ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 31

“ಸ್ಥಿರವಾಗಿರಿ, ಕದಲಬೇಡಿ”

“ಸ್ಥಿರವಾಗಿರಿ, ಕದಲಬೇಡಿ”

“ನನ್ನ ಪ್ರಿಯ ಸಹೋದರರೇ, ಸ್ಥಿರವಾಗಿರಿ, ಕದಲಬೇಡಿ.”—1 ಕೊರಿಂ. 15:58.

ಗೀತೆ 32 ಸ್ಥಿರಚಿತ್ತರೂ ನಿಶ್ಚಲರೂ ಆಗಿರಿ!

ಈ ಲೇಖನದಲ್ಲಿ ಏನಿದೆ? a

1-2. ಜಪಾನ್‌ನಲ್ಲಿರೋ ದೊಡ್ಡ ಕಟ್ಟಡದ ತರ ನಾವು ಇರೋಕೆ ಏನು ಮಾಡಬೇಕು? (1 ಕೊರಿಂಥ 15:58)

 1978ರಲ್ಲಿ ಜಪಾನಿನ ಟೋಕಿಯೊದಲ್ಲಿ 60 ಅಂತಸ್ತಿನ ಒಂದು ದೊಡ್ಡ ಕಟ್ಟಡ ಕಟ್ಟಿದ್ರು. ಅಲ್ಲಿ ಆಗಾಗ ಭೂಕಂಪ ಆಗ್ತಿತ್ತು. ಆದ್ರೂ ಈ ಕಟ್ಟಡ ಬಿದ್ದುಹೋಗಲಿಲ್ಲ. ಯಾಕಂದ್ರೆ ಇಂಜಿನೀಯರುಗಳು ಅದನ್ನ ಗಟ್ಟಿಯಾಗಿ ಕಟ್ಟಿದ್ರು. ಅಷ್ಟೇ ಅಲ್ಲ, ಅಲುಗಾಡಿದ್ರೂ ಬೀಳದೆ ಇರೋ ಹಾಗೆ ಕಟ್ಟಿದ್ರು. ನಾವೂ ಈ ದೊಡ್ಡ ಕಟ್ಟಡದ ತರ ಇರಬೇಕು.

2 ನಾವು ಸ್ಥಿರವಾಗಿ ನಿಲ್ಲಬೇಕು, ಕದಲಬಾರದು. ಅಂದ್ರೆ ಎಷ್ಟೇ ಕಷ್ಟ ಆದ್ರೂ ಯೆಹೋವನ ನೀತಿನಿಯಮಗಳನ್ನ ಪಾಲಿಸಬೇಕು. (1 ಕೊರಿಂಥ 15:58 ಓದಿ.) ಎಲ್ಲಾ ಸಮಯದಲ್ಲೂ ‘ಆತನ ಮಾತನ್ನ ಕೇಳೋ ಮನಸ್ಸು’ ನಮಗಿರಬೇಕು. ಅದ್ರ ಜೊತೆಗೆ, “ನಾನು ಹೇಳಿದ್ದೇ ನಡಿಬೇಕು ಅನ್ನೋ ಸ್ವಭಾವ” ನಮಗೆ ಇರಬಾರದು. ಬಿಟ್ಕೊಡೋ ಮನಸ್ಸು ಇರಬೇಕು. (ಯಾಕೋ. 3:17) ಆಗ ನಾವು ನಮ್ಮ ಮನಸ್ಸಿಗೆ ಬಂದ ಹಾಗೂ ನಡಿಯಲ್ಲ ತುಂಬ ಕಟ್ಟುನಿಟ್ಟಾಗೂ ಇರಲ್ಲ. ಹಾಗಾದ್ರೆ ನಾವು ಸ್ಥಿರವಾಗಿ ಇರೋದು ಹೇಗೆ? ಸೈತಾನ ನಮ್ಮನ್ನ ಬೀಳಿಸೋಕೆ ಯಾವ 5 ರೀತಿಯಲ್ಲಿ ಪ್ರಯತ್ನಿಸ್ತಾನೆ? ನಾವು ಬೀಳದೇ ಇರೋಕೆ ಏನು ಮಾಡಬೇಕು? ಇದನ್ನೆಲ್ಲ ಈ ಲೇಖನದಲ್ಲಿ ನೋಡೋಣ.

ನಾವು ಸ್ಥಿರವಾಗಿ ಇರೋದು ಹೇಗೆ?

3. ಅಪೊಸ್ತಲರ ಕಾರ್ಯ 15:28, 29ರಲ್ಲಿ ಯೆಹೋವ ದೇವರು ನಮಗೆ ಯಾವ ನಿಯಮಗಳನ್ನ ಕೊಟ್ಟಿದ್ದಾನೆ?

3 ನಾವು ಏನು ಮಾಡಬೇಕು, ಏನು ಮಾಡಬಾರದು ಅಂತ ಹೇಳೋ ಅಧಿಕಾರ ಯೆಹೋವ ದೇವರಿಗೆ ಇದೆ. ಆತನು ಆ ನಿಯಮಗಳನ್ನ ನಮಗೆ ಸ್ಪಷ್ಟವಾಗಿ ಅರ್ಥ ಆಗೋ ಹಾಗೆ ಹೇಳಿದ್ದಾನೆ. (ಯೆಶಾ. 33:22) ಉದಾಹರಣೆಗೆ ಒಂದನೇ ಶತಮಾನದಲ್ಲಿದ್ದ ಆಡಳಿತ ಮಂಡಲಿಗೆ ಕ್ರೈಸ್ತರು ಪಾಲಿಸ್ಲೇಬೇಕಾದ ಮೂರು ವಿಷ್ಯಗಳು ಯಾವುದು ಅಂತ ಗೊತ್ತಾಯ್ತು. (1) ಮೂರ್ತಿಪೂಜೆ ಮಾಡಬಾರದು, ಯೆಹೋವ ದೇವರನ್ನ ಮಾತ್ರ ಆರಾಧನೆ ಮಾಡಬೇಕು. (2) ರಕ್ತವನ್ನ ಪವಿತ್ರವಾಗಿ ನೋಡಬೇಕು. (3) ಲೈಂಗಿಕ ಅನೈತಿಕತೆ ಮಾಡಬಾರದು. (ಅಪೊಸ್ತಲರ ಕಾರ್ಯ 15:28, 29 ಓದಿ.) ಈ ಮೂರು ವಿಷ್ಯಗಳನ್ನ ನಾವು ಕೂಡ ಎಷ್ಟೇ ಕಷ್ಟ ಆದ್ರೂ ಪಾಲಿಸ್ಲೇಬೇಕು. ಹೇಗೆ ಅಂತ ಈಗ ನೋಡೋಣ.

4. ನಾವು ಯೆಹೋವ ದೇವರನ್ನ ಮಾತ್ರ ಆರಾಧನೆ ಮಾಡ್ತೀವಿ ಅಂತ ಹೇಗೆ ತೋರಿಸ್ಕೊಡ್ತೀವಿ? (ಪ್ರಕಟನೆ 4:11)

4 ಮೂರ್ತಿಪೂಜೆ ಮಾಡಬಾರದು, ಯೆಹೋವ ದೇವರನ್ನ ಮಾತ್ರ ಆರಾಧನೆ ಮಾಡಬೇಕು. ಯೆಹೋವ ಇಸ್ರಾಯೇಲ್ಯರಿಗೆ ತನ್ನನ್ನ ಮಾತ್ರ ಆರಾಧನೆ ಮಾಡಬೇಕು ಅಂತ ಆಜ್ಞೆ ಕೊಟ್ಟನು. (ಧರ್ಮೋ. 5:6-10) ಅಷ್ಟೇ ಅಲ್ಲ, ಸೈತಾನ ಯೇಸುಗೆ ‘ನನಗೆ ಒಂದೇ ಒಂದು ಸಾರಿ ಅಡ್ಡಬೀಳು, ನಿನಗೆ ಲೋಕದಲ್ಲಿ ಇರೋದನ್ನೆಲ್ಲ ಕೊಡ್ತೀನಿ’ ಅಂತ ಹೇಳಿದಾಗ ಯೇಸು ಯೆಹೋವ ದೇವರನ್ನ ಮಾತ್ರ ಆರಾಧನೆ ಮಾಡಬೇಕು ಅಂತ ಹೇಳಿದನು. (ಮತ್ತಾ. 4:8-10) ಹಾಗಾಗಿ ನಾವು ಯಾವ ಮೂರ್ತಿಗಳನ್ನೂ ಆರಾಧನೆ ಮಾಡಲ್ಲ. ಮನುಷ್ಯರನ್ನೂ ಆರಾಧನೆ ಮಾಡಲ್ಲ. ಧರ್ಮಗುರುಗಳನ್ನ, ರಾಜಕಾರಣಿಗಳನ್ನ, ಕ್ರೀಡಾ ಪಟುಗಳನ್ನ, ಸಿನಿಮಾ ತಾರೆಗಳನ್ನ ದೇವರ ತರ ನೋಡಲ್ಲ. ‘ಎಲ್ಲವನ್ನೂ ಸೃಷ್ಟಿ ಮಾಡಿರೋ’ ಯೆಹೋವನನ್ನ ಮಾತ್ರ ಆರಾಧನೆ ಮಾಡ್ತೀವಿ.ಪ್ರಕಟನೆ 4:11 ಓದಿ.

5. ರಕ್ತ ಮತ್ತು ಜೀವವನ್ನ ಪವಿತ್ರವಾಗಿ ನೋಡಬೇಕು ಅಂತ ಯೆಹೋವ ಕೊಟ್ಟಿರೋ ಆಜ್ಞೆಯನ್ನ ನಾವು ಯಾಕೆ ಪಾಲಿಸ್ತೀವಿ?

5 ಜೀವ ಮತ್ತು ರಕ್ತವನ್ನ ಪವಿತ್ರವಾಗಿ ನೋಡಬೇಕು. ಯಾಕಂದ್ರೆ ಜೀವ ಯೆಹೋವ ದೇವರು ಕೊಟ್ಟಿರೋ ದೊಡ್ಡ ಗಿಫ್ಟ್‌. ಅಷ್ಟೇ ಅಲ್ಲ ರಕ್ತ ಜೀವವನ್ನ ಸೂಚಿಸುತ್ತೆ ಅಂತ ಯೆಹೋವನೇ ಹೇಳಿದ್ದಾನೆ. (ಯಾಜ. 17:14) ಯೆಹೋವ ಮನುಷ್ಯರಿಗೆ ಪ್ರಾಣಿಗಳನ್ನ ತಿನ್ನಬಹುದು ಅಂತ ಹೇಳಿದಾಗ ರಕ್ತವನ್ನ ತಿನ್ನಲೇಬಾರದು ಅಂತ ಹೇಳಿದ್ದನು. (ಆದಿ. 9:4) ಇಸ್ರಾಯೇಲ್ಯರಿಗೆ ಮೋಶೆಯ ನಿಯಮ ಪುಸ್ತಕವನ್ನ ಕೊಡುವಾಗ್ಲೂ ದೇವರು ಈ ಆಜ್ಞೆ ಕೊಟ್ಟನು. (ಯಾಜ. 17:10) ಅಷ್ಟೇ ಅಲ್ಲ ಒಂದನೇ ಶತಮಾನದಲ್ಲಿ ಆಡಳಿತ ಮಂಡಲಿಯ ಮೂಲಕ ಕ್ರೈಸ್ತರಿಗೆ “ರಕ್ತದಿಂದ ದೂರ ಇರಿ” ಅಂತ ಹೇಳಿದನು. (ಅ. ಕಾ. 15:28, 29) ನಾವು ಕೂಡ ಚಿಕಿತ್ಸೆ ಪಡ್ಕೊಳ್ಳುವಾಗ ಎಷ್ಟೇ ಕಷ್ಟ ಆದ್ರೂ ಈ ಆಜ್ಞೆಯನ್ನ ಪಾಲಿಸಬೇಕು. b

6. ಲೈಂಗಿಕ ಅನೈತಿಕತೆ ಮಾಡದೆ ಇರೋಕೆ ನಾವು ಏನೆಲ್ಲ ಮಾಡಬೇಕು?

6 ಎಷ್ಟೇ ಒತ್ತಡ ಬಂದ್ರೂ ಲೈಂಗಿಕ ಅನೈತಿಕತೆ ಮಾಡಬಾರದು. (ಇಬ್ರಿ. 13:4) ಅಪೊಸ್ತಲ ಪೌಲ ನಿಮ್ಮ ದೇಹದ ಅಂಗಗಳನ್ನ “ಸಾಯಿಸಿ” ಅಂತ ಹೇಳಿದ್ದಾನೆ. ಅದರರ್ಥ ಏನು? ನಾವು ತಪ್ಪಾದ ಆಸೆಗಳಿಗೆ ಬಲಿಯಾಗದೆ ಇರೋಕೆ ನಮ್ಮಿಂದ ಆಗೋದನ್ನೆಲ್ಲ ಮಾಡಬೇಕು. ಅಂದ್ರೆ ಲೈಂಗಿಕ ಅನೈತಿಕತೆಗೆ ನಡೆಸೋ ಯಾವುದೇ ವಿಷ್ಯವನ್ನ ನಾವು ಮಾಡೋದೂ ಇಲ್ಲ, ನೋಡೋದೂ ಇಲ್ಲ. ಅಷ್ಟೇ ಅಲ್ಲ ತಪ್ಪಾದ ಆಸೆಗಳು ಬಂದಾಗ ತಕ್ಷಣ ಅದನ್ನ ಮನಸ್ಸಿಂದ ತೆಗೆದುಹಾಕಬೇಕು. (ಕೊಲೊ. 3:5; ಯೋಬ 31:1) ಕೆಟ್ಟ ವಿಷ್ಯಗಳನ್ನ ಮಾಡೋಕೆ ನಮಗೆ ಎಷ್ಟೇ ಒತ್ತಡ ಬಂದ್ರೂ ನಾವು ಅದನ್ನ ಮಾಡಬಾರದು. ಯಾಕಂದ್ರೆ ಯೆಹೋವನ ಜೊತೆ ಇರೋ ಸಂಬಂಧನೇ ನಮಗೆ ತುಂಬ ಮುಖ್ಯ.

7. ನಾವು ಏನಂತ ತೀರ್ಮಾನ ಮಾಡ್ಕೊಬೇಕು? ಯಾಕೆ?

7 ಯೆಹೋವ ಕೊಟ್ಟಿರೋ ನೀತಿನಿಯಮಗಳನ್ನ ನಾವು ‘ಮನಸಾರೆ ಒಪ್ಕೊಬೇಕು’ ಅಂತ ಆತನು ಇಷ್ಟಪಡ್ತಾನೆ. (ರೋಮ. 6:17) ಯಾಕಂದ್ರೆ ಅದ್ರಿಂದ ನಮಗೆ ಒಳ್ಳೇದಾಗುತ್ತೆ. ಅಷ್ಟೇ ಅಲ್ಲ ಆ ನೀತಿನಿಯಮಗಳನ್ನ ನಾವು ಬದಲಾಯಿಸೋಕೆ ಆಗಲ್ಲ. (ಯೆಶಾ. 48:17, 18; 1 ಕೊರಿಂ. 6:9, 10) ಹಾಗಾಗಿ ನಾವು ಅದನ್ನ ಪಾಲಿಸ್ಲೇಬೇಕು. ಕೀರ್ತನೆಗಾರ ಕೂಡ “ನಿನ್ನ ನಿಯಮಗಳನ್ನ ಜೀವನಪರ್ಯಂತ ಅನುಸರಿಸಬೇಕಂತ, ಕೊನೇ ಉಸಿರು ಇರೋ ತನಕ ಪಾಲಿಸಬೇಕಂತ, ನಾನು ದೃಢನಿಶ್ಚಯ ಮಾಡಿದ್ದೀನಿ” ಅಂತ ಹೇಳಿದ. (ಕೀರ್ತ. 119:112) ನಾವು ಆ ಕೀರ್ತನೆಗಾರನ ತರ ಯೆಹೋವನಿಗೆ ಏನಿಷ್ಟನೋ ಅದನ್ನೇ ಮಾಡ್ತೀವಿ ಅಂತ ತೀರ್ಮಾನ ಮಾಡ್ಕೊಬೇಕು. ಆ ವಿಷ್ಯದಲ್ಲಿ ನಾವು ಸ್ಥಿರವಾಗಿ ಇರ್ತೀವಿ. ಆದ್ರೆ ನಮ್ಮನ್ನ ಬೀಳಿಸೋಕೆ ಸೈತಾನ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ಮಾಡ್ತಾನೆ. ಅದು ಹೇಗೆ ಅಂತ ನಾವೀಗ ನೋಡೋಣ.

ನಮ್ಮನ್ನ ಬೀಳಿಸೋಕೆ ಸೈತಾನ ಏನೆಲ್ಲ ಮಾಡ್ತಾನೆ?

8. ನಮ್ಮನ್ನ ಬೀಳಿಸೋಕೆ ಸೈತಾನ ಏನು ಮಾಡ್ತಿದ್ದಾನೆ?

8 ಹಿಂಸೆ. ಸೈತಾನ ನಮ್ಮನ್ನ ‘ನುಂಗೋಕೆ’ ಅಂದ್ರೆ ನಮಗೆ ಯೆಹೋವನ ಜೊತೆ ಇರೋ ಸ್ನೇಹನ ಹಾಳು ಮಾಡೋಕೆ ಕಾಯ್ತಾ ಇದ್ದಾನೆ. ನಮ್ಮ ದೇಹಕ್ಕೆ, ಮನಸ್ಸಿಗೆ ಗಾಯ ಮಾಡಿ ನಮ್ಮನ್ನ ಬೀಳಿಸೋಕೆ ನೋಡ್ತಾನೆ. (1 ಪೇತ್ರ 5:8) ಒಂದನೇ ಶತಮಾನದ ಕ್ರೈಸ್ತರು ಯೆಹೋವನಿಗೆ ಇಷ್ಟ ಆಗಿದ್ದನ್ನೇ ಮಾಡ್ತಾ ಸ್ಥಿರವಾಗಿ ಇದ್ರು. ಆದ್ರೆ ಜನ್ರು ಅವ್ರನ್ನ ಬೆದರಿಸಿದ್ರು, ಅವ್ರಿಗೆ ಹೊಡೆದ್ರು, ಅವ್ರಲ್ಲಿ ಕೆಲವ್ರನ್ನ ಕೊಂದ್ರು. ಹೀಗೆ ಸೈತಾನ ಆ ಕ್ರೈಸ್ತರನ್ನ ಬೀಳಿಸೋಕೆ ತುಂಬ ಪ್ರಯತ್ನ ಮಾಡಿದ. (ಅ. ಕಾ. 5:27, 28, 40; 7:54-60) ಅದೇ ತರ ಇವತ್ತು ರಷ್ಯ ಮತ್ತು ಇನ್ನೂ ಕೆಲವು ದೇಶಗಳಲ್ಲಿ ನಮ್ಮ ಸಹೋದರ ಸಹೋದರಿಯರು ಕ್ರೂರವಾದ ಹಿಂಸೆ ಅನುಭವಿಸ್ತಾ ಇದ್ದಾರೆ. ಇನ್ನು ಬೇರೆ ದೇಶಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಸಹೋದರ ಸಹೋದರಿಯರಿಗೆ ಹಿಂಸೆ, ವಿರೋಧ ಬರ್ತಾ ಇದೆ.

9. ಸೈತಾನನ ಕುತಂತ್ರದಿಂದ ನಮ್ಮನ್ನ ಬೀಳಿಸೋಕೆ ಪ್ರಯತ್ನ ಮಾಡ್ತಾನೆ ಅಂತ ಬಾಬ್‌ ಅವ್ರ ಉದಾಹರಣೆಯಿಂದ ಹೇಗೆ ಗೊತ್ತಾಗುತ್ತೆ?

9 ಒತ್ತಡ. ಸೈತಾನ “ಕುತಂತ್ರ” ಮಾಡಿ ನಮ್ಮನ್ನ ಬೀಳಿಸೋಕೆ ಪ್ರಯತ್ನ ಮಾಡ್ತಾನೆ. (ಎಫೆ. 6:11) ಉದಾಹರಣೆಗೆ, ಸಹೋದರ ಬಾಬ್‌ಗೆ ಏನಾಯ್ತು ನೋಡಿ. ಅವ್ರಿಗೆ ಒಂದು ದೊಡ್ಡ ಆಪರೇಷನ್‌ ಮಾಡಬೇಕಾಗಿತ್ತು. ಆಗ ಅವರು ಡಾಕ್ಟರ್‌ಗಳ ಹತ್ರ ‘ನನಗೆ ಏನೇ ಆದ್ರೂ ರಕ್ತ ಕೊಡಬಾರದು’ ಅಂತ ಹೇಳಿದ್ರು. ಅದಕ್ಕೆ ಡಾಕ್ಟರುಗಳೂ ಒಪ್ಕೊಂಡಿದ್ರು. ಆದ್ರೆ ಆಪರೇಷನ್‌ ನಡಿಬೇಕಿದ್ದ ಹಿಂದಿನ ರಾತ್ರಿ ಏನಾಯ್ತು ಗೊತ್ತಾ? ಸಹೋದರನ ಕುಟುಂಬದವ್ರೆಲ್ಲ ಮನೆಗೆ ಹೋದ್ಮೇಲೆ ಅನಸ್ತೇಶಿಯಾ ಕೊಡೋ ಡಾಕ್ಟರ್‌ ಬಂದ್ರು. ಅವರು ಬಾಬ್‌ಗೆ ‘ಆಪರೇಷನ್‌ ಟೈಮಲ್ಲಿ ನಿಮಗೆ ರಕ್ತ ಕೊಡಲ್ಲ, ಆದ್ರೆ ಸುಮ್ನೆ ಸೈಡಲ್ಲಿ ಇಟ್ಟಿರ್ತೀವಿ, ಅಷ್ಟೇ’ ಅಂದ್ರು. ಸಹೋದರ ಒಬ್ರೇ ಇದ್ದಾಗ ಇದಕ್ಕೆ ಒಪ್ಕೊಬಹುದು ಅಂತ ಆ ಡಾಕ್ಟರ್‌ ಅಂದ್ಕೊಂಡ್ರು. ಆದ್ರೆ ಬಾಬ್‌ ತಮ್ಮ ನಿರ್ಧಾರನ ಬಿಟ್ಕೊಡಲಿಲ್ಲ, ಸ್ಥಿರವಾಗಿದ್ರು. ‘ನನ್ನ ಪ್ರಾಣ ಹೋಗೋ ಪರಿಸ್ಥಿತಿ ಬಂದ್ರೂ ನೀವು ರಕ್ತ ಕೊಡ್ಲೇಬಾರದು’ ಅಂತ ಹೇಳಿಬಿಟ್ರು.

10. ನಾವು ಲೋಕದ ಜನ್ರ ತರ ಯೋಚ್ನೆ ಮಾಡಿದ್ರೆ ಏನಾಗುತ್ತೆ? (1 ಕೊರಿಂಥ 3:19, 20)

10 ಲೋಕದ ಜನ್ರ ಯೋಚ್ನೆ. ನಾವು ಲೋಕದ ಜನ್ರ ತರ ಯೋಚ್ನೆ ಮಾಡಿದ್ರೆ ಯೆಹೋವ ದೇವರನ್ನ ಬಿಟ್ಟುಹೋಗಿಬಿಡ್ತೀವಿ. ಆತನ ನೀತಿನಿಯಮಗಳಿಗೆ ಒಂಚೂರೂ ಬೆಲೆ ಕೊಡಲ್ಲ. (1 ಕೊರಿಂಥ 3:19, 20 ಓದಿ.) “ಲೋಕದ ವಿವೇಕ” ಬೈಬಲ್‌ ಯಾವುದನ್ನ ತಪ್ಪು ಅಂತ ಹೇಳುತ್ತೋ ಅದು ತಪ್ಪಲ್ಲ ಅಂತ ಯೋಚ್ನೆ ಮಾಡೋ ತರ ಮಾಡಿಬಿಡುತ್ತೆ. ಒಂದನೇ ಶತಮಾನದಲ್ಲಿದ್ದ ಕೆಲವು ಕ್ರೈಸ್ತರಿಗೂ ಇದೇ ತರ ಆಯ್ತು. ಪೆರ್ಗಮ ಮತ್ತು ಥುವತೈರ ಸಭೆಯಲ್ಲಿದ್ದ ಕ್ರೈಸ್ತರು ಮೂರ್ತಿಪೂಜೆ, ಲೈಂಗಿಕ ಅನೈತಿಕತೆ ಮಾಡ್ತಿದ್ರು. ಇದು ಆ ಊರಲ್ಲಿ ತುಂಬ ಸಾಮಾನ್ಯವಾಗಿತ್ತು. ಆದ್ರೆ ಆ ತಪ್ಪುಗಳನ್ನ ಮಾಡ್ತಿದ್ದ ಕ್ರೈಸ್ತರನ್ನ ಆ ಸಭೆಯವರು ಸಹಿಸ್ಕೊಂಡು ಸುಮ್ನೆ ಇದ್ರು. ಅದಕ್ಕೆ ಯೇಸು ಆ ಎರಡೂ ಸಭೆಗಳನ್ನ ಖಂಡಿಸಿದನು. (ಪ್ರಕ. 2:14, 20) ಇವತ್ತು ನಮಗೂ ಲೋಕದ ಜನ್ರ ತರ ಯೋಚ್ನೆ ಮಾಡೋಕೆ ಒತ್ತಡ ಬರುತ್ತೆ. ಉದಾಹರಣೆಗೆ, ‘ನಮಗಿಷ್ಟ ಬಂದ ಹಾಗೆ ಜೀವನ ಮಾಡಬಹುದು, ಬೈಬಲಲ್ಲಿರೋ ನೈತಿಕ ನಿಯಮಗಳೆಲ್ಲ ಈ ಕಾಲಕ್ಕೆ ಸರಿಹೋಗಲ್ಲ’ ಅಂತ ನಮ್ಮ ಕುಟುಂಬದವರು ಅಥವಾ ಪರಿಚಯ ಇರೋರು ನಮಗೆ ಹೇಳಬಹುದು. ‘ಅವರು ಹೇಳ್ತಿರೋದೆಲ್ಲ ಸರಿ’ ಅಂತ ನಾವು ನಂಬೋ ತರ, ‘ಬೈಬಲಲ್ಲಿ ಇರೋದನ್ನ ಪಾಲಿಸಿಲ್ಲಾಂದ್ರೆ ಏನೂ ತೊಂದ್ರೆ ಆಗಲ್ಲ’ ಅಂತ ಅನಿಸೋ ಹಾಗೆ ಅವರು ಮಾಡಿಬಿಡಬಹುದು.

11. ನಾವು ಸ್ಥಿರವಾಗಿ ಇರಬೇಕು ಅಂತ ಹೇಳಿ ಏನು ಮಾಡಿಬಿಡಬಾರದು?

11 ಕೆಲವ್ರಿಗೆ ‘ಯೆಹೋವ ಕೊಟ್ಟಿರೋ ನಿರ್ದೇಶನ ಅರ್ಧಂಬರ್ಧ ಇದೆ, ಇನ್ನೂ ಸ್ವಲ್ಪ ಸ್ಪಷ್ಟವಾದ ನಿರ್ದೇಶನ ಕೊಟ್ಟಿದ್ರೆ ಚೆನ್ನಾಗಿ ಇರ್ತಿತ್ತು’ ಅಂತ ಅನಿಸಬಹುದು. ಆಗ ‘ಬೈಬಲಲ್ಲಿ ಬರೆದಿರೋ ವಿಷ್ಯಗಳನ್ನ ಅವರು ಮೀರಿ ಹೋಗಿಬಿಡಬಹುದು.’ (1 ಕೊರಿಂ. 4:6) ಯೇಸುವಿನ ಕಾಲದಲ್ಲಿದ್ದ ಧರ್ಮಗುರುಗಳು ಇದೇ ತಪ್ಪನ್ನ ಮಾಡಿದ್ರು. ಅವರು ನಿಯಮ ಪುಸ್ತಕದಲ್ಲಿದ್ದ ನಿಯಮಗಳ ಜೊತೆಗೆ ತಾವು ಸೃಷ್ಟಿ ಮಾಡಿದ್ದ ನಿಯಮಗಳನ್ನೂ ಸೇರಿಸಿದ್ರು. ಇದ್ರಿಂದ ಎಷ್ಟೋ ಅಮಾಯಕರು ತುಂಬ ಕಷ್ಟಪಟ್ರು. (ಮತ್ತಾ. 23:4) ಆದ್ರೆ ಯೆಹೋವ ದೇವರು ಇವತ್ತಿನ ತನಕ ತನ್ನ ವಾಕ್ಯದಿಂದ ತನ್ನ ಸಂಘಟನೆಯಿಂದ ಸ್ಪಷ್ಟವಾದ ನಿಯಮಗಳನ್ನ ಕೊಡ್ತಾ ಬಂದಿದ್ದಾನೆ. ನಾವು ಅದಕ್ಕೆ ಬೇರೆ ನಿಯಮಗಳನ್ನ ಸೇರಿಸೋ ಅಗತ್ಯ ಇಲ್ಲ. (ಜ್ಞಾನೋ. 3:5-7) ಹಾಗಾಗಿ ಬೈಬಲಲ್ಲಿ ಬರೆದಿರೋ ವಿಷ್ಯಗಳನ್ನ ಮೀರಿ ಹೋಗಬಾರದು. ಅಂದ್ರೆ ಬೇರೆಯವ್ರ ಸ್ವಂತ ವಿಚಾರಕ್ಕೆ ತಲೆ ಹಾಕಿ ನಾವು ನಿಯಮಗಳನ್ನ ಮಾಡಬಾರದು.

12. ‘ಅರ್ಥವಾಗದ ಮೋಸದ ಮಾತುಗಳನ್ನ’ ಸೈತಾನ ಹೇಗೆ ಬಳಸ್ತಾ ಇದ್ದಾನೆ?

12 ಮೋಸದ ಮಾತುಗಳು. ‘ಅರ್ಥವಾಗದ ಮೋಸದ ಮಾತುಗಳನ್ನ’ ಮತ್ತು ‘ಲೋಕದ ವಿಷ್ಯಗಳನ್ನ’ ಸೈತಾನ ಬಳಸಿ ಜನ್ರನ್ನ ದಾರಿ ತಪ್ಪಿಸ್ತಾನೆ, ಅವ್ರಲ್ಲಿ ಗೊಂದಲ ಹುಟ್ಟಿಸ್ತಾನೆ. (ಕೊಲೊ. 2:8) ಒಂದನೇ ಶತಮಾನದಲ್ಲೂ ಹೀಗೆ ಆಯ್ತು. ಕೆಲವರು ತಮ್ಮದೇ ಆದ ತತ್ವಜ್ಞಾನಗಳನ್ನ ಜನ್ರಿಗೆ ಕಲಿಸ್ತಿದ್ರು. ಯೆಹೂದ್ಯರು ಪವಿತ್ರ ಗ್ರಂಥದಲ್ಲಿ ಇಲ್ಲದಿದ್ದ ಆಚಾರ ವಿಚಾರಗಳನ್ನ ಕಲಿಸ್ತಾ ಇದ್ರು. ಅಷ್ಟೇ ಅಲ್ಲ ಮೋಶೆಯ ನಿಯಮ ಪುಸ್ತಕವನ್ನ ಕ್ರೈಸ್ತರು ಪಾಲಿಸ್ಲೇಬೇಕು ಅಂತ ಹೇಳ್ತಾ ಇದ್ರು. ಈ ಎಲ್ಲಾ ಮೋಸದ ಮಾತುಗಳು ಜನ್ರನ್ನ ಯೆಹೋವ ದೇವರಿಂದ ದೂರ ಮಾಡ್ತು. ಇವತ್ತೂ ಸೈತಾನ ಜನ್ರನ್ನ ಯೆಹೋವನಿಂದ ದೂರ ಮಾಡೋಕೆ ಮಾಧ್ಯಮಗಳನ್ನ, ಸೋಶಿಯಲ್‌ ನೆಟ್‌ವರ್ಕ್‌ಗಳನ್ನ ಬಳಸ್ತಿದ್ದಾನೆ. ಅದ್ರಲ್ಲಿ ರಾಜಕಾರಣಿಗಳು ಸುಳ್ಳುಸುದ್ದಿಗಳನ್ನ, ತಪ್ಪಾದ ವರದಿಗಳನ್ನ ಹಬ್ಬಿಸ್ತಾರೆ. ಕೊರೊನಾ ಸಮಯದಲ್ಲಿ ಇದು ತುಂಬಾನೇ ನಡೀತು. c ಇದನ್ನೆಲ್ಲ ಕೇಳಿ ಜನ ತುಂಬ ಭಯಪಟ್ಕೊಂಡ್ರು. ಆದ್ರೆ ಯೆಹೋವನ ಸಾಕ್ಷಿಗಳು ಈ ಮೋಸದ ಮಾತುಗಳಿಗೆ ಬಿದ್ದುಹೋಗಲಿಲ್ಲ. ಅವರು ಸಂಘಟನೆ ಕೊಟ್ಟ ನಿರ್ದೇಶನಗಳನ್ನ ಪಾಲಿಸಿದ್ರು. ಹಾಗಾಗಿ ಧೈರ್ಯವಾಗಿದ್ರು.—ಮತ್ತಾ. 24:45.

13. ನಮ್ಮ ಮನಸ್ಸು ಬೇರೆ ಕಡೆಗೆ ಹೋಗದೆ ಇರೋ ತರ ಯಾಕೆ ನೋಡ್ಕೊಬೇಕು?

13 ಮನಸ್ಸನ್ನ ಬೇರೆ ಕಡೆಗೆ ತಿರುಗಿಸೋ ವಿಷ್ಯಗಳು. ನಾವು ಯಾವಾಗ್ಲೂ ‘ತುಂಬ ಮುಖ್ಯವಾದ ವಿಷ್ಯಗಳಿಗೆ’ ಗಮನ ಕೊಡಬೇಕು. (ಫಿಲಿ. 1:9, 10) ಇಲ್ಲಾಂದ್ರೆ ನಮ್ಮ ಟೈಮೆಲ್ಲಾ ಹಾಳಾಗುತ್ತೆ. ಉದಾಹರಣೆಗೆ ತಿನ್ನೋದು, ಕುಡಿಯೋದು, ಆಟ-ಸುತ್ತಾಟ, ಉದ್ಯೋಗ ಇದ್ರ ಮೇಲೆನೇ ಯಾವಾಗ್ಲೂ ಗಮನ ಇಟ್ರೆ ಇದೇ ನಮ್ಮ ಜೀವನದಲ್ಲಿ ಮುಖ್ಯ ಆಗಿಬಿಡುತ್ತೆ. ಆಗ ಒಳ್ಳೇ ವಿಷ್ಯಗಳಿಗೆ ಗಮನ ಕೊಡೋಕೇ ಆಗಲ್ಲ. (ಲೂಕ 21:34, 35) ಜಗತ್ತಲ್ಲಿ ನಡೀತಾ ಇರೋ ಘಟನೆಗಳು, ರಾಜಕೀಯ ವಿಷ್ಯಗಳು ನ್ಯೂಸ್‌ಗಳಲ್ಲಿ ತುಂಬ್ಕೊಂಡಿರುತ್ತೆ. ನಾವು ಅದಕ್ಕೇ ಜಾಸ್ತಿ ಗಮನ ಕೊಟ್ರೆ ನಮ್ಮ ಮನಸ್ಸು ಪಕ್ಷ ವಹಿಸೋಕೆ ಶುರು ಮಾಡಿಬಿಡುತ್ತೆ. ಇದನ್ನೆಲ್ಲ ಬಳಸಿ ಸೈತಾನ ನಮ್ಮನ್ನ ಬೀಳಿಸೋಕೆ ನೋಡ್ತಾನೆ. ಆದ್ರೆ ನಾವು ಬೀಳದೆ ಸ್ಥಿರವಾಗಿ ನಿಲ್ಲೋಕೆ ಏನು ಮಾಡಬೇಕು ಅಂತ ಮುಂದೆ ನೋಡೋಣ.

ಬೀಳದೆ ಇರೋಕೆ ಏನು ಮಾಡಬೇಕು?

ನೀವು ಯಾಕೆ ದೀಕ್ಷಾಸ್ನಾನ ತಗೊಂಡ್ರಿ ಅಂತ ನೆನಪಿಸ್ಕೊಂಡ್ರೆ, ಬೈಬಲ್‌ ಓದಿ ಯೋಚ್ನೆ ಮಾಡಿದ್ರೆ, ಮನಸ್ಸು ಚಂಚಲ ಆಗದಿರೋ ತರ ನೋಡ್ಕೊಂಡ್ರೆ, ಯೆಹೋವನನ್ನ ನಂಬಿದ್ರೆ ಸ್ಥಿರವಾಗಿ ಇರ್ತೀರ (ಪ್ಯಾರ 14-18 ನೋಡಿ)

14. ನಾವು ಯಾವಾಗ್ಲೂ ಯೆಹೋವನ ಪಕ್ಷ ವಹಿಸೋಕೆ ಯಾವುದು ಸಹಾಯ ಮಾಡುತ್ತೆ?

14 ನೀವು ಯಾಕೆ ಸಮರ್ಪಣೆ ಮಾಡ್ಕೊಂಡ್ರಿ, ದೀಕ್ಷಾಸ್ನಾನ ತಗೊಂಡ್ರಿ ಅಂತ ಆಗಾಗ ನೆನಪಿಸ್ಕೊಳ್ಳಿ. ನೀವು ಬೈಬಲ್‌ ಕಲಿತಾಗ ಇದೇ ಸತ್ಯ ಅಂತ ಯಾಕೆ ಅನಿಸ್ತು ಅನ್ನೋದ್ರ ಬಗ್ಗೆ ಯೋಚ್ನೆ ಮಾಡಿ. ಮೊದ್ಲು, ಯೆಹೋವನ ಬಗ್ಗೆ ತಿಳ್ಕೊಂಡ್ರಿ. ಇದ್ರಿಂದ ಆತನ ಮೇಲೆ ಪ್ರೀತಿ, ಗೌರವ ಮತ್ತು ನಂಬಿಕೆ ಬೆಳೆಸ್ಕೊಂಡ್ರಿ. ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ರಿ. ಕೆಟ್ಟ ಅಭ್ಯಾಸಗಳನ್ನ ಬಿಟ್ಟು ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಬೇಕು ಅಂತ ಮನಸಾರೆ ಬದಲಾವಣೆಗಳನ್ನ ಮಾಡ್ಕೊಂಡ್ರಿ. ಯೆಹೋವ ನಿಮ್ಮನ್ನ ಕ್ಷಮಿಸ್ತಾನೆ ಅಂತ ಗೊತ್ತಾದಾಗ ನಿಮಗೆ ನೆಮ್ಮದಿ ಆಯ್ತು. (ಕೀರ್ತ. 32:1, 2) ಆಮೇಲೆ ಕೂಟಗಳಿಗೆ ಬರೋಕೆ ಶುರು ಮಾಡಿದ್ರಿ. ಕಲಿತ ವಿಷ್ಯಗಳನ್ನ ಬೇರೆಯವ್ರಿಗೂ ಹೇಳಿದ್ರಿ. ಹೀಗೆ ಯೆಹೋವನ ಪಕ್ಷದಲ್ಲಿ ನಿಂತ್ಕೊಬೇಕು ಅಂತ ತೀರ್ಮಾನ ಮಾಡಿ ದೀಕ್ಷಾಸ್ನಾನ ತಗೊಂಡ್ರಿ. ಅವತ್ತಿಂದ ಇವತ್ತಿನ ತನಕ ನೀವು ಜೀವದ ದಾರಿಯಲ್ಲಿ ನಡೀತಾ ಇದ್ದೀರ. ಇದನ್ನೆಲ್ಲ ನೆನಸ್ಕೊಂಡಾಗ ಅದೇನೇ ಆದ್ರೂ ಈ ದಾರಿನ ಬಿಟ್ಟುಹೋಗಬಾರದು ಅನ್ನೋ ನಿಮ್ಮ ನಿರ್ಧಾರ ಇನ್ನೂ ಗಟ್ಟಿ ಆಗುತ್ತೆ.—ಮತ್ತಾ. 7:13, 14.

15. ಬೈಬಲನ್ನ ಓದಿ ಚೆನ್ನಾಗಿ ಯೋಚ್ನೆ ಮಾಡೋದ್ರಿಂದ ನಮಗೆ ಏನು ಪ್ರಯೋಜನ ಆಗುತ್ತೆ?

15 ಬೈಬಲನ್ನ ಓದಿ ಅದ್ರ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಿ. ಒಂದು ಮರದ ಬೇರು ಆಳವಾಗಿ ಇಳಿದ್ರೆನೇ ಆ ಮರ ಗಟ್ಟಿಯಾಗಿ ನಿಲ್ಲುತ್ತೆ. ಅದೇ ತರ ನಾವು ಬೈಬಲನ್ನ ಚೆನ್ನಾಗಿ ಓದಿ ಅಧ್ಯಯನ ಮಾಡಿದ್ರೆನೇ ನಮ್ಮ ನಂಬಿಕೆ ಗಟ್ಟಿಯಾಗಿ ಇರುತ್ತೆ. ಒಂದು ಮರ ಬೆಳೀತಾ ಹೋದ ಹಾಗೆ ಅದ್ರ ಬೇರು ಇನ್ನೂ ಆಳಕ್ಕೆ ಇಳೀತಾ, ಹರಡ್ತಾ ಹೋಗುತ್ತೆ. ಅದೇ ತರ ನಾವು ಬೈಬಲನ್ನ ಓದಿ ಅದ್ರ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಿದ್ರೆ ಯೆಹೋವನ ಮೇಲೆ ನಂಬಿಕೆ ಜಾಸ್ತಿ ಆಗ್ತಾ ಹೋಗುತ್ತೆ. ಅಷ್ಟೇ ಅಲ್ಲ, ಆತನು ಮಾಡೋದೆಲ್ಲ ನಮ್ಮ ಒಳ್ಳೇದಕ್ಕೆ ಅಂತ ಅರ್ಥ ಮಾಡ್ಕೊಳ್ತೀವಿ. (ಕೊಲೊ. 2:6, 7) ಹಿಂದಿನ ಕಾಲದಲ್ಲಿ ಯೆಹೋವ ತನ್ನ ಜನ್ರಿಗೆ ಹೇಗೆ ದಾರಿ ತೋರಿಸಿದ್ದಾನೆ, ಅವ್ರನ್ನ ಹೇಗೆ ಕಾಪಾಡಿದ್ದಾನೆ ಅನ್ನೋದ್ರ ಬಗ್ಗೆ ಯೋಚ್ನೆ ಮಾಡಿ. ಉದಾಹರಣೆಗೆ ಯೆಹೆಜ್ಕೇಲ ಒಂದು ದರ್ಶನದಲ್ಲಿ ಒಬ್ಬ ದೇವದೂತ ಆಲಯನ ಅಳತೆ ಮಾಡ್ತಾ ಇರೋದನ್ನ ನೋಡಿದ. ಅದನ್ನ ಯೆಹೆಜ್ಕೇಲ ಗಮನ ಕೊಟ್ಟು ನೋಡಿದ್ರಿಂದ ಅವನಿಗೆ ತುಂಬ ಪ್ರಯೋಜನ ಆಯ್ತು. ನಾವು ಕೂಡ ಈ ದರ್ಶನದ ಬಗ್ಗೆ ಓದಿ ಅಧ್ಯಯನ ಮಾಡೋದ್ರಿಂದ ಯೆಹೋವ ದೇವರಿಗೆ ಇಷ್ಟ ಆಗೋ ತರ ಆರಾಧನೆ ಮಾಡೋದು ಹೇಗೆ ಅಂತ ಕಲಿತೀವಿ. d (ಯೆಹೆ. 40:1-4; 43:10-12) ನಾವು ಬೈಬಲಲ್ಲಿರೋ ಆಳವಾದ ವಿಷ್ಯಗಳ ಬಗ್ಗೆ ಓದಿ ಅಧ್ಯಯನ ಮಾಡಬೇಕು. ಹೀಗೆ ಮಾಡಿದ್ರೆ ನಾವು ತುಂಬ ಪ್ರಯೋಜನ ಪಡ್ಕೊಳ್ತೀವಿ.

16. ಸಹೋದರ ಬಾಬ್‌ ಅವ್ರ ಮನಸ್ಸು ಸ್ಥಿರವಾಗಿ ಇದ್ದಿದ್ರಿಂದ ಅವ್ರಿಗೆ ಏನು ಮಾಡಕ್ಕಾಯ್ತು? (ಕೀರ್ತನೆ 112:7)

16 ಮನಸ್ಸು ಚಂಚಲ ಆಗದ ಹಾಗೆ ನೋಡ್ಕೊಳ್ಳಿ. ರಾಜ ದಾವೀದನಿಗೆ ಯೆಹೋವನ ಮೇಲೆ ತುಂಬ ಪ್ರೀತಿ ಇತ್ತು. ಅದಕ್ಕೆ ಅವನು “ದೇವರೇ, ನನ್ನ ಹೃದಯ ಸ್ಥಿರವಾಗಿದೆ” ಅಂತ ಹಾಡಿದ. (ಕೀರ್ತ. 57:7) ನಮ್ಮ ಹೃದಯನೂ ಸ್ಥಿರವಾಗಿ ಇರಬೇಕಂದ್ರೆ ನಾವು ಯೆಹೋವ ದೇವರನ್ನ ಪೂರ್ತಿಯಾಗಿ ನಂಬಬೇಕು. (ಕೀರ್ತನೆ 112:7 ಓದಿ.) ಸಹೋದರ ಬಾಬ್‌ಗೂ ಯೆಹೋವನ ಮೇಲೆ ಪೂರ್ತಿ ನಂಬಿಕೆ ಇತ್ತು. ಅದಕ್ಕೆ ಡಾಕ್ಟರ್‌ ‘ನಿಮಗೆ ರಕ್ತ ಕೊಡಲ್ಲ, ಆದ್ರೆ ಕೊಡ್ಲೇಬೇಕಾದ ಪರಿಸ್ಥಿತಿ ಏನಾದ್ರೂ ಬಂದ್ರೆ ಅಂತ ಸುಮ್ನೆ ಪಕ್ಕದಲ್ಲಿ ಇಟ್ಟಿರ್ತೀವಿ’ ಅಂತ ಹೇಳಿದಾಗ ಆ ಸಹೋದರ ತಕ್ಷಣ ಒಂದು ಕ್ಷಣನೂ ಯೋಚ್ನೆ ಮಾಡದೆ ‘ಹಾಗಾದ್ರೆ ನಾನು ಈಗ್ಲೇ ಆಸ್ಪತ್ರೆಯಿಂದ ಹೋಗಿಬಿಡ್ತೀನಿ’ ಅಂತ ಹೇಳಿಬಿಟ್ರು. ಇದ್ರ ಬಗ್ಗೆ ಬಾಬ್‌ ಏನು ಹೇಳ್ತಾರಂದ್ರೆ “ನನ್ನ ಮನಸ್ಸು ಚಂಚಲ ಆಗ್ಲಿಲ್ಲ. ನನ್ನ ಜೀವ ಹೋಗಿಬಿಡುತ್ತೇನೋ ಅನ್ನೋ ಭಯನೂ ಇರಲಿಲ್ಲ.”

ನಮ್ಮ ನಂಬಿಕೆ ಬಲವಾಗಿದ್ರೆ ಎಷ್ಟೇ ಕಷ್ಟ ಬಂದ್ರೂ ನಾವು ಸ್ಥಿರವಾಗಿ ಇರ್ತೀವಿ (ಪ್ಯಾರ 17 ನೋಡಿ)

17. ಸಹೋದರ ಬಾಬ್‌ ಅವ್ರಿಂದ ನಾವೇನು ಕಲಿಬಹುದು? (ಚಿತ್ರನೂ ನೋಡಿ.)

17 ಸಹೋದರ ಬಾಬ್‌ ಆಸ್ಪತ್ರೆಗೆ ಹೋಗೋ ಮುಂಚೆನೇ ರಕ್ತ ತಗೊಳ್ಳಲೇಬಾರದು ಅಂತ ತೀರ್ಮಾನ ಮಾಡಿದ್ರು. ಅವರು ಇಷ್ಟು ಸ್ಥಿರವಾಗಿ ಇರೋಕೆ ಕಾರಣ ಏನು? ಒಂದು, ‘ಏನೇ ಆದ್ರೂ ನಾನು ಯೆಹೋವನ ಮನಸ್ಸನ್ನ ಖುಷಿಪಡಿಸಬೇಕು’ ಅಂತ ಅವರು ತೀರ್ಮಾನ ಮಾಡಿದ್ರು. ಎರಡು, ಅವರು ಬೈಬಲ್‌ ಮತ್ತು ಬೇರೆ ಪ್ರಕಾಶನಗಳನ್ನ ಓದಿ ಜೀವ ಮತ್ತು ರಕ್ತ ಎಷ್ಟು ಪವಿತ್ರವಾಗಿದೆ ಅಂತ ಚೆನ್ನಾಗಿ ಅರ್ಥ ಮಾಡ್ಕೊಂಡ್ರು. ಮೂರು, ಯೆಹೋವನ ಮಾತು ಕೇಳಿದ್ರೆ ಈಗ ಮಾತ್ರ ಅಲ್ಲ ಮುಂದಕ್ಕೂ ಒಳ್ಳೇದಾಗುತ್ತೆ ಅಂತ ನಂಬಿದ್ರು. ಇದ್ರಿಂದ ಏನು ಗೊತ್ತಾಗುತ್ತೆ? ನಮಗೆ ಏನೇ ಕಷ್ಟ ಬಂದ್ರೂ ನಮ್ಮ ಮನಸ್ಸು ಕೂಡ ಬಾಬ್‌ ತರ ಸ್ಥಿರವಾಗಿ ಇರೋಕಾಗುತ್ತೆ ಅಂತ ಗೊತ್ತಾಗುತ್ತೆ.

ಬಾರಾಕ ಮತ್ತು ಅವನ ಸೈನಿಕರು ಸಿಸೆರನ ಸೈನ್ಯನ ಧೈರ್ಯದಿಂದ ಅಟ್ಟಿಸ್ಕೊಂಡು ಹೋಗ್ತಿದ್ದಾರೆ (ಪ್ಯಾರ 18 ನೋಡಿ)

18. ಬಾರಾಕನ ತರ ನಾವೂ ಏನು ಮಾಡಬೇಕು? (ಮುಖಪುಟ ಚಿತ್ರ ನೋಡಿ.)

18 ಯೆಹೋವ ದೇವರನ್ನ ನಂಬಿ. ಬಾರಾಕ ಯೆಹೋವನ ಮೇಲೆ ನಂಬಿಕೆ ಇಟ್ಟಿದ್ರಿಂದಾನೇ ಯುದ್ಧದಲ್ಲಿ ಗೆಲ್ಲೋಕೆ ಆಯ್ತು. ಬಾರಾಕ ಕಾನಾನಿನ ಸೇನಾಪತಿಯಾದ ಸಿಸೆರನ ವಿರುದ್ಧ ಯುದ್ಧಕ್ಕೆ ಹೋಗಬೇಕಾಗಿತ್ತು. ಸಿಸೆರನ ಸೈನ್ಯದ ಹತ್ರ ಎಲ್ಲಾ ಆಯುಧಗಳಿತ್ತು, 900 ರಥಗಳಿತ್ತು. ಆದ್ರೆ ಬಾರಾಕನ ಸೈನಿಕರ ಹತ್ರ ಈಟಿ, ಗುರಾಣಿ ಏನೂ ಇರಲಿಲ್ಲ. (ನ್ಯಾಯ. 5:8) ಆದ್ರೆ ದೆಬೋರ ‘ನೀನು ಬೆಟ್ಟದಿಂದ ಇಳಿದು ಸಮತಟ್ಟಾದ ಪ್ರದೇಶಕ್ಕೆ ಹೋಗಿ ಯುದ್ಧ ಮಾಡು’ ಅಂತ ಬಾರಾಕನಿಗೆ ಹೇಳಿದಳು. ಮೈದಾನದಲ್ಲಿ ರಥಗಳು ಸುಲಭವಾಗಿ ಓಡುತ್ತೆ. ಹಾಗಾಗಿ ಕಾನಾನ್ಯರಿಗೆ ಯುದ್ಧ ಮಾಡೋಕೆ ಕಷ್ಟ ಆಗಲ್ಲ ಅಂತ ಗೊತ್ತಿದ್ರೂ ಬಾರಾಕ ದೆಬೋರ ಹೇಳಿದ ಹಾಗೆನೇ ಮಾಡಿದ. ಅವನು ಮತ್ತು ಅವನ ಸೈನಿಕರು ತಾಬೋರ್‌ ಬೆಟ್ಟದಿಂದ ಇಳಿತಾ ಇರುವಾಗ್ಲೇ ಯೆಹೋವ ಮಳೆ ಬರೋ ತರ ಮಾಡಿದನು. ಆಗ ಸಿಸೆರನ ಸೈನ್ಯದ ರಥಗಳು ಕೆಸರಲ್ಲಿ ಸಿಕ್ಕಿಹಾಕೊಂಡ್ವು. ಬಾರಾಕ ಗೆದ್ದುಬಿಟ್ಟ. (ನ್ಯಾಯ. 4:1-7, 10, 13-16) ಬಾರಾಕನ ತರ ನಾವು ಕೂಡ ಯೆಹೋವನನ್ನ ನಂಬಬೇಕು. ಆತನು ಯಾರಿಂದ ನಿರ್ದೇಶನ ಕೊಡ್ತಾ ಇದ್ದಾನೋ ಅವ್ರನ್ನೂ ನಂಬಬೇಕು. ಆಗ ಯೆಹೋವ ನಮ್ಮನ್ನೂ ಗೆಲ್ಲಿಸ್ತಾನೆ.—ಧರ್ಮೋ. 31:6.

ಕೊನೇ ತನಕ ಸ್ಥಿರವಾಗಿ ಇರಿ!

19. ನೀವು ಯಾಕೆ ಸ್ಥಿರವಾಗಿ ಇರಬೇಕು ಅಂತ ತೀರ್ಮಾನ ಮಾಡಿದ್ದೀರ?

19 ಹೊಸ ಲೋಕ ಬರೋ ತನಕ ನಾವು ಸ್ಥಿರವಾಗಿ ಇರೋಕೆ ಹೋರಾಡ್ತಾ ಇರಬೇಕು. (1 ತಿಮೊ. 6:11, 12; 2 ಪೇತ್ರ 3:17) ಎಷ್ಟೇ ಹಿಂಸೆ, ಒತ್ತಡಗಳು ಬಂದ್ರೂ, ಲೋಕದ ಜನ್ರ ಯೋಚ್ನೆಗಳು ಮತ್ತು ಮೋಸದ ಮಾತುಗಳು ನಮ್ಮನ್ನ ದಾರಿ ತಪ್ಪಿಸೋಕೆ ಪ್ರಯತ್ನ ಮಾಡಿದ್ರೂ, ನಮ್ಮ ಮನಸ್ಸನ್ನ ಬೇರೆ ಕಡೆಗೆ ಸೆಳೆಯೋ ವಿಷ್ಯಗಳು ಬಂದ್ರೂ ನಾವು ಚಂಚಲ ಆಗಬಾರದು. (ಎಫೆ. 4:14) ಯೆಹೋವ ದೇವರನ್ನ ಮಾತ್ರ ಆರಾಧಿಸಬೇಕು. ಎಷ್ಟೇ ಕಷ್ಟ ಬಂದ್ರೂ ಆತನ ಆಜ್ಞೆಗಳನ್ನ ಪಾಲಿಸಬೇಕು. ಹೀಗೆ ನಾವು ಸ್ಥಿರವಾಗಿ ಇರಬೇಕು. ಆದ್ರೆ ಅದೇ ಸಮಯದಲ್ಲಿ, ನಾವು ಹೇಳಿದ್ದೇ ನಡಿಬೇಕು ಅಂತ ಹಠ ಮಾಡಬಾರದು. ಬೇರೆಯವ್ರಿಗೆ ಬಿಟ್ಕೊಡಬೇಕು. ಈ ವಿಷ್ಯದಲ್ಲಿ ಯೆಹೋವ ಮತ್ತು ಯೇಸು ನಮಗೆ ಒಳ್ಳೇ ಮಾದರಿ ಆಗಿದ್ದಾರೆ. ಹೇಗೆ ಅಂತ ಮುಂದಿನ ಲೇಖನದಲ್ಲಿ ನೋಡೋಣ.

ಗೀತೆ 154 ತಾಳಿಕೊಳ್ಳುತ್ತಾ ಇರೋಣ

a ಯಾವುದು ಸರಿ ಯಾವುದು ತಪ್ಪು ಅಂತ ಮನುಷ್ಯರು ತಾವೇ ತೀರ್ಮಾನ ಮಾಡಬೇಕು ಅಂತ ಸೈತಾನ ಆದಾಮನ ಕಾಲದಿಂದಾನೇ ಜನ್ರ ತಲೆಯಲ್ಲಿ ತುಂಬಿಸ್ತಿದ್ದಾನೆ. ನಾವು ಯೆಹೋವ ಹೇಳಿದ ತರ, ಸಂಘಟನೆ ಹೇಳಿದ ತರ ಮಾಡದೆ ನಮಗಿಷ್ಟ ಆಗಿದ್ದನ್ನೇ ಮಾಡಬೇಕು ಅಂತ ಈಗ್ಲೂ ಸೈತಾನ ಬಯಸ್ತಾನೆ. ಹಾಗಾಗಿ ನಾವು ಯೆಹೋವನ ನಿಯಮನ ಪಾಲಿಸ್ತಾ ಇರೋಕೆ ಮತ್ತು ಆತನ ಪಕ್ಷದಲ್ಲೇ ನಿಲ್ಲೋಕೆ ಈ ಲೇಖನ ನಮಗೆ ಸಹಾಯ ಮಾಡುತ್ತೆ.

b ರಕ್ತದ ಬಗ್ಗೆ ದೇವರು ಕೊಟ್ಟಿರೋ ನಿಯಮನ ಕ್ರೈಸ್ತರು ಹೇಗೆ ಪಾಲಿಸಬೇಕು ಅನ್ನೋದ್ರ ಬಗ್ಗೆ ತಿಳ್ಕೊಳ್ಳೋಕೆ ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ 39​ನೇ ಪಾಠ ನೋಡಿ.

c jw.orgನಲ್ಲಿ “ತಪ್ಪು ಮಾಹಿತಿ ಅನ್ನೋ ಸುಳಿಗೆ ಸಿಲುಕದಿರಿ” ಅನ್ನೋ ವಿಡಿಯೋ ನೋಡಿ.