ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 29

“ಹೋಗಿ . . .  ಶಿಷ್ಯರನ್ನಾಗಿ ಮಾಡಿ”

“ಹೋಗಿ . . .  ಶಿಷ್ಯರನ್ನಾಗಿ ಮಾಡಿ”

“ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ.” —ಮತ್ತಾ. 28:19.

ಗೀತೆ 144 ಜೀವದ ಹೊಣೆ

ಕಿರುನೋಟ *

1-2. (ಎ) ಮತ್ತಾಯ 28:18-20​ರಲ್ಲಿರುವ ಯೇಸುವಿನ ಆಜ್ಞೆಗನುಸಾರ ಕ್ರೈಸ್ತ ಸಭೆಯ ಮುಖ್ಯ ಗುರಿ ಏನಾಗಿದೆ? (ಬಿ) ಈ ಲೇಖನದಲ್ಲಿ ಯಾವ ಪ್ರಶ್ನೆಗಳ ಬಗ್ಗೆ ಚರ್ಚಿಸಲಿದ್ದೇವೆ?

ಯೇಸುವಿಗೆ ಪುನರುತ್ಥಾನವಾದ ಮೇಲೆ ಆತನು ತನ್ನ ಶಿಷ್ಯರನ್ನು ಗಲಿಲಾಯದಲ್ಲಿದ್ದ ಬೆಟ್ಟಕ್ಕೆ ಕರೆದನು. ಅವರೆಲ್ಲರೂ ಆ ಜಾಗಕ್ಕೆ ಬಂದಾಗ ಯಾಕೆ ಯೇಸು ಕರೆದನು ಅನ್ನುವ ಕುತೂಹಲ ಇದ್ದಿರಬಹುದು. (ಮತ್ತಾ. 28:16) ಬಹುಶಃ ಯೇಸು “ಐನೂರಕ್ಕಿಂತಲೂ ಹೆಚ್ಚು ಮಂದಿ ಸಹೋದರರಿಗೆ ಕಾಣಿಸಿಕೊಂಡ” ಸಂದರ್ಭ ಇದೇ ಆಗಿರಬಹುದು. (1 ಕೊರಿಂ. 15:6) ಶಿಷ್ಯರನ್ನು ಯೇಸು ಯಾಕೆ ಅಲ್ಲಿಗೆ ಕರೆದನು? “ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂಬ ರೋಮಾಂಚಕ ಆಜ್ಞೆ ಕೊಡಲಿಕ್ಕಾಗಿಯೇ.—ಮತ್ತಾಯ 28:18-20 ಓದಿ.

2 ಯೇಸುವಿನ ಮಾತಿಗೆ ಕಿವಿಗೊಟ್ಟ ಶಿಷ್ಯರು ಒಂದನೇ ಶತಮಾನದ ಕ್ರೈಸ್ತ ಸಭೆಯ ಭಾಗವಾದರು. ಆ ಕ್ರೈಸ್ತ ಸಭೆಯ ಮುಖ್ಯ ಗುರಿ ಹೆಚ್ಚೆಚ್ಚು ಜನರನ್ನು ಕ್ರಿಸ್ತನ ಶಿಷ್ಯರನ್ನಾಗಿ * ಮಾಡುವುದೇ ಆಗಿತ್ತು. ಇಂದು ಭೂಮಿಯಾದ್ಯಂತ ಸತ್ಯ ಕ್ರೈಸ್ತರ ಸಾವಿರಾರು ಸಭೆಗಳಿವೆ. ಈ ಸಭೆಗಳ ಮುಖ್ಯ ಗುರಿಯೂ ಜನರನ್ನು ಶಿಷ್ಯರನ್ನಾಗಿ ಮಾಡುವುದೇ ಆಗಿದೆ. ಈ ಲೇಖನದಲ್ಲಿ ನಾವು ನಾಲ್ಕು ಪ್ರಶ್ನೆಗಳ ಬಗ್ಗೆ ಚರ್ಚಿಸಲಿದ್ದೇವೆ: ಶಿಷ್ಯರನ್ನಾಗಿ ಮಾಡುವ ಕೆಲಸ ಯಾಕೆ ತುಂಬ ಪ್ರಾಮುಖ್ಯ? ಈ ಕೆಲಸದಲ್ಲಿ ಏನೆಲ್ಲಾ ಒಳಗೂಡಿದೆ? ಶಿಷ್ಯರನ್ನಾಗಿ ಮಾಡುವ ಜವಾಬ್ದಾರಿ ಎಲ್ಲಾ ಕ್ರೈಸ್ತರಿಗೂ ಇದೆಯಾ? ಈ ಕೆಲಸ ಮಾಡುವಾಗ ನಮಗೆ ಯಾಕೆ ತಾಳ್ಮೆ ಇರಬೇಕು?

ಶಿಷ್ಯರನ್ನಾಗಿ ಮಾಡುವ ಕೆಲಸ ಯಾಕೆ ತುಂಬ ಪ್ರಾಮುಖ್ಯ?

3. ಯೋಹಾನ 14:6 ಮತ್ತು 17:3​ರ ಪ್ರಕಾರ ಶಿಷ್ಯರನ್ನಾಗಿ ಮಾಡುವ ಕೆಲಸ ಯಾಕೆ ತುಂಬ ಪ್ರಾಮುಖ್ಯ?

3 ಶಿಷ್ಯರನ್ನಾಗಿ ಮಾಡುವ ಕೆಲಸ ಯಾಕೆ ತುಂಬ ಪ್ರಾಮುಖ್ಯ? ಯಾಕೆಂದರೆ ಕ್ರಿಸ್ತನ ಶಿಷ್ಯರಿಗೆ ಮಾತ್ರ ದೇವರ ಸ್ನೇಹಿತರಾಗಲು ಸಾಧ್ಯ. ಅಷ್ಟೇ ಅಲ್ಲ, ಯಾರು ಕ್ರಿಸ್ತನನ್ನು ಹಿಂಬಾಲಿಸುತ್ತಾರೋ ಅವರಿಗೆ ಈಗ ಜೀವನದಲ್ಲಿ ಸುಧಾರಣೆ ಮಾಡಿಕೊಳ್ಳಲು ಆಗುತ್ತದೆ ಮತ್ತು ಮುಂದೆ ಸದಾಕಾಲ ಜೀವಿಸುವ ಅವಕಾಶ ಸಿಗುತ್ತದೆ. (ಯೋಹಾನ 14:6; 17:3 ಓದಿ.) ಹಾಗಾಗಿ ಯೇಸು ನಮಗೆ ಕೊಟ್ಟಿರುವ ಈ ಕೆಲಸ ತುಂಬನೇ ಮುಖ್ಯವಾಗಿದೆ. ಆದರೆ ಈ ಕೆಲಸ ನಮ್ಮಿಂದಾಗಿ ಮಾತ್ರ ನಡೆಯುವ ಕೆಲಸವಲ್ಲ. ಯಾಕೆಂದರೆ ಅಪೊಸ್ತಲ ಪೌಲನು ತನ್ನ ಬಗ್ಗೆ ಮತ್ತು ತನ್ನ ಕೆಲವು ಆಪ್ತ ಸಹವಾಸಿಗಳ ಬಗ್ಗೆ ಹೀಗೆ ಬರೆದನು: “ನಾವು ದೇವರ ಜೊತೆಕೆಲಸಗಾರರಾಗಿದ್ದೇವೆ.” (1 ಕೊರಿಂ. 3:1-9) ಅಪರಿಪೂರ್ಣ ಮನುಷ್ಯರಾದ ನಮಗೆ ಯೆಹೋವನು ಮತ್ತು ಕ್ರಿಸ್ತನು ಎಂಥ ಸುಯೋಗವನ್ನು ಕೊಟ್ಟಿದ್ದಾರೆ!

4. ಇವಾನ್‌ ಮತ್ತು ಮ್ಯಾಟಿಲ್ಡೇ ಅವರ ಅನುಭವದಿಂದ ನಾವೇನು ಕಲಿಯಬಹುದು?

4 ಶಿಷ್ಯರನ್ನಾಗಿ ಮಾಡುವ ಕೆಲಸದಿಂದ ನಮಗೆ ತುಂಬ ಆನಂದ ಸಿಗುತ್ತದೆ. ಹೇಗೆ ಹೇಳಬಹುದು? ಉದಾಹರಣೆಗೆ, ಕೊಲಂಬಿಯದಲ್ಲಿರುವ ಇವಾನ್‌ ಮತ್ತು ಅವರ ಪತ್ನಿ ಮ್ಯಾಟಿಲ್ಡೇಯವರ ಅನುಭವ ನೋಡಿ. ಅವರಿಬ್ಬರು ಡಾವ್ಯೆರ್‌ ಎಂಬ ಯುವಕನಿಗೆ ಸಾರಿದರು. ಅವನು ಅವರಿಗೆ “ನನ್ನ ಜೀವನದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಅಂತ ನನಗೆ ಮನಸ್ಸಿದೆ, ಆದರೆ ನನ್ನಿಂದ ಆಗ್ತಿಲ್ಲ” ಎಂದು ಹೇಳಿದನು. ಡಾವ್ಯೆರ್‌ ಒಬ್ಬ ಬಾಕ್ಸರ್‌ ಆಗಿದ್ದನು, ಡ್ರಗ್ಸ್‌ ತಗೊಳ್ಳುತ್ತಿದ್ದನು, ತುಂಬ ಕುಡಿಯುತ್ತಿದ್ದನು. ಗರ್ಲ್‌ಫ್ರೆಂಡ್‌ ಎರಿಕ ಜೊತೆ ವಾಸಿಸುತ್ತಿದ್ದನು. ಇವಾನ್‌ ವಿವರಿಸುವುದು: “ನಾವು ಅವನಿಗೆ ಬೈಬಲ್‌ ಕಲಿಸಲು ಶುರುಮಾಡಿದ್ವಿ. ಅವನಿದ್ದ ಹಳ್ಳಿ ತುಂಬ ದೂರ ಇತ್ತು, ಕೆಸರು-ಮಣ್ಣು ತುಂಬಿದ್ದ ರಸ್ತೆಯಲ್ಲಿ ಸುಮಾರು ತಾಸು ಸೈಕಲ್‌ ತುಳಿದುಕೊಂಡು ಹೋಗುತ್ತಿದ್ವಿ. ಬೈಬಲನ್ನು ಕಲೀತಾ ಕಲೀತಾ ಡಾವ್ಯೆರ್‌ನ ನಡತೆ, ಗುಣ ಬದಲಾಗುತ್ತಿದ್ದದ್ದನ್ನು ಗಮನಿಸಿದ ಎರಿಕ ಕೂಡ ಬೈಬಲ್‌ ಕಲಿಯೋಕೆ ಶುರುಮಾಡಿದಳು.” ಡಾವ್ಯೆರ್‌ ಡ್ರಗ್ಸ್‌ ತಗೊಳ್ಳುವುದನ್ನು, ಕುಡಿಯುವುದನ್ನು ಮತ್ತು ಬಾಕ್ಸಿಂಗ್‌ ಮಾಡುವುದನ್ನು ನಿಧಾನವಾಗಿ ಬಿಟ್ಟುಬಿಟ್ಟ. ಎರಿಕಳನ್ನು ಮದುವೆಯಾದ. ಮ್ಯಾಟಿಲ್ಡೇ ಹೇಳುವುದು: “2016​ರಲ್ಲಿ ಡಾವ್ಯೆರ್‌ ಮತ್ತು ಎರಿಕ ದೀಕ್ಷಾಸ್ನಾನ ಪಡಕೊಂಡಾಗ, ಹಿಂದೆ ಡಾವ್ಯೆರ್‌ ನಮಗೆ ‘ನಾನು ಬದಲಾಗಬೇಕು, ಆದರೆ ನನ್ನಿಂದ ಆಗ್ತಿಲ್ಲ’ ಅಂತ ಆಗಾಗ ಹೇಳುತ್ತಿದ್ದದ್ದು ನೆನಪಾಯಿತು. ಸಂತೋಷದಿಂದ ನಮಗೆ ಕಣ್ಣೀರೇ ಬಂದುಬಿಟ್ಟಿತು.” ಜನರು ಕ್ರಿಸ್ತನ ಶಿಷ್ಯರಾಗಲು ನಾವು ಸಹಾಯ ಮಾಡಿದಾಗ ನಮಗೆ ತುಂಬ ಆನಂದ ಸಿಗುತ್ತದೆ ಅನ್ನುವುದರಲ್ಲಿ ಸಂದೇಹವೇ ಇಲ್ಲ.

ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಏನೆಲ್ಲ ಒಳಗೂಡಿದೆ?

5. ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವು ಮೊದಲು ಮಾಡಬೇಕಾಗಿರುವ ವಿಷಯ ಏನು?

5 ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವು ಮೊದಲು ಮಾಡಬೇಕಾಗಿರುವ ವಿಷಯ ಯೆಹೋವನ ಬಗ್ಗೆ ಕಲಿಯುವುದಕ್ಕೆ ಮನಸ್ಸಿರುವ ಜನರನ್ನು ‘ಹುಡುಕುವುದು.’ (ಮತ್ತಾ. 10:11) ಸೇವೆಯಲ್ಲಿ ನಮಗೆ ಸಿಗುವ ಎಲ್ಲ ಜನರಿಗೆ ಯೆಹೋವನ ಬಗ್ಗೆ ತಿಳಿಸುವಾಗ ನಾವು ಯೆಹೋವನ ಸಾಕ್ಷಿಗಳು ಅನ್ನುವುದನ್ನು ರುಜುಪಡಿಸುತ್ತೇವೆ. ಸುವಾರ್ತೆ ಸಾರಬೇಕು ಎಂದು ಯೇಸು ಕೊಟ್ಟಿರುವ ಆಜ್ಞೆಯನ್ನು ಪಾಲಿಸುವ ಮೂಲಕ ನಾವು ಸತ್ಯ ಕ್ರೈಸ್ತರು ಎಂದು ತೋರಿಸಿಕೊಡುತ್ತೇವೆ.

6. ನಾವು ಹೇಳುವುದನ್ನು ಜನರು ಕೇಳಿಸಿಕೊಳ್ಳಬೇಕೆಂದರೆ ಏನು ಮಾಡಬೇಕು?

6 ಕೆಲವು ಜನರು ಆರಂಭದಲ್ಲೇ ಬೈಬಲಿನ ಸತ್ಯಗಳನ್ನು ಕಲಿಯಲು ಆಸಕ್ತಿ ತೋರಿಸುತ್ತಾರೆ. ಆದರೆ ಹೆಚ್ಚಿನವರು ಆಸಕ್ತಿ ತೋರಿಸಲ್ಲ. ಆದ್ದರಿಂದ ನಾವು ಅವರಲ್ಲಿ ಆಸಕ್ತಿಯನ್ನು ಹುಟ್ಟಿಸಬೇಕು. ಅದಕ್ಕಾಗಿ ಮೊದಲೇ ಚೆನ್ನಾಗಿ ತಯಾರಿ ಮಾಡಬೇಕು. ನೀವು ಭೇಟಿಮಾಡುವ ಜನರಿಗೆ ಯಾವ ವಿಷಯಗಳಲ್ಲಿ ಆಸಕ್ತಿ ಇರುತ್ತದೋ ಅಂಥ ನಿರ್ದಿಷ್ಟ ವಿಷಯಗಳನ್ನು ಆರಿಸಿಕೊಳ್ಳಿ. ನಂತರ ಆ ವಿಷಯವನ್ನು ಹೇಗೆ ಪರಿಚಯಿಸಬಹುದು ಎಂದು ಯೋಚಿಸಿ.

7. (ಎ) ನೀವು ಒಬ್ಬರ ಜೊತೆ ಸಂಭಾಷಣೆಯನ್ನು ಹೇಗೆ ಆರಂಭಿಸಬಹುದು? (ಬಿ) ಜನರಿಗೆ ಕಿವಿಗೊಡುವುದು ಮತ್ತು ಅವರನ್ನು ಗೌರವಿಸುವುದು ಯಾಕೆ ಪ್ರಾಮುಖ್ಯ ಅಂತ ನಿಮಗನಿಸುತ್ತದೆ?

7 ಉದಾಹರಣೆಗೆ, ನೀವು ಮನೆಯವರಿಗೆ ಹೀಗೆ ಕೇಳಬಹುದು: “ಒಂದು ವಿಷ್ಯದ ಬಗ್ಗೆ ನಿಮ್ಮ ಅಭಿಪ್ರಾಯ ಕೇಳಬಹುದಾ? ಇವತ್ತು ನಾವು ಅನುಭವಿಸುತ್ತಿರೋ ಸಮಸ್ಯೆಗಳನ್ನೇ ಲೋಕದ ಎಲ್ಲ ಕಡೆ ಇರುವ ಜನರು ಅನುಭವಿಸುತ್ತಿದ್ದಾರೆ. ಇಡೀ ಲೋಕಕ್ಕೆ ಒಂದೇ ಸರಕಾರ ಬಂದರೆ ಲೋಕದ ಎಲ್ಲ ಸಮಸ್ಯೆಗಳು ಸರಿಹೋಗಬಹುದಾ? ನಿಮಗೆ ಏನನಿಸುತ್ತೆ?” ನಂತರ ನೀವು ದಾನಿಯೇಲ 2:44​ನ್ನು ಅವರ ಜೊತೆ ಚರ್ಚಿಸಬಹುದು. ನೀವು ಹೀಗೂ ಕೇಳಬಹುದು: “ಒಳ್ಳೇ ರೀತಿ ನಡಕೊಳ್ಳುವುದನ್ನು ಮಕ್ಕಳಿಗೆ ಹೇಗೆ ಕಲಿಸಬಹುದು? ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?” ನಂತರ ಧರ್ಮೋಪದೇಶಕಾಂಡ 6:6, 7​ನ್ನು ಚರ್ಚಿಸಿ. ಚರ್ಚಿಸಲು ಯಾವುದೇ ವಿಷಯವನ್ನು ಆರಿಸಿಕೊಳ್ಳುವಾಗಲೂ ಜನರ ಬಗ್ಗೆ ಯೋಚಿಸಿ. ಬೈಬಲನ್ನು ಕಲಿತರೆ ಅವರಿಗೆ ಹೇಗೆ ಪ್ರಯೋಜನವಾಗುತ್ತೆ ಅನ್ನುವುದನ್ನು ಯೋಚಿಸಿ. ಅವರ ಜೊತೆ ಮಾತಾಡುವಾಗ ಅವರ ಮಾತಿಗೂ ನೀವು ಕಿವಿಗೊಡಬೇಕು ಮತ್ತು ಅವರ ಅಭಿಪ್ರಾಯವನ್ನು ನೀವು ಗೌರವಿಸಬೇಕು. ಹೀಗೆ ಮಾಡಿದಾಗ ಅವರನ್ನು ನೀವು ಚೆನ್ನಾಗಿ ಅರ್ಥಮಾಡಿಕೊಳ್ಳಲು ಆಗುತ್ತದೆ. ಜೊತೆಗೆ ಅವರು ನೀವು ಹೇಳುವುದನ್ನು ಕೇಳಿಸಿಕೊಳ್ಳುವುದಕ್ಕೆ ಮನಸ್ಸು ಮಾಡುತ್ತಾರೆ.

8. ಪುನರ್ಭೇಟಿ ಮಾಡಲು ನಾವು ಯಾಕೆ ಸತತ ಪ್ರಯತ್ನ ಮಾಡಬೇಕು?

8 ನಾವು ತಪ್ಪದೆ ಆಸಕ್ತರ ಪುನರ್ಭೇಟಿ ಮಾಡಬೇಕು. ಆದರೆ ಇದಕ್ಕಾಗಿ ನಿಮ್ಮ ಸಮಯ ಮತ್ತು ಪ್ರಯತ್ನ ತುಂಬನೇ ಬೇಕಾಗಬಹುದು. ಯಾಕೆ? ಯಾಕೆಂದರೆ ನೀವು ಮುಂದಿನ ಸಲ ಹೋದಾಗ ಜನರು ನಿಮಗೆ ಸಿಗದೇ ಇರಬಹುದು. ಅಷ್ಟೇ ಅಲ್ಲ, ನೀವು ಸಾಕಷ್ಟು ಬಾರಿ ಭೇಟಿ ಮಾಡಿದ ಮೇಲೆನೇ ಮನೆಯವರು ಯಾವುದೇ ಹಿಂಜರಿಕೆ ಇಲ್ಲದೆ ನಿಮ್ಮ ಹತ್ತಿರ ಬೈಬಲ್‌ ಕಲಿಯುವುದಕ್ಕೆ ಒಪ್ಪಿಕೊಳ್ಳಬಹುದು. ಒಂದು ಗಿಡ ಚೆನ್ನಾಗಿ ಬೆಳೆಯಬೇಕೆಂದರೆ ಅದಕ್ಕೆ ಆಗಾಗ ನೀರನ್ನು ಹಾಕಬೇಕು. ಅದೇ ರೀತಿ ಒಬ್ಬ ಆಸಕ್ತ ವ್ಯಕ್ತಿಗೆ ಯೆಹೋವನ ಮೇಲೆ ಮತ್ತು ಕ್ರಿಸ್ತನ ಮೇಲೆ ಪ್ರೀತಿ ಬೆಳೆಯಬೇಕೆಂದರೆ ಆ ವ್ಯಕ್ತಿಯೊಟ್ಟಿಗೆ ದೇವರ ವಾಕ್ಯವನ್ನು ತಪ್ಪದೆ ಚರ್ಚಿಸಬೇಕು ಅನ್ನುವುದನ್ನು ನೆನಪಿಡಿ.

ಶಿಷ್ಯರನ್ನಾಗಿ ಮಾಡುವ ಜವಾಬ್ದಾರಿ ಎಲ್ಲಾ ಕ್ರೈಸ್ತರಿಗೂ ಇದೆಯಾ?

ಲೋಕದಾದ್ಯಂತ ಯೆಹೋವನ ಸಾಕ್ಷಿಗಳು ಯೋಗ್ಯರನ್ನು ಹುಡುಕುವ ಕೆಲಸದಲ್ಲಿ ಭಾಗವಹಿಸುತ್ತಾರೆ (ಪ್ಯಾರ 9-10 ನೋಡಿ) *

9-10. ಪ್ರಾಮಾಣಿಕ ಜನರನ್ನು ಹುಡುಕುವುದರಲ್ಲಿ ಎಲ್ಲ ಕ್ರೈಸ್ತ ಪ್ರಚಾರಕರ ಪಾಲಿದೆ ಎಂದು ಹೇಗೆ ಹೇಳಬಹುದು? ವಿವರಿಸಿ.

9 ಪ್ರಾಮಾಣಿಕ ಜನರನ್ನು ಹುಡುಕಿ ಕಂಡುಕೊಳ್ಳುವುದರಲ್ಲಿ ಎಲ್ಲ ಕ್ರೈಸ್ತ ಪ್ರಚಾರಕರ ಪಾಲಿದೆ. ಇದನ್ನು ಕಳೆದುಹೋದ ಒಂದು ಮಗುವನ್ನು ಹುಡುಕುವುದಕ್ಕೆ ನಾವು ಹೋಲಿಸಬಹುದು. ಹೇಗೆ? ನಿಜವಾಗಿ ನಡೆದ ಒಂದು ಘಟನೆ ನೋಡಿ. ಮೂರು ವರ್ಷದ ಒಂದು ಗಂಡುಮಗು ಮನೆಯಿಂದ ತಪ್ಪಿಸಿಕೊಂಡು ಬಿಟ್ಟಿತು. ಆ ಮಗುವನ್ನು ಹುಡುಕಲು ಸುಮಾರು 500 ಜನ ಮುಂದೆ ಬಂದರು. ಕೊನೆಗೂ ಸುಮಾರು 20 ತಾಸುಗಳಾದ ಮೇಲೆ ಒಬ್ಬನಿಗೆ ಆ ಮಗು ಒಂದು ಹೊಲದಲ್ಲಿ ಸಿಕ್ಕಿತು. ಮಗು ಹುಡುಕಿದ್ದಕ್ಕೆ ಆ ವ್ಯಕ್ತಿಯನ್ನು ಎಲ್ಲರೂ ಹೊಗಳಿದರು. ಆದರೆ ಆ ವ್ಯಕ್ತಿಗೆ ಅದು ಇಷ್ಟ ಆಗಲಿಲ್ಲ. “ನೂರಾರು ಜನ ಹುಡುಕಿದ್ದರಿಂದಲೇ ಮಗು ಸಿಕ್ಕಿದ್ದು” ಎಂದು ಅವನು ಹೇಳಿದನು.

10 ಕಳೆದುಹೋದ ಆ ಮಗು ತರ ಅನೇಕ ಜನರಿದ್ದಾರೆ. ಅವರಿಗೆ ಯಾವುದೇ ನಿರೀಕ್ಷೆ ಇಲ್ಲ, ಸಹಾಯದ ಅಗತ್ಯವಿದೆ. (ಎಫೆ. 2:12) ಇಂಥ ಜನರನ್ನು ಹುಡುಕಲು ಸುಮಾರು 80 ಲಕ್ಷದಷ್ಟಿರುವ ನಾವು ಜೊತೆಯಾಗಿ ಕೆಲಸ ಮಾಡುತ್ತಿದ್ದೇವೆ. ಬೈಬಲ್‌ ಕಲಿಯಬೇಕೆಂದು ನೇರವಾಗಿ ಕೇಳಿಕೊಳ್ಳುವ ಜನರು ನಿಮಗೆ ಸಿಗದಿರಬಹುದು. ಆದರೆ ಅದೇ ಸೇವಾಕ್ಷೇತ್ರದಲ್ಲಿ ಬೇರೆ ಪ್ರಚಾರಕರು ಸೇವೆ ಮಾಡುವಾಗ ದೇವರ ವಾಕ್ಯದ ಸತ್ಯವನ್ನು ಕಲಿಯಲು ಆಸಕ್ತಿ ತೋರಿಸುವ ಜನರು ಅವರಿಗೆ ಸಿಗಬಹುದು. ಒಬ್ಬ ವ್ಯಕ್ತಿ ಕ್ರಿಸ್ತನ ಶಿಷ್ಯನಾದರೆ ಅವನನ್ನು ಭೇಟಿ ಮಾಡಿದ ಸಹೋದರ ಅಥವಾ ಸಹೋದರಿಗೆ ಮಾತ್ರವಲ್ಲ ಹುಡುಕುವ ಕೆಲಸದಲ್ಲಿ ಭಾಗವಹಿಸಿದ ಎಲ್ಲ ಪ್ರಚಾರಕರಿಗೂ ಸಂತೋಷ ಆಗಬೇಕು. ಯಾಕೆಂದರೆ ಆ ವ್ಯಕ್ತಿ ಶಿಷ್ಯನಾಗುವುದರಲ್ಲಿ ಎಲ್ಲರ ಪಾಲೂ ಇರುತ್ತದೆ.

11. ನೀವು ಯಾರೊಬ್ಬರಿಗೂ ಬೈಬಲ್‌ ಅಧ್ಯಯನ ಮಾಡದೆ ಇದ್ದರೂ ಬೇರೆ ಯಾವ ವಿಧಗಳಲ್ಲಿ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಭಾಗಿಯಾಗಬಹುದು?

11 ಸದ್ಯಕ್ಕೆ ನೀವು ಯಾರೊಬ್ಬರಿಗೂ ಬೈಬಲ್‌ ಕಲಿಸದೆ ಇದ್ದರೂ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಬೇರೆ ವಿಧಗಳಲ್ಲಿ ಭಾಗಿಯಾಗಬಹುದು. ಉದಾಹರಣೆಗೆ, ಹೊಸಬರು ಕೂಟಕ್ಕೆ ಬಂದಾಗ ನೀವು ಸ್ವಾಗತಿಸಬಹುದು ಮತ್ತು ಅವರಿಗೆ ಬೇಕಾದ ಸಹಾಯ ಮಾಡಬಹುದು. ನೀವು ಈ ರೀತಿ ಪ್ರೀತಿ ತೋರಿಸಿದಾಗ ಯೆಹೋವನ ಸಾಕ್ಷಿಗಳೇ ನಿಜವಾದ ಕ್ರೈಸ್ತರು ಎಂದು ಗುರುತಿಸಲು ಅವರಿಗೆ ಆಗುತ್ತದೆ. (ಯೋಹಾ. 13:34, 35) ಕೂಟದಲ್ಲಿ ನೀವು ಕೊಡುವ ಉತ್ತರದಿಂದಲೂ ಹೊಸಬರಿಗೆ ಸಹಾಯವಾಗುತ್ತದೆ. ಅದು ಚಿಕ್ಕದಾಗಿದ್ದರೂ ಅವರು ತಮ್ಮ ನಂಬಿಕೆಯನ್ನು ಪ್ರಾಮಾಣಿಕವಾಗಿ ಮತ್ತು ಗೌರವಪೂರ್ವಕವಾಗಿ ಹಂಚಿಕೊಳ್ಳುವುದು ಹೇಗೆಂದು ಅದರಿಂದ ಕಲಿಯುತ್ತಾರೆ. ಹೊಸ ಪ್ರಚಾರಕರ ಜೊತೆ ನೀವು ಸೇವೆ ಕೂಡ ಮಾಡಬಹುದು. ವಚನಗಳನ್ನು ಉಪಯೋಗಿಸಿ ಜನರ ಹತ್ತಿರ ತರ್ಕಬದ್ಧವಾಗಿ ಮಾತಾಡುವುದು ಹೇಗೆಂದು ನೀವು ಅವರಿಗೆ ತೋರಿಸಿಕೊಡಬಹುದು. ಹೀಗೆ ತೋರಿಸಿಕೊಡುವ ಮೂಲಕ ಆ ಹೊಸ ಪ್ರಚಾರಕನು ಕ್ರಿಸ್ತನನ್ನು ಅನುಕರಿಸಲು ನಾವು ಸಹಾಯ ಮಾಡುತ್ತೇವೆ.—ಲೂಕ 10:25-28.

12. ಶಿಷ್ಯರನ್ನಾಗಿ ಮಾಡಲು ನಮ್ಮಲ್ಲಿ ವಿಶೇಷ ಸಾಮರ್ಥ್ಯಗಳು ಇರಬೇಕಾ? ವಿವರಿಸಿ.

12 ಜನರನ್ನು ಕ್ರಿಸ್ತನ ಶಿಷ್ಯರನ್ನಾಗಿ ಮಾಡಲು ನಮ್ಮಲ್ಲಿ ವಿಶೇಷ ಸಾಮರ್ಥ್ಯ ಇರಬೇಕು ಅಂತೇನಿಲ್ಲ. ಯಾಕೆ? ಬೊಲಿವಿಯದಲ್ಲಿರುವ ಫೌಸ್ಟಿನಾ ಎಂಬ ಸಹೋದರಿಯ ಉದಾಹರಣೆ ನೋಡಿ. ಅವಳಿಗೆ ಯೆಹೋವನ ಸಾಕ್ಷಿಗಳ ಪರಿಚಯ ಆದಾಗ ಓದಲು ಬರುತ್ತಿರಲಿಲ್ಲ. ಆದರೆ ಸಮಯ ಕಳೆದಂತೆ ಸ್ವಲ್ಪ ಮಟ್ಟಿಗೆ ಓದಲು ಕಲಿತಳು. ಈಗ ಅವಳಿಗೆ ದೀಕ್ಷಾಸ್ನಾನವಾಗಿದೆ ಮತ್ತು ಬೇರೆಯವರಿಗೆ ಸತ್ಯ ಕಲಿಸುತ್ತಿದ್ದಾಳೆ. ಪ್ರತಿವಾರ ಐದು ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದಾಳೆ. ಅವಳ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಳಿಗಿಂತ ಚೆನ್ನಾಗಿ ಓದಲು ಬರುತ್ತದೆ. ಆದರೂ ಅವಳ ಸಹಾಯದಿಂದ ಆರು ವಿದ್ಯಾರ್ಥಿಗಳು ದೀಕ್ಷಾಸ್ನಾನ ಪಡಕೊಂಡಿದ್ದಾರೆ.—ಲೂಕ 10:21.

13. ನಾವು ಬ್ಯುಸಿಯಾಗಿದ್ದರೂ ಶಿಷ್ಯರನ್ನಾಗಿ ಮಾಡುವ ಕೆಲಸಕ್ಕಾಗಿ ಸಮಯ ಮಾಡಿಕೊಂಡರೆ ಯಾವ ಪ್ರಯೋಜನಗಳನ್ನು ಪಡಕೊಳ್ಳುತ್ತೇವೆ?

13 ಅನೇಕ ಕ್ರೈಸ್ತರಿಗೆ ಪ್ರಾಮುಖ್ಯವಾದ ಜವಾಬ್ದಾರಿಗಳು ಇರುವುದರಿಂದ ಅವರು ಯಾವಾಗಲೂ ಬ್ಯುಸಿಯಾಗಿ ಇರುತ್ತಾರೆ. ಆದರೆ ಅದರ ಮಧ್ಯದಲ್ಲೂ ಅವರು ಬೈಬಲ್‌ ಅಧ್ಯಯನ ನಡೆಸಲು ಸಮಯ ಮಾಡಿಕೊಳ್ಳುತ್ತಾರೆ ಮತ್ತು ಅದರಿಂದ ಸಂತೋಷ ಪಡಕೊಳ್ಳುತ್ತಾರೆ. ಅಲಾಸ್ಕದಲ್ಲಿರುವ ಮೆಲಾನಿ ಎಂಬ ಸಹೋದರಿಯ ಉದಾಹರಣೆ ನೋಡಿ. ಅವಳು ಒಂಟಿ ಹೆತ್ತವಳು, ಎಂಟು ವರ್ಷದ ಮಗಳನ್ನು ನೋಡಿಕೊಳ್ಳಬೇಕಿತ್ತು. ಪೂರ್ಣ ಸಮಯದ ಕೆಲಸನೂ ಇತ್ತು ಮತ್ತು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತನ್ನ ತಂದೆಯನ್ನು ನೋಡಿಕೊಳ್ಳಬೇಕಿತ್ತು. ಅವಳಿದ್ದ ಪಟ್ಟಣ ಬೇರೆ ಪಟ್ಟಣಗಳಿಂದ ತುಂಬ ದೂರದಲ್ಲಿತ್ತು, ಆ ಇಡೀ ಪಟ್ಟಣದಲ್ಲಿ ಅವಳು ಒಬ್ಬಳೇ ಯೆಹೋವನ ಸಾಕ್ಷಿಯಾಗಿದ್ದಳು. ಚಳಿಯ ಮಧ್ಯದಲ್ಲೂ ಸುವಾರ್ತೆ ಸಾರಲು ಬೇಕಾದ ಶಕ್ತಿಗಾಗಿ ಅವಳು ಯಾವಾಗಲೂ ಪ್ರಾರ್ಥನೆ ಮಾಡುತ್ತಿದ್ದಳು. ಯಾಕೆಂದರೆ ಒಬ್ಬರಿಗಾದರೂ ಬೈಬಲ್‌ ಕಲಿಸಬೇಕೆಂಬ ಆಸೆ ಅವಳಿಗೆ ತುಂಬ ಇತ್ತು. ಸ್ವಲ್ಪದರಲ್ಲೇ ಸಾರಾ ಎಂಬ ಸ್ತ್ರೀಯನ್ನು ಭೇಟಿಯಾದಳು. ದೇವರಿಗೂ ಒಂದು ಹೆಸರಿದೆ ಎಂಬ ವಿಷಯ ಸಾರಾಳಿಗೆ ತುಂಬ ಇಷ್ಟವಾಯಿತು. ಸ್ವಲ್ಪ ಸಮಯದ ನಂತರ ಸಾರಾ ಬೈಬಲ್‌ ಕಲಿಯಲು ಒಪ್ಪಿಕೊಂಡಳು. “ಪ್ರತಿ ಶುಕ್ರವಾರ ಕೆಲಸ ಮುಗಿಸಿ ಬಂದು ಸುಸ್ತಾಗಿರುತ್ತಿತ್ತು. ಆದರೂ ನಾನು ನನ್ನ ಮಗಳು ಬಿಡದೆ ಬೈಬಲ್‌ ಕಲಿಸೋಕೆ ಹೋಗ್ತಿದ್ವಿ. ಸಾರಾ ಕೇಳುವ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯೋಕೆ ತುಂಬ ಖುಷಿಯಾಗ್ತಿತ್ತು. ಅವಳು ಯೆಹೋವನಿಗೆ ಆಪ್ತಳಾಗುವುದನ್ನು ನೋಡಿ ನಮಗೆ ಸಂತೋಷ ಆಗುತ್ತಿತ್ತು” ಎಂದು ಮೆಲಾನಿ ಹೇಳುತ್ತಾಳೆ. ಸಾರಾ ತನಗೆ ಬಂದ ವಿರೋಧವನ್ನು ಧೈರ್ಯದಿಂದ ಎದುರಿಸಿದಳು, ಚರ್ಚನ್ನು ಬಿಟ್ಟುಬಿಟ್ಟಳು ಮತ್ತು ದೀಕ್ಷಾಸ್ನಾನ ಪಡಕೊಂಡಳು.

ಶಿಷ್ಯರನ್ನಾಗಿ ಮಾಡುವಾಗ ನಮಗೆ ಯಾಕೆ ತಾಳ್ಮೆ ಇರಬೇಕು?

14. (ಎ) ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಮೀನು ಹಿಡಿಯುವ ಕೆಲಸಕ್ಕೆ ಯಾಕೆ ಹೋಲಿಸಬಹುದು? (ಬಿ) 2 ತಿಮೊಥೆಯ 4:1, 2​ರಲ್ಲಿರುವ ಪೌಲನ ಮಾತುಗಳು ನಿಮ್ಮನ್ನು ಏನು ಮಾಡುವಂತೆ ಪ್ರೇರೇಪಿಸುತ್ತವೆ?

14 ಶಿಷ್ಯರಾಗಬೇಕೆಂದು ಬಯಸುವವರು ನಿಮಗಿನ್ನೂ ಸಿಗದಿದ್ದರೂ ನಿರಾಶರಾಗಬೇಡಿ, ಅಂಥವರನ್ನು ಹುಡುಕುವುದನ್ನು ಮುಂದುವರಿಸಿ. ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಮೀನು ಹಿಡಿಯುವ ಕೆಲಸಕ್ಕೆ ಯೇಸು ಹೋಲಿಸಿದನು. ಮೀನುಗಾರರು ಮೀನು ಹಿಡಿಯಬೇಕೆಂದರೆ ಸುಮಾರು ತಾಸುಗಳನ್ನು ಕಳೆಯಬೇಕು. ಅದಕ್ಕಾಗಿ ಹೆಚ್ಚಾಗಿ ಅವರು ಮಧ್ಯರಾತ್ರಿವರೆಗೂ ಅಥವಾ ಬೆಳಗಿನ ಜಾವದವರೆಗೂ ಕೆಲಸ ಮಾಡಬೇಕಾಗುತ್ತದೆ. ಸಮುದ್ರದಲ್ಲಿ ತುಂಬ ದೂರ ಹೋಗಬೇಕಾಗುತ್ತದೆ. (ಲೂಕ 5:5) ಅದೇರೀತಿ ಕೆಲವು ಪ್ರಚಾರಕರು ಆಸಕ್ತ ಜನರನ್ನು ತಾಳ್ಮೆಯಿಂದ ಹುಡುಕುತ್ತಾರೆ. ಅದಕ್ಕಾಗಿ ಬೇರೆ ಬೇರೆ ಸಮಯದಲ್ಲಿ ಮತ್ತು ಬೇರೆ ಬೇರೆ ಸ್ಥಳಗಳಲ್ಲಿ ತುಂಬಾ ತಾಸುಗಳನ್ನು ಕಳೆಯುತ್ತಾರೆ. ಯಾಕೆ? ಯಾಕೆಂದರೆ ಹೆಚ್ಚೆಚ್ಚು ಜನರನ್ನು ಭೇಟಿ ಮಾಡುವ ಉದ್ದೇಶದಿಂದಲೇ. ಯಾರು ಈ ರೀತಿ ಪ್ರಯತ್ನ ಮಾಡುತ್ತಾರೋ ಅವರಿಗೆ ನಮ್ಮ ಸಂದೇಶಕ್ಕೆ ಆಸಕ್ತಿಯನ್ನು ತೋರಿಸುವ ಜನರು ಹೆಚ್ಚಾಗಿ ಸಿಗುತ್ತಾರೆ. ಯಾವ ಸಮಯದಲ್ಲಿ ಹೆಚ್ಚು ಜನ ಸಿಗುತ್ತಾರೋ ಆ ಸಮಯಕ್ಕೆ ಮತ್ತು ಎಲ್ಲಿ ಹೆಚ್ಚು ಜನ ಸಿಗುತ್ತಾರೋ ಅಲ್ಲಿಗೆ ಹೋಗಿ ಸುವಾರ್ತೆ ಸಾರಲು ಪ್ರಯತ್ನಿಸಿ.—2 ತಿಮೊಥೆಯ 4:1, 2 ಓದಿ.

ಆಧ್ಯಾತ್ಮಿಕವಾಗಿ ಪ್ರಗತಿ ಮಾಡಲು ನಿಮ್ಮ ವಿದ್ಯಾರ್ಥಿಗೆ ತಾಳ್ಮೆಯಿಂದ ಕಲಿಸಿ (ಪ್ಯಾರ 15-16 ನೋಡಿ) *

15. ಬೈಬಲ್‌ ಕಲಿಸಲು ನಮಗೆ ಯಾಕೆ ತಾಳ್ಮೆ ಬೇಕು?

15 ಬೈಬಲ್‌ ಕಲಿಸಲು ನಮಗೆ ಯಾಕೆ ತಾಳ್ಮೆ ಬೇಕು? ಒಂದು ಕಾರಣ ಏನೆಂದರೆ, ನಮ್ಮ ವಿದ್ಯಾರ್ಥಿಗೆ ಬೈಬಲ್‌ ಬೋಧನೆಗಳನ್ನು ಕಲಿಸಿ ಅವನ್ನು ಪ್ರೀತಿಸಲು ಸಹಾಯ ಮಾಡುವುದಷ್ಟೇ ಅಲ್ಲ, ಇನ್ನೂ ಹೆಚ್ಚಿನ ಸಹಾಯ ಮಾಡಬೇಕಾಗುತ್ತದೆ. ಅದೇನೆಂದರೆ, ಬೈಬಲನ್ನು ಕೊಟ್ಟಿರುವಂಥ ಯೆಹೋವನ ಬಗ್ಗೆ ತಿಳಿದುಕೊಂಡು ಆತನನ್ನು ಪ್ರೀತಿಸಲು ನಮ್ಮ ವಿದ್ಯಾರ್ಥಿಗೆ ಸಹಾಯ ಮಾಡಬೇಕಾಗುತ್ತದೆ. ತನ್ನ ಶಿಷ್ಯರಾಗಲು ಏನು ಮಾಡಬೇಕೆಂದು ಯೇಸು ಹೇಳಿದ್ದಾನೋ ಅದನ್ನು ನಮ್ಮ ವಿದ್ಯಾರ್ಥಿಗೆ ಕಲಿಸುವುದರ ಜೊತೆಗೆ, ಯೇಸು ಹೇಳಿದ್ದನ್ನು ವಿದ್ಯಾರ್ಥಿಯು ತನ್ನ ಜೀವನದಲ್ಲಿ ಹೇಗೆ ಅನ್ವಯಿಸಿಕೊಳ್ಳಬೇಕೆಂದು ಸಹ ನಾವು ಕಲಿಸಬೇಕಾಗುತ್ತದೆ. ಆ ವಿದ್ಯಾರ್ಥಿ ಬೈಬಲ್‌ ತತ್ವಗಳನ್ನು ತನ್ನ ಜೀವನದಲ್ಲಿ ಅನ್ವಯಿಸಲು ಕಷ್ಟಪಡುತ್ತಿರುವಾಗ ನಾವು ಅವನಿಗೆ ತಾಳ್ಮೆಯಿಂದ ಸಹಾಯ ಮಾಡಬೇಕು. ಕೆಲವು ವಿದ್ಯಾರ್ಥಿಗಳು ತಮ್ಮ ಯೋಚನೆಗಳನ್ನು ಮತ್ತು ಅಭ್ಯಾಸಗಳನ್ನು ಕೆಲವೇ ತಿಂಗಳಲ್ಲಿ ಬದಲಾಯಿಸಿಕೊಂಡು ಬಿಡುತ್ತಾರೆ. ಆದರೆ ಇನ್ನು ಕೆಲವರಿಗೆ ಹೆಚ್ಚು ಸಮಯ ಬೇಕಾಗುತ್ತದೆ.

16. ರೌಲ್‌ ಎಂಬವರ ಅನುಭವದಿಂದ ನೀವೇನು ಕಲಿತಿರಿ?

16 ಪೆರುವಿನಲ್ಲಿದ್ದ ಮಿಷನರಿ ಸಹೋದರ ತಾಳ್ಮೆಯಿಂದ ಇದ್ದದ್ದಕ್ಕೆ ಒಳ್ಳೇ ಪ್ರತಿಫಲ ಪಡಕೊಂಡರು. ಅವರು ಹೇಳಿದ್ದು: “ರೌಲ್‌ ಎಂಬವರಿಗೆ ನಾನು ಎರಡು ಪುಸ್ತಕಗಳಿಂದ ಬೈಬಲ್‌ ಕಲಿಸಿದೆ, ಆದರೆ ಅವರು ತಮ್ಮ ಜೀವನದಲ್ಲಿ ಇನ್ನೂ ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿತ್ತು. ಅವರು ಅವರ ಹೆಂಡತಿ ಯಾವಾಗಲೂ ಜಗಳ ಆಡುತ್ತಿದ್ದರು, ಮಾತೆತ್ತಿದರೆ ಕೆಟ್ಟ ಮಾತುಗಳನ್ನು ಆಡುತ್ತಿದ್ದರು. ಇದರಿಂದ ಅವರ ಮಕ್ಕಳು ಅವರಿಗೆ ಒಂಚೂರೂ ಗೌರವ ಕೊಡುತ್ತಿರಲಿಲ್ಲ. ಆದರೆ ರೌಲ್‌ ಕೂಟಗಳಿಗೆ ತಪ್ಪದೆ ಬರುತ್ತಿದ್ದರು. ಹಾಗಾಗಿ ನಾನು ಅವರನ್ನು ಅವರ ಕುಟುಂಬವನ್ನು ಭೇಟಿ ಮಾಡುವುದನ್ನು ಮುಂದುವರಿಸಿದೆ. ಅವರ ಪರಿಚಯ ಆಗಿ ಮೂರಕ್ಕಿಂತ ಹೆಚ್ಚು ವರ್ಷಗಳಾದ ಮೇಲೆ ಅವರು ಬದಲಾವಣೆಗಳನ್ನು ಮಾಡಿಕೊಂಡು ದೀಕ್ಷಾಸ್ನಾನ ಪಡಕೊಳ್ಳುವುದಕ್ಕೆ ಅರ್ಹರಾದರು.”

17. ಮುಂದಿನ ಲೇಖನದಲ್ಲಿ ನಾವು ಏನನ್ನು ಚರ್ಚಿಸಲಿದ್ದೇವೆ?

17 ಯೇಸು ನಮಗೆ “ಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂದು ಹೇಳಿದ್ದಾನೆ. ಹಾಗಾಗಿ ನಾವು ಭೇಟಿ ಮಾಡುವ ಹೆಚ್ಚಿನ ಜನರ ನಂಬಿಕೆ ನಮ್ಮ ನಂಬಿಕೆಗಿಂತ ತುಂಬ ಭಿನ್ನವಾಗಿರುತ್ತದೆ. ಇನ್ನು ಕೆಲವು ಜನರಿಗೆ ದೇವರು-ಧರ್ಮ ಅನ್ನುವುದರಲ್ಲಿ ಆಸಕ್ತಿನೇ ಇರಲ್ಲ ಅಥವಾ ದೇವರಿದ್ದಾನೆ ಅನ್ನುವುದನ್ನು ಕೂಡ ನಂಬಲ್ಲ. ಇಂಥ ಜನರಿಗೆ ನಾವು ಹೇಗೆ ಸುವಾರ್ತೆ ಸಾರಬಹುದು ಅನ್ನುವುದನ್ನು ಮುಂದಿನ ಲೇಖನದಲ್ಲಿ ನೋಡಲಿದ್ದೇವೆ.

ಗೀತೆ 98 ರಾಜ್ಯದ ಬೀಜವನ್ನು ಬಿತ್ತುವುದು

^ ಪ್ಯಾರ. 5 ಕ್ರೈಸ್ತರಾದ ನಮ್ಮೆಲ್ಲರ ಮುಖ್ಯ ಗುರಿ ಜನರನ್ನು ಕ್ರಿಸ್ತನ ಶಿಷ್ಯರನ್ನಾಗಿ ಮಾಡುವುದೇ ಆಗಿದೆ. ನಮ್ಮ ಈ ಗುರಿಯನ್ನು ಹೇಗೆ ಸಾಧಿಸಬಹುದು ಅನ್ನುವುದಕ್ಕೆ ಈ ಲೇಖನ ಉಪಯುಕ್ತ ಸಲಹೆಗಳನ್ನು ಕೊಡುತ್ತದೆ.

^ ಪ್ಯಾರ. 2 ಪದ ವಿವರಣೆ: ಕ್ರಿಸ್ತನ ಶಿಷ್ಯರು ವಿಷಯಗಳನ್ನು ಕಲಿತು ಸುಮ್ಮನಾಗುವುದಿಲ್ಲ. ಬದಲಿಗೆ ತಾವು ಕಲಿತಿದ್ದನ್ನು ಅನ್ವಯಿಸಿಕೊಳ್ಳುತ್ತಾರೆ. ಅವರು ಯೇಸುವಿನ ಹೆಜ್ಜೆಜಾಡನ್ನು ಅಥವಾ ಮಾದರಿಯನ್ನು ತಮ್ಮಿಂದಾದಷ್ಟು ಹಿಂಬಾಲಿಸುತ್ತಾರೆ.—1 ಪೇತ್ರ 2:21.

^ ಪ್ಯಾರ. 52 ಚಿತ್ರ ವಿವರಣೆ: ಒಬ್ಬ ವ್ಯಕ್ತಿ ರಜೆಯಲ್ಲಿ ಬೇರೆ ಸ್ಥಳಕ್ಕೆ ಹೋಗುವಾಗ ವಿಮಾನ ನಿಲ್ದಾಣದಲ್ಲಿ ಯೆಹೋವನ ಸಾಕ್ಷಿಗಳಿಂದ ಕರಪತ್ರ ತಗೊಂಡು ಹೋಗುತ್ತಿದ್ದಾನೆ. ಅವನು ಹೋಗಿರುವ ಸ್ಥಳದಲ್ಲೂ ಸಾಕ್ಷಿಗಳು ಸಾರ್ವಜನಿಕ ಸಾಕ್ಷಿಕಾರ್ಯ ಮಾಡುತ್ತಿರುವುದನ್ನು ಅವನು ನೋಡುತ್ತಿದ್ದಾನೆ. ಅವನು ವಾಪಸ್‌ ಬಂದ ಮೇಲೆ ಪ್ರಚಾರಕರು ಅವನ ಮನೆಗೆ ಬಂದಿದ್ದಾರೆ.

^ ಪ್ಯಾರ. 54 ಚಿತ್ರ ವಿವರಣೆ: ಅದೇ ವ್ಯಕ್ತಿ ಬೈಬಲ್‌ ಕಲಿಯುತ್ತಿದ್ದಾನೆ. ಕೊನೆಗೆ ದೀಕ್ಷಾಸ್ನಾನ ಪಡಕೊಳ್ಳುತ್ತಿದ್ದಾನೆ.