ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ಯೆಹೋವನ ಸೇವೆಯಲ್ಲಿ ಇಷ್ಟು ಸಂತೋಷ ಸಿಗುತ್ತೆ ಅಂತ ನೆನಸಿರಲಿಲ್ಲ

ಯೆಹೋವನ ಸೇವೆಯಲ್ಲಿ ಇಷ್ಟು ಸಂತೋಷ ಸಿಗುತ್ತೆ ಅಂತ ನೆನಸಿರಲಿಲ್ಲ

ಪಯನೀಯರ್‌ ಸೇವೆ ಮಾಡಬೇಕು ಅನ್ನುವುದು ಒಳ್ಳೆಯ ನಿರ್ಧಾರ ಅಂತ ಗೊತ್ತಿತ್ತು, ಆದರೆ ‘ಈ ಸೇವೆಯಲ್ಲಿ ನಿಜವಾಗಲೂ ಖುಷಿ ಸಿಗುತ್ತಾ?’ ಅಂತ ನಾನು ಯೋಚಿಸುತ್ತಿದ್ದೆ. ಜರ್ಮನಿಯಲ್ಲಿ ನಾನು ಮಾಡುತ್ತಿದ್ದ ಕೆಲಸ ನನಗೆ ಪಂಚಪ್ರಾಣ ಆಗಿತ್ತು. ನಾನು ಮಾಡುತ್ತಿದ್ದ ಕೆಲಸ ಏನೆಂದರೆ ಆಫ್ರಿಕಾದ ಡಾರ್‌ ಎಸ್‌ ಸಲಾಮ್‌, ಇಲಿಜಬತ್‌ವಿಲ್‌ ಮತ್ತು ಅಸ್ಮಾರಾ ಮುಂತಾದ ಪಟ್ಟಣಗಳಿಗೆ ಆಹಾರ ಪದಾರ್ಥಗಳನ್ನು ಕಳಿಸುವುದು. ಆದರೆ ಮುಂದೊಂದು ದಿನ ಆ ಸ್ಥಳಗಳಲ್ಲಿ ಮತ್ತು ಆಫ್ರಿಕಾದ ಉದ್ದಗಲಕ್ಕೂ ಪೂರ್ಣ ಸಮಯ ಯೆಹೋವನ ಸೇವೆ ಮಾಡುತ್ತೇನೆ ಅಂತ ನಾನು ಕನಸಲ್ಲೂ ನೆನಸಿರಲಿಲ್ಲ!

ನನಗಿದ್ದ ಸಂಶಯಗಳಿಗೆಲ್ಲ ಉತ್ತರ ಸಿಕ್ಕಿದ ಮೇಲೆ ಕೊನೆಗೂ ನಾನು ಪಯನೀಯರ್‌ ಸೇವೆ ಶುರುಮಾಡಿದೆ. ನಂತರ ನಾನು ನಿರೀಕ್ಷಿಸಿರದ ವಿಷಯಗಳು ಜೀವನದಲ್ಲಿ ನಡೆದವು. (ಎಫೆ. 3:20) ಅಂಥದ್ದೇನು ನಡೆಯಿತು ಅಂತ ನೀವು ಯೋಚಿಸಬಹುದು. ಆರಂಭದಿಂದ ಹೇಳುತ್ತೇನೆ ಕೇಳಿ.

ನಾನು ಜರ್ಮನಿಯ ಬರ್ಲಿನ್‌ನಲ್ಲಿ 1939​ರಲ್ಲಿ ಹುಟ್ಟಿದೆ. ನಾನು ಹುಟ್ಟುವ ಕೆಲವು ತಿಂಗಳ ಹಿಂದಷ್ಟೇ ಎರಡನೇ ಮಹಾಯುದ್ಧ ಶುರುವಾಗಿತ್ತು. 1945​ರಲ್ಲಿ ಯುದ್ಧ ಕೊನೆಯಾಗುವ ಸಮಯದಲ್ಲಿ ಬರ್ಲಿನ್‌ ಪಟ್ಟಣದ ಮೇಲೆ ಯುದ್ಧವಿಮಾನಗಳು ಬಾಂಬ್‌ ದಾಳಿ ಮಾಡುತ್ತಿದ್ದವು. ಹೀಗೆ ಒಂದು ಸಲ ನಮ್ಮ ಬೀದಿಯಲ್ಲಿ ಬಾಂಬ್‌ ದಾಳಿ ನಡೆಯಿತು. ಆದರೆ ನಾನು, ಅಪ್ಪ, ಅಮ್ಮ, ತಂಗಿ ಅಲ್ಲಿನ ಸುರಕ್ಷಾ ಸ್ಥಳಕ್ಕೆ (ಏರ್‌ರೇಡ್‌ ಶೆಲ್ಟರ್‌) ಹೋಗಿ ನಮ್ಮ ಜೀವ ಉಳಿಸಿಕೊಂಡ್ವಿ. ಆ ಊರಲ್ಲಿದ್ರೆ ಜೀವಕ್ಕೆ ಅಪಾಯ ಆಗುತ್ತೆ ಅಂತ ನೆನಸಿ ಅಮ್ಮನ ಹುಟ್ಟೂರಾದ ಎರ್‌ಫರ್ಟ್‌ಗೆ ಬಂದೆವು.

ಅಪ್ಪ-ಅಮ್ಮ, ತಂಗಿ ಮತ್ತು ನಾನು ಜರ್ಮನಿಯಲ್ಲಿ, ಬಹುಶಃ 1950

ಅಮ್ಮ ಸತ್ಯಕ್ಕಾಗಿ ತುಂಬ ಹುಡುಕುತ್ತಿದ್ದರು. ಅದಕ್ಕಾಗಿ ತತ್ವಜ್ಞಾನಿಗಳು ಬರೆದಿದ್ದ ಪುಸ್ತಕಗಳನ್ನು ಓದುತ್ತಿದ್ದರು ಮತ್ತು ಅನೇಕ ಧರ್ಮಗಳ ಬಗ್ಗೆ ಸಂಶೋಧನೆ ಮಾಡಿದರು. ಆದರೆ ಅವರಿಗೆ ಸತ್ಯ ಸಿಗಲಿಲ್ಲ. 1948​ರಲ್ಲಿ ಒಂದು ದಿನ ಇಬ್ಬರು ಸ್ತ್ರೀಯರು ನಮ್ಮ ಮನೆಗೆ ಬಂದರು. ಅವರು ಯೆಹೋವನ ಸಾಕ್ಷಿಗಳು. ಅಮ್ಮ ಅವರನ್ನು ಒಳಗೆ ಕರೆದರು ಮತ್ತು ಅವರ ಹತ್ತಿರ ಒಂದರ ಮೇಲೊಂದು ಪ್ರಶ್ನೆ ಕೇಳೋಕೆ ಶುರುಮಾಡಿದರು. ಒಂದು ತಾಸು ಆಗಿರಲಿಕ್ಕಿಲ್ಲ ಅನ್ಸುತ್ತೆ, ಅಮ್ಮ ನನ್ನ ಹತ್ತಿರ-ನನ್ನ ತಂಗಿ ಹತ್ತಿರ ಬಂದು “ನನಗೆ ಸತ್ಯ ಸಿಕ್ಕಿಬಿಟ್ಟಿತು!” ಅಂತ ಹೇಳಿದರು. ಕೆಲವೇ ದಿನಗಳಲ್ಲಿ ನಾನು, ಅಮ್ಮ, ತಂಗಿ ಎರ್‌ಫರ್ಟ್‌ನಲ್ಲಿ ನಡೆಯುತ್ತಿದ್ದ ಕೂಟಗಳಿಗೆ ಹಾಜರಾಗಲು ಆರಂಭಿಸಿದೆವು.

1950​ರಲ್ಲಿ ನಾವು ವಾಪಸ್‌ ಬರ್ಲಿನ್‌ಗೆ ಹೋದೆವು. ಅಲ್ಲಿ ನಾವು ಮೊದಲು ಬರ್ಲಿನ್‌-ಕ್ರ್ಯೂಜಬರ್ಗ್‌ ಸಭೆಗೆ ಹೋಗುತ್ತಿದ್ದೆವು. ನಂತರ ಆ ಊರಿನಲ್ಲೇ ಇದ್ದ ಬರ್ಲಿನ್‌-ಟೆಂಪಲ್‌ಹೋಫ್‌ನಲ್ಲಿನ ಸಭೆಗೆ ಹೋದೆವು. ಸ್ವಲ್ಪ ಸಮಯದಲ್ಲೇ ಅಮ್ಮ ದೀಕ್ಷಾಸ್ನಾನ ಪಡಕೊಂಡರು. ಆದರೆ ನಾನು ಹಿಂಜರಿದೆ. ಯಾಕೆ?

ನಾಚಿಕೆ ಮತ್ತು ಹಿಂಜರಿಕೆ ಸ್ವಭಾವ ಇತ್ತು

ನಾಚಿಕೆ ಸ್ವಭಾವದಿಂದಾಗಿ ಯೆಹೋವನ ಸೇವೆ ಮಾಡಲು ನನಗೆ ಕಷ್ಟ ಆಗುತ್ತಿತ್ತು. ಸುಮಾರು ಎರಡು ವರ್ಷ ನಾನು ಸೇವೆಗೆ ಹೋದರೂ ಯಾರ ಹತ್ತಿರಾನೂ ಮಾತಾಡಿರಲಿಲ್ಲ. ಆದರೆ ಕಷ್ಟದಲ್ಲೂ ನಂಬಿಗಸ್ತರಾಗಿದ್ದ ಸಹೋದರ-ಸಹೋದರಿಯರ ಜೊತೆ ಸೇವೆ ಮಾಡಿದಾಗ ನನ್ನ ಈ ಯೋಚನೆ ಬದಲಾಯಿತು. ಅವರಲ್ಲಿ ಕೆಲವು ಸಹೋದರ-ಸಹೋದರಿಯರು ನಾಜಿ ಸೆರೆಶಿಬಿರ ಅಥವಾ ಪೂರ್ವ ಜರ್ಮನಿಯ ಜೈಲು ಶಿಕ್ಷೆ ಅನುಭವಿಸಿದ್ದರು. ಇನ್ನು ಕೆಲವರು ತಮ್ಮ ಜೀವವನ್ನೇ ಮುಡಿಪಾಗಿಟ್ಟು ಕದ್ದುಮುಚ್ಚಿ ನಮ್ಮ ಸಾಹಿತ್ಯವನ್ನು ಸೆರೆಯಲ್ಲಿದ್ದವರಿಗೆ ತಲುಪಿಸಿದ್ದರು. ಅವರ ಈ ಧೈರ್ಯ ನನ್ನನ್ನು ತುಂಬ ಪ್ರಭಾವಿಸಿತು. ಈ ಸಹೋದರ-ಸಹೋದರಿಯರು ಯೆಹೋವನಿಗಾಗಿ ಮತ್ತು ಸಹೋದರರಿಗಾಗಿ ಇಷ್ಟೊಂದು ತ್ಯಾಗ ಮಾಡಬೇಕಿದ್ದರೆ ನಾನು ನನ್ನ ಪುಕ್ಕಲುತನವನ್ನು ಬಿಟ್ಟುಬಿಡಬೇಕು ಅಂತ ಅನಿಸಿತು.

1955​ರ ವಿಶೇಷ ಅಭಿಯಾನದಲ್ಲಿ ಪಾಲ್ಗೊಂಡಾಗ ಪುಕ್ಕಲುತನದಿಂದ ಹೊರಗೆ ಬರಲಿಕ್ಕೆ ಸಾಧ್ಯವಾಯಿತು. ಸಹೋದರ ನೇತನ್‌ ನಾರ್‌ ಇನ್‌ಫಾರ್ಮೆಂಟ್‌ನಲ್ಲಿ * ಬರೆದ ಪತ್ರದಲ್ಲಿ ಹೀಗೆ ಹೇಳಿದರು: ‘ಇಷ್ಟರವರೆಗೆ ನಡೆಸಿರುವ ಅಭಿಯಾನಗಳಲ್ಲಿ ಇದೇ ದೊಡ್ಡ ಅಭಿಯಾನ. ಎಲ್ಲ ಪ್ರಚಾರಕರು ಇದರಲ್ಲಿ ಭಾಗವಹಿಸಿದರೆ ಮುಂದಿನ ತಿಂಗಳಲ್ಲಿ ಅತಿ ಹೆಚ್ಚು ಸಾರುವ ಕೆಲಸ ನಡೆಯುತ್ತದೆ, ಇದರಿಂದ ಹೊಸ ದಾಖಲೆಯನ್ನೇ ಸೃಷ್ಟಿಸಬಹುದು.’ ಅದೆಷ್ಟು ಸತ್ಯವಾಗಿತ್ತು! ಇದರಿಂದಾಗಿ ನಾನು ಕೂಡಲೇ ಯೆಹೋವನಿಗೆ ಸಮರ್ಪಿಸಿಕೊಳ್ಳುವ ನಿರ್ಧಾರ ತಗೊಂಡೆ. 1956​ರಲ್ಲಿ ನಾನು, ಅಪ್ಪ ಮತ್ತು ತಂಗಿ ಮೂರು ಜನಾನೂ ದೀಕ್ಷಾಸ್ನಾನ ತಗೊಂಡೆವು. ಇದಾದ ನಂತರ ನಾನು ಒಂದು ದೊಡ್ಡ ನಿರ್ಧಾರ ಮಾಡಬೇಕಿತ್ತು.

ಪಯನೀಯರ್‌ ಸೇವೆ ಮಾಡುವುದು ಒಳ್ಳೇದು ಅಂತ ನನಗೆ ಗೊತ್ತಿತ್ತು. ಆದರೂ ಕೆಲವು ವರ್ಷಗಳು ನಾನೇ ಅದನ್ನು ಮುಂದೂಡುತ್ತಾ ಬಂದೆ. ಮೊದಲಿಗೆ ಸ್ವಲ್ಪ ವ್ಯಾಪಾರ-ವ್ಯವಹಾರಗಳ ಬಗ್ಗೆ ತಿಳುಕೊಳ್ಳಬೇಕು ಅಂತ ನೆನಸಿ ಆಮದು-ರಫ್ತು ಮಾಡುವುದು ಹೇಗೆಂದು ಬರ್ಲಿನ್‌ನಲ್ಲಿ ಕಲಿತೆ. ಅದಾದ ಮೇಲೆ ಕಲಿತ ವಿಷಯದ ಅನುಭವ ಸಿಗಲಿಕ್ಕಾಗಿ ಅದೇ ಕೆಲಸಕ್ಕೆ ಹೋದೆ. ಆದ್ದರಿಂದ 1961​ರಲ್ಲಿ ಜರ್ಮನಿಯ ಅತಿ ದೊಡ್ಡ ಬಂದರು ಪಟ್ಟಣವಾದ ಹ್ಯಾಂಬರ್ಗ್‌ನಲ್ಲಿ ಕೆಲಸಕ್ಕೆ ಸೇರಿಕೊಂಡೆ. ನನಗೆ ಆ ಕೆಲಸ ತುಂಬ ಇಷ್ಟವಾಯಿತು. ಹಾಗಾಗಿ ಪಯನೀಯರ್‌ ಸೇವೆ ಮಾಡಬೇಕೆಂಬ ನಿರ್ಧಾರವನ್ನು ಮುಂದೂಡುತ್ತಾ ಬಂದೆ. ಆದರೆ ಆಮೇಲೆ ಮನಸ್ಸು ಬದಲಾಯಿಸಿಕೊಂಡೆ. ಹೇಗೆ?

ಜೀವನದಲ್ಲಿ ಯೆಹೋವನ ಸೇವೆ ಮಾಡುವುದೇ ಅತೀ ಪ್ರಾಮುಖ್ಯ ವಿಷಯ ಅಂತ ಯೆಹೋವನು ನನಗೆ ಪ್ರೀತಿಯ ಸಹೋದರರ ಮೂಲಕ ಅರ್ಥಮಾಡಿಸಿದನು. ಅದಕ್ಕಾಗಿ ನಾನು ಯೆಹೋವನಿಗೆ ಕೃತಜ್ಞತೆ ಹೇಳುತ್ತೇನೆ. ನನ್ನ ಸ್ನೇಹಿತರಲ್ಲಿ ಅನೇಕರು ಪಯನೀಯರ್‌ ಸೇವೆ ಶುರುಮಾಡಿ, ನನಗೆ ಒಳ್ಳೇ ಮಾದರಿ ಇಟ್ಟಿದ್ದರು. ಅಷ್ಟೇ ಅಲ್ಲದೆ, ಸೆರೆಶಿಬಿರದಲ್ಲಿದ್ದು ಬಂದಿದ್ದ ಸಹೋದರ ಏರಿಕ್‌ ಮುಂಡ್‌ ಯೆಹೋವನಲ್ಲಿ ಭರವಸೆ ಇಡಲು ನನ್ನನ್ನು ಪ್ರೋತ್ಸಾಹಿಸಿದರು. ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ಸೆರೆಶಿಬಿರದಲ್ಲಿದ್ದ ಸಹೋದರರಲ್ಲಿ ಯಾರು ತಮ್ಮ ಮೇಲೆ ತಾವೇ ಭರವಸೆ ಇಟ್ಟರೋ ಅವರು ಕ್ರಮೇಣ ನಂಬಿಗಸ್ತಿಕೆಯನ್ನು ಬಿಟ್ಟುಕೊಟ್ಟರು, ಆದರೆ ಯೆಹೋವನಲ್ಲಿ ಪೂರ್ಣ ಭರವಸೆ ಇಟ್ಟವರು ನಂಬಿಗಸ್ತರಾಗಿಯೇ ಉಳಿದರು ಮತ್ತು ಅವರಿಂದ ಯೆಹೋವನ ಸಂಘಟನೆಗೆ ತುಂಬನೇ ಸಹಾಯ ಸಿಕ್ಕಿತು ಅಂತ ಹೇಳಿದರು.

ಪಯನೀಯರ್‌ ಸೇವೆ ಶುರು ಮಾಡಿದಾಗ, 1963

ಸಹೋದರ ಮಾರ್ಟಿನ್‌ ಪೊಟ್ಸಿಂಗರ್‌ರವರ (ಆಮೇಲೆ ಆಡಳಿತ ಮಂಡಲಿಯ ಸದಸ್ಯರಾದರು) ಮಾತುಗಳಿಂದ ಸಹ ನನಗೆ ಉತ್ತೇಜನ ಸಿಕ್ಕಿತು. ಅವರು ಸಹೋದರರಿಗೆ “ಧೈರ್ಯ ಬೆಳೆಸಿಕೊಳ್ಳಿ, ಯಾಕೆಂದರೆ ಅದು ನಿಮಗಿರುವುದರಲ್ಲೇ ಅತ್ಯುತ್ತಮ ಆಸ್ತಿ!” ಎಂದು ಯಾವಾಗಲೂ ಹೇಳಿ ಉತ್ತೇಜಿಸುತ್ತಿದ್ದರು. ಈ ಮಾತುಗಳ ಬಗ್ಗೆ ಯೋಚಿಸಿದ ಮೇಲೆ ನಾನು ಕೊನೆಗೂ ನನ್ನ ಕೆಲಸ ಬಿಟ್ಟೆ, 1963 ಜೂನ್‌ನಲ್ಲಿ ಪಯನೀಯರ್‌ ಸೇವೆ ಆರಂಭಿಸಿದೆ. ಇಂಥ ಒಂದು ಒಳ್ಳೇ ನಿರ್ಧಾರ ನಾನು ಹಿಂದೆಂದೂ ಮಾಡಿರಲಿಲ್ಲ! ಎರಡು ತಿಂಗಳಾದ ಮೇಲೆ ನನಗೆ ವಿಶೇಷ ಪಯನೀಯರ್‌ ನೇಮಕ ಸಿಕ್ಕಿತು. ಅದೂ ನಾನು ಇನ್ನೊಂದು ಕೆಲಸ ಹುಡುಕುವ ಮುಂಚೆಯೇ! ಸ್ವಲ್ಪ ವರ್ಷಗಳ ನಂತರ ಯೆಹೋವನು ನಾನು ಯಾವತ್ತೂ ಯೋಚನೆನೇ ಮಾಡದಂಥ ಒಂದು ಆಶೀರ್ವಾದ ಕೊಟ್ಟನು. ನನಗೆ 44​ನೇ ಗಿಲ್ಯಡ್‌ ಶಾಲೆಗೆ ಹಾಜರಾಗಲು ಆಮಂತ್ರಣ ಸಿಕ್ಕಿತು.

ಗಿಲ್ಯಡ್‌ ಶಾಲೆಯಲ್ಲಿ ಕಲಿತ ಅಮೂಲ್ಯ ಪಾಠಗಳು

ನಾನು ಕಲಿತ ಒಂದು ಪ್ರಾಮುಖ್ಯ ಪಾಠ “ಏನೇ ಆದರೂ ನೇಮಕವನ್ನು ಬಿಟ್ಟುಹೋಗಬಾರದು.” ಮುಖ್ಯವಾಗಿ ಇದನ್ನು ಸಹೋದರ ನೇತನ್‌ ನಾರ್‌ ಮತ್ತು ಸಹೋದರ ಲೈಮನ್‌ ಸ್ವಿಂಗಲ್‌ರಿಂದ ಕಲಿತೆ. ನಮ್ಮ ನೇಮಕದಲ್ಲಿ ಕಷ್ಟ ಬಂದರೂ ಅದನ್ನು ಮುಂದುವರಿಸಿಕೊಂಡು ಹೋಗಲು ಅವರಿಬ್ಬರು ತುಂಬಾನೇ ಉತ್ತೇಜಿಸುತ್ತಿದ್ದರು. ಸಹೋದರ ನಾರ್‌ ಹೀಗೆ ಹೇಳಿದರು: “ನೀವು ಯಾವುದಕ್ಕೆ ಗಮನ ಕೊಡುತ್ತೀರಾ? ಧೂಳು, ತಿಗಣೆ, ಬಡತನಕ್ಕಾ ಅಥವಾ ಮರ, ಹೂವು ಮತ್ತು ಜನರ ಮುಖದಲ್ಲಿನ ಸಂತೋಷಕ್ಕಾ? ಜನರನ್ನು ಪ್ರೀತಿಸುವುದಕ್ಕೆ ಕಲಿಯಿರಿ!” ಒಂದು ದಿನ ಸಹೋದರ ಸ್ವಿಂಗಲ್‌ ಕೆಲವು ಸಹೋದರರು ಕಷ್ಟ ಬಂದ ತಕ್ಷಣ ತಮ್ಮ ನೇಮಕವನ್ನು ಯಾಕೆ ಬಿಟ್ಟುಬಿಡುತ್ತಾರೆ ಅಂತ ಹೇಳುವಾಗ ಅವರ ಕಣ್ಣಲ್ಲಿ ನೀರು ಬಂದುಬಿಟ್ಟಿತು. ಸಮಾಧಾನ ಮಾಡಿಕೊಂಡು ಪುನಃ ಮಾತಾಡಲಿಕ್ಕೆ ಅವರಿಗೆ ಸ್ವಲ್ಪ ಸಮಯ ಹಿಡಿಯಿತು. ಇದು ನನ್ನ ಮೇಲೆ ತುಂಬ ಪ್ರಭಾವ ಬೀರಿತು. ಕ್ರಿಸ್ತನನ್ನಾಗಲಿ, ಆತನ ನಂಬಿಗಸ್ತ ಸೇವಕರನ್ನಾಗಲಿ ನಾನು ಯಾವತ್ತಿಗೂ ನಿರಾಶೆಪಡಿಸಬಾರದು ಅಂತ ನಿರ್ಧರಿಸಿದೆ.—ಮತ್ತಾ. 25:40.

ಕಾಂಗೋವಿನ ಲುಬುಂಬಾಶಿಯಲ್ಲಿ ಮಿಷನರಿ ಸೇವೆ ಮಾಡುತ್ತಿದ್ದಾಗ ನಾನು, ಕ್ಲಾಡ್‌ ಮತ್ತು ಹೈನ್ರಿಕ್‌, 1967

ನಮಗೆ ನೇಮಕ ಸಿಕ್ಕಿದಾಗ ಬೆತೆಲ್‌ನಲ್ಲಿದ್ದ ಸಹೋದರರು ನಮ್ಮಲ್ಲಿ ಕೆಲವರನ್ನು ಎಲ್ಲಿ ನೇಮಕ ಸಿಕ್ಕಿದೆ ಅಂತ ಕೇಳಿದರು. ಎಲ್ಲರ ನೇಮಕವನ್ನು ಕೇಳಿಸಿಕೊಂಡಾಗೆಲ್ಲ ಅದರ ಬಗ್ಗೆ ಏನಾದರೂ ಒಳ್ಳೇದು ಹೇಳಿದರು. ಆದರೆ ನಾನು “ಕಾಂಗೋದಲ್ಲಿ (ಕಿನ್ಶಾಸಾ) ನನಗೆ ನೇಮಕ ಸಿಕ್ಕಿದೆ” ಅಂತ ಹೇಳಿದೆ. ಆಗ ಅವರು: “ಕಾಂಗೋನಾ! ಯೆಹೋವನು ನಿಮ್ಮನ್ನು ಕಾಪಾಡಲಿ!” ಅಂತ ಮಾತ್ರ ಹೇಳಿದರು. ಆ ಸಮಯದಲ್ಲಿ ಕಾಂಗೋದಲ್ಲಿ ಜನರು ಜಗಳ ಆಡುವುದು, ಕೊಲ್ಲುವುದರ ಬಗ್ಗೆ ವಾರ್ತಾವರದಿಗಳು ಬರುತ್ತಿದ್ದವು. ಆದರೆ ನಾನು ಗಿಲ್ಯಡ್‌ನಲ್ಲಿ ಕಲಿತ ವಿಷಯವನ್ನು ಮನಸ್ಸಲ್ಲಿಟ್ಟುಕೊಂಡಿದ್ದೆ. 1967​ರ ಸೆಪ್ಟೆಂಬರ್‌ನಲ್ಲಿ ಪದವಿ ಸಿಕ್ಕಿದ ಮೇಲೆ ನಾನು, ಹೈನ್ರಿಕ್‌ ಡೇನ್‌ಬೊಸ್ಟಲ್‌ ಮತ್ತು ಕ್ಲಾಡ್‌ ಲಿಂಡ್ಸೆ ಕಾಂಗೋ ರಾಜಧಾನಿಯಾಗಿದ್ದ ಕಿನ್ಶಾಸಾಕ್ಕೆ ಪ್ರಯಾಣಿಸಿದೆವು.

ಮಿಷನರಿ ಸೇವೆಯಲ್ಲಿ ನಮಗೆ ಸಿಕ್ಕಿದ ಅಮೂಲ್ಯ ತರಬೇತಿ

ನಾವು ಕಿನ್ಶಾಸಾಕ್ಕೆ ಬಂದ ಮೇಲೆ ಮೂರು ತಿಂಗಳು ಫ್ರೆಂಚ್‌ ಭಾಷೆಯನ್ನು ಕಲಿತೆವು. ನಂತರ ಲುಬುಂಬಾಶಿಗೆ ಹೋದೆವು. ಅದನ್ನು ಹಿಂದೆ ಇಲಿಜಬತ್‌ವಿಲ್‌ ಎಂದು ಕರೆಯುತ್ತಿದ್ದರು. ಇದು ಕಾಂಗೋದ ದಕ್ಷಿಣ ಭಾಗ ಅಂದರೆ ಜಬಿಯದ ಗಡಿ ಭಾಗದ ಹತ್ತಿರ ಇತ್ತು. ಲುಬುಂಬಾಶಿ ಪಟ್ಟಣದ ಮಧ್ಯಭಾಗದಲ್ಲಿದ್ದ ಮಿಷನರಿ ಗೃಹಕ್ಕೆ ನಾವು ಸ್ಥಳಾಂತರಿಸಿದೆವು.

ಲುಬುಂಬಾಶಿಯ ಹೆಚ್ಚಿನ ಕ್ಷೇತ್ರಗಳಲ್ಲಿ ಯಾರೂ ಸುವಾರ್ತೆ ಸಾರಿರಲಿಲ್ಲ, ಹಾಗಾಗಿ ಅಲ್ಲಿನ ಜನರಿಗೆ ಮೊದಲ ಬಾರಿಗೆ ಸಾರುವ ಅವಕಾಶ ನಮಗೆ ಸಿಕ್ಕಿತು. ಸ್ವಲ್ಪದರಲ್ಲೇ ತುಂಬ ಜನರು ಬೈಬಲ್‌ ಕಲಿಯಲು ಒಪ್ಪಿಕೊಂಡರು. ಆದರೆ ಅವರೆಲ್ಲರಿಗೆ ಕಲಿಸಲು ನಮಗೆ ಸಮಯ ಸಾಕಾಗುತ್ತಿರಲಿಲ್ಲ. ಅಲ್ಲಿನ ಪೊಲೀಸ್‌ ಅಧಿಕಾರಿಗಳಿಗೂ ನಾವು ಸುವಾರ್ತೆ ಸಾರಿದೆವು. ಅನೇಕರು ಬೈಬಲನ್ನು ಮತ್ತು ನಮ್ಮ ಸಾರುವ ಕೆಲಸವನ್ನು ತುಂಬ ಗೌರವಿಸಿದರು. ಅಲ್ಲಿನ ಜನರು ಹೆಚ್ಚಾಗಿ ಸ್ವಾಹೀಲಿ ಭಾಷೆ ಮಾತಾಡುತ್ತಿದ್ದರು. ಹಾಗಾಗಿ ಕ್ಲಾಡ್‌ ಲಿಂಡ್ಸೆ ಮತ್ತು ನಾನು ಆ ಭಾಷೆ ಕಲಿತೆವು. ನಂತರ ನಮ್ಮನ್ನು ಸ್ವಾಹೀಲಿ ಭಾಷೆಯ ಸಭೆಗೆ ಕಳುಹಿಸಲಾಯಿತು. ಆದರೆ ಕೆಲವು ಸವಾಲುಗಳು ಬಂದವು.

ಕಂಠಪೂರ್ತಿ ಕುಡಿದು ಗನ್‌ ಸಮೇತ ಬರುತ್ತಿದ್ದ ಮಿಲಿಟರಿ ಸೈನಿಕರು, ಕೋಪಿಷ್ಠ ಪೊಲೀಸ್‌ ಅಧಿಕಾರಿಗಳು ಆಗಾಗ ನಮ್ಮ ಮೇಲೆ ಸುಮ್ಮಸುಮ್ಮನೆ ಸುಳ್ಳು ಆರೋಪಗಳನ್ನು ಹಾಕುತ್ತಿದ್ದರು. ಒಂದು ಸಲ ಮಿಷನರಿ ಗೃಹದಲ್ಲಿ ಕೂಟ ನಡೆಯುತ್ತಿದ್ದಾಗ ಗನ್‌ ಹಿಡುಕೊಂಡಿದ್ದ ಪೊಲೀಸರು ಇದ್ದಕ್ಕಿದ್ದಂತೆ ಒಳಗೆ ನುಗ್ಗಿಬಿಟ್ಟರು. ನಮ್ಮಲ್ಲಿದ್ದ ಗಂಡಸರನ್ನೆಲ್ಲ ಸೆಂಟ್ರಲ್‌ ಪೊಲೀಸ್‌ ಸ್ಟೇಷನ್‌ಗೆ ಕರಕೊಂಡು ಹೋದರು. ಅಲ್ಲಿ ನಮ್ಮನ್ನು ರಾತ್ರಿ ಸುಮಾರು ಹತ್ತು ಗಂಟೆಯವರೆಗೂ ನೆಲದ ಮೇಲೆನೇ ಕೂರಿಸಿದ್ದರು. ಆಮೇಲೆ ಕಳಿಸಿದರು.

1969​ರಲ್ಲಿ ನನಗೆ ಸಂಚರಣ ಮೇಲ್ವಿಚಾರಕನಾಗಿ ಹೊಸ ನೇಮಕ ಸಿಕ್ಕಿತು. ಈ ನೇಮಕದಲ್ಲಿ ನಾನು ಕೆಲವು ಸಲ ಕೆಸರಿನಲ್ಲಿ, ಉದ್ದುದ್ದ ಬೆಳೆದಿರುತ್ತಿದ್ದ ಹುಲ್ಲಿನ ಮಧ್ಯೆ ತುಂಬ ದೂರ ನಡಕೊಂಡು ಹೋಗಬೇಕಿತ್ತು. ಇವೆಲ್ಲ ಆಫ್ರಿಕದಲ್ಲಿ ಮಾಮೂಲಿ. ಒಂದು ಹಳ್ಳಿಯ ಮನೆಯಲ್ಲಿ ಉಳುಕೊಂಡಾಗ ನನ್ನ ಮಂಚದಡಿ ಕೋಳಿ ಮತ್ತು ಕೋಳಿಮರಿಗಳು ಮಲಗಿದ್ದವು. ಇನ್ನೂ ಬೆಳಕಾಗಿರಲಿಲ್ಲ. ಅಷ್ಟರಲ್ಲೇ ಆ ಕೋಳಿ ಎಷ್ಟು ಜೋರಾಗಿ ಕೂಗಿತೆಂದರೆ ನಾನು ದಡಬಡಿಸಿ ಎದ್ದುಬಿಟ್ಟೆ. ಆ ಕೂಗನ್ನು ನಾನು ಯಾವತ್ತೂ ಮರೆಯಲ್ಲ. ಕೆಲವೊಂದು ರಾತ್ರಿಗಳಲ್ಲಿ ಬೆಂಕಿ ಹಾಕಿಕೊಂಡು ಅದರ ಸುತ್ತ ನಾನೂ ಸಹೋದರರು ಕೂತುಕೊಂಡು ಬೈಬಲ್‌ ವಿಷಯಗಳ ಬಗ್ಗೆ ಮಾತಾಡುತ್ತಾ ಆನಂದಿಸುತ್ತಿದ್ವಿ. ಆ ಸವಿನೆನಪುಗಳು ಈಗಲೂ ನನ್ನ ಮನಸ್ಸಿಗೆ ಬರುತ್ತವೆ.

ಇನ್ನೊಂದು ದೊಡ್ಡ ಸವಾಲೂ ಎದುರಾಯಿತು. ಕಿಟಾವಾಲಾ ಚಳುವಳಿ * ಮಾಡುತ್ತಿದ್ದ ಕೆಲವರು ಸಭೆಗೆ ಬಂದರು. ಅವರಲ್ಲಿ ಕೆಲವರು ದೀಕ್ಷಾಸ್ನಾನ ಪಡಕೊಂಡರು, ಸಭೆಯಲ್ಲಿ ಹಿರಿಯರೂ ಆದರು. ಆದರೆ ‘ಅಗೋಚರ ಬಂಡೆಗಳಂತಿದ್ದ’ ಅವರ ಬಗ್ಗೆ ಸಭೆಯಲ್ಲಿದ್ದ ನಂಬಿಗಸ್ತ ಸಹೋದರ-ಸಹೋದರಿಯರಿಗೆ ಚೆನ್ನಾಗಿ ಗೊತ್ತಾಯಿತು. ಅವರ ನಾಟಕಗಳನ್ನೆಲ್ಲ ಬಯಲಿಗೆಳೆದರು. (ಯೂದ 12) ಆ ಜನರನ್ನು ಯೆಹೋವನು ಸಭೆಯಿಂದ ಹೊರಗೆ ಹಾಕಿ ಶುದ್ಧಮಾಡಿದನು. ಅದಾದ ನಂತರ ಹೆಚ್ಚೆಚ್ಚು ಜನರು ಸತ್ಯಕ್ಕೆ ಬಂದರು.

1971​ರಲ್ಲಿ ನನ್ನನ್ನು ಕಿನ್ಶಾಸಾದ ಶಾಖಾ ಕಚೇರಿಗೆ ನೇಮಿಸಲಾಯಿತು. ಅಲ್ಲಿ ಅನೇಕ ಇಲಾಖೆಗಳಲ್ಲಿ ಕೆಲಸ ಮಾಡಿದೆ. ಉದಾಹರಣೆಗೆ, ಕರೆಸ್ಪಾಂಡೆನ್ಸ್‌, ಸಾಹಿತ್ಯ ಮತ್ತು ಸೇವಾ ಇಲಾಖೆಗಳಿಗೆ ಸಂಬಂಧಪಟ್ಟ ಕೆಲಸಗಳನ್ನು ನಾನು ಮಾಡಿದೆ. ಮೂಲಭೂತ ವ್ಯವಸ್ಥೆ-ಸೌಕರ್ಯಗಳೂ ಸರಿಯಾಗಿ ಇರದಂಥ ದೊಡ್ಡ ದೇಶದಲ್ಲಿ ನಮ್ಮ ಕೆಲಸವನ್ನು ಹೇಗೆ ವ್ಯವಸ್ಥಿತವಾಗಿ ಮಾಡಬಹುದು ಅನ್ನುವುದನ್ನು ನಾನು ಬೆತೆಲ್‌ನಲ್ಲಿ ಕಲಿತೆ. ಕೆಲವೊಮ್ಮೆ ಪತ್ರಗಳು ಸಭೆಗಳಿಗೆ ತಲುಪಲು ತಿಂಗಳುಗಳೇ ಹಿಡಿಯುತ್ತಿತ್ತು. ಅಂಚೆಪತ್ರಗಳನ್ನು ವಿಮಾನದಿಂದ ತೆಗೆದು ದೋಣಿಗಳಿಗೆ ಸಾಗಿಸಬೇಕಿತ್ತು. ಆದರೆ ನೀರಲ್ಲಿ ದಟ್ಟವಾಗಿ ಬೆಳೆಯುತ್ತಿದ್ದ ಹಯಸಿಂತ್‌ ಅನ್ನೋ ಕಳೆಗಿಡಗಳಿಗೆ ದೋಣಿಗಳು ಸಿಕ್ಕಿಹಾಕಿಕೊಂಡು ವಾರಗಟ್ಟಲೆ ಅಲ್ಲೇ ನಿಂತುಕೊಂಡು ಬಿಡುತ್ತಿದ್ದವು. ಇಂಥ ಸವಾಲುಗಳಿದ್ದರೂ ಕೆಲಸ ಅಂತೂ ನಿಂತು ಹೋಗಲಿಲ್ಲ.

ಸ್ವಲ್ಪ ಹಣದಿಂದಲೇ ನಮ್ಮ ಸಹೋದರರು ದೊಡ್ಡ-ದೊಡ್ಡ ಅಧಿವೇಶನಗಳನ್ನು ಏರ್ಪಡಿಸುತ್ತಿದ್ದ ರೀತಿ ನೋಡಿ ನನಗೆ ಅಬ್ಬಾ! ಅಂತ ಅನಿಸುತ್ತಿತ್ತು. ಅವರು ಹುತ್ತದ ಮಣ್ಣಿಂದ ವೇದಿಕೆಯನ್ನು ಮಾಡುತ್ತಿದ್ದರು, ಆನೆ ಹುಲ್ಲನ್ನು ಗೋಡೆ ತರ ಜೋಡಿಸುತ್ತಿದ್ದರು ಮತ್ತು ಅದನ್ನು ಮೆತ್ತನೆಯ ನೆಲಹಾಸು ತರಾನೂ ಮಾಡುತ್ತಿದ್ದರು. ಬಿದಿರು ಕಂಬಗಳನ್ನು ಆಧಾರವಾಗಿಟ್ಟು, ಲಾಳಕಡ್ಡಿಗಳಿಂದ ಮೇಲ್ಛಾವಣಿಯನ್ನು ಹೊದಿಸುತ್ತಿದ್ದರು, ಅದರಿಂದ ಮೇಜುಗಳನ್ನೂ ತಯಾರಿಸುತ್ತಿದ್ದರು. ಅವರು ಮರದ ತೊಗಟೆಯನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಅದನ್ನು ಮೊಳೆಗಳ ತರ ಬಳಸುತ್ತಿದ್ದರು. ಹೆಚ್ಚು ಖರ್ಚಿಲ್ಲದೆ ಇಂಥ ಏರ್ಪಾಡುಗಳನ್ನು ಮಾಡುತ್ತಿದ್ದ ನಮ್ಮ ಸಹೋದರ-ಸಹೋದರಿಯರ ಜಾಣತನ ನನಗೆ ತುಂಬ ಇಷ್ಟ ಆಗುತ್ತಿತ್ತು. ಅವರ ಮೇಲೆ ನನಗಿದ್ದ ಪ್ರೀತಿ ಇನ್ನೂ ಹೆಚ್ಚಾಯಿತು. ನನಗೆ ಇನ್ನೊಂದು ಹೊಸ ನೇಮಕ ಸಿಕ್ಕಿದಾಗ ಅವರೆಲ್ಲರನ್ನು ಬಿಟ್ಟುಬರಕ್ಕೆ ತುಂಬ ಕಷ್ಟ ಆಯಿತು!

ಕೀನ್ಯದಲ್ಲಿ ಮಾಡಿದ ಸೇವೆ

1974​ರಲ್ಲಿ ನಾನು ಕೀನ್ಯದ ನೈರೋಬಿಯಲ್ಲಿದ್ದ ಶಾಖಾ ಕಚೇರಿಗೆ ನೇಮಿಸಲಾಯಿತು. ಅಲ್ಲಿ ತುಂಬನೇ ಕೆಲಸ ಇರುತ್ತಿತ್ತು. ಯಾಕೆಂದರೆ ಕೀನ್ಯದ ಸುತ್ತಮುತ್ತಲಿದ್ದ ಹತ್ತು ದೇಶಗಳ ಮೇಲ್ವಿಚಾರಣೆಯನ್ನು ಕೀನ್ಯ ಶಾಖಾ ಕಚೇರಿ ಮಾಡಬೇಕಿತ್ತು. ಅದರಲ್ಲಿ ಕೆಲವು ದೇಶಗಳಲ್ಲಿ ನಮ್ಮ ಕೆಲಸದ ಮೇಲೆ ನಿಷೇಧವಿತ್ತು. ನನ್ನನ್ನು ಆಗಾಗ ಆ ದೇಶಗಳಿಗೆ ಕಳುಹಿಸುತ್ತಿದ್ದರು. ಅದರಲ್ಲೂ ಇಥಿಯೋಪಿಯಗೆ ಅನೇಕ ಸಲ ಹೋಗಿದ್ದೆ. ಅಲ್ಲಿದ್ದ ನಮ್ಮ ಸಹೋದರರು ಹಿಂಸೆ, ವಿರೋಧ ಎದುರಿಸುತ್ತಿದ್ದರು. ಅವರಲ್ಲಿ ಅನೇಕರನ್ನು ತುಂಬ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದರು ಅಥವಾ ಜೈಲಿಗೆ ಹಾಕುತ್ತಿದ್ದರು. ಕೆಲವರನ್ನು ಕೊಂದೇ ಬಿಟ್ಟರು. ಆದರೆ ನಮ್ಮ ಸಹೋದರರಿಗೆ ಯೆಹೋವನ ಜೊತೆ ಮತ್ತು ಬೇರೆಯವರ ಜೊತೆ ಒಳ್ಳೇ ಸಂಬಂಧ ಇದ್ದದರಿಂದ ತಮಗೆ ಬಂದ ಪರೀಕ್ಷೆಗಳನ್ನು ನಂಬಿಗಸ್ತಿಕೆಯಿಂದ ಎದುರಿಸಿದರು.

1980​ರಲ್ಲಿ ನನ್ನ ಜೀವನದಲ್ಲಿ ತುಂಬ ಖುಷಿ ಕೊಡುವಂಥ ಒಂದು ವಿಷಯ ನಡೆಯಿತು. ನಾನು ಗೇಲ್‌ ಮ್ಯಾಥ್‌ಸನ್‌ ಎಂಬ ಸಹೋದರಿಯನ್ನು ಮದುವೆಯಾದೆ. ಗೇಲ್‌ ಕೆನಡದವಳು. ಗಿಲ್ಯಡ್‌ ಶಾಲೆಯಲ್ಲಿ ಅವಳು ನನ್ನ ಕ್ಲಾಸ್‌ಮೇಟ್‌ ಆಗಿದ್ದಳು. ನಾವಿಬ್ಬರೂ ಆಗಾಗ ಒಬ್ಬರಿಗೊಬ್ಬರು ಪತ್ರ ಬರೆಯುತ್ತಿದ್ದೆವು. ಗೇಲ್‌ ಬೊಲಿವಿಯದಲ್ಲಿ ಮಿಷನರಿ ಸೇವೆ ಮಾಡುತ್ತಿದ್ದಳು. 12 ವರ್ಷಗಳ ನಂತರ ನಾವಿಬ್ಬರು ನ್ಯೂಯಾರ್ಕ್‌ನಲ್ಲಿ ಮತ್ತೆ ಭೇಟಿಯಾದೆವು. ಸ್ವಲ್ಪದರಲ್ಲೇ ನಾವು ಕೀನ್ಯದಲ್ಲಿ ಮದುವೆ ಮಾಡಿಕೊಂಡೆವು. ಗೇಲ್‌ಳ ಆಧ್ಯಾತ್ಮಿಕ ಒಳನೋಟ ಮತ್ತು ತನಗೆ ಇದ್ದದ್ದರಲ್ಲೇ ಸಂತೃಪ್ತಿಯನ್ನು ಕಂಡುಕೊಳ್ಳುವ ಮನೋಭಾವ ನನಗೆ ತುಂಬಾನೇ ಇಷ್ಟ. ಈಗಲೂ ನನಗೆ ಅದೇ ಬೆಂಬಲ, ಸಹಕಾರ ಅವಳಿಂದ ಸಿಗುತ್ತಿದೆ.

1986​ರಲ್ಲಿ ನಮಗೆ ಸಂಚರಣ ಕೆಲಸದ ನೇಮಕ ಸಿಕ್ಕಿತು. ಅದೇ ಸಮಯದಲ್ಲಿ ನಾನು ಶಾಖಾ ಕಚೇರಿ ಸಮಿತಿಯ ಸದಸ್ಯನಾಗಿ ಸೇವೆ ಮಾಡಿದೆ. ಸಂಚರಣ ಕೆಲಸದ ಕ್ಷೇತ್ರದಲ್ಲಿ ಕೀನ್ಯ ಶಾಖಾ ಕಚೇರಿ ಉಸ್ತುವಾರಿಯ ಕೆಳಗೆ ಇದ್ದ ಅನೇಕ ದೇಶಗಳು ಸೇರಿದ್ದವು.

ಅಸ್ಮಾರಾದ ಅಧಿವೇಶನದಲ್ಲಿ ಭಾಷಣ ಕೊಡುತ್ತಿರುವುದು, 1992

1992​ರಲ್ಲಿ ಅಸ್ಮಾರಾದಲ್ಲಿ (ಎರಿಟ್ರೀಯ) ಅಧಿವೇಶನಕ್ಕೆ ಸಿದ್ಧಪಡಿಸಿದ್ದನ್ನು ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ. ಆಗಿನ್ನೂ ಅಲ್ಲಿ ನಮ್ಮ ಕೆಲಸದ ಮೇಲೆ ನಿಷೇಧವಿರಲಿಲ್ಲ. ಅಧಿವೇಶನಕ್ಕೆ ಸಿದ್ಧಪಡಿಸಿದ್ದು ಒಂದು ಅದ್ಭುತನೇ ಅಂತ ಹೇಳಬಹುದು. ಏನಾಯಿತೆಂದರೆ ಅಧಿವೇಶನಕ್ಕೆ ನಮಗೆ ಸಿಕ್ಕಿದ್ದ ಸ್ಥಳ ಧಾನ್ಯಗಳನ್ನು ಶೇಖರಿಸಿಡುವ ಒಂದು ಗೋದಾಮು ಆಗಿತ್ತು. ಬೇರೆ ಯಾವ ಸ್ಥಳನೂ ನಮಗೆ ಸಿಗಲಿಲ್ಲ. ಹೊರಗೆ ನೋಡಕ್ಕೆ ಅಷ್ಟೇನು ಚೆನ್ನಾಗಿಲ್ಲದ ಆ ಕಣಜ ಒಳಗಂತೂ ಇನ್ನೂ ಗಲೀಜಾಗಿತ್ತು! ಆದರೆ ಅಧಿವೇಶನದ ದಿನ ಬರುವಷ್ಟರೊಳಗೆ ನಮ್ಮ ಸಹೋದರರು ಆ ಸ್ಥಳವನ್ನು ಯೆಹೋವನನ್ನು ಆರಾಧಿಸುವುದಕ್ಕೆ ಯೋಗ್ಯವಾಗಿರುವ ಸ್ಥಳದ ತರ ಪೂರ್ತಿ ಬದಲಾಯಿಸಿಬಿಟ್ಟಿದ್ದರು. ನನಗಂತೂ ಆಶ್ಚರ್ಯನೋ ಆಶ್ಚರ್ಯ. ಅನೇಕರು ತಮ್ಮ ಮನೆಯಿಂದ ಚೆನ್ನಾಗಿರುವ ಬಟ್ಟೆಗಳನ್ನು ತಂದು ಎಲ್ಲೆಲ್ಲಾ ಗಲೀಜಾಗಿ ಕಾಣುತ್ತಿತ್ತೋ ಅದನ್ನೆಲ್ಲ ನೀಟಾಗಿ ಮುಚ್ಚಿದರು. 1,279 ಜನ ಆ ಅಧಿವೇಶನಕ್ಕೆ ಹಾಜರಾದರು. ನಾವಂತೂ ತುಂಬಾನೇ ಆನಂದಿಸಿದ್ವಿ.

ಸಂಚರಣ ಕೆಲಸದಲ್ಲಿ ನಾವು ಉಳುಕೊಳ್ಳುತ್ತಿದ್ದ ಸ್ಥಳ ಪ್ರತಿವಾರನೂ ಬೇರೆ ಬೇರೆ ತರ ಇರುತ್ತಿತ್ತು. ನಾವು ಸಮುದ್ರ ತೀರದಲ್ಲೇ ಇರುತ್ತಿದ್ದ ಐಷಾರಾಮಿ ಬಂಗಲೆಯಲ್ಲೂ ಉಳುಕೊಂಡಿದ್ದೇವೆ, ಕೆಲಸಗಾರರ ಕ್ಯಾಂಪ್‌ನಲ್ಲಿ ಶೀಟ್‌ಗಳಲ್ಲೇ ಕಟ್ಟಿದ ಮನೆಗಳಲ್ಲೂ ಉಳುಕೊಂಡಿದ್ದೇವೆ. ಅಲ್ಲಿ ಶೌಚಾಲಯ 300 ಅಡಿ (100 ಮೀ) ದೂರದಲ್ಲಿ ಇರುತ್ತಿತ್ತು. ಆದರೆ ಇಂಥ ಸವಾಲುಗಳು ಹುರುಪಿನ ಪಯನೀಯರ್‌ಗಳ ಜೊತೆ, ಪ್ರಚಾರಕರ ಜೊತೆ ಇಡೀ ದಿನ ಸೇವೆಯಲ್ಲಿ ಕಳೆದು ಪಡಕೊಳ್ಳುತ್ತಿದ್ದ ಸಂತೋಷದ ಮುಂದೆ ಏನೇನೂ ಆಗಿರಲಿಲ್ಲ. ನಮಗೆ ಬೇರೆ ನೇಮಕ ಸಿಕ್ಕಿದಾಗ ಇಲ್ಲಿನ ನಮ್ಮ ಪ್ರೀತಿಯ ಸ್ನೇಹಿತರನ್ನು ಬಿಟ್ಟು ಹೋಗಬೇಕಾಗಿ ಬಂತು. ಅವರನ್ನೆಲ್ಲ ತುಂಬ ನೆನಸಿಕೊಳ್ಳುತ್ತೇವೆ.

ಇಥಿಯೋಪಿಯದಲ್ಲಿ ಸಿಕ್ಕಿದ ಆಶೀರ್ವಾದಗಳು

1987​ರಿಂದ 1992ರೊಳಗೆ ಕೀನ್ಯ ಶಾಖಾ ಕಚೇರಿ ಉಸ್ತುವಾರಿಯ ಕೆಳಗಿದ್ದ ಅನೇಕ ದೇಶಗಳಲ್ಲಿ ನಮ್ಮ ಕೆಲಸಕ್ಕೆ ಕಾನೂನಿನ ಮನ್ನಣೆ ಸಿಕ್ಕಿತು. ಇದರಿಂದಾಗಿ ಆಯಾ ದೇಶಗಳಲ್ಲಿ ಪ್ರತ್ಯೇಕ ಶಾಖಾ ಕಚೇರಿಗಳನ್ನು ಮತ್ತು ಕಂಟ್ರಿ ಆಫೀಸ್‌ಗಳನ್ನು ಸ್ಥಾಪಿಸಲಾಯಿತು. 1993​ರಲ್ಲಿ ನಮ್ಮನ್ನು ಇಥಿಯೋಪಿಯದ ಆ್ಯಡಿಸ್‌ ಆ್ಯಬಬದಲ್ಲಿದ್ದ ಕಂಟ್ರಿ ಆಫೀಸ್‌ನಲ್ಲಿ ಸೇವೆ ಮಾಡಲು ನೇಮಿಸಲಾಯಿತು. ಅಲ್ಲಿ ಅನೇಕ ವರ್ಷಗಳವರೆಗೆ ನಮ್ಮ ಕೆಲಸವನ್ನು ರಹಸ್ಯವಾಗಿ ಮಾಡಲಾಗುತ್ತಿತ್ತು, ಆದರೆ ಈಗ ಕಾನೂನಿನ ಒಪ್ಪಿಗೆ ಸಿಕ್ಕಿತ್ತು.

ಇಥಿಯೋಪಿಯದ ಗ್ರಾಮಗಳಲ್ಲಿ ಸಂಚರಣ ಕೆಲಸ ಮಾಡುವಾಗ, 1996

ಇಥಿಯೋಪಿಯದಲ್ಲಿ ನಡೆಯುತ್ತಿದ್ದ ನಮ್ಮ ಕೆಲಸವನ್ನು ಯೆಹೋವನು ಆಶೀರ್ವದಿಸಿದನು. ಅನೇಕ ಸಹೋದರ-ಸಹೋದರಿಯರು ಪಯನೀಯರ್‌ ಸೇವೆ ಶುರುಮಾಡಿದರು. 2012​ರಿಂದ 20 ಶೇಕಡದಷ್ಟು ಪ್ರಚಾರಕರು ಪಯನೀಯರ್‌ಗಳು ಆಗಿದ್ದಾರೆ. ಅಷ್ಟೇ ಅಲ್ಲದೆ, ಬೈಬಲ್‌ ಶಾಲೆಗಳನ್ನು ಏರ್ಪಡಿಸಲಾಗಿದೆ ಮತ್ತು ಸುಮಾರು 120 ರಾಜ್ಯ ಸಭಾಗೃಹಗಳನ್ನು ಕಟ್ಟಲಾಗಿದೆ. 2004​ರಲ್ಲಿ ಬೆತೆಲ್‌ ಕುಟುಂಬ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿತು. ಅದೇ ಸ್ಥಳದಲ್ಲಿ ಸಮ್ಮೇಳನ ಸಭಾಂಗಣವನ್ನು ಸಹ ಕಟ್ಟಲಾಯಿತು. ಇದು ಕೂಡ ಒಂದು ದೊಡ್ಡ ಆಶೀರ್ವಾದವೇ!

ಇಥಿಯೋಪಿಯದ ನಮ್ಮ ಸಹೋದರ-ಸಹೋದರಿಯರು ನನಗೆ ಮತ್ತು ಗೇಲ್‌ಗೆ ಅನೇಕ ವರ್ಷಗಳಿಂದ ಆಪ್ತ ಸ್ನೇಹಿತರಾಗಿದ್ದಾರೆ. ಅವರು ತೋರಿಸುವ ದಯೆ, ಪ್ರೀತಿ ನಮಗೆ ತುಂಬಾನೇ ಇಷ್ಟ. ನಮ್ಮಿಬ್ಬರಿಗೆ ಇತ್ತೀಚೆಗೆ ಆರೋಗ್ಯ ಅಷ್ಟು ಚೆನ್ನಾಗಿಲ್ಲದ ಕಾರಣ ನಾವು ಈಗ ಸೆಂಟ್ರಲ್‌ ಯುರೋಪಿನ ಶಾಖಾ ಕಚೇರಿಯಲ್ಲಿದ್ದೇವೆ. ನಮ್ಮನ್ನು ಇಲ್ಲಿರುವವರು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಆದರೂ ಇಥಿಯೋಪಿಯದಲ್ಲಿನ ನಮ್ಮ ಪ್ರೀತಿಯ ಸ್ನೇಹಿತರು ತುಂಬ ನೆನಪಾಗುತ್ತಾರೆ.

ಯೆಹೋವನು ಮಾಡಿದ ಅಭಿವೃದ್ಧಿ

ಯೆಹೋವನು ತನ್ನ ಕೆಲಸವನ್ನು ಹೇಗೆ ಅಭಿವೃದ್ಧಿ ಮಾಡಿದ್ದಾನೆ ಅಂತ ನಾವು ಕಣ್ಣಾರೆ ನೋಡಿದ್ದೇವೆ. (1 ಕೊರಿಂ. 3:6, 9) ಉದಾಹರಣೆಗೆ, ತಾಮ್ರದ ಗಣಿಗಾರಿಕೆ ಮಾಡಲು ರುವಾಂಡದಿಂದ ಕಾಂಗೋಗೆ ಬಂದ ಕೆಲಸಗಾರರಿಗೆ ನಾನು ಸಾರಲು ಆರಂಭಿಸಿದಾಗ ರುವಾಂಡದಲ್ಲಿ ಪ್ರಚಾರಕರು ಇರಲಿಲ್ಲ. ಆದರೆ ಈಗ ಅಲ್ಲಿ 30,000ಕ್ಕೂ ಹೆಚ್ಚು ಸಹೋದರ-ಸಹೋದರಿಯರಿದ್ದಾರೆ. 1967​ರಲ್ಲಿ ಕಾಂಗೋದಲ್ಲಿ 6,000 ಪ್ರಚಾರಕರಿದ್ದರು. ಆದರೆ ಈಗ ಸುಮಾರು 2,30,000 ಪ್ರಚಾರಕರಿದ್ದಾರೆ. 2018​ರಲ್ಲಿ ಹತ್ತು ಲಕ್ಷಕ್ಕಿಂತ ಹೆಚ್ಚಿನ ಜನ ಸ್ಮರಣೆಗೆ ಹಾಜರಾದರು. ಹಿಂದೆ ಕೀನ್ಯ ಶಾಖಾ ಕಚೇರಿಯ ಕೆಳಗಿದ್ದ ದೇಶಗಳಲ್ಲಿರುವ ಪ್ರಚಾರಕರ ಸಂಖ್ಯೆ ಈಗ 1 ಲಕ್ಷ ದಾಟಿದೆ.

ಸುಮಾರು 50 ವರ್ಷದ ಹಿಂದೆ ನಾನು ಪೂರ್ಣ ಸಮಯದ ಸೇವೆ ಮಾಡಬೇಕೆಂದು ತೀರ್ಮಾನಿಸಲು ಯೆಹೋವನು ಅನೇಕ ಸಹೋದರರ ಮೂಲಕ ಪ್ರೋತ್ಸಾಹಿಸಿದನು. ಈಗಲೂ ನನಗೆ ನಾಚಿಕೆ, ಹಿಂಜರಿಕೆ ಸ್ವಭಾವ ಇದೆ, ಆದರೆ ಯೆಹೋವನಲ್ಲಿ ಸಂಪೂರ್ಣ ಭರವಸೆ ಇಡಲು ಕಲಿತಿದ್ದೇನೆ. ಆಫ್ರಿಕದಲ್ಲಿ ನನಗೆ ಆದ ಅನುಭವದಿಂದ ತಾಳ್ಮೆ ಮತ್ತು ಇರುವುದರಲ್ಲೇ ಸಂತೃಪ್ತಿಯನ್ನು ಕಂಡುಕೊಳ್ಳುವ ಗುಣವನ್ನು ಬೆಳೆಸಿಕೊಳ್ಳಲು ಸಹಾಯ ಸಿಕ್ಕಿತು. ಅತಿಥಿಸತ್ಕಾರ ಮಾಡಿದ, ದೊಡ್ಡ ಸಮಸ್ಯೆಗಳನ್ನೂ ತಾಳಿಕೊಂಡ, ಯೆಹೋವನಲ್ಲಿ ಪೂರ್ಣ ಭರವಸೆಯಿಟ್ಟ ನಮ್ಮ ಪ್ರೀತಿಯ ಸಹೋದರ-ಸಹೋದರಿಯರನ್ನು ನಾನು ಮತ್ತು ಗೇಲ್‌ ಈಗಲೂ ನೆನಪಿಸಿಕೊಳ್ಳುತ್ತೇವೆ. ಯೆಹೋವನ ಅಪಾತ್ರ ದಯೆಗೆ ನಾನು ಆಭಾರಿ. ನಿಜವಾಗಲೂ, ನಾನು ಯಾವತ್ತಿಗೂ ನಿರೀಕ್ಷಿಸಿರದ ವಿಷಯಗಳನ್ನು ಕೊಟ್ಟು ಯೆಹೋವನು ನನ್ನನ್ನು ಆಶೀರ್ವದಿಸಿದ್ದಾನೆ!—ಕೀರ್ತ. 37:4.

^ ಪ್ಯಾರ. 11 ನಂತರ ಇದಕ್ಕೆ ನಮ್ಮ ರಾಜ್ಯ ಸೇವೆ ಎಂಬ ಹೆಸರು ಬಂತು. ಈಗ ಇದರ ಬದಲಿಗೆ ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ ಇದೆ.

^ ಪ್ಯಾರ. 23 “ಕಿಟಾವಾಲಾ” ಅನ್ನುವುದು ಸ್ವಾಹೀಲಿ ಪದ. ಅದರ ಅರ್ಥ “ಅಧಿಕಾರ ಚಲಾಯಿಸುವುದು, ನಿರ್ದೇಶಿಸುವುದು ಅಥವಾ ಆಳ್ವಿಕೆ ಮಾಡುವುದು.” ಇದು ರಾಜಕೀಯ ಚಳುವಳಿಯಾಗಿತ್ತು. ಬೆಲ್ಜಿಯಂನ ಆಡಳಿತದಿಂದ ಸ್ವಾತಂತ್ರ್ಯ ಹೊಂದುವುದೇ ಈ ಚಳುವಳಿಯ ಮುಖ್ಯ ಗುರಿ. ಕಿಟಾವಾಲಾ ಗುಂಪಿನಲ್ಲಿದ್ದವರು ಯೆಹೋವನ ಸಾಕ್ಷಿಗಳ ಪ್ರಕಾಶನಗಳನ್ನು ಪಡಕೊಂಡು ಅಧ್ಯಯನ ಮಾಡಿದರು, ಬೇರೆಯವರಿಗೂ ಕೊಟ್ಟರು. ತಮ್ಮ ರಾಜಕೀಯ ದೃಷ್ಟಿಕೋನವನ್ನು, ಮೂಢನಂಬಿಕೆಗಳಿಂದ ಕೂಡಿದ್ದಂಥ ಸಂಪ್ರದಾಯಗಳನ್ನು ಮತ್ತು ಅನೈತಿಕ ಜೀವನ ಶೈಲಿಯನ್ನು ಬೆಂಬಲಿಸುವುದಕ್ಕಾಗಿ ಬೈಬಲ್‌ ಬೋಧನೆಗಳನ್ನು ತಿರುಚಿದರು.