ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೇರೆಯವರು ತಪ್ಪು ಮಾಡಿದ ಕಾರಣಕ್ಕೆ ಯೆಹೋವನನ್ನು ಬಿಟ್ಟುಹೋಗಬೇಡಿ

ಬೇರೆಯವರು ತಪ್ಪು ಮಾಡಿದ ಕಾರಣಕ್ಕೆ ಯೆಹೋವನನ್ನು ಬಿಟ್ಟುಹೋಗಬೇಡಿ

“ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ.”—ಕೊಲೊ. 3:13.

ಗೀತೆಗಳು: 121, 75

1, 2. ಯೆಹೋವನ ಜನರ ಸಂಖ್ಯೆಯಲ್ಲಾಗುವ ವೃದ್ಧಿಯನ್ನು ಬೈಬಲ್‌ ಹೇಗೆ ಮುಂತಿಳಿಸಿತ್ತು?

ಇಡೀ ಭೂಮಿಯನ್ನು ವ್ಯಾಪಿಸಿರುವ ಒಂದು ಸಂಘಟನೆಯಿದೆ. ಯೆಹೋವನನ್ನು ಪ್ರೀತಿಸುವ ಮತ್ತು ಆತನ ಸೇವೆಮಾಡುವ ಜನರು ಅದರಲ್ಲಿದ್ದಾರೆ. ಅವರೇ ಯೆಹೋವನ ಸಾಕ್ಷಿಗಳು. ಅವರು ಅಪರಿಪೂರ್ಣರು, ತಪ್ಪುಗಳನ್ನು ಮಾಡುತ್ತಾರೆ. ಆದರೂ ಯೆಹೋವನು ಅವರನ್ನು ಪವಿತ್ರಾತ್ಮದ ಮೂಲಕ ನಡೆಸುತ್ತಾನೆ. ಆತನು ಅವರನ್ನು ಹೇಗೆ ನಡೆಸಿ, ಆಶೀರ್ವದಿಸಿದ್ದಾನೆ ಎನ್ನುವುದಕ್ಕೆ ಕೆಲವು ಉದಾಹರಣೆಗಳನ್ನು ನೋಡೋಣ.

2 ಇಸವಿ 1914ರಲ್ಲಿ ಯೆಹೋವನನ್ನು ಆರಾಧಿಸುವವರ ಸಂಖ್ಯೆ ತುಂಬ ಕಡಿಮೆಯಿತ್ತು. ಆದರೆ ಅವರ ಸಾರುವ ಕೆಲಸವನ್ನು ಯೆಹೋವನು ಆಶೀರ್ವದಿಸಿದ ಕಾರಣ ಈಗ ಲಕ್ಷಾಂತರ ಜನರು ಬೈಬಲ್‌ ಸತ್ಯಗಳನ್ನು ಕಲಿತು ಆತನ ಸಾಕ್ಷಿಗಳಾಗಿದ್ದಾರೆ. ಇಂಥ ವಿಸ್ಮಯಕಾರಿ ಅಭಿವೃದ್ಧಿ ಆಗಲಿದೆಯೆಂದು ಯೆಹೋವನು ಮುಂಚೆಯೇ ವರ್ಣಿಸಿದ್ದನು: “ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು; ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು.” (ಯೆಶಾ. 60:22) ಈ ಪ್ರವಾದನೆ ಇಂದು ನೆರವೇರುತ್ತಿದೆ. ಯೆಹೋವನ ಜನರು ಒಂದು ದೊಡ್ಡ ಜನಾಂಗದಂತಿದ್ದಾರೆ. ಇಡೀ ಲೋಕದಲ್ಲಿ ಅವರ ಒಟ್ಟು ಸಂಖ್ಯೆಯು ಅನೇಕ ಜನಾಂಗ ಅಥವಾ ರಾಷ್ಟ್ರಗಳಲ್ಲಿರುವ ಜನರ ಸಂಖ್ಯೆಗಿಂತ ಹೆಚ್ಚಿದೆ!

3. ದೇವರ ಸೇವಕರು ಹೇಗೆ ಪ್ರೀತಿ ತೋರಿಸಿದ್ದಾರೆ?

3 ಈ ಕಡೇ ದಿವಸಗಳಲ್ಲಿ ಯೆಹೋವನು ತನ್ನ ಜನರಿಗೆ ಅವರ ಮಧ್ಯೆ ಇರುವ ಪ್ರೀತಿಯನ್ನು ಹೆಚ್ಚಿಸಲು ಸಹಾಯಮಾಡಿದ್ದಾನೆ. “ದೇವರು ಪ್ರೀತಿಯಾಗಿದ್ದಾನೆ” ಮತ್ತು ಅವರು ಆತನನ್ನು ಅನುಕರಿಸುತ್ತಾರೆ. (1 ಯೋಹಾ. 4:8) ಯೇಸು ತನ್ನ ಹಿಂಬಾಲಕರಿಗೆ ‘ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು’ ಎಂದು ಆಜ್ಞಾಪಿಸಿದನು. ಹೀಗೂ ಹೇಳಿದನು: “ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು.” (ಯೋಹಾ. 13:34, 35) ನಮ್ಮೀ ಕಾಲದಲ್ಲಿ ದೇಶ ದೇಶಗಳ ನಡುವೆ ಯುದ್ಧ ನಡೆಯುತ್ತಿದ್ದರೂ ಯೆಹೋವನ ಸೇವಕರು ಒಬ್ಬರಿಗೊಬ್ಬರು ಅಂಥ ಪ್ರೀತಿಯನ್ನು ತೋರಿಸಿದ್ದಾರೆ. ಉದಾಹರಣೆಗೆ ಎರಡನೇ ಮಹಾ ಯುದ್ಧದಲ್ಲಿ ಸುಮಾರು 5 ಕೋಟಿ 50 ಲಕ್ಷ ಜನರು ಕೊಲ್ಲಲ್ಪಟ್ಟರು. ಆದರೆ ಯೆಹೋವನ ಜನರು ಆ ಯುದ್ಧದಲ್ಲಿ ಭಾಗವಹಿಸಲಿಲ್ಲ. ಆದ್ದರಿಂದ ಅವರಿಂದಾಗಿ ಯಾರೂ ಹತರಾಗಲಿಲ್ಲ. (ಮೀಕ 4:1, 3 ಓದಿ.) ಹೀಗೆ ಅವರು “ಎಲ್ಲ ಮನುಷ್ಯರ ರಕ್ತದ ಹೊಣೆಯಿಂದ ಶುದ್ಧ”ರಾಗಿದ್ದಾರೆ.—ಅ. ಕಾ. 20:26.

4. ಯೆಹೋವನ ಜನರ ಸಂಖ್ಯೆಯಲ್ಲಾಗುತ್ತಿರುವ ವೃದ್ಧಿ ಯಾಕೆ ತುಂಬ ವಿಶೇಷವಾಗಿದೆ?

4 ದೇವಜನರ ಸಂಖ್ಯೆಯಲ್ಲಾಗುತ್ತಿರುವ ವೃದ್ಧಿ ತುಂಬ ವಿಶೇಷ. ಏಕೆಂದರೆ ಶಕ್ತಿಶಾಲಿ ಶತ್ರುವಾದ ಸೈತಾನನಿಂದ ಅವರಿಗೆ ವಿರೋಧವಿದೆ. ಅವನು “ಈ ವಿಷಯಗಳ ವ್ಯವಸ್ಥೆಯ ದೇವ”ನಾಗಿದ್ದಾನೆ. (2 ಕೊರಿಂ. 4:4) ಈ ಲೋಕದ ರಾಜಕೀಯ ಸಂಘಟನೆಗಳು, ವಾರ್ತಾ ಮಾಧ್ಯಮಗಳು ಅವನ ನಿಯಂತ್ರಣದಲ್ಲಿವೆ. ಇವುಗಳನ್ನು ಬಳಸಿ ಸಾರುವ ಕೆಲಸವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದಾನೆ. ಆದರೂ ಅವನಿಂದ ನಿಲ್ಲಿಸಲು ಸಾಧ್ಯವಾಗಿಲ್ಲ. ಅವನಿಗಿರುವ ಸಮಯ ಸ್ವಲ್ಪವಾದ್ದರಿಂದ ನಾವು ಯೆಹೋವನನ್ನು ಆರಾಧಿಸುವುದನ್ನು ಬಿಟ್ಟುಬಿಡುವಂತೆ ಮಾಡಲು ಅವನು ಪ್ರಯತ್ನಿಸುತ್ತಿದ್ದಾನೆ.—ಪ್ರಕ. 12:12.

ಬೇರೆಯವರು ತಪ್ಪು ಮಾಡಿದರೂ ನೀವು ನಿಷ್ಠರಾಗಿ ಉಳಿಯುವಿರಾ?

5. ಬೇರೆಯವರು ಒಮ್ಮೊಮ್ಮೆ ಏಕೆ ನಮ್ಮ ಮನಸ್ಸನ್ನು ನೋಯಿಸುವಂತೆ ನಡೆದುಕೊಳ್ಳಬಹುದು? (ಲೇಖನದ ಆರಂಭದ ಚಿತ್ರ ನೋಡಿ.)

5 “‘ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು.’ ಇದೇ ಅತಿ ದೊಡ್ಡದಾದ ಮತ್ತು ಮೊದಲನೆಯ ಆಜ್ಞೆಯಾಗಿದೆ. ಇದರಂತಿರುವ ಎರಡನೆಯ ಆಜ್ಞೆಯು, ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’” ಎಂದನು ಯೇಸು. (ಮತ್ತಾ. 22:35-39) ಹೀಗಿರುವುದರಿಂದ ದೇವರ ಸೇವಕರಿಗೆ ಆತನನ್ನು ಮತ್ತು ಇತರರನ್ನು ಪ್ರೀತಿಸುವುದು ತುಂಬ ಮಹತ್ವದ್ದೆಂದು ಗೊತ್ತಿದೆ. ಆದರೆ ಬೈಬಲ್‌ ತೋರಿಸುವಂತೆ ಆದಾಮನ ಪಾಪದಿಂದಾಗಿ ಎಲ್ಲ ಮನುಷ್ಯರು ಹುಟ್ಟಿನಿಂದಲೇ ಅಪರಿಪೂರ್ಣರು. (ರೋಮನ್ನರಿಗೆ 5:12, 19 ಓದಿ.) ಹಾಗಾಗಿ ಒಮ್ಮೊಮ್ಮೆ ಸಭೆಯಲ್ಲಿ ಕೆಲವರು ನಮ್ಮ ಮನಸ್ಸಿಗೆ ನೋವಾಗುವ ಹಾಗೆ ಮಾತಾಡಬಹುದು ಅಥವಾ ನಡಕೊಳ್ಳಬಹುದು. ಆಗ ನಾವೇನು ಮಾಡುತ್ತೇವೆ? ಯೆಹೋವನ ಮೇಲೆ ನಮಗಿರುವ ಬಲವಾದ ಪ್ರೀತಿ ಹಾಗೆಯೇ ಉಳಿಯುತ್ತದಾ? ಆತನಿಗೂ ಆತನ ಸಂಘಟನೆಗೂ ನಿಷ್ಠರಾಗಿ ಉಳಿಯುತ್ತೇವಾ? ದೇವರ ಸೇವಕರಲ್ಲಿ ಕೆಲವರು ಬೇರೆಯವರಿಗೆ ನೋವು ಉಂಟುಮಾಡುವ ಹಾಗೆ ಮಾತಾಡಿದ್ದರು, ನಡೆದುಕೊಂಡಿದ್ದರು ಎಂದು ಬೈಬಲ್‌ ತಿಳಿಸುತ್ತದೆ. ಇದರಿಂದ ನಾವೇನು ಪಾಠ ಕಲಿಯಬಹುದೆಂದು ನೋಡೋಣ.

ಏಲಿ ಮತ್ತು ಅವನ ಪುತ್ರರ ಕಾಲದಲ್ಲಿ ನೀವು ಇಸ್ರಾಯೇಲಿನಲ್ಲಿ ಜೀವಿಸಿರುತ್ತಿದ್ದರೆ ಅವರು ಮಾಡುತ್ತಿದ್ದ ತಪ್ಪುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದೀರಿ? (ಪ್ಯಾರ 6 ನೋಡಿ)

6. ಏಲಿ ತನ್ನ ಪುತ್ರರನ್ನು ತಿದ್ದಲು ತಪ್ಪಿಹೋದದ್ದು ಹೇಗೆ?

6 ಉದಾಹರಣೆಗೆ ಏಲಿ ಬಗ್ಗೆ ಯೋಚಿಸಿ. ಅವನು ಇಸ್ರಾಯೇಲಿನ ಮಹಾ ಯಾಜಕನಾಗಿದ್ದರೂ ಅವನ ಇಬ್ಬರು ಪುತ್ರರು ಯೆಹೋವನ ನಿಯಮಗಳಿಗೆ ಅವಿಧೇಯತೆ ತೋರಿಸುತ್ತಿದ್ದರು. “ಏಲಿಯ ಮಕ್ಕಳು ಬಹುದುಷ್ಟರಾಗಿದ್ದರು; ಅವರು ಯೆಹೋವನನ್ನು ಲಕ್ಷಿಸುತ್ತಿರಲಿಲ್ಲ” ಎನ್ನುತ್ತದೆ ಬೈಬಲ್‌. (1 ಸಮು. 2:12) ತನ್ನ ಪುತ್ರರು ತುಂಬ ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆಂದು ಏಲಿಗೆ ಗೊತ್ತಿದ್ದರೂ ಅವರನ್ನು ಸರಿಯಾಗಿ ಗದರಿಸಿ ತಿದ್ದಲಿಲ್ಲ. ಕಾಲಾನಂತರ ಯೆಹೋವನೇ ಏಲಿ ಮತ್ತವನ ಪುತ್ರರಿಗೆ ಶಿಕ್ಷೆ ಕೊಟ್ಟನು. ಮುಂದೆ ಏಲಿಯ ವಂಶದಲ್ಲಿ ಯಾರಿಗೂ ಮಹಾ ಯಾಜಕರಾಗಿ ಸೇವೆಮಾಡಲು ಅವಕಾಶ ಕೊಡಲಿಲ್ಲ. (1 ಸಮು. 3:10-14) ಒಂದುವೇಳೆ ನೀವು ಏಲಿಯ ಕಾಲದಲ್ಲಿ ಜೀವಿಸಿರುತ್ತಿದ್ದರೆ ಮತ್ತು ಅವನು ತನ್ನ ಪುತ್ರರ ಘೋರ ತಪ್ಪುಗಳನ್ನು ನೋಡಿಯೂ ನೋಡದ ಹಾಗೆ ಇದ್ದಾನೆಂದು ಗೊತ್ತಿರುತ್ತಿದ್ದರೆ ಏನು ಮಾಡುತ್ತಿದ್ದಿರಿ? ಯೆಹೋವನ ಮೇಲೆ ನಿಮ್ಮ ನಂಬಿಕೆ ಕಡಿಮೆಯಾಗಿ, ಕ್ರಮೇಣ ಆತನ ಸೇವೆಮಾಡುವುದನ್ನೇ ನಿಲ್ಲಿಸಿಬಿಡುತ್ತಿದ್ದಿರಾ?

7. (ಎ) ದಾವೀದನು ಯಾವ ಗಂಭೀರ ಪಾಪಗಳನ್ನು ಮಾಡಿದನು? (ಬಿ) ದೇವರು ಆ ಬಗ್ಗೆ ಏನು ಮಾಡಿದನು?

7 ದಾವೀದನಲ್ಲಿ ಒಳ್ಳೊಳ್ಳೆ ಗುಣಗಳಿದ್ದವು. ಅದಕ್ಕೇ ಯೆಹೋವನು ಅವನನ್ನು ತುಂಬ ಪ್ರೀತಿಸುತ್ತಿದ್ದನು. (1 ಸಮು. 13:13, 14; ಅ. ಕಾ. 13:22) ಅಂಥ ವ್ಯಕ್ತಿಯೇ ತುಂಬ ಕೆಟ್ಟ ಕೆಲಸಗಳನ್ನು ಮಾಡಿದ. ಊರೀಯನು ಯುದ್ಧದಲ್ಲಿ ಹೋರಾಡುತ್ತಿದ್ದಾಗ ಅವನ ಹೆಂಡತಿ ಬತ್ಷೆಬೆಯೊಟ್ಟಿಗೆ ದಾವೀದನು ವ್ಯಭಿಚಾರ ಮಾಡಿದ. ಅವಳು ಗರ್ಭಿಣಿಯಾದಳು. ತಾನು ಮಾಡಿದ್ದು ಯಾರಿಗೂ ಗೊತ್ತಾಗಬಾರದೆಂದು ದಾವೀದನು ಊರೀಯನನ್ನು ಯುದ್ಧದಿಂದ ವಾಪಸ್ಸು ಕರೆಸಿಕೊಂಡ ಮತ್ತು ಮನೆಗೆ ಹೋಗುವಂತೆ ಅವನ ಮನವೊಪ್ಪಿಸಲು ಪ್ರಯತ್ನಿಸಿದ. ಅವನು ಬತ್ಷೆಬೆಯನ್ನು ಕೂಡಿದರೆ ಎಲ್ಲರೂ ಅವನೇ ಮಗುವಿನ ತಂದೆಯೆಂದು ನೆನಸುವರೆಂಬ ಲೆಕ್ಕಾಚಾರ ದಾವೀದನದ್ದಾಗಿತ್ತು. ಆದರೆ ಊರೀಯ ಮನೆಗೆ ಹೋಗಲು ಒಪ್ಪಲಿಲ್ಲ. ಹಾಗಾಗಿ ದಾವೀದನು ಒಂದು ಯೋಜನೆ ಮಾಡಿ ಅವನನ್ನು ಯುದ್ಧದಲ್ಲಿ ಕೊಲ್ಲಿಸಿದ. ದಾವೀದನ ಈ ಗಂಭೀರ ಪಾಪಗಳಿಂದಾಗಿ ಅವನು ಮತ್ತು ಅವನ ಕುಟುಂಬ ತುಂಬ ಕಷ್ಟಗಳನ್ನು ಅನುಭವಿಸಿತು. (2 ಸಮು. 12:9-12) ಆದರೆ ಯೆಹೋವನು ಅವನಿಗೆ ಕರುಣೆ ತೋರಿಸಿ ಕ್ಷಮಿಸಿದನು. ಏಕೆಂದರೆ ಸರಿಯಾದದ್ದನ್ನು ಮಾಡುವ ಮನಸ್ಸು ದಾವೀದನಿಗಿತ್ತೆಂದು ಆತನಿಗೆ ಗೊತ್ತಿತ್ತು. (1 ಅರ. 9:4) ನೀವು ಆ ಕಾಲದಲ್ಲಿ ಜೀವಿಸಿರುತ್ತಿದ್ದರೆ ದಾವೀದನ ಬಗ್ಗೆ ನಿಮಗೆ ಏನನಿಸುತ್ತಿತ್ತು? ಅವನು ಮಾಡಿದ ಪಾಪಗಳಿಂದಾಗಿ ನೀವು ಯೆಹೋವನ ಸೇವೆಮಾಡುವುದನ್ನೇ ಬಿಟ್ಟುಬಿಡುತ್ತಿದ್ದಿರಾ?

8. (ಎ) ಅಪೊಸ್ತಲ ಪೇತ್ರನು ಕೊಟ್ಟ ಮಾತನ್ನು ಪಾಲಿಸಲು ತಪ್ಪಿಹೋದದ್ದು ಹೇಗೆ? (ಬಿ) ಪೇತ್ರನು ತಪ್ಪು ಮಾಡಿದ ಬಳಿಕವೂ ಯೆಹೋವನು ಯಾಕೆ ಅವನನ್ನು ತನ್ನ ಸೇವೆಯಲ್ಲಿ ಉಪಯೋಗಿಸಿದನು?

8 ಅಪೊಸ್ತಲ ಪೇತ್ರನ ಉದಾಹರಣೆ ಗಮನಿಸಿ. ಅವನನ್ನು ಆರಿಸಿಕೊಂಡದ್ದು ಯೇಸು. ಹಾಗಿದ್ದರೂ ಪೇತ್ರನು ಒಮ್ಮೊಮ್ಮೆ ತಪ್ಪಾದ ವಿಷಯಗಳನ್ನು ಹೇಳಿದ ಮತ್ತು ಮಾಡಿದ. ಒಮ್ಮೆ, ಅವನು ಬೇರೆಲ್ಲರೂ ಯೇಸುವನ್ನು ಬಿಟ್ಟುಹೋದರೂ ತಾನು ಯಾವತ್ತೂ ಬಿಟ್ಟುಹೋಗುವುದಿಲ್ಲವೆಂದು ಹೇಳಿದ. (ಮಾರ್ಕ 14:27-31, 50) ಆದರೆ ಸೈನಿಕರು ಯೇಸುವನ್ನು ಬಂಧಿಸಿದಾಗ ಎಲ್ಲ ಅಪೊಸ್ತಲರು ಓಡಿಹೋದರು. ಪೇತ್ರ ಸಹ ಓಡಿಹೋದ. ನಂತರ ಮೂರು ಬೇರೆಬೇರೆ ಸಮಯಗಳಲ್ಲಿ ಯೇಸು ಯಾರೆಂದು ತನಗೆ ಗೊತ್ತಿಲ್ಲ ಅಂತ ಹೇಳಿದ. (ಮಾರ್ಕ 14:53, 54, 66-72) ಆದರೆ ಆಮೇಲೆ ತನ್ನ ತಪ್ಪಿಗಾಗಿ ಪೇತ್ರ ತುಂಬಾ ದುಃಖಪಟ್ಟ. ಆದ್ದರಿಂದಲೇ ಯೆಹೋವನು ಅವನನ್ನು ಕ್ಷಮಿಸಿ, ಅವನನ್ನು ತನ್ನ ಸೇವೆಯಲ್ಲಿ ಉಪಯೋಗಿಸುವುದನ್ನು ಮುಂದುವರಿಸಿದನು. ನೀವು ಆ ಸಮಯದಲ್ಲಿ ಯೇಸುವಿನ ಶಿಷ್ಯರಾಗಿರುತ್ತಿದ್ದರೆ ಪೇತ್ರನು ಮಾಡಿದ ಸಂಗತಿ ಬಗ್ಗೆ ಗೊತ್ತಾದಾಗ ಯೆಹೋವನಿಗೆ ನಿಷ್ಠರಾಗಿ ಉಳಿಯುತ್ತಿದ್ದಿರಾ?

9. ಯೆಹೋವನು ಯಾವಾಗಲೂ ನ್ಯಾಯವಾದದ್ದನ್ನೇ ನಡೆಸುತ್ತಾನೆಂದು ನಿಮಗೆ ಯಾಕೆ ಭರವಸೆ ಇದೆ?

9 ನಾವು ಇಲ್ಲಿವರೆಗೆ ಚರ್ಚಿಸಿದ ಉದಾಹರಣೆಗಳಲ್ಲಿ ಯೆಹೋವನ ಕೆಲವು ಸೇವಕರು ಕೆಟ್ಟ ಕೆಲಸಗಳನ್ನು ಮಾಡಿದ್ದರ ಬಗ್ಗೆ ನೋಡಿದೆವು. ಅವರಿಂದ ಬೇರೆಯವರಿಗೆ ಖಂಡಿತ ನೋವಾಯಿತು. ಆ ಸಂಗತಿಗಳೇ ಈಗ ನಡೆದರೆ ನೀವೇನು ಮಾಡುವಿರಿ? ಕೂಟಗಳಿಗೆ ಹೋಗುವುದನ್ನು ನಿಲ್ಲಿಸುವಿರಾ? ಯೆಹೋವನನ್ನು, ಆತನ ಜನರನ್ನು ಪೂರ್ತಿಯಾಗಿ ಬಿಟ್ಟುಹೋಗುವಿರಾ? ಅಥವಾ ಯೆಹೋವನು ಕರುಣಾಮಯಿ ದೇವರು ಹಾಗಾಗಿ ತಪ್ಪುಮಾಡಿದ ವ್ಯಕ್ತಿ ಪಶ್ಚಾತ್ತಾಪಪಡುವಂತೆ ಕಾಯುತ್ತಿದ್ದಾನೆಂದು ಅರ್ಥಮಾಡಿಕೊಳ್ಳುವಿರಾ? ಕೆಲವೊಮ್ಮೆ ಒಬ್ಬ ವ್ಯಕ್ತಿ ಗಂಭೀರ ಪಾಪಗಳನ್ನು ಮಾಡಿದ್ದರೂ ಅದರ ಬಗ್ಗೆ ಅವನಿಗೆ ಕಿಂಚಿತ್ತೂ ಬೇಸರವಿರಲಿಕ್ಕಿಲ್ಲ. ಆಗ ಏನು ಮಾಡುವಿರಿ? ಯೆಹೋವನಿಗೆ ಇದು ಗೊತ್ತಿದೆ, ಸರಿಯಾದ ಸಮಯದಲ್ಲಿ ಕ್ರಮ ತಕ್ಕೊಳ್ಳುವನು ಎಂದು ಭರವಸೆ ಇಡುವಿರಾ? ಅವಶ್ಯಬಿದ್ದರೆ ಆ ವ್ಯಕ್ತಿಯನ್ನು ಆತನು ಸಭೆಯಿಂದ ತೆಗೆದುಹಾಕಲೂಬಹುದು. ಯೆಹೋವನು ಯಾವಾಗಲೂ ಸರಿಯಾದದ್ದನ್ನು, ನ್ಯಾಯವಾದದ್ದನ್ನು ಮಾಡುತ್ತಾನೆಂದು ನೀವು ನಂಬುತ್ತೀರಾ?

ನಿಷ್ಠರಾಗಿ ಉಳಿಯಿರಿ

10. ಇಸ್ಕರಿಯೋತ ಯೂದ ಮತ್ತು ಪೇತ್ರನು ತಪ್ಪು ಮಾಡಿದಾಗ ಯೇಸು ಏನನ್ನು ಮನಸ್ಸಿನಲ್ಲಿಟ್ಟನು?

10 ಜೊತೆ ವಿಶ್ವಾಸಿಗಳು ಗಂಭೀರ ತಪ್ಪುಗಳನ್ನು ಮಾಡಿದರೂ ಯೆಹೋವನಿಗೆ, ಆತನ ಜನರಿಗೆ ನಿಷ್ಠರಾಗಿ ಉಳಿದ ಅನೇಕರ ಬಗ್ಗೆ ಬೈಬಲಿನಲ್ಲಿ ತಿಳಿಸಲಾಗಿದೆ. ಈ ವಿಷಯದಲ್ಲಿ ಯೇಸು ಅತ್ಯುತ್ತಮ ಮಾದರಿ. ಆತನು ಇಡೀ ರಾತ್ರಿ ಪ್ರಾರ್ಥನೆಯಲ್ಲಿ ತನ್ನ ತಂದೆಯ ಸಹಾಯ ಬೇಡಿಕೊಂಡ ಬಳಿಕವೇ 12 ಅಪೊಸ್ತಲರನ್ನು ಆಯ್ಕೆಮಾಡಿದ್ದನು. ಆದರೂ ಅವರಲ್ಲಿ ಒಬ್ಬನಾದ ಇಸ್ಕರಿಯೋತ ಯೂದ ಮುಂದೆ ಆತನಿಗೆ ದ್ರೋಹ ಬಗೆದ. ಅಲ್ಲದೆ ಅಪೊಸ್ತಲ ಪೇತ್ರನು ತನಗೆ ಯೇಸು ಯಾರೆಂದು ಗೊತ್ತೇ ಇಲ್ಲ ಅಂತ ಹೇಳಿದನು. (ಲೂಕ 6:12-16; 22:2-6, 31, 32) ಶಿಷ್ಯರಲ್ಲಿ ಕೆಲವರು ಯೇಸುವನ್ನು ನಿರಾಶೆಗೊಳಿಸಿದಾಗ ತಪ್ಪು ಯೆಹೋವನದ್ದಲ್ಲ ಆತನ ಜನರದ್ದಲ್ಲ ಎಂದು ಯೇಸು ಮನಸ್ಸಿನಲ್ಲಿಟ್ಟನು. ಆದ್ದರಿಂದ ತನ್ನ ತಂದೆಗೆ ಆಪ್ತನಾಗಿಯೇ ಉಳಿದನು. ನಿಷ್ಠೆಯಿಂದ ಆತನ ಸೇವೆ ಮುಂದುವರಿಸಿದನು. ಫಲಿತಾಂಶ? ಯೆಹೋವನು ಯೇಸುವಿನ ಪುನರುತ್ಥಾನ ಮಾಡಿ, ಮುಂದಕ್ಕೆ ಸ್ವರ್ಗದಲ್ಲಿ ರಾಜನಾಗಿ ಮಾಡುವ ಮೂಲಕ ಬಹುಮಾನ ಕೊಟ್ಟನು.—ಮತ್ತಾ. 28:7, 18-20.

11. ನಮ್ಮೀ ಕಾಲದಲ್ಲಿರುವ ಯೆಹೋವನ ಸೇವಕರ ಬಗ್ಗೆ ಬೈಬಲ್‌ ಏನನ್ನು ಮುಂತಿಳಿಸಿತ್ತು?

11 ಯೆಹೋವನಿಗೆ ಮತ್ತು ಆತನ ಜನರಿಗೆ ನಾವು ನಿಷ್ಠರಾಗಿರಬೇಕೆಂದು ಯೇಸುವಿನ ಮಾದರಿ ನಮಗೆ ಕಲಿಸುತ್ತದೆ. ಹೀಗೆ ನಿಷ್ಠರಾಗಿರಲು ನಮಗಿರುವ ಕೆಲವು ಒಳ್ಳೇ ಕಾರಣಗಳನ್ನು ಗಮನಿಸಿ: ಈ ಅಂತ್ಯಕಾಲದಲ್ಲಿ ಯೆಹೋವನು ತನ್ನ ಸೇವಕರನ್ನು ಮಾರ್ಗದರ್ಶಿಸುತ್ತಿದ್ದಾನೆ. ಸತ್ಯವನ್ನು ಇಡೀ ಲೋಕದಲ್ಲಿ ಸಾರಲು ಆತನು ಅವರಿಗೆ ಸಹಾಯಮಾಡುತ್ತಿದ್ದಾನೆ. ಹಾಗಾಗಿ ಅವರಿಂದ ಮಾತ್ರ ಈ ಕೆಲಸ ಮಾಡಲು ಆಗಿದೆ. ಯೆಹೋವನು ಅವರಿಗೆ ಬೋಧಿಸುತ್ತಿರುವ ಎಲ್ಲ ವಿಷಯಗಳಿಂದಾಗಿ ಅವರ ಮಧ್ಯೆ ನಿಜವಾದ ಐಕ್ಯವಿದೆ, ಸಂತೋಷವಿದೆ. ಇದನ್ನೇ ಯೆಹೋವನು ಈ ಮಾತುಗಳಲ್ಲಿ ವರ್ಣಿಸಿದನು: “ಇಗೋ, ನನ್ನ ಸೇವಕರು ಹೃದಯಾನಂದದಿಂದ ಹರ್ಷಧ್ವನಿಗೈಯುವರು.”—ಯೆಶಾ. 65:14.

12. ಬೇರೆಯವರು ತಪ್ಪುಮಾಡುವಾಗ ನಾವೇನು ಮಾಡಬೇಕು?

12 ಯೆಹೋವನು ನಮ್ಮನ್ನು ಮಾರ್ಗದರ್ಶಿಸಿ ಒಳ್ಳೇ ಕೆಲಸಗಳನ್ನು ಮಾಡಲು ಸಹಾಯ ಮಾಡುತ್ತಿರುವ ಕಾರಣ ನಮಗೆ ನಿಜ ಸಂತೋಷವಿದೆ. ಆದರೆ ಸೈತಾನನ ಲೋಕದಲ್ಲಿರುವ ಜನರನ್ನು ನೋಡಿ! ಅವರಿಗೆ ಸಂತೋಷ ಇಲ್ಲ, ಭವಿಷ್ಯಕ್ಕಾಗಿ ನಿಜವಾದ ನಿರೀಕ್ಷೆ ಇಲ್ಲ. ಹೀಗಿರುವಾಗ ಸಭೆಯಲ್ಲಿ ಯಾರೊ ಒಬ್ಬರು ಏನೋ ಹೇಳಿದರು, ಏನೊ ಮಾಡಿದರು ಎಂಬ ಕಾರಣಕ್ಕೆ ಯೆಹೋವನನ್ನು, ಆತನ ಜನರನ್ನು ಬಿಟ್ಟುಹೋಗುವುದು ಎಂಥ ಮೂರ್ಖತನ, ಎಂಥ ಅನ್ಯಾಯ! ನಾವೆಂದೂ ಹಾಗೆ ಮಾಡಬಾರದು. ಬದಲಾಗಿ ಯೆಹೋವನಿಗೆ ನಿಷ್ಠರಾಗಿ ಉಳಿಯಬೇಕು. ಆತನ ನಿರ್ದೇಶನ ಪಾಲಿಸಬೇಕು. ಅಲ್ಲದೆ, ಬೇರೆಯವರ ತಪ್ಪುಗಳ ಬಗ್ಗೆ ನಮಗೆ ಯಾವ ದೃಷ್ಟಿಕೋನವಿರಬೇಕು, ನಾವು ಹೇಗೆ ಪ್ರತಿಕ್ರಿಯಿಸಬೇಕು ಎಂದೂ ಕಲಿಯಬೇಕು.

ನಿಮ್ಮ ಪ್ರತಿಕ್ರಿಯೆ ಹೇಗಿರಬೇಕು?

13, 14. (ಎ) ಬೇರೆಯವರ ವಿಷಯದಲ್ಲಿ ನಾವು ಏಕೆ ತಾಳ್ಮೆ ತೋರಿಸಬೇಕು? (ಬಿ) ನಾವು ಯಾವ ವಾಗ್ದಾನವನ್ನು ನೆನಪಿನಲ್ಲಿಡಬೇಕು?

13 ಒಬ್ಬ ಸಹೋದರ ಅಥವಾ ಸಹೋದರಿಯಿಂದ ನಿಮ್ಮ ಮನಸ್ಸಿಗೆ ನೋವಾಗಿರುವಲ್ಲಿ ನೀವೇನು ಮಾಡಬೇಕು? “ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ; ಕೋಪಕ್ಕೆ ಮೂಢರ ಎದೆಯೇ ನೆಲೆ” ಎಂದು ಬೈಬಲ್‌ ಬುದ್ಧಿ ಹೇಳುತ್ತದೆ. (ಪ್ರಸಂ. 7:9) ನಾವೆಲ್ಲರೂ ಅಪರಿಪೂರ್ಣರು. ತಪ್ಪು ಮಾಡೇ ಮಾಡುತ್ತೇವೆ. ಹಾಗಾಗಿ ನಮ್ಮ ಸಹೋದರರು ಹೇಳುವ ಮತ್ತು ಮಾಡುವ ವಿಷಯಗಳು ಯಾವಾಗಲೂ ಸರಿ ಇರುತ್ತವೆಂದು ನಿರೀಕ್ಷಿಸಲಿಕ್ಕಾಗುವುದಿಲ್ಲ. ಅವರು ಮಾಡಿದ ತಪ್ಪುಗಳ ಬಗ್ಗೆ ಯಾವಾಗಲೂ ಯೋಚಿಸುತ್ತಾ ಇರುವುದೂ ಒಳ್ಳೇದಲ್ಲ. ಹಾಗೆ ಮಾಡಿದರೆ, ಯೆಹೋವನ ಸೇವೆಯನ್ನು ಆನಂದದಿಂದ ಮಾಡಲಿಕ್ಕಾಗುವುದಿಲ್ಲ. ಇದಕ್ಕಿಂತಲೂ ಕೆಟ್ಟ ಸಂಗತಿ ಏನೆಂದರೆ ಆತನ ಮೇಲೆ ನಮಗಿದ್ದ ನಂಬಿಕೆ ದುರ್ಬಲವಾಗಬಹುದು. ಯೆಹೋವನ ಸಂಘಟನೆಯನ್ನು ನಾವು ಬಿಟ್ಟು ಹೋಗಲೂಬಹುದು. ಆಗ ನಾವು ಯೆಹೋವನ ಸೇವೆಮಾಡುವ ಅವಕಾಶ ಮತ್ತು ಹೊಸ ಲೋಕದಲ್ಲಿ ಜೀವಿಸುವ ನಿರೀಕ್ಷೆ ಎರಡನ್ನೂ ಕಳಕೊಳ್ಳುವೆವು.

14 ಬೇರೆಯವರು ಮಾಡುವ ಯಾವುದೊ ಸಂಗತಿಯಿಂದ ನಿಮಗೆ ತುಂಬ ನೋವಾಗುವಲ್ಲಿ, ಸಂತೋಷದಿಂದ ಯೆಹೋವನ ಸೇವೆ ಮಾಡುತ್ತಾ ಇರಲು ನಿಮಗೆ ಯಾವುದು ಸಹಾಯಮಾಡಬಲ್ಲದು? ಯೆಹೋವನ ಈ ಸಾಂತ್ವನಕರ ವಾಗ್ದಾನವನ್ನು ಯಾವಾಗಲೂ ಮನಸ್ಸಿನಲ್ಲಿಡಿ: “ಇಗೋ, ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಸೃಷ್ಟಿಸುವೆನು; ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.” (ಯೆಶಾ. 65:17; 2 ಪೇತ್ರ 3:13) ನೀವು ಯೆಹೋವನಿಗೆ ನಿಷ್ಠರಾಗಿ ಉಳಿದರೆ ಆತನು ನಿಮಗೆ ಈ ಆಶೀರ್ವಾದಗಳನ್ನು ಕೊಡುವನು.

15. ಬೇರೆಯವರು ತಪ್ಪುಗಳನ್ನು ಮಾಡಿದಾಗ ನಾವೇನು ಮಾಡಬೇಕೆಂದು ಯೇಸು ಹೇಳಿದನು?

15 ನಾವಿನ್ನೂ ಹೊಸ ಲೋಕದಲ್ಲಿ ಇಲ್ಲ. ಹಾಗಾಗಿ ಯಾರಾದರೂ ನಮ್ಮ ಮನನೋಯಿಸಿದರೆ ಆ ಸಮಯದಲ್ಲಿ ನಾವೇನು ಮಾಡುವಂತೆ ಯೆಹೋವನು ಬಯಸುತ್ತಾನೆಂದು ಧ್ಯಾನಿಸಬೇಕು. ಉದಾಹರಣೆಗೆ, ಯೇಸು ಹೇಳಿದ ಈ ಮಾತನ್ನು ನೆನಪಿಡೋಣ: “ನೀವು ಜನರ ಅಪರಾಧಗಳನ್ನು ಕ್ಷಮಿಸಿದರೆ ಸ್ವರ್ಗದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮನ್ನು ಕ್ಷಮಿಸುವನು; ಆದರೆ ನೀವು ಜನರ ಅಪರಾಧಗಳನ್ನು ಕ್ಷಮಿಸದೆ ಹೋದರೆ ನಿಮ್ಮ ತಂದೆಯು ಸಹ ನಿಮ್ಮ ಅಪರಾಧಗಳನ್ನು ಕ್ಷಮಿಸುವುದಿಲ್ಲ.” ನಾವು “ಏಳು ಸಾರಿ” ಕ್ಷಮಿಸಬೇಕೊ ಎಂದು ಪೇತ್ರನು ಯೇಸುವಿಗೆ ಕೇಳಿದಾಗ ಯೇಸು ಉತ್ತರಿಸಿದ್ದು: “ಏಳು ಸಾರಿಯಲ್ಲ, ಎಪ್ಪತ್ತೇಳು ಸಾರಿ ಎಂದು ನಿನಗೆ ಹೇಳುತ್ತೇನೆ.” ಹೀಗೆ, ನಾವು ಯಾವಾಗಲೂ ಬೇರೆಯವರನ್ನು ಕ್ಷಮಿಸಲು ಸಿದ್ಧರಿರಬೇಕೆಂದು ಯೇಸು ಕಲಿಸಿದನು.—ಮತ್ತಾ. 6:14, 15; 18:21, 22.

16. ಯೋಸೇಫನು ಯಾವ ಒಳ್ಳೇ ಮಾದರಿಯಿಟ್ಟನು?

16 ಬೇರೆಯವರಿಂದಾಗಿ ನಮಗೆ ತುಂಬ ನೋವಾದಾಗ ನಾವು ಹೇಗೆ ಪ್ರತಿಕ್ರಿಯಿಸಬೇಕೆಂದು ಯೋಸೇಫನ ಮಾದರಿ ಕಲಿಸುತ್ತದೆ. ಯೋಸೇಫ ಮತ್ತು ಅವನ ತಮ್ಮ ಬೆನ್ಯಾಮೀನನು ಯಾಕೋಬ ರಾಹೇಲರಿಗಿದ್ದ ಇಬ್ಬರೇ ಗಂಡುಮಕ್ಕಳು. ಬೇರೆ ಹತ್ತು ಮಂದಿ ಪುತ್ರರಿದ್ದರೂ ಅವರೆಲ್ಲರಿಗಿಂತ ಯಾಕೋಬನಿಗೆ ಯೋಸೇಫನ ಮೇಲೆ ಜಾಸ್ತಿ ಪ್ರೀತಿ. ಇದರಿಂದಾಗಿ ಆ ಪುತ್ರರಿಗೆ ಯೋಸೇಫನ ಮೇಲೆ ತುಂಬ ಹೊಟ್ಟೆಕಿಚ್ಚು, ದ್ವೇಷವಿತ್ತು. ಎಷ್ಟರ ಮಟ್ಟಿಗೆಯೆಂದರೆ ಅವನನ್ನು ಗುಲಾಮನಾಗಿ ಮಾರಿದರು. ಅವನನ್ನು ಐಗುಪ್ತಕ್ಕೆ ಒಯ್ಯಲಾಯಿತು. ಅನೇಕ ವರ್ಷಗಳ ನಂತರ ಐಗುಪ್ತದ ರಾಜನು ಯೋಸೇಫನ ಒಳ್ಳೇ ಕೆಲಸವನ್ನು ಮೆಚ್ಚಿ ಅವನಿಗೆ ಆ ದೇಶದ ಅತ್ಯುನ್ನತವಾದ ಎರಡನೇ ಅಧಿಕಾರ ಸ್ಥಾನ ಕೊಟ್ಟನು. ಸಮಯಾನಂತರ ಕ್ಷಾಮದ ಕಾರಣ ಯೋಸೇಫನ ಅಣ್ಣಂದಿರು ಆಹಾರವನ್ನು ಕೊಂಡುಕೊಳ್ಳಲು ಐಗುಪ್ತಕ್ಕೆ ಬಂದರು. ಅಲ್ಲಿ ಅವರು ಯೋಸೇಫನನ್ನು ನೋಡಿದಾಗ ಅವರಿಗೆ ಅವನ ಗುರುತು ಸಿಗಲಿಲ್ಲ. ಆದರೆ ಅವನಿಗೆ ಅವರ ಗುರುತು ಸಿಕ್ಕಿತು. ಅವರು ಹಿಂದೆ ಅವನ ಜೊತೆ ತುಂಬ ಕೆಟ್ಟದ್ದಾಗಿ ನಡೆದುಕೊಂಡಿದ್ದರೂ ಅವನು ಅವರಿಗೆ ಶಿಕ್ಷೆ ಕೊಡಲಿಲ್ಲ. ಅವರು ಬದಲಾಗಿದ್ದಾರಾ ಎಂದು ಪರೀಕ್ಷಿಸಿ ನೋಡಿದನು. ಬದಲಾಗಿದ್ದಾರೆ ಎಂದು ತಿಳಿದುಬಂದಾಗ ‘ನಾನು ನಿಮ್ಮ ತಮ್ಮ’ ಎಂದು ಅವರಿಗೆ ಹೇಳಿದನು. ಸಮಯಾನಂತರ ಅವರನ್ನು ಸಂತೈಸುವಾಗ ಹೀಗೂ ಹೇಳಿದನು: “ನೀವು ಸ್ವಲ್ಪವೂ ಭಯಪಡಬೇಡಿರಿ; ನಾನು ನಿಮ್ಮನ್ನೂ ನಿಮಗೆ ಸೇರಿದವರೆಲ್ಲರನ್ನೂ ಪೋಷಿಸುವೆನು.”—ಆದಿ. 50:21.

17. ಬೇರೆಯವರು ತಪ್ಪುಗಳನ್ನು ಮಾಡುವಾಗ ನೀವೇನು ಮಾಡಬೇಕು?

17 ನೆನಪಿಡಿ, ನಾವೆಲ್ಲರೂ ತಪ್ಪುಮಾಡುತ್ತೇವೆ. ಆದ್ದರಿಂದ ನೀವು ಸಹ ಬೇರೆಯವರ ಮನನೋಯಿಸುವ ಸಾಧ್ಯತೆಯಿದೆ. ಹೀಗೆ ಮಾಡಿದ್ದೀರೆಂದು ನಿಮಗೆ ಅನಿಸಿದರೆ ಬೈಬಲಿನ ಬುದ್ಧಿವಾದ ಪಾಲಿಸಿ. ಯಾರನ್ನು ನೋಯಿಸಿದ್ದೀರೊ ಅವರ ಹತ್ತಿರ ಕ್ಷಮೆ ಕೇಳಿ. ಅವರ ಜೊತೆ ಸಮಾಧಾನವಾಗಲು ಪ್ರಯತ್ನಿಸಿ. (ಮತ್ತಾಯ 5:23, 24 ಓದಿ.) ಬೇರೆಯವರು ನಮ್ಮನ್ನು ಕ್ಷಮಿಸುವಾಗ ನಮಗೆ ಸಂತೋಷವಾಗುತ್ತದೆ. ಹಾಗಾಗಿ ನಾವೂ ಬೇರೆಯವರನ್ನು ಕ್ಷಮಿಸಬೇಕು. ಕೊಲೊಸ್ಸೆ 3:13 ಹೀಗನ್ನುತ್ತದೆ: “ಯಾವನಿಗಾದರೂ ಮತ್ತೊಬ್ಬನ ವಿರುದ್ಧ ದೂರುಹೊರಿಸಲು ಕಾರಣವಿದ್ದರೂ ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ. ಯೆಹೋವನು ನಿಮ್ಮನ್ನು ಉದಾರವಾಗಿ ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.” ನಮ್ಮ ಸಹೋದರರ ಮೇಲೆ ನಮಗೆ ನಿಜವಾದ ಪ್ರೀತಿಯಿದ್ದರೆ ಅವರು ಹಿಂದೆ ಮಾಡಿದ ಯಾವುದೊ ವಿಷಯಕ್ಕಾಗಿ ನಾವು ಯಾವಾಗಲೂ ಮನಸ್ಸಲ್ಲಿ ಸಿಟ್ಟು ಇಟ್ಟುಕೊಳ್ಳುವುದಿಲ್ಲ. (1 ಕೊರಿಂ. 13:5) ನಾವು ಬೇರೆಯವರನ್ನು ಕ್ಷಮಿಸಿದರೆ ಯೆಹೋವನು ಕೂಡ ನಮ್ಮನ್ನು ಕ್ಷಮಿಸುತ್ತಾನೆ. ಹೀಗೆ ನಮ್ಮ ಕರುಣಾಮಯಿ ತಂದೆಯಾದ ಯೆಹೋವನು ನಮಗೆ ಕರುಣೆ ತೋರಿಸುತ್ತಾನೆ. ಹಾಗಾಗಿ ಬೇರೆಯವರು ತಪ್ಪುಗಳನ್ನು ಮಾಡುವಾಗ ನಾವು ಅವರಿಗೆ ಯೆಹೋವನಂತೆಯೇ ಕರುಣೆ ತೋರಿಸೋಣ.ಕೀರ್ತನೆ 103:12-14 ಓದಿ.