ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಮಯಾನ್ಮಾರ್‌ನಲ್ಲಿ
“ಕೊಯ್ಲು ನಿಶ್ಚಯವಾಗಿಯೂ ಬಹಳ ವಿದೆ; ಆದರೆ ಕೆಲಸಗಾರರು ಕೊಂಚ. ಆದುದರಿಂದ ತನ್ನ ಕೊಯ್ಲಿಗೆ ಕೆಲಸದವರನ್ನು ಕಳುಹಿಸಿಕೊಡುವಂತೆ ಕೊಯ್ಲಿನ ಯಜಮಾನನನ್ನು ಬೇಡಿಕೊಳ್ಳಿರಿ.” (ಲೂಕ 10:2) ಸುಮಾರು 2,000 ವರ್ಷಗಳ ಹಿಂದೆ ಯೇಸು ಹೇಳಿದ ಈ ಮಾತುಗಳು ಇಂದು ಮಯಾನ್ಮಾರ್ ದೇಶಕ್ಕೆ ಸೂಕ್ತವಾಗಿವೆ. ಯಾಕೆ? ಅಲ್ಲಿ ಸುಮಾರು 4,200 ಪ್ರಚಾರಕರು 5,50,00,000 ಜನರಿಗೆ ಸುವಾರ್ತೆ ಸಾರುತ್ತಿದ್ದಾರೆ.
‘ಕೊಯ್ಲಿನ ಯಜಮಾನನಾದ’ ಯೆಹೋವನು ಬೇರೆ ಬೇರೆ ದೇಶದಲ್ಲಿರುವ ನೂರಾರು ಸಹೋದರ ಸಹೋದರಿಯರನ್ನು ಪ್ರೇರಿಸಿದ್ದರಿಂದ ಅವರು ಮಯಾನ್ಮಾರ್‌ಗೆ ಬಂದು ಆಧ್ಯಾತ್ಮಿಕ ಕೊಯ್ಲಿನ ಕೆಲಸದಲ್ಲಿ ಕೈಜೋಡಿಸಿದ್ದಾರೆ. ಅವರು ತಮ್ಮ ದೇಶ ಬಿಟ್ಟು ಬರಲು ಯಾವುದು ಪ್ರಚೋದಿಸಿತು? ಇದನ್ನು ಮಾಡಲು ಯಾವುದು ಸಹಾಯ ಮಾಡಿತು? ಅವರಿಗೆ ಸಿಕ್ಕಿರುವ ಆಶೀರ್ವಾದಗಳೇನು? ಬನ್ನಿ ತಿಳಿದುಕೊಳ್ಳೋಣ.
“ಬನ್ನಿ, ನಮಗಿಲ್ಲಿ ಹೆಚ್ಚು ಪಯನೀಯರರು ಬೇಕು!”
ಜಪಾನಿನ ಕಾಜುಹಿರೋ ಎಂಬ ಪಯನೀಯರನಿಗೆ ಕೆಲವು ವರ್ಷಗಳ ಹಿಂದೆ ಫಿಟ್ಸ್ ಬಂದು, ಪ್ರಜ್ಞೆ ತಪ್ಪಿದಾಗ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಗ ಡಾಕ್ಟರ್ ಅವರಿಗೆ ಎರಡು ವರ್ಷ ಕಾರ್ ಓಡಿಸಬಾರದು ಎಂದರು. ಇದರಿಂದ ಆ ಸಹೋದರನಿಗೆ ಆಘಾತವಾಯಿತು. ‘ನಂಗಿಷ್ಟವಾದ ಪಯನೀಯರ್ ಸೇವೆಯನ್ನ ಇನ್ನುಮುಂದೆ ಹೇಗೆ ಮಾಡಲಿ?’ ಎನ್ನುವ ಯೋಚನೆ ಕಾಡಿತು. ಸೇವೆ ಮಾಡುತ್ತಾ ಹೋಗಲು ಸಹಾಯ ಮಾಡು ಎಂದು ಯೆಹೋವನನ್ನು ಅಂಗಲಾಚಿ ಬೇಡಿದರು.
ಕಾಜುಹಿರೋ ಹೇಳುವುದು: “ಒಂದು ತಿಂಗಳ ನಂತರ, ಮಯಾನ್ಮಾರಲ್ಲಿ ಸೇವೆ ಮಾಡುತ್ತಿರೋ ನನ್ನ ಸ್ನೇಹಿತನಿಗೆ ನನ್ನ ವಿಷಯ ಗೊತ್ತಾಗಿ ಫೋನ್ ಮಾಡಿದ. ‘ಇಲ್ಲಿ ಹೆಚ್ಚಾಗಿ ಬಸ್ಸಲ್ಲಿ ಓಡಾಡುತ್ತೇವೆ. ನೀನು ಇಲ್ಲಿಗೆ ಬಾ. ಪಯನೀಯರ್ ಸೇವೆ ಮುಂದುವರಿಸಬಹುದು, ಕಾರಿನ ಅಗತ್ಯ ಇರಲ್ಲ’ ಎಂದ. ನನ್ನ ಡಾಕ್ಟರ್ ಹತ್ತಿರ ನಾನು ಮಯಾನ್ಮಾರಿಗೆ ಹೋಗಬಹುದಾ ಅಂತ ಕೇಳಿದೆ. ಡಾಕ್ಟರ್ ಹೇಳಿದ್ದನ್ನ ಕೇಳಿ ನನಗೆ ಆಶ್ಚರ್ಯ ಆಯಿತು. ‘ಮಯಾನ್ಮಾರಿನ ಒಬ್ಬ ಮೆದುಳು ತಜ್ಞ ಇಲ್ಲಿಗೆ ಬರ್ತಿದ್ದಾರೆ. ನಿಮಗೆ ಅವರನ್ನು ಪರಿಚಯ ಮಾಡಿಸುತ್ತೀನಿ. ಮತ್ತೆ ಯಾವತ್ತಾದರೂ ನಿಮಗೆ ಫಿಟ್ಸ್ ಬಂದರೆ ಅವರು ನಿಮ್ಮನ್ನು ನೋಡ್ಕೊಳ್ತಾರೆ’ ಅಂದರು. ಅವರ ಮಾತು ನನಗೆ ಯೆಹೋವನಿಂದ ಬಂದ ಉತ್ತರದಂತೆ ಇತ್ತು.”
ಕೂಡಲೇ ಕಾಜುಹಿರೋ ಮಯಾನ್ಮಾರಿನ ಶಾಖಾ ಕಚೇರಿಗೆ ಇ-ಮೇಲ್ ಕಳುಹಿಸಿದರು. ತನಗೂ ತನ್ನ ಪತ್ನಿಗೂ ಮಯಾನ್ಮಾರಲ್ಲಿ ಪಯನೀಯರ್ ಸೇವೆ ಮಾಡುವ ಆಸೆ ಇದೆ ಎಂದು ತಿಳಿಸಿದರು. ಐದೇ ದಿನದಲ್ಲಿ ಹೀಗೆ ಉತ್ತರ ಬಂತು: “ಬನ್ನಿ, ನಮಗಿಲ್ಲಿ ಹೆಚ್ಚು ಪಯನೀಯರರು ಬೇಕು!” ಕಾಜುಹಿರೋ ಮತ್ತು ಅವರ ಪತ್ನಿ ಮ್ಯಾರಿ ತಮ್ಮ ಕಾರುಗಳನ್ನು ಮಾರಿ, ವೀಸಾ ಪಡೆದು, ವಿಮಾನ ಹತ್ತಿದರು. ಅವರೀಗ ಮ್ಯಾಂಡಲೇಯಲ್ಲಿ ಇರುವ ಸನ್ನೆ ಭಾಷೆಯ ಗುಂಪಿನಲ್ಲಿ ಸಂತೋಷದಿಂದ ಸೇವೆ ಮಾಡುತ್ತಿದ್ದಾರೆ. ಕಾಜುಹಿರೋ ಹೇಳುವುದು: “ಈ ಅನುಭವದಿಂದ ಕೀರ್ತನೆ 37:5ರಲ್ಲಿ ಯೆಹೋವನು ಕೊಟ್ಟಿರುವ ಮಾತಿನ ಮೇಲಿನ ನಮ್ಮ ನಂಬಿಕೆ ಬಲವಾಯಿತು. ಆ ವಚನ ಹೇಳುವಂತೆ, ನನ್ನ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸೆಯಿಂದ ಇದ್ದೇನೆ. ಆತನೇ ಅದನ್ನು ಸಾಗಿಸುತ್ತಿದ್ದಾನೆ.”
ಯೆಹೋವನೇ ದಾರಿ ತೆರೆಯುತ್ತಾನೆ
2014ರಲ್ಲಿ ಮಯಾನ್ಮಾರಲ್ಲಿ ವಿಶೇಷ ಅಧಿವೇಶನ ನಡೆಯಿತು. ಅಧಿವೇಶನಕ್ಕೆ ಬೇರೆ ಬೇರೆ ದೇಶಗಳಿಂದ ಅನೇಕ ಸಹೋದರ ಸಹೋದರಿಯರು ಬಂದರು. ಹೀಗೆ ಬಂದವರಲ್ಲಿ 34 ವಯಸ್ಸಿನ ಸಹೋದರಿ ಮೋನಿಕ್ ಒಬ್ಬರಾಗಿದ್ದರು. ಅವರು ಅಮೆರಿಕದವರು. ಅವರು ಹೇಳುವುದು: “ಅಧಿವೇಶನ ಮುಗಿಸಿ ಬಂದಮೇಲೆ ನಾನು ಜೀವನದಲ್ಲಿ ಮುಂದೆ ಯಾವ ಹೆಜ್ಜೆ ತೆಗೆದುಕೊಳ್ಳಬೇಕು ಎಂದು ಯೆಹೋವನಿಗೆ ಪ್ರಾರ್ಥಿಸಿದೆ. ನನ್ನ ಆಧ್ಯಾತ್ಮಿಕ ಗುರಿಗಳ ಬಗ್ಗೆ ಅಪ್ಪ-ಅಮ್ಮನ ಹತ್ತಿರನೂ ಮಾತಾಡಿದೆ. ನಾನು ಮಯಾನ್ಮಾರಲ್ಲಿ ಸೇವೆಮಾಡಬೇಕು ಅಂತ ನನಗೂ ಅಪ್ಪ-ಅಮ್ಮಗೂ ಅನಿಸಿತು. ಆದರೆ ಒಂದು ತೀರ್ಮಾನಕ್ಕೆ ಬರಲು ಸ್ವಲ್ಪ ಸಮಯ ಹಿಡಿಯಿತು, ತುಂಬ ಪ್ರಾರ್ಥನೆ ಮಾಡಬೇಕಾಯಿತು.” ಯಾಕೆ ಎಂದು ಮೋನಿಕ್ ವಿವರಿಸುತ್ತಾರೆ.
“ಯಾವುದೇ ವಿಷಯಕ್ಕೆ ಕೈಹಾಕುವ ಮೊದಲು ‘ಸಾಕಾಗುವಷ್ಟು ಹಣ ಇದೆಯಾ ಅಂತ ಲೆಕ್ಕಮಾಡಬೇಕೆಂದು’ ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದನು. ಆದ್ದರಿಂದ ನಾನು ‘ಮಯಾನ್ಮಾರಿಗೆ ಸ್ಥಳಾಂತರಿಸಲು ಬೇಕಾದ ಹಣ ನನ್ನ ಹತ್ತಿರ ಇದೆಯಾ? ಅಲ್ಲಿಗೆ ಹೋದ ಮೇಲೆ ಸೇವೆಗೆ ಹೆಚ್ಚು ಗಮನ ಕೊಡಲು ಸಹಾಯ ಮಾಡುವಂಥ ಕೆಲಸ ಸಿಗುತ್ತಾ?’ ಅಂತ ಯೋಚನೆ ಮಾಡಿದೆ. ನಾನಿರುವ ದೇಶದಿಂದ ತುಂಬ ದೂರದಲ್ಲಿರುವ ದೇಶಕ್ಕೆ ಹೋಗಿ ಸೇವೆಮಾಡಲು ಬೇಕಾದಷ್ಟು ಹಣ ನನ್ನ ಹತ್ತಿರ ಇಲ್ಲ ಅಂತ ಗೊತ್ತಾಯಿತು” ಎಂದವರು ಹೇಳುತ್ತಾರೆ. ಹಾಗಾದರೆ ಅವರಿಗೆ ಹೇಗೆ ಸಹಾಯ ಸಿಕ್ಕಿತು?—ಲೂಕ 14:28.
ಮೋನಿಕ್ ವಿವರಿಸುವುದು: “ನನಗೆ ಕೆಲಸ ಕೊಟ್ಟಿದ್ದ ಮೇಡಮ್ ನನ್ನ ಹತ್ತಿರ ಮಾತಾಡಬೇಕು ಅಂತ ಒಂದಿನ ಕರೆದರು. ನನ್ನನ್ನ ಕೆಲಸದಿಂದ ತೆಗೆದುಬಿಡುತ್ತಾರೇನೋ ಅಂತ ನನಗೆ ಭಯ ಆಯಿತು. ಆದರೆ ನಾನು ಚೆನ್ನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿ ಮೇಡಮ್ ಥ್ಯಾಂಕ್ಸ್ ಹೇಳಿದರು. ನಂತರ ಅವರು ನನಗೆ ಬೋನಸ್ ಕೊಡಲು ಏರ್ಪಾಡು ಮಾಡಿದ್ದೇನೆ ಎಂದರು. ಆ ಬೋನಸ್‌ನಿಂದ ನನ್ನೆಲ್ಲಾ ಸಾಲವನ್ನು ತೀರಿಸಲು ಸಾಧ್ಯವಾಯಿತು.”
ಮೋನಿಕ್ ಮಯಾನ್ಮಾರಲ್ಲಿ 2014ರ ಡಿಸೆಂಬರ್‌ನಿಂದ ಸೇವೆ ಮಾಡುತ್ತಿದ್ದಾರೆ. ಅಗತ್ಯ ಹೆಚ್ಚಿರುವ ಸ್ಥಳದಲ್ಲಿ ಸೇವೆ ಮಾಡುತ್ತಿರುವುದರ ಬಗ್ಗೆ ಅವರಿಗೆ ಹೇಗನಿಸುತ್ತದೆ? “ನನಗೆ ಇಲ್ಲಿ ಇರಕ್ಕೆ ತುಂಬ ಖುಷಿ ಆಗುತ್ತೆ. ನಾನು ಮೂರು ಬೈಬಲ್ ಅಧ್ಯಯನ ನಡೆಸುತ್ತಿದ್ದೇನೆ. ಅವರಲ್ಲಿ ಒಬ್ಬರಿಗೆ 67 ವಯಸ್ಸು. ನಾನು ಹೋದಾಗೆಲ್ಲಾ ಅವರು ನಗುಮುಖದಿಂದ ಸ್ವಾಗತಿಸಿ ಪ್ರೀತಿಯಿಂದ ಅಪ್ಪಿಕೊಳ್ಳುತ್ತಾರೆ. ದೇವರ ಹೆಸರು ಯೆಹೋವ ಅಂತ ಕಲಿತಾಗ ಅವರ ಕಣ್ಣಲ್ಲಿ ನೀರು ಬಂತು. ‘ನನ್ನ ಜೀವನದಲ್ಲಿ ಇದೇ ಮೊದಲ ಸಲ ದೇವರ ಹೆಸರು ಯೆಹೋವ ಅಂತ ಕೇಳಿದ್ದು. ನೀನು ನನಗಿಂತ ಎಷ್ಟೋ ಚಿಕ್ಕವಳಾಗಿದ್ದರೂ ನಾನು ಇದುವರೆಗೂ ಕಲಿತಿರದ ಪ್ರಾಮುಖ್ಯ ವಿಷಯವನ್ನು ನನಗೆ ಹೇಳಿಕೊಟ್ಟಿದ್ದೀಯ’ ಎಂದರು. ಅವರು ಹೇಳಿದ್ದನ್ನು ಕೇಳಿ ನನ್ನ ಕಣ್ಣಲ್ಲೂ ನೀರು ಬಂತು. ಅಗತ್ಯ ಹೆಚ್ಚಿರುವ ಸ್ಥಳದಲ್ಲಿ ಸೇವೆ ಮಾಡುವುದರಿಂದ ಜೀವನದಲ್ಲಿ ತೃಪ್ತಿ ಸಿಗುತ್ತದೆ ಎಂದು ಇಂಥ ಅನುಭವಗಳಿಂದ ಗೊತ್ತಾಗುತ್ತದೆ.” ಇತ್ತೀಚೆಗೆ ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾಗುವ ಸುಯೋಗ ಮೋನಿಕ್‌ಗೆ ಸಿಕ್ಕಿತು.
2013ರ ಯೆಹೋವನ ಸಾಕ್ಷಿಗಳ ವರ್ಷಪುಸ್ತಕದಲ್ಲಿ ಮಯಾನ್ಮಾರ್ ಬಗ್ಗೆ ಇದ್ದ ವರದಿ ಸಹ ಈ ದೇಶಕ್ಕೆ ಬಂದು ಸೇವೆ ಮಾಡಲು ಕೆಲವರಿಗೆ ಪ್ರಚೋದನೆ ನೀಡಿತು. 30 ವಯಸ್ಸಿನ ಲೀ ಎಂಬ ಸಹೋದರಿ ಮಯಾನ್ಮಾರ್‌ಗೆ ಹತ್ತಿರವಿರುವ ದೇಶದವರು. ಅವರಿಗೆ ಪೂರ್ಣ ಸಮಯದ ಕೆಲಸ ಇತ್ತು. ಆದರೆ ವರ್ಷಪುಸ್ತಕದಲ್ಲಿ ಬಂದ ವರದಿಯನ್ನು ಓದಿ ಮಯಾನ್ಮಾರಲ್ಲಿ ಸೇವೆ ಮಾಡುವುದರ ಬಗ್ಗೆ ಯೋಚಿಸಿದರು. ಅವರು ಹೇಳುವುದು: “2014ರಲ್ಲಿ ಯಾಂಗಾನ್‌ನಲ್ಲಿ ನಡೆದ ವಿಶೇಷ ಅಧಿವೇಶನಕ್ಕೆ ನಾನು ಹಾಜರಾದಾಗ ಅಗತ್ಯ ಹೆಚ್ಚಿರುವ ಕಡೆ ಸೇವೆ ಮಾಡುತ್ತಿರುವ ದಂಪತಿಯನ್ನು ಭೇಟಿ ಮಾಡಿದೆ. ಇವರು ಮಯಾನ್ಮಾರಲ್ಲಿ ಚೀನಾದವರು ಇರುವ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದ್ದರು. ನಾನೂ ಚೈನೀಸ್ ಭಾಷೆ ಮಾತಾಡುವುದರಿಂದ ಮಯಾನ್ಮಾರಲ್ಲಿ ಇರುವ ಚೈನೀಸ್ ಗುಂಪಿಗೆ ಸಹಾಯ ಮಾಡಲು ಅಲ್ಲಿಗೆ ಸ್ಥಳಾಂತರಿಸಿದೆ. ಅಲ್ಲಿ ಮೋನಿಕ್ ಸಿಕ್ಕಿದರು ಮತ್ತು ನಾವಿಬ್ಬರೂ ಮ್ಯಾಂಡಲೇಗೆ ಹೋದೆವು. ಒಂದು ಶಾಲೆಯಲ್ಲಿ ಪಾಠ ಹೇಳಿಕೊಡುವ ಪಾರ್ಟ್-ಟೈಮ್ ಕೆಲಸ ನಮ್ಮಿಬ್ಬರಿಗೂ ಸಿಕ್ಕಿತು. ಶಾಲೆಯ ಹತ್ತಿರನೇ ಇದ್ದ ಒಂದು ಅಪಾರ್ಟ್‌ಮೆಂಟಲ್ಲಿ ಮನೆನೂ ಸಿಕ್ಕಿತು. ಹೀಗೆ ಯೆಹೋವನು ನಮ್ಮಿಬ್ಬರನ್ನು ಆಶೀರ್ವದಿಸಿದನು. ಇಲ್ಲಿ ಹೆಚ್ಚು ಸೆಕೆ ಮತ್ತು ಕೆಲವು ಅನಾನುಕೂಲತೆ ಇದ್ದರೂ ಸೇವೆಯನ್ನು ನಾನು ಆನಂದಿಸುತ್ತೇನೆ. ಮಯಾನ್ಮಾರಲ್ಲಿರುವ ಜನರು ಸರಳ ಜೀವನ ನಡೆಸುತ್ತಾರೆ, ಸಭ್ಯವಾಗಿ ನಡಕೊಳ್ಳುತ್ತಾರೆ ಮತ್ತು ಸುವಾರ್ತೆಯನ್ನು ಗಮನ ಕೊಟ್ಟು ಕೇಳಿಸಿಕೊಳ್ಳುತ್ತಾರೆ. ಈ ಕೆಲಸವನ್ನು ಯೆಹೋವನು ತುಂಬ ವೇಗವಾಗಿ ನಡೆಸುತ್ತಿರುವುದನ್ನು ನೋಡುವುದಕ್ಕೆ ಖುಷಿ ಆಗುತ್ತದೆ. ಮ್ಯಾಂಡಲೇಯಲ್ಲಿ ನಾನು ಸೇವೆ ಮಾಡಬೇಕು ಎನ್ನುವುದು ಯೆಹೋವನ ಚಿತ್ತವಾಗಿದೆ ಎಂದು ದೃಢವಾಗಿ ನಂಬುತ್ತೇನೆ.”
ಯೆಹೋವನು ಪ್ರಾರ್ಥನೆಗಳನ್ನು ಕೇಳುತ್ತಾನೆ
ಅಗತ್ಯ ಹೆಚ್ಚಿರುವ ಕಡೆ ಸೇವೆ ಮಾಡುತ್ತಿರುವ ಅನೇಕರು ಪ್ರಾರ್ಥನೆಗಿರುವ ಶಕ್ತಿಯನ್ನು ಅನುಭವಿಸಿದ್ದಾರೆ. 37 ವಯಸ್ಸಿನ ಜಂಪೇ ಮತ್ತು 35 ವಯಸ್ಸಿನ ಅವರ ಪತ್ನಿ ನಾಓ ಉದಾಹರಣೆಯನ್ನೇ ನೋಡಿ. ಅವರು ಮುಂಚೆನೇ ಜಪಾನ್‌ನಲ್ಲಿ ಸನ್ನೆ ಭಾಷೆಯ ಸಭೆಯಲ್ಲಿ
ಸೇವೆ ಮಾಡುತ್ತಿದ್ದರು. ಹಾಗಾದರೆ ಅವರು ಯಾಕೆ ಮಯಾನ್ಮಾರಲ್ಲಿ ಸೇವೆ ಮಾಡಲು ಹೋದರು? ಜಂಪೇ ಹೇಳುತ್ತಾರೆ: “ಬೇರೆ ದೇಶದಲ್ಲಿ ಅಗತ್ಯ ಹೆಚ್ಚಿರುವ ಸ್ಥಳದಲ್ಲಿ ಸೇವೆ ಮಾಡಬೇಕು ಎನ್ನುವ ಗುರಿ ನನಗೂ ನನ್ನ ಪತ್ನಿಗೂ ಇತ್ತು. ಸನ್ನೆ ಭಾಷೆಯ ನಮ್ಮ ಸಭೆಯಿಂದ ಒಬ್ಬ ಸಹೋದರ ಮಯಾನ್ಮಾರಿಗೆ ಹೋಗಿ ಸೇವೆ ಮಾಡುತ್ತಿದ್ದರು. ನಮ್ಮ ಹತ್ತಿರ ಸ್ವಲ್ಪನೇ ಹಣ ಇದ್ದರೂ ನಾವೂ 2010ರ ಮೇ ತಿಂಗಳಲ್ಲಿ ಅಲ್ಲಿಗೆ ಹೋದೆವು. ಮಯಾನ್ಮಾರಿನ ಸಹೋದರ ಸಹೋದರಿಯರು ನಮ್ಮನ್ನು ಪ್ರೀತಿಯಿಂದ ಸ್ವಾಗತಿಸಿದರು!” ಮಯಾನ್ಮಾರಿನ ಸನ್ನೆ ಭಾಷೆಯ ಕ್ಷೇತ್ರದ ಬಗ್ಗೆ ಅವರಿಗೆ ಹೇಗನಿಸುತ್ತದೆ? “ಇಲ್ಲಿರುವ ಜನರಿಗೆ ತುಂಬ ಆಸಕ್ತಿ. ಸನ್ನೆ ಭಾಷೆಯ ವಿಡಿಯೋಗಳನ್ನು ನಾವು ತೋರಿಸಿದಾಗ ಕಿವಿ ಕೇಳಿಸದವರು ತುಂಬ ಆಶ್ಚರ್ಯಪಡುತ್ತಾರೆ. ನಾವು ಇಲ್ಲಿಗೆ ಬಂದು ಯೆಹೋವನ ಸೇವೆ ಮಾಡಬೇಕೆಂದು ನಿರ್ಧಾರ ಮಾಡಿದ್ದಕ್ಕೆ ನಮಗೆ ತುಂಬ ಸಂತೋಷ ಆಗುತ್ತದೆ!”ಜಂಪೇ ಮತ್ತು ನಾಓ ಹಣಕಾಸಿನ ತೊಂದರೆಯನ್ನು ಹೇಗೆ ನಿಭಾಯಿಸಿದರು? ಅವರು ಹೇಳುವುದು: “ನಾವು ಕೂಡಿಸಿಟ್ಟ ಹಣ ಮೂರು ವರ್ಷದಲ್ಲಿ ಖಾಲಿಯಾಗುತ್ತಾ ಬಂತು. ಮುಂದಿನ ವರ್ಷದ ಬಾಡಿಗೆ ಕಟ್ಟುವಷ್ಟು ದುಡ್ಡು ನಮ್ಮ ಕೈಯಲ್ಲಿರಲಿಲ್ಲ. ನಾನೂ ನನ್ನ ಹೆಂಡತಿನೂ ಯೆಹೋವನಿಗೆ ತುಂಬ ಪ್ರಾರ್ಥನೆ ಮಾಡಿದೆವು. ದಿಢೀರಂತ ಒಂದಿನ ಶಾಖಾ ಕಚೇರಿಯಿಂದ ಪತ್ರ ಬಂತು. ನಾವು ತಾತ್ಕಾಲಿಕ ವಿಶೇಷ ಪಯನೀಯರರಾಗಿ ನೇಮಕಗೊಂಡಿದ್ದೆವು! ಯೆಹೋವನನ್ನು ನಂಬಿ ಮುಂದೆ ಹೆಜ್ಜೆ ಇಟ್ಟೆವು. ಆತನೂ ನಮ್ಮ ಕೈ ಬಿಡಲಿಲ್ಲ. ಎಲ್ಲ ರೀತಿಲೂ ನಮ್ಮನ್ನು ನೋಡಿಕೊಳ್ಳುತ್ತಿದ್ದಾನೆ.” ಇತ್ತೀಚಿಗೆ, ಜಂಪೇ ಮತ್ತು ನಾಓ ಕೂಡ ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾದರು.
ಯೆಹೋವನು ಅನೇಕರನ್ನು ಪ್ರೇರಿಸಿದ್ದಾನೆ
43 ವಯಸ್ಸಿನ ಸಿಮೋನೇ ಇಟಲಿಯವರು ಮತ್ತು 37 ವಯಸ್ಸಿನ ಅವರ ಪತ್ನಿ ಆ್ಯನ ನ್ಯೂಜಿಲೆಂಡ್‌ನವರು. ಮಯಾನ್ಮಾರಿಗೆ ಬಂದು ಸೇವೆಮಾಡಲು ಇವರಿಬ್ಬರನ್ನು ಯಾವುದು ಪ್ರಚೋದಿಸಿತು? “2013ರ ಯೆಹೋವನ ಸಾಕ್ಷಿಗಳ ವರ್ಷಪುಸ್ತಕ” ಎಂದು ಆ್ಯನ ಹೇಳುತ್ತಾರೆ. ಸೀಮೋನೇ ಹೇಳುವುದು: “ಮಯಾನ್ಮಾರಲ್ಲಿ ಸೇವೆ ಮಾಡುವುದು ಒಂದು ದೊಡ್ಡ ಸುಯೋಗ. ಇಲ್ಲಿ ಜೀವನ ತುಂಬ ಸರಳ. ಆದ್ದರಿಂದ ಯೆಹೋವನ ಕೆಲಸಕ್ಕೆ ಹೆಚ್ಚು ಸಮಯ ಕೊಡಕ್ಕಾಗುತ್ತಿದೆ. ಹೆಚ್ಚಿನ ಪ್ರಚಾರಕರ ಅಗತ್ಯ ಇರುವ ಸ್ಥಳದಲ್ಲಿ ಸೇವೆ ಮಾಡುವಾಗ ಯೆಹೋವನು ನಮ್ಮ ಕಾಳಜಿ ವಹಿಸುವುದನ್ನು ನೋಡಿ ತುಂಬ ಸಂತೋಷವಾಗುತ್ತದೆ.” (ಕೀರ್ತ. 121:5) ಆ್ಯನ ಹೇಳುವುದು: “ನಾನು ಮುಂಚೆಗಿಂತ ತುಂಬ ಖುಷಿಯಾಗಿದ್ದೀನಿ. ನಾವು ಸರಳ ಜೀವನ ನಡೆಸುತ್ತಿದ್ದೇವೆ. ನಾನು ನನ್ನ ಗಂಡನ ಜೊತೆ ಹೆಚ್ಚು ಸಮಯ ಕಳೆಯುತ್ತಾ ಇರುವುದರಿಂದ ನಾವು ಹೆಚ್ಚು ಆಪ್ತರಾಗಿದ್ದೇವೆ. ನಮಗಿಲ್ಲಿ ಮುತ್ತಿನಂಥ ಮಿತ್ರರು ಸಿಕ್ಕಿದ್ದಾರೆ. ಇಲ್ಲಿನ ಜನರಿಗೆ ಯೆಹೋವನ ಸಾಕ್ಷಿಗಳ ಬಗ್ಗೆ ಒಳ್ಳೇ ಅಭಿಪ್ರಾಯ ಇದೆ. ಹಾಗಾಗಿ ನಾವು ಸೇವೆಗೆ ಹೋದಾಗ ಆಸಕ್ತಿಯಿಂದ ಕೇಳುತ್ತಾರೆ.”
“ಒಂದು ದಿನ ಸಂತೆಯಲ್ಲಿ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಒಂದು ಹುಡುಗಿಗೆ ಸಾಕ್ಷಿ ಕೊಟ್ಟೆ. ಅವಳನ್ನ ಪುನಃ ಭೇಟಿ ಮಾಡೋದಕ್ಕೂ ಏರ್ಪಾಡು ಮಾಡಿಕೊಂಡೆ. ಆಮೇಲೆ ಅವಳನ್ನು ಭೇಟಿಯಾಗಲು ಹೋದಾಗ ಅವಳು ತನ್ನ ಗೆಳತಿಯನ್ನು ಕರಕೊಂಡು ಬಂದಿದ್ದಳು. ಮುಂದಿನ ಸಾರಿ ಹೋದಾಗ ಇನ್ನೂ ಕೆಲವರನ್ನು ಕರಕೊಂಡು ಬಂದಿದ್ದಳು. ಆಮೇಲೆ ಇನ್ನೂ ಹೆಚ್ಚು ಜನರನ್ನು ಕರಕೊಂಡು ಬಂದಳು. ಈಗ ನಾನು ಅವರಲ್ಲಿ ಐದು ಮಂದಿಗೆ ಬೈಬಲ್ ಕಲಿಸುತ್ತಾ ಇದ್ದೇನೆ.” ಸಿಮೋನೇ ಹೇಳುವುದು: “ಇಲ್ಲಿನ ಜನರು ತುಂಬ ಸ್ನೇಹ-ಪ್ರೀತಿ ತೋರಿಸುತ್ತಾರೆ. ಆಸಕ್ತಿಯಿಂದ ಕೇಳುತ್ತಾರೆ. ತುಂಬ ಜನರಿಗೆ ಸತ್ಯ ಕಲಿಯುವ ಮನಸ್ಸಿದೆ. ಅವರೆಲ್ಲರಿಗೂ ಕಲಿಸುವುದಕ್ಕೆ ನಮಗೆ ಸಮಯನೇ ಸಾಕಾಗುತ್ತಿಲ್ಲ.”
ಮಯಾನ್ಮಾರಿಗೆ ಬಂದು ಸೇವೆಮಾಡಲಿಕ್ಕಾಗಿ ಏನೆಲ್ಲ ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕಾಯಿತು? ಜಪಾನಿನ ಮಿಜುಹೋ ಎಂಬ ಸಹೋದರಿ ಹೇಳುವುದು: “ನನಗೂ ನನ್ನ ಗಂಡ ಸಾಚಿಓಗೂ ಪ್ರಚಾರಕರ ಅಗತ್ಯವಿರುವ ಸ್ಥಳಕ್ಕೆ ಹೋಗಿ ಸೇವೆ ಮಾಡಬೇಕು ಅಂತ ತುಂಬ ಆಸೆ ಇತ್ತು. ಆದರೆ ಎಲ್ಲಿ ಹೋಗಿ ಸೇವೆ ಮಾಡಬೇಕು ಅಂತ ಗೊತ್ತಿರಲಿಲ್ಲ. 2013ರ ವರ್ಷಪುಸ್ತಕದಲ್ಲಿ ಮಯಾನ್ಮಾರಿನ ಬಗ್ಗೆ ಓದಿದೆವು. ಅದರಲ್ಲಿದ್ದ
ಅನುಭವಗಳು ನಮಗೆ ತುಂಬ ಇಷ್ಟವಾಯಿತು. ಅಲ್ಲಿ ಹೋಗಿ ಸೇವೆ ಮಾಡೋಣ್ವಾ ಅಂತ ಯೋಚಿಸೋಕೆ ಶುರುಮಾಡಿದ್ವಿ.” ಸಾಚಿಓ ಹೇಳುವುದು: “ನಾವು ಮಯಾನ್ಮಾರಿನ ಮುಖ್ಯ ಪಟ್ಟಣವಾದ ಯಾಂಗಾನ್‌ಗೆ ಭೇಟಿ ಕೊಟ್ಟು ಅಲ್ಲೆಲ್ಲ ಹೇಗಿದೆ ಅಂತ ನೋಡಿಕೊಂಡು ಬರೋಣ ಅಂತ ನಿರ್ಧಾರ ಮಾಡಿದ್ವಿ. ಆ ಚಿಕ್ಕ ಭೇಟಿನೇ ನಾವಿಲ್ಲಿ ಬಂದು ಸೇವೆ ಮಾಡುವ ತೀರ್ಮಾನ ತೆಗೆದುಕೊಳ್ಳೋಕೆ ಸಾಕಾಗಿತ್ತು.”ನೀವೂ ಬಂದು ಸೇವೆ ಮಾಡುತ್ತೀರಾ?
50 ವಯಸ್ಸು ದಾಟಿರುವ ರಾಡ್‌ನಿ ಮತ್ತು ಅವರ ಪತ್ನಿ ಜೇನ್ ಆಸ್ಟ್ರೇಲಿಯದವರು. ಇವರ ಮಗನ ಹೆಸರು ಜಾರ್ಡನ್, ಮಗಳ ಹೆಸರು ಡ್ಯಾನಿಕ. ಇವರೆಲ್ಲರೂ 2010ರಿಂದ ಮಯಾನ್ಮಾರಲ್ಲಿ ಸೇವೆ ಮಾಡುತ್ತಿದ್ದಾರೆ. ರಾಡ್‌ನಿ ಹೇಳುವುದು: “ಇಲ್ಲಿನ ಜನರಿಗೆ ದೇವರ ಬಗ್ಗೆ ತಿಳಿದುಕೊಳ್ಳಬೇಕು ಅಂತ ತುಂಬ ಆಸೆ ಇದೆ. ಇದನ್ನು ನೋಡಿ ನಾವು ತುಂಬ ಪ್ರಭಾವಿತರಾಗಿದ್ದೇವೆ. ಬೇರೆಯವರೂ ಕುಟುಂಬ ಸಮೇತವಾಗಿ ಮಯಾನ್ಮಾರ್‌ನಂಥ ದೇಶಕ್ಕೆ ಹೋಗಿ ಸೇವೆ ಮಾಡಿ ಅಂತ ನಾನು ಪ್ರೋತ್ಸಾಹಿಸುತ್ತೇನೆ.” ಯಾಕೆ? “ಇಲ್ಲಿ ಬಂದು ಸೇವೆ ಮಾಡುತ್ತಿರುವುದರಿಂದ ನಾನೂ ನನ್ನ ಹೆಂಡ್ತಿ ಮತ್ತು ಮಕ್ಕಳು ಯೆಹೋವನಿಗೆ ಆಪ್ತರಾಗಿದ್ದೇವೆ! ಇವತ್ತು ಮಕ್ಕಳು ಸಾಮಾನ್ಯವಾಗಿ ಫೋನು, ಕಾರು, ಕೆಲಸ ಅಂತ ಅದರ ಗುಂಗಲ್ಲೇ ಇರುತ್ತಾರೆ. ಆದರೆ ನಮ್ಮ ಮಕ್ಕಳು ಸೇವೆಯಲ್ಲಿ ಮಾತಾಡಲು ಹೊಸ ಹೊಸ ಪದಗಳನ್ನು ಕಲಿಯುತ್ತಿದ್ದಾರೆ. ಬೈಬಲಿನ ಬಗ್ಗೆ ಗೊತ್ತಿಲ್ಲದ ಜನರ ಹತ್ತಿರ ಮಾತಾಡುವುದು ಹೇಗೆ ಅಂತ ಕಲಿಯುತ್ತಿದ್ದಾರೆ. ಕೂಟದಲ್ಲಿ ಇಲ್ಲಿನ ಭಾಷೆಯಲ್ಲಿ ಉತ್ತರ ಕೊಡಲು ಕಲಿಯುತ್ತಿದ್ದಾರೆ. ಹೀಗೆ ಆಧ್ಯಾತ್ಮಿಕ ಚಟುವಟಿಕೆಗಳ ಬಗ್ಗೆನೇ ಅವರು ಯೋಚಿಸುತ್ತಾರೆ.”
37 ವಯಸ್ಸಿನ ಆಲಿವರ್ ಅಮೆರಿಕದವರು. ಹೆಚ್ಚಿನ ಪ್ರಚಾರಕರ ಅಗತ್ಯ ಇರುವ ಸ್ಥಳಕ್ಕೆ ಹೋಗಿ ಸೇವೆ ಮಾಡುತ್ತಿರುವ ಇವರು ಬೇರೆಯವರೂ ಇಂಥ ಸೇವೆ ಮಾಡಲು ಪ್ರೋತ್ಸಾಹಿಸುತ್ತಾರೆ. ಯಾಕೆಂದು ವಿವರಿಸುತ್ತಾರೆ ಕೇಳಿ: “ನನಗೆ ಯಾವುದು ಅನುಕೂಲನೋ ಅದನ್ನು ಬಿಟ್ಟು ಬೇರೆ ಕಡೆ ಹೋಗಿ ಸೇವೆ ಮಾಡಿದ್ದರಿಂದ ತುಂಬ ಪ್ರಯೋಜನ ಪಡೆದಿದ್ದೇನೆ. ನಾನು ಮನೆಯಿಂದ ದೂರ ಬಂದು ಸೇವೆ ಮಾಡಿದ್ದು ಯಾವುದೇ ಪರಿಸ್ಥಿತಿಯಲ್ಲೂ ಯೆಹೋವನ ಮೇಲೆ ಇರೋ ಭರವಸೆಯನ್ನು ಕಳಕೊಳ್ಳದೇ ಇರುವುದಕ್ಕೆ ಸಹಾಯ ಮಾಡಿದೆ. ಯಾರ ಜೊತೆ ಸೇವೆ ಮಾಡುತ್ತೇನೋ ಅವರ ಪರಿಚಯ ಇಲ್ಲದಿದ್ದರೂ ನಮ್ಮೆಲ್ಲರ ನಂಬಿಕೆ ಒಂದೇ ಆಗಿದೆ. ಹೀಗೆ ಒಗ್ಗಟ್ಟಿನಿಂದ ಸೇವೆ ಮಾಡುವುದನ್ನು ದೇವರ ಸಂಘಟನೆಯಲ್ಲಿ ಮಾತ್ರ ನೋಡಕ್ಕೆ ಸಾಧ್ಯ.” ಆಲಿವರ್ ಮತ್ತು ಅವರ ಪತ್ನಿ ಆ್ಯನ ಚೈನೀಸ್ ಭಾಷೆಯ ಕ್ಷೇತ್ರದಲ್ಲಿ ಈಗಲೂ ಹುರುಪಿನಿಂದ ಸೇವೆ ಮಾಡುತ್ತಿದ್ದಾರೆ.
52 ವರ್ಷದ ಟ್ರೇಝೆಲ್ ಎಂಬ ಸಹೋದರಿ ಆಸ್ಟ್ರೇಲಿಯದವರು, 2004ರಿಂದ ಮಯಾನ್ಮಾರಲ್ಲಿ ಸೇವೆ ಮಾಡುತ್ತಿದ್ದಾರೆ. ಅವರು ಹೇಳುವುದು: “ಹೆಚ್ಚಿನ ಪ್ರಚಾರಕರ ಅಗತ್ಯ ಇರುವ ಸ್ಥಳಗಳಿಗೆ ಹೋಗಿ ಸೇವೆ ಮಾಡಲು ಸಾಧ್ಯ ಇರುವವರು ಇಂಥ ಸೇವೆಯನ್ನು ದಯವಿಟ್ಟು ಮಾಡಿ ಅಂತ ಪ್ರೋತ್ಸಾಹಿಸುತ್ತೇನೆ. ಸೇವೆ ಮಾಡಲು ನಿಮಗೆ ಮನಸ್ಸಿದ್ದರೆ ಯೆಹೋವನು ನಿಮ್ಮ ಪ್ರಯತ್ನಗಳನ್ನು ಖಂಡಿತ ಆಶೀರ್ವದಿಸುತ್ತಾನೆ ಅಂತ ನನ್ನ ಸ್ವಂತ ಅನುಭವದಿಂದ ಹೇಳ್ತೇನೆ. ನಾನು ಹೀಗೆ ಬೇರೆ ದೇಶಕ್ಕೆ ಹೋಗಿ ಸೇವೆ ಮಾಡ್ತೇನೆ ಅಂತ ಯೋಚಿಸೇ ಇರಲಿಲ್ಲ. ಇದರಿಂದ ನನಗೆ ತುಂಬ ಆಶೀರ್ವಾದ ಸಿಕ್ಕಿದೆ, ಜೀವನದಲ್ಲಿ ಸಂತೃಪ್ತಿ ಇದೆ.”
ಬೇರೆ ದೇಶದಿಂದ ಮಯಾನ್ಮಾರಿಗೆ ಬಂದು ಸೇವೆ ಮಾಡುತ್ತಿರುವವರ ಮನದಾಳದ ಮಾತುಗಳನ್ನು ಓದಿ ನಿಮಗೂ ಪ್ರೋತ್ಸಾಹ ಸಿಗಲಿ. ಯಾರೂ ಸಾರಿರದ ಸ್ಥಳಗಳಿಗೆ ಹೋಗಿ ಸೇವೆ ಮಾಡಲು ಪ್ರೇರಣೆ ಸಿಗಲಿ. ಮಯಾನ್ಮಾರಲ್ಲಿ ಸೇವೆ ಮಾಡುತ್ತಿರುವ ಸಹೋದರ ಸಹೋದರಿಯರು ನಿಮಗೆ ಹೀಗೆ ಹೇಳುತ್ತಿದ್ದಾರೆ: “ದಯವಿಟ್ಟು, ಮಯಾನ್ಮಾರಿಗೆ ಬಂದು ನಮಗೆ ಸಹಾಯಮಾಡಿ!”