ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಎಲ್ಲ ರೀತಿಯ ಜನರಿಗೆ’ ಕನಿಕರ ತೋರಿಸಿ

‘ಎಲ್ಲ ರೀತಿಯ ಜನರಿಗೆ’ ಕನಿಕರ ತೋರಿಸಿ

ಯೇಸು ತನ್ನ ಶಿಷ್ಯರಿಗೆ ಸುವಾರ್ತೆ ಸಾರಲು ಕಲಿಸಿದಾಗ ಎಲ್ಲಾ ಜನರು ತಮಗೆ ಕಿವಿಗೊಡುತ್ತಾರೆ ಅಂತ ನೆನಸಬಾರದು ಎಂದು ಹೇಳಿದನು. (ಲೂಕ 10:3, 5, 6) ನಮ್ಮ ವಿಷಯದಲ್ಲೂ ಇದು ಸತ್ಯ. ನಾವು ಭೇಟಿಯಾಗುವ ಜನರಲ್ಲಿ ಕೆಲವರು ಒರಟಾಗಿ ವರ್ತಿಸಬಹುದು ಅಥವಾ ನಮ್ಮ ಮೇಲೆ ಆಕ್ರಮಣವನ್ನೂ ಮಾಡಬಹುದು. ಜನರು ಹೀಗೆ ವರ್ತಿಸುವಾಗ ಅವರಿಗೆ ಕನಿಕರ ತೋರಿಸಿ ಸುವಾರ್ತೆ ಸಾರುವುದು ಕಷ್ಟಾನೇ.

ಕನಿಕರ ಇರುವ ಒಬ್ಬ ವ್ಯಕ್ತಿಗೆ ಜನರ ಅಗತ್ಯಗಳನ್ನು, ಸಮಸ್ಯೆಗಳನ್ನು ನೋಡಿದಾಗ ಅವರ ಬಗ್ಗೆ ‘ಅಯ್ಯೋ ಪಾಪ’ ಎಂದು ಅನಿಸುತ್ತದೆ ಮತ್ತು ಅವರಿಗೆ ಸಹಾಯ ಮಾಡಲೇಬೇಕೆಂದು ಅವನು ಬಯಸುತ್ತಾನೆ. ಆದರೆ ನಮಗೆ ಸೇವೆಯಲ್ಲಿ ಸಿಗುವ ಜನರ ಮೇಲೆ ಕನಿಕರ ಇಲ್ಲದಿದ್ದರೆ ಏನಾಗುತ್ತದೆ? ಸಾರಬೇಕೆನ್ನುವ ನಮ್ಮ ಹುರುಪು ಕಡಿಮೆಯಾಗುತ್ತದೆ ಮತ್ತು ಅವರಿಗೆ ಸಹಾಯ ಮಾಡುವುದಕ್ಕೆ ನಮ್ಮಿಂದ ಆಗಲ್ಲ. ಹುರುಪನ್ನು ಬೆಂಕಿಗೆ ಹೋಲಿಸಬಹುದು. ಬೆಂಕಿಯ ಉರಿಯನ್ನು ಜಾಸ್ತಿಮಾಡಬೇಕೆಂದರೆ ಹೆಚ್ಚು ಸೌದೆ ಹಾಕಬೇಕು. ಅದೇರೀತಿ ನಮ್ಮ ಹುರುಪು ಹೆಚ್ಚಾಗಬೇಕೆಂದರೆ ನಮಗೆ ಕನಿಕರ ಇರಲೇ ಬೇಕು.—1 ಥೆಸ. 5:19.

ಕನಿಕರ ತೋರಿಸಲು ಕಷ್ಟ ಆದಾಗಲೂ ಅದನ್ನು ತೋರಿಸುವುದು ಹೇಗೆ? ನಾವೀಗ ಯೆಹೋವ, ಯೇಸು ಮತ್ತು ಅಪೊಸ್ತಲ ಪೌಲ ಹೇಗೆ ಕನಿಕರ ತೋರಿಸಿದರು ಮತ್ತು ನಾವು ಅವರನ್ನು ಹೇಗೆ ಅನುಕರಿಸಬಹುದು ಎಂದು ನೋಡೋಣ.

ಯೆಹೋವನಂತೆ ಕನಿಕರ ತೋರಿಸಿ

ಸಾವಿರಾರು ವರ್ಷಗಳಿಂದ ಜನರು ಯೆಹೋವನ ಹೆಸರಿಗೆ ಕಳಂಕ ತಂದಿದ್ದಾರೆ. ಆದರೂ ದೇವರು “ಉಪಕಾರನೆನಸದವರಿಗೂ ಕೆಟ್ಟವರಿಗೂ ದಯೆತೋರಿಸುವವನಾಗಿದ್ದಾನೆ.” (ಲೂಕ 6:35) ಆತನು ಹೇಗೆ ದಯೆ ತೋರಿಸಿದ್ದಾನೆ? “ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು” ಎಂದು ಆತನು ತಾಳ್ಮೆಯಿಂದ ಇದ್ದಾನೆ. (1 ತಿಮೊ. 2:3, 4) ದೇವರು ಕೆಟ್ಟತನವನ್ನು ಹಗೆ ಮಾಡುತ್ತಾನಾದರೂ ಜನರ ಜೀವವನ್ನು ಅಮೂಲ್ಯವಾಗಿ ನೋಡುತ್ತಾನೆ. ಆದುದರಿಂದ ಯಾರೂ ನಾಶವಾಗುವುದು ಆತನಿಗೆ ಇಷ್ಟವಿಲ್ಲ.—2 ಪೇತ್ರ 3:9.

ಅವಿಶ್ವಾಸಿಗಳ ಮನಸ್ಸನ್ನು ಕುರುಡು ಮಾಡುವುದರಲ್ಲಿ ಸೈತಾನನು ಎತ್ತಿದ ಕೈ ಎಂದು ಯೆಹೋವನಿಗೆ ಗೊತ್ತಿದೆ. (2 ಕೊರಿಂ. 4:3, 4) ಅನೇಕರು ಚಿಕ್ಕಂದಿನಿಂದಲೇ ದೇವರ ಬಗ್ಗೆ ಸುಳ್ಳಾದ ಮಾಹಿತಿಯನ್ನು ಕಲಿತಿದ್ದಾರೆ. ಇದರಿಂದ ಅವರಿಗೆ ಸತ್ಯವನ್ನು ಸ್ವೀಕರಿಸಲು ಕಷ್ಟ ಆಗುತ್ತದೆ. ಆದರೂ ಯೆಹೋವನು ಅವರಿಗೆ ಸಹಾಯ ಮಾಡಲು ತುದಿಗಾಲಲ್ಲಿ ನಿಂತಿದ್ದಾನೆ. ನಮಗೆ ಹೇಗೆ ಗೊತ್ತು?

ಉದಾಹರಣೆಗೆ ನಿನೆವೆಯಲ್ಲಿದ್ದ ಜನರ ಬಗ್ಗೆ ಯೆಹೋವನಿಗೆ ಹೇಗನಿಸಿತು ಅಂತ ನೋಡೋಣ. ಆ ನಿವಾಸಿಗಳು ಕ್ರೂರಿಗಳಾಗಿದ್ದರೂ ಯೆಹೋವನು ಯೋನನ ಹತ್ತಿರ ‘ಎಡಗೈ ಬಲಗೈ ತಿಳಿಯದ ಒಂದು ಲಕ್ಷ ಇಪ್ಪತ್ತು ಸಾವಿರ ಜನರಿರುವ ಆ ದೊಡ್ಡ ಪಟ್ಟಣವಾದ ನಿನೆವೆಗಾಗಿ ನಾನು ಕನಿಕರಪಡಬಾರದೋ’ ಅಂದನು. (ಯೋನ 4:11) ತನ್ನ ಬಗ್ಗೆ ತಿಳಿದಿಲ್ಲದ ಆ ಜನರನ್ನು ನೋಡಿ ಯೆಹೋವನಿಗೆ ಅಯ್ಯೋ ಪಾಪ ಅನಿಸಿತು. ಆದ್ದರಿಂದ ಅವರನ್ನು ಎಚ್ಚರಿಸಲು ಆತನು ಯೋನನನ್ನು ಕಳುಹಿಸಿದನು.

ಯೆಹೋವನಂತೆ ನಾವು ಸಹ ಜನರನ್ನು ಅಮೂಲ್ಯವಾಗಿ ನೋಡುತ್ತೇವೆ. ಅವರು ಸತ್ಯವನ್ನು ಸ್ವೀಕರಿಸುವುದಿಲ್ಲವೆಂದು ನಮಗನಿಸುವಾಗಲೂ ನಾವು ಅವರಿಗೆ ಸತ್ಯವನ್ನು ಕಲಿಸಲು ನಮ್ಮಿಂದಾದ ಎಲ್ಲ ಪ್ರಯತ್ನ ಮಾಡುತ್ತೇವೆ.

ಯೇಸುವಿನಂತೆ ಕನಿಕರ ತೋರಿಸಿ

ತನ್ನ ತಂದೆಯಂತೆ ಯೇಸು ಕೂಡ “ಜನರ ಗುಂಪನ್ನು ನೋಡಿ ಇವರು ಕುರುಬನಿಲ್ಲದ ಕುರಿಗಳ ಹಾಗೆ ಸುಲಿಯಲ್ಪಟ್ಟು ಚದುರಿಸಲ್ಪಟ್ಟಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು.” (ಮತ್ತಾ. 9:36) ಜನರಿಗೆ ಯಾಕೆ ಈ ಪರಿಸ್ಥಿತಿ ಬಂತೆಂದು ಯೇಸುವಿಗೆ ಗೊತ್ತಿತ್ತು. ಯಾಕೆಂದರೆ ಧಾರ್ಮಿಕ ಮುಖಂಡರು ಜನರನ್ನು ತುಂಬ ಕೀಳಾಗಿ ನೋಡುತ್ತಿದ್ದರು ಮತ್ತು ಅವರಿಗೆ ಸುಳ್ಳುಗಳನ್ನು ಬೋಧಿಸುತ್ತಿದ್ದರು. ತನ್ನ ಬೋಧನೆಗಳನ್ನು ಕೇಳುವ ಜನರಲ್ಲಿ ಹೆಚ್ಚಿನವರು ಕಾರಣಾಂತರಗಳಿಂದ ತನ್ನನ್ನು ಹಿಂಬಾಲಿಸಲ್ಲ ಅಂತ ಗೊತ್ತಿದ್ದರೂ ಆತನು ಆ ಜನರಿಗೆ ‘ಅನೇಕ ವಿಷಯಗಳನ್ನು ಬೋಧಿಸಿದನು.’—ಮಾರ್ಕ 4:1-9.

ಯಾರಾದರೂ ಸುವಾರ್ತೆ ಕೇಳಿಸಿಕೊಳ್ಳದಿದ್ದರೆ ಬೇಜಾರಾಗಬೇಡಿ

ಸನ್ನಿವೇಶ ಬದಲಾದಾಗ ಜನರ ಪ್ರತಿಕ್ರಿಯೆ ಬದಲಾಗಬಹುದು

ಜನರು ನಮ್ಮ ಸಂದೇಶಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸುವಾಗ ಅವರು ಯಾಕೆ ಹಾಗೆ ಮಾಡುತ್ತಿದ್ದಾರೆ ಅಂತ ತಿಳಿಯಲು ನಾವು ಪ್ರಯತ್ನಿಸಬೇಕು. ಕೆಲವರಿಗೆ ಬೈಬಲ್‌ ಬಗ್ಗೆ ಅಥವಾ ಕ್ರೈಸ್ತರ ಬಗ್ಗೆ ತಪ್ಪಭಿಪ್ರಾಯ ಇರಬಹುದು. ಯಾಕೆಂದರೆ ಕ್ರೈಸ್ತರೆಂದು ಹೇಳಿಕೊಳ್ಳುವ ಕೆಲವರು ಕೆಟ್ಟ ವಿಷಯಗಳನ್ನು ಮಾಡುವುದನ್ನು ಅವರು ನೋಡಿರಬಹುದು. ಇನ್ನೂ ಕೆಲವರು ನಮ್ಮ ನಂಬಿಕೆಗಳ ಬಗ್ಗೆ ಯಾರಿಂದಲೋ ಸುಳ್ಳು ವಿಷಯಗಳನ್ನು ಕೇಳಿಸಿಕೊಂಡಿರಬಹುದು. ಇನ್ನೂ ಕೆಲವರಿಗೆ ತಾವು ಸಾಕ್ಷಿಗಳನ್ನು ಮನೆಗೆ ಸೇರಿಸಿದರೆ ಸಮಾಜದವರು ಮತ್ತು ಸಂಬಂಧಿಕರು ಗೇಲಿ ಮಾಡುತ್ತಾರೆ ಎಂಬ ಭಯ ಇರಬಹುದು.

ನಾವು ಭೇಟಿಯಾಗುವ ಕೆಲವರು ತಮ್ಮ ಜೀವನದಲ್ಲಾಗಿರುವ ಕಹಿ ಘಟನೆಗಳಿಂದ ಮನನೊಂದಿರುತ್ತಾರೆ. ಆದುದರಿಂದ ನಮ್ಮ ಸಂದೇಶಕ್ಕೆ ಕಿವಿಗೊಡಲ್ಲ. ಕಿಮ್‌ ಎಂಬ ಮಿಷನರಿ ಹೇಳುವುದು: “ನಮ್ಮ ಕ್ಷೇತ್ರದಲ್ಲಿರುವ ಅನೇಕ ಜನರು ಯುದ್ಧವನ್ನು ನೋಡಿದವರು ಮತ್ತು ಆಸ್ತಿಪಾಸ್ತಿಗಳನ್ನೆಲ್ಲಾ ಕಳಕೊಂಡವರು. ಅವರಿಗೆ ಭವಿಷ್ಯದ ಬಗ್ಗೆ ನಿಜವಾದ ನಿರೀಕ್ಷೆಯಿಲ್ಲ. ಅವರ ಜೀವನದಲ್ಲಿ ನಿರಾಶೆ ತುಂಬಿಕೊಂಡಿದೆ ಮತ್ತು ಅವರು ಯಾರನ್ನೂ ನಂಬುವುದಿಲ್ಲ. ಈ ಜಾಗದಲ್ಲಿ ನಾವು ಯಾವಾಗಲೂ ನಮ್ಮ ಸಂದೇಶಕ್ಕೆ ವಿರೋಧವನ್ನು ಎದುರಿಸಬೇಕಾಗುತ್ತೆ. ಒಮ್ಮೆ ಸೇವೆಯಲ್ಲಿದ್ದಾಗ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ.”

ಇಷ್ಟೆಲ್ಲಾ ಆದರೂ ಕಿಮ್‌ ಜನರ ಮೇಲೆ ಕನಿಕರ ತೋರಿಸುತ್ತಾರೆ. ಇದು ಹೇಗೆ ಸಾಧ್ಯ? ಅವರು ಯಾವಾಗಲೂ ಜ್ಞಾನೋಕ್ತಿ 19:11​ರಲ್ಲಿರುವ ಮಾತುಗಳನ್ನು ನೆನಪಿಗೆ ತಂದುಕೊಳ್ಳುತ್ತಾರೆ. “ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ” ಎನ್ನುತ್ತದೆ ಆ ವಚನ. ತನ್ನ ಕ್ಷೇತ್ರದಲ್ಲಿರುವ ಜನರು ಏನೆಲ್ಲಾ ಕಷ್ಟ ಅನುಭವಿಸಬೇಕಾಯಿತು ಎಂದು ಯೋಚಿಸುವಾಗ ಕಿಮ್‌ಗೆ ಆ ಜನರ ಮೇಲೆ ಮರುಕ ಹುಟ್ಟುತ್ತದೆ. ಅಷ್ಟೇ ಅಲ್ಲ ಅವರ ಕ್ಷೇತ್ರದಲ್ಲಿರುವ ಎಲ್ಲರೂ ನಿರ್ದಯವಾಗಿ ನಡಕೊಳ್ಳುವುದಿಲ್ಲ. ಅದೇ ಕ್ಷೇತ್ರದಲ್ಲಿ ಅವರಿಗೆ ಕೆಲವು ಒಳ್ಳೇ ಪುನರ್ಭೇಟಿಗಳು ಸಿಕ್ಕಿವೆ.

ಹೀಗೆ ಯೋಚನೆ ಮಾಡಿ: ‘ನಾನು ಯಾರಿಗೆ ಸಾರುತ್ತೇನೋ ಆ ಜನರ ಸ್ಥಾನದಲ್ಲಿ ನಾನಿದ್ದರೆ ಹೇಗೆ ಪ್ರತಿಕ್ರಿಯಿಸುತ್ತಿದ್ದೆ?’ ಒಂದುವೇಳೆ ಸಾಕ್ಷಿಗಳ ಬಗ್ಗೆ ನಾವು ಸುಳ್ಳು ಮಾಹಿತಿಯನ್ನು ಕೇಳಿಸಿಕೊಂಡಿದ್ದರೆ ನಮ್ಮ ಪ್ರತಿಕ್ರಿಯೆ ಹೇಗಿರುತ್ತಿತ್ತು? ನಮ್ಮ ಪ್ರತಿಕ್ರಿಯೆ ಖಂಡಿತ ಒಳ್ಳೇದಿರುತ್ತಿರಲಿಲ್ಲ ಮತ್ತು ಸಾಕ್ಷಿಗಳು ನಮಗೆ ಕನಿಕರ ತೋರಿಸಬೇಕಾಗುತ್ತಿತ್ತು. ಬೇರೆಯವರು ನಿಮ್ಮೊಟ್ಟಿಗೆ ಹೇಗೆ ನಡಕೊಳ್ಳಬೇಕೆಂದು ನೀವು ನೆನಸುತ್ತೀರೋ ಅದೇ ರೀತಿಯಲ್ಲಿ ನೀವು ಅವರೊಟ್ಟಿಗೆ ನಡಕೊಳ್ಳಿ ಎಂದು ಯೇಸು ಹೇಳಿದ್ದಾನೆ. (ಮತ್ತಾ. 7:12) ಹಾಗಾಗಿ ಬೇರೆಯವರು ಹೇಗೆ ಯೋಚಿಸುತ್ತಾರೆ ಎಂದು ಅವರ ಜಾಗದಲ್ಲಿ ನಿಂತು ನೋಡಬೇಕು. ಕಷ್ಟವಾದರೂ ತಾಳ್ಮೆ ತೋರಿಸಬೇಕು.

ಪೌಲನಂತೆ ಕನಿಕರ ತೋರಿಸಿ

ತನ್ನ ಸಾರುವ ಕೆಲಸಕ್ಕೆ ತುಂಬ ವಿರೋಧ ತೋರಿಸುತ್ತಿದ್ದ ಜನರಿಗೂ ಅಪೊಸ್ತಲ ಪೌಲನು ಕನಿಕರ ತೋರಿಸಿದನು. ಯಾಕೆ? ತಾನು ಹಿಂದೆ ಹೇಗಿದ್ದೆ ಅನ್ನುವುದನ್ನು ಅವನು ಮರೆತಿರಲಿಲ್ಲ. “ಈ ಹಿಂದೆ ನಾನು ದೇವದೂಷಣೆಮಾಡುವವನೂ ಹಿಂಸಕನೂ ದುರಹಂಕಾರಿಯೂ ಆಗಿದ್ದೆನಾದರೂ ನಾನು ಅಜ್ಞಾನಿಯಾಗಿದ್ದು ನಂಬಿಕೆಯ ಕೊರತೆಯಿಂದ ಹೀಗೆ ವರ್ತಿಸಿದ್ದ ಕಾರಣ ನನಗೆ ಕರುಣೆಯು ತೋರಿಸಲ್ಪಟ್ಟಿತು” ಎಂದು ಅವನು ಹೇಳಿದನು. (1 ತಿಮೊ. 1:13) ಯೆಹೋವ ಮತ್ತು ಯೇಸು ತನಗೆ ತುಂಬ ಕರುಣೆ ತೋರಿಸಿದ್ದಾರೆಂದು ಪೌಲನಿಗೆ ಗೊತ್ತಿತ್ತು. ಜನರು ತನ್ನ ಕೆಲಸಕ್ಕೆ ಯಾಕೆ ಅಡ್ಡಿ ಮಾಡುತ್ತಾರೆಂದು ಪೌಲನು ಅರ್ಥಮಾಡಿಕೊಂಡನು. ಯಾಕೆಂದರೆ ಹಿಂದೊಮ್ಮೆ ಅವನೂ ಅದನ್ನೇ ಮಾಡಿದ್ದನು.

ಸುಳ್ಳು ಬೋಧನೆಗಳಲ್ಲಿ ಬಲವಾದ ನಂಬಿಕೆ ಇಟ್ಟಿದ್ದ ಜನರು ಕೆಲವೊಮ್ಮೆ ಪೌಲನಿಗೆ ಸಿಕ್ಕಿದರು. ಆಗ ಅವನಿಗೆ ಹೇಗನಿಸಿತು? ಅವನು ಅಥೆನ್ಸಿನಲ್ಲಿದ್ದಾಗ ಏನಾಯಿತೆಂದು ನೋಡಿ. “ಆ ಪಟ್ಟಣವು ವಿಗ್ರಹಗಳಿಂದ ತುಂಬಿರುವುದನ್ನು ನೋಡಿ ಅವನ ಮನಸ್ಸು ಕುದಿಯಿತು” ಎಂದು ಅಪೊಸ್ತಲರ ಕಾರ್ಯಗಳು 17:16 ಹೇಳುತ್ತದೆ. ಆದರೆ ತನಗೆ ಕಿರಿಕಿರಿ ಉಂಟುಮಾಡಿದ ಅದೇ ವಿಷಯವನ್ನು ಉಪಯೋಗಿಸಿ ಅವನು ಜನರಿಗೆ ಬೋಧಿಸಿದನು. (ಅ. ಕಾ. 17:22, 23) ಅವನು ಸಾರುವ ವಿಧಾನವನ್ನು ಬದಲಾಯಿಸಿಕೊಂಡನು. ಬೇರೆ ಬೇರೆ ಹಿನ್ನೆಲೆಯ ಜನರಿಗೆ ತಕ್ಕ ಹಾಗೆ ತನ್ನ ಸಂದೇಶವನ್ನು ಹೊಂದಿಸಿಕೊಂಡನು. “ಯಾವ ರೀತಿಯಲ್ಲಾದರೂ ಕೆಲವರನ್ನು ರಕ್ಷಿಸಲಿಕ್ಕಾಗಿ” ಇದೆಲ್ಲವನ್ನೂ ಮಾಡಿದನೆಂದು ಪೌಲನೇ ಹೇಳಿದನು.—1 ಕೊರಿಂ. 9:20-23.

ನಾವು ಸಾರುವಂಥ ಕ್ಷೇತ್ರದಲ್ಲೂ ಜನರು ನಮ್ಮ ಸಂದೇಶಕ್ಕೆ ಕಿವಿಗೊಡದೆ ಹೋದರೆ ಅಥವಾ ಅವರ ನಂಬಿಕೆಗಳು ತಪ್ಪಾಗಿದ್ದರೆ ನಾವು ಪೌಲನ ಮಾದರಿಯನ್ನು ಅನುಕರಿಸಬೇಕು. ನಮಗೆ ಅವರ ಬಗ್ಗೆ ಗೊತ್ತಿರುವ ವಿಷಯವನ್ನು ಉಪಯೋಗಿಸುತ್ತಾ “ಶುಭದ ಸುವಾರ್ತೆಯನ್ನು” ತಿಳುಕೊಳ್ಳಲು ಅವರಿಗೆ ಸಹಾಯ ಮಾಡಬಹುದು. (ಯೆಶಾ. 52:7) ಡಾರ್ತಿ ಎಂಬ ಸಹೋದರಿ ಹೇಳುವುದು: “ನಮ್ಮ ಕ್ಷೇತ್ರದಲ್ಲಿರುವ ಎಷ್ಟೋ ಜನರಿಗೆ ದೇವರು ತುಂಬ ಕಟ್ಟುನಿಟ್ಟು, ಕ್ರೂರಿ ಎಂದು ಅನಿಸುತ್ತದೆ. ಆಗ ನಾನು ಮೊದಲು ದೇವರಲ್ಲಿ ಅವರಿಗಿರುವ ಬಲವಾದ ನಂಬಿಕೆಯನ್ನು ಶ್ಲಾಘಿಸುತ್ತೇನೆ. ಆಮೇಲೆ ಯೆಹೋವನ ಪ್ರೀತಿಭರಿತ ವ್ಯಕ್ತಿತ್ವದ ಬಗ್ಗೆ ಮತ್ತು ಆತನು ಭವಿಷ್ಯದಲ್ಲಿ ಮಾಡಲಿಕ್ಕಿರುವ ವಿಷಯಗಳ ಬಗ್ಗೆ ಮಾತಾಡುತ್ತೇನೆ.”

‘ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುತ್ತಾ ಇರಿ’

ಈ ಲೋಕದ ಅಂತ್ಯ ಹತ್ತಿರವಾಗುತ್ತಿರುವಾಗ ಜನರ ವ್ಯಕ್ತಿತ್ವ ‘ಕೆಟ್ಟದ್ದರಿಂದ ತೀರ ಕೆಟ್ಟದ್ದಕ್ಕೆ ಹೋಗುತ್ತದೆ’ ಎಂದು ಬೈಬಲ್‌ ಹೇಳುತ್ತದೆ. (2 ತಿಮೊ. 3:1, 13) ಆದರೆ ನಾವು ಸಾರುವ ಸುವಾರ್ತೆಗೆ ಅವರು ತೋರಿಸುವ ಪ್ರತಿಕ್ರಿಯೆಯನ್ನು ನೋಡಿ ನಮ್ಮಲ್ಲಿರುವ ಕನಿಕರ, ಆನಂದವನ್ನು ಕಳಕೊಳ್ಳಬಾರದು. ‘ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸಲು’ ಬೇಕಾದ ಬಲವನ್ನು ಯೆಹೋವನು ಕೊಡುತ್ತಾನೆ. (ರೋಮ. 12:21) ಜೆಸಿಕ ಎಂಬ ಪಯನೀಯರ್‌ ಸಹೋದರಿಗೆ ಅಹಂಭಾವದಿಂದ ನಡಕೊಳ್ಳುವ ಜನರು ಸಿಗುತ್ತಾರೆ. ಅವರು ನಮ್ಮ ಬಗ್ಗೆ ಮತ್ತು ನಾವು ಸಾರುವ ಸಂದೇಶದ ಬಗ್ಗೆ ಕೆಟ್ಟದಾಗಿ ಮಾತಾಡುತ್ತಾರೆ. ಆಗ ಜೆಸಿಕ ಏನು ಮಾಡುತ್ತಾರೆ? “ಇದರಿಂದ ಸಿಟ್ಟು ಬರಬಹುದು. ಆದ್ದರಿಂದ ನಾನು ಸಂಭಾಷಣೆಯನ್ನು ಆರಂಭಿಸುವಾಗ ಮನಸ್ಸಲ್ಲೇ ಪ್ರಾರ್ಥನೆ ಮಾಡುತ್ತೇನೆ. ಮನೆಯವರನ್ನು ಯೆಹೋವನು ನೋಡುವ ತರ ನೋಡಲು ಸಹಾಯಕ್ಕಾಗಿ ಕೇಳುತ್ತೇನೆ.” ಹೀಗೆ ಮಾಡುವುದರಿಂದ ಜೆಸಿಕ ತನ್ನ ಭಾವನೆಗಳನ್ನು ಬದಿಗಿಟ್ಟು ಮನೆಯವನಿಗೆ ಹೇಗೆ ಸಹಾಯ ಮಾಡಬೇಕೆಂದು ಯೋಚಿಸುತ್ತಾರೆ.

ಸತ್ಯಕ್ಕಾಗಿ ಹುಡುಕುತ್ತಿರುವ ಜನರನ್ನು ನಾವು ಹುಡುಕುತ್ತಾ ಇರುತ್ತೇವೆ

ಒಂದಲ್ಲ ಒಂದು ದಿನ ಕೆಲವರು ಸತ್ಯವನ್ನು ಸ್ವೀಕರಿಸಬಹುದು

ನಾವು ಯಾರೊಟ್ಟಿಗೆ ಸೇವೆ ಮಾಡಲು ಹೋಗುತ್ತೇವೋ ಆ ಸಹೋದರ ಸಹೋದರಿಯರನ್ನು ಸಹ ನಾವು ಪ್ರೋತ್ಸಾಹಿಸಬೇಕು. ಜೆಸಿಕ ಇದನ್ನೇ ಮಾಡುತ್ತಾರೆ. ತನ್ನ ಜೊತೆ ಸೇವೆ ಮಾಡುತ್ತಿರುವವರ ಮೇಲೆ ಮನೆಯವನು ಕೂಗಾಡಿದರೆ ಜೆಸಿಕ ಅದರ ಬಗ್ಗೆ ಮಾತಾಡಲು ಹೋಗುವುದಿಲ್ಲ. ಸಕಾರಾತ್ಮಕವಾಗಿ ಏನಾದರೂ ಹೇಳಲು ಪ್ರಯತ್ನಿಸುತ್ತಾರೆ. ನಮ್ಮ ಸೇವೆಯಿಂದ ಯಾವ ಒಳ್ಳೇ ಫಲಿತಾಂಶಗಳು ಸಿಗುತ್ತವೆ ಅನ್ನುವುದರ ಬಗ್ಗೆ ಮಾತಾಡುತ್ತಾರೆ.

ಸೇವೆ ಮಾಡಲು ಹೋದಾಗ ಕೆಲವೊಮ್ಮೆ ಜನರು ಒಳ್ಳೇದಾಗಿ ಪ್ರತಿಕ್ರಿಯಿಸಲ್ಲ ಎಂದು ಯೆಹೋವನಿಗೆ ಗೊತ್ತು. ಆದರೂ ನಾವು ಆತನಂತೆ ಕರುಣೆ ತೋರಿಸುವಾಗ ಆತನಿಗೆ ತುಂಬ ಸಂತೋಷವಾಗುತ್ತದೆ. (ಲೂಕ 6:36) ಆದರೆ ಯೆಹೋವನ ತಾಳ್ಮೆಗೆ ಒಂದು ಮಿತಿ ಇದೆ. ಆತನು ಈ ಲೋಕದ ಜನರಿಗೆ ಶಾಶ್ವತಕ್ಕೂ ಕನಿಕರ ತೋರಿಸುತ್ತಾ ಇರಲ್ಲ. ಯಾವಾಗ ಅಂತ್ಯ ತರಬೇಕೆಂದು ಆತನಿಗೆ ಚೆನ್ನಾಗಿ ಗೊತ್ತು. ಅಷ್ಟರ ತನಕ ನಾವು ತುರ್ತಿನಿಂದ ಸುವಾರ್ತೆ ಸಾರುತ್ತಾ ಇರಬೇಕು. (2 ತಿಮೊ. 4:2) ಆದ್ದರಿಂದ ನಾವು ಹುರುಪಿನಿಂದ ಸಾರುತ್ತಾ ಇರೋಣ. ‘ಎಲ್ಲ ರೀತಿಯ ಜನರಿಗೆ’ ಕೋಮಲವಾದ ಕನಿಕರ ತೋರಿಸುತ್ತಾ ಇರೋಣ.