ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 5

ಗೀತೆ 38 ಮಾಡುವನು ಸ್ಥಿರ, ನೀಡುವನು ಬಲ!

ಯೆಹೋವ ಕೊಡೋ ಬಹುಮಾನ ಪಡಿಯೋಕೆ ನೀವು ರೆಡಿನಾ?

ಯೆಹೋವ ಕೊಡೋ ಬಹುಮಾನ ಪಡಿಯೋಕೆ ನೀವು ರೆಡಿನಾ?

“ಕ್ರಿಸ್ತ ಯೇಸು ಪಾಪಿಗಳನ್ನ ರಕ್ಷಿಸೋಕೆ ಈ ಲೋಕಕ್ಕೆ ಬಂದನು.”1 ತಿಮೊ. 1:15.

ಈ ಲೇಖನದಲ್ಲಿ ಏನಿದೆ?

ಬಿಡುಗಡೆ ಬೆಲೆಯಿಂದ ನಮಗೆ ಏನೆಲ್ಲ ಪ್ರಯೋಜನ ಇದೆ? ಅದನ್ನ ಕೊಟ್ಟಿರೋ ಯೆಹೋವನಿಗೆ ಋಣಿಯಾಗಿದ್ದೀವಿ ಅಂತ ನಾವು ಹೇಗೆಲ್ಲ ತೋರಿಸಬಹುದು?

1. ಯೆಹೋವನನ್ನ ಖುಷಿಪಡಿಸಬೇಕಂದ್ರೆ ನಾವೇನು ಮಾಡಬೇಕು?

 ನೀವು ತುಂಬ ಪ್ರೀತಿಸೋ ವ್ಯಕ್ತಿಗೆ ಒಂದು ಸುಂದರವಾಗಿರೋ, ಅವ್ರಿಗೆ ಪ್ರಯೋಜನ ಆಗೋ ಗಿಫ್ಟ್‌ ಕೊಟ್ಟಿದ್ದೀರ ಅಂದ್ಕೊಳ್ಳಿ. ಅದನ್ನ ಅವರು ಕಾಣಿಸದೇ ಇರೋ ತರ ಯಾವುದೋ ಮೂಲೆಗೆ ಬಿಸಾಡಿಬಿಟ್ರೆ, ಉಪಯೋಗಿಸದೇ ಇದ್ರೆ ಬೇಜಾರಾಗುತ್ತಲ್ವಾ? ಆದ್ರೆ ಆ ವಸ್ತುನ ಬಳಸಿದ್ರೆ ಅದನ್ನ ನೋಡಿ ಖುಷಿ ಪಟ್ರೆ ನಿಮಗೂ ಖುಷಿ ಆಗುತ್ತೆ. ಯೆಹೋವ ದೇವರು ತನ್ನ ಒಬ್ಬನೇ ಮಗನನ್ನ ನಮಗೋಸ್ಕರ ಗಿಫ್ಟಾಗಿ ಕೊಟ್ಟಿದ್ದಾನೆ. ನಾವದಕ್ಕೆ ಯಾವಾಗ್ಲೂ ಋಣಿಯಾಗಿದ್ದೀವಿ ಅಂತ ತೋರಿಸಬೇಕು. ಯೆಹೋವನ ತ್ಯಾಗನ, ಪ್ರೀತಿನ ನಾವು ನೆನಸ್ಕೊಳ್ತಾ ಇದ್ರೆನೇ ಆತನಿಗೆ ಖುಷಿ ಆಗೋದು.—ಯೋಹಾ. 3:16; ರೋಮ. 5:7, 8.

2. ಈ ಲೇಖನದಲ್ಲಿ ನಾವು ಏನೆಲ್ಲ ಕಲಿತೀವಿ?

2 ಹೋಗ್ತಾ ಹೋಗ್ತಾ ಯೆಹೋವ ಮಾಡಿರೋ ತ್ಯಾಗನ ಮರೆತು ನಾವು ಜೀವನ ಮಾಡೋಕೆ ಕಲಿತು ಬಿಡಬಹುದು. ಒಂದುವೇಳೆ ಆ ತರ ಆದ್ರೆ ಬಿಡುಗಡೆ ಬೆಲೆ ಅನ್ನೋ ಗಿಫ್ಟ್‌ನ ಮೂಲೆಗೆ ಬಿಸಾಡಿದ ತರ ಇರುತ್ತೆ. ಹಾಗೆ ಆಗಬಾರದು ಅಂದ್ರೆ ಯೆಹೋವ, ಯೇಸು ನಮಗೋಸ್ಕರ ಮಾಡಿರೋ ತ್ಯಾಗದ ಬಗ್ಗೆ ಆಗಿಂದಾಗ್ಗೆ ಯೋಚ್ನೆ ಮಾಡ್ತಾ ಇರಬೇಕು. ಆಗ ನಾವು ಅವ್ರಿಗೆ ಋಣಿ ಆಗಿರ್ತೀವಿ. ಇದನ್ನ ಮಾಡ್ತಾ ಇರೋಕೆ ಈ ಲೇಖನ ನಮಗೆ ಸಹಾಯ ಮಾಡುತ್ತೆ. ಬಿಡುಗಡೆ ಬೆಲೆಯಿಂದ ನಮಗೆ ಈಗ ಏನೆಲ್ಲ ಪ್ರಯೋಜನ ಇದೆ, ಮುಂದೆ ಇನ್ನೂ ಏನೆಲ್ಲ ಪ್ರಯೋಜನ ಸಿಗುತ್ತೆ? ಅಂತ ನಾವು ಈ ಲೇಖನದಲ್ಲಿ ನೋಡೋಣ. ಎಲ್ಲ ಸಮಯದಲ್ಲೂ ಮುಖ್ಯವಾಗಿ, ಸ್ಮರಣೆಯ ಸಮಯದಲ್ಲಿ ಯೆಹೋವನಿಗೆ ನಾವು ಋಣಿಯಾಗಿದ್ದೀವಿ ಅಂತ ತೋರಿಸೋಕೆ ಏನೆಲ್ಲ ಮಾಡಬಹುದು ಅಂತಾನೂ ಕಲಿಯೋಣ.

ಈಗ ಸಿಗೋ ಪ್ರಯೋಜನ

3. ಬಿಡುಗಡೆ ಬೆಲೆಯಿಂದ ಈಗಾಗ್ಲೇ ನಾವು ಪಡೀತಿರೋ ಒಂದು ಪ್ರಯೋಜನ ಯಾವುದು?

3 ಬಿಡುಗಡೆ ಬೆಲೆಯಿಂದಾಗಿ ನಾವು ಈಗಾಗ್ಲೇ ಬೆಲೆ ಕಟ್ಟಲಾಗದ ಪ್ರಯೋಜನ ಪಡೀತಿದ್ದೀವಿ. ಇದ್ರಿಂದಾಗಿನೇ ಯೆಹೋವ ನಮ್ಮ ಪಾಪಗಳನ್ನ ಕ್ಷಮಿಸ್ತಿದ್ದಾನೆ. ಆತನು ನಮ್ಮನ್ನ ಕ್ಷಮಿಸಬೇಕು ಅನ್ನೋ ರೂಲ್‌ ಏನಿಲ್ಲ. ಆದ್ರೂ ಆತನಿಗೆ ನಮ್ಮನ್ನ ಕ್ಷಮಿಸಬೇಕು ಅನ್ನೋ ಆಸೆ ಇದೆ. ಯೆಹೋವನ ಮನಸ್ಸನ್ನ ನೆನಸ್ಕೊಂಡು ಕೀರ್ತನೆಗಾರ “ಯೆಹೋವನೇ, ನೀನು ಒಳ್ಳೆಯವನು, ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಾಗಿ ಇರ್ತಿಯ” ಅಂತ ಬರೆದ.—ಕೀರ್ತ. 86:5; 103:3, 10-13.

4. (ಎ) ಯೆಹೋವ ಯಾರಿಗೋಸ್ಕರ ಬಿಡುಗಡೆ ಬೆಲೆ ಕೊಟ್ಟಿದ್ದಾನೆ? (ಬಿ) ಇದ್ರಿಂದ ನಮಗೆ ಏನು ಗೊತ್ತಾಗುತ್ತೆ? (ಲೂಕ 5:32; 1 ತಿಮೊತಿ 1:15)

4 ‘ಯೆಹೋವ ಕ್ಷಮಿಸೋಕೆ ರೆಡಿ ಇದ್ರೂ ಅದನ್ನ ಪಡ್ಕೊಳ್ಳೋ ಯೋಗ್ಯತೆ ನನಗಿಲ್ಲ’ ಅಂತ ಕೆಲವ್ರಿಗೆ ಅನಿಸಬಹುದು. ನಿಜ ಹೇಳಬೇಕಂದ್ರೆ ಅದನ್ನ ಪಡ್ಕೊಳ್ಳೋ ಯೋಗ್ಯತೆ ನಮ್ಮಲ್ಲಿ ಯಾರಿಗೂ ಇಲ್ಲ. ಅದಕ್ಕೆ ಪೌಲ, “ನನಗೆ ಅಪೊಸ್ತಲ ಅಂತ ಕರೆಸಿಕೊಳ್ಳೋ ಯೋಗ್ಯತೆ ಇಲ್ಲ. ಆದ್ರೆ ದೇವರ ಅಪಾರ ಕೃಪೆಯಿಂದಾನೇ ನಾನು ಅಪೊಸ್ತಲನಾಗಿದ್ದೀನಿ” ಅಂದ. (1 ಕೊರಿಂ. 15:9, 10) ಪೌಲನ ತರ ನಮಗೂ ದೇವರ ಅಪಾರ ಕೃಪೆ ಸಿಗಬೇಕಂದ್ರೆ ನಾವೂ ನಮ್ಮ ತಪ್ಪುಗಳನ್ನ ಒಪ್ಕೊಂಡು ಪಶ್ಚಾತ್ತಾಪ ಪಡಬೇಕು. ನೆನಪಿಡಿ, ನಮಗೆ ಯೋಗ್ಯತೆ ಇದೆ ಅಂತ ಯೆಹೋವ ನಮ್ಮನ್ನ ಕ್ಷಮಿಸ್ತಿಲ್ಲ, ನಮ್ಮ ಮೇಲೆ ಆತನಿಗೆ ಪ್ರೀತಿ ಇರೋದ್ರಿಂದಾನೇ ನಮ್ಮನ್ನ ಕ್ಷಮಿಸ್ತಿದ್ದಾನೆ! ಒಂದುವೇಳೆ ನಿಮಗೂ ‘ನಾನು ಲಾಯಕ್ಕಿಲ್ಲ, ನಂಗೆ ಯೋಗ್ಯತೆ ಇಲ್ಲ’ ಅಂತ ಅನಿಸಿದ್ರೆ, ಬೇಜಾರ್‌ ಮಾಡ್ಕೊಬೇಡಿ. ಯೆಹೋವ ಬಿಡುಗಡೆ ಬೆಲೆ ಕೊಟ್ಟಿರೋದು ಪಾಪನೇ ಮಾಡದಿರೋ ಮನುಷ್ಯರಿಗಲ್ಲ, ಪಶ್ಚಾತ್ತಾಪ ಪಡೋ ಪಾಪಿಗಳಿಗೆ ಅಂತ ನೆನಪು ಮಾಡ್ಕೊಬೇಕು.ಲೂಕ 5:32; 1 ತಿಮೊತಿ 1:15 ಓದಿ.

5. ‘ಯೆಹೋವನ ಕ್ಷಮೆ ಪಡ್ಕೊಳ್ಳೋದು ನನ್ನ ಹಕ್ಕು’ ಅಂತ ಯಾರಾದ್ರೂ ಹೇಳೋಕಾಗುತ್ತಾ? ವಿವರಿಸಿ.

5 ನಮ್ಮಲ್ಲಿ ಯಾರೇ ಆಗಲಿ, ಅದೆಷ್ಟೇ ವರ್ಷಗಳಿಂದ ದೇವರ ಸೇವೆ ಮಾಡ್ತಿರಲಿ, ‘ಯೆಹೋವನ ಕರುಣೆ, ಕ್ಷಮೆ ಪಡ್ಕೊಳೋ ಹಕ್ಕು ನನಗಿದೆ’ ಅಂತ ಅಂದ್ಕೊಬಾರದು. ನಾವು ಇಷ್ಟು ವರ್ಷ ಮಾಡಿರೋ ಸೇವೆನ ಯೆಹೋವ ಅಮೂಲ್ಯವಾಗಿ ನೋಡ್ತಾನೆ. (ಇಬ್ರಿ. 6:10) ಆದ್ರೆ ಯೆಹೋವ ತನ್ನ ಮಗನ ಬಿಡುಗಡೆ ಬೆಲೆಯನ್ನ ಫ್ರೀ ಗಿಫ್ಟಾಗಿ ಕೊಟ್ಟಿದ್ದಾನೇ ಹೊರತು ನಾವು ಮಾಡೋ ಸೇವೆಗೆ ಸಂಬಳವಾಗಿ ಅಲ್ಲ. ಒಂದುವೇಳೆ ನಾವು ಮಾಡೋ ಸೇವೆಯಿಂದನೇ ನಮಗೆ ಕ್ಷಮೆ ಸಿಗೋ ಹಾಗಿದ್ರೆ ಯೇಸು ನಮಗೋಸ್ಕರ ಯಾಕೆ ಸಾಯಬೇಕಿತ್ತು ಹೇಳಿ?—ಗಲಾತ್ಯ 2:21 ಹೋಲಿಸಿ.

6. ಪೌಲ ಯಾಕೆ ಅಷ್ಟು ಕಷ್ಟಪಟ್ಟು ಸೇವೆ ಮಾಡಿದ?

6 ‘ನಾನು ಅದೆಷ್ಟೇ ಸೇವೆ ಮಾಡಿದ್ರೂ ಬರೀ ಆ ಸೇವೆಯಿಂದಾನೇ ನನಗೆ ಕ್ಷಮೆ ಸಿಗೋಕೆ ಸಾಧ್ಯ ಇಲ್ಲ’ ಅಂತ ಪೌಲನಿಗೆ ಗೊತ್ತಿತ್ತು. ಮತ್ಯಾಕೆ ಅವನು ಅಷ್ಟೊಂದು ಸೇವೆ ಮಾಡಿದ? ಅವನಿಗೆಷ್ಟು ಯೋಗ್ಯತೆ ಇದೆ ಅಂತ ಜನ್ರಿಗೆ ತೋರಿಸೋಕಲ್ಲ, ಯೆಹೋವನ ಅಪಾರ ಕೃಪೆಗೆ ಅವನೆಷ್ಟು ಋಣಿ ಅಂತ ತೋರಿಸೋಕೆ! (ಎಫೆ. 3:7) ಪೌಲನ ತರನೇ ನಾವು ಕೂಡ ಹುರುಪಿಂದ ಸೇವೆ ಮಾಡೋಣ. ಯೆಹೋವನ ಕರುಣೆ ನಮ್ಮ ಹಕ್ಕು, ಅದನ್ನ ನಾವು ಸಂಪಾದಿಸಬೇಕು ಅನ್ನೋದಕ್ಕಲ್ಲ. ಬದಲಿಗೆ ಆತನಿಗೆ ನಾವೆಷ್ಟು ಋಣಿಗಳು ಅಂತ ತೋರಿಸೋಕೆ!

7. ಬಿಡುಗಡೆ ಬೆಲೆಯಿಂದ ನಮಗೆ ಈಗ ಸಿಗೋ ಎರಡನೇ ಪ್ರಯೋಜನ ಯಾವುದು? (ರೋಮನ್ನರಿಗೆ 5:1; ಯಾಕೋಬ 2:23)

7 ಬಿಡುಗಡೆ ಬೆಲೆಯಿಂದ ಈಗ ನಮಗೆ ಸಿಗೋ ಎರಡನೇ ಪ್ರಯೋಜನ ಏನಂತ ನೋಡೋಣ. ಹಿಂದಿನ ಲೇಖನದಲ್ಲಿ ಕಲಿತ ಹಾಗೆ ನಮ್ಮಲ್ಲಿ ಯಾರಿಗೂ ಯೆಹೋವನ ಜೊತೆ ಸ್ನೇಹ ಸಂಬಂಧ ಹುಟ್ತಾನೇ ಬಂದಿಲ್ಲ. ಆದ್ರೆ ಯೆಹೋವ ಬಿಡುಗಡೆ ಬೆಲೆ ಕೊಡೋ ಮೂಲಕ ನಮ್ಮನ್ನ ತನ್ನ ಫ್ರೆಂಡಾಗಿ ಮಾಡ್ಕೊಂಡನು. ಇದ್ರಿಂದಾಗಿ “ನಮಗೆ ದೇವರ ಜೊತೆ ಶಾಂತಿ ಸಂಬಂಧ” ಸಿಕ್ಕಿದೆ. ಹಾಗಾಗಿ ನಮ್ಮಲ್ಲಿ ಪ್ರತಿಯೊಬ್ರೂ ಯೆಹೋವನ ಜೊತೆ ಆಪ್ತ ಸ್ನೇಹ ಬೆಳೆಸ್ಕೊಬಹುದು. aರೋಮನ್ನರಿಗೆ 5:1; ಯಾಕೋಬ 2:23 ಓದಿ.

8. ಪ್ರಾರ್ಥನೆ ಮಾಡೋ ಅವಕಾಶ ಕೊಟ್ಟಿರೋದಕ್ಕೆ ನಾವ್ಯಾಕೆ ಯೆಹೋವನಿಗೆ ಋಣಿಗಳಾಗಿರಬೇಕು?

8 ಬಿಡುಗಡೆ ಬೆಲೆಯಿಂದ ನಮಗೆ ಯೆಹೋವನ ಜೊತೆ ಸ್ನೇಹ ಸಿಗುತ್ತೆ. ಈ ಸ್ನೇಹದಿಂದ ನಮಗೆ ಯೆಹೋವನ ಹತ್ರ ಮಾತಾಡೋ ಅವಕಾಶ ಸಿಗುತ್ತೆ. ಇದೊಂದು ಅದ್ಭುತ ಸುಯೋಗ ಅಲ್ವಾ? ಯೆಹೋವ ನಾವು ಮೀಟಿಂಗ್‌ನಲ್ಲಿ ಮಾಡೋ ಪ್ರಾರ್ಥನೆಗಳನ್ನ ಕೇಳೋದು ಮಾತ್ರನೇ ಅಲ್ಲ, ನಾವು ಒಬ್ಬೊಬ್ರು ವೈಯಕ್ತಿಕವಾಗಿ ಮಾಡೋ ಪ್ರಾರ್ಥನೆಗಳನ್ನೂ ಕೇಳ್ತಾನೆ. ಪ್ರಾರ್ಥನೆ ಮದ್ದಿನ ತರ ನಮ್ಮ ಮನಸ್ಸನ್ನ ನಿರಾಳ ಮಾಡುತ್ತೆ, ಚಿಂತೆ ಕಮ್ಮಿ ಮಾಡುತ್ತೆ, ಮನಶಾಂತಿ ಕೊಡುತ್ತೆ. ಅಷ್ಟೇ ಅಲ್ಲ ಯೆಹೋವನ ಜೊತೆ ಇರೋ ಸ್ನೇಹನೂ ಇನ್ನಷ್ಟು ಗಟ್ಟಿ ಮಾಡುತ್ತೆ. (ಕೀರ್ತ. 65:2; ಯಾಕೋ. 4:8; 1 ಯೋಹಾ. 5:14) ಯೆಹೋವ ಪ್ರಾರ್ಥನೆನ ಕೇಳ್ತಾನೆ, ಯಾವಾಗ್ಲೂ ಪ್ರಾರ್ಥನೆ ಮಾಡ್ತಾ ಇರೋರಿಗೆ ಆತನು ಇನ್ನೂ ಹತ್ರ ಆಗ್ತಾನೆ ಅನ್ನೋದು ಯೇಸುಗೆ ತುಂಬ ಚೆನ್ನಾಗಿ ಗೊತ್ತಿತ್ತು. ಅದಕ್ಕೆ ಯೇಸು ಪದೇ ಪದೇ ಪ್ರಾರ್ಥನೆ ಮಾಡ್ತಾ ಇದ್ದ. (ಲೂಕ 5:16) ಯೇಸು ಪ್ರಾಣ ಕೊಟ್ಟಿದ್ರಿಂದನೇ ನಾವು ಯೆಹೋವನ ಜೊತೆ ಸ್ನೇಹ ಬೆಳೆಸ್ಕೊಂಡಿದ್ದೀವಿ, ಮನಸ್ಸು ಬಿಚ್ಚಿ ಮಾತಾಡ್ತಿದ್ದೀವಿ. ಇದನ್ನೆಲ್ಲ ನೆನಸ್ಕೊಂಡಾಗ ನಾವು ಯೆಹೋವ ದೇವರಿಗೆ ಎಷ್ಟು ಋಣಿಗಳಾಗಿರಬೇಕು ಅಂತ ಅನಿಸುತ್ತೆ ಅಲ್ವಾ?

ಮುಂದೆ ಸಿಗೋ ಪ್ರಯೋಜನ

9. ಕೊನೇ ತನಕ ನಿಯತ್ತಾಗಿರೋ ಯೆಹೋವನ ಆರಾಧಕರಿಗೆ ಬಿಡುಗಡೆ ಬೆಲೆಯಿಂದ ಮುಂದೆ ಯಾವ ಪ್ರಯೋಜನ ಸಿಗುತ್ತೆ?

9 ನಿಯತ್ತಾಗಿರೋ ತನ್ನ ಆರಾಧಕರಿಗೆ ಬಿಡುಗಡೆ ಬೆಲೆಯಿಂದ ಮುಂದೆ ಯಾವ ಪ್ರಯೋಜನ ಸಿಗುತ್ತೆ? ಯೆಹೋವ ಅವ್ರಿಗೆ ಶಾಶ್ವತ ಜೀವ ಕೊಡ್ತೀನಿ ಅಂತ ಮಾತು ಕೊಟ್ಟಿದ್ದಾನೆ. ಸಾವೇ ಇಲ್ಲದೇ ಮನುಷ್ಯರು ಬದುಕೋಕೆ ಸಾಧ್ಯನೇ ಇಲ್ಲ ಅಂತ ತುಂಬ ಜನ ಅಂದ್ಕೊಳ್ತಾರೆ. ಯಾಕಂದ್ರೆ ಸಾವಿರಾರು ವರ್ಷಗಳಿಂದ ಜನ ಸಾಯ್ತಾನೇ ಇದ್ದಾರೆ. ಆದ್ರೆ ನಿಮಗೇ ಗೊತ್ತಲ್ವಾ? ಯೆಹೋವ ಮನುಷ್ಯರನ್ನ ಸೃಷ್ಟಿ ಮಾಡಿದಾಗ ‘ನೀವು ಶಾಶ್ವತವಾಗಿ ಬದುಕ್ತೀರ!’ ಅಂತ ಆಶೀರ್ವದಿಸಿದನು. ಒಂದುವೇಳೆ ಆದಾಮ ಪಾಪ ಮಾಡದೇ ಇದಿದ್ರೆ ನಾವ್ಯಾರೂ ಸಾಯದೇ ಶಾಶ್ವತವಾಗಿ ಬದುಕ್ತಾ ಇದ್ವಿ. ಶಾಶ್ವತವಾಗಿ ಬದುಕೋದು ಜನ್ರಿಗೆ ಈಗ ಕನಸಾಗಿರಬಹುದು. ಆದ್ರೆ ತುಂಬ ಬೇಗ ನನಸಾಗುತ್ತೆ! ಇದಕ್ಕೋಸ್ಕರ ಯೆಹೋವ ಅಂತಿಂಥ ಬೆಲೆ ಕಟ್ಟಿಲ್ಲ, ತನ್ನ ಒಬ್ಬನೇ ಮಗನ ಪ್ರಾಣ ತ್ಯಾಗ ಮಾಡಿದ್ದಾನೆ!—ರೋಮ. 8:32.

10. ಅಭಿಷಿಕ್ತರು ಮತ್ತು ಬೇರೆ ಕುರಿಗಳು ಯಾವುದಕ್ಕೋಸ್ಕರ ಕಾಯ್ತಾ ಇದ್ದಾರೆ?

10 ಶಾಶ್ವತವಾದ ಜೀವನ ನಮಗೆ ಮುಂದೆ ಸಿಗೋದಾದ್ರೂ ಅದ್ರ ಬಗ್ಗೆ ಈಗಿಂದಾನೇ ನಾವು ಯೋಚಿಸ್ತಾ ಇರಬೇಕು, ಕಾಯ್ತಾ ಇರಬೇಕು ಅಂತ ಯೆಹೋವ ಬಯಸ್ತಾನೆ. ಅಭಿಷಿಕ್ತರು, ಯೇಸುವಿನ ಜೊತೆ ಸ್ವರ್ಗದಿಂದ ಭೂಮಿನ ಆಳೋದಕ್ಕಾಗಿ ಕಾಯ್ತಾ ಇದ್ದಾರೆ. (ಪ್ರಕ. 20:6) ಬೇರೆ ಕುರಿಗಳು, ಪರದೈಸ್‌ ಭೂಮಿಲಿ ತಮ್ಮ ಕಷ್ಟ ಕಣ್ಣೀರನ್ನ ಯೆಹೋವ ಒರೆಸೋಕ್ಕೋಸ್ಕರ ಕಾಯ್ತಾ ಇದ್ದಾರೆ. (ಪ್ರಕ. 21:3, 4) ನೀವು ಬೇರೆ ಕುರಿಗಳಾ? ಈ ಭೂಮಿಲಿ ಶಾಶ್ವತವಾಗಿ ಬದುಕೋಕೆ ಕಾಯ್ತಾ ಇದ್ದೀರಾ? ‘ಸ್ವರ್ಗದ ಜೀವನಕ್ಕೆ ಹೋಲಿಸಿದ್ರೆ ಇದೇನು ಅಷ್ಟು ಚೆನ್ನಾಗಿರಲ್ಲ’ ಅಂತ ಅಂದ್ಕೊಬೇಡಿ. ಭೂಮಿಲಿ ಜೀವನ ಆಗ ಸಂತೋಷ, ಸಡಗರದಿಂದ ತುಂಬಿ ತುಳುಕುತ್ತೆ. ಮನುಷ್ಯರು ಇಂಥ ಜೀವನವನ್ನೇ ಆನಂದಿಸಬೇಕು ಅಂತ ದೇವರು ಅವ್ರನ್ನ ಸೃಷ್ಟಿಸಿದ್ದು.

11-12. ಪರದೈಸಲ್ಲಿ ಸಿಗೋ ಯಾವ ಆಶೀರ್ವಾದಗಳಿಗಾಗಿ ನೀವು ಕಾಯ್ತಾ ಇದ್ದೀರ? (ಚಿತ್ರಗಳನ್ನ ನೋಡಿ.)

11 ಭೂಮಿ ಪರದೈಸ್‌ ಆದಾಗ ನಿಮ್ಮ ಜೀವನ ಹೇಗಿರುತ್ತೆ ಅಂತ ಯೋಚಿಸಿದ್ದೀರಾ? ‘ನನಗೇನಾದ್ರೂ ಕಾಯಿಲೆ ಬಂದುಬಿಡುತ್ತಾ? ನಾನು ಸತ್ತೋಗ್ತೀನಾ?’ ಅನ್ನೋ ಭಯ ಅಲ್ಲಿರಲ್ಲ. (ಯೆಶಾ. 25:8; 33:24) ಯೆಹೋವ ಅಲ್ಲಿ ನಿಮ್ಮ ಒಂದೊಂದು ಆಸೆನೂ ಪೂರೈಸ್ತಾನೆ. ಅಲ್ಲಿ ನಿಮಗೆ ಯಾವುದ್ರ ಬಗ್ಗೆ ಕಲಿಯೋಕೆ ಆಸೆ ಇದೆ ಹೇಳಿ? ವಿಜ್ಞಾನದ ಬಗ್ಗೆನಾ? ಪ್ರಾಣಿ-ಪಕ್ಷಿಗಳ ಬಗ್ಗೆನಾ? ಸಂಗೀತದ ಬಗ್ಗೆನಾ? ಅಥವಾ ಚಿತ್ರ ಬಿಡಿಸೋದ್ರ ಬಗ್ಗೆನಾ? ಅಲ್ಲಿ ಯಾವುದನ್ನ ಬೇಕಾದ್ರೂ ಕಲಿಬಹುದು. ಮನೆ ಡಿಸೈನ್‌ ಮಾಡೋರಿಗೆ, ಮನೆ ಕಟ್ಟೋರಿಗೆ, ರೈತರಿಗೆ ಆಗ ತುಂಬಾನೇ ಡಿಮ್ಯಾಂಡ್‌ ಇರುತ್ತೆ. ಇವ್ರ ಜೊತೆ ಕೈ ಜೋಡಿಸ್ತಾ ರುಚಿರುಚಿಯಾಗಿ ಅಡುಗೆ ಮಾಡೋಕೆ, ಇವ್ರಿಗೆ ಬೇಕಾಗಿರೋ ವಸ್ತುಗಳನ್ನ ತಯಾರಿಸೋಕೆ, ಗಿಡಗಳನ್ನ ನೆಡೋಕೆ ಮತ್ತು ತೋಟಗಳನ್ನ ನೋಡ್ಕೊಳೋಕೆ ಅಲ್ಲಿ ಬೇಕಾದಷ್ಟು ಕೆಲ್ಸ ಇರುತ್ತೆ. (ಯೆಶಾ. 35:1; 65:21) ನೀವು ಸಾವೇ ಇಲ್ಲದೇ ಬದುಕೋದ್ರಿಂದ ನಿಮಗೆ ಏನು ಇಷ್ಟ ಬರುತ್ತೋ ಅದನ್ನೆಲ್ಲ ಅಲ್ಲಿ ಕಲಿಬಹುದು! ಯಾಕಂದ್ರೆ ನಿಮ್ಮ ಹತ್ರ ಅಷ್ಟು ಸಮಯ ಇರುತ್ತೆ!

12 ಸತ್ತೋಗಿರೋರು ಎದ್ದು ನಮ್ಮ ಕಣ್ಮುಂದೆ ಬರುವಾಗ ಖಂಡಿತ ನಮ್ಮ ಕಣ್ತುಂಬಿ ಬರುತ್ತೆ! (ಅ. ಕಾ. 24:15) ಅಷ್ಟೇ ಅಲ್ಲ ಸೃಷ್ಟಿಲಿರೋ ಎಷ್ಟೋ ಹೊಸ ಹೊಸ ವಿಷ್ಯಗಳನ್ನ ನೋಡ್ತೀವಿ. ಇದ್ರಿಂದ ಯೆಹೋವನ ಬಗ್ಗೆ ಲೆಕ್ಕ ಇಲ್ಲದಷ್ಟು ವಿಷ್ಯಗಳನ್ನ ಕಲಿತೀವಿ. (ಕೀರ್ತ. 104:24; ಯೆಶಾ. 11:9) ಇದೆಲ್ಲದಕ್ಕಿಂತ ಹೆಚ್ಚಾಗಿ ಅಲ್ಲಿ ನಾವು ತಪ್ಪೇ ಮಾಡದೇ ಇರೋದ್ರಿಂದ ಯಾವುದೇ ಕೊರಗಿಲ್ಲದೇ ಯೆಹೋವನ ಆರಾಧನೆ ಮಾಡ್ತೀವಿ. ಇಂಥ ಅದ್ಭುತ ಅವಕಾಶ, ಆಶೀರ್ವಾದಗಳನ್ನ ‘ಸ್ವಲ್ಪ ದಿನ ಪಾಪದ ಸುಖ ಅನುಭವಿಸೋಕೆ’ ಬಿಟ್ಟು ಕೊಡ್ತೀರಾ? (ಇಬ್ರಿ. 11:25) ಈ ಆಶೀರ್ವಾದಗಳನ್ನ ಪಡ್ಕೊಳೋಕೆ ನಾವೇನೇ ತ್ಯಾಗ ಮಾಡಿದ್ರೂ ಅದು ಏನೇನೂ ಅಲ್ಲ! ಈಗ ಕನಸಾಗಿರೋ ಪರದೈಸನ್ನ ಆದಷ್ಟು ಬೇಗ ಕಣ್ಣಾರೆ ನೋಡ್ತೀವಿ. ಯೆಹೋವ ದೇವರು ತನ್ನ ಮುದ್ದಿನ ಮಗ ಯೇಸುನ ನಮಗೋಸ್ಕರ ತ್ಯಾಗ ಮಾಡಿರಲಿಲ್ಲ ಅಂದಿದ್ರೆ ಇದ್ಯಾವುದೂ ನಮಗೆ ಸಿಕ್ತಿರಲಿಲ್ಲ.

ಪರದೈಸಲ್ಲಿ ಯಾವ ಆಶೀರ್ವಾದ ಪಡೆಯೋಕೆ ನೀವು ಕಾಯ್ತಾ ಇದ್ದೀರಾ? (ಪ್ಯಾರ 11-12 ನೋಡಿ)


ಯೆಹೋವನ ಪ್ರೀತಿಗೆ ನೀವೆಷ್ಟು ಋಣಿಗಳು ಅಂತ ತೋರಿಸಿ

13. ಯೆಹೋವನ ಪ್ರೀತಿಗೆ ನಾವು ಋಣಿಗಳಾಗಿದ್ದೀವಿ ಅಂತ ಹೇಗೆ ತೋರಿಸಬಹುದು? (2 ಕೊರಿಂಥ 6:1)

13 ಯೆಹೋವ ಮಾಡಿರೋ ತ್ಯಾಗಕ್ಕೆ, ತೋರಿಸಿರೋ ಪ್ರೀತಿಗೆ ನಾವು ಋಣಿಗಳು ಅಂತ ಹೇಗೆ ತೋರಿಸಬಹುದು? ಯೆಹೋವನ ಆರಾಧನೆಗೆ, ಸೇವೆಗೆ ನಮ್ಮ ಜೀವನದಲ್ಲಿ ಮೊದಲ ಸ್ಥಾನ ಕೊಡೋ ಮೂಲಕ ನಾವಿದನ್ನ ತೋರಿಸಬಹುದು. (ಮತ್ತಾ. 6:33) “ಜೀವಿಸುವವರು ಇನ್ಮುಂದೆ ತಮಗಾಗಿ ಜೀವಿಸಬಾರದು, ತಮಗೋಸ್ಕರ ಸತ್ತು ಮತ್ತೆ ಜೀವಂತವಾಗಿ ಎದ್ದು ಬಂದವನಿಗಾಗಿ ಜೀವಿಸಬೇಕು” ಅನ್ನೋ ಕಾರಣಕ್ಕೆ ಯೇಸು ಸತ್ತನು ಅಂತ ಬೈಬಲ್‌ ಹೇಳುತ್ತೆ. (2 ಕೊರಿಂ. 5:15) ಅದಕ್ಕೆ ಯೆಹೋವನ ಸೇವೆ ಮಾಡೋಕೆ ನಮ್ಮ ಕೈಲಿ ಏನೆಲ್ಲ ಆಗುತ್ತೋ ಅದನ್ನೆಲ್ಲ ಮಾಡೋ ಮೂಲಕ ನಾವೆಷ್ಟು ಋಣಿಗಳಾಗಿದ್ದೀವಿ ಅಂತ ತೋರಿಸೋಣ.2 ಕೊರಿಂಥ 6:1 ಓದಿ.

14. ಯೆಹೋವ ಕೊಡ್ತಿರೋ ನಿರ್ದೇಶನದಲ್ಲಿ ನಮಗೆ ನಂಬಿಕೆ ಇದೆ ಅಂತ ನಾವು ಹೇಗೆ ತೋರಿಸಬಹುದು?

14 ಯೆಹೋವನನ್ನ ನಂಬಿದ್ರೆ, ಆತನು ಕೊಡೋ ನಿರ್ದೇಶನಗಳನ್ನ ಪಾಲಿಸಿದ್ರೆ ನಾವು ಋಣಿಗಳಾಗಿದ್ದೀವಿ ಅಂತ ತೋರಿಸಬಹುದು. ಅದು ಹೇಗೆ? ಉದಾಹರಣೆಗೆ, ಉನ್ನತ ಶಿಕ್ಷಣ ಮಾಡಬೇಕಾ, ಯಾವ ತರದ ಕೆಲಸ ಆಯ್ಕೆ ಮಾಡಬೇಕು ಅನ್ನೋ ನಿರ್ಧಾರಗಳನ್ನ ಮಾಡುವಾಗ ನಮಗೇನು ಇಷ್ಟ ಅನ್ನೋದಕ್ಕಿಂತ, ಯೆಹೋವನಿಗೆ ಏನಿಷ್ಟ ಅನ್ನೋದನ್ನ ಯೋಚಿಸ್ತೀವಿ. (1 ಕೊರಿಂ. 10:31; 2 ಕೊರಿಂ. 5:7) ಯೆಹೋವ ಸರಿಯಾಗಿರೋದನ್ನೇ ಹೇಳ್ತಾನೆ ಅಂತ ನಂಬಿ ಅದ್ರ ಪ್ರಕಾರ ನಿರ್ಧಾರ ಮಾಡ್ತೀವಿ. ಆಗ ಆತನ ಜೊತೆಯಿರೋ ಸ್ನೇಹ, ಆತನ ಮೇಲೆ ನಮಗಿರೋ ನಂಬಿಕೆ ಇನ್ನೂ ಸ್ಟ್ರಾಂಗ್‌ ಆಗುತ್ತೆ. ಹೀಗೆ ನಮ್ಮ ನಂಬಿಕೆ ಹೆಚ್ಚಾಗೋದ್ರಿಂದ ನಾವು ಶಾಶ್ವತವಾಗಿ ಬದುಕೋ ಕಾಲ ಬಂದೇ ಬರುತ್ತೆ ಅಂತ ಮನದಟ್ಟಾಗುತ್ತೆ.—ರೋಮ. 5:3-5; ಯಾಕೋ. 2:21, 22.

15. ನಾವು ಋಣಿಗಳಾಗಿದ್ದೀವಿ ಅನ್ನೋದನ್ನ ಸ್ಮರಣೆಯ ಸಮಯದಲ್ಲಿ ಹೇಗೆಲ್ಲಾ ತೋರಿಸಬಹುದು?

15 ಈ ಸ್ಮರಣೆಯ ಸಮಯದಲ್ಲಿ ನಮ್ಮಿಂದ ಆಗಿದ್ದೆಲ್ಲ ಮಾಡಿ ಬಿಡುಗಡೆ ಬೆಲೆ ನಮಗೆಷ್ಟು ಅಮೂಲ್ಯ ಅಂತ ಯೆಹೋವನಿಗೆ ತೋರಿಸಬಹುದು. ಸ್ಮರಣೆಗೆ ನಾವು ಹಾಜರಾಗೋದಷ್ಟೇ ಅಲ್ಲ ಬೇರೆಯವ್ರನ್ನೂ ಕರೀಬಹುದು. (1 ತಿಮೊ. 2:4) ಸ್ಮರಣೆಯ ಕಾರ್ಯಕ್ರಮದಲ್ಲಿ ಏನೆಲ್ಲ ನಡೆಯುತ್ತೆ ಅಂತ ಅವ್ರಿಗೆ ವಿವರಿಸಬಹುದು. ಇದಕ್ಕೆ ಸಹಾಯ ಮಾಡೋಕೆ ಯೇಸು ಏಕೆ ಜೀವಕೊಟ್ಟನು? ಮತ್ತು ಯೇಸುವಿನ ಮರಣವನ್ನು ಸ್ಮರಿಸಿ ಅನ್ನೋ ಎರಡು ವಿಡಿಯೋಗಳು jw.org ವೆಬ್‌ಸೈಟಲ್ಲಿದೆ. ಹಿರಿಯರು ಮರೆಯದೇ ನಿಷ್ಕ್ರಿಯರನ್ನ ಆಮಂತ್ರಿಸಬೇಕು. ಕಳೆದು ಹೋಗಿರೋ ಯೆಹೋವನ ಕುರಿಗಳು ಮರಳಿ ಮಂದೆಗೆ ಬಂದಾಗ ಸ್ವರ್ಗದಲ್ಲೂ ಭೂಮಿಲೂ ಎಷ್ಟು ಸಂತೋಷ ಆಗುತ್ತೆ ಅಂತ ಯೋಚಿಸಿ ನೋಡಿ! (ಲೂಕ 15:4-7) ನೀವು ಸ್ಮರಣೆಗೆ ಹೋದ್ಮೇಲೆ ಒಬ್ಬರನ್ನೊಬ್ರು ಮಾತಾಡಿಸೋಕೆ, ಪ್ರೋತ್ಸಾಹಿಸೋಕೆ ಮರೀಬೇಡಿ. ಅದ್ರಲ್ಲೂ ಸುಮಾರು ವರ್ಷ ಆದ್ಮೇಲೆ ಬಂದವ್ರನ್ನ, ಹೊಸಬರನ್ನ ಮರೀದೇ ಮಾತಾಡಿಸಿ.—ರೋಮ. 12:13.

16. ಸ್ಮರಣೆಯ ಸಮಯದಲ್ಲಿ ಜಾಸ್ತಿ ಸೇವೆ ಮಾಡೋದ್ರಿಂದ ಏನು ಪ್ರಯೋಜನ?

16 ನಿಮ್ಮ ಕೈಲಾದ್ರೆ ಸ್ಮರಣೆಯ ಮುಂಚೆ ಮತ್ತು ಆದ್ಮೇಲೆ ಜಾಸ್ತಿ ಸೇವೆ ಮಾಡಿ. ನೀವಿದನ್ನ ಮಾಡಿದ್ರೆ ಯೆಹೋವನ ಮೇಲೆ ಯೇಸು ಮೇಲೆ ನಿಮಗಿರೋ ಗೌರವವನ್ನ ತೋರಿಸ್ತೀರ. ಹೀಗೆ ಜಾಸ್ತಿ ಸೇವೆ ಮಾಡಿದಾಗ ಯೆಹೋವ ನಿಮಗೆ ಹೇಗೆಲ್ಲ ಸಹಾಯ ಮಾಡ್ತಾನೆ ಅಂತ ನೋಡ್ತೀರ. ಇದ್ರಿಂದ ಯೆಹೋವನ ಮೇಲೆ ನಿಮಗಿರೋ ನಂಬಿಕೆ ಇನ್ನೂ ಜಾಸ್ತಿ ಆಗುತ್ತೆ. (1 ಕೊರಿಂ. 3:9) ಇದ್ರ ಜೊತೆಗೆ ದಿನದ ವಚನ ಅಥವಾ ಕೂಟದ ಕೈಪಿಡಿಯಲ್ಲಿ ಬರೋ ಸ್ಮರಣೆಯ ಬೈಬಲ್‌ ಓದುವಿಕೆನ ತಪ್ಪದೇ ಮಾಡಿ. ಅಷ್ಟೇ ಅಲ್ಲ, ಬೈಬಲಿನ ಯಾವುದಾದ್ರೂ ಒಂದು ಘಟನೆ ತಗೊಂಡು ಅದ್ರ ಬಗ್ಗೆ ಜಾಸ್ತಿ ಸಂಶೋಧನೆ ಮಾಡಿ.

17. ಯೆಹೋವನಿಗೆ ಯಾವುದ್ರಿಂದ ಖುಷಿ ಆಗುತ್ತೆ? (“ ಋಣಿಯಾಗಿದ್ದೀವಿ ಅಂತ ತೋರಿಸೋಕೆ . . . ” ಅನ್ನೋ ಚೌಕ ನೋಡಿ.)

17 ಈ ಲೇಖನದಲ್ಲಿರೋ ಎಲ್ಲ ಸಲಹೆಗಳನ್ನ ಎಲ್ರೂ ಪಾಲಿಸೋಕ್ಕಾಗಲ್ಲ ಅನ್ನೋದು ನಿಜಾನೇ. ‘ನೀವೆಷ್ಟು ಸೇವೆ ಮಾಡಿದ್ರಿ, ಬೇರೆಯವರು ಎಷ್ಟು ಸೇವೆ ಮಾಡಿದ್ರು’ ಅಂತ ಯೆಹೋವ ಯಾವತ್ತೂ ಹೋಲಿಸಿ ನೋಡೋಕೆ ಹೋಗಲ್ಲ. ಆದ್ರೆ ತನ್ನ ಮೇಲೆ ನಿಮ್ಮ ಹೃದಯದಲ್ಲಿ ಎಷ್ಟು ಪ್ರೀತಿ ಇದೆ ಅಂತ ಖಂಡಿತ ಯೆಹೋವ ನೋಡ್ತಾನೆ. ಬಿಡುಗಡೆ ಬೆಲೆಗೆ ನೀವೆಷ್ಟು ಋಣಿಯಾಗಿದ್ದೀರ ಅಂತ ತೋರಿಸ್ಕೊಟ್ಟಾಗ ಯೆಹೋವನಿಗೆ ಖಂಡಿತ ಖುಷಿ ಆಗುತ್ತೆ.—1 ಸಮು. 16:7; ಮಾರ್ಕ 12:41-44.

18. ನಾವು ಯೆಹೋವ ದೇವ್ರಿಗೆ ಮತ್ತು ಯೇಸುಗೆ ಯಾಕೆ ಋಣಿಗಳಾಗಿದ್ದೀವಿ?

18 ನಮ್ಮ ಪಾಪಗಳಿಗೆ ಸಿಕ್ತಿರೋ ಕ್ಷಮೆ, ಯೆಹೋವನ ಜೊತೆ ನಮಗಿರೋ ಸ್ನೇಹ ಮತ್ತು ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಇವೆಲ್ಲಕ್ಕೂ ಬಿಡುಗಡೆ ಬೆಲೆನೇ ತಳಪಾಯ! ಈ ತರ ಬಿಡುಗಡೆ ಬೆಲೆ ಕೊಟ್ಟು ಆಶೀರ್ವಾದ ಕೊಡೋಕೆ ಯೆಹೋವನ ಪ್ರೀತಿನೇ ಕಾರಣ! (1 ಯೋಹಾ. 4:19) ಅದಕ್ಕೆ ನಾವು ಯೆಹೋವನಿಗೆ ಯಾವಾಗ್ಲೂ ಋಣಿಯಾಗಿರೋಣ. ಅಷ್ಟೇ ಅಲ್ಲ, ನಾವು ಯೇಸುಗೂ ಋಣಿಯಾಗಿರೋಣ. ಯಾಕಂದ್ರೆ ಆತನು ನಮ್ಮೆಲ್ರಿಗೋಸ್ಕರ ತನ್ನ ಸ್ವಂತ ಪ್ರಾಣನೇ ಕೊಟ್ಟುಬಿಟ್ಟ! ನೆನಪಿಡಿ, ನಾವೆಷ್ಟೇ ಋಣಿಯಾಗಿದ್ರೂ ಇವ್ರ ಋಣ ತೀರಿಸೋಕಾಗಲ್ಲ!—ಯೋಹಾ. 15:13.

ಗೀತೆ 154 ಪ್ರೀತಿ ಶಾಶ್ವತ

a ಯೇಸು ಸತ್ತು ಬಿಡುಗಡೆ ಬೆಲೆ ಕೊಡೋಕೆ ಮುಂಚೆನೇ ಯೆಹೋವ ಹಿಂದಿನ ಕಾಲದ ತನ್ನ ಆರಾಧಕರನ್ನ ಕ್ಷಮಿಸಿ ಬಿಟ್ಟಿದ್ದನು. ಯೆಹೋವನ ದೃಷ್ಟಿಲಿ ಬಿಡುಗಡೆ ಬೆಲೆ ಈಗಾಗ್ಲೇ ಕೊಟ್ಟ ಹಾಗಿತ್ತು. ಯಾಕಂದ್ರೆ ತನ್ನ ಮಗ ಯೇಸು ಸಾಯೋ ತನಕ ಗ್ಯಾರಂಟಿಯಾಗಿ ನಿಯತ್ತಾಗಿ ಇರ್ತಾನೆ ಅಂತ ಯೆಹೋವನಿಗೆ ಗೊತ್ತಿತ್ತು.—ರೋಮ. 3:25.