ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಮ್ಮ ದೇವರಾದ ಯೆಹೋವನು ಒಬ್ಬನೇ ಯೆಹೋವನು”

“ನಮ್ಮ ದೇವರಾದ ಯೆಹೋವನು ಒಬ್ಬನೇ ಯೆಹೋವನು”

“ಇಸ್ರಾಯೇಲ್ಯರೇ, ಕೇಳಿರಿ; ನಮ್ಮ ದೇವರಾದ ಯೆಹೋವನು ಒಬ್ಬನೇ ಯೆಹೋವನು.”—ಧರ್ಮೋ. 6:4, ಸತ್ಯವೇದವು ಭಾಷಾಂತರ ಪಾದಟಿಪ್ಪಣಿ.

ಗೀತೆಗಳು: 138, 112

1, 2. (ಎ) ಧರ್ಮೋಪದೇಶಕಾಂಡ 6:4 ರ ಮಾತುಗಳು ಏಕೆ ಅನೇಕರಿಗೆ ಪರಿಚಿತ? (ಬಿ) ಆ ಮಾತುಗಳನ್ನು ಮೋಶೆ ಹೇಳಿದ್ದೇಕೆ?

ಯೆಹೂದಿಗಳು ನೂರಾರು ವರ್ಷಗಳಿಂದ ಮಾಡುತ್ತಿರುವ ಒಂದು ವಿಶೇಷ ಪ್ರಾರ್ಥನೆಯಲ್ಲಿ ಧರ್ಮೋಪದೇಶಕಾಂಡ 6:4 ರಲ್ಲಿರುವ ಮಾತುಗಳಿವೆ. ಆ ಪ್ರಾರ್ಥನೆಗೆ ‘ಶೆಮ’ ಎಂದು ಹೆಸರು. ಇದು ಹೀಬ್ರು ಭಾಷೆಯಲ್ಲಿ ಆ ವಚನದ ಮೊದಲನೇ ಪದ. ದೇವರೊಬ್ಬನಿಗೆ ಮಾತ್ರ ಭಕ್ತಿ ಕೊಡುತ್ತೇವೆಂದು ತೋರಿಸಲು ಹೆಚ್ಚಿನ ಯೆಹೂದಿಗಳು ಆ ಪ್ರಾರ್ಥನೆಯನ್ನು ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಪಠಿಸುತ್ತಾರೆ.

2 ಧರ್ಮೋಪದೇಶಕಾಂಡ 6:4 ರ ಆ ಮಾತು ಮೋಶೆ ಇಸ್ರಾಯೇಲ್‌ ಜನಾಂಗಕ್ಕೆ ಕೊಟ್ಟ ಕೊನೇ ಭಾಷಣದ ಭಾಗವಾಗಿದೆ. ಸಮಯ ಕ್ರಿ.ಪೂ. 1473 ಆಗಿತ್ತು. ಆಗ ಇಸ್ರಾಯೇಲ್‌ ಜನಾಂಗ ಮೋವಾಬ್‌ ದೇಶದಲ್ಲಿತ್ತು. ಇನ್ನೇನು ಯೊರ್ದನ್‌ ನದಿಯನ್ನು ದಾಟಿ ವಾಗ್ದತ್ತ ದೇಶವನ್ನು ವಶಪಡಿಸಿಕೊಳ್ಳಲಿಕ್ಕಿತ್ತು. (ಧರ್ಮೋ. 6:1) ಇಸ್ರಾಯೇಲ್ಯರು ಮುಂದೆ ಕಷ್ಟಗಳನ್ನು ಎದುರಿಸಲಿದ್ದ ಕಾರಣ ಅವರು ಧೈರ್ಯದಿಂದಿರುವ ಆವಶ್ಯಕತೆಯಿತ್ತು. ತಮ್ಮ ದೇವರಾದ ಯೆಹೋವನಲ್ಲಿ ಭರವಸೆಯಿಟ್ಟು ಆತನಿಗೆ ನಂಬಿಗಸ್ತರಾಗಿ ಉಳಿಯಬೇಕಿತ್ತು. ಹಾಗಾಗಿ 40 ವರ್ಷಗಳಿಂದ ಅವರ ನಾಯಕನಾಗಿದ್ದ ಮೋಶೆ ತನ್ನ ಕೊನೇ ಮಾತುಗಳಲ್ಲಿ ಅವರನ್ನು ಪ್ರೋತ್ಸಾಹಿಸಿ ಧೈರ್ಯ ತುಂಬಿದನು. ಯೆಹೋವನು ಕೊಟ್ಟ ದಶಾಜ್ಞೆಗಳನ್ನು ಮತ್ತು ಇತರ ನಿಯಮಗಳನ್ನು ತಿಳಿಸಿದ ನಂತರ ಧರ್ಮೋಪದೇಶಕಾಂಡ 6:4, 5 ರ (ಓದಿ.) ಪ್ರಾಮುಖ್ಯ ಮಾತುಗಳನ್ನು ನೆನಪಿಸಿದನು.

3. ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ನೋಡಲಿದ್ದೇವೆ?

3 ಇಸ್ರಾಯೇಲ್ಯರಿಗೆ ತಮ್ಮ ದೇವರಾದ ಯೆಹೋವನು “ಒಬ್ಬನೇ ಯೆಹೋವನು” ಎಂದು ಗೊತ್ತಿತ್ತು. ನಂಬಿಗಸ್ತ ಇಸ್ರಾಯೇಲ್ಯರು ತಮ್ಮ ಪೂರ್ವಿಕರಂತೆ ಯೆಹೋವ ದೇವರೊಬ್ಬನನ್ನೇ ಆರಾಧಿಸುತ್ತಿದ್ದರು. ಹಾಗಿರುವಾಗ “ನಮ್ಮ ದೇವರಾದ ಯೆಹೋವನು ಒಬ್ಬನೇ ಯೆಹೋವನು” ಎಂದು ಮೋಶೆ ಅವರಿಗೆ ನೆನಪಿಸಿದ್ದೇಕೆ? ಆ ನಿಜಾಂಶಕ್ಕೂ ಯೆಹೋವನನ್ನು ಪೂರ್ಣ ಹೃದಯ, ಪೂರ್ಣ ಪ್ರಾಣ, ಪೂರ್ಣ ಶಕ್ತಿಯಿಂದ ಪ್ರೀತಿಸುವುದಕ್ಕೂ ಯಾವ ಸಂಬಂಧವಿದೆ? ಧರ್ಮೋಪದೇಶಕಾಂಡ 6:4, 5 ರಲ್ಲಿರುವ ಮಾತುಗಳು ಇಂದು ನಮಗೆ ಹೇಗೆ ಅನ್ವಯವಾಗುತ್ತವೆ? ಉತ್ತರ ನೋಡೋಣ.

ನಮ್ಮ ದೇವರು “ಒಬ್ಬನೇ ಯೆಹೋವನು”

4, 5. (ಎ) “ಒಬ್ಬನೇ ಯೆಹೋವನು” ಎಂಬುದರ ಒಂದು ಅರ್ಥವೇನು? (ಬಿ) ಬೇರೆ ಜನಾಂಗದವರ ದೇವರುಗಳಿಗಿಂತ ಯೆಹೋವನು ಹೇಗೆ ಭಿನ್ನನಾಗಿದ್ದಾನೆ?

4 ಅದ್ವಿತೀಯನು. “ಒಬ್ಬನೇ ಯೆಹೋವನು” ಎಂಬುದರ ಅರ್ಥ ಯೆಹೋವನು ಅದ್ವಿತೀಯನು ಎಂದಾಗಿದೆ. ಅಂದರೆ ಆತನಿಗೆ ಸರಿಸಮಾನನು ಯಾರೂ ಇಲ್ಲ, ಆತನಂತೆ ಯಾರೂ ಇಲ್ಲ. “ಒಬ್ಬನೇ ಯೆಹೋವನು” ಎಂದು ಮೋಶೆ ಹೇಳಿದ್ದೇಕೆ? ತ್ರಿಯೇಕ ನಂಬಿಕೆಯು ತಪ್ಪೆಂದು ರುಜುಪಡಿಸಲು ಅವನು ಹಾಗೆ ಹೇಳಿರಲಿಕ್ಕಿಲ್ಲ. ಆಕಾಶ, ಭೂಮಿಯನ್ನು ಸೃಷ್ಟಿಸಿದ್ದು ಯೆಹೋವನು, ಆತನೇ ಈ ವಿಶ್ವದ ಒಡೆಯನು, ಆತನೊಬ್ಬನೇ ಸತ್ಯದೇವರು, ಬೇರೆ ಯಾವ ದೇವರೂ ಆತನಿಗೆ ಸಮಾನರಾಗಲು ಸಾಧ್ಯವಿಲ್ಲ. (2 ಸಮು. 7:22) ಆದ್ದರಿಂದ ಇಸ್ರಾಯೇಲ್ಯರು ಯೆಹೋವನೊಬ್ಬನನ್ನೇ ಆರಾಧಿಸಬೇಕೆಂದು ನೆನಪಿಸಲಿಕ್ಕಾಗಿ ಮೋಶೆ ಹಾಗೆ ಹೇಳಿದನು. ಸುತ್ತಲಿದ್ದ ಜನರಂತೆ ಅನೇಕಾನೇಕ ಸುಳ್ಳು ದೇವದೇವತೆಗಳನ್ನು ಅವರು ಆರಾಧಿಸಬಾರದಿತ್ತು. ಆ ಜನರು ಪ್ರಕೃತಿಯಲ್ಲಿರುವ ಒಂದೊಂದು ವಿಷಯಕ್ಕೂ ಒಬ್ಬೊಬ್ಬ ದೇವರಿದ್ದಾನೆಂದು ನಂಬುತ್ತಿದ್ದರು.

5 ಉದಾಹರಣೆಗೆ ಐಗುಪ್ತ ದೇಶದವರು ಸೂರ್ಯದೇವನಾದ ‘ರಾ,’ ಗಗನ ದೇವತೆ ‘ನಟ್‌,’ ಭೂದೇವ ‘ಗೇಬ್‌,’ ನೈಲ್‌ ನದಿಯ ದೇವರು ‘ಹಾಪಿ’ಯನ್ನು ಅಲ್ಲದೆ ಅನೇಕ ಪ್ರಾಣಿಗಳನ್ನೂ ಆರಾಧಿಸುತ್ತಿದ್ದರು. ಆದರೆ ಯೆಹೋವನು ಐಗುಪ್ತದಲ್ಲಿ ಹತ್ತು ಬಾಧೆಗಳನ್ನು ತಂದಾಗ ಅವರ ಸುಳ್ಳು ದೇವದೇವತೆಗಳಿಗಿಂತ ತಾನೆಷ್ಟೋ ಶ್ರೇಷ್ಠನೆಂದು ತೋರಿಸಿಕೊಟ್ಟನು. ಕಾನಾನ್ಯರ ಮುಖ್ಯ ದೇವ ಬಾಳ್‌ ಆಗಿದ್ದನು. ಸಕಲ ಜೀವಿಗಳಿಗೆ ಜೀವಕೊಟ್ಟವನು ಅವನೇ ಹಾಗೂ ಆಕಾಶ, ಮಳೆ, ಚಂಡಮಾರುತದ ದೇವನೂ ಅವನೇ ಎಂದು ಅವರು ನಂಬುತ್ತಿದ್ದರು. ಅನೇಕ ಸ್ಥಳಗಳಲ್ಲಿ ಜನರು ಬಾಳನನ್ನು ಊರ ದೇವನಾಗಿಯೂ ಆರಾಧಿಸುತ್ತಿದ್ದರು. (ಅರ. 25:3) ಆದರೆ ಇಸ್ರಾಯೇಲ್ಯರು ತಮ್ಮ ದೇವರಾದ ಯೆಹೋವನೇ ಸತ್ಯ ದೇವರು, ಅದ್ವಿತೀಯನು ಮತ್ತು ‘ಒಬ್ಬನೇ ಯೆಹೋವನು’ ಎಂಬುದನ್ನು ಮರೆಯಬಾರದಿತ್ತು.—ಧರ್ಮೋ. 4:35, 39.

6, 7. (ಎ) “ಒಬ್ಬನೇ ಯೆಹೋವನು” ಎಂಬುದರ ಇನ್ನೊಂದು ಅರ್ಥವೇನು? (ಬಿ) ಆ ಅರ್ಥಕ್ಕೆ ತಕ್ಕಂತೆ ಯೆಹೋವನು ಹೇಗೆ ನಡೆದುಕೊಂಡಿದ್ದಾನೆ?

6 ಬದಲಾಗದವನು ಮತ್ತು ನಿಷ್ಠಾವಂತನು. “ಒಬ್ಬನೇ ಯೆಹೋವನು” ಎಂಬ ಹೇಳಿಕೆಯಲ್ಲಿ “ಒಬ್ಬನೇ” ಎಂಬ ಪದಕ್ಕೆ ಆತನ ಉದ್ದೇಶ ಮತ್ತು ಕಾರ್ಯಗಳು ಸದಾ ಭರವಸಾರ್ಹ ಎಂಬ ಅರ್ಥವೂ ಇದೆ. ಆತನು ಎರಡು ಮಾತಿನವನಲ್ಲ, ಕ್ಷಣಕ್ಷಣಕ್ಕೂ ಮನಸ್ಸು ಬದಲಾಯಿಸುವವನಲ್ಲ. ಆತನು ಸದಾ ನಂಬಿಗಸ್ತನು, ಬದಲಾಗದವನು, ನಿಷ್ಠಾವಂತನು, ಸತ್ಯವಂತನು ಆಗಿದ್ದಾನೆ. ಒಂದು ಉದಾಹರಣೆ ಗಮನಿಸಿ. ಅಬ್ರಹಾಮನ ಸಂತತಿಗೆ ವಾಗ್ದತ್ತ ದೇಶವನ್ನು ಕೊಡುತ್ತೇನೆಂದು ಯೆಹೋವನು ಅವನಿಗೆ ಮಾತುಕೊಟ್ಟನು. ಆ ಮಾತನ್ನು ನೆರವೇರಿಸಲಿಕ್ಕಾಗಿ ಯೆಹೋವನು ಅನೇಕ ದೊಡ್ಡದೊಡ್ಡ ಅದ್ಭುತಗಳನ್ನು ಮಾಡಿದನು. 430 ವರ್ಷ ಕಳೆದ ಬಳಿಕವೂ ಯೆಹೋವನ ಆ ಉದ್ದೇಶ ಬದಲಾಗಲಿಲ್ಲ.—ಆದಿ. 12:1, 2, 7; ವಿಮೋ. 12:40, 41.

7 ಆಮೇಲೆ ನೂರಾರು ವರ್ಷಗಳ ನಂತರ ಯೆಹೋವನು ಇಸ್ರಾಯೇಲ್ಯರನ್ನು ತನ್ನ ಸಾಕ್ಷಿಗಳೆಂದು ಕರೆದಾಗ ಅವರಿಗೆ ಹೀಗಂದನು: “ನಾನು ಬದಲಾಗುವುದಿಲ್ಲ . . . ನನಗಿಂತ ಮುಂಚೆ ಯಾವ ದೇವರೂ ಇರಲಿಲ್ಲ, ನನ್ನ ನಂತರವೂ ಇರುವದಿಲ್ಲ.” ಅಲ್ಲದೆ “ನಾನು ಯಾವತ್ತೂ ಬದಲಾಗುವುದಿಲ್ಲ” ಎಂದು ಯೆಹೋವನು ಹೇಳುವ ಮೂಲಕ ತನ್ನ ಉದ್ದೇಶ ಸಹ ಎಂದಿಗೂ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದನು. (ಯೆಶಾ. 43:10, 13, ನೂತನ ಲೋಕ ಭಾಷಾಂತರ; 44:6; 48:12) ಎಂದಿಗೂ ಬದಲಾಗದ, ಸದಾ ನಿಷ್ಠನಾದ ದೇವರನ್ನು ಆರಾಧಿಸುವುದು ನಿಜಕ್ಕೂ ಇಸ್ರಾಯೇಲ್ಯರಿಗೆ ಒಂದು ದೊಡ್ಡ ಸೌಭಾಗ್ಯವಾಗಿತ್ತು. ಇಂದು ನಮಗೆ ಕೂಡ ಆ ಭಾಗ್ಯವಿದೆ!—ಮಲಾ. 3:6; ಯಾಕೋ. 1:17.

8, 9. (ಎ) ಯೆಹೋವನು ತನ್ನ ಆರಾಧಕರಿಂದ ಏನನ್ನು ಅವಶ್ಯಪಡಿಸುತ್ತಾನೆ? (ಬಿ) ಮೋಶೆಯ ಮಾತುಗಳ ಅರ್ಥಕ್ಕೆ ಯೇಸು ಹೇಗೆ ಒತ್ತುಕೊಟ್ಟನು?

8 “ಒಬ್ಬನೇ ಯೆಹೋವನು” ಎಂದು ಹೇಳುವ ಮೂಲಕ ಮೋಶೆಯು ಇಸ್ರಾಯೇಲ್ಯರ ಕಡೆಗೆ ಯೆಹೋವನಿಗಿರುವ ಪ್ರೀತಿ, ಕಾಳಜಿ ಯಾವತ್ತೂ ಬದಲಾಗುವುದಿಲ್ಲ ಎಂದೂ ನೆನಪಿಸಿದನು. ಪ್ರತಿಯಾಗಿ ಇಸ್ರಾಯೇಲ್ಯರಿಂದ ಯೆಹೋವನು ಏನು ಅಪೇಕ್ಷಿಸಿದನು? ಅವರು ತನಗೆ ಮಾತ್ರ ಆರಾಧನೆ, ಭಕ್ತಿ ಸಲ್ಲಿಸಬೇಕು ಮತ್ತು ಪೂರ್ಣ ಹೃದಯ, ಪ್ರಾಣ, ಶಕ್ತಿಯಿಂದ ತನ್ನನ್ನು ಪ್ರೀತಿಸಬೇಕೆಂದೇ. ಮಕ್ಕಳು ಕೂಡ ಯೆಹೋವನನ್ನು ಮಾತ್ರ ಆರಾಧಿಸುವಂತೆ ಹೆತ್ತವರು ಅವರಿಗೆ ಪ್ರತಿಯೊಂದು ಸಂದರ್ಭದಲ್ಲಿ ಆತನ ಕುರಿತು ಕಲಿಸಬೇಕಿತ್ತು.—ಧರ್ಮೋ. 6:6-9.

9 ಯೆಹೋವನು ತನ್ನ ಉದ್ದೇಶವನ್ನು ಯಾವತ್ತೂ ಬದಲಾಯಿಸುವುದಿಲ್ಲ ಅಂದಮೇಲೆ ಆತನು ತನ್ನ ನಿಜ ಆರಾಧಕರಿಂದ ಅವಶ್ಯಪಡಿಸುವ ವಿಷಯಗಳನ್ನು ಸಹ ಎಂದಿಗೂ ಬದಲಾಯಿಸುವುದಿಲ್ಲ. ಹಾಗಾಗಿಯೇ ಯೆಹೋವನು ನಮ್ಮ ಆರಾಧನೆಯನ್ನು ಮೆಚ್ಚಬೇಕಾದರೆ ನಾವು ಆತನೊಬ್ಬನಿಗೇ ಭಕ್ತಿ ಸಲ್ಲಿಸಬೇಕು ಹಾಗೂ ನಮ್ಮ ಪೂರ್ಣ ಹೃದಯ, ಪ್ರಾಣ, ಶಕ್ತಿಯಿಂದ ಆತನನ್ನು ಪ್ರೀತಿಸಬೇಕು. ಇದು ಅತಿ ಮುಖ್ಯವಾದ ಆಜ್ಞೆ ಎಂದು ಯೇಸು ಹೇಳಿದನು. (ಮಾರ್ಕ 12:28-31 ಓದಿ.) “ನಮ್ಮ ದೇವರಾದ ಯೆಹೋವನು ಒಬ್ಬನೇ ಯೆಹೋವನು” ಅನ್ನೋದನ್ನು ನಾವು ನಂಬುತ್ತೇವೆಂದು ಕ್ರಿಯೆಗಳಲ್ಲಿ ತೋರಿಸುವುದು ಹೇಗೆ? ಈಗ ನೋಡೋಣ.

ಯೆಹೋವನನ್ನು ಮಾತ್ರ ಆರಾಧಿಸಿ

10, 11. (ಎ) ನಾವು ಯೆಹೋವನೊಬ್ಬನನ್ನೇ ಆರಾಧಿಸುವುದರ ಅರ್ಥವೇನು? (ಬಿ) ಇಬ್ರಿಯ ಯೌವನಸ್ಥರು ಬಾಬೆಲಿನಲ್ಲಿದ್ದಾಗ ಹೇಗೆ ಯೆಹೋವನೊಬ್ಬನನ್ನೇ ಆರಾಧಿಸಿದರು?

10 ನಮ್ಮ ಏಕೈಕ ದೇವರು ಯೆಹೋವನೇ. ಹಾಗಾಗಿ ಆತನೊಬ್ಬನನ್ನೇ ಆರಾಧಿಸಬೇಕು. ಆತನಿಗೆ ನಾವು ಸಲ್ಲಿಸುವ ಆರಾಧನೆಯಲ್ಲಿ ಬೇರೆ ಯಾವ ದೇವರನ್ನಾಗಲಿ ಯಾವುದೇ ಸುಳ್ಳು ವಿಚಾರ, ಪದ್ಧತಿಗಳನ್ನಾಗಲಿ ಸೇರಿಸಬಾರದು. ಯೆಹೋವನು ಬೇರೆಲ್ಲ ದೇವರಿಗಿಂತ ಶ್ರೇಷ್ಠನಾದ ಮತ್ತು ಹೆಚ್ಚು ಶಕ್ತಿಶಾಲಿಯಾದ ದೇವರು ಮಾತ್ರ ಅಲ್ಲ, ಆತನೊಬ್ಬನೇ ಸತ್ಯ ದೇವರು. ಹಾಗಾಗಿ ಆರಾಧನೆ ಆತನೊಬ್ಬನಿಗೆ ಮಾತ್ರ ಸಲ್ಲಬೇಕು.—ಪ್ರಕಟನೆ 4:11 ಓದಿ.

11 ದಾನಿಯೇಲ ಪುಸ್ತಕದಲ್ಲಿ ನಾವು ಇಬ್ರಿಯ ಯೌವನಸ್ಥರಾದ ದಾನಿಯೇಲ, ಹನನ್ಯ, ಮೀಶಾಯೇಲ, ಅಜರ್ಯರ ಕುರಿತು ಓದುತ್ತೇವೆ. ಯೆಹೋವನು ಅಶುದ್ಧವೆಂದು ಹೇಳಿದ್ದ ಆಹಾರವನ್ನು ಸೇವಿಸಲು ನಿರಾಕರಿಸುವ ಮೂಲಕ ಆತನೊಬ್ಬನನ್ನೇ ಆರಾಧಿಸುತ್ತೇವೆಂದು ಅವರು ತೋರಿಸಿದರು. ಅಲ್ಲದೆ, ನೆಬೂಕದ್ನೆಚ್ಚರನು ನಿಲ್ಲಿಸಿದ ಬಂಗಾರದ ಪ್ರತಿಮೆಗೆ ಅಡ್ಡಬೀಳಲು ಹನನ್ಯ, ಮೀಶಾಯೇಲ, ಅಜರ್ಯ ನಿರಾಕರಿಸಿದರು. ಏಕೆಂದರೆ ಅವರ ಆರಾಧನೆ ಯೆಹೋವನೊಬ್ಬನಿಗೇ ಮೀಸಲಾಗಿತ್ತು. ಆತನಿಗೆ ಅವರು ಸಂಪೂರ್ಣ ನಿಷ್ಠೆ ತೋರಿಸಿದರು.—ದಾನಿ. 1:1–3:30.

12. ಯೆಹೋವನೊಬ್ಬನನ್ನೇ ಆರಾಧಿಸಬೇಕಾದರೆ ನಾವು ಯಾವ ವಿಷಯದಲ್ಲಿ ಜಾಗ್ರತೆವಹಿಸಬೇಕು?

12 ನಮ್ಮ ಆರಾಧನೆ ಸಹ ಯೆಹೋವನೊಬ್ಬನಿಗೇ ಮೀಸಲು. ಹಾಗಾಗಿ ನಮ್ಮ ಜೀವನದಲ್ಲಿ ಆತನಿಗಿರುವ ಸ್ಥಾನವನ್ನು ಬೇರೆ ಯಾವ ವಿಷಯಗಳಿಗೂ ಕೊಡದಂತೆ ಜಾಗ್ರತೆವಹಿಸಬೇಕು. ಆ ವಿಷಯಗಳು ಯಾವುದಾಗಿರಬಹುದು? ತನ್ನ ಜನರು ಬೇರಾವ ದೇವರುಗಳನ್ನು ಆರಾಧಿಸಬಾರದು, ಯಾವ ರೀತಿಯ ವಿಗ್ರಹಾರಾಧನೆಯನ್ನು ಮಾಡಬಾರದೆಂದು ಯೆಹೋವನು ದಶಾಜ್ಞೆಗಳಲ್ಲಿ ಹೇಳಿದನು. (ಧರ್ಮೋ. 5:6-10) ಇಂದು ವಿಗ್ರಹಾರಾಧನೆಯ ಅನೇಕ ರೂಪಗಳಿವೆ. ಕೆಲವನ್ನು ವಿಗ್ರಹಾರಾಧನೆಯೆಂದು ಗುರುತಿಸಲು ಕಷ್ಟವಾಗಬಹುದು. ಅವು ಯಾವುವೆಂದು ಮತ್ತು ಹೇಗೆ ತೊರೆಯುವುದೆಂದು ನೋಡೋಣ. ಏಕೆಂದರೆ ಯೆಹೋವನು ತನ್ನ ಜನರಿಂದ ಅವಶ್ಯಪಡಿಸುವ ವಿಷಯಗಳು ಇವತ್ತಿಗೂ ಬದಲಾಗಿಲ್ಲ. ಈಗಲೂ ಆತನು “ಒಬ್ಬನೇ ಯೆಹೋವ.”

13. ನಾವು ಯೆಹೋವನಿಗಿಂತಲೂ ಹೆಚ್ಚಾಗಿ ಯಾವುದನ್ನು ಪ್ರೀತಿಸುವ ಸಾಧ್ಯತೆಯಿದೆ?

13 ಯೆಹೋವನೊಬ್ಬನಿಗೇ ಆರಾಧನೆ ಕೊಡದಂತೆ ಮಾಡುವ ಕೆಲವು ವಿಷಯಗಳನ್ನು ಕೊಲೊಸ್ಸೆ 3:5 ರಲ್ಲಿ (ಓದಿ.) ತಿಳಿಸಲಾಗಿದೆ. ಅವುಗಳಲ್ಲಿ ಒಂದು ಲೋಭ ಅಂದರೆ ಅತಿಯಾಸೆ. ಆ ವಚನದಲ್ಲಿ ಲೋಭವನ್ನು ವಿಗ್ರಹಾರಾಧನೆಯೆಂದು ತಿಳಿಸಲಾಗಿದೆ. ಯಾಕೆ? ದುಬಾರಿಯಾದ ಅನಗತ್ಯ ವಸ್ತುಗಳನ್ನು ಪಡೆಯಬೇಕು ಅಥವಾ ತುಂಬ ಹಣ ಮಾಡಬೇಕು ಎಂಬ ತೀವ್ರ ಆಸೆ ನಮ್ಮಲ್ಲಿದ್ದರೆ ಅದೇ ಶಕ್ತಿಯುತ ದೇವರ ಹಾಗೆ ಆಗುತ್ತದೆ ಅಂದರೆ ಅದೇ ನಮ್ಮ ಜೀವನವನ್ನು ನಿಯಂತ್ರಿಸುತ್ತದೆ. ಕೊಲೊಸ್ಸೆ 3:5 ರಲ್ಲಿ ತಿಳಿಸಲಾಗಿರುವ ಎಲ್ಲ ಪಾಪಗಳು ಲೋಭಕ್ಕೆ ಸಂಬಂಧಿಸಿವೆ. ಆದ್ದರಿಂದ ಅವೂ ಒಂದು ರೀತಿಯ ವಿಗ್ರಹಾರಾಧನೆಯಾಗಿದೆ. ಆ ವಿಷಯಗಳಿಗಾಗಿ ನಾವು ತುಂಬ ಆಸೆಪಟ್ಟರೆ ಯೆಹೋವನಿಗಿಂತಲೂ ಹೆಚ್ಚಾಗಿ ಅವುಗಳನ್ನು ಪ್ರೀತಿಸಲು ತೊಡಗುತ್ತೇವೆ. ಆಗ ಯೆಹೋವನು ನಮಗೆ “ಒಬ್ಬನೇ ಯೆಹೋವನು” ಆಗಿರುವುದಿಲ್ಲ. ಅಂಥ ದೊಡ್ಡ ತಪ್ಪನ್ನು ನಾವು ಯಾವತ್ತೂ ಮಾಡದಿರೋಣ.

14. ಅಪೊಸ್ತಲ ಯೋಹಾನನು ಯಾವ ಎಚ್ಚರಿಕೆ ಕೊಟ್ಟನು?

14 ಅಪೊಸ್ತಲ ಯೋಹಾನನು ಅದೇ ರೀತಿಯ ವಿಷಯವನ್ನು ಹೇಳಿದನು. ಯಾವನಾದರೂ ಲೋಕದಲ್ಲಿರುವ ವಿಷಯಗಳನ್ನು ಅಂದರೆ ‘ಶರೀರದಾಶೆ, ಕಣ್ಣಿನಾಶೆ ಮತ್ತು ಜೀವನೈಶ್ವರ್ಯದ ಆಡಂಬರವನ್ನು’ ಪ್ರೀತಿಸಿದರೆ “ತಂದೆಯ ಪ್ರೀತಿಯು ಅವನಲ್ಲಿ ಇಲ್ಲ” ಎಂದು ಅವನು ಎಚ್ಚರಿಸಿದನು. (1 ಯೋಹಾ. 2:15, 16) ಆದ್ದರಿಂದ ನಾವೇನಾದರೂ ಈ ಲೋಕವನ್ನು ಪ್ರೀತಿಸುತ್ತಿದ್ದೇವಾ ಎಂದು ಆಗಾಗ ಪರೀಕ್ಷಿಸಿಕೊಳ್ಳಬೇಕು. ಉದಾಹರಣೆಗೆ, ಲೋಕದ ಮನರಂಜನೆ, ಜನರ ಸಹವಾಸವನ್ನು ಇಷ್ಟಪಡಲು ಮತ್ತು ಅವರ ವಿಚಿತ್ರ ಸ್ಟೈಲಿನ ಅಸಭ್ಯ ಬಟ್ಟೆ, ಕೇಶಶೈಲಿ, ಅಲಂಕಾರವನ್ನು ಅನುಕರಿಸಲು ಆರಂಭಿಸಿದ್ದೇವಾ? ಅಥವಾ ಉನ್ನತ ಶಿಕ್ಷಣ ಪಡೆಯುವ ಮೂಲಕ ಈ ಲೋಕದಲ್ಲಿ “ಮಹಾಪದವಿಯನ್ನು” ಗಳಿಸಲು ಅಂದರೆ ದೊಡ್ಡದ್ದೇನನ್ನೋ ಸಾಧಿಸಲು ಪ್ರಯತ್ನಿಸುತ್ತಿದ್ದೇವಾ? (ಯೆರೆ. 45:4, 5) ಹೊಸ ಲೋಕ ತುಂಬ ಹತ್ತಿರದಲ್ಲಿದೆ. ಆದ್ದರಿಂದ “ನಮ್ಮ ದೇವರಾದ ಯೆಹೋವನು ಒಬ್ಬನೇ ಯೆಹೋವನು” ಎಂದು ಮೋಶೆ ಹೇಳಿದ ಪ್ರಾಮುಖ್ಯ ಮಾತುಗಳನ್ನು ನಾವು ನೆನಪಿನಲ್ಲಿಡಬೇಕು. ಅದನ್ನು ಅರ್ಥಮಾಡಿಕೊಂಡು ನಿಜವಾಗಿಯೂ ನಂಬಿದರೆ ಯೆಹೋವನೊಬ್ಬನಿಗೆ ಮಾತ್ರ ಆರಾಧನೆ ಸಲ್ಲಿಸುವೆವು ಮತ್ತು ಆತನು ಇಷ್ಟಪಡುವಂಥ ರೀತಿಯಲ್ಲಿ ಆತನ ಸೇವೆ ಮಾಡುವೆವು.—ಇಬ್ರಿ. 12:28, 29.

ಕ್ರೈಸ್ತ ಐಕ್ಯವನ್ನು ಕಾಪಾಡಿ

15. ನಮಗೆ ‘ಒಬ್ಬನೇ ದೇವರಿದ್ದಾನೆಂದು’ ಪೌಲನು ಕ್ರೈಸ್ತರಿಗೆ ನೆನಪಿಸಿದ್ದೇಕೆ?

15 “ಒಬ್ಬನೇ ಯೆಹೋವನು” ಅನ್ನೋದು ಇನ್ನೊಂದು ವಿಷಯವನ್ನೂ ತೋರಿಸುತ್ತದೆ. ಅದೇನೆಂದರೆ ತನ್ನ ಸೇವಕರು ಒಂದಾಗಿರಬೇಕು, ಅವರೆಲ್ಲರ ಜೀವನದ ಉದ್ದೇಶ ಒಂದೇ ಆಗಿರಬೇಕೆಂದು ಆತನು ಬಯಸುತ್ತಾನೆಂದೇ. ಆರಂಭದ ಕ್ರೈಸ್ತ ಸಭೆಯಲ್ಲಿ ಯೆಹೂದ್ಯರು, ಗ್ರೀಕರು, ರೋಮನ್ನರು ಮತ್ತು ಇತರ ರಾಷ್ಟ್ರಗಳ ಜನರಿದ್ದರು. ಅವರ ಹಿನ್ನೆಲೆ, ಪದ್ಧತಿ, ಉದ್ದೇಶ ಹಿಂದೆ ಬೇರೆಬೇರೆಯಾಗಿದ್ದ ಕಾರಣ ಹೊಸ ಆರಾಧನಾ ಕ್ರಮವನ್ನು ಸ್ವೀಕರಿಸಲು ಅಥವಾ ಹಳೇ ರೂಢಿಗಳನ್ನು ಬಿಟ್ಟುಬಿಡಲು ಕೆಲವರಿಗೆ ಕಷ್ಟವಾಗಿತ್ತು. ಆದಕಾರಣ ‘ನಮಗೆ ಒಬ್ಬನೇ ದೇವರಿದ್ದಾನೆ’ ಎಂದು ಪೌಲನು ಕ್ರೈಸ್ತರಿಗೆ ನೆನಪಿಸಿದನು. ಆತನೇ ಯೆಹೋವ.—1 ಕೊರಿಂಥ 8:5, 6 ಓದಿ.

16, 17. (ಎ) ನಮ್ಮ ಸಮಯದಲ್ಲಿ ಯಾವ ಪ್ರವಾದನೆ ನೆರವೇರುತ್ತಾ ಇದೆ? (ಬಿ) ನೆರವೇರಿಕೆಯ ಫಲಿತಾಂಶವೇನು? (ಸಿ) ನಮ್ಮ ಐಕ್ಯಕ್ಕೆ ಯಾವುದು ಮುಳ್ಳಾಗಬಹುದು?

16 ಇಂದಿರುವ ಕ್ರೈಸ್ತ ಸಭೆಯ ಕುರಿತೇನು? “ಅಂತ್ಯಕಾಲದಲ್ಲಿ” ಎಲ್ಲ ಜನಾಂಗಗಳ ಜನರು ಯೆಹೋವನನ್ನು ಆರಾಧಿಸಲು ಕೂಡಿಬರುವರು ಮತ್ತು “ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು” ಎನ್ನುವರು ಎಂದು ಪ್ರವಾದಿ ಯೆಶಾಯ ಮುಂತಿಳಿಸಿದನು. (ಯೆಶಾ. 2:2, 3) ಈ ಪ್ರವಾದನೆ ಇಂದು ನೆರವೇರುತ್ತಿರುವುದನ್ನು ಕಣ್ಣಾರೆ ನೋಡಲು ನಮಗೆ ಸಂತೋಷವಾಗುತ್ತದೆ. ನಮ್ಮ ಸಹೋದರ ಸಹೋದರಿಯರ ಭಾಷೆ, ಊರು, ಸಂಸ್ಕೃತಿ ಬೇರೆಬೇರೆ ಆಗಿದ್ದರೂ ನಾವೆಲ್ಲರೂ ಐಕ್ಯದಿಂದ ಯೆಹೋವನನ್ನು ಆರಾಧಿಸುತ್ತಿದ್ದೇವೆ. ನಮ್ಮ ಹಿನ್ನೆಲೆ ತೀರಾ ಬೇರೆಬೇರೆ ಆಗಿರುವ ಕಾರಣ ಕೆಲವೊಮ್ಮೆ ಸಮಸ್ಯೆಗಳೂ ಬರಬಹುದು.

ಕ್ರೈಸ್ತ ಸಭೆಯ ಐಕ್ಯವನ್ನು ಕಾಪಾಡಲು ನೀವು ಶ್ರಮಿಸುತ್ತಿದ್ದೀರಾ? (ಪ್ಯಾರ 16-19 ನೋಡಿ)

17 ಉದಾಹರಣೆಗೆ, ಬೇರೆ ಸಂಸ್ಕೃತಿಯಲ್ಲಿ ಬೆಳೆದುಬಂದ ಸಹೋದರ ಸಹೋದರಿಯರ ಕುರಿತು ನಿಮ್ಮ ಅಭಿಪ್ರಾಯ ಏನು? ಅವರ ಭಾಷೆ, ಬಟ್ಟೆ, ಆಹಾರ, ಅವರು ನಡಕೊಳ್ಳುವ ರೀತಿ ನಿಮ್ಮದಕ್ಕಿಂತ ಬೇರೆಯಾಗಿರಬಹುದು. ನೀವು ಅವರಿಂದ ದೂರವಿರುತ್ತೀರಾ? ನಿಮ್ಮ ಭಾಷೆಯನ್ನಾಡುವ, ನಿಮ್ಮ ಹಿನ್ನೆಲೆಯಿಂದ ಬಂದವರ ಜೊತೆ ಮಾತ್ರ ಜಾಸ್ತಿ ಸಮಯ ಕಳೆಯುತ್ತೀರಾ? ನಿಮ್ಮ ಸಭೆ, ಸರ್ಕಿಟ್‌, ಬ್ರಾಂಚ್‌ನಲ್ಲಿರುವ ಹಿರಿಯರು ನಿಮಗಿಂತ ಚಿಕ್ಕವರಾಗಿದ್ದರೆ ಅಥವಾ ಬೇರೆ ದೇಶ, ಬೇರೆ ಸಂಸ್ಕೃತಿಯವರಾಗಿದ್ದರೆ ಅವರ ಬಗ್ಗೆ ನಿಮ್ಮ ಮನೋಭಾವ ಹೇಗಿದೆ? ನಾವು ಜಾಗ್ರತೆವಹಿಸದಿದ್ದರೆ ಅಂಥ ಭಿನ್ನತೆಗಳು ನಮ್ಮ ಐಕ್ಯಕ್ಕೆ ಮುಳ್ಳಾಗಬಹುದು.

18, 19. (ಎ) ಎಫೆಸ 4:1-3 ರಲ್ಲಿ ನಮಗೆ ಯಾವ ಸಲಹೆಯಿದೆ? (ಬಿ) ಸಭೆಯು ಐಕ್ಯದಿಂದ ಇರಲು ನಾವೇನು ಮಾಡಬೇಕು?

18 ಅಂಥ ಭಿನ್ನತೆಗಳು ನಮ್ಮಲ್ಲಿ ಒಡಕನ್ನು ತರದಂತೆ ಯಾವುದು ನೆರವಾಗುತ್ತದೆ? ಪೌಲನು ಎಫೆಸ ಸಭೆಗೆ ಹೇಳಿದ ಬುದ್ಧಿಮಾತಲ್ಲಿ ಉತ್ತರವಿದೆ. ಶ್ರೀಮಂತ ನಗರವಾಗಿದ್ದ ಎಫೆಸದಲ್ಲಿನ ಜನರು ಬೇರೆಬೇರೆ ಹಿನ್ನೆಲೆಗಳಿಂದ ಬಂದವರಾಗಿದ್ದರು. (ಎಫೆಸ 4:1-3 ಓದಿ.) ಹಾಗಾಗಿ ಕ್ರೈಸ್ತರು ದೀನಮನಸ್ಸು, ಸೌಮ್ಯಭಾವ, ತಾಳ್ಮೆ, ಪ್ರೀತಿಯಂಥ ಗುಣಗಳನ್ನು ಬೆಳೆಸಿಕೊಳ್ಳುವಂತೆ ಪೌಲ ಹೇಳಿದನು. ಈ ಗುಣಗಳು ಒಂದು ಮನೆಯನ್ನು ಸ್ಥಿರವಾಗಿ ನಿಲ್ಲಿಸುವ ಆಧಾರಸ್ತಂಭಗಳಂತಿವೆ. ಆದರೆ ಮನೆಯನ್ನು ಸುಸ್ಥಿತಿಯಲ್ಲಿಡಲು ಎಲ್ಲರ ಪ್ರಯತ್ನ ಅಗತ್ಯ. ಅದೇ ರೀತಿ ಸಭೆಯಲ್ಲಿ “ಏಕತೆಯನ್ನು” ಕಾಪಾಡಲು ಎಲ್ಲರೂ ತುಂಬ ಪ್ರಯತ್ನ ಹಾಕುವಂತೆ ಪೌಲನು ಎಫೆಸದ ಕ್ರೈಸ್ತರಿಗೆ ಹೇಳಿದನು.

19 ಸಭೆಯು ಐಕ್ಯದಿಂದ ಇರಲು ಪ್ರತಿಯೊಬ್ಬರು ತಮ್ಮ ಕೈಲಾದದ್ದೆಲ್ಲವನ್ನು ಮಾಡಬೇಕು. ಹೇಗೆ? ಮೊದಲನೇದಾಗಿ, ಪೌಲನು ತಿಳಿಸಿದಂತೆ ನಾವು ದೀನಮನಸ್ಸು, ಸೌಮ್ಯಭಾವ, ತಾಳ್ಮೆ, ಪ್ರೀತಿ ಎಂಬ ಗುಣಗಳನ್ನು ಬೆಳೆಸಿಕೊಳ್ಳಬೇಕು ಮತ್ತು ತೋರಿಸಬೇಕು. ಎರಡನೇದಾಗಿ, ‘ಶಾಂತಿಯ ಐಕ್ಯಗೊಳಿಸುವ ಬಂಧವನ್ನು’ ಬಲಗೊಳಿಸಲು ಶ್ರಮಿಸಬೇಕು. ಮನಸ್ತಾಪಗಳು ನಮ್ಮ ಐಕ್ಯದಲ್ಲಿ ಬಿರುಕುಗಳಂತಿವೆ. ಆದ್ದರಿಂದ ನಮ್ಮ ಮಧ್ಯೆ ಶಾಂತಿ, ಐಕ್ಯವನ್ನು ಕಾಪಾಡಲಿಕ್ಕೋಸ್ಕರ ನಾವು ಮನಸ್ತಾಪಗಳನ್ನು ಬಗೆಹರಿಸಲು ಶ್ರಮಿಸಬೇಕು.

20. “ನಮ್ಮ ದೇವರಾದ ಯೆಹೋವನು ಒಬ್ಬನೇ ಯೆಹೋವನು” ಎಂಬದರ ಅರ್ಥ ತಿಳಿದಿದ್ದೇವೆಂದು ನಾವು ಹೇಗೆ ತೋರಿಸಬಹುದು?

20 “ನಮ್ಮ ದೇವರಾದ ಯೆಹೋವನು ಒಬ್ಬನೇ ಯೆಹೋವನು.” ಇದು ನಿಜಕ್ಕೂ ಹೃದಯ ಸ್ಪರ್ಶಿಸುವ ಹೇಳಿಕೆ! ಆ ಹೇಳಿಕೆಯು ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಿ ವಶಪಡಿಸಿಕೊಂಡಾಗ ಬಂದ ಕಷ್ಟಗಳನ್ನು ಎದುರಿಸಲು ಅವರಿಗೆ ಬಲಕೊಟ್ಟಿತು. ಆ ಮಾತು ನಮ್ಮಲ್ಲೂ ಧೈರ್ಯತುಂಬಿ ಮಹಾ ಸಂಕಟವನ್ನು ಪಾರಾಗಲು ಸಹಾಯಮಾಡುತ್ತದೆ ಮತ್ತು ಪರದೈಸಿನಲ್ಲಿ ನಮ್ಮ ಶಾಂತಿ ಐಕ್ಯಕ್ಕೆ ನೆರವಾಗುತ್ತದೆ. ಹಾಗಾಗಿ ಯೆಹೋವನನ್ನು ಪೂರ್ಣ ಹೃದಯ, ಪ್ರಾಣ, ಶಕ್ತಿಯಿಂದ ಪ್ರೀತಿಸಿ, ಆತನ ಸೇವೆಮಾಡೋಣ. ನಮ್ಮ ಸಹೋದರರೊಂದಿಗೆ ಶಾಂತಿಯಿಂದ ಐಕ್ಯದಿಂದ ಇರಲು ಶ್ರಮಿಸೋಣ. ಈ ಮೂಲಕ ಯೆಹೋವನೊಬ್ಬನನ್ನು ಮಾತ್ರ ಆರಾಧಿಸುತ್ತಿದ್ದೇವೆಂದು ತೋರಿಸುತ್ತಿರೋಣ. ಆಗ ಯೇಸು ನಮ್ಮನ್ನು ಕುರಿಗಳೆಂದು ತೀರ್ಪುಮಾಡುವನು. ಆತನ ಈ ಮಾತು ಸತ್ಯವಾಗುವುದನ್ನು ನೋಡುವೆವು: “ನನ್ನ ತಂದೆಯಿಂದ ಆಶೀರ್ವಾದ ಹೊಂದಿದವರೇ ಬನ್ನಿರಿ; ಲೋಕದ ಆದಿಯಿಂದ ನಿಮಗಾಗಿ ಸಿದ್ಧಪಡಿಸಲ್ಪಟ್ಟಿರುವ ರಾಜ್ಯವನ್ನು ಬಾಧ್ಯತೆಯಾಗಿ ಪಡೆದುಕೊಳ್ಳಿರಿ.”—ಮತ್ತಾ. 25:34.