ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 30

ಸತ್ಯದಲ್ಲಿ ನಡೆಯುತ್ತಾ ಇರಿ

ಸತ್ಯದಲ್ಲಿ ನಡೆಯುತ್ತಾ ಇರಿ

“ನನ್ನ ಮಕ್ಕಳು ಸತ್ಯದಲ್ಲಿ ನಡೆಯುತ್ತಾ ಇದ್ದಾರೆಂಬುದನ್ನು ಕೇಳಿಸಿಕೊಳ್ಳುವುದಕ್ಕಿಂತ ಕೃತಜ್ಞತೆಯನ್ನು ಸಲ್ಲಿಸಲು ಹೆಚ್ಚಿನ ಕಾರಣ ನನಗಿಲ್ಲ.”—3 ಯೋಹಾನ 4.

ಗೀತೆ 65 ಇದೇ ಮಾರ್ಗ

ಕಿರುನೋಟ *

1. ಮೂರನೇ ಯೋಹಾನ 3, 4 ರಲ್ಲಿ ತಿಳಿಸಿದಂತೆ ನಮ್ಗೆ ಯಾವ್ದು ಖುಷಿ ಕೊಡುತ್ತೆ?

ಅಪೊಸ್ತಲ ಯೋಹಾನ ಯಾರಿಗೆ ಸತ್ಯ ಕಲಿಸಿದ್ದನೋ ಅವ್ರು ಯೆಹೋವನ ಆರಾಧನೆ ಮಾಡೋದನ್ನು ನೋಡ್ದಾಗ ಅವ್ನಿಗೆ ಎಷ್ಟು ಸಂತೋಷ ಆಗಿರ್ಬೇಕಲ್ವಾ? ಅವನಿಗೆ ಮಕ್ಕಳಂತೆ ಇದ್ದ ಅವ್ರು ಯೆಹೋವನಿಗೆ ನಿಷ್ಠಾವಂತರಾಗಿದ್ರು. ಅವ್ರು ಅನೇಕ ಕಷ್ಟಗಳನ್ನ ಎದುರಿಸಿದಾಗ ಅದನ್ನ ಜಯಿಸೋಕೆ, ಅವ್ರ ನಂಬಿಕೆ ಬಲಪಡಿಸೋಕೆ ಯೋಹಾನ ತುಂಬ ಸಹಾಯ ಮಾಡ್ದ. ಇವತ್ತು ನಮ್ಮ ಮಕ್ಳು ಅಥ್ವಾ ನಮ್ಮ ಬೈಬಲ್‌ ವಿದ್ಯಾರ್ಥಿಗಳು ತಮ್ಮ ಜೀವನವನ್ನ ಯೆಹೋವನಿಗೆ ಸಮರ್ಪಿಸ್ಕೊಂಡು ಆತನನ್ನು ಆರಾಧಿಸ್ತಿರೋದನ್ನ ನೋಡ್ವಾಗ ನಮ್ಗೂ ತುಂಬ ಖುಷಿಯಾಗುತ್ತೆ.—3 ಯೋಹಾನ 3, 4 ಓದಿ.

2. ಯೋಹಾನ ಬರೆದ ಪತ್ರಗಳ ಉದ್ದೇಶ ಏನಾಗಿತ್ತು?

2 ಯೋಹಾನ ಪತ್ಮೋಸ್‌ ದ್ವೀಪದ ಸೆರೆಮನೆಯಲ್ಲಿದ್ದ. ಅಲ್ಲಿಂದ ಬಿಡುಗಡೆಯಾದ ನಂತ್ರ ಅವ್ನು ಬಹುಶಃ ಎಫೆಸದಲ್ಲಿ ಅಥ್ವಾ ಅದ್ರ ಸುತ್ತಮುತ್ತ ಪ್ರದೇಶದಲ್ಲಿ ವಾಸಿಸಿದ. ಅಲ್ಲಿದ್ದಾಗ ಕ್ರಿಸ್ತ ಶಕ 98 ರಲ್ಲಿ ಅವ್ನು ದೇವರಿಂದ ಪ್ರೇರಿತನಾಗಿ ಮೂರು ಪತ್ರಗಳನ್ನ ಬರೆದ. ನಿಷ್ಠಾವಂತ ಕ್ರೈಸ್ತರು ಯೇಸುವಿನಲ್ಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳೋದಕ್ಕೆ ಮತ್ತು ಸತ್ಯದಲ್ಲಿ ನಡೆಯುತ್ತಾ ಇರೋಕೆ ಸಹಾಯ ಮಾಡುವುದೇ ಆ ಪತ್ರಗಳ ಉದ್ದೇಶವಾಗಿತ್ತು.

3. ಯಾವ ಪ್ರಶ್ನೆಗಳಿಗೆ ನಾವು ಉತ್ರ ತಿಳಿಯಲಿದ್ದೇವೆ?

3 ಆ ಸಮ್ಯದಲ್ಲಿ ಯೇಸುವಿನ ಅಪೊಸ್ತಲರಲ್ಲಿ ಯೋಹಾನ ಮಾತ್ರ ಬದುಕಿದ್ದ. ಸಹೋದರ ಸಹೋದರಿಯರ ಬಗ್ಗೆ ಅವ್ನಿಗೆ ತುಂಬ ಚಿಂತೆ ಆಗ್ತಿತ್ತು. ಯಾಕಂದ್ರೆ ಸಭೆಯೊಳಗೆ ನುಸುಳಿದ್ದ ಸುಳ್ಳು ಬೋಧಕರು ಕ್ರೈಸ್ತರನ್ನು ದಾರಿ ತಪ್ಪಿಸೋಕೆ ಪ್ರಯತ್ನಿಸ್ತಿದ್ರು. * (1 ಯೋಹಾ. 2:18, 19, 26) ಆ ಧರ್ಮಭ್ರಷ್ಟರು ದೇವ್ರ ಬಗ್ಗೆ ತಮ್ಗೆ ಚೆನ್ನಾಗಿ ಗೊತ್ತಿದೆ ಅಂತ ಹೇಳ್ತಿದ್ರು. ಆದ್ರೆ ಯೆಹೋವನ ನೀತಿ ನಿಯಮಗಳನ್ನ ಪಾಲಿಸ್ತಿರ್ಲಿಲ್ಲ. ಯೋಹಾನನು ಕೊಟ್ಟ ಸಲಹೆಗಳನ್ನ ನಾವೀಗ ನೋಡೋಣ ಮತ್ತು ಈ ಮೂರು ಪ್ರಶ್ನೆಗಳಿಗೆ ಉತ್ರ ಕಂಡುಕೊಳ್ಳೋಣ. ಸತ್ಯದಲ್ಲಿ ನಡೆಯೋದು ಅಂದ್ರೇನು? ಸತ್ಯದಲ್ಲೇ ನಡೆಯೋಕೆ ಯಾವ್ದು ನಮ್ಮನ್ನ ತಡೆಯುತ್ತೆ? ಸತ್ಯದಲ್ಲೇ ಮುಂದುವರಿಯೋಕೆ ಒಬ್ರಿಗೊಬ್ರು ಹೇಗೆ ಸಹಾಯ ಮಾಡ್ಬಹುದು?

ಸತ್ಯದಲ್ಲಿ ನಡೆಯೋದು ಅಂದ್ರೇನು?

4. ಒಂದನೇ ಯೋಹಾನ 2:3-6; 2 ಯೋಹಾನ 4, 6 ರ ಪ್ರಕಾರ ಸತ್ಯದಲ್ಲೇ ನಡೆಯೋದ್ರಲ್ಲಿ ಏನೆಲ್ಲಾ ಒಳಗೂಡಿದೆ?

4 ನಾವು ಸತ್ಯದಲ್ಲೇ ನಡೆಯಬೇಕಂದ್ರೆ ಬೈಬಲಿನಲ್ಲಿರುವ ಸತ್ಯಗಳನ್ನು ಚೆನ್ನಾಗಿ ತಿಳ್ಕೊಬೇಕು. ‘ಯೆಹೋವನ ಆಜ್ಞೆಗಳನ್ನು ಕೈಕೊಂಡು’ ನಡೆಯಬೇಕು ಅಂದ್ರೆ ಅದಕ್ಕೆ ವಿಧೇಯರಾಗ್ಬೇಕು. (1 ಯೋಹಾನ 2:3-6; 2 ಯೋಹಾನ 4, 6 ಓದಿ.) ಯೆಹೋವನಿಗೆ ವಿಧೇಯತೆ ತೋರಿಸೋದ್ರಲ್ಲಿ ಯೇಸು ಅತ್ಯುತ್ತಮ ಮಾದರಿ ಆಗಿದ್ದಾನೆ. ನಾವು ಯೇಸುವನ್ನ ನಮ್ಮಿಂದಾದಷ್ಟು ಹೆಚ್ಚು ಅನುಕರಿಸುವಾಗ ಯೆಹೋವನ ಮಾತಿಗೆ ವಿಧೇಯತೆ ತೋರಿಸ್ತೇವೆ.—ಯೋಹಾ. 8:29; 1 ಪೇತ್ರ 2:21.

5. ಯಾವ ವಿಷ್ಯ ನಮ್ಗೆ ಮನವರಿಕೆ ಆಗಿರ್ಬೇಕು?

5 ನಾವು ಸತ್ಯದಲ್ಲೇ ನಡೆಯಬೇಕಂದ್ರೆ, ಯೆಹೋವ ಯಾವಾಗ್ಲೂ ಸತ್ಯವನ್ನೇ ಆಡ್ತಾನೆ ಮತ್ತು ಬೈಬಲಿನಲ್ಲಿ ಆತನು ತಿಳಿಸಿರೋದೆಲ್ಲಾ ಸತ್ಯ ಅನ್ನೋ ದೃಢನಂಬಿಕೆ ನಮಗಿರಬೇಕು. ಜೊತೆಗೆ ಯೇಸುವೇ ಮೆಸ್ಸೀಯ ಅಂತನೂ ನಂಬಬೇಕು. ಆದ್ರೆ ಇಂದು ಯೇಸು ದೇವ್ರ ರಾಜ್ಯದ ರಾಜ ಅಂತ ಅನೇಕರು ನಂಬ್ತಿಲ್ಲ. ಯೆಹೋವ ಮತ್ತು ಯೇಸುವಿನ ಬಗ್ಗೆ ಇರೋ ಸತ್ಯವನ್ನ ದೃಢವಾಗಿ ನಂಬದೆ ಇರುವವರನ್ನು “ಅನೇಕ ವಂಚಕರು” ಮೋಸಗೊಳಿಸ್ಬಹುದು ಅಂತ ಯೋಹಾನ ಎಚ್ಚರಿಸ್ದ. (2 ಯೋಹಾ. 7-11) ಅವ್ನು “ಯೇಸುವೇ ಕ್ರಿಸ್ತನೆಂಬುದನ್ನು ಅಲ್ಲಗಳೆಯುವವನು ಸುಳ್ಳುಗಾರನಲ್ಲವಾದರೆ ಸುಳ್ಳುಗಾರನು ಬೇರೆ ಯಾವನು?” ಅಂತ ಬರೆದ. (1 ಯೋಹಾ. 2:22) ನಾವು ಮೋಸ ಹೋಗ್ಬಾರ್ದು ಅಂದ್ರೆ ದೇವ್ರ ವಾಕ್ಯವನ್ನ ಚೆನ್ನಾಗಿ ಅಧ್ಯಯನ ಮಾಡ್ಬೇಕು. ಆಗ ಯೆಹೋವನ ಬಗ್ಗೆ, ಯೇಸುವಿನ ಬಗ್ಗೆ ಇರೋ ಸತ್ಯ ಗೊತ್ತಾಗುತ್ತೆ. (ಯೋಹಾ. 17:3) ಮತ್ತು ನಾವು ಕಲಿಯುತ್ತಿರೋದು ಸತ್ಯ ಅಂತ ಮನವರಿಕೆ ಆಗುತ್ತೆ.

ಸತ್ಯದಲ್ಲೇ ನಡೆಯೋಕೆ ಯಾವುದು ನಮ್ಮನ್ನ ತಡೆಯುತ್ತೆ?

6. ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಸತ್ಯದಲ್ಲೇ ನಡೆಯೋಕೆ ಯಾವುದು ತಡೆಯುತ್ತೆ?

6 ಮನುಷ್ಯರ ತಪ್ಪಾದ ಬೋಧನೆಗಳು. ಕ್ರೈಸ್ತರಾದ ನಾವು ಇಂಥ ಬೋಧನೆಗಳಿಂದ ದೂರ ಇರ್ಬೇಕು. (1 ಯೋಹಾ. 2:26) ವಿಶೇಷವಾಗಿ ಯುವಕರು ಈ ವಿಷ್ಯದ ಬಗ್ಗೆ ಎಚ್ಚರಿಕೆ ವಹಿಸ್ಬೇಕು. ಫ್ರಾನ್ಸ್‌ನಲ್ಲಿರೋ 25 ವರ್ಷದ ಅಲೆಕ್ಸಿಯ * ಅನ್ನೋ ಸಹೋದರಿ ಹೀಗೆ ಹೇಳ್ತಾಳೆ: “ನಾನು ಶಾಲೆಯಲ್ಲಿದ್ದಾಗ ವಿಕಾಸವಾದದ ಬಗ್ಗೆ ಮತ್ತು ಈ ತರದ ಇನ್ನೂ ಅನೇಕ ಸಿದ್ಧಾಂತಗಳ ಬಗ್ಗೆ ಕಲಿಸ್ತಿದ್ರು. ಆಗ ನನ್ಗೆ ಬೈಬಲಿನಲ್ಲಿರೋ ವಿಷ್ಯಗಳು ಸತ್ಯನ ಅಂತ ಸಂಶಯ ಹುಟ್ತಿತ್ತು. ಶಾಲೆಯಲ್ಲಿ ಕಲಿಸ್ತಿದ್ದ ವಿಷ್ಯಗಳು ಸರಿ ಅಂತ ಅನಿಸ್ತಿತ್ತು. ಆದ್ರೆ ಬೈಬಲ್‌ನಲ್ಲಿರೋ ಸತ್ಯವನ್ನು ತಿರಸ್ಕರಿಸೋದು ತಪ್ಪು ಮತ್ತು ಟೀಚರ್‌ಗಳು ಹೇಳೋದನ್ನೆಲ್ಲಾ ಕಣ್ಮುಚ್ಚಿ ನಂಬಬಾರ್ದು ಅಂತ ಅರ್ಥ ಮಾಡ್ಕೊಂಡೆ.” ಅಲೆಕ್ಸಿಯ ಲೈಫ್‌—ಹೌ ಡಿಡ್‌ ಇಟ್‌ ಗೆಟ್‌ ಹಿಯರ್‌? ಬೈ ಎವಲ್ಯೂಶನ್‌ ಆರ್‌ ಬೈ ಕ್ರಿಯೇಶನ್‌ ಅನ್ನೋ ಪುಸ್ತಕವನ್ನು ಚೆನ್ನಾಗಿ ಓದಿ ಅರ್ಥ ಮಾಡಿಕೊಂಡ್ಳು. ಕೆಲವೇ ವಾರಗಳಲ್ಲಿ ಅವಳಿಗಿದ್ದ ಎಲ್ಲಾ ಸಂಶಯಕ್ಕೆ ಉತ್ರ ಸಿಕ್ತು.“ಬೈಬಲಿನಲ್ಲಿರೋದೇ ಸತ್ಯ ಅಂತ ನಾನಾಗಿಯೇ ಮನವರಿಕೆ ಮಾಡ್ಕೊಂಡೆ ಮತ್ತು ಅದ್ರಲ್ಲಿರೋ ನೀತಿ ನಿಯಮಗಳನ್ನ ಪಾಲಿಸೋದ್ರಿಂದನೇ ನಿಜ ಶಾಂತಿ ಮತ್ತು ಸಂತೋಷ ಸಿಗುತ್ತೆ ಅನ್ನೋದು ನಂಗೆ ಅರ್ಥವಾಯ್ತು” ಅಂತ ಅವ್ಳು ಹೇಳ್ತಾಳೆ.

7. ನಾವು ಯಾವ ರೀತಿ ಜೀವ್ನ ನಡೆಸಬಾರ್ದು ಮತ್ತು ಯಾಕೆ?

7 ಯುವಜನ್ರಾಗಲಿ, ವಯಸ್ಸಾದವರಾಗಲಿ ಕ್ರೈಸ್ತರಾದ ನಾವ್ಯಾರೂ ಇಬ್ಬಗೆಯ ಜೀವ್ನ ನಡೆಸಬಾರ್ದು. ಯೆಹೋವನನ್ನು ಆರಾಧಿಸ್ತಾ ಅದೇ ಸಮ್ಯದಲ್ಲಿ ತಪ್ಪಾದ ಜೀವನಶೈಲಿಯನ್ನು ನಡ್ಸೋಕೆ ಆಗಲ್ಲ ಅಂತ ಯೋಹಾನ ಹೇಳಿದ. (1 ಯೋಹಾ. 1:6) ನಾವು ಮಾಡೋ ಪ್ರತಿಯೊಂದು ಕೆಲ್ಸನೂ ಯೆಹೋವ ನೋಡ್ತಿದ್ದಾನೆ ಅನ್ನೋದನ್ನು ಮನಸ್ಸಲ್ಲಿಟ್ಟರೆ ಈಗ್ಲೂ ಮುಂದಕ್ಕೂ ಆತನಿಗೆ ಸಂತೋಷವಾಗೋ ತರ ನಡಕೊಳ್ತೇವೆ. ಚುಟುಕಾಗಿ ಹೇಳೋದಾದ್ರೆ ನಾವು ಮನುಷ್ಯರ ಕಣ್ಣಿಗೆ ಮಣ್ಣು ಹಾಕ್ಬಹುದು ಆದ್ರೆ ಯೆಹೋವನಿಗೆ ಮೋಸ ಮಾಡೋಕಾಗಲ್ಲ. ಯಾಕಂದ್ರೆ ಯೆಹೋವನಿಗೆ ಮರೆಯಾದದ್ದು ಯಾವುದೂ ಇಲ್ಲ.—ಇಬ್ರಿ. 4:13.

8. ನಮಗೆ ಯಾವ ದೃಷ್ಟಿಕೋನ ಇರಬಾರ್ದು?

8 ತಪ್ಪಾದ ವಿಷ್ಯಗಳ ಕಡೆ ಲೋಕಕ್ಕಿರೋ ದೃಷ್ಟಿಕೋನ ನಮಗೆ ಇರಬಾರ್ದು. ಯಾಕಂದ್ರೆ ಅದು ಯೆಹೋವನ ದೃಷ್ಟಿಕೋನಕ್ಕೆ ತದ್ವಿರುದ್ಧವಾಗಿದೆ. “‘ನಮ್ಮಲ್ಲಿ ಯಾವುದೇ ಪಾಪವಿಲ್ಲ’ ಎಂದು ನಾವು ಹೇಳುವುದಾದರೆ ನಮ್ಮನ್ನು ನಾವೇ ಮೋಸಗೊಳಿಸಿಕೊಳ್ಳುತ್ತಿದ್ದೇವೆ” ಅಂತ ಅಪೊಸ್ತಲ ಯೋಹಾನ ಬರೆದ. (1 ಯೋಹಾ. 1:8) ಯೋಹಾನನ ದಿನಗಳಲ್ಲಿದ್ದ ಧರ್ಮಭ್ರಷ್ಟರು, ಒಬ್ಬ ವ್ಯಕ್ತಿ ಬೇಕು ಬೇಕಂತ ಪಾಪ ಮಾಡಿದ್ರೂ ದೇವ್ರು ಜೊತೆ ಒಳ್ಳೇ ಸಂಬಂಧವನ್ನ ಕಾಪಾಡಿಕೊಳ್ಳಬಹುದು ಅಂತ ಹೇಳ್ತಿದ್ರು. ಇವತ್ತು ನಾವು ಇದೇ ರೀತಿ ಯೋಚಿಸ್ತಿರೋ ಜನ್ರ ಮಧ್ಯೆನೇ ಜೀವಿಸ್ತಿದ್ದೇವೆ. ಅನೇಕರು ದೇವ್ರನ್ನು ನಂಬ್ತೇವೆ ಅಂತ ಹೇಳ್ತಾರಾದ್ರೂ ಪಾಪದ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನವನ್ನು ಸರಿ ಅಂತ ಒಪ್ಪಿಕೊಳ್ಳಲ್ಲ. ಅದ್ರಲ್ಲೂ ಲೈಂಗಿಕತೆ ವಿಷ್ಯದಲ್ಲಿ ಯೆಹೋವನು ಇಟ್ಟಿರೋ ನೀತಿ ನಿಯಮಗಳನ್ನ ಅವ್ರು ಒಪ್ಪೋದೇ ಇಲ್ಲ. ಕೆಲವೊಂದು ಲೈಂಗಿಕ ನಡತೆಯನ್ನು ಯೆಹೋವನು ತಪ್ಪು ಅಂತ ಹೇಳ್ತಾನೆ. ಆದ್ರೆ ಇವ್ರು ಅಂಥ ವಿಷ್ಯಗಳನ್ನು ಮಾಡೋದ್ರಲ್ಲಿ ಏನು ತಪ್ಪಿಲ್ಲ, ಅದು ಅವ್ರವ್ರಿಗೆ ಬಿಟ್ಟ ವಿಚಾರ ಅಂತ ಹೇಳ್ತಾರೆ.

ಯುವಜನರೇ, ಯೆಹೋವ ಯಾಕೆ ಕೆಲವು ವಿಷ್ಯಗಳನ್ನು ಸರಿ ಅಥ್ವಾ ತಪ್ಪು ಅಂತ ಹೇಳ್ತಾನೆ ಅನ್ನೋದನ್ನು ತಿಳ್ಕೊಳ್ಳಿ. ಆಗ ತಪ್ಪಾದ ವಿಷ್ಯ ಮಾಡೋಕೆ ಬೇರೆಯವ್ರು ಒತ್ತಾಯ ಮಾಡ್ದಾಗ ಅದನ್ನು ಯಾಕೆ ಮಾಡಲ್ಲ ಅಂತ ವಿವರಿಸೋಕೆ ಆಗುತ್ತೆ (ಪ್ಯಾರ 9 ನೋಡಿ) *

9. ಯುವಜನ್ರು ಬೈಬಲ್‌ ತತ್ವಗಳನ್ನ ಪಾಲಿಸೋದಾದ್ರೆ ಯಾವ ಪ್ರಯೋಜನ ಸಿಗುತ್ತೆ?

9 ಮುಖ್ಯವಾಗಿ ಯುವಜನ್ರಿಗೆ ಕ್ಲಾಸ್‌ಮೇಟ್‌ಗಳಿಂದ, ಜೊತೆ ಕೆಲ್ಸ ಮಾಡೋರಿಂದ ಅನೈತಿಕ ವಿಷ್ಯಗಳನ್ನು ಮಾಡುವ ಒತ್ತಡ ಎದುರಾಗುತ್ತೆ. ಅಲೆಕ್ಸಾಂಡರ್‌ ತನಗೆ ಶಾಲೆಯಲ್ಲಾದ ಅನುಭವದ ಬಗ್ಗೆ ಹೀಗೆ ಹೇಳ್ತಾನೆ: “ನನ್ನ ಶಾಲೆಯಲ್ಲಿದ್ದ ಕೆಲ್ವು ಹುಡ್ಗೀರು ಅವ್ರ ಜೊತೆ ಸೆಕ್ಸ್‌ ಮಾಡೋಕೆ ನನ್ನನ್ನ ಒತ್ತಾಯ ಮಾಡ್ತಿದ್ರು. ನಾನದಕ್ಕೆ ಒಪ್ಪಲಿಲ್ಲ. ನನ್ಗೆ ಗರ್ಲ್‌ಫ್ರೆಂಡ್‌ ಇಲ್ಲದಿದ್ದಕ್ಕೆ ನಾನೊಬ್ಬ ಸಲಿಂಗಕಾಮಿ ಅಂತ ಹೇಳಿದ್ರು.” ನಿಮ್ಗೂ ಈ ತರ ಸನ್ನಿವೇಶ ಎದುರಾಗ್ಬಹುದು. ಆಗ ನೀವು ಬೈಬಲಿನಲ್ಲಿ ಹೇಳಿರೋ ಆಜ್ಞೆಗಳ ಪ್ರಕಾರ ನಡ್ಕೊಳ್ಳೋದಾದ್ರೆ ಒಳ್ಳೇ ಮನಸ್ಸಾಕ್ಷಿ ಇರುತ್ತೆ, ಶಾರೀರಿಕವಾಗಿ ಮತ್ತು ಭಾವನಾತ್ಮಕವಾಗಿ ಒಳ್ಳೇ ಆರೋಗ್ಯ ಇರುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ, ಯೆಹೋವನ ಜೊತೆ ಆಪ್ತ ಸ್ನೇಹ ಸಂಬಂಧ ಇರುತ್ತೆ. ನೀವು ಪ್ರತಿ ಸಲ ಒತ್ತಡಗಳನ್ನು ಜಯಿಸಿದಾಗ ಯಾವುದು ಸರಿಯೋ ಅದನ್ನ ಮಾಡೋದಕ್ಕೆ ಸುಲಭವಾಗುತ್ತೆ. ಲೈಂಗಿಕತೆಯ ಬಗ್ಗೆ ಲೋಕಕ್ಕಿರೋ ತಪ್ಪಾದ ದೃಷ್ಟಿಕೋನಕ್ಕೆ ಕಾರಣ ಸೈತಾನ ಅನ್ನೋದನ್ನ ಮರೀಬೇಡಿ. ಲೋಕದವ್ರ ದೃಷ್ಟಿಕೋನವನ್ನು ನಾವು ತಿರಸ್ಕರಿಸಿದರೆ ‘ಕೆಡುಕನನ್ನು ಜಯಿಸುತ್ತೇವೆ.’—1 ಯೋಹಾ. 2:14.

10. ಶುದ್ಧ ಮನಸ್ಸಾಕ್ಷಿಯಿಂದ ಯೆಹೋವನ ಸೇವೆ ಮಾಡೋಕೆ 1 ಯೋಹಾನ 1:9 ಹೇಗೆ ಸಹಾಯ ಮಾಡುತ್ತೆ?

10 ಯಾವುದು ಸರಿ ಯಾವುದು ತಪ್ಪು ಅಂತ ನಿರ್ಣಯಿಸೋಕೆ ಯೆಹೋವನಿಗೆ ಮಾತ್ರ ಹಕ್ಕಿರೋದು ಅನ್ನೋದನ್ನ ನಾವು ಒಪ್ಪಿಕೊಳ್ತೇವೆ. ತಪ್ಪನ್ನ ಮಾಡ್ದೇ ಇರೋಕೆ ನಮ್ಮಿಂದಾದಷ್ಟು ಪ್ರಯತ್ನ ಮಾಡ್ತೇವೆ. ತಪ್ಪು ಮಾಡಿದ್ರೆ ಪ್ರಾರ್ಥನೆಯಲ್ಲಿ ಅದನ್ನ ಯೆಹೋವನ ಹತ್ರ ಹೇಳ್ಕೊಳ್ತೇವೆ. (1 ಯೋಹಾನ 1:9 ಓದಿ.) ನಾವು ಒಂದುವೇಳೆ ಗಂಭೀರ ತಪ್ಪನ್ನ ಮಾಡಿರೋದಾದ್ರೆ ಹಿರಿಯರ ಸಹಾಯ ಪಡಕೊಳ್ತೇವೆ. ಯಾಕಂದ್ರೆ ಯೆಹೋವನು ಅವ್ರನ್ನ ನಮ್ಮ ಕಾಳಜಿವಹಿಸೋಕೆ ನೇಮಿಸಿದ್ದಾನೆ. (ಯಾಕೋ. 5:14-16) ನಾವು ಹಿಂದೆ ಮಾಡಿರೋ ಗಂಭೀರ ತಪ್ಪಿನ ಬಗ್ಗೆ ಅತಿಯಾಗಿ ಕೊರಗ್ತಾ ಇರಬಾರ್ದು. ಯಾಕಂದ್ರೆ ಯೆಹೋವನು ನಮ್ಮ ಪಾಪಗಳ ಕ್ಷಮೆಗಾಗಿ ತನ್ನ ಮಗನ ವಿಮೋಚನಾ ಮೌಲ್ಯವನ್ನ ಕೊಟ್ಟಿದ್ದಾನೆ. ಯಾರು ಮನಸಾರೆ ಪಶ್ಚಾತ್ತಾಪಪಡ್ತಾರೋ ಅವ್ರ ತಪ್ಪುಗಳನ್ನು ಕ್ಷಮಿಸ್ತೇನೆ ಅಂತ ಯೆಹೋವ ಹೇಳಿದ್ದಾನೆ. ಆ ಮಾತನ್ನು ಆತನು ಯಾವತ್ತಿಗೂ ಮೀರಲ್ಲ. ಹಾಗಾಗಿ ಯೆಹೋವನ ಸೇವೆಯನ್ನು ಮತ್ತೆ ಒಳ್ಳೇ ಮನಸ್ಸಾಕ್ಷಿಯಿಂದ ಮಾಡಬಹುದು.—1 ಯೋಹಾ. 2:1, 2, 12; 3:19, 20.

11. ನಮ್ಮ ನಂಬಿಕೆ ಹಾಳುಮಾಡೋ ಬೋಧನೆಗಳಿಂದ ನಾವು ಹೇಗೆ ದೂರ ಇರಬಹುದು?

11 ಧರ್ಮಭ್ರಷ್ಟರ ಬೋಧನೆಗಳನ್ನು ನಾವು ತಿರಸ್ಕರಿಸಬೇಕು. ಕ್ರೈಸ್ತ ಸಭೆಯ ಆರಂಭದಿಂದಲೂ ಸೈತಾನ ಅನೇಕ ವಂಚಕರನ್ನ ಬಳಸಿ ನಂಬಿಗಸ್ತ ದೇವಸೇವಕರ ಮನಸ್ಸಿನಲ್ಲಿ ಸಂಶಯದ ಬೀಜ ಬಿತ್ತಲು ಪ್ರಯತ್ನಿಸ್ತಿದ್ದಾನೆ. ಹಾಗಾಗಿ ಸತ್ಯ ಯಾವುದು ಸುಳ್ಳು ಯಾವುದು ಅಂತ ಗುರುತಿಸೋಕೆ ನಾವು ಸಮರ್ಥರಾಗಿರ್ಬೇಕು. * ನಮ್ಮ ವಿರೋಧಿಗಳು ಯೆಹೋವನ ಮೇಲಿರೋ ನಮ್ಮ ನಂಬಿಕೆಯನ್ನು ಹಾಳು ಮಾಡೋಕೆ, ಸಹೋದರ ಸಹೋದರಿಯರ ಮೇಲಿರೋ ಪ್ರೀತಿ ಕಳಕೊಳ್ಳೋಕೆ ಸೋಷಿಯಲ್‌ ಮೀಡಿಯಾ ಮತ್ತು ಇಂಟರ್‌ನೆಟ್‌ ಅನ್ನು ಬಳಸ್ತಾರೆ. ಅವ್ರು ಹೇಳೋ ವಿಷ್ಯಗಳನ್ನು ನಂಬಬೇಡಿ. ಯಾಕಂದ್ರೆ ಅದ್ರ ಹಿಂದೆ ಸೈತಾನನ ಕೈವಾಡ ಇರುತ್ತೆ.—1 ಯೋಹಾ. 4:1, 6; ಪ್ರಕ. 12:9.

12. ನಾವು ಕಲಿತ ಸತ್ಯದ ಮೇಲೆ ನಮಗಿರೋ ನಂಬಿಕೆಯನ್ನು ಯಾಕೆ ಹೆಚ್ಚಿಸಿಕೊಳ್ಬೇಕು?

12 ಸೈತಾನನ ಕುತಂತ್ರಗಳಿಂದ ನಾವು ದೂರ ಇರಬೇಕಂದ್ರೆ ಯೇಸುವಿನ ಮೇಲಿರೋ ನಂಬಿಕೆಯನ್ನು ಹೆಚ್ಚಿಸಿಕೊಳ್ಬೇಕು ಮತ್ತು ಯೆಹೋವನ ಉದ್ದೇಶವನ್ನು ನೆರವೇರಿಸೋದ್ರಲ್ಲಿ ಯೇಸುವಿಗೆ ಒಂದು ಮುಖ್ಯ ಪಾತ್ರವಿದೆ ಅನ್ನೋದನ್ನು ಒಪ್ಪಿಕೊಳ್ಬೇಕು. ಜೊತೆಗೆ ಯೆಹೋವನು ಇಂದು ತನ್ನ ಸಂಘಟನೆಯನ್ನು ನಡೆಸೋಕೆ ಬಳಸ್ತಿರೋ ನಂಬಿಗಸ್ತ ವ್ಯಕ್ತಿಗಳ ಮೇಲೂ ನಾವು ಸಂಪೂರ್ಣ ಭರವಸೆ ಇಡ್ಬೇಕು. (ಮತ್ತಾ. 24:45-47) ಪ್ರತಿದಿನ ಬೈಬಲನ್ನ ತಪ್ಪದೇ ಅಧ್ಯಯನ ಮಾಡೋ ಮೂಲಕ ನಮ್ಮ ನಂಬಿಕೆಯನ್ನು ಹೆಚ್ಚಿಸಿಕೊಳ್ಬಹುದು. ಆಗ ನಮ್ಮ ನಂಬಿಕೆ ಆಳವಾಗಿ ಬೇರು ಬಿಟ್ಟಿರೋ ಮರದ ತರ ಇರುತ್ತೆ. ಈ ವಿಷ್ಯದ ಬಗ್ಗೆ ಪೌಲ ಕೊಲೊಸ್ಸೆ ಸಭೆಯವ್ರಿಗೆ ಏನು ಹೇಳ್ದ ಅಂತ ನೋಡಿ: ‘ನೀವು ಕರ್ತನಾದ ಕ್ರಿಸ್ತ ಯೇಸುವನ್ನು ಸ್ವೀಕರಿಸಿರುವಂತೆಯೇ ಅವನೊಂದಿಗೆ ಐಕ್ಯದಲ್ಲಿ ನಡೆಯುತ್ತಾ ಇರಿ; ಅವನಲ್ಲಿ ಬೇರೂರಿದವರಾಗಿದ್ದು ಕಟ್ಟಲ್ಪಡುತ್ತಾ ನಿಮಗೆ ಕಲಿಸಲ್ಪಟ್ಟ ಪ್ರಕಾರವೇ ನಂಬಿಕೆಯಲ್ಲಿ ಸ್ಥಿರೀಕರಿಸಲ್ಪಡುತ್ತಾ ಇರಿ.’ (ಕೊಲೊ. 2:6, 7) ನಮ್ಮ ನಂಬಿಕೆ ದೃಢವಾಗಿದ್ದರೆ ಸೈತಾನನಾಗ್ಲಿ ಅವನ ಬೆಂಬಲಿಗರಾಗ್ಲಿ ಟೊಂಕ ಕಟ್ಟಿ ನಿಂತ್ರೂ ಸತ್ಯದಲ್ಲಿ ನಡೆಯದಂತೆ ನಮ್ಮನ್ನು ತಡೆಯಲು ಸಾಧ್ಯವೇ ಇಲ್ಲ.—2 ಯೋಹಾ. 8, 9

13. ಯಾವ ವಿಷ್ಯ ನಮ್ಗೆ ಗೊತ್ತಿರಬೇಕು ಮತ್ತು ಯಾಕೆ?

13 ಈ ಲೋಕದ ಜನ್ರು ನಮ್ಮನ್ನ ದ್ವೇಷಿಸ್ತಾರೆ ಅನ್ನೋದು ನಮಗೆ ಗೊತ್ತಿರಬೇಕು. (1 ಯೋಹಾ. 3:13) ಯಾಕಂದ್ರೆ ಯೋಹಾನನು “ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ” ಅಂತ ಹೇಳಿದ. (1 ಯೋಹಾ. 5:19) ಈ ಲೋಕದ ಅಂತ್ಯ ತುಂಬ ಹತ್ರ ಇರೋದ್ರಿಂದ ಸೈತಾನ ಕೋಪದಿಂದ ಕೆರಳಿ ಕೆಂಡಾಮಂಡಲವಾಗಿದ್ದಾನೆ. (ಪ್ರಕ. 12:12) ಅನೈತಿಕತೆ, ಧರ್ಮಭ್ರಷ್ಟರ ಸುಳ್ಳು ಬೋಧನೆಗಳನ್ನಷ್ಟೇ ಅಲ್ಲ ದೇವ್ರ ನಂಬಿಗಸ್ತ ಸೇವಕರಿಗೆ ಕ್ರೂರವಾದ ಹಿಂಸೆಯನ್ನ ಕೊಡೋ ಮೂಲಕವೂ ಸೈತಾನ ತನ್ನ ಕೋಪ ವ್ಯಕ್ತಪಡಿಸ್ತಿದ್ದಾನೆ. ಸುವಾರ್ತೆ ಸಾರೋದನ್ನ ನಿಲ್ಲಿಸೋಕೆ, ನಮ್ಮ ನಂಬಿಕೆ ಹಾಳು ಮಾಡೋಕೆ ಸ್ವಲ್ಪನೇ ಸಮ್ಯ ಇದೆ ಅಂತ ಅವ್ನಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ಅನೇಕ ದೇಶಗಳಲ್ಲಿ ನಮ್ಮ ಕೆಲ್ಸಗಳನ್ನ ನಿಷೇಧಿಸಿದ್ದಾನೆ. ಆದ್ರೂ ನಮ್ಮ ಸಹೋದರ ಸಹೋದರಿಯರು ನಂಬಿಗಸ್ತಿಕೆಯಿಂದ ತಾಳ್ಕೊಂಡಿದ್ದಾರೆ. ಸೈತಾನ ಏನೇ ಮಾಡ್ಲಿ ತಮ್ಮ ನಂಬಿಕೆ ಬಿಟ್ಟು ಕೊಡಲ್ಲ ಅಂತ ಅವ್ರು ತೋರಿಸಿಕೊಡ್ತಿದ್ದಾರೆ.

ಸತ್ಯದಲ್ಲೇ ಉಳಿಯಲು ಒಬ್ರಿಗೊಬ್ರು ಸಹಾಯ ಮಾಡಿ

14. ನಮ್ಮ ಸಹೋದರ ಸಹೋದರಿಯರು ಸತ್ಯದಲ್ಲೇ ಉಳಿಯಲು ನಾವು ಹೇಗೆ ಸಹಾಯ ಮಾಡ್ಬಹುದು?

14 ಸಹೋದರ ಸಹೋದರಿಯರು ಸತ್ಯದಲ್ಲೇ ಉಳಿಯಬೇಕಂದ್ರೆ ನಾವು ಅವ್ರಿಗೆ ಅನುಕಂಪ ತೋರಿಸ್ಬೇಕು. (1 ಯೋಹಾ. 3:10, 11, 16-18) ಪರಿಸ್ಥಿತಿ ಚೆನ್ನಾಗಿರುವಾಗ ಮಾತ್ರ ಅಲ್ಲ ಕಷ್ಟ ಸಮಸ್ಯೆಗಳು ಬಂದಾಗ್ಲೂ ನಾವು ಅವ್ರನ್ನ ಪ್ರೀತಿಸ್ಬೇಕು. ಉದಾಹರಣೆಗೆ ಒಬ್ಬ ಸಹೋದರ ಅಥ್ವಾ ಸಹೋದರಿಯ ಆಪ್ತರು ತೀರಿಹೋಗಿರೋದು ನಿಮ್ಗೆ ಗೊತ್ತಿರಬಹುದು. ಅವ್ರಿಗೆ ಸಾಂತ್ವನ ಮತ್ತು ಬೇಕಾದ ಸಹಾಯ ಮಾಡಲು ಸಿದ್ಧರಿದ್ದೀರಾ? ಅಥ್ವಾ ಪ್ರಕೃತಿ ವಿಕೋಪದಿಂದ ನಮ್ಮ ಸಹೋದರರು ತಮ್ಮ ಮನೆ, ರಾಜ್ಯ ಸಭಾಗೃಹವನ್ನು ಕಳ್ಕೊಂಡಿರಬಹುದು. ಅದನ್ನ ಕಟ್ಟಿ ಕೊಡೋಕೆ ಅಥ್ವಾ ಬೇಕಾದ ಸಹಾಯ ಮಾಡೋಕೆ ನೀವು ರೆಡಿ ಇದ್ದೀರಾ? ನಾವು ನಮ್ಮ ಸಹೋದರ ಸಹೋದರಿಯರನ್ನ ಪ್ರೀತಿಸ್ತೀವಿ ಅಂತ ಬರೀ ಮಾತಿನಲ್ಲಿ ಹೇಳಿದ್ರೆ ಸಾಕಾಗಲ್ಲ. ಅದನ್ನು ನಮ್ಮ ಕ್ರಿಯೆಗಳಲ್ಲೂ ತೋರಿಸ್ಬೇಕು.

15. ಒಂದನೇ ಯೋಹಾನ 4:7, 8 ರ ಪ್ರಕಾರ ನಾವೇನು ಮಾಡ್ಬೇಕು?

15 ನಾವು ಒಬ್ರನ್ನೊಬ್ರು ಪ್ರೀತಿಸುವಾಗ ಯೆಹೋವನನ್ನು ಅನುಕರಿಸ್ತೇವೆ. (1 ಯೋಹಾನ 4:7, 8 ಓದಿ.) ಒಬ್ರನ್ನೊಬ್ರು ಕ್ಷಮಿಸೋ ಮೂಲಕನೂ ಸಹೋದರರನ್ನು ಪ್ರೀತಿಸ್ತೇವೆ. ಉದಾಹರಣೆಗೆ, ಯಾರಾದ್ರೂ ನಮ್ಮ ಮನಸ್ಸಿಗೆ ನೋವು ಮಾಡಿದ್ರೆ ನಾವು ಅವ್ರನ್ನ ಕ್ಷಮಿಸಿ ಅದನ್ನ ಮರೆತುಬಿಡ್ತೇವೆ. (ಕೊಲೊ. 3:13) ಆಲ್ಡೊ ಅನ್ನೋ ಸಹೋದರನ ಅನುಭವ ನೋಡಿ. ಅವ್ನು ಒಬ್ಬ ಸಹೋದರನನ್ನು ತುಂಬ ಗೌರವಿಸ್ತಿದ್ದ. ಆದ್ರೆ ಆ ಸಹೋದರ ಒಂದ್ಸಲ ಆಲ್ಡೊವಿನ ಭಾಷೆಯ ಜನ್ರ ಬಗ್ಗೆ ಕೀಳಾಗಿ ಮಾತಾಡಿದ್ರು. ಆಗ ಏನಾಯ್ತು ಅಂತ ಆಲ್ಡೊ ಹೀಗೆ ಹೇಳ್ತಾನೆ: “ಆ ಸಹೋದರನ ಮೇಲೆ ಬೇಜಾರು ಮಾಡ್ಕೊಳ್ಳದೇ ಇರೋಕೆ ನಂಗೆ ಸಹಾಯ ಮಾಡಪ್ಪಾ ಅಂತ ಪದೇಪದೇ ಯೆಹೋವನತ್ರ ಪ್ರಾರ್ಥಿಸ್ದೆ.” ಆಮೇಲೆ ಆಲ್ಡೊ ಆ ಸಹೋದರನ ಜೊತೆ ಸೇವೆಗೆ ಹೋಗೋಕೆ ತೀರ್ಮಾನಿಸಿದ್ನು. ಸೇವೆಗೆ ಹೋದಾಗ ಆ ಸಹೋದರ ತನ್ನ ಭಾಷೆಯ ಜನ್ರ ಬಗ್ಗೆ ಹೇಳಿದ ಮಾತಿಂದ ಮನ್ಸಿಗೆ ತುಂಬ ನೋವಾಗಿದೆ ಅಂತ ಅವ್ರತ್ರ ಹೇಳ್ಕೊಂಡ. ಸಹೋದರನಿಗೆ ಅದನ್ನ ಕೇಳಿ ತುಂಬ ಬೇಜಾರಾಯ್ತು ಮತ್ತು ಕೂಡ್ಲೇ ಕ್ಷಮೆ ಕೇಳಿದ್ರು. “ಅವ್ರ ಮಾತಿಂದನೇ ಅವ್ರಿಗೆ ಎಷ್ಟು ನೋವಾಗಿದೆ ಅನ್ನೋದು ನಂಗೆ ಗೊತ್ತಾಯ್ತು. ಆಮೇಲೆ ಆ ಸಮಸ್ಯೆನ ಅಲ್ಲಿಗೇ ಬಿಟ್ಟುಬಿಟ್ವಿ, ಮತ್ತೆ ಒಳ್ಳೇ ಫ್ರೆಂಡ್ಸ್‌ ಆದ್ವಿ” ಅಂತ ಆಲ್ಡೊ ಹೇಳ್ತಾನೆ.

16-17. ನಮ್ಮ ದೃಢ ನಿರ್ಧಾರ ಏನಾಗಿರಬೇಕು?

16 ಅಪೊಸ್ತಲ ಯೋಹಾನ ಸಹೋದರ ಸಹೋದರಿಯರನ್ನ ತುಂಬ ಪ್ರೀತಿಸಿದ. ಅವ್ರು ನಂಬಿಕೆಯಲ್ಲಿ ದೃಢವಾಗಿರ್ಬೇಕು ಅಂತ ಬಯಸಿದ. ಅವ್ನಿಗೆ ಅವ್ರ ಮೇಲೆ ಎಷ್ಟು ಪ್ರೀತಿಯಿತ್ತು ಅಂತ ಅವ್ನು ಬರೆದಂಥ ಮೂರು ಪತ್ರಗಳಲ್ಲಿ ಕೊಟ್ಟ ಸಲಹೆಯಿಂದ ಗೊತ್ತಾಗುತ್ತೆ. ಯೋಹಾನನಂತೆ ಪ್ರೀತಿ ಕಾಳಜಿ ತೋರಿಸೋ ಸ್ತ್ರೀ ಪುರುಷರು ಯೇಸುವಿನ ಜೊತೆ ರಾಜರಾಗಿ ನಮ್ಮನ್ನ ಆಳುವಾಗ ನಮಗೆ ತುಂಬ ಖುಷಿ ಆಗುತ್ತೆ.—1 ಯೋಹಾನ 2:27.

17 ನಾವೀಗ ಕಲಿತ ವಿಷ್ಯಗಳನ್ನ ಯಾವತ್ತೂ ಮರೆಯದಿರೋಣ. ಸತ್ಯದಲ್ಲೇ ನಡೆಯೋಕೆ ಮತ್ತು ಯೆಹೋವನ ಮನಸ್ಸಿಗೆ ನೋವು ಮಾಡದಿರೋಕೆ ದೃಢ ನಿರ್ಧಾರ ಮಾಡೋಣ. ಬೈಬಲನ್ನ ತಪ್ಪದೆ ಅಧ್ಯಯನ ಮಾಡಿ ಅದ್ರ ಮೇಲೆ ಭರವಸೆಯಿಡೋಣ. ಯೇಸು ಕ್ರಿಸ್ತನ ಮೇಲಿರೋ ನಂಬಿಕೆಯನ್ನು ಇನ್ನೂ ಹೆಚ್ಚಿಸಿಕೊಳ್ಳೋಣ. ಮನುಷ್ಯರ ಸುಳ್ಳು ಬೋಧನೆಗಳನ್ನು, ಧರ್ಮಭ್ರಷ್ಟರ ಬೋಧನೆಗಳನ್ನು ತಿರಸ್ಕರಿಸೋಣ. ಇಬ್ಬಗೆಯ ಜೀವನ ನಡೆಸದೆ ಯೆಹೋವನು ಮೆಚ್ಚುವ ತರನೇ ನಡ್ಕೊಳ್ಳೋಣ. ಯೆಹೋವನ ಉನ್ನತ ನೈತಿಕ ಮಟ್ಟಕ್ಕನುಸಾರ ಜೀವಿಸೋಣ. ಸಹೋದರ ಸಹೋದರಿಯರು ಮಾಡಿದ ತಪ್ಪನ್ನ ಕ್ಷಮಿಸೋಣ. ಅವ್ರಿಗೆ ಬೇಕಾದ ಸಹಾಯ, ಬೆಂಬಲ ಕೊಡೋಣ. ಇದನೆಲ್ಲಾ ಮಾಡೋದಾದ್ರೆ ಏನೇ ಸಮಸ್ಯೆ ಬಂದ್ರೂ ಸತ್ಯದಲ್ಲೇ ನಡೆಯುತ್ತಾ ಇರೋಕಾಗುತ್ತೆ.

ಗೀತೆ 11 ಯೆಹೋವನ ಹೃದಯವನ್ನು ಸಂತೋಷಪಡಿಸುವುದು

^ ಪ್ಯಾರ. 5 ಸುಳ್ಳಿಗೆ ತಂದೆಯಾಗಿರೋ ಸೈತಾನನ ಲೋಕದಲ್ಲಿ ನಾವಿರೋದ್ರಿಂದ ಸತ್ಯದಲ್ಲೇ ನಡೆಯೋಕೆ ನಮ್ಗೆ ತುಂಬ ಕಷ್ಟ ಆಗ್ಬಹುದು. ಒಂದನೇ ಶತಮಾನದ ಕೊನೆಯಲ್ಲಿದ್ದ ಕ್ರೈಸ್ತರಿಗೂ ಇಂಥದ್ದೇ ಸವಾಲು ಬಂದಿತ್ತು. ಆ ಕ್ರೈಸ್ತರಿಗೆ ಮತ್ತು ನಮ್ಗೆ ಪ್ರಯೋಜನ ಆಗ್ಲಿ ಅಂತ ಯೆಹೋವ ದೇವ್ರು ಅಪೊಸ್ತಲ ಯೋಹಾನನ ಮೂಲಕ ಮೂರು ಪತ್ರಗಳನ್ನು ಬರೆಸಿದ. ಆ ಪತ್ರಗಳಲ್ಲಿರೋ ವಿಷ್ಯಗಳು, ಸತ್ಯದಿಂದ ನಮ್ಮನ್ನ ದೂರ ತೆಗೆದುಕೊಂಡು ಹೋಗೋ ಅಂಶಗಳನ್ನ ಗುರುತಿಸೋಕೆ ಮತ್ತು ಸತ್ಯದಲ್ಲೇ ಉಳಿಯೋಕೆ ಹೇಗೆ ಸಹಾಯ ಮಾಡುತ್ತವೆ ಅನ್ನೋದನ್ನು ನೋಡೋಣ.

^ ಪ್ಯಾರ. 6 ಕೆಲ್ವು ಹೆಸ್ರುಗಳನ್ನು ಬದಲಾಯಿಸಲಾಗಿದೆ.

^ ಪ್ಯಾರ. 11 ಆಗಸ್ಟ್‌ 2018 ರ ಕಾವಲಿನಬುರುಜುವಿನಲ್ಲಿ ಬಂದ “ಸತ್ಯ ಏನೆಂದು ನಿಮಗೆ ಗೊತ್ತಾ?” ಅಧ್ಯಯನ ಲೇಖನ ನೋಡಿ.

^ ಪ್ಯಾರ. 59 ಚಿತ್ರ ವಿವರಣೆ: ಒಬ್ಬ ಯುವ ಸಹೋದರಿಯ ಶಾಲೆಯಲ್ಲಿ ಎಲ್ಲಿ ನೋಡಿದ್ರೂ ಸಲಿಂಗಕಾಮದ ಬಗ್ಗೆ ಮಾತುಗಳು, ಅದಕ್ಕೆ ಸಂಬಂಧಪಟ್ಟ ಚಿತ್ರಗಳೇ ರಾರಾಜಿಸುತ್ತಿವೆ. (ಕೆಲ್ವು ದೇಶಗಳಲ್ಲಿ ಮಳೆಬಿಲ್ಲಿನ ಬಣ್ಣವನ್ನ ಸಲಿಂಗಕಾಮದ ಗುರುತು ಚಿಹ್ನೆಯಾಗಿ ಬಳಸಲಾಗುತ್ತೆ.) ಆ ಸಹೋದರಿ ಬೈಬಲಿನಲ್ಲಿರೋ ಬೋಧನೆಗಳ ಮೇಲೆ ತನ್ನ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಸಂಶೋಧನೆ ಮಾಡ್ತಿದ್ದಾಳೆ. ಹೀಗೆ ಮಾಡಿದ್ರಿಂದ ಬಂದ ಸವಾಲನ್ನು ಎದುರಿಸೋಕೆ ಅವ್ಳಿಗೆ ಸಾಧ್ಯವಾಗ್ತಿದೆ.