ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಹಾ ಕುಂಬಾರನು ನಿಮ್ಮನ್ನು ರೂಪಿಸುವಂತೆ ಬಿಡುತ್ತೀರಾ?

ಮಹಾ ಕುಂಬಾರನು ನಿಮ್ಮನ್ನು ರೂಪಿಸುವಂತೆ ಬಿಡುತ್ತೀರಾ?

“ಜೇಡಿಮಣ್ಣು ಕುಂಬಾರನ ಕೈಯಲ್ಲಿ ಹೇಗೋ, ಹಾಗೆಯೇ ನೀವು ನನ್ನ ಕೈಯಲ್ಲಿದ್ದೀರಿ.”—ಯೆರೆ. 18:6.

ಗೀತೆಗಳು: 60, 22

1, 2. (ಎ) ದಾನಿಯೇಲನು ದೇವರಿಗೆ ಯಾಕೆ ‘ಅತಿಪ್ರಿಯನಾಗಿದ್ದನು?’ (ಬಿ) ನಮ್ಮ ಕುಂಬಾರನ ಕಡೆಗೆ ನಮಗೆ ಯಾವ ಮನೋಭಾವವಿರಬೇಕು?

ಯೆಹೂದ್ಯರು ಸೆರೆಯಾಳುಗಳಾಗಿ ಒಯ್ಯಲ್ಪಟ್ಟ ಬಾಬೆಲ್‌ ನಗರದಲ್ಲಿ ವಿಗ್ರಹಗಳು ತುಂಬಿದ್ದವು. ಅಲ್ಲಿದ್ದ ಜನರು ಭೂತಪ್ರೇತಗಳನ್ನು ಆರಾಧಿಸುತ್ತಿದ್ದರು. ಆದರೂ ದಾನಿಯೇಲ ಹಾಗೂ ಅವನ ಮೂವರು ಸ್ನೇಹಿತರಂಥ ನಂಬಿಗಸ್ತ ಯೆಹೂದ್ಯರು ತಮ್ಮ ಸುತ್ತಮುತ್ತಲಿನ ಜನರು ತಮ್ಮನ್ನು ರೂಪಿಸುವಂತೆ ಬಿಡಲಿಲ್ಲ. (ದಾನಿ. 1:6, 8, 12; 3:16-18) ದಾನಿಯೇಲ ಮತ್ತು ಅವನ ಸ್ನೇಹಿತರು ಯೆಹೋವನನ್ನು ತಮ್ಮ ಕುಂಬಾರನಾಗಿ ಅಂಗೀಕರಿಸಿ ಆತನೊಬ್ಬನನ್ನೇ ಆರಾಧಿಸುವುದನ್ನು ಮುಂದುವರಿಸಿದರು. ದಾನಿಯೇಲನು ತನ್ನ ಜೀವಮಾನದ ಹೆಚ್ಚಿನ ಸಮಯ ಬಾಬೆಲಿನಲ್ಲಿ ಜೀವಿಸಿದ್ದರೂ ಅಲ್ಲಿನ ಕೆಟ್ಟ ವಾತಾವರಣವು ತನ್ನನ್ನು ಪ್ರಭಾವಿಸುವಂತೆ ಬಿಡಲಿಲ್ಲ. ಆದ್ದರಿಂದಲೇ ಅವನು ದೇವರಿಗೆ ‘ಅತಿಪ್ರಿಯನಾಗಿದ್ದನು’ ಎಂದು ದೇವದೂತನು ಹೇಳಿದನು.—ದಾನಿ. 10:11, 19.

2 ಯೆಹೋವನು ವಿಶ್ವದ ಪರಮಾಧಿಕಾರಿ ಆಗಿರುವುದರಿಂದ ಜನಾಂಗಗಳನ್ನು ರೂಪಿಸುವ ಅಧಿಕಾರ ಆತನಿಗಿದೆ ಎಂದು ಆತನ ನಿಜ ಆರಾಧಕರು ಅಂಗೀಕರಿಸುತ್ತಾರೆ. (ಯೆರೆಮೀಯ 18:6 ಓದಿ.) ನಮ್ಮಲ್ಲೂ ಪ್ರತಿಯೊಬ್ಬರನ್ನು ರೂಪಿಸುವ ಅಧಿಕಾರ ಯೆಹೋವನಿಗಿದೆ. ಬೈಬಲ್‌ ಸಮಯದಲ್ಲಿದ್ದ ಕುಂಬಾರರು ಜೇಡಿಮಣ್ಣನ್ನು ಅಚ್ಚಿಗೆ ತುರುಕಿಸಿ ಅದನ್ನು ನಿರ್ದಿಷ್ಟ ಆಕಾರಕ್ಕೆ ತರುತ್ತಿದ್ದರು. ಆದರೆ ಯೆಹೋವನು ಯಾರನ್ನೂ ಬದಲಾಗುವಂತೆ ಒತ್ತಾಯಿಸುವುದಿಲ್ಲ. ಆತನು ನಮ್ಮನ್ನು ರೂಪಿಸುವಂತೆ ನಾವಾಗಿಯೇ ಬಿಟ್ಟುಕೊಡಬೇಕೆಂದು ಬಯಸುತ್ತಾನೆ. ಹಾಗಾಗಿ ನಾವು ಹೇಗೆ ಆತನ ಕೈಯಲ್ಲಿ ಮೃದುವಾದ ಜೇಡಿಮಣ್ಣಿನಂತೆ ಇರಬಹುದು ಎಂದು ಈ ಲೇಖನದಲ್ಲಿ ಕಲಿಯಲಿದ್ದೇವೆ. ಈ ಮೂರು ಪ್ರಶ್ನೆಗಳನ್ನು ಚರ್ಚಿಸೋಣ: (1) ದೇವರ ಬುದ್ಧಿವಾದ ತಿರಸ್ಕರಿಸಿ ನಮ್ಮನ್ನು ಗಟ್ಟಿ ಜೇಡಿಮಣ್ಣಿನಂತೆ ಮಾಡುವ ಗುಣಗಳು ನಮ್ಮಲ್ಲಿ ಬರದಂತೆ ಹೇಗೆ ನೋಡಿಕೊಳ್ಳಬಹುದು? (2) ಮೃದುವಾದ ಜೇಡಿಮಣ್ಣಿನಂತಿರಲು ಬೇಕಾದ ಗುಣಗಳನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು? (3) ಮಕ್ಕಳನ್ನು ರೂಪಿಸುವುದರಲ್ಲಿ ಕ್ರೈಸ್ತ ಹೆತ್ತವರು ದೇವರೊಂದಿಗೆ ಹೇಗೆ ಕೆಲಸಮಾಡಬಹುದು?

ಹೃದಯವನ್ನು ಕಠಿಣಮಾಡುವ ಕೆಟ್ಟ ಗುಣಗಳು ನಮ್ಮಲ್ಲಿ ಇರಬಾರದು

3. ಯಾವ ಕೆಟ್ಟ ಗುಣಗಳು ಹೃದಯವನ್ನು ಕಠಿಣಮಾಡುತ್ತವೆ? ಉದಾಹರಣೆ ಕೊಡಿ.

3 “ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು” ಎನ್ನುತ್ತದೆ ಜ್ಞಾನೋಕ್ತಿ 4:23. ನಮ್ಮ ಹೃದಯ ಕಠಿಣವಾಗದಂತೆ ಕಾಪಾಡಿಕೊಳ್ಳಬೇಕಾದರೆ ಯಾವ ಕೆಟ್ಟ ಗುಣಗಳನ್ನು ತೆಗೆದುಹಾಕಬೇಕು? ಅಹಂಕಾರ, ಗಂಭೀರ ಪಾಪ, ನಂಬಿಕೆಯ ಕೊರತೆ ಮುಂತಾದವು. ನಾವು ಜಾಗ್ರತೆ ವಹಿಸದಿದ್ದರೆ ಈ ಗುಣಗಳು ನಾವು ಅವಿಧೇಯರಾಗುವಂತೆ, ದಂಗೆಯೇಳುವಂತೆ ಮಾಡುತ್ತವೆ. (ದಾನಿ. 5:1, 20; ಇಬ್ರಿ. 3:13, 18, 19) ಯೆಹೂದದ ರಾಜ ಉಜ್ಜೀಯನಿಗೆ ಹೀಗೆಯೇ ಆಯಿತು. (2 ಪೂರ್ವಕಾಲವೃತ್ತಾಂತ 26:3-5, 16-21 ಓದಿ.) ಮೊದಮೊದಲು ಉಜ್ಜೀಯನು ದೇವರಿಗೆ ವಿಧೇಯನಾಗಿದ್ದನು ಮತ್ತು ಅವನಿಗೆ ದೇವರೊಂದಿಗೆ ಒಳ್ಳೇ ಸಂಬಂಧವಿತ್ತು. ಆದರೆ “ಅವನು ಬಲಿಷ್ಠನಾದ ಮೇಲೆ ಗರ್ವಿಷ್ಠನಾಗಿ ಭ್ರಷ್ಟನಾದನು.” ಅವನು ಎಷ್ಟು ಅಹಂಕಾರಿಯಾದನೆಂದರೆ ಯಾಜಕರು ಮಾತ್ರ ಮಾಡಬೇಕಿದ್ದ ಕೆಲಸಕ್ಕೆ ಕೈಹಾಕಿದನು. ಅಂದರೆ ದೇವಾಲಯದಲ್ಲಿ ಧೂಪಹಾಕಲು ಹೋದನು! ಯಾಜಕರು ಅವನ ತಪ್ಪನ್ನು ತಿಳಿಸಿದಾಗ ಅವನ ಕೋಪ ನೆತ್ತಿಗೇರಿತು. ಅಲ್ಲೇ ಯೆಹೋವನು ಅವನಿಗೆ ಕುಷ್ಠ ಹತ್ತುವಂತೆ ಮಾಡಿ ಸೊಕ್ಕಡಗಿಸಿದನು. ಉಜ್ಜೀಯನು ಸಾಯುವ ವರೆಗೆ ಕುಷ್ಠರೋಗಿಯಾಗಿದ್ದನು.—ಜ್ಞಾನೋ. 16:18.

4, 5. ನಾವು ಅಹಂಕಾರಿಗಳಾಗದಂತೆ ಜಾಗ್ರತೆ ವಹಿಸದಿದ್ದರೆ ಏನಾಗುವ ಸಾಧ್ಯತೆಯಿದೆ? ಒಂದು ಉದಾಹರಣೆ ಕೊಡಿ.

4 ಅಹಂಕಾರ ನಮ್ಮಲ್ಲಿದ್ದರೆ ಇತರರಿಗಿಂತ ನಾವೇ ಶ್ರೇಷ್ಠರು ಎಂಬ ಭಾವನೆ ನಮ್ಮಲ್ಲಿ ಬರುತ್ತದೆ. ನಾವು ಆಗ ಬೈಬಲಿನ ಬುದ್ಧಿವಾದವನ್ನು ತಿರಸ್ಕರಿಸಿಬಿಡುತ್ತೇವೆ. (ಜ್ಞಾನೋ. 29:1; ರೋಮ. 12:3) ಇದು ಎಷ್ಟು ನಿಜವೆಂದು ಹಿರಿಯನಾಗಿದ್ದ ಜಿಮ್‌ನ ಅನುಭವ ತೋರಿಸುತ್ತದೆ. ಹಿರಿಯರ ಕೂಟದಲ್ಲಿ ಸಭೆಗೆ ಸಂಬಂಧಿಸಿದ ಒಂದು ಸನ್ನಿವೇಶದ ಬಗ್ಗೆ ಇತರ ಹಿರಿಯರು ಹೇಳಿದ್ದನ್ನು ಒಪ್ಪಲು ಅವನು ಸಿದ್ಧನಿರಲಿಲ್ಲ. ಅವನು ಹೇಳಿದ್ದು: “ನೀವು ಒಂಚೂರೂ ಪ್ರೀತಿ ತೋರಿಸುತ್ತಿಲ್ಲ ಎಂದು ಹೇಳಿ ಆ ಕೂಟದಿಂದ ಎದ್ದು ಹೊರಗೆ ಬಂದೆ.” ಸುಮಾರು ಆರು ತಿಂಗಳ ನಂತರ ಅವನು ಆ ಸಭೆ ಬಿಟ್ಟು ಇನ್ನೊಂದು ಸಭೆಗೆ ಹೋದ. ಆದರೆ ಅಲ್ಲಿ ಅವನು ಸಭಾ ಹಿರಿಯನಾಗಿ ನೇಮಕ ಪಡೆಯಲಿಲ್ಲ. ಅವನಿಗೆ ತುಂಬ ನಿರಾಶೆ ಆಯಿತು. ತಾನು ಮಾಡಿದ್ದೇ ಸರಿ ಎಂಬ ಅನಿಸಿಕೆ ಅವನಿಗೆ ಎಷ್ಟು ದೃಢವಾಗಿತ್ತೆಂದರೆ ಯೆಹೋವನ ಸೇವೆಯನ್ನೇ ಬಿಟ್ಟುಬಿಟ್ಟ. 10 ವರ್ಷಗಳ ತನಕ ನಿಷ್ಕ್ರಿಯನಾಗಿದ್ದ. ಸಹೋದರರು ಅವನನ್ನು ಅನೇಕ ವರ್ಷ ಭೇಟಿಮಾಡುತ್ತಾ ಸಹಾಯಮಾಡಲು ಪ್ರಯತ್ನಿಸಿದರು. ಆದರೆ ಜಿಮ್‌ ಆ ಸಹಾಯವನ್ನು ತಳ್ಳಿಹಾಕಿದ. ‘ನಾನು ಹಿಂದೆ ತುಂಬ ಅಹಂಕಾರದಿಂದ ವರ್ತಿಸಿದ್ದೆ, ನಡೆದದ್ದೆಲ್ಲದಕ್ಕೆ ಯೆಹೋವನ ಮೇಲೆ ತಪ್ಪು ಹೊರಿಸಿದ್ದೆ’ ಎಂದು ಅವನು ಒಪ್ಪಿಕೊಳ್ಳುತ್ತಾನೆ.

5 “ತಪ್ಪು ನನ್ನದಲ್ಲ ಬೇರೆಯವರದ್ದೇ ಅಂತ ಯಾವಾಗಲೂ ನೆನಸುತ್ತಿದ್ದೆ” ಎನ್ನುತ್ತಾನೆ ಜಿಮ್‌. ಅವನ ಅನುಭವದಿಂದ ಏನು ಕಲಿಯುತ್ತೇವೆ? ಅಹಂಕಾರವಿದ್ದರೆ ನಾವು ಮಾಡಿದ್ದೇ ಸರಿ ಎಂದು ಸಾಧಿಸುತ್ತೇವೆ. ಆಗ ನಾವು ಮೃದುವಾದ ಜೇಡಿಮಣ್ಣಿನಂತೆ ಇರುವುದಿಲ್ಲ. (ಯೆರೆ. 17:9) ಯಾವತ್ತಾದರೂ ಒಬ್ಬ ಸಹೋದರ ಅಥವಾ ಸಹೋದರಿಯಿಂದ ನಿಮ್ಮ ಮನಸ್ಸಿಗೆ ನೋವಾಗಿತ್ತಾ? ಒಂದು ಸೇವಾಸುಯೋಗವನ್ನು ಕಳಕೊಂಡದ್ದರಿಂದ ನಿಮಗೆ ದುಃಖವಾಗಿತ್ತಾ? ಆಗ ನಿಮ್ಮ ಪ್ರತಿಕ್ರಿಯೆ ಏನಾಗಿತ್ತು? ಅಹಂಕಾರದಿಂದ ವರ್ತಿಸಿದ್ದಿರಾ? ಅಥವಾ ನಿಮ್ಮ ಸಹೋದರನೊಂದಿಗೆ ಸಮಾಧಾನವಾಗುವುದಕ್ಕೆ ಮತ್ತು ಯೆಹೋವನಿಗೆ ನಿಷ್ಠೆ ತೋರಿಸುವುದಕ್ಕೆ ಹೆಚ್ಚು ಮಹತ್ವ ಕೊಟ್ಟಿರಾ?ಕೀರ್ತನೆ 119:165; ಕೊಲೊಸ್ಸೆ 3:13 ಓದಿ.

6. ನಾವು ಗಂಭೀರ ಪಾಪ ಮಾಡುತ್ತಾ ಇದ್ದರೆ ಏನಾಗಬಹುದು?

6 ಒಬ್ಬನು ಗಂಭೀರ ಪಾಪ ಮಾಡುತ್ತಾ ಇದ್ದು, ಅದನ್ನು ಮುಚ್ಚಿಡುತ್ತಾ ಬಂದರೆ ಸಹ ಅವನ ಹೃದಯ ಕಠಿಣವಾಗಿ ಬೈಬಲಿನ ಬುದ್ಧಿವಾದವನ್ನು ತಿರಸ್ಕರಿಸುತ್ತಾನೆ. ಆಗ ಅವನು ಇನ್ನಷ್ಟು ಪಾಪಗಳನ್ನು ಮಾಡಲಿಕ್ಕೂ ಹಿಂಜರಿಯುವುದಿಲ್ಲ. ಮತ್ತೆಮತ್ತೆ ಪಾಪ ಮಾಡಿದಾಗ ತನ್ನ ಮನಸ್ಸು ಚುಚ್ಚಲೇ ಇಲ್ಲ ಎಂದು ಒಬ್ಬ ಸಹೋದರ ಹೇಳಿದನು. (ಪ್ರಸಂ. 8:11) ಅಶ್ಲೀಲ ಚಿತ್ರಗಳನ್ನು ನೋಡುವ ಚಟಕ್ಕೆ ಬಿದ್ದ ಇನ್ನೊಬ್ಬ ಸಹೋದರನು ತಾನು “ಹಿರಿಯರಲ್ಲೇ ತಪ್ಪು ಹುಡುಕಲು ಆರಂಭಿಸಿದೆ” ಎಂದು ಹೇಳಿದನು. ಅವನ ಆ ಕೆಟ್ಟ ಚಟದಿಂದಾಗಿ ಯೆಹೋವನೊಟ್ಟಿಗಿನ ಅವನ ಸಂಬಂಧ ಹಾಳಾಯಿತು. ಆ ಪಾಪದ ಬಗ್ಗೆ ಬೇರೆಯವರಿಗೆ ಗೊತ್ತಾಯಿತು. ಆಗ ಹಿರಿಯರು ಅವನಿಗೆ ಸಹಾಯಮಾಡಿದರು. ನಾವೆಲ್ಲರೂ ಅಪರಿಪೂರ್ಣರು ನಿಜ. ಆದರೆ ನಾವು ಗಂಭೀರ ಪಾಪವನ್ನು ಮಾಡುವಾಗ ನಮ್ಮನ್ನು ಕ್ಷಮಿಸುವಂತೆ, ನಮಗೆ ಸಹಾಯ ಕೊಡುವಂತೆ ದೇವರ ಹತ್ತಿರ ಬೇಡಿಕೊಳ್ಳಬೇಕು. ಅದನ್ನು ಬಿಟ್ಟು ಬುದ್ಧಿಹೇಳುವವರಲ್ಲೇ ನಾವು ತಪ್ಪು ಹುಡುಕಿದರೆ ಅಥವಾ ನಮ್ಮ ತಪ್ಪಿಗಾಗಿ ನೆಪಗಳನ್ನು ಕೊಡುತ್ತಾ ಹೋದರೆ ನಮ್ಮ ಹೃದಯ ಕಠಿಣವಾಗುತ್ತದೆ.

7, 8. (ಎ) ನಂಬಿಕೆಯ ಕೊರತೆ ಇಸ್ರಾಯೇಲ್ಯರ ಹೃದಯವನ್ನು ಹೇಗೆ ಕಠಿಣಮಾಡಿತು? (ಬಿ) ಇದರಿಂದ ನಮಗೇನು ಪಾಠ?

7 ನಂಬಿಕೆಯ ಕೊರತೆಯಿಂದಾಗಿಯೂ ನಮ್ಮ ಹೃದಯ ಕಠಿಣವಾಗುತ್ತದೆ. ಇಸ್ರಾಯೇಲ್ಯರ ಉದಾಹರಣೆ ಗಮನಿಸಿ. ಯೆಹೋವನು ಅವರನ್ನು ಐಗುಪ್ತದಿಂದ ಬಿಡಿಸಿದಾಗ ಆತನು ಮಾಡಿದ ಅನೇಕ ವಿಸ್ಮಯಕಾರಿ ಅದ್ಭುತಗಳನ್ನು ಅವರು ಕಣ್ಣಾರೆ ನೋಡಿದರು. ಹಾಗಿದ್ದರೂ ವಾಗ್ದತ್ತ ದೇಶಕ್ಕೆ ಹತ್ತಿರಹತ್ತಿರ ಬಂದಾಗ ಅವರ ಹೃದಯ ಕಠಿಣವಾಯಿತು. ಯಾಕೆ? ಅವರಿಗೆ ಯೆಹೋವನ ಮೇಲೆ ಬಲವಾದ ನಂಬಿಕೆ ಇರಲಿಲ್ಲ. ಆತನಲ್ಲಿ ಭರವಸೆಯಿಡುವ ಬದಲು ಜನರಿಗೆ ಹೆದರಿದರು. ಮೋಶೆಯ ಬಗ್ಗೆ ದೂರಿದರು. ಅವರು ಗುಲಾಮರಾಗಿ ಕಷ್ಟಪಟ್ಟಿದ್ದ ಐಗುಪ್ತಕ್ಕೆ ವಾಪಸ್ಸು ಹೋಗಬೇಕೆಂದೂ ಹೇಳಿದರು! ಇದರಿಂದ ಯೆಹೋವನು ತುಂಬ ನೊಂದುಕೊಂಡು, “ಈ ಜನರು ಇನ್ನು ಎಷ್ಟರ ಮಟ್ಟಿಗೆ ನನ್ನನ್ನು ಅಲಕ್ಷ್ಯಮಾಡುವರೋ” ಎಂದು ಹೇಳಿದನು. (ಅರ. 14:1-4, 11; ಕೀರ್ತ. 78:40, 41) ಆ ಇಸ್ರಾಯೇಲ್ಯರು ಹೃದಯವನ್ನು ಕಠಿನಮಾಡಿಕೊಂಡದ್ದರಿಂದ ಮತ್ತು ಅವರಲ್ಲಿ ನಂಬಿಕೆಯ ಕೊರತೆ ಇದ್ದದ್ದರಿಂದ ಅರಣ್ಯದಲ್ಲೇ ಸತ್ತುಹೋದರು.

8 ಇಂದು ನಾವು ಹೊಸ ಲೋಕಕ್ಕೆ ತುಂಬ ಹತ್ತಿರದಲ್ಲಿದ್ದೇವೆ. ನಮ್ಮ ನಂಬಿಕೆಯ ಪರೀಕ್ಷೆಯಾಗುತ್ತಾ ಇದೆ. ಹಾಗಾಗಿ ನಮ್ಮ ನಂಬಿಕೆಯ ಗುಣಮಟ್ಟ ಹೇಗಿದೆಯೆಂದು ನಾವು ಪರೀಕ್ಷಿಸಿಕೊಳ್ಳಬೇಕು. ಅದು ಬಲವಾಗಿದೆ ಎಂದು ಹೇಗೆ ಖಚಿತಪಡಿಸಿಕೊಳ್ಳಬಹುದು? ಮತ್ತಾಯ 6:33 ನ್ನು ಮನಸ್ಸಿನಲ್ಲಿಟ್ಟು ನಮ್ಮನ್ನೇ ಕೇಳಿಕೊಳ್ಳೋಣ: ‘ನನ್ನ ಗುರಿಗಳು, ನಿರ್ಣಯಗಳು ಯೇಸುವಿನ ಆ ಮಾತುಗಳನ್ನು ನಿಜವಾಗಿ ನಂಬುತ್ತೇನೆಂದು ತೋರಿಸುತ್ತವಾ? ಹೆಚ್ಚು ಹಣ ಸಂಪಾದಿಸಲಿಕ್ಕಾಗಿ ಕೂಟ ಅಥವಾ ಸೇವೆಗೆ ಹೋಗುವುದನ್ನು ತಪ್ಪಿಸುತ್ತೇನಾ? ನನ್ನ ಉದ್ಯೋಗ ನನ್ನ ಹೆಚ್ಚಿನ ಸಮಯ-ಶಕ್ತಿಯನ್ನು ಕಬಳಿಸುವುದಾದರೆ ಏನು ಮಾಡುವೆ? ಲೋಕವು ನನ್ನನ್ನು ರೂಪಿಸುವಂತೆ ಬಿಟ್ಟು ಯೆಹೋವನ ಸೇವೆಯನ್ನು ನಿಲ್ಲಿಸುತ್ತೇನಾ?’

9. (ಎ) ನಾವು ನಂಬಿಕೆಯಲ್ಲಿ ಇದ್ದೇವೋ ಇಲ್ಲವೋ ಎಂದು ಯಾಕೆ “ಪರೀಕ್ಷಿಸಿಕೊಳ್ಳುತ್ತಾ” ಇರಬೇಕು? (ಬಿ) ಇದನ್ನು ಮಾಡುವುದು ಹೇಗೆ?

9 ಕೆಟ್ಟ ಸಹವಾಸ, ಬಹಿಷ್ಕಾರ, ಮನೋರಂಜನೆಯ ವಿಷಯದಲ್ಲಿ ಬೈಬಲಿನ ಬುದ್ಧಿವಾದವನ್ನು ನಾವು ಪಾಲಿಸದಿದ್ದಾಗ ಸಹ ನಮ್ಮ ಹೃದಯ ಕಠಿಣವಾಗುತ್ತದೆ. ನಿಮ್ಮ ಹೃದಯ ಕಠಿಣವಾಗಲು ಆರಂಭಿಸಿದರೆ ನೀವೇನು ಮಾಡಬೇಕು? ನಿಮ್ಮ ನಂಬಿಕೆಯನ್ನು ತುರ್ತಾಗಿ ಪರೀಕ್ಷಿಸಿಕೊಳ್ಳಬೇಕು. ಬೈಬಲ್‌ ಅದನ್ನೇ ಹೇಳುತ್ತದೆ: “ನೀವು ನಂಬಿಕೆಯಲ್ಲಿ ಇದ್ದೀರೋ ಎಂಬುದನ್ನು ಪರೀಕ್ಷಿಸಿಕೊಳ್ಳುತ್ತಾ ಇರಿ, ನೀವು ಏನಾಗಿದ್ದೀರಿ ಎಂಬುದನ್ನು ಪ್ರಮಾಣೀಕರಿಸುತ್ತಾ ಇರಿ.” (2 ಕೊರಿಂ. 13:5) ನಿಮ್ಮನ್ನೇ ಪ್ರಾಮಾಣಿಕವಾಗಿ ಪರೀಕ್ಷಿಸಿಕೊಳ್ಳಿ. ಯಾವಾಗಲೂ ದೇವರ ವಾಕ್ಯವನ್ನು ಬಳಸಿ ನಿಮ್ಮ ಯೋಚನಾರೀತಿಯನ್ನು ತಿದ್ದಿಕೊಳ್ಳಿ.

ಯಾವಾಗಲೂ ಮೃದುವಾದ ಜೇಡಿಮಣ್ಣಿನಂತೆ ಇರಿ

10. ನಾವು ಯಾವಾಗಲೂ ಯೆಹೋವನ ಕೈಯಲ್ಲಿ ಮೃದುವಾದ ಜೇಡಿಮಣ್ಣಿನಂತಿರಲು ಯಾವುದು ಸಹಾಯಮಾಡುತ್ತದೆ?

10 ಯಾವಾಗಲೂ ಮೃದುವಾದ ಜೇಡಿಮಣ್ಣಿನಂತಿರಲು ಯೆಹೋವನು ನಮಗೆ ಯಾವ ಸಹಾಯಕಗಳನ್ನು ಕೊಟ್ಟಿದ್ದಾನೆ? ತನ್ನ ವಾಕ್ಯವಾದ ಬೈಬಲ್‌, ಕ್ರೈಸ್ತ ಸಭೆ ಮತ್ತು ಸೇವೆ. ನಾವು ಬೈಬಲನ್ನು ಪ್ರತಿದಿನ ಓದಿ ಧ್ಯಾನಿಸುವಾಗ ಯೆಹೋವನ ಕೈಯಲ್ಲಿ ಮೃದುವಾದ ಜೇಡಿಮಣ್ಣಿನಂತೆ ಇರುತ್ತೇವೆ ಮತ್ತು ಆತನು ನಮ್ಮನ್ನು ರೂಪಿಸುವಂತೆ ಬಿಟ್ಟುಕೊಡುತ್ತೇವೆ. ಇಸ್ರಾಯೇಲ್ಯ ಅರಸರು ಧರ್ಮಶಾಸ್ತ್ರದ ಒಂದು ಪ್ರತಿಯನ್ನು ಬರೆದು ಅದನ್ನು ಪ್ರತಿದಿನ ಓದಬೇಕೆಂದು ಯೆಹೋವನು ಆಜ್ಞೆ ಕೊಟ್ಟಿದ್ದನು. (ಧರ್ಮೋ. 17:18, 19) ಶಾಸ್ತ್ರಗ್ರಂಥವನ್ನು ಓದಿ ಧ್ಯಾನಿಸುವುದು ತಮ್ಮ ಸೇವೆಗೆ ತುಂಬ ಮುಖ್ಯ ಎಂದು ಅಪೊಸ್ತಲರಿಗೂ ಗೊತ್ತಿತ್ತು. ಅವರು ಹೀಬ್ರು ಶಾಸ್ತ್ರಗ್ರಂಥದ ಭಾಗಗಳನ್ನು ನೂರಾರು ಬಾರಿ ತಮ್ಮ ಬರಹಗಳಲ್ಲಿ ಉಲ್ಲೇಖಿಸಿದರು ಮತ್ತು ತಾವು ಸಾರಿದ ಜನರಿಗೂ ಶಾಸ್ತ್ರಗ್ರಂಥವನ್ನು ಬಳಸಲು ಉತ್ತೇಜಿಸಿದರು. (ಅ. ಕಾ. 17:11) ಅದೇ ರೀತಿ, ದೇವರ ವಾಕ್ಯವನ್ನು ಪ್ರತಿದಿನ ಓದಿ, ಧ್ಯಾನಿಸುವುದು ಪ್ರಾಮುಖ್ಯ ಎಂದು ನಮಗೂ ತಿಳಿದಿದೆ. (1 ತಿಮೊ. 4:15) ಇದು ನಾವು ದೀನರಾಗಿ ಉಳಿಯಲು ಸಹಾಯಮಾಡುತ್ತದೆ. ಆಗ ಯೆಹೋವನಿಗೆ ನಮ್ಮನ್ನು ರೂಪಿಸಲು ಆಗುತ್ತದೆ.

ಮೃದುವಾದ ಜೇಡಿಮಣ್ಣಿನಂತಿರಲು ದೇವರು ಕೊಟ್ಟಿರುವ ಸಹಾಯಕಗಳನ್ನು ಬಳಸಿರಿ (ಪ್ಯಾರ 10-13 ನೋಡಿ)

11, 12. ನಮ್ಮಲ್ಲಿ ಪ್ರತಿಯೊಬ್ಬರ ಅಗತ್ಯಕ್ಕನುಸಾರ ನಮ್ಮನ್ನು ರೂಪಿಸಲು ಯೆಹೋವನು ಕ್ರೈಸ್ತ ಸಭೆಯನ್ನು ಹೇಗೆ ಉಪಯೋಗಿಸುತ್ತಾನೆ? ಉದಾಹರಣೆ ಕೊಡಿ.

11 ಯೆಹೋವನಿಗೆ ನಮ್ಮಲ್ಲಿ ಪ್ರತಿಯೊಬ್ಬರ ಅಗತ್ಯಗಳು ತಿಳಿದಿದೆ. ಅದಕ್ಕನುಸಾರ ನಮ್ಮನ್ನು ರೂಪಿಸಲು ಆತನು ಕ್ರೈಸ್ತ ಸಭೆಯನ್ನು ಉಪಯೋಗಿಸುತ್ತಾನೆ. ಈ ಹಿಂದೆ ತಿಳಿಸಲಾದ ಜಿಮ್‌, ಹಿರಿಯನೊಬ್ಬನು ತೋರಿಸಿದ ಆಸಕ್ತಿಯಿಂದಾಗಿ ತನ್ನ ಮನೋಭಾವವನ್ನು ಬದಲಾಯಿಸಿಕೊಂಡನು. ಜಿಮ್‌ ಹೇಳುವುದು: “ಒಂದೇ ಒಂದು ಸಲ ಕೂಡ ಅವರು ನನ್ನ ಈ ಸ್ಥಿತಿಗೆ ನಾನೇ ಕಾರಣ ಎಂದನಿಸುವ ಹಾಗೆ ಮಾತಾಡಲಿಲ್ಲ. ನನ್ನನ್ನು ಪ್ರೋತ್ಸಾಹಿಸಿದರು. ನಾನು ಬದಲಾಗಬಲ್ಲೆ ಎಂದು ಭರವಸೆ ತೋರಿಸಿದರು. ನನಗೆ ಸಹಾಯಮಾಡಲು ಅವರಿಗೆ ನಿಜವಾಗಲೂ ತುಂಬ ಮನಸ್ಸಿತ್ತು.” ಸುಮಾರು ಮೂರು ತಿಂಗಳ ನಂತರ ಆ ಹಿರಿಯನು ಜಿಮ್‌ನನ್ನು ಕೂಟಕ್ಕೆ ಆಮಂತ್ರಿಸಿದನು. “ಸಹೋದರ ಸಹೋದರಿಯರು ನನ್ನನ್ನು ಪ್ರೀತಿಯಿಂದ ಸ್ವಾಗತಿಸಿದರು ಮತ್ತು ಅವರ ಪ್ರೀತಿ ನನ್ನ ಯೋಚನೆಯನ್ನು ಬದಲಾಯಿಸಿಕೊಳ್ಳಲು ಸಹಾಯಮಾಡಿತು” ಎನ್ನುತ್ತಾನೆ ಜಿಮ್‌. ತನ್ನ ಸ್ವಂತ ಭಾವನೆಗಳು ಅಷ್ಟೇನು ಮುಖ್ಯವಲ್ಲ ಎನ್ನುವುದನ್ನು ಅರ್ಥಮಾಡಿಕೊಂಡನು. ಅವನ ಪತ್ನಿ ಮತ್ತು ಸಭೆಯ ಹಿರಿಯರು ಅವನನ್ನು ಪ್ರೋತ್ಸಾಹಿಸಿದರು ಮತ್ತು ಜಿಮ್‌ ಕ್ರಮೇಣ ಯೆಹೋವನ ಸೇವೆಯನ್ನು ಶುರುಮಾಡಿದ. 1993 ಫೆಬ್ರವರಿ 15ರ ಕಾವಲಿನಬುರುಜುವಿನಲ್ಲಿ ಇರುವ “ಯೆಹೋವನು ತಪ್ಪಿಗೆ ಹೊಣೆಯಲ್ಲ” ಮತ್ತು “ಯೆಹೋವನನ್ನು ಕರ್ತವ್ಯನಿಷ್ಠೆಯಿಂದ ಸೇವಿಸಿರಿ” ಎಂಬ ಲೇಖನಗಳನ್ನು ಓದುವುದರಿಂದಲೂ ಅವನು ಪ್ರಯೋಜನ ಪಡೆದ.

12 ಸಮಯಾನಂತರ ಜಿಮ್‌ ಪುನಃ ಹಿರಿಯನಾದ. ಆಗಿನಿಂದ ಇಂಥದ್ದೇ ಸಮಸ್ಯೆಯಿರುವ ಸಹೋದರರಿಗೆ ಜಿಮ್‌ ಸಹಾಯಮಾಡಿ ಅವರ ನಂಬಿಕೆಯನ್ನು ಬಲಪಡಿಸಿದ್ದಾನೆ. ಯೆಹೋವನೊಟ್ಟಿಗೆ ಆಪ್ತ ಸಂಬಂಧವಿದೆಯೆಂದು ಅವನಿಗೆ ಅನಿಸುತ್ತಿದ್ದರೂ ನಿಜವಾಗಿಯೂ ಅಂಥ ಸಂಬಂಧ ಇರಲಿಲ್ಲ ಎಂದು ಅವನೀಗ ಹೇಳುತ್ತಾನೆ. ಪ್ರಾಮುಖ್ಯ ವಿಷಯಗಳಿಗೆ ಗಮನಕೊಡುವುದನ್ನು ಬಿಟ್ಟು ಅಹಂಕಾರದಿಂದ ಬೇರೆಯವರ ತಪ್ಪುಗಳ ಬಗ್ಗೆನೇ ಯೋಚಿಸಿದ್ದಕ್ಕಾಗಿ ಪಶ್ಚಾತ್ತಾಪಪಡುತ್ತಾನೆ.—1 ಕೊರಿಂ. 10:12.

13. (ಎ) ಯಾವ ಗುಣಗಳನ್ನು ಬೆಳೆಸಿಕೊಳ್ಳಲು ಸೇವೆ ನಮಗೆ ಸಹಾಯಮಾಡುತ್ತದೆ? (ಬಿ) ಅದರ ಪ್ರಯೋಜನಗಳೇನು?

13 ಸೇವೆಯು ಸಹ ನಮ್ಮನ್ನು ರೂಪಿಸುತ್ತದೆ. ಉತ್ತಮ ವ್ಯಕ್ತಿಗಳಾಗಲು ನಮಗೆ ಸಹಾಯಮಾಡುತ್ತದೆ. ಅದು ಹೇಗೆ? ಸುವಾರ್ತೆ ಸಾರುವಾಗ ದೀನತೆ ಮತ್ತು ಪವಿತ್ರಾತ್ಮದ ಫಲದ ಗುಣಗಳನ್ನು ತೋರಿಸಬೇಕಾಗುತ್ತದೆ. (ಗಲಾ. 5:22, 23) ಸೇವೆಗೆ ಹೋಗಿದ್ದರಿಂದ ನೀವು ಬೆಳೆಸಿಕೊಂಡ ಉತ್ತಮ ಗುಣಗಳ ಬಗ್ಗೆ ಯೋಚಿಸಿ. ನಾವು ಯೇಸುವನ್ನು ಅನುಕರಿಸುವಾಗ ಜನರು ನಮ್ಮ ಸಂದೇಶದ ಕಡೆಗೆ ಆಕರ್ಷಿತರಾಗುತ್ತಾರೆ ಮತ್ತು ನಮ್ಮ ಬಗ್ಗೆ ಅವರಿಗಿರುವ ಮನೋಭಾವ ಸಹ ಬದಲಾಗುತ್ತದೆ. ಒಂದು ಅನುಭವ ಗಮನಿಸಿ. ಆಸ್ಟ್ರೇಲಿಯದಲ್ಲಿ ಇಬ್ಬರು ಸಾಕ್ಷಿಗಳು ಮನೆಮನೆ ಸೇವೆಯಲ್ಲಿ ಒಬ್ಬ ಹೆಂಗಸಿನ ಜೊತೆ ಮಾತಾಡಿದರು. ಆದರೆ ಆಕೆ ತುಂಬ ಕೋಪದಿಂದ ಒರಟಾಗಿ ವರ್ತಿಸಿದಳು. ಹಾಗಿದ್ದರೂ, ಸಾಕ್ಷಿಗಳು ಅವಳು ಹೇಳಿದ್ದನ್ನೆಲ್ಲಾ ಕೇಳಿಸಿಕೊಳ್ಳುವ ಮೂಲಕ ಗೌರವ ತೋರಿಸಿದರು. ಅನಂತರ ಆ ಸ್ತ್ರೀಗೆ ತನ್ನ ವರ್ತನೆಯ ಬಗ್ಗೆ ಬೇಜಾರಾಗಿ ಬ್ರಾಂಚ್‌ ಆಫೀಸಿಗೆ ಪತ್ರ ಬರೆದು ಕ್ಷಮೆಕೇಳಿದಳು. ಆಕೆ ಹೇಳಿದ್ದು: “ದೇವರ ವಾಕ್ಯವನ್ನು ಸಾರಲು ಬಂದಿದ್ದ ಇಬ್ಬರನ್ನು ಬೈದು ಕಳುಹಿಸಿಬಿಟ್ಟೆ. ನಾನು ನಿಜವಾಗ್ಲೂ ಮೂರ್ಖಳು.” ಈ ಅನುಭವವು ನಾವು ಸಾರುವಾಗ ಶಾಂತರಾಗಿ ಇರುವುದರ ಮಹತ್ವವನ್ನು ತೋರಿಸುತ್ತದೆ. ನಮ್ಮ ಸೇವೆಯಿಂದ ಇತರರಿಗೆ ಪ್ರಯೋಜನವಾಗುತ್ತದೆ ಮಾತ್ರವಲ್ಲ, ನಮ್ಮ ವ್ಯಕ್ತಿತ್ವವನ್ನು ಉತ್ತಮಗೊಳಿಸಲು ನಮಗೇ ಸಹಾಯವಾಗುತ್ತದೆ.

ನಿಮ್ಮ ಮಕ್ಕಳನ್ನು ರೂಪಿಸಲು ದೇವರೊಂದಿಗೆ ಕೆಲಸಮಾಡಿರಿ

14. ಮಕ್ಕಳನ್ನು ರೂಪಿಸುವ ಕೆಲಸದಲ್ಲಿ ಯಶಸ್ವಿಯಾಗಬೇಕಾದರೆ ಹೆತ್ತವರು ಏನು ಮಾಡಬೇಕು?

14 ಹೆಚ್ಚಿನ ಚಿಕ್ಕ ಮಕ್ಕಳು ದೀನ ಮನಸ್ಸಿನವರು. ಹೊಸಹೊಸ ವಿಷಯಗಳನ್ನು ಕಲಿಯುವುದೆಂದರೆ ಅವರಿಗೆ ತುಂಬಾ ಇಷ್ಟ. (ಮತ್ತಾ. 18:1-4) ಆದ್ದರಿಂದ ವಿವೇಕಿಗಳಾಗಿರುವ ಹೆತ್ತವರು ಮಕ್ಕಳಿಗೆ ಚಿಕ್ಕಂದಿನಿಂದಲೇ ಸತ್ಯವನ್ನು ಕಲಿಸುತ್ತಾರೆ ಮತ್ತು ಅದನ್ನು ಪ್ರೀತಿಸಲು ಸಹಾಯ ಮಾಡುತ್ತಾರೆ. (2 ತಿಮೊ. 3:14, 15) ಇದರಲ್ಲಿ ಯಶಸ್ವಿಗಳಾಗಬೇಕಾದರೆ ಮೊದಲು ಹೆತ್ತವರೇ ಸತ್ಯವನ್ನು ಪ್ರೀತಿಸಬೇಕು, ಅದನ್ನು ತಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳಬೇಕು. ಹೀಗೆ ಮಾಡಿದರೆ ಸತ್ಯವನ್ನು ಪ್ರೀತಿಸುವುದು ಮಕ್ಕಳಿಗೆ ಸುಲಭವಾಗುತ್ತದೆ. ಅಲ್ಲದೆ, ಹೆತ್ತವರು ಶಿಸ್ತು ಕೊಡುವುದು ಅವರಿಗೆ ಮತ್ತು ಯೆಹೋವನಿಗೆ ತಮ್ಮ ಮೇಲೆ ಪ್ರೀತಿ ಇರುವುದರಿಂದಲೇ ಎಂದು ಮಕ್ಕಳಿಗೆ ಅರ್ಥವಾಗುವುದು.

15, 16. ಮಗ ಅಥವಾ ಮಗಳ ಬಹಿಷ್ಕಾರವಾದರೆ ಹೆತ್ತವರು ಹೇಗೆ ದೇವರಲ್ಲಿ ಭರವಸೆ ತೋರಿಸಬೇಕು?

15 ಹೆತ್ತವರು ಮಕ್ಕಳಿಗೆ ಚಿಕ್ಕಂದಿನಿಂದ ಸತ್ಯವನ್ನು ಕಲಿಸಿದರೂ ಕೆಲವು ಮಕ್ಕಳು ನಂತರ ಯೆಹೋವನನ್ನು ಬಿಟ್ಟುಹೋಗುತ್ತಾರೆ ಅಥವಾ ಅವರಿಗೆ ಬಹಿಷ್ಕಾರವಾಗುತ್ತದೆ. ಹೀಗಾದಾಗ ಅವರ ಕುಟುಂಬಕ್ಕೆ ತುಂಬ ದುಃಖವಾಗುತ್ತದೆ. ದಕ್ಷಿಣ ಆಫ್ರಿಕದಲ್ಲಿನ ಸಹೋದರಿಯೊಬ್ಬಳು ಹೇಳಿದ್ದು: “ನನ್ನ ಅಣ್ಣನಿಗೆ ಬಹಿಷ್ಕಾರವಾದಾಗ ಅವನು ನಮ್ಮ ಪಾಲಿಗೆ ಸತ್ತುಹೋದಂತಿತ್ತು. ನಮ್ಮ ಎದೆಯೊಡೆದು ಹೋಯಿತು!!” ಅವಳು ಮತ್ತು ಅವಳ ಹೆತ್ತವರು ಏನು ಮಾಡಿದರು? ಬೈಬಲಿನಲ್ಲಿನ ಸೂಚನೆಗಳನ್ನು ಪಾಲಿಸಿದರು. (1 ಕೊರಿಂಥ 5:11, 13 ಓದಿ.) ದೇವರು ಹೇಳಿದಂತೆ ಮಾಡುವುದರಿಂದ ಕುಟುಂಬದಲ್ಲಿ ಎಲ್ಲರಿಗೆ ಪ್ರಯೋಜನವಿದೆಯೆಂದು ಆ ಹೆತ್ತವರಿಗೆ ಗೊತ್ತಿತ್ತು. ಬಹಿಷ್ಕಾರ ಮಾಡುವ ಏರ್ಪಾಡು ಯೆಹೋವನು ಪ್ರೀತಿಯಿಂದ ಕೊಡುವ ಶಿಸ್ತು ಎಂದು ಅರಿತುಕೊಂಡರು. ಆದ್ದರಿಂದ ಕುಟುಂಬಕ್ಕೆ ಸಂಬಂಧಪಟ್ಟ ಅತ್ಯಗತ್ಯ ಕೆಲಸವನ್ನು ಬಿಟ್ಟರೆ ಬೇರೆ ಯಾವ ವಿಷಯದಲ್ಲೂ ಮಗನೊಂದಿಗೆ ಸಂಪರ್ಕ ಇಡಲಿಲ್ಲ.

16 ಮಗನಿಗೆ ಹೇಗನಿಸಿತು? ಅವನು ಸಭೆಗೆ ಮರಳಿದ ನಂತರ ಹೇಳಿದ್ದು: “ನನ್ನ ಕುಟುಂಬಕ್ಕೆ ನನ್ನ ಮೇಲೆ ದ್ವೇಷ ಇಲ್ಲ ಬದಲಿಗೆ ಯೆಹೋವನಿಗೆ ಮತ್ತು ಆತನ ಸಂಘಟನೆಗೆ ವಿಧೇಯತೆ ತೋರಿಸುತ್ತಿದ್ದಾರೆಂದು ನನಗೆ ಗೊತ್ತಿತ್ತು.” ಅವನು ಹೀಗೂ ಹೇಳಿದನು: “ಯೆಹೋವನನ್ನು ಬಿಟ್ಟರೆ ಬೇರೆ ಯಾರೂ ನನಗಿಲ್ಲ ಅನ್ನೋ ಪರಿಸ್ಥಿತಿ ಬಂದಾಗ, ಆತನ ಕ್ಷಮೆ ಬೇಕೇ ಬೇಕಾದಾಗ, ಆತನ ಅಗತ್ಯ ಎಷ್ಟಿದೆಯೆಂದು ಗೊತ್ತಾಗುತ್ತದೆ.” ಈ ಯುವ ವ್ಯಕ್ತಿ ಯೆಹೋವನ ಬಳಿ ಮರಳಿ ಬಂದಾಗ ಅವನ ಕುಟುಂಬಕ್ಕೆ ಎಷ್ಟು ಸಂತೋಷವಾಯಿತೆಂದು ಊಹಿಸಿ! ನಾವು ದೇವರಿಗೆ ಯಾವಾಗಲೂ ವಿಧೇಯತೆ ತೋರಿಸಿದರೆ ಸಂತೋಷ ಹಾಗೂ ಯಶಸ್ಸು ಖಂಡಿತ ಸಿಗುತ್ತದೆ.—ಜ್ಞಾನೋ. 3:5, 6; 28:26.

17. (ಎ) ಯೆಹೋವನಿಗೆ ವಿಧೇಯರಾಗುವುದನ್ನು ನಮ್ಮ ರೂಢಿಯಾಗಿ ಮಾಡಬೇಕು ಏಕೆ? (ಬಿ) ಇದರಿಂದ ನಮಗೆ ಹೇಗೆ ಪ್ರಯೋಜನವಾಗಲಿದೆ?

17 ಬಾಬೆಲಿನಲ್ಲಿ ಸೆರೆಯಾಳುಗಳಾಗಿದ್ದ ಯೆಹೂದ್ಯರು ಪಶ್ಚಾತ್ತಾಪಪಟ್ಟು, “ಯೆಹೋವನೇ, ನೀನು ನಮ್ಮ ತಂದೆಯಾಗಿದ್ದೀ; ನಾವು ಜೇಡಿಮಣ್ಣು, ನೀನು ಕುಂಬಾರ, ನಾವೆಲ್ಲರೂ ನಿನ್ನ ಕೈಕೆಲಸವೇ” ಎಂದು ಹೇಳುವರೆಂದು ಪ್ರವಾದಿ ಯೆಶಾಯನು ಮುಂತಿಳಿಸಿದನು. ಮಾತ್ರವಲ್ಲ “ಯೆಹೋವನೇ, . . . ನಮ್ಮ ಅಧರ್ಮವನ್ನು ಕಡೆಯ ವರೆಗೂ ಜ್ಞಾಪಕದಲ್ಲಿಡಬೇಡ; . . . ಕಟಾಕ್ಷಿಸು, ನಾವೆಲ್ಲರೂ ನಿನ್ನ ಜನರಾಗಿದ್ದೇವೆ” ಎಂದು ಅವರು ಬೇಡಿಕೊಳ್ಳುವರೆಂದೂ ಹೇಳಿದನು. (ಯೆಶಾ. 64:8, 9) ನಾವು ದೀನರಾಗಿದ್ದು ಯೆಹೋವನಿಗೆ ಯಾವಾಗಲೂ ವಿಧೇಯತೆ ತೋರಿಸಿದರೆ ದಾನಿಯೇಲನಂತೆ ಆತನಿಗೆ ಅತಿಪ್ರಿಯರು ಅಂದರೆ ತುಂಬ ಅಮೂಲ್ಯರು ಆಗುತ್ತೇವೆ. ಯೆಹೋವನು ತನ್ನ ವಾಕ್ಯ, ಪವಿತ್ರಾತ್ಮ ಮತ್ತು ಸಂಘಟನೆಯ ಮೂಲಕ ನಮ್ಮನ್ನು ರೂಪಿಸುತ್ತಾ ಮುಂದುವರಿಯುವನು. ಹೀಗೆ ಭವಿಷ್ಯದಲ್ಲಿ ನಾವು ಪರಿಪೂರ್ಣರಾಗಿ ‘ದೇವರ ಮಕ್ಕಳಾಗುವೆವು!’—ರೋಮ. 8:21.