ನನಗೋಸ್ಕರ ಯೇಸು ಪ್ರಾಣ ಕೊಟ್ಟನಾ?
“ನಮ್ಮಂಥ ಭಾವನೆಗಳಿದ್ದ” ನಂಬಿಗಸ್ತ ಪುರುಷರೇ ಬೈಬಲನ್ನು ಬರೆದಿದ್ದಾರೆ. (ಯಾಕೋ. 5:17) ಹಾಗಾಗಿ ಅವರು ಬರೆದ ಮಾತುಗಳನ್ನು, ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತದೆ. ಉದಾಹರಣೆಗೆ, ಪೌಲನು ರೋಮನ್ನರಿಗೆ 7:21-24 ರಲ್ಲಿ “ನಾನು ಒಳ್ಳೇದನ್ನು ಮಾಡಲು ಬಯಸುವುದಾದರೂ ಕೆಟ್ಟದ್ದೇ ನನ್ನಲ್ಲಿ ಇದೆ . . . ನಾನು ಎಂಥ ದುರವಸ್ಥೆಯಲ್ಲಿ ಬಿದ್ದಿರುವ ಮನುಷ್ಯನು!” ಎಂದನು. ನಂಬಿಗಸ್ತನಾಗಿದ್ದ ಪೌಲನಿಗೇ ಹಾಗನಿಸುವಾಗ ನಾವೂ ನಮ್ಮ ಕುಂದುಕೊರತೆಗಳ ಬಗ್ಗೆ ನೆನಸಿ ಬೇಜಾರಾಗುವುದು ಸಹಜ.
ಆದರೆ ಪೌಲನ ಇನ್ನೊಂದು ಮಾತನ್ನು ನೋಡಿ. ಗಲಾತ್ಯ 2:20 ರಲ್ಲಿ ಆತನು ದೃಢ ನಂಬಿಕೆಯಿಂದ ಹೇಳಿದ್ದು: ‘ಯೇಸು ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನೇ ಒಪ್ಪಿಸಿಬಿಟ್ಟನು.’ ಪೌಲನಂತೆ ನೀವು ಸಹ ಯೇಸು ನಿಮಗೋಸ್ಕರನೇ ಪ್ರಾಣ ಕೊಟ್ಟನು ಎಂದು ನಂಬುತ್ತೀರಾ? ಕೆಲವೊಮ್ಮೆ ನಂಬಲು ಕಷ್ಟ ಆಗಬಹುದು.
ನೀವು ಹಿಂದೆ ಮಾಡಿದ ತಪ್ಪಿಂದ ನಿಮಗೆ ಮನಸ್ಸು ಚುಚ್ಚುತ್ತಿದ್ದರೆ ಅಥವಾ ‘ನಾನು ಯಾವುದಕ್ಕೂ ಲಾಯಕ್ಕಿಲ್ಲ’ ಅಂತ ಅನಿಸುತ್ತಿದ್ದರೆ ಯೆಹೋವನು ನಿಮ್ಮನ್ನು ಪ್ರೀತಿಸುತ್ತಾನೆ, ಕ್ಷಮಿಸುತ್ತಾನೆ ಎಂದು ನಂಬಲು ಕಷ್ಟ ಆಗಬಹುದು. ಯೇಸು ಪ್ರಾಣ ಕೊಟ್ಟಿರುವುದು ನಿಮಗೋಸ್ಕರನೇ ಎಂದು ಒಪ್ಪಿಕೊಳ್ಳಲು ಕಷ್ಟ ಆಗಬಹುದು. ಆದರೆ ‘ಯೇಸು ನಿಜವಾಗಲೂ ನನಗೋಸ್ಕರನೇ ಪ್ರಾಣ ಕೊಟ್ಟಿದ್ದಾನೆ’ ಎಂದು ನಾವು ನಂಬಬೇಕೆಂದು ಯೇಸು ಬಯಸುತ್ತಾನಾ? ಆ ನಂಬಿಕೆಯನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು? ಈ ಎರಡು ಪ್ರಶ್ನೆಗಳಿಗೆ ಉತ್ತರ ನೋಡೋಣ.
ಯೇಸು ಏನು ಬಯಸುತ್ತಾನೆ?
‘ಯೇಸು ನನಗೋಸ್ಕರನೇ ಪ್ರಾಣ ಕೊಟ್ಟಿದ್ದಾನೆ’ ಎಂದು ಪ್ರತಿಯೊಬ್ಬರು ನಂಬಬೇಕೆಂದು ಯೇಸು ಬಯಸುತ್ತಾನೆ. ಹೇಗೆ ಹೇಳಬಹುದು? ಲೂಕ 23:39-43 ರಲ್ಲಿರುವ ದೃಶ್ಯವನ್ನು ಸ್ವಲ್ಪ ಚಿತ್ರಿಸಿಕೊಳ್ಳಿ. ಯೇಸು ಯಾತನಾ ಕಂಬದಲ್ಲಿದ್ದಾನೆ. ಪಕ್ಕದ ಕಂಬದಲ್ಲಿ ಇರುವ ವ್ಯಕ್ತಿ ತಾನು ನಿಜವಾಗಲೂ ತಪ್ಪುಮಾಡಿದ್ದೇನೆ ಎಂದು ಯೇಸುವಿಗೆ ಹೇಳುತ್ತಾನೆ. ಅವನು ದೊಡ್ಡ ತಪ್ಪನ್ನೇ ಮಾಡಿರಬೇಕು. ಯಾಕೆಂದರೆ ದೊಡ್ಡ ತಪ್ಪು ಮಾಡಿದವರಿಗೇ ಇಂಥ ಕ್ರೂರ ಶಿಕ್ಷೆ ಸಿಗುತ್ತಿತ್ತು. ಅವನು ಅಷ್ಟು ನೋವಿನಲ್ಲಿ ನರಳುತ್ತಿದ್ದರೂ ಯೇಸುವಿನ ಹತ್ತಿರ “ನೀನು ನಿನ್ನ ರಾಜ್ಯದಲ್ಲಿ ಬರುವಾಗ ನನ್ನನ್ನು ಜ್ಞಾಪಿಸಿಕೋ” ಎಂದು ಬೇಡಿಕೊಳ್ಳುತ್ತಾನೆ.
ಅದಕ್ಕೆ ಯೇಸು ಏನಂದನು? ಯೇಸು ಕೂಡ ನೋವಲ್ಲಿ ನರಳುತ್ತಾ ಇದ್ದನು. ಆ ನೋವಲ್ಲೂ ಯೇಸು ಆ ಅಪರಾಧಿ ಕಡೆ ತಿರುಗಿ ಅವನನ್ನು ನೋಡಿ ಮಂದಹಾಸ ಬೀರುತ್ತಾ ಮಾತಾಡುವುದನ್ನು ಚಿತ್ರಿಸಿಕೊಳ್ಳಿ. ಯೇಸು ಅವನಿಗೆ “ನೀನು ನನ್ನೊಂದಿಗೆ ಪರದೈಸಿನಲ್ಲಿರುವಿ ಎಂದು ಈಹೊತ್ತೇ ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ” ಎಂದು ಹೇಳಿ ಸಮಾಧಾನ ಮಾಡಿದನು. ಇದರ ಬದಲು “ಮನುಷ್ಯಕುಮಾರನು . . . ಅನೇಕರಿಗೆ ಪ್ರತಿಯಾಗಿ ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ” ಕೊಡುವುದಕ್ಕೆ ಬಂದನು ಎಂದು ಹೇಳಬಹುದಿತ್ತು. (ಮತ್ತಾ. 20:28) ಆದರೆ ಯೇಸು ದಯೆಯಿಂದ ಮಾತಾಡಿದ್ದನ್ನು ಗಮನಿಸಿದಿರಾ? ತಾನು ಪ್ರಾಣ ಕೊಡುತ್ತಿರುವುದರಿಂದ ಆ ಮನುಷ್ಯನಿಗೆ ವೈಯಕ್ತಿಕವಾಗಿ ಪ್ರಯೋಜನ ಆಗುತ್ತದೆ ಎಂದು ಒತ್ತಿಹೇಳಿದನು. ಹೇಗೆ? “ನೀನು” “ನಾನು” ಅನ್ನುವ ಪದಗಳನ್ನು ಬಳಸಿದನು. ಅಷ್ಟೇ ಅಲ್ಲ, ಆ ಅಪರಾಧಿಗೆ ಮುಂದೆ ಪರದೈಸಿನಲ್ಲಿ ನಿತ್ಯಜೀವ ಸಿಗುತ್ತದೆ ಎಂದನು.
‘ನನ್ನ ಪ್ರಯೋಜನಕ್ಕಾಗಿನೇ ವಿಮೋಚನಾ ಮೌಲ್ಯ ಕೊಡುತ್ತಿರೋದು’ ಎಂದು ಆ ಅಪರಾಧಿ ಅರ್ಥಮಾಡಿಕೊಳ್ಳಬೇಕೆಂದು ಯೇಸು ಬಯಸಿದನು. ತನ್ನ ಹಿಂಬಾಲಕನಾಗಿ ದೇವರನ್ನು ಆರಾಧಿಸದೇ ಇದ್ದ ಆ ಅಪರಾಧಿ ಬಗ್ಗೆನೇ ಯೇಸುವಿಗೆ ಈ ಭಾವನೆ ಇತ್ತು ಅಂದಮೇಲೆ ದೇವರ ಸೇವೆ ಮಾಡುವ ದೀಕ್ಷಾಸ್ನಾನ ಪಡೆದ ವ್ಯಕ್ತಿ ಬಗ್ಗೆ ಯೇಸುವಿಗೆ ಆ ಭಾವನೆ ಖಂಡಿತ ಇರುತ್ತೆ. ನಾವು ಹಿಂದೆ ತಪ್ಪು ಮಾಡಿದರೂ ಯೇಸು ‘ನನಗೋಸ್ಕರನೇ ಪ್ರಾಣ ಕೊಟ್ಟಿದ್ದಾನೆ’ ಅನ್ನುವ ನಂಬಿಕೆಯನ್ನು ಹೇಗೆ ಬೆಳೆಸಿಕೊಳ್ಳಬಹುದು?
ಪೌಲ ಹೇಗೆ ನಂಬಿಕೆ ಬೆಳೆಸಿಕೊಂಡನು?
ಯೇಸುವಿನಿಂದಲೇ ಪೌಲನು ಸಾರುವ ನೇಮಕವನ್ನು ಪಡಕೊಂಡನು. ಇದರಿಂದಾಗಿ ಪೌಲನಿಗೆ ‘ಯೇಸು ತನಗೋಸ್ಕರನೇ ಪ್ರಾಣ ಕೊಟ್ಟನು’ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಪೌಲನು ಹೇಳಿದ್ದು: 1 ತಿಮೊ. 1:12-14) ತಾನು ಇಷ್ಟು ತಪ್ಪು ಮಾಡಿದ್ದರೂ ಯೇಸು ತನಗೆ ಈ ನೇಮಕ ಕೊಟ್ಟು ದಯೆ ತೋರಿಸಿದ್ದಾನೆ, ತನ್ನನ್ನು ಪ್ರೀತಿಸುತ್ತಾನೆ, ನಂಬುತ್ತಾನೆ ಎಂಬ ಆಶ್ವಾಸನೆ ಪೌಲನಿಗೆ ಸಿಕ್ಕಿತು. ಯೇಸು ನಮ್ಮಲ್ಲಿ ಪ್ರತಿಯೊಬ್ಬರಿಗೂ ಸುವಾರ್ತೆ ಸಾರುವ ಕೆಲಸವನ್ನು ಕೊಟ್ಟಿದ್ದಾನೆ. (ಮತ್ತಾ. 28:19, 20) ನಮಗೆ ಸಿಕ್ಕಿರುವ ಈ ನೇಮಕ ‘ಯೇಸು ನನಗೋಸ್ಕರನೇ ಪ್ರಾಣ ಕೊಟ್ಟಿದ್ದು’ ಎಂದು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತಾ?
“ನಮ್ಮ ಕರ್ತನಾದ ಕ್ರಿಸ್ತ ಯೇಸು ನನಗೆ ಬಲವನ್ನು ದಯಪಾಲಿಸಿ ನನ್ನನ್ನು ಶುಶ್ರೂಷೆಗೆ ನೇಮಿಸುವ ಮೂಲಕ ನನ್ನನ್ನು ನಂಬಿಗಸ್ತನಾಗಿ ಪರಿಗಣಿಸಿದ್ದಕ್ಕಾಗಿ ನಾನು ಅವನಿಗೆ ಕೃತಜ್ಞನಾಗಿದ್ದೇನೆ. ಈ ಹಿಂದೆ ನಾನು ದೇವದೂಷಣೆಮಾಡುವವನೂ ಹಿಂಸಕನೂ ದುರಹಂಕಾರಿಯೂ ಆಗಿದ್ದೆ.” (ಈ ಉದಾಹರಣೆಗಳನ್ನು ಗಮನಿಸಿ. ಸುಮಾರು 34 ವರ್ಷ ಬಹಿಷ್ಕಾರವಾಗಿ, ಇತ್ತೀಚೆಗಷ್ಟೇ ಯೆಹೋವನ ಹತ್ತಿರ ವಾಪಸ್ಸು ಬಂದ ಆಲ್ಬರ್ಟ್ ಹೇಳುವುದು: “ನಾನು ಮಾಡಿದ ತಪ್ಪುಗಳು ಯಾವಾಗಲೂ ನನ್ನ ಕಣ್ಮುಂದೆ ಬರುತ್ತೆ. ಆದರೆ ನಾನು ಸೇವೆಗೆ ಹೋದಾಗ, ಯೇಸು ಪೌಲನಿಗೆ ಸಾರುವ ನೇಮಕವನ್ನು ಕೊಟ್ಟ ಹಾಗೇ ನನಗೂ ಕೊಟ್ಟಿದ್ದಾನೆ ಅನ್ನುವುದು ನನ್ನ ಮನಸ್ಸಿಗೆ ಬರುತ್ತೆ. ಇದರಿಂದ ನನಗೆ ತುಂಬ ಸಂತೋಷ ಆಗುತ್ತೆ. ನನ್ನ ಬಗ್ಗೆ, ನನ್ನ ಜೀವನದ ಬಗ್ಗೆ, ನನ್ನ ಭವಿಷ್ಯದ ಬಗ್ಗೆ ಒಳ್ಳೇ ಯೋಚನೆ ಮಾಡುವುದಕ್ಕೂ ಆಗುತ್ತಿದೆ.”—ಕೀರ್ತ. 51:3.
ಸತ್ಯ ಕಲಿಯುವ ಮುಂಚೆ ತುಂಬ ಕ್ರೂರಿ ಆಗಿದ್ದ, ಗೂಂಡಾಗಿರಿ ಮಾಡುತ್ತಿದ್ದ ಆ್ಯಲನ್ ಹೇಳುವುದು: “ನಾನು ಜನರಿಗೆ ಎಷ್ಟು ತೊಂದರೆ ಕೊಟ್ಟಿದ್ದೇನೆ ಅನ್ನುವುದನ್ನು ಇನ್ನೂ ಮರೆಯಕ್ಕಾಗುತ್ತಿಲ್ಲ. ಅದನ್ನು ನೆನಸಿಕೊಂಡರೆ ಕೆಲವೊಮ್ಮೆ ತುಂಬ ಬೇಜಾರಾಗುತ್ತೆ. ಆದರೆ ನನ್ನಂಥ ಪಾಪಿಗೆ ಯೆಹೋವನು ಸುವಾರ್ತೆ ಸಾರುವ ಅವಕಾಶ ಕೊಟ್ಟಿದ್ದಾನೆ. ಇದಕ್ಕೆ ನಾನು ಯೆಹೋವನಿಗೆ ಋಣಿಯಾಗಿದ್ದೇನೆ. ಸುವಾರ್ತೆಗೆ ಜನರು ಚೆನ್ನಾಗಿ ಪ್ರತಿಕ್ರಿಯಿಸಿದಾಗ ಯೆಹೋವನು ಒಳ್ಳೆಯವನು, ನಮ್ಮನ್ನು ತುಂಬ ಪ್ರೀತಿಸುತ್ತಾನೆ ಅನ್ನುವುದು ನೆನಪಿಗೆ ಬರುತ್ತೆ. ಹಿಂದೆ ಮಾಡಿದ ತಪ್ಪುಗಳ ಬಗ್ಗೆ ನೆನಸಿ ನನ್ನ ತರಾನೇ ಕೊರಗುತ್ತಾ ಇರುವ ಜನರಿಗೆ ಸಹಾಯ ಮಾಡಲು ಯೆಹೋವನು ನನ್ನನ್ನು ಉಪಯೋಗಿಸುತ್ತಾ ಇರುವುದಕ್ಕೆ ನನಗೆ ಖುಷಿಯಾಗುತ್ತೆ.”
ನಾವು ಸೇವೆ ಮಾಡುವಾಗ ಒಳ್ಳೇದನ್ನೇ ಯೋಚಿಸಲು ಮತ್ತು ಮಾಡಲು ಸಾಧ್ಯವಾಗುತ್ತದೆ. ಯೇಸು ನಮಗೆ ದಯೆ ತೋರಿಸಿದ್ದಾನೆ, ನಮ್ಮನ್ನು ಪ್ರೀತಿಸುತ್ತಾನೆ ಮತ್ತು ನಂಬುತ್ತಾನೆ ಅನ್ನುವ ಆಶ್ವಾಸನೆ ಕೂಡ ಸಿಗುತ್ತದೆ.
ಯೆಹೋವನು ನಮ್ಮ ಹೃದಯಕ್ಕಿಂತ ಹೆಚ್ಚು ಶ್ರೇಷ್ಠ
ಸೈತಾನನ ಈ ಕೆಟ್ಟ ಲೋಕ ನಾಶ ಆಗುವ ವರೆಗೆ, ನಾವು ಮಾಡಿದ ತಪ್ಪುಗಳಿಗಾಗಿ ನಮ್ಮ ಹೃದಯದಲ್ಲಿ ಕೊರಗು ಇರಬಹುದು. ಆ ಕೊರಗು ಕಡಿಮೆಯಾಗಲು ನಮಗೆ ಯಾವುದು ಸಹಾಯ ಮಾಡುತ್ತದೆ?
ಜೀನ್ ಎಂಬ ಸಹೋದರಿ “‘ದೇವರು ನಮ್ಮ ಹೃದಯಗಳಿಗಿಂತ ಹೆಚ್ಚು ಶ್ರೇಷ್ಠನಾಗಿದ್ದಾನೆ’ ಅನ್ನೋ ವಿಷಯ ನನಗೆ ತುಂಬ ಸಹಾಯ ಮಾಡಿದೆ” ಎಂದು ಹೇಳುತ್ತಾಳೆ. ಅವಳು ಯುವ ಪ್ರಾಯದಲ್ಲಿ ಇಬ್ಬಗೆಯ ಜೀವನ ನಡೆಸುತ್ತಿದ್ದಳು. ಇದರಿಂದಾಗಿ ಈಗಲೂ ಅವಳ ಮನಸ್ಸು ಆಗಾಗ ಚುಚ್ಚುತ್ತಿರುತ್ತದೆ. (1 ಯೋಹಾ. 3:19, 20) ನಮ್ಮ ಅಪರಿಪೂರ್ಣ ಸ್ಥಿತಿಯ ಬಗ್ಗೆ ನಮಗಿಂತ ಚೆನ್ನಾಗಿ ಯೆಹೋವ ಮತ್ತು ಯೇಸುವಿಗೆ ಗೊತ್ತು. ಇದನ್ನು ಮನಸ್ಸಲ್ಲಿಟ್ಟರೆ ಸಹೋದರಿ ಜೀನ್ ಹಾಗೆ ನಮಗೂ ಸಾಂತ್ವನ ಸಿಗುತ್ತದೆ. ಯೆಹೋವ ಮತ್ತು ಯೇಸು ವಿಮೋಚನಾ ಮೌಲ್ಯ ಕೊಟ್ಟಿದ್ದು ಪರಿಪೂರ್ಣ ಮಾನವರಿಗಲ್ಲ ಬದಲಿಗೆ ಪಶ್ಚಾತ್ತಾಪಪಡುವ ಪಾಪಿಗಳಿಗೆ ಅನ್ನುವುದನ್ನೂ ಮನಸ್ಸಲ್ಲಿಡಬೇಕು.—1 ತಿಮೊ. 1:15.
ಯೇಸು ಅಪರಿಪೂರ್ಣ ಮಾನವರಾದ ನಮ್ಮಲ್ಲಿ ಒಬ್ಬೊಬ್ಬರಿಗೋಸ್ಕರನೂ ತನ್ನ ಪ್ರಾಣ ಕೊಟ್ಟಿದ್ದಾನೆ. ಈ ಸತ್ಯ ನಮ್ಮ ಹೃದಯಕ್ಕೆ ಮನವರಿಕೆ ಆಗಬೇಕೆಂದರೆ ಯೇಸು ಅಪರಿಪೂರ್ಣ ಮಾನವರ ಜೊತೆ ಹೇಗೆ ನಡಕೊಂಡನು ಅಂತ ಆಳವಾಗಿಧ್ಯಾನಿಸಬೇಕು. ಮಾತ್ರವಲ್ಲ, ಯೇಸು ನಮಗೆ ಕೊಟ್ಟಿರುವ ಸಾರುವ ನೇಮಕವನ್ನು ಪೂರೈಸಬೇಕು. ಆಗ ಪೌಲ ಹೇಳಿದಂತೆ ನಾವೂ ಹೇಳುತ್ತೇವೆ: ಯೇಸು “ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನೇ ಒಪ್ಪಿಸಿಬಿಟ್ಟನು.”