ಅಧ್ಯಯನ ಲೇಖನ 28
ಗೀತೆ 125 ದೇವಪ್ರಭುತ್ವಾತ್ಮಕ ಕ್ರಮಕ್ಕೆ ನಿಷ್ಠೆಯ ಅಧೀನತೆ
ನೀವು ಸತ್ಯ ಗುರುತಿಸ್ತೀರಾ?
‘ಸತ್ಯವನ್ನ ಸೊಂಟಪಟ್ಟಿ ತರ ಬಿಗಿದುಕೊಳ್ಳಿ.’ —ಎಫೆ. 6:14.
ಈ ಲೇಖನದಲ್ಲಿ ಏನಿದೆ?
ಯೆಹೋವ ದೇವರಿಂದ ಕಲಿತಿರೋ ಸತ್ಯಕ್ಕೂ, ಸೈತಾನ ಮತ್ತು ನಮ್ಮ ವಿರೋಧಿಗಳು ಹಬ್ಬಿಸ್ತಾ ಇರೋ ಸುಳ್ಳಿಗೂ ಇರೋ ವ್ಯತ್ಯಾಸ ಗುರುತಿಸೋದು ಹೇಗೆ ಅಂತ ಕಲಿಯೋಕೆ ಈ ಲೇಖನ ಸಹಾಯ ಮಾಡುತ್ತೆ.
1. ನೀವ್ಯಾಕೆ ಸತ್ಯನ ಇಷ್ಟಪಡ್ತೀರಾ?
ಯೆಹೋವನ ಜನ್ರಾಗಿರೋ ನಮಗೆ ದೇವರ ವಾಕ್ಯವಾದ ಬೈಬಲಲ್ಲಿರೋ ಸತ್ಯಗಳು ಅಂದ್ರೆ ತುಂಬ ಇಷ್ಟ. ನಮ್ಮ ನಂಬಿಕೆಗೆ ಅದೇ ಆಧಾರ. (ರೋಮ. 10:17) ಯೆಹೋವ ದೇವರು ಕ್ರೈಸ್ತ ಸಭೆಯನ್ನ “ಸತ್ಯದ ಸ್ತಂಭ, ಆಧಾರ ಆಗಿ” ಇಟ್ಟಿದ್ದಾನೆ ಅಂತ ನಾವೆಲ್ರೂ ನಂಬ್ತೀವಿ. (1 ತಿಮೊ. 3:15) ನಮ್ಮನ್ನ “ಮುಂದೆ ನಿಂತು . . . ನಡಿಸುವವ್ರ” ಮಾತನ್ನ ನಾವು ಕೇಳ್ತೀವಿ, ಅವ್ರಿಗೆ ಅಧೀನತೆ ತೋರಿಸ್ತೀವಿ. ಯಾಕಂದ್ರೆ ಅವರು ಬೈಬಲಲ್ಲಿರೋ ಸತ್ಯವನ್ನೇ ನಮಗೆ ಅರ್ಥಮಾಡಿಸ್ತಾರೆ. ಅಷ್ಟೇ ಅಲ್ಲ ಅವರು ದೇವರು ಇಷ್ಟಪಡೋ ತರನೇ ನಮಗೆ ನಿರ್ದೇಶನ ಕೊಡ್ತಾರೆ.—ಇಬ್ರಿ. 13:17.
2. ಯಾಕೋಬ 5:19ರಲ್ಲಿ ಹೇಳಿರೋ ತರ ನಮಗೆ ಸತ್ಯ ಕಲಿತ ಮೇಲೂ ಏನಾಗಿಬಿಡಬಹುದು?
2 ನಾವು ಬೈಬಲಲ್ಲಿ ಇರೋದು ಸತ್ಯ ಅಂತ ನಂಬ್ತೀವಿ ಮತ್ತು ಯೆಹೋವನ ಸಂಘಟನೆ ಕೊಡೋ ನಿರ್ದೇಶನ ಪಾಲಿಸೋಕೆ ಇಷ್ಟಪಡ್ತೀವಿ. ಹಾಗಿದ್ರೂ ನಾವು ಸತ್ಯದಿಂದ ದೂರ ಹೋಗಿಬಿಡಬಹುದು. (ಯಾಕೋಬ 5:19 ಓದಿ.) ಯಾಕಂದ್ರೆ ನಾವು ಬೈಬಲ್ ಸತ್ಯ ನಂಬದೇ ಇರೋ ತರ, ಸಂಘಟನೆ ಕೊಡೋ ನಿರ್ದೇಶನ ಪಾಲಿಸದೇ ಇರೋ ತರ ಸೈತಾನ ಮಾಡ್ತಾನೆ.—ಎಫೆ. 4:14.
3. ಸತ್ಯಕ್ಕೆ ತಕ್ಕ ಹಾಗೆ ನಾವ್ಯಾಕೆ ನಡಿಬೇಕು? (ಎಫೆಸ 6:13, 14)
3 ಎಫೆಸ 6:13, 14 ಓದಿ. ಇನ್ನು ಸ್ವಲ್ಪ ಸಮಯದಲ್ಲೇ ಸೈತಾನ ಮನವೊಲಿಸೋ ಸುಳ್ಳುಗಳನ್ನ ಹೇಳಿ ಇಡೀ ಭೂಮಿಯ ಜನ್ರು ಯೆಹೋವನ ವಿರುದ್ಧ ನಿಲ್ಲೋ ತರ ಮಾಡ್ತಾನೆ. (ಪ್ರಕ. 16:13, 14) ದೇವ ಜನ್ರಾದ ನಮ್ಮನ್ನೂ ಅವನು ದಾರಿ ತಪ್ಪಿಸೋಕೆ ತುಂಬ ಪ್ರಯತ್ನ ಮಾಡ್ತಾನೆ ಅನ್ನೋದು ನಮಗೆ ಗೊತ್ತಿದೆ. (ಪ್ರಕ. 12:9) ಹಾಗಾಗಿ ಸತ್ಯ ಯಾವುದು ಮತ್ತು ಸುಳ್ಳು ಯಾವುದು ಅಂತ ಗುರುತಿಸೋಕೆ ನಮಗೆ ನಾವೇ ತರಬೇತಿ ಮಾಡ್ಕೊಬೇಕು ಮತ್ತು ಸತ್ಯಕ್ಕೆ ತಕ್ಕ ಹಾಗೆ ನಡಿಬೇಕು. (ರೋಮ. 6:17; 1 ಪೇತ್ರ 1:22) ಹೀಗೆ ಮಾಡಿದ್ರೆ ಮಹಾ ಸಂಕಟವನ್ನ ಪಾರಾಗೋಕೆ ಆಗುತ್ತೆ.
4. ಈ ಲೇಖನದಲ್ಲಿ ನಾವೇನು ಕಲಿತೀವಿ?
4 ನಾವು ಈ ಲೇಖನದಲ್ಲಿ, ಬೈಬಲಲ್ಲಿರೋ ಸತ್ಯನ ಗುರುತಿಸೋಕೆ ಸಹಾಯ ಮಾಡೋ ಮತ್ತು ದೇವರ ಸಂಘಟನೆ ಕೊಡೋ ನಿರ್ದೇಶನ ಪಾಲಿಸೋಕೆ ಸಹಾಯ ಮಾಡೋ ಎರಡು ಗುಣಗಳ ಬಗ್ಗೆ ಕಲಿತೀವಿ. ಅಷ್ಟೇ ಅಲ್ಲ ಸತ್ಯದಲ್ಲಿ ಸ್ಥಿರವಾಗಿ ನಿಲ್ಲೋಕೆ ಸಹಾಯ ಮಾಡೋ ಮೂರು ವಿಷ್ಯಗಳ ಬಗ್ಗೆ ಕಲಿತೀವಿ.
ಸತ್ಯವನ್ನ ಗುರುತಿಸೋಕೆ ನಮ್ಮಲ್ಲಿ ಇರಬೇಕಾದ ಗುಣಗಳು
5. ಯೆಹೋವನ ಮೇಲಿರೋ ಭಯ ಸತ್ಯ ಗುರುತಿಸೋಕೆ ನಮಗೆ ಹೇಗೆ ಸಹಾಯ ಮಾಡುತ್ತೆ?
5 ಯೆಹೋವನ ಮೇಲಿರೋ ಭಯ. ನಮಗೆ ಯೆಹೋವನ ಮೇಲೆ ಭಯ ಇದ್ರೆ ನಾವು ಆತನನ್ನ ತುಂಬ ಪ್ರೀತಿಸ್ತೀವಿ ಮತ್ತು ಆತನಿಗೆ ಇಷ್ಟ ಇಲ್ಲದೇ ಇರೋದನ್ನ ಮಾಡಲ್ಲ. ಸರಿ ಯಾವುದು, ತಪ್ಪು ಯಾವುದು ಅಂತ ಕಂಡುಹಿಡಿಯೋಕೆ ಕಲಿತೀವಿ ಮತ್ತು ಸತ್ಯ ಯಾವುದು, ಸುಳ್ಳು ಯಾವುದು ಅಂತ ಗುರುತಿಸೋಕೂ ಕಲಿತೀವಿ. ಹೀಗೆ ಮಾಡುವಾಗ ಯೆಹೋವನ ಮೆಚ್ಚಿಗೆ ಪಡ್ಕೊಳ್ತೀವಿ. (ಜ್ಞಾನೋ. 2:3-6; ಇಬ್ರಿ. 5:14) ಆದ್ರೆ ಯೆಹೋವನ ಮೇಲಿರೋ ಪ್ರೀತಿಗಿಂತ ನಮಗೆ ಮನುಷ್ಯರ ಮೇಲಿರೋ ಭಯ ಜಾಸ್ತಿ ಆಗಬಾರದು. ಯಾಕಂದ್ರೆ ನಾವು ಮನುಷ್ಯರನ್ನ ಮೆಚ್ಚಿಸೋಕೆ ಹೋದ್ರೆ ಯೆಹೋವನನ್ನ ಖುಷಿಪಡಿಸೋಕೆ ಆಗಲ್ಲ.
6. ಮನುಷ್ಯರ ಮೇಲೆ ಭಯ ಇದ್ದಿದ್ರಿಂದ 10 ಗೂಢಚಾರರು ಸತ್ಯವನ್ನ ಹೇಗೆ ತಿರುಚಿದ್ರು?
6 ನಮಗೆ ದೇವರ ಮೇಲಿರೋ ಭಯಕ್ಕಿಂತ ಮನುಷ್ಯರ ಮೇಲಿರೋ ಭಯ ಜಾಸ್ತಿಯಾದ್ರೆ ನಾವು ಸತ್ಯದಿಂದ ದೂರ ಹೋಗಿಬಿಡಬಹುದು. ಕಾನಾನ್ ದೇಶಕ್ಕೆ ಹೋದ 12 ಗೂಢಚಾರರ ಬಗ್ಗೆ ನೋಡಿ. ಅವ್ರಲ್ಲಿ 10 ಗೂಢಚಾರರಿಗೆ ಯೆಹೋವನ ಮೇಲಿದ್ದ ಪ್ರೀತಿಗಿಂತ ಕಾನಾನ್ಯರ ಮೇಲಿದ್ದ ಭಯನೇ ಜಾಸ್ತಿಯಾಗಿತ್ತು. ಅದಕ್ಕೇ ಅವರು ಇಸ್ರಾಯೇಲ್ಯರ ಹತ್ರ “ಅವ್ರ ಜೊತೆ ಹೋರಾಡೋಕೆ ಸಾಧ್ಯಾನೇ ಇಲ್ಲ. ಅವರು ನಮಗಿಂತ ತುಂಬ ಬಲಿಷ್ಠರು” ಅಂತ ಹೇಳಿದ್ರು. (ಅರ. 13:27-31) ಮನುಷ್ಯರ ದೃಷ್ಟಿಯಲ್ಲಿ ನೋಡೋದಾದ್ರೆ ಕಾನಾನ್ಯರು ಇಸ್ರಾಯೇಲ್ಯರಿಗಿಂತ ಬಲಿಷ್ಠರಾಗಿದ್ರು ನಿಜ. ಆದ್ರೆ ಆ 10 ಗೂಢಚಾರರು ಇಸ್ರಾಯೇಲ್ಯರಿಗೆ ಅವ್ರನ್ನ ಸೋಲಿಸೋಕೆ ಆಗೋದೇ ಇಲ್ಲ ಅಂದ್ಕೊಂಡ್ರು. ಯಾಕಂದ್ರೆ ಯೆಹೋವ ತಮ್ಮ ಜೊತೆ ಇದ್ದಾನೆ ಅನ್ನೋದನ್ನ ಅವರು ಮರೆತೇ ಬಿಟ್ಟಿದ್ರು. ಅದ್ರ ಬದ್ಲು ಅವರು ಯೆಹೋವ ದೇವರು ಇಸ್ರಾಯೇಲ್ಯರಿಗೆ ಏನು ಮಾಡೋಕೆ ಹೇಳಿದನೋ ಅದಕ್ಕೇ ಅವರು ಗಮನ ಕೊಡಬಹುದಿತ್ತು. ಸ್ವಲ್ಪ ಸಮಯದ ಹಿಂದೆ ಯೆಹೋವ ಅವ್ರಿಗೆ ಹೇಗೆಲ್ಲ ಸಹಾಯ ಮಾಡಿದನು ಅಂತ ಯೋಚ್ನೆ ಮಾಡಬಹುದಿತ್ತು. ಅಷ್ಟೇ ಅಲ್ಲ, ಸರ್ವಶಕ್ತನಾದ ಯೆಹೋವನ ಮುಂದೆ ಆ ಕಾನಾನ್ಯರು ಏನೇನೂ ಅಲ್ಲ ಅನ್ನೋದನ್ನ ಅವರು ಅರ್ಥಮಾಡ್ಕೊಬೇಕಿತ್ತು. ಅವರು ಹಾಗೆ ಮಾಡ್ಲಿಲ್ಲ. ಆದ್ರೆ ಇನ್ನಿಬ್ರು ಗೂಢಚಾರರಾದ ಯೆಹೋಶುವ ಮತ್ತು ಕಾಲೇಬ ಅವ್ರ ತರ ಇರಲಿಲ್ಲ. ಅವ್ರಿಗೆ ಯೆಹೋವನ ಮೆಚ್ಚಿಗೆ ಪಡ್ಕೊಳ್ಳೋಕೆ ತುಂಬ ಆಸೆ ಇತ್ತು. ಅದಕ್ಕೇ ಅವರು ಜನ್ರ ಹತ್ರ “ಯೆಹೋವ ನಮ್ಮನ್ನ ಮೆಚ್ಚಿರೋದಾದ್ರೆ ಹಾಲೂ ಜೇನೂ ಹರಿಯೋ ಆ ದೇಶಕ್ಕೆ ನಮ್ಮನ್ನ ಖಂಡಿತ ಕರ್ಕೊಂಡು ಹೋಗ್ತಾನೆ. ಅದನ್ನ ನಮಗೆ ಆಸ್ತಿಯಾಗಿ ಕೊಡ್ತಾನೆ” ಅಂತ ಹೇಳಿದ್ರು.—ಅರ. 14:6-9.
7. ಯೆಹೋವನ ಮೇಲೆ ಇನ್ನೂ ಭಯ ಬೆಳೆಸ್ಕೊಬೇಕಂದ್ರೆ ನಾವೇನು ಮಾಡಬೇಕು? (ಚಿತ್ರ ನೋಡಿ.)
7 ನಮಗೆ ಯೆಹೋವನ ಮೇಲೆ ಇನ್ನೂ ಭಯ ಬೆಳೆಸ್ಕೊಬೇಕಂದ್ರೆ ಯಾವಾಗ್ಲೂ ಆತನಿಗೆ ಇಷ್ಟ ಆಗೋ ತರ ತೀರ್ಮಾನಗಳನ್ನ ಮಾಡಬೇಕು. (ಕೀರ್ತ. 16:8) ನೀವು ಬೈಬಲ್ ಓದುವಾಗ ನಿಮ್ಮನ್ನೇ ಹೀಗೆ ಕೇಳ್ಕೊಳ್ಳಿ: ‘ನಾನು ಆ ಸನ್ನಿವೇಶದಲ್ಲಿ ಇದ್ದಿದ್ರೆ ಏನು ಮಾಡ್ತಿದ್ದೆ? ಯಾವ ತೀರ್ಮಾನ ತಗೊಳ್ತಿದ್ದೆ?’ ಉದಾಹರಣೆಗೆ, ಆ 10 ಗೂಢಚಾರರು ಮಾತಾಡಿದಾಗ ನೀವು ಅಲ್ಲಿ ಇದ್ರಿ ಅಂದ್ಕೊಳ್ಳಿ. ಅವರು ಹೇಳಿದ ಮಾತನ್ನ ನೀವು ನಂಬ್ತಿದ್ರಾ? ಮನುಷ್ಯರಿಗೆ ಭಯಪಡ್ತಿದ್ರಾ? ಅಥವಾ ನಿಮಗೆ ಯೆಹೋವನ ಮೇಲೆ ನಂಬಿಕೆ ಇದೆ, ಆತನನ್ನ ಮೆಚ್ಚಿಸೋ ಆಸೆ ಇದೆ ಅಂತ ತೋರಿಸಿಕೊಡ್ತಿದ್ರಾ? ಆದ್ರೆ ಯೆಹೋಶುವ ಮತ್ತು ಕಾಲೇಬ ಹೇಳಿದ ಸತ್ಯ ಗುರುತಿಸೋಕೆ ಆಗ ಇದ್ದ ಇಸ್ರಾಯೇಲ್ ಜನಾಂಗನೇ ತಪ್ಪಿ ಹೋಯ್ತು. ಇದ್ರಿಂದ ದೇವರು ಮಾತು ಕೊಟ್ಟ ದೇಶಕ್ಕೆ ಹೋಗೋ ಅವಕಾಶನೇ ಕಳ್ಕೊಂಡುಬಿಟ್ರು.—ಅರ. 14:10, 22, 23.
8. ನಾವು ಯಾವ ಗುಣ ಬೆಳೆಸ್ಕೊಳ್ಳೋಕೆ ತುಂಬ ಪ್ರಯತ್ನ ಮಾಡಬೇಕು ಮತ್ತು ಯಾಕೆ?
8 ದೀನತೆ. ಯೆಹೋವ ದೀನತೆ ತೋರಿಸೋರಿಗೆ ಸತ್ಯ ತಿಳಿಸ್ತಾನೆ. (ಮತ್ತಾ. 11:25) ನಾವು ಸತ್ಯ ಕಲಿಯುವಾಗ ತುಂಬ ದೀನತೆ ತೋರಿಸಿದ್ವಿ. (ಅ. ಕಾ. 8:30, 31) ಈಗ್ಲೂ ನಾವು ದೀನತೆ ತೋರಿಸಬೇಕು. ಒಂದುವೇಳೆ ನಮ್ಮಲ್ಲಿ ಹೆಮ್ಮೆ ಬಂದುಬಿಟ್ರೆ, ಬೈಬಲಲ್ಲಿರೋ ತತ್ವಗಳ ತರ, ಯೆಹೋವನ ಸಂಘಟನೆ ಕೊಡೋ ನಿರ್ದೇಶನಗಳ ತರ ನಾವು ಹೇಳೋ ವಿಷ್ಯಗಳು ಯಾವಾಗ್ಲೂ ಸರಿಯಾಗೇ ಇರುತ್ತೆ ಅನ್ನೋ ಯೋಚ್ನೆ ಬಂದುಬಿಡಬಹುದು.
9. ನಾವು ಯಾವಾಗ್ಲೂ ದೀನತೆ ತೋರಿಸ್ತಾ ಇರೋಕೆ ಏನು ಮಾಡಬೇಕು?
9 ನಾವು ಯಾವಾಗ್ಲೂ ದೀನತೆ ತೋರಿಸ್ತಾ ಇರೋಕೆ ಏನು ಮಾಡಬೇಕು? ಯೆಹೋವ ಎಷ್ಟು ಶ್ರೇಷ್ಠನಾಗಿದ್ದಾನೆ ಮತ್ತು ಆತನ ಮುಂದೆ ನಾವು ಏನೇನೂ ಅಲ್ಲ ಅನ್ನೋದನ್ನ ನೆನಪಲ್ಲಿ ಇಡಬೇಕು. (ಕೀರ್ತ. 8:3, 4) ದೀನತೆ ಬೆಳೆಸ್ಕೊಳ್ಳೋಕೆ, ಕಲಿಯೋ ಗುಣ ಬೆಳೆಸ್ಕೊಳ್ಳೋಕೆ ಯೆಹೋವನ ಹತ್ರ ಪ್ರಾರ್ಥನೆ ಮಾಡಬೇಕು. ನಾವು ಹೀಗೆ ಮಾಡಿದ್ರೆ ನಮ್ಮ ಯೋಚ್ನೆಗಿಂತ ಯೆಹೋವನ ಯೋಚ್ನೆನೇ ಶ್ರೇಷ್ಠ ಅಂತ ಅರ್ಥಮಾಡ್ಕೊಳ್ಳೋಕೆ ಯೆಹೋವ ತನ್ನ ವಾಕ್ಯವಾದ ಬೈಬಲಿಂದ ಮತ್ತು ತನ್ನ ಸಂಘಟನೆಯಿಂದ ನಮಗೆ ಸಹಾಯ ಮಾಡ್ತಾನೆ. ನೀವು ಬೈಬಲ್ ಓದುವಾಗ ಯೆಹೋವ ದೀನತೆ ಇರೋರನ್ನ ಯಾಕೆ ಪ್ರೀತಿಸ್ತಾನೆ ಮತ್ತು ಅಹಂಕಾರ, ಗರ್ವ, ಹೆಮ್ಮೆ ಇರೋರನ್ನ ಯಾಕೆ ದ್ವೇಷಿಸ್ತಾನೆ ಅಂತ ಯೋಚ್ನೆ ಮಾಡಿ. ನಿಮಗೆ ಯೆಹೋವನ ಸಂಘಟನೆಯಲ್ಲಿ ಹೆಚ್ಚಿನ ಜವಾಬ್ದಾರಿ ಸಿಕ್ಕಿರೋದಾದ್ರೆ ಅಥವಾ ಎಲ್ರೂ ನಿಮ್ಮನ್ನ ಗಮನಿಸೋ ತರದ ಕೆಲಸಗಳು ನಿಮಗೆ ಸಿಕ್ಕಿದ್ರೆ ದೀನತೆ ತೋರಿಸ್ತಾ ಇರೋಕೆ ಇನ್ನೂ ಪ್ರಯತ್ನ ಮಾಡಿ.
ಸತ್ಯಕ್ಕೆ ತಕ್ಕ ಹಾಗೆ ನಡಿಯೋಕೆ ಏನು ಮಾಡಬೇಕು?
10. ಯೆಹೋವ ತನ್ನ ಜನ್ರಿಗೆ ನಿರ್ದೇಶನ ಮತ್ತು ಮಾರ್ಗದರ್ಶನ ಕೊಡೋಕೆ ಯಾರನ್ನ ಬಳಸಿದನು?
10 ಯೆಹೋವನ ಸಂಘಟನೆ ಕೊಡೋ ನಿರ್ದೇಶನವನ್ನ ಯಾವಾಗ್ಲೂ ನಂಬಿ. ಯೆಹೋವ ದೇವರು ಇಸ್ರಾಯೇಲ್ಯರಿಗೆ ಮೋಶೆಯ ಮತ್ತು ಯೆಹೋಶುವನ ಮೂಲಕ ನಿರ್ದೇಶನ ಕೊಟ್ಟನು. (ಯೆಹೋ. 1:16, 17) ಇವ್ರನ್ನ ಯೆಹೋವನೇ ನೇಮಿಸಿದ್ದಾನೆ ಅಂತ ಇಸ್ರಾಯೇಲ್ಯರು ಅರ್ಥಮಾಡ್ಕೊಂಡಾಗ ಯೆಹೋವ ಅವ್ರನ್ನ ಆಶೀರ್ವದಿಸಿದನು. ಇದಾಗಿ ಸುಮಾರು ವರ್ಷಗಳು ಆದ್ಮೇಲೆ ಮೊದಲನೇ ಸಭೆ ಶುರು ಆದಾಗ 12 ಅಪೊಸ್ತಲರು ನಿರ್ದೇಶನ ಕೊಟ್ರು. (ಅ. ಕಾ. 8:14, 15) ಅವ್ರ ಆ ಗುಂಪಿಗೆ ಯೆರೂಸಲೇಮಿನಲ್ಲಿದ್ದ ಇನ್ನೂ ಕೆಲವು ಹಿರಿಯರು ಸೇರಿದ್ರು. ಅವರು ಕೊಟ್ಟ ನಿರ್ದೇಶನ ಪಾಲಿಸಿದ್ರಿಂದ “ಸಭೆಯಲ್ಲಿದ್ದ ಸಹೋದರರ ನಂಬಿಕೆ ಹೆಚ್ಚಾಯ್ತು. ಶಿಷ್ಯರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗ್ತಾ ಹೋಯ್ತು.” (ಅ. ಕಾ. 16:4, 5) ಇವತ್ತು ನಾವೂ ಯೆಹೋವನ ಸಂಘಟನೆ ಕೊಡೋ ನಿರ್ದೇಶನ ಪಾಲಿಸಿದ್ರೆ ಯೆಹೋವ ನಮ್ಮನ್ನೂ ಆಶೀರ್ವದಿಸ್ತಾನೆ. ಆದ್ರೆ ಆತನ ಸಂಘಟನೆಯಲ್ಲಿ ಮುಂದೆ ನಿಂತು ನಡಿಸುವವ್ರನ್ನ ಯೆಹೋವನೇ ನೇಮಿಸಿದ್ದಾನೆ ಅಂತ ನಾವು ಅರ್ಥಮಾಡ್ಕೊಂಡಿಲ್ಲ ಅಂದ್ರೆ ಏನಾಗಬಹುದು? ಇದಕ್ಕೆ ಉತ್ರ ತಿಳ್ಕೊಳ್ಳೋಕೆ ಇಸ್ರಾಯೇಲ್ಯರು ಕಾನಾನ್ ದೇಶಕ್ಕೆ ಹೋಗುವಾಗ ಏನಾಯ್ತು ಅಂತ ನೋಡೋಣ.
11. ಯೆಹೋವ ನೇಮಿಸಿದ ಮೋಶೆಯ ವಿರುದ್ಧ ಗೊಣಗಿದವ್ರಿಗೆ ಏನಾಯ್ತು? (ಚಿತ್ರ ನೋಡಿ.)
11 ಇಸ್ರಾಯೇಲ್ಯರು ದೇವರು ಮಾತು ಕೊಟ್ಟ ದೇಶಕ್ಕೆ ಹೋಗುವಾಗ ಒಂದು ಸಲ ಏನಾಯ್ತು ನೋಡಿ. ಅಧಿಕಾರದಲ್ಲಿದ್ದ ಕೆಲವು ಗಂಡಸರು ಯೆಹೋವ ನೇಮಿಸಿದ ಮೋಶೆಯ ವಿರುದ್ಧ ದಂಗೆ ಎದ್ರು. ಅವರು “ನೀವು ಮಾತ್ರ ತುಂಬ ಪವಿತ್ರರು ಅಂದ್ಕೊಂಡ್ರಾ? ಯೆಹೋವ ಎಲ್ಲಾ ಇಸ್ರಾಯೇಲ್ಯರ ಮಧ್ಯ ಇದ್ದಾನೆ. ಎಲ್ಲ ಇಸ್ರಾಯೇಲ್ಯರು, ಅವರಲ್ಲಿ ಒಬ್ಬೊಬ್ಬ ಇಸ್ರಾಯೇಲ್ಯನೂ ಪವಿತ್ರನಾಗಿ ಇದ್ದಾನೆ” ಅಂತ ಹೇಳಿದ್ರು. (ಅರ. 16:1-3) ದೇವರು “ಎಲ್ಲ ಇಸ್ರಾಯೇಲ್ಯರು” ಪವಿತ್ರ ಅಂತ ನೋಡಿದ್ದು ನಿಜಾನೇ. ಆದ್ರೆ ಅವ್ರನ್ನ ಮುನ್ನಡಿಸೋಕೆ ಆತನು ಮೋಶೆಯನ್ನ ನೇಮಿಸಿದನು. (ಅರ. 16:28) ಈ ಜನ್ರು ಮೋಶೆಯ ವಿರುದ್ಧ ಗೊಣಗಿದಾಗ ಯೆಹೋವನ ವಿರುದ್ಧನೇ ಗೊಣಗಿದ ಹಾಗೆ ಇತ್ತು. ಅವ್ರಿಗೆ ಇನ್ನೂ ಅಧಿಕಾರ, ಸ್ಥಾನಮಾನ ಬೇಕಿತ್ತು. ಅದ್ರ ಬಗ್ಗೆ ಮಾತ್ರ ಅವರು ಯೋಚ್ನೆ ಮಾಡಿದ್ರು. ಯೆಹೋವ ಏನು ಇಷ್ಟಪಡ್ತಿದ್ದಾನೆ ಅಂತ ಯೋಚ್ನೆ ಮಾಡ್ಲಿಲ್ಲ. ಇದ್ರಿಂದ ಯೆಹೋವ ಆ ಅಧಿಕಾರಿಗಳನ್ನ ಮತ್ತು ಅವ್ರಿಗೆ ಬೆಂಬಲ ಕೊಟ್ಟ ಸಾವಿರಾರು ಜನ್ರನ್ನ ನಾಶ ಮಾಡಿದನು. (ಅರ. 16:30-35, 41, 49) ಇವತ್ತೂ ಯಾರಾದ್ರೂ ಯೆಹೋವನ ಸಂಘಟನೆ ಮಾಡೋ ಏರ್ಪಾಡುಗಳನ್ನ ಗೌರವಿಸಲ್ಲ ಅಂದ್ರೆ ಆತನು ಅವ್ರನ್ನೂ ಮೆಚ್ಚಲ್ಲ.
12. ನಾವು ಯೆಹೋವನ ಸಂಘಟನೆ ಮೇಲೆ ಯಾಕೆ ಯಾವಾಗ್ಲೂ ನಂಬಿಕೆ ಇಡಬಹುದು?
12 ನಾವು ಯೆಹೋವನ ಸಂಘಟನೆ ಮೇಲೆ ಯಾವಾಗ್ಲೂ ನಂಬಿಕೆ ಇಡಬಹುದು. ಯಾಕಂದ್ರೆ ಆತನ ಸಂಘಟನೆಯನ್ನ ಮುನ್ನಡಿಸ್ತಾ ಇರೋ ಸಹೋದರರರು ಈಗಾಗ್ಲೇ ಅರ್ಥಮಾಡ್ಕೊಂಡಿರೋ ಬೈಬಲ್ ಸತ್ಯದಲ್ಲಿ ಏನಾದ್ರೂ ಬದಲಾವಣೆ ಮಾಡಬೇಕಂದ್ರೆ ಅದನ್ನ ಖಂಡಿತ ಮಾಡ್ತಾರೆ. ಅಷ್ಟೇ ಅಲ್ಲ, ಸೇವೆ ಮಾಡೋ ವಿಧಾನದಲ್ಲಿ ಬದಲಾವಣೆ ಮಾಡಬೇಕಾದ್ರೂ ಅದನ್ನ ಮಾಡ್ತಾರೆ. ಈ ತರ ಬದಲಾವಣೆ ಮಾಡೋಕೆ ಹಿಂಜರಿಯಲ್ಲ. (ಜ್ಞಾನೋ. 4:18) ಎಲ್ಲಕ್ಕಿಂತ ಮುಖ್ಯವಾಗಿ ಯೆಹೋವನನ್ನ ಮೆಚ್ಚಿಸಬೇಕು ಅನ್ನೋ ಆಸೆ ಇರೋದ್ರಿಂದ ಅವರು ಹೀಗೆ ಮಾಡ್ತಾರೆ. ಈ ಸಹೋದರರು ಬೈಬಲಿನ ಆಧಾರದ ಮೇಲೆ ತೀರ್ಮಾನಗಳನ್ನ ಮಾಡೋಕೆ ತಮ್ಮಿಂದಾದ ಎಲ್ಲ ಪ್ರಯತ್ನ ಮಾಡ್ತಾರೆ. ಯೆಹೋವನ ಸೇವಕರಾದ ನಮ್ಮೆಲ್ರಿಗೂ ಬೈಬಲೇ ಒಳ್ಳೇ ಮಾದರಿಯಾಗಿದೆ. ಹಾಗಾಗಿ ನಾವೆಲ್ರೂ ಅದನ್ನ ಪಾಲಿಸಬೇಕು.
13. ‘ಮಾದರಿಯಾಗಿರೋ ಒಳ್ಳೇ ಮಾತುಗಳು’ ಅಂದ್ರೆ ಏನು? ಮತ್ತು ನಾವೇನು ಮಾಡಬೇಕು?
13 ‘ಒಳ್ಳೇ ಮಾತುಗಳನ್ನ ಮಾದರಿಯಾಗಿ ಇಟ್ಕೊಂಡು ಪಾಲಿಸ್ತಾ ಇರಿ.’ (2 ತಿಮೊ. 1:13) ಇಲ್ಲಿ ಹೇಳಿರೋ ‘ಮಾದರಿಯಾಗಿರೋ ಒಳ್ಳೇ ಮಾತುಗಳು’ ಅಂದ್ರೆ ಏನು? ಅದು ಬೈಬಲಲ್ಲಿರೋ ಕ್ರೈಸ್ತ ಬೋಧನೆಗಳು. (ಯೋಹಾ. 17:17) ನಾವು ನಂಬೋ ಪ್ರತಿಯೊಂದು ವಿಷ್ಯಕ್ಕೂ ಈ ಬೋಧನೆಗಳೇ ಆಧಾರ. ಹಾಗಾಗಿ ಯೆಹೋವನ ಸಂಘಟನೆ ಈ ಒಳ್ಳೇ ಮಾತುಗಳನ್ನ ಬಿಗಿಯಾಗಿ ಹಿಡ್ಕೊಳ್ಳೋಕೆ ಅಥವಾ ಪಾಲಿಸ್ತಾ ಇರೋಕೆ ನಮಗೆ ಕಲಿಸ್ತಾ ಇದೆ. ನಾವು ಎಲ್ಲಿ ತನಕ ಈ ಮಾತುಗಳನ್ನ ಪಾಲಿಸ್ತೀವೋ ಅಲ್ಲಿ ತನಕ ಯೆಹೋವ ನಮ್ಮನ್ನ ಆಶೀರ್ವದಿಸ್ತಾನೆ.
14. ‘ಮಾದರಿಯಾಗಿರೋ ಒಳ್ಳೇ ಮಾತುಗಳನ್ನ’ ಬಿಗಿಯಾಗಿ ಹಿಡ್ಕೊಳ್ಳೋಕೆ ಕೆಲವು ಕ್ರೈಸ್ತರು ಹೇಗೆ ತಪ್ಪಿ ಹೋದ್ರು?
14 ‘ಮಾದರಿಯಾಗಿರೋ ಒಳ್ಳೇ ಮಾತುಗಳನ್ನ’ ಬಿಗಿಯಾಗಿ ಹಿಡ್ಕೊಂಡಿಲ್ಲ ಅಂದ್ರೆ ಏನಾಗಬಹುದು? ಇದಕ್ಕೊಂದು ಉದಾಹರಣೆ ನೋಡಿ. ಒಂದನೇ ಶತಮಾನದಲ್ಲಿ ಕೆಲವು ಕ್ರೈಸ್ತರು ಯೆಹೋವನ ದಿನ ಬಂದುಬಿಟ್ಟಿದೆ ಅನ್ನೋ ಗಾಳಿ ಸುದ್ದಿಯನ್ನ ಹಬ್ಬಿಸಿದ್ರು. ಈ ಸುದ್ದಿಯನ್ನ ಅವರು ಒಂದು ಪತ್ರದಲ್ಲಿ ಓದಿರಬಹುದು ಮತ್ತು ಅದನ್ನ ಪೌಲ ಬರೆದಿದ್ದಾನೆ ಅಂತ ಅವರು ಅಂದ್ಕೊಂಡ್ರು. ಥೆಸಲೊನೀಕದಲ್ಲಿದ್ದ ಕ್ರೈಸ್ತರು ಆ ಸುದ್ದಿ ಸತ್ಯನಾ, ಸುಳ್ಳಾ ಅಂತ ತಿಳ್ಕೊಳ್ಳೋ ಬದ್ಲು ಹಾಗೇ ನಂಬಿಬಿಟ್ರು ಮತ್ತು ಅದನ್ನ ಬೇರೆಯವ್ರಿಗೂ ಹೇಳಿದ್ರು. ಪೌಲ ಅವ್ರ ಜೊತೆ ಇದ್ದಾಗ ಕಲಿಸಿದ ವಿಷ್ಯಗಳನ್ನ ಅವರು ನೆನಪಲ್ಲಿ ಇಟ್ಟಿದ್ರೆ ಈ ಸುಳ್ಳು ಸುದ್ದಿಗೆ ಮರುಳಾಗ್ತಾ ಇರಲಿಲ್ಲ. (2 ಥೆಸ. 2:1-5) ಅದಕ್ಕೇ ಪೌಲ ಅವ್ರಿಗೆ, ಕೇಳಿಸ್ಕೊಳ್ಳೋ ಎಲ್ಲಾ ಸುದ್ದಿಯನ್ನ ಹಾಗೆ ಕಣ್ಮುಚ್ಕೊಂಡು ನಂಬಬೇಡಿ ಅಂತ ಸಲಹೆ ಕೊಟ್ಟ. ಅವ್ರಿಗೆ ಇನ್ನೂ ಸಹಾಯ ಮಾಡೋಕೆ ತನ್ನ ಎರಡನೇ ಪತ್ರದ ಕೊನೆಯಲ್ಲಿ ಹೀಗೆ ಹೇಳಿದ: “ನಿಮಗೆ ನನ್ನ ವಂದನೆ, ಪೌಲನಾದ ನಾನೇ ನನ್ನ ಕೈಯಾರೆ ಇದನ್ನ ಬರಿತಾ ಇದ್ದೀನಿ. ಪತ್ರ ಬರೆದಿದ್ದು ನಾನೇ ಅಂತ ನಿಮಗೆ ಗೊತ್ತಾಗ್ಲಿ ಅಂತ ಎಲ್ಲ ಪತ್ರದಲ್ಲಿ ಹೀಗೇ ಹೇಳಿದ್ದೀನಿ.”—2 ಥೆಸ. 3:17.
15. ಸುಳ್ಳು ಸುದ್ದಿಗಳು ಸತ್ಯ ಅನ್ನೋ ತರ ಕಾಣಿಸ್ತಿದ್ರೆ ನಾವೇನು ಮಾಡಬೇಕು? ಉದಾಹರಣೆ ಕೊಡಿ. (ಚಿತ್ರಗಳನ್ನ ನೋಡಿ.)
15 ಪೌಲ ಥೆಸಲೊನೀಕದವ್ರಿಗೆ ಕೊಟ್ಟ ಸಲಹೆಯಿಂದ ನಾವೇನು ಕಲಿಬಹುದು? ನಾವು ಕೇಳಿಸ್ಕೊಳ್ಳೋ ಯಾವುದಾದ್ರೂ ಸುದ್ದಿ ಬೈಬಲಿಗೆ ವಿರುದ್ಧವಾಗಿ ಇದ್ರೆ ಅಥವಾ ಆಶ್ಚರ್ಯ ಹುಟ್ಟಿಸೋ ಗಾಳಿಸುದ್ದಿಯನ್ನ ನಾವು ಕೇಳಿದ್ರೆ ವಿವೇಚನೆ ಬಳಸಬೇಕು. ಉದಾಹರಣೆಗೆ, ಹಿಂದಿನ ಸೋವಿಯತ್ ಒಕ್ಕೂಟದಲ್ಲಿದ್ದ ನಮ್ಮ ವಿರೋಧಿಗಳು ಒಂದು ಸಲ ಮುಖ್ಯಕಾರ್ಯಾಲಯದಿಂದ ಬಂದಿರೋ ತರ ಒಂದು ಪತ್ರ ಕಳಿಸಿದ್ರು. ಆ ಪತ್ರದಲ್ಲಿ ಕೆಲವು ಸಹೋದರರಿಗೆ ಬೇರೆ ಒಂದು ಗುಂಪನ್ನ ಮಾಡ್ಕೊಂಡು ತಮ್ಮದೇ ಆದ ಒಂದು ಸಂಘಟನೆ ಮಾಡ್ಕೊಳ್ಳೋಕೆ ಪ್ರೋತ್ಸಾಹ ಕೊಟ್ಟಿತ್ತು. ಆ ಪತ್ರ ನಮ್ಮ ಸಂಘಟನೆಯಿಂದ ಬಂದಿರೋ ತರನೇ ಇತ್ತು. ಆದ್ರೆ ನಂಬಿಗಸ್ತ ಸಹೋದರರು ತಾವು ಕಲಿತಿರೋ ವಿಷ್ಯಕ್ಕೆ ಆ ಸುದ್ದಿ ವಿರುದ್ಧವಾಗಿದೆ ಅಂತ ಅರ್ಥಮಾಡ್ಕೊಂಡ್ರು, ಅದಕ್ಕವರು ಮರುಳಾಗಲಿಲ್ಲ. ಇವತ್ತೂ ನಮ್ಮ ಶತ್ರುಗಳು ಈಗಿರೋ ತಂತ್ರಜ್ಞಾನ ಬಳಸಿ ನಮ್ಮ ಮಧ್ಯ ಇರೋ ಒಗ್ಗಟ್ಟನ್ನ ಮುರಿಯೋಕೆ ನೋಡ್ತಿದ್ದಾರೆ, ನಮ್ಮ ನಂಬಿಕೆಯನ್ನ ಹಾಳು ಮಾಡೋಕೆ ನೋಡ್ತಿದ್ದಾರೆ. ಆದ್ರೆ ಇದನ್ನೆಲ್ಲ ನೋಡಿದ ತಕ್ಷಣ ನಾವು ‘ಗಾಬರಿ ಆಗಬಾರದು.’ ಈ ಸುದ್ದಿಗಳು ನಾವು ಕಲ್ತಿರೋ ಸತ್ಯಕ್ಕೆ ವಿರುದ್ಧವಾಗಿ ಇದ್ಯಾ ಅಂತ ಚೆನ್ನಾಗಿ ಯೋಚ್ನೆ ಮಾಡಬೇಕು.—2 ಥೆಸ. 2:2; 1 ಯೋಹಾ. 4:1.
16. ಯಾರಾದ್ರೂ ಸತ್ಯದಿಂದ ದೂರ ಹೋದ್ರೆ ನಾವೇನು ಮಾಡಬೇಕು? (ರೋಮನ್ನರಿಗೆ 16:17, 18)
16 ಯೆಹೋವನಿಗೆ ನಿಯತ್ತಾಗಿರೋರ ಜೊತೆ ಒಗ್ಗಟ್ಟಾಗಿರಿ. ಎಲ್ಲಾ ಸಹೋದರ ಸಹೋದರಿಯರ ಜೊತೆ ನಾವು ಒಗ್ಗಟ್ಟಾಗಿ ತನ್ನನ್ನ ಆರಾಧಿಸಬೇಕು ಅಂತ ಯೆಹೋವ ಇಷ್ಟಪಡ್ತಾನೆ. ನಾವು ಸತ್ಯನ ಬಿಗಿಯಾಗಿ ಹಿಡ್ಕೊಂಡ್ರೆ ಯಾವಾಗ್ಲೂ ಒಗ್ಗಟ್ಟಾಗಿ ಇರ್ತೀವಿ. ಯಾರಾದ್ರೂ ಸತ್ಯದಿಂದ ದೂರ ಹೋದ್ರೆ ಅವರು ಸಭೆಯಲ್ಲಿ ಒಡಕು ತರ್ತಾರೆ. ಹಾಗಾಗಿ “ಅವ್ರಿಂದ ದೂರ ಇರಿ” ಅಂತ ಬೈಬಲ್ ನಮಗೆ ಸಲಹೆ ಕೊಡುತ್ತೆ. ಒಂದುವೇಳೆ ಹಾಗೆ ಮಾಡಿಲ್ಲ ಅಂದ್ರೆ ನಾವೂ ಸತ್ಯದಿಂದ ದೂರ ಹೋಗಿಬಿಡ್ತೀವಿ.—ರೋಮನ್ನರಿಗೆ 16:17, 18 ಓದಿ.
17. ಸತ್ಯವನ್ನ ಗುರುತಿಸಿ ಅದನ್ನ ಬಿಗಿಯಾಗಿ ಹಿಡ್ಕೊಂಡ್ರೆ ಏನು ಪ್ರಯೋಜನ ಆಗುತ್ತೆ?
17 ನಾವು ಸತ್ಯವನ್ನ ಗುರುತಿಸಿ ಅದನ್ನ ಬಿಗಿಯಾಗಿ ಹಿಡ್ಕೊಂಡ್ರೆ ಯಾವಾಗ್ಲೂ ಯೆಹೋವನಿಗೆ ಹತ್ರ ಆಗಿ ಇರ್ತೀವಿ ಮತ್ತು ನಮ್ಮ ನಂಬಿಕೆನೂ ಗಟ್ಟಿಮಾಡ್ಕೊಳ್ತೀವಿ. (ಎಫೆ. 4:15, 16) ಸೈತಾನ ಹಬ್ಬಿಸೋ ಗಾಳಿ ಸುದ್ದಿಗಳಿಂದ, ಮನವೊಲಿಸೋ ಸುಳ್ಳು ಮಾತುಗಳಿಂದ ನಮ್ಮನ್ನ ಕಾಪಾಡಿಕೊಳ್ತೀವಿ. ಅಷ್ಟೇ ಅಲ್ಲ ಮಹಾ ಸಂಕಟದ ಸಮಯದಲ್ಲೂ ನಾವು ಯೆಹೋವನ ಕೈಗಳಲ್ಲಿ ಸುರಕ್ಷಿತವಾಗಿ ಇರ್ತೀವಿ. ಹೀಗೆ ನಾವು ಯಾವಾಗ್ಲೂ ಸತ್ಯವನ್ನ ಬಿಗಿಯಾಗಿ ಹಿಡ್ಕೊಂಡ್ರೆ ‘ಶಾಂತಿಯ ದೇವರು ನಮ್ಮ ಜೊತೆ ಇರ್ತಾನೆ.’—ಫಿಲಿ. 4:8, 9.
ಗೀತೆ 32 ಸ್ಥಿರಚಿತ್ತರೂ ನಿಶ್ಚಲರೂ ಆಗಿರಿ!
a ಚಿತ್ರ ವಿವರಣೆ: ತುಂಬ ವರ್ಷಗಳ ಹಿಂದೆ ನಮ್ಮ ಶತ್ರುಗಳು ಮುಖ್ಯಕಾರ್ಯಾಲಯದಿಂದ ಬಂದಿರೋ ತರ ಒಂದು ಪತ್ರವನ್ನ ಸೋವಿಯತ್ ಒಕ್ಕೂಟದಲ್ಲಿರೋ ಸಹೋದರರಿಗೆ ಕಳಿಸಿದ್ದಾರೆ, ಅದನ್ನ ಅಭಿನಯಿಸಿ ತೋರಿಸಲಾಗಿದೆ. ಇವತ್ತೂ ನಮ್ಮ ಶತ್ರುಗಳು ಇಂಟರ್ನೆಟ್ ಬಳಸಿ ನಮ್ಮನ್ನ ದಾರಿ ತಪ್ಪಿಸೋಕೆ ನಮ್ಮ ಸಂಘಟನೆ ಬಗ್ಗೆ ಸುಳ್ಳು ಸುದ್ದಿಗಳನ್ನ ಹಬ್ಬಿಸ್ತಿದ್ದಾರೆ.