ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 27

ನಿಮ್ಮ ಬಗ್ಗೆ ಹೆಚ್ಚಾಗಿ ಭಾವಿಸಿಕೊಳ್ತೀರಾ?

ನಿಮ್ಮ ಬಗ್ಗೆ ಹೆಚ್ಚಾಗಿ ಭಾವಿಸಿಕೊಳ್ತೀರಾ?

“ನಾನು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಹೇಳುವುದೇನೆಂದರೆ, ನಿಮ್ಮಲ್ಲಿ ಯಾವನೂ ತನ್ನ ಕುರಿತು ಅಗತ್ಯಕ್ಕಿಂತ ಹೆಚ್ಚಾಗಿ ಭಾವಿಸಿಕೊಳ್ಳಬಾರದು; ಅದಕ್ಕೆ ಬದಲಾಗಿ . . . ಸ್ವಸ್ಥಬುದ್ಧಿಯುಳ್ಳವನಾಗಿರುವಂತೆ ಭಾವಿಸಿಕೊಳ್ಳಬೇಕು.”—ರೋಮ. 12:3.

ಗೀತೆ 77 ಕ್ಷಮಿಸುವವರಾಗಿರಿ

ಕಿರುನೋಟ *

1. (ಎ) ಫಿಲಿಪ್ಪಿ 2:3 ಯಾವ ಸಲಹೆ ಕೊಡುತ್ತೆ? (ಬಿ) ಅದನ್ನ ಅನ್ವಯಿಸೋದ್ರಿಂದ ಯಾವ ಪ್ರಯೋಜನಗಳಿವೆ?

ನಾವೆಲ್ರೂ ಯೆಹೋವ ದೇವ್ರು ಹೇಳಿದಂತೆ ನಡ್ಕೊಳ್ತೇವೆ. ಯಾಕಂದ್ರೆ ನಮ್ಗೆ ಏನು ಒಳ್ಳೇದು ಅಂತ ಆತನಿಗೆ ಚೆನ್ನಾಗಿ ಗೊತ್ತು. (ಎಫೆ. 4:22-24) ನಮ್ಮಲ್ಲಿ ದೀನತೆಯಿದ್ರೆ ನಮ್ಮ ಬೇಕುಬೇಡಗಳನ್ನು ಬದಿಗೊತ್ತಿ ಯೆಹೋವನಿಗೆ ಏನು ಇಷ್ಟನೋ ಅದನ್ನ ಮಾಡ್ತೇವೆ ಮತ್ತು ಬೇರೆಯವ್ರನ್ನ ನಮಗಿಂತ ಶ್ರೇಷ್ಠರು ಅಂತ ನೆನಸ್ತೇವೆ. ಇದ್ರಿಂದ ಯೆಹೋವನ ಜೊತೆ ಒಳ್ಳೇ ಸಂಬಂಧ ಇರುತ್ತೆ ಮತ್ತು ನಮ್ಮ ಜೊತೆ ವಿಶ್ವಾಸಿಗಳ ಮನಸ್ಸನ್ನೂ ಗೆಲ್ತೇವೆ.—ಫಿಲಿಪ್ಪಿ 2:3 ಓದಿ.

2. ಅಪೊಸ್ತಲ ಪೌಲ ಏನು ತಪ್ಪಲ್ಲ ಅಂತ ಹೇಳಿದ್ನು? ಈ ಲೇಖನದಲ್ಲಿ ನಾವೇನನ್ನು ನೋಡಲಿದ್ದೇವೆ?

2 ನಾವು ಜಾಗ್ರತೆವಹಿಸದಿದ್ರೆ ಈ ಲೋಕದಲ್ಲಿರೋ ಜನ್ರ ತರ ನಮ್ಮಲ್ಲೂ ದೀನತೆ ಬದ್ಲು ಅಹಂಕಾರ, ಸ್ವಾರ್ಥ * ಬೆಳೆದುಬಿಡಬಹುದು. ಬಹುಶಃ ಒಂದನೇ ಶತಮಾನದಲ್ಲಿದ್ದ ಕೆಲ್ವು ಕ್ರೈಸ್ತರಲ್ಲೂ ಈ ಗುಣಗಳು ಕಾಣಿಸಿಕೊಂಡಿರೋ ಸಾಧ್ಯತೆ ಇದೆ. ಅದಕ್ಕೇ ಅಪೊಸ್ತಲ ಪೌಲನು ರೋಮನ್ನರಿಗೆ ಹೀಗೆ ಬರೆದ: “ನಾನು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಹೇಳುವುದೇನೆಂದರೆ, ನಿಮ್ಮಲ್ಲಿ ಯಾವನೂ ತನ್ನ ಕುರಿತು ಅಗತ್ಯಕ್ಕಿಂತ ಹೆಚ್ಚಾಗಿ ಭಾವಿಸಿಕೊಳ್ಳಬಾರದು; ಅದಕ್ಕೆ ಬದಲಾಗಿ . . . ಸ್ವಸ್ಥಬುದ್ಧಿಯುಳ್ಳವನಾಗಿರುವಂತೆ ಭಾವಿಸಿಕೊಳ್ಳಬೇಕು.” (ರೋಮ. 12:3) ಈ ವಚನದಲ್ಲಿ ಪೌಲ, ನಮ್ಮ ಬಗ್ಗೆ ನಮ್ಗೆ ಸ್ವಲ್ಪಮಟ್ಟಿಗಿನ ಗೌರವ ಇರೋದು ತಪ್ಪಲ್ಲ ಅಂತ ಹೇಳಿದ್ನು. ಆದ್ರೆ ಆ ಸ್ವಗೌರವ ಅತಿಯಾಗಬಾರ್ದು. ಅದು ಅತಿಯಾಗದಿರೋಕೆ ದೀನತೆ ಸಹಾಯ ಮಾಡುತ್ತೆ. ನಮ್ಮ ಬಗ್ಗೆ ಅತಿಯಾಗಿ ಭಾವಿಸಿಕೊಳ್ಳದೇ ದೀನತೆ ತೋರಿಸಬೇಕಾದ ಮೂರು ಕ್ಷೇತ್ರಗಳ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಿದ್ದೇವೆ. ಅವುಗಳಲ್ಲಿ (1) ನಮ್ಮ ಮದ್ವೆ ಜೀವ್ನದಲ್ಲಿ, (2) ಸಂಘಟನೆಯಲ್ಲಿ ನಮ್ಗೆ ಹೆಚ್ಚು ಸುಯೋಗ ಸಿಕ್ದಾಗ ಮತ್ತು (3) ಸೋಷಿಯಲ್‌ ಮೀಡಿಯಾ ಬಳಸ್ವಾಗ.

ಸಂಗಾತಿ ಜೊತೆ ದೀನತೆಯಿಂದ ನಡ್ಕೊಳ್ಳಿ

3. (ಎ) ಗಂಡ ಹೆಂಡ್ತಿ ಮಧ್ಯೆ ಮನಸ್ತಾಪ ಯಾಕೆ ಹುಟ್ಟಿಕೊಳ್ಳಬಹುದು? (ಬಿ) ಮನಸ್ತಾಪ ಆದಾಗ ಕೆಲವ್ರು ಏನಂತ ಯೋಚಿಸ್ತಾರೆ?

3 ಗಂಡ ಹೆಂಡ್ತಿ ಇಬ್ರೂ ಸಂತೋಷವಾಗಿರ್ಬೇಕು ಅನ್ನೋದೇ ಯೆಹೋವ ದೇವ್ರ ಬಯಕೆ. ಆದ್ರೆ ಇಬ್ರೂ ಅಪರಿಪೂರ್ಣರಾದ ಕಾರಣ ಅವ್ರಲ್ಲಿ ಮನಸ್ತಾಪ ಹುಟ್ಟಿಕೊಳ್ಳಬಹುದು. ಮದುವೆಯಾದವ್ರಿಗೆ ಸಮಸ್ಯಗಳಿರುತ್ತೆ ಅಂತ ಪೌಲ ಬರೆದಿದ್ದಾನೆ. (1 ಕೊರಿಂ. 7:28) ಕೆಲ್ವು ಗಂಡ ಹೆಂಡ್ತಿಯರಂತೂ ಯಾವಾಗ ನೋಡಿದ್ರೂ ಜಗಳ ಆಡ್ತಿರುತ್ತಾರೆ. ‘ನಾವಿಬ್ರೂ ಮದ್ವೆ ಆಗಬಾರ್ದಿತ್ತು’ ಅಂತ ಯೋಚಿಸ್ತಾರೆ. ಒಂದು ವೇಳೆ ಅವ್ರು ಲೋಕದಲ್ಲಿರೋರ ತರ ಯೋಚ್ಸಿದ್ರೆ ‘ಈ ಸಮಸ್ಯೆಗೆಲ್ಲಾ ವಿಚ್ಛೇದನನೇ ಪರಿಹಾರ’ ಅನ್ನೋ ತೀರ್ಮಾನಕ್ಕೆ ಬಂದುಬಿಡ್ತಾರೆ. ಹೀಗೆ ಅವ್ರು ಬರೀ ತಮ್ಮ ಸಂತೋಷದ ಬಗ್ಗೆ ಮಾತ್ರ ಯೋಚಿಸ್ತಾರೆ.

4. ಗಂಡ ಹೆಂಡ್ತಿ ಯಾವ ರೀತಿ ಯೋಚಿಸ್ಬಾರದು?

4 ಗಂಡ ಹೆಂಡ್ತಿ ಮಧ್ಯೆ ಸಮಸ್ಯೆ ಬಂದಾಗ ‘ಇನ್ನು ನಾವಿಬ್ರು ಒಟ್ಟಿಗೆ ಜೀವ್ನ ಮಾಡೋಕಾಗಲ್ಲ’ ಅಂತ ಯೋಚಿಸ್ಬಾರದು. ಲೈಂಗಿಕ ಅನೈತಿಕತೆಯ ಹೊರತು ಬೇರೆ ಯಾವ ಕಾರಣಕ್ಕೂ ವಿಚ್ಛೇದನ ಕೊಡಬಾರ್ದು ಅಂತ ಬೈಬಲ್‌ ಹೇಳುತ್ತೆ. (ಮತ್ತಾ. 5:32) ಪೌಲ ಬರೆದಂತೆ ವಿವಾಹದಲ್ಲಿ ಸಮಸ್ಯೆಗಳು ಬಂದಾಗ ಗಂಡ ಹೆಂಡ್ತಿ ಈ ರೀತಿಯಲ್ಲಿ ಯೋಚಿಸ್ಬಾರದು: ‘ನನ್‌ ಗಂಡ/ನನ್‌ ಹೆಂಡ್ತಿ ನನ್ನನ್ನ ಒಂಚೂರೂ ಚೆನ್ನಾಗಿ ನೋಡ್ಕೊಳ್ಳಲ್ಲ. ನಂಗೆ ಬೇಕಾದ ಪ್ರೀತಿ ಸಿಗ್ತಾ ಇಲ್ಲ, ಬೇರೊಬ್ಬ ವ್ಯಕ್ತಿ ಜೊತೆ ಇದ್ದಿದ್ರೆ ಖುಷಿಯಾಗಿ ಇರ್ತಿದ್ದೆ ಅನ್ಸುತ್ತೆ.’ ಗಮನಿಸಿದ್ರಾ? ಇಲ್ಲಿ ನಾನು, ನಂಗೆ, ನನ್ನ ಅನ್ನೋ ಸ್ವಾರ್ಥ ಯೋಚನೆ ಇದೆಯೇ ಹೊರತು ಸಂಗಾತಿ ಬಗ್ಗೆ ಯೋಚನೆ ಇಲ್ವೇ ಇಲ್ಲ. ಈ ಲೋಕದ ವಿವೇಕ ನಿಮ್ಮ ಮನಸ್ಸು ಏನು ಹೇಳುತ್ತೋ ಆ ತರ ನಡ್ಕೊಳೋಕೆ, ನಿಮ್ಗೆ ಯಾವುದ್ರಲ್ಲಿ ಖುಷಿ ಸಿಗುತ್ತೋ ಅದನ್ನ ಮಾಡೋಕೆ ಕುಮ್ಮಕ್ಕು ಕೊಡುತ್ತೆ. ನಿಮ್ಮ ಸಂತೋಷಕ್ಕೋಸ್ಕರ ವಿಚ್ಛೇದನ ಕೊಟ್ರೂ ತಪ್ಪಿಲ್ಲ ಅಂತ ಹೇಳುತ್ತೆ. ಆದ್ರೆ ಬೈಬಲ್‌ ‘ನಿಮ್ಮ ಸ್ವಂತ ವಿಷಯಗಳಲ್ಲಿ ವೈಯಕ್ತಿಕ ಆಸಕ್ತಿಯನ್ನು ವಹಿಸುತ್ತಾ ಅದರ ಮೇಲೆಯೇ ದೃಷ್ಟಿಯನ್ನಿಟ್ಟಿರುವ ಬದ್ಲಿಗೆ ಇತರರ ವಿಷಯಗಳಲ್ಲಿಯೂ ವೈಯಕ್ತಿಕ ಆಸಕ್ತಿ ತೋರಿಸಿರಿ’ ಅಂತ ಹೇಳುತ್ತೆ. (ಫಿಲಿ. 2:4) ನಿಮ್ಮ ಮದ್ವೆ ಬಂಧ ಶಾಶ್ವತವಾಗಿರಬೇಕು, ವಿಚ್ಛೇದನದಲ್ಲಿ ಕೊನೆಯಾಗಬಾರ್ದು ಅನ್ನೋದೇ ಯೆಹೋವನ ಆಸೆ. (ಮತ್ತಾ. 19:6) ನಿಮ್ಮ ಸ್ವಾರ್ಥ ಆಸೆಗಳಿಗಿಂತ ತನ್ನ ನೀತಿ ನಿಯಮಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡ್ಬೇಕಂತ ಆತನು ಬಯಸ್ತಾನೆ.

5. ಎಫೆಸ 5:33 ರ ಪ್ರಕಾರ ಗಂಡ ಹೆಂಡ್ತಿ ಒಬ್ರಿಗೊಬ್ರು ಹೇಗೆ ನಡ್ಕೋಬೇಕು?

5 ಗಂಡ ಹೆಂಡ್ತಿ ಒಬ್ರಿಗೊಬ್ರು ಪ್ರೀತಿ ಗೌರವದಿಂದ ನಡ್ಕೋಬೇಕು. (ಎಫೆಸ 5:33 ಓದಿ.) ತೆಗೆದುಕೊಳ್ಳೋದಕ್ಕಿಂತ ಕೊಡೋದು ಪ್ರಾಮುಖ್ಯ ಅಂತ ಬೈಬಲ್‌ ಕಲಿಸುತ್ತೆ. (ಅ. ಕಾ. 20:35) ಗಂಡ ಹೆಂಡ್ತಿ ಒಬ್ರಿಗೊಬ್ರು ಪ್ರೀತಿ ಗೌರವ ತೋರಿಸೋಕೆ ದೀನತೆ ಸಹಾಯ ಮಾಡುತ್ತೆ. ಅವ್ರಿಬ್ರಲ್ಲಿ ದೀನತೆಯಿದ್ರೆ ತಮ್ಮ ‘ಸ್ವಂತ ಹಿತದ ಬಗ್ಗೆ ಮಾತ್ರ ಚಿಂತಿಸಲ್ಲ ಪರಹಿತನೂ ಚಿಂತಿಸ್ತಾರೆ.’—1 ಕೊರಿಂ. 10:24.

ದೀನತೆ ಇರೋ ಗಂಡ ಹೆಂಡ್ತಿ ಜಗಳ ಆಡಲ್ಲ, ಒಬ್ರಿಗೊಬ್ರು ಸಹಾಯ ಮಾಡ್ತಾರೆ (ಪ್ಯಾರ 6 ನೋಡಿ)

6. ಸ್ಟೀವನ್‌ ಮತ್ತು ಸ್ಟೆಫಾನಿ ಹೇಳಿದ ಮಾತಿನಿಂದ ನೀವೇನು ಕಲಿತ್ರಿ?

6 ಅನೇಕ ಕ್ರೈಸ್ತ ದಂಪತಿಗಳಿಗೆ ದೀನತೆ ಇರೋ ಕಾರಣ ಅವ್ರ ಮಧ್ಯೆ ಸಂತೋಷ ಇದೆ. ಸ್ಟೀವನ್‌ ಉದಾಹರಣೆ ನೋಡಿ. ಅವ್ರು ಹೀಗೆ ಹೇಳ್ತಾರೆ: “ಗಂಡ ಹೆಂಡ್ತಿ ಮಧ್ಯೆ ಅನ್ಯೋನ್ಯತೆಯಿದ್ರೆ ಸಮಸ್ಯೆಗಳು ಬಂದಾಗ ಅದನ್ನ ಇಬ್ರು ಒಟ್ಟಿಗೆ ಬಗೆಹರಿಸ್ತಾರೆ. ನಂಗೆ ಯಾವ್ದು ಒಳ್ಳೇದಂತ ಯೋಚಿಸಲ್ಲ ನಮ್ಗೆ ಯಾವ್ದು ಒಳ್ಳೇದಂತ ಯೋಚಿಸ್ತಾರೆ.” ಅವ್ರ ಹೆಂಡ್ತಿ ಸ್ಟೆಫಾನಿ ಕೂಡ ಹೀಗೇ ಯೋಚಿಸ್ತಾರೆ. ಆಕೆ ಹೇಳೋದು: “ಮೂರು ಹೊತ್ತು ಜಗಳಮಾಡೋರ ಜೊತೆ ಇರೋಕೆ ಯಾರೂ ಇಷ್ಟಪಡಲ್ಲ. ನಮ್ಮಿಬ್ರ ಮಧ್ಯೆ ಮನಸ್ತಾಪಗಳಾದಾಗ ಅದಕ್ಕೆ ಏನ್‌ ಕಾರಣ ಅಂತ ತಿಳ್ಕೊಳೋಕೆ ಪ್ರಯತ್ನಿಸ್ತೀವಿ. ನಂತ್ರ ಪ್ರಾರ್ಥಿಸಿ, ಈ ಸಮಸ್ಯೆನಾ ಬಗೆಹರಿಸೋಕೆ ಯಾವ ಬೈಬಲ್‌ ತತ್ವ ಸಹಾಯ ಮಾಡುತ್ತೆ ಅಂತ ಸಂಶೋಧನೆ ಮಾಡಿ, ಅದ್ರ ಬಗ್ಗೆ ಒಟ್ಟಿಗೆ ಕೂತು ಮಾತಾಡ್ತೀವಿ. ಹೀಗೆ ನಾವು ಸಮಸ್ಯೆ ವಿರುದ್ಧ ಹೋರಾಡ್ತೇವೆ ಹೊರತು ನಾವಿಬ್ರು ಜಗಳ ಆಡಲ್ಲ.” ತಮಗಿಂತ ಹೆಚ್ಚಾಗಿ ತಮ್ಮ ಸಂಗಾತಿಗೆ ಪ್ರಾಮುಖ್ಯತೆ ಕೊಡುವವ್ರು ತುಂಬ ಖುಷಿಯಾಗಿರ್ತಾರೆ.

ಯೆಹೋವನ ಸೇವೆಯನ್ನ “ದೀನಮನಸ್ಸಿನಿಂದ” ಮಾಡಿ

7. ಒಬ್ಬ ಸಹೋದರನಿಗೆ ಹೆಚ್ಚಿನ ಸೇವಾಸುಯೋಗ ಸಿಕ್ದಾಗ ಅವ್ನು ಹೇಗೆ ನಡ್ಕೋಬೇಕು?

7 ಯೆಹೋವನ ಸೇವೆಯಲ್ಲಿ ನಮ್ಗೆ ಯಾವ ನೇಮಕ ಸಿಕ್ಕಿದ್ರೂ ಅದೊಂದು ಸುಯೋಗ ಅಂತ ನೆನಸ್ತೇವೆ. (ಕೀರ್ತ. 27:4; 84:10) ಒಬ್ಬ ಸಹೋದರನಿಗೆ ಯೆಹೋವನ ಸಂಘಟನೆಯಲ್ಲಿ ಹೆಚ್ಚು ಸೇವೆ ಮಾಡ್ಬೇಕಂತ ಮನಸ್ಸಿರೋದು ಒಳ್ಳೇದೇ. ಒಬ್ಬನು “ಮೇಲ್ವಿಚಾರಕನ ಕೆಲಸವನ್ನು ಎಟುಕಿಸಿಕೊಳ್ಳಲು ಪ್ರಯತ್ನಿಸುತ್ತಿರುವಲ್ಲಿ ಅವನು ಒಳ್ಳೇ ಕಾರ್ಯವನ್ನು ಅಪೇಕ್ಷಿಸುವವನಾಗಿದ್ದಾನೆ” ಅಂತ ಬೈಬಲೇ ಹೇಳುತ್ತೆ. (1 ತಿಮೊ. 3:1) ಆದ್ರೆ ಒಬ್ಬನಿಗೆ ಹೆಚ್ಚಿನ ಸೇವಾ ಸುಯೋಗ ಸಿಕ್ದಾಗ ಅವ್ನು ‘ಬೇರೆಲ್ರಿಗಿಂತ ನಾನೇ ಶ್ರೇಷ್ಠ’ ಅಂತ ನೆನೆಸ್ಬಾರ್ದು. (ಲೂಕ 17:7-10) ಬದ್ಲಿಗೆ ದೀನತೆಯಿಂದ ಬೇರೆಯವ್ರ ಸೇವೆ ಮಾಡ್ಬೇಕು.—2 ಕೊರಿಂ. 12:15.

8. ದಿಯೊತ್ರೇಫ, ಉಜ್ಜೀಯ ಮತ್ತು ಅಬ್ಷಾಲೋಮನ ಉದಾಹರಣೆಯಿಂದ ನಾವೇನು ಕಲೀತೇವೆ?

8 ಬೈಬಲ್ನಲ್ಲಿ ಅಹಂಕಾರಿಗಳಾಗಿದ್ದ ವ್ಯಕ್ತಿಗಳ ಬಗ್ಗೆ ತಿಳಿಸಲಾಗಿದೆ. ದಿಯೊತ್ರೇಫನಿಗೆ ನಮ್ರತೆ ಇರಲಿಲ್ಲ. ‘ಸಭೆಯಲ್ಲಿ ಪ್ರಥಮ ಸ್ಥಾನ’ ಸಿಗಬೇಕಂತ ಬಯಸ್ತಿದ್ದ. (3 ಯೋಹಾ. 9) ಉಜ್ಜೀಯ ದುರಹಂಕಾರದಿಂದ ವರ್ತಿಸ್ತಾ ಯಾಜಕರು ಮಾತ್ರ ಮಾಡಬೇಕಾಗಿದ್ದ ಕೆಲ್ಸ ಮಾಡೋಕೆ ಹೋದ. (2 ಪೂರ್ವ. 26:16-21) ಅಬ್ಷಾಲೋಮ ರಾಜನಾಗಬೇಕೆಂದು ಬಯಸಿ ಜನ್ರ ಬೆಂಬಲ ಪಡ್ಕೊಳ್ಳಲು ಅವ್ರನ್ನ ಪ್ರೀತಿಸೋ ತರ ನಾಟಕ ಆಡ್ದ. (2 ಸಮು. 15:2-6) ಯಾರು ತಮ್ಮನ್ನ ಹೆಚ್ಚಿಸಿಕೊಳ್ಳೋಕೆ ಪ್ರಯತ್ನಿಸ್ತಾರೋ ಅಂಥವ್ರನ್ನ ಕಂಡ್ರೆ ಯೆಹೋವನಿಗೆ ಒಂಚೂರು ಇಷ್ಟ ಆಗಲ್ಲ ಅಂತ ಈ ಬೈಬಲ್‌ ವೃತ್ತಾಂತಗಳು ಸ್ಪಷ್ಟವಾಗಿ ತೋರಿಸಿಕೊಡುತ್ತವೆ. (ಜ್ಞಾನೋ. 25:27) ಅಹಂಕಾರಿಗಳಿಗೆ ಮತ್ತು ಜನ್ರ ಮೆಚ್ಚಿಗೆ ಪಡೆಯಲು ಬಯಸುವವ್ರಿಗೆ ಅಪಾಯ ತಪ್ಪಿದ್ದಲ್ಲ.—ಜ್ಞಾನೋ. 16:18.

9. ಯೇಸು ಯಾವ ವಿಷ್ಯದಲ್ಲಿ ಮಾದರಿ ಇಟ್ಟಿದ್ದಾನೆ?

9 ಈ ಅಹಂಕಾರಿ ವ್ಯಕ್ತಿಗಳ ತರ ಯೇಸು ಇರ್ಲಿಲ್ಲ. “ಅವನು ದೇವರ ಸ್ವರೂಪದಲ್ಲಿದ್ದರೂ, ವಶಪಡಿಸಿಕೊಳ್ಳುವುದಕ್ಕೆ ಅಂದರೆ ದೇವರಿಗೆ ಸಮಾನನಾಗಿರಬೇಕೆಂಬುದಕ್ಕೆ ಯಾವುದೇ ಪರಿಗಣನೆಯನ್ನು ತೋರಿಸಲಿಲ್ಲ” ಅಂತ ಬೈಬಲ್‌ ಹೇಳುತ್ತೆ. (ಫಿಲಿ. 2:6) ಇಡೀ ವಿಶ್ವದಲ್ಲಿ ಯೆಹೋವನ ನಂತರದ ಸ್ಥಾನ ಯೇಸುವಿಗಿದೆ. ಆದ್ರೂ ಯಾವತ್ತಿಗೂ ಆತನು ತನ್ನ ಬಗ್ಗೆ ಅಗತ್ಯಕ್ಕಿಂತ ಹೆಚ್ಚಾಗಿ ಭಾವಿಸೋದಿಲ್ಲ. ಆತ ತನ್ನ ಶಿಷ್ಯರಿಗೆ “ನಿಮ್ಮೆಲ್ಲರ ಮಧ್ಯದಲ್ಲಿ ತಮ್ಮನ್ನು ಚಿಕ್ಕವನಾಗಿ ನಡೆಸಿಕೊಳ್ಳುವವನೇ ದೊಡ್ಡವನಾಗಿದ್ದಾನೆ” ಅಂತ ಹೇಳಿದ. (ಲೂಕ 9:48) ಯೇಸು ತರ ದೀನತೆ ತೋರಿಸೋ ಪಯನೀಯರರು, ಸಹಾಯಕ ಸೇವಕರು, ಹಿರಿಯರು ಮತ್ತು ಸಂಚರಣಾ ಮೇಲ್ವಿಚಾರಕರ ಜೊತೆ ಕೆಲ್ಸ ಮಾಡೋದು ಒಂದು ದೊಡ್ಡ ಆಶೀರ್ವಾದ. ನಮ್ಮಲ್ಲಿ ದೀನತೆಯಿದ್ರೆ ಬೇರೆಯವ್ರನ್ನ ಪ್ರೀತಿಸ್ತೇವೆ. ಈ ಪ್ರೀತಿ ನಾವು ಸತ್ಯ ಕ್ರೈಸ್ತರು ಅನ್ನೋದಕ್ಕೆ ಒಂದು ಗುರುತಾಗಿದೆ ಅಂತ ಯೇಸು ಹೇಳಿದ.—ಯೋಹಾ. 13:35.

10. ಸಭೆಯಲ್ಲಿರೋ ಕೆಲ್ವು ಸಮಸ್ಯೆಗಳನ್ನ ಹಿರಿಯರು ಸರಿಯಾಗಿ ಬಗೆಹರಿಸ್ತಿಲ್ಲ ಅಂತ ನಿಮ್ಗೆ ಅನಿಸಿದ್ರೆ ಏನು ಮಾಡ್ಬೇಕು?

10 ಸಭೆಯಲ್ಲಿರೋ ಸಮಸ್ಯೆಗಳನ್ನ ಹಿರಿಯರು ಸರಿಯಾಗಿ ಬಗೆಹರಿಸ್ತಿಲ್ಲ ಅಂತ ನಿಮ್ಗೆ ಅನಿಸಿದ್ರೆ ಏನು ಮಾಡ್ತೀರಾ? ಅವ್ರ ಮೇಲೆ ಗೊಣಗೋ ಬದ್ಲು ದೀನತೆಯಿಂದ ಅವ್ರಿಗೆ ಸಂಪೂರ್ಣ ಬೆಂಬಲ ಕೊಡ್ಬೇಕು. ಯಾಕಂದ್ರೆ ಅವ್ರು ಮುಂದಾಳತ್ವ ವಹಿಸುವವ್ರಾಗಿದ್ದಾರೆ. (ಇಬ್ರಿ. 13:17) ಹಾಗಾಗಿ ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ: ‘ಬಗೆಹರಿಯಬೇಕಂತ ನಾನು ಅಂದುಕೊಂಡಿರೋ ಸಮಸ್ಯೆ ಅಷ್ಟೊಂದು ಗಂಭೀರವಾದದ್ದಾ? ಅದನ್ನ ಸರಿಮಾಡೋಕೆ ಇದು ಸೂಕ್ತ ಸಮ್ಯನಾ? ಅದನ್ನ ಸರಿಮಾಡೋ ಜವಾಬ್ದಾರಿ ನನ್ನದಾ? ಸಭೆಯಲ್ಲಿ ಐಕ್ಯತೆ ತರಲು ಪ್ರಯತ್ನಿಸ್ತಿದ್ದೀನಾ ಅಥ್ವಾ ನನಗೇ ಎಲ್ಲಾ ಗೊತ್ತಿರೋದು ಅನ್ನೋ ತರ ನಡ್ಕೊಳ್ತಿದ್ದೇನಾ?’

ಯಾರಿಗೆ ಹೆಚ್ಚು ಸೇವಾಸುಯೋಗ ಇರುತ್ತೋ ಅವ್ರು ಬರೀ ತಮ್ಮ ಸಾಮರ್ಥ್ಯಕ್ಕಷ್ಟೇ ಅಲ್ಲ ದೀನತೆಗೂ ಹೆಸ್ರುವಾಸಿಯಾಗಿರಬೇಕು (ಪ್ಯಾರ 11 ನೋಡಿ) *

11. ಎಫೆಸ 4:2, 3 ರ ಪ್ರಕಾರ ನಾವು ದೀನತೆಯಿಂದ ಯೆಹೋವನ ಸೇವೆ ಮಾಡಿದ್ರೆ ಸಭೆಗೆ ಯಾವ ಪ್ರಯೋಜನಗಳಿವೆ?

11 ಯೆಹೋವನಿಗೆ ನಮ್ಮಲ್ಲಿರೋ ದೀನತೆ ಮುಖ್ಯ ಹೊರತು ನಮ್ಮ ಸಾಮರ್ಥ್ಯವಲ್ಲ. ನಮ್ಮಲ್ಲಿರೋ ಐಕ್ಯತೆ ಮುಖ್ಯ ಹೊರತು ನಾವೆಷ್ಟು ಕೆಲ್ಸ ಮಾಡ್ತೀವಿ ಅನ್ನೋದಲ್ಲ. ಹಾಗಾಗಿ ದೀನತೆಯಿಂದ ಯೆಹೋವನ ಸೇವೆಮಾಡಿ. ಆಗ ಸಭೆಯಲ್ಲಿ ಐಕ್ಯತೆ ಹೆಚ್ಚಿಸ್ತೀರಿ. (ಎಫೆಸ 4:2, 3 ಓದಿ.) ಸುವಾರ್ತೆ ಸಾರೋದ್ರಲ್ಲಿ ಹೆಚ್ಚು ಸಮ್ಯ ಕಳೆಯಿರಿ. ಬೇರೆಯವ್ರಿಗೆ ಏನು ಅಗತ್ಯ ಇದೆ ಅಂತ ತಿಳ್ಕೊಂಡು ಅವ್ರಿಗೆ ಬೇಕಾದ ಸಹಾಯ ಮಾಡೋಕೆ ಪ್ರಯತ್ನಿಸಿ. ಎಲ್ರಿಗೂ ಅಥಿತಿಸತ್ಕಾರ ಮಾಡಿ. ಸಭೆಯಲ್ಲಿ ಜವಾಬ್ದಾರಿಯುತ ಸ್ಥಾನ ಇಲ್ಲದವ್ರಿಗೂ ಅಥಿತಿಸತ್ಕಾರ ಮಾಡಿ. (ಮತ್ತಾ. 6:1-4; ಲೂಕ 14:12-14) ನೀವು ದೀನತೆಯಿಂದ ಸಹೋದರ ಸಹೋದರಿಯರ ಜೊತೆ ಕೆಲ್ಸ ಮಾಡಿದಾಗ ನಿಮ್ಮಲ್ಲಿರೋ ಕೌಶಲವನ್ನ ಅವ್ರು ಗುರುತಿಸ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮಲ್ಲಿರೋ ದೀನತೆಯನ್ನು ಅವ್ರು ನೋಡ್ತಾರೆ.

ಸೋಷಿಯಲ್‌ ಮೀಡಿಯಾ ಬಳಸ್ವಾಗ ದೀನತೆ ತೋರಿಸಿ

12. ಸ್ನೇಹಿತರು ಇರ್ಬೇಕು ಅಂತ ಬೈಬಲ್‌ ಉತ್ತೇಜಿಸುತ್ತಾ? ವಿವರಿಸಿ.

12 ನಾವು ಕುಟುಂಬ ಸದಸ್ಯರ ಜೊತೆ, ಸ್ನೇಹಿತರ ಜೊತೆ ಸಂತೋಷವಾಗಿ ಸಮ್ಯ ಕಳೀಬೇಕಂತ ಯೆಹೋವನು ಇಷ್ಟಪಡ್ತಾನೆ. (ಕೀರ್ತ. 133:1) ಯೇಸುಗೆ ಒಳ್ಳೇ ಸ್ನೇಹಿತರಿದ್ರು. (ಯೋಹಾ. 15:15) ಒಳ್ಳೇ ಸ್ನೇಹಿತರಿಂದ ಪ್ರಯೋಜನವಿದೆ ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋ. 17:17; 18:24) ಯಾರ ಜೊತೆನೂ ಸೇರದೇ, ಒಂಟಿಯಾಗಿ ಇರೋದು ಒಳ್ಳೇದಲ್ಲ ಅಂತನೂ ಅದು ತಿಳ್ಸುತ್ತೆ. (ಜ್ಞಾನೋ. 18:1) ತುಂಬ ಜನ್ರನ್ನ ಫ್ರೆಂಡ್ಸ್‌ ಮಾಡ್ಕೊಳ್ಳೋಕೆ, ಒಂಟಿತನದಿಂದ ಹೊರಬರೋಕೆ ಸೋಷಿಯಲ್‌ ಮೀಡಿಯಾ ಒಳ್ಳೇ ಮಾರ್ಗ ಅಂತ ಅನೇಕರು ನೆನಸ್ತಾರೆ. ಆದ್ರೆ ಸೋಷಿಯಲ್‌ ಮೀಡಿಯಾ ಬಳಸ್ವಾಗ ನಾವು ತುಂಬ ಎಚ್ಚರಿಕೆ ವಹಿಸ್ಬೇಕು.

13. ಸೋಷಿಯಲ್‌ ಮೀಡಿಯಾವನ್ನ ಹೆಚ್ಚು ಬಳಸೋ ಜನ್ರಿಗೆ ಯಾಕೆ ಖಿನ್ನತೆ, ಒಂಟಿತನ ಕಾಡುತ್ತೆ?

13 ಬೇರೆಯವ್ರು ಪೋಸ್ಟ್‌ ಮಾಡೋ ಕಮೆಂಟ್‌ಗಳನ್ನ, ಚಿತ್ರಗಳನ್ನ ಗಂಟೆಗಟ್ಟಲೆ ನೋಡೋವ್ರಿಗೆ ಒಂಟಿತನ ಕಾಡುತ್ತೆ ಮತ್ತು ಖಿನ್ನತೆ ಇರುತ್ತೆ ಅಂತ ಅಧ್ಯಯನಗಳಿಂದ ಕಂಡುಬಂದಿದೆ. ಯಾಕೆ? ಒಂದು ಕಾರಣ ಏನಿರಬಹುದೆಂದ್ರೆ ಜನ್ರು ಸೋಷಿಯಲ್‌ ಮೀಡಿಯಾದಲ್ಲಿ ಒಳ್ಳೇ ಫೋಟೋಗಳನ್ನು ಮಾತ್ರ ಪೋಸ್ಟ್‌ ಮಾಡ್ತಾರೆ. ಅದ್ರಲ್ಲಿ ಅವ್ರು ಎಂಜಾಯ್‌ ಮಾಡಿದ, ಸ್ನೇಹಿತರ ಜೊತೆ ಕಾಲ ಕಳೆದ ಮತ್ತು ಪ್ರೇಕ್ಷಣೀಯ ಸ್ಥಳಕ್ಕೆ ಹೋದಾಗ ತೆಗೆದ ಫೋಟೋಗಳೇ ಇರುತ್ತೆ. ಇದನ್ನ ನೋಡಿದ ವ್ಯಕ್ತಿ ತನ್ನನ್ನ ಅವ್ರ ಜೊತೆ ಹೋಲಿಸಿಕೊಳ್ತಾ, ‘ಅವ್ರು ಎಷ್ಟು ಎಂಜಾಯ್‌ ಮಾಡ್ತಿದ್ದಾರೆ, ನಂಗೆ ಆ ಚಾನ್ಸ್‌ ಇಲ್ವಲ್ಲಾ’ ಅಂತ ಕೊರಗ್ತಾರೆ. 19 ವಯಸ್ಸಿನ ಕ್ರೈಸ್ತ ಸಹೋದರಿ ಹೀಗೆ ಹೇಳ್ತಾಳೆ: “ಬೇರೆಯವ್ರು ಶನಿವಾರ ಭಾನುವಾರ ಮಜಾಮಾಡೋದನ್ನ ನೋಡ್ದಾಗ ನಾನ್‌ ಮಾತ್ರ ಮನೆಯಲ್ಲೇ ಇದ್ದೀನಲ್ಲಾ ಅಂತ ಬೇಜಾರಾಗ್ತಿತ್ತು.”

14. ಸೋಷಿಯಲ್‌ ಮೀಡಿಯಾ ಬಳಸೋ ವಿಷ್ಯದಲ್ಲಿ 1 ಪೇತ್ರ 3:8 ರಲ್ಲಿ ಕೊಟ್ಟಿರೋ ಸಲಹೆ ಹೇಗೆ ಸಹಾಯ ಮಾಡುತ್ತೆ?

14 ಸೋಷಿಯಲ್‌ ಮೀಡಿಯಾದಿಂದ ಪ್ರಯೋಜನಗಳಿವೆ ಅನ್ನೋದು ನಿಜನೇ. ಉದಾಹರಣೆಗೆ ಕುಟುಂಬದವ್ರನ್ನ, ಸ್ನೇಹಿತರನ್ನ ಸಂಪರ್ಕಿಸಬಹುದು. ಆದ್ರೆ ಕೆಲವ್ರು ಎಲ್ರ ಗಮನ ತಮ್ಮ ಕಡೆಗೆ ಬರಬೇಕಂತ ಕೆಲ್ವು ಫೋಟೋಗಳನ್ನ, ವಿಡಿಯೋಗಳನ್ನ ಪೋಸ್ಟ್‌ ಮಾಡ್ತಾರೆ. ಅದು ಒಂದು ರೀತಿಯಲ್ಲಿ ಅವ್ರು “ಎಲ್ರೂ ನನ್ನನ್ನೇ ನೋಡಿ” ಅಂತ ಹೇಳಿದ್‌ ತರ ಇರುತ್ತೆ. ಇನ್ನು ಕೆಲವ್ರಂತೂ ತಾವು ಪೋಸ್ಟ್‌ ಮಾಡಿರೋ ಅಥ್ವಾ ಬೇರೆಯವ್ರು ಪೋಸ್ಟ್‌ ಮಾಡಿರೋ ಫೋಟೋಗಳ ಬಗ್ಗೆ ಒರಟಾದ ಮತ್ತು ಕೆಟ್ಟ ಕಮೆಂಟ್‌ಗಳನ್ನ ಹಾಕ್ತಾರೆ. ನಮ್ಮಲ್ಲಿ ದೀನತೆಯಿದ್ರೆ, ಸಹೋದರರ ಮೇಲೆ ಪ್ರೀತಿ ಇದ್ರೆ ಸೋಷಿಯಲ್‌ ಮೀಡಿಯಾವನ್ನ ಇಂಥ ವಿಷ್ಯಗಳಿಗೆ ಬಳಸೋಕೆ ಹೋಗಲ್ಲ.—1 ಪೇತ್ರ 3:8 ಓದಿ.

ನೀವು ಆನ್‌ಲೈನ್‌ನಲ್ಲಿ ಪೋಸ್ಟ್‌ ಮಾಡೋ ಫೋಟೋ, ವಿಡಿಯೋ ನಿಮ್ಮ ಬಗ್ಗೆ ನೀವೇ ಕೊಚ್ಚಿಕೊಳ್ಳೋ ತರ ಇರುತ್ತಾ ಅಥ್ವಾ ನೀವು ದೀನ ವ್ಯಕ್ತಿ ಅಂತ ಗುರುತಿಸೋ ತರ ಇರುತ್ತಾ? (ಪ್ಯಾರ 15 ನೋಡಿ)

15. ನಮ್ಮನ್ನ ನಾವು ಹೆಚ್ಚಿಸಿಕೊಳ್ಳದಿರೋಕೆ ಬೈಬಲ್‌ ನಮ್ಗೆ ಯಾವ ಸಲಹೆ ಕೊಡುತ್ತೆ?

15 ನೀವು ಸೋಷಿಯಲ್‌ ಮೀಡಿಯಾ ಬಳಸ್ತಿರುವಲ್ಲಿ ಈ ಪ್ರಶ್ನೆ ಕೇಳ್ಕೊಳ್ಳಿ: ‘ನಾನು ಪೋಸ್ಟ್‌ ಮಾಡೋ ಕಮೆಂಟ್‌ಗಳು, ಫೋಟೋಗಳು, ವಿಡಿಯೋಗಳು ನನ್ನ ಬಗ್ಗೆ ನಾನೇ ಕೊಚ್ಚಿಕೊಳ್ತಿದ್ದೀನಂತ ತೋರಿಸಿಕೊಡುತ್ತಾ? ಅವುಗಳನ್ನ ನೋಡಿದವ್ರಿಗೆ ನನ್‌ ಮೇಲೆ ಹೊಟ್ಟೆಕಿಚ್ಚು ಆಗುತ್ತಾ?’ ನೆನಪಿಡಿ, “ಲೋಕದಲ್ಲಿರುವ ಸರ್ವವೂ—ಶರೀರದಾಶೆ, ಕಣ್ಣಿನಾಶೆ ಮತ್ತು ಜೀವನೈಶ್ವರ್ಯದ ಆಡಂಬರ ಪ್ರದರ್ಶನ—ಇವು ತಂದೆಯಿಂದ ಉಂಟಾಗದೆ ಲೋಕದಿಂದ ಉಂಟಾದವುಗಳಾಗಿವೆ” ಅಂತ ಬೈಬಲ್‌ ಹೇಳುತ್ತೆ. (1 ಯೋಹಾ. 2:16) “ಜೀವನೈಶ್ವರ್ಯದ ಆಡಂಬರ ಪ್ರದರ್ಶನ” ಅನ್ನೋ ಪದವನ್ನು ‘ನಮ್ಮಲ್ಲಿರೋ ವಸ್ತುಗಳ ಬಗ್ಗೆ ಕೊಚ್ಚಿಕೊಳ್ಳೋದು’ ಅಂತ ಒಂದು ಬೈಬಲ್‌ ಭಾಷಾಂತರಿಸಿದೆ. ಕ್ರೈಸ್ತರು ತಮ್ಮನ್ನು ತಾವೇ ಹೆಚ್ಚಸಿಕೊಳ್ಳಲು ಪ್ರಯತ್ನಿಸಲ್ಲ ಅಥ್ವಾ ಬೇರೆಯವ್ರು ತಮ್ಮನ್ನ ಮೆಚ್ಚಬೇಕು ಅಂತ ಬಯಸಲ್ಲ. ಅವ್ರು ಬೈಬಲಿನ ಈ ಸಲಹೆ ಅನ್ವಯಿಸ್ತಾರೆ: “ಅಹಂಕಾರಿಗಳೂ ಒಬ್ಬರೊಂದಿಗೊಬ್ಬರು ಸ್ಪರ್ಧೆಗಿಳಿಯುವವರೂ ಒಬ್ಬರ ಮೇಲೊಬ್ಬರು ಅಸೂಯೆಪಡುವವರೂ ಆಗದೆ ಇರೋಣ.” (ಗಲಾ. 5:26) ನಮ್ಮಲ್ಲಿ ದೀನತೆಯಿದ್ರೆ ಈ ಲೋಕದಲ್ಲಿರೋ ಅಹಂಕಾರಿಗಳ ತರ ಅಥ್ವಾ ‘ನಾನೇ ಶ್ರೇಷ್ಠ’ ಅಂತ ಯೋಚಿಸೋ ಜನ್ರ ತರ ಇರಲ್ಲ.

‘ಸ್ವಸ್ಥಬುದ್ಧಿಯುಳ್ಳವರಾಗಿರಿ’

16. ನಮ್ಮಲ್ಲಿ ಯಾಕೆ ಅಹಂಕಾರ ಇರಬಾರ್ದು?

16 ನಮ್ಮಲ್ಲಿ ದೀನತೆ ಇರಬೇಕು. ಯಾಕಂದ್ರೆ ಅಹಂಕಾರಿಗಳಿಗೆ “ಸ್ವಸ್ಥಬುದ್ಧಿ” ಇರಲ್ಲ. (ರೋಮ. 12:3) ಅಹಂಕಾರಿಗಳು ತಮ್ಮದೇ ಸರಿ ಅಂತ ವಾದಿಸ್ತಾರೆ ಮತ್ತು ತಮ್ಮ ಬಗ್ಗೆ ಮಾತ್ರ ಯೋಚಿಸ್ತಾರೆ. ಅವ್ರ ಯೋಚನೆಗಳು ಮತ್ತು ನಡತೆಯಿಂದ ಅವ್ರಿಗಷ್ಟೇ ಅಲ್ಲ ಬೇರೆಯವ್ರಿಗೂ ಹಾನಿಯಾಗುತ್ತೆ. ಒಂದ್ವೇಳೆ ಅವ್ರು ತಮ್ಮ ಯೋಚನೆಯನ್ನು ಬದಲಾಯಿಸಿಕೊಳ್ಳದೆ ಹೋದ್ರೆ ಸೈತಾನ ಅವ್ರ “ಮನಸ್ಸನ್ನು ಕುರುಡುಮಾಡಿ,” ಅವ್ರ ಯೋಚನೆಯನ್ನು ಹಾಳು ಮಾಡಿಬಿಡ್ತಾನೆ. (2 ಕೊರಿಂ. 4:4; 11:3) ಆದ್ರೆ ದೀನತೆ ಇರೋ ವ್ಯಕ್ತಿಗೆ ಸ್ವಸ್ಥಬುದ್ಧಿ ಇರುತ್ತೆ. ತನ್ನನ್ನು ಹೆಚ್ಚಿಸಿಕೊಳ್ಳೋಕೆ ಹೋಗಲ್ಲ. ಬೇರೆಯವ್ರು ತನಗಿಂತ ಶ್ರೇಷ್ಠ ಅಂತ ನೆನಸ್ತಾನೆ. (ಫಿಲಿ. 2:3) “ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ಆದರೆ ದೀನರಿಗೆ ಅಪಾತ್ರ ದಯೆಯನ್ನು ಅನುಗ್ರಹಿಸುತ್ತಾನೆ” ಅನ್ನೋದು ಅವ್ನಿಗೆ ಗೊತ್ತಿರುತ್ತೆ. (1 ಪೇತ್ರ 5:5) ಸ್ವಸ್ಥಬುದ್ಧಿ ಇರೋವ್ರು ಯಾವತ್ತಿಗೂ ಯೆಹೋವನನ್ನ ಎದುರು ಹಾಕಿಕೊಳ್ಳೋಕೆ ಹೋಗಲ್ಲ.

17. ನಾವು ದೀನರಾಗಿ ಉಳಿಯಲು ಏನು ಮಾಡ್ಬೇಕು?

17 ನಾವು ದೀನರಾಗಿ ಉಳೀಬೇಕಂದ್ರೆ “ಹಳೆಯ ವ್ಯಕ್ತಿತ್ವವನ್ನು ಅದರ ಅಭ್ಯಾಸಗಳೊಂದಿಗೆ ತೆಗೆದುಹಾಕಿ ನೂತನ ವ್ಯಕ್ತಿತ್ವವನ್ನು ಧರಿಸಿಕೊಳ್ಳಿರಿ” ಅನ್ನೋ ಬೈಬಲ್‌ ಸಲಹೆಯನ್ನ ಅನ್ವಯಿಸ್ಬೇಕು. ಆದ್ರೆ ಇದಕ್ಕಾಗಿ ತುಂಬ ಪ್ರಯತ್ನ ಹಾಕ್ಬೇಕು. ಯೇಸುವಿನ ಮಾದರಿಯನ್ನ ಅಧ್ಯಯನ ಮಾಡಿ ನಮ್ಮಿಂದಾದಷ್ಟು ಆತನನ್ನ ಅನುಕರಿಸಲು ಪ್ರಯತ್ನಿಸ್ಬೇಕು. (ಕೊಲೊ. 3:9, 10; 1 ಪೇತ್ರ 2:21) ಹೀಗೆ ಮಾಡಿದ್ರೆ ನಮ್ಗೆ ತುಂಬ ಪ್ರಯೋಜನಗಳಿವೆ. ನಾವು ದೀನತೆ ಬೆಳೆಸಿಕೊಳ್ತಾ ಹೋದಂತೆ ಕುಟುಂಬದಲ್ಲಿ ಸಂತೋಷ ಇರುತ್ತೆ. ಸಭೆಯಲ್ಲಿ ಐಕ್ಯತೆ ಇರುತ್ತೆ. ಸೋಷಿಯಲ್‌ ಮೀಡಿಯಾವನ್ನ ನಮ್ಮ ಬಗ್ಗೆ ಕೊಚ್ಚಿಕೊಳ್ಳೋಕೆ ಉಪಯೋಗಿಸಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಗೆ ಯೆಹೋವನ ಆಶೀರ್ವಾದ ಮತ್ತು ಮೆಚ್ಚಿಗೆ ಸಿಗುತ್ತೆ.

ಗೀತೆ 80 ಒಳ್ಳೇತನವೆಂಬ ಗುಣ

^ ಪ್ಯಾರ. 5 ಅಹಂಕಾರ, ಸ್ವಾರ್ಥ ತುಂಬಿದ ಲೋಕದಲ್ಲಿ ನಾವು ಜೀವಿಸ್ತಿದ್ದೇವೆ. ಅಂಥ ಸ್ವಭಾವ ನಮ್ಗೆ ಬರದಂತೆ ಜಾಗ್ರತೆವಹಿಸ್ಬೇಕು. ಯಾವ ಮೂರು ಕ್ಷೇತ್ರಗಳಲ್ಲಿ ‘ಬೇರೆಲ್ರಿಗಿಂತ ನಾನೇ ಹೆಚ್ಚು’ ಅನ್ನೋ ಮನೋಭಾವವನ್ನ ತೋರಿಸ್ಬಾರ್ದು? ಇದ್ರ ಬಗ್ಗೆ ಈ ಲೇಖನದಲ್ಲಿ ಕಲಿಯಲಿದ್ದೇವೆ.

^ ಪ್ಯಾರ. 2 ಪದ ವಿವರಣೆ: ಅಹಂಕಾರ ಇರೋ ವ್ಯಕ್ತಿ ಬೇರೆಯವ್ರಿಗಿಂತ ಹೆಚ್ಚಾಗಿ ತನ್ನ ಬಗ್ಗೆನೇ ಯೋಚಿಸ್ತಾನೆ. ಆದ್ರಿಂದ ಅವನಲ್ಲಿ ಸ್ವಾರ್ಥನೂ ಇರುತ್ತೆ. ಆದ್ರೆ ದೀನತೆ ಇರೋ ವ್ಯಕ್ತಿ ನಿಸ್ವಾರ್ಥಿಯಾಗಿರ್ತಾನೆ. ಅವ್ನು ಜಂಬಕೊಚ್ಚಿಕೊಳ್ಳಲ್ಲ ಮತ್ತು ‘ಬೇರೆಯವ್ರಿಗಿಂತ ನಾನೇ ಶ್ರೇಷ್ಠ’ ಅಂತ ಯೋಚಿಸೋದಿಲ್ಲ.

^ ಪ್ಯಾರ. 56 ಚಿತ್ರ ವಿವರಣೆ: ಅಧಿವೇಶನದಲ್ಲಿ ಭಾಷಣ ಕೊಡ್ತಿರುವ ಮತ್ತು ಸಹೋದರರನ್ನ ಮೇಲ್ವಿಚಾರಣೆ ಮಾಡುತ್ತಿರುವ ಹಿರಿಯನು ಕ್ಷೇತ್ರ ಸೇವೆಯ ಕೂಟವನ್ನೂ ನಡೆಸ್ತಿದ್ದಾನೆ ಶುಚಿ ಮಾಡುವ ಕೆಲಸವನ್ನೂ ಖುಷಿಯಿಂದ ಮಾಡ್ತಿದ್ದಾನೆ.