ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ಯೆಹೋವ ತೋರಿಸಿದ ಜೀವನದ ದಾರಿ

ಯೆಹೋವ ತೋರಿಸಿದ ಜೀವನದ ದಾರಿ

ಹದಿವಯಸ್ಸಿನಲ್ಲಿ ನಾನು, ನನಗೆ ಇಷ್ಟ ಆಗೋ ಕೆಲಸ ಮಾಡ್ತಾ ಖುಷಿಯಾಗಿರೋ ಜೀವನದ ದಾರಿಯನ್ನ ಆರಿಸಿಕೊಂಡಿದ್ದೆ. ಆದರೆ ಯೆಹೋವ ನನಗೆ ಇನ್ನೊಂದು ದಾರಿ ತೋರಿಸಿದನು. ಅದು ಹೇಗಿತ್ತು ಅಂದರೆ, “ನಾನು ನಿನಗೆ ತಿಳುವಳಿಕೆ ಕೊಡ್ತೀನಿ ನೀನು ಯಾವ ದಾರಿಯಲ್ಲಿ ನಡೀಬೇಕು ಅಂತ ಕಲಿಸ್ತೀನಿ.” ಅಂತ ಹೇಳಿದ ಹಾಗಿತ್ತು. (ಕೀರ್ತ. 32:8) ಯೆಹೋವ ತೋರಿಸಿದ ದಾರಿಯಲ್ಲಿ ನಾನು ಹೋಗಿದ್ರಿಂದ ಆತನ ಸೇವೆ ಮಾಡೋಕೆ ತುಂಬ ಅವಕಾಶಗಳು ಸಿಕ್ತು ಮತ್ತು ಆಶೀರ್ವಾದಗಳೂ ಸಿಕ್ತು. 52 ವರ್ಷ ಆಫ್ರಿಕಾದಲ್ಲಿ ಸೇವೆ ಮಾಡೋ ಅವಕಾಶನೂ ಸಿಕ್ತು.

ಕಪ್ಪು ದೇಶದಿಂದ ಮಮತೆಯ ಮಡಿಲಿನ ಆಫ್ರಿಕಾಗೆ

ನಾನು 1935ರಲ್ಲಿ ಇಂಗ್ಲೆಂಡ್‌ನ ಡಾರ್ಲಸ್ಟನ್‌ ನಗರದಲ್ಲಿ ಹುಟ್ಟಿದೆ. ಆ ನಗರದಲ್ಲಿ ತುಂಬ ಫ್ಯಾಕ್ಟರಿಗಳು ಮತ್ತು ಕಂಪನಿಗಳು ಇದ್ದಿದರಿಂದ ಆ ಜಾಗ ಯಾವಾಗಲು ಕಪ್ಪು ಹೊಗೆಯಿಂದ ತುಂಬಿಕೊಂಡಿರುತ್ತಿತ್ತು. ಅದಕ್ಕೆ ಅದನ್ನ ಕಪ್ಪು ದೇಶ ಅಂತ ಕರೀತಿದ್ರು. ನನಗೆ 4 ವರ್ಷ ಇದ್ದಾಗ ನಮ್ಮ ಅಪ್ಪಅಮ್ಮ ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಕಲಿಯೋಕೆ ಶುರು ಮಾಡಿದರು. ನಾನು ಹದಿವಯಸ್ಸಿನಲ್ಲಿ ಬೈಬಲ್‌ ಕಲಿಯೋಕೆ ಶುರು ಮಾಡಿದೆ. 1952ರಲ್ಲಿ ಅಂದ್ರೆ ನನಗೆ 16 ವರ್ಷ ಆದಾಗ ನಾನು ದೀಕ್ಷಾಸ್ನಾನ ತಗೊಂಡೆ.

ಆಗ ನಾನು ಒಂದು ದೊಡ್ಡ ಕಂಪನಿಯಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದೆ. ಅಲ್ಲಿ ಗಾಡಿಗಳ ಬಿಡಿ ಭಾಗಗಳನ್ನ ಮತ್ತು ಉಪಕರಣಗಳನ್ನ ತಯಾರಿಸುತ್ತಿದ್ದರು. ಆ ಕಂಪನಿಯಲ್ಲಿ ಕೆಲಸ ಮಾಡೋಕೆ ನನಗೆ ತುಂಬ ಹೆಮ್ಮೆ ಆಗುತ್ತಿತ್ತು. ಅಲ್ಲಿ ಮ್ಯಾನೇಜರ್‌ ಆಗೋಕೆ ಆಸೆಪಡ್ತಿದ್ದೆ.

ನಾನು ಚಿಕ್ಕವಯಸ್ಸಿಂದ ವಿಲ್ನ್‌ಹಾಲ್‌ ಸಭೆಯಲ್ಲೇ ಕೂಟಗಳಿಗೆ ಹೋಗ್ತಿದ್ದೆ. ಒಂದು ದಿನ ಸಂಚರಣ ಮೇಲ್ವಿಚಾರಕರು ನನ್ನ ಹತ್ರ ಬಂದು ಆ ಸಭೆಯಲ್ಲಿ ಮಧ್ಯವಾರದ ಸಭಾ ಬೈಬಲ್‌ ಅಧ್ಯಯನದ ಕೂಟವನ್ನ ನಡಿಸೋಕೆ ಆಗುತ್ತಾ ಅಂತ ಕೇಳಿಕೊಂಡರು. ಆಗ ನಿರ್ಧಾರ ತಗೊಳೋಕೆ ನನಗೆ ಕಷ್ಟ ಆಯ್ತು. ಯಾಕಂದ್ರೆ, ಆ ಸಮಯದಲ್ಲಿ ನಾನು ಎರಡು ಕಡೆ ಕೂಟಗಳಿಗೆ ಹೋಗ್ತಿದ್ದೆ. ಮಧ್ಯವಾರದ ಕೂಟವನ್ನ ನಾನು ಬ್ರೋಮ್ಸ್‌ಗ್ರೋವ್‌ಗೆ ಹತ್ತಿರದಲ್ಲಿದ್ದ ಸಭೆಯಲ್ಲಿ ಹಾಜರಾಗ್ತಿದ್ದೆ. ಯಾಕಂದ್ರೆ ನಾನು ಬ್ರೋಮ್ಸ್‌ಗ್ರೋವ್‌ನಲ್ಲಿ ಕೆಲಸ ಮಾಡ್ತಿದ್ದೆ. ಇದು ನಮ್ಮ ಮನೆಯಿಂದ ಸುಮಾರು 32 ಕಿ.ಮಿ. ದೂರದಲ್ಲಿತ್ತು. ಆದ್ರೆ ವಾರಾಂತ್ಯದಲ್ಲಿ ನಾನು ಮನೆಗೆ ಹೋಗ್ತಿದ್ರಿಂದ ನಮ್ಮ ಅಪ್ಪಅಮ್ಮನ ಜೊತೆ ವಿಲ್ನ್‌ಹಾಲ್‌ ಸಭೆಗೆ ಹೋಗುತ್ತಿದೆ.

ನನಗೆ ಯೆಹೋವನ ಸಂಘಟನೆಯಲ್ಲಿ ಸೇವೆ ಮಾಡೋ ಆಸೆಯಿತ್ತು. ಅದಕ್ಕೆ ನಾನು ತುಂಬ ಇಷ್ಟಪಟ್ಟು ಮಾಡುತ್ತಿದ್ದ ಕೆಲಸನ ಬಿಟ್ಟುಬಿಟ್ಟೆ. ಸಂಚರಣ ಮೇಲ್ವಿಚಾರಕರು ಕೊಟ್ಟ ನೇಮಕವನ್ನ ಮಾಡೋಕೆ ಒಪ್ಪಿಕೊಂಡೆ. ಹೀಗೆ ಯೆಹೋವ ತೋರಿಸಿದ ದಾರಿಯಲ್ಲೇ ಹೋಗಿದ್ರಿಂದ ನಾನು ಜೀವನದಲ್ಲಿ ಖುಷಿ ಖುಷಿಯಾಗಿರೋಕೆ ಆಯ್ತು.

ನಾನು ಬ್ರೋಮ್ಸ್‌ಗ್ರೋವ್‌ನಲ್ಲಿರೋ ಸಭೆಗೆ ಹೋಗ್ತಿದ್ದಾಗ ಒಬ್ಬ ಸಹೋದರಿನ ತುಂಬ ಇಷ್ಟಪಟ್ಟೆ. ಅವರು ನೋಡೋಕೆ ಎಷ್ಟು ಚೆನ್ನಾಗಿದ್ರೋ ಅವರ ಮನಸ್ಸೂ ಅಷ್ಟೇ ಚೆನ್ನಾಗಿತ್ತು. ಅವರಿಗೆ ಯೆಹೋವನ ಮೇಲೆ ತುಂಬ ಪ್ರೀತಿಯಿತ್ತು. ನಾವಿಬ್ಬರು 1957ರಲ್ಲಿ ಮದುವೆ ಆದ್ವಿ. ಆಮೇಲೆ ಒಟ್ಟಿಗೆ ರೆಗ್ಯುಲರ್‌ ಪಯನೀಯರ್‌, ವಿಶೇಷ ಪಯನೀಯರ್‌, ಸಂಚರಣ ಕೆಲಸ ಮತ್ತು ಬೆತೆಲ್‌ ಸೇವೆ ಮಾಡಿದ್ದೀವಿ. ಇಲ್ಲಿ ತನಕ ಆ್ಯನ್‌ ನನಗೆ ಎಲ್ಲಾದರಲ್ಲೂ ಸಹಕಾರ ಕೊಟ್ಟಿದ್ದಾಳೆ. ನನ್ನ ಜೀವನಕ್ಕೆ ಸಂತೋಷ ತುಂಬಿದ್ದಾಳೆ.

1966ರಲ್ಲಿ ನಮಗೆ 42ನೇ ಗಿಲ್ಯಡ್‌ ಶಾಲೆಗೆ ಆಮಂತ್ರಣ ಸಿಕ್ಕಿದಾಗ ನಮಗೆ ತುಂಬ ಖುಷಿಯಾಯ್ತು. ಆಮೇಲೆ ನಮಗೆ ಮಲಾವಿ ದೇಶಕ್ಕೆ ಹೋಗೋಕೆ ನೇಮಕ ಸಿಕ್ತು. ಅದನ್ನ ಜನರು ಆಫ್ರಿಕಾದ ಮಮತೆಯ ಮಡಿಲು ಅಂತ ಕರೀತಿದ್ರು. ಯಾಕಂದ್ರೆ ಅಲ್ಲಿರೋ ಜನರು ತುಂಬ ಒಳ್ಳೆಯವರಾಗಿದ್ದರು. ತಮ್ಮ ದೇಶಕ್ಕೆ ಬರುವವರನ್ನ ಪ್ರೀತಿಯಿಂದ ಸ್ವಾಗತಿಸುತ್ತಿದ್ದರು. ಆದರೆ ನಾವು ಅಲ್ಲಿಗೆ ಹೋದಾಗ ಅಲ್ಲಿ ನಡೆದಿದ್ದೇ ಬೇರೆ.

ಮಲಾವಿಯಲ್ಲಿ ಸೇವೆ ಮಾಡ್ತಿದ್ದಾಗ ನಡೆದ ಘಟನೆಗಳು

ಮಲಾವಿಯಲ್ಲಿ ಸಂಚರಣ ಕೆಲಸ ಮಾಡುತ್ತಿದ್ದಾಗ ನಮ್ಮ ಹತ್ರ ಇದ್ದ ಕೈಜ಼ರ್‌ ಜೀಪ್‌

ನಾವು ಫೆಬ್ರವರಿ 1, 1967ರಲ್ಲಿ ಮಲಾವಿಗೆ ಬಂದ್ವಿ. ಬಂದ ಮೊದಲನೇ ತಿಂಗಳು ಆ ಭಾಷೆಯನ್ನ ಚೆನ್ನಾಗಿ ಕಲಿತುಕೊಂಡ್ವಿ. ಆಮೇಲೆ ಸಂಚರಣ ಕೆಲಸನ ಶುರು ಮಾಡಿದ್ವಿ. ನಮ್ಮ ಹತ್ರ ಓಡಾಡೋಕೆ ಒಂದು ಕೈಜ಼ರ್‌ ಜೀಪ್‌ ಇತ್ತು. ಆ ಜೀಪ್‌ನ ಎಲ್ಲಿ ಬೇಕಾದರೂ ಓಡಿಸಿಕೊಂಡು ಹೋಗಬಹುದು, ಅದು ನದಿಯಲ್ಲೂ ಹೋಗುತ್ತೆ ಅಂತ ಜನ ಅಂದ್ಕೊಂಡಿದ್ರು. ಆದರೆ ನಮ್ಮ ಗಾಡಿ ಆ ತರ ಇರಲಿಲ್ಲ. ಅದು ಸ್ವಲ್ಪ ನೀರಿರೋ ಕಡೆ ಮಾತ್ರ ಹೋಗುತ್ತಿತ್ತು. ನಾವು ಮೊದಮೊದಲು ಸೇವೆನ ಶುರು ಮಾಡಿದಾಗ ತುಂಬ ಕಷ್ಟ ಆಗುತ್ತಿತ್ತು. ಕೆಲವೊಮ್ಮೆ ನಾವಿದ್ದ ಮಣ್ಣಿನ ಗುಡಿಸಲು ಮಳೆಗಾಲದಲ್ಲಿ ಸೋರಬಾರದು ಅಂತ ಟಾರ್ಪಲ್‌ ಹಾಕಿಕೊಂಡು ಇರ್ತಿದ್ವಿ. ಇಷ್ಟೆಲ್ಲ ಕಷ್ಟ ಇದ್ರೂ ನಾವು ಖುಷಿಯಾಗೇ ಸೇವೆ ಮಾಡ್ತಿದ್ವಿ.

ಮುಂದೆ ನಮಗೆ ಏನೋ ಸಮಸ್ಯೆ ಕಾದಿದೆ ಅಂತ ಏಪ್ರಿಲ್‌ ತಿಂಗಳಲ್ಲಿ ನಮಗೆ ಗೊತ್ತಾಯ್ತು. ಮಲಾವಿಯ ರಾಷ್ಟ್ರಪತಿ ಡಾ. ಹೇಸ್ಟಿಂಗ್ಸ್‌ ಬಂಡಾ ಭಾಷಣ ಕೊಡುವಾಗ ಯೆಹೋವನ ಸಾಕ್ಷಿಗಳು ಕಂದಾಯ ಕಟ್ಟುತ್ತಿಲ್ಲ, ಸರಕಾರಕ್ಕೆ ತೊಂದರೆ ಕೊಡ್ತಿದ್ದಾರೆ ಅಂತ ಹೇಳಿದ್ದನ್ನ ನಾನು ರೇಡಿಯೋದಲ್ಲಿ ಕೇಳಿಸಿಕೊಂಡೆ. ಆದ್ರೆ ಅದು ನಿಜ ಅಲ್ಲ ಅಂತ ನಮ್ಮೆಲ್ಲರಿಗೂ ಗೊತ್ತಿತ್ತು. ನಾವು ರಾಜಕೀಯ ಪಕ್ಷಗಳ ಸದಸ್ಯರಾಗದೇ ಇದ್ದಿದರಿಂದ ಅವರು ನಮ್ಮ ಮೇಲೆ ಸುಳ್ಳು ಆರೋಪಗಳನ್ನ ಹಾಕುತ್ತಿದ್ದರು.

ನಮ್ಮ ಸಹೋದರರು ಎಲ್ಲಾ ಕಡೆ ತೊಂದ್ರೆ ಕೊಡ್ತಿದ್ದಾರೆ ಅಂತ ಅಲ್ಲಿನ ರಾಷ್ಟ್ರಪತಿಗಳು ಸೆಪ್ಟೆಂಬರ್‌ ತಿಂಗಳ ವಾರ್ತಾ ಪತ್ರಿಕೆಯಲ್ಲಿ ಹಾಕಿಸಿದರು. ನಂತರ ನಡೆದ ರಾಜಕೀಯ ಸಭೆಯಲ್ಲಿ ಯೆಹೋವನ ಸಾಕ್ಷಿಗಳ ಮೇಲೆ ಆದಷ್ಟು ಬೇಗ ನಿಷೇಧ ಹಾಕ್ತೀವಿ ಅಂತ ಹೇಳಿದ್ರು. ಅವರು ಹೇಳಿದ ಹಾಗೆ ಸ್ವಲ್ಪ ಸಮಯದಲ್ಲಿ ಅಂದ್ರೆ ಅಕ್ಟೋಬರ್‌ 20, 1967ರಲ್ಲಿ ಯೆಹೋವನ ಸಾಕ್ಷಿಗಳ ಮೇಲೆ ನಿಷೇಧ ಹಾಕಿದ್ರು. ಕೆಲವು ಪೊಲೀಸರು ಮತ್ತು ಅಧಿಕಾರಿಗಳು ನಮ್ಮ ಶಾಖಾ ಕಛೇರಿಯನ್ನ ಮುಚ್ಚಿಬಿಟ್ಟರು, ಆಮೇಲೆ ಅಲ್ಲಿದ್ದ ಮಿಷನರಿಗಳನ್ನ ಗಡಿಪಾರು ಮಾಡಿದ್ರು.

1967ರಲ್ಲಿ ನಮ್ಮನ್ನ ಮಲಾವಿಯಿಂದ ಗಡಿಪಾರು ಮಾಡಿದಾಗ ನಮ್ಮ ಜೊತೆ ಮಿಷನರಿಗಳಾಗಿ ಸೇವೆ ಮಾಡ್ತಿದ್ದ ಜ್ಯಾಕ್‌ ಮತ್ತು ಲಿಂಡಾ ಜೊಹಾನ್ಸನ್‌ ಇದ್ದರು

ನಾವು 3 ದಿನ ಜೈಲಿನಲ್ಲಿ ಇದ್ವಿ, ಆಮೇಲೆ ನಮ್ಮನ್ನ ಬ್ರಿಟನ್‌ನ ಹತೋಟಿಯಲ್ಲಿದ್ದ ಮಾರಿಷಸ್‌ ದೇಶಕ್ಕೆ ಹೋಗೋಕೆ ಹೇಳಿದರು. ಹೇಗಿದ್ರೂ ಮಾರಿಷಸ್‌ ಅಧಿಕಾರಿಗಳು ನಮ್ಮನ್ನ ಅಲ್ಲಿ ಮಿಷನರಿಗಳಾಗಿ ಸೇವೆ ಮಾಡೋಕೆ ಬಿಡಲ್ಲ. ಹಾಗಾಗಿ ರೊಡೇಸಿಯಗೆ (ಜಿಂಬಾಬ್ವೆ) ಹೋಗೋಕೆ ನೇಮಕ ಸಿಕ್ತು. ಅಲ್ಲಿ ಹೋಗುತ್ತಿದ್ದ ಹಾಗೆ ಒಬ್ಬ ಅಧಿಕಾರಿ ನಮ್ಮ ಹತ್ತಿರ ಬಂದು, “ಮಲಾವಿಯಿಂದ ನಿಮ್ಮನ್ನ ಓಡಿಸಿಬಿಟ್ಟರು, ಮಾರಿಷಸ್‌ನಲ್ಲೂ ಜಾಗ ಸಿಗ್ಲಿಲ್ಲ, ಅದಕ್ಕೇ ನೀವು ಇಲ್ಲಿಗೆ ಬಂದಿದ್ದೀರಾ” ಅಂತ ಕೋಪದಿಂದ ಬೈದುಬಿಟ್ಟರು. ಅದನ್ನ ಕೇಳಿದಾಗ ಆ್ಯನ್‌ ತುಂಬ ಅಳೋಕೆ ಶುರು ಮಾಡಿದಳು. ಆಗ ನಮಗೆ ‘ನಾವು ಯಾರಿಗೂ ಬೇಕಾಗಿಲ್ವೇನೋ’ ಅಂತ ಅನಿಸಿಬಿಡ್ತು. ವಾಪಸ್‌ ಊರಿಗೆ ಹೋಗಿ ಬಿಡೋದೇ ಒಳ್ಳೇದು ಅಂದುಕೊಂಡ್ವಿ. ಕೊನೆಗೂ ಅಲ್ಲಿನ ಅಧಿಕಾರಿಗಳು ನಮಗೆ ಒಂದು ದಿನ ಮಾತ್ರ ಶಾಖಾ ಕಛೇರಿಯಲ್ಲಿ ಇರೋಕೆ ಅವಕಾಶ ಕೊಟ್ಟರು. ಆದ್ರೆ ಮಾರನೇ ದಿನ ನಾವು ವಲಸೆ ಕಛೇರಿಗೆ ಹೋಗಬೇಕಿತ್ತು. ದಿನಪೂರ್ತಿ ಅಲೆದು-ಅಲೆದು ನಮಗೆ ತುಂಬ ಸುಸ್ತಾಗಿತ್ತು. ಆದರೂ ಯೆಹೋವ ನಮಗೆ ಹೇಗಾದರೂ ಸಹಾಯ ಮಾಡುತ್ತಾನೆ ಅಂತ ಕಾಯುತ್ತಾ ಇದ್ವಿ. ಆದರೆ ಇದ್ದಕ್ಕಿದ್ದ ಹಾಗೆ ಅಧಿಕಾರಿಗಳು ಬಂದು ನೀವು ಇನ್ನೂ ಸ್ವಲ್ಪ ದಿನ ಜಿಂಬಾಬ್ವೆನಲ್ಲಿ ಇರಬಹುದು ಅಂತ ಹೇಳಿದ್ರು. ಆ ದಿನವನ್ನ ನನ್ನ ಜೀವನದಲ್ಲಿ ಮರೆಯೋಕೇ ಆಗಲ್ಲ. ಯೆಹೋವ ದೇವರು ನಮಗೆ ದಾರಿ ತೋರಿಸುತ್ತಿದ್ದಾನೆ ಅನ್ನೋದು ನನಗೆ ಚೆನ್ನಾಗಿ ಅರ್ಥ ಆಯ್ತು.

ಮಲಾವಿಂದ ಜಿಂಬಾಬ್ವೆಗೆ ಹೊಸ ನೇಮಕ

1968ರಲ್ಲಿ ಜಿಂಬಾಬ್ವೆ ಬೆತೆಲ್‌ನಲ್ಲಿ ಆ್ಯನ್‌ ಜೊತೆ

ನನಗೆ ಜಿಂಬಾಬ್ವೆ ಬ್ರಾಂಚ್‌ನ ಸರ್ವಿಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ನೇಮಕ ಸಿಕ್ತು. ಆ ಡಿಪಾರ್ಟ್‌ಮೆಂಟ್‌ ಮಲಾವಿ ಮತ್ತು ಮೊಜಾಂಬಿಕ್‌ನಲ್ಲಿದ್ದ ಸಹೋದರ ಸಹೋದರಿಯರಿಗೆ ಸಹಾಯ ಮಾಡ್ತಿತ್ತು. ಮಲಾವಿಯಲ್ಲಿದ್ದ ನಮ್ಮ ಸಹೋದರ ಸಹೋದರಿಯರಿಗೆ ಅಲ್ಲಿನ ಅಧಿಕಾರಿಗಳು ತುಂಬ ಹಿಂಸೆ ಕೊಡುತ್ತಿದ್ದರು. ಅಲ್ಲಿನ ಸಂಚರಣ ಮೇಲ್ವಿಚಾರಕರು ಆ ಘಟನೆಗಳ ಬಗ್ಗೆ ಪತ್ರಗಳನ್ನ ಬರೆಯುತ್ತಿದ್ದರು. ಅದನ್ನ ನಾನು ಭಾಷಾಂತರ ಮಾಡಬೇಕಿತ್ತು. ಒಂದು ದಿನ ಭಾಷಾಂತರ ಮಾಡುತ್ತಾ-ಮಾಡುತ್ತಾ ಅತ್ತೇಬಿಟ್ಟೆ. a ಇಂಥ ಕಷ್ಟಗಳ ಮಧ್ಯೆನೂ ನಮ್ಮ ಸಹೋದರ ಸಹೋದರಿಯರು ತೋರಿಸ್ತಿದ್ದ ನಂಬಿಕೆ, ನಿಷ್ಠೆ ಮತ್ತು ತಾಳ್ಮೆ ನನ್ನ ಮನಸ್ಸು ಮುಟ್ಟಿತು.—2 ಕೊರಿಂ. 6:4, 5.

ಮಲಾವಿಯಲ್ಲಿ ಹಿಂಸೆ ತಡಿಯೋಕೆ ಆಗದೆ ಮೊಜಾಂಬಿಕ್‌ಗೆ ಹೋದ ಸಹೋದರರಿಗೆ ಮತ್ತು ಮಲಾವಿಯಲ್ಲೇ ಉಳುಕೊಂಡಿದ್ದ ಸಹೋದರರಿಗೆ ಬೈಬಲ್‌ ಪ್ರಕಾಶನಗಳು ಸಿಗೋ ತರ ನಾವು ನೋಡಿಕೊಳ್ಳುತ್ತಿದ್ವಿ. ಮಲಾವಿಯಲ್ಲಿ ತುಂಬ ಜನರು ಮಾತಾಡ್ತಿದ್ದ ಚಿಚೇವ ಭಾಷೆಯ ಭಾಷಾಂತರ ತಂಡದವರು ಜಿಂಬಾಬ್ವೆಗೆ ಸ್ಥಳಾಂತರಿಸಿದ್ರು. ಅಲ್ಲಿದ್ದ ಒಬ್ಬ ಸಹೋದರ ತಮ್ಮ ಜಮೀನಲ್ಲಿ ಅವರಿಗೆ ಮನೆಗಳನ್ನ ಮತ್ತು ಆಫೀಸ್‌ನ ಕಟ್ಟಿಕೊಟ್ಟರು. ಅಲ್ಲಿ ಅವರು ಭಾಷಾಂತರ ಕೆಲಸವನ್ನ ಮುಂದುವರಿಸಿದ್ರು.

ಪ್ರತಿ ವರ್ಷ ಜಿಂಬಾಬ್ವೆಯಲ್ಲಿ ಚಿಚೇವ ಭಾಷೆಯ ಅಧಿವೇಶನ ನಡೀತಿತ್ತು. ಆ ಅಧಿವೇಶನಕ್ಕೆ ಮಲಾವಿಯಿಂದ ಕೆಲವು ಸಂಚರಣ ಮೇಲ್ವಿಚಾರಕರಿಗೆ ಬರೋಕೆ ಏರ್ಪಾಡುಗಳನ್ನ ಮಾಡಿದ್ವಿ. ಇಲ್ಲಿ ಅವರಿಗೆ ಅಧಿವೇಶನದ ಭಾಷಣಗಳ ಹೊರಮೇರೆಯನ್ನು ಕೊಡ್ತಿದ್ವಿ. ಅವರು ವಾಪಸ್‌ ಮಲಾವಿಗೆ ಹೋದಮೇಲೆ ಅಲ್ಲಿನ ಸಹೋದರರಿಗೆ ಭಾಷಣ ಕೊಟ್ಟು ಅವರನ್ನ ಹುರಿದುಂಬಿಸುತ್ತಿದ್ದರು. ಒಂದು ಸಲ ಈ ಸಂಚರಣ ಮೇಲ್ವಿಚಾರಕರಿಗೊಸ್ಕರ ರಾಜ್ಯ ಶುಶ್ರೂಷೆ ಶಾಲೆಯನ್ನ ಜಿಂಬಾಬ್ವೆಯಲ್ಲಿ ಏರ್ಪಾಡು ಮಾಡಿದ್ವಿ.

ಜಿಂಬಾಬ್ವೆಯ ಚಿಚೇವ/ಶೋನ ಭಾಷೆಯ ಅಧಿವೇಶನದಲ್ಲಿ ನಾನು ಚಿಚೇವ ಭಾಷೆಯಲ್ಲಿ ಭಾಷಣ ಕೊಡುತ್ತಿರೋದು

ನಾನು ಫೆಬ್ರವರಿ 1975ರಲ್ಲಿ ಮಲಾವಿಯಿಂದ ಮೊಜಾಂಬಿಕ್‌ ಹೋದ ಸಹೋದರ ಸಹೋದರಿಯರನ್ನ ನೋಡೋಕೆ ಹೋಗಿದ್ದೆ. ಇವರು ನಿರಾಶ್ರಿತರ ಶಿಬಿರಗಳಲ್ಲಿದ್ದರೂ ಎಲ್ಲವನ್ನೂ ಯೆಹೋವನ ಸಂಘಟನೆ ಹೇಳಿದ ತರಾನೇ ನಡೆಸಿಕೊಂಡು ಹೋಗ್ತಿದ್ದರು. ಹಿರಿಯರನ್ನ ಸಂಘಟನೆ ಹೇಗೆ ನೇಮಿಸ್ತಿತ್ತೋ ಆ ಹೊಸ ಏರ್ಪಾಡಿಗೆ ಅವರು ಹೊಂದಿಕೊಂಡಿದ್ದರು. ಹೊಸದಾಗಿ ನೇಮಕ ಪಡೆದುಕೊಂಡ ಹಿರಿಯರು ಸಾರ್ವಜನಿಕ ಭಾಷಣ ಕೊಡುತ್ತಿದ್ದರು, ದಿನ ವಚನ ಮತ್ತು ಕಾವಲಿನಬುರುಜು ಚರ್ಚೆ ಮಾಡುತ್ತಿದ್ದರು. ಅಷ್ಟೇ ಅಲ್ಲ, ಸಮ್ಮೇಳನಗಳನ್ನೂ ನಡೆಸುತ್ತಿದ್ದರು, ಅಧಿವೇಶನಗಳಲ್ಲಿ ಇದ್ದ ಹಾಗೆ ಅವರ ಶಿಬಿರಗಳನ್ನೂ ಕೂಡ ವ್ಯವಸ್ಥಿತವಾಗಿ ಇಟ್ಟುಕೊಂಡಿದ್ದರು. ಕ್ಲೀನಿಂಗ್‌ ಡಿಪಾರ್ಟ್‌ಮೆಂಟ್‌ಗಳು ಇತ್ತು, ಎಲ್ಲರಿಗೂ ಊಟದ ವ್ಯವಸ್ಥೆ ಮತ್ತು ಎಲ್ಲರೂ ಸುರಕ್ಷಿತವಾಗಿರೋಕೆ ಬೇಕಾದ ವ್ಯವಸ್ಥೆಯನ್ನ ಮಾಡಲಾಗಿತ್ತು. ಈ ನಂಬಿಗಸ್ತ ಸಹೋದರರು ಮಾಡುತ್ತಿದ್ದ ಕೆಲಸನ ಯೆಹೋವ ಆಶೀರ್ವದಿಸುತ್ತಿದ್ದಿದ್ದನ್ನ ನೋಡಿದಾಗ ನನಗೆ ತುಂಬ ಖುಷಿ ಆಯ್ತು.

1970ರ ಕೊನೆಯಷ್ಟಕ್ಕೆ ಮಲಾವಿಯಲ್ಲಿದ್ದ ಸಹೋದರ ಸಹೋದರಿಯರನ್ನ ಜಾಂಬಿಯದಲ್ಲಿದ್ದ ಬ್ರಾಂಚ್‌ ಆಫೀಸ್‌ ನೋಡಿಕೊಳ್ಳುತ್ತಿತ್ತು. ಅಲ್ಲಿದ್ದ ಸಹೋದರರಿಗೋಸ್ಕರ ನಾನು ಯಾವಾಗಲೂ ಪ್ರಾರ್ಥನೆ ಮಾಡುತ್ತಿದ್ದೆ. ನಾನಷ್ಟೇ ಅಲ್ಲ ಬೇರೆ ಸಹೋದರರೂ ಪ್ರಾರ್ಥನೆ ಮಾಡುತ್ತಿದ್ದರು. ನಾನು ಜಿಂಬಾಬ್ವೆಯ ಬ್ರಾಂಚ್‌ ಕಮಿಟಿಯ ಸದಸ್ಯನಾಗಿ ಸೇವೆ ಮಾಡ್ತಿದ್ರಿಂದ ಕೆಲವೊಮ್ಮೆ ಮುಖ್ಯ ಕಾರ್ಯಾಲಯದಿಂದ ಬರುತ್ತಿದ್ದ ಸಹೋದರರನ್ನ ಭೇಟಿಯಾಗೋ ಅವಕಾಶ ಸಿಗ್ತಿತ್ತು. ಅವರ ಜೊತೆ ಮಲಾವಿ, ದಕ್ಷಿಣ ಆಫ್ರಿಕ ಮತ್ತು ಜಾಂಬಿಯಾದಿಂದ ಬರುತ್ತಿದ್ದ ಸಹೋದರರನ್ನೂ ಭೇಟಿಯಾಗ್ತಿದ್ದೆ. ಅವರನ್ನ ಭೇಟಿ ಮಾಡಿದಾಗೆಲ್ಲ “ಮಲಾವಿಯ ಸಹೋದರರಿಗೆ ನಮ್ಮಿಂದ ಇನ್ನೂ ಏನಾದರು ಸಹಾಯ ಬೇಕಾ?” ಅಂತ ಕೇಳುತ್ತಾ ಇದ್ದೆ.

ಸಮಯ ಕಳೆದ ಹಾಗೆ ಮಲಾವಿಯಲ್ಲಿ ಹಿಂಸೆ ಮತ್ತು ವಿರೋಧ ಕಡಿಮೆ ಆಯ್ತು. ಮಲಾವಿಯನ್ನ ಬಿಟ್ಟು ಹೋದ ಸಹೋದರರು ವಾಪಸ್‌ ಬರೋಕೆ ಶುರು ಮಾಡಿದರು. ಸುತ್ತಮುತ್ತ ಇದ್ದ ದೇಶದವರಿಗೂ ಯೆಹೋವನ ಸಾಕ್ಷಿಗಳ ಮೇಲೆ ಇದ್ದ ದ್ವೇಷ ಕಡಿಮೆ ಆಯಿತು. ಸಾರೋಕೆ ಮತ್ತು ಕೂಟಗಳನ್ನ ನಡಿಸೋಕೆ ಅನುಮತಿ ಸಿಕ್ತು. 1991ರಲ್ಲಿ ಮೊಜಾಂಬಿಕ್‌ ದೇಶದಲ್ಲೂ ಹೀಗೇ ಅವರಿಗೆ ಅನುಮತಿ ಸಿಕ್ತು. ಆದ್ರೆ ‘ಮಲಾವಿಯಲ್ಲಿದ್ದ ಯೆಹೋವನ ಸಾಕ್ಷಿಗಳಿಗೆ ಯಾವಾಗ ಪೂರ್ತಿಯಾಗಿ ಸ್ವತಂತ್ರ ಸಿಗುತ್ತೆ?’ ಅಂತ ನಾವು ಕಾಯುತ್ತಾ ಇದ್ವಿ.

ಮಲಾವಿಗೆ ವಾಪಸ್‌ ಬಂದ್ವಿ

ಕಾಲ ಹೋದ ಹಾಗೆ ಮಲಾವಿಯಲ್ಲಿ ಪರಿಸ್ಥಿತಿಗಳು ಬದಲಾಯ್ತು ಮತ್ತು 1993ರಲ್ಲಿ ಯೆಹೋವನ ಸಾಕ್ಷಿಗಳ ಮೇಲೆ ಇದ್ದ ನಿಷೇಧನ ಸರ್ಕಾರ ತೆಗೆದುಹಾಕಿತು. ಒಂದು ದಿನ ಒಬ್ಬ ಮಿಷನರಿ ಸಹೋದರನ ಹತ್ರ ಮಾತಾಡ್ತಾ ಇದ್ದಾಗ, “ನೀವು ಮತ್ತೆ ಮಲಾವಿಗೆ ವಾಪಸ್‌ ಹೋಗ್ತೀರಾ?” ಅಂತ ಅವರು ನನ್ನ ಕೇಳಿದ್ರು. ಆಗ ನನಗೆ 59 ವರ್ಷ ಆಗಿದ್ರಿಂದ “ನನ್ನಿಂದ ಆಗಲ್ಲ, ನನಗೆ ತುಂಬ ವಯಸ್ಸಾಗಿದೆ” ಅಂತ ಹೇಳಿದೆ. ಅದೇ ದಿನ ನಮಗೆ ಆಡಳಿತ ಮಂಡಲಿಯಿಂದ ಒಂದು ಪತ್ರ ಬಂತು. ಅದರಲ್ಲಿ ನಮ್ಮನ್ನ ಮಲಾವಿಗೆ ವಾಪಸ್‌ ಹೋಗೋಕೆ ಹೇಳಿದ್ರು.

ಜಿಂಬಾಬ್ವೆಯಲ್ಲಿ ನಾವು ತುಂಬ ಖುಷಿಖುಷಿಯಾಗಿ ಸೇವೆ ಮಾಡುತ್ತಾ ಇದ್ವಿ. ಇಲ್ಲಿ ನಮಗೆ ತುಂಬ ಜನ ಫ್ರೆಂಡ್ಸ್‌ ಇದ್ದರು. ಎಲ್ಲರ ಜೊತೆ ತುಂಬ ಚೆನ್ನಾಗಿ ಹೊಂದಿಕೊಂಡಿದ್ವಿ. ಹಾಗಾಗಿ ನೇಮಕ ಬದಲಾದ ತಕ್ಷಣ ಅದನ್ನ ಒಪ್ಪಿಕೊಳ್ಳೋಕೆ ಸ್ವಲ್ಪ ಕಷ್ಟ ಆಯ್ತು. ಆದ್ರೆ ಆಡಳಿತ ಮಂಡಲಿ “ನಿಮಗೆ ಜಿಂಬಾಬ್ವೆಯಲ್ಲೇ ಇರೋಕೆ ಇಷ್ಟ ಇದ್ದರೆ ಅಲ್ಲೇ ನಿಮ್ಮ ಸೇವೆಯನ್ನ ಮುಂದುವರಿಸಿ” ಅಂತ ಹೇಳಿದರು. ಹಾಗಾಗಿ ನಾವು ಜಿಂಬಾಬ್ವೆಯಲ್ಲೇ ಇರಬಹುದಿತ್ತು. ಆದರೂ ನಾನು ಅಬ್ರಹಾಮ ಮತ್ತು ಸಾರ ಬಗ್ಗೆ ಯೋಚನೆ ಮಾಡಿದೆ. ಅವರಿಗೆ ವಯಸ್ಸಾಗಿದ್ರೂ ಯೆಹೋವನ ಮಾತನ್ನ ಕೇಳಬೇಕು ಅಂತ ತಮ್ಮ ಸ್ವಂತ ಮನೆಯನ್ನ, ಸ್ವಂತ ಊರನ್ನ ಬಿಟ್ಟುಹೋದರು.—ಆದಿ. 12:1-5.

ಸಂಘಟನೆ ಹೇಳಿದ್ದನ್ನ ಪಾಲಿಸಬೇಕು ಅಂತ ನಿರ್ಧಾರ ಮಾಡಿದ್ವಿ. ಹಾಗಾಗಿ ಫೆಬ್ರವರಿ 1, 1995ರಲ್ಲಿ ವಾಪಸ್‌ ಮಲಾವಿಗೆ ಹೋದ್ವಿ. ನಾವು 28 ವರ್ಷದ ಹಿಂದೆ ಇಲ್ಲಿಗೆ ಬಂದಿದ್ವಿ. ಈಗ ಇಲ್ಲಿ ಹೊಸ ಬ್ರಾಂಚ್‌ ಕಮಿಟಿ ಶುರುವಾಯ್ತು. ನನ್ನ ಜೊತೆ ಇನ್ನೂ ಇಬ್ಬರು ಸಹೋದರರು ಬ್ರಾಂಚ್‌ ಕಮಿಟಿಯ ಸದಸ್ಯರಾಗಿ ನೇಮಕ ಪಡೆದುಕೊಂಡರು. ತಕ್ಷಣ ನಾವು ನಮ್ಮ ಕೆಲಸಗಳನ್ನ ಶುರು ಮಾಡಿಕೊಂಡ್ವಿ.

ಯೆಹೋವ ಬೆಳೆಸಿದನು

ಯೆಹೋವನ ಆಶೀರ್ವಾದ ಇದ್ದಿದ್ರಿಂದ ಕೆಲಸಗಳು ಚೆನ್ನಾಗಿ ನಡಿತಾ ಇತ್ತು. 1993ರಲ್ಲಿ ಪ್ರಚಾರಕರ ಸಂಖ್ಯೆ 30,000 ಇತ್ತು. ಆದರೆ, 1998ರಷ್ಟಕ್ಕೆ 42,000ಕ್ಕಿಂತ ಜಾಸ್ತಿ ಆಯ್ತು. b ಸೇವೆ ಇಷ್ಟು ಚೆನ್ನಾಗಿ ನಡಿತಾ ಇದ್ದಿದ್ರಿಂದ ಆಡಳಿತ ಮಂಡಲಿಯು ಹೊಸ ಬ್ರಾಂಚ್‌ ಆಫೀಸ್‌ ಕಟ್ಟೋಕೆ ಒಪ್ಪಿಗೆ ನೀಡಿತು. ಹಾಗಾಗಿ ಲಿಲಾಂಗ್ವೆನಲ್ಲಿ 30 ಎಕರೆ ಜಮೀನು ತಗೊಂಡ್ವಿ. ಆಮೇಲೆ ನನಗೆ ಕಟ್ಟಡ ನಿರ್ಮಾಣ ಕಮಿಟಿಯಲ್ಲಿ ಕೆಲಸ ಮಾಡೋಕೆ ನೇಮಕ ಸಿಕ್ತು.

ಕೊನೆಗೂ ಹೊಸ ಕಟ್ಟಡಗಳನ್ನ ಕಟ್ಟಿ ಮುಗಿಸಿದ್ವಿ. ಮೇ 2001ರಲ್ಲಿ ಅವುಗಳ ಸಮರ್ಪಣಾ ಸಮಾರಂಭ ನಡಿತು. ಆಗ ಆಡಳಿತ ಮಂಡಲಿಯ ಸಹೋದರ ಗೈ ಪಿಯರ್ಸ್‌ ಭಾಷಣ ಕೊಟ್ಟರು. ಈ ಕಾರ್ಯಕ್ರಮಕ್ಕೆ 2000ಕ್ಕಿಂತ ಹೆಚ್ಚು ಸಹೋದರ ಸಹೋದರಿಯರು ಬಂದಿದ್ದರು. ಅವರಿಗೆಲ್ಲಾ ದೀಕ್ಷಾಸ್ನಾನ ಆಗಿ 40 ವರ್ಷಗಳಿಗಿಂತ ಜಾಸ್ತಿಯಾಗಿತ್ತು. ಯೆಹೋವನ ಸಾಕ್ಷಿಗಳ ಮೇಲೆ ನಿಷೇಧ ಇದ್ದಿದ್ರಿಂದ ಈ ಸಹೋದರರು ತುಂಬ ಕಷ್ಟ ಹಿಂಸೆಗಳನ್ನ ಅನುಭವಿಸಿದ್ದರು. ಅವರು ಬಡವರಾಗಿದ್ದರೂ ದೇವರ ಮೇಲೆ ಇಟ್ಟಿರೋ ನಂಬಿಕೆಯಲ್ಲಿ ಸಿರಿವಂತರಾಗಿದ್ದರು. ಅವರು ಹೊಸ ಬೆತೆಲ್‌ ನೋಡೋಕೆ ಕಾತುರದಿಂದ ಕಾಯುತ್ತಿದ್ದರು. ಅವರು ತಮ್ಮ ಆಫ್ರಿಕನ್‌ ಶೈಲಿಯಲ್ಲಿ ರಾಜ್ಯ ಗೀತೆಗಳನ್ನ ಹಾಡುತ್ತಿದ್ದರು. ಬೆತೆಲ್‌ನ ಮೂಲೆಮೂಲೆಯಲ್ಲೂ ಅವರ ಹಾಡು ಕೇಳಿಸುತ್ತಿತ್ತು. ಈ ತರದ ಸಮರ್ಪಣಾ ಸಮಾರಂಭವನ್ನ ನಾನು ಎಲ್ಲೂ ನೋಡಿಲ್ಲ. ಯಾರೆಲ್ಲಾ ಕಷ್ಟಗಳನ್ನ ನಂಬಿಕೆಯಿಂದ ತಾಳಿಕೊಳ್ಳುತ್ತಾರೋ, ಸಹಿಸಿಕೊಳ್ಳುತ್ತಾರೋ ಅವರನ್ನ ಯೆಹೋವ ದೇವರು ಆಶೀರ್ವದಿಸುತ್ತಾನೆ ಅನ್ನೋದಕ್ಕೆ ಇದೇ ಸಾಕ್ಷಿ.

ಶಾಖಾ ಕಚೇರಿಗಳನ್ನ ಕಟ್ಟಿ ಮುಗಿಸಿದ ಮೇಲೆ ರಾಜ್ಯ ಸಭಾಗೃಹಗಳನ್ನ ಕಟ್ಟೋ ನೇಮಕ ಸಿಕ್ತು. ಮಲಾವಿಯಲ್ಲಿ ಬಡತನ ಜಾಸ್ತಿ ಇರೋ ಜಾಗದಲ್ಲಿ ನಾವು ರಾಜ್ಯ ಸಭಾಗೃಹಗಳನ್ನ ಕಟ್ಟಿದಾಗ ಅಲ್ಲಿ ಇದ್ದ ಸಹೋದರ ಸಹೋದರಿಯರಿಗೆ ತುಂಬ ಸಹಾಯ ಆಯ್ತು. ಯಾಕಂದ್ರೆ ಈ ಮುಂಚೆ ಅಲ್ಲಿ ರಾಜ್ಯ ಸಭಾಗೃಹಗಳನ್ನ ನೀಲಗಿರಿ ಮರಗಳಿಂದ ಕಟ್ಟುತ್ತಿದ್ರು ಮತ್ತು ಚಾವಣಿಗಳಿಗೆ ಚಾಪೆಗಳನ್ನ ಹಾಸಿಕೊಳ್ಳುತ್ತಿದ್ರು. ಮಣ್ಣಿನ ಬೆಂಚ್‌ಗಳಲ್ಲಿ ಕೂತುಕೊಳ್ತಿದ್ರು. ಆದರೆ ಈಗ ಸಹೋದರರು ಇಟ್ಟಿಗೆಗಳನ್ನ ಮಾಡಿ ಅದ್ರಿಂದ ರಾಜ್ಯ ಸಭಾಗೃಹಗಳನ್ನ ಕಟ್ಟಿದರು. ಆ ಸಭಾಗೃಹಗಳು ನೋಡೋಕೆ ತುಂಬ ಚೆನ್ನಾಗಿದ್ವು. ಆದರೂ ಕೆಲವರಿಗೆ ಈ ಮುಂಚೆ ಅವರು ಕೂತುಕೊಳ್ಳುತ್ತಿದ್ದ ಮಣ್ಣಿನ ಬೆಂಚ್‌ಗಳೇ ಇಷ್ಟ ಆಗುತ್ತಿತ್ತು. ಯಾಕಂದ್ರೆ ಅದರಲ್ಲಿ ಅಡ್ಜಸ್ಟ್‌ ಮಾಡಿಕೊಂಡು ಎಷ್ಟು ಜನ ಬೇಕಾದರೂ ಕೂತುಕೊಳ್ಳಬಹುದಿತ್ತು.

ಅಲ್ಲಿದ್ದ ಜನರಿಗೆ ತಮ್ಮ ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳೋಕೆ ಯೆಹೋವ ಸಹಾಯ ಮಾಡ್ತಿರೋದನ್ನ ನೋಡಿದಾಗ ನನಗೆ ತುಂಬ ಖುಷಿ ಆಗುತ್ತಿತ್ತು. ಅಲ್ಲಿರೋ ಯುವ ಸಹೋದರರು ಎಲ್ಲಾ ಕೆಲಸಗಳನ್ನ ತಾವಾಗೇ ಮುಂದೆ ಬಂದು ಮಾಡುತ್ತಿದ್ದರು. ಅವರಿಗೆ ಏನೇ ತರಬೇತಿ ಕೊಟ್ಟರು ಬೇಗ ಕಲಿತುಕೊಳ್ಳುತ್ತಿದರು. ಬೆತೆಲ್‌ ಮತ್ತು ಸಭೆಗಳಲ್ಲಿ ಹೆಚ್ಚು ಜವಾಬ್ದಾರಿ ತಗೊಳ್ಳೋಕೆ ರೆಡಿಯಾಗಿರುತ್ತಿದ್ರು. ಅಲ್ಲಿದ್ದ ಸಭೆಗಳಿಗೆ ಸಂಚರಣ ಮೇಲ್ವಿಚಾರಕರಿಂದ ಇನ್ನೂ ಉತ್ತೇಜನ ಸಿಕ್ಕಿತು. ಅಲ್ಲಿಗೆ ಬರುತ್ತಿದ್ದ ಹೆಚ್ಚಿನ ಸಂಚರಣ ಮೇಲ್ವಿಚಾರಕರಿಗೆ ಮದುವೆಯಾಗಿತ್ತು. ಆದ್ರೆ ಅವರು ದೇವರ ಸೇವೆನ ಜಾಸ್ತಿ ಮಾಡೋಕೋಸ್ಕರ ಮಕ್ಕಳನ್ನ ಮಾಡಿಕೊಂಡಿರಲಿಲ್ಲ. ಅದಕ್ಕೆ ಅವರ ಕುಟುಂಬದವರು ಮತ್ತು ಬೇರೆಯವರು ಅವರನ್ನ ಕೀಳಾಗಿ ನೋಡ್ತಿದ್ರು. ಆದ್ರೂ ಅವರು ಯೆಹೋವನ ಸೇವೆನ ಖುಷಿಖುಷಿಯಿಂದ ಮಾಡುತ್ತಿದ್ದರು.

ನಾನು ಮಾಡಿದ ನಿರ್ಧಾರಗಳಿಗೆ ಯಾವತ್ತೂ ವಿಷಾದ ಪಟ್ಟಿಲ್ಲ

ಬ್ರಿಟನ್‌ ಬೆತೆಲ್‌ನಲ್ಲಿ ಆ್ಯನ್‌ ಜೊತೆ

ನಾವು ಆಫ್ರಿಕಾಗೆ ಬಂದು 52 ವರ್ಷಗಳಾದ ಮೇಲೆ ನನಗೆ ಆರೋಗ್ಯ ಸಮಸ್ಯೆಗಳು ಬಂತು. ಅದಕ್ಕೆ ಆಡಳಿತ ಮಂಡಲಿ ನಮಗೆ ಬ್ರಿಟನ್‌ ಬೆತೆಲಿಗೆ ಹೋಗೋಕೆ ಅನುಮತಿ ಕೊಟ್ಟಿತು. ನಾವು ಈಗಾಗಲೇ ತುಂಬ ಖುಷಿ ಖುಷಿಯಿಂದ ಸೇವೆ ಮಾಡುತ್ತಾ ಇದ್ವಿ. ಈ ನೇಮಕನ ಬಿಟ್ಟು ಬರೋಕೆ ತುಂಬ ಬೇಜಾರಾಯ್ತು. ಆದ್ರೆ ಬ್ರಿಟನ್‌ ಬೆತೆಲ್‌ನಲ್ಲಿದ್ದ ಸಹೋದರ ಸಹೋದರಿಯರು ನಮ್ಮನ್ನ ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.

ಯೆಹೋವ ತೋರಿಸಿದ ದಾರಿಯಲ್ಲಿ ನಡೆದಿದ್ದರಿಂದ ನಾನು ಈಗ ತುಂಬ ಖುಷಿಯಾಗಿದ್ದೀನಿ. ನಾನು ಮಾಡಿದ ನಿರ್ಧಾರದ ಬಗ್ಗೆ ನನಗೆ ಯಾವ ವಿಷಾದನೂ ಇಲ್ಲ. ನಾನು ನನಗೆ ಇಷ್ಟ ಬಂದ ಹಾಗೆ ಇದ್ದಿದ್ರೆ ನನ್ನ ಜೀವನ ಹೇಗಿರುತ್ತಿತ್ತೋ ಏನೋ? ಯೆಹೋವ ದೇವರಿಗೆ ನನ್ನ ಬಗ್ಗೆ ಎಲ್ಲಾ ಗೊತ್ತು. ಹಾಗಾಗಿ ‘ನನಗೆ ಸರಿ ದಾರಿ ತೋರಿಸಿದ್ದಾನೆ.’ (ಜ್ಞಾನೋ. 3:5, 6) ನಾನು ಯುವಕನಾಗಿದ್ದಾಗ ದೊಡ್ಡ ಕಂಪನಿಗಳಲ್ಲಿ ಹೊಸಹೊಸ ವಿಷಯಗಳನ್ನ ಕಲಿಯೋಕೆ ಇಷ್ಟಪಡುತ್ತಿದ್ದೆ. ಆದ್ರೆ ಯೆಹೋವ ದೇವರು ತನ್ನ ಲೋಕವ್ಯಾಪಕ ಸಂಘಟನೆಯಿಂದ ನಾನು ಅಂದುಕೊಂಡಿದ್ದಕ್ಕಿಂತ ಇನ್ನೂ ಹೆಚ್ಚನ್ನ ನನಗೆ ಕಲಿಸಿದ್ದಾನೆ. ಇಲ್ಲಿತನಕ ನಾನು ಯೆಹೋವನ ಸೇವೆ ಮಾಡಿದ್ರಿಂದ ಜೀವನದಲ್ಲಿ ತೃಪ್ತಿಯಾಗಿದ್ದೀನಿ. ಇನ್ಮುಂದೆನೂ ಹಾಗೇ ಇರ್ತೀನಿ!

a ಮಲಾವಿಯಲ್ಲಿದ್ದ ಯೆಹೋವನ ಸಾಕ್ಷಿಗಳ ಇತಿಹಾಸ ತಿಳಿದುಕೊಳ್ಳೋಕೆ 1999ರ ಯೆಹೋವನ ಸಾಕ್ಷಿಗಳ ವರ್ಷ ಪುಸ್ತಕದ ಪುಟ 148-223ನ್ನ ನೋಡಿ. (ಇಂಗ್ಲಿಷ್‌)

b ಮಲಾವಿಯಲ್ಲಿ ಈಗ 1,00,000ಕ್ಕಿಂತ ಹೆಚ್ಚು ಪ್ರಚಾರಕರಿದ್ದಾರೆ.