ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮನಸ್ಸಾಕ್ಷಿಗೆ ತರಬೇತಿ ಕೊಡಿ

ನಿಮ್ಮ ಮನಸ್ಸಾಕ್ಷಿಗೆ ತರಬೇತಿ ಕೊಡಿ

‘ನಿನ್ನ ಕಟ್ಟಳೆಗಳು ನನ್ನ ಧ್ಯಾನವಾಗಿವೆ.’—ಕೀರ್ತ. 119:99.

ಗೀತೆಗಳು: 61, 69

1. ನಮ್ಮನ್ನು ಪ್ರಾಣಿಗಳಿಗಿಂತ ಶ್ರೇಷ್ಠರನ್ನಾಗಿ ಮಾಡುವ ಒಂದು ವಿಷಯ ಯಾವುದು?

ಯೆಹೋವನು ನಮಗೆ ವಿಶೇಷವಾದ ಉಡುಗೊರೆಯೊಂದನ್ನು ಕೊಟ್ಟಿದ್ದಾನೆ. ಮನಸ್ಸಾಕ್ಷಿಯೇ ಆ ಉಡುಗೊರೆ. ಇದರಿಂದಾಗಿ ನಾವು ಪ್ರಾಣಿಗಳಿಗಿಂತ ಶ್ರೇಷ್ಠರಾಗಿದ್ದೇವೆ. ದೇವರು ಆದಾಮಹವ್ವರಿಗೆ ಮನಸ್ಸಾಕ್ಷಿಯನ್ನು ಕೊಟ್ಟಿದ್ದನು ಎಂದು ಹೇಗೆ ಹೇಳಬಹುದು? ಅವರು ದೇವರ ಮಾತನ್ನು ಮೀರಿ ತಪ್ಪು ಮಾಡಿದ ಮೇಲೆ ಅಡಗಿಕೊಂಡರು. ಯಾಕೆಂದರೆ ಅವರ ಮನಸ್ಸಾಕ್ಷಿ ಚುಚ್ಚುತ್ತಾ ಇತ್ತು.

2. ನಮ್ಮ ಮನಸ್ಸಾಕ್ಷಿ ಹೇಗೆ ಒಂದು ದಿಕ್ಸೂಚಿಯಂತಿದೆ? (ಲೇಖನದ ಆರಂಭದ ಚಿತ್ರ ನೋಡಿ.)

2 ಮನಸ್ಸಾಕ್ಷಿ ಅನ್ನುವುದು ನಮ್ಮೊಳಗಿರುವ ಒಂದು ಪ್ರಜ್ಞೆ. ಅದು ಯಾವುದು ಸರಿ ಯಾವುದು ತಪ್ಪು ಎಂದು ತಿಳಿಸುತ್ತದೆ. ಮನಸ್ಸಾಕ್ಷಿಗೆ ಸರಿಯಾದ ತರಬೇತಿ ಕೊಟ್ಟಿಲ್ಲದ ಒಬ್ಬ ವ್ಯಕ್ತಿಯು ದಿಕ್ಸೂಚಿ ಸರಿಯಾಗಿ ಕೆಲಸ ಮಾಡದ ಒಂದು ಹಡಗಿನಂತೆ ಇದ್ದಾನೆ. ಸಮುದ್ರದ ಅಲೆಗಳಿಂದಾಗಿ ಗಾಳಿಯಿಂದಾಗಿ ಆ ಹಡಗು ತಪ್ಪಾದ ದಿಕ್ಕಿಗೆ ಹೋಗಿಬಿಡಬಹುದು. ಆದರೆ ಸರಿಯಾಗಿ ಕೆಲಸ ಮಾಡುವ ದಿಕ್ಸೂಚಿ ಇದ್ದರೆ ಹಡಗನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ನಾವಿಕನಿಗೆ ಸಹಾಯವಾಗುತ್ತದೆ. ಅದೇ ರೀತಿ ನಾವು ನಮ್ಮ ಮನಸ್ಸಾಕ್ಷಿಗೆ ಸರಿಯಾದ ತರಬೇತಿ ಕೊಟ್ಟರೆ ಜೀವನದಲ್ಲಿ ಸರಿಯಾದ ದಾರಿಯಲ್ಲಿ ನಡೆಯಲು ಅದು ನಮಗೆ ಸಹಾಯ ಮಾಡುತ್ತದೆ.

3. ಮನಸ್ಸಾಕ್ಷಿಗೆ ಸರಿಯಾಗಿ ತರಬೇತಿ ಕೊಡದಿದ್ದರೆ ಏನಾಗಬಹುದು?

3 ಮನಸ್ಸಾಕ್ಷಿಗೆ ಸರಿಯಾಗಿ ತರಬೇತಿ ಕೊಡದಿದ್ದರೆ ನಾವು ತಪ್ಪು ಮಾಡಲು ಹೋದಾಗ ಅದು ಎಚ್ಚರಿಕೆ ಕೊಡುವುದಿಲ್ಲ. (1 ತಿಮೊ. 4:1, 2) ಜೊತೆಗೆ “ಕೆಟ್ಟದ್ದನ್ನು ಒಳ್ಳೇದೆಂದೂ” ಅದು ನಮ್ಮನ್ನು ನಂಬಿಸಿಬಿಡಬಹುದು. (ಯೆಶಾ. 5:20) ಯೇಸು ತನ್ನ ಹಿಂಬಾಲಕರಿಗೆ ಹೀಗೆ ಹೇಳಿದ್ದನು: “ನಿಮ್ಮನ್ನು ಕೊಲ್ಲುವ ಪ್ರತಿಯೊಬ್ಬನು ತಾನು ದೇವರಿಗೆ ಪವಿತ್ರ ಸೇವೆಯನ್ನು ಸಲ್ಲಿಸಿದ್ದೇನೆ ಎಂದು ನೆನಸುವ ಗಳಿಗೆಯು ಬರುತ್ತದೆ.” (ಯೋಹಾ. 16:2) ಶಿಷ್ಯನಾದ ಸ್ತೆಫನನನ್ನು ಕೊಂದವರಿಗೆ ಇದೇ ಭಾವನೆ ಇತ್ತು. (ಅ. ಕಾ. 6:8, 12; 7:54-60) ಇತಿಹಾಸದುದ್ದಕ್ಕೂ ಮತಾಂಧರು ಕ್ರೂರ ಅಪರಾಧಗಳನ್ನು, ಕೊಲೆಗಳನ್ನು ಸಹ ಮಾಡಿ ಅದನ್ನು ದೇವರಿಗೋಸ್ಕರ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ ಅವರು ಮಾಡಿದ್ದು ದೇವರ ನಿಯಮಗಳಿಗೆ ವಿರುದ್ಧವಾದ ವಿಷಯವಾಗಿತ್ತು. (ವಿಮೋ. 20:13) ಅವರ ಮನಸ್ಸಾಕ್ಷಿ ಅವರನ್ನು ಸರಿಯಾಗಿ ಮಾರ್ಗದರ್ಶಿಸಲಿಲ್ಲ ಅನ್ನುವುದು ಇದರಿಂದ ಸ್ಪಷ್ಟ!

4. ನಮ್ಮ ಮನಸ್ಸಾಕ್ಷಿ ಸರಿಯಾಗಿ ಕೆಲಸ ಮಾಡಬೇಕಾದರೆ ನಾವೇನು ಮಾಡಬೇಕು?

4 ನಮ್ಮ ಮನಸ್ಸಾಕ್ಷಿ ಸರಿಯಾಗಿ ಕೆಲಸ ಮಾಡಬೇಕಾದರೆ ನಾವೇನು ಮಾಡಬೇಕು? ಬೈಬಲಲ್ಲಿರುವ ನಿಯಮಗಳು ಮತ್ತು ತತ್ವಗಳು “ಬೋಧಿಸುವುದಕ್ಕೂ ಖಂಡಿಸುವುದಕ್ಕೂ ವಿಷಯಗಳನ್ನು ಸರಿಪಡಿಸುವುದಕ್ಕೂ ನೀತಿಯಲ್ಲಿ ಶಿಸ್ತುಗೊಳಿಸುವುದಕ್ಕೂ ಉಪಯುಕ್ತವಾಗಿದೆ.” (2 ತಿಮೊ. 3:16) ಆದ್ದರಿಂದ ನಾವು ಬೈಬಲನ್ನು ದಿನಾಲೂ ಓದಬೇಕು, ಓದಿದ ವಿಷಯವನ್ನು ಚೆನ್ನಾಗಿ ಧ್ಯಾನಿಸಬೇಕು ಮತ್ತು ಜೀವನದಲ್ಲಿ ಅನ್ವಯಿಸಿಕೊಳ್ಳಬೇಕು. ಹೀಗೆ ಮಾಡಿದರೆ ನಾವು ಯೆಹೋವನು ಹೇಗೆ ಯೋಚಿಸುತ್ತಾನೋ ಆ ರೀತಿಯಲ್ಲಿ ಹೆಚ್ಚೆಚ್ಚು ಯೋಚಿಸಲು ಕಲಿಯುತ್ತೇವೆ. ಆಗ ನಮ್ಮ ಮನಸ್ಸಾಕ್ಷಿ ನಮ್ಮನ್ನು ಸರಿಯಾಗಿ ಮಾರ್ಗದರ್ಶಿಸುತ್ತದೆ ಎಂಬ ಭರವಸೆಯಿಂದ ಇರಬಹುದು. ಯೆಹೋವನ ನಿಯಮಗಳನ್ನು ಮತ್ತು ತತ್ವಗಳನ್ನು ಬಳಸಿ ಹೇಗೆ ನಮ್ಮ ಮನಸ್ಸಾಕ್ಷಿಗೆ ತರಬೇತಿ ಕೊಡಬಹುದು ಎಂದು ನಾವೀಗ ಚರ್ಚಿಸೋಣ.

ದೇವರ ನಿಯಮಗಳಿಂದ ಸಿಗುವ ತರಬೇತಿ

5, 6. ದೇವರ ನಿಯಮಗಳು ನಮಗೆ ಹೇಗೆ ಸಹಾಯ ಮಾಡುತ್ತವೆ?

5 ನಮಗೆ ದೇವರ ನಿಯಮಗಳಿಂದ ಸಹಾಯ ಸಿಗಬೇಕಾದರೆ ಅವುಗಳನ್ನು ಓದಿದರೆ ಅಥವಾ ಅವುಗಳ ಬಗ್ಗೆ ತಿಳಿದುಕೊಂಡರೆ ಸಾಕಾಗಲ್ಲ. ಅವುಗಳನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕು. “ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೇದನ್ನು ಪ್ರೀತಿಸಿರಿ” ಎಂದು ಬೈಬಲ್‌ ಹೇಳುತ್ತದೆ. (ಆಮೋ. 5:15) ಇದನ್ನು ನಾವು ಹೇಗೆ ಮಾಡಬಹುದು? ನಾವು ಯೆಹೋವನ ದೃಷ್ಟಿಕೋನದಿಂದ ವಿಷಯಗಳನ್ನು ನೋಡಲು ಕಲಿಯಬೇಕು. ಒಂದು ಉದಾಹರಣೆ ಗಮನಿಸಿ. ನಿಮಗೆ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲ. ಅದಕ್ಕೆ ಡಾಕ್ಟರ್‌ ನಿಮಗೆ, ಆರೋಗ್ಯಕ್ಕೆ ಒಳ್ಳೇದಾದ ಆಹಾರ ತಿನ್ನಬೇಕು, ಚೆನ್ನಾಗಿ ವ್ಯಾಯಾಮ ಮಾಡಬೇಕು, ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಬೇಕು ಎಂದು ಹೇಳುತ್ತಾರೆ. ಅವರು ಹೇಳಿದ್ದನ್ನೆಲ್ಲ ನೀವು ಮಾಡುತ್ತೀರಿ. ಆಗ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ. ನಿಮಗೆ ಒಳ್ಳೇ ಸಲಹೆಗಳನ್ನು ಕೊಟ್ಟ ಆ ಡಾಕ್ಟರ್‌ ಬಗ್ಗೆ ಹೇಗನಿಸುತ್ತದೆ?

6 ಅದೇ ರೀತಿ, ನಮ್ಮ ಸೃಷ್ಟಿಕರ್ತನು ನಮಗೆ ನಿಯಮಗಳನ್ನು ಕೊಟ್ಟಿದ್ದಾನೆ. ಅವು ನಮ್ಮನ್ನು ಪಾಪದ ಕೆಟ್ಟ ಪರಿಣಾಮಗಳಿಂದ ಕಾಪಾಡಿ ಉತ್ತಮ ರೀತಿಯಲ್ಲಿ ಜೀವನ ಮಾಡಲು ಸಹಾಯ ಮಾಡುತ್ತವೆ. ಉದಾಹರಣೆಗೆ ಸುಳ್ಳು ಹೇಳಬಾರದು, ಮೋಸ, ಕಳ್ಳತನ, ಅನೈತಿಕತೆ ಮಾಡಬಾರದು, ಕ್ರೂರಿಗಳಾಗಿ ಇರಬಾರದು, ಮಾಟಮಂತ್ರ ಮಾಡಬಾರದು ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 6:16-19 ಓದಿ; ಪ್ರಕ. 21:8) ಯೆಹೋವನು ಹೇಳಿದಂತೆ ಮಾಡಿ ನಾವು ಒಳ್ಳೇ ಫಲಿತಾಂಶಗಳನ್ನು ಪಡೆದಾಗ ಆತನ ಮೇಲೆ ಮತ್ತು ಆತನ ನಿಯಮಗಳ ಮೇಲೆ ನಮಗೆ ಪ್ರೀತಿ ಹೆಚ್ಚಾಗುತ್ತದೆ.

7. ಬೈಬಲಿನಲ್ಲಿರುವ ಉದಾಹರಣೆಗಳು ನಮಗೆ ಹೇಗೆ ಸಹಾಯ ಮಾಡುತ್ತವೆ?

7 ನಾವು ದೇವರ ನಿಯಮಗಳನ್ನು ಮುರಿದು ಅದರಿಂದಾಗುವ ಕೆಟ್ಟ ಪರಿಣಾಮಗಳನ್ನು ಅನುಭವಿಸಿದ ಮೇಲೆನೇ ಯಾವುದು ಸರಿ ಯಾವುದು ತಪ್ಪು ಎಂದು ತಿಳಿದುಕೊಳ್ಳಬೇಕಾಗಿಲ್ಲ. ಬದಲಿಗೆ ಇದನ್ನು ನಾವು ಹಿಂದಿನ ಕಾಲದಲ್ಲಿ ಕೆಲವರು ಮಾಡಿದ ತಪ್ಪುಗಳಿಂದ ಕಲಿಯಬಹುದು. ಆ ಉದಾಹರಣೆಗಳು ಬೈಬಲಿನಲ್ಲಿವೆ. ಜ್ಞಾನೋಕ್ತಿ 9:9 ಹೀಗೆ ಹೇಳುತ್ತದೆ: “ಜ್ಞಾನಿಗೆ ಉಪದೇಶಿಸಿದರೆ ಹೆಚ್ಚು ಜ್ಞಾನವನ್ನು ಹೊಂದುವನು.” ಈ ಜ್ಞಾನ ನಮಗೆ ದೇವರಿಂದ ಸಿಗುತ್ತದೆ. ಇಷ್ಟು ಉತ್ತಮವಾದ ಉಪದೇಶವನ್ನು ನಮಗೆ ಬೇರೆ ಯಾರೂ ಕೊಡಕ್ಕಾಗಲ್ಲ. ಉದಾಹರಣೆಗೆ, ದಾವೀದನು ಯೆಹೋವನ ನಿಯಮವನ್ನು ಮುರಿದು ತಪ್ಪುಮಾಡಿದ ಮೇಲೆ ಎಷ್ಟು ತೊಂದರೆಗಳನ್ನು ಅನುಭವಿಸಿದನು ಎಂದು ಯೋಚಿಸಿ. (2 ಸಮು. 12:7-14) ನೀವು ಆ ವೃತ್ತಾಂತವನ್ನು ಓದುವಾಗ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ: ‘ಈ ಎಲ್ಲಾ ತೊಂದರೆಗಳನ್ನು ತಂದುಕೊಳ್ಳದಿರಲು ದಾವೀದನು ಏನು ಮಾಡಬಹುದಿತ್ತು? ದಾವೀದನು ಎದುರಿಸಿದಂಥ ಪ್ರಲೋಭನೆ ನನಗೆ ಎದುರಾದರೆ ನಾನೇನು ಮಾಡುತ್ತೇನೆ? ದಾವೀದನ ತರ ಪಾಪ ಮಾಡುತ್ತೇನಾ ಅಥವಾ ಯೋಸೇಫನ ತರ ಓಡಿಹೋಗುತ್ತೇನಾ?’ (ಆದಿ. 39:11-15) ಪಾಪದ ಪರಿಣಾಮಗಳ ಬಗ್ಗೆ ನಾವು ಗಾಢವಾಗಿ ಯೋಚಿಸುವುದಾದರೆ ‘ಕೆಟ್ಟದ್ದನ್ನು ಹೆಚ್ಚೆಚ್ಚು ದ್ವೇಷಿಸಲು’ ಕಲಿಯುತ್ತೇವೆ.

8, 9. (ಎ) ಮನಸ್ಸಾಕ್ಷಿ ನಮಗೆ ಹೇಗೆ ಸಹಾಯ ಮಾಡುತ್ತದೆ? (ಬಿ) ನಮ್ಮ ಮನಸ್ಸಾಕ್ಷಿ ಮತ್ತು ಯೆಹೋವನ ತತ್ವಗಳು ಒಟ್ಟಿಗೆ ಸೇರಿ ಹೇಗೆ ಕೆಲಸ ಮಾಡುತ್ತದೆ?

8 ದೇವರು ದ್ವೇಷಿಸುವ ವಿಷಯಗಳಿಂದ ನಾವು ದೂರ ಇರಬಹುದು. ಆದರೆ ಒಂದು ವಿಷಯದ ಬಗ್ಗೆ ಬೈಬಲ್‌ ಏನೂ ಹೇಳುವುದಿಲ್ಲವಾದರೆ ನಾವೇನು ಮಾಡುತ್ತೇವೆ? ಇಂಥ ಸನ್ನಿವೇಶದಲ್ಲಿ ನಾವೇನು ಮಾಡಬೇಕೆಂದು ದೇವರು ಬಯಸುತ್ತಾನೆ ಎಂದು ಹೇಗೆ ತಿಳಿದುಕೊಳ್ಳಬಹುದು? ಬೈಬಲಿಗೆ ತಕ್ಕಂತೆ ನಮ್ಮ ಮನಸ್ಸಾಕ್ಷಿಗೆ ತರಬೇತಿ ಕೊಟ್ಟಿರುವುದಾದರೆ ನಿಯಮಗಳು ಇಲ್ಲದಿದ್ದಾಗಲೂ ಸರಿಯಾದ ನಿರ್ಧಾರಗಳನ್ನು ಮಾಡುತ್ತೇವೆ.

9 ಯೆಹೋವನು ನಮ್ಮನ್ನು ಪ್ರೀತಿಸುವುದರಿಂದ ನಮ್ಮ ಮನಸ್ಸಾಕ್ಷಿಯನ್ನು ಮಾರ್ಗದರ್ಶಿಸಲು ಬೇಕಾದ ತತ್ವಗಳನ್ನು ಕೊಟ್ಟಿದ್ದಾನೆ. “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ” ಎಂದು ಆತನು ಹೇಳಿದ್ದಾನೆ. (ಯೆಶಾ. 48:17, 18) ಬೈಬಲಿನಲ್ಲಿರುವ ತತ್ವಗಳ ಬಗ್ಗೆ ಗಾಢವಾಗಿ ಯೋಚಿಸುವುದಾದರೆ ಅವು ನಮ್ಮ ಮನಮುಟ್ಟುತ್ತವೆ. ಆಗ ನಮ್ಮ ಮನಸ್ಸಾಕ್ಷಿಯನ್ನು ಸರಿಪಡಿಸಿಕೊಳ್ಳುತ್ತೇವೆ. ಹೀಗೆ ಮಾಡಿದಾಗ ನಾವು ಮಾಡುವ ತೀರ್ಮಾನಗಳು ಸರಿಯಾಗಿರುತ್ತವೆ.

ದೇವರ ತತ್ವಗಳಿಂದ ಸಿಗುವ ಮಾರ್ಗದರ್ಶನ

10. (ಎ) ತತ್ವ ಅಂದರೇನು? (ಬಿ) ಯೇಸು ತತ್ವಗಳನ್ನು ಯಾಕೆ ಬಳಸಿದನು?

10 ತತ್ವಗಳು ಮೂಲಭೂತ ಸತ್ಯಗಳಾಗಿವೆ. ಅವು ನಮ್ಮನ್ನು ಸರಿಯಾಗಿ ಯೋಚಿಸುವಂತೆ ಮಾಡಿ ಒಳ್ಳೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತವೆ. ಯೆಹೋವನ ತತ್ವಗಳನ್ನು ತಿಳಿದುಕೊಂಡರೆ ಆತನು ಹೇಗೆ ಯೋಚಿಸುತ್ತಾನೆ ಮತ್ತು ಯಾಕೆ ಕೆಲವೊಂದು ನಿಯಮಗಳನ್ನು ಕೊಟ್ಟಿದ್ದಾನೆ ಎಂದು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಯೇಸು ತನ್ನ ಶಿಷ್ಯರಿಗೆ ಕಲಿಸುವಾಗ ಕೆಲವು ತತ್ವಗಳನ್ನು ಹೇಳಿದನು. ಈ ತತ್ವಗಳ ಮೂಲಕ ನಮ್ಮ ಮನೋಭಾವ ಮತ್ತು ಕ್ರಿಯೆಗಳಿಗೆ ತಕ್ಕ ಫಲಿತಾಂಶಗಳನ್ನು ಅನುಭವಿಸಬೇಕಾಗುತ್ತದೆ ಎಂದು ಆತನು ಅರ್ಥಮಾಡಿಸಿದನು. ಉದಾಹರಣೆಗೆ, ಕೋಪ ಹಿಂಸೆಗೆ ನಡೆಸುತ್ತದೆ, ಅನೈತಿಕ ಯೋಚನೆಗಳು ವ್ಯಭಿಚಾರಕ್ಕೆ ನಡೆಸುತ್ತವೆ ಎಂದು ಆತನು ಕಲಿಸಿದನು. (ಮತ್ತಾ. 5:21, 22, 27, 28) ಯೆಹೋವನ ತತ್ವಗಳು ನಮ್ಮನ್ನು ಮಾರ್ಗದರ್ಶಿಸಿದರೆ ನಮ್ಮ ಮನಸ್ಸಾಕ್ಷಿಗೆ ಒಳ್ಳೇ ತರಬೇತಿ ಸಿಗುತ್ತದೆ ಮತ್ತು ನಾವು ದೇವರಿಗೆ ಮಹಿಮೆ ತರುವಂಥ ನಿರ್ಣಯಗಳನ್ನು ಮಾಡುತ್ತೇವೆ.—1 ಕೊರಿಂ. 10:31.

ಪ್ರೌಢ ಕ್ರೈಸ್ತರು ಬೇರೆಯವರ ಮನಸ್ಸಾಕ್ಷಿಯನ್ನು ಗೌರವಿಸುತ್ತಾರೆ (ಪ್ಯಾರ 11, 12 ನೋಡಿ)

11. ಎಲ್ಲರ ಮನಸ್ಸಾಕ್ಷಿ ಒಂದೇ ತರ ಕೆಲಸಮಾಡಲ್ಲ ಅನ್ನುವುದಕ್ಕೆ ಒಂದು ಉದಾಹರಣೆ ಕೊಡಿ.

11 ಕ್ರೈಸ್ತರು ಬೈಬಲಿಗೆ ತಕ್ಕಂತೆ ತಮ್ಮ ಮನಸ್ಸಾಕ್ಷಿಗೆ ತರಬೇತಿ ಕೊಟ್ಟಿದ್ದರೂ ಕೆಲವು ವಿಷಯಗಳಲ್ಲಿ ಅವರು ಮಾಡುವ ತೀರ್ಮಾನಗಳು ಬೇರೆ ಬೇರೆ ಆಗಿರುತ್ತವೆ. ಮದ್ಯ ಕುಡಿಯಬೇಕಾ ಬೇಡವಾ ಅನ್ನುವ ಉದಾಹರಣೆಯನ್ನು ತೆಗೆದುಕೊಳ್ಳಿ. ಮದ್ಯ ಕುಡಿಯುವುದು ತಪ್ಪು ಎಂದು ಬೈಬಲ್‌ ಹೇಳುವುದಿಲ್ಲ. ಆದರೆ ತುಂಬ ಕುಡಿಯುವುದರ ಬಗ್ಗೆ ಮತ್ತು ಕುಡಿಕತನದ ಬಗ್ಗೆ ಬೈಬಲ್‌ ಎಚ್ಚರಿಸುತ್ತದೆ. (ಜ್ಞಾನೋ. 20:1; 1 ತಿಮೊ. 3:8) ಇದರರ್ಥ ಕ್ರೈಸ್ತನೊಬ್ಬನು ಅತಿಯಾಗಿ ಕುಡಿಯುವುದಿಲ್ಲ ಎಂದಮಾತ್ರಕ್ಕೆ ಬೇರೆ ಯಾವುದರ ಬಗ್ಗೆಯೂ ಚಿಂತೆ ಮಾಡಬೇಕಾಗಿಲ್ಲ ಅಂತನಾ? ಇಲ್ಲ. ಕುಡಿಯಲು ಅವನ ಮನಸ್ಸಾಕ್ಷಿ ಒಪ್ಪಿದರೂ ಬೇರೆಯವರ ಮನಸ್ಸಾಕ್ಷಿಗೆ ಹೇಗನಿಸುತ್ತದೆ ಎಂದು ಅವನು ಯೋಚಿಸುವ ಅಗತ್ಯವಿದೆ.

12. ಬೇರೆಯವರ ಮನಸ್ಸಾಕ್ಷಿಯನ್ನು ಗೌರವಿಸಲು ರೋಮನ್ನರಿಗೆ 14:21 ನಮಗೆ ಹೇಗೆ ಸಹಾಯ ಮಾಡುತ್ತದೆ?

12 ನಾವು ಬೇರೆಯವರ ಮನಸ್ಸಾಕ್ಷಿಯನ್ನು ಗೌರವಿಸಬೇಕು ಎಂದು ಪೌಲ ತೋರಿಸಿಕೊಟ್ಟನು. ಅವನು ಬರೆದದ್ದು: “ಮಾಂಸಭಕ್ಷಣೆಯಾಗಲಿ ದ್ರಾಕ್ಷಾಮದ್ಯ ಸೇವನೆಯಾಗಲಿ ಅಥವಾ ಇನ್ನಾವುದೇ ಆಗಲಿ ನಿನ್ನ ಸಹೋದರನನ್ನು ಎಡವುವಂತೆ ಮಾಡುವುದಾದರೆ ಅದನ್ನು ಮಾಡದಿರುವುದೇ ಒಳ್ಳೇದು.” (ರೋಮ. 14:21) ಆದ್ದರಿಂದ ನಮಗೆ ಕುಡಿಯುವ ಹಕ್ಕಿದ್ದರೂ ನಾವು ಕುಡಿಯುವುದು ಒಬ್ಬ ಕ್ರೈಸ್ತನನ್ನು ಎಡವಿಸುವುದಾದರೆ ಅದನ್ನು ತ್ಯಾಗ ಮಾಡಲು ನಾವು ಸಿದ್ಧವಾಗಿರಬೇಕು. ಬಹುಶಃ ಸತ್ಯ ಕಲಿಯುವ ಮುಂಚೆ ಒಬ್ಬ ವ್ಯಕ್ತಿಗೆ ಕುಡಿಯುವ ಚಟ ಇದ್ದಿರಬಹುದು. ಆದ್ದರಿಂದ ಕುಡಿಯಲೇಬಾರದು ಎಂದು ಅವರು ಈಗ ತೀರ್ಮಾನ ಮಾಡಿರಬಹುದು. ಅವರು ಹಳೇ ಚಟವನ್ನು ಪುನಃ ಆರಂಭಿಸುವುದಕ್ಕೆ ನಾವು ಕಾರಣ ಆಗಬಾರದು. (1 ಕೊರಿಂ. 6:9, 10) ಅವರನ್ನು ನಮ್ಮ ಮನೆಗೆ ಕರೆದಿರುವುದಾದರೆ ಕುಡಿಯಲು ಒತ್ತಾಯಿಸಬಾರದು!

13. ಜನರು ಸುವಾರ್ತೆಯನ್ನು ಸ್ವೀಕರಿಸಲಿಕ್ಕಾಗಿ ತಿಮೊಥೆಯನು ಏನು ಮಾಡಿದನು?

13 ತಿಮೊಥೆಯನು 20​ರ ಆಸುಪಾಸಿನಲ್ಲಿದ್ದಾಗ ಅವನಿಗೆ ಸುನ್ನತಿ ಮಾಡಲಾಯಿತು. ಅದರಿಂದ ತುಂಬ ನೋವಾಗುತ್ತದೆ ಎಂದು ಗೊತ್ತಿದ್ದರೂ ಅವನು ಒಪ್ಪಿಕೊಂಡನು. ಯಾಕೆಂದರೆ ಅವನು ಯಾರಿಗೆ ಸಾರಬೇಕಿತ್ತೋ ಆ ಯೆಹೂದ್ಯರು ಸುನ್ನತಿಗೆ ತುಂಬ ಪ್ರಾಮುಖ್ಯತೆ ಕೊಡುತ್ತಿದ್ದರು. ಪೌಲನಂತೆ ಅವನು ಕೂಡ ಯಾರೂ ತನ್ನಿಂದಾಗಿ ಎಡವಬಾರದೆಂದು ಯೋಚಿಸಿದನು. (ಅ. ಕಾ. 16:3; 1 ಕೊರಿಂ. 9:19-23) ನೀವು ಕೂಡ ಬೇರೆಯವರಿಗೋಸ್ಕರ ತ್ಯಾಗ ಮಾಡಲು ಸಿದ್ಧರಿದ್ದೀರಾ?

“ಪ್ರೌಢತೆಯ ಕಡೆಗೆ ಮುಂದೊತ್ತೋಣ”

14, 15. (ಎ) ಪ್ರೌಢರಾಗಲು ನಾವೇನು ಮಾಡಬೇಕು? (ಬಿ) ಪ್ರೌಢ ಕ್ರೈಸ್ತರು ಬೇರೆಯವರ ಜೊತೆ ಹೇಗೆ ನಡಕೊಳ್ಳುತ್ತಾರೆ?

14 ನಾವೆಲ್ಲರೂ “ಕ್ರಿಸ್ತನ ಕುರಿತಾದ ಪ್ರಾಥಮಿಕ ಸಿದ್ಧಾಂತವನ್ನು” ತಿಳಿದುಕೊಂಡ ಮೇಲೆ ‘ಪ್ರೌಢತೆಯ ಕಡೆಗೆ ಮುಂದೊತ್ತಬೇಕು.’ (ಇಬ್ರಿ. 6:1) ನಾವು ಸತ್ಯಕ್ಕೆ ಬಂದು ತುಂಬ ವರ್ಷಗಳಾಗಿವೆ ಎಂದಮಾತ್ರಕ್ಕೆ ಪ್ರೌಢ ಕ್ರೈಸ್ತರಾಗಿ ಬಿಡುವುದಿಲ್ಲ. ಪ್ರೌಢರಾಗಲು ನಾವು ಕೆಲವೊಂದು ವಿಷಯಗಳನ್ನು ಮಾಡಬೇಕು. ನಮ್ಮ ಜ್ಞಾನ ಮತ್ತು ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ ಇರಬೇಕು. ಅದಕ್ಕಾಗಿ ಬೈಬಲನ್ನು ದಿನಾಲೂ ಓದಬೇಕು. (ಕೀರ್ತ. 1:1-3) ದಿನಾ ಬೈಬಲ್‌ ಓದುತ್ತಾ ಹೋದಂತೆ ಯೆಹೋವನ ನಿಯಮಗಳನ್ನು ಮತ್ತು ತತ್ವಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

15 ಕ್ರೈಸ್ತರಿಗೆ ಅತಿ ಮುಖ್ಯವಾದ ನಿಯಮ ಯಾವುದು? ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬ ನಿಯಮ. ಯೇಸು ತನ್ನ ಶಿಷ್ಯರಿಗೆ “ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು” ಎಂದು ಹೇಳಿದನು. (ಯೋಹಾ. 13:35) ಯಾಕೋಬನು ಪ್ರೀತಿಯನ್ನು “ರಾಜಯೋಗ್ಯ ಆಜ್ಞೆ” ಎಂದು ಕರೆದನು. (ಯಾಕೋ. 2:8) ಪೌಲನು ಅದನ್ನು “ಧರ್ಮಶಾಸ್ತ್ರದ ನೆರವೇರಿಕೆಯಾಗಿದೆ” ಎಂದು ಹೇಳಿದನು. (ರೋಮ. 13:10) ಪ್ರೀತಿ ತುಂಬ ಮುಖ್ಯ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಯಾಕೆಂದರೆ “ದೇವರು ಪ್ರೀತಿಯಾಗಿದ್ದಾನೆ” ಎಂದು ಬೈಬಲೇ ಹೇಳುತ್ತದೆ. (1 ಯೋಹಾ. 4:8) ದೇವರಿಗೆ ಪ್ರೀತಿ ಎನ್ನುವುದು ಬರೀ ಒಂದು ಭಾವನೆ ಅಲ್ಲ. ಅದನ್ನು ತನ್ನ ಕ್ರಿಯೆಗಳಲ್ಲಿ ತೋರಿಸುತ್ತಾನೆ. ಯೋಹಾನನು ಬರೆದದ್ದು: “ನಾವು ದೇವರ ಏಕೈಕಜಾತ ಪುತ್ರನ ಮೂಲಕ ಜೀವವನ್ನು ಪಡೆದುಕೊಳ್ಳಸಾಧ್ಯವಾಗುವಂತೆ ಆತನು ಅವನನ್ನು ಲೋಕಕ್ಕೆ ಕಳುಹಿಸಿಕೊಟ್ಟದ್ದರಿಂದ ದೇವರ ಪ್ರೀತಿಯು ನಮ್ಮ ವಿಷಯದಲ್ಲಿ ಪ್ರಕಟವಾಯಿತು.” (1 ಯೋಹಾ. 4:9) ಯೆಹೋವನನ್ನು, ಯೇಸುವನ್ನು, ನಮ್ಮ ಸಹೋದರರನ್ನು ಮತ್ತು ಬೇರೆ ಜನರನ್ನು ಪ್ರೀತಿಸುವ ಮೂಲಕ ನಾವು ಪ್ರೌಢ ಕ್ರೈಸ್ತರು ಎಂದು ತೋರಿಸಿಕೊಡುತ್ತೇವೆ.—ಮತ್ತಾ. 22:37-39.

ಬೈಬಲ್‌ ತತ್ವಗಳನ್ನು ಅನ್ವಯಿಸಲು ಕಲಿಯುವಾಗ ಮನಸ್ಸಾಕ್ಷಿಗೆ ಸಿಗುವ ತರಬೇತಿಯಿಂದ ಅದರ ಮೇಲೆ ನಂಬಿಕೆ ಹೆಚ್ಚಾಗುತ್ತದೆ (ಪ್ಯಾರ 16 ನೋಡಿ)

16. ನಾವು ಪ್ರೌಢ ಕ್ರೈಸ್ತರಾಗುತ್ತಾ ಹೋದ ಹಾಗೆ ಬೈಬಲ್‌ ತತ್ವಗಳಿಗೆ ಯಾಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇವೆ?

16 ನಾವು ಪ್ರೌಢ ಕ್ರೈಸ್ತರಾಗುತ್ತಾ ಹೋದ ಹಾಗೆ ಬೈಬಲ್‌ ತತ್ವಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇವೆ. ನಿಯಮ ಸಾಮಾನ್ಯವಾಗಿ ಒಂದು ನಿರ್ದಿಷ್ಟ ಸನ್ನಿವೇಶಕ್ಕೆ ಅನ್ವಯ ಆಗುತ್ತದೆ, ಆದರೆ ತತ್ವ ಬೇರೆ ಬೇರೆ ಸನ್ನಿವೇಶಗಳಿಗೆ ಅನ್ವಯವಾಗುತ್ತದೆ. ಉದಾಹರಣೆಗೆ, ಒಬ್ಬ ಚಿಕ್ಕ ಹುಡುಗನಿಗೆ ಕೆಟ್ಟವರ ಜೊತೆ ಸ್ನೇಹ ಮಾಡುವುದರಿಂದ ಎಷ್ಟು ಅಪಾಯ ಇದೆ ಅನ್ನೋ ವಿಷಯ ಅರ್ಥವಾಗಲ್ಲ. ಹಾಗಾಗಿ ಹೆತ್ತವರು ಅವನಿಗೆ ಕೆಲವು ನಿಯಮಗಳನ್ನು ಮಾಡಬೇಕಾಗುತ್ತದೆ. (1 ಕೊರಿಂ. 15:33) ಆದರೆ ಅವನು ಬೆಳೆದು ದೊಡ್ಡವನಾದಾಗ ಬೈಬಲ್‌ ತತ್ವಗಳನ್ನು ಹೇಗೆ ಅನ್ವಯಿಸಿಕೊಳ್ಳುವುದು ಎಂದು ಅರ್ಥಮಾಡಿಕೊಳ್ಳುತ್ತಾನೆ. ಆಗ ಅವನು ಒಳ್ಳೇ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. (1 ಕೊರಿಂಥ 13:11; 14:20 ಓದಿ.) ನಾವು ಬೈಬಲ್‌ ತತ್ವಗಳನ್ನು ಹೇಗೆ ಅನ್ವಯಿಸಿಕೊಳ್ಳಬೇಕೆಂದು ಕಲಿಯುತ್ತಾ ಹೋದಂತೆ ನಮ್ಮ ಮನಸ್ಸಾಕ್ಷಿಗೆ ಬೇಕಾದ ತರಬೇತಿ ಸಿಗುತ್ತದೆ. ಇದರಿಂದ ನಮ್ಮ ಮನಸ್ಸಾಕ್ಷಿಯ ಮೇಲೆ ನಮ್ಮ ನಂಬಿಕೆ ಹೆಚ್ಚಾಗುತ್ತದೆ. ಯಾವುದೇ ಸನ್ನಿವೇಶದಲ್ಲಿ ನಾವೇನು ಮಾಡಬೇಕೆಂದು ದೇವರು ಬಯಸುತ್ತಾನೆ ಅನ್ನುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇವೆ.

17. ಒಳ್ಳೇ ತೀರ್ಮಾನಗಳನ್ನು ಮಾಡಲು ಬೇಕಾದ ಎಲ್ಲವೂ ನಮ್ಮ ಹತ್ತಿರ ಇದೆ ಎಂದು ಹೇಗೆ ಹೇಳಬಹುದು?

17 ಹಾಗಾದರೆ ಯೆಹೋವನಿಗೆ ಇಷ್ಟವಾಗುವ ತೀರ್ಮಾನಗಳನ್ನು ಮಾಡಲು ಬೇಕಾದ ಎಲ್ಲವೂ ನಮ್ಮ ಹತ್ತಿರ ಇದೆಯಾ? ಇದೆ. ಬೈಬಲಲ್ಲಿರುವ ನಿಯಮಗಳು ಮತ್ತು ತತ್ವಗಳು ನಮ್ಮನ್ನು ‘ಪೂರ್ಣ ಸಮರ್ಥರಾಗಿ ಸಕಲ ಸತ್ಕಾರ್ಯಗಳಿಗೆ ಸಂಪೂರ್ಣವಾಗಿ ಸನ್ನದ್ಧರನ್ನಾಗಿ’ ಮಾಡುತ್ತವೆ. (2 ತಿಮೊ. 3:16, 17) ಯೆಹೋವನು ಹೇಗೆ ಯೋಚಿಸುತ್ತಾನೆ ಎಂದು ಅರ್ಥಮಾಡಿಕೊಳ್ಳಲು ಬೈಬಲ್‌ ತತ್ವಗಳು ನಮಗೆ ಸಹಾಯ ಮಾಡುತ್ತವೆ. ಆದರೆ ಆ ತತ್ವಗಳನ್ನು ಕಂಡುಹಿಡಿಯುವುದು ಅಷ್ಟು ಸುಲಭವಲ್ಲ. (ಎಫೆ. 5:17) ಅದಕ್ಕಾಗಿ ವಾಚ್‌ ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌, ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ, ವಾಚ್‌ಟವರ್‌ ಲೈಬ್ರರಿ, ವಾಚ್‌ಟವರ್‌ ಆನ್‌ಲೈನ್‌ ಲೈಬ್ರರಿ ಮತ್ತು JW ಲೈಬ್ರರಿ ಆ್ಯಪ್‌ ಇದೆ. ಈ ಸಾಧನಗಳನ್ನು ಬಳಸಿ ನಮ್ಮ ವೈಯಕ್ತಿಕ ಮತ್ತು ಕುಟುಂಬ ಅಧ್ಯಯನ ಮಾಡಿದರೆ ಪ್ರಯೋಜನ ಪಡೆಯುತ್ತೇವೆ.

ತರಬೇತಿ ಪಡೆದ ಮನಸ್ಸಾಕ್ಷಿ ಆಶೀರ್ವಾದಗಳನ್ನು ತರುತ್ತದೆ

18. ಯೆಹೋವನ ನಿಯಮಗಳನ್ನು, ತತ್ವಗಳನ್ನು ನಮ್ಮ ಜೀವನದಲ್ಲಿ ಅನ್ವಯಿಸಿಕೊಂಡರೆ ಯಾವ ಆಶೀರ್ವಾದಗಳು ಸಿಗುತ್ತವೆ?

18 ಯೆಹೋವನ ನಿಯಮಗಳನ್ನು ಮತ್ತು ತತ್ವಗಳನ್ನು ಅನ್ವಯಿಸಿಕೊಂಡರೆ ನಮಗೆ ತುಂಬ ಆಶೀರ್ವಾದಗಳು ಸಿಗುತ್ತವೆ. ಕೀರ್ತನೆ 119:97-100 ಹೀಗೆ ಹೇಳುತ್ತದೆ: “ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ. ನಿನ್ನ ಆಜ್ಞೆಗಳ ಮೂಲಕ ನನ್ನ ವೈರಿಗಳಿಗಿಂತ ಬುದ್ಧಿವಂತನಾಗಿದ್ದೇನೆ; ಸದಾಕಾಲವೂ ಅವೇ ನನಗಿವೆ. ನಿನ್ನ ಕಟ್ಟಳೆಗಳು ನನ್ನ ಧ್ಯಾನವಾಗಿರುವದರಿಂದ ನನ್ನ ಉಪಾಧ್ಯಾಯರಿಗಿಂತ ಜ್ಞಾನಿಯಾಗಿದ್ದೇನೆ. ನಿನ್ನ ನೇಮಗಳನ್ನು ಕೈಕೊಂಡಿರುವದರಿಂದ ಹಿರಿಯರಿಗಿಂತ ವಿವೇಕಿಯಾಗಿದ್ದೇನೆ.” ನಾವು ದೇವರ ನಿಯಮಗಳ ಬಗ್ಗೆ ಮತ್ತು ತತ್ವಗಳ ಬಗ್ಗೆ ಗಾಢವಾಗಿ ಯೋಚಿಸಿದರೆ ಜ್ಞಾನದಿಂದ, ವಿವೇಕದಿಂದ ನಡಕೊಳ್ಳುತ್ತೇವೆ. ಆತನ ನಿಯಮಗಳಿಗೆ ಮತ್ತು ತತ್ವಗಳಿಗೆ ತಕ್ಕಂತೆ ನಮ್ಮ ಮನಸ್ಸಾಕ್ಷಿಗೆ ತರಬೇತಿ ಕೊಟ್ಟರೆ “ಕ್ರಿಸ್ತನ ಸಂಪೂರ್ಣತೆಗೆ ಸೇರಿರುವ ಪರಿಪಕ್ವತೆಯ ಪ್ರಮಾಣವನ್ನು” ಮುಟ್ಟುತ್ತೇವೆ.—ಎಫೆ. 4:13.