ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಂದನೆ ಹಿಂದಿರುವ ಸಾಧನೆ

ವಂದನೆ ಹಿಂದಿರುವ ಸಾಧನೆ

“ನಮಸ್ಕಾರ! ಹೇಗಿದ್ದೀರಾ?”

ಈ ರೀತಿ ನೀವು ಬೇರೆಯವರಿಗೆ ವಂದಿಸಿರಬಹುದು. ಕೈಕುಲುಕಿಸಿ ಅಪ್ಪಿಕೊಂಡಿರಲೂಬಹುದು. ವಂದಿಸುವ ಪದ್ಧತಿಗಳು, ವಂದಿಸಲು ಹೇಳುವ ಮಾತುಗಳು ಸ್ಥಳದಿಂದ ಸ್ಥಳಕ್ಕೆ ಬೇರೆ ಬೇರೆಯಾಗಿದ್ದರೂ ವಂದಿಸುವುದು ಸರ್ವೇಸಾಮಾನ್ಯ. ಯಾರಾದರೂ ವಂದಿಸದೇ ಹೋದರೆ ಅಥವಾ ವಂದಿಸಿದವರಿಗೆ ಪ್ರತಿಕ್ರಿಯಿಸದೆ ಹೋದರೆ ಅವರಿಗೆ ಪ್ರೀತಿ ಇಲ್ಲ ಅಥವಾ ಹೇಗೆ ನಡಕೊಳ್ಳಬೇಕು ಅಂತ ಗೊತ್ತಿಲ್ಲ ಎಂದು ಜನರು ನೆನಸಬಹುದು.

ಆದರೆ ವಂದಿಸಬೇಕು ಎಂದು ಎಲ್ಲರಿಗೂ ಅನಿಸುವುದಿಲ್ಲ. ಕೆಲವರು ನಾಚಿಕೆ ಸ್ವಭಾವದಿಂದಾಗಿ ಅಥವಾ ಕೀಳರಿಮೆಯಿಂದಾಗಿ ಹಿಂಜರಿಯುತ್ತಾರೆ. ಬೇರೆ ಜನಾಂಗ, ಸಂಸ್ಕೃತಿ, ಸ್ಥಾನಮಾನ, ವಯಸ್ಸು, ಹಿನ್ನೆಲೆಯ ಜನರನ್ನು ವಂದಿಸುವುದೆಂದರೆ ಕೆಲವರಿಗೆ ಸ್ವಲ್ಪ ಕಷ್ಟ. ಆದರೆ ಒಂದು ಚಿಕ್ಕ ವಂದನೆ ಕೂಡ ತುಂಬ ಒಳ್ಳೇ ಪರಿಣಾಮ ಬೀರುತ್ತದೆ.

ಆದ್ದರಿಂದ ‘ನಾನು ವಂದಿಸುವುದರಿಂದ ಏನು ಒಳ್ಳೇದಾಗುತ್ತದೆ? ವಂದಿಸುವುದರ ಬಗ್ಗೆ ಬೈಬಲಿನಿಂದ ನಾನೇನು ಕಲಿಯಬಹುದು?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ.

“ಎಲ್ಲ ರೀತಿಯ ಜನರನ್ನು” ವಂದಿಸಿರಿ

ಅನ್ಯಜನಾಂಗದಿಂದ ಕ್ರೈಸ್ತ ಸಭೆಗೆ ಬಂದ ಮೊದಲ ವ್ಯಕ್ತಿಯಾದ ಕೊರ್ನೇಲ್ಯನನ್ನು ಬರಮಾಡಿಕೊಂಡಾಗ ಅಪೊಸ್ತಲ ಪೇತ್ರನು “ದೇವರು ಪಕ್ಷಪಾತಿಯಲ್ಲ” ಎಂದು ಹೇಳಿದನು. (ಅ. ಕಾ. 10:34) ನಂತರ ‘ಎಲ್ಲರೂ ಪಶ್ಚಾತ್ತಾಪ ಹೊಂದುವುದನ್ನು ದೇವರು ಬಯಸುತ್ತಾನೆ’ ಎಂದೂ ಹೇಳಿದನು. (2 ಪೇತ್ರ 3:9) ಮೇಲ್ನೋಟಕ್ಕೆ ಆ ವಚನಗಳು ಸತ್ಯಕ್ಕೆ ಹೊಸದಾಗಿ ಬಂದವರ ಬಗ್ಗೆ ಮಾತಾಡುತ್ತಿದೆ ಎಂದು ಅನಿಸಬಹುದು. ಆದರೆ “ಎಲ್ಲ ರೀತಿಯ ಜನರನ್ನು ಗೌರವಿಸಿರಿ, ಸಹೋದರರ ಇಡೀ ಬಳಗವನ್ನು ಪ್ರೀತಿಸಿರಿ” ಎಂದು ಪೇತ್ರನು ಎಲ್ಲ ಕ್ರೈಸ್ತರನ್ನು ಉತ್ತೇಜಿಸಿದ್ದಾನೆ. (1 ಪೇತ್ರ 2:17) ಹಾಗಾದರೆ ಬೇರೆ ಜನಾಂಗ, ಸಂಸ್ಕೃತಿ, ಹಿನ್ನೆಲೆಯ ಜನರನ್ನೂ ನಾವು ವಂದಿಸುವುದು ಒಳ್ಳೇದಲ್ವಾ? ಹೀಗೆ ನಾವು ಅವರಿಗೆ ಗೌರವ, ಪ್ರೀತಿ ತೋರಿಸುತ್ತೇವೆ.

“ಕ್ರಿಸ್ತನು ನಮ್ಮನ್ನು ಸ್ವಾಗತಿಸಿದಂತೆ ನೀವು ಸಹ ಒಬ್ಬರನ್ನೊಬ್ಬರು ಸ್ವಾಗತಿಸಿರಿ” ಎಂದು ಅಪೊಸ್ತಲ ಪೌಲನು ಸಭೆಯವರನ್ನು ಪ್ರೋತ್ಸಾಹಿಸಿದನು. (ರೋಮ. 15:7, ಪಾದಟಿಪ್ಪಣಿ) ಪೌಲನು ತನಗೆ “ಬಲವರ್ಧಕ ಸಹಾಯ” ಆಗಿದ್ದ ಸಹೋದರರ ಹೆಸರನ್ನು ಉಲ್ಲೇಖಿಸಿ ಮಾತಾಡಿದನು. ಇಂದು ಸೈತಾನನು ದೇವಜನರ ಮೇಲೆ ತನ್ನ ಆಕ್ರಮಣವನ್ನು ತೀವ್ರಗೊಳಿಸಿರುವಾಗ ನಮ್ಮ ಸಹೋದರ ಸಹೋದರಿಯರಿಗೆ ನಾವು ಬಲವರ್ಧಕ ಸಹಾಯ ಆಗಿರುವುದು ತುಂಬ ಮುಖ್ಯ ಅಲ್ಲವೆ?—ಕೊಲೊ. 4:11; ಪ್ರಕ. 12:12, 17.

ನಾವು ವಂದಿಸುವುದರಿಂದ ಬೇರೆಯವರಿಗೆ ಸಂತೋಷ ಆಗುವುದು ಮಾತ್ರವಲ್ಲ ಇನ್ನೂ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದು ಬೈಬಲಿನಲ್ಲಿರುವ ಉದಾಹರಣೆಗಳು ತೋರಿಸುತ್ತವೆ.

ವಂದಿಸುವುದರಿಂದ ಸಿಗುವ ಪ್ರಯೋಜನಗಳು

ತನ್ನ ಮಗನ ಜೀವವನ್ನು ಮರಿಯಳ ಗರ್ಭಕ್ಕೆ ಸ್ಥಳಾಂತರಿಸುವ ಸಮಯ ಬಂದಾಗ ಅವಳ ಹತ್ತಿರ ಮಾತಾಡಲು ಯೆಹೋವನು ಒಬ್ಬ ದೇವದೂತನನ್ನು ಕಳುಹಿಸಿದನು. ಆ ದೇವದೂತನು ಮರಿಯಳನ್ನು ವಂದಿಸುತ್ತಾ “ಅತ್ಯಂತ ಅನುಗ್ರಹಪಾತ್ರಳೇ, ನಿನಗೆ ನಮಸ್ಕಾರ; ಯೆಹೋವನು ನಿನ್ನೊಂದಿಗಿದ್ದಾನೆ” ಅಂದನು. ಒಬ್ಬ ದೇವದೂತನು ತನ್ನ ಹತ್ತಿರ ಯಾಕೆ ಮಾತಾಡುತ್ತಿದ್ದಾನೆ ಎಂದು ಅರ್ಥವಾಗದೆ ಮರಿಯಳು ‘ಬಹಳವಾಗಿ ಗಲಿಬಿಲಿಗೊಂಡಳು.’ ಆಗ ದೇವದೂತನು “ಮರಿಯಳೇ, ಭಯಪಡಬೇಡ; ನೀನು ದೇವರ ಅನುಗ್ರಹಕ್ಕೆ ಪಾತ್ರಳಾಗಿದ್ದೀ” ಅಂದನು. ಅವಳು ಮೆಸ್ಸೀಯನ ತಾಯಿಯಾಗಲಿದ್ದಾಳೆ, ಇದು ದೇವರ ಉದ್ದೇಶವಾಗಿದೆ ಎಂದು ವಿವರಿಸಿದನು. ಕೂಡಲೆ ಅವಳು ತನ್ನ ಚಿಂತೆಯನ್ನು ಮರೆತು “ಇಗೋ, ನಾನು ಯೆಹೋವನ ದಾಸಿ! ನೀನು ಹೇಳಿದಂತೆಯೇ ನನಗೆ ಸಂಭವಿಸಲಿ” ಎಂದು ಹೇಳಿದಳು.—ಲೂಕ 1:26-38.

ಯೆಹೋವನ ಸಂದೇಶವಾಹಕನಾಗಿ ಬಂದಿರುವುದು ಆ ದೇವದೂತನಿಗೆ ಒಂದು ದೊಡ್ಡ ಸುಯೋಗವಾಗಿತ್ತು. ಆದರೂ ಒಬ್ಬ ಅಪರಿಪೂರ್ಣ ವ್ಯಕ್ತಿಯ ಹತ್ತಿರ ಮಾತಾಡುವುದು ಕೀಳಾದ ವಿಷಯ ಎಂದು ಆ ದೇವದೂತನು ನೆನಸಲಿಲ್ಲ. ಆತನು ಮರಿಯಳಿಗೆ ಮೊದಲು ವಂದಿಸಿದನು. ಇದರಿಂದ ನಾವೇನು ಕಲಿಯಬಹುದು? ನಾವು ಬೇರೆಯವರನ್ನು ನೋಡಿದಾಗ ಮೊದಲು ವಂದಿಸಬೇಕು. ಇದು ಅವರನ್ನು ಪ್ರೋತ್ಸಾಹಿಸುತ್ತದೆ. ಕೆಲವೇ ಮಾತುಗಳಲ್ಲಿ ನಾವು ಬೇರೆಯವರನ್ನು ಉತ್ತೇಜಿಸಬಹುದು ಮತ್ತು ಅವರು ಯೆಹೋವನ ಜನರಲ್ಲಿ ಒಬ್ಬರಾಗಿದ್ದಾರೆ ಎಂದು ಭರವಸೆ ತುಂಬಬಹುದು.

ಪೌಲನಿಗೆ ಏಷ್ಯಾ ಮೈನರ್‌ ಮತ್ತು ಯೂರೋಪಿನಾದ್ಯಂತ ಇದ್ದ ಸಭೆಗಳಲ್ಲಿರುವ ಅನೇಕ ಸಹೋದರ ಸಹೋದರಿಯರ ಪರಿಚಯವಾಯಿತು. ಅವರಲ್ಲಿ ಅನೇಕರನ್ನು ತನ್ನ ಪತ್ರಗಳಲ್ಲಿ ಹೆಸರಿಸಿ ವಂದನೆ ತಿಳಿಸಿದ್ದಾನೆ. ಇದು ರೋಮನ್ನರಿಗೆ 16​ನೇ ಅಧ್ಯಾಯದಲ್ಲಿದೆ. ಫೊಯಿಬೆಯನ್ನು “ನಮ್ಮ ಸಹೋದರಿ” ಎಂದು ತಿಳಿಸುತ್ತಾ “ಅವಳನ್ನು ಪವಿತ್ರ ಜನರಿಗೆ ತಕ್ಕ ಹಾಗೆ ಕರ್ತನಲ್ಲಿ ಬರಮಾಡಿಕೊಂಡು ಅವಳಿಗೆ ಅಗತ್ಯವಿರುವ ಯಾವುದೇ ಸಹಾಯವನ್ನು ಮಾಡಿರಿ” ಎಂದು ಹೇಳಿದನು. ಪ್ರಿಸ್ಕಳಿಗೂ ಅಕ್ವಿಲನಿಗೂ ವಂದನೆ ತಿಳಿಸುತ್ತಾ “ಅವರಿಗೆ ನಾನು ಮಾತ್ರವಲ್ಲ ಅನ್ಯಜನಾಂಗಗಳ ಸಭೆಗಳವರೆಲ್ಲರೂ ಕೃತಜ್ಞತೆಯನ್ನು ಸಲ್ಲಿಸುತ್ತಾರೆ” ಎಂದು ಹೇಳಿದನು. “ಪ್ರಿಯ ಎಪೈನೆತನಿಗೂ” “ಕರ್ತನ ಸೇವೆಯಲ್ಲಿ ಪ್ರಯಾಸಪಟ್ಟು ಕೆಲಸಮಾಡುತ್ತಿರುವ ತ್ರುಫೈನಳಿಗೂ ತ್ರುಫೋಸಳಿಗೂ” ವಂದನೆ ತಿಳಿಸಿದನು. ಇವರ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಪೌಲನು ವಂದಿಸಲು ಹಿಂಜರಿಯಲಿಲ್ಲ.—ರೋಮ. 16:1-16.

ಪೌಲನು ತಮಗೆ ಪ್ರೀತಿಯಿಂದ ವಂದಿಸಿದ್ದರಿಂದ ಆ ಸಹೋದರ ಸಹೋದರಿಯರಿಗೆ ತುಂಬ ಖುಷಿಯಾಗಿರಬೇಕು. ಇದರಿಂದ ಅವರಿಗೆ ಪೌಲನ ಮೇಲೆ ಮತ್ತು ಒಬ್ಬರಿಗೊಬ್ಬರ ಮೇಲೆ ಪ್ರೀತಿ ಹೆಚ್ಚಾಗಿರಬೇಕು. ಬೇರೆ ಕ್ರೈಸ್ತರಿಗೂ ನಂಬಿಕೆಯಲ್ಲಿ ದೃಢವಾಗಿರಲು ಖಂಡಿತ ಪ್ರೋತ್ಸಾಹ ಸಿಕ್ಕಿರಬೇಕು. ನಾವು ವಂದಿಸುವಾಗ ಇನ್ನೊಬ್ಬರ ಮೇಲೆ ನಿಜವಾದ ಆಸಕ್ತಿಯಿದೆ ಎಂದು ತೋರಿಸಬೇಕು, ಮನಸಾರೆ ಪ್ರಶಂಸಿಸಬೇಕು. ಇದರಿಂದ ಸ್ನೇಹಸಂಬಂಧ ಬಲವಾಗುತ್ತದೆ ಮತ್ತು ದೇವರ ನಿಷ್ಠಾವಂತ ಸೇವಕರ ಮಧ್ಯೆ ಅನ್ಯೋನ್ಯತೆ ಹೆಚ್ಚುತ್ತದೆ.

ಪೌಲನು ಪೊತಿಯೋಲದ ಬಂದರಿಗೆ ಬಂದು ರೋಮ್‌ ಪಟ್ಟಣಕ್ಕೆ ಹೋಗುತ್ತಿದ್ದಾಗ ಅಲ್ಲಿನ ಸಹೋದರರು ಆತನನ್ನು ಭೇಟಿಯಾಗಲು ಬಂದರು. ಅವರು ದೂರದಲ್ಲಿ ಬರುತ್ತಿರುವುದನ್ನು ನೋಡಿಯೇ ಪೌಲನು “ದೇವರಿಗೆ ಕೃತಜ್ಞತೆ ಸಲ್ಲಿಸಿ ಧೈರ್ಯಗೊಂಡನು.” (ಅ. ಕಾ. 28:13-15) ಕೆಲವೊಮ್ಮೆ ನಮಗೆ ಬೇರೆಯವರನ್ನು ನೋಡಿ ಮುಗುಳ್ನಗೆ ಬೀರಲು ಅಥವಾ ಕೈಯಾಡಿಸಲು ಮಾತ್ರ ಸಾಧ್ಯವಾಗಬಹುದು. ಇಷ್ಟನ್ನು ಮಾಡಿದರೂ ಪ್ರೋತ್ಸಾಹ ಸಿಗಬಹುದು. ದುಃಖದಲ್ಲಿ ಬೇಜಾರಲ್ಲಿ ಇರುವವರನ್ನು ನೋಡಿ ಇದಿಷ್ಟನ್ನು ಮಾಡಿದರೂ ಅವರಿಗೆ ತುಂಬ ಸಂತೋಷವಾಗುತ್ತದೆ.

ಇನ್ಯಾವ ಪ್ರಯೋಜನಗಳಿವೆ?

ಶಿಷ್ಯ ಯಾಕೋಬನು ಕೆಲವು ಕ್ರೈಸ್ತರಿಗೆ ಗಂಭೀರವಾಗಿ ಬುದ್ಧಿವಾದ ಹೇಳುವ ಸನ್ನಿವೇಶ ಬಂತು. ಯಾಕೆಂದರೆ ಅವರು ಲೋಕದ ಸ್ನೇಹ ಬೆಳೆಸಿ ಆಧ್ಯಾತ್ಮಿಕವಾಗಿ ವ್ಯಭಿಚಾರಿಗಳಾಗಿದ್ದರು. (ಯಾಕೋ. 4:4) ಆದರೂ ಯಾಕೋಬನು ತನ್ನ ಪತ್ರದ ಆರಂಭದಲ್ಲಿ ಏನು ಹೇಳಿದ್ದಾನೆಂದು ನೋಡಿ:

“ದೇವರ ಮತ್ತು ಕರ್ತನಾದ ಯೇಸು ಕ್ರಿಸ್ತನ ದಾಸನಾಗಿರುವ ಯಾಕೋಬನು ಚೆದರಿಹೋಗಿರುವ ಹನ್ನೆರಡು ಕುಲಗಳವರಿಗೆ ಬರೆಯುವುದೇನೆಂದರೆ, ವಂದನೆಗಳು!” (ಯಾಕೋ. 1:1) ದೇವರ ಮುಂದೆ ನಾವೆಲ್ಲರೂ ಒಂದೇ ಆಗಿದ್ದೇವೆ ಅನ್ನುವ ರೀತಿಯಲ್ಲಿ ಅವನು ವಂದಿಸಿದ್ದನ್ನು ನೋಡಿದಾಗ ಆತನ ಪತ್ರವನ್ನು ಓದಿದವರಿಗೆ ಆತನು ಕೊಟ್ಟ ಬುದ್ಧಿವಾದವನ್ನು ಸ್ವೀಕರಿಸಲು ಸುಲಭವಾಗಿರಬೇಕು. ಆದ್ದರಿಂದ ನಾವು ದೀನರಾಗಿ ಬೇರೆಯವರನ್ನು ವಂದಿಸಿದರೆ ಗಂಭೀರವಾದ ವಿಷಯಗಳನ್ನೂ ಚರ್ಚಿಸಲು ದಾರಿ ತೆರೆಯುತ್ತದೆ.

ನಾವು ಮಾಡುವ ವಂದನೆ ಬೇರೆಯವರ ಮೇಲೆ ಒಳ್ಳೇ ಪರಿಣಾಮ ಬೀರಬೇಕಾದರೆ, ವಂದನೆ ಚಿಕ್ಕದಾಗಿದ್ದರೂ ಮನದಾಳದಿಂದ ಬರಬೇಕು, ಪ್ರೀತಿಯಿಂದ ಕೂಡಿರಬೇಕು. ನಾವು ವಂದಿಸುವುದು ಬೇರೆಯವರ ಗಮನಕ್ಕೆ ಬರಲ್ಲ ಎಂದು ಅನಿಸುವಾಗಲೂ ಹಾಗೆ ಮಾಡಬೇಕು. (ಮತ್ತಾ. 22:39) ಐರ್ಲೆಂಡ್‌ನಲ್ಲಿ ಒಬ್ಬ ಸಹೋದರಿ ಒಮ್ಮೆ ಇನ್ನೇನು ಕೂಟ ಆರಂಭವಾಗಲಿದ್ದಾಗ ರಾಜ್ಯ ಸಭಾಗೃಹಕ್ಕೆ ಬಂದರು. ಅವರು ಅವಸರದಲ್ಲಿ ಒಳಗೆ ಬರುತ್ತಿದ್ದಾಗ ಒಬ್ಬ ಸಹೋದರ ತಿರುಗಿ ಮುಗುಳ್ನಗೆ ಬೀರಿ “ಹಲೋ, ನಿಮ್ಮನ್ನು ನೋಡಿ ತುಂಬ ಖುಷಿಯಾಯ್ತು” ಅಂದರು. ಆ ಸಹೋದರಿ ಏನೂ ಮಾತಾಡದೆ ಹೋಗಿ ಕೂತುಕೊಂಡರು.

ಕೆಲವು ವಾರಗಳ ನಂತರ ಆ ಸಹೋದರಿ ಆ ಸಹೋದರನ ಹತ್ತಿರ ಹೋಗಿ ಸ್ವಲ್ಪ ಸಮಯದಿಂದ ಅವರ ಮನೆಯಲ್ಲಿ ಏನೋ ಸಮಸ್ಯೆ ಇತ್ತು ಎಂದು ಹೇಳಿದರು. “ಅವತ್ತು ಸಂಜೆ ಎಷ್ಟು ಬೇಜಾರಾಗಿತ್ತೆಂದರೆ, ನಾನು ರಾಜ್ಯ ಸಭಾಗೃಹಕ್ಕೆ ಬಂದರೂ ನನ್ನ ಮನಸ್ಸು ಎಲ್ಲೋ ಇತ್ತು. ಕೂಟದಲ್ಲಿ ಯಾವ ವಿಷಯ ಇತ್ತು ಅಂತ ನನಗೆ ಅಷ್ಟೇನೂ ನೆನಪಿಲ್ಲ, ಆದರೆ ನೀವು ವಂದಿಸಿದ್ದು ನನಗೆ ನೆನಪಿದೆ. ನನಗೆ ಅದರಿಂದ ಸಂತೋಷವಾಯಿತು. ಥ್ಯಾಂಕ್ಯು” ಎಂದರು.

ತಾನು ಸಂಕ್ಷಿಪ್ತವಾಗಿ ವಂದಿಸಿದ್ದರೂ ಅದು ಆ ಸಹೋದರಿಯ ಮೇಲೆ ಅಷ್ಟು ಪ್ರಭಾವ ಬೀರಿದೆ ಎಂದು ಆ ಸಹೋದರನಿಗೆ ಗೊತ್ತಾಗಲಿಲ್ಲ. “ನಾನು ಆಡಿದ ಒಂದೆರಡು ಮಾತು ಅವರಿಗೆ ತುಂಬ ಪ್ರೋತ್ಸಾಹ ಕೊಟ್ಟಿತು ಅಂತ ಸಹೋದರಿ ಹೇಳಿದಾಗ ನಾನು ಮಾಡಿದ ಪ್ರಯತ್ನ ಸಾರ್ಥಕವಾಯಿತು ಅಂತ ಅನಿಸಿತು. ನನಗೂ ತುಂಬ ಸಂತೋಷವಾಯಿತು” ಎಂದು ಅವರು ಹೇಳುತ್ತಾರೆ.

ಸೊಲೊಮೋನ ಹೀಗೆ ಬರೆದನು: “ನಿನ್ನ ಆಹಾರವನ್ನು ನೀರಿನ ಮೇಲೆ ಚೆಲ್ಲು, ಬಹು ದಿನದ ಮೇಲೆ ಅದು ನಿನಗೆ ಸಿಕ್ಕುವದು.” (ಪ್ರಸಂ. 11:1) ವಂದಿಸುವುದು ಎಷ್ಟು ಮುಖ್ಯ ಎಂದು ಈ ಲೇಖನದಿಂದ ಗೊತ್ತಾಯಿತು. ಎಲ್ಲರಿಗೂ ಅದರಲ್ಲೂ ನಮ್ಮ ಕ್ರೈಸ್ತ ಸಹೋದರ ಸಹೋದರಿಯರಿಗೆ ವಂದಿಸಿ ಅವರನ್ನು ಸಂತೋಷಪಡಿಸೋಣ, ನಾವೂ ಸಂತೋಷವಾಗಿರೋಣ. ಆದ್ದರಿಂದ ವಂದಿಸುವುದರಿಂದ ಬಹಳಷ್ಟು ಸಾಧಿಸಬಹುದು ಎನ್ನುವುದನ್ನು ಮರೆಯದಿರೋಣ.