ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಪಕ್ಷದಲ್ಲಿ ನೀವಿದ್ದೀರಾ?

ಯೆಹೋವನ ಪಕ್ಷದಲ್ಲಿ ನೀವಿದ್ದೀರಾ?

‘ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ಆತನನ್ನೇ ಸೇವಿಸಬೇಕು; ಆತನನ್ನೇ ಹೊಂದಿಕೊಳ್ಳಬೇಕು.’ —ಧರ್ಮೋ. 10:20.

ಗೀತೆಗಳು: 106, 27

1, 2. (ಎ) ಯೆಹೋವನ ಪಕ್ಷದಲ್ಲಿರುವುದು ಯಾಕೆ ಜಾಣತನವಾಗಿದೆ? (ಬಿ) ಈ ಲೇಖನದಲ್ಲಿ ನಾವು ಏನನ್ನು ಚರ್ಚಿಸಲಿದ್ದೇವೆ?

ಯೆಹೋವನಿಗೆ ಹತ್ತಿರವಾಗಿ ಉಳಿಯುವುದು ಜಾಣತನವಾಗಿದೆ. ಯಾಕೆಂದರೆ ಆತನಿಗಿರುವಷ್ಟು ಶಕ್ತಿ, ವಿವೇಕ ಮತ್ತು ಪ್ರೀತಿ ಬೇರೆ ಯಾರಿಗೂ ಇಲ್ಲ! ನಮ್ಮಲ್ಲಿ ಯಾರು ತಾನೇ ಯೆಹೋವನ ಪಕ್ಷದಲ್ಲಿರಲು ಬಯಸುವುದಿಲ್ಲ ಹೇಳಿ? (ಕೀರ್ತ. 96:4-6) ಆದರೆ ದೇವರ ಆರಾಧಕರಲ್ಲಿ ಕೆಲವರು ಕೆಲವೊಂದು ಸನ್ನಿವೇಶಗಳಲ್ಲಿ ಆತನ ಪಕ್ಷದಲ್ಲಿ ದೃಢವಾಗಿ ನಿಲ್ಲಲಿಲ್ಲ.

2 ತಾವು ಯೆಹೋವನ ಪಕ್ಷದಲ್ಲಿದ್ದೇವೆಂದು ಹೇಳಿಕೊಂಡರೂ ಆತನು ದ್ವೇಷಿಸುತ್ತಿದ್ದ ವಿಷಯಗಳನ್ನು ಮಾಡುತ್ತಿದ್ದವರ ಉದಾಹರಣೆಗಳನ್ನು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ. ಅವರ ಉದಾಹರಣೆಗಳಿಂದ ನಾವು ಕಲಿಯುವ ಪ್ರಾಮುಖ್ಯ ಪಾಠಗಳು ಯೆಹೋವನಿಗೆ ನಿಷ್ಠಾವಂತರಾಗಿ ಉಳಿಯಲು ಸಹಾಯ ಮಾಡುತ್ತವೆ.

ಯೆಹೋವನು ನಮ್ಮ ಹೃದಯವನ್ನು ಪರೀಕ್ಷಿಸುತ್ತಾನೆ

3. (ಎ) ಯೆಹೋವನು ಯಾಕೆ ಕಾಯಿನನಿಗೆ ಸಹಾಯ ಮಾಡಲು ಪ್ರಯತ್ನಿಸಿದನು? (ಬಿ) ಆತನು ಕಾಯಿನನಿಗೆ ಏನು ಹೇಳಿದನು?

3 ಕಾಯಿನನ ಉದಾಹರಣೆ ನೋಡೋಣ. ಅವನೇನು ಸುಳ್ಳು ದೇವರುಗಳನ್ನು ಆರಾಧಿಸಲಿಲ್ಲ, ಯೆಹೋವನನ್ನೇ ಆರಾಧಿಸುತ್ತಿದ್ದನು. ಆದರೂ ಯೆಹೋವನು ಅವನ ಆರಾಧನೆಯನ್ನು ಸ್ವೀಕರಿಸಲಿಲ್ಲ. ಯಾಕೆ? ಯಾಕೆಂದರೆ ಕಾಯಿನನ ಹೃದಯದಲ್ಲಿ ಕೆಟ್ಟತನ ಬೆಳೆಯುತ್ತಿರುವುದನ್ನು ಯೆಹೋವನು ನೋಡಿದನು. (1 ಯೋಹಾ. 3:12) ಯೆಹೋವನು ಕಾಯಿನನಿಗೆ “ಒಳ್ಳೇ ಕೆಲಸ ಮಾಡಿದರೆ ನಿನ್ನ ತಲೆ ಎತ್ತಲ್ಪಡುವದಲ್ಲವೇ; ಅಲ್ಲದಿದ್ದರೆ ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಲಲ್ಲಿ ಹೊಂಚಿಕೊಂಡಿರುವದು; ಆದರೂ ನೀನು ಅದನ್ನು ವಶಮಾಡಿಕೊಳ್ಳಬೇಕು” ಎಂದು ಎಚ್ಚರಿಕೆ ಕೊಟ್ಟನು. (ಆದಿ. 4:6, 7) ಇನ್ನೊಂದು ಮಾತಿನಲ್ಲಿ “ನೀನು ಪಶ್ಚಾತ್ತಾಪಪಟ್ಟು ನನ್ನ ಪಕ್ಷದಲ್ಲಿ ದೃಢವಾಗಿ ನಿಂತರೆ ನಾನೂ ನಿನ್ನ ಪಕ್ಷದಲ್ಲಿರುತ್ತೇನೆ” ಎಂದು ಯೆಹೋವನು ಅವನಿಗೆ ಹೇಳಿದಂತಿತ್ತು.

4. ಯೆಹೋವನ ಪಕ್ಷದಲ್ಲಿ ಉಳಿಯುವ ಅವಕಾಶ ಸಿಕ್ಕಿದಾಗ ಕಾಯಿನ ಏನು ಮಾಡಿದನು?

4 ಕಾಯಿನನು ತನ್ನ ಯೋಚನೆಯನ್ನು ಸರಿಪಡಿಸಿಕೊಂಡಿದ್ದಿದ್ದರೆ ಯೆಹೋವನು ಅವನ ಆರಾಧನೆಯನ್ನು ಪುನಃ ಸ್ವೀಕರಿಸುತ್ತಿದ್ದನು. ಆದರೆ ಕಾಯಿನ ದೇವರ ಮಾತಿಗೆ ಕಿವಿಗೊಡಲಿಲ್ಲ. ಬದಲಿಗೆ ತನ್ನ ಕೆಟ್ಟ ಯೋಚನೆ ಮತ್ತು ಸ್ವಾರ್ಥ ಆಸೆಯಿಂದ ದೊಡ್ಡ ತಪ್ಪನ್ನು ಮಾಡಿಬಿಟ್ಟನು. (ಯಾಕೋ. 1:14, 15) ಅವನು ಚಿಕ್ಕವನಿದ್ದಾಗ ತಾನು ಮುಂದೊಂದು ದಿನ ಯೆಹೋವನಿಗೆ ವಿರುದ್ಧವಾಗಿ ನಡಕೊಳ್ಳುತ್ತೇನೆ ಎಂದು ಯೋಚಿಸಿರಲಿಕ್ಕಿಲ್ಲ. ಆದರೆ ಈಗ ಅವನು ದೇವರ ಎಚ್ಚರಿಕೆಯನ್ನು ತಿರಸ್ಕರಿಸಿ ಆತನ ವಿರುದ್ಧ ದಂಗೆಯೆದ್ದನು ಮತ್ತು ತನ್ನ ಸ್ವಂತ ತಮ್ಮನನ್ನು ಕೊಂದು ಬಿಟ್ಟನು!

5. ಎಂಥ ಯೋಚನೆಗಳು ಯೆಹೋವನ ಅನುಗ್ರಹವನ್ನು ಕಳಕೊಳ್ಳುವಂತೆ ಮಾಡಿಬಿಡಬಹುದು?

5 ಕಾಯಿನನಂತೆ ಇಂದು ಒಬ್ಬ ಕ್ರೈಸ್ತನು ತಾನು ಯೆಹೋವನನ್ನು ಆರಾಧಿಸುತ್ತೇನೆಂದು ತೋರಿಸಿಕೊಳ್ಳಬಹುದು. ಆದರೆ ಅವನು ಯೆಹೋವನು ದ್ವೇಷಿಸುವಂಥ ವಿಷಯಗಳನ್ನು ಮಾಡುತ್ತಿರಬಹುದು. (ಯೂದ 11) ಅವನು ಸೇವೆಗೆ, ಕೂಟಗಳಿಗೆ ಕ್ರಮವಾಗಿ ಹೋಗುತ್ತಿರಬಹುದು. ಆದರೆ ಅದೇ ಸಮಯದಲ್ಲಿ ತನ್ನ ಮನಸ್ಸಲ್ಲಿ ಅನೈತಿಕ ವಿಷಯಗಳ ಬಗ್ಗೆ ಯೋಚಿಸುತ್ತಿರಬಹುದು, ಅತಿಯಾಸೆ ಬೆಳೆಸಿಕೊಳ್ಳುತ್ತಿರಬಹುದು ಅಥವಾ ತನ್ನ ಜೊತೆ ಕ್ರೈಸ್ತನ ಮೇಲೆ ದ್ವೇಷವನ್ನು ಇಟ್ಟುಕೊಂಡಿರಬಹುದು. (1 ಯೋಹಾ. 2:15-17; 3:15) ಇಂಥ ಯೋಚನೆಗಳು ಪಾಪಕ್ಕೆ ನಡೆಸುತ್ತವೆ. ನಾವು ಏನು ಯೋಚಿಸುತ್ತೇವೆ ಅಥವಾ ಏನು ಮಾಡುತ್ತೇವೆ ಎಂದು ಜನರಿಗೆ ಗೊತ್ತಾಗದೆ ಇರಬಹುದು, ಆದರೆ ಯೆಹೋವನಿಗೆ ಗೊತ್ತಾಗುತ್ತದೆ. ನಾವು ಆತನ ಪಕ್ಷದಲ್ಲಿ ಸಂಪೂರ್ಣವಾಗಿ ಇದ್ದೇವಾ ಇಲ್ಲವಾ ಎಂದು ಆತನಿಗೆ ಗೊತ್ತಾಗುತ್ತದೆ.—ಯೆರೆಮೀಯ 17:9, 10 ಓದಿ.

6. ತಪ್ಪಾದ ಆಸೆಗಳನ್ನು ಜಯಿಸಲು ಯೆಹೋವನು ಹೇಗೆ ಸಹಾಯ ಮಾಡುತ್ತಾನೆ?

6 ನಾವು ತಪ್ಪು ಮಾಡಿದ ಕೂಡಲೆ ಯೆಹೋವನು ನಮ್ಮನ್ನು ದೂರ ಮಾಡಿಬಿಡುವುದಿಲ್ಲ. ನಾವು ಆತನಿಂದ ದೂರ ಹೋಗುತ್ತಿರುವ ಸೂಚನೆ ಕಂಡುಬಂದರೆ, “ನನ್ನ ಕಡೆಗೆ ಪುನಃ ತಿರುಗಿರಿ; ತಿರುಗಿದರೆ ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು” ಎಂದು ಆತನು ಪ್ರೋತ್ಸಾಹಿಸುತ್ತಾನೆ. (ಮಲಾ. 3:7) ನಾವು ನಮ್ಮ ಬಲಹೀನತೆಗಳ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಯೆಹೋವನು ಅರ್ಥಮಾಡಿಕೊಳ್ಳುತ್ತಾನೆ. ಆದರೆ ನಾವು ಈ ಹೋರಾಟವನ್ನು ಬಿಟ್ಟುಕೊಡಬಾರದು ಮತ್ತು ಕೆಟ್ಟದ್ದನ್ನು ದ್ವೇಷಿಸಬೇಕು ಎಂದು ಬಯಸುತ್ತಾನೆ. (ಯೆಶಾ. 55:7) ನಾವು ಆತನು ಬಯಸಿದಂತೆ ನಡಕೊಂಡರೆ ನಮಗೆ ಬೇಕಾದ ಸಹಾಯವನ್ನು ಕೊಡುತ್ತಾನೆ ಮತ್ತು ನಮ್ಮ ತಪ್ಪಾದ ಆಸೆಗಳನ್ನು ಜಯಿಸಲು ಬೇಕಾದ ಬಲವನ್ನು ಕೊಡುತ್ತಾನೆ.—ಆದಿ. 4:7.

ನಿಮ್ಮನ್ನು ನೀವೇ ವಂಚಿಸಿಕೊಳ್ಳಬೇಡಿ

7. ಸೊಲೊಮೋನ ಯೆಹೋವನೊಂದಿಗಿದ್ದ ತನ್ನ ಸ್ನೇಹವನ್ನು ಹೇಗೆ ಕಳಕೊಂಡನು?

7 ಸೊಲೊಮೋನ ಚಿಕ್ಕವನಿದ್ದಾಗ ಅವನಿಗೆ ಯೆಹೋವನ ಜೊತೆ ಒಳ್ಳೇ ಸಂಬಂಧ ಇತ್ತು. ದೇವರು ಅವನಿಗೆ ತುಂಬ ವಿವೇಕ ಕೊಟ್ಟನು ಮತ್ತು ಯೆರೂಸಲೇಮಿನಲ್ಲಿ ಭವ್ಯವಾದ ಆಲಯವನ್ನು ಕಟ್ಟುವ ಪ್ರಾಮುಖ್ಯ ಕೆಲಸವನ್ನೂ ಅವನಿಗೆ ವಹಿಸಿದನು. ಆದರೆ ಸೊಲೊಮೋನ ಯೆಹೋವನೊಂದಿಗಿದ್ದ ತನ್ನ ಸ್ನೇಹವನ್ನು ಕಳಕೊಂಡುಬಿಟ್ಟನು. (1 ಅರ. 3:12; 11:1, 2) ದೇವರು ರಾಜರಿಗೆ ಈ ನಿಯಮ ಕೊಟ್ಟಿದ್ದನು: “ಅನೇಕ ಸ್ತ್ರೀಯರನ್ನು ಮದುವೆಮಾಡಿಕೊಳ್ಳಬಾರದು; ಮಾಡಿಕೊಂಡರೆ ಅವನ ಮನಸ್ಸು ಯೆಹೋವನ ಕಡೆಯಿಂದ ತಿರುಗುವದಕ್ಕೆ ಅವಕಾಶವಾಗುವದು.” (ಧರ್ಮೋ. 17:17) ಸೊಲೊಮೋನ ಈ ನಿಯಮವನ್ನು ಪಾಲಿಸಲಿಲ್ಲ. ಇದರ ಪರಿಣಾಮ 700 ಸ್ತ್ರೀಯರನ್ನು ಪತ್ನಿಯರಾಗಿ ಮತ್ತು 300 ಸ್ತ್ರೀಯರನ್ನು ಉಪಪತ್ನಿಯರಾಗಿ ಮಾಡಿಕೊಂಡನು! (1 ಅರ. 11:3) ಈ ಸ್ತ್ರೀಯರಲ್ಲಿ ಅನೇಕರು ಸುಳ್ಳು ದೇವರುಗಳನ್ನು ಆರಾಧಿಸುತ್ತಿದ್ದ ವಿದೇಶಿಯರಾಗಿದ್ದರು. ಹೀಗೆ ಬೇರೆ ದೇಶದ ಸ್ತ್ರೀಯರನ್ನು ಮದುವೆಮಾಡಿಕೊಳ್ಳಬಾರದು ಎಂಬ ಆಜ್ಞೆಯನ್ನೂ ಸೊಲೊಮೋನ ಪಾಲಿಸಲಿಲ್ಲ.—ಧರ್ಮೋ. 7:3, 4.

8. ಸೊಲೊಮೋನ ಯೆಹೋವನಿಗೆ ಎಷ್ಟರ ಮಟ್ಟಿಗೆ ನೋವು ಮಾಡಿದನು?

8 ಸೊಲೊಮೋನನಿಗೆ ಯೆಹೋವನ ನಿಯಮಗಳ ಮೇಲಿದ್ದ ಪ್ರೀತಿ ಕಡಿಮೆಯಾಗುತ್ತಾ ಹೋಯಿತು. ಇದರಿಂದಾಗಿ ಅವನು ತುಂಬ ಕೆಟ್ಟ ಕೆಲಸಗಳನ್ನು ಮಾಡಿದನು. ಅವನು ಸುಳ್ಳು ದೇವತೆಯಾಗಿದ್ದ ಅಷ್ಟೋರೆತ್‌ಗೆ ಮತ್ತು ಸುಳ್ಳು ದೇವರಾಗಿದ್ದ ಕೆಮೋಷ್‌ಗೆ ಯಜ್ಞವೇದಿಗಳನ್ನು ಕಟ್ಟಿಸಿದನು. ನಂತರ ತನ್ನ ಪತ್ನಿಯರೊಟ್ಟಿಗೆ ಸೇರಿ ಈ ಸುಳ್ಳು ದೇವರುಗಳನ್ನು ಆರಾಧಿಸಿದನು. ಈ ಯಜ್ಞವೇದಿಗಳನ್ನು ಅವನು ಎಲ್ಲಿ ಕಟ್ಟಿಸಿದ ಗೊತ್ತಾ? ಯೆಹೋವನ ಆಲಯವಿದ್ದ ಯೆರೂಸಲೇಮಿನ ಎದುರಿಗಿದ್ದ ಬೆಟ್ಟದ ಮೇಲೆ! (1 ಅರ. 11:5-8; 2 ಅರ. 23:13) ಯೆಹೋವನ ಆಲಯದಲ್ಲೂ ತಾನು ಯಜ್ಞವನ್ನು ಅರ್ಪಿಸುತ್ತಿದ್ದೇನೆ, ಹಾಗಾಗಿ ತಾನು ಮಾಡುತ್ತಿರುವ ತಪ್ಪುಗಳನ್ನು ಯೆಹೋವನು ಗಮನಿಸಲ್ಲ ಎಂದು ಸೊಲೊಮೋನ ಯೋಚಿಸಿರಬಹುದು. ಹೀಗೆ ತನ್ನನ್ನು ತಾನೇ ವಂಚಿಸಿಕೊಂಡನು.

9. ದೇವರ ಎಚ್ಚರಿಕೆಗೆ ಸೊಲೊಮೋನ ಕಿವಿಗೊಡದೇ ಹೋದಾಗ ಏನಾಯಿತು?

9 ಆದರೆ ಯೆಹೋವನು ಯಾವತ್ತಿಗೂ ಪಾಪಗಳನ್ನು ಅಲಕ್ಷಿಸುವವನಲ್ಲ. ‘ಯೆಹೋವನು ಸೊಲೊಮೋನನಿಗೆ ಎರಡು ಸಾರಿ ಕಾಣಿಸಿಕೊಂಡು ಅನ್ಯದೇವತೆಗಳನ್ನು ಸೇವಿಸಲೇ ಬಾರದೆಂದು ಆಜ್ಞಾಪಿಸಿದ್ದರೂ ಸೊಲೊಮೋನ ಆತನ ಆಜ್ಞೆಗಳನ್ನು ಮೀರಿದ್ದರಿಂದ ಆತನು ಅವನ ಮೇಲೆ ಕೋಪಗೊಂಡನು’ ಎಂದು ಬೈಬಲ್‌ ತಿಳಿಸುತ್ತದೆ. ಇದರಿಂದ ಸೊಲೊಮೋನ ದೇವರ ಮೆಚ್ಚಿಗೆ ಮತ್ತು ಬೆಂಬಲವನ್ನು ಕಳಕೊಂಡನು. ಇಡೀ ಇಸ್ರಾಯೇಲ್‌ ಜನಾಂಗವನ್ನು ಆಳುವ ಅವಕಾಶವನ್ನು ಸೊಲೊಮೋನನ ವಂಶಸ್ಥರಿಗೆ ಯೆಹೋವನು ಕೊಡಲಿಲ್ಲ ಮತ್ತು ನೂರಾರು ವರ್ಷ ಅವರು ಅನೇಕ ಕಷ್ಟಗಳನ್ನು ಅನುಭವಿಸಿದರು.—1 ಅರ. 11:9-13.

10. ಯೆಹೋವನೊಟ್ಟಿಗೆ ನಮಗಿರುವ ಒಳ್ಳೇ ಸಂಬಂಧವನ್ನು ಯಾವುದು ಹಾಳುಮಾಡಬಹುದು?

10 ದೇವರ ಮಟ್ಟಗಳನ್ನು ಅರ್ಥಮಾಡಿಕೊಳ್ಳದ ಅಥವಾ ಅವುಗಳನ್ನು ಗೌರವಿಸದ ಜನರ ಸ್ನೇಹ ಮಾಡಿಕೊಂಡರೆ ಯೆಹೋವನೊಂದಿಗೆ ನಮಗಿರುವ ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ. ಏಕೆಂದರೆ ಅವರು ನಮ್ಮ ಮೇಲೆ ಅಷ್ಟರ ಮಟ್ಟಿಗೆ ಪ್ರಭಾವ ಬೀರಬಹುದು. ಅವರು ಸಭೆಯಲ್ಲಿರುವವರೇ ಆಗಿರಬಹುದು. ಆದರೆ ಅವರಿಗೆ ಯೆಹೋವನೊಟ್ಟಿಗೆ ಆಪ್ತ ಸಂಬಂಧ ಇರುವುದಿಲ್ಲ. ಅಥವಾ ಅವರು ಯೆಹೋವನನ್ನು ಆರಾಧಿಸದ ಸಂಬಂಧಿಕರೋ, ನೆರೆಯವರೋ, ಜೊತೆಗೆ ಕೆಲಸ ಮಾಡುವವರೋ ಅಥವಾ ಶಾಲಾ ಸಹಪಾಠಿಗಳೋ ಆಗಿರಬಹುದು. ಯೆಹೋವನ ಮಟ್ಟಗಳ ಪ್ರಕಾರ ನಡೆಯದ ಜನರ ಜೊತೆ ನಾವು ಸಮಯ ಕಳೆದರೆ, ಯೆಹೋವನೊಟ್ಟಿಗಿರುವ ನಮ್ಮ ಒಳ್ಳೇ ಸಂಬಂಧ ಹಾಳಾಗುವಷ್ಟರ ಮಟ್ಟಿಗೆ ಅವರು ನಮ್ಮ ಮೇಲೆ ಪ್ರಭಾವ ಬೀರಬಹುದು.

ನೀವು ಯಾರೊಟ್ಟಿಗೆ ಸಮಯ ಕಳೆಯುತ್ತೀರೋ ಅವರು ಯೆಹೋವನೊಂದಿಗೆ ನಿಮಗಿರುವ ಸಂಬಂಧದ ಮೇಲೆ ಯಾವ ಪ್ರಭಾವ ಬೀರುತ್ತಾರೆ? (ಪ್ಯಾರ 11 ನೋಡಿ)

11. ಒಬ್ಬರ ಸ್ನೇಹ ಮಾಡಿಕೊಳ್ಳುವಾಗ ನಾವು ಯಾವ ವಿಷಯಗಳನ್ನು ಪರಿಗಣಿಸಬೇಕು?

11 ಒಂದನೇ ಕೊರಿಂಥ 15:33 ಓದಿ. ಹೆಚ್ಚಿನ ಜನರಲ್ಲಿ ಯಾವುದಾದರೂ ಒಳ್ಳೇ ಗುಣ ಇದ್ದೇ ಇರುತ್ತದೆ. ಯೆಹೋವನನ್ನು ಆರಾಧಿಸದ ಜನರು ಯಾವಾಗಲೂ ಕೆಟ್ಟ ಕೆಲಸ ಮಾಡುತ್ತಾರೆ ಅಂತ ಏನಿಲ್ಲ. ಅಂಥವರ ಪರಿಚಯ ನಿಮಗಿರಬಹುದು. ಅದರರ್ಥ ಅವರ ಸಹವಾಸ ಒಳ್ಳೇದಿರುತ್ತೆ ಅಂತನಾ? ಯೆಹೋವನೊಟ್ಟಿಗಿರುವ ನಿಮ್ಮ ಸಂಬಂಧದ ಮೇಲೆ ಅವರು ಎಂಥ ಪರಿಣಾಮ ಬೀರುತ್ತಾರೆ? ದೇವರಿಗೆ ಹತ್ತಿರವಾಗಲು ಅವರು ನಿಮಗೆ ಸಹಾಯ ಮಾಡುತ್ತಾರಾ? ಅವರಿಗೆ ಜೀವನದಲ್ಲಿ ಯಾವುದು ಮುಖ್ಯವಾಗಿರುತ್ತದೆ? ಅವರು ಯಾವಾಗಲೂ ಯಾವುದರ ಬಗ್ಗೆ ಮಾತಾಡುತ್ತಾರೆ? ಫ್ಯಾಷನ್‌, ಹಣ, ಎಲೆಕ್ಟ್ರಾನಿಕ್‌ ವಸ್ತುಗಳು, ಮನೋರಂಜನೆಯಂಥ ವಿಷಯಗಳ ಬಗ್ಗೆನೇ ಹೆಚ್ಚು ಮಾತಾಡುತ್ತಾರಾ? ಯಾವಾಗಲೂ ಬೇರೆಯವರಲ್ಲಿ ಹುಳುಕು ಹುಡುಕುತ್ತಾರಾ? ಅಶ್ಲೀಲ ತಮಾಷೆಗಳನ್ನು ಮಾಡಲು ಅವರು ಇಷ್ಟಪಡುತ್ತಾರಾ? “ಹೃದಯದಲ್ಲಿ ತುಂಬಿರುವುದನ್ನೇ ಬಾಯಿ ಮಾತಾಡುತ್ತದೆ” ಎಂದು ಯೇಸು ಎಚ್ಚರಿಸಿದನು. (ಮತ್ತಾ. 12:34) ನೀವು ಯಾರೊಟ್ಟಿಗೆ ಸಮಯ ಕಳೆಯುತ್ತಿದ್ದೀರೋ ಅವರು ಯೆಹೋವನೊಂದಿಗೆ ನಿಮಗಿರುವ ಸಂಬಂಧವನ್ನು ಹಾಳುಮಾಡುವಂಥ ಲಕ್ಷಣಗಳು ಕಂಡುಬಂದರೆ ತಕ್ಷಣ ಕ್ರಿಯೆಗೈಯಿರಿ! ಅವರ ಜೊತೆ ಹೆಚ್ಚು ಸಮಯ ಕಳೆಯಬೇಡಿ ಮತ್ತು ಅಗತ್ಯವಿದ್ದರೆ ಅಂಥವರ ಸ್ನೇಹವನ್ನೇ ಬಿಟ್ಟುಬಿಡಿ.—ಜ್ಞಾನೋ. 13:20.

ಯೆಹೋವನು ನಮ್ಮಿಂದ ಸಂಪೂರ್ಣ ಭಕ್ತಿಯನ್ನು ಕೇಳಿಕೊಳ್ಳುತ್ತಾನೆ

12. (ಎ) ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟು ಬಂದ ಸ್ವಲ್ಪದರಲ್ಲೇ ಯೆಹೋವನು ಏನು ಹೇಳಿದನು? (ಬಿ) ನಿಷ್ಠಾವಂತರಾಗಿರಬೇಕು ಎಂದು ಯೆಹೋವನು ಹೇಳಿದಾಗ ಇಸ್ರಾಯೇಲ್ಯರು ಏನು ಹೇಳಿದರು?

12 ಇಸ್ರಾಯೇಲ್ಯರನ್ನು ಯೆಹೋವನು ಐಗುಪ್ತದಿಂದ ಬಿಡುಗಡೆ ಮಾಡಿದ ನಂತರ ಏನಾಯಿತೋ ಅದರಿಂದ ಸಹ ನಾವು ಪಾಠ ಕಲಿಯಬಹುದು. ಜನರು ಸೀನಾಯಿ ಬೆಟ್ಟದ ಮುಂದೆ ಕೂಡಿ ಬಂದಾಗ ಯೆಹೋವನು ಅದ್ಭುತವಾದ ರೀತಿಯಲ್ಲಿ ಅವರಿಗೆ ಕಾಣಿಸಿಕೊಂಡನು! ಜನರು ದಟ್ಟವಾದ ಕಾರ್ಮೋಡ, ಮಿಂಚು ಮತ್ತು ಹೊಗೆಯನ್ನು ನೋಡಿದರು. ಗುಡುಗು, ತುತೂರಿ ಧ್ವನಿಯಂತೆ ಕೇಳಿಸುತ್ತಿದ್ದ ಗಟ್ಟಿಯಾದ ಶಬ್ದವನ್ನೂ ಕೇಳಿಸಿಕೊಂಡರು. (ವಿಮೋ. 19:16-19) ನಂತರ ಯೆಹೋವನು “ನಾನು ಸಂಪೂರ್ಣ ಭಕ್ತಿಯನ್ನು ಕೇಳಿಕೊಳ್ಳುವ ದೇವರು” ಎಂದು ಪ್ರಕಟಿಸಿದ್ದನ್ನು ಅವರು ಕೇಳಿಸಿಕೊಂಡರು. (ನೂತನ ಲೋಕ ಭಾಷಾಂತರ) ತನ್ನನ್ನು ಪ್ರೀತಿಸುವವರಿಗೆ ಮತ್ತು ತನ್ನ ಆಜ್ಞೆಗಳನ್ನು ಪಾಲಿಸುವವರಿಗೆ ತಾನು ನಿಷ್ಠಾವಂತನಾಗಿರುತ್ತೇನೆ ಎಂದು ಮಾತು ಕೊಟ್ಟನು. (ವಿಮೋಚನಕಾಂಡ 20:1-6 ಓದಿ.) ಯೆಹೋವನು ಅವರಿಗೆ ಈ ರೀತಿ ಹೇಳಿದಂತಿತ್ತು: “ನೀವು ನನ್ನ ಪಕ್ಷದಲ್ಲಿದ್ದೀರೆಂದು ತೋರಿಸಿಕೊಟ್ಟರೆ ನಾನು ನಿಮ್ಮ ಪಕ್ಷದಲ್ಲಿದ್ದೇನೆಂದು ತೋರಿಸಿಕೊಡುತ್ತೇನೆ.” ನೀವು ಆ ಜನರ ಗುಂಪಿನಲ್ಲಿ ಇದ್ದಿದ್ದರೆ ಯೆಹೋವನು ಹೇಳಿದ ಮಾತಿಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದಿರಿ? ಬಹುಶಃ ನೀವು ಸಹ ಇಸ್ರಾಯೇಲ್ಯರಂತೆ “ಯೆಹೋವನ ಮಾತುಗಳನ್ನೆಲ್ಲಾ ಅನುಸರಿಸಿ ನಡೆಯುವೆವು” ಎಂದು ಹೇಳುತ್ತಿದ್ದಿರಿ. (ವಿಮೋ. 24:3) ಆದರೆ ಸ್ವಲ್ಪದರಲ್ಲೇ ಯೆಹೋವನ ಕಡೆಗಿದ್ದ ಅವರ ನಿಷ್ಠೆ ಪರೀಕ್ಷೆಗೆ ಒಳಗಾಗುವಂಥ ಸನ್ನಿವೇಶ ಬಂತು. ಯಾವ ಸನ್ನಿವೇಶ?

13. ಯಾವ ಸನ್ನಿವೇಶ ಇಸ್ರಾಯೇಲ್ಯರ ನಿಷ್ಠೆಯನ್ನು ಪರೀಕ್ಷೆಗೆ ಒಳಪಡಿಸಿತು?

13 ಯೆಹೋವನು ತನ್ನ ಶಕ್ತಿಯನ್ನು ಅದ್ಭುತವಾದ ರೀತಿಯಲ್ಲಿ ತೋರಿಸಿದಾಗ ಇಸ್ರಾಯೇಲ್ಯರು ಭಯಭೀತರಾದರು. ಹಾಗಾಗಿ ಮೋಶೆ ಸೀನಾಯಿ ಬೆಟ್ಟಕ್ಕೆ ಹೋಗಿ ಜನರ ಪರವಾಗಿ ಯೆಹೋವನೊಟ್ಟಿಗೆ ಮಾತಾಡಿದನು. (ವಿಮೋ. 20:18-21) ತುಂಬ ದಿನಗಳಾದರೂ ಮೋಶೆ ಬೆಟ್ಟದಿಂದ ಕೆಳಗೆ ಬರಲೇ ಇಲ್ಲ. ತಮ್ಮ ನಾಯಕನಿಲ್ಲದೆ ಅವರು ಅರಣ್ಯದಲ್ಲಿ ಸಿಕ್ಕಿಹಾಕಿಕೊಂಡಂತೆ ಇತ್ತು. ಅವರೇನು ಮಾಡಿದರು? ಅವರು ಕಣ್ಣಿಗೆ ಕಾಣುತ್ತಿದ್ದಂಥ ಮಾನವ ನಾಯಕನಾದ ಮೋಶೆಯನ್ನೇ ಹೆಚ್ಚು ಅವಲಂಬಿಸಿದ್ದಿರಬಹುದು. ತುಂಬ ಕಳವಳದಿಂದ ಆರೋನನಿಗೆ ‘ನಮ್ಮ ಮುಂದುಗಡೆಯಲ್ಲಿ ಹೋಗುವುದಕ್ಕೆ ನಮಗೆ ಒಬ್ಬ ದೇವರನ್ನು ಮಾಡಿಕೊಡು; ಐಗುಪ್ತದೇಶದಿಂದ ನಮ್ಮನ್ನು ಕರಕೊಂಡು ಬಂದ ಆ ಮೋಶೆ ಏನಾದನೋ ಗೊತ್ತಿಲ್ಲ’ ಎಂದು ಹೇಳಿದರು.—ವಿಮೋ. 32:1, 2.

14. (ಎ) ಇಸ್ರಾಯೇಲ್ಯರು ಏನು ಯೋಚಿಸಿ ತಮ್ಮನ್ನು ತಾವೇ ವಂಚಿಸಿಕೊಂಡರು? (ಬಿ) ಅದಕ್ಕೆ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು?

14 ವಿಗ್ರಹಗಳನ್ನು ಆರಾಧಿಸುವುದು ತಪ್ಪೆಂದು ಇಸ್ರಾಯೇಲ್ಯರಿಗೆ ಗೊತ್ತಿತ್ತು. (ವಿಮೋ. 20:3-5) ಆದರೂ ಅಷ್ಟು ಬೇಗ ಚಿನ್ನದ ಬಸವನನ್ನು ಆರಾಧಿಸಲು ಆರಂಭಿಸಿದರು! ಅವರು ಯೆಹೋವನ ಆಜ್ಞೆಯನ್ನು ಮೀರಿದರೂ ತಾವಿನ್ನೂ ಯೆಹೋವನ ಪಕ್ಷದಲ್ಲೇ ಇದ್ದೇವೆಂದು ಯೋಚಿಸಿ ತಮ್ಮನ್ನು ತಾವೇ ವಂಚಿಸಿಕೊಂಡರು. ಅಷ್ಟೇ ಅಲ್ಲ, ಆರೋನನು ಬಸವನ ಆರಾಧನೆಯನ್ನು “ಯೆಹೋವನಿಗೆ ಉತ್ಸವ” ಎಂದು ಕರೆದನು! ಯೆಹೋವನು ಏನು ಮಾಡಿದನು? ಆತನು ಮೋಶೆಗೆ “ಜನರು ಕೆಟ್ಟುಹೋದರು” ಮತ್ತು ತಾನು ‘ಆಜ್ಞಾಪಿಸಿದ ಮಾರ್ಗವನ್ನು ಬಿಟ್ಟುಹೋದರು’ ಎಂದು ಹೇಳಿದನು. ಯೆಹೋವನಿಗೆ ಎಷ್ಟು ಕೋಪ ಬಂತೆಂದರೆ ಆ ಇಡೀ ಜನಾಂಗವನ್ನು ಸಂಪೂರ್ಣವಾಗಿ ನಾಶಮಾಡಬೇಕೆಂದು ಯೋಚಿಸಿದನು.—ವಿಮೋ. 32:5-10.

15, 16. ಮೋಶೆ ಮತ್ತು ಆರೋನ ತಾವು ಸಂಪೂರ್ಣವಾಗಿ ಯೆಹೋವನ ಪಕ್ಷದಲ್ಲಿದ್ದೇವೆಂದು ಹೇಗೆ ತೋರಿಸಿಕೊಟ್ಟರು? (ಲೇಖನದ ಆರಂಭದ ಚಿತ್ರ ನೋಡಿ.)

15 ಆದರೆ ಯೆಹೋವನು ಕರುಣೆ ಇರುವ ದೇವರು. ಇಡೀ ಜನಾಂಗವನ್ನು ನಾಶಮಾಡದಿರಲು ನಿರ್ಣಯಿಸಿದನು. ತಾವು ಯೆಹೋವನ ಪಕ್ಷದಲ್ಲಿರಲು ಬಯಸುತ್ತೇವೆಂದು ತೋರಿಸಲು ಅವರಿಗೆ ಒಂದು ಅವಕಾಶ ಕೊಟ್ಟನು. (ವಿಮೋ. 32:14) ಜನರು ವಿಗ್ರಹದ ಮುಂದೆ ಕೂಗಾಡುತ್ತಾ, ಹಾಡುತ್ತಾ, ಕುಣಿಯುತ್ತಾ ಇರುವುದನ್ನು ನೋಡಿದ ಮೋಶೆ ಚಿನ್ನದ ಬಸವನನ್ನು ಅರೆದು ಪುಡಿಪುಡಿ ಮಾಡಿದನು. ನಂತರ “ಯೆಹೋವನ ಪಕ್ಷದವರೆಲ್ಲರು ನನ್ನ ಬಳಿಗೆ ಬರಬೇಕು ಎಂದು ಹೇಳಿದನು. ಆಗ ಲೇವಿಯ ಕುಲದವರೆಲ್ಲರು ಅವನ ಬಳಿಗೆ ಕೂಡಿ ಬಂದರು.”—ವಿಮೋ. 32:17-20, 26.

16 ಆರೋನನು ಚಿನ್ನದ ಬಸವನನ್ನು ಮಾಡಿದರೂ ಪಶ್ಚಾತ್ತಾಪಪಟ್ಟನು ಮತ್ತು ಇತರ ಲೇವಿಯರೊಂದಿಗೆ ತಾನೂ ಯೆಹೋವನ ಪಕ್ಷದಲ್ಲಿರಲು ಆಯ್ಕೆ ಮಾಡಿದನು. ಈ ನಂಬಿಗಸ್ತರು ತಾವು ಪಾಪ ಮಾಡಿದವರ ಪಕ್ಷದಲ್ಲಿಲ್ಲ ಎಂದು ಸ್ಪಷ್ಟವಾಗಿ ತೋರಿಸಿಕೊಟ್ಟರು. ಅದು ಒಳ್ಳೆಯ ಆಯ್ಕೆಯಾಗಿತ್ತು. ಯಾಕೆ? ಚಿನ್ನದ ಬಸವನನ್ನು ಆರಾಧಿಸಿದ ಸಾವಿರಾರು ಜನರು ಅದೇ ದಿನ ಸತ್ತುಹೋದರು. ಆದರೆ ಯೆಹೋವನ ಪಕ್ಷದಲ್ಲಿದ್ದವರು ಉಳುಕೊಂಡರು. ಯೆಹೋವನು ಅವರನ್ನು ಆಶೀರ್ವದಿಸುತ್ತೇನೆಂದು ಮಾತು ಕೊಟ್ಟನು.—ವಿಮೋ. 32:27-29.

17. ಚಿನ್ನದ ಬಸವನ ಬಗ್ಗೆ ಪೌಲನು ಬರೆದಿರುವ ವಿಷಯದಿಂದ ನಾವೇನು ಕಲಿಯಬಹುದು?

17 ಇದರಿಂದ ನಮಗೇನು ಪಾಠ? ನಾವು ಯಾವತ್ತಿಗೂ ‘ವಿಗ್ರಹಾರಾಧಕರಾಗದಿರಲು’ “ಈ ವಿಷಯಗಳು ನಮಗೆ ಉದಾಹರಣೆಗಳಾದವು” ಎಂದು ಅಪೊಸ್ತಲ ಪೌಲನು ಹೇಳಿದನು. ಇಂಥ ವೃತ್ತಾಂತಗಳು “ವಿಷಯಗಳ ವ್ಯವಸ್ಥೆಗಳ ಅಂತ್ಯವನ್ನು ಸಮೀಪಿಸಿರುವ ನಮಗೆ . . . ಎಚ್ಚರಿಕೆ ನೀಡಲಿಕ್ಕಾಗಿ ಬರೆಯಲ್ಪಟ್ಟವು. ಆದಕಾರಣ ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ” ಎಂದು ಆತನು ವಿವರಿಸಿದನು. (1 ಕೊರಿಂ. 10:6, 7, 11, 12) ಪೌಲನು ತಿಳಿಸಿದಂತೆ ಯೆಹೋವನನ್ನು ಆರಾಧಿಸುವವರು ಕೂಡ ಕೆಟ್ಟದ್ದನ್ನು ಮಾಡುವ ಸಾಧ್ಯತೆ ಇರುತ್ತದೆ. ಅವರು ಕೆಟ್ಟದ್ದನ್ನು ಮಾಡುತ್ತಿದ್ದರೂ ಯೆಹೋವನು ತಮ್ಮನ್ನು ಮೆಚ್ಚುತ್ತಾನೆ ಎಂದು ಯೋಚಿಸಬಹುದು. ಆದರೆ ಒಬ್ಬ ವ್ಯಕ್ತಿ ಯೆಹೋವನ ಸ್ನೇಹಿತನಾಗಲು ಬಯಸಿದ ಮಾತ್ರಕ್ಕೆ ಅಥವಾ ನಿಷ್ಠಾವಂತನಾಗಿದ್ದೇನೆಂದು ಹೇಳಿದ ಮಾತ್ರಕ್ಕೆ ಯೆಹೋವನು ಅವನನ್ನು ಮೆಚ್ಚುತ್ತಾನೆ ಎಂದು ಹೇಳುವುದಕ್ಕಾಗಲ್ಲ.—1 ಕೊರಿಂ. 10:1-5.

18. (ಎ) ನಾವು ಯೆಹೋವನಿಂದ ದೂರ ಹೋಗಲು ಯಾವುದು ಕಾರಣವಾಗಬಹುದು? (ಬಿ) ಇದರ ಪರಿಣಾಮ ಏನಾಗಬಹುದು?

18 ಇಸ್ರಾಯೇಲ್ಯರು ಅಂದುಕೊಂಡ ಸಮಯದೊಳಗೆ ಮೋಶೆ ಸೀನಾಯಿ ಬೆಟ್ಟದಿಂದ ಬರದಿದ್ದಾಗ ಅವರು ತಾಳ್ಮೆ ಕಳಕೊಂಡರು. ಈ ವ್ಯವಸ್ಥೆಯ ಅಂತ್ಯ ನಾವು ಅಂದುಕೊಂಡ ಸಮಯಕ್ಕೆ ಬರದಿದ್ದಾಗ ನಾವು ಸಹ ತಾಳ್ಮೆ ಕಳಕೊಳ್ಳಬಹುದು. ದೇವರ ರಾಜ್ಯ ಇನ್ನೂ ತುಂಬ ದೂರ ಇದೆ ಎಂದು ನೆನಸಬಹುದು ಅಥವಾ ಅದು ನಿಜವಾಗಲೂ ಬರುತ್ತಾ ಎಂದು ಯೋಚಿಸಲು ಆರಂಭಿಸಬಹುದು. ಜೊತೆಗೆ ಯೆಹೋವನು ಬಯಸುವ ವಿಷಯಗಳಿಗಿಂತ ನಾವು ಬಯಸುವ ವಿಷಯಗಳ ಕಡೆಗೆ ನಮ್ಮ ಗಮನ ಹೋಗಬಹುದು. ಎಚ್ಚರ ವಹಿಸದಿದ್ದರೆ ನಾವು ಯೆಹೋವನಿಂದ ದೂರ ಹೋಗಿ ಯಾವತ್ತೂ ನೆನಸಿರದ ವಿಷಯಗಳನ್ನೂ ಮಾಡಿಬಿಡಬಹುದು.

19. ನಾವು ಯಾವ ಸತ್ಯಾಂಶವನ್ನು ಯಾವತ್ತಿಗೂ ಮರೆಯಬಾರದು ಮತ್ತು ಯಾಕೆ?

19 ಯೆಹೋವನು ನಮ್ಮಿಂದ ಬಯಸುವುದೇನೆಂದರೆ ನಾವು ಆತನಿಗೆ ಸಂಪೂರ್ಣವಾಗಿ ವಿಧೇಯರಾಗಿರಬೇಕು ಮತ್ತು ಆತನನ್ನು ಮಾತ್ರ ಆರಾಧಿಸಬೇಕು. ಈ ಸತ್ಯಾಂಶವನ್ನು ನಾವು ಯಾವತ್ತಿಗೂ ಮರೆಯಬಾರದು. (ವಿಮೋ. 20:5) ನಾವು ಯೆಹೋವ ದೇವರು ಬಯಸುವಂಥ ವಿಷಯಗಳನ್ನು ಮಾಡದಿದ್ದರೆ ಸೈತಾನನು ಬಯಸುವ ವಿಷಯಗಳನ್ನು ಮಾಡುತ್ತಾ ಇರುತ್ತೇವೆ ಮತ್ತು ಅದರಿಂದ ನಮಗೇ ಹಾನಿಯಾಗುತ್ತದೆ. “ನೀವು ಯೆಹೋವನ ಪಾತ್ರೆಯಲ್ಲಿಯೂ ದೆವ್ವಗಳ ಪಾತ್ರೆಯಲ್ಲಿಯೂ ಕುಡಿಯಲಾರಿರಿ; ನೀವು ‘ಯೆಹೋವನ ಮೇಜು’ ಮತ್ತು ದೆವ್ವಗಳ ಮೇಜು ಇವೆರಡರಲ್ಲಿಯೂ ಪಾಲುಗಾರರಾಗಲು ಸಾಧ್ಯವಿಲ್ಲ” ಎಂದು ಅಪೊಸ್ತಲ ಪೌಲನು ಹೇಳಿದನು.—1 ಕೊರಿಂ. 10:21.

ಯೆಹೋವನಿಗೆ ಹತ್ತಿರವಾಗಿರಿ!

20. ನಾವು ತಪ್ಪು ಮಾಡಿದಾಗಲೂ ಯೆಹೋವನು ನಮಗೆ ಹೇಗೆ ಸಹಾಯ ಮಾಡುತ್ತಾನೆ?

20 ಕಾಯಿನ, ಸೊಲೊಮೋನ ಮತ್ತು ಇಸ್ರಾಯೇಲ್ಯರಿಗೆ ಪಶ್ಚಾತ್ತಾಪಪಡುವ ಮತ್ತು ತಮ್ಮ ನಡತೆಯನ್ನು ಬದಲಾಯಿಸಿಕೊಳ್ಳುವ ಅವಕಾಶವಿತ್ತು. (ಅ. ಕಾ. 3:19) ಜನರು ತಪ್ಪು ಮಾಡಿದಾಗ ತಾನು ಅವರನ್ನು ಕ್ಷಮಿಸುವುದೇ ಇಲ್ಲ ಅಂತ ಯೆಹೋವನು ಹೇಳಲ್ಲ ಎಂದು ಇದರಿಂದ ನಮಗೆ ಗೊತ್ತಾಗುತ್ತದೆ. ಆರೋನನು ತಪ್ಪು ಮಾಡಿದಾಗ ಯೆಹೋವನು ಕ್ಷಮಿಸಿದನು. ಇಂದು ನಾವು ಕೆಟ್ಟ ವಿಷಯಗಳನ್ನು ಮಾಡದಿರಲು ಯೆಹೋವನು ನಮಗೆ ಪ್ರೀತಿಯಿಂದ ಎಚ್ಚರಿಕೆಗಳನ್ನು ಕೊಡುತ್ತಿದ್ದಾನೆ. ಅದಕ್ಕಾಗಿ ಬೈಬಲ್‌, ನಮ್ಮ ಪ್ರಕಾಶನಗಳು ಮತ್ತು ಜೊತೆ ಕ್ರೈಸ್ತರನ್ನು ಕೊಟ್ಟಿದ್ದಾನೆ. ನಾವು ಯೆಹೋವನ ಎಚ್ಚರಿಕೆಗಳಿಗೆ ಕಿವಿಗೊಡುವಾಗ ಆತನು ನಮಗೆ ಖಂಡಿತ ಕರುಣೆ ತೋರಿಸುತ್ತಾನೆ.

21. ಯೆಹೋವನ ಕಡೆಗಿರುವ ನಮ್ಮ ನಿಷ್ಠೆಯು ಪರೀಕ್ಷೆಗೆ ಒಳಗಾದಾಗ ನಾವೇನು ಮಾಡಬೇಕು?

21 ಯೆಹೋವನ ಅಪಾತ್ರ ದಯೆಗೆ ಒಂದು ಉದ್ದೇಶವಿದೆ. (2 ಕೊರಿಂ. 6:1) ನಾವು ‘ಭಕ್ತಿಹೀನತೆಯನ್ನೂ ಲೌಕಿಕ ಆಶೆಗಳನ್ನೂ ವಿಸರ್ಜಿಸಲು’ ಅದು ನಮಗೆ ಅವಕಾಶ ಕೊಡುತ್ತದೆ. (ತೀತ 2:11-14 ಓದಿ.) ಈ ವ್ಯವಸ್ಥೆಯಲ್ಲಿ ಯೆಹೋವನ ಕಡೆಗಿರುವ ನಮ್ಮ ನಿಷ್ಠೆಯು ಪರೀಕ್ಷೆಗೆ ಒಳಗಾಗುವಂಥ ಸನ್ನಿವೇಶಗಳು ಯಾವಾಗಲೂ ಬರುತ್ತವೆ. ಆಗ ‘ನಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ಆತನನ್ನೇ ಸೇವಿಸಲು, ಆತನನ್ನೇ ಹೊಂದಿಕೊಂಡು’ ಪೂರ್ಣವಾಗಿ ಆತನ ಪಕ್ಷದಲ್ಲಿರಲು ದೃಢನಿರ್ಣಯ ಮಾಡೋಣ!—ಧರ್ಮೋ. 10:20.