ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 28

ನೀವು ನಂಬಿರೋದು ಸತ್ಯ ಅನ್ನೋದು ನಿಮ್ಗೆ ಮನವರಿಕೆಯಾಗಿದ್ಯಾ?

ನೀವು ನಂಬಿರೋದು ಸತ್ಯ ಅನ್ನೋದು ನಿಮ್ಗೆ ಮನವರಿಕೆಯಾಗಿದ್ಯಾ?

“ಕಲಿತ ವಿಷಯಗಳಲ್ಲಿಯೂ ನಂಬುವಂತೆ ಒಡಂಬಡಿಸಲ್ಪಟ್ಟ ವಿಷಯಗಳಲ್ಲಿಯೂ ಮುಂದುವರಿಯುತ್ತಾ ಇರು.”—2 ತಿಮೊ. 3:14.

ಗೀತೆ 64 ಸತ್ಯವನ್ನು ನಿನ್ನದಾಗಿಸಿಕೊ

ಕಿರುನೋಟ *

1. ನಮ್ಮ ಪ್ರಕಾರ “ಸತ್ಯ” ಅಂದ್ರೇನು?

“ನಿಮ್ಗೆ ಸತ್ಯ ಹೇಗೆ ಸಿಕ್ತು?” “ನಿಮ್ಮ ಕುಟುಂಬದವ್ರಿಂದ ಸತ್ಯ ಸಿಕ್ತಾ?” “ಎಷ್ಟು ವರ್ಷದಿಂದ ಸತ್ಯದಲ್ಲಿದ್ದೀರಿ?” “ಸತ್ಯಕ್ಕೆ ಹೇಗೆ ಬಂದ್ರಿ?” ಈ ಪ್ರಶ್ನೆಗಳನ್ನ ನಿಮ್ಗೆ ಯಾರಾದ್ರೂ ಕೇಳಿರಬಹುದು ಅಥ್ವಾ ನೀವೇ ಬೇರೆಯವ್ರಿಗೆ ಕೇಳಿರಬಹುದು. ನಮ್ಮ ಪ್ರಕಾರ “ಸತ್ಯ” ಅಂದ್ರೇನು? ನಮ್ಮ ನಂಬಿಕೆ ಬಗ್ಗೆ, ದೇವ್ರನ್ನು ಆರಾಧಿಸೋ ರೀತಿಯ ಬಗ್ಗೆ ಮತ್ತು ನಮ್ಮ ಜೀವ್ನ ರೀತಿಯ ಬಗ್ಗೆ ಬೇರೆಯವ್ರ ಹತ್ರ ಹೇಳ್ವಾಗ “ಸತ್ಯ” ಅನ್ನೋ ಪದ ಉಪಯೋಗಿಸ್ತೀವಿ. “ಸತ್ಯದಲ್ಲಿರೋ” ಜನ್ರಿಗೆ ಬೈಬಲ್‌ ಏನು ಕಲಿಸುತ್ತೆ ಅನ್ನೋದು ಚೆನ್ನಾಗಿ ಗೊತ್ತಿರುತ್ತೆ ಮತ್ತು ಅದ್ರ ಪ್ರಕಾರ ಜೀವಿಸ್ತಾರೆ. ಇದ್ರಿಂದ ಅವ್ರಿಗೆ ಸುಳ್ಳು ಧರ್ಮದಿಂದ ಬಿಡುಗಡೆ ಸಿಕ್ಕಿದೆ ಮತ್ತು ಇಷ್ಟು ಕಷ್ಟ ಇರೋ ಲೋಕದಲ್ಲೂ ಖುಷಿ ಖುಷಿಯಾಗಿ ಜೀವ್ನ ನಡೆಸೋಕೆ ಆಗ್ತಿದೆ.—ಯೋಹಾ. 8:32.

2. ಯೋಹಾನ 13:34, 35 ರಲ್ಲಿ ತಿಳಿಸಿದಂತೆ ಒಬ್ಬ ವ್ಯಕ್ತಿ ಸತ್ಯಕ್ಕೆ ಬರಲು ಯಾವ ವಿಷ್ಯ ಸೆಳೆಯಬಹುದು?

2 ಸತ್ಯಕ್ಕೆ ಬರೋಕೆ ಯಾವ ವಿಷ್ಯ ನಿಮ್ಮನ್ನು ಸೆಳೆಯಿತು? ಯೆಹೋವನ ಜನ್ರ ಒಳ್ಳೇ ನಡತೆ ಇರಬಹುದು. (1 ಪೇತ್ರ 2:12) ಅಥ್ವಾ ಅವ್ರು ತೋರಿಸಿದ ಪ್ರೀತಿ ಇರಬಹುದು. ಮೊದಲ ಬಾರಿ ಕೂಟಕ್ಕೆ ಬರೋ ಅನೇಕರಿಗೆ ಆ ದಿನ ವೇದಿಕೆಯಿಂದ ಕೊಟ್ಟ ಭಾಷಣ ನೆನಪಿರಲ್ಲ. ಆದ್ರೆ ಅವ್ರನ್ನು ಎಲ್ರೂ ಪ್ರೀತಿಯಿಂದ ಮಾತಾಡಿಸಿದ್ದು ನೆನಪಿರುತ್ತೆ. ಇದೇನು ಆಶ್ಚರ್ಯ ಪಡೋ ವಿಷ್ಯ ಅಲ್ಲ. ಯಾಕಂದ್ರೆ ಒಬ್ಬರ ಮೇಲೊಬ್ಬರು ತೋರಿಸೋ ಪ್ರೀತಿನೇ ತನ್ನ ಶಿಷ್ಯರ ಗುರುತು ಅಂತ ಯೇಸು ಹೇಳಿದ್ದಾನೆ. (ಯೋಹಾನ 13:34, 35 ಓದಿ.) ಆದ್ರೆ ನಮ್ಮ ನಂಬಿಕೆಯನ್ನ ಹೆಚ್ಚಿಸಿಕೊಳ್ಳಲು ಇನ್ನೂ ಕೆಲ್ವು ವಿಷ್ಯಗಳನ್ನ ಮಾಡ್ಬೇಕು.

3. ನಮ್ಮ ನಂಬಿಕೆಗೆ ಸಹೋದರರ ಮಧ್ಯೆ ಇರೋ ಕ್ರೈಸ್ತ ಪ್ರೀತಿಯೊಂದೇ ಆಧಾರವಾಗಿದ್ರೆ ಏನಾಗೋ ಸಾಧ್ಯತೆ ಇದೆ?

3 ನಮ್ಮ ನಂಬಿಕೆಗೆ ದೇವ ಜನ್ರ ಮಧ್ಯೆ ಇರೋ ಕ್ರೈಸ್ತ ಪ್ರೀತಿಯೊಂದೇ ಆಧಾರವಾಗಿರಬಾರ್ದು. ಯಾಕೆ? ಯಾಕಂದ್ರೆ ಪ್ರಚಾರಕರೋ ಹಿರಿಯರೋ ಪಯನೀಯರರೋ ಗಂಭೀರ ತಪ್ಪನ್ನ ಮಾಡಿಬಿಡಬಹುದು. ಅಥ್ವಾ ಒಬ್ಬ ಸಹೋದರನೋ ಸಹೋದರಿಯೋ ನಮ್ಗೆ ನೋವು ಮಾಡಬಹುದು. ಇಲ್ಲವೇ ಯಾರಾದ್ರೂ ಒಬ್ರು ಧರ್ಮಭ್ರಷ್ಟರಾಗಿ ನಮ್ಮ ಬೋಧನೆಗಳು ಸುಳ್ಳು ಅಂತ ಹೇಳ್ಬಿಡಬಹುದು. ಇಂಥ ವಿಷ್ಯಗಳು ನಡೆದಾಗ ನೀವು ಅದ್ರಿಂದ ಎಡವಿ ದೇವ್ರ ಸೇವೆನ ನಿಲ್ಲಿಸಿಬಿಡ್ತೀರಾ? ನೀವು ಯೆಹೋವನ ಜೊತೆ ಒಳ್ಳೇ ಸಂಬಂಧ ಬೆಳೆಸಿಕೊಳ್ದೇ ಬರೀ ಜನ್ರ ಪ್ರೀತಿ ನೋಡಿ ಸತ್ಯಕ್ಕೆ ಬಂದಿದ್ರೆ ನಿಮ್ಮ ನಂಬಿಕೆ ಹೆಚ್ಚು ಕಾಲ ಬಾಳಲ್ಲ. ಯೆಹೋವನ ಬಗ್ಗೆ, ಆತನ ಜನ್ರ ಬಗ್ಗೆ ಇರೋ ಅನಿಸಿಕೆ ಸ್ವಲ್ಪ ಮಟ್ಟಿಗಿನ ನಂಬಿಕೆನಾ ಬೆಳೆಸಿಕೊಳ್ಳೋಕೆ ಸಹಾಯ ಮಾಡುತ್ತೆ ಅನ್ನೋದು ನಿಜನೇ. ಆದ್ರೆ ಅದ್ರ ಜೊತೆಗೆ ನೀವು ಬೈಬಲನ್ನು ಚೆನ್ನಾಗಿ ಅಧ್ಯಯನ ಮಾಡ್ಬೇಕು, ಅದ್ರಿಂದ ಕಲಿತದ್ದನ್ನು ಚೆನ್ನಾಗಿ ಅರ್ಥ ಮಾಡ್ಕೊಳ್ಳಬೇಕು ಮತ್ತು ಯೆಹೋವನ ಬಗ್ಗೆ ಕಲಿಯುತ್ತಿರೋದೆಲ್ಲಾ ಸತ್ಯ ಅಂತ ಖಚಿತಪಡಿಸಿಕೊಳ್ಳಲು ಸಂಶೋಧನೆ ಮಾಡ್ಬೇಕು. ಹೀಗೆ ಮಾಡಿದಾಗ ಮಾತ್ರನೇ ನಿಮ್ಮ ನಂಬಿಕೆ ದೃಢವಾಗುತ್ತೆ.—ರೋಮ. 12:2.

4. ಮತ್ತಾಯ 13:3-6, 20, 21 ರಲ್ಲಿ ತಿಳಿಸಿದಂತೆ ಸಮಸ್ಯೆಗಳು ಬಂದಾಗ ಕೆಲವ್ರು ಏನು ಮಾಡ್ತಾರೆ?

4 ಕೆಲವ್ರು ಆರಂಭದಲ್ಲಿ “ಸಂತೋಷದಿಂದ” ಸತ್ಯನ ಸ್ವೀಕರಿಸ್ತಾರೆ, ಆದ್ರೆ ಸಮಸ್ಯೆಗಳು ಬಂದಾಗ ಬಿದ್ದುಹೋಗ್ತಾರೆ ಅಂತ ಯೇಸು ಹೇಳಿದ. (ಮತ್ತಾಯ 13:3-6, 20, 21 ಓದಿ.) ಬಹುಶಃ ಅವ್ರು, ತಾವು ಯೇಸುವಿನ ಹಿಂಬಾಲಕರಾದ್ರೆ ಕಷ್ಟಗಳು ಬರುತ್ತೆ ಅನ್ನೋದನ್ನ ಅರ್ಥಮಾಡಿಕೊಂಡಿರಲ್ಲ. (ಮತ್ತಾ. 16:24) ಅಥ್ವಾ ಕ್ರೈಸ್ತರಾದ್ರೆ ಜೀವ್ನದಲ್ಲಿ ಯಾವಾಗ್ಲೂ ಸಂತೋಷ ಇರುತ್ತೆ ಅಂತ ನೆನಸಿರ್ತಾರೆ. ಈ ಅಪರಿಪೂರ್ಣ ಲೋಕದಲ್ಲಿ ಕಷ್ಟಸಮಸ್ಯೆಗಳು ಸರ್ವೇಸಾಮಾನ್ಯ. ಯಾಕಂದ್ರೆ ಸನ್ನಿವೇಶಗಳು ಈಗ ಇದ್ದಂತೆ ಇನ್ನೊಂದು ಕ್ಷಣಕ್ಕೆ ಇರಲ್ಲ ಮತ್ತು ಇದ್ರಿಂದ ನಮ್ಮ ಸಂತೋಷ ಕಳಕೊಳ್ತೇವೆ.—ಕೀರ್ತ. 6:6; ಪ್ರಸಂ. 9:11.

5. ಸಹೋದರ ಸಹೋದರಿಯರಲ್ಲಿ ಹೆಚ್ಚಿನವ್ರು ತಾವು ಕಲಿತಿರುವುದು ಸತ್ಯ ಅಂತ ತಮಗೆ ಮನವರಿಕೆಯಾಗಿದೆ ಅನ್ನೋದನ್ನ ಹೇಗೆ ತೋರಿಸಿಕೊಟ್ಟಿದ್ದಾರೆ?

5 ನಮ್ಮ ಸಹೋದರ ಸಹೋದರಿಯರಲ್ಲಿ ಹೆಚ್ಚಿನವ್ರು ತಾವು ಕಲಿತಿರುವುದು ಸತ್ಯ ಅಂತ ತಮ್ಗೆ ಮನವರಿಕೆಯಾಗಿದೆ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಹೇಗೆ ಹೇಳ್ಬಹುದು? ಸಭೆಯಲ್ಲಿರುವವ್ರು ಇವ್ರಿಗೆ ನೋವು ಮಾಡಿದ್ರೂ ಅಥ್ವಾ ಗಂಭೀರ ತಪ್ಪು ಮಾಡಿದ್ರೂ ಇವ್ರ ನಂಬಿಕೆ ಬಿದ್ದು ಹೋಗಲ್ಲ. (ಕೀರ್ತ. 119:165) ಪ್ರತಿ ಪರೀಕ್ಷೆಗಳು ಬರುವಾಗ್ಲೂ ಇವ್ರ ನಂಬಿಕೆ ಇನ್ನೂ ಹೆಚ್ಚಾಗುತ್ತೆ ಹೊರತು ಕಡಿಮೆಯಾಗಲ್ಲ. (ಯಾಕೋ. 1:2-4) ಇಂಥ ಬಲವಾದ ನಂಬಿಕೆನಾ ನೀವು ಹೇಗೆ ಬೆಳೆಸಿಕೊಳ್ಬಹುದು?

‘ದೇವರ ನಿಷ್ಕೃಷ್ಟ ಜ್ಞಾನವನ್ನು’ ಪಡ್ಕೊಳ್ಳಿ

6. ಒಂದನೇ ಶತಮಾನದ ಕ್ರೈಸ್ತರು ಯಾವುದರ ಮೇಲಾಧರಿತವಾಗಿ ನಂಬಿಕೆ ಬೆಳೆಸಿಕೊಂಡ್ರು?

6 ಒಂದನೇ ಶತಮಾನದ ಕ್ರೈಸ್ತರು ಶಾಸ್ತ್ರಗ್ರಂಥದಿಂದ ಪಡಕೊಂಡ ಜ್ಞಾನ ಮತ್ತು ಯೇಸು ಕ್ರಿಸ್ತನು ಬೋಧಿಸಿದ ‘ಸುವಾರ್ತೆಯ ಸತ್ಯದ’ ಆಧರಿತವಾಗಿ ತಮ್ಮ ನಂಬಿಕೆಯನ್ನ ಬೆಳಸ್ಕೊಂಡಿದ್ರು. (ಗಲಾ. 2:5) ಆ ಸತ್ಯದಲ್ಲಿ, ಕ್ರೈಸ್ತರಾದ ನಾವು ನಂಬುವ ಎಲ್ಲಾ ವಿಷ್ಯಗಳು ಒಳಗೂಡಿವೆ. ಯೇಸು ಕ್ರಿಸ್ತನ ವಿಮೋಚನಾ ಯಜ್ಞ ಮತ್ತು ಆತನ ಪುನರುತ್ಥಾನ ಕೂಡ ಒಳಗೂಡಿದೆ. ಅಪೊಸ್ತಲ ಪೌಲನಿಗೆ ಈ ಬೋಧನೆಗಳು ಸತ್ಯ ಅಂತ ಪೂರ್ಣವಾಗಿ ಮನವರಿಕೆಯಾಗಿತ್ತು. ಅದನ್ನು ಆತ ಹೇಗೆ ತೋರಿಸಿಕೊಟ್ಟ? ಹೇಗಂದ್ರೆ, “ಕ್ರಿಸ್ತನು ಬಾಧೆಯನ್ನು ಅನುಭವಿಸಿ ಸತ್ತವರೊಳಗಿಂದ ಎಬ್ಬಿಸಲ್ಪಡುವುದು ಅಗತ್ಯವಾಗಿತ್ತು” ಅನ್ನೋದನ್ನು ದೃಢೀಕರಿಸಲು ಪೌಲನು ಶಾಸ್ತ್ರಗ್ರಂಥಗಳನ್ನು ಉಪಯೋಗಿಸಿದ್ನು. (ಅ. ಕಾ. 17:2, 3) ಒಂದನೇ ಶತಮಾನದ ಕ್ರೈಸ್ತರು ಈ ಬೋಧನೆಗಳನ್ನ ಸ್ವೀಕರಿಸಿದ್ರು ಮತ್ತು ದೇವರ ವಾಕ್ಯದಲ್ಲಿರುವ ಸತ್ಯವನ್ನು ಅರ್ಥಮಾಡಿಕೊಳ್ಳಲು ಪವಿತ್ರಾತ್ಮದ ಸಹಾಯ ಕೇಳ್ಕೊಂಡ್ರು. ಈ ಬೋಧನೆಗಳು ಶಾಸ್ತ್ರಾಧಾರಿತವಾಗಿವೆ ಅನ್ನೋದನ್ನ ತಾವಾಗಿಯೇ ಅಧ್ಯಯನ ಮಾಡಿ ಖಚಿತಪಡಿಸ್ಕೊಂಡ್ರು. (ಅ. ಕಾ. 17:11, 12; ಇಬ್ರಿ. 5:14) ಅವ್ರು ಕೇವಲ ತಮ್ಮ ಭಾವನೆ, ಅನಿಸಿಕೆಗಳಿಗೆ ಮಣಿದೋ ಅಥ್ವಾ ಸಹೋದರ ಸಹೋದರಿಯರ ಜೊತೆ ಸಹವಾಸ ಮಾಡೋಕೆ ಚೆನ್ನಾಗಿರುತ್ತೆ ಅಂದುಕೊಂಡೋ ಯೆಹೋವನ ಮೇಲೆ ನಂಬಿಕೆ ಬೆಳೆಸಿಕೊಳ್ಳಲಿಲ್ಲ. ಬದ್ಲಿಗೆ ‘ದೇವರ ನಿಷ್ಕೃಷ್ಟ ಜ್ಞಾನದ’ ಮೇಲಾಧರಿತವಾಗಿ ನಂಬಿಕೆ ಬೆಳೆಸಿಕೊಂಡ್ರು.—ಕೊಲೊ. 1:9, 10.

7. ನಮ್ಮ ನಂಬಿಕೆ ಬೈಬಲ್‌ ಸತ್ಯಗಳ ಮೇಲೆ ಆಧರಿತವಾಗಿದ್ರೆ ಏನಾಗುತ್ತೆ?

7 ಬೈಬಲಿನಲ್ಲಿರೋ ಸತ್ಯಗಳು ಯಾವತ್ತಿಗೂ ಬದ್ಲಾಗಲ್ಲ. (ಕೀರ್ತ. 119:160) ನಮ್ಗೆ ಕಷ್ಟ ಬಂದಾಗ, ಸಹೋದರನೋ ಸಹೋದರಿಯೋ ಗಂಭೀರ ತಪ್ಪು ಮಾಡ್ದಾಗ ಅಥ್ವಾ ಅವ್ರು ನಮ್ಗೆ ನೋವು ಮಾಡ್ದಾಗ ಕೂಡ ಈ ಸತ್ಯಗಳು ಬದಲಾಗಲ್ಲ. ಹಾಗಾಗಿ ನಾವು ಬೈಬಲಿನಲ್ಲಿರೋ ಬೋಧನೆಗಳನ್ನ ಚೆನ್ನಾಗಿ ತಿಳ್ಕೊಂಡಿರಬೇಕು ಮತ್ತು ಅವು ಸತ್ಯ ಅಂತ ಮನವರಿಕೆ ಮಾಡಿಕೊಳ್ಬೇಕು. ನಮ್ಮ ನಂಬಿಕೆ ಬೈಬಲ್‌ ಸತ್ಯಗಳ ಮೇಲೆ ಆಧರಿತವಾಗಿದ್ರೆ ಯಾವುದೇ ಕಷ್ಟಗಳು ಬಂದ್ರೂ ಅದು ಸ್ಥಿರವಾಗಿರುತ್ತೆ, ಬಿದ್ದು ಹೋಗಲ್ಲ. ಆ ನಂಬಿಕೆ, ಬಿರುಗಾಳಿ ಬಂದಾಗ ಹಡಗು ಸ್ಥಿರವಾಗಿರಲು ಸಹಾಯ ಮಾಡೋ ಲಂಗರಿನಂತೆ ಇರುತ್ತೆ. ಸತ್ಯ ಸಿಕ್ಕಿದೆ ಅನ್ನೋ ನಂಬಿಕೆಯನ್ನು ನೀವು ಹೇಗೆ ಹೆಚ್ಚಿಸಿಕೊಳ್ಳಬಹುದು?

ನೀವು ಕಲ್ತಿರೋದು ಸತ್ಯ ಅಂತ ಖಚಿತಪಡಿಸಿಕೊಳ್ಳಿ

8. ಎರಡನೇ ತಿಮೊಥೆಯ 3:14, 15 ರಲ್ಲಿರೋ ಪ್ರಕಾರ ತಾನು ಕಲ್ತಿರೋದು ಸತ್ಯ ಅಂತ ತಿಮೊಥೆಯ ಹೇಗೆ ಮನವರಿಕೆ ಮಾಡ್ಕೊಂಡ?

8 ತಿಮೊಥೆಯನಿಗೆ ತಾನು ಕಲ್ತಿರೋದು ಸತ್ಯ ಅನ್ನೋದ್ರಲ್ಲಿ ಕಿಂಚಿತ್ತೂ ಸಂಶಯ ಇರ್ಲಿಲ್ಲ. ಅವ್ನಿಗೆ ಅಷ್ಟು ನಂಬಿಕೆ ಇರಲು ಕಾರಣವೇನು? (2 ತಿಮೊಥೆಯ 3:14, 15 ಓದಿ.) ಅವ್ನಿಗೆ “ಪವಿತ್ರ ಬರಹಗಳ” ಬಗ್ಗೆ ಕಲಿಸಿದ್ದು ಅವ್ನ ತಾಯಿ ಮತ್ತು ಅಜ್ಜಿ. ಆದ್ರೆ ಅವ್ನು ಸಹ ಆ ಬರಹಗಳ ಬಗ್ಗೆ ಕಲಿಯೋಕೆ ತನ್ನ ಸಮಯ, ಶಕ್ತಿಯನ್ನೆಲ್ಲಾ ಖಂಡಿತ ಕಳೆದಿರ್ತಾನೆ. ಇದ್ರಿಂದಾಗಿ ಶಾಸ್ತ್ರಗ್ರಂಥದಲ್ಲಿರೋ ವಿಷ್ಯಗಳು ಸತ್ಯ ಅನ್ನೋದು ಅವ್ನಿಗೆ ಚೆನ್ನಾಗಿ ಮನವರಿಕೆಯಾಯ್ತು. ನಂತ್ರ ತಿಮೊಥೆಯ, ಅವ್ನ ತಾಯಿ ಮತ್ತು ಅಜ್ಜಿ ಕ್ರೈಸ್ತ ಬೋಧನೆಗಳನ್ನು ಕಲಿತ್ರು. ಯೇಸುವಿನ ಹಿಂಬಾಲಕರು ತೋರಿಸಿದ ಪ್ರೀತಿ ತಿಮೊಥೆಯನಿಗೆ ಇಷ್ಟವಾಯ್ತು ಅನ್ನೋದ್ರಲ್ಲಿ ಸಂಶಯನೇ ಇಲ್ಲ. ಕ್ರೈಸ್ತ ಸಹೋದರ ಸಹೋದರಿಯರ ಜೊತೆ ಇರೋಕೆ, ಅವ್ರ ಕಾಳಜಿವಹಿಸೋಕೆ ಅವ್ನಲ್ಲಿ ಬಲವಾದ ಆಸೆ ಇತ್ತು. (ಫಿಲಿ. 2:19, 20) ಆದ್ರೆ ಸಹೋದರರ ಮೇಲಿನ ಪ್ರೀತಿಯ ಕಾರಣ ಅವನು ತನ್ನ ನಂಬಿಕೆಯನ್ನು ಬೆಳೆಸಿಕೊಳ್ಳಲಿಲ್ಲ. ಬದ್ಲಿಗೆ ಶಾಸ್ತ್ರಗ್ರಂಥದಿಂದ ಕಲಿತ ವಿಷ್ಯಗಳು ಸತ್ಯ ಅನ್ನೋದನ್ನ ಮನವರಿಕೆ ಮಾಡ್ಕೊಂಡು ನಂಬಿಕೆ ಬೆಳೆಸಿಕೊಂಡ. ಆ ಸತ್ಯಗಳು ಯೆಹೋವನಿಗೆ ಆಪ್ತನಾಗೋಕೆ ಅವ್ನಿಗೆ ಸಹಾಯ ಮಾಡಿದ್ವು. ನೀವು ಸಹ ತಿಮೊಥೆಯನಂತೆ ಬೈಬಲನ್ನು ಅಧ್ಯಯನ ಮಾಡಿ ಅದ್ರಲ್ಲಿ ಯೆಹೋವನ ಬಗ್ಗೆ ತಿಳಿಸಿರೋ ವಿಷ್ಯಗಳು ಸತ್ಯ ಅನ್ನೋದನ್ನ ಮನವರಿಕೆ ಮಾಡ್ಕೊಳ್ಳಿ.

9. ಯಾವ ಮೂರು ಮುಖ್ಯ ವಿಷ್ಯಗಳು ಸತ್ಯ ಅನ್ನೋದು ನಿಮ್ಗೆ ಮನವರಿಕೆ ಆಗಿರಬೇಕು?

9 ಕಡಿಮೆ ಪಕ್ಷ ಬೈಬಲಿನ ಮೂರು ಮುಖ್ಯ ವಿಷ್ಯಗಳಾದ್ರೂ ಸತ್ಯ ಅಂತ ನಿಮ್ಗೆ ಮನವರಿಕೆ ಆಗಿರಬೇಕು. ಮೊದಲ್ನೇದಾಗಿ, ಯೆಹೋವನೇ ಎಲ್ಲವನ್ನು ಸೃಷ್ಟಿ ಮಾಡಿದ್ದಾನೆ ಅನ್ನೋ ಗ್ಯಾರಂಟಿ ನಿಮಗಿರಬೇಕು. (ವಿಮೋ. 3:14, 15; ಇಬ್ರಿ. 3:4; ಪ್ರಕ. 4:11) ಎರಡ್ನೇದಾಗಿ, ಬೈಬಲ್‌ ದೇವ್ರಿಂದ ಬಂದಿರುವ ಗ್ರಂಥ ಅನ್ನೋದಕ್ಕಿರುವ ಕಾರಣಗಳು ನಿಮಗೆ ಚೆನ್ನಾಗಿ ಗೊತ್ತಿರಬೇಕು. (2 ತಿಮೊ. 3:16, 17) ಮೂರನೇದಾಗಿ, ಈ ಭೂಮಿಯಲ್ಲಿ ಯೆಹೋವನನ್ನು ಆರಾಧಿಸ್ತಿರೋ ಒಂದು ವ್ಯವಸ್ಥಿತ ಗುಂಪಿದೆ, ಆ ಗುಂಪಿನ ಮುಂದಾಳತ್ವ ವಹಿಸ್ತಿರೋದು ಯೇಸು ಕ್ರಿಸ್ತ ಮತ್ತು ಅದ್ರಲ್ಲಿರೋರು ಯೆಹೋವನ ಸಾಕ್ಷಿಗಳು ಅನ್ನೋದು ನಿಮ್ಗೆ ಖಚಿತವಾಗಿರಬೇಕು. (ಯೆಶಾ. 43:10-12; ಯೋಹಾ. 14:6; ಅ. ಕಾ. 15:14) ಈ ಮೂರು ಸತ್ಯಗಳನ್ನ ಅರ್ಥಮಾಡಿಕೊಳ್ಳೋಕೆ ಬೈಬಲನ್ನ ಅರೆದು ಕುಡಿದಿರಬೇಕಂತೇನಿಲ್ಲ. ಬದ್ಲಿಗೆ ನಿಮ್ಮಲ್ಲಿರುವ ‘ವಿವೇಚನಾಶಕ್ತಿಯನ್ನು’ ಬಳಸಿ ನೀವು ಕಲ್ತಿರೋದು ಸತ್ಯ ಅನ್ನೋ ನಂಬಿಕೆಯನ್ನು ಹೆಚ್ಚಿಸಿಕೊಳ್ಳಿ.—ರೋಮ. 12:1.

ಬೇರೆಯವ್ರು ಸತ್ಯವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿ

10. ಸತ್ಯವನ್ನ ತಿಳ್ಕೊಂಡ ಮೇಲೆ ನಾವೇನು ಮಾಡ್ಬೇಕು?

10 ದೇವ್ರ ಬಗ್ಗೆ, ಬೈಬಲ್‌ ಬಗ್ಗೆ, ದೇವ ಜನ್ರ ಬಗ್ಗೆ ನೀವು ಕಲಿತಿರೋ ವಿಷ್ಯಗಳು ಸತ್ಯ ಅಂತ ನಿಮ್ಗೆ ಖಚಿತ ಆದ್ಮೇಲೆ ಏನು ಮಾಡ್ಬೇಕು? ಈ ವಿಷ್ಯಗಳ ಬಗ್ಗೆ ಬೇರೆಯವ್ರಿಗೆ ಕಲಿಸಲು, ಬೈಬಲಿನಿಂದ ಅವನ್ನು ತೋರಿಸಲು ಸಿದ್ಧರಾಗಬೇಕು. ಯಾಕೆ? ಯಾಕಂದ್ರೆ ನಾವು ಕ್ರಿಸ್ತನ ಶಿಷ್ಯರು. ಸತ್ಯವನ್ನು ಕಲಿಯಲು ಇಷ್ಟಪಡೋರಿಗೆ ಅದನ್ನ ಕಲಿಸೋ ಜವಾಬ್ದಾರಿ ನಮಗಿದೆ. * (1 ತಿಮೊ. 4:16) ಅಷ್ಟೇ ಅಲ್ಲ, ಬೇರೆಯವ್ರಿಗೆ ಸತ್ಯ ಕಲಿಸುವಾಗ ಅದ್ರ ಮೇಲಿರೋ ನಮ್ಮ ನಂಬಿಕೆ ಇನ್ನೂ ಹೆಚ್ಚಾಗುತ್ತೆ.

11. ಅಪೊಸ್ತಲ ಪೌಲನು ಜನ್ರಿಗೆ ಕಲಿಸೋದ್ರಲ್ಲಿ ಯಾವ ಮಾದರಿಯಿಟ್ಟನು? ನಾವು ಆತನನ್ನ ಹೇಗೆ ಅನುಕರಿಸಬಹುದು?

11 ಅಪೊಸ್ತಲ ಪೌಲ ಜನ್ರಿಗೆ ಕಲಿಸುವಾಗ ‘ಮೋಶೆಯ ಧರ್ಮಶಾಸ್ತ್ರವನ್ನು ಪ್ರವಾದಿಗಳ ಗ್ರಂಥವನ್ನ ಉಪಯೋಗಿಸಿ ಯೇಸುವಿನ ಕುರಿತಾಗಿ ಅವ್ರನ್ನು ಒಡಂಬಡಿಸಿದ’ ಅಥ್ವಾ ಅವ್ರಿಗೆ ಅರ್ಥಮಾಡಿಸಿದ. (ಅ. ಕಾ. 28:23) ಈ ವಿಷ್ಯದಲ್ಲಿ ನಾವು ಹೇಗೆ ಪೌಲನನ್ನು ಅನುಕರಿಸಬಹುದು? ನಮ್ಮ ವಿದ್ಯಾರ್ಥಿಗಳಿಗೆ ಬೈಬಲ್‌ ಏನು ಕಲಿಸುತ್ತೆ ಅನ್ನೋದನ್ನ ಮಾತ್ರ ಹೇಳಿಕೊಟ್ರೆ ಸಾಕಾಗಲ್ಲ. ಅವ್ರಾಗಿಯೇ ಬೈಬಲನ್ನು ಓದಿ, ಓದಿದ ವಿಷ್ಯಗಳ ಬಗ್ಗೆ ಚೆನ್ನಾಗಿ ಧ್ಯಾನಿಸೋದು ಹೇಗೆ ಅನ್ನೋದನ್ನು ಹೇಳಿಕೊಡ್ಬೇಕು. ಆಗ ಅವ್ರು ಯೆಹೋವನಿಗೆ ಆಪ್ತರಾಗ್ತಾರೆ. ಅವ್ರು ಸತ್ಯವನ್ನು ಸ್ವೀಕರಿಸಬೇಕು ಅನ್ನೋದೇ ನಮ್ಮ ಇಷ್ಟ. ಆದ್ರೆ ನಮ್ಮ ಮೇಲಿರೋ ಪ್ರೀತಿ ಗೌರವದಿಂದಲ್ಲ ಬದ್ಲಿಗೆ ಯೆಹೋವನ ಬಗ್ಗೆ ಕಲಿತಿರೋ ವಿಷ್ಯಗಳು ಸತ್ಯ ಅಂತ ಅವ್ರಾಗಿಯೇ ಮನವರಿಕೆ ಮಾಡ್ಕೊಂಡು ಸತ್ಯವನ್ನ ಸ್ವೀಕರಿಸಬೇಕು.

ಹೆತ್ತವರೇ, ನಿಮ್ಮ ಮಕ್ಕಳಿಗೆ ‘ದೇವರ ಅಗಾಧ ವಿಷಯಗಳನ್ನು’ ಕಲಿಸಿ, ಅದ್ರಲ್ಲಿ ನಂಬಿಕೆಯನ್ನು ಬೆಳೆಸಿ ಕೊಳ್ಳಲು ಸಹಾಯ ಮಾಡಿ (ಪ್ಯಾರ 12-13 ನೋಡಿ) *

12-13. ಮಕ್ಕಳು ಸತ್ಯದಲ್ಲಿ ಉಳಿಯೋಕೆ ಹೆತ್ತವರು ಹೇಗೆ ಸಹಾಯ ಮಾಡ್ಬಹುದು?

12 ಹೆತ್ತವರೇ, ನಿಮ್ಮ ಮಕ್ಕಳು ಸತ್ಯದಲ್ಲಿ ಉಳಿಯಬೇಕು ಅನ್ನೋ ಆಸೆ ನಿಮಗಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಮಕ್ಳು ಸಭೆಯಲ್ಲಿ ಒಳ್ಳೇ ಹೆಸರಿರುವವರನ್ನು ಫ್ರೆಂಡ್ಸ್‌ ಮಾಡ್ಕೊಂಡ್ರೆ ಅವ್ರ ನಂಬಿಕೆ ಬಲವಾಗುತ್ತೆ ಅಂತ ನಿಮ್ಗೆ ಅನಿಸ್ಬಹುದು. ಆದ್ರೆ ಅವ್ರಿಗೆ ಒಳ್ಳೇ ಫ್ರೆಂಡ್ಸ್‌ ಇದ್ರಷ್ಟೇ ಸಾಕಾಗಲ್ಲ. ಯೆಹೋವನ ಜೊತೆಗೂ ಅವ್ರಿಗೆ ಆಪ್ತ ಸಂಬಂಧ ಇರಬೇಕು ಮತ್ತು ಬೈಬಲ್‌ ಕಲಿಸೋದೇ ಸತ್ಯ ಅನ್ನೋದನ್ನ ಅವ್ರಾಗಿಯೇ ಮನವರಿಕೆ ಮಾಡಿಕೊಳ್ಬೇಕು.

13 ಹೆತ್ತವರು ಮಕ್ಕಳಿಗೆ ದೇವ್ರ ಬಗ್ಗೆ ಕಲಿಸ್ಬೇಕಂದ್ರೆ ಮೊದ್ಲು ಅವ್ರು ಒಳ್ಳೇ ಮಾದರಿ ಇಟ್ಟಿರಬೇಕು. ಬೈಬಲಿನ ಒಳ್ಳೇ ವಿದ್ಯಾರ್ಥಿಯಾಗಿರಬೇಕು. ಬೈಬಲಿಂದ ಓದಿದ್ದನ್ನು ಧ್ಯಾನಿಸೋಕೆ ಸಮ್ಯ ಮಾಡ್ಕೊಬೇಕು. ಆಗ ಇದೇ ವಿಷ್ಯಗಳನ್ನ ಮಕ್ಕಳಿಗೂ ಹೇಳಿಕೊಡೋಕೆ ಅವ್ರಿಗೆ ಸುಲಭ ಆಗುತ್ತೆ. ಬೈಬಲ್‌ ಬೋಧನಾ ಸಲಕರಣೆಗಳನ್ನ ಹೇಗೆ ಉಪಯೋಗಿಸ್ಬೇಕು ಅಂತ ತಮ್ಮ ವಿದ್ಯಾರ್ಥಿಗಳಿಗೆ ಕಲಿಸುವಂತೆಯೇ ಮಕ್ಕಳಿಗೂ ಕಲಿಸ್ಬೇಕು. ಹೆತ್ತವರು ಹೀಗೆ ಮಾಡ್ದಾಗ ಮಕ್ಕಳು ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳಲು ಕಲೀತಾರೆ. ಅಷ್ಟೇ ಅಲ್ಲ, ನಾವು ಬೈಬಲನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಯೆಹೋವನು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳನ್ನು’ ಉಪಯೋಗಿಸ್ತಿದ್ದಾನೆ ಅನ್ನೋದನ್ನ ನಂಬ್ತಾರೆ. (ಮತ್ತಾ. 24:45-47) ಹೆತ್ತವರೇ, ನಿಮ್ಮ ಮಕ್ಕಳಿಗೆ ಬೈಬಲಿನಲ್ಲಿರೋ ಸುಲಭವಾದ ವಿಷ್ಯಗಳನ್ನ ಮಾತ್ರ ಕಲಿಸಿದ್ರೆ ಸಾಕಾಗಲ್ಲ. ಬೈಬಲಿನಲ್ಲಿರುವ “ದೇವರ ಅಗಾಧವಾದ ವಿಷಯಗಳನ್ನೂ” ಅಂದ್ರೆ ಪ್ರವಾದನೆಗಳನ್ನು ಮತ್ತು ಅರ್ಥಮಾಡ್ಕೊಳ್ಳೋಕೆ ಕಷ್ಟ ಆಗುವಂಥ ಇನ್ನಿತರ ಪ್ರಾಮುಖ್ಯ ಸತ್ಯಗಳನ್ನು ಅವ್ರ ವಯಸ್ಸಿಗೆ, ಸಾಮರ್ಥ್ಯಕ್ಕೆ ತಕ್ಕಂತೆ ಕಲಿಸ್ಬೇಕು. ಆಗ ಅವ್ರ ನಂಬಿಕೆ ಬಲವಾಗುತ್ತೆ.—1 ಕೊರಿಂ. 2:10.

ಬೈಬಲ್‌ ಪ್ರವಾದನೆಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ಳಿ

14. ನಾವ್ಯಾಕೆ ಬೈಬಲ್‌ ಪ್ರವಾದನೆಗಳನ್ನ ಚೆನ್ನಾಗಿ ಅಧ್ಯಯನ ಮಾಡ್ಬೇಕು? (“ ಈ ಪ್ರವಾದನೆಗಳನ್ನು ವಿವರಿಸ್ತೀರಾ?” ಚೌಕ ನೋಡಿ.)

14 ಬೈಬಲ್‌ ಪ್ರವಾದನೆಗಳು ದೇವರ ವಾಕ್ಯದ ಪ್ರಾಮುಖ್ಯ ಭಾಗವಾಗಿವೆ. ಅವು ಯೆಹೋವನ ಮೇಲಿನ ನಮ್ಮ ನಂಬಿಕೆಯನ್ನು ಹೆಚ್ಚಿಸುತ್ತವೆ. ಯಾವ ಪ್ರವಾದನೆಗಳು ನಿಮ್ಮ ನಂಬಿಕೆಯನ್ನ ಬಲಪಡಿಸಿವೆ? “ಕಡೇ ದಿವಸಗಳ” ಬಗ್ಗೆ ಇರೋ ಪ್ರವಾದನೆ ಅಂತ ನೀವು ಹೇಳ್ಬಹುದು. (2 ತಿಮೊ. 3:1-5; ಮತ್ತಾ. 24:3, 7) ಆದ್ರೆ ಈಗಾಗ್ಲೇ ನೆರವೇರಿರುವ ಇನ್ನೂ ಕೆಲವು ಬೈಬಲ್‌ ಪ್ರವಾದನೆಗಳಿಂದ ನಿಮ್ಮ ನಂಬಿಕೆಯನ್ನು ಹೆಚ್ಚಿಸಿಕೊಳ್ಬಹುದು. ಉದಾಹರಣೆಗೆ, ದಾನಿಯೇಲ 2 ನೇ ಅಧ್ಯಾಯ ಮತ್ತು 11 ನೇ ಅಧ್ಯಾಯದಲ್ಲಿರೋ ಪ್ರವಾದನೆಗಳು. ಈ ಪ್ರವಾದನೆಗಳು ಹಿಂದೆ ಹೇಗೆ ನೆರವೇರಿವೆ ಮತ್ತು ಈಗ ಹೇಗೆ ನೆರವೇರ್ತಿವೆ ಅನ್ನೋದನ್ನು ನಿಮ್ಗೆ ವಿವರಿಸಕ್ಕಾಗುತ್ತಾ? * ನಿಮ್ಮ ನಂಬಿಕೆ ಬೈಬಲ್‌ ಮೇಲೆ ಸಂಪೂರ್ಣವಾಗಿ ಆಧರಿತವಾಗಿದ್ರೆ ಅದು ಅಚಲವಾಗಿರುತ್ತೆ. ಎರಡನೇ ಮಹಾಯುದ್ಧದ ಸಮ್ಯದಲ್ಲಿ ಜರ್ಮನಿಯಲ್ಲಿ ತೀವ್ರ ಹಿಂಸೆಯನ್ನು ಅನುಭವಿಸಿದ ನಮ್ಮ ಸಹೋದರರ ಉದಾಹರಣೆಯನ್ನು ನೋಡಿ. ಕಡೇ ದಿವಸಗಳ ಬಗ್ಗೆ ಇದ್ದ ಪ್ರವಾದನೆಗಳು ಪೂರ್ತಿಯಾಗಿ ಅರ್ಥವಾಗದಿದ್ರೂ ಬೈಬಲ್‌ ಮೇಲಿದ್ದ ಅವ್ರ ನಂಬಿಕೆ ಅಚಲವಾಗಿತ್ತು.

ಬೈಬಲನ್ನು, ಅದ್ರಲ್ಲಿರೋ ಪ್ರವಾದನೆಗಳನ್ನು ನಾವು ಅಧ್ಯಯನ ಮಾಡಿದ್ರೆ ಕಷ್ಟಕರ ಸನ್ನಿವೇಶಗಳು ಬಂದ್ರೂ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯುತ್ತೇವೆ (ಪ್ಯಾರ 15-17 ನೋಡಿ) *

15-17. ನಾಜಿ಼ ಸರ್ಕಾರದಿಂದ ಹಿಂಸೆ ಬಂದಾಗ ಅದನ್ನು ತಾಳಿಕೊಳ್ಳೋಕೆ ನಮ್ಮ ಸಹೋದರರಿಗೆ ಯಾವುದು ಸಹಾಯಮಾಡ್ತು?

15 ಜರ್ಮನಿಯಲ್ಲಿ ನಾಜಿ಼ ಸರ್ಕಾರ ಆಳ್ತಿದ್ದಾಗ ಸಾವಿರಾರು ಸಹೋದರ ಸಹೋದರಿಯರನ್ನ ಸೆರೆ ಶಿಬಿರಕ್ಕೆ ಹಾಕಲಾಯ್ತು. ಹಿಟ್ಲರ್‌ಗೆ ಮತ್ತು ಅವನ ಕೆಳಗಿದ್ದ ಮುಖ್ಯ ಅಧಿಕಾರಿ ಹೆನ್ರಿಕ್‌ ಹಿಮ್ಲರ್‌ಗೆ ಯೆಹೋವನ ಸಾಕ್ಷಿಗಳನ್ನ ಕಂಡ್ರೆ ಆಗ್ತಿರಲಿಲ್ಲ. ಸೆರೆ ಶಿಬಿರದಲ್ಲಿದ್ದ ನಮ್ಮ ಸಹೋದರಿಯರಿಗೆ ಒಂದ್ಸಲ ಹಿಮ್ಲರ್‌ ಏನು ಹೇಳ್ದ ಅಂತ ಅಲ್ಲಿದ್ದ ಒಬ್ಬ ಸಹೋದರಿ ಹೀಗೆ ತಿಳ್ಸಿದ್ರು: “ನಿಮ್ಮ ಯೆಹೋವ ಸ್ವರ್ಗದಲ್ಲಿ ಆಳ್ತಿರಬಹುದು. ಆದ್ರೆ ಭೂಮಿಯಲ್ಲಿ ಆಳ್ತಿರೋದು ನಾವು. ಯಾರು ಹೆಚ್ಚು ಕಾಲ ಉಳೀತಾರೆ ನೋಡೋಣ, ನಾವಾ? ನೀವಾ?” ಇಂಥ ಸಮ್ಯದಲ್ಲೂ ಯೆಹೋವನ ಜನ್ರು ನಂಬಿಕೆ ಕಳ್ಕೊಳ್ಳದಿರಲು ಯಾವುದು ಸಹಾಯ ಮಾಡ್ತು?

16 ಬೈಬಲ್‌ ವಿದ್ಯಾರ್ಥಿಗಳಿಗೆ 1914 ರಲ್ಲಿ ದೇವ್ರ ರಾಜ್ಯದ ಆಳ್ವಿಕೆ ಶುರುವಾಗಿದೆ ಅಂತ ಗೊತ್ತಿತ್ತು. ಹಾಗಾಗಿ ತೀವ್ರವಾದ ಹಿಂಸೆ ಬಂದಾಗ್ಲೂ ಅವ್ರಿಗೆ ಆಶ್ಚರ್ಯ ಆಗ್ಲಿಲ್ಲ. ದೇವ್ರ ಉದ್ದೇಶವನ್ನು ತಡೆಯೋಕೆ ಯಾವ ಮಾನವ ಸರ್ಕಾರದಿಂದನೂ ಸಾಧ್ಯವಿಲ್ಲ ಅಂತ ಅವ್ರಿಗೆ ಚೆನ್ನಾಗಿ ಗೊತ್ತಿತ್ತು. ಹಿಟ್ಲರ್‌ಗೆ ಸತ್ಯಾರಾಧನೆಯನ್ನು ಅಳಿಸೋಕೂ ಆಗ್ಲಿಲ್ಲ, ದೇವ್ರ ಸರ್ಕಾರಕ್ಕಿಂತ ಶಕ್ತಿಶಾಲಿಯಾಗಿರೋ ಸರ್ಕಾರವನ್ನು ಸ್ಥಾಪಿಸೋಕೂ ಆಗ್ಲಿಲ್ಲ. ಅವನ ಸರ್ಕಾರ ಒಂದಲ್ಲ ಒಂದು ದಿನ ಮಣ್ಣು ಮುಕ್ಕುತ್ತೆ ಅಂತ ನಮ್ಮ ಸಹೋದರರಿಗೆ ಚೆನ್ನಾಗಿ ಗೊತ್ತಿತ್ತು.

17 ನಮ್ಮ ಸಹೋದರ ಸಹೋದರಿಯರ ನಂಬಿಕೆ ಸುಳ್ಳಾಗ್ಲಿಲ್ಲ. ಸ್ವಲ್ಪದರಲ್ಲೇ ನಾಜಿ಼ ಸರ್ಕಾರ ಬಿದ್ದು ಹೋಯ್ತು. “ಭೂಮಿಯಲ್ಲಿ ಆಳ್ತಿರೋದು ನಾವು” ಅಂತ ಕೊಚ್ಚಿಕೊಳ್ತಿದ್ದ ಹಿಮ್ಲರ್‌ಗೆ ಏನಾಯ್ತು ಗೊತ್ತಾ? ತನ್ನ ಜೀವವನ್ನ ಉಳಿಸಿಕೊಳ್ಳೋಕೆ ಅಲೆದಾಡೋ ಪರಿಸ್ಥಿತಿ ಬಂತು. ಹೀಗಿರುವಾಗ ಅವ್ನಿಗೆ, ಹಿಂದೆ ಸೆರೆಶಿಬಿರದಲ್ಲಿದ್ದ ಸಹೋದರ ಲೂಬ್ಕೆ ಸಿಕ್ಕಿದ್ರು. ಸೋತು ಸುಣ್ಣವಾಗಿದ್ದ ಹಿಮ್ಲರ್‌ ನಮ್ಮ ಸಹೋದರನಿಗೆ ಹೀಗೆ ಕೇಳ್ದ: “ಬೈಬಲ್‌ ವಿದ್ಯಾರ್ಥಿ ಮುಂದೇನಾಗುತ್ತೆ?” ಅದಕ್ಕೆ ಅವ್ರು, ನಾಜಿ಼ ಸರ್ಕಾರ ಬಿದ್ದು ಹೋಗಿ ತಮ್ಗೆ ಬಿಡುಗಡೆ ಸಿಗುತ್ತೆ ಅನ್ನೋದು ಮುಂಚೆನೇ ಗೊತ್ತಿತ್ತು ಅಂತ ಅವ್ನಿಗೆ ವಿವರಿಸಿದ್ರು. ಯೆಹೋವನ ಸಾಕ್ಷಿಗಳ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತಾಡ್ತಿದ್ದ ಹಿಮ್ಲರ್‌ಗೆ ಈಗ ಮಾತೇ ಹೊರಡ್ಲಿಲ್ಲ. ಏನು ಹೇಳ್ಬೇಕು ಅಂತನೇ ಗೊತ್ತಾಗ್ಲಿಲ್ಲ. ಸ್ವಲ್ಪದರಲ್ಲೇ ಅವ್ನು ಆತ್ಮಹತ್ಯೆ ಮಾಡ್ಕೊಂಡ. ಈ ಘಟನೆಯಿಂದ ನಾವೇನು ಕಲಿಯಬಹುದು? ಬೈಬಲನ್ನು, ಅದ್ರಲ್ಲಿರೋ ಪ್ರವಾದನೆಗಳನ್ನು ಚೆನ್ನಾಗಿ ಅಧ್ಯಯನ ಮಾಡಿದ್ರೆ ನಮ್ಮ ನಂಬಿಕೆ ಅಚಲವಾಗುತ್ತೆ ಮತ್ತು ಎಂಥದ್ದೇ ಕಷ್ಟ ಸಮಸ್ಯೆಗಳು ಬಂದ್ರೂ ಅದನ್ನು ಧೈರ್ಯದಿಂದ ಎದುರಿಸೋಕೆ ಸಿದ್ಧರಾಗ್ತೇವೆ.—2 ಪೇತ್ರ 1:19-21.

18. ಯೋಹಾನ 6:67, 68 ರಲ್ಲಿ ಸೂಚಿಸಿದಂತೆ ನಮ್ಮಲ್ಲಿ ಯಾಕೆ “ನಿಷ್ಕೃಷ್ಟ ಜ್ಞಾನ ಮತ್ತು ಪೂರ್ಣ ವಿವೇಚನೆ” ಇರಬೇಕು?

18 ನಾವು ಒಬ್ರನ್ನೊಬ್ರು ಪ್ರೀತಿಸ್ಬೇಕು. ಯಾಕಂದ್ರೆ ಸತ್ಯ ಕ್ರೈಸ್ತರ ಗುರುತು ಪ್ರೀತಿಯಾಗಿದೆ. ಅದ್ರ ಜೊತೆಗೆ ನಮ್ಮಲ್ಲಿ “ನಿಷ್ಕೃಷ್ಟ ಜ್ಞಾನ ಮತ್ತು ಪೂರ್ಣ ವಿವೇಚನೆ” ಕೂಡ ಇರಬೇಕು. (ಫಿಲಿ. 1:9) ಇಲ್ಲಾಂದ್ರೆ ‘ಮನುಷ್ಯರ ಕುಯುಕ್ತಿಯಿಂದ ಕೂಡಿದ ಬೋಧನೆಯ ಪ್ರತಿಯೊಂದು ಗಾಳಿ’ ನಮ್ಗೆ ಬಡಿದು ನಾವು ಮರುಳಾಗ್ಬಹುದು. ಇದ್ರಲ್ಲಿ ಧರ್ಮಭ್ರಷ್ಟರ ಬೋಧನೆಗಳು ಸಹ ಸೇರಿವೆ. (ಎಫೆ. 4:14) ಒಂದನೇ ಶತಮಾನದಲ್ಲಿ ಅನೇಕರು ಯೇಸುವನ್ನು ಹಿಂಬಾಲಿಸೋದನ್ನ ಬಿಟ್ಟು ಬಿಟ್ರು. ಆದ್ರೆ ಅಪೊಸ್ತಲ ಪೇತ್ರನಿಗೆ ಯೇಸುವಿನ ಮೇಲೆ ದೃಢ ನಂಬಿಕೆಯಿತ್ತು. ಅದಕ್ಕೆ ಅವ್ನು “ನಿತ್ಯಜೀವದ ಮಾತುಗಳು ನಿನ್ನಲ್ಲಿವೆ” ಅಂತ ಯೇಸುಗೆ ದೃಢವಾಗಿ ಹೇಳ್ದ. (ಯೋಹಾನ 6:67, 68 ಓದಿ.) ಆ ಸಮ್ಯದಲ್ಲಿ ಪೇತ್ರನಿಗೆ ಯೇಸುವಿನ ಬೋಧನೆಗಳು ಪೂರ್ಣವಾಗಿ ಅರ್ಥವಾಗದಿದ್ರೂ ಅವ್ನು ನಿಷ್ಠಾವಂತನಾಗಿ ಉಳಿದ. ಯಾಕಂದ್ರೆ ಯೇಸುನೇ ಮೆಸ್ಸೀಯ ಅನ್ನೋದನ್ನ ಅವ್ನು ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದ. ನಾವು ಸಹ ಬೈಬಲ್‌ ಕಲಿಸೋ ಸತ್ಯದ ಮೇಲೆ ನಂಬಿಕೆಯನ್ನ ಇನ್ನೂ ಹೆಚ್ಚಿಸಿಕೊಳ್ಳಬಹುದು. ಹಾಗೆ ಮಾಡೋದಾದ್ರೆ ಎಂಥ ಕಷ್ಟದ ಪರಿಸ್ಥಿತಿಯಲ್ಲೂ ನಮ್ಮ ನಂಬಿಕೆ ಬಿದ್ದು ಹೋಗಲ್ಲ. ಜೊತೆಗೆ ಬೇರೆಯವ್ರು ನಂಬಿಕೆಯನ್ನ ಬೆಳೆಸಿಕೊಳ್ಳೋಕೆ ಸಹಾಯ ಮಾಡ್ತೀವಿ.—2 ಯೋಹಾ. 1, 2.

ಗೀತೆ 101 ರಾಜ್ಯ ಸತ್ಯವನ್ನು ಪ್ರಸಿದ್ಧಪಡಿಸುವುದು

^ ಪ್ಯಾರ. 5 ಬೈಬಲಿನಲ್ಲಿರೋ ಸತ್ಯಗಳು ತುಂಬ ಪ್ರಾಮುಖ್ಯ ಅನ್ನೋದನ್ನ ಅರ್ಥಮಾಡಿಕೊಳ್ಳಲು ಮತ್ತು ಅದೇ ಸತ್ಯ ಅನ್ನೋ ನಂಬಿಕೆಯನ್ನು ಇನ್ನೂ ಹೆಚ್ಚಿಸಿಕೊಳ್ಳಲು ಈ ಲೇಖನ ನಮ್ಗೆ ಸಹಾಯ ಮಾಡುತ್ತೆ.

^ ಪ್ಯಾರ. 10 ಬೈಬಲಿನ ಮುಖ್ಯ ಬೋಧನೆಗಳನ್ನು ಹೇಗೆ ತಿಳಿಸಬಹುದು ಅನ್ನೋ ಮಾಹಿತಿಗಾಗಿ 2015 ರ ಕಾವಲಿನಬುರುಜು ಪತ್ರಿಕೆಯಲ್ಲಿ ಬಂದಿರೋ “ಹೀಗೊಂದು ಸಂಭಾಷಣೆ” ಅನ್ನೋ ಸರಣಿ ಲೇಖನವನ್ನು ನೋಡಿ. ಅದರ ಮುಖ್ಯವಿಷಯ “ದೇವರ ರಾಜ್ಯದ ಆಳ್ವಿಕೆ ಯಾವಾಗ ಆರಂಭವಾಯಿತು?” ಆಗಿದೆ.

^ ಪ್ಯಾರ. 14 ಈ ಪ್ರವಾದನೆಗಳ ಹೆಚ್ಚಿನ ಮಾಹಿತಿಗಾಗಿ ಜೂನ್‌ 15, 2012 ಮತ್ತು ಮೇ 2020 ರ ಕಾವಲಿನಬುರುಜು ಸಂಚಿಕೆ ನೋಡಿ.

^ ಪ್ಯಾರ. 60 ಚಿತ್ರ ವಿವರಣೆ: ಕುಟುಂಬ ಆರಾಧನೆಯಲ್ಲಿ ಹೆತ್ತವ್ರು ಮಕ್ಕಳ ಜೊತೆ ಮಹಾ ಸಂಕಟದ ಬಗ್ಗೆ ಇರೋ ಬೈಬಲ್‌ ಪ್ರವಾದನೆಗಳನ್ನ ಚರ್ಚಿಸ್ತಿದ್ದಾರೆ.

^ ಪ್ಯಾರ. 62 ಚಿತ್ರ ವಿವರಣೆ: ಮಹಾ ಸಂಕಟದ ಸಮ್ಯದಲ್ಲಿ ಏನು ನಡೀತಿದ್ಯೋ ಅದನ್ನ ನೋಡಿ ಆ ಕುಟುಂಬ ಆಶ್ಚರ್ಯಪಡ್ತಿಲ್ಲ.