ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನನ್ನು ನಮ್ಮ ಕುಂಬಾರನಾಗಿ ಅಂಗೀಕರಿಸಿರಿ

ಯೆಹೋವನನ್ನು ನಮ್ಮ ಕುಂಬಾರನಾಗಿ ಅಂಗೀಕರಿಸಿರಿ

“ಯೆಹೋವನೇ, . . . ನೀನು ಕುಂಬಾರ, ನಾವೆಲ್ಲರೂ ನಿನ್ನ ಕೈಕೆಲಸವೇ.”—ಯೆಶಾ. 64:8.

ಗೀತೆಗಳು: 89, 26

1. ಯೆಹೋವನು ಅತಿ ಶ್ರೇಷ್ಠ ಕುಂಬಾರನೆಂದು ಏಕೆ ಹೇಳಬಹುದು?

ಇಸವಿ 2010ರ ನವೆಂಬರ್‌ನಲ್ಲಿ ಇಂಗ್ಲೆಂಡ್‌ನ ಲಂಡನ್‌ನಲ್ಲಿ ಹರಾಜಿಗೆ ಇಡಲಾದ ಜೇಡಿಮಣ್ಣಿನ ಒಂದು ಚೀನಿ ಹೂದಾನಿಗೆ ಕೂಗಲಾದ ಬೆಲೆ ಸುಮಾರು 70 ಮಿಲಿಯ ಡಾಲರ್‌! ಇಷ್ಟು ಬೆಲೆಬಾಳುವ ಸುಂದರ ಹೂದಾನಿಯನ್ನು ಕುಂಬಾರನು ಸಾಮಾನ್ಯವಾದ, ಹೆಚ್ಚು ಬೆಲೆಯಿಲ್ಲದ ಜೇಡಿಮಣ್ಣಿನಿಂದ ರೂಪಿಸಬಲ್ಲನೆಂದರೆ ಅದು ನಿಜಕ್ಕೂ ಆಶ್ಚರ್ಯ. ನಮ್ಮ ಕುಂಬಾರನಾದ ಯೆಹೋವನು ಎಲ್ಲ ಮಾನವ ಕುಂಬಾರರಿಗಿಂತ ಎಷ್ಟೋ ಹೆಚ್ಚು ಶ್ರೇಷ್ಠನು. ಆತನು “ನೆಲದ ಮಣ್ಣಿನಿಂದ” ಅಂದರೆ ಜೇಡಿಮಣ್ಣಿನಿಂದ ಪರಿಪೂರ್ಣ ಮನುಷ್ಯನನ್ನು ಮಾಡಿದನು ಎನ್ನುತ್ತದೆ ಬೈಬಲ್‌. (ಆದಿ. 2:7) ಆ ಮನುಷ್ಯನಾದ ಆದಾಮನು “ದೇವರ ಮಗ”ನಾಗಿದ್ದನು. ಅವನಿಗೆ ದೇವರ ಗುಣಗಳನ್ನು ಅನುಕರಿಸುವ ಸಾಮರ್ಥ್ಯವನ್ನೂ ಕೊಡಲಾಯಿತು.—ಲೂಕ 3:38.

2, 3. ಪಶ್ಚಾತ್ತಾಪಪಟ್ಟ ಇಸ್ರಾಯೇಲ್ಯರ ಮನೋಭಾವವನ್ನು ನಾವು ಹೇಗೆ ಅನುಕರಿಸಬಹುದು?

2 ಆದಾಮನು ತನ್ನ ಸೃಷ್ಟಿಕರ್ತನ ವಿರುದ್ಧ ದಂಗೆಯೆದ್ದನು. ಆದ್ದರಿಂದ ಅವನು ದೇವರ ಮಗನಾಗಿ ಉಳಿಯಲಿಲ್ಲ. ಆದರೆ ಅವನ ಸಂತತಿಯಲ್ಲಿ ಅನೇಕರು ಯೆಹೋವನನ್ನು ತಮ್ಮ ರಾಜನಾಗಿ ಆಯ್ಕೆಮಾಡಿದ್ದಾರೆ. (ಇಬ್ರಿ. 12:1) ತಮ್ಮ ಸೃಷ್ಟಿಕರ್ತನಾದ ಆತನಿಗೆ ದೀನತೆಯಿಂದ ವಿಧೇಯರಾಗುತ್ತಾರೆ. ಹೀಗೆ ಆತನೇ ತಮ್ಮ ತಂದೆ ಮತ್ತು ಕುಂಬಾರ, ಸೈತಾನನಲ್ಲ ಎಂದು ತೋರಿಸಿದ್ದಾರೆ. (ಯೋಹಾ. 8:44) ಅವರು ದೇವರಿಗೆ ತೋರಿಸುವ ನಿಷ್ಠೆಯು ಪಶ್ಚಾತ್ತಾಪಪಟ್ಟ ಇಸ್ರಾಯೇಲ್ಯರು ಹೇಳಿದ ಈ ಮಾತನ್ನು ನೆನಪಿಗೆ ತರುತ್ತದೆ: “ಯೆಹೋವನೇ, ನೀನು ನಮ್ಮ ತಂದೆಯಾಗಿದ್ದೀ; ನಾವು ಜೇಡಿಮಣ್ಣು, ನೀನು ಕುಂಬಾರ, ನಾವೆಲ್ಲರೂ ನಿನ್ನ ಕೈಕೆಲಸವೇ.”—ಯೆಶಾ. 64:8.

3 ಅವರಂತೆಯೇ ಇಂದು ಯೆಹೋವನ ಸತ್ಯಾರಾಧಕರು ದೀನರಾಗಿ, ವಿಧೇಯರಾಗಿ ಇರಲು ತುಂಬ ಪ್ರಯತ್ನಿಸುತ್ತಾರೆ. ಯೆಹೋವನನ್ನು ತಂದೆಯೆಂದು ಕರೆಯುವುದು ತಮ್ಮ ಸೌಭಾಗ್ಯವೆಂದು ಎಣಿಸಿ, ಆತನೇ ತಮ್ಮ ಕುಂಬಾರನಾಗಿರಬೇಕೆಂದು ಬಯಸುತ್ತಾರೆ. ಆತನು ನಮ್ಮನ್ನು ಒಂದು ಅಮೂಲ್ಯ ಪಾತ್ರೆಯಾಗಿ ರೂಪಿಸಬೇಕಾದರೆ ನಾವು ಮೃದುವಾದ ಜೇಡಿಮಣ್ಣಿನಂತಿರಬೇಕು. ನಾವು ಹಾಗೆ ಇದ್ದೇವಾ? ಪ್ರತಿಯೊಬ್ಬ ಸಹೋದರ ಸಹೋದರಿಯನ್ನು ದೇವರು ಇನ್ನೂ ರೂಪಿಸುತ್ತಿದ್ದಾನೆ ಅಂದರೆ ಅವರ ಗುಣಗಳನ್ನು ಉತ್ತಮಗೊಳಿಸುವ ಕೆಲಸ ಇನ್ನೂ ನಡೆಯುತ್ತಾ ಇದೆ ಎಂದು ಕಾಣುತ್ತೇವಾ? ನಮ್ಮಲ್ಲಿ ಈ ಮನೋಭಾವ ಇರುವಂತೆ ಸಹಾಯಮಾಡುವ ಮೂರು ವಿಷಯಗಳನ್ನು ಚರ್ಚಿಸೋಣ: ತಾನು ರೂಪಿಸಬೇಕಾದವರನ್ನು ಯೆಹೋವನು ಹೇಗೆ ಆರಿಸಿಕೊಳ್ಳುತ್ತಾನೆ? ಅವರನ್ನು ಯಾಕೆ ರೂಪಿಸುತ್ತಾನೆ? ಹೇಗೆ ರೂಪಿಸುತ್ತಾನೆ?

ರೂಪಿಸಬೇಕಾದವರನ್ನು ಯೆಹೋವನು ಆರಿಸುತ್ತಾನೆ

4. ಯೆಹೋವನು ತನ್ನ ಕಡೆಗೆ ಸೆಳೆದುಕೊಳ್ಳುವ ಜನರನ್ನು ಹೇಗೆ ಆರಿಸಿಕೊಳ್ಳುತ್ತಾನೆ? ಉದಾಹರಣೆ ಕೊಡಿ.

4 ಯೆಹೋವನು ಮನುಷ್ಯರ ಹೊರತೋರಿಕೆಯನ್ನು ಮಾತ್ರ ನೋಡುವುದಿಲ್ಲ, ಅವರ ಹೃದಯವನ್ನು ಅಂದರೆ ಅವರು ನಿಜವಾಗಿಯೂ ಎಂಥವರೆಂದು ನೋಡುತ್ತಾನೆ. (1 ಸಮುವೇಲ 16:7ಬಿ ಓದಿ.) ಕ್ರೈಸ್ತ ಸಭೆಯನ್ನು ರಚಿಸಿದಾಗ ಯೆಹೋವನು ಇದನ್ನು ತೋರಿಸಿಕೊಟ್ಟನು. ನಿಷ್ಪ್ರಯೋಜಕರು ಎಂದು ಜನರು ನೆನಸುತ್ತಿದ್ದ ಅನೇಕರನ್ನು ಆತನು ತನ್ನ ಕಡೆಗೆ ಮತ್ತು ತನ್ನ ಮಗನ ಕಡೆಗೆ ಸೆಳೆದನು. (ಯೋಹಾ. 6:44) ಫರಿಸಾಯನಾಗಿದ್ದ ಸೌಲನು ಅಂಥ ಒಬ್ಬ ವ್ಯಕ್ತಿ. ಅವನು “ದೇವದೂಷಣೆಮಾಡುವವನೂ ಹಿಂಸಕನೂ ದುರಹಂಕಾರಿಯೂ” ಆಗಿದ್ದನು. (1 ತಿಮೊ. 1:13) ಆದರೆ ಯೆಹೋವನು ಅವನ ಹೃದಯವನ್ನು ಪರೀಕ್ಷಿಸಿ ಅವನು ಉಪಯೋಗಕ್ಕೆ ಬಾರದ ಜೇಡಿಮಣ್ಣಿನಂತಿಲ್ಲ ಎಂದು ಅರಿತನು. (ಜ್ಞಾನೋ. 17:3) “ಅನ್ಯಜನಾಂಗಗಳಿಗೂ ಅರಸರಿಗೂ ಇಸ್ರಾಯೇಲ್ಯರಿಗೂ” ಸಾರಲು ಸೌಲನನ್ನು ತನ್ನ ‘ಸಾಧನವಾಗಿ’ ರೂಪಿಸಲು ಆಗುತ್ತದೆಂದು ತಿಳಿದುಕೊಂಡನು. (ಅ. ಕಾ. 9:15) ಕುಡುಕರು, ಕಳ್ಳರು, ಅನೈತಿಕ ಜನರು ಆಗಿದ್ದವರನ್ನೂ ಯೆಹೋವನು ಆರಿಸಿಕೊಂಡನು. ಏಕೆಂದರೆ ಅವರನ್ನು ಪರೀಕ್ಷಿಸಿದಾಗ ‘ಗೌರವಾರ್ಹ ಪಾತ್ರೆಯಾಗಿ’ ರೂಪಿಸಸಾಧ್ಯವಿದೆ ಎಂದು ಆತನು ಅರಿತುಕೊಂಡನು. (ರೋಮ. 9:21; 1 ಕೊರಿಂ. 6:9-11) ಅವರು ದೇವರ ವಾಕ್ಯದ ಅಧ್ಯಯನ ಮಾಡಿದಾಗ ಯೆಹೋವನಲ್ಲಿ ಅವರ ನಂಬಿಕೆ ಬಲವಾಯಿತು ಮತ್ತು ಆತನು ತಮ್ಮನ್ನು ರೂಪಿಸುವಂತೆ ಬಿಟ್ಟುಕೊಟ್ಟರು.

5, 6. ಯೆಹೋವನನ್ನು ನಮ್ಮ ಕುಂಬಾರನಾಗಿ ಅಂಗೀಕರಿಸುವಾಗ (ಎ) ಸೇವಾ ಕ್ಷೇತ್ರದಲ್ಲಿರುವ ಜನರನ್ನು ನಾವು ಹೇಗೆ ಕಾಣುತ್ತೇವೆ? (ಬಿ) ನಮ್ಮ ಸಹೋದರರನ್ನು ಹೇಗೆ ಕಾಣುತ್ತೇವೆ?

5 ಯೆಹೋವನಿಗೆ ಸರಿಯಾದ ವ್ಯಕ್ತಿಗಳನ್ನೇ ಆರಿಸುವ ಮತ್ತು ಸೆಳೆಯುವ ಸಾಮರ್ಥ್ಯ ಇದೆಯೆಂಬ ಪೂರ್ಣ ಭರವಸೆ ನಮಗಿದೆ. ಆದ್ದರಿಂದ ನಮ್ಮ ಸೇವಾ ಕ್ಷೇತ್ರದಲ್ಲಿ ಅಥವಾ ನಮ್ಮ ಸಭೆಯಲ್ಲಿ ಇರುವವರ ಬಗ್ಗೆ ‘ಇವರು ಯಾವತ್ತೂ ಬದಲಾಗುವುದಿಲ್ಲ’ ಅಂತ ನಾವು ಕೂಡಲೇ ನಿರ್ಣಯಿಸಬಾರದು. ಮೈಕಲ್‌ನ ಉದಾಹರಣೆ ಗಮನಿಸಿ. ಯೆಹೋವನ ಸಾಕ್ಷಿಗಳು ಮನೆಗೆ ಬಂದಾಗಲೆಲ್ಲಾ ಏನು ಮಾಡುತ್ತಿದ್ದನೆಂದು ಅವನೇ ಹೇಳುತ್ತಾನೆ: “ಅವರನ್ನು ನೋಡಿದ ಕೂಡಲೇ ಬಾಗಿಲನ್ನು ಧಡಾರ್‌ ಎಂದು ಮುಚ್ಚಿಬಿಡುತ್ತಿದ್ದೆ. ಅಷ್ಟು ಒರಟಾಗಿ ನಡೆದುಕೊಳ್ಳುತ್ತಿದ್ದೆ! ಒಮ್ಮೆ ನಾನೊಂದು ಕುಟುಂಬವನ್ನು ಭೇಟಿಯಾದೆ. ಅವರ ಒಳ್ಳೇ ನಡತೆ ನೋಡಿ ತುಂಬ ಖುಷಿ ಆಯಿತು. ಆದರೆ ಅವರು ಯೆಹೋವನ ಸಾಕ್ಷಿಗಳೆಂದು ಮುಂದೊಂದು ದಿನ ಗೊತ್ತಾಯಿತು. ನನಗೆ ನಂಬಲಿಕ್ಕೇ ಆಗಲಿಲ್ಲ! ಯೆಹೋವನ ಸಾಕ್ಷಿಗಳ ಬಗ್ಗೆ ನನಗ್ಯಾಕೆ ತಪ್ಪಭಿಪ್ರಾಯ ಇದೆಯೆಂದು ಯೋಚಿಸಿದೆ. ಆಗ ಗೊತ್ತಾದದ್ದೇನೆಂದರೆ ನಾನು ನಿಜಾಂಶಗಳನ್ನು ತಿಳಿಯದೆ ಅವರ ಬಗ್ಗೆ ಕಿವಿಗೆ ಬಿದ್ದ ವಿಷಯಗಳನ್ನೇ ನಂಬಿಕೊಂಡಿದ್ದೆ ಅಂತ.” ಇದಾದ ಮೇಲೆ ಮೈಕಲ್‌ ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡ. ನಂತರ ದೀಕ್ಷಾಸ್ನಾನ ಪಡೆದು ಪಯನೀಯರ್‌ ಸೇವೆಯನ್ನು ಆರಂಭಿಸಿದ.

6 ನಾವು ಯೆಹೋವನನ್ನು ನಮ್ಮ ಕುಂಬಾರನಾಗಿ ಅಂಗೀಕರಿಸುವಾಗ, ನಮ್ಮ ಸಹೋದರರ ಕಡೆಗೆ ನಮಗಿರುವ ಮನೋಭಾವ ಕೂಡ ಬದಲಾಗುತ್ತದೆ. ಪ್ರತಿಯೊಬ್ಬರ ಗುಣಗಳನ್ನು ಉತ್ತಮಗೊಳಿಸುವ ಕೆಲಸ ಇನ್ನೂ ನಡೆಯುತ್ತಿದೆ ಎಂದು ನೆನಪಿಡುತ್ತೇವೆ. ಯೆಹೋವನು ಅವರನ್ನು ನೋಡುವ ರೀತಿಯೂ ಇದೇ ಆಗಿದೆ. ಅವರು ನಿಜವಾಗಿ ಎಂಥವರಾಗಿದ್ದಾರೆಂದು ಆತನು ನೋಡುತ್ತಾನೆ. ಅವರ ಅಪರಿಪೂರ್ಣತೆ ಇನ್ನು ಸ್ವಲ್ಪ ಸಮಯ ಮಾತ್ರ ಇರಲಿಕ್ಕಿದೆ ಎಂದೂ ಆತನಿಗೆ ತಿಳಿದಿದೆ. ಮಾತ್ರವಲ್ಲ, ಅವರಲ್ಲಿ ಒಬ್ಬೊಬ್ಬರೂ ಮುಂದೆ ಎಂಥ ವ್ಯಕ್ತಿಗಳಾಗಬಲ್ಲರೆಂದು ಸಹ ಆತನಿಗೆ ಗೊತ್ತಿದೆ. (ಕೀರ್ತ. 130:3) ನಮ್ಮ ಸಹೋದರರ ಬಗ್ಗೆ ಅಂಥದ್ದೇ ಒಳ್ಳೇ ಮನೋಭಾವವನ್ನು ಇಟ್ಟುಕೊಳ್ಳುವ ಮೂಲಕ ನಾವು ಯೆಹೋವನನ್ನು ಅನುಕರಿಸಬಹುದು. ಅಷ್ಟೇ ಅಲ್ಲ, ನಮ್ಮ ಕುಂಬಾರನಾದ ಆತನ ಜೊತೆ ಕೈಜೋಡಿಸುತ್ತಾ ನಮ್ಮ ಸಹೋದರರ ಗುಣಗಳನ್ನು ಉತ್ತಮಗೊಳಿಸಲು ನೆರವು ನೀಡಬಹುದು. (1 ಥೆಸ. 5:14, 15) ಈ ವಿಷಯದಲ್ಲಿ ಸಭೆಯಲ್ಲಿರುವ ಹಿರಿಯರು ಒಳ್ಳೇ ಮಾದರಿಗಳಾಗಿರಬೇಕು.—ಎಫೆ. 4:8, 11-13.

ಯೆಹೋವನು ನಮ್ಮನ್ನು ಯಾಕೆ ರೂಪಿಸುತ್ತಾನೆ?

7. ಯೆಹೋವನ ಶಿಸ್ತನ್ನು ನೀವೇಕೆ ಮಾನ್ಯಮಾಡುತ್ತೀರಿ?

7 ‘ನನ್ನ ತಂದೆತಾಯಿ ಕೊಡುತ್ತಿದ್ದ ಶಿಸ್ತಿನ ಬೆಲೆ ಗೊತ್ತಾದದ್ದು ನನಗೆ ಮಕ್ಕಳು ಹುಟ್ಟಿದ ನಂತರವೇ’ ಎನ್ನುತ್ತಾರೆ ಕೆಲವರು. ನಿಜ, ನಾವು ದೊಡ್ಡವರಾದಂತೆ ಶಿಸ್ತನ್ನು ಮಾನ್ಯಮಾಡಲು ಕಲಿಯುತ್ತೇವೆ. ಏಕೆಂದರೆ ಶಿಸ್ತು ಕೊಡುವುದು ಪ್ರೀತಿ ತೋರಿಸುವ ಒಂದು ವಿಧ ಎಂದು ನಮಗೆ ಅರ್ಥವಾಗುತ್ತದೆ. (ಇಬ್ರಿಯ 12:5, 6, 11 ಓದಿ.) ಯೆಹೋವನು ನಮ್ಮನ್ನು ತನ್ನ ಮಕ್ಕಳಂತೆ ಪ್ರೀತಿಸುವ ಕಾರಣ ತಾಳ್ಮೆಯಿಂದ ಶಿಸ್ತು ಕೊಟ್ಟು ರೂಪಿಸುತ್ತಾನೆ. ನಾವು ವಿವೇಕಿಗಳಾಗಬೇಕು, ಸಂತೋಷವಾಗಿರಬೇಕು ಎಂದು ಬಯಸುತ್ತಾನೆ. ನಾವಾತನನ್ನು ತಂದೆಯೆಂದು ಎಣಿಸಿ ಪ್ರೀತಿಸಬೇಕೆಂದು ಇಷ್ಟಪಡುತ್ತಾನೆ. (ಜ್ಞಾನೋ. 23:15) ನಾವು ಕಷ್ಟಪಡುವುದನ್ನು, ಪಶ್ಚಾತ್ತಾಪಪಡದ ಪಾಪಿಗಳಾಗಿ ಸಾಯುವುದನ್ನು ನೋಡಲು ಆತನಿಗೆ ಸ್ವಲ್ಪವೂ ಮನಸ್ಸಿಲ್ಲ.—ಎಫೆ. 2:2, 3.

8, 9. (ಎ) ಯೆಹೋವನು ಇಂದು ನಮಗೆ ಹೇಗೆ ಕಲಿಸುತ್ತಿದ್ದಾನೆ? (ಬಿ) ಈ ಶಿಕ್ಷಣ ಭವಿಷ್ಯದಲ್ಲೂ ಹೇಗೆ ಮುಂದುವರಿಯಲಿದೆ?

8 ಯೆಹೋವನ ಬಗ್ಗೆ ತಿಳಿಯುವ ಮುಂಚೆ ನಮ್ಮಲ್ಲಿ ಅನೇಕ ಕೆಟ್ಟ ಗುಣಗಳು ಇದ್ದಿರಬಹುದು. ಆದರೆ ಯೆಹೋವನು ನಮ್ಮನ್ನು ರೂಪಿಸಿ, ಬದಲಾಗಲು ಸಹಾಯ ಮಾಡಿದ್ದರಿಂದ ಈಗ ನಮ್ಮಲ್ಲಿ ಕೆಲವು ಸುಂದರ ಗುಣಗಳಿವೆ. (ಯೆಶಾ. 11:6-8; ಕೊಲೊ. 3:9, 10) ನಾವು ಒಂದು ಆಧ್ಯಾತ್ಮಿಕ ಪರದೈಸಿನಲ್ಲಿದ್ದೇವೆ. ಇದು ನಮ್ಮನ್ನು ರೂಪಿಸಲು ಯೆಹೋವನು ಇಂದು ನಿರ್ಮಿಸುತ್ತಿರುವ ವಿಶೇಷ ವಾತಾವರಣ. ಆದ್ದರಿಂದ ನಮ್ಮ ಸುತ್ತಲಿನ ಲೋಕ ದುಷ್ಟತನದಿಂದ ತುಂಬಿದ್ದರೂ ನಮಗೆ ಸುರಕ್ಷೆ, ಭದ್ರತೆಯ ಅನಿಸಿಕೆಯಿದೆ. ಸ್ವಂತ ಕುಟುಂಬದವರಿಂದ ಪ್ರೀತಿ ಸಿಗದವರಿಗೆ ಆಧ್ಯಾತ್ಮಿಕ ಪರದೈಸಿನಲ್ಲಿ ನಿಜ ಪ್ರೀತಿ ಸಿಕ್ಕಿದೆ. (ಯೋಹಾ. 13:35) ಇತರರಿಗೆ ಪ್ರೀತಿ ತೋರಿಸಲು ನಾವು ಕಲಿತಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ ಯೆಹೋವನ ಬಗ್ಗೆ ತಿಳಿಯಲು ಮತ್ತು ತಂದೆಯಾದ ಆತನು ತೋರಿಸುವ ಪ್ರೀತಿಯನ್ನು ಅನುಭವಿಸಲು ನಮಗೆ ಈಗ ಸಾಧ್ಯವಾಗಿದೆ.—ಯಾಕೋ. 4:8.

9 ಆಧ್ಯಾತ್ಮಿಕ ಪರದೈಸಿನ ಪೂರ್ಣ ಪ್ರಯೋಜನ ನಮಗೆ ಹೊಸ ಲೋಕದಲ್ಲಿ ಸಿಗಲಿದೆ. ಅಲ್ಲಿ ದೇವರ ರಾಜ್ಯ ಆಳುವಾಗ ಇಡೀ ಭೂಮಿ ಸಹ ಪರದೈಸಾಗಲಿದೆ. ಆಗಲೂ ಯೆಹೋವನು ನಮ್ಮನ್ನು ರೂಪಿಸುತ್ತಿರುತ್ತಾನೆ. ನಾವೀಗ ಊಹಿಸಲಾಗದ ವಿಧದಲ್ಲಿ ಕಲಿಸಲಿದ್ದಾನೆ. (ಯೆಶಾ. 11:9) ಆತನು ನಮ್ಮ ಮನಸ್ಸು ಮತ್ತು ದೇಹವನ್ನು ಸಹ ಪರಿಪೂರ್ಣತೆಗೆ ತರುವನು. ಇದರಿಂದಾಗಿ, ಆತನ ನಿರ್ದೇಶನಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದಕ್ಕೆ ಪೂರ್ಣವಾಗಿ ವಿಧೇಯರಾಗಲು ನಮಗೆ ಸುಲಭವಾಗಲಿದೆ. ಆದ್ದರಿಂದ ಯೆಹೋವನು ನಮ್ಮನ್ನು ರೂಪಿಸುತ್ತಾ ಇರುವಂತೆ ಬಿಟ್ಟುಕೊಡೋಣ. ನಮ್ಮನ್ನು ರೂಪಿಸುವ ಮೂಲಕ ಯೆಹೋವನು ತೋರಿಸುವ ಪ್ರೀತಿಗೆ ಬೆಲೆಕೊಡೋಣ.—ಜ್ಞಾನೋ. 3:11, 12.

ಯೆಹೋವನು ನಮ್ಮನ್ನು ಹೇಗೆ ರೂಪಿಸುತ್ತಾನೆ?

10. ಮಹಾ ಕುಂಬಾರನು ತಾಳ್ಮೆ, ಕೌಶಲದಿಂದ ನಮ್ಮನ್ನು ರೂಪಿಸುತ್ತಾನೆಂದು ಯೇಸುವಿನಿಂದ ಹೇಗೆ ಗೊತ್ತಾಗುತ್ತದೆ?

10 ಒಬ್ಬ ಕುಶಲ ಕುಂಬಾರನಿಗೆ ತಾನು ರೂಪಿಸುತ್ತಿರುವ ಜೇಡಿಮಣ್ಣಿನ ಬಗ್ಗೆ ಚೆನ್ನಾಗಿ ತಿಳಿದಿರುವಂತೆಯೇ ನಮ್ಮ ಕುಂಬಾರನಾದ ಯೆಹೋವನಿಗೆ ನಮ್ಮ ಬಗ್ಗೆ ಚೆನ್ನಾಗಿ ತಿಳಿದಿದೆ. ನಮ್ಮ ಬಲಹೀನತೆಗಳು, ನಮ್ಮ ಇತಿಮಿತಿಗಳು, ನಾವು ಮಾಡಿರುವ ಪ್ರಗತಿ ಆತನಿಗೆ ಗೊತ್ತಿದೆ. ಇದೆಲ್ಲವನ್ನು ಮನಸ್ಸಿನಲ್ಲಿಟ್ಟು ಆತನು ನಮ್ಮಲ್ಲಿ ಪ್ರತಿಯೊಬ್ಬರನ್ನು ಕೌಶಲದಿಂದ ರೂಪಿಸುತ್ತಾನೆ. (ಕೀರ್ತನೆ 103:10-14 ಓದಿ.) ಯೆಹೋವನು ನಮ್ಮನ್ನು ಹೇಗೆ ವೀಕ್ಷಿಸುತ್ತಾನೆ ಎಂಬುದನ್ನು ಯೇಸು ತನ್ನ ಅಪೊಸ್ತಲರ ಬಲಹೀನತೆಗಳಿಗೆ ಪ್ರತಿಕ್ರಿಯಿಸಿದ ವಿಧದಿಂದ ಕಲಿಯಬಹುದು. ಕೆಲವೊಮ್ಮೆ ಅಪೊಸ್ತಲರು ತಮ್ಮಲ್ಲಿ ಯಾರು ಶ್ರೇಷ್ಠರೆಂದು ವಾದಿಸುತ್ತಿದ್ದರು. ಒಂದುವೇಳೆ ನೀವಲ್ಲಿರುತ್ತಿದ್ದರೆ, ಅಪೊಸ್ತಲರ ಈ ನಡತೆ ನೋಡಿ ಏನು ಅಂದುಕೊಳ್ಳುತ್ತಿದ್ದಿರಿ? ಅವರು ಮೃದುವಾದ ಜೇಡಿಮಣ್ಣಿನಂತಿಲ್ಲ ಎಂದು ನೆನಸುತ್ತಿದ್ದಿರಾ? ಆದರೆ ಯೇಸು ಹಾಗೆ ನೆನಸಲಿಲ್ಲ. ದಯೆ, ತಾಳ್ಮೆಯಿಂದ ತಾನು ಕೊಡುವ ಸಲಹೆಯನ್ನು ಅವರು ಪಾಲಿಸಿದರೆ, ತನ್ನ ದೀನತೆಯನ್ನು ಅನುಕರಿಸಿದರೆ ಅವರನ್ನು ರೂಪಿಸಲು ಆಗುತ್ತದೆಂದು ಯೇಸು ಅರಿತಿದ್ದನು. (ಮಾರ್ಕ 9:33-37; 10:37, 41-45; ಲೂಕ 22:24-27) ಯೇಸುವಿನ ಪುನರುತ್ಥಾನದ ಬಳಿಕ ಅಪೊಸ್ತಲರು ದೇವರ ಪವಿತ್ರಾತ್ಮ ಪಡಕೊಂಡರು. ಅನಂತರ ಯಾರು ಶ್ರೇಷ್ಠರೆಂಬ ವಿಷಯದ ಬಗ್ಗೆ ಅವರು ಯೋಚಿಸಲೇ ಇಲ್ಲ. ಯೇಸು ಅವರಿಗೆ ಕೊಟ್ಟ ಕೆಲಸದ ಮೇಲೆ ಮಾತ್ರ ಮನಸ್ಸಿಟ್ಟರು.—ಅ. ಕಾ. 5:42.

11. (ಎ) ದಾವೀದನು ಯಾವ ರೀತಿಯಲ್ಲಿ ಮೃದುವಾದ ಜೇಡಿಮಣ್ಣಿನಂತೆ ಇದ್ದನು? (ಬಿ) ನಾವು ಅವನನ್ನು ಹೇಗೆ ಅನುಕರಿಸಬಹುದು?

11 ಇಂದು ಯೆಹೋವನು ನಮ್ಮನ್ನು ರೂಪಿಸಲಿಕ್ಕಾಗಿ ಬೈಬಲ್‌, ಪವಿತ್ರಾತ್ಮ ಮತ್ತು ಸಭೆಯನ್ನು ಉಪಯೋಗಿಸುತ್ತಾನೆ. ಬೈಬಲ್‌ ನಮ್ಮನ್ನು ರೂಪಿಸಬೇಕಾದರೆ ನಾವದನ್ನು ಓದಬೇಕು, ಧ್ಯಾನಿಸಬೇಕು, ಕಲಿತದ್ದನ್ನು ಅನ್ವಯಿಸಿಕೊಳ್ಳಲು ಯೆಹೋವನ ಸಹಾಯ ಕೇಳಬೇಕು. ರಾಜ ದಾವೀದನು ಹಾಗೆ ಮಾಡಿದನು. ಅವನು ಹೇಳಿದ್ದು: “ನಾನು ಹಾಸಿಗೆಯ ಮೇಲಿದ್ದುಕೊಂಡು ನಿನ್ನನ್ನು ಸ್ಮರಿಸುವಾಗ ರಾತ್ರಿಯ ಜಾವಗಳಲ್ಲಿ ನಿನ್ನನ್ನು ಧ್ಯಾನಿಸುತ್ತಿರುವೆನು.” (ಕೀರ್ತ. 63:6) ಅವನು ಹೀಗೂ ಬರೆದನು: “ಯೆಹೋವನು ನನಗೆ ಆಲೋಚನೆಯನ್ನು ಹೇಳಿಕೊಡುತ್ತಾನೆ; ಆತನನ್ನು ಕೊಂಡಾಡುವೆನು. ರಾತ್ರಿಸಮಯಗಳಲ್ಲಿ ನನ್ನ ಅಂತರಾತ್ಮವು ನನ್ನನ್ನು ಬೋಧಿಸುತ್ತದೆ.” (ಕೀರ್ತ. 16:7) ದಾವೀದನು ಯೆಹೋವನ ಬುದ್ಧಿವಾದದ ಬಗ್ಗೆ ಧ್ಯಾನಿಸಿದನು. ತನಗೆ ಕಷ್ಟವಾದರೂ ಅದನ್ನು ಸ್ವೀಕರಿಸಿ ತನ್ನ ಮನದಾಳದ ಯೋಚನೆ, ಭಾವನೆಗಳನ್ನು ಅದು ರೂಪಿಸುವಂತೆ ಬಿಟ್ಟುಕೊಟ್ಟನು. (2 ಸಮು. 12:1-13) ದೀನತೆ ಮತ್ತು ವಿಧೇಯತೆಯ ವಿಷಯದಲ್ಲಿ ದಾವೀದನು ನಮಗೆ ಒಳ್ಳೇ ಮಾದರಿ. ಆದ್ದರಿಂದ ಹೀಗೆ ಕೇಳಿಕೊಳ್ಳಿ: ‘ನಾನು ಬೈಬಲನ್ನು ಓದುವಾಗ ಅದರ ಬಗ್ಗೆ ಧ್ಯಾನಿಸುತ್ತೇನಾ? ದೇವರು ಕೊಡುವ ಬುದ್ಧಿವಾದವು ನನ್ನ ಮನದಾಳದ ಯೋಚನೆ, ಭಾವನೆಗಳನ್ನು ಪ್ರಭಾವಿಸುವಂತೆ ಬಿಡುತ್ತೇನಾ? ನಾನದನ್ನು ಇನ್ನೂ ಹೆಚ್ಚಾಗಿ ಮಾಡಬೇಕಾ?’—ಕೀರ್ತ. 1:2, 3.

12, 13. ಪವಿತ್ರಾತ್ಮ ಮತ್ತು ಕ್ರೈಸ್ತ ಸಭೆಯ ಮೂಲಕ ಯೆಹೋವನು ನಮ್ಮನ್ನು ಹೇಗೆ ರೂಪಿಸುತ್ತಾನೆ?

12 ಪವಿತ್ರಾತ್ಮವು ನಮ್ಮನ್ನು ಹಲವಾರು ವಿಧಗಳಲ್ಲಿ ರೂಪಿಸುತ್ತದೆ. ಉದಾಹರಣೆಗೆ, ಕ್ರಿಸ್ತನ ವ್ಯಕ್ತಿತ್ವವನ್ನು ಅನುಕರಿಸಲು ಮತ್ತು ಪವಿತ್ರಾತ್ಮದ ಫಲದ ವಿವಿಧ ಅಂಶಗಳನ್ನು ತೋರಿಸಲು ನಮಗೆ ಸಹಾಯ ಮಾಡುತ್ತದೆ. (ಗಲಾ. 5:22, 23) ಅವುಗಳಲ್ಲಿ ಒಂದು ಪ್ರೀತಿಯಾಗಿದೆ. ನಾವು ದೇವರನ್ನು ಪ್ರೀತಿಸುವುದರಿಂದ ಆತನ ಆಜ್ಞೆಗಳು ನಮಗೆ ಭಾರವೆನಿಸುವುದಿಲ್ಲ, ಆತನಿಗೆ ವಿಧೇಯರಾಗಲು, ಆತನಿಂದ ರೂಪಿಸಲ್ಪಡಲು ಬಯಸುತ್ತೇವೆ. ಅದಲ್ಲದೆ ನಮಗೆ ಈ ದುಷ್ಟ ಲೋಕದಿಂದ ರೂಪಿಸಲ್ಪಡುವುದನ್ನು ತಡೆಯಲು ಸಹ ಪವಿತ್ರಾತ್ಮ ಬೇಕಾದ ಬಲ ಕೊಡುತ್ತದೆ. (ಎಫೆ. 2:2) ಅಪೊಸ್ತಲ ಪೌಲನು ಯುವಕನಾಗಿದ್ದಾಗ ಗರ್ವಿಷ್ಠ ಯೆಹೂದಿ ಧರ್ಮಗುರುಗಳಿಂದ ಪ್ರಭಾವಿತನಾದನು. ಆದರೆ ಪವಿತ್ರಾತ್ಮವು ಅವನಿಗೆ ಬದಲಾಗಲು ಸಹಾಯಮಾಡಿತು. ಹಾಗಾಗಿಯೇ ಅವನು ಬರೆದದ್ದು: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.” (ಫಿಲಿ. 4:13) ಪೌಲನಂತೆ ಪವಿತ್ರಾತ್ಮಕ್ಕಾಗಿ ಬೇಡುವ ಅಗತ್ಯ ನಮಗೂ ಇದೆ. ಅಂಥ ಮನದಾಳದ ಪ್ರಾರ್ಥನೆಗಳನ್ನು ಯೆಹೋವನು ಕೇಳುತ್ತಾನೆ.—ಕೀರ್ತ. 10:17.

ಕ್ರೈಸ್ತ ಹಿರಿಯರ ಮೂಲಕ ಯೆಹೋವನು ನಮ್ಮನ್ನು ರೂಪಿಸುತ್ತಾನೆ, ನಾವು ಅವರ ಬುದ್ಧಿವಾದವನ್ನು ಅನ್ವಯಿಸಬೇಕು (ಪ್ಯಾರ 12, 13 ನೋಡಿ)

13 ನಮ್ಮಲ್ಲಿ ಪ್ರತಿಯೊಬ್ಬನನ್ನು ರೂಪಿಸಲಿಕ್ಕೆ ಯೆಹೋವನು ಸಭೆಯನ್ನೂ ಸಭಾ ಹಿರಿಯರನ್ನೂ ಉಪಯೋಗಿಸುತ್ತಾನೆ. ಉದಾಹರಣೆಗೆ, ಹಿರಿಯರು ನಮ್ಮಲ್ಲಿ ಒಂದು ಬಲಹೀನತೆಯನ್ನು ನೋಡುವಾಗ ನಮಗೆ ಸಹಾಯ ಕೊಡುತ್ತಾರೆ. ಆದರೆ ಅವರು ಕೊಡುವ ಬುದ್ಧಿವಾದ ಅವರ ಸ್ವಂತ ವಿಚಾರಗಳ ಮೇಲೆ ಹೊಂದಿಕೊಂಡಿಲ್ಲ. (ಗಲಾ. 6:1) ತಿಳುವಳಿಕೆ ಮತ್ತು ವಿವೇಕಕ್ಕಾಗಿ ಅವರು ದೀನತೆಯಿಂದ ಯೆಹೋವನಿಗೆ ಪ್ರಾರ್ಥಿಸುತ್ತಾರೆ. ಅಲ್ಲದೆ ನಮಗೆ ನೆರವಾಗುವ ಮಾಹಿತಿ ಕಂಡುಹಿಡಿಯಲು ಬೈಬಲ್‌ ಮತ್ತು ಬೈಬಲಾಧರಿತ ಪ್ರಕಾಶನಗಳಲ್ಲಿ ಸಂಶೋಧನೆ ಮಾಡುತ್ತಾರೆ. ಹಿರಿಯರು ನಿಮ್ಮ ಬಳಿ ಬಂದು ಬಹುಶಃ ನಿಮ್ಮ ಬಟ್ಟೆಯ ವಿಷಯದಲ್ಲಿ ಪ್ರೀತಿ, ದಯೆಯಿಂದ ಸಲಹೆ ಕೊಡುವಾಗ, ಅದು ದೇವರು ನಿಮಗೆ ತೋರಿಸುವ ಪ್ರೀತಿಯ ಪುರಾವೆಯೆಂದು ನೆನಪಿಡಿ. ಆ ಬುದ್ಧಿವಾದವನ್ನು ನೀವು ಅನ್ವಯಿಸುವಾಗ ಮೃದುವಾದ ಜೇಡಿಮಣ್ಣಿನಂತೆ ಇರುವಿರಿ. ಆಗ ನಿಮ್ಮನ್ನು ರೂಪಿಸಲು ಯೆಹೋವನಿಗೆ ಸುಲಭವಾಗುತ್ತದೆ, ಅದು ನಿಮಗೆ ಪ್ರಯೋಜನಕರ.

14. ಜೇಡಿಮಣ್ಣಿನ ಮೇಲೆ ಅಧಿಕಾರವಿದ್ದರೂ ಯೆಹೋವನು ನಮ್ಮ ಇಚ್ಛಾಸ್ವಾತಂತ್ರ್ಯವನ್ನು ಹೇಗೆ ಗೌರವಿಸುತ್ತಾನೆ?

14 ಯೆಹೋವನು ನಮ್ಮನ್ನು ಹೇಗೆ ರೂಪಿಸುತ್ತಾನೆಂದು ಅರ್ಥಮಾಡಿಕೊಂಡರೆ, ನಮ್ಮ ಸಹೋದರ ಸಹೋದರಿಯರೊಂದಿಗೆ ಒಳ್ಳೇ ಸಂಬಂಧವನ್ನಿಡಲು ಸಹಾಯವಾಗುವುದು. ಅಲ್ಲದೆ ನಮ್ಮ ಸೇವಾಕ್ಷೇತ್ರದಲ್ಲಿರುವ ಜನರ ಕುರಿತು, ನಮ್ಮ ಬೈಬಲ್‌ ವಿದ್ಯಾರ್ಥಿಗಳ ಕುರಿತು ಸಕಾರಾತ್ಮಕ ಮನೋಭಾವ ನಮಗಿರುವುದು. ಸಾಮಾನ್ಯವಾಗಿ ಕುಂಬಾರನು ಜೇಡಿಮಣ್ಣಿಗೆ ರೂಪಕೊಡುವ ಮುಂಚೆ ಅದರಿಂದ ಕಲ್ಲು, ಕಸಕಡ್ಡಿ ತೆಗೆದುಹಾಕಿ ಸಿದ್ಧಮಾಡುತ್ತಾನೆ. ಒಂದರ್ಥದಲ್ಲಿ ಮಹಾ ಕುಂಬಾರನಾದ ಯೆಹೋವನು ಕೂಡ ತನ್ನಿಂದ ರೂಪಿಸಲ್ಪಡಲು ಬಯಸುವವರನ್ನು ಸಿದ್ಧಗೊಳಿಸುತ್ತಾನೆ. ಅದಕ್ಕಾಗಿ ತನ್ನ ಶುದ್ಧವಾದ ಮಟ್ಟಗಳೇನೆಂದು ಅವರಿಗೆ ತಿಳಿಸುತ್ತಾನೆ. ಆದರೆ ಅವರು ಬದಲಾಗುವಂತೆ ಆತನು ಒತ್ತಾಯಿಸುವುದಿಲ್ಲ. ಆಮೇಲೆ ಅಗತ್ಯ ಬದಲಾವಣೆಗಳನ್ನು ಮಾಡಬೇಕಾ ಬಾರದಾ ಎಂದು ಅವರೇ ನಿರ್ಣಯಿಸಬೇಕು.

15, 16. ಯೆಹೋವನು ತಮ್ಮನ್ನು ರೂಪಿಸುವಂತೆ ಬೈಬಲ್‌ ವಿದ್ಯಾರ್ಥಿಗಳು ಹೇಗೆ ಬಿಟ್ಟುಕೊಡುತ್ತಾರೆ? ಉದಾಹರಣೆ ಕೊಡಿ.

15 ಆಸ್ಟ್ರೇಲಿಯದ ಸಹೋದರಿ ಟೆಸೀಯ ಉದಾಹರಣೆ ಗಮನಿಸಿ. ಬೈಬಲಿನ ವಿಷಯಗಳನ್ನು ಅವಳು ಸುಲಭವಾಗಿ ಕಲಿತಳು. ಆದರೆ ಅವಳು ಹೆಚ್ಚೇನೂ ಪ್ರಗತಿ ಮಾಡಲಿಲ್ಲ. ಕೂಟಗಳಿಗೆ ಹೋಗುತ್ತಿರಲಿಲ್ಲ. ಆದ್ದರಿಂದ ಅವಳೊಟ್ಟಿಗೆ ಅಧ್ಯಯನ ಮಾಡುತ್ತಿದ್ದ ಸಹೋದರಿ ಪ್ರಾರ್ಥನಾಪೂರ್ವಕವಾಗಿ ಯೋಚಿಸಿ, ಅಧ್ಯಯನ ನಿಲ್ಲಿಸಲು ನಿರ್ಣಯಿಸಿದಳು. ಮುಂದಿನ ಅಧ್ಯಯನದಲ್ಲಿ ಒಂದು ಆಶ್ಚರ್ಯ ಕಾದಿತ್ತು. ಟೆಸೀ ಆ ಸಹೋದರಿಗೆ ತಾನೇಕೆ ಪ್ರಗತಿ ಮಾಡಲಿಲ್ಲವೆಂದು ವಿವರಿಸುತ್ತಾ ತಾನು ಜೂಜಾಟವಾಡುತ್ತಿದ್ದ ವಿಷಯವನ್ನು ತಿಳಿಸಿದಳು, ತಾನು ಕಪಟಿಯೆಂದು ಅವಳಿಗೆ ಅನಿಸಿತ್ತು. ಆದರೆ ಈಗ ಜೂಜಾಟ ಬಿಟ್ಟುಬಿಡಲು ನಿರ್ಣಯಿಸಿದ್ದೇನೆಂದು ಹೇಳಿದಳು.

16 ಅನಂತರ ಟೆಸೀ ಕೂಟಗಳಿಗೆ ಹೋಗಲು ಶುರುಮಾಡಿದಳು. ಅವಳ ಹಿಂದಿನ ಕೆಲವು ಸ್ನೇಹಿತರು ಗೇಲಿಮಾಡಿದರೂ ಕ್ರೈಸ್ತ ಗುಣಗಳನ್ನು ತೋರಿಸಿದಳು. ಸಮಯಾನಂತರ ದೀಕ್ಷಾಸ್ನಾನ ಪಡೆದಳು. ಪುಟ್ಟ ಮಕ್ಕಳಿದ್ದರೂ ಪಯನೀಯರಳಾದಳು. ದೇವರನ್ನು ಮೆಚ್ಚಿಸಲು ಬೈಬಲ್‌ ವಿದ್ಯಾರ್ಥಿಗಳು ಬದಲಾವಣೆಗಳನ್ನು ಮಾಡಲು ಆರಂಭಿಸುವಾಗ ಯೆಹೋವನು ಅವರಿಗೆ ಆಪ್ತನಾಗುತ್ತಾನೆ. ಅವರನ್ನು ಬೆಲೆಯುಳ್ಳ ಪಾತ್ರೆಗಳಾಗಿ ರೂಪಿಸುತ್ತಾನೆ.

17. (ಎ) ಯೆಹೋವನು ನಿಮ್ಮ ಕುಂಬಾರನಾಗಿರುವುದು ನಿಮಗೇಕೆ ಖುಷಿ? (ಬಿ) ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?

17 ಇವತ್ತಿಗೂ ಕುಂಬಾರರು ಕೈಯಿಂದ ಜೇಡಿಮಣ್ಣಿಗೆ ರೂಪಕೊಟ್ಟು ಸುಂದರ ಪಾತ್ರೆಗಳಾಗಿ ಮಾಡುತ್ತಾರೆ. ಅದೇ ರೀತಿ ಯೆಹೋವನು ಬುದ್ಧಿವಾದ ಕೊಡುತ್ತಾ ತಾಳ್ಮೆಯಿಂದ ನಮ್ಮನ್ನು ರೂಪಿಸುತ್ತಾನೆ. ನಾವು ಹೇಗೆ ಪ್ರತಿಕ್ರಿಯಿಸುತ್ತೇವೆಂದು ಗಮನಿಸುತ್ತಾನೆ. (ಕೀರ್ತನೆ 32:8 ಓದಿ.) ಯೆಹೋವನಿಗೆ ನಿಮ್ಮಲ್ಲಿ ಎಷ್ಟು ಆಸಕ್ತಿಯಿದೆ, ಎಷ್ಟು ಜಾಗ್ರತೆಯಿಂದ ನಿಮ್ಮನ್ನು ರೂಪಿಸುತ್ತಿದ್ದಾನೆಂದು ಗೊತ್ತಾಗುತ್ತಿದೆಯಾ? ಹಾಗಿದ್ದರೆ, ಯೆಹೋವನ ಕೈಯಲ್ಲಿ ಮೃದುವಾದ ಜೇಡಿಮಣ್ಣಿನಂತಿರಲು ಯಾವ ಗುಣಗಳು ನಿಮ್ಮಲ್ಲಿರಬೇಕು? ರೂಪಿಸಲಿಕ್ಕಾಗದ ಗಟ್ಟಿ ಜೇಡಿಮಣ್ಣಿನಂತೆ ಆಗದಿರಲು ಯಾವ ಗುಣಗಳು ನಿಮ್ಮಲ್ಲಿರಬಾರದು? ಹೆತ್ತವರು ಮಕ್ಕಳನ್ನು ರೂಪಿಸಲಿಕ್ಕಾಗಿ ಯೆಹೋವನೊಂದಿಗೆ ಹೇಗೆ ಕೆಲಸಮಾಡಬಹುದು? ಉತ್ತರ ಮುಂದಿನ ಲೇಖನದಲ್ಲಿದೆ.