ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ನನ್ನೆಲ್ಲಾ ಕಷ್ಟಗಳಲ್ಲಿ ನನಗೆ ಸಾಂತ್ವನ ಸಿಕ್ಕಿತು

ನನ್ನೆಲ್ಲಾ ಕಷ್ಟಗಳಲ್ಲಿ ನನಗೆ ಸಾಂತ್ವನ ಸಿಕ್ಕಿತು

ಸಿಂಧೂ ನದಿಯ ಪಶ್ಚಿಮ ದಡದಲ್ಲಿ ಸುಖುರ್‌ ಎಂಬ ಪ್ರಾಚೀನ ನಗರ ಇದೆ. ಇದು ಈಗ ಪಾಕಿಸ್ತಾನದಲ್ಲಿ ಇದೆ. ನಾನು 1929​ರ ನವೆಂಬರ್‌ 9​ರಂದು ಇಲ್ಲೇ ಹುಟ್ಟಿದ್ದು. ಹೆಚ್ಚುಕಡಿಮೆ ಆ ಸಮಯಕ್ಕೇ ಬ್ರಿಟಿಷರಾಗಿದ್ದ ಒಬ್ಬ ಮಿಷನರಿ ನನ್ನ ಹೆತ್ತವರಿಗೆ ವರ್ಣರಂಜಿತವಾದ ಪುಸ್ತಕಗಳನ್ನು ಕೊಟ್ಟಿದ್ದರು. ಬೈಬಲಾಧಾರಿತವಾಗಿದ್ದ ಆ ಪುಸ್ತಕಗಳು ಯೆಹೋವನ ಸಾಕ್ಷಿಯಾಗಿ ನನ್ನ ಜೀವನವನ್ನು ರೂಪಿಸುವುದರಲ್ಲಿ ಪಾತ್ರ ವಹಿಸಿದವು.

ಆ ಪುಸ್ತಕಗಳನ್ನು ರೇನ್‌ಬೋ ಸೆಟ್‌ ಎಂದು ಕರೆಯಲಾಗುತ್ತಿತ್ತು. ನಾನು ಅದನ್ನು ತೆಗೆದು ನೋಡಿದಾಗ ಅದರಲ್ಲಿದ್ದ ಚಿತ್ರಗಳು ಕಲ್ಪನಾ ಲೋಕಕ್ಕೆ ಹೋಗುವಂತೆ ಮಾಡಿತು. ಇದರಿಂದಾಗಿ ಚಿಕ್ಕ ವಯಸ್ಸಿಂದಲೇ ನಾನು ಬೈಬಲ್‌ ಸತ್ಯಕ್ಕಾಗಿ ಹುಡುಕಲು ಆರಂಭಿಸಿದೆ. ಆ ಪುಸ್ತಕಗಳಲ್ಲಿ ನನಗೆ ತುಂಬ ವಿಷಯ ಸಿಕ್ಕಿತು.

ಎರಡನೇ ಲೋಕ ಯುದ್ಧದ ಕಾರ್ಮೋಡಗಳು ಭಾರತ ದೇಶವನ್ನೂ ಆವರಿಸುತ್ತಿರುವಾಗ ನಮ್ಮ ಕುಟುಂಬದ ಮೇಲೂ ಕಷ್ಟಗಳ ಸುರಿಮಳೆ ಆರಂಭವಾಯಿತು. ನನ್ನ ಹೆತ್ತವರು ಬೇರೆಯಾದರು, ಆಮೇಲೆ ವಿಚ್ಛೇದನ ಪಡೆದರು. ನಾನು ಪ್ರೀತಿಸುತ್ತಿದ್ದ ಇಬ್ಬರು ವ್ಯಕ್ತಿಗಳು ಯಾಕೆ ದೂರವಾದರು ಎಂದು ನನಗೆ ಅರ್ಥವಾಗಲಿಲ್ಲ. ನಾನು ಕುಗ್ಗಿಹೋದೆ, ನನಗೆ ಯಾರೂ ಇಲ್ಲ ಎಂದನಿಸಿತು. ನನಗೆ ಒಡಹುಟ್ಟಿದವರೂ ಇರಲಿಲ್ಲ. ನನಗೆ ಬೇಕಾಗಿದ್ದ ಸಾಂತ್ವನ, ಸಹಾಯ ಸಿಗಲಿಲ್ಲ.

ಆಗ ನಾನು ಮತ್ತು ಅಮ್ಮ ಕರಾಚಿಯಲ್ಲಿ ಇದ್ವಿ. ಕರಾಚಿ ಆಗ ಪ್ರಾಂತೀಯ ರಾಜಧಾನಿಯಾಗಿತ್ತು. ಒಂದಿನ ಫ್ರೆಡ್‌ ಹಾರ್ಡೇಕರ್‌ ಎಂಬ ವೃದ್ಧ ವೈದ್ಯರು ನಮ್ಮ ಮನೆಗೆ ಬಂದರು. ನಾನು ಆರಂಭದಲ್ಲಿ ಹೇಳಿದ ಪುಸ್ತಕಗಳನ್ನು ಕೊಟ್ಟ ಮಿಷನರಿಯಂತೆ ಇವರೂ ಯೆಹೋವನ ಸಾಕ್ಷಿಯಾಗಿದ್ದರು. ಅವರು ಅಮ್ಮಂಗೆ ಬೈಬಲ್‌ ಅಧ್ಯಯನ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿದರು. ಅಮ್ಮಂಗೆ ಇಷ್ಟ ಇರಲಿಲ್ಲ, ಆದರೆ ನನಗೆ ಇಷ್ಟ ಇರಬಹುದು ಎಂದು ಹೇಳಿದರು. ಮುಂದಿನ ವಾರದಿಂದಲೇ ನನ್ನ ಬೈಬಲ್‌ ಅಧ್ಯಯನ ಆರಂಭವಾಯಿತು.

ಕೆಲವು ವಾರಗಳ ನಂತರ ನಾನು ಹಾರ್ಡೇಕರ್‌ ಅವರ ಕ್ಲಿನಿಕ್‌ನಲ್ಲಿ ನಡೆಯುತ್ತಿದ್ದ ಕೂಟಗಳಿಗೆ ಹಾಜರಾಗಲು ಆರಂಭಿಸಿದೆ. ಅಲ್ಲಿ ಸುಮಾರು 12 ವೃದ್ಧ ಸಾಕ್ಷಿಗಳು ಸೇರಿಬರುತ್ತಿದ್ದರು. ಅವರು ನನಗೆ ಸಾಂತ್ವನ ಕೊಟ್ಟರು, ಸ್ವಂತ ಮಗನಂತೆ ನೋಡಿಕೊಂಡರು. ಅವರು ನನ್ನ ಪಕ್ಕದಲ್ಲಿ ಕೂತು ನಿಜ ಸ್ನೇಹಿತರಂತೆ ಮಾತಾಡುತ್ತಿದ್ದದ್ದು ಈಗಲೂ ನೆನಪಿದೆ. ನನಗೆ ಈ ಪ್ರೀತಿ ಆಗ ತುಂಬಾನೇ ಬೇಕಾಗಿತ್ತು.

ಸ್ವಲ್ಪ ಸಮಯ ಆದ ಮೇಲೆ ಸಹೋದರ ಹಾರ್ಡೇಕರ್‌ ನನ್ನನ್ನು ಸೇವೆಗೆ ಕರಕೊಂಡು ಹೋದರು. ಒಂದು ಚಿಕ್ಕ ರೆಕಾರ್ಡ್‌ ಪ್ಲೇಯರ್‌ ಅನ್ನು ಬಳಸುವುದು ಹೇಗೆಂದು ಅವರು ಕಲಿಸಿಕೊಟ್ಟರು. ಅದರಲ್ಲಿ ನಾವು ಬೈಬಲಾಧರಿತವಾದ ಚಿಕ್ಕ ಭಾಷಣಗಳನ್ನು ಹಾಕುತ್ತಿದ್ವಿ. ಕೆಲವು ಭಾಷಣಗಳು ನೇರವಾಗಿ ವಿಷಯಗಳನ್ನು ಹೇಳಿದ್ದರಿಂದ ಕೆಲವರಿಗೆ ಅದು ಇಷ್ಟವಾಗಲಿಲ್ಲ. ಆದರೆ ಸಾಕ್ಷಿಕೊಡುವುದು ನನಗೆ ತುಂಬ ಇಷ್ಟ ಆಯಿತು. ಬೈಬಲ್‌ ಸತ್ಯ ನನಗೆ ಇಷ್ಟ ಆಯಿತು. ಅದರ ಬಗ್ಗೆ ಬೇರೆಯವರ ಜೊತೆ ಮಾತಾಡಲು ಇಷ್ಟಪಟ್ಟೆ.

ಜಪಾನಿನ ಸೈನ್ಯ ಭಾರತದ ಹತ್ತಿರತ್ತಿರ ಬರುತ್ತಿದ್ದಾಗ ಬ್ರಿಟಿಷ್‌ ಸರ್ಕಾರ ಸಾಕ್ಷಿಗಳ ಮೇಲೆ ಹೆಚ್ಚು ಒತ್ತಡ ಹಾಕಿತು. 1943​ರ ಜುಲೈನಲ್ಲಿ ಆ ಒತ್ತಡ ನನ್ನ ಮೇಲೂ ಬಂತು. ನನ್ನ ಶಾಲೆಯ ಪ್ರಾಂಶುಪಾಲರು, ನನ್ನ “ವ್ಯಕ್ತಿತ್ವ ಸ್ವೀಕಾರಾರ್ಹವಲ್ಲ” ಎಂದು ಹೇಳಿ ಶಾಲೆಯಿಂದ ತೆಗೆದುಹಾಕಿದರು. ಅವರು ಆಂಗ್ಲಿಕನ್‌ ಚರ್ಚಿನ ಪಾದ್ರಿಯಾಗಿದ್ದರು. ನಾನು ಸಾಕ್ಷಿಗಳ ಜೊತೆ ಸಹವಾಸ ಮಾಡುತ್ತಿರುವುದು ಬೇರೆ ವಿದ್ಯಾರ್ಥಿಗಳಿಗೆ ಒಳ್ಳೇ ಮಾದರಿಯಾಗಿಲ್ಲ ಎಂದವರು ಅಮ್ಮಂಗೆ ಹೇಳಿದರು. ಅಮ್ಮಂಗೆ ತುಂಬ ಗಾಬರಿಯಾಯಿತು. ಸಾಕ್ಷಿಗಳ ಜೊತೆ ಸೇರದ ಹಾಗೆ ಮಾಡಿಬಿಟ್ಟರು. ನಂತರ 1,370 ಕಿ.ಮೀ. ದೂರದಲ್ಲಿದ್ದ ಪೇಶಾವರಕ್ಕೆ ನನ್ನ ತಂದೆಯ ಬಳಿ ಕಳುಹಿಸಿಬಿಟ್ಟರು. ಆಧ್ಯಾತ್ಮಿಕ ಆಹಾರ ಮತ್ತು ಸಹವಾಸ ಇಲ್ಲದೆ ನಾನು ನಿಷ್ಕ್ರಿಯನಾಗಿಬಿಟ್ಟೆ.

ಆಧ್ಯಾತ್ಮಿಕವಾಗಿ ಆರೋಗ್ಯವಂತನಾದೆ

1947​ರಲ್ಲಿ ನಾನು ಕೆಲಸ ಹುಡುಕಿಕೊಂಡು ಕರಾಚಿಗೆ ಬಂದೆ. ನಾನು ಡಾ. ಹಾರ್ಡೇಕರ್‌ ಅವರ ಕ್ಲಿನಿಕ್‌ಗೆ ಹೋದೆ. ಅವರು ಸಂತೋಷದಿಂದ ನನ್ನನ್ನು ಬರಮಾಡಿಕೊಂಡರು. “ಸರಿ, ನಿನಗೆ ಏನು ಸಮಸ್ಯೆ ಹೇಳು?” ಅಂದರು. ನಾನು ಸೌಖ್ಯ ಇಲ್ಲದೆ ಅಲ್ಲಿಗೆ ಬಂದಿದ್ದೇನೆ ಅಂದುಕೊಂಡರು. “ಡಾಕ್ಟರ್‌, ನನ್ನ ದೇಹದಲ್ಲಿ ಏನೂ ಸಮಸ್ಯೆ ಇಲ್ಲ. ಆದರೆ ಆಧ್ಯಾತ್ಮಿಕ ಆರೋಗ್ಯ ಹಾಳಾಗಿದೆ. ನನಗೆ ಬೈಬಲ್‌ ಅಧ್ಯಯನ ಬೇಕು” ಅಂದೆ. “ಯಾವಾಗ ಆರಂಭಿಸೋಣ?” ಎಂದು ಅವರು ಕೇಳಿದರು. “ಸಾಧ್ಯವಾದರೆ ಈಗಲೇ ಮಾಡೋಣ” ಅಂದೆ.

ಆವತ್ತಿಡೀ ಸಾಯಂಕಾಲ ಬೈಬಲ್‌ ಅಧ್ಯಯನ ಮಾಡುತ್ತಾ ಆನಂದಿಸಿದ್ವಿ. ನಾನು ಮರಳಿ ಯೆಹೋವನ ಬಳಿ ಬಂದಂತೆ ಇತ್ತು. ನನ್ನ ಅಮ್ಮ ಸಾಕ್ಷಿಗಳ ಜೊತೆ ಸೇರದಂತೆ ಮಾಡಲು ತುಂಬ ಪ್ರಯತ್ನಿಸಿದರು. ಆದರೆ ಈ ಸಾರಿ ನಾನು ಸತ್ಯವನ್ನು ಕಲಿತೇ ಕಲಿಯುತ್ತೇನೆ ಎಂದು ತೀರ್ಮಾನ ಮಾಡಿಕೊಂಡಿದ್ದೆ. 1947​ರ ಆಗಸ್ಟ್‌ 31​ರಂದು ದೀಕ್ಷಾಸ್ನಾನ ಪಡಕೊಂಡೆ. ಸ್ವಲ್ಪ ಸಮಯದಲ್ಲೇ, ಪಯನೀಯರನಾಗಿ ಸೇವೆ ಮಾಡಲು ಆರಂಭಿಸಿದೆ. ಆಗ ನನಗೆ 17 ವಯಸ್ಸು.

ಪಯನೀಯರ್‌ ಸೇವೆಯ ಸಂತೋಷ

ನನಗೆ ಪಯನೀಯರನಾಗಿ ಸಿಕ್ಕಿದ ಮೊದಲ ನೇಮಕ ಕ್ವೆಟ್ಟದಲ್ಲಿ. ಹಿಂದೆ ಬ್ರಿಟಿಷರು ಇದನ್ನು ತಮ್ಮ ಮಿಲಿಟರಿ ನೆಲೆಯಾಗಿ ಉಪಯೋಗಿಸುತ್ತಿದ್ದರು. 1947​ರಲ್ಲಿ ದೇಶ ವಿಭಜನೆಯಾಗಿ, ಭಾರತ ಮತ್ತು ಪಾಕಿಸ್ತಾನ ಎಂದು ಎರಡು ದೇಶಗಳಾದವು. * ಇದರಿಂದ ಧಾರ್ಮಿಕ ಹಿಂಸಾಚಾರ ಭುಗಿಲೆದ್ದಿತು. ದೊಡ್ಡ ಸಂಖ್ಯೆಯಲ್ಲಿ ಜನ ವಲಸೆ ಹೋದರು. ಇದು ಇತಿಹಾಸದ ಪುಟಗಳಲ್ಲಿ ದಾಖಲಾಯಿತು. ಸುಮಾರು 1 ಕೋಟಿ 40 ಲಕ್ಷ ಜನ ನಿರಾಶ್ರಿತರಾದರು. ಭಾರತದಲ್ಲಿದ್ದ ಮುಸ್ಲಿಮರು ಪಾಕಿಸ್ತಾನಕ್ಕೆ ಹೋದರು. ಪಾಕಿಸ್ತಾನದಲ್ಲಿದ್ದ ಹಿಂದೂಗಳು ಮತ್ತು ಸಿಖ್ಖರು ಭಾರತಕ್ಕೆ ಹೋದರು. ಈ ಎಲ್ಲ ಗೊಂದಲದ ಮಧ್ಯೆ ನಾನು ಕಾಲಿಡಲಿಕ್ಕೂ ಜಾಗವಿಲ್ಲದ ಒಂದು ರೈಲಿನಲ್ಲಿ ಕರಾಚಿಯಿಂದ ಕ್ವೆಟ್ಟಕ್ಕೆ ಹೋದೆ. ದಾರಿಯುದ್ದಕ್ಕೂ ರೈಲಿನ ಹೊರಗಿದ್ದ ಒಂದು ಕೈಗಂಬಿಯನ್ನು ಹಿಡಿದು ನೇತಾಡುತ್ತಾ ಹೋಗಿ ಮುಟ್ಟಿದೆ.

1948​ರಲ್ಲಿ ನಾನು ಭಾರತದಲ್ಲಿ ಒಂದು ಸರ್ಕಿಟ್‌ ಸಮ್ಮೇಳನಕ್ಕೆ ಹಾಜರಾದೆ

ಕ್ವೆಟ್ಟದಲ್ಲಿ ಸುಮಾರು 25 ವಯಸ್ಸಿನ ಜಾರ್ಜ್‌ ಸಿಂಗ್‌ ಎಂಬ ವಿಶೇಷ ಪಯನೀಯರನ್ನು ನಾನು ಭೇಟಿಮಾಡಿದೆ. ಅವರು ನನಗೊಂದು ಹಳೇ ಸೈಕಲನ್ನು ಕೊಟ್ಟರು. ನಾವಿದ್ದದ್ದು ಗುಡ್ಡಗಾಡು ಪ್ರದೇಶ. ಅಲ್ಲಿ ನಾನು ಸೈಕಲನ್ನು ಜಾಸ್ತಿ ತಳ್ಳಿಕೊಂಡು ಹೋಗುತ್ತಿದ್ದೆ. ಹೆಚ್ಚಾಗಿ ನಾನು ಒಬ್ಬನೇ ಸೇವೆ ಮಾಡುತ್ತಿದ್ದೆ. ಆರೇ ತಿಂಗಳಲ್ಲಿ ನಾನು 17 ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದೆ. ಇವರಲ್ಲಿ ಕೆಲವರು ಸತ್ಯಕ್ಕೆ ಬಂದರು. ಇವರಲ್ಲಿ ಒಬ್ಬರು ಸೇನಾ ಅಧಿಕಾರಿಯಾಗಿದ್ದರು. ಅವರ ಹೆಸರು ಸಾದಿಕ್‌ ಮಸಿ. ನಾನು ಮತ್ತು ಜಾರ್ಜ್‌ ಕೆಲವು ಬೈಬಲ್‌ ಸಾಹಿತ್ಯವನ್ನು ಪಾಕಿಸ್ತಾನದ ರಾಷ್ಟ್ರೀಯ ಭಾಷೆಯಾದ ಉರ್ದುಗೆ ಭಾಷಾಂತರಿಸಲು ಅವರು ಸಹಾಯ ಮಾಡಿದರು. ಸ್ವಲ್ಪ ಸಮಯವಾದ ಮೇಲೆ ಸಾದಿಕ್‌ ಹುರುಪುಳ್ಳ ಪ್ರಚಾರಕರಾದರು.

ಕ್ವೀನ್‌ ಎಲಿಸಬೆತ್‌ ಹಡಗಿನಲ್ಲಿ ನಾನು ಗಿಲ್ಯಡ್‌ ಶಾಲೆಗೆ ಹೋಗುತ್ತಿರುವಾಗ

ನಂತರ ನಾನು ಕರಾಚಿಗೆ ಹೋದೆ. ಅಲ್ಲಿ ಮಿಷನರಿಗಳಾದ ಹೆನ್ರಿ ಫಿಂಚ್‌ ಮತ್ತು ಹ್ಯಾರಿ ಫಾರಸ್ಟ್‌ ಜೊತೆ ಸೇವೆ ಮಾಡಿದೆ. ಅವರು ಆಗಷ್ಟೇ ಗಿಲ್ಯಡ್‌ ಮುಗಿಸಿ ಬಂದಿದ್ದರು. ಅವರು ಕೊಟ್ಟ ತರಬೇತಿಯಿಂದ ತುಂಬ ಪ್ರಯೋಜನ ಪಡೆದೆ. ಒಂದು ಸಲ ನಾನು ಸಹೋದರ ಫಿಂಚ್‌ ಜೊತೆ ಸೇರಿ ಉತ್ತರ ಪಾಕಿಸ್ತಾನದಲ್ಲಿ ಸೇವೆ ಮಾಡಲು ಹೋದೆ. ಎತ್ತರೆತ್ತರವಾದ ಪರ್ವತ ಶ್ರೇಣಿಗಳ ತಪ್ಪಲಲ್ಲಿ ಉರ್ದು ಭಾಷೆ ಮಾತಾಡುವ ದೀನಮನಸ್ಸಿನ ಹಳ್ಳಿಗರು ನಮಗೆ ಸಿಕ್ಕಿದರು. ಅವರು ಸತ್ಯಕ್ಕಾಗಿ ಹಾತೊರೆಯುತ್ತಿದ್ದರು. ಎರಡು ವರ್ಷಗಳ ನಂತರ ನಾನೂ ಗಿಲ್ಯಡ್‌ಗೆ ಹೋದೆ. ಶಾಲೆ ಮುಗಿಸಿ ಅರೆಕಾಲಿಕ ಸಂಚರಣ ಮೇಲ್ವಿಚಾರಕನಾಗಿ ಪಾಕಿಸ್ತಾನಕ್ಕೆ ಬಂದೆ. ನಾನು ಲಾಹೋರ್‌ನಲ್ಲಿದ್ದ ಮಿಷನರಿ ಗೃಹದಲ್ಲಿದ್ದೆ. ಅಲ್ಲಿ ಮಿಷನರಿಗಳಾಗಿದ್ದ ಮೂವರು ಸಹೋದರರೂ ಇದ್ದರು.

ಒಂದು ಸವಾಲನ್ನು ಎದುರಿಸಿದೆ

ದುಃಖಕರವಾಗಿ 1954​ರಲ್ಲಿ ಲಾಹೋರ್‌ನಲ್ಲಿದ್ದ ಮಿಷನರಿಗಳ ಮಧ್ಯೆ ಒಂದು ಜಗಳ ಆಯಿತು. ವ್ಯಕ್ತಿತ್ವಗಳು ಬೇರೆ ಬೇರೆ ಇದ್ದದರಿಂದ ಹೊಂದಿಕೊಂಡು ಹೋಗಲು ಕಷ್ಟವಾಯಿತು. ಆದ್ದರಿಂದ ಶಾಖಾ ಕಚೇರಿ ನಮ್ಮನ್ನು ಬೇರೆ ಬೇರೆ ಕಡೆ ನೇಮಿಸಿತು. ನಾನು ಆ ಜಗಳದಲ್ಲಿ ಪಕ್ಷ ವಹಿಸಿದ್ದರಿಂದ ಬಲವಾದ ತಿದ್ದುಪಾಟು ಸಿಕ್ಕಿತು. ಮನಗುಂದಿ ಹೋದೆ. ಆಧ್ಯಾತ್ಮಿಕವಾಗಿ ಸೋತುಹೋದೆ ಎಂದು ನನಗನಿಸಿತು. ಪುನಃ ಕರಾಚಿಗೆ ಹೋದೆ. ಆದರೆ ಜೀವನವನ್ನು ಹೊಸದಾಗಿ ಆರಂಭಿಸೋಣ ಎಂದು ಲಂಡನ್‌ಗೆ ಹೋಗಿಬಿಟ್ಟೆ.

ಲಂಡನ್‌ನಲ್ಲಿದ್ದ ನಮ್ಮ ಸಭೆಯಲ್ಲಿ ಅಲ್ಲಿನ ಬೆತೆಲ್‌ ಕುಟುಂಬದ ಅನೇಕ ಸದಸ್ಯರಿದ್ದರು. ಶಾಖಾ ಸೇವಕನಾಗಿದ್ದ ಪ್ರೈಸ್‌ ಹ್ಯೂಸ್‌ ನನಗೆ ದಯಾಭಾವದಿಂದ ತರಬೇತಿ ಕೊಟ್ಟರು. ಒಂದಿನ ಅವರು, ಲೋಕವ್ಯಾಪಕ ಕೆಲಸದ ಉಸ್ತುವಾರಿ ವಹಿಸಿದ್ದ ಸಹೋದರ ಜೋಸೆಫ್‌ ಎಫ್‌. ರದರ್‌ಫರ್ಡ್‌ರಿಂದ ತನಗೆ ಸಿಕ್ಕಿದ ಬಲವಾದ ತಿದ್ದುಪಾಟಿನ ಬಗ್ಗೆ ತಿಳಿಸಿದರು. ಸಹೋದರ ಹ್ಯೂಸ್‌ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದಾಗ ಸಹೋದರ ರದರ್‌ಫರ್ಡ್‌ ಗದರಿಸಿದ್ದರ ಬಗ್ಗೆ ಹೇಳಿದರು. ಈ ಘಟನೆಯನ್ನು ನೆನಪಿಸಿಕೊಂಡು ಹೇಳಿದಾಗ ಸಹೋದರ ಹ್ಯೂಸ್‌ನ ಮುಖದಲ್ಲಿ ಮಂದಹಾಸ ಇದ್ದದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಆರಂಭದಲ್ಲಿ ಬೇಜಾರಾಯಿತು, ಆದರೆ ನಂತರ ಆ ಬುದ್ಧಿವಾದ ಬೇಕಾಗಿತ್ತು ಮತ್ತು ಅದು ಯೆಹೋವನ ಪ್ರೀತಿಯ ಪುರಾವೆಯಾಗಿದೆ ಎಂದು ಅರ್ಥಮಾಡಿಕೊಂಡೆ ಎಂದು ಸಹೋದರ ಹ್ಯೂಸ್‌ ತಿಳಿಸಿದರು. (ಇಬ್ರಿ. 12:6) ಅವರು ಹೇಳಿದ ವಿಷಯ ನನ್ನ ಮನಸ್ಪರ್ಶಿಸಿತು ಮತ್ತು ನಾನು ಆಧ್ಯಾತ್ಮಿಕವಾಗಿ ಎದ್ದುನಿಲ್ಲಲು ಸಹಾಯ ಮಾಡಿತು.

ಹೆಚ್ಚುಕಡಿಮೆ ಈ ಸಮಯದಲ್ಲಿ ನನ್ನ ಅಮ್ಮ ಲಂಡನ್‌ಗೆ ಬಂದು ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡರು. ಆಡಳಿತ ಮಂಡಲಿಯ ಸದಸ್ಯರಾಗಿ ಸೇವೆ ಮಾಡಿದ ಸಹೋದರ ಜಾನ್‌ ಇ. ಬಾರ್‌ ಅಮ್ಮನೊಟ್ಟಿಗೆ ಅಧ್ಯಯನ ಮಾಡಿದರು. ಅಮ್ಮ ಆಧ್ಯಾತ್ಮಿಕವಾಗಿ ಬೇಗ ಪ್ರಗತಿ ಮಾಡಿ 1957​ರಲ್ಲಿ ದೀಕ್ಷಾಸ್ನಾನ ಪಡೆದರು. ಅಪ್ಪ ಕೂಡ ತೀರಿಕೊಳ್ಳುವ ಮುಂಚೆ ಯೆಹೋವನ ಸಾಕ್ಷಿಗಳ ಜೊತೆ ಅಧ್ಯಯನ ಮಾಡಿದ್ದರೆಂದು ನನಗೆ ನಂತರ ಗೊತ್ತಾಯಿತು.

1958​ರಲ್ಲಿ ಲಿನೆ ಎಂಬ ಡ್ಯಾನಿಷ್‌ ಸಹೋದರಿಯನ್ನು ನಾನು ಮದುವೆಯಾದೆ. ಅವರು ಲಂಡನ್‌ಗೆ ಬಂದು ನೆಲೆಸಿದ್ದರು. ಮುಂದಿನ ವರ್ಷ ನಮಗೆ ಒಬ್ಬ ಮಗಳು ಹುಟ್ಟಿದಳು. ಅವಳ ಹೆಸರು ಜೇನ್‌. ಆಮೇಲೆ ನಮಗೆ ನಾಲ್ಕು ಮಕ್ಕಳು ಹುಟ್ಟಿದರು. ನನಗೆ ಫುಲಮ್‌ ಸಭೆಯಲ್ಲಿ ಸಹ ಸೇವಾ ಸುಯೋಗಗಳು ಸಿಕ್ಕಿದವು. ಆದರೆ ಲಿನೆ ಆರೋಗ್ಯದ ನಿಮಿತ್ತ ನಾವು ಬೆಚ್ಚಗಿನ ವಾತಾವರಣ ಇರುವ ಕಡೆ ಸ್ಥಳಾಂತರಿಸಬೇಕಾಯಿತು. 1967​ರಲ್ಲಿ ನಾವು ಆಸ್ಟ್ರೇಲಿಯದ ಅಡೆಲೈಡ್‌ಗೆ ವಲಸೆ ಹೋದ್ವಿ.

ತುಂಬ ನೋವು ಕೊಟ್ಟ ವಿಷಯ

ಅಡೆಲೈಡ್‌ನಲ್ಲಿದ್ದ ನಮ್ಮ ಸಭೆಯಲ್ಲಿ 12 ವೃದ್ಧ ಅಭಿಷಿಕ್ತ ಕ್ರೈಸ್ತರೂ ಇದ್ದರು. ಅವರು ಸೇವೆಯನ್ನು ತುಂಬ ಹುರುಪಿನಿಂದ ಮಾಡುತ್ತಿದ್ದರು. ಇದರಿಂದ ನಾವು ಬೇಗ ಆಧ್ಯಾತ್ಮಿಕ ವಿಷಯಗಳಲ್ಲಿ ತಲ್ಲೀನರಾದೆವು.

1979​ರಲ್ಲಿ ನಮ್ಮ ಐದನೇ ಮಗು ಡಾನಿಯೆಲ್‌ ಹುಟ್ಟಿದ. ಅವನಿಗೆ ಡೌನ್‌ ಸಿಂಡ್ರೋಮ್‌ ಇದ್ದದರಿಂದ ತುಂಬ ಆರೋಗ್ಯದ ಸಮಸ್ಯೆಗಳು ಇದ್ದವು. * ಅವನು ತುಂಬ ಸಮಯ ಬದುಕಲ್ಲ ಎಂದು ವೈದ್ಯರು ಹೇಳಿದರು. ನಮಗಾಗ ಆಗುತ್ತಿದ್ದ ನೋವಿನ ಬಗ್ಗೆ ಹೇಳಲು ನನಗೆ ಈಗಲೂ ಕಷ್ಟವಾಗುತ್ತದೆ. ನಾವು ಹಗಲೂ ರಾತ್ರಿ ಅವನ ಆರೈಕೆ ಮಾಡಿದ್ವಿ. ಅದೇ ಸಮಯದಲ್ಲಿ ಬೇರೆ ಮಕ್ಕಳನ್ನೂ ಚೆನ್ನಾಗಿ ನೋಡಿಕೊಂಡ್ವಿ. ಡಾನಿಯೆಲ್‌ ಹೃದಯದಲ್ಲಿ ಎರಡು ತೂತು ಇದ್ದದರಿಂದ ಅವನಿಗೆ ಕೆಲವೊಮ್ಮೆ ಸಾಕಷ್ಟು ಆಮ್ಲಜನಕ ಸಿಗದೆ ಹೋಗುತ್ತಿತ್ತು. ಆಗ ಅವನ ಇಡೀ ದೇಹ ನೀಲಿ ಬಣ್ಣ ಆಗಿಬಿಡುತ್ತಿತ್ತು. ಹೀಗಾದಾಗ ನಾವು ಅವನನ್ನು ತಕ್ಷಣ ಆಸ್ಪತ್ರೆಗೆ ಹೊತ್ತುಕೊಂಡು ಓಡುತ್ತಿದ್ವಿ. ಆದರೆ ಅವನ ಆರೋಗ್ಯ ಇಷ್ಟು ಹಾಳಾಗಿದ್ದರೂ ಅವನು ತುಂಬ ಬುದ್ಧಿವಂತ ಮಗು ಮತ್ತು ಅವನಿಗೆ ತುಂಬ ಪ್ರೀತಿಯ ಸ್ವಭಾವ ಇತ್ತು. ಆಧ್ಯಾತ್ಮಿಕ ವಿಷಯಗಳಲ್ಲೂ ಅವನಿಗೆ ತುಂಬ ಆಸಕ್ತಿ ಇತ್ತು. ನಾವು ಊಟಕ್ಕೆ ಮುಂಚೆ ಇಡೀ ಕುಟುಂಬವಾಗಿ ಪ್ರಾರ್ಥನೆ ಮಾಡುವಾಗ ಅವನು ತನ್ನ ಚಿಕ್ಕ ಕೈಗಳನ್ನು ಒಟ್ಟಿಗೆ ಸೇರಿಸಿ, ತಲೆ ಆಡಿಸುತ್ತಾ ಕೊನೆಗೆ ಹೃತ್ಪೂರ್ವಕವಾಗಿ “ಆಮೆನ್‌” ಎಂದು ಹೇಳುತ್ತಿದ್ದನು. ಪ್ರಾರ್ಥನೆ ಮಾಡಿದ ಮೇಲೇನೇ ಊಟಕ್ಕೆ ಕೈ ಹಾಕುತ್ತಿದ್ದನು.

ಡಾನಿಯೆಲ್‌ಗೆ ನಾಲ್ಕು ವರ್ಷ ಇದ್ದಾಗ ಅವನಿಗೆ ತೀವ್ರವಾದ ಕ್ಯಾನ್ಸರ್‌ ಕಾಯಿಲೆ ಬಂತು. ಇದರಿಂದ ನಾನು ಮತ್ತು ಲಿನೆ ಶಾರೀರಿಕವಾಗಿ ಭಾವನಾತ್ಮಕವಾಗಿ ಬಳಲಿಹೋದ್ವಿ. ನನ್ನ ಕೈಯಲ್ಲಿ ಇನ್ನು ಆಗಲ್ಲ ಎಂದನಿಸಿತು. ನಾವು ತುಂಬ ಅಂದರೆ ತುಂಬ ಕುಗ್ಗಿಹೋಗಿದ್ದಾಗ ನಮ್ಮ ಸಂಚರಣ ಮೇಲ್ವಿಚಾರಕರಾದ ನೆವಿಲ್‌ ಬ್ರಾಮಿಚ್‌ ನಮ್ಮ ಮನೆಗೆ ಬಂದರು. ಆವತ್ತಿನ ರಾತ್ರಿ ಅವರು ಕಣ್ಣೀರು ಹಾಕುತ್ತಾ ನಮ್ಮನ್ನು ತಬ್ಬಿ ಹಿಡಿದರು. ನಾವೆಲ್ಲರೂ ಅತ್ವಿ. ಅವರು ಪ್ರೀತಿಯಿಂದ ಹೇಳಿದ ದಯಾಭರಿತ ಮಾತುಗಳು ನಮಗೆ ತುಂಬ ಸಾಂತ್ವನ ಕೊಟ್ಟವು. ಅವರು ರಾತ್ರಿ ಸುಮಾರು ಒಂದು ಗಂಟೆ ವರೆಗೆ ನಮ್ಮೊಟ್ಟಿಗೆ ಇದ್ದರು. ಅದಾಗಿ ಸ್ವಲ್ಪ ಸಮಯಕ್ಕೇ ಡಾನಿಯೆಲ್‌ ತೀರಿಕೊಂಡ. ಆಗ ನನಗಾದ ನೋವನ್ನು ನನ್ನ ಇಡೀ ಜೀವನದಲ್ಲೇ ಅನುಭವಿಸಿಲ್ಲ. ಆದರೂ ಯಾವುದೇ ವಿಷಯ, ಮರಣ ಕೂಡ ಡಾನಿಯೆಲನ್ನು ಯೆಹೋವನ ಪ್ರೀತಿಯಿಂದ ಅಗಲಿಸಲು ಸಾಧ್ಯವಿಲ್ಲ ಎಂಬ ದೃಢವಿಶ್ವಾಸದಿಂದ ನೋವನ್ನು ಸಹಿಸಿಕೊಂಡ್ವಿ. (ರೋಮ. 8:38, 39) ದೇವರ ಹೊಸ ಲೋಕದಲ್ಲಿ ಅವನು ಪುನರುತ್ಥಾನವಾಗಿ ಬರುವ ಸಮಯಕ್ಕಾಗಿ ನಾವು ತುಂಬ ಆಸೆಯಿಂದ ಎದುರುನೋಡುತ್ತಿದ್ದೇವೆ.—ಯೋಹಾ. 5:28, 29.

ಸಹಾಯ ಮಾಡುವಾಗ ಸಿಗುವ ಸಂತೋಷ

ನನಗೆ ಎರಡು ಸಾರಿ ತೀವ್ರವಾಗಿ ಲಕ್ವ ಹೊಡೆಯಿತು. ಆದರೆ ನಾನಿನ್ನೂ ಒಬ್ಬ ಸಭಾ ಹಿರಿಯನಾಗಿ ಸೇವೆ ಮಾಡುತ್ತಿದ್ದೇನೆ. ನಾನು ಜೀವನದಲ್ಲಿ ಎದುರಿಸಿದ ವಿಷಯಗಳಿಂದಾಗಿ ಬೇರೆಯವರ ನೋವನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ಕಷ್ಟದಲ್ಲಿರುವವರನ್ನು ಕಂಡರೆ ತುಂಬ ಅನುಕಂಪ ಹುಟ್ಟುತ್ತದೆ. ಅವರನ್ನು ತೀರ್ಪು ಮಾಡಲು ನಾನು ಹೋಗುವುದಿಲ್ಲ. ಅದರ ಬದಲಿಗೆ ನಾನು ಹೀಗೆ ಯೋಚಿಸುತ್ತೇನೆ: ‘ಅವರು ಜೀವನದಲ್ಲಿ ಎದುರಿಸಿದ ವಿಷಯಗಳು ಅವರ ಯೋಚನೆ ಮತ್ತು ಭಾವನೆಗಳ ಮೇಲೆ ಹೇಗೆ ಪ್ರಭಾವ ಬೀರಿರಬಹುದು? ನಾನು ಅವರ ಬಗ್ಗೆ ಚಿಂತಿಸುತ್ತೇನೆ ಎಂದು ಹೇಗೆ ತೋರಿಸಬಲ್ಲೆ? ಯೆಹೋವನ ಚಿತ್ತ ಮಾಡಲು ನಾನು ಅವರಿಗೆ ಹೇಗೆ ಸಹಾಯ ಮಾಡಬಲ್ಲೆ?’ ಸಭೆಯಲ್ಲಿ ಪರಿಪಾಲನಾ ಕೆಲಸವನ್ನು ಮಾಡುವುದೆಂದರೆ ನನಗೆ ತುಂಬ ಇಷ್ಟ. ನಾನು ಬೇರೆಯವರಿಗೆ ಬೇಕಾದ ಸಾಂತ್ವನ ಕೊಟ್ಟು ಆಧ್ಯಾತ್ಮಿಕವಾಗಿ ಚೈತನ್ಯಗೊಳಿಸುವಾಗ ಅದು ನನ್ನನ್ನೇ ಸಾಂತ್ವನಗೊಳಿಸಿ ಚೈತನ್ಯಗೊಳಿಸಿದಂತೆ ಇರುತ್ತದೆ.

ಪರಿಪಾಲನಾ ಭೇಟಿಗೆ ಹೋದರೆ ನನಗೆ ತೃಪ್ತಿ ಸಿಗುತ್ತದೆ

ಕೀರ್ತನೆಗಾರನು ಹೇಳಿದಂತೆ ನನಗೂ ಅನಿಸುತ್ತದೆ. “ನನ್ನಲ್ಲಿ ಅನೇಕ ಚಿಂತೆಗಳಿರುವಾಗ [ಯೆಹೋವನ] ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.” (ಕೀರ್ತ. 94:19) ಕುಟುಂಬ ಸಮಸ್ಯೆಗಳು, ಧಾರ್ಮಿಕ ವಿರೋಧ, ವೈಯಕ್ತಿಕ ಕುಂದುಕೊರತೆಗಳು ಮತ್ತು ಖಿನ್ನತೆಯನ್ನು ನಿಭಾಯಿಸಲು ಯೆಹೋವನು ನನಗೆ ಸಹಾಯ ಮಾಡಿದ್ದಾನೆ. ನಿಜಕ್ಕೂ ಯೆಹೋವನು ನನಗೊಬ್ಬ ತಂದೆಯಂತೆ ಇದ್ದಾನೆ!

[ಪಾದಟಿಪ್ಪಣಿಗಳು]

^ ಪ್ಯಾರ. 15 ಮೊದಲಿದ್ದ ಪಾಕಿಸ್ತಾನದಲ್ಲಿ ಪಶ್ಚಿಮ ಪಾಕಿಸ್ತಾನ (ಈಗಿರುವ ಪಾಕಿಸ್ತಾನ) ಮತ್ತು ಪೂರ್ವ ಪಾಕಿಸ್ತಾನ (ಈಗ ಬಾಂಗ್ಲಾದೇಶ) ಇತ್ತು.

^ ಪ್ಯಾರ. 25 ಈ ಕಾಯಿಲೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಜೂನ್‌ 2011​ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯಲ್ಲಿ ಬಂದ “Raising a Child With Down Syndrome—The Challenge and the Reward” ಎಂಬ ಲೇಖನ ನೋಡಿ.