ನ್ಯಾಯವಾಗಿ ತೀರ್ಪು ಮಾಡಿ ತನ್ನ ಹೆಸ್ರಿಗೆ ಗೌರವ ಬರೋ ತರ ಮಾಡ್ತಾನೆ. ಆತನ ಹೆಸ್ರಿಗೆ ಕಳಂಕ ತಂದಿರೋ ಮಹಾ ಬಾಬೆಲನ್ನ ಬೇಗ ನಾಶ ಮಾಡ್ತಾನೆ. (ಪ್ರಕ. 17:5, 16; 19:1, 2) ಇದನ್ನ ನೋಡೋ ಕೆಲವರು ನಮ್ಮ ಜೊತೆ ಯೆಹೋವನ ಆರಾಧನೆ ಮಾಡೋಕೆ ಮುಂದೆ ಬರ್ತಾರೆ. (ಮಾರ್ಕ 8:38; 2 ಥೆಸ. 1:6-10) ಕೊನೆಗೆ ಹರ್ಮಗೆದೋನಲ್ಲಿ ಯೆಹೋವ ಸೈತಾನನ ಇಡೀ ವ್ಯವಸ್ಥೆಯನ್ನ, ಆತನನ್ನ ವಿರೋಧಿಸೋರನ್ನ, ಸುಳ್ಳು ಹೇಳಿ ಆತನ ಹೆಸ್ರಿಗೆ ಮಸಿ ಬಳಿಯೋರನ್ನ ಸರ್ವನಾಶ ಮಾಡ್ತಾನೆ. ಆದ್ರೆ ಯಾರೆಲ್ಲಾ ಆತನನ್ನ ಪ್ರೀತಿಸ್ತಾರೋ, ಆತನ ಮಾತು ಕೇಳ್ತಾರೋ, ಆತನಿಗೆ ಹೆಮ್ಮೆಯಿಂದ ಗೌರವ, ಘನತೆ ಕೊಡ್ತಾರೋ ಅವ್ರನ್ನ ತನ್ನ ಕಣ್‌ ರೆಪ್ಪೆಲಿಟ್ಟು ಕಾಪಾಡ್ತಾನೆ. ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆ ಆದ್ಮೇಲೆ ಒಂದು ಕೊನೆ ಪರೀಕ್ಷೆ ಇರುತ್ತೆ. ಅದಾದ್ಮೇಲೆ ಯೆಹೋವ ತನ್ನ ಹೆಸ್ರನ್ನ ಪೂರ್ತಿಯಾಗಿ ಪವಿತ್ರ ಮಾಡ್ಕೊಳ್ತಾನೆ. (ಪ್ರಕ. 20:7-10) ಆಗ “ಸಮುದ್ರ ನೀರಿಂದ ತುಂಬಿರೋ ಹಾಗೆ, ಭೂಮಿ ಯೆಹೋವನ ಮಹಿಮೆಯ ಜ್ಞಾನದಿಂದ ತುಂಬ್ಕೊಳ್ಳುತ್ತೆ.”—ಹಬ. 2:14.

16. ನೀವೇನು ಮಾಡಬೇಕಂತ ಇದ್ದೀರಾ? (ಚಿತ್ರ ನೋಡಿ.)

16 ಎಲ್ಲಿ ನೋಡಿದ್ರೂ ಎಲ್ರೂ ಯೆಹೋವನ ಹೆಸ್ರನ್ನ ಹಾಡಿ ಹೊಗಳ್ತಾ, ಆತನನ್ನ ಸ್ತುತಿಸ್ತಾ, ಆತನ ಹೆಸ್ರಿಗೆ ಗೌರವ ಕೊಡೋ ದಿನ ಆದಷ್ಟು ಬೇಗ ಬರುತ್ತೆ. ಅಲ್ಲಿವರೆಗೂ ಆತನ ಹೆಸ್ರಿಗೆ ಗೌರವ ಕೊಡೋಕೆ ಸಿಗೋ ಒಂದೊಂದು ಅವಕಾಶವನ್ನ ಚೆನ್ನಾಗಿ ಬಳಸ್ಕೊಬೇಕು. ಇದನ್ನೆಲ್ಲಾ ಮನಸ್ಸಲ್ಲಿಟ್ಟು ಆಡಳಿತ ಮಂಡಲಿ ಕೀರ್ತನೆ 96:8ನ್ನ 2025ರ ವರ್ಷ ವಚನವಾಗಿ ಆಯ್ಕೆ ಮಾಡಿದೆ. ಅಲ್ಲಿ ಹೀಗಿದೆ:“ಯೆಹೋವನ ಹೆಸ್ರಿಗೆ ಕೊಡಬೇಕಾದ ಗೌರವವನ್ನ ಕೊಡಿ.”

ಬದುಕುಳಿಯೋ ಪ್ರತಿಯೊಬ್ರೂ ಯೆಹೋವನಿಗೆ ಗೌರವ ಕೊಡೋ ಸಮಯ ಬಂದೇ ಬರುತ್ತೆ! (ಪ್ಯಾರ 16 ನೋಡಿ)

ಗೀತೆ 155 ನಂ ಖುಷಿಗೆ ಕಾರಣ ಯೆಹೋವ

a ಕೆಲವ್ರ ಹೆಸ್ರು ಬದಲಾಗಿದೆ.

b ಚಿತ್ರ ವಿವರಣೆ: ಆ್ಯಂಜಲೀನ ಅನುಭವವನ್ನ ತೋರಿಸ್ತಿರೋ ಚಿತ್ರ.

c ಚಿತ್ರ ವಿವರಣೆ: ಪ್ರಿಸ್ಕ ಅನುಭವವನ್ನ ತೋರಿಸ್ತಿರೋ ಚಿತ್ರ.

d ಚಿತ್ರ ವಿವರಣೆ: ಜ್ಯಾಕ್‌ ಅನುಭವವನ್ನ ತೋರಿಸ್ತಿರೋ ಚಿತ್ರ.