ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 32

ಯೆಹೋವನ ತರ ಬಿಟ್ಕೊಡಿ

ಯೆಹೋವನ ತರ ಬಿಟ್ಕೊಡಿ

“‘ನಾನು ಹೇಳಿದ್ದೇ ಆಗಬೇಕು’ ಅನ್ನೋ ಗುಣ ನಿಮ್ಮಲ್ಲಿಲ್ಲ ಅಂತ ಎಲ್ರಿಗೂ ಗೊತ್ತಾಗ್ಲಿ.”—ಫಿಲಿ. 4:5.

ಗೀತೆ 120 ಆಲಿಸಿ, ಪಾಲಿಸಿ, ಹರಸಲ್ಪಡಿ

ಈ ಲೇಖನದಲ್ಲಿ ಏನಿದೆ? a

ನೀವು ಯಾವ ತರದ ಮರ ಆಗಿರೋಕೆ ಇಷ್ಟಪಡ್ತೀರಾ? (ಪ್ಯಾರ 1 ನೋಡಿ)

1. ಕ್ರೈಸ್ತರು ಯಾವ ತರ ಇರಬೇಕು? (ಚಿತ್ರನೂ ನೋಡಿ.)

 ಜೋರಾಗಿ ಗಾಳಿ ಬೀಸಿದಾಗ ಬಾಗೋ ಮರಗಳು ಯಾವತ್ತೂ ಬಿದ್ದುಹೋಗಲ್ಲ. ಅದೇ ತರ ನಮ್ಮ ಜೀವನದಲ್ಲಿ ಕಷ್ಟಗಳು ಬಂದಾಗ ನಾವು ಯೆಹೋವನ ಸೇವೆಯನ್ನ ಖುಷಿಯಾಗಿ ಮಾಡ್ತಾ ಇರಬೇಕಂದ್ರೆ ನಮ್ಮಲ್ಲೂ ಮಣಿಯೋ ಗುಣ ಇರಬೇಕು. ಅಂದ್ರೆ ನಮ್ಮ ಪರಿಸ್ಥಿತಿ ಬದಲಾದಾಗ ಅದಕ್ಕೆ ತಕ್ಕ ಹಾಗೆ ಹೊಂದ್ಕೊಬೇಕು. ನಾವು ಹೇಳಿದ್ದೇ ಆಗಬೇಕು ಅಂತ ಅಂದ್ಕೊಳ್ಳೋ ಬದ್ಲು ಬೇರೆಯವ್ರ ಅಭಿಪ್ರಾಯಗಳನ್ನ ನಿರ್ಧಾರಗಳನ್ನ ಗೌರವಿಸಬೇಕು.

2. (ಎ) ಪರಿಸ್ಥಿತಿಗೆ ತಕ್ಕ ಹಾಗೆ ಹೊಂದ್ಕೊಳ್ಳೋಕೆ ನಮಗೆ ಯಾವ ಗುಣಗಳು ಸಹಾಯ ಮಾಡುತ್ತೆ? (ಬಿ) ಈ ಲೇಖನದಲ್ಲಿ ನಾವು ಏನು ಕಲಿತೀವಿ?

2 ಯೆಹೋವನ ಜನ್ರಾದ ನಮ್ಮಲ್ಲಿ ಬಿಟ್ಕೊಡೋ ಗುಣ ಇರಬೇಕು. ಇದ್ರ ಜೊತೆಗೆ ನಾವು ದೀನರಾಗಿ ಇರಬೇಕು ಮತ್ತು ಬೇರೆಯವ್ರಿಗೆ ಕರುಣೆ ತೋರಿಸಬೇಕು. ಪರಿಸ್ಥಿತಿ ತಲೆಕೆಳಗಾದಾಗ ಅದಕ್ಕೆ ಹೊಂದ್ಕೊಳ್ಳೋಕೆ ಈ ಗುಣಗಳು ಕೆಲವು ಸಹೋದರ ಸಹೋದರಿಯರಿಗೆ ಹೇಗೆ ಸಹಾಯ ಮಾಡ್ತು? ನಮಗೆ ಹೇಗೆ ಸಹಾಯ ಮಾಡುತ್ತೆ? ಅದನ್ನ ಈ ಲೇಖನದಲ್ಲಿ ನೋಡೋಣ. ಆದ್ರೆ ಅದಕ್ಕೂ ಮೊದ್ಲು ಈ ಗುಣವನ್ನ ಯೆಹೋವ ಮತ್ತು ಯೇಸು ಹೇಗೆ ತೋರಿಸಿದ್ರು ಅಂತ ನೋಡೋಣ.

ಯೆಹೋವ ಮತ್ತು ಯೇಸು ಬಿಟ್ಕೊಡ್ತಾರೆ

3. ಯೆಹೋವ ಹೊಂದ್ಕೊಳ್ಳೋಕೆ ಯಾವಾಗ್ಲೂ ರೆಡಿ ಇರ್ತಾನೆ ಅಂತ ನಾವು ಹೇಗೆ ಹೇಳಬಹುದು?

3 ಬೈಬಲ್‌ ಯೆಹೋವ ದೇವರನ್ನ “ಬಂಡೆ” ಅಂತ ಕರಿಯುತ್ತೆ. ಯಾಕಂದ್ರೆ ಆತನು ಸ್ಥಿರವಾಗಿ ಇರ್ತಾನೆ, ಯಾವತ್ತೂ ಕದಲಲ್ಲ. (ಧರ್ಮೋ. 32:4) ಆದ್ರೆ ಅದೇ ಸಮಯದಲ್ಲಿ ಆತನು ಹೊಂದ್ಕೊಳ್ಳೋಕೂ ರೆಡಿ ಇರ್ತಾನೆ. ಈ ಲೋಕದ ಪರಿಸ್ಥಿತಿ ಬದಲಾಗ್ತಾ ಹೋದ ಹಾಗೆ ತಾನು ಕೊಟ್ಟಿರೋ ಮಾತನ್ನ ಉಳಿಸ್ಕೊಳ್ಳೋಕೆ ಯೆಹೋವ ಆ ಪರಿಸ್ಥಿತಿಗೆ ತಕ್ಕ ಹಾಗೆ ಹೊಂದ್ಕೊಳ್ತಾನೆ. ಯೆಹೋವ ನಮ್ಮನ್ನ ತನ್ನ ಹೋಲಿಕೆಯಲ್ಲಿ ಸೃಷ್ಟಿ ಮಾಡಿರೋದ್ರಿಂದ ನಮ್ಮ ಜೀವನದಲ್ಲಿ ಏನೇ ಆದ್ರೂ ಅದಕ್ಕೆ ತಕ್ಕ ಹಾಗೆ ನಮ್ಮಿಂದಾನೂ ಹೊಂದ್ಕೊಳ್ಳೋಕೆ ಆಗುತ್ತೆ. ಅದಷ್ಟೇ ಅಲ್ಲ, ನಮ್ಮ ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನ ಮಾಡೋಕೆ ಬೈಬಲ್‌ ತತ್ವಗಳನ್ನೂ ಕೊಟ್ಟಿದ್ದಾನೆ. ಇದ್ರಿಂದ ನಮಗೆ ಏನು ಗೊತ್ತಾಗುತ್ತೆ? ಯೆಹೋವ “ಬಂಡೆ” ತರ ಸ್ಥಿರವಾಗೂ ಇದ್ದಾನೆ, ಮರದ ತರ ಹೊಂದ್ಕೊಳ್ಳೋಕೂ ರೆಡಿ ಇದ್ದಾನೆ.

4. ಯೆಹೋವ ಕಟ್ಟುನಿಟ್ಟು ಮಾಡಲ್ಲ ಅನ್ನೋದಕ್ಕೆ ಒಂದು ಉದಾಹರಣೆ ಕೊಡಿ. (ಯಾಜಕಕಾಂಡ 5:7, 11)

4 ಯೆಹೋವ ಯಾವಾಗ್ಲೂ ಸರಿಯಾಗಿ ಇರೋದನ್ನೇ ಮಾಡ್ತಾನೆ, ಹೊಂದ್ಕೊಳ್ತಾನೆ. ಆತನು ಮನುಷ್ಯರಿಗೆ ಯಾವತ್ತೂ ಕಟ್ಟುನಿಟ್ಟು ಮಾಡಲ್ಲ. ಆತನು ಇಸ್ರಾಯೇಲ್ಯರ ಹತ್ರ ಹೇಗೆ ನಡ್ಕೊಂಡನು ಅಂತ ನೋಡಿ. ಇಸ್ರಾಯೇಲ್ಯರಲ್ಲಿ ಬಡವರೂ ಇದ್ರು ಶ್ರೀಮಂತರೂ ಇದ್ರು. ಹಾಗಾಗಿ ಎಲ್ರಿಗೂ ಒಂದೇ ತರ ಬಲಿ ಕೊಡೋಕೆ ಆಗ್ತಾ ಇರಲಿಲ್ಲ. ಅದನ್ನ ಯೆಹೋವ ಅರ್ಥ ಮಾಡ್ಕೊಂಡು ನಿಮ್ಮಿಂದ ಏನು ಕೊಡೋಕೆ ಆಗುತ್ತೋ ಅದನ್ನೇ ಕೊಡಿ ಅಂತ ಹೇಳಿದನು.ಯಾಜಕಕಾಂಡ 5:7, 11 ಓದಿ.

5. ಯೆಹೋವ ಹೇಗೆ ದೀನತೆ ಮತ್ತು ಕರುಣೆ ತೋರಿಸಿದನು?

5 ಯೆಹೋವ ದೇವರಲ್ಲಿ ದೀನತೆ ಮತ್ತು ಕರುಣೆ ಇದೆ. ಹಾಗಾಗಿ ಕೆಲವೊಮ್ಮೆ ತಾನು ಅಂದ್ಕೊಂಡಿದ್ದನ್ನ ಮಾಡದೆ ಬಿಟ್ಕೊಟ್ಟಿದ್ದಾನೆ. ಉದಾಹರಣೆಗೆ ಆತನು ಸೊದೋಮ್‌ನಲ್ಲಿದ್ದ ಕೆಟ್ಟ ಜನ್ರನ್ನೆಲ್ಲ ನಾಶ ಮಾಡಬೇಕು ಅಂತ ನಿರ್ಧಾರ ಮಾಡಿದನು. ಅದಕ್ಕೆ ತನ್ನ ದೇವದೂತರನ್ನ ಕಳಿಸಿ ಅಲ್ಲಿದ್ದ ಲೋಟನಿಗೆ ಬೆಟ್ಟದ ಪ್ರದೇಶಕ್ಕೆ ಓಡಿಹೋಗೋಕೆ ಹೇಳಿದನು. ಆದ್ರೆ ಲೋಟನಿಗೆ ಅಲ್ಲಿಗೆ ಹೋಗೋಕೆ ಭಯ ಆಯ್ತು. ಅದಕ್ಕೆ ಅವನು ‘ನಾನು ಮತ್ತು ನನ್ನ ಕುಟುಂಬದವರು ಚೋಗರ್‌ ಅನ್ನೋ ಚಿಕ್ಕ ಊರಿಗೆ ಓಡಿ ಹೋಗ್ತೀವಿ’ ಅಂತ ಕೇಳ್ಕೊಂಡ್ರು. ಆಗ ಯೆಹೋವ ದೇವರು ‘ನಾನು ಹೇಳಿದಷ್ಟು ಮಾಡು’ ಅಂತ ಗದರಿಸಲಿಲ್ಲ. ದೀನತೆ ತೋರಿಸಿದನು. ಚೋಗರ್‌ ಅನ್ನೋ ಊರನ್ನ ನಾಶ ಮಾಡಬೇಕು ಅಂತ ಅಂದ್ಕೊಂಡಿದ್ರೂ ಲೋಟನಿಗೋಸ್ಕರ ನಾಶ ಮಾಡದೆ ಬಿಟ್ಟುಬಿಟ್ಟನು. ಲೋಟನಿಗೆ ಅಲ್ಲಿಗೆ ಹೋಗೋಕೆ ಅನುಮತಿ ಕೊಟ್ಟನು. (ಆದಿ. 19:18-22) ಇದಾಗಿ ನೂರಾರು ವರ್ಷ ಆದ್ಮೇಲೆ ಯೆಹೋವ ನಿನೆವೆಯಲ್ಲಿದ್ದ ಜನ್ರಿಗೂ ಕರುಣೆ ತೋರಿಸಿದನು. ಅಲ್ಲಿದ್ದ ಜನ್ರು ತುಂಬ ಕೆಟ್ಟವರಾಗಿದ್ರಿಂದ ಅವ್ರನ್ನ, ಆ ಊರನ್ನ ನಾಶ ಮಾಡಬೇಕು ಅಂತ ಅಂದ್ಕೊಂಡಿದ್ದನು. ಅವ್ರನ್ನ ಎಚ್ಚರಿಸೋಕೆ ಪ್ರವಾದಿ ಯೋನನನ್ನೂ ಅವ್ರ ಹತ್ರ ಕಳಿಸಿದ್ದನು. ಆದ್ರೆ ನಿನೆವೆಯ ಜನ್ರು ಪಶ್ಚಾತ್ತಾಪಪಟ್ಟು ತಿದ್ಕೊಂಡಿದ್ರಿಂದ ಯೆಹೋವ ಅವ್ರಿಗೆ ಕರುಣೆ ತೋರಿಸಿದನು. ಅವ್ರನ್ನ ನಾಶ ಮಾಡದೆ ಬಿಟ್ಟುಬಿಟ್ಟನು.—ಯೋನ 3:1, 10; 4:10, 11.

6. ಯೇಸು ಯೆಹೋವನ ತರಾನೇ ಹೇಗೆ ನಡ್ಕೊಂಡನು?

6 ಯೇಸು ಕೂಡ ಯೆಹೋವನ ತರಾನೇ ನಡ್ಕೊಂಡನು. ಆತನು ಜನ್ರ ಜೊತೆ ತುಂಬ ಕಟ್ಟುನಿಟ್ಟಾಗಿ ಇರಲಿಲ್ಲ. ಅವ್ರನ್ನ ಅರ್ಥ ಮಾಡ್ಕೊಳ್ತಿದ್ದನು. ಉದಾಹರಣೆಗೆ, ‘ದಾರಿತಪ್ಪಿದ ಕುರಿಗಳ ತರ ಇದ್ದ ಇಸ್ರಾಯೇಲ್ಯರಿಗೆ’ ಮಾತ್ರ ಸಾರೋಕೆ ಯೆಹೋವ ಯೇಸುನ ಭೂಮಿಗೆ ಕಳಿಸಿದ್ದನು. ಆದ್ರೂ ಒಂದು ಸಮಯದಲ್ಲಿ ಒಬ್ಬ ಸ್ತ್ರೀ ಯೇಸು ಹತ್ರ ಬಂದು “ಕೆಟ್ಟ ದೇವದೂತನ ಕಾಟದಿಂದ” ಕಷ್ಟಪಡ್ತಿದ್ದ ತನ್ನ ಮಗಳನ್ನ ವಾಸಿ ಮಾಡೋಕೆ ಬೇಡ್ಕೊಂಡಳು. ಆದ್ರೆ ಅವಳು ಇಸ್ರಾಯೇಲ್‌ ಜನಾಂಗದವಳಲ್ಲ. ಆದ್ರೂ ಯೇಸು ಅವಳಿಗೆ ಕರುಣೆ ತೋರಿಸಿ ಅವಳ ಮಗಳನ್ನ ವಾಸಿ ಮಾಡಿದನು. (ಮತ್ತಾ. 15:21-28) ಇನ್ನೊಂದು ಉದಾಹರಣೆ ನೋಡಿ. ಯೇಸು ತನ್ನ ಸೇವೆಯನ್ನ ಶುರುಮಾಡಿದಾಗ್ಲೇ ಒಂದು ಮಾತು ಹೇಳಿದ್ದನು. ‘ಯಾರಾದ್ರೂ “ಯೇಸು ಯಾರಂತ ನಂಗೊತ್ತಿಲ್ಲ” ಅಂತ ಹೇಳಿದ್ರೆ ನಾನು ಕೂಡ “ಅವನು ಯಾರಂತ ನಂಗೂ ಗೊತ್ತಿಲ್ಲ” ಅಂತ ಹೇಳ್ತೀನಿ’ ಅಂದಿದ್ದನು. (ಮತ್ತಾ. 10:33) ಆದ್ರೆ ಪೇತ್ರ ‘ಯೇಸು ಯಾರಂತ ನಂಗೊತ್ತಿಲ್ಲ’ ಅಂತ ಮೂರು ಸಲ ಹೇಳಿದ. ಹಾಗಂತ ಯೇಸು ಪೇತ್ರನ ಕೈಬಿಟ್ನಾ? ಇಲ್ಲ, ಪೇತ್ರ ಪಶ್ಚಾತ್ತಾಪ ಪಟ್ಟಿದ್ದನ್ನ, ಅವನ ನಂಬಿಕೆಯನ್ನ ಯೇಸು ಗಮನಿಸಿದನು. ಯೇಸು ಮತ್ತೆ ಜೀವ ಪಡ್ಕೊಂಡು ಎದ್ದು ಬಂದಮೇಲೆ ಪೇತ್ರನಿಗೆ ಕಾಣಿಸ್ಕೊಂಡು ಅವನನ್ನ ಕ್ಷಮಿಸಿದ್ದೀನಿ, ಅವನನ್ನ ಈಗ್ಲೂ ಪ್ರೀತಿಸ್ತೀನಿ ಅಂತ ತೋರಿಸ್ಕೊಟ್ಟನು.—ಲೂಕ 24:33, 34.

7. ನಾವು ಎಂಥ ವ್ಯಕ್ತಿಗಳು ಅಂತ ಜನ್ರು ಗುರುತಿಸಬೇಕು ಅಂತ ಇಷ್ಟಪಡ್ತೀವಿ? (ಫಿಲಿಪ್ಪಿ 4:5)

7 ಯೆಹೋವ ಮತ್ತು ಯೇಸು ಹೇಗೆ ಬಿಟ್ಕೊಡೋ ಗುಣವನ್ನ ತೋರಿಸಿದ್ರು ಅಂತ ಇಲ್ಲಿ ತನಕ ನೋಡಿದ್ವಿ. ನಾವು ಕೂಡ ಹಾಗೇ ಇರಬೇಕು ಅಂತ ಯೆಹೋವ ಇಷ್ಟಪಡ್ತಾನೆ. (ಫಿಲಿಪ್ಪಿ 4:5 ಓದಿ.) ನಾವು ನಮ್ಮನ್ನೇ ಹೀಗೆ ಕೇಳ್ಕೊಬೇಕು: “ಜನ ನನ್ನನ್ನ ತುಂಬ ಕಟ್ಟುನಿಟ್ಟು, ಒರಟು, ಹಠಮಾರಿ ಅಂತ ಅಂದ್ಕೊಂಡಿದ್ದಾರಾ? ಅಥವಾ ಬಿಟ್ಕೊಡೋ ಸ್ವಭಾವದವನು, ಹೊಂದ್ಕೊಳ್ತಾನೆ, ಬೇರೆಯವ್ರನ್ನ ಅರ್ಥ ಮಾಡ್ಕೊಳ್ತಾನೆ ಅಂತ ಅಂದ್ಕೊಂಡಿದ್ದಾರಾ? ನಾನು ಹೇಳಿದ್ದೇ ನಡಿಬೇಕು ಅಂತ ಬೇರೆಯವ್ರಿಗೆ ಒತ್ತಾಯ ಮಾಡ್ತೀನಾ? ಅಥವಾ ಅವರು ಹೇಳೋದನ್ನೂ ಕೇಳ್ತೀನಾ? ಅವ್ರಿಗೆ ಏನು ಇಷ್ಟಾನೋ ಅದನ್ನ ಮಾಡೋಕೆ ಬಿಟ್ಕೊಡ್ತೀನಾ?” ನಾವು ಬಿಟ್ಕೊಟ್ಟಷ್ಟು ಯೆಹೋವ ಮತ್ತು ಯೇಸು ತರ ಆಗ್ತೀವಿ. ನಾವು ಎರಡು ವಿಷ್ಯದಲ್ಲಿ ಈ ಗುಣವನ್ನ ತೋರಿಸಬೇಕು. ಒಂದು, ನಮ್ಮ ಪರಿಸ್ಥಿತಿ ಬದಲಾದಾಗ. ಇನ್ನೊಂದು, ಬೇರೆಯವ್ರ ಅಭಿಪ್ರಾಯಗಳು ಮತ್ತು ನಿರ್ಧಾರಗಳು ನಾವು ಅಂದ್ಕೊಂಡ ಹಾಗೆ ಇಲ್ಲದೆ ಇದ್ದಾಗ. ಹೇಗೆ ಅಂತ ಈಗ ನೋಡೋಣ.

ಪರಿಸ್ಥಿತಿ ಬದಲಾದಾಗ

8. ನಮ್ಮ ಪರಿಸ್ಥಿತಿ ಬದಲಾದಾಗ ಹೊಂದ್ಕೊಳ್ಳೋಕೆ ನಮಗೆ ಯಾವ ವಿಷ್ಯಗಳು ಸಹಾಯ ಮಾಡುತ್ತೆ? (ಪಾದಟಿಪ್ಪಣಿನೂ ನೋಡಿ.)

8 ನಮ್ಮ ಜೀವನ ತಲೆಕೆಳಗೆ ಆದಾಗ್ಲೂ ನಾವು ಪರಿಸ್ಥಿತಿಗೆ ಹೊಂದ್ಕೊಬೇಕು. ಪರಿಸ್ಥಿತಿ ಬದಲಾದಾಗ ನಮಗೆ ತುಂಬ ಕಷ್ಟ ಆಗುತ್ತೆ. ಉದಾಹರಣೆಗೆ ನಮಗೆ ದಿಢೀರಂತ ಆರೋಗ್ಯ ಹಾಳಾದಾಗ, ನಾವಿರೋ ದೇಶದಲ್ಲಿ ಆರ್ಥಿಕ ವ್ಯವಸ್ಥೆ ಬದಲಾದಾಗ ಅಥವಾ ಸರ್ಕಾರದಲ್ಲಿ ಏನೋ ಬದಲಾವಣೆ ಆದಾಗ ನಮಗೆ ಕಷ್ಟ ಆಗುತ್ತೆ. (ಪ್ರಸಂ. 9:11; 1 ಕೊರಿಂ. 7:31) ಸಂಘಟನೆಯಿಂದ ನಮಗೆ ಬೇರೆ ನೇಮಕ ಸಿಕ್ಕಿದಾಗ್ಲೂ ಕಷ್ಟ ಆಗಬಹುದು. ಹೀಗಾದಾಗ ಪರಿಸ್ಥಿತಿಗೆ ಹೊಂದ್ಕೊಳ್ಳೋಕೆ ನಾವೇನು ಮಾಡಬೇಕು? (1) ಸನ್ನಿವೇಶ ಬದಲಾಗಿದೆ ಅಂತ ಒಪ್ಕೊಳ್ಳಿ. (2) ಮುಂದೆ ಏನೆಲ್ಲಾ ಒಳ್ಳೇದಾಗುತ್ತೆ ಅಂತ ಯೋಚ್ನೆ ಮಾಡಿ. (3) ಈಗ ಏನು ಒಳ್ಳೇದಾಗ್ತಿದೆ ಅನ್ನೋದಕ್ಕೆ ಗಮನಕೊಡಿ. (4) ಬೇರೆಯವ್ರಿಗೆ ಸಹಾಯ ಮಾಡಿ. b ಈ 4 ವಿಷ್ಯಗಳು ನಮ್ಮ ಸಹೋದರ ಸಹೋದರಿಯರಿಗೆ ಹೇಗೆ ಸಹಾಯ ಮಾಡ್ತು ಅಂತ ಈಗ ನೋಡೋಣ.

9. ಪರಿಸ್ಥಿತಿ ಇದ್ದಕ್ಕಿದ್ದ ಹಾಗೆ ಬದಲಾದಾಗ ಒಬ್ಬ ಮಿಷನರಿ ದಂಪತಿ ಹೇಗೆ ಹೊಂದ್ಕೊಂಡ್ರು?

9 ಸನ್ನಿವೇಶ ಬದಲಾಗಿದೆ ಅನ್ನೋದನ್ನ ಒಪ್ಕೊಳ್ಳಿ. ಇಮ್ಯಾನುವೇಲಾ ಮತ್ತು ಫ್ರಾನ್ಚೆಸ್ಕಾ ಅನ್ನೋ ದಂಪತಿಗೆ ಬೇರೆ ದೇಶದಲ್ಲಿ ಮಿಷನರಿಯಾಗಿ ಸೇವೆ ಮಾಡೋ ನೇಮಕ ಸಿಕ್ತು. ಅವರು ಆಗಷ್ಟೇ ಅಲ್ಲಿನ ಭಾಷೆ ಕಲಿತಾ ಇದ್ರು, ಸಹೋದರ ಸಹೋದರಿಯರ ಬಗ್ಗೆ ತಿಳ್ಕೊಳ್ತಾ ಇದ್ರು. ಅಷ್ಟ್ರಲ್ಲಿ ಕೊರೊನಾ ಶುರು ಆಗಿ ಅವರು ಎಲ್ರಿಂದ ದೂರ ಇರಬೇಕಾದ ಪರಿಸ್ಥಿತಿ ಬಂತು. ಇದ್ದಕ್ಕಿದ್ದ ಹಾಗೆ ಫ್ರಾನ್ಚೆಸ್ಕಾ ಅವ್ರ ಅಮ್ಮನೂ ತೀರಿಹೋಗಿಬಿಟ್ರು. ಫ್ರಾನ್ಚೆಸ್ಕಾಗೆ ಅವ್ರ ಕುಟುಂಬದವ್ರನ್ನ ನೋಡಬೇಕು, ಅಲ್ಲಿಗೆ ಹೋಗಬೇಕು ಅಂತ ತುಂಬ ಆಸೆ ಆಗ್ತಿತ್ತು. ಆದ್ರೆ ಕೊರೊನಾ ಇದ್ದಿದ್ರಿಂದ ಅಲ್ಲಿಗೆ ಹೋಗೋಕೆ ಆಗಲಿಲ್ಲ. ಈ ಪರಿಸ್ಥಿತಿಗೆ ಹೊಂದ್ಕೊಳ್ಳೋಕೆ ಫ್ರಾನ್ಚೆಸ್ಕಾಗೆ ಯಾವುದು ಸಹಾಯ ಮಾಡ್ತು? ಒಂದು, ಇಮ್ಯಾನುವೇಲಾ ಮತ್ತು ಫ್ರಾನ್ಚೆಸ್ಕಾ ಯೆಹೋವ ದೇವರ ಹತ್ರ ‘ಚಿಂತೆ ಮಾಡದೇ ಇರೋಕೆ ಮತ್ತು ಸರಿಯಾಗಿ ಯೋಚ್ನೆ ಮಾಡೋಕೆ ಸಹಾಯ ಮಾಡಪ್ಪಾ’ ಅಂತ ದಿನಾ ಪ್ರಾರ್ಥನೆ ಮಾಡ್ತಿದ್ರು. ಯೆಹೋವ ಕೂಡ ಅವ್ರಿಗೆ ಸರಿಯಾದ ಸಮಯಕ್ಕೆ ಸಂಘಟನೆಯಿಂದ ಉತ್ರ ಕೊಟ್ಟನು. ಅವರು ಒಂದು ವಿಡಿಯೋ ನೋಡ್ತಿದ್ರು. ಅದ್ರಲ್ಲಿ ಒಬ್ಬ ಸಹೋದರ “ಹೊಸ ಪರಿಸ್ಥಿತಿಗೆ ಆದಷ್ಟು ಬೇಗ ಹೊಂದ್ಕೊಂಡ್ರೆ ನಾವು ಖುಷಿಖುಷಿಯಾಗಿ ಇರೋಕಾಗುತ್ತೆ. ಯಾಕಂದ್ರೆ ಅಲ್ಲೂ ಯೆಹೋವನ ಸೇವೆ ಮಾಡುವಾಗ ನಮಗೆ ಸಂತೋಷ, ಸಂತೃಪ್ತಿ ಸಿಗುತ್ತೆ” ಅಂತ ಹೇಳಿದ್ರು. c ಇದು ಆ ದಂಪತಿಗೆ ತುಂಬ ಸಹಾಯ ಮಾಡ್ತು. ಎರಡು, ಅವರು ಫೋನಿಂದ ಸಿಹಿಸುದ್ದಿ ಸಾರುತ್ತಾ ಹೋದ ಹಾಗೆ ಅದನ್ನ ಇನ್ನೂ ಚೆನ್ನಾಗಿ ಮಾಡಬೇಕು ಅಂತ ಅವ್ರಿಗೆ ಆಸೆ ಆಯ್ತು. ಅದ್ರಿಂದ ಅವರು ಒಂದು ಬೈಬಲ್‌ ಅಧ್ಯಯನನೂ ಶುರುಮಾಡಿದ್ರು. ಮೂರು, ಅಲ್ಲಿದ್ದ ಸಹೋದರ ಸಹೋದರಿಯರು ಪ್ರೀತಿಯಿಂದ ಸಹಾಯ ಮಾಡೋಕೆ ಮುಂದೆ ಬಂದಾಗ ಅದನ್ನ ಇವರು ಪಡ್ಕೊಂಡ್ರು. ಒಬ್ಬ ಸಹೋದರಿ ಈ ದಂಪತಿಗೆ ದಿನಾಲೂ ಒಂದು ಮೆಸೇಜ್‌ ಕಳಿಸ್ತಿದ್ರು. ಅದ್ರ ಜೊತೆ ಯಾವಾಗ್ಲೂ ಒಂದು ವಚನ ಇರ್ತಿತ್ತು. ಹೀಗೆ ಆ ಸಹೋದರಿ ಒಂದು ವರ್ಷ ಪೂರ್ತಿ ಮೆಸೇಜ್‌ ಕಳಿಸಿದ್ರು. ಪರಿಸ್ಥಿತಿಯಲ್ಲಿ ಆಗಿರೋ ಬದಲಾವಣೆಯನ್ನ ನಾವು ಒಪ್ಕೊಂಡ್ರೆ ನಾವೀಗ ಏನು ಮಾಡ್ತಿದ್ದೀವೋ ಅದ್ರಲ್ಲಿ ಖುಷಿ ಪಡ್ತೀವಿ ಅಂತ ಇದ್ರಿಂದ ಗೊತ್ತಾಗುತ್ತೆ.

10. ಒಂದು ದೊಡ್ಡ ಬದಲಾವಣೆ ಆದಾಗ ಅದಕ್ಕೆ ಒಬ್ಬ ಸಹೋದರಿ ಹೇಗೆ ಹೊಂದ್ಕೊಂಡ್ರು?

10 ಮುಂದೆ ಏನು ಒಳ್ಳೇದಾಗುತ್ತೆ, ಈಗ ಏನು ಒಳ್ಳೇದಾಗ್ತಿದೆ ಅನ್ನೋದಕ್ಕೆ ಗಮನಕೊಡಿ. ಸಹೋದರಿ ಕ್ರಿಸ್ಟಿನಾ ಅವ್ರ ಉದಾಹರಣೆ ನೋಡಿ. ಅವರು ರೊಮೇನಿಯದವರು. ಆದ್ರೆ ಜಪಾನ್‌ನಲ್ಲಿ ಇದ್ದಾರೆ. ಜಪಾನ್‌ನಲ್ಲಿ ಇನ್ಮುಂದೆ ಇಂಗ್ಲಿಷ್‌ ಸಭೆ ಇರಲ್ಲ ಅಂತ ಗೊತ್ತಾದಾಗ ಅವ್ರಿಗೆ ತುಂಬ ಬೇಜಾರಾಯ್ತು. ಹಾಗಂತ ಅವರು ಅದ್ರ ಬಗ್ಗೆನೇ ಯೋಚ್ನೆ ಮಾಡ್ಕೊಂಡು ಕೂತ್ಕೊಳ್ಳಲಿಲ್ಲ. ಅಲ್ಲಿದ್ದ ಜಪಾನೀಸ್‌ ಭಾಷೆಯ ಸಭೆಗೆ ಹೋಗೋಕೆ ನಿರ್ಧಾರ ಮಾಡಿದ್ರು. ಆ ಭಾಷೆಯಲ್ಲಿ ಸಿಹಿಸುದ್ದಿ ಸಾರಿದ್ರು. ಆ ಭಾಷೆನ ಕಲಿಯೋಕೂ ಅವರು ತುಂಬ ಪ್ರಯತ್ನ ಹಾಕಿದ್ರು. ಅವ್ರ ಜೊತೆ ಮುಂಚೆ ಕೆಲಸ ಮಾಡ್ತಿದ್ದ ಮಹಿಳೆ ಹತ್ರ ‘ಬೈಬಲನ್ನ ಮತ್ತು ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯನ್ನ ಬಳಸಿ ನನಗೆ ಆ ಭಾಷೆನ ಕಲಿಸ್ತೀಯ’ ಅಂತ ಕೇಳಿದ್ರು. ಅದಕ್ಕೆ ಆ ಮಹಿಳೆ ಒಪ್ಕೊಂಡ್ರು. ಇದ್ರಿಂದ ಕ್ರಿಸ್ಟಿನಾ ಆ ಭಾಷೆಯಲ್ಲಿ ಮಾತಾಡೋದನ್ನ ಕಲಿತ್ರು. ಅಷ್ಟೇ ಅಲ್ಲ, ಆ ಮಹಿಳೆ ಕೂಡ ಬೈಬಲ್‌ ಕಲಿಯೋಕೆ ಮುಂದೆ ಬಂದ್ರು. ಇದ್ರಿಂದ ನಮಗೇನು ಗೊತ್ತಾಗುತ್ತೆ? ಪರಿಸ್ಥಿತಿ ಬದಲಾದಾಗ ನಾವು ಈಗೇನು ಒಳ್ಳೇದಾಗ್ತಿದೆ, ಮುಂದೆ ಏನು ಒಳ್ಳೇದಾಗುತ್ತೆ ಅನ್ನೋದ್ರ ಕಡೆ ಗಮನ ಕೊಡಬೇಕು. ಆಗ ನಾವು ಅಂದ್ಕೊಂಡೇ ಇರಲ್ಲ, ಅಂಥ ಆಶೀರ್ವಾದಗಳು ಸಿಗುತ್ತೆ.

11. ಹಣಕಾಸಿನ ಸಮಸ್ಯೆ ಬಂದಾಗ ಒಬ್ಬ ದಂಪತಿ ಹೇಗೆ ಹೊಂದ್ಕೊಂಡ್ರು?

11 ಬೇರೆಯವ್ರಿಗೆ ಸಹಾಯ ಮಾಡಿ. ಒಬ್ಬ ದಂಪತಿ ಇದ್ದ ದೇಶದಲ್ಲಿ ನಮ್ಮ ಕೆಲಸಕ್ಕೆ ನಿಷೇಧ ಇತ್ತು. ಆ ದೇಶದ ಆರ್ಥಿಕ ಪರಿಸ್ಥಿತಿನೂ ನೆಲಕಚ್ಚಿತ್ತು. ಇದ್ರಿಂದ ಆ ದಂಪತಿಗೆ ಬರ್ತಿದ್ದ ಆದಾಯ ತುಂಬ ಕಡಿಮೆ ಆಯ್ತು. ಆ ಪರಿಸ್ಥಿತಿಗೆ ಅವರು ಹೇಗೆ ಹೊಂದ್ಕೊಂಡ್ರು? ಮೊದ್ಲು ಅವರು ಕಡಿಮೆ ಖರ್ಚಲ್ಲಿ ಜೀವನ ಮಾಡೋಕೆ ತೀರ್ಮಾನ ಮಾಡಿದ್ರು. ಆಮೇಲೆ ತಮಗಿರೋ ತೊಂದ್ರೆಗಳ ಬಗ್ಗೆನೇ ಯೋಚ್ನೆ ಮಾಡ್ತಾ ಇರೋ ಬದ್ಲು ಬೇರೆಯವ್ರಿಗೆ ಸಹಾಯ ಮಾಡಬೇಕು ಅಂತ ಅಂದ್ಕೊಂಡ್ರು. ಅದಕ್ಕೇ ಅವರು ಇನ್ನೂ ಜಾಸ್ತಿ ಸಿಹಿಸುದ್ದಿ ಸಾರಿದ್ರು. (ಅ. ಕಾ. 20:35) “ನಾವು ಈ ತರ ದೇವರ ಸೇವೆ ಮಾಡೋದ್ರಲ್ಲಿ ಬಿಜಿ಼ಯಾಗಿದ್ರೆ ಚಿಂತೆ ಮಾಡ್ತಾ ಕೂರೋಕೆ ಟೈಮೇ ಇರಲ್ಲ” ಅಂತ ಆ ಸಹೋದರ ಹೇಳ್ತಾರೆ. ಇದ್ರಿಂದ ನಾವೇನು ಕಲಿತೀವಿ? ಪರಿಸ್ಥಿತಿ ಬದಲಾದಾಗ ನಾವು ಬೇರೆಯವ್ರಿಗೆ ಸಹಾಯ ಮಾಡೋಕೆ ಗಮನಕೊಡಬೇಕು. ಅದ್ರಲ್ಲೂ ಸಿಹಿಸುದ್ದಿ ಸಾರಬೇಕು.

12. ಅಪೊಸ್ತಲ ಪೌಲನಿಂದ ನಾವೇನು ಕಲಿತೀವಿ?

12 ನಾವು ಸಿಹಿಸುದ್ದಿ ಸಾರುವಾಗ ಬೇರೆಬೇರೆ ತರದ ಜನ್ರು ಸಿಗ್ತಾರೆ. ಅವ್ರ ಸ್ವಭಾವ, ಅವರು ನಂಬೋ ವಿಚಾರಗಳು ಬೇರೆ ಬೇರೆಯಾಗಿರುತ್ತೆ. ಹಾಗಾಗಿ ಅವ್ರಿಗೆ ತಕ್ಕ ಹಾಗೆ ನಾವು ಮಾತಾಡಬೇಕು. ಇದನ್ನೇ ಅಪೊಸ್ತಲ ಪೌಲ ಮಾಡಿದ. ಅವನನ್ನ ಯೇಸು “ಬೇರೆ ಜನಾಂಗಗಳವರಿಗೆ ಅಪೊಸ್ತಲನಾಗಿ” ನೇಮಿಸಿದನು. (ರೋಮ. 11:13) ಈ ಜವಾಬ್ದಾರಿ ಸಿಕ್ಕಿದಾಗ ಪೌಲ ಯೆಹೂದ್ಯರಿಗೆ, ಗ್ರೀಕರಿಗೆ, ವಿದ್ಯಾವಂತರಿಗೆ, ಹಳ್ಳಿ ಜನ್ರಿಗೆ, ಸರ್ಕಾರಿ ಅಧಿಕಾರಿಗಳಿಗೆ ಮತ್ತು ರಾಜರಿಗೆ ಸಾರಿದ. ಇವ್ರ ಮನಸ್ಸು ಮುಟ್ಟೋಕೆ ಅವನು “ಎಲ್ಲ ತರದ ಜನ್ರಿಗೆ ಎಲ್ಲ” ಆದ. (1 ಕೊರಿಂ. 9:19-23) ಅದಕ್ಕೋಸ್ಕರ ಅವನು ಜನ್ರ ಸಂಸ್ಕೃತಿ, ಹಿನ್ನೆಲೆ, ನಂಬಿಕೆಗಳೇನು ಅಂತ ಚೆನ್ನಾಗಿ ತಿಳ್ಕೊಂಡ. ಆಮೇಲೆ ಅದಕ್ಕೆ ತಕ್ಕ ಹಾಗೆ ಸಿಹಿಸುದ್ದಿ ಸಾರಿದ. ಇದ್ರಿಂದ ನಮಗೇನು ಗೊತ್ತಾಗುತ್ತೆ? ಜನ್ರ ಹಿನ್ನೆಲೆ ಏನು ಅಂತ ನಾವು ಮೊದ್ಲು ತಿಳ್ಕೊಬೇಕು. ಆಮೇಲೆ ಅದಕ್ಕೆ ತಕ್ಕ ಹಾಗೆ ಅವ್ರ ಹತ್ರ ಮಾತಾಡಬೇಕು. ಆಗ ನಾವು ಅವ್ರ ಮನಸ್ಸು ಮುಟ್ಟೋಕೆ ಆಗುತ್ತೆ.

ಬೇರೆಯವ್ರಿಗೆ ಏನಿಷ್ಟ ಅನ್ನೋದನ್ನೂ ನೋಡಿ

ನಮ್ಮಲ್ಲಿ ಬಿಟ್ಕೊಡೋ ಗುಣ ಇದ್ರೆ ಬೇರೆಯವ್ರಿಗೆ ಏನಿಷ್ಟ ಅನ್ನೋದನ್ನೂ ನೋಡ್ತೀವಿ (ಪ್ಯಾರ 13 ನೋಡಿ)

13. ನಾವು ಬೇರೆಯವ್ರಿಗೆ ಏನಿಷ್ಟನೋ ಅದನ್ನ ಮಾಡೋಕೆ ಬಿಟ್ಕೊಟ್ಟಾಗ ಏನು ಒಳ್ಳೇದಾಗುತ್ತೆ? (1 ಕೊರಿಂಥ 8:9)

13 ‘ನಾನು ಹೇಳಿದ್ದೇ ನಡಿಬೇಕು’ ಅನ್ನೋ ಸ್ವಭಾವ ನಮ್ಮಲ್ಲಿ ಇಲ್ಲಾಂದ್ರೆ ಬೇರೆಯವ್ರಿಗೆ ಏನಿಷ್ಟನೋ ಅದನ್ನ ಮಾಡೋಕೆ ಬಿಟ್ಕೊಡ್ತೀವಿ. ಉದಾಹರಣೆಗೆ, ಕೆಲವು ಸಹೋದರಿಯರಿಗೆ ಮೇಕಪ್‌ ಹಾಕೋಕೆ ಇಷ್ಟ ಆಗುತ್ತೆ. ಆದ್ರೆ ಇನ್ನು ಕೆಲವ್ರಿಗೆ ಇಷ್ಟ ಆಗಲ್ಲ. ಕೆಲವು ಕ್ರೈಸ್ತರಿಗೆ ಸ್ವಲ್ಪ ಕುಡಿಯೋದ್ರಲ್ಲಿ ತಪ್ಪೇನಿಲ್ಲ ಅಂತ ಅನಿಸುತ್ತೆ. ಇನ್ನು ಕೆಲವ್ರಿಗೆ ಕುಡಿಯೋದು ತಪ್ಪು ಅಂತ ಅನಿಸುತ್ತೆ. ಅಷ್ಟೇ ಅಲ್ಲ, ಒಬ್ಬೊಬ್ರು ಒಂದೊಂದು ತರ ಚಿಕಿತ್ಸೆ ಪಡ್ಕೊಳ್ಳೋಕೆ ಇಷ್ಟಪಡ್ತಾರೆ. ಇಂಥ ಸಂದರ್ಭದಲ್ಲಿ ಬೇರೆಯವರು ನಮಗಿಷ್ಟ ಆಗಿದ್ದನ್ನೇ ಮಾಡಬೇಕು ಅಂತ ಒತ್ತಾಯ ಮಾಡಬಾರದು. ಹಾಗೆ ಮಾಡಿದ್ರೆ ಅವ್ರನ್ನ ಎಡವಿಸ್ತೀವಿ. ಸಭೇಲಿರೋ ಒಗ್ಗಟ್ಟೂ ಹಾಳಾಗುತ್ತೆ. ಈ ತರ ಮಾಡೋಕೆ ನಮಗ್ಯಾರಿಗೂ ಇಷ್ಟ ಇಲ್ಲ ಅಲ್ವಾ? (1 ಕೊರಿಂಥ 8:9 ಓದಿ; 10:23, 24) ನಾವೀಗ ಎರಡು ಸನ್ನಿವೇಶದಲ್ಲಿ ಹೇಗೆ ಬೈಬಲ್‌ ತತ್ವಗಳನ್ನ ಪಾಲಿಸೋದು ಮತ್ತು ಸಭೇಲಿ ಎಲ್ರ ಜೊತೆ ಚೆನ್ನಾಗಿರೋದು ಅಂತ ನೋಡೋಣ.

ನಮ್ಮಲ್ಲಿ ಬಿಟ್ಕೊಡೋ ಗುಣ ಇದ್ರೆ ಬೇರೆಯವ್ರಿಗೆ ಏನಿಷ್ಟ ಅನ್ನೋದನ್ನೂ ನೋಡ್ತೀವಿ (ಪ್ಯಾರ 14 ನೋಡಿ)

14. ಬಟ್ಟೆ ಮತ್ತು ಹೇರ್‌ಸ್ಟೈಲ್‌ ವಿಷ್ಯದಲ್ಲಿ ನಾವು ಏನನ್ನ ಮನಸ್ಸಲ್ಲಿ ಇಡಬೇಕು?

14 ಬಟ್ಟೆ ಮತ್ತು ಹೇರ್‌ಸ್ಟೈಲ್‌. ನಾವು ಯಾವ ಬಟ್ಟೆ ಹಾಕಬೇಕು, ಹಾಕಬಾರದು ಅಂತ ಯೆಹೋವ ಬೈಬಲಲ್ಲಿ ಹೇಳಿಲ್ಲ. ಆದ್ರೆ ಅದಕ್ಕೆ ತತ್ವಗಳನ್ನ ಕೊಟ್ಟಿದ್ದಾನೆ. ನಾವು ಹಾಕೋ ಬಟ್ಟೆ ಆತನಿಗೆ ಗೌರವ ತರೋ ಹಾಗೆ ಇರಬೇಕು. ನಾವು ಶೋಕಿ ಮಾಡ್ತಿದ್ದೀವಿ ಅಂತ ಬೇರೆಯವ್ರಿಗೆ ಅನಿಸಬಾರದು. ನಮಗೆ “ಬುದ್ಧಿ ಇದೆ,” ಬೇರೆಯವ್ರಿಗೋಸ್ಕರ ನಾವು ಮಣೀತೀವಿ ಅಂತ ನಾವು ತೋರಿಸಬೇಕು. (1 ತಿಮೊ. 2:9, 10; 1 ಪೇತ್ರ 3:3) ಹಾಗಾಗಿ ಎಲ್ಲರ ಗಮನ ನಮ್ಮ ಮೇಲೆ ಬರೋ ತರ ನಾವು ಬಟ್ಟೆ ಹಾಕಲ್ಲ. ಬೇರೆಯವರು ಯಾವ ತರ ಬಟ್ಟೆ ಹಾಕಬೇಕು, ಹೇರ್‌ಸ್ಟೈಲ್‌ ಮಾಡಬೇಕು ಅನ್ನೋ ವಿಷ್ಯದಲ್ಲಿ ಹಿರಿಯರು ರೂಲ್ಸ್‌ ಮಾಡದೇ ಇರೋಕೂ ಈ ಬೈಬಲ್‌ ತತ್ವಗಳು ಸಹಾಯ ಮಾಡುತ್ತೆ. ಒಂದು ಸಭೇಲಿ ಏನಾಯ್ತು ಅಂತ ನೋಡಿ. ಅಲ್ಲಿದ್ದ ಯುವ ಸಹೋದರರು ಆ ಸಮಯದಲ್ಲಿ ಫೇಮಸ್‌ ಆಗಿದ್ದ ಹೇರ್‌ಸ್ಟೈಲನ್ನ ಮಾಡಿದ್ರು. ಅವರು ಕೂದಲನ್ನ ಚಿಕ್ಕದಾಗಿ ಕಟ್‌ ಮಾಡಿ ಕೆದರಿಸಿಕೊಂಡಿದ್ರು. ಆಗ ಒಬ್ಬ ಸರ್ಕಿಟ್‌ ಸಹೋದರ ಅಲ್ಲಿನ ಹಿರಿಯರಿಗೆ ಸಹಾಯ ಮಾಡಿದ್ರು. “ನೀವು ಸ್ಟೇಜ್‌ಗೆ ಹೋದಾಗ ಜನ್ರ ಗಮನ ನೀವು ಹೇಳೋದ್ರ ಮೇಲಲ್ಲ, ನಿಮ್ಮ ಮೇಲೆ ಹೋಗ್ತಿದೆ ಅಂದ್ರೆ ನಿಮ್ಮ ಬಟ್ಟೆ ಅಥವಾ ಹೇರ್‌ಸ್ಟೈಲ್‌ನಲ್ಲಿ ಏನೋ ಪ್ರಾಬ್ಲಮ್‌ ಇದೆ ಅಂತ ಅರ್ಥ” ಅಂತ ಹೇಳಿ ಅಂದ್ರು. ಹೀಗೆ ಆ ಹಿರಿಯರು ರೂಲ್ಸ್‌ ಮಾಡದೇನೇ ಆ ಸಹೋದರರಿಗೆ ಸಹಾಯ ಮಾಡಿದ್ರು. d

ನಮ್ಮಲ್ಲಿ ಬಿಟ್ಕೊಡೋ ಗುಣ ಇದ್ರೆ ಬೇರೆಯವ್ರಿಗೆ ಏನಿಷ್ಟ ಅನ್ನೋದನ್ನೂ ನೋಡ್ತೀವಿ (ಪ್ಯಾರ 15 ನೋಡಿ)

15. ನಾವು ಚಿಕಿತ್ಸೆ ತಗೊಳ್ಳುವಾಗ ಬೈಬಲಲ್ಲಿರೋ ಯಾವ ನಿಯಮಗಳನ್ನ, ತತ್ವಗಳನ್ನ ಮನಸ್ಸಲ್ಲಿಡಬೇಕು? (ರೋಮನ್ನರಿಗೆ 14:5)

15 ಚಿಕಿತ್ಸೆ. ಪ್ರತಿಯೊಬ್ಬ ಕ್ರೈಸ್ತನು ತನ್ನ ಆರೋಗ್ಯನ ಹೇಗೆ ನೋಡ್ಕೊಬೇಕು ಅಂತ ಅವನೇ ತೀರ್ಮಾನ ಮಾಡಬೇಕು. (ಗಲಾ. 6:5) ಯಾಕಂದ್ರೆ, ನಮ್ಮ ಆರೋಗ್ಯಕ್ಕೆ ಸಂಬಂಧಪಟ್ಟ ನಿಯಮಗಳು ಬೈಬಲಲ್ಲಿ ಕೆಲವು ಮಾತ್ರ ಇದೆ. ಮಾಟಮಂತ್ರದಿಂದ ದೂರ ಇರಬೇಕು ಮತ್ತು ರಕ್ತ ತಗೊಳ್ಳಬಾರದು ಅಂತ ಬೈಬಲ್‌ ಹೇಳುತ್ತೆ. ಈ ಎರಡು ರೀತಿಯ ಚಿಕಿತ್ಸೆಗಳನ್ನ ನಾವು ತಗೊಳ್ಳಲೇಬಾರದು. (ಅ. ಕಾ. 15:20; ಗಲಾ. 5:19, 20) ಆದ್ರೆ ಇದನ್ನ ಬಿಟ್ಟು ಬೇರೆ ಯಾವ ತರದ ಚಿಕಿತ್ಸೆ ತಗೊಳ್ಳಬೇಕು ಅನ್ನೋದು ನಮಗೇ ಬಿಟ್ಟಿದ್ದು. ಕೆಲವ್ರಿಗೆ ಡಾಕ್ಟರ್‌ ಹತ್ರಾನೇ ಹೋಗಿ ಚಿಕಿತ್ಸೆ ಪಡಿಯೋದು ಸರಿ ಅನಿಸುತ್ತೆ. ಇನ್ನು ಕೆಲವ್ರಿಗೆ, ಬೇರೆ ರೀತಿ ಚಿಕಿತ್ಸೆ ಪಡಿಯೋದು ಸರಿ ಅನಿಸುತ್ತೆ. ನಮಗೆ ಸರಿ ಅನಿಸಿದ್ದನ್ನೇ ಬೇರೆಯವ್ರೂ ಮಾಡಬೇಕು ಅಂತ ನಾವು ಒತ್ತಾಯ ಮಾಡಬಾರದು. ಅವ್ರಿಗೂ ಸ್ವಂತ ತೀರ್ಮಾನ ಮಾಡೋ ಹಕ್ಕಿದೆ. ಅದನ್ನ ನಾವು ಗೌರವಿಸಬೇಕು. ನಾವು ನಾಲ್ಕು ವಿಷ್ಯಗಳನ್ನ ಯಾವಾಗ್ಲೂ ಮನಸ್ಸಲ್ಲಿಡಬೇಕು. (1) ನಮ್ಮ ಕಾಯಿಲೆ ಪೂರ್ತಿಯಾಗಿ, ಶಾಶ್ವತವಾಗಿ ವಾಸಿಯಾಗೋದು ದೇವರ ಆಳ್ವಿಕೆಯಲ್ಲೇ. (ಯೆಶಾ. 33:24) (2) ಪ್ರತಿಯೊಬ್ರಿಗೂ ಅವರು ತಗೊಳ್ಳೋ ಚಿಕಿತ್ಸೆ “ಸರಿ ಅನ್ನೋ ದೃಢಭರವಸೆ” ಇರಬೇಕು. (ರೋಮನ್ನರಿಗೆ 14:5 ಓದಿ.) (3) ಬೇರೆಯವರು ಮಾಡಿರೋ ತೀರ್ಮಾನವನ್ನ ನಾವು ಪ್ರಶ್ನೆ ಮಾಡಬಾರದು, ಅವರನ್ನ ಎಡವಿಸೋ ತರ ನಾವು ಏನೂ ಮಾಡಬಾರದು. (ರೋಮ. 14:13) (4) ನಮಗೆ ಏನಿಷ್ಟ, ಏನಿಷ್ಟ ಇಲ್ಲ ಅನ್ನೋದು ಮುಖ್ಯ ಅಲ್ಲ. ಸಹೋದರ ಸಹೋದರಿಯರನ್ನ ಪ್ರೀತಿಸೋದು ಮತ್ತು ಸಭೆಯ ಒಗ್ಗಟ್ಟು ಮುಖ್ಯ. (ರೋಮ. 14:15, 19, 20) ಇದನ್ನ ನಾವು ಮನಸ್ಸಲ್ಲಿಟ್ರೆ ಸಹೋದರ ಸಹೋದರಿಯರ ಜೊತೆ ಚೆನ್ನಾಗಿ ಇರ್ತೀವಿ, ಸಭೆಯಲ್ಲಿ ಒಗ್ಗಟ್ಟೂ ಇರುತ್ತೆ.

ನಮ್ಮಲ್ಲಿ ಬಿಟ್ಕೊಡೋ ಗುಣ ಇದ್ರೆ ಬೇರೆಯವ್ರಿಗೆ ಏನಿಷ್ಟ ಅನ್ನೋದನ್ನೂ ನೋಡ್ತೀವಿ (ಪ್ಯಾರ 16 ನೋಡಿ)

16. ಹಿರಿಯರು ಹೇಗೆ ಬಿಟ್ಕೊಡೋದ್ರಲ್ಲಿ ಮಾದರಿ ಆಗಿರಬಹುದು? (ಚಿತ್ರಗಳನ್ನೂ ನೋಡಿ.)

16 ಬೇರೆಯವ್ರಿಗೆ ಬಿಟ್ಕೊಡೋ ವಿಷ್ಯದಲ್ಲಿ ಹಿರಿಯರು ಒಳ್ಳೇ ಮಾದರಿ ಇಡಬೇಕು. (1 ತಿಮೊ. 3:2, 3) ಹೇಗೆ? ಒಬ್ಬ ಹಿರಿಯ, ಹಿರಿಯರ ಮಂಡಲಿಯಲ್ಲಿ ಇರೋ ಎಲ್ಲಾ ಹಿರಿಯರಿಗಿಂತ ದೊಡ್ಡವರಾಗಿರಬಹುದು. ಹಾಗಂತ ತಾನು ಹೇಳಿದ್ದನ್ನೇ ಉಳಿದವ್ರೆಲ್ಲ ಕೇಳಬೇಕು ಅಂತ ಅಂದ್ಕೊಬಾರದು. ಸರಿಯಾದ ತೀರ್ಮಾನ ಮಾಡೋಕೆ ಅಲ್ಲಿರೋ ಯಾವ ಹಿರಿಯನಿಗಾದ್ರೂ ಪವಿತ್ರಶಕ್ತಿ ಸಹಾಯ ಮಾಡಬಹುದು ಅನ್ನೋದನ್ನ ಅವರು ಮನಸ್ಸಲ್ಲಿ ಇಡಬೇಕು. ತಮಗೆ ಇಷ್ಟ ಇಲ್ಲದಿದ್ರೂ ಹೆಚ್ಚಿನ ಹಿರಿಯರು ಒಂದು ತೀರ್ಮಾನಕ್ಕೆ ಬಂದಾಗ ಅದು ಬೈಬಲ್‌ ನಿಯಮನ ಮೀರದಿದ್ರೆ ಅದಕ್ಕೆ ಮನಸಾರೆ ಸಹಕಾರ ಕೊಡಬೇಕು.

ಬಿಟ್ಕೊಡೋದ್ರಿಂದ ಸಿಗೋ ಪ್ರಯೋಜನಗಳು

17. ಬಿಟ್ಕೊಡೋ ಸ್ವಭಾವ ಇದ್ರೆ ಯಾವೆಲ್ಲ ಪ್ರಯೋಜನ ಸಿಗುತ್ತೆ?

17 ನಮ್ಮಲ್ಲಿ ಬಿಟ್ಕೊಡೋ ಗುಣ ಇದ್ರೆ ತುಂಬ ಪ್ರಯೋಜನಗಳು ಸಿಗುತ್ತೆ. ನಾವು ಸಹೋದರ ಸಹೋದರಿಯರ ಜೊತೆ ಚೆನ್ನಾಗಿರ್ತೀವಿ. ಸಭೆಯಲ್ಲಿ ಎಲ್ರ ಜೊತೆ ಚೆನ್ನಾಗಿ ಇರ್ತೀವಿ. ಅವ್ರ ಸ್ವಭಾವಗಳು ಬೇರೆ ಬೇರೆ ಇದ್ರೂ ನಾವು ಅವ್ರ ಜೊತೆ ಹೊಂದ್ಕೊಂಡು ಹೋಗ್ತೀವಿ. ಈ ತರ ಎಲ್ರೂ ಸೇರಿ ಯೆಹೋವನನ್ನ ಆರಾಧನೆ ಮಾಡೋದನ್ನ ನೋಡಿದಾಗ ಖುಷಿ ಆಗುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ನಾವು ಯೆಹೋವ ದೇವರ ತರಾನೇ ಬಿಟ್ಕೊಡೋ ಸ್ವಭಾವ ಬೆಳೆಸ್ಕೊಂಡಿದ್ದೀವಿ ಅನ್ನೋ ತೃಪ್ತಿ ಇರುತ್ತೆ.

ಗೀತೆ 121 ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ

a ಯೆಹೋವ ಮತ್ತು ಯೇಸು ‘ಯಾವಾಗ್ಲೂ ನಾನು ಹೇಳಿದ್ದೇ ಆಗಬೇಕು’ ಅಂತ ಹಠ ಮಾಡಲ್ಲ. ಅವರು ಬಿಟ್ಕೊಡ್ತಾರೆ ಅಥವಾ ಮಣೀತಾರೆ. ನಮ್ಮಲ್ಲೂ ಈ ಗುಣ ಇರಬೇಕು ಅಂತ ಅವರು ಆಸೆಪಡ್ತಾರೆ. ಈ ಗುಣ ನಮ್ಮಲ್ಲಿದ್ರೆ ಏನೇ ಸಮಸ್ಯೆ ಬಂದ್ರೂ ಅಂದ್ರೆ ಆರೋಗ್ಯದ ಸಮಸ್ಯೆ, ಹಣಕಾಸಿನ ಸಮಸ್ಯೆ ಬಂದ್ರೂ ನಾವು ಪರಿಸ್ಥಿತಿಗೆ ತಕ್ಕ ಹಾಗೆ ಹೊಂದ್ಕೊಳ್ತೀವಿ. ಅಷ್ಟೇ ಅಲ್ಲ, ಸಭೆಯಲ್ಲಿ ಶಾಂತಿ, ಒಗ್ಗಟ್ಟು ಹಾಳಾಗದೇ ಇರೋ ತರ ನೋಡ್ಕೊಳ್ತೀವಿ.

b 2016ರ ಎಚ್ಚರ! ನಂ. 4ರಲ್ಲಿ “ಬದಲಾವಣೆಗಳಿಗೆ ಹೊಂದಿಕೊಂಡು ಹೋಗುವುದು ಹೇಗೆ?” ಅನ್ನೋ ಲೇಖನ ನೋಡಿ.

c ಸಹೋದರ ದಿಮಿತ್ರಿ ಮಿಖಾಯ್ಲೋ ಅವರ ಸಂದರ್ಶನ ಅನ್ನೋ ವಿಡಿಯೋ ನೋಡಿ. ಇದು ಮಾರ್ಚ್‌-ಏಪ್ರಿಲ್‌ 2021ರ ನಮ್ಮ ಕ್ರೈಸ್ತ ಜೀವನ ಮತ್ತು ಸೇವೆಕೂಟದ ಕೈಪಿಡಿಯ “ಹಿಂಸೆನ ಯೆಹೋವನು ಸಾಕ್ಷಿ ಕೊಡೋ ಅವಕಾಶವಾಗಿ ಬದಲಾಯಿಸಿದ” ಅನ್ನೋ ಲೇಖನದಲ್ಲಿತ್ತು.

d ನಮ್ಮ ಬಟ್ಟೆ ಮತ್ತು ಹೇರ್‌ಸ್ಟೈಲ್‌ ಹೇಗಿರಬೇಕು ಅನ್ನೋ ವಿಷ್ಯದ ಬಗ್ಗೆ ಇನ್ನೂ ಜಾಸ್ತಿ ತಿಳ್ಕೊಳ್ಳೋಕೆ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ 52ನೇ ಪಾಠ ನೋಡಿ.