ದೇವರ ಅನುಗ್ರಹವನ್ನು ಅವನು ಪಡೆಯಬಹುದಿತ್ತು
ಯೆಹೋವನ ಸೇವೆ ಮಾಡುತ್ತಿರುವುದರಿಂದ ನಾವು ಆತನ ಅನುಗ್ರಹ, ಆಶೀರ್ವಾದಕ್ಕಾಗಿ ಬಯಸುತ್ತೇವೆ. ಆದರೆ ದೇವರು ಯಾರಿಗೆ ತನ್ನ ಅನುಗ್ರಹ ತೋರಿಸುತ್ತಾನೆ? ಬೈಬಲ್ ಕಾಲದಲ್ಲಿ ಕೆಲವರು ಗಂಭೀರ ಪಾಪಗಳನ್ನು ಮಾಡಿ ದೇವರ ಅನುಗ್ರಹ ಕಳಕೊಂಡರೂ ಅದನ್ನು ಪುನಃ ಪಡಕೊಂಡರು. ಇನ್ನು ಕೆಲವರಿಗೆ ಆರಂಭದಲ್ಲಿ ಒಳ್ಳೇ ಗುಣಗಳಿದ್ದರೂ ಕೊನೆಯಲ್ಲಿ ದೇವರ ಅನುಗ್ರಹವನ್ನು ಕಳಕೊಂಡರು. ಆದ್ದರಿಂದ “ನಾನು ಎಂಥ ವ್ಯಕ್ತಿಯಾಗಿರಬೇಕೆಂದು ಯೆಹೋವನು ಬಯಸುತ್ತಾನೆ?” ಎಂಬ ಪ್ರಶ್ನೆ ನಮಗೆ ಬಂದಿರಬಹುದು. ಈ ಪ್ರಶ್ನೆಗೆ ಉತ್ತರವನ್ನು ಯೆಹೂದದ ರಾಜನಾದ ರೆಹಬ್ಬಾಮನ ಉದಾಹರಣೆಯಿಂದ ತಿಳಿದುಕೊಳ್ಳೋಣ.
ಕೆಟ್ಟ ಆರಂಭ
ರೆಹಬ್ಬಾಮನ ತಂದೆ ಸೊಲೊಮೋನ ಇಸ್ರಾಯೇಲನ್ನು 40 ವರ್ಷ ಆಳಿದನು. (1 ಅರ. 11:42) ಅವನು ತೀರಿಕೊಂಡ ಮೇಲೆ ರೆಹಬ್ಬಾಮನು ರಾಜನಾಗಲಿಕ್ಕಾಗಿ ಯೆರೂಸಲೇಮಿನಿಂದ ಶೆಕೆಮಿಗೆ ಪ್ರಯಾಣಿಸಿದನು. (2 ಪೂರ್ವ. 10:1) ರಾಜನಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುವುದರ ಬಗ್ಗೆ ಅವನಿಗೆ ಭಯವಿತ್ತಾ? ಅವನ ತಂದೆ ಸೊಲೊಮೋನ ಅಪಾರವಾದ ವಿವೇಕಕ್ಕೆ ಹೆಸರುವಾಸಿಯಾಗಿದ್ದನು. ಸಮಸ್ಯೆಗಳನ್ನು ವಿವೇಕದಿಂದ ಬಗೆಹರಿಸುವ ಸಾಮರ್ಥ್ಯ ತನ್ನಲ್ಲೂ ಇದೆ ಎಂದು ತೋರಿಸುವ ಒಂದು ಸನ್ನಿವೇಶ ರೆಹಬ್ಬಾಮನಿಗೆ ಎದುರಾಯಿತು.
ದಬ್ಬಾಳಿಕೆ ಕೆಳಗಿದ್ದ ಇಸ್ರಾಯೇಲ್ಯರು ತಮ್ಮ ಪ್ರತಿನಿಧಿಗಳನ್ನು ರೆಹಬ್ಬಾಮನ ಹತ್ತಿರ ಕಳುಹಿಸಿ ತಮಗೇನು ಬೇಕು ಎಂದು ತಿಳಿಸಿದರು. “ನಿನ್ನ ತಂದೆಯು ನಮ್ಮ ಮೇಲೆ ಭಾರವಾದ ನೊಗವನ್ನು ಹೇರಿದನು; ನಿನ್ನ ತಂದೆಯು ನೇಮಿಸಿದ ಬಿಟ್ಟೀಕೆಲಸವನ್ನು ನೀನು ಕಡಿಮೆ ಮಾಡಿ ನಮ್ಮ ಮೇಲಿರುವ ಭಾರವಾದ ನೊಗವನ್ನು ಹಗುರಮಾಡುವದಾದರೆ ನಾವು ನಿನ್ನನ್ನು ಸೇವಿಸುವೆವು” ಎಂದು ಹೇಳಿಸಿದರು.—2 ಪೂರ್ವ. 10:3, 4.
ಈಗ ರೆಹಬ್ಬಾಮನದ್ದು ಅಡಕತ್ತರಿಯಲ್ಲಿ ಸಿಲುಕಿದ ಪರಿಸ್ಥಿತಿ. ಜನರು ಹೇಳಿದ ಹಾಗೆ ಮಾಡಿದರೆ ತನಗೆ, ತನ್ನ ಕುಟುಂಬಕ್ಕೆ ಮತ್ತು ತನ್ನ ಅರಮನೆಯಲ್ಲಿ ಇರುವವರಿಗೆ ಸುಖಸೌಕರ್ಯಗಳು ಕಡಿಮೆಯಾಗುತ್ತಿದ್ದವು. ಜನರು ಹೇಳಿದ ಹಾಗೆ ಮಾಡದೇ ಇದ್ದರೆ ತನ್ನ ವಿರುದ್ಧ ಅವರು ದಂಗೆಯೇಳುವ ಸಾಧ್ಯತೆ ಇತ್ತು. ಅವನೇನು ಮಾಡಿದನು? ತನ್ನ ತಂದೆಯ ಮಂತ್ರಿಗಳ ಹತ್ತಿರ ಮೊದಲು ಸಲಹೆ ಕೇಳಿದನು. ಅವರು ಅವನಿಗೆ ಜನರ ಮಾತು ಕೇಳು ಎಂದು ಹೇಳಿದರು. ಆಮೇಲೆ ಅವನು ತನ್ನ ವಯಸ್ಸಿನವರ ಹತ್ತಿರ ಸಲಹೆ ಕೇಳಿ ಜನರೊಂದಿಗೆ ಕಠಿಣವಾಗಿ ನಡಕೊಳ್ಳಲು ತೀರ್ಮಾನಿಸಿದನು. ಅವನು ಜನರಿಗೆ, ‘ನಾನು ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುವೆನು. ನನ್ನ ತಂದೆ ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ; ನಾನಾದರೋ ನಿಮ್ಮನ್ನು ಮುಳ್ಳುಕೊರಡೆಗಳಿಂದ ದಂಡಿಸುವೆನು’ ಎಂದು ಹೇಳಿದನು.—2 ಪೂರ್ವ. 10:6-14.
ಇದರಿಂದ ನಮಗೂ ಪಾಠ ಇದೆ ಅಲ್ವಾ? ನಮ್ಮ ಮಧ್ಯೆನೂ ತುಂಬ ವರ್ಷಗಳಿಂದ ಯೆಹೋವನ ಸೇವೆ ಮಾಡುತ್ತಿರುವ ವಯಸ್ಸಾದ ಸಹೋದರ ಸಹೋದರಿಯರು ಇದ್ದಾರೆ. ಅವರು ನಮಗೆ ಒಳ್ಳೇ ನಿರ್ಧಾರಗಳನ್ನು ಮಾಡಲು ಸಹಾಯ ಮಾಡುತ್ತಾರೆ. ಆದ್ದರಿಂದ ಬುದ್ಧಿವಂತರಾಗಿ ಅವರ ಸಲಹೆಯನ್ನು ಕೇಳಿ ಅದರಂತೆ ನಡೆಯೋಣ.—ಜ್ಞಾನೋ. 16:31.
‘ಅವರು ಯೆಹೋವನ ಮಾತನ್ನು ಕೇಳಿದರು’
ದಂಗೆ ಎದ್ದ ಕುಲಗಳ ವಿರುದ್ಧ ಯುದ್ಧ ಮಾಡಲು ರೆಹಬ್ಬಾಮ ತನ್ನ ಸೈನ್ಯವನ್ನು ಒಟ್ಟುಗೂಡಿಸಿದನು. ಆದರೆ ಯೆಹೋವನು ತನ್ನ ಪ್ರವಾದಿಯಾದ ಶೆಮಾಯನನ್ನು ಕಳುಹಿಸಿ ಹೀಗಂದನು: “ಯೆಹೋವನ 1 ಅರ. 12:21-24. *
ಮಾತನ್ನು ಕೇಳಿರಿ, ನೀವು ನಿಮ್ಮ ಸಹೋದರರಾದ ಇಸ್ರಾಯೇಲ್ಯರೊಡನೆ ಯುದ್ಧಮಾಡುವದಕ್ಕೆ ಹೋಗಬಾರದು; ಎಲ್ಲರೂ ಹಿಂದಿರುಗಿ ಹೋಗಿರಿ; ಈ ಕಾರ್ಯವು ಯೆಹೋವನಿಂದಾಗಿದೆ.”—ಯೆಹೋವನ ಮಾತನ್ನು ಕೇಳುವುದು ರೆಹಬ್ಬಾಮನಿಗೆ ಸುಲಭವಾಗಿತ್ತಾ? ತನ್ನ ಜನರು ತನ್ನ ಬಗ್ಗೆ ಏನು ನೆನಸಬಹುದು ಎಂದು ಅವನು ಯೋಚಿಸಿದ್ದಿರಬಹುದು. ಯಾರನ್ನು ತಾನು “ಮುಳ್ಳುಕೊರಡೆಗಳಿಂದ” ದಂಡಿಸುವೆನು ಎಂದು ಹೇಳಿದ್ದನೋ ಆ ಜನ ದಂಗೆ ಎದ್ದರೂ ಅವರನ್ನು ಏನೂ ಮಾಡದೆ ಬಿಟ್ಟುಬಿಡಬೇಕಾಯಿತು. (2 ಪೂರ್ವಕಾಲವೃತ್ತಾಂತ 13:7ನ್ನು ಹೋಲಿಸಿ.) ಜನರು ತನ್ನನ್ನು ಕೈಲಾಗದವನು ಎಂದು ನೆನಸಿದರೂ “ಯೆಹೋವನ ಮಾತನ್ನು ಕೇಳಿ” ರೆಹಬ್ಬಾಮನು ಮತ್ತು ಅವನ ಸೈನ್ಯ ಯುದ್ಧ ಮಾಡದೆ ಹಿಂದೆ ಹೋದರು.
ನಮಗಿರುವ ಪಾಠವೇನು? ನಾವು ಯಾವಾಗಲೂ ಯೆಹೋವನ ಮಾತನ್ನು ಕೇಳಬೇಕು. ಅದೇ ಬುದ್ಧಿವಂತಿಕೆ. ಜನರು ನಮ್ಮ ಬಗ್ಗೆ ಏನು ಬೇಕಾದರೂ ನೆನಸಲಿ ನಾವು ಯೆಹೋವನಿಗೆ ವಿಧೇಯರಾದರೆ ಆತನು ನಮ್ಮನ್ನು ಖಂಡಿತ ಆಶೀರ್ವದಿಸುತ್ತಾನೆ.—ಧರ್ಮೋ. 28:2.
ರೆಹಬ್ಬಾಮನು ಯೆಹೋವನ ಮಾತನ್ನು ಕೇಳಿದ್ದರಿಂದ ಯಾವ ಆಶೀರ್ವಾದ ಪಡಕೊಂಡನು? ಅವನು ಯೆಹೂದ ಮತ್ತು ಬೆನ್ಯಾಮೀನ್ ಕುಲಗಳ ರಾಜನಾಗಿಯೇ ಮುಂದುವರಿದನು. ಈ ಕುಲಗಳವರಿದ್ದ ಕ್ಷೇತ್ರಗಳಲ್ಲಿ ಹೊಸ ಪಟ್ಟಣಗಳನ್ನು ಕಟ್ಟುವುದರ ಕಡೆಗೆ ತನ್ನ ಗಮನಹರಿಸಿದನು. ಕೆಲವೊಂದು ಪಟ್ಟಣಗಳನ್ನು “ಅತ್ಯಧಿಕವಾಗಿ ಭದ್ರಪಡಿಸಿದನು.” (2 ಪೂರ್ವ. 11:5-12) ಮುಖ್ಯವಾಗಿ ಅವನು ಆ ಸಮಯದಲ್ಲಿ ಯೆಹೋವನ ನಿಯಮಗಳಿಗೆ ವಿಧೇಯನಾಗಿದ್ದನು. ಹತ್ತು ಕುಲಗಳ ರಾಜ್ಯ ವಿಗ್ರಹಗಳನ್ನು ಆರಾಧಿಸಲು ಶುರುಮಾಡಿದ್ದರಿಂದ ಅಲ್ಲಿಂದ ಅನೇಕರು ಯೆರೂಸಲೇಮಿಗೆ ಬಂದು ಸತ್ಯಾರಾಧನೆಯ ಪರವಾಗಿ ನಿಂತರು, ರೆಹಬ್ಬಾಮನನ್ನು ಬೆಂಬಲಿಸಿದರು. (2 ಪೂರ್ವ. 11:16, 17) ರೆಹಬ್ಬಾಮನು ಯೆಹೋವನಿಗೆ ವಿಧೇಯತೆ ತೋರಿಸಿದ್ದರಿಂದ ಅವನ ರಾಜ್ಯ ಇನ್ನೂ ಬಲವಾಯಿತು.
ರೆಹಬ್ಬಾಮ ಮಾಡಿದ ಪಾಪ ಮತ್ತು ಪಟ್ಟ ಪಶ್ಚಾತ್ತಾಪ
ತನ್ನ ರಾಜ್ಯ ಬಲವಾದಾಗ ಅವನು ಇದ್ದಕ್ಕಿದ್ದಂತೆ ಬದಲಾದನು. ಯೆಹೋವನ ನಿಯಮಗಳನ್ನು ಪಾಲಿಸುವುದನ್ನು ಬಿಟ್ಟುಬಿಟ್ಟನು. ಸುಳ್ಳು ದೇವರುಗಳನ್ನು ಪೂಜಿಸಲು ಆರಂಭಿಸಿದನು. ಯಾಕೆ? ಅಮ್ಮೋನಿಯಳಾಗಿದ್ದ ಅವನ ತಾಯಿಯ ಪ್ರಭಾವದಿಂದ ಇವನು ಬದಲಾದನಾ? (1 ಅರ. 14:21) ನಮಗದು ಗೊತ್ತಿಲ್ಲ. ಆದರೆ ‘ಯಥಾ ರಾಜ ತಥಾ ಪ್ರಜಾ’ ಎನ್ನುವಂತೆ ಅವನ ಕೆಟ್ಟ ಮಾದರಿಯನ್ನು ಪ್ರಜೆಗಳು ಅನುಕರಿಸಿದರು. ಆದ್ದರಿಂದ ಈಜಿಪ್ಟಿನ ರಾಜನಾದ ಶೀಶಕನು ಯೆಹೂದದ ಅನೇಕ ಪಟ್ಟಣಗಳನ್ನು ವಶಪಡಿಸಿಕೊಳ್ಳುವಂತೆ ಯೆಹೋವನು ಬಿಟ್ಟನು. ಈ ಪಟ್ಟಣಗಳನ್ನು ರೆಹಬ್ಬಾಮ ತುಂಬ ಭದ್ರಪಡಿಸಿದ್ದರೂ ಅವು ಅವನ ಕೈಬಿಟ್ಟುಹೋದವು.—1 ಅರ. 14:22-24; 2 ಪೂರ್ವ. 12:1-4.
ಆಮೇಲೆ ಶೀಶಕ ಮತ್ತು ಅವನ ಸೈನ್ಯ ರೆಹಬ್ಬಾಮನು ಆಳುತ್ತಿದ್ದ ಯೆರೂಸಲೇಮಿನ ಮೇಲೆ ಆಕ್ರಮಣ ಮಾಡಲು ಬಂತು. ಇದು ರೆಹಬ್ಬಾಮನ ಮೇಲೆ ಕತ್ತಿ ತೂಗುವಂತ್ತಿತ್ತು. ಆಗ ಪ್ರವಾದಿ ಶೆಮಾಯನು ಅವನಿಗೆ ಮತ್ತು ಅವನ ಪ್ರಧಾನರಿಗೆ ದೇವರ ಈ ಸಂದೇಶವನ್ನು ತಿಳಿಸಿದನು: “ನೀವು ನನ್ನನ್ನು ಬಿಟ್ಟಿದ್ದರಿಂದ ನಾನು ನಿಮ್ಮನ್ನು ಶೀಶಕನ ಕೈಯಲ್ಲಿ ಬಿಟ್ಟುಬಿಟ್ಟಿದ್ದೇನೆ.” ಈ ಶಿಸ್ತು ಸಿಗುತ್ತದೆ ಎಂದು ಗೊತ್ತಾದಾಗ ರೆಹಬ್ಬಾಮ ಏನು ಮಾಡಿದನು? “ಅರಸನೂ ಇಸ್ರಾಯೇಲ್‌ಪ್ರಧಾನರೂ ಯೆಹೋವನು ನ್ಯಾಯವಂತನೆಂದು ಒಪ್ಪಿ ತಮ್ಮನ್ನು ತಗ್ಗಿಸಿಕೊಂಡರು” ಎಂದು ಬೈಬಲ್ ಹೇಳುತ್ತದೆ. ಆದ್ದರಿಂದ ಯೆಹೋವನು ರೆಹಬ್ಬಾಮನನ್ನು ರಕ್ಷಿಸಿದನು ಮತ್ತು ಯೆರೂಸಲೇಮ್ ನಾಶವಾಗದಂತೆ ನೋಡಿಕೊಂಡನು.—2 ಪೂರ್ವ. 12:5-7, 12.
ಇದಾದ ಮೇಲೆ ರೆಹಬ್ಬಾಮನು ಯೆಹೂದದ ಮೇಲೆ ತನ್ನ ರಾಜ್ಯಭಾರವನ್ನು ಮುಂದುವರಿಸಿದನು. ಅವನು ತೀರಿಹೋಗುವ ಮುಂಚೆ ತನ್ನ ಗಂಡುಮಕ್ಕಳಿಗೆ ಅನೇಕ ಉಡುಗೊರೆಗಳನ್ನು ಕೊಟ್ಟನು. ಮುಂದೆ ತನ್ನ ಮಗನಾದ ಅಬೀಯ ರಾಜನಾಗಬೇಕು ಎನ್ನುವುದು ಅವನ ಆಸೆಯಾಗಿತ್ತು. ಅಬೀಯನ ವಿರುದ್ಧ ಉಳಿದ ಮಕ್ಕಳು ದಂಗೆ ಏಳಬಾರದೆಂಬ ಕಾರಣಕ್ಕೆ ರೆಹಬ್ಬಾಮನು ಹೀಗೆ ಮಾಡಿರಬೇಕು. (2 ಪೂರ್ವ. 11:21-23) ಅವನು ಯುವಪ್ರಾಯದಲ್ಲಿ ತೋರಿಸದೇ ಇದ್ದ ಜಾಣತನವನ್ನು ಈಗ ತೋರಿಸಿದನು.
ರೆಹಬ್ಬಾಮ ಒಳ್ಳೆಯವನಾ? ಕೆಟ್ಟವನಾ?
ರೆಹಬ್ಬಾಮನು ಕೆಲವು ಒಳ್ಳೇ ವಿಷಯಗಳನ್ನು ಮಾಡಿದನು. ಆದರೂ ಅವನು ಯೆಹೋವನಿಗೆ “ದ್ರೋಹಿಯಾದನು” ಎಂದು ಬೈಬಲ್ ಹೇಳುತ್ತದೆ. ಹೇಗೆ? “ಅವನು ಯೆಹೋವನನ್ನು ಅನುಸರಿಸುವದಕ್ಕೆ ಮನಸ್ಸುಮಾಡದೆ ದ್ರೋಹಿಯಾದನು.” ಆದ್ದರಿಂದ ಯೆಹೋವನು ಅವನನ್ನು ಮೆಚ್ಚಲಿಲ್ಲ.—2 ಪೂರ್ವ. 12:14.
ರೆಹಬ್ಬಾಮನ ಜೀವನದಿಂದ ನಾವೇನು ಕಲಿಯಬಹುದು? ಅವನು ಕೆಲವೊಮ್ಮೆ ದೇವರಿಗೆ ವಿಧೇಯನಾದನು. ಯೆಹೋವನ ಜನರಿಗೆ ಕೆಲವು ಒಳ್ಳೇದನ್ನೂ ಮಾಡಿದನು. ಆದರೆ ಅವನು ಯೆಹೋವನ ಜೊತೆ ಆಪ್ತ ಸಂಬಂಧ ಬೆಳೆಸಿಕೊಂಡಿರಲಿಲ್ಲ. ಅವನಲ್ಲಿ ಯೆಹೋವನನ್ನು ಮೆಚ್ಚಿಸಬೇಕೆಂಬ ಬಲವಾದ ಆಸೆ ಇರಲಿಲ್ಲ. ಆದ್ದರಿಂದ ಅವನು ಸರಿಯಾದ ವಿಷಯಗಳನ್ನು ಮಾಡುವುದನ್ನು ಬಿಟ್ಟುಬಿಟ್ಟನು. ಸುಳ್ಳು ದೇವರುಗಳನ್ನು ಆರಾಧಿಸಲು ಆರಂಭಿಸಿದನು. ‘ಹಾಗಾದರೆ ಅವನು ನಿಜವಾಗಿ ಪಶ್ಚಾತ್ತಾಪಪಟ್ಟು ಯೆಹೋವನನ್ನು ಮೆಚ್ಚಿಸಬೇಕೆಂಬ ಆಸೆಯಿಂದ ಯೆಹೋವನು ಕೊಟ್ಟ ತಿದ್ದುಪಾಟನ್ನು ಸ್ವೀಕರಿಸಿದನಾ? ಅಥವಾ ಬೇರೆಯವರು ಹೇಳುತ್ತಿದ್ದರು ಅಂತ ವಿಧೇಯನಾದನಾ?’ ಎಂದು ನೀವು ಯೋಚಿಸುತ್ತಿರಬಹುದು. (2 ಪೂರ್ವ. 11:3, 4; 12:6) ಅವನು ಕೆಲವೊಮ್ಮೆ ದೇವರಿಗೆ ವಿಧೇಯನಾದರೂ ಸ್ವಲ್ಪ ಸಮಯದ ನಂತರ ಪುನಃ ಕೆಟ್ಟದ್ದನ್ನು ಮಾಡಿದ. ಅವನು ತನ್ನ ಅಜ್ಜನಾದ ರಾಜ ದಾವೀದನಂತೆ ಇರಲಿಲ್ಲ. ದಾವೀದನೂ ಗಂಭೀರವಾದ ತಪ್ಪುಗಳನ್ನು ಮಾಡಿದನು. ಆದರೆ ತಪ್ಪು ಮಾಡಿದ ಮೇಲೆ ಪಶ್ಚಾತ್ತಾಪಪಟ್ಟನು. ಯೆಹೋವನ ಮೇಲೆ ಅವನಿಗೆ ಪ್ರೀತಿ ಇತ್ತು. ಕೊನೆ ಉಸಿರಿರುವ ವರೆಗೂ ಅವನು ಸತ್ಯಾರಾಧನೆಯನ್ನು ಬಿಡಲಿಲ್ಲ.—1 ಅರ. 14:8; ಕೀರ್ತ. 51:1, 17; 63:1.
ಈ ಬೈಬಲ್ ವೃತ್ತಾಂತದಿಂದ ನಾವು ತುಂಬ ವಿಷಯಗಳನ್ನು ಕಲಿಯಬಹುದು. ಜನರು ತಮ್ಮ ಕುಟುಂಬವನ್ನು ನೋಡಿಕೊಂಡು ಬೇರೆಯವರಿಗೂ ಸಹಾಯ ಮಾಡುತ್ತಿರುವುದು ಮೆಚ್ಚಬೇಕಾದ ವಿಷಯವೇ. ಆದರೆ ಯೆಹೋವನ ಅನುಗ್ರಹ ಸಿಗಬೇಕಾದರೆ ಸತ್ಯಾರಾಧನೆಗೆ ಮೊದಲ ಸ್ಥಾನ ಕೊಡಬೇಕು ಮತ್ತು ಆತನೊಂದಿಗೆ ಬಲವಾದ ಸಂಬಂಧ ಬೆಳೆಸಿಕೊಳ್ಳಬೇಕು.
ಈ ಗುರಿಯನ್ನು ಮುಟ್ಟಬೇಕಾದರೆ ನಮಗೆ ಯೆಹೋವನ ಮೇಲೆ ತುಂಬ ಪ್ರೀತಿ ಇರಬೇಕು. ಬೆಂಕಿಯ ಉರಿ ಆರಿಹೋಗದೆ ಇರಲು ನಾವು ಹೇಗೆ ಕಟ್ಟಿಗೆ ಸೇರಿಸುತ್ತಾ ಇರುತ್ತೇವೋ ಹಾಗೆ ದೇವರ ಮೇಲೆ ನಮಗಿರುವ ಪ್ರೀತಿ ಆರಿಹೋಗದಿರಲು ಬೈಬಲನ್ನು ತಪ್ಪದೇ ಅಧ್ಯಯನ ಮಾಡಬೇಕು, ಧ್ಯಾನಿಸಬೇಕು ಮತ್ತು ಪಟ್ಟುಹಿಡಿದು ಪ್ರಾರ್ಥನೆ ಮಾಡಬೇಕು. (ಕೀರ್ತ. 1:2; ರೋಮ. 12:12) ದೇವರ ಮೇಲೆ ನಮಗೆ ಬಲವಾದ ಪ್ರೀತಿ ಇದ್ದರೆ ಎಲ್ಲ ವಿಷಯಗಳನ್ನೂ ಯೆಹೋವನು ಮೆಚ್ಚುವಂತೆ ಮಾಡುತ್ತೇವೆ. ಏನಾದರೂ ತಪ್ಪು ಮಾಡಿದರೆ ನಿಜವಾಗಿ ಪಶ್ಚಾತ್ತಾಪಪಟ್ಟು ಯೆಹೋವನ ಕ್ಷಮೆ ಕೇಳುತ್ತೇವೆ. ಆಗ ನಾವು ರೆಹಬ್ಬಾಮನಂತೆ ಇರದೆ ಕೊನೆತನಕ ಸತ್ಯಾರಾಧನೆಯ ಪರವಾಗಿ ನಿಲ್ಲುತ್ತೇವೆ.—ಯೂದ 20, 21.
^ ಪ್ಯಾರ. 9 ಸೊಲೊಮೋನನು ದೇವರಿಗೆ ವಿರುದ್ಧವಾಗಿ ನಡಕೊಂಡದ್ದರಿಂದ ಅವನ ರಾಜ್ಯ ಎರಡು ಭಾಗವಾಗುತ್ತದೆ ಎಂದು ಯೆಹೋವನು ಮೊದಲೇ ಹೇಳಿದ್ದನು.—1 ಅರ. 11:31, 32.