ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವ ಮತ್ತು ಯೇಸು ಐಕ್ಯವಾಗಿರುವಂತೆ ನಾವೆಲ್ಲರೂ ಐಕ್ಯವಾಗಿರೋಣ

ಯೆಹೋವ ಮತ್ತು ಯೇಸು ಐಕ್ಯವಾಗಿರುವಂತೆ ನಾವೆಲ್ಲರೂ ಐಕ್ಯವಾಗಿರೋಣ

‘ತಂದೆಯೇ, ನೀನು ನನ್ನೊಂದಿಗೆ ಮತ್ತು ನಾನು ನಿನ್ನೊಂದಿಗೆ ಐಕ್ಯವಾಗಿರುವಂತೆ ಇವರೆಲ್ಲರೂ ಒಂದಾಗಿರಬೇಕೆಂದು ಕೇಳಿಕೊಳ್ಳುತ್ತೇನೆ.’—ಯೋಹಾ. 17:20, 21.

ಗೀತೆಗಳು: 107, 122

1, 2. (ಎ) ಯೇಸು ತನ್ನ ಅಪೊಸ್ತಲರೊಂದಿಗೆ ಮಾಡಿದ ಕೊನೆಯ ಪ್ರಾರ್ಥನೆಯಲ್ಲಿ ಯಾವುದಕ್ಕಾಗಿ ಪ್ರಾರ್ಥಿಸಿದನು? (ಬಿ) ಯೇಸು ಯಾಕೆ ಐಕ್ಯತೆಯ ಬಗ್ಗೆ ಮಾತಾಡಿದನು?

ಯೇಸು ತನ್ನ ಅಪೊಸ್ತಲರೊಂದಿಗೆ ಮಾಡಿದ ಕೊನೆಯ ಊಟದ ಸಮಯದಲ್ಲಿ ಐಕ್ಯತೆಯ ಬಗ್ಗೆ ಮಾತಾಡಿದನು. ತಾನು ಮತ್ತು ತನ್ನ ತಂದೆ ಐಕ್ಯವಾಗಿರುವಂತೆ ತನ್ನ ಶಿಷ್ಯರು ಸಹ ಒಂದಾಗಿರಬೇಕು ಅಥವಾ ಐಕ್ಯವಾಗಿರಬೇಕೆಂದು ಆತನು ಪ್ರಾರ್ಥಿಸಿದನು. (ಯೋಹಾನ 17:20, 21 ಓದಿ.) ಯೇಸುವಿನ ಶಿಷ್ಯರು ಐಕ್ಯವಾಗಿದ್ದರೆ, ಯೆಹೋವನೇ ಯೇಸುವನ್ನು ಭೂಮಿಗೆ ಕಳುಹಿಸಿದ್ದೆಂದು ಜನರಿಗೆ ಗೊತ್ತಾಗುತ್ತಿತ್ತು. ಶಿಷ್ಯರು ಒಬ್ಬರನ್ನೊಬ್ಬರು ಪ್ರೀತಿಸುವುದಾದರೆ ಅವರು ನಿಜಕ್ಕೂ ಯೇಸುವಿನ ಶಿಷ್ಯರೇ ಎಂದು ಜನ ಗುರುತಿಸುತ್ತಿದ್ದರು. ಆ ಪ್ರೀತಿಯು ಅವರಿನ್ನೂ ಐಕ್ಯವಾಗಿರಲು ಸಹಾಯ ಮಾಡುತ್ತಿತ್ತು.—ಯೋಹಾ. 13:34, 35.

2 ಆ ರಾತ್ರಿ ಯೇಸು ಐಕ್ಯತೆಯ ಬಗ್ಗೆ ಯಾಕೆ ತುಂಬ ಹೊತ್ತು ಮಾತಾಡಿದನು ಎಂದು ನಾವು ಅರ್ಥಮಾಡಿಕೊಳ್ಳಬಹುದು. ಯಾಕೆಂದರೆ ಆತನ ಅಪೊಸ್ತಲರು ಸಂಪೂರ್ಣವಾಗಿ ಐಕ್ಯವಾಗಿರಲಿಲ್ಲ ಎಂದು ಆತನು ಗಮನಿಸಿದ್ದನು. ಅವರು ಮೊದಲು ಮಾಡಿದಂತೆ ಈಗಲೂ “ತಮ್ಮೊಳಗೆ ಯಾರು ಅತಿ ದೊಡ್ಡವನು” ಎಂದು ವಾದ ಮಾಡಿದರು. (ಲೂಕ 22:24-27; ಮಾರ್ಕ 9:33, 34) ಇನ್ನೊಂದು ಸಂದರ್ಭದಲ್ಲಿ, ಯಾಕೋಬ ಮತ್ತು ಯೋಹಾನ ಸ್ವರ್ಗೀಯ ರಾಜ್ಯದಲ್ಲಿ ಮುಖ್ಯ ಸ್ಥಾನಗಳನ್ನು ಕೇಳಿಕೊಂಡರು. ಅವರಿಗೆ ಯೇಸುವಿನ ಪಕ್ಕದಲ್ಲೇ ಕೂತುಕೊಳ್ಳಬೇಕಿತ್ತು.—ಮಾರ್ಕ 10:35-40.

3. (ಎ) ಕ್ರಿಸ್ತನ ಶಿಷ್ಯರ ಐಕ್ಯತೆಗೆ ಯಾವುದು ಮುಳುವಾಗಿದ್ದಿರಬಹುದು? (ಬಿ) ನಾವು ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?

3 ಉನ್ನತ ಸ್ಥಾನಮಾನಕ್ಕಾಗಿ ಆಸೆಪಟ್ಟದ್ದು ಮಾತ್ರ ಕ್ರಿಸ್ತನ ಶಿಷ್ಯರ ಐಕ್ಯತೆಗೆ ಮುಳುವಾಗಿರಲಿಲ್ಲ. ಯೇಸುವಿನ ಕಾಲದಲ್ಲಿ ಜನರ ಮನಸ್ಸಲ್ಲಿ ದ್ವೇಷ ಮತ್ತು ಪೂರ್ವಗ್ರಹ ಇದ್ದದರಿಂದ ಒಗ್ಗಟ್ಟಿರಲಿಲ್ಲ. ಯೇಸುವಿನ ಶಿಷ್ಯರು ಇಂಥ ನಕಾರಾತ್ಮಕ ಯೋಚನೆಗಳನ್ನು ಜಯಿಸಬೇಕಿತ್ತು. ಇದಕ್ಕೆ ಸಂಬಂಧಿಸಿ ನಾವು ಈ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ: ಪೂರ್ವಗ್ರಹದಿಂದ ಪ್ರಭಾವಿತನಾಗದಿರಲು ಯೇಸು ಏನು ಮಾಡಿದನು? ಪಕ್ಷಪಾತ ತೋರಿಸದೆ ಐಕ್ಯವಾಗಿರಲು ಆತನು ತನ್ನ ಹಿಂಬಾಲಕರಿಗೆ ಹೇಗೆ ಸಹಾಯ ಮಾಡಿದನು? ಯೇಸು ಇಟ್ಟ ಮಾದರಿ ಮತ್ತು ಆತನು ಕಲಿಸಿದ ವಿಷಯಗಳು ನಾವು ಐಕ್ಯವಾಗಿರಲು ಹೇಗೆ ಸಹಾಯ ಮಾಡುವವು?

ಯೇಸು ಮತ್ತು ಅವನ ಹಿಂಬಾಲಕರ ಮೇಲಿದ್ದ ಪೂರ್ವಗ್ರಹ

4. ಯೇಸು ಯಾವ ಪೂರ್ವಗ್ರಹವನ್ನು ಎದುರಿಸಬೇಕಾಯಿತು?

4 ಯೇಸು ಸಹ ಪೂರ್ವಗ್ರಹವನ್ನು ಎದುರಿಸಬೇಕಾಯಿತು. ತನಗೆ ಮೆಸ್ಸೀಯನು ಸಿಕ್ಕಿದನೆಂದು ಫಿಲಿಪ್ಪನು ನತಾನಯೇಲನಿಗೆ ಹೇಳಿದಾಗ, “ನಜರೇತಿನಿಂದ ಏನಾದರೂ ಒಳ್ಳೆಯದು ಬರಸಾಧ್ಯವಿದೆಯೊ?” ಎಂದು ನತಾನಯೇಲನು ಕೇಳಿದನು. (ಯೋಹಾ. 1:46) ಬಹುಶಃ ಅವನಿಗೆ ಮೆಸ್ಸೀಯನು ಬೇತ್ಲೆಹೇಮಿನಲ್ಲಿ ಹುಟ್ಟುತ್ತಾನೆಂದು ಮೀಕ 5:2 ಹೇಳುವುದು ಗೊತ್ತಿದ್ದಿರಬೇಕು. ನಜರೇತ್‌ ಮೆಸ್ಸೀಯನ ಹುಟ್ಟೂರಾಗಿರಲು ಸಾಧ್ಯವಿಲ್ಲದ ಕಾರಣ ಅದಕ್ಕೆ ಅಷ್ಟು ಪ್ರಾಮುಖ್ಯತೆ ಕೊಡುವ ಆವಶ್ಯಕತೆ ಇಲ್ಲ ಎಂದು ಅವನಿಗೆ ಅನಿಸಿರಬೇಕು. ಅಷ್ಟೇ ಅಲ್ಲ, ಯೇಸು ಗಲಿಲಾಯದವನಾಗಿದ್ದರಿಂದ ಯೂದಾಯದವರಾದ ಕೆಲವು ಪ್ರಮುಖ ವ್ಯಕ್ತಿಗಳು ಯೇಸುವನ್ನು ಕೀಳಾಗಿ ನೋಡುತ್ತಿದ್ದರು. (ಯೋಹಾ. 7:52) ತಾವು ಮೇಲು, ಗಲಿಲಾಯದವರು ಕೀಳು ಎಂದು ಯೂದಾಯದವರಲ್ಲಿ ಅನೇಕರು ನೆನಸುತ್ತಿದ್ದರು. ಬೇರೆ ಯೆಹೂದ್ಯರು ಯೇಸುವನ್ನು ಸಮಾರ್ಯದವನೆಂದು ಕರೆಯುವ ಮೂಲಕ ಆತನನ್ನು ಅವಮಾನಿಸಲು ಪ್ರಯತ್ನಿಸಿದರು. (ಯೋಹಾ. 8:48) ಸಮಾರ್ಯದವರು ಬೇರೆ ಜನಾಂಗಕ್ಕೆ ಸೇರಿದ ವ್ಯಕ್ತಿಗಳಾಗಿದ್ದರು ಮತ್ತು ಅವರ ಆರಾಧನಾ ರೀತಿ ಕೂಡ ಬೇರೆ ಆಗಿತ್ತು. ಯೂದಾಯದವರು ಮತ್ತು ಗಲಿಲಾಯದವರು ಸಮಾರ್ಯದವರಿಗೆ ಸ್ವಲ್ಪನೂ ಗೌರವ ಕೊಡುತ್ತಿರಲಿಲ್ಲ ಮತ್ತು ಅವರಿಂದ ದೂರ ಇರುತ್ತಿದ್ದರು.—ಯೋಹಾ. 4:9.

5. ಯೇಸುವಿನ ಶಿಷ್ಯರು ಯಾವ ಪೂರ್ವಗ್ರಹವನ್ನು ಎದುರಿಸಬೇಕಾಯಿತು?

5 ಯೆಹೂದಿ ಧಾರ್ಮಿಕ ಮುಖಂಡರು ಸಹ ಯೇಸುವಿನ ಹಿಂಬಾಲಕರನ್ನು ಅವಹೇಳನ ಮಾಡುತ್ತಿದ್ದರು. ಫರಿಸಾಯರು ಅವರನ್ನು “ಶಾಪಗ್ರಸ್ತರು” ಎಂದು ಕರೆಯುತ್ತಿದ್ದರು. (ಯೋಹಾ. 7:47-49) ಯೆಹೂದ್ಯರ ಧಾರ್ಮಿಕ ಶಾಲೆಗಳಲ್ಲಿ ಓದಿಲ್ಲದ ಅಥವಾ ತಮ್ಮ ಸಂಪ್ರದಾಯಗಳನ್ನು ಪಾಲಿಸದ ಜನರನ್ನು ತುಂಬ ಸಾಧಾರಣ ಜನರೆಂದು, ಅಯೋಗ್ಯರೆಂದು ನೆನಸುತ್ತಿದ್ದರು. (ಅ. ಕಾ. 4:13) ಆ ಸಮಯದಲ್ಲಿದ್ದ ಜನರಿಗೆ ತಮ್ಮ ಧರ್ಮ, ಸಮಾಜದಲ್ಲಿದ್ದ ಸ್ಥಾನಮಾನ ಮತ್ತು ಜನಾಂಗದ ಬಗ್ಗೆ ಗರ್ವ ಇತ್ತು. ಆದ್ದರಿಂದ ಯೇಸು ಮತ್ತು ಅವನ ಹಿಂಬಾಲಕರು ಪೂರ್ವಗ್ರಹವನ್ನು ಎದುರಿಸಬೇಕಾಯಿತು. ಈ ಪೂರ್ವಗ್ರಹ ಶಿಷ್ಯರಲ್ಲೂ ಇತ್ತು. ಐಕ್ಯವಾಗಿರಬೇಕಾದರೆ ಯೇಸುವಿನ ಶಿಷ್ಯರು ತಮ್ಮ ಯೋಚನಾಧಾಟಿಯನ್ನು ಬದಲಾಯಿಸಬೇಕಿತ್ತು.

6. ಪೂರ್ವಗ್ರಹ ನಮ್ಮ ಮೇಲೆ ಹೇಗೆ ಪ್ರಭಾವ ಬೀರಬಹುದೆಂದು ಹೇಳಿ.

6 ಇಂದು ಕೂಡ ನಮ್ಮ ಸುತ್ತಲಿರುವ ಜನರಲ್ಲಿ ತುಂಬ ಪೂರ್ವಗ್ರಹ ಇದೆ. ಇದರಿಂದ ನಮಗೆ ತೊಂದರೆ ಆಗಿರಬಹುದು ಅಥವಾ ನಮಗೆ ಬೇರೆಯವರ ಮೇಲೆ ಪೂರ್ವಗ್ರಹ ಇರಬಹುದು. ಆಸ್ಟ್ರೇಲಿಯದಲ್ಲಿ ಈಗ ಪಯನೀಯರ್‌ ಆಗಿರುವ ಒಬ್ಬ ಸಹೋದರಿ ಹೇಳುವುದು: “ಹಿಂದಿನ ಕಾಲದಿಂದಲೂ ಮೂಲ ನಿವಾಸಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಹೆಚ್ಚೆಚ್ಚು ಯೋಚಿಸಿದಂತೆ ನನಗೆ ಬಿಳಿ ಜನರ ಮೇಲಿದ್ದ ದ್ವೇಷ ಹೆಚ್ಚಾಯಿತು.” ಕೆಲವರು ಈ ಸಹೋದರಿಗೂ ಕಿರುಕುಳ ಕೊಟ್ಟದ್ದರಿಂದ ಈ ದ್ವೇಷ ಹೆಚ್ಚಾಗಿತ್ತು. ಕೆನಡದಲ್ಲಿರುವ ಒಬ್ಬ ಸಹೋದರ ಹಿಂದೆ ತನಗೆ ಯಾವ ಭಾವನೆ ಇತ್ತು ಎಂದು ಹೇಳುತ್ತಾ “ಫ್ರೆಂಚ್‌ ಭಾಷೆ ಮಾತಾಡುವ ಜನರು ಶ್ರೇಷ್ಠರು ಎಂಬ ಭಾವನೆ ನನಗಿತ್ತು” ಎಂದು ಒಪ್ಪಿಕೊಳ್ಳುತ್ತಾರೆ. ಇದರಿಂದ ಅವರಿಗೆ ಇಂಗ್ಲಿಷ್‌ ಮಾತಾಡುವ ಜನರನ್ನು ನೋಡಿದರೆ ಆಗುತ್ತಿರಲಿಲ್ಲ ಎಂದವರು ಹೇಳುತ್ತಾರೆ.

7. ಪೂರ್ವಗ್ರಹದ ಭಾವನೆಗಳು ತನಗೆ ಬರದಿರಲು ಯೇಸು ಏನು ಮಾಡಿದನು?

7 ಯೇಸುವಿನ ಕಾಲದಲ್ಲಿ ಇದ್ದಂತೆ ಇಂದು ಕೂಡ ಪೂರ್ವಗ್ರಹ ಜನರ ಮನಸ್ಸಲ್ಲಿ ಬೇರೂರಿರಬಹುದು ಮತ್ತು ಅದನ್ನು ತೆಗೆದುಹಾಕಲು ತುಂಬ ಕಷ್ಟ ಆಗಬಹುದು. ಈ ಭಾವನೆಗಳು ತನಗೆ ಬರದಿರಲು ಯೇಸು ಏನು ಮಾಡಿದನು? ಮೊದಲನೇದಾಗಿ, ಯಾವುದೇ ರೀತಿಯ ಪೂರ್ವಗ್ರಹ ತನಗೆ ಹತ್ತಿಕೊಳ್ಳದಂತೆ ನೋಡಿಕೊಂಡನು. ನಿಷ್ಪಕ್ಷಪಾತ ತೋರಿಸಿದನು. ಶ್ರೀಮಂತರು-ಬಡವರು, ಫರಿಸಾಯರು-ಸಮಾರ್ಯದವರು ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಸಾರಿದನು. ತೆರಿಗೆ ವಸೂಲಿಗಾರರು ಮತ್ತು ಪಾಪಿಗಳ ಹತ್ತಿರವೂ ರಾಜ್ಯದ ಬಗ್ಗೆ ಮಾತಾಡಿದನು. ಎರಡನೇದಾಗಿ, ತನ್ನ ಶಿಷ್ಯರು ಯಾರನ್ನೂ ಸಂಶಯದ ದೃಷ್ಟಿಯಿಂದ ನೋಡಬಾರದು ಅಥವಾ ಪೂರ್ವಗ್ರಹ ತೋರಿಸಬಾರದು ಎಂದು ಕಲಿಸಿದನು ಮತ್ತು ಸ್ವಂತ ಮಾದರಿಯಿಂದ ತೋರಿಸಿದನು.

ಪ್ರೀತಿ ಮತ್ತು ದೀನತೆಯಿಂದ ಪೂರ್ವಗ್ರಹವನ್ನು ಜಯಿಸಿ

8. ನಮ್ಮ ಐಕ್ಯತೆಗೆ ಮೂಲ ಆಧಾರವಾಗಿರುವ ತತ್ವ ಯಾವುದು? ವಿವರಿಸಿ.

8 ನಮ್ಮ ಐಕ್ಯತೆಗೆ ಮೂಲ ಆಧಾರವಾಗಿರುವ ಒಂದು ತತ್ವವನ್ನು ಯೇಸು ಕಲಿಸಿಕೊಟ್ಟನು. ಆತನು ತನ್ನ ಶಿಷ್ಯರಿಗೆ, “ನೀವೆಲ್ಲರೂ ಸಹೋದರರು” ಎಂದು ಹೇಳಿದನು. (ಮತ್ತಾಯ 23:8, 9 ಓದಿ.) ಒಂದರ್ಥದಲ್ಲಿ ನಾವೆಲ್ಲರೂ ಒಡಹುಟ್ಟಿದವರೇ. ಯಾಕೆಂದರೆ ನಾವೆಲ್ಲರೂ ಆದಾಮನ ಮಕ್ಕಳು. (ಅ. ಕಾ. 17:26) ತನ್ನ ಶಿಷ್ಯರು ಇನ್ನೊಂದು ಕಾರಣದಿಂದಲೂ ಒಡಹುಟ್ಟಿದವರು ಆಗಿದ್ದಾರೆ ಎಂದು ಯೇಸು ಹೇಳಿದನು. ಯಾಕೆಂದರೆ ಅವರೆಲ್ಲರಿಗೆ ಯೆಹೋವನೇ ಸ್ವರ್ಗೀಯ ತಂದೆ. (ಮತ್ತಾ. 12:50) ಯೇಸುವಿನ ಶಿಷ್ಯರೆಲ್ಲರೂ ದೇವರ ಕುಟುಂಬದ ಭಾಗವಾಗಿ ಪ್ರೀತಿ ನಂಬಿಕೆಯಿಂದ ಐಕ್ಯವಾಗಿದ್ದರು. ಆದ್ದರಿಂದಲೇ ಅಪೊಸ್ತಲರು ಸಭೆಗಳಿಗೆ ಬರೆದ ಪತ್ರಗಳಲ್ಲಿ ಜೊತೆ ಕ್ರೈಸ್ತರನ್ನು ಸಹೋದರ ಸಹೋದರಿಯರೆಂದು ಕರೆದರು.—ರೋಮ. 1:13; 1 ಪೇತ್ರ 2:17; 1 ಯೋಹಾ. 3:13. *

9, 10. (ಎ) ಯೆಹೂದ್ಯರು ತಮ್ಮ ಸ್ವಂತ ಜನಾಂಗದ ಬಗ್ಗೆ ಜಂಬ ಕೊಚ್ಚಿಕೊಳ್ಳಲು ಕಾರಣವಿರಲಿಲ್ಲ ಯಾಕೆ? (ಬಿ) ಬೇರೆ ಜನಾಂಗದ ಜನರನ್ನು ಕೀಳಾಗಿ ನೋಡುವುದು ಸರಿಯಲ್ಲ ಎಂದು ಯೇಸು ಹೇಗೆ ಅರ್ಥಮಾಡಿಸಿದನು? (ಲೇಖನದ ಆರಂಭದಲ್ಲಿರುವ ಮೊದಲನೇ ಚಿತ್ರ ನೋಡಿ.)

9 ತನ್ನ ಶಿಷ್ಯರು ಒಬ್ಬರನ್ನೊಬ್ಬರು ಸಹೋದರ ಸಹೋದರಿಯರಂತೆ ನೋಡಬೇಕೆಂದು ಹೇಳಿದ ಮೇಲೆ ದೀನರಾಗಿರುವುದು ತುಂಬ ಮುಖ್ಯ ಎಂದು ಯೇಸು ಅವರಿಗೆ ಹೇಳಿದನು. (ಮತ್ತಾಯ 23:11, 12 ಓದಿ.) ನಾವಾಗಲೇ ನೋಡಿದಂತೆ ಅಪೊಸ್ತಲರಲ್ಲಿ ಹೆಮ್ಮೆ ಹುಟ್ಟಿಕೊಂಡಾಗ ಅವರ ಐಕ್ಯತೆಗೆ ಪೆಟ್ಟುಬಿತ್ತು. ಮತ್ತು ಯೇಸುವಿನ ಕಾಲದಲ್ಲಿ ಜನರಿಗೆ ತಮ್ಮ ಜನಾಂಗದ ಬಗ್ಗೆ ತುಂಬ ಗರ್ವ ಇತ್ತು. ಯೆಹೂದ್ಯರು ಅಬ್ರಹಾಮನ ಮಕ್ಕಳಾಗಿದ್ದದರಿಂದ ತಾವು ಬೇರೆಯವರಿಗಿಂತ ಶ್ರೇಷ್ಠರೆಂದು ನೆನಸುತ್ತಿದ್ದರು. ಆದರೆ ಸ್ನಾನಿಕನಾದ ಯೋಹಾನನು ಅವರಿಗೆ, “ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದ ಮಕ್ಕಳನ್ನು ಉಂಟುಮಾಡಲು ಶಕ್ತನಾಗಿದ್ದಾನೆ” ಎಂದು ಹೇಳಿ ಸರಿಯಾದ ತಿರುಗೇಟು ಕೊಟ್ಟನು.—ಲೂಕ 3:8.

10 ಜನರು ತಾವು ಇಂಥ ಜನಾಂಗಕ್ಕೆ ಸೇರಿದವರೆಂದು ಕೊಚ್ಚಿಕೊಳ್ಳುವುದು ಒಳ್ಳೇದಲ್ಲ ಎಂದು ಯೇಸು ಅರ್ಥಮಾಡಿಸಿದನು. ಒಬ್ಬ ಶಾಸ್ತ್ರಿ ಯೇಸುವಿಗೆ, “ನಿಜವಾಗಿಯೂ ನನ್ನ ನೆರೆಯವನು ಯಾರು?” ಎಂದು ಕೇಳಿದನು. ಈ ಪ್ರಶ್ನೆಗೆ ಉತ್ತರ ಕೊಡಲು ಯೇಸು ಒಂದು ಕಥೆ ಹೇಳಿದನು. ಒಬ್ಬ ಯೆಹೂದ್ಯನನ್ನು ಕಳ್ಳರು ದಾರಿಯಲ್ಲಿ ಹೊಡೆದು ಅರೆಜೀವಮಾಡಿ ಹೋದರು. ಆ ದಾರಿಯಲ್ಲಿ ಯೆಹೂದ್ಯರು ಹಾದುಹೋದರೂ ಗಾಯಗೊಂಡು ಬಿದ್ದಿದ್ದ ವ್ಯಕ್ತಿಗೆ ಸಹಾಯ ಮಾಡಲಿಲ್ಲ. ಆದರೆ ಒಬ್ಬ ಸಮಾರ್ಯದವನು ಆ ಯೆಹೂದ್ಯನನ್ನು ನೋಡಿದಾಗ ಅವನಿಗೆ ಅಯ್ಯೋ ಪಾಪ ಅನಿಸಿತು. ಗಾಯಗೊಂಡ ವ್ಯಕ್ತಿಗೆ ಬೇಕಾದ ಆರೈಕೆಯನ್ನು ಮಾಡಿದನು. ಆ ಸಮಾರ್ಯದವನ ತರ ಶಾಸ್ತ್ರಿಯು ಇರಬೇಕೆಂದು ಯೇಸು ಹೇಳಿ ಮುಗಿಸಿದನು. (ಲೂಕ 10:25-37) ತನ್ನ ನೆರೆಯವನನ್ನು ಹೇಗೆ ಪ್ರೀತಿಸಬೇಕೆಂದು ಒಬ್ಬ ಸಮಾರ್ಯದವನು ಯೆಹೂದ್ಯರಿಗೆ ಕಲಿಸಬಲ್ಲನೆಂದು ಯೇಸು ಈ ಕಥೆಯಿಂದ ತೋರಿಸಿದನು.

11. (ಎ) ಯೇಸುವಿನ ಶಿಷ್ಯರು ಯಾಕೆ ನಿಷ್ಪಕ್ಷಪಾತ ತೋರಿಸಬೇಕಿತ್ತು? (ಬಿ) ಇದನ್ನು ಅವರು ಅರ್ಥಮಾಡಿಕೊಳ್ಳಲು ಯೇಸು ಹೇಗೆ ಸಹಾಯ ಮಾಡಿದನು?

11 ಯೇಸು ಸ್ವರ್ಗಕ್ಕೆ ಹೋಗುವ ಮುಂಚೆ, ತನ್ನ ಶಿಷ್ಯರಿಗೆ “ಯೂದಾಯ ಸಮಾರ್ಯಗಳಲ್ಲಿಯೂ ಮತ್ತು ಭೂಮಿಯ ಕಟ್ಟಕಡೆಯ ವರೆಗೂ” ಸಾರುವ ನೇಮಕವನ್ನು ಕೊಟ್ಟನು. (ಅ. ಕಾ. 1:8) ಇದನ್ನು ಮಾಡಬೇಕಾದರೆ ಶಿಷ್ಯರು ಹೆಮ್ಮೆ ಪೂರ್ವಗ್ರಹವನ್ನು ಜಯಿಸಬೇಕಿತ್ತು. ಯೇಸು ಎಷ್ಟೋ ಸಲ ವಿದೇಶಿಯರಲ್ಲಿದ್ದ ಒಳ್ಳೇ ಗುಣಗಳ ಬಗ್ಗೆ ಮಾತಾಡಿದ್ದನು. ಉದಾಹರಣೆಗೆ, ವಿದೇಶಿಯನಾಗಿದ್ದ ಒಬ್ಬ ಸೇನಾ ಅಧಿಕಾರಿಯಲ್ಲಿದ್ದ ಅಸಾಧಾರಣ ನಂಬಿಕೆಯನ್ನು ಹೊಗಳಿದ್ದನು. ಇದು ಎಲ್ಲ ಜನಾಂಗಗಳಿಗೆ ಹೋಗಿ ಸಾರಬೇಕಿದ್ದ ಶಿಷ್ಯರನ್ನು ಸಿದ್ಧಪಡಿಸಿತು. (ಮತ್ತಾ. 8:5-10) ಯೇಸು ತನ್ನ ಸ್ವಂತ ಊರಾದ ನಜರೇತಿನಲ್ಲಿದ್ದಾಗ ಯೆಹೋವನು ವಿದೇಶೀಯರಿಗೆ ಹೇಗೆ ಸಹಾಯ ಮಾಡಿದನೆಂದು ವಿವರಿಸಿದನು. ಅವನು ಸರೆಪ್ತಕ್ಕೆ ಸೇರಿದ ಫೊಯಿನಿಕೆಯ ಸ್ತ್ರೀಯ ಬಗ್ಗೆ ಮತ್ತು ಸಿರಿಯದಿಂದ ಬಂದ ಕುಷ್ಠರೋಗಿ ನಾಮಾನನ ಬಗ್ಗೆ ಮಾತಾಡಿದನು. (ಲೂಕ 4:25-27) ಯೇಸು ಸಮಾರ್ಯದ ಸ್ತ್ರೀಗೆ ಕೂಡ ಸಾರಿದನು. ಅಷ್ಟೇ ಅಲ್ಲದೆ ಸಮಾರ್ಯದ ಒಂದು ಪಟ್ಟಣದ ಜನರು ಸುವಾರ್ತೆಯನ್ನು ಕೇಳಿಸಿಕೊಳ್ಳಲು ಬಯಸಿದ್ದರಿಂದ ಅವರ ಊರಲ್ಲಿ ಎರಡು ದಿನ ಉಳಿದಿದ್ದನು.—ಯೋಹಾ. 4:21-24, 40.

ಆರಂಭಕಾಲದ ಕ್ರೈಸ್ತರು ಪೂರ್ವಗ್ರಹವನ್ನು ಜಯಿಸಬೇಕಿತ್ತು

12, 13. (ಎ) ಯೇಸು ಸಮಾರ್ಯದ ಒಬ್ಬ ಸ್ತ್ರೀಗೆ ಸಾಕ್ಷಿಕೊಟ್ಟಾಗ ಅಪೊಸ್ತಲರು ಹೇಗೆ ಪ್ರತಿಕ್ರಿಯಿಸಿದರು? (ಲೇಖನದ ಆರಂಭದಲ್ಲಿರುವ ಎರಡನೇ ಚಿತ್ರ ನೋಡಿ.) (ಬಿ) ಯೇಸು ಕಲಿಸಲು ಬಯಸಿದ್ದನ್ನು ಯಾಕೋಬ ಮತ್ತು ಯೋಹಾನ ಪೂರ್ತಿಯಾಗಿ ಅರ್ಥಮಾಡಿಕೊಳ್ಳಲಿಲ್ಲ ಎಂದು ಯಾವುದು ತೋರಿಸುತ್ತದೆ?

12 ಯೇಸುವಿನ ಅಪೊಸ್ತಲರಿಗೆ ತಮ್ಮಲ್ಲಿದ್ದ ಪೂರ್ವಗ್ರಹವನ್ನು ತೆಗೆದುಹಾಕುವುದು ಸುಲಭವಾಗಿರಲಿಲ್ಲ. ಯೇಸು ದೇವರ ಬಗ್ಗೆ ಸಮಾರ್ಯದ ಸ್ತ್ರೀಯೊಂದಿಗೆ ಯಾವುದೇ ಹಿಂಜರಿಕೆ ಇಲ್ಲದೆ ಮಾತಾಡುತ್ತಿರುವುದನ್ನು ನೋಡಿ ಅವರಿಗೆ ಆಶ್ಚರ್ಯವಾಯಿತು. (ಯೋಹಾ. 4:9, 27) ಯಾಕೆ? ಬಹುಶಃ ಯೆಹೂದಿ ಧಾರ್ಮಿಕ ಮುಖಂಡರು ಮಾಡುತ್ತಿದ್ದದ್ದು ಅವರ ಮನಸ್ಸಿನಲ್ಲಿ ಇದ್ದಿರಬೇಕು. ಈ ಮುಖಂಡರು ಸಾರ್ವಜನಿಕ ಸ್ಥಳಗಳಲ್ಲಿ ಸ್ತ್ರೀಯರೊಂದಿಗೆ ಮಾತಾಡುತ್ತಿರಲಿಲ್ಲ. ಹೀಗಿರುವಾಗ ಅವರು ಸಮಾರ್ಯದ ಒಬ್ಬ ಸ್ತ್ರೀಯೊಂದಿಗೆ, ಅದೂ ಸಮಾಜದಲ್ಲಿ ಒಳ್ಳೇ ಹೆಸರಿಲ್ಲದ ಒಬ್ಬ ಸ್ತ್ರೀಯೊಂದಿಗೆ ಖಂಡಿತ ಮಾತಾಡುತ್ತಿರಲಿಲ್ಲ. ಅಪೊಸ್ತಲರು ಯೇಸುವಿಗೆ ಊಟ ತಂದು ಕೊಟ್ಟರು. ಆದರೆ ತನ್ನ ತಂದೆ ಬಗ್ಗೆ ಮಾತಾಡಿ ಯೇಸುವಿಗೆ ಎಷ್ಟು ಖುಷಿಯಾಗಿತ್ತೆಂದರೆ ಊಟ ಆತನಿಗೆ ಮುಖ್ಯ ಅನಿಸಲಿಲ್ಲ. ದೇವರು ಯೇಸುವಿಗೆ ಸಾರುವ ಕೆಲಸವನ್ನು ಕೊಟ್ಟಿದ್ದನು. ತನ್ನ ತಂದೆ ಏನು ಬಯಸುತ್ತಾನೋ ಅದನ್ನು ಮಾಡುವುದು ಯೇಸುವಿಗೆ ಊಟ ಮಾಡಿದಂತೆ ಇತ್ತು. ಅದು ಸಮಾರ್ಯದ ಒಬ್ಬ ಸ್ತ್ರೀಗೆ ಸಾರುವುದಾಗಿದ್ದರೂ ಸರಿ ಊಟ ಮಾಡಿದಷ್ಟು ತೃಪ್ತಿ ಕೊಡುತ್ತಿತ್ತು.—ಯೋಹಾ. 4:31-34.

13 ಈ ಘಟನೆಯ ಮೂಲಕ ಯೇಸು ಕಲಿಸಲು ಪ್ರಯತ್ನಿಸಿದ ಪ್ರಾಮುಖ್ಯ ಪಾಠವನ್ನು ಯಾಕೋಬ ಮತ್ತು ಯೋಹಾನ ಅರ್ಥಮಾಡಿಕೊಳ್ಳಲಿಲ್ಲ. ಒಮ್ಮೆ ಯೇಸು ಮತ್ತು ಶಿಷ್ಯರು ಸಮಾರ್ಯವನ್ನು ದಾಟಿಹೋಗುತ್ತಿರುವಾಗ ರಾತ್ರಿ ತಂಗಲು ಸಮಾರ್ಯದ ಒಂದು ಹಳ್ಳಿಗೆ ಹೋದರು. ಆದರೆ ಸಮಾರ್ಯದವರು ಅವರನ್ನು ಅಲ್ಲಿ ತಂಗಲು ಬಿಡಲಿಲ್ಲ. ಯಾಕೋಬ ಮತ್ತು ಯೋಹಾನನಿಗೆ ಎಷ್ಟು ಸಿಟ್ಟು ಬಂತೆಂದರೆ, “ಕರ್ತನೇ, ಆಕಾಶದಿಂದ ಬೆಂಕಿಯು ಬಿದ್ದು ಇವರನ್ನು ನಾಶಮಾಡಿಬಿಡಲಿ” ಎಂದರು. ಯೇಸು ಅವರನ್ನು ಬಲವಾಗಿ ಗದರಿಸಿದನು. (ಲೂಕ 9:51-56) ಇದೇ ವಿಷಯ ಒಂದುವೇಳೆ ತಮ್ಮ ಊರಾದ ಗಲಿಲಾಯದಲ್ಲಿ ನಡೆದಿದ್ದರೆ ಯಾಕೋಬ ಮತ್ತು ಯೋಹಾನ ಇಷ್ಟು ಸಿಟ್ಟು ಮಾಡಿಕೊಂಡಿರಲಿಕ್ಕಿಲ್ಲ. ಸಮಾರ್ಯದವರ ಮೇಲೆ ಸಿಟ್ಟುಗೊಳ್ಳಲು ಅವರ ಪೂರ್ವಗ್ರಹ ಕಾರಣವಾಗಿದ್ದಿರಬಹುದು. ನಂತರ ಯೋಹಾನನು ಸಮಾರ್ಯಕ್ಕೆ ಸಾರಲು ಹೋದಾಗ ಅನೇಕರು ಕಿವಿಗೊಟ್ಟರು. ಇದರಿಂದ ಹಿಂದೆ ಅವರ ಮೇಲೆ ಸಿಟ್ಟುಗೊಂಡದ್ದರ ಬಗ್ಗೆ ಆತನಿಗೆ ನಾಚಿಕೆಯಾಗಿರಬೇಕು.—ಅ. ಕಾ. 8:14, 25.

14. ಪೂರ್ವಗ್ರಹದಿಂದ ಉಂಟಾದ ಸಮಸ್ಯೆಯನ್ನು ಹೇಗೆ ಬಗೆಹರಿಸಲಾಯಿತು?

14 ಕ್ರಿ.ಶ. 33​ರ ಪಂಚಾಶತ್ತಮದ ನಂತರ ಸಭೆಯಲ್ಲಿ ಒಂದು ಸಮಸ್ಯೆ ಎದುರಾಯಿತು. ಸಹಾಯದ ಅಗತ್ಯದಲ್ಲಿರುವ ವಿಧವೆಯರಿಗೆ ಆಹಾರ ಹಂಚಿಕೊಡುವುದರಲ್ಲಿ ಗ್ರೀಕ್‌ ಭಾಷೆ ಮಾತಾಡುವ ವಿಧವೆಯರಿಗೆ ಅನ್ಯಾಯ ಆಗುತ್ತಿತ್ತು. (ಅ. ಕಾ. 6:1) ಭಾಷೆಯ ವಿಷಯದಲ್ಲಿದ್ದ ಪೂರ್ವಗ್ರಹದಿಂದ ಹೀಗಾಗಿರಬಹುದು. ಅಪೊಸ್ತಲರು ಈ ಸಮಸ್ಯೆಯನ್ನು ತಕ್ಷಣ ತೀರಿಸಿದರು. ಆಹಾರವನ್ನು ನ್ಯಾಯದಿಂದ ಹಂಚಲು ಅವರು ಏಳು ಅರ್ಹ ಪುರುಷರನ್ನು ಆರಿಸಿದರು. ಈ ಎಲ್ಲ ಸಹೋದರರಿಗೆ ಗ್ರೀಕ್‌ ಹೆಸರುಗಳಿದ್ದವು. ಇದರಿಂದ, ಮನಸ್ತಾಪ ಆಗಿದ್ದ ವಿಧವೆಯರಿಗೆ ಸಮಾಧಾನ ಆಗಿರಬೇಕು.

15. ಎಲ್ಲರೊಂದಿಗೂ ನಿಷ್ಪಕ್ಷಪಾತದಿಂದ ನಡಕೊಳ್ಳಬೇಕೆಂದು ಪೇತ್ರನು ಹೇಗೆ ಕಲಿತನು? (ಲೇಖನದ ಆರಂಭದಲ್ಲಿರುವ ಮೂರನೇ ಚಿತ್ರ ನೋಡಿ.)

15 ಕ್ರಿ.ಶ. 36​ರಲ್ಲಿ ಯೇಸುವಿನ ಶಿಷ್ಯರು ಎಲ್ಲ ಜನಾಂಗಗಳ ಜನರಿಗೆ ಸಾಕ್ಷಿಕೊಡಲು ಆರಂಭಿಸಿದರು. ಇದಕ್ಕೆ ಮುಂಚೆ ಅಪೊಸ್ತಲ ಪೇತ್ರನು ಯೆಹೂದ್ಯರೊಂದಿಗೆ ಮಾತ್ರ ಸಹವಾಸ ಮಾಡುತ್ತಿದ್ದನು. ಆದರೆ ಕ್ರೈಸ್ತರು ಪಕ್ಷಪಾತ ತೋರಿಸಬಾರದು ಎಂದು ದೇವರು ಅರ್ಥಮಾಡಿಸಿದ ಮೇಲೆ ಪೇತ್ರನು ರೋಮನ್‌ ಸೈನಿಕನಾಗಿದ್ದ ಕೊರ್ನೇಲ್ಯನಿಗೆ ಸಾರಿದನು. (ಅ. ಕಾರ್ಯಗಳು 10:28, 34, 35 ಓದಿ.) ಇದಾದ ಮೇಲೆ ಅವನು ಯೆಹೂದ್ಯರಲ್ಲದ ಕ್ರೈಸ್ತರೊಂದಿಗೆ ಸಹವಾಸ ಮಾಡುತ್ತಿದ್ದನು, ಊಟನೂ ಮಾಡುತ್ತಿದ್ದನು. ಕೆಲವು ವರ್ಷಗಳಾದ ಮೇಲೆ ಅಂತಿಯೋಕ್ಯದಲ್ಲಿದ್ದಾಗ ಪೇತ್ರನು ಯೆಹೂದ್ಯರಲ್ಲದ ಕ್ರೈಸ್ತರೊಂದಿಗೆ ಊಟ ಮಾಡುವುದನ್ನು ನಿಲ್ಲಿಸಿಬಿಟ್ಟನು. (ಗಲಾ. 2:11-14) ಇದು ಸರಿಯಲ್ಲ ಎಂದು ಪೌಲನು ಪೇತ್ರನಿಗೆ ಹೇಳಿದನು. ಪೇತ್ರನು ಈ ಸಲಹೆಯನ್ನು ಸ್ವೀಕರಿಸಿದನು. ನಮಗೆ ಹೇಗೆ ಗೊತ್ತು? ಪೇತ್ರನು ಏಷ್ಯಾ ಮೈನರ್‌ನಲ್ಲಿರುವ ಯೆಹೂದ್ಯರಿಗೆ ಮತ್ತು ಯೆಹೂದ್ಯರಲ್ಲದ ಕ್ರೈಸ್ತರಿಗೆ ತನ್ನ ಮೊದಲನೇ ಪತ್ರವನ್ನು ಬರೆದಾಗ, ಎಲ್ಲ ಸಹೋದರರನ್ನು ಪ್ರೀತಿಸುವುದು ಎಷ್ಟು ಪ್ರಾಮುಖ್ಯ ಎಂದು ಹೇಳಿದನು.—1 ಪೇತ್ರ 1:1; 2:17.

16. ಆರಂಭಕಾಲದ ಕ್ರೈಸ್ತರು ಯಾವುದಕ್ಕೆ ಹೆಸರುವಾಸಿಯಾದರು?

16 ಯೇಸು ಇಟ್ಟ ಮಾದರಿಯಿಂದ ತಾವು “ಎಲ್ಲ ರೀತಿಯ ಜನರನ್ನು” ಪ್ರೀತಿಸಬೇಕೆಂದು ಅಪೊಸ್ತಲರು ಅರ್ಥಮಾಡಿಕೊಂಡರೆಂಬುದು ಸ್ಪಷ್ಟ. (ಯೋಹಾ. 12:32; 1 ತಿಮೊ. 4:10) ಇದನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಮಯ ಹಿಡಿಯಿತಾದರೂ ಅವರು ಜನರನ್ನು ಯಾವ ದೃಷ್ಟಿಯಿಂದ ನೋಡುತ್ತಿದ್ದರೋ ಅದನ್ನು ಬದಲಾಯಿಸಿಕೊಂಡರು. ಇದರಿಂದ ಆ ಆರಂಭಕಾಲದ ಕ್ರೈಸ್ತರು ಅವರ ಮಧ್ಯೆ ಇದ್ದ ಪ್ರೀತಿಗೆ ಹೆಸರುವಾಸಿಯಾದರು. ಬೇರೆ ಜನರಿಗೆ ಕ್ರೈಸ್ತರ ಬಗ್ಗೆ ಯಾವ ಅಭಿಪ್ರಾಯ ಇತ್ತೆಂದು ಟೆರ್ಟಲ್ಯನ್‌ ಎಂಬ ಲೇಖಕ ಸುಮಾರು ಕ್ರಿ.ಶ. 200​ರಲ್ಲಿ ಹೀಗೆ ಬರೆದಿದ್ದಾರೆ: ‘ಅವರು ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಅವರು ಒಬ್ಬರು ಇನ್ನೊಬ್ಬರಿಗಾಗಿ ಪ್ರಾಣವನ್ನೂ ಕೊಡಲು ಸಿದ್ಧರಿದ್ದಾರೆ.’ ಆ ಕ್ರೈಸ್ತರು “ನೂತನ ವ್ಯಕ್ತಿತ್ವವನ್ನು” ಧರಿಸಿಕೊಂಡದ್ದರಿಂದ ಎಲ್ಲ ಜನರನ್ನು ಸಮಾನವಾಗಿ ನೋಡಲು ಕಲಿತರು. ದೇವರು ಎಲ್ಲರನ್ನೂ ಇದೇ ರೀತಿ ನೋಡುತ್ತಾನೆ.—ಕೊಲೊ. 3:10, 11.

17. ನಮ್ಮಲ್ಲಿ ಪೂರ್ವಗ್ರಹ ಇದ್ದರೆ ಅದನ್ನು ಹೇಗೆ ತೆಗೆದುಹಾಕಬಹುದು? ಉದಾಹರಣೆಗಳನ್ನು ಕೊಡಿ.

17 ಇಂದು ನಮ್ಮಲ್ಲಿರುವ ಪೂರ್ವಗ್ರಹವನ್ನು ತೆಗೆದುಹಾಕಲು ಸಹ ಸಮಯ ಹಿಡಿಯಬಹುದು. ಫ್ರಾನ್ಸ್‌ನಲ್ಲಿರುವ ಒಬ್ಬ ಸಹೋದರಿ ಇದರ ಬಗ್ಗೆ ಏನು ಹೇಳುತ್ತಾರೆ ಎಂದು ಗಮನಿಸಿ: “ಯೆಹೋವನು ನನಗೆ ಪ್ರೀತಿ ಅಂದರೆ ಏನು, ಹಂಚಿಕೊಳ್ಳುವುದು ಅಂದರೆ ಏನು, ಎಲ್ಲ ರೀತಿಯ ಜನರನ್ನು ಪ್ರೀತಿಸುವುದು ಅಂದರೆ ಏನೆಂದು ಕಲಿಸಿಕೊಟ್ಟಿದ್ದಾನೆ. ಆದರೆ ಬೇರೆಯವರ ಮೇಲಿರುವ ಪೂರ್ವಗ್ರಹವನ್ನು ತೆಗೆದುಹಾಕಲು ನಾನು ಇನ್ನೂ ಹೋರಾಡುತ್ತಿದ್ದೇನೆ. ಆದ್ದರಿಂದ ನಾನು ಇದರ ಬಗ್ಗೆ ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸುತ್ತಾ ಇರುತ್ತೇನೆ.” ಸ್ಪೇನ್‌ನಲ್ಲಿರುವ ಒಬ್ಬ ಸಹೋದರಿ ಒಂದು ನಿರ್ದಿಷ್ಟ ಗುಂಪಿನ ಜನರ ಬಗ್ಗೆ ತನಗಿರುವ ನಕಾರಾತ್ಮಕ ಭಾವನೆಗಳನ್ನು ಹೊಡೆದೋಡಿಸಲು ಕೆಲವೊಮ್ಮೆ ಹೋರಾಡಬೇಕಾಗುತ್ತದೆ ಎಂದು ಹೇಳುತ್ತಾರೆ. “ಹೆಚ್ಚಾಗಿ ನಾನು ಈ ಹೋರಾಟದಲ್ಲಿ ಗೆಲ್ಲುತ್ತೇನೆ. ಆದರೆ ಈ ಹೋರಾಟವನ್ನು ಮಾಡುತ್ತಾ ಇರಬೇಕೆಂದು ನಾನು ಅರ್ಥಮಾಡಿಕೊಂಡಿದ್ದೇನೆ. ನಾನು ಐಕ್ಯವಾಗಿರುವ ಒಂದು ಕುಟುಂಬದ ಸದಸ್ಯೆ ಆಗಿರುವುದಕ್ಕೆ ಸಂತೋಷಪಡುತ್ತೇನೆ. ಇದಕ್ಕೆ ಯೆಹೋವನಿಗೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಅವರು ಹೇಳುತ್ತಾರೆ. ನಾವೆಲ್ಲರೂ ನಮ್ಮನ್ನೇ ಹೀಗೆ ಕೇಳಿಕೊಳ್ಳಬೇಕು: ‘ನನಗೆ ಬೇರೆಯವರ ಬಗ್ಗೆ ಹೇಗನಿಸುತ್ತದೆ? ನನ್ನಲ್ಲೂ ಪೂರ್ವಗ್ರಹ ಇದೆಯಾ?’

ಪ್ರೀತಿ ಇದ್ದಲ್ಲಿ ಪೂರ್ವಗ್ರಹ ಇರಲ್ಲ

18, 19. (ಎ) ಒಬ್ಬರನ್ನೊಬ್ಬರು ಸ್ವಾಗತಿಸಲು ನಮಗೆ ಯಾವ ಕಾರಣಗಳಿವೆ? (ಬಿ) ಇದನ್ನು ಮಾಡುವುದು ಹೇಗೆ?

18 ನಾವೆಲ್ಲರೂ ಒಂದು ಕಾಲದಲ್ಲಿ ದೇವರ ಬಗ್ಗೆ ಗೊತ್ತಿಲ್ಲದೆ ಆತನಿಂದ ದೂರ ಇದ್ದೆವು ಅನ್ನುವುದನ್ನು ಮರೆಯಬಾರದು. (ಎಫೆ. 2:12) ಆದರೆ ಯೆಹೋವನು ನಮ್ಮನ್ನು ಪ್ರೀತಿಯಿಂದ ಹತ್ತಿರಕ್ಕೆ ಸೇರಿಸಿಕೊಂಡಿದ್ದಾನೆ. (ಹೋಶೇ. 11:4; ಯೋಹಾ. 6:44) ಯೇಸು ನಮ್ಮನ್ನು ಸ್ವಾಗತಿಸಿದ್ದಾನೆ. ನಾವು ದೇವರ ಕುಟುಂಬದ ಭಾಗವಾಗಲು ದಾರಿಯನ್ನು ತೆರೆದಿದ್ದಾನೆ. (ರೋಮನ್ನರಿಗೆ 15:7 ಓದಿ.) ನಾವು ಅಪರಿಪೂರ್ಣರಾಗಿ ಇರುವುದಾದರೂ ಯೇಸು ನಮ್ಮನ್ನು ದಯೆಯಿಂದ ಸ್ವೀಕರಿಸಿರುವ ಕಾರಣ ನಾವು ಯಾರನ್ನೂ ತಿರಸ್ಕರಿಸುವುದರ ಬಗ್ಗೆ ಯೋಚನೆನೂ ಮಾಡಬಾರದು.

ನಾವು ‘ಮೇಲಣಿಂದ ಬರುವ ವಿವೇಕವನ್ನು’ ಮಾನ್ಯಮಾಡುವುದರಿಂದ ನಮ್ಮಲ್ಲಿ ಐಕ್ಯತೆ ಮತ್ತು ಪ್ರೀತಿ ಇದೆ (ಪ್ಯಾರ 19 ನೋಡಿ)

19 ಈ ದುಷ್ಟ ಲೋಕದ ಅಂತ್ಯ ಹತ್ತಿರ ಬರುತ್ತಿರುವಾಗ ಜನರಲ್ಲಿ ಹೆಚ್ಚೆಚ್ಚು ವಿಭಜನೆ, ಪೂರ್ವಗ್ರಹ, ದ್ವೇಷ ಕಾಣಿಸಿಕೊಳ್ಳುತ್ತದೆ. (ಗಲಾ. 5:19-21; 2 ತಿಮೊ. 3:13) ಆದರೆ ಯೆಹೋವನ ಜನರಾಗಿರುವ ನಾವು ‘ಮೇಲಣಿಂದ ಬರುವ ವಿವೇಕವನ್ನು’ ಪಡೆಯಲು ಬಯಸುತ್ತೇವೆ. ಈ ವಿವೇಕ ನಿಷ್ಪಕ್ಷಪಾತ ತೋರಿಸಲು ಮತ್ತು ಶಾಂತಿಯನ್ನು ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ. (ಯಾಕೋ. 3:17, 18) ನಾವು ಬೇರೆ ದೇಶಗಳಿಂದ ಬಂದಿರುವ ಜನರೊಂದಿಗೂ ಸ್ನೇಹ ಮಾಡಲು, ಅವರ ಆಚಾರ-ವಿಚಾರಗಳನ್ನು ಒಪ್ಪಿಕೊಳ್ಳಲು, ಬೇಕಾದರೆ ಅವರ ಭಾಷೆಯನ್ನೂ ಕಲಿಯಲು ಸಂತೋಷಪಡುತ್ತೇವೆ. ನಾವಿದನ್ನು ಮಾಡುವಾಗ ನಮ್ಮ ಸುಖ “ದೊಡ್ಡ ನದಿಯಂತೆ” ಹರಿಯುತ್ತಾ ಇರುವುದು ಮತ್ತು ನ್ಯಾಯ ‘ಸಮುದ್ರದ ಅಲೆಗಳ ಹಾಗೆ’ ಬರುತ್ತಾ ಇರುವುದು.—ಯೆಶಾ. 48:17, 18.

20. ಪ್ರೀತಿ ನಮ್ಮ ಯೋಚನಾಧಾಟಿಯನ್ನು ಮತ್ತು ಭಾವನೆಗಳನ್ನು ಬದಲಾಯಿಸುವಾಗ ಏನಾಗುತ್ತದೆ?

20 ಆಸ್ಟ್ರೇಲಿಯದ ಆ ಸಹೋದರಿ ಬೈಬಲ್‌ ಅಧ್ಯಯನ ಮಾಡಲು ಆರಂಭಿಸಿದ ಮೇಲೆ ಅವರಲ್ಲಿದ್ದ ಬಲವಾದ ಪೂರ್ವಗ್ರಹ, ದ್ವೇಷ ಮೆಲ್ಲಮೆಲ್ಲನೆ ಕರಗಿಹೋಯಿತು. ಪ್ರೀತಿ ಅವರ ಯೋಚನಾಧಾಟಿಯನ್ನು ಮತ್ತು ಭಾವನೆಗಳನ್ನು ಬದಲಾಯಿಸಲು ಸಹಾಯ ಮಾಡಿತು. ಕೆನಡದಲ್ಲಿರುವ ಫ್ರೆಂಚ್‌ ಭಾಷೆ ಮಾತಾಡುವ ಸಹೋದರ ಹೇಳುವುದೇನೆಂದರೆ, ‘ಜನರಿಗೆ ಬೇರೆಯವರ ಬಗ್ಗೆ ಗೊತ್ತಿಲ್ಲದ ಕಾರಣ ಅವರನ್ನು ದ್ವೇಷಿಸುತ್ತಾರೆ ಮತ್ತು ಜನರು ಒಳ್ಳೆಯವರಾ ಕೆಟ್ಟವರಾ ಅನ್ನುವುದು ಅವರು ಯಾವ ದೇಶಕ್ಕೆ ಸೇರಿದವರು ಅನ್ನುವುದರ ಮೇಲೆ ಹೊಂದಿಕೊಂಡಿಲ್ಲ.’ ಜೊತೆಗೆ ಅವರು ಇಂಗ್ಲಿಷ್‌ ಮಾತಾಡುವ ಒಬ್ಬ ಸಹೋದರಿಯನ್ನು ಮದುವೆ ಮಾಡಿಕೊಂಡಿದ್ದಾರೆ! ಪ್ರೀತಿ ಇದ್ದಲ್ಲಿ ಪೂರ್ವಗ್ರಹ ಇರಲ್ಲ ಎಂದು ಈ ಉದಾಹರಣೆಗಳಿಂದ ಗೊತ್ತಾಗುತ್ತದೆ. ಪ್ರೀತಿಯು ಮುರಿಯಲಸಾಧ್ಯವಾದ ಬಂಧದಲ್ಲಿ ನಮ್ಮನ್ನು ಐಕ್ಯಗೊಳಿಸುತ್ತದೆ.—ಕೊಲೊ. 3:14.

^ ಪ್ಯಾರ. 8 “ಸಹೋದರರು” ಎಂಬ ಪದದಲ್ಲಿ ಸಹೋದರಿಯರು ಸಹ ಒಳಗೂಡಿರುವ ಸಾಧ್ಯತೆ ಇದೆ. ಪೌಲನು ರೋಮ್‌ನಲ್ಲಿದ್ದ ‘ಸಹೋದರರಿಗೆ’ ಪತ್ರ ಬರೆದನೆಂದು ದಾಖಲೆ ಹೇಳುತ್ತದೆ. ಇದರಲ್ಲಿ ಸಹೋದರಿಯರು ಒಳಗೂಡಿದ್ದರು ಎಂದು ಹೇಳಬಹುದು. ಯಾಕೆಂದರೆ ಆತನು ಆ ಪತ್ರದಲ್ಲಿ ಅನೇಕ ಸಹೋದರಿಯರ ಬಗ್ಗೆ ಅವರ ಹೆಸರೆತ್ತಿ ಹೇಳಿದ್ದಾನೆ. (ರೋಮ. 16:3, 6, 12) ಕಾವಲಿನಬುರುಜು ಪತ್ರಿಕೆಯು ಸಭೆಯ ಸದಸ್ಯರಾಗಿರುವ ಕ್ರೈಸ್ತರನ್ನು ‘ಸಹೋದರ ಸಹೋದರಿಯರು’ ಎಂದು ಅನೇಕ ವರ್ಷಗಳಿಂದ ಕರೆದಿದೆ.