ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ನಾನು ಮಾಡಬೇಕಾಗಿದ್ದುದನ್ನೇ ಮಾಡಿದ್ದೇನೆ

ನಾನು ಮಾಡಬೇಕಾಗಿದ್ದುದನ್ನೇ ಮಾಡಿದ್ದೇನೆ

ಸಹೋದರ ಡೊನಾಲ್ಡ್‌ ರಿಡ್ಲೀರವರು ಸುಮಾರು ಮೂವತ್ತು ವರ್ಷ ಯೆಹೋವನ ಸಾಕ್ಷಿಗಳ ವಕೀಲರಾಗಿ ಕೆಲ್ಸ ಮಾಡಿದ್ದಾರೆ. ರಕ್ತವನ್ನು ಸ್ವೀಕರಿಸಬೇಕಾ ಬೇಡ್ವಾ ಅನ್ನೋದು ರೋಗಿಯ ಹಕ್ಕು ಅಂತ ಡಾಕ್ಟರ್‌ಗಳಿಗೆ, ನ್ಯಾಯಾಧೀಶರಿಗೆ ವಿವರಿಸಲು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಅಮೆರಿಕಾದ ಅನೇಕ ಹೈಕೋರ್ಟ್‌ಗಳಲ್ಲಿ ಯೆಹೋವನ ಸಾಕ್ಷಿಗಳ ಪರವಾಗಿ ಜಯ ಸಿಗಲು ತುಂಬ ಶ್ರಮವಹಿಸಿದ್ದಾರೆ. ಫ್ರೆಂಡ್ಸ್‌ ಅವ್ರನ್ನ ಡಾನ್‌ ಅಂತ ಕರೀತಿದ್ರು. ಅವ್ರು ತುಂಬ ಶ್ರಮಶೀಲ, ದೀನ ಸ್ವಭಾವದವರಾಗಿದ್ರು.

2019 ರಲ್ಲಿ ಅವ್ರಿಗೆ ಮೆದುಳಿಗೆ ಸಂಬಂಧಪಟ್ಟ ಕಾಯಿಲೆ ಇದೆ ಅಂತ ಗೊತ್ತಾಯ್ತು. ಈ ಗಂಭೀರ ಕಾಯಿಲೆಯಿಂದ ನರಳುತ್ತಿದ್ದ ಅವ್ರು 2019 ರ ಆಗಸ್ಟ್‌ 16 ರಂದು ಕೊನೆಯುಸಿರೆಳೆದರು.

ನಾನು ಅಮೆರಿಕದಲ್ಲಿರೋ ಮಿನ್ನೆಸೋಟದ ಸೇಂಟ್‌ ಪೌಲ್‌ನಲ್ಲಿ 1954 ರಲ್ಲಿ ಹುಟ್ಟಿದೆ. ರೋಮನ್‌ ಕ್ಯಾಥೋಲಿಕ್‌ನ ಸಾಧಾರಣ ಕುಟುಂಬದಲ್ಲಿ ಬೆಳೆದೆ. ನಾವು ಒಟ್ಟು ಐದು ಮಕ್ಳು. ನಾನು ಎರಡನೆಯವ್ನು. ಕ್ಯಾಥೋಲಿಕ್‌ ಶಾಲೆಯಲ್ಲಿ ಓದಿದೆ. ಚರ್ಚಿನಲ್ಲಿ ಪಾದ್ರಿ ಜೊತೆ ಕೆಲ್ಸ ಮಾಡೋ ಆಲ್ಟರ್‌ ಹುಡುಗನಾಗಿದ್ದೆ. ಹಾಗಿದ್ರೂ ಬೈಬಲ್‌ ಬಗ್ಗೆ ಹೆಚ್ಚೇನೂ ಗೊತ್ತಿರ್ಲಿಲ್ಲ. ಒಬ್ಬ ದೇವ್ರಿದ್ದಾನೆ, ಆತನೇ ಎಲ್ಲಾ ಸೃಷ್ಟಿ ಮಾಡಿದ್ದು ಅಂತ ಗೊತ್ತಿತ್ತು. ಆದ್ರೆ ಚರ್ಚ್‌ ಮೇಲಿದ್ದ ನಂಬಿಕೆಯನ್ನ ಕಳ್ಕೊಂಡೆ.

ಸತ್ಯ ಸಿಕ್ತು

ನಾನು ವಿಲ್ಯಮ್‌ ಮಿಶೇಲ್‌ ಲಾ ಕಾಲೇಜಿನಲ್ಲಿ ಫಸ್ಟ್‌ ಯಿಯರ್‌ ಓದ್ತಿದ್ದಾಗ ಇಬ್ರು ಸಾಕ್ಷಿಗಳು ನಮ್ಮನೆಗೆ ಬಂದ್ರು. ಆಗ ನಾನು ಬಟ್ಟೆ ಒಗೆಯೋದ್ರಲ್ಲಿ ಬಿಝಿ ಇದ್ದೆ. ಅವ್ರು ಮತ್ತೆ ಬರ್ತೀನಿ ಅಂತ ಹೇಳಿ ಹೋದ್ರು. ಅವ್ರು ಬಂದಾಗ ನಾನು ಎರಡು ಪ್ರಶ್ನೆಗಳನ್ನು ಕೇಳ್ದೆ: “ಒಳ್ಳೆಯವ್ರಿಗೇ ಯಾಕೆ ತುಂಬ ಕಷ್ಟ ಬರುತ್ತೆ?” ಮತ್ತು “ನಾವು ಖುಷಿಯಾಗಿ ಇರಬೇಕಂದ್ರೆ ಏನು ಮಾಡ್ಬೇಕು?” ಅವ್ರು ನಂಗೆ ನಿತ್ಯಜೀವಕ್ಕೆ ನಡೆಸುವ ಸತ್ಯವು (ಇಂಗ್ಲಿಷ್‌) ಪುಸ್ತಕ ಮತ್ತು ಹಸಿರು ಬಣ್ಣದ ನೂತನ ಲೋಕ ಭಾಷಾಂತರ ಬೈಬಲ್‌ ಕೊಟ್ರು. ಅದು ನಂಗೆ ತುಂಬ ಇಷ್ಟ ಆಯ್ತು. ನಾನು ಬೈಬಲ್‌ ಸ್ಟಡಿಗೆ ಒಪ್ಪಿಕೊಂಡೆ. ಅದ್ರಿಂದ ತುಂಬ ವಿಷ್ಯ ಕಲಿಯೋಕಾಯ್ತು. ದೇವ್ರ ರಾಜ್ಯನೇ ಮನುಷ್ಯರ ಕಷ್ಟಗಳನ್ನೆಲ್ಲಾ ತೆಗೆದು ಹಾಕೋದು, ಬೇರೆ ಯಾರಿಂದನೂ ಸಾಧ್ಯ ಇಲ್ಲ ಅಂತ ಕಲಿತೆ. ಮಾನವ ಸರ್ಕಾರದಿಂದ ಒಳ್ಳೇದಕ್ಕಿಂತ ಜಾಸ್ತಿ ಕೆಟ್ಟದ್ದೇ ಆಗುತ್ತೆ ಅನ್ನೋದು ನಂಗೆ ಅರ್ಥ ಆಯ್ತು.

1982 ರ ಆರಂಭದಲ್ಲಿ ನನ್ನನ್ನು ಯೆಹೋವನಿಗೆ ಸಮರ್ಪಿಸಿಕೊಂಡೆ. ಅದೇ ವರ್ಷದಲ್ಲಿ ಸೇಂಟ್‌ ಪೌಲ್‌ ಸಿವಿಕ್‌ ಸೆಂಟರ್‌ನಲ್ಲಿ ನಡೆದ “ಕಿಂಗ್‌ಡಮ್‌ ಟ್ರುತ್‌” ಅಧಿವೇಶನದಲ್ಲಿ ದೀಕ್ಷಾಸ್ನಾನ ಪಡ್ಕೊಂಡೆ. ಒಂದು ವಾರದ ನಂತ್ರ ಅದೇ ಹಾಲ್‌ನಲ್ಲಿ ಲಾ ಪರೀಕ್ಷೆ ಬರೆದೆ. ಅಕ್ಟೋಬರ್‌ ತಿಂಗಳಲ್ಲಿ ರಿಸಲ್ಟ್‌ ಬಂತು, ನಾನು ಪಾಸಾಗಿದ್ದೆ. ಅಂದ್ರೆ ಇನ್ನು ಮುಂದಕ್ಕೆ ನಾನು ಒಬ್ಬ ವಕೀಲನಾಗಿ ಕೆಲ್ಸ ಮಾಡ್ಬಹುದಿತ್ತು.

ಅದೇ ಅಧಿವೇಶನದಲ್ಲಿ ಬ್ರೂಕ್ಲಿನ್‌ ಬೆತೆಲಿನಲ್ಲಿ ಸೇವೆ ಮಾಡ್ತಿದ್ದ ಸಹೋದರ ಮೈಕ್‌ ರಿಚರ್ಡ್‌ಸನ್‌ ಸಿಕ್ಕಿದ್ರು. ಅವ್ರು ನಂಗೆ ಮುಖ್ಯ ಕಾರ್ಯಾಲಯದಲ್ಲಿ ಲೀಗಲ್‌ ಆಫೀಸ್‌ ಆರಂಭಿಸಿರೋದ್ರ ಬಗ್ಗೆ ಹೇಳಿದ್ರು. ಆಗ ನಂಗೆ ಅಪೊಸ್ತಲರ ಕಾರ್ಯಗಳು 8:36 ರಲ್ಲಿ ತಿಳಿಸಿರೋ ಇಥಿಯೋಪಿಯದ ಕಂಚುಕಿಯ ಮಾತುಗಳು ನೆನಪಾದ್ವು. ‘ಲೀಗಲ್‌ ಆಫೀಸಿಗೆ ಹೋಗಿ ಕೆಲ್ಸ ಮಾಡೋಕೆ ನಂಗೆ ಅಡ್ಡಿ ಏನು?’ ಅಂತ ಕೇಳ್ಕೊಂಡೆ. ಕೂಡ್ಲೇ ಬೆತೆಲ್‌ ಸೇವೆಗೆ ಅರ್ಜಿ ಹಾಕಿದೆ.

ನಾನು ಯೆಹೋವನ ಸಾಕ್ಷಿಯಾಗಿದ್ದು ನನ್ನ ತಂದೆತಾಯಿಗೆ ಇಷ್ಟ ಆಗ್ಲಿಲ್ಲ. “ಬೆತೆಲಿನಲ್ಲಿ ಸೇವೆ ಮಾಡೋದ್ರಿಂದ ಮುಂದೆ ನಿನ್ನ ವಕೀಲ ವೃತ್ತಿಗೆ ಏನಾದ್ರೂ ಪ್ರಯೋಜ್ನ ಆಗುತ್ತಾ?” ಅಂತ ನನ್ನ ತಂದೆ ಕೇಳಿದ್ರು. ಆಗ “ನಾನೊಬ್ಬ ಸ್ವಯಂಸೇವಕನಾಗಿ ಕೆಲ್ಸ ಮಾಡ್ತಿದ್ದೀನಿ. ಒಂದ್‌ ತಿಂಗಳಿಗೆ ಸಾಕಾಗುವಷ್ಟು ಚಿಕ್ಕ ಮೊತ್ತದ ಹಣ ಕೊಡ್ತಾರೆ” ಅಂತ ಹೇಳಿದೆ.

ಬೆತೆಲಿಗೆ ಅರ್ಜಿ ಹಾಕಿದ ಕೂಡ್ಲೇ ನಂಗೆ ಅಲ್ಲಿ ಹೋಗೋಕೆ ಆಗ್ಲಿಲ್ಲ. ಯಾಕಂದ್ರೆ ಈಗಾಗ್ಲೇ ಮಾಡ್ತೀನಿ ಅಂತ ಒಪ್ಕೊಂಡಿದ್ದ ಕೋರ್ಟ್‌ ಕೆಲ್ಸ ಮಾಡಿ ಮುಗಿಸ್ಬೇಕಿತ್ತು. ನಂತ್ರ 1984 ರಲ್ಲಿ ನ್ಯೂಯಾರ್ಕ್‌ನ ಬ್ರೂಕ್ಲಿನ್‌ ಬೆತೆಲಿನಲ್ಲಿ ಸೇವೆ ಶುರು ಮಾಡ್ದೆ. ಅಲ್ಲಿ ನಾನು ಲೀಗಲ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲ್ಸ ಮಾಡ್ದೆ. ಕೋರ್ಟ್‌ ಕೆಲ್ಸ ಮಾಡಿ ನಂಗೆ ಸಿಕ್ಕಿದ ಅನುಭವದಿಂದ ಮುಂದಕ್ಕೆ ಪ್ರಯೋಜನ ಆಗಲಿದೆ ಅನ್ನೋ ಸುಳಿವು ನನಗಿರಲಿಲ್ಲ.

ಸ್ಟ್ಯಾನ್ಲಿ ಥಿಯೇಟರ್‌ನ ನವೀಕರಣ

ಸ್ಟ್ಯಾನ್ಲಿ ಥಿಯೇಟರ್‌ ಖರೀದಿಸಿದಾಗ ಹೀಗಿತ್ತು

1983 ರ ನವೆಂಬರ್‌ನಲ್ಲಿ ನ್ಯೂ ಜೆರ್ಸಿಯ, ಜೆರ್ಸಿ ಸಿಟಿಯಲ್ಲಿರೋ ಸ್ಟ್ಯಾನ್ಲಿ ಥಿಯೇಟರನ್ನ ನಮ್ಮ ಸಂಘಟನೆ ಖರೀದಿಸಿತು. ಆ ಕಟ್ಟಡದಲ್ಲಿ ಎಲೆಕ್ಟ್ರಿಕಲ್‌ ಮತ್ತು ಪ್ಲಂಬಿಂಗ್‌ನ ನವೀಕರಣ ಕೆಲ್ಸ ಇದ್ದಿದ್ರಿಂದ ಅನುಮತಿಗಾಗಿ ಅಧಿಕಾರಿಗಳ ಹತ್ರ ನಮ್ಮ ಸಹೋದರರು ಮನವಿ ಮಾಡಿದ್ರು. ಅಧಿವೇಶನಗಳನ್ನು ನಡೆಸೋದಕ್ಕಾಗಿ ಸ್ಟ್ಯಾನ್ಲಿ ಥಿಯೇಟರ್‌ನ ಖರೀದಿಸಿದ್ವಿ ಅಂತ ಅಧಿಕಾರಿಗಳಿಗೆ ವಿವರಿಸಿದ್ರು. ಜರ್ಸಿ ಸಿಟಿಯ ಕಾನೂನಿನ ಪ್ರಕಾರ ಮನೆಗಳಿರೋ ಸ್ಥಳದಲ್ಲೇ (ರೆಸಿಡೆನ್ಶಿಯಲ್‌ ಏರಿಯಾದಲ್ಲೇ) ಆರಾಧನೆಗೆ ಸಂಬಂಧಪಟ್ಟ ಕಟ್ಟಡಗಳಿರಬೇಕಿತ್ತು. ಆದ್ರೆ ಸ್ಟ್ಯಾನ್ಲಿ ಥಿಯೇಟರ್‌ ಇದ್ದಿದ್ದು ವಾಣಿಜ್ಯ ಪ್ರದೇಶದಲ್ಲಿ (ಕಮರ್ಷಿಯಲ್‌ ಏರಿಯಾದಲ್ಲಿ). ಹಾಗಾಗಿ ಅಲ್ಲಿನ ಅಧಿಕಾರಿಗಳು ಅನುಮತಿ ಕೊಡ್ಲಿಲ್ಲ. ಆ ನಿರ್ಧಾರದ ಬಗ್ಗೆ ನಮ್ಮ ಸಹೋದರರು ಅಪೀಲು ಮಾಡಿದ್ರು, ಆದ್ರೆ ಅದನ್ನ ತಿರಸ್ಕರಿಸಲಾಯಿತು.

ಅನುಮತಿ ಸಿಗದಿದ್ದ ಕಾರಣ ನಮ್ಮ ಸಂಘಟನೆ ಜಿಲ್ಲಾ ನ್ಯಾಯಾಲಯದಲ್ಲಿ ಕೇಸ್‌ ಹಾಕ್ತು. ಅದು ನಾನು ಬೆತೆಲಿಗೆ ಬಂದ ಮೊದ್ಲ ವಾರ ಆಗಿತ್ತು. ಮಿನ್ನೆಸೋಟದ ಸೇಂಟ್‌ ಪೌಲ್‌ನಲ್ಲಿರೋ ಜಿಲ್ಲಾ ನ್ಯಾಯಾಲಯದಲ್ಲಿ ಎರಡು ವರ್ಷ ನಾನು ಕೆಲ್ಸ ಮಾಡಿದ್ರಿಂದ ಇಂಥ ಕೇಸ್‌ಗಳ ಬಗ್ಗೆ ಚೆನ್ನಾಗಿ ಗೊತ್ತಿತ್ತು. ನಮ್ಮ ವಕೀಲರೊಬ್ರು “ಸ್ಟ್ಯಾನ್ಲಿ ಥಿಯೇಟರ್‌ನಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು, ಚಲನಚಿತ್ರ, ಸಂಗೀತ ಕಾರ್ಯಕ್ರಮಗಳನ್ನೂ ನಡೆಸಬಹುದಾದ್ರೆ ಧಾರ್ಮಿಕ ಕಾರ್ಯಕ್ರಮಗಳನ್ನು ಯಾಕೆ ನಡೆಸ್ಬಾರ್ದು? ಅದು ಹೇಗೆ ಕಾನೂನು ಬಾಹಿರ ಆಗುತ್ತೆ?” ಅಂತ ವಾದ ಮಂಡಿಸಿದ್ರು. ಜಿಲ್ಲಾ ನ್ಯಾಯಾಲಯ ನಮ್ಮ ವಾದವನ್ನು ಪರಿಗಣಿಸಿತು. ಜರ್ಸಿ ಸಿಟಿಯ ಅಧಿಕಾರಿಗಳು ನಮಗಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಮಾನ್ಯ ಮಾಡ್ಲಿಲ್ಲ ಅಂತ ತಿಳಿಸ್ತು ಮತ್ತು ಅವ್ರು ನಮ್ಗೆ ನವೀಕರಣ ಮಾಡೋಕೆ ಅನುಮತಿ ಕೊಡ್ಬೇಕು ಅಂತ ತೀರ್ಪು ನೀಡಿತು. ನಮ್ಮ ಸಂಘಟನೆಯ ಪ್ರಗತಿಗಾಗಿ ಯೆಹೋವನು ಕಾನೂನನ್ನು ಹೇಗೆ ಬಳಸ್ತಿದ್ದಾನೆ ಅನ್ನೋದನ್ನ ನೋಡೋಕಾಯ್ತು. ಆ ಕೆಲ್ಸ ಮಾಡೋ ಸುಯೋಗ ಸಿಕ್ಕಿದ್ದಕ್ಕೆ ನಂಗೆ ತುಂಬ ಖುಷಿಯಾಯ್ತು.

ಸಹೋದರರು ಆ ಹಾಲ್‌ನ ಬೃಹತ್‌ ನವೀಕರಣ ಕೆಲ್ಸನ ಕೈಗೆತ್ತಿಕೊಂಡ್ರು. 1985 ರ ಸೆಪ್ಟೆಂಬರ್‌ 8 ಅಂದ್ರೆ ನವೀಕರಣ ಕೆಲ್ಸ ಶುರುವಾಗಿ ಒಂದು ವರ್ಷದೊಳಗೆ ಆ ಹಾಲ್‌ನಲ್ಲಿ 79 ನೇ ಗಿಲ್ಯಡ್‌ ಪದವಿ ಪ್ರಧಾನ ಸಮಾರಂಭ ನಡೆಯಿತು. ಹೊರಗೆ ಲಾಯರಾಗಿ ಕೆಲ್ಸ ಮಾಡಿದ್ದಕ್ಕಿಂತ ಬೆತೆಲಿನಲ್ಲಿ ಯೆಹೋವನಿಗಾಗಿ ಕೆಲ್ಸ ಮಾಡಿದ್ದು ನಂಗೆ ತುಂಬ ಖುಷಿ ಕೊಡ್ತು. ಇಂಥ ಇನ್ನೂ ಹೆಚ್ಚಿನ ಕೇಸ್‌ಗಳಲ್ಲಿ ಯೆಹೋವನು ನನ್ನನ್ನು ಉಪಯೋಗಿಸ್ತಾನೆ ಅಂತ ನಂಗೆ ಅಂದಾಜೂ ಇರ್ಲಿಲ್ಲ.

ರಕ್ತರಹಿತ ಚಿಕಿತ್ಸೆಯ ಹಕ್ಕಿಗಾಗಿ ಹೋರಾಟ

ಇಸವಿ 1980 ರ ದಶಕದಲ್ಲಿ ವಯಸ್ಕ ಸಾಕ್ಷಿಗಳು ರಕ್ತವಿಲ್ಲದೆ ಚಿಕಿತ್ಸೆ ಬೇಕೆಂದು ಕೇಳ್ಕೊಂಡಾಗ ಆಸ್ಪತ್ರೆಯವ್ರು ಮತ್ತು ಡಾಕ್ಟರ್‌ಗಳು ಒಪ್ತಿರ್ಲಿಲ್ಲ. ಅದ್ರಲ್ಲೂ ಗರ್ಭಿಣಿ ಸಹೋದರಿಯರಿಗೆ ಇದೊಂದು ದೊಡ್ಡ ಸವಾಲಾಗಿತ್ತು. ರಕ್ತ ತಗೊಳ್ಳದೇ ಚಿಕಿತ್ಸೆ ಪಡೆಯೋಕೆ ಗರ್ಭಿಣಿಯರಿಗೆ ಯಾವುದೇ ಹಕ್ಕಿಲ್ಲ ಅನ್ನೋದು ನ್ಯಾಯಾಧೀಶರ ಅಭಿಪ್ರಾಯವಾಗಿತ್ತು. ಒಬ್ಬ ತಾಯಿ ರಕ್ತ ತೆಗೆದುಕೊಳ್ಳದೇ ಹೋದಲ್ಲಿ ಅವ್ಳು ಸತ್ತು ಹೋಗ್ಬಹುದು. ಆಗ ಮಗು ತಾಯಿ ಇಲ್ಲದ ತಬ್ಬಲಿಯಾಗ್ಬಿಡುತ್ತೆ ಅನ್ನೋದು ಅವ್ರ ಅನಿಸಿಕೆಯಾಗಿತ್ತು.

ಇಸವಿ 1988 ರ ಡಿಸೆಂಬರ್‌ 29 ರಂದು ಸಹೋದರಿ ಡನೀಸ್‌ ನಿಕೆಲೊ ಗಂಡು ಮಗುವಿಗೆ ಜನ್ಮ ನೀಡಿದ್ರು. ಆಗ ಅವ್ರಿಗೆ ತುಂಬ ರಕ್ತಸ್ರಾವ ಆಯ್ತು. ಹಿಮೋಗ್ಲೋಬಿನ್‌ ಪ್ರಮಾಣ ತುಂಬ ಕಡಿಮೆಯಿತ್ತು (5ಕ್ಕಿಂತ ಕಡಿಮೆ). ಅವ್ರ ಜೀವ ಅಪಾಯದಲ್ಲಿ ಇದ್ದಿದ್ರಿಂದ ಡಾಕ್ಟರ್‌ ರಕ್ತ ತಗೊಳ್ಳಲೇಬೇಕು ಅಂತ ಹೇಳಿದ್ರು. ಆದ್ರೆ ಆ ಸಹೋದರಿ ಒಪ್ಲಿಲ್ಲ. ಮಾರನೇ ದಿನ ಬೆಳಗ್ಗೆ ಆಸ್ಪತ್ರೆಯ ಸಿಬ್ಬಂದಿ ಆ ಸಹೋದರಿಗೆ ರಕ್ತ ಕೊಟ್ಟು ಚಿಕಿತ್ಸೆ ಮಾಡೋಕೆ ನ್ಯಾಯಾಧೀಶರಿಂದ ಅನುಮತಿ ಪಡ್ಕೊಂಡ್ರು. ಆದ್ರೆ ಆ ನ್ಯಾಯಾಧೀಶ ಈ ವಿಚಾರದಲ್ಲಿ ಸಹೋದರಿ ನಿಕೆಲೊ ಹತ್ರ ಆಗಲಿ ಅಥ್ವಾ ಅವ್ರ ಗಂಡನ ಹತ್ರ ಆಗಲಿ ಏನೂ ಕೇಳಲೇ ಇಲ್ಲ.

ಡಿಸೆಂಬರ್‌ 30 ರ ಶುಕ್ರವಾರದಂದು ಸಹೋದರಿ ನಿಕೆಲೊ ಅವ್ರ ಗಂಡ ಮತ್ತು ಕುಟುಂಬದವ್ರು ರಕ್ತ ಕೊಡೋದು ಬೇಡ ಖಡಾಖಂಡಿತವಾಗಿ ಹೇಳಿದ್ರೂ ಆಸ್ಪತ್ರೆಯ ಸಿಬ್ಬಂದಿ ಆಕೆಗೆ ರಕ್ತ ಕೊಟ್ಟೇ ಬಿಟ್ರು. ಆ ಸಂಜೆನೇ ಆಕೆಯ ಕುಟುಂಬ ಸದಸ್ಯರು ಮತ್ತು ಕೆಲವು ಹಿರಿಯರು ರಕ್ತ ಕೊಡೋಕೆ ತಡೆದ್ರು ಅಂತ ಆರೋಪಿಸಿ ಅವ್ರೆಲ್ಲರನ್ನು ಅರೆಸ್ಟ್‌ ಮಾಡ್ಬಿಟ್ರು. ಮಾರನೇ ದಿನ ಬೆಳಗ್ಗೆ ಅಂದ್ರೆ ಶನಿವಾರ ಡಿಸೆಂಬರ್‌ 31 ರಂದು ನ್ಯೂಯಾರ್ಕ್‌ ಸಿಟಿಯ ಮತ್ತು ಲಾಂಗ್‌ ಐಲೆಂಡಿನ ವಾರ್ತಾ ಪತ್ರಿಕೆಗಳಲ್ಲಿ, ಟಿವಿಯಲ್ಲಿ ಮತ್ತು ರೇಡಿಯೋದಲ್ಲಿ ಈ ಸುದ್ದಿ ಪ್ರಸಾರವಾಯ್ತು.

ಫಿಲಿಪ್‌ ಬ್ರಮ್ಲಿ ಜೊತೆ

ನಾವು ಕೇಸ್‌ ಹಾಕಿದ್ವಿ ಮತ್ತು ಸೋಮವಾರ ಬೆಳಗ್ಗೆ ನಾನು ಮೇಲ್ದರ್ಜೆಯ ಕೋರ್ಟ್‌ನ ನ್ಯಾಯಾಧೀಶರಾಗಿದ್ದ ಮಿಲ್ಟನ್‌ ಮಾಲನ್‌ ಹತ್ರ ಮಾತಾಡ್ದೆ. ಆ ಕೇಸಿನ ಬಗ್ಗೆ ಅವ್ರಿಗೆ ಸಂಪೂರ್ಣ ಮಾಹಿತಿ ಕೊಟ್ಟೆ ಮತ್ತು ‘ರಕ್ತ ಕೊಡ್ಬಹುದು’ ಅಂತ ತೀರ್ಪು ನೀಡಿದ್ದ ನ್ಯಾಯಾಧೀಶರು ಏನೂ ವಿಚಾರಣೆ ಮಾಡದೆ ಈ ತೀರ್ಪು ನೀಡಿದ್ದಾರೆ ಅಂತ ಅವ್ರಿಗೆ ಸ್ಪಷ್ಟವಾಗಿ ತಿಳಿಸ್ದೆ. ಜಸ್ಟಿಸ್‌ ಮಾಲನ್‌ “ಸಂಜೆ ಆಫೀಸಿಗೆ ಬನ್ನಿ. ಈ ಕೇಸಿನ ಬಗ್ಗೆ ಮಾತಾಡೋಣ, ಕಾನೂನಿನ ಯಾವ್ಯಾವ ನಿಯಮಗಳು ಈ ಕೇಸಿಗೆ ಅನ್ವಯವಾಗುತ್ತೆ ಅಂತ ಚರ್ಚಿಸೋಣ” ಅಂತ ಹೇಳಿದ್ರು. ನನ್ನ ಜೊತೆ ನನ್ನ ಮೇಲ್ವಿಚಾರಕರಾಗಿದ್ದ ಸಹೋದರ ಫಿಲಿಪ್‌ ಬ್ರಮ್ಲಿ ಕೂಡ ಬಂದಿದ್ರು. ನ್ಯಾಯಾಧೀಶರು ಆಸ್ಪತ್ರೆಯ ವಕೀಲರನ್ನೂ ಆಫೀಸಿಗೆ ಕರೆದಿದ್ರು. ನಮ್ಮ ಚರ್ಚೆ ತಾರಕಕ್ಕೇರಿತು. ಆಗ ಸಹೋದರ ಬ್ರಮ್ಲಿ ತಮ್ಮ ನೋಟ್‌ಪ್ಯಾಡ್‌ನಲ್ಲಿ, “ಸಮಾಧಾನವಾಗಿ ಮಾತಾಡಿ” ಅಂತ ಬರೆದು ನಂಗೆ ತೋರಿಸಿದ್ರು. ಹೇಗಾದ್ರೂ ಮಾಡಿ ಆಸ್ಪತ್ರೆಯ ಲಾಯರ್‌ ಮಾಡ್ತಿದ್ದ ವಾದ ಸರಿಯಲ್ಲ ಅಂತ ಸಾಬೀತುಪಡಿಸ್ಬೇಕು ಅನ್ನೋ ಉದ್ವೇಗದಲ್ಲಿ ನಾನು ಮಾತಾಡ್ತಿದ್ದೆ. ಹಾಗಾಗಿ ಅವ್ರು ಕೊಟ್ಟ ಸಲಹೆ ಸೂಕ್ತವಾಗಿತ್ತು.

ಅಮೆರಿಕದ ಸುಪ್ರೀಮ್‌ ಕೋರ್ಟ್‌ನಲ್ಲಿ ವಾಚ್‌ಟವರ್‌ ಮತ್ತು ವಿಲೇಜ್‌ ಆಫ್‌ ಸ್ಟ್ರೇಟನ್‌ ಮಧ್ಯೆ ನಡೆದ ಕೇಸಿನಲ್ಲಿ ಸಂಘಟನೆ ಪರವಾಗಿ ವಾದಮಾಡಿದ ಸಹೋದರರು. ಎಡದಿಂದ ಬಲಕ್ಕೆ: ರಿಚರ್ಡ್‌ ಮೊಕ್‌, ಗ್ರೆಗರಿ ಓಲ್ಡ್ಸ್‌, ಪೌಲ್‌ ಪೊಲಿಡೊರೊ, ಫಿಲಿಪ್‌ ಬ್ರಮ್ಲಿ, ನಾನು ಮತ್ತು ಮಾರಿಯೋ ಮೊರೆನೊ.—ಜನವರಿ 8, 2003 ರ ಎಚ್ಚರ! (ಇಂಗ್ಲಿಷ್‌) ನೋಡಿ

ಸುಮಾರು ಒಂದು ತಾಸು ಆದ್ಮೇಲೆ “ನಾಳೆ ನಿಮ್ಮ ಕೇಸನ್ನೇ ಮೊದ್ಲು ವಿಚಾರಣೆ ಮಾಡೋದು” ಅಂತ ಜಸ್ಟಿಸ್‌ ಮಾಲನ್‌ ತಿಳಿಸಿದ್ರು. ನಾವು ಅವ್ರ ಆಫೀಸಿನಿಂದ ಹೊರ ಹೋಗ್ವಾಗ “ಆಸ್ಪತ್ರೆಯ ಲಾಯರ್‌ಗೆ ನಾಳೆ ತುಂಬ ಕಷ್ಟ ಇದೆ” ಅಂತ ಹೇಳಿದ್ರು. ಅದರರ್ಥ ಸಹೋದರಿ ನಿಕೆಲೊಗೆ ಒತ್ತಾಯದಿಂದ ರಕ್ತ ಕೊಡೋ ಹಕ್ಕು ಆಸ್ಪತ್ರೆ ಸಿಬ್ಬಂದಿಗಿದೆ ಅಂತ ಸಾಬೀತು ಪಡಿಸೋದು ಅಷ್ಟು ಸುಲಭವಲ್ಲ ಅನ್ನೋದಾಗಿತ್ತು. ನಾವು ಗೆಲ್ಲೋ ಸಾಧ್ಯತೆ ಹೆಚ್ಚಿದೆ ಅಂತ ಯೆಹೋವ ನಮ್ಗೆ ಭರವಸೆ ಕೊಡ್ತಿದ್ದಾನೆ ಅಂತ ಅನಿಸ್ತು. ಯೆಹೋವ ತನ್ನ ಉದ್ದೇಶನ ನೆರವೇರಿಸೋಕೆ ನಮ್ಮಂಥ ಅಲ್ಪರನ್ನು ಉಪಯೋಗಿಸ್ತಾನಲ್ಲಾ ಅಂತ ನನ್ಗೆ ಆಶ್ಚರ್ಯ ಆಯ್ತು.

ಮಾರನೇ ದಿನ ಕೋರ್ಟಲ್ಲಿ ಏನು ಮಾತಾಡ್ಬೇಕು ಅನ್ನೋದನ್ನ ಹಿಂದಿನ ರಾತ್ರಿನೇ ಚೆನ್ನಾಗಿ ತಯಾರಿ ಮಾಡ್ಕೊಂಡ್ವಿ. ಆ ಕೋರ್ಟ್‌ ಬ್ರೂಕ್ಲಿನ್‌ ಬೆತೆಲ್‌ಗೆ ಹತ್ರ ಇದ್ದಿದ್ರಿಂದ ನಮ್ಮ ಆಫೀಸಿಂದ ಅಲ್ಲಿಗೆ ನಡ್ಕೊಂಡೇ ಹೋದ್ವಿ. ನಮ್ಮ ಕೇಸನ್ನ ವಿಚಾರಣೆ ಮಾಡ್ಲಿಕ್ಕೆ ನಾಲ್ಕು ನ್ಯಾಯಾಧೀಶರಿದ್ರು. ಅವ್ರು ನಮ್ಮ ವಾದ ವಿವಾದಗಳನ್ನು ಕೇಳಿಸಿಕೊಂಡು ಹಿಂದೆ ರಕ್ತ ಕೊಡ್ಬೇಕು ಅಂತ ನೀಡಿದ ನ್ಯಾಯತೀರ್ಪನ್ನು ವಜಾಗೊಳಿಸಿ ನಮ್ಮ ಸಹೋದರಿ ನಿಕೆಲೊ ಪರವಾಗಿ ತೀರ್ಪು ನೀಡಿದ್ರು. ರೋಗಿಯ ಅಭಿಪ್ರಾಯ ಕೇಳದೆ ತೀರ್ಪು ನೀಡೋದು ಮಾನವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಅಂತ ನ್ಯಾಯಾಧೀಶರ ಪೀಠ ತಿಳಿಸಿತು.

ಇದಾದ ನಂತ್ರ ನ್ಯೂಯಾರ್ಕಿನ ಸರ್ವೋಚ್ಛ ನ್ಯಾಯಾಲಯ ಸಹ ಸಹೋದರಿ ನಿಕೆಲೊಗೆ ರಕ್ತರಹಿತ ಚಿಕಿತ್ಸೆ ಪಡೆಯೋ ಹಕ್ಕಿತ್ತು ಅನ್ನೋದನ್ನ ದೃಢೀಕರಿಸ್ತು. ರಕ್ತಕ್ಕೆ ಸಂಬಂಧಿಸಿ ಅಮೆರಿಕದ ಬೇರೆಬೇರೆ ರಾಜ್ಯದ ಹೈಕೋರ್ಟ್‌ಗಳಲ್ಲಿ ನಡೆದ ನಾಲ್ಕು ಕೇಸುಗಳಲ್ಲಿ ನಾನು ಭಾಗವಹಿಸಿದೆ. ಅದ್ರಲ್ಲಿ ಈ ಕೇಸ್‌ ಮೊದಲ್ನೇದಾಗಿತ್ತು. (“ ಹೈಕೋರ್ಟಿನಿಂದ ನಮ್ಮ ಪರವಾಗಿ ಸಿಕ್ಕಿದ ತೀರ್ಪುಗಳು” ಚೌಕ ನೋಡಿ.) ನಾನು ಬೆತೆಲ್‌ನಲ್ಲಿದ್ದ ಬೇರೆ ಲಾಯರ್‌ ಜೊತೆ ಸೇರಿ ಅನೇಕ ಕೇಸ್‌ಗಳಲ್ಲಿ ಭಾಗವಹಿಸಿದ್ದೇನೆ. ಉದಾಹರಣೆಗೆ, ಮಕ್ಕಳ ಪಾಲನೆ, ವಿಚ್ಛೇದನ ಮತ್ತು ರಿಯಲ್‌ ಎಸ್ಟೇಟಿಗೆ ಸಂಬಂಧಪಟ್ಟ ಕೇಸುಗಳಲ್ಲೂ ವಾದ ಮಾಡಿದ್ದೇನೆ.

ಮದುವೆ ಮತ್ತು ಕುಟುಂಬ ಜೀವನ

ನನ್ನ ಪತ್ನಿ ಡೆನಿಸ್‌ ಜೊತೆ

ಒಂದ್ಸಲ ನಾನು ಡೆನಿಸ್‌ ಅನ್ನೋ ಸಹೋದರಿಯನ್ನು ಭೇಟಿ ಮಾಡಿದೆ. ಆಕೆಗೆ ವಿಚ್ಛೇದನ ಆಗಿತ್ತು ಮತ್ತು ಮೂರು ಮಕ್ಕಳಿದ್ರು. ಮನೆಯ, ಮಕ್ಕಳ ಜವಾಬ್ದಾರಿ ಜೊತೆಗೆ ಆಕೆ ಪಯನೀಯರ್‌ ಸೇವೆನೂ ಮಾಡ್ತಿದ್ಳು. ಆಕೆ ಜೀವ್ನದಲ್ಲಿ ತುಂಬ ಕಷ್ಟ ಅನುಭವಿಸಿದ್ಳು. ಏನೇ ಆದ್ರೂ ಯೆಹೋವನ ಸೇವೆ ಬಿಡಬಾರ್ದು ಅಂತ ಆಕೆ ಮಾಡಿದ ದೃಢ ನಿರ್ಧಾರ ನಂಗೆ ತುಂಬ ಇಷ್ಟ ಆಯ್ತು. 1992 ರಲ್ಲಿ ನ್ಯೂಯಾರ್ಕಿನಲ್ಲಿ ನಡೆದ “ಜ್ಯೋತಿ ವಾಹಕ” (“ಲೈಟ್‌ ಬೇರರ್ಸ್‌”) ಜಿಲ್ಲಾ ಅಧಿವೇಶನದಲ್ಲಿ ನಾನು ಆಕೆ ಹತ್ರ ಹೋಗಿ ನಿಮ್ಮನ್ನ ಮದ್ವೆಯಾಗೋಕೆ ನಂಗೆ ಇಷ್ಟ ಇದೆ ಅಂತ ಹೇಳ್ದೆ. ಅದಾಗಿ ಒಂದು ವರ್ಷದ ನಂತ್ರ ನಾವಿಬ್ರು ಮದ್ವೆ ಆದ್ವಿ. ನಿಜವಾಗ್ಲೂ ಆಕೆ ನಂಗೆ ಯೆಹೋವನಿಂದ ಸಿಕ್ಕಿರೋ ಉಡುಗೊರೆ. ನನ್ನನ್ನು ತುಂಬ ಪ್ರೀತಿಯಿಂದ ನೋಡಿಕೊಂಡಿದ್ದಾಳೆ.—ಜ್ಞಾನೋ. 31:12.

ನಮ್ಮಿಬ್ರಿಗೆ ಮದ್ವೆಯಾದಾಗ ಆಕೆಯ ಮಕ್ಕಳು 11, 13, 16 ವರ್ಷದವರಾಗಿದ್ರು. ಅವ್ರಿಗೆ ನಾನು ಒಬ್ಬ ಒಳ್ಳೇ ತಂದೆಯಾಗ್ಬೇಕು ಅಂತ ಅಂದ್ಕೊಂಡೆ. ಒಬ್ಬ ಸಾಕು ತಂದೆಯಾಗಿ ನನಗಿರೋ ಜವಾಬ್ದಾರಿಯನ್ನ ಹೇಗೆ ನಿಭಾಯಿಸ್ಬೇಕು ಅನ್ನೋ ಸಲಹೆ ಸೂಚನೆಗಳನ್ನ ನಮ್ಮ ಪ್ರಕಾಶನಗಳಲ್ಲಿ ಓದಿದೆ. ಅದನ್ನ ಆದಷ್ಟು ಚೆನ್ನಾಗಿ ಅನ್ವಯಿಸೋಕೆ ಪ್ರಯತ್ನಿಸಿದೆ. ಶುರುನಲ್ಲಿ ಮಕ್ಳ ಜೊತೆ ಹೊಂದಿಕೊಳ್ಳೋಕೆ ಕಷ್ಟ ಆಯ್ತು. ಆದ್ರೆ ಸಮ್ಯ ಕಳೆದಂತೆ ನಾವು ಒಬ್ರನೊಬ್ರು ಅರ್ಥಮಾಡ್ಕೊಂಡ್ವಿ. ಮಕ್ಳು ನನ್ನನ್ನ ಒಳ್ಳೇ ಸ್ನೇಹಿತನಾಗಿ, ಪ್ರೀತಿಯ ತಂದೆಯಾಗಿ ನೋಡಿದ್ರು. ನಂಗೆ ತುಂಬ ಖುಷಿಯಾಯ್ತು. ನಮ್ಮ ಮಕ್ಳ ಫ್ರೆಂಡ್ಸಿಗೆ ನಮ್ಮ ಮನೆ ಯಾವಾಗ್ಲೂ ತೆರೆದಿತ್ತು. ಮನೆ ತುಂಬ ಮಕ್ಳು, ಮಕ್ಳ ಫ್ರೆಂಡ್ಸು ಇರೋದನ್ನ ನೋಡ್ವಾಗ, ಅವ್ರ ಚೇಷ್ಟೆ ನೋಡ್ವಾಗ ನಮ್ಗೆ ಖುಷಿಯಾಗ್ತಿತ್ತು.

ಇಸವಿ 2013 ರಲ್ಲಿ ಡೆನಿಸ್‌ ಮತ್ತು ನಾನು ನಮ್ಮಿಬ್ರ ವಯಸ್ಸಾದ ಹೆತ್ತವ್ರನ್ನ ನೋಡಿಕೊಳ್ಳಲು ವಿಸ್ಕಾನ್ಸನ್‌ಗೆ ಹೋದ್ವಿ. ಆಶ್ಚರ್ಯ ಏನಂದ್ರೆ ಅಲ್ಲಿಗೇ ನನ್ನ ಬೆತೆಲ್‌ ಸೇವೆ ನಿಂತು ಹೋಗ್ಲಿಲ್ಲ. ಕಾನೂನಿಗೆ ಸಂಬಂಧಪಟ್ಟ ವಿಷ್ಯಗಳಲ್ಲಿ ನೆರವು ನೀಡೋಕೆ ಬೆತೆಲ್‌ ನನ್ನನ್ನ ತಾತ್ಕಾಲಿಕ ಸ್ವಯಂ ಸೇವಕನಾಗಿ ಉಪಯೋಗಿಸ್ತು.

ಅನಿರೀಕ್ಷಿತ ಆಘಾತ

2018 ರ ಸೆಪ್ಟೆಂಬರ್‌ನಲ್ಲಿ ನನ್ನ ಗಂಟಲಲ್ಲಿ ಏನೋ ಸಮಸ್ಯೆ ಇದೆ ಅನ್ನೋ ತರ ಅನಿಸ್ತಿತ್ತು. ನಮ್ಮ ಡಾಕ್ಟರ್‌ ಹತ್ರ ಹೋಗಿ ಚೆಕ್‌ ಮಾಡಿಸ್ದೆ. ಆದ್ರೆ ಏನು ಸಮಸ್ಯೆ ಅಂತ ಅವ್ರಿಗೆ ಗೊತ್ತಾಗ್ಲಿಲ್ಲ. ನಂತ್ರ ಇನ್ನೊಬ್ರು ಡಾಕ್ಟರ್‌ ಒಬ್ಬ ನರತಜ್ಞರನ್ನು ಭೇಟಿ ಮಾಡಿ ಅಂತ ಸಲಹೆ ಕೊಟ್ರು. 2019 ರ ಜನವರಿಯಲ್ಲಿ ನರತಜ್ಞರು ನನ್ನನ್ನು ಪರೀಕ್ಷಿಸಿ ಬಹುಶಃ ನನಗೆ ಪ್ರೋಗ್ರೆಸಿವ್‌ ಸುಪ್ರಾನ್ಯೂಕ್ಲಿಯರ್‌ ಪಾಲ್ಸಿ (PSP) ಅನ್ನೋ ನರಕ್ಕೆ ಸಂಬಂಧಿಸಿದ ತುಂಬ ಅಪರೂಪದ ಕಾಯಿಲೆ ಬಂದಿರಬಹುದು ಅಂತ ಹೇಳಿದ್ರು.

ಮೂರು ದಿನದ ನಂತ್ರ ನಾನು ಐಸ್‌ ಸ್ಕೇಟಿಂಗ್‌ ಮಾಡ್ವಾಗ ನನ್ನ ಬಲಗೈಯ ಮಣಿಕಟ್ಟು ಮುರಿದು ಹೋಯ್ತು. ನಂಗೆ ಸ್ಕೇಟಿಂಗ್‌ ಅಂದ್ರೆ ಪಂಚಪ್ರಾಣ. ನಾನು ಚಿಕ್ಕಂದಿನಿಂದ ತುಂಬ ಚೆನ್ನಾಗಿ ಆಡ್ತಿದ್ದೆ. ಆದ್ರೆ ಈ ಮಣಿಕಟ್ಟು ಮುರಿದು ಹೋದಾಗಿಂದ ನನ್ನ ದೇಹದ ಚಲನೆ ನನ್ನ ನಿಯಂತ್ರಣದಲ್ಲಿಲ್ಲ ಅಂತ ಗೊತ್ತಾಯ್ತು. ದಿನ ಹೋದಂತೆ ಆ ಕಾಯಿಲೆಯಿಂದ ನನ್ನ ಪರಿಸ್ಥಿತಿ ತುಂಬ ಹದಗೆಡ್ತಾ ಬಂತು. ಮಾತಾಡೋಕೆ, ಓಡಾಡೋಕೆ, ಆಹಾರ ನುಂಗೋಕೆ ತುಂಬ ಕಷ್ಟ ಆಯ್ತು.

ಯೆಹೋವನ ಸಂಘಟನೆಯಲ್ಲಿ ಒಬ್ಬ ವಕೀಲನಾಗಿ ಕೆಲ್ಸ ಮಾಡಿದ್ದು ನಂಗೆ ಸಿಕ್ಕ ಒಂದು ದೊಡ್ಡ ಆಶೀರ್ವಾದ. ವೈದ್ಯರಿಗೆ, ವಕೀಲರಿಗೆ ಮತ್ತು ನ್ಯಾಯಾಧೀಶರಿಗಾಗಿ ಇದ್ದಂಥ ಪತ್ರಿಕೆಗಳಲ್ಲಿ ಕೆಲ್ವೊಂದು ಲೇಖನಗಳನ್ನು ಬರೆದೆ. ಯೆಹೋವನ ಸಾಕ್ಷಿಗಳಿಗೆ ರಕ್ತರಹಿತ ಚಿಕಿತ್ಸೆ ಪಡ್ಕೊಳ್ಳೋ ಹಕ್ಕಿದೆ ಅನ್ನೋದ್ರ ಬಗ್ಗೆ ಲೋಕದ ಬೇರೆಬೇರೆ ಕಡೆ ನಡೆದ ಸೆಮಿನಾರ್‌ಗಳಲ್ಲಿ ಮಾತಾಡೋ ಅವಕಾಶ ಸಿಕ್ತು. ಆದ್ರೂ ಲೂಕ 17:10 ರಲ್ಲಿ ಹೇಳಿರುವಂತೆ ‘ನಾನು ಕೆಲಸಕ್ಕೆ ಬಾರದ ಆಳು, ನಾನು ಮಾಡಬೇಕಾಗಿದ್ದುದನ್ನೇ ಮಾಡಿದ್ದೇನೆ.’