ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ವೈಯಕ್ತಿಕ ಆಸಕ್ತಿಯಿಂದ ಸಿಕ್ಕಿದ ಆಶೀರ್ವಾದಗಳು

ವೈಯಕ್ತಿಕ ಆಸಕ್ತಿಯಿಂದ ಸಿಕ್ಕಿದ ಆಶೀರ್ವಾದಗಳು

ಅಮ್ಮ ಮತ್ತು ತಂಗಿ ಪ್ಯಾಟ್‌ ಜೊತೆ 1948ರಲ್ಲಿ

“ಆ್ಯಂಗ್ಲಿಕನ್‌ ಚರ್ಚ್‌ ಸತ್ಯ ಕಲಿಸಲ್ಲ. ಅದನ್ನ ನೀನೇ ಹುಡ್ಕೊಬೇಕು” ಅಂತ ನಮ್ಮ ಅಜ್ಜಿ ಹೇಳ್ದಾಗ ನಮ್ಮಮ್ಮ ಸತ್ಯ ಧರ್ಮ ಯಾವುದು ಅಂತ ಹುಡ್ಕೋಕೆ ಶುರು ಮಾಡಿದ್ರು. ಆದ್ರೆ ಯೆಹೋವನ ಸಾಕ್ಷಿಗಳಂದ್ರೆ ನಮ್ಮಮ್ಮನಿಗೆ ಆಗ್ತಿರಲಿಲ್ಲ, ಅದಕ್ಕೆ ನಾವು ಕೆನಡದ ಟೊರಾಂಟೊದಲ್ಲಿದ್ದಾಗ ಯಾರಾದ್ರೂ ಯೆಹೋವನ ಸಾಕ್ಷಿಗಳು ಬಂದ್ರೆ ನೀನು ಬಚ್ಚಿಟ್ಕೊ ಅಂತ ಅಮ್ಮ ಹೇಳ್ತಿದ್ರು. ಆದ್ರೆ 1950ರಲ್ಲಿ, ನಮ್ಮಮ್ಮನ ಕೊನೇ ತಂಗಿ ಸಾಕ್ಷಿಗಳ ಜೊತೆ ಬೈಬಲ್‌ ಕಲಿಯೋಕೆ ಶುರು ಮಾಡಿದ್ರು. ಅವ್ರ ಜೊತೆ ಅಮ್ಮನೂ ಕಲಿಯೋಕೆ ಶುರು ಮಾಡಿದ್ರು, ಆಮೇಲೆ ಅವ್ರಿಬ್ರೂ ದೀಕ್ಷಾಸ್ನಾನ ತಗೊಂಡ್ರು.

ಕೆನಡದಲ್ಲಿದ್ದ ಲೋಕಲ್‌ ಯುನೈಟೆಡ್‌ ಚರ್ಚಲ್ಲಿ ನಮ್ಮಪ್ಪ ಪಾಸ್ಟರ್‌ ಆಗಿದ್ರು. ಹಾಗಾಗಿ ಪ್ರತಿವಾರ ನನ್ನ ಮತ್ತು ನನ್ನ ತಂಗಿನ ಸಂಡೇ ಸ್ಕೂಲಿಗೆ ಕಳಿಸ್ತಿದ್ರು. ಆಮೇಲೆ 11 ಗಂಟೆಗೆ ನಾವು ಚರ್ಚಿಗೆ ಹೋಗ್ತಿದ್ವಿ. ಅಲ್ಲಿಂದ ಬಂದು ಮಧ್ಯಾಹ್ನ ಅಮ್ಮನ ಜೊತೆ ರಾಜ್ಯ ಸಭಾಗೃಹಕ್ಕೆ ಹೋಗ್ತಿದ್ವಿ. ಇದ್ರಿಂದ ಈ ಎರಡು ಧರ್ಮಗಳಲ್ಲೂ ಎಷ್ಟು ವ್ಯತ್ಯಾಸ ಇದೆ ಅಂತ ಕಂಡುಹಿಡಿಯೋಕೆ ಆಯ್ತು.

ದೈವಿಕ ಚಿತ್ತ ಅನ್ನೋ ಅಂತಾರಾಷ್ಟ್ರೀಯ ಸಮ್ಮೇಳನ ಬ್ರದರ್‌ ಹಚಸನ್‌ ಕುಟುಂಬದವರ ಜೊತೆ 1958ರಲ್ಲಿ

ಅಮ್ಮ ಬೈಬಲಿಂದ ಕಲಿತಿದ್ದನ್ನ ತನ್ನ ಸ್ನೇಹಿತರಾದ ಬಾಬ್‌, ಮೆರಿಯನ್‌ ಮತ್ತು ಹಚಸನ್‌ಗೆ ಹೇಳಿದ್ರು. ಆಮೇಲೆ ಅವ್ರೂ ಯೆಹೋವನ ಸಾಕ್ಷಿಗಳಾದ್ರು. 1958ರಲ್ಲಿ, ಹಚಸನ್‌ ತಮ್ಮ ಮೂರು ಮಕ್ಕಳ ಜೊತೆ ನನ್ನನ್ನೂ ಎಂಟು ದಿನದ “ದೈವಿಕ ಚಿತ್ತ” ಅನ್ನೋ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ನ್ಯೂಯಾರ್ಕಿಗೆ ಕರ್ಕೊಂಡು ಹೋದ್ರು. ಈ ತರ ಕರ್ಕೊಂಡು ಹೋಗೋದು ಸ್ವಲ್ಪ ಕಷ್ಟನೇ. ಆದ್ರೆ ಆ ಸಮ್ಮೇಳನದಲ್ಲಿ ನಾನು ಕಳೆದ ಕ್ಷಣಗಳನ್ನಂತೂ ಇವತ್ತಿನವರೆಗೂ ಮರೆಯೋಕಾಗಲ್ಲ.

ಸೇವೆ ಮಾಡೋಕೆ ಸಹೋದರರಿಂದ ಸಿಕ್ಕ ಸಹಾಯ

ನಂಗೆ ಪ್ರಾಣಿಗಳಂದ್ರೆ ಇಷ್ಟ. ಅದಕ್ಕೆ ನಾನು ಚಿಕ್ಕವನಾಗಿದ್ದಾಗ ನಮ್ಮ ಫಾರ್ಮಲ್ಲಿದ್ದ ಪ್ರಾಣಿಗಳನ್ನ ನೋಡ್ಕೊಂಡು ಅದ್ರ ಜೊತೆ ಆಟ ಆಡ್ತಿದ್ದೆ. ದೊಡ್ಡವನಾದ ಮೇಲೆ ವೆಟರ್ನರಿ ಡಾಕ್ಟರ್‌ ಆಗಬೇಕು ಅಂದ್ಕೊಂಡೆ. ಇದ್ರ ಬಗ್ಗೆ ಅಮ್ಮ ಸಭಾ ಹಿರಿಯರ ಹತ್ರ ಮಾತಾಡಿದ್ರು. ಆಗ ಅವರು, “ನೀನು ಜಾಸ್ತಿ ಓದೋಕಂತ ಯೂನಿವರ್ಸಿಟಿಗೆ ಹೋದ್ರೆ ನಿನ್ನ ಮತ್ತು ಯೆಹೋವನ ಮಧ್ಯೆ ಇರೋ ಸಂಬಂಧ ಏನಾಗುತ್ತೆ? ನಾವೀಗ ‘ಕೊನೇ ದಿನಗಳಲ್ಲಿ’ ಇದ್ದೀವಿ” ಅಂತ ಹೇಳಿದ್ರು. (2 ತಿಮೊ. 3:1) ಆಮೇಲೆ ನಾನು ಯೂನಿವರ್ಸಿಟಿಗೆ ಹೋಗಬಾರದು ಅಂತ ನಿರ್ಧಾರ ಮಾಡ್ದೆ.

ಆದ್ರೆ ಮುಂದೆ ಏನಪ್ಪಾ ಮಾಡೋದು ಅಂತ ಯೋಚ್ನೆ ಮಾಡ್ತಿದ್ದೆ. ಪ್ರತಿ ವಾರಾಂತ್ಯದಲ್ಲಿ ಸೇವೆಗೆ ಹೋಗ್ತಿದ್ದೆ ನಿಜ, ಆದ್ರೆ ಖುಷಿ ಸಿಗ್ತಿರಲಿಲ್ಲ. ಹಾಗಾಗಿ ನಾನೊಬ್ಬ ಪಯನೀಯರ್‌ ಆಗೋಕೆ ಲಾಯಕ್ಕಿಲ್ಲ ಅಂತ ಅನಿಸ್ತಿತ್ತು. ಅದೇ ಟೈಮಿಗೆ ಸತ್ಯದಲ್ಲಿಲ್ಲದ ನಮ್ಮಪ್ಪ ಮತ್ತು ಚಿಕ್ಕಪ್ಪ ಟೊರಾಂಟೊದ ಒಂದು ಇನ್ಷೂರೆನ್ಸ್‌ ಕಂಪೆನಿಗೆ ಕೆಲ್ಸಕ್ಕೆ ಸೇರಿಕೊ ಅಂತ ಒತ್ತಾಯ ಮಾಡಿದ್ರು. ಅದೇ ಕಂಪೆನಿಲಿ ನಮ್ಮ ಚಿಕ್ಕಪ್ಪ ಒಂದು ದೊಡ್ಡ ಪೋಸ್ಟ್‌ನಲ್ಲಿ ಇದ್ದದ್ರಿಂದ ನಾನು ಆ ಕೆಲ್ಸ ಒಪ್ಕೊಂಡೆ.

ಈ ಕಂಪೆನಿಗೋಸ್ಕರ ಹಗಲು-ರಾತ್ರಿ ದುಡ್ದೆ. ಯೆಹೋವನ ಸಾಕ್ಷಿಗಳಲ್ಲದವ್ರ ಜೊತೆ ಜಾಸ್ತಿ ಸಹವಾಸ ಮಾಡೋಕೆ ಶುರು ಮಾಡಿದ್ರಿಂದ ಮೀಟಿಂಗ್‌ ಹೋಗೋದನ್ನ, ಸೇವೆಗೆ ಹೋಗೋದನ್ನೆಲ್ಲಾ ಮಿಸ್‌ ಮಾಡ್ತಿದ್ದೆ. ಈ ಕೆಲಸ ಮಾಡೋವಾಗ ನಾನು ಸತ್ಯದಲ್ಲಿಲ್ಲದ ನನ್ನ ತಾತನ ಜೊತೆ ಇದ್ದೆ. ಆದ್ರೆ ಅವರು ತೀರಿಹೋದ ಮೇಲೆ ಎಲ್ಲಿಗೆ ಹೋಗಬೇಕಂತಾನೇ ಗೊತ್ತಾಗಲಿಲ್ಲ.

ಆಮೇಲೆ 1958ರಲ್ಲಿ, ನನ್ನನ್ನ ಅಧಿವೇಶನಕ್ಕೆ ಕರ್ಕೊಂಡು ಹೋದ ಸಹೋದರ ಮತ್ತು ಸಹೋದರಿ ಹಚಸನ್‌ ‘ನಮ್ಮನೆಗೆ ಬಂದು ಉಳ್ಕೊ’ ಅಂತ ಹೇಳಿದ್ರು. ಅವ್ರಿಬ್ರೂ ನನ್ನನ್ನ ಸ್ವಂತ ಮಗನ ತರ ನೋಡ್ಕೊಂಡ್ರು. ನಂಗೆ ಆಧ್ಯಾತ್ಮಿಕವಾಗಿ ಪ್ರಗತಿ ಮಾಡೋಕೆ ತುಂಬಾ ಸಹಾಯ ಮಾಡಿದ್ರು. ಅವ್ರ ಮಗ ಜಾನ್‌ ಮತ್ತು ನಾನು 1960ರಲ್ಲಿ ದೀಕ್ಷಾಸ್ನಾನ ತಗೊಂಡ್ವಿ. ಆಮೇಲೆ ಜಾನ್‌ ಪಯನೀಯರ್‌ ಸೇವೆ ಶುರು ಮಾಡ್ದ. ಅವನನ್ನ ನೋಡಿ ನಾನೂ ಜಾಸ್ತಿ ಸೇವೆ ಮಾಡಬೇಕು ಅನ್ನೋ ಆಸೆ ಬೆಳೀತು. ನಾನು ಈ ತರ ಪ್ರಗತಿ ಮಾಡ್ತಿದ್ದನ್ನ ನೋಡಿ ಸಹೋದರರು ನನ್ನನ್ನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಮೇಲ್ವಿಚಾರಕನಾಗಿ ಮಾಡಿದ್ರು. a

ಮುತ್ತಿನಂಥ ಸಂಗಾತಿ ಜೊತೆ ಹೊಸ ಬದಲಾವಣೆ

ನಮ್ಮ ಮದುವೆ ದಿನ, 1966

1966ರಲ್ಲಿ, ನಾನು ಪಾಮರ್‌ ಬರ್ಗ್‌ನ ಮದುವೆಯಾದೆ. ಅವಳು ತುಂಬ ಹುರುಪಿನಿಂದ ಸೇವೆ ಮಾಡ್ತಿದ್ದಳು, ಅಗತ್ಯ ಇರೋ ಕಡೆ ಹೋಗಿ ಸೇವೆ ಮಾಡಬೇಕು ಅನ್ನೋದು ಅವಳ ಕನಸಾಗಿತ್ತು. ಆಮೇಲೆ ನಮ್ಮ ಸರ್ಕಿಟ್‌ ಮೇಲ್ವಿಚಾರಕ ಒಂಟಾರಿಯೋದ ಒರಿಲಿಯದಲ್ಲಿರೋ ಸಭೆಗೆ ಹೋಗಿ ಸಹಾಯ ಮಾಡಿ ಅಂತ ನಮ್ಮನ್ನ ಪ್ರೋತ್ಸಾಹಿಸಿದ್ರು. ಅದಕ್ಕೆ ನಾವು ಅಲ್ಲಿಗೆ ಹೋದ್ವಿ.

ಒರಿಲಿಯಗೆ ಹೋದ ಮೇಲೆ ನಾನು ಪಾಮರ್‌ ಜೊತೆ ಪಯನೀಯರಿಂಗ್‌ ಶುರು ಮಾಡ್ಡೆ. ಸೇವೆ ಮಾಡ್ತಾ-ಮಾಡ್ತಾ ಅವಳಲ್ಲಿದ್ದ ಹುರುಪು, ಉತ್ಸಾಹ ನನ್ನಲ್ಲೂ ಬಂತು. ಪಯನೀಯರ್‌ ಸೇವೆಗೋಸ್ಕರ ನನ್ನ ಜೀವನನ ಮುಡಿಪಾಗಿಟ್ಟೆ. ನಾವಿಬ್ರು ಒರಿಲಿಯದಲ್ಲಿರೋ ಒಂದು ದಂಪತಿಗೆ ಸತ್ಯ ಕಲಿಸಿದ್ವಿ. ಅವರು ಬದಲಾವಣೆ ಮಾಡ್ಕೊಂಡು ಸಾಕ್ಷಿಗಳಾದ್ರು. ಈ ತರ ಜನ ಸತ್ಯ ಕಲಿತು ತಮ್ಮನ್ನೇ ಬದಲಾಯಿಸ್ಕೊಳ್ಳುವಾಗ ಆಗೋ ಖುಷಿಯನ್ನ ಮಾತುಗಳಲ್ಲಿ ಹೇಳೋಕಾಗಲ್ಲ.

ಹೊಸ ಭಾಷೆ ಮತ್ತು ಹೊಸ ಯೋಚನೆ

ನಾನು ಟೊರಾಂಟೊಗೆ ಹೋದಾಗ ಬ್ರದರ್‌ ಅರ್ನಾಲ್ಡ್‌ ಮ್ಯಾಕ್‌ನಮಾರ ಅವ್ರನ್ನ ಭೇಟಿ ಮಾಡ್ಡೆ. ಅವರು ಬೆತೆಲ್‌ನಲ್ಲಿ ಕೆಲಸ ಮಾಡ್ತಿದ್ರು. ಅವರು ನನ್ನ ಹತ್ರ, ‘ನಿಮಗೆ ವಿಶೇಷ ಪಯನೀಯರಾಗೋಕೆ ಇಷ್ಟನಾ?’ ಅಂತ ಕೇಳಿದ್ರು. ಆಗ ತಕ್ಷಣ ನಾನು, ‘ಖಂಡಿತ ಬ್ರದರ್‌. ಕ್ವಿಬೆಕ್‌ ಬಿಟ್ಟು ಬೇರೆ ಎಲ್ಲಿ ಕಳಿಸಿದ್ರು ನಾವು ಹೋಗೋಕೆ ರೆಡಿ’ ಅಂತ ಹೇಳ್ದೆ. ನಂಗೆ ಕ್ವಿಬೆಕ್‌ ಬಗ್ಗೆ ಅಷ್ಟು ಒಳ್ಳೆ ಅಭಿಪ್ರಾಯ ಇರಲಿಲ್ಲ. ಯಾಕಂದ್ರೆ ಕೆನಡದ ಇಂಗ್ಲಿಷ್‌ ಮಾತಾಡ್ತಿದ್ದ ಜನ್ರಿಗೂ ಕ್ವಿಬೆಕ್‌ನ ಫ್ರೆಂಚ್‌ ಮಾತಾಡ್ತಿದ್ದ ಜನ್ರಿಗೂ ಆಗ್ತಿರಲಿಲ್ಲ. ಅಲ್ಲದೆ, ಆ ಸಮಯದಲ್ಲಿ ಕ್ವಿಬೆಕ್‌ ಒಂದು ಸ್ವತಂತ್ರ ದೇಶ ಆಗಬೇಕು ಅಂತ ಜನ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡ್ತಿದ್ರು. ಈ ಕಾರಣಗಳಿಂದ ನಾನು ಅಲ್ಲಿಗೆ ಹೋಗೋಕೆ ಇಷ್ಟಪಡಲಿಲ್ಲ.

ಅದಕ್ಕೆ ಅರ್ನಾಲ್ಡ್‌, ‘ಸದ್ಯಕ್ಕೆ ಬ್ರಾಂಚ್‌ ವಿಶೇಷ ಪಯನೀಯರಾಗಿ ಕಳಿಸ್ತಿರೋದು ಕ್ವಿಬೆಕ್‌ಗೆ ಮಾತ್ರ’ ಅಂತ ಹೇಳಿದ್ರು. ಇದನ್ನ ಕೇಳಿದ ಮೇಲೆ, ‘ನಾವು ಹೋಗೋಕೆ ರೆಡಿ’ ಅಂತ ಹೇಳಿದ್ವಿ. ಪಾಮರ್‌ಗೂ ಅಲ್ಲಿ ಹೋಗಿ ಸೇವೆ ಮಾಡಬೇಕು ಅಂತ ಆಸೆ ಇತ್ತು. ಇದು ನಮ್ಮ ಜೀವನದಲ್ಲಿ ಮಾಡಿದ ಒಂದು ಅತ್ಯುತ್ತಮ ನಿರ್ಧಾರ ಅಂತ ಆಮೇಲೆ ನಮಗೆ ಅರ್ಥ ಆಯ್ತು.

ಫ್ರೆಂಚ್‌ ಕಲಿಯೋಕೆ ನಾವು ಐದು ವಾರ ಕ್ಲಾಸ್‌ಗೆ ಹೋದ್ವಿ. ಆಮೇಲೆ ನಾವಿಬ್ಬರು, ಇನ್ನೊಂದು ದಂಪತಿ ಜೊತೆ ಮಾಂಟ್ರಿಯಲ್‌ನಿಂದ ಸುಮಾರು 540 ಕಿಲೋಮೀಟರ್‌ ದೂರದಲ್ಲಿರೋ ರಿಮೊಸ್ಕೀಗೆ ಹೋದ್ವಿ. ನನಗೆ ಫ್ರೆಂಚ್‌ ಭಾಷೆ ಅಷ್ಟು ಚೆನ್ನಾಗಿ ಬರ್ತಿರಲಿಲ್ಲ. ಯಾಕಂದ್ರೆ ಒಂದಿನ ಮೀಟಿಂಗ್‌ನಲ್ಲಿ, ಮುಂದೆ ಬರೋ ಅಧಿವೇಶನಕ್ಕೆ ‘ಆಸ್ಟ್ರೀಯದಿಂದ ಅತಿಥಿಗಳು ಬರ್ತಾರೆ’ ಅಂತ ಹೇಳೋಕೆ ಹೋಗಿ ‘ಆಸ್ಟ್ರಿಚ್‌ ಪಕ್ಷಿಗಳು ಬರ್ತಾರೆ’ ಅಂತ ಹೇಳಿಬಿಟ್ಟಿದ್ದೆ.

ರಿಮೊಸ್ಕೀಯಲ್ಲಿನ “ವೈಟ್‌ಹೌಸ್‌”

ರಿಮೊಸ್ಕೀಯಲ್ಲಿ, ನಮ್ಮ ನಾಲ್ಕು ಜನ್ರ ಜೊತೆ, ಇನ್ನೂ ನಾಲ್ಕು ಸಹೋದರಿಯರು ಸೇರಿಕೊಂಡ್ರು. ಆಗಿನ್ನೂ ಅವ್ರಿಗೆ ಮದುವೆಯಾಗಿರಲಿಲ್ಲ. ಅಷ್ಟೇ ಅಲ್ಲ, ಸಹೋದರ ಹ್ಯೂಬರ್ಡೋ, ಅವ್ರ ಹೆಂಡತಿ ಮತ್ತು ಅವ್ರ ಇಬ್ಬರು ಹೆಣ್ಣು ಮಕ್ಕಳು ಕೂಡ ಸೇವೆ ಮಾಡೋಕೆ ನಮ್ಮ ಜೊತೆ ಸೇರಿಕೊಂಡ್ರು. ಏಳು ಬೆಡ್‌ರೂಮ್‌ ಇದ್ದ ಒಂದು ಮನೆಯನ್ನ ಸಹೋದರ ಹ್ಯೂಬರ್ಡೋ ಬಾಡಿಗೆಗೆ ತಗೊಂಡ್ರು. ಅವ್ರಿಗೆ ಬಾಡಿಗೆ ಕಟ್ಟೋಕೆ ನಾವೆಲ್ರೂ ಸಹಾಯ ಮಾಡ್ತಿದ್ವಿ. ಆ ಮನೆಯನ್ನ ನಾವು ವೈಟ್‌ಹೌಸ್‌ ಅಂತ ಕರೀತಿದ್ವಿ. ಯಾಕಂದ್ರೆ ಅದ್ರಲ್ಲಿ ವೈಟ್‌ ಪಿಲ್ಲರ್ಸ್‌ ಇತ್ತು. ಒಟ್ಟು ಆ ಮನೆಯಲ್ಲಿ ನಾವು 12ರಿಂದ 14 ಜನ ಇದ್ವಿ. ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸೇವೆಯಲ್ಲಿ ನಾನು ಮತ್ತು ಪಾಮರ್‌ ಬಿಜಿ಼ಯಾಗಿ ಇರ್ತಿದ್ವಿ. ಕೆಲವು ಸಲ ಕೊರೆಯೋ ಚಳಿ ಇರ್ತಿತ್ತು, ಆದ್ರೂ ಸಾಯಂಕಾಲ ಕೆಲವ್ರು ಸೇವೆಗೆ ನಮ್ಮ ಜೊತೆ ಬರ್ತಿದ್ರು. ಅವರು ಹಾಕ್ತಿದ್ದ ಪ್ರಯತ್ನಗಳನ್ನ ನೋಡುವಾಗ ನಮಗೆ ತುಂಬ ಖುಷಿ ಆಗ್ತಿತ್ತು.

ಸೇವೆ ಮಾಡ್ತಾ ಮಾಡ್ತಾ ಇಲ್ಲಿದ್ದ ಪಯನೀಯರ್‌ಗಳಿಗೆ ನಾವು ಎಷ್ಟು ಹತ್ರ ಆದ್ವಿ ಅಂದ್ರೆ ನಾವೆಲ್ಲರೂ ಒಂದೇ ಕುಟುಂಬದವರ ತರ ಆಗ್ಬಿಟ್ವಿ. ಕೆಲವು ಸಲ ಹೊರಗಡೆ ಬೆಂಕಿ ಹಚ್ಚಿ ಚಳಿ ಕಾಯಿಸ್ಕೊಳ್ತಿದ್ವಿ, ಬೇರೆ-ಬೇರೆ ತರದ ಅಡುಗೆ ಮಾಡ್ಕೊಂಡು ಬರ್ತಿದ್ವಿ. ನಮ್ಮ ಜೊತೆ ಇದ್ದ ಒಬ್ಬ ಸಹೋದರ ತುಂಬ ಚೆನ್ನಾಗಿ ಸಂಗೀತ ನುಡಿಸ್ತಿದ್ರು. ಹಾಗಾಗಿ ಕೆಲವು ಸಲ ಶನಿವಾರ ರಾತ್ರಿ ನಾವು ಹಾಡು ಹಾಡಿ, ಡಾನ್ಸ್‌ ಮಾಡ್ತಿದ್ವಿ.

ರಿಮೊಸ್ಕೀಯಲ್ಲಿ ತುಂಬಾ ಜನ್ರಿಗೆ ಬೈಬಲ್‌ ಬಗ್ಗೆ ಆಸಕ್ತಿ ಇತ್ತು. ಐದು ವರ್ಷಗಳಲ್ಲಿ, ಎಷ್ಟೋ ಬೈಬಲ್‌ ವಿದ್ಯಾರ್ಥಿಗಳು ಪ್ರಗತಿ ಮಾಡಿ ದೀಕ್ಷಾಸ್ನಾನ ತಗೊಂಡ್ರು. ಸಭೆ ಕೂಡ ಚೆನ್ನಾಗಿ ಬೆಳೆದು ಹತ್ತತ್ರ 35 ಜನ ಪ್ರಚಾರಕರಾದ್ರು. ಇದನ್ನೆಲ್ಲ ನೋಡಿದಾಗ ನಮಗೆ ತುಂಬ ಖುಷಿ ಆಯ್ತು.

ಕ್ವಿಬೆಕ್‌ನಲ್ಲಿ ಸೇವೆ ಮಾಡೋಕೆ ನಮಗೆ ಒಳ್ಳೇ ತರಬೇತಿ ಸಿಕ್ತು. ಹೀಗೆ ಸೇವೆಯಲ್ಲಿ ಯೆಹೋವ ಸಹಾಯ ಮಾಡಿದ್ರು. ಅಷ್ಟೇ ಅಲ್ಲ, ಅಗತ್ಯ ಇರೋ ವಿಷ್ಯಗಳನ್ನೂ ನೋಡ್ಕೊಂಡ್ರು. ಹೋಗ್ತಾ-ಹೋಗ್ತಾ ನಮಗೆ ಫ್ರೆಂಚ್‌ ಭಾಷೆ ಮತ್ತು ಸಂಸ್ಕೃತಿ ಇಷ್ಟ ಆಯ್ತು. ಇದ್ರಿಂದ ಬೇರೆ ಭಾಷೆಯ ಜನ್ರನ್ನ, ಅವ್ರ ಸಂಸ್ಕೃತಿಯನ್ನ ಪ್ರೀತಿಸೋಕಾಯ್ತು.—2 ಕೊರಿಂ. 6:13.

ಆದ್ರೆ ಒಂದಿನ ಬ್ರಾಂಚ್‌ ನಮ್ಮನ್ನ, ನ್ಯೂ ಬ್ರನ್ಸ್‌ವಿಕ್‌ನಲ್ಲಿರೋ ಟ್ರಕಾಡೈಗೆ ಹೋಗಿ ಅಂತ ಹೇಳ್ತು. ಆದ್ರೆ ಇದು ಹೇಳಿದಷ್ಟು ಸುಲಭ ಆಗಿರಲಿಲ್ಲ. ಯಾಕಂದ್ರೆ ನಾವು ಆಗಷ್ಟೇ ಅಪಾರ್ಟ್‌ಮೆಂಟ್‌ನ ಲೀಸ್‌ಗೆ ತಗೊಂಡ್ವಿ. ಅಲ್ಲದೇ ಕೆಲಸ ಮಾಡೋ ಜಾಗದಲ್ಲಿ ಒಪ್ಪಂದ ಮಾಡ್ಕೊಂಡಿದ್ದೆ. ನಮ್ಮ ಬೈಬಲ್‌ ವಿದ್ಯಾರ್ಥಿಗಳು ಇತ್ತೀಚೆಗಷ್ಟೇ ಪ್ರಚಾರಕರಾಗಿದ್ರು. ಜೊತೆಗೆ, ರಾಜ್ಯಸಭಾಗೃಹ ಕಟ್ಟೋ ಕೆಲಸ ಶುರು ಮಾಡಿಬಿಟ್ಟಿದ್ವಿ.

ಇದ್ರ ಬಗ್ಗೆ ನಾವು ತುಂಬಾ ಪ್ರಾರ್ಥನೆ ಮಾಡಿದ್ವಿ. ಆಮೇಲೆ ಟ್ರಕಾಡೈನ ನೋಡ್ಕೊಂಡು ಬರೋಣ ಅಂತ ಹೋದ್ವಿ. ಇದು ರಿಮೊಸ್ಕೀಗಿಂತ ತುಂಬಾ ಭಿನ್ನವಾಗಿತ್ತು. ಯೆಹೋವ ನಮ್ಮನ್ನ ಅಲ್ಲಿಗೆ ಹೋಗೋಕೆ ಹೇಳ್ತಿದ್ದಾರಲ್ಲ, ನಾವು ಹೋಗೋಣ ಅಂತ ನಿರ್ಧಾರ ಮಾಡಿದ್ವಿ. ನಮಗಿದ್ದ ಚಿಂತೆಯನ್ನೆಲ್ಲಾ ಯೆಹೋವನ ಮೇಲೆ ಹಾಕಿದ್ವಿ. ಆದ್ರೆ ನಮಗೆ ಬಂದ ಸವಾಲನ್ನ ಯೆಹೋವ ತುಂಬ ಸುಲಭವಾಗಿ ತೆಗೆದು ಹಾಕಿದ್ರು, ಇದನ್ನ ನಾವು ಕಣ್ಣಾರೆ ನೋಡೋಕಾಯ್ತು. (ಮಲಾ. 3:10) ಬಂದ ಸವಾಲುಗಳನ್ನ ಎದುರಿಸೋಕೆ ಪಾಮರ್‌ ಕೂಡ ನನಗೆ ಸಹಾಯ ಮಾಡಿದಳು. ಅವಳಿಗೆ ಯೆಹೋವನ ಜೊತೆ ಒಳ್ಳೇ ಸಂಬಂಧ ಇತ್ತು, ನಿಸ್ವಾರ್ಥಳಾಗಿದ್ದಳು, ಆಗಾಗ ಜೋಕ್ಸ್‌ ಮಾಡ್ತಿದ್ದಳು. ಇದ್ರಿಂದ ನಾವು ಖುಷಿ ಖುಷಿಯಾಗಿ ಟ್ರಕಾಡೈಗೆ ಹೋಗೋಕಾಯ್ತು.

ಆ ಸಭೆಯಲ್ಲಿ ಬರೀ ಒಬ್ಬರೇ ಹಿರಿಯರಿದ್ರು. ಅವರೇ ಬ್ರದರ್‌ ರಾಬರ್ಟ್‌ ರೋಸ್‌. ಅವರು ಮತ್ತೆ ಅವ್ರ ಹೆಂಡತಿ ಲಿಂಡಾ, ಮುಂಚೆ ಟ್ರಕಾಡೈಯಲ್ಲಿ ಪಯನೀಯರ್‌ ಸೇವೆ ಮಾಡ್ತಿದ್ರು. ಅವ್ರಿಗೆ ಮಗು ಆದ್ಮೇಲೆ ಅಲ್ಲೇ ಇರೋಕೆ ನಿರ್ಧಾರ ಮಾಡಿದ್ರು. ಅವರು ನಮಗೆ ತುಂಬ ಪ್ರೋತ್ಸಾಹ ಕೊಡ್ತಿದ್ರು. ಚಿಕ್ಕ ಮಗು ನೋಡ್ಕೊಳ್ಳೋ ಜವಾಬ್ದಾರಿ ಇದ್ರೂ ಅತಿಥಿಸತ್ಕಾರ ಮಾಡ್ತಿದ್ದರು, ಸೇವೆ ಮಾಡೋಕೆ ಯಾವಾಗಲೂ ಮುಂದೆ ಬರ್ತಿದ್ರು.

ಅಗತ್ಯ ಇರೋ ಕಡೆ ಸೇವೆ ಮಾಡಿದ್ದರಿಂದ ಸಿಕ್ಕ ಆಶೀರ್ವಾದಗಳು

ಚಳಿಗಾಲದಲ್ಲಿ ನಮ್ಮ ಮೊದಲ ಸರ್ಕಿಟ್‌ ಸೇವೆ

ಟ್ರಕಾಡೈನಲ್ಲಿ ಎರಡು ವರ್ಷ ಸೇವೆ ಮಾಡಿದ ಮೇಲೆ ಬ್ರಾಂಚ್‌ ನಮ್ಮನ್ನ ಸರ್ಕಿಟ್‌ ಸೇವೆಗೆ ಕಳಿಸ್ತು. ಹಾಗಾಗಿ ನಾವು 7 ವರ್ಷ ಇಂಗ್ಲಿಷ್‌ ಸರ್ಕಿಟ್‌ನಲ್ಲಿ ಸೇವೆ ಮಾಡಿದ್ವಿ. ಆಮೇಲೆ ನಮ್ಮನ್ನ ಕ್ವಿಬೆಕ್‌ನಲ್ಲಿರೋ ಫ್ರೆಂಚ್‌ ಸರ್ಕಿಟ್‌ಗೆ ನೇಮಿಸಲಾಯ್ತು. ಕ್ವಿಬೆಕ್‌ನಲ್ಲಿ ಸಹೋದರ ಲೆಯಾನ್ಸ್‌ ಕ್ರೇಪೋ ಜಿಲ್ಲಾ ಮೇಲ್ವಿಚಾರಕರಾಗಿದ್ರು. ನಾನು ಕೊಡ್ತಿದ್ದ ಭಾಷಣಗಳನ್ನ ಅವರು ತುಂಬಾ ಇಷ್ಟಪಡುತ್ತಿದ್ದರು. ಆದ್ರೆ ಪ್ರತಿ ಭಾಷಣ ಆದ ಮೇಲೆ, ‘ನೀನು ಅದನ್ನ ಇನ್ನೂ ಸ್ವಲ್ಪ ಚೆನ್ನಾಗಿ ಕೊಡಬಹುದಿತ್ತು’ ಅಂತ ಹೇಳ್ತಿದ್ರು. b ಈ ತರ ವೈಯಕ್ತಿಕ ಆಸಕ್ತಿ ತೋರಿಸಿದ್ರಿಂದ ನಾನು ನನ್ನ ಭಾಷಣಗಳನ್ನ ಸರಳವಾಗಿ, ಸ್ಪಷ್ಟವಾಗಿ ಮತ್ತೆ ಜನ್ರಿಗೆ ಅರ್ಥವಾಗೋ ತರ ಕೊಡೋದಕ್ಕೆ ಆಯ್ತು.

1978ರಲ್ಲಿ ಮಾಂಟ್ರಿಯಲ್‌ನಲ್ಲಿ, “ವಿಜಯಪ್ರದ ನಂಬಿಕೆ” ಅನ್ನೋ ಅಂತಾರಾಷ್ಟ್ರೀಯ ಅಧಿವೇಶನ ನಡೀತು. ಅಲ್ಲಿ ನಂಗೆ ಫುಡ್‌ ಸರ್ವಿಸ್‌ ಡಿಪಾರ್ಟ್‌ಮೆಂಟಲ್ಲಿ ಕೆಲಸ ಮಾಡೋ ಅವಕಾಶ ಸಿಕ್ತು. ಅದಂತೂ ನಾನು ಮರೆಯೋಕಾಗಲ್ಲ. ಅಧಿವೇಶನಕ್ಕೆ 80,000ಕ್ಕೂ ಜಾಸ್ತಿ ಜನ ಬರಲಿಕ್ಕಿದ್ರು. ಅವ್ರಿಗೆ ನಾವು ಊಟದ ವ್ಯವಸ್ಥೆ ಮಾಡಬೇಕಿತ್ತು. ಹೇಗೆ ಅಡಿಗೆ ಮಾಡಬೇಕು, ಏನ್‌ ಮಾಡಬೇಕು ಅಂತನೇ ಗೊತ್ತಿರಲಿಲ್ಲ, ಇದೆಲ್ಲ ನಮಗೆ ಹೊಸದಾಗಿತ್ತು. ನಮ್ಮತ್ರ 20 ದೊಡ್ಡ-ದೊಡ್ಡ ಫ್ರಿಡ್ಜ್‌ಗಳಿತ್ತು. ಆದ್ರೆ ಅದ್ರಲ್ಲಿ ಕೆಲವೊಂದು ಸರಿಯಾಗಿ ಕೆಲಸನೇ ಮಾಡ್ತಿರಲಿಲ್ಲ. ಮೊದಲನೇ ದಿನಕ್ಕಂತೂ ನಾವು ಏನೂ ಸರಿಯಾಗಿ ತಯಾರಿ ಮಾಡ್ಕೊಳ್ಳೋಕಾಗಲಿಲ್ಲ, ಯಾಕಂದ್ರೆ ಹಿಂದಿನ ದಿನ ಯಾವುದೋ ಆಟದ ಸ್ಪರ್ಧೆ ನಡೆದು ಅದೆಲ್ಲಾ ಮುಗಿಯೋದು ಹತ್ತತ್ರ ಮಧ್ಯರಾತ್ರಿ ಆಗಿತ್ತು. ಬೆಳಕು ಹರಿಯೋ ಮುಂಚೆನೇ ನಾವು ತಿಂಡಿ ಮಾಡೋಕೆ ಶುರು ಮಾಡಬೇಕಿತ್ತು. ನಮ್ಮೆಲ್ಲರಿಗೂ ತುಂಬಾ ಸುಸ್ತಾಗಿದ್ರೂ ಕಷ್ಟಪಟ್ಟು ಕೆಲಸ ಮಾಡಿದ್ವಿ. ಬಂದಿದ್ದ ಸ್ವಯಂಸೇವಕರಿಗೆ ಎಷ್ಟೇ ಟೆನ್ಶನ್‌ ಇದ್ರೂ ಜೋಕ್ಸ್‌ ಮಾಡ್ತಾ ಲವಲವಿಕೆಯಿಂದ ಕೆಲಸ ಮಾಡ್ತಿದ್ರು. ಇದನ್ನೆಲ್ಲ ನೋಡುವಾಗ ಅವರು ನಿಜವಾಗ್ಲೂ ಎಷ್ಟು ಪ್ರೌಢ ಕ್ರೈಸ್ತರು ಅಂತ ಅರ್ಥ ಆಯ್ತು. ನಾನು ಅವ್ರಿಂದ ತುಂಬಾ ವಿಷ್ಯಗಳನ್ನ ಕಲಿತೆ. ಅವರು ನನಗೆ ಒಳ್ಳೇ ಫ್ರೆಂಡ್ಸ್‌ ಆದ್ರು. ಅವತ್ತು ಶುರುವಾದ ನಮ್ಮ ಸ್ನೇಹ ಇವತ್ತಿನವರೆಗೂ ಹಾಗೇ ಇದೆ. ಕ್ವಿಬೆಕ್‌ನಲ್ಲಿ 1940ರಿಂದ 1960ರವರೆಗೂ ತುಂಬಾ ಹಿಂಸೆ ವಿರೋಧ ಇತ್ತು. ಇದ್ರ ಮಧ್ಯೆನೂ ಇಲ್ಲಿ ಒಂದು ಅಧಿವೇಶನ ನಡೀತು ಅನ್ನೋದು ನಿಜಕ್ಕೂ ಒಂದು ಅದ್ಭುತ.

1985ರಲ್ಲಿ ನಾನು ಮತ್ತು ಪಾಮರ್‌ ಮಾಂಟ್ರಿಯಲ್‌ನಲ್ಲಿ ಅಧಿವೇಶನಕೋಸ್ಕರ ಮುಂಚೆನೇ ಕೆಲಸ ಮಾಡ್ತಿರೋದು

ಮಾಂಟ್ರಿಯಲ್‌ನಲ್ಲಿ ನಡೆದ ದೊಡ್ಡ-ದೊಡ್ಡ ಅಧಿವೇಶನಗಳಿಂದ ನಾನು ತುಂಬ ವಿಷಯಗಳನ್ನ ಕಲಿತೆ. ಯಾಕಂದ್ರೆ ಅಲ್ಲಿ ನನಗೆ ಅನೇಕ ಮೇಲ್ವಿಚಾರಕರ ಜೊತೆ ಕೆಲಸ ಮಾಡೋ ಅವಕಾಶ ಸಿಕ್ತು. ಒಂದು ವರ್ಷ, ಆಡಳಿತ ಮಂಡಲಿ ಸದಸ್ಯರಾದ ಬ್ರದರ್‌ ಡೇವಿಡ್‌ ಸ್ಪ್ಲೇನ್‌ ಅಧಿವೇಶನದ ಮೇಲ್ವಿಚಾರಕರಾಗಿದ್ರು. ಆಮೇಲೆ ಮುಂದಿನ ವರ್ಷ, ನನಗೆ ಮೇಲ್ವಿಚಾರಕನಾಗೋ ನೇಮಕ ಸಿಕ್ತು. ಆ ನೇಮಕನ ಚೆನ್ನಾಗಿ ಮಾಡೋಕೆ ಬ್ರದರ್‌ ಸ್ಪ್ಲೇನ್‌ ನನಗೆ ತುಂಬಾ ಸಹಾಯ ಮಾಡಿದ್ರು.

ನಾನು ಮತ್ತು ಪಾಮರ್‌ 36 ವರ್ಷ ಸರ್ಕಿಟ್‌ ಕೆಲಸದಲ್ಲಿ ಸಂತೋಷ ಕಂಡ್ಕೊಂಡ್ವಿ. ಇದಾದ್ಮೇಲೆ 2011ರಲ್ಲಿ, ಸಭಾ ಹಿರಿಯರಿಗಾಗಿ ನಡೆಯೋ ಶಾಲೆಗೆ ನನ್ನನ್ನ ಶಿಕ್ಷಕನಾಗಿ ನೇಮಿಸಿದ್ರು. ನಾವು ಎಷ್ಟು ಜಾಗಗಳನ್ನ ಬದಲಾಯಿಸಬೇಕಾಯ್ತು ಅಂದ್ರೆ ಬರೀ ಎರಡು ವರ್ಷಗಳಲ್ಲಿ 75 ಬೇರೆ-ಬೇರೆ ಜಾಗಗಳಲ್ಲಿ ಉಳ್ಕೊಬೇಕಾಯ್ತು. ಈ ರೀತಿ ಮಾಡೋದು ಅಷ್ಟು ಸುಲಭವಾಗಿರಲಿಲ್ಲ. ಆದ್ರೆ ನಾವು ಮಾಡಿದ ತ್ಯಾಗ ಸಾರ್ಥಕ ಅನಿಸ್ತು. ಯಾಕಂದ್ರೆ ಪ್ರತಿ ವಾರ ಶಾಲೆ ಮುಗಿದ ಮೇಲೆ ಹಿರಿಯರು ನಮ್ಮ ಹತ್ರ ಬಂದು, ‘ಆಡಳಿತ ಮಂಡಲಿಯವರು ಹಿರಿಯರ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ, ಯೆಹೋವನ ಜೊತೆ ನಮಗಿರೋ ಸಂಬಂಧನಾ ಕಾಪಾಡಿಕೊಳ್ಳೋಕೆ ಅವರು ಎಷ್ಟು ಇಷ್ಟಪಡ್ತಾರೆ ಅಂತ ತಿಳ್ಕೊಂಡ್ವಿ. ಇದಕ್ಕೆಲ್ಲ ತುಂಬಾ ಥ್ಯಾಂಕ್ಸ್‌’ ಅಂತ ಹೇಳಿದಾಗ ನಮಗೆ ತುಂಬಾ ಖುಷಿ ಆಯ್ತು.

ಆಮೇಲೆ ನಾನು ರಾಜ್ಯ ಪ್ರಚಾರಕರ ಶಾಲೆಗೆ ಶಿಕ್ಷಕನಾದೆ. ಕೆಲವು ಸಲ, ಅಲ್ಲಿದ್ದ ವಿದ್ಯಾರ್ಥಿಗಳು ತುಂಬಾ ಸುಸ್ತಾಗಿರ್ತಿದ್ರು, ಚಿಂತೆಯಲ್ಲಿ ಇರ್ತಿದ್ರು. ಯಾಕಂದ್ರೆ ದಿನದಲ್ಲಿ ಏಳು ತಾಸು ಅವರು ಶಾಲೆಯಲ್ಲಿ ಕಳಿತಿದ್ರು, ಸಂಜೆ ಮೇಲೆ ಮೂರು ತಾಸು ಹೋಮ್‌ವರ್ಕ್‌ ಮಾಡಬೇಕಿತ್ತು. ಅಷ್ಟೇ ಅಲ್ಲ, ವಾರದಲ್ಲಿ ನಾಲ್ಕರಿಂದ ಐದು ಬೇರೆ ಬೇರೆ ನೇಮಕಗಳಿರುತ್ತಿತ್ತು. ನಾನು ಮತ್ತೆ ಇನ್ನೊಬ್ಬ ಶಿಕ್ಷಕ ಅವರಿಗೆ ‘ಯೆಹೋವನ ಸಹಾಯ ಇಲ್ಲದೇ ನೀವು ಇದನ್ನ ಖಂಡಿತ ಮಾಡಕ್ಕಾಗಲ್ಲ’ ಅಂತ ಹೇಳ್ತಿದ್ವಿ. ನಾವು ಹೇಳಿದ ತರನೇ ವಿದ್ಯಾರ್ಥಿಗಳು ಯೆಹೋವನ ಮೇಲೆ ಆತ್ಕೊಂಡ್ರು. ತಮ್ಮ ನೇಮಕಗಳನ್ನ ಅಂದ್ಕೊಂಡಿದ್ದಕ್ಕಿಂತ ತುಂಬ ಚೆನ್ನಾಗಿ ಮಾಡಿದ್ರು. ಹೀಗೆ ಯೆಹೋವ ಅವ್ರಿಗೆ ಮಾಡಿದ ಸಹಾಯನ ನಾವು ಕಣ್ಣಾರೆ ನೋಡಿದ್ವಿ.

ವೈಯಕ್ತಿಕ ಆಸಕ್ತಿ ತಂದ ಆಶೀರ್ವಾದಗಳು

ಅಮ್ಮ ತೋರಿಸಿದ ವೈಯಕ್ತಿಕ ಆಸಕ್ತಿಯಿಂದ ಎಷ್ಟೋ ವಿದ್ಯಾರ್ಥಿಗಳು ಪ್ರಗತಿ ಮಾಡಿದ್ರು. ಅಷ್ಟೇ ಅಲ್ಲ, ಅಪ್ಪನೂ ಸತ್ಯದ ಕಡೆಗೆ ಆಸಕ್ತಿ ಬೆಳೆಸ್ಕೊಂಡ್ರು. ಅಮ್ಮ ಸತ್ತು ಮೂರು ದಿನ ಆದ್ಮೇಲೆ ಮೊದಲನೇ ಸಲ ಸಾರ್ವಜನಿಕ ಭಾಷಣ ಕೇಳೋಕೆ ಅಪ್ಪ ರಾಜ್ಯಸಭಾಗೃಹಕ್ಕೆ ಬಂದ್ರು. ಅದನ್ನಂತೂ ನಮಗೆ ನಂಬೋಕೆ ಆಗಲಿಲ್ಲ. ಅವತ್ತು ಶುರು ಮಾಡಿದವರು 26 ವರ್ಷಗಳಿಂದ ಕೂಟಗಳಿಗೆ ತಪ್ಪದೇ ಬರ್ತಿದ್ರು. ನಮ್ಮ ಅಪ್ಪ ದೀಕ್ಷಾಸ್ನಾನ ತಗೊಂಡಿಲ್ಲ ನಿಜ, ಆದ್ರೆ ಪ್ರತಿ ವಾರ ಕೂಟಗಳಿಗೆ ಬರೋವ್ರಲ್ಲಿ ಅಪ್ಪನೇ ಮೊದಲನೇ ವ್ಯಕ್ತಿ ಅಂತ ಅಲ್ಲಿರೋ ಹಿರಿಯರು ಹೇಳ್ತಾರೆ.

ಆರಾಧನೆ ವಿಷ್ಯದಲ್ಲಂತೂ ನಮ್ಮ ಅಮ್ಮ, ನಂಗೂ ಮತ್ತೆ ನನ್ನ ತಂಗಿಯಂದ್ರಿಗೂ ಒಳ್ಳೇ ಮಾದರಿ ಇಟ್ರು. ನನ್ನ ಮೂವರು ತಂಗಿಯರು ಮತ್ತೆ ಅವರ ಗಂಡಂದಿರು ಈಗ ನಂಬಿಗಸ್ತಿಕೆಯಿಂದ ಯೆಹೋವನ ಸೇವೆ ಮಾಡ್ತಿದ್ದಾರೆ. ಅದರಲ್ಲಿ ಒಬ್ಬ ತಂಗಿ ಪೋರ್ಚುಗಲ್‌ ಮತ್ತು ಇನ್ನೊಬ್ಬ ತಂಗಿ ಹೈಟಿ ಬ್ರಾಂಚ್‌ ಆಫೀಸ್‌ನಲ್ಲಿ ಕೆಲಸ ಮಾಡ್ತಿದ್ದಾರೆ.

ಪಾಮರ್‌ ಮತ್ತು ನಾನು, ಈಗ ಒಂಟಾರಿಯೊದ ಹ್ಯಾಮಿಲ್ಟನ್‌ನಲ್ಲಿ ವಿಶೇಷ ಪಯನೀಯರ್‌ಗಳಾಗಿ ಸೇವೆ ಮಾಡ್ತಿದ್ದೀವಿ. ನಾವು ಸರ್ಕಿಟ್‌ ಸೇವೆ ಮಾಡುವಾಗ ಬೇರೆಯವರ ಪುನರ್ಭೇಟಿಗಳಿಗೆ ಮತ್ತು ಬೈಬಲ್‌ ಅಧ್ಯಯನಗಳಿಗೆ ಹೋಗಿ ಖುಷಿಪಡ್ತಿದ್ವಿ. ಆದ್ರೆ ಈಗ, ನಮ್ಮ ಬೈಬಲ್‌ ವಿದ್ಯಾರ್ಥಿಗಳು ಪ್ರಗತಿ ಮಾಡ್ತಾ ಯೆಹೋವನನ್ನ ಪ್ರೀತಿಸೋದನ್ನ ನೋಡುವಾಗ ಇನ್ನೂ ಖುಷಿಯಾಗುತ್ತೆ. ಅಷ್ಟೇ ಅಲ್ಲ, ಈ ಹೊಸ ಸಭೆಯಲ್ಲಿ ನಮಗೆ ಒಳ್ಳೇ ಸ್ನೇಹಿತರಿದ್ದಾರೆ. ಅವ್ರಿಗೆ ಯೆಹೋವ ಕಷ್ಟದಲ್ಲಿ, ಸಂತೋಷದಲ್ಲಿ ಹೇಗೆ ಕೈ ಹಿಡಿದು ನಡೆಸ್ತಿದ್ದಾರೆ ಅಂತ ಅನುಭವಗಳನ್ನ ಕೇಳುವಾಗ ನಮ್ಮ ನಂಬಿಕೆನೂ ಬಲ ಆಗ್ತಿದೆ.

ನಮ್ಮ ಜೀವನದ ಪುಟಗಳನ್ನ ಹಿಂದೆ ತಿರುಗಿಸಿ ನೋಡಿದ್ರೆ ಇವತ್ತಿನ ವರೆಗೂ ನಮಗೆ ತುಂಬಾ ಜನ ವೈಯಕ್ತಿಕ ಆಸಕ್ತಿ ತೋರಿಸಿದ್ದಾರೆ. ಅವ್ರಿಗೆ ನಾವು ಯಾವಾಗ್ಲೂ ಚಿರಋಣಿಗಳು. ಅದೇ ತರ, ನಾವೂ ಬೇರೆಯವ್ರಿಗೆ ವೈಯಕ್ತಿಕ ಆಸಕ್ತಿ ತೋರಿಸಿ “ಅಕ್ಕರೆ” ತೋರಿಸೋಕೆ ಕಲಿತ್ವಿ. ಅಷ್ಟೇ ಅಲ್ಲ, ‘ನಿಮ್ಮ ಕೈಯಲ್ಲಿ ಎಷ್ಟು ಆಗುತ್ತೋ ಅಷ್ಟು ಯೆಹೋವನ ಸೇವೆ ಮಾಡಿ’ ಅಂತ ಪೋತ್ಸಾಹಿಸ್ತಿದ್ವಿ. (2 ಕೊರಿಂ. 7:6, 7) ಉದಾಹರಣೆಗೆ, ಒಂದು ಕುಟುಂಬದಲ್ಲಿ ಹೆಂಡ್ತಿ, ಮಗ ಮತ್ತು ಮಗಳು ಪಯನೀಯರ್‌ ಸೇವೆ ಮಾಡುತ್ತಿದ್ರು. ನಾನು ಗಂಡನ ಹತ್ತಿರ ಹೋಗಿ ‘ನೀವೂ ಪಯನೀಯರ್‌ ಸೇವೆ ಮಾಡಕ್ಕಾಗುತ್ತಾ? ಅದ್ರ ಬಗ್ಗೆ ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ?’ ಅಂತ ಕೇಳಿದೆ. ಅದಕ್ಕೆ ಅವರು ‘ನಾನು ಈಗಾಗಲೇ ಮೂರು ಪಯನೀಯರ್‌ಗಳಿಗೆ ಸಹಾಯ ಮಾಡ್ತಿದ್ದೀನಲ್ಲಾ’ ಅಂತ ಹೇಳಿದ್ರು. ಆಗ ನಾನು ‘ಯೆಹೋವನಿಗಿಂತ ಜಾಸ್ತಿ ಸಹಾಯ ಮಾಡೋಕೆ ನಿಮ್ಮ ಕೈಯಲ್ಲಿ ಆಗುತ್ತಾ?’ ಅಂತ ಕೇಳಿದೆ. ‘ಪಯನೀಯರ್‌ ಸೇವೆ ಮಾಡ್ತಾ ಅವರು ಅನುಭವಿಸುತ್ತಿರೋ ಖುಷಿನಾ ನೀವೂ ಅನುಭವಿಸಬೇಕು ಅನ್ನೋದೇ ನನ್ನ ಆಸೆ’ ಅಂತ ಹೇಳ್ದೆ. ಇದನ್ನ ಅರ್ಥ ಮಾಡ್ಕೊಂಡು ಅವರು ಬರೀ ಆರು ತಿಂಗಳಲ್ಲೇ ಪಯನೀಯರ್‌ ಸೇವೆ ಶುರು ಮಾಡಿದ್ರು.

ನಾನು ಮತ್ತು ಪಾಮರ್‌ ಯೆಹೋವನ ‘ಅದ್ಭುತಗಳ ಬಗ್ಗೆ ಮುಂದಿನ ಪೀಳಿಗೆಗೆ’ ಹೇಳ್ತಾನೇ ಇರ್ತೀವಿ. ಆತನ ಸೇವೆಯಲ್ಲಿ ನಾವು ಅನುಭವಿಸಿದ ಅದೇ ಖುಷಿನ ಅವರೆಲ್ರೂ ಅನುಭವಿಸಬೇಕು ಅನ್ನೋದೇ ನಮ್ಮ ಮನದಾಳದ ಆಸೆ.—ಕೀರ್ತ. 71:17, 18.

a ಈಗ ಜೀವನ ಮತ್ತು ಸೇವೆ ಕೂಟದ ಮೇಲ್ವಿಚಾರಕ ಅಂತ ಕರಿತಾರೆ.

b ಲೆಯಾನ್ಸ್‌ ಕ್ರೇಪೋ ಅವರ ಜೀವನ ಕಥೆಯನ್ನ ಫೆಬ್ರವರಿ 2020ರ ಕಾವಲಿನಬುರುಜು ಪುಟ 26-30 ನೋಡಿ.