ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು “ನಿಮಗೋಸ್ಕರ ಚಿಂತಿಸುತ್ತಾನೆ”

ಯೆಹೋವನು “ನಿಮಗೋಸ್ಕರ ಚಿಂತಿಸುತ್ತಾನೆ”

ಈ ಮಾತುಗಳು ನೂರಕ್ಕೆ ನೂರು ಸತ್ಯ ಅಂತ ಹೇಗೆ ಹೇಳಬಹುದು? ಬೈಬಲೇ ಇದನ್ನು ಒತ್ತಿ ಹೇಳುತ್ತೆ. ಒಂದನೇ ಪೇತ್ರ 5:7 ಹೇಳುವುದು: “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.ಯೆಹೋವ ದೇವರು ನಿಮ್ಮ ಬಗ್ಗೆ ಚಿಂತೆ ಮಾಡುತ್ತಾನೆ ಎನ್ನುವುದಕ್ಕೆ ಆಧಾರ ನಿಮ್ಮ ಹತ್ತಿರವೇ ಇದೆ. ಯಾವುದು ಅಂತೀರಾ?

ಜನರನ್ನು ಶಾರೀರಿಕವಾಗಿ ಪೋಷಿಸುತ್ತಾನೆ

ಯೆಹೋವ ಉತ್ತಮ ಮಾದರಿ. ಆತನು ದಯೆ ಮತ್ತು ಉದಾರಿ

ಸಾಮಾನ್ಯವಾಗಿ ಯಾರು ದಯೆ ಮತ್ತು ಉದಾರತೆ ತೋರಿಸುತ್ತಾರೋ ಅಂಥವರು ನಮಗೆ ಇಷ್ಟ ಆಗುತ್ತಾರೆ. ಅಂಥವರನ್ನು ನಾವು ಆಪ್ತ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತೇವೆ. ಈ ಗುಣಗಳು ಯೆಹೋವನಲ್ಲೂ ಇವೆ. ಆತನು ಪ್ರತಿದಿನ ಜನರಿಗೆ ದಯೆ ಮತ್ತು ಉದಾರತೆ ತೋರಿಸುತ್ತಿದ್ದಾನೆ. ಇದಕ್ಕೆ ಉದಾಹರಣೆ ನಮ್ಮ ಕಣ್ಮುಂದೆನೇ ಇದೆ. ದೇವರು “ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ ಮತ್ತು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.” (ಮತ್ತಾ. 5:45) ಸೂರ್ಯ ಮತ್ತು ಮಳೆಯಿಂದ ಏನು ಪ್ರಯೋಜನ? ಇವುಗಳ ಮೂಲಕ ಯೆಹೋವ ದೇವರು ‘ಹೇರಳವಾಗಿ ಆಹಾರವನ್ನು ಕೊಟ್ಟು ನಮ್ಮ ಹೃದಯಗಳನ್ನು ಆನಂದದಿಂದ ತುಂಬಿಸುತ್ತಾನೆ.’ (ಅ. ಕಾ. 14:17) ಅಂದರೆ ಭೂಮಿಯು ಹೇರಳವಾಗಿ ಆಹಾರ ಕೊಡುವಂತೆ ಯೆಹೋವನು ನೋಡಿಕೊಳ್ಳುತ್ತಾನೆ. ಹೀಗೆ ಒಳ್ಳೆಯ ಊಟ ನಮಗೆ ಆನಂದ ತರುತ್ತದೆ.

ಹೀಗಿರುವಾಗ ಲೋಕದಲ್ಲಿ ಎಷ್ಟೊಂದು ಜನಕ್ಕೆ ಆಹಾರವೇ ಇಲ್ಲವಲ್ಲಾ! ಯಾಕೆ? ಇದಕ್ಕೆ ಕಾರಣ ಅಧಿಕಾರಿಗಳು. ಅವರು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಬೇಕು, ಹೆಚ್ಚು ಹಣ ಮಾಡಬೇಕು ಅನ್ನೋ ವಿಚಾರದಲ್ಲೇ ಮುಳುಗಿ ಹೋಗಿರುತ್ತಾರೆ. ಜನರ ಜೀವನವನ್ನು ಸುಧಾರಿಸುವುದರ ಬಗ್ಗೆ ಗಮನನೇ ಕೊಡುವುದಿಲ್ಲ. ಆದರೆ ಯೆಹೋವ ದೇವರು ಇದಕ್ಕೊಂದು ಪರಿಹಾರ ತರುತ್ತಾನೆ. ಇಂಥ ದುರಾಸೆಯ ರಾಜಕೀಯ ವ್ಯವಸ್ಥೆಯನ್ನು ತೆಗೆದು ಹಾಕಿ ತನ್ನ ಮಗನಾದ ಯೇಸು ರಾಜನಾಗಿರುವ ಸ್ವರ್ಗೀಯ ಸರ್ಕಾರವನ್ನು ಅಧಿಕಾರಕ್ಕೆ ತರುತ್ತಾನೆ. ಆಗ ಯಾರೂ ಹಸಿವೆಯಿಂದಿರಲ್ಲ. ಅಲ್ಲಿಯ ತನಕ ದೇವರು ತನ್ನ ನಂಬಿಗಸ್ತ ಸೇವಕರ ಅಗತ್ಯಗಳನ್ನು ಪೂರೈಸುತ್ತಾನೆ. (ಕೀರ್ತ. 37:25) ಯೆಹೋವ ದೇವರು ನಮ್ಮ ಬಗ್ಗೆ ಚಿಂತಿಸುತ್ತಾನೆ ಎನ್ನುವುದಕ್ಕೆ ಇದೊಂದು ಅಲ್ಲಗಳೆಯಲಾಗದ ಆಧಾರವಲ್ಲವೇ?

ಧಾರಾಳವಾಗಿ ಸಮಯ ಕಳೆಯುತ್ತಾನೆ

ಯೆಹೋವ ಉತ್ತಮ ಮಾದರಿ. ಆತನು ಧಾರಾಳವಾಗಿ ಸಮಯ ಕಳೆಯುತ್ತಾನೆ

ಒಬ್ಬ ಒಳ್ಳೇ ಸ್ನೇಹಿತ ನಿಮ್ಮ ಜೊತೆ ಸಮಯ ಕಳೆಯುತ್ತಾನೆ. ನಿಮ್ಮಿಬ್ಬರಿಗೂ ಇಷ್ಟವಾಗುವ ವಿಷಯಗಳ ಬಗ್ಗೆ ಘಂಟೆಗಟ್ಟಲೆ ಮಾತಾಡುತ್ತಾನೆ. ಅಲ್ಲದೇ ನಿಮ್ಮ ಕಷ್ಟ ತೊಂದರೆಗಳ ಬಗ್ಗೆ ನೀವು ಹೇಳುವಾಗ ಗಮನಕೊಟ್ಟು ಕೇಳ್ತಾನೆ. ಅದೇ ರೀತಿ, ಯೆಹೋವ ದೇವರು ಕೂಡ ಕೇಳ್ತಾನಾ? ಖಂಡಿತ ಕೇಳುತ್ತಾನೆ! ಅದಕ್ಕಾಗಿಯೇ ಬೈಬಲ್‌ ನಮ್ಮನ್ನು “ಪಟ್ಟುಹಿಡಿದು ಪ್ರಾರ್ಥಿಸಿ,” ‘ಎಡೆಬಿಡದೆ ಪ್ರಾರ್ಥಿಸಿ’ ಎಂದು ಉತ್ತೇಜಿಸುತ್ತದೆ.—ರೋಮ. 12:12; 1 ಥೆಸ. 5:17.

ನಮ್ಮ ಪ್ರಾರ್ಥನೆಗಳನ್ನು ಯೆಹೋವ ದೇವರು ಎಷ್ಟು ಸಮಯ ಕೇಳಬಹುದು? ಇದಕ್ಕೆ ಉತ್ತರ ಬೈಬಲಿನ ಈ ಉದಾಹರಣೆ ಕೊಡುತ್ತದೆ. ಯೇಸು ತನ್ನ ಅಪೊಸ್ತಲರನ್ನು ಆರಿಸಿಕೊಳ್ಳುವ ಮುಂಚೆ “ಇಡೀ ರಾತ್ರಿ ದೇವರಿಗೆ ಪ್ರಾರ್ಥನೆಮಾಡುತ್ತಾ ಕಳೆದನು.” (ಲೂಕ 6:12) ಆ ಪ್ರಾರ್ಥನೆಯಲ್ಲಿ ಯೆಹೋವ ದೇವರ ಹತ್ತಿರ ಒಬ್ಬೊಬ್ಬರ ಹೆಸರನ್ನೂ ಹೇಳಿ ಅವರ ಒಳ್ಳೇ ಗುಣಗಳ ಬಗ್ಗೆ ಮತ್ತು ಅವರ ಬಲಹೀನತೆಗಳ ಬಗ್ಗೆ ಹೇಳಿದನು. ಅಲ್ಲದೇ ಅವರನ್ನು ಆರಿಸಿಕೊಳ್ಳಲು ಸಹಾಯ ಮಾಡುವಂತೆ ಸಹ ಕೇಳಿಕೊಂಡನು. ಮಾರನೇ ದಿನ, ತಾನು ಒಳ್ಳೇ ಅರ್ಹ ಪುರುಷರನ್ನು ಅಪೊಸ್ತಲರನ್ನಾಗಿ ಆರಿಸಿಕೊಂಡಿದ್ದೇನೆಂಬ ಖಾತ್ರಿ ಯೇಸುವಿಗೆ ಇತ್ತು. “ಪ್ರಾರ್ಥನೆಯನ್ನು ಕೇಳುವವನಾದ” ಯೆಹೋವ ದೇವರು ಎಲ್ಲಾ ಯಥಾರ್ಥ ಪ್ರಾರ್ಥನೆಗಳನ್ನು ಕೇಳಲು ಸಂತೋಷಿಸುತ್ತಾನೆ. (ಕೀರ್ತ. 65:2) ತುಂಬಾ ಚಿಂತೆಗೀಡು ಮಾಡಿರುವ ವಿಷಯದ ಬಗ್ಗೆ ನಾವು ತಾಸುಗಟ್ಟಲೆ ಪ್ರಾರ್ಥನೆ ಮಾಡಿದರೂ ಯೆಹೋವ ದೇವರು ‘ನನಗೆ ಕೇಳಿ ಕೇಳಿ ಸಾಕಾಯಿತು’ ಎಂದು ಬೇರೆ ಕಡೆ ಗಮನ ಕೊಡುವುದಿಲ್ಲ.

ದೇವರು ಕ್ಷಮಿಸಲು ಸದಾ ಸಿದ್ಧನು

ಯೆಹೋವ ಉತ್ತಮ ಮಾದರಿ. ಆತನು ಕ್ಷಮಿಸಲು ಸದಾ ಸಿದ್ಧ

ಒಳ್ಳೇ ಸ್ನೇಹಿತರು ಕೂಡ ಏನಾದ್ರೂ ತಪ್ಪಾದಾಗ ಕ್ಷಮಿಸುವುದಕ್ಕೆ ಕಷ್ಟ ಪಡುತ್ತಾರೆ. ಎಷ್ಟರ ಮಟ್ಟಿಗೆ ಅಂದರೆ ತುಂಬಾ ವರ್ಷಗಳಿಂದ ಸ್ನೇಹಿತರಾಗಿದ್ದರೂ ಸ್ನೇಹನಾ ಬಿಡುತ್ತಾರೆಯೇ ಹೊರತು ಕ್ಷಮಿಸುವುದಕ್ಕೆ ಸಿದ್ಧರಾಗಿರುವುದಿಲ್ಲ. ಆದರೆ ಯೆಹೋವ ದೇವರು ಹಾಗಿಲ್ಲ. ಎಲ್ಲಾ ಯಥಾರ್ಥ ವ್ಯಕ್ತಿಗಳು ಆತನ ಹತ್ತಿರ ಕ್ಷಮೆ ಬೇಡುವಂತೆ ಬೈಬಲ್‌ ಉತ್ತೇಜಿಸುತ್ತದೆ. ಏಕೆಂದರೆ “ಆತನು ಹೇರಳವಾಗಿ ಕ್ಷಮಿಸುವನು.” (ಯೆಶಾ. 55:6, 7, ಪವಿತ್ರ ಗ್ರಂಥ) ದೇವರು ಹೀಗೆ ಉದಾರವಾಗಿ ಕ್ಷಮಿಸುವುದಕ್ಕೆ ಕಾರಣವಾದರೂ ಏನು?

ಯೆಹೋವ ದೇವರ ಸರಿಸಾಟಿಯಿಲ್ಲದ ಪ್ರೀತಿ. ದೇವರು ನಮ್ಮನ್ನು ಎಷ್ಟು ಪ್ರೀತಿಸುತ್ತಾನೆಂದರೆ ನಮ್ಮನ್ನು ಪಾಪ ಮತ್ತು ಅದರಿಂದ ಉಂಟಾದ ಎಲ್ಲಾ ತೊಂದರೆಗಳನ್ನು ತೆಗೆದು ಹಾಕಲು ತನ್ನ ಒಬ್ಬನೇ ಮಗನಾದ ಯೇಸುವನ್ನು ನಮಗಾಗಿ ಕೊಟ್ಟನು. (ಯೋಹಾ. 3:16) ವಿಮೋಚನಾ ಮೌಲ್ಯದಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ದೇವರು ತಾನು ಪ್ರೀತಿಸುವವರನ್ನು ಯೇಸುವಿನ ಯಜ್ಞದ ಮೂಲಕ ಉದಾರವಾಗಿ ಕ್ಷಮಿಸುವನು. ಹಾಗಾಗಿ ಅಪೊಸ್ತಲ ಯೋಹಾನ ಹೀಗೆ ಬರೆದನು: ‘ನಾವು ನಮ್ಮ ಪಾಪಗಳನ್ನು ನಿವೇದಿಸಿಕೊಳ್ಳುವುದಾದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸುವನು.’ (1 ಯೋಹಾ. 1:9) ಯೆಹೋವ ದೇವರ ಕ್ಷಮಾಗುಣದಿಂದ ಜನರು ಆತನೊಂದಿಗೆ ಸ್ನೇಹ ಸಂಬಂಧವನ್ನು ಮುಂದುವರೆಸಬಹುದು. ಈ ವಿಷಯ ನಮ್ಮ ಮನಮುಟ್ಟುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕಷ್ಟದಲ್ಲಿ ಕೈ ಹಿಡಿಯುವ ಯೆಹೋವ

ಯೆಹೋವ ಉತ್ತಮ ಮಾದರಿ. ಆತನು ಕಷ್ಟದಲ್ಲಿ ಕೈ ಹಿಡಿಯುತ್ತಾನೆ

ಕಷ್ಟದಲ್ಲಿರುವಾಗ ಒಬ್ಬ ಒಳ್ಳೆಯ ಸ್ನೇಹಿತ ಸಹಾಯ ಮಾಡುತ್ತಾನೆ. ಯೆಹೋವ ದೇವರ ವಿಷಯದಲ್ಲೇನು? ಆತನ ವಾಕ್ಯ ತಿಳಿಸುವುದು: ದೇವರ ಸೇವಕನು “ಕೆಳಗೆ ಬಿದ್ದರೂ ಏಳದೆ ಹೋಗುವದಿಲ್ಲ; ಯೆಹೋವನು ಅವನನ್ನು ಕೈಹಿಡಿದು ಉದ್ಧಾರ ಮಾಡುವನು.” (ಕೀರ್ತ. 37:24) ಯೆಹೋವನು ತನ್ನ ಸೇವಕರ ‘ಕೈಹಿಡಿದು ಅನೇಕ ವಿಧಗಳಲ್ಲಿ ಉದ್ಧಾರ ಮಾಡುತ್ತಾನೆ’. ಕರಿಬೀಯನ್‌ ದ್ವೀಪದ ಸೆಂಟ್‌ ಕ್ರಾಯ್‌ನಲ್ಲಿ ನಡೆದ ಘಟನೆಯನ್ನು ಗಮನಿಸಿ.

ಒಬ್ಬ ಪುಟ್ಟ ಹುಡುಗಿ ತನ್ನ ಧಾರ್ಮಿಕ ನಂಬಿಕೆಯ ಕಾರಣ ರಾಷ್ಟ್ರಧ್ವಜಕ್ಕೆ ವಂದಿಸಲಿಲ್ಲ. ಇದಕ್ಕಾಗಿ ಸಹಪಾಠಿಗಳು ತುಂಬಾ ಒತ್ತಡ ಹಾಕುತ್ತಿದ್ದರು. ಆಗ ಸಹಾಯಕ್ಕಾಗಿ ಆಕೆ ಯೆಹೋವ ದೇವರಲ್ಲಿ ಪ್ರಾರ್ಥಿಸಿದಳು. ಮುಂದಿನ ಕ್ಲಾಸ್‌ನಲ್ಲಿ ಧ್ವಜವಂದನೆಯ ಬಗ್ಗೆ ಮಾತಾಡಿದಳು. ಬೈಬಲ್‌ ಕಥೆಗಳ ನನ್ನ ಪುಸ್ತಕದಿಂದ ಶದ್ರಕ್‌, ಮೆಶಕ್‌ ಮತ್ತು ಅಬೇದ್‌ನೆಗೋರ ಕಥೆಯನ್ನು ಹೇಳಿದಳು. ಈ ಕಥೆಗೂ ತಾನು ಧ್ವಜವಂದನೆ ಮಾಡದೆ ಇರುವುದಕ್ಕೂ ಏನು ಸಂಬಂಧ ಎಂದು ತಿಳಿಸಿದಳು. ಆಕೆ ಹೇಳಿದ್ದು: “ಆ ಮೂವರು ಇಬ್ರಿಯ ಯುವಕರು ಪ್ರತಿಮೆಯನ್ನು ಆರಾಧಿಸದೆ ಇದ್ದದಕ್ಕಾಗಿ ಯೆಹೋವನು ಅವರನ್ನು ಕಾಪಾಡಿದನು.” ನಂತರ ಅಲ್ಲಿ ಹಾಜರಾದವರಿಗೆ ಆ ಪುಸ್ತಕವನ್ನು ಕೊಟ್ಟಾಗ ಹನ್ನೊಂದು ಮಕ್ಕಳು ಅದನ್ನು ಸ್ವೀಕರಿಸಿದರು. ಇಂಥ ವಿಷಯದ ಬಗ್ಗೆ ಧೈರ್ಯದಿಂದ ಮಾತಾಡಲು ಬಲ ಮತ್ತು ವಿವೇಕವನ್ನು ಕೊಟ್ಟವನು ಯೆಹೋವ ದೇವರೇ ಎಂದು ಅರಿತಾಗ ಆಕೆಗೆ ತುಂಬಾ ಸಂತೋಷವಾಯಿತು.

ಯಾವಾಗಾದರೂ ನಿಮಗೆ ಯೆಹೋವ ದೇವರು ‘ನನ್ನ ಬಗ್ಗೆ ಕಾಳಜಿ ವಹಿಸುತ್ತಾನಾ’ ಅಂತ ಸಂಶಯ ಬಂದರೆ ಏನು ಮಾಡಬೇಕು? ಬೈಬಲಿನ ಕೀರ್ತನೆ 34:17-19; 55:22 ಮತ್ತು 145:18, 19 ನ್ನು ಓದಿ ಧ್ಯಾನಿಸಿ. ಅನೇಕ ವರ್ಷಗಳಿಂದ ಯೆಹೋವನ ಸೇವೆ ಮಾಡಿರುವವರ ಹತ್ತಿರ ದೇವರು ಅವರಿಗೆ ಹೇಗೆ ಸಹಾಯ ಮಾಡಿದನೆಂದು ಕೇಳಿ. ನಿಮಗೆ ಸಹಾಯ ಬೇಕಾದಾಗೆಲ್ಲಾ ಅದರ ಬಗ್ಗೆ ಯೆಹೋವ ದೇವರ ಹತ್ತಿರ ಹೇಳಿ. ಆಗ ಯೆಹೋವ ದೇವರು ನಿಮ್ಮ ಬಗ್ಗೆ ಖಂಡಿತ ಚಿಂತಿಸುತ್ತಾನೆ ಅಂತ ನಿಮಗೇ ಗೊತ್ತಾಗುತ್ತೆ.