ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನಿಮ್ಮ ಬೆಳಕನ್ನು ಪ್ರಕಾಶಿಸಿ’ ಯೆಹೋವನನ್ನು ಮಹಿಮೆಪಡಿಸಿ

‘ನಿಮ್ಮ ಬೆಳಕನ್ನು ಪ್ರಕಾಶಿಸಿ’ ಯೆಹೋವನನ್ನು ಮಹಿಮೆಪಡಿಸಿ

“ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ; ಆಗ ಅವರು . . . ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ಮಹಿಮೆಯನ್ನು ಸಲ್ಲಿಸುವರು.”—ಮತ್ತಾ. 5:16.

ಗೀತೆಗಳು: 143, 104

1. ನಾವು ಸಂತೋಷಪಡಲು ಯಾವ ವಿಶೇಷ ಕಾರಣವಿದೆ?

ಯೆಹೋವನ ಜನರು ತಮ್ಮ ಬೆಳಕನ್ನು ಪ್ರಕಾಶಿಸುತ್ತಿರುವುದರ ಬಗ್ಗೆ ಕೇಳಿಸಿಕೊಳ್ಳುವಾಗ ಎಷ್ಟು ಸಂತೋಷವಾಗುತ್ತದೆ! ಕಳೆದ ವರ್ಷ ನಾವು 1,00,00,000ಗಿಂತ ಹೆಚ್ಚು ಬೈಬಲ್‌ ಅಧ್ಯಯನಗಳನ್ನು ನಡೆಸಿದೆವು. ಜೊತೆಗೆ, ಲಕ್ಷಾಂತರ ಆಸಕ್ತ ಜನರು ಕ್ರಿಸ್ತನ ಮರಣದ ಸ್ಮರಣೆಗೆ ಬಂದರು ಮತ್ತು ಯೆಹೋವನು ಕೊಟ್ಟಿರುವ ಪ್ರೀತಿಯ ಉಡುಗೊರೆಯಾದ ವಿಮೋಚನಾ ಮೌಲ್ಯದ ಬಗ್ಗೆ ಕಲಿತರು.—1 ಯೋಹಾ. 4:9.

2, 3. (ಎ) ನಾವು ‘ಲೋಕದಲ್ಲಿ ಬೆಳಕು ಕೊಡುವ ವ್ಯಕ್ತಿಗಳಾಗಿರುವುದನ್ನು’ ಯಾವುದು ತಡೆಯುವುದಿಲ್ಲ? (ಬಿ) ಈ ಲೇಖನದಲ್ಲಿ ನಾವು ಏನನ್ನು ಚರ್ಚಿಸಲಿದ್ದೇವೆ?

2 ಭೂಮಿಯ ಎಲ್ಲ ಕಡೆ ಇರುವ ಯೆಹೋವನ ಸಾಕ್ಷಿಗಳು ಅನೇಕ ಭಾಷೆಗಳನ್ನು ಮಾತಾಡುತ್ತಾರೆ. ಆದರೆ ಈ ವಿಷಯ ಯೆಹೋವನನ್ನು ಒಂದೇ ಕುಟುಂಬದಂತೆ ಆರಾಧಿಸಲು ನಮಗೆ ಒಂದು ತಡೆಯಾಗಿಲ್ಲ. (ಪ್ರಕ. 7:9) ನಾವು ಯಾವುದೇ ಭಾಷೆಯನ್ನು ಮಾತಾಡಲಿ ಅಥವಾ ಎಲ್ಲೇ ಇರಲಿ ‘ಲೋಕದಲ್ಲಿ ಬೆಳಕು ಕೊಡುವ ವ್ಯಕ್ತಿಗಳಾಗಿ’ ಇರಲು ಸಾಧ್ಯ.—ಫಿಲಿ. 2:15.

3 ನಮ್ಮ ಸೇವೆ, ಕ್ರೈಸ್ತ ಐಕ್ಯತೆ ಮತ್ತು ತುರ್ತು ಪ್ರಜ್ಞೆಯಿಂದ ನಾವು ಯೆಹೋವ ದೇವರನ್ನು ಮಹಿಮೆಪಡಿಸಬಹುದು. ಇದು ಬೇರೆಯವರು ಬೈಬಲ್‌ ಸತ್ಯವನ್ನು ಕಲಿಯುವಂತೆ ಪ್ರಚೋದಿಸುತ್ತದೆ. ಈ ಮೂರು ಕ್ಷೇತ್ರಗಳಲ್ಲಿ ನಾವು ಹೇಗೆ ನಮ್ಮ ಬೆಳಕನ್ನು ಪ್ರಕಾಶಿಸಬಹುದು ಎಂದು ಚರ್ಚಿಸೋಣ.—ಮತ್ತಾಯ 5:14-16 ಓದಿ.

ಯೆಹೋವನನ್ನು ಆರಾಧಿಸಲು ಜನರಿಗೆ ಸಹಾಯ ಮಾಡಿ

4, 5. (ಎ) ಸುವಾರ್ತೆ ಸಾರುವುದರ ಜೊತೆಗೆ ಬೇರೆ ಯಾವ ವಿಧದಲ್ಲಿ ನಮ್ಮ ಬೆಳಕನ್ನು ಪ್ರಕಾಶಿಸಬಹುದು? (ಬಿ) ಪ್ರೀತಿಯಿಂದ ನಡಕೊಂಡರೆ ಯಾವ ಫಲಿತಾಂಶಗಳು ಸಿಗುತ್ತವೆ? (ಲೇಖನದ ಆರಂಭದ ಚಿತ್ರ ನೋಡಿ.)

4 ನಮ್ಮ ಬೆಳಕನ್ನು ಪ್ರಕಾಶಿಸುವ ಒಂದು ಪ್ರಾಮುಖ್ಯ ವಿಧಾನ ಸುವಾರ್ತೆಯನ್ನು ಸಾರುವುದು ಮತ್ತು ಶಿಷ್ಯರನ್ನು ಮಾಡುವುದೇ ಆಗಿದೆ. (ಮತ್ತಾ. 28:19, 20) ಕಾವಲಿನ ಬುರುಜುವಿನಲ್ಲಿ ಬಂದ “ಕತ್ತಲಲ್ಲಿ ಬೆಳಕು” ಎಂಬ ಲೇಖನವು, ಕಡೇ ದಿವಸಗಳಲ್ಲಿ ಒಬ್ಬ ವ್ಯಕ್ತಿ “ತನ್ನ ಬೆಳಕನ್ನು ಪ್ರಕಾಶಿಸುವ ಅವಕಾಶವನ್ನು ಉಪಯೋಗಿಸಿಕೊಳ್ಳದಿದ್ದರೆ” ಅವನು ಕರ್ತನಿಗೆ ನಂಬಿಗಸ್ತನಾಗಿರಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ನಂತರ ಅದು ಹೇಳಿದ್ದು: “ನಾವು ಭೂವ್ಯಾಪಕವಾಗಿರುವ ಜನರಿಗೆ ಸುವಾರ್ತೆ ಸಾರುವ ಮೂಲಕ ಮತ್ತು ಬೆಳಕಿನ ಮಾರ್ಗಗಳಿಗೆ ತಕ್ಕಂತೆ ನಡೆಯುವ ಮೂಲಕ ಈ ಅವಕಾಶವನ್ನು ಬಳಸಿಕೊಳ್ಳಬೇಕು.” (ಕಾವಲಿನ ಬುರುಜು ಜೂನ್‌ 1, 1925 [ಇಂಗ್ಲಿಷ್‌]) ಸಾರುವುದರ ಜೊತೆಗೆ ನಮ್ಮ ನಡತೆಯಿಂದಲೂ ಯೆಹೋವನಿಗೆ ಮಹಿಮೆ ತರಬಹುದು. ಅನೇಕರು ನಾವು ಸಾರುವುದನ್ನು ಗಮನಿಸುತ್ತಾರೆ. ನಾವು ಅವರನ್ನು ನೋಡಿ ಮುಗುಳ್ನಗೆ ಬೀರಿದಾಗ, ಸ್ನೇಹದಿಂದ ವಂದಿಸಿದಾಗ ನಾವು ಎಂಥ ವ್ಯಕ್ತಿಗಳಾಗಿದ್ದೇವೆ ಮತ್ತು ನಾವು ಆರಾಧಿಸುವ ಯೆಹೋವನು ಎಂಥ ದೇವರಾಗಿದ್ದಾನೆ ಎಂದು ಅವರು ಗ್ರಹಿಸಲು ಸಾಧ್ಯವಾಗುತ್ತದೆ.

5 ಯೇಸು ತನ್ನ ಶಿಷ್ಯರಿಗೆ “ನೀವು ಒಂದು ಮನೆಯೊಳಗೆ ಹೋಗುವಾಗ ಮನೆಯವರನ್ನು ವಂದಿಸಿರಿ” ಎಂದು ಹೇಳಿದನು. (ಮತ್ತಾ. 10:12) ಯೇಸು ಸಾರಿದ ಸ್ಥಳದಲ್ಲಿ ಅಪರಿಚಿತರನ್ನು ತಮ್ಮ ಮನೆಯೊಳಗೆ ಕರೆಯುವುದು ಅಲ್ಲಿನ ಜನರ ಪದ್ಧತಿಯಾಗಿತ್ತು. ಇಂದು ಅನೇಕ ಸ್ಥಳಗಳಲ್ಲಿ ಇಂಥ ಪದ್ಧತಿ ಇಲ್ಲ. ತಮ್ಮ ಮನೆ ಬಾಗಿಲಿಗೆ ಅಪರಿಚಿತರು ಬಂದರೆ ಕೆಲವೊಮ್ಮೆ ಜನರಿಗೆ ಭಯವಾಗುತ್ತದೆ ಅಥವಾ ಕಿರಿಕಿರಿಯಾಗುತ್ತದೆ. ಆದರೆ ನಾವು ಸ್ನೇಹಭಾವದಿಂದ, ಪ್ರೀತಿಯಿಂದ ಮಾತಾಡಿದರೆ ಜನರ ಭಯ, ಕಿರಿಕಿರಿ ಹೋಗಿಬಿಡಬಹುದು. ತಳ್ಳುಬಂಡಿ ಸಾಕ್ಷಿಕಾರ್ಯ ಮಾಡುವಾಗ ನೀವು ಮುಗುಳ್ನಗೆ ಬೀರಿ ವಂದಿಸಿದ್ದರಿಂದ ಜನರು ಬಂದು ಸಾಹಿತ್ಯವನ್ನು ತಗೊಂಡು ಹೋಗಿರುವುದನ್ನು ನೀವು ಗಮನಿಸಿರಬಹುದು. ಅವರು ನಿಮ್ಮ ಹತ್ತಿರ ಮಾತಾಡಿರಲೂ ಬಹುದು!

6. ಒಬ್ಬ ವೃದ್ಧ ದಂಪತಿ ಸೇವೆಯನ್ನು ಮುಂದುವರಿಸಿಕೊಂಡು ಹೋಗಲು ಏನು ಮಾಡಿದರು?

6 ಇಂಗ್ಲೆಂಡಿನಲ್ಲಿರುವ ಒಬ್ಬ ವೃದ್ಧ ದಂಪತಿ ತಮ್ಮ ಆರೋಗ್ಯ ಸರಿಯಿಲ್ಲದ ಕಾರಣ ಮನೆ-ಮನೆ ಸೇವೆಯನ್ನು ಹಿಂದೆ ಮಾಡಿದಷ್ಟು ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ತಮ್ಮ ಮನೆಯ ಹೊರಗಡೆ ಒಂದು ಮೇಜನ್ನು ಇಟ್ಟು ಅದರ ಮೇಲೆ ಸಾಹಿತ್ಯವನ್ನು ಇಡುತ್ತಾರೆ. ಅವರ ಮನೆ ಹತ್ತಿರ ಒಂದು ಶಾಲೆ ಇರುವುದರಿಂದ ಮಕ್ಕಳನ್ನು ಕರಕೊಂಡು ಹೋಗಲು ಬರುವ ಹೆತ್ತವರಿಗೆ ಆಸಕ್ತಿ ತರುವಂಥ ಸಾಹಿತ್ಯವನ್ನು ಮೇಜಿನ ಮೇಲೆ ಇಡುತ್ತಾರೆ. ಕೆಲವು ಹೆತ್ತವರು ಯುವ ಜನರ ಪ್ರಶ್ನೆಗಳು ಕಾರ್ಯಸಾಧಕ ಉತ್ತರಗಳು ಸಂಪುಟ 1 ಮತ್ತು 2 ಹಾಗೂ ಇನ್ನಿತರ ಪ್ರಕಾಶನಗಳನ್ನು ತೆಗೆದುಕೊಂಡಿದ್ದಾರೆ. ಒಬ್ಬ ಪಯನೀಯರ್‌ ಸಹೋದರಿ ಆಗಾಗ ಈ ವೃದ್ಧ ದಂಪತಿ ಜೊತೆ ಸೇರಿ ಸಾಕ್ಷಿಕಾರ್ಯ ಮಾಡುತ್ತಾರೆ. ಆ ಸಹೋದರಿ ತೋರಿಸುವ ಸ್ನೇಹಭಾವವನ್ನು ಮತ್ತು ವೃದ್ಧ ದಂಪತಿಗಿರುವ ಸಹಾಯ ಮಾಡುವ ಮನೋಭಾವವನ್ನು ಹೆತ್ತವರು ಗಮನಿಸಿದ್ದಾರೆ. ಅವರಲ್ಲಿ ಒಬ್ಬರು ಬೈಬಲ್‌ ಅಧ್ಯಯನವನ್ನೂ ತಗೊಳ್ಳುತ್ತಿದ್ದಾರೆ.

7. ನಿಮ್ಮ ಸ್ಥಳದಲ್ಲಿರುವ ನಿರಾಶ್ರಿತರಿಗೆ ನೀವು ಹೇಗೆ ಸಹಾಯ ಮಾಡಬಹುದು?

7 ಇತ್ತೀಚಿನ ವರ್ಷಗಳಲ್ಲಿ ಅನೇಕರು ತಮ್ಮ ದೇಶವನ್ನು ಬಿಟ್ಟು ಬೇರೆ ದೇಶಗಳಿಗೆ ನಿರಾಶ್ರಿತರಾಗಿ ಹೋಗುತ್ತಿದ್ದಾರೆ. ನಿಮ್ಮ ಸ್ಥಳದಲ್ಲಿರುವ ನಿರಾಶ್ರಿತರು ಯೆಹೋವನ ಬಗ್ಗೆ ಕಲಿಯಲು ನೀವು ಹೇಗೆ ಸಹಾಯ ಮಾಡಬಹುದು? ಮೊದಲಿಗೆ, JW ಲ್ಯಾಂಗ್ವೇಜ್‌ ಆ್ಯಪ್‌ ಬಳಸಿ ಅವರ ಭಾಷೆಯಲ್ಲಿ ವಂದಿಸಲು ಕಲಿಯಬಹುದು. ಜೊತೆಗೆ ಅವರ ಭಾಷೆಯ ಕೆಲವು ವಾಕ್ಯಗಳನ್ನು ಕಲಿತು ಅವರ ಜೊತೆ ಮಾತಾಡಲು ಪ್ರಯತ್ನಿಸಬಹುದು. ಈ ಪ್ರಯತ್ನ ಮಾಡುವಾಗ ಅವರೂ ನಿಮ್ಮ ಜೊತೆ ಮಾತಾಡಲು ಮನಸ್ಸು ಮಾಡಬಹುದು. ಆಗ ನೀವು ಅವರ ಭಾಷೆಯಲ್ಲಿ ಲಭ್ಯವಿರುವ ವಿಡಿಯೋಗಳನ್ನು ಮತ್ತು ಪ್ರಕಾಶನಗಳನ್ನು jw.org ವೆಬ್‌ಸೈಟ್‌ನಿಂದ ತೋರಿಸಬಹುದು.—ಧರ್ಮೋ. 10:19.

8, 9. (ಎ) ನಮ್ಮ ವಾರಮಧ್ಯದ ಕೂಟಗಳು ನಮಗೆ ಹೇಗೆ ಸಹಾಯ ಮಾಡುತ್ತವೆ? (ಬಿ) ಮಕ್ಕಳು ಉತ್ತರಗಳನ್ನು ಇನ್ನೂ ಚೆನ್ನಾಗಿ ಕೊಡುವುದಕ್ಕೆ ಹೆತ್ತವರು ಹೇಗೆ ಸಹಾಯ ಮಾಡಬಹುದು?

8 ಸೇವೆಯಲ್ಲಿ ಪರಿಣಾಮಕಾರಿಯಾಗಿ ಮಾತಾಡಲು ನಮಗೆ ಏನು ಸಹಾಯ ಬೇಕೋ ಅದನ್ನು ಯೆಹೋವನು ಕೊಟ್ಟಿದ್ದಾನೆ. ಉದಾಹರಣೆಗೆ, ಜೀವನ ಮತ್ತು ಸೇವೆ ಕೂಟದಲ್ಲಿ ನಾವು ಕಲಿಯುವ ವಿಷಯಗಳು ಆತ್ಮವಿಶ್ವಾಸದಿಂದ ಪುನರ್ಭೇಟಿಗಳನ್ನು ಮಾಡಲು ಮತ್ತು ಬೈಬಲ್‌ ಅಧ್ಯಯನಗಳನ್ನು ಆರಂಭಿಸಲು ಸಹಾಯ ಮಾಡುತ್ತವೆ.

9 ಹೊಸಬರು ನಮ್ಮ ಕೂಟಗಳಿಗೆ ಬಂದಾಗ ನಮ್ಮ ಮಕ್ಕಳು ಉತ್ತರ ಕೊಡುವುದನ್ನು ನೋಡಿ ಕೆಲವೊಮ್ಮೆ ಆಶ್ಚರ್ಯಪಡುತ್ತಾರೆ. ಆದ್ದರಿಂದ ನಿಮ್ಮ ಮಕ್ಕಳು ಸ್ವಂತ ಮಾತಿನಲ್ಲಿ ಉತ್ತರ ಕೊಡಲು ಕಲಿಸಿ. ಮಕ್ಕಳು ಉತ್ತರ ಹೇಳುವಾಗ ತಮ್ಮ ನಂಬಿಕೆಯನ್ನು ಸರಳವಾಗಿ, ಪ್ರಾಮಾಣಿಕವಾಗಿ ವ್ಯಕ್ತಪಡಿಸುವುದನ್ನು ನೋಡಿ ಕೆಲವರು ಸತ್ಯ ಕಲಿತಿದ್ದಾರೆ.—1 ಕೊರಿಂ. 14:25.

ಐಕ್ಯತೆಯನ್ನು ಹೆಚ್ಚಿಸಿ

10. ಕುಟುಂಬದಲ್ಲಿ ಐಕ್ಯತೆ ಹೆಚ್ಚಿಸಲು ಕುಟುಂಬ ಆರಾಧನೆ ಹೇಗೆ ಸಹಾಯ ಮಾಡುತ್ತದೆ?

10 ನಮ್ಮ ಬೆಳಕನ್ನು ಪ್ರಕಾಶಿಸುವ ಇನ್ನೊಂದು ವಿಧ ನಮ್ಮ ಕುಟುಂಬದಲ್ಲಿ ಮತ್ತು ಸಭೆಯಲ್ಲಿ ಐಕ್ಯವಾಗಿರಲು ಪ್ರಯತ್ನಿಸುವುದೇ ಆಗಿದೆ. ಉದಾಹರಣೆಗೆ, ನೀವು ಹೆತ್ತವರಾಗಿರುವುದಾದರೆ ಕುಟುಂಬ ಆರಾಧನೆಯನ್ನು ಕ್ರಮವಾಗಿ ಮಾಡಲು ಏರ್ಪಾಡು ಮಾಡಿ. ಅನೇಕ ಕುಟುಂಬಗಳಲ್ಲಿ JW ಪ್ರಸಾರವನ್ನು ಒಟ್ಟಿಗೆ ಕೂತು ನೋಡುತ್ತಾರೆ ಮತ್ತು ತಾವು ಕಲಿತದ್ದನ್ನು ಹೇಗೆ ಅನ್ವಯಿಸುವುದು ಎಂದು ನಂತರ ಚರ್ಚಿಸುತ್ತಾರೆ. ನೆನಪಿಡಿ ಚಿಕ್ಕ ಮಕ್ಕಳಿಗೆ ಅಗತ್ಯವಿರುವ ವಿಷಯಗಳು ಮತ್ತು ಯುವ ಪ್ರಾಯದವರಿಗೆ ಅಗತ್ಯವಿರುವ ವಿಷಯಗಳು ಬೇರೆ ಬೇರೆ ಆಗಿರುತ್ತವೆ. ನಿಮ್ಮ ಕುಟುಂಬದಲ್ಲಿರುವ ಪ್ರತಿಯೊಬ್ಬರಿಗೂ ಪ್ರಯೋಜನ ತರುವಂಥ ವಿಷಯಗಳನ್ನು ಕುಟುಂಬ ಆರಾಧನೆಯಲ್ಲಿ ಸೇರಿಸಿ.—ಕೀರ್ತ. 148:12, 13.

ವೃದ್ಧ ಸಹೋದರ ಸಹೋದರಿಯರ ಜೊತೆ ಸಮಯ ಕಳೆಯುವುದರಿಂದ ತುಂಬ ಪ್ರಯೋಜನ ಇದೆ (ಪ್ಯಾರ 11 ನೋಡಿ)

11-13. ಸಭೆಯಲ್ಲಿ ಐಕ್ಯತೆ ಹೆಚ್ಚಿಸಲು ನಾವೇನು ಮಾಡಬಹುದು?

11 ಯುವಜನರು ಸಭೆಯಲ್ಲಿ ಐಕ್ಯತೆಯನ್ನು ಹೆಚ್ಚಿಸಿ ಬೇರೆಯವರು ಸಹ ತಮ್ಮ ಬೆಳಕನ್ನು ಪ್ರಕಾಶಿಸಲು ಹೇಗೆ ಉತ್ತೇಜನ ಕೊಡಬಹುದು? ಒಂದು ವಿಧ ವೃದ್ಧ ಸಹೋದರ ಸಹೋದರಿಯರ ಸ್ನೇಹ ಮಾಡಿಕೊಳ್ಳುವುದೇ ಆಗಿದೆ. ಅನೇಕ ವರ್ಷಗಳಿಂದ ಯೆಹೋವನ ಸೇವೆ ಮಾಡುತ್ತಾ ಇರಲು ಅವರಿಗೆ ಯಾವುದು ಸಹಾಯ ಮಾಡಿತೆಂದು ಕೇಳಿ. ಅವರು ನಿಮಗೆ ಅಮೂಲ್ಯ ಪಾಠಗಳನ್ನು ಕಲಿಸಬಹುದು. ಹೀಗೆ ಅವರೂ ಉತ್ತೇಜನ ಪಡಕೊಂಡು ನಿಮ್ಮನ್ನೂ ಉತ್ತೇಜಿಸುತ್ತಾರೆ! ಸಭೆಯಲ್ಲಿರುವ ನಾವೆಲ್ಲರೂ ನಮ್ಮ ಸಭಾಗೃಹಕ್ಕೆ ಬರುವ ಹೊಸಬರನ್ನು ಪ್ರೀತಿಯಿಂದ ಸ್ವಾಗತಿಸಬೇಕು. ಅವರು ಬಂದಾಗ ನಗುಮುಖದಿಂದ ವಂದಿಸಿ, ಅವರಿಗೊಂದು ಸೀಟು ಹುಡುಕಿ ಕೊಡಿ ಮತ್ತು ಬೇರೆಯವರಿಗೆ ಅವರ ಪರಿಚಯ ಮಾಡಿಸಿ. ಹೊಸ ಜಾಗಕ್ಕೆ ಬಂದಿದ್ದೇವೆ ಅನ್ನುವ ಮುಜುಗರ ಅವರಿಗೆ ಆಗದಂತೆ ನೋಡಿಕೊಳ್ಳಿ.

12 ಕ್ಷೇತ್ರ ಸೇವಾ ಕೂಟವನ್ನು ನಡೆಸುವ ನೇಮಕ ನಿಮಗಿದ್ದರೆ ವೃದ್ಧ ಸಹೋದರರು ತಮ್ಮ ಬೆಳಕನ್ನು ಪ್ರಕಾಶಿಸಲು ಅವಕಾಶ ಮಾಡಿಕೊಡಿ. ಅವರಿಗೆ ಸೂಕ್ತವಾದ ಸೇವಾಕ್ಷೇತ್ರವನ್ನು ಕೊಡಿ. ಅವರ ಜೊತೆ ಸೇವೆ ಮಾಡಲು ಹೆಚ್ಚಾಗಿ ಯುವಜನರನ್ನು ಕಳುಹಿಸಿ. ವೃದ್ಧ ಸಹೋದರ ಸಹೋದರಿಯರಿಗೆ ಮತ್ತು ಅನಾರೋಗ್ಯದ ಸಮಸ್ಯೆ ಇರುವವರಿಗೆ ಹಿಂದೆ ಮಾಡಿದಷ್ಟು ಸೇವೆಯನ್ನು ಈಗ ಮಾಡಕ್ಕಾಗುತ್ತಿಲ್ಲ ಅನ್ನುವ ನಿರುತ್ಸಾಹ ಕಾಡುತ್ತದೆ. ನೀವು ಅವರಿಗೆ ಕಾಳಜಿ ತೋರಿಸಿದರೆ ಮತ್ತು ಅವರ ಸನ್ನಿವೇಶವನ್ನು ಅರ್ಥಮಾಡಿಕೊಂಡರೆ ಅವರಿಗೆ ತುಂಬ ಸಮಾಧಾನ ಆಗುತ್ತದೆ. ಅವರಿಗೆಷ್ಟೇ ವಯಸ್ಸಾಗಿರಲಿ ಅಥವಾ ಎಷ್ಟೇ ವರ್ಷಗಳಿಂದ ಸತ್ಯದಲ್ಲಿರಲಿ ಅವರು ಹುರುಪಿನಿಂದ ಸೇವೆ ಮಾಡಲು ನೀವು ತೋರಿಸುವ ಪ್ರೀತಿ ಮತ್ತು ಕಾಳಜಿ ತುಂಬ ಸಹಾಯ ಮಾಡುತ್ತದೆ.—ಯಾಜ. 19:32.

13 ಇಸ್ರಾಯೇಲ್ಯರು ಐಕ್ಯವಾಗಿ ಯೆಹೋವನನ್ನು ಆರಾಧಿಸುವುದರಲ್ಲಿ ಆನಂದಿಸಿದರು. “ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು!” ಎಂದು ಕೀರ್ತನೆಗಾರನು ಬರೆದನು. (ಕೀರ್ತನೆ 133:1, 2 ಓದಿ.) ಈ ಐಕ್ಯತೆಯನ್ನು ಆತನು ಅಭಿಷೇಕ ತೈಲಕ್ಕೆ ಹೋಲಿಸಿದನು. ಅದು ಚರ್ಮಕ್ಕೆ ಚೈತನ್ಯಕರವಾಗಿತ್ತು, ಒಳ್ಳೆ ಪರಿಮಳವನ್ನು ಕೊಡುತ್ತಿತ್ತು. ಅದೇ ರೀತಿಯಲ್ಲಿ ನಾವು ಸಹೋದರ ಸಹೋದರಿಯರೊಂದಿಗೆ ಪ್ರೀತಿಯಿಂದ, ದಯೆಯಿಂದ ನಡಕೊಂಡರೆ ಅವರಿಗೆ ಚೈತನ್ಯ ಸಿಗುತ್ತದೆ. ಇದರಿಂದಾಗಿ ಸಭೆಯಲ್ಲಿ ಐಕ್ಯತೆ ಇನ್ನೂ ಹೆಚ್ಚಾಗುತ್ತದೆ. ನಿಮ್ಮ ಸಭೆಯಲ್ಲಿರುವವರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಲು ನೀವು ಪ್ರಯತ್ನಿಸುತ್ತೀರಾ?—2 ಕೊರಿಂ. 6:11-13.

14. ನೀವು ನೆರೆಹೊರೆಯಲ್ಲಿ ನಿಮ್ಮ ಬೆಳಕನ್ನು ಹೇಗೆ ಪ್ರಕಾಶಿಸಬಹುದು?

14 ನಿಮ್ಮ ಬೆಳಕನ್ನು ನೆರೆಹೊರೆಯಲ್ಲಿಯೂ ಪ್ರಕಾಶಿಸಬಹುದು. ನೀವು ನಿಮ್ಮ ನೆರೆಯವರ ಹತ್ತಿರ ಪ್ರೀತಿಯಿಂದ ನಡಕೊಂಡರೆ ಅವರು ಯೆಹೋವನ ಬಗ್ಗೆ ಕಲಿಯಲು ಬಯಸಬಹುದು. ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನನ್ನ ಬಗ್ಗೆ ನಮ್ಮ ಅಕ್ಕಪಕ್ಕದ ಮನೆಯವರಿಗೆ ಯಾವ ಅಭಿಪ್ರಾಯ ಇದೆ? ಅಕ್ಕಪಕ್ಕದ ಮನೆಯವರಿಗೆ ಒಳ್ಳೆ ಅಭಿಪ್ರಾಯ ಬರುವ ತರ ನಾನು ನನ್ನ ಮನೆಯನ್ನು ಸ್ವಚ್ಛವಾಗಿ, ನೀಟಾಗಿ ಇಟ್ಟುಕೊಂಡಿದ್ದೇನಾ? ನಾನು ಅವರಿಗೆ ಸಹಾಯ ಮಾಡಲು ಸಿದ್ಧವಾಗಿರುತ್ತೇನಾ?’ ಬೇರೆ ಸಹೋದರ ಸಹೋದರಿಯರು ತಮ್ಮ ಒಳ್ಳೇತನದಿಂದ ಮತ್ತು ಉತ್ತಮ ಮಾದರಿಯಿಂದ ತಮ್ಮ ಸಂಬಂಧಿಕರು, ನೆರೆಯವರು, ಸಹೋದ್ಯೋಗಿಗಳು ಅಥವಾ ಸಹಪಾಠಿಗಳ ಮೇಲೆ ಯಾವ ಪ್ರಭಾವ ಬೀರಿದರು ಎಂದು ಕೇಳಿನೋಡಿ.—ಎಫೆ. 5:9.

ಸದಾ ಎಚ್ಚರವಾಗಿರಿ

15. ನಾವು ಯಾಕೆ ಸದಾ ಎಚ್ಚರವಾಗಿರಬೇಕು?

15 ನಮ್ಮ ಬೆಳಕು ಹೆಚ್ಚು ಪ್ರಕಾಶಮಾನವಾಗಿ ಇರಬೇಕೆಂದರೆ ನಾವು ಜೀವಿಸುತ್ತಿರುವ ಸಮಯದ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿರಬೇಕು. ಯೇಸು ತನ್ನ ಶಿಷ್ಯರಿಗೆ ಎಚ್ಚರವಾಗಿರಬೇಕು ಎಂದು ಅನೇಕ ಬಾರಿ ಹೇಳಿದನು. (ಮತ್ತಾ. 24:42; 25:13; 26:41) “ಮಹಾ ಸಂಕಟ” ಇನ್ನೂ ತುಂಬ ದೂರ ಇದೆ ಎಂದು ನಮಗನಿಸಿದರೆ ಯೆಹೋವನ ಬಗ್ಗೆ ಬೇರೆಯವರಿಗೆ ಕಲಿಸುವ ಪ್ರತಿಯೊಂದು ಅವಕಾಶವನ್ನು ಬಳಸಿಕೊಳ್ಳಬೇಕು ಎಂಬ ತುರ್ತುಪ್ರಜ್ಞೆ ನಮಗಿರುವುದಿಲ್ಲ. (ಮತ್ತಾ. 24:21) ನಮ್ಮ ಬೆಳಕು ಪ್ರಕಾಶಮಾನವಾಗಿರುವ ಬದಲು ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಕೊನೆಗೆ ಆರಿಹೋಗಲೂಬಹುದು.

16, 17. ಸದಾ ಎಚ್ಚರವಾಗಿರಲು ನೀವೇನು ಮಾಡಬಹುದು?

16 ಹಿಂದೆಂದಿಗಿಂತ ಇಂದು ನಾವು ತುಂಬ ಎಚ್ಚರವಾಗಿರಬೇಕು. ಲೋಕದ ಪರಿಸ್ಥಿತಿ ತೀರ ಕೆಳಮಟ್ಟಕ್ಕೆ ಇಳಿಯುತ್ತಾ ಹೋಗುತ್ತಿದೆ. ಆದರೆ ಯೆಹೋವನು ನಿಗದಿಪಡಿಸಿರುವ ಸಮಯಕ್ಕೆ ಅಂತ್ಯ ಬರುತ್ತದೆ ಎಂದು ನಮಗೆ ಗೊತ್ತು. (ಮತ್ತಾ. 24:42-44) ಅಲ್ಲಿಯವರೆಗೂ ನಾವು ತಾಳ್ಮೆಯಿಂದ ಇರಬೇಕು ಮತ್ತು ನಮ್ಮ ಗಮನ ಭವಿಷ್ಯದ ಮೇಲೆ ಇರಬೇಕು. ಬೈಬಲನ್ನು ಪ್ರತಿದಿನ ಓದಿ. ಯೆಹೋವನಿಗೆ ಪ್ರಾರ್ಥಿಸುವುದನ್ನು ಯಾವತ್ತಿಗೂ ನಿಲ್ಲಿಸಬೇಡಿ. (1 ಪೇತ್ರ 4:7) ಅನೇಕ ವರ್ಷಗಳಿಂದ ಯೆಹೋವನ ಸೇವೆ ಮಾಡುತ್ತಿರುವ ಸಹೋದರ ಸಹೋದರಿಯರ ಅನುಭವಗಳನ್ನು ಕೇಳಿ, ಓದಿ. ಉದಾಹರಣೆಗೆ 2012, ಏಪ್ರಿಲ್‌ 15​ರ ಕಾವಲಿನಬುರುಜು ಪುಟ 18-21​ರಲ್ಲಿರುವ “ಯೆಹೂದ್ಯನೊಬ್ಬನ ಸೆರಗನ್ನು ಎಪ್ಪತ್ತು ವರ್ಷಗಳಿಂದ ಹಿಡಿದುಕೊಂಡೇ ಇದ್ದೇನೆ” ಎಂಬ ಲೇಖನವನ್ನು ಓದಬಹುದು.

17 ಯೆಹೋವನ ಸೇವೆ ಮಾಡುವುದರಲ್ಲಿ ಕಾರ್ಯಮಗ್ನರಾಗಿರಿ. ಎಲ್ಲರಿಗೂ ಒಳ್ಳೇದನ್ನು ಮಾಡಿ ಮತ್ತು ಸಹೋದರ ಸಹೋದರಿಯರೊಟ್ಟಿಗೆ ಸಮಯ ಕಳೆಯಿರಿ. ಆಗ ನಿಮಗೆ ಸಂತೋಷ ಸಿಗುತ್ತದೆ ಮತ್ತು ದಿನಗಳು ಹೋಗುವುದೇ ಗೊತ್ತಾಗುವುದಿಲ್ಲ. (ಎಫೆ. 5:16) ಯೆಹೋವನ ಸೇವಕರು ಕಳೆದ ನೂರು ವರ್ಷಗಳಲ್ಲಿ ತುಂಬ ವಿಷಯಗಳನ್ನು ಸಾಧಿಸಿದ್ದಾರೆ. ಆದರೆ ನಾವು ಇನ್ನೂ ಹೆಚ್ಚು ಸಾಧಿಸುತ್ತಿದ್ದೇವೆ. ನಾವು ಊಹಿಸಕ್ಕಾಗದ ಮಟ್ಟಿಗೆ ಯೆಹೋವನ ಕೆಲಸ ನಡೆಯುತ್ತಿದೆ. ನಮ್ಮ ಬೆಳಕು ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತಿದೆ!

ನಾವು ಪರಿಪಾಲನಾ ಭೇಟಿಯಲ್ಲಿ ದೇವರ ವಿವೇಕದಿಂದ ಪ್ರಯೋಜನ ಪಡೆಯಬಹುದು (ಪ್ಯಾರ 18, 19 ನೋಡಿ)

18, 19. ಹುರುಪಿನಿಂದ ಯೆಹೋವನನ್ನು ಆರಾಧಿಸಲು ಹಿರಿಯರು ನಮಗೆ ಹೇಗೆ ಸಹಾಯ ಮಾಡುತ್ತಾರೆ ಅನ್ನುವುದಕ್ಕೆ ಒಂದು ಉದಾಹರಣೆ ಕೊಡಿ.

18 ನಾವು ಅಪರಿಪೂರ್ಣರಾಗಿದ್ದರೂ ಯೆಹೋವನು ನಮ್ಮ ಆರಾಧನೆಯನ್ನು ಸ್ವೀಕರಿಸುತ್ತಾನೆ. ನಮ್ಮ ಸಹಾಯಕ್ಕಾಗಿ ಆತನು ‘ಮನುಷ್ಯರಲ್ಲಿ ದಾನಗಳಾದ’ ಸಭಾ ಹಿರಿಯರನ್ನು ಕೊಟ್ಟಿದ್ದಾನೆ. (ಎಫೆಸ 4:8, 11, 12 ಓದಿ.) ಹಾಗಾಗಿ ಹಿರಿಯರು ನಿಮ್ಮನ್ನು ಭೇಟಿ ಮಾಡಲು ಬಂದಾಗ ಅವರಿಂದ ಪ್ರಯೋಜನ ಪಡಕೊಳ್ಳಿ. ಅವರ ವಿವೇಕ ಮತ್ತು ಸಲಹೆಯಿಂದ ನೀವು ತುಂಬ ವಿಷಯಗಳನ್ನು ಕಲಿಯಬಹುದು.

19 ಉದಾಹರಣೆಗೆ, ಇಂಗ್ಲೆಂಡಿನಲ್ಲಿರುವ ಒಬ್ಬ ದಂಪತಿಯ ಮಧ್ಯೆ ಹೊಂದಾಣಿಕೆ ಇಲ್ಲದೇ ಹೋಯಿತು. ಆಗ ಅವರು ಇಬ್ಬರು ಹಿರಿಯರ ಸಹಾಯ ಕೇಳಿದರು. ತನ್ನ ಗಂಡ ಆಧ್ಯಾತ್ಮಿಕ ವಿಷಯಗಳಲ್ಲಿ ಮುಂದಾಳತ್ವ ವಹಿಸುತ್ತಿಲ್ಲ ಎಂದು ಹೆಂಡತಿ ಹೇಳಿದಳು. ತಾನು ಒಳ್ಳೆ ಬೋಧಕನಲ್ಲ ಎಂಬ ಅನಿಸಿಕೆ ಇರುವುದರಿಂದ ಕುಟುಂಬ ಆರಾಧನೆಯನ್ನು ನಡೆಸುತ್ತಿಲ್ಲ ಎಂದು ಗಂಡ ಒಪ್ಪಿಕೊಂಡನು. ಆಗ ಹಿರಿಯರು ಆ ದಂಪತಿಗೆ ಯೇಸುವಿನ ಉದಾಹರಣೆಯನ್ನು ಕೊಟ್ಟು ಮಾತಾಡಿದರು. ಯೇಸು ತನ್ನ ಶಿಷ್ಯರ ಬಗ್ಗೆ ಕಾಳಜಿ ವಹಿಸುತ್ತಿದ್ದ ವಿಧವನ್ನು ಗಂಡನು ಅನುಕರಿಸಬೇಕೆಂದು ಹೇಳಿದರು. ಯೇಸುವಿನಂತೆ ಹೆಂಡತಿ ತನ್ನ ಗಂಡನೊಂದಿಗೆ ತಾಳ್ಮೆಯಿಂದ ನಡಕೊಳ್ಳಬೇಕೆಂದು ಪ್ರೋತ್ಸಾಹಿಸಿದರು. ಅವರ ಇಬ್ಬರು ಮಕ್ಕಳ ಜೊತೆ ಕುಟುಂಬ ಆರಾಧನೆ ಹೇಗೆ ಮಾಡಬಹುದೆಂದು ಕೆಲವು ಸಲಹೆಗಳನ್ನೂ ಕೊಟ್ಟರು. (ಎಫೆ. 5:21-29) ಶಿರಸ್ಸುತನವನ್ನು ಉತ್ತಮವಾಗಿ ನಿರ್ವಹಿಸುವುದಕ್ಕೆ ಗಂಡನು ತುಂಬ ಪ್ರಯತ್ನ ಮಾಡಿದನು. ಈ ಪ್ರಯತ್ನವನ್ನು ಬಿಡದಿರಲು ಮತ್ತು ಯೆಹೋವನ ಆತ್ಮದ ಮೇಲೆ ಆತುಕೊಳ್ಳಲು ಹಿರಿಯರು ಅವನಿಗೆ ಉತ್ತೇಜಿಸಿದರು. ಹಿರಿಯರು ತೋರಿಸಿದ ಪ್ರೀತಿ ಮತ್ತು ದಯೆಯಿಂದ ಆ ಕುಟುಂಬಕ್ಕೆ ತುಂಬ ಸಹಾಯ ಸಿಕ್ಕಿತು!

20. ನಿಮ್ಮ ಬೆಳಕನ್ನು ಪ್ರಕಾಶಿಸಿದಾಗ ಯಾವ ಫಲಿತಾಂಶ ಸಿಗುತ್ತದೆ?

20 “ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಮಾರ್ಗಗಳಲ್ಲಿ ನಡೆಯುವವನು ಧನ್ಯನು” ಅಂದರೆ ಸಂತೋಷಿತನು ಎಂದು ಕೀರ್ತನೆಗಾರನು ಹಾಡಿದನು. (ಕೀರ್ತ. 128:1) ನಿಮ್ಮ ಬೆಳಕನ್ನು ಪ್ರಕಾಶಿಸಿದಾಗ ನಿಮಗೆ ಸಂತೋಷವಾಗುತ್ತದೆ. ಹಾಗಾಗಿ ದೇವರ ಬಗ್ಗೆ ಬೇರೆಯವರಿಗೆ ಕಲಿಸಿ, ಕುಟುಂಬದಲ್ಲಿ-ಸಭೆಯಲ್ಲಿ ಐಕ್ಯತೆ ಇರಲು ನಿಮ್ಮ ಕೈಯಲ್ಲಾಗುವ ಎಲ್ಲ ಪ್ರಯತ್ನ ಮಾಡಿ ಮತ್ತು ಸದಾ ಎಚ್ಚರವಾಗಿರಿ. ನಿಮ್ಮ ಒಳ್ಳೇ ಮಾದರಿಯನ್ನು ಬೇರೆಯವರು ನೋಡಿ ಅವರೂ ನಮ್ಮ ತಂದೆಯಾದ ಯೆಹೋವನನ್ನು ಮಹಿಮೆಪಡಿಸಲು ಮನಸ್ಸು ಮಾಡಬಹುದು.—ಮತ್ತಾ. 5:16.