ವಾಚಕರಿಂದ ಪ್ರಶ್ನೆಗಳು
ಮದುವೆಯಾಗಿರದ ಒಬ್ಬ ಪುರುಷ ಮತ್ತು ಸ್ತ್ರೀ ಸರಿಯಾದ ಕಾರಣವಿಲ್ಲದೆ ಒಂದು ರಾತ್ರಿ ಒಟ್ಟಿಗಿದ್ದರೆ ಅವರು ಪಾಪ ಮಾಡಿರುವುದಕ್ಕೆ ಇದನ್ನು ಆಧಾರವಾಗಿ ತೆಗೆದುಕೊಂಡು ನ್ಯಾಯನಿರ್ಣಾಯಕ ಸಮಿತಿಯನ್ನು ರಚಿಸಬೇಕಾ?
ಹೌದು, ಸರಿಯಾದ ಕಾರಣವಿಲ್ಲದೆ ಅವರಿಬ್ಬರೇ ರಾತ್ರಿ ಒಟ್ಟಿಗಿದ್ದರು ಎನ್ನುವುದನ್ನು ಲೈಂಗಿಕ ಅನೈತಿಕತೆ ನಡೆದಿರುವುದಕ್ಕೆ ಬಲವಾದ ಆಧಾರವಾಗಿ ತೆಗೆದುಕೊಳ್ಳಬಹುದು. ಹಾಗಾಗಿ ಅವರು ಒಟ್ಟಿಗಿದ್ದದ್ದಕ್ಕೆ ಸರಿಯಾದ ಕಾರಣಗಳು ಇಲ್ಲದಿದ್ದಾಗ ನ್ಯಾಯನಿರ್ಣಾಯಕ ಸಮಿತಿಯನ್ನು ರಚಿಸಬೇಕು.—1 ಕೊರಿಂ. 6:18.
ನ್ಯಾಯನಿರ್ಣಾಯಕ ಸಮಿತಿಯ ಅಗತ್ಯ ಇದೆಯಾ ಎಂದು ನಿರ್ಧರಿಸಲು ಹಿರಿಯರ ಮಂಡಲಿ ಪ್ರತಿಯೊಂದು ಸನ್ನಿವೇಶವನ್ನು ಜಾಗರೂಕತೆಯಿಂದ ತೂಗಿನೋಡುತ್ತದೆ. ಉದಾಹರಣೆಗೆ, ಆ ಪುರುಷ ಮತ್ತು ಸ್ತ್ರೀ ಪ್ರೀತಿಸುತ್ತಿದ್ದರಾ? ಅವರಿಬ್ಬರೂ ಪರಸ್ಪರ ನಡಕೊಳ್ಳುವ ರೀತಿಯ ಬಗ್ಗೆ ಹಿರಿಯರು ಈ ಮುಂಚೆ ಬುದ್ಧಿವಾದ ಕೊಟ್ಟಿದ್ದರಾ? ಅವರಿಬ್ಬರೂ ರಾತ್ರಿ ಯಾಕೆ ಒಟ್ಟಿಗಿದ್ದರು? ಜೊತೆಯಲ್ಲಿರಲು ಮೊದಲೇ ಮಾತಾಡಿಕೊಂಡಿದ್ದರಾ? ಒಟ್ಟಿಗೆ ಇರುವುದನ್ನು ತಪ್ಪಿಸಲು ಅವರಿಗೆ ಬೇರೆ ದಾರಿ ಇತ್ತಾ ಅಥವಾ ಅವರು ಯೋಚನೆನೇ ಮಾಡಿರದ ಒಂದು ಘಟನೆಯಿಂದಾಗಿ ಅಥವಾ ಒಂದು ತುರ್ತು ಪರಿಸ್ಥಿತಿಯಿಂದಾಗಿ ಇಬ್ಬರೂ ಒಟ್ಟಿಗಿರಬೇಕಾಯಿತಾ? (ಪ್ರಸಂ. 9:11) ಅವರು ಎಲ್ಲಿ ಮಲಗಿದ್ದರು? ಪ್ರತಿಯೊಂದು ಸನ್ನಿವೇಶವೂ ಭಿನ್ನವಾಗಿರುವುದರಿಂದ ಹಿರಿಯರು ಸಂಬಂಧಪಟ್ಟ ಬೇರೆ ಮಾಹಿತಿಯನ್ನೂ ತೂಗಿನೋಡುತ್ತಾರೆ.
ಎಲ್ಲ ಮಾಹಿತಿಯನ್ನು ಪರಿಗಣಿಸಿದ ನಂತರ ನ್ಯಾಯನಿರ್ಣಾಯಕ ಸಮಿತಿಯನ್ನು ರಚಿಸಬೇಕಾ ಬೇಡವಾ ಎಂದು ಹಿರಿಯರ ಮಂಡಲಿ ನಿರ್ಧರಿಸುತ್ತದೆ.