ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 26

ಒತ್ತಡದಲ್ಲಿ ಇರುವವರಿಗೆ ಸಹಾಯ ಮಾಡಿ

ಒತ್ತಡದಲ್ಲಿ ಇರುವವರಿಗೆ ಸಹಾಯ ಮಾಡಿ

“ನೀವೆಲ್ಲರೂ ಏಕಮನಸ್ಸುಳ್ಳವರೂ ಅನುಕಂಪ ತೋರಿಸುವವರೂ ಸಹೋದರ ಮಮತೆಯುಳ್ಳವರೂ ಕೋಮಲವಾದ ಕನಿಕರವುಳ್ಳವರೂ ದೀನಮನಸ್ಸುಳ್ಳವರೂ ಆಗಿರಿ.”—1 ಪೇತ್ರ 3:8.

ಗೀತೆ 50 ಪ್ರೀತಿಯ ದೈವಿಕ ಆದರ್ಶ

ಕಿರುನೋಟ *

1. ನಮ್ಮ ಪ್ರೀತಿಯ ತಂದೆಯಾದ ಯೆಹೋವನಂತೆ ನಾವು ಏನು ಮಾಡುತ್ತೇವೆ?

ಯೆಹೋವನು ನಮ್ಮನ್ನು ತುಂಬ ಪ್ರೀತಿಸುತ್ತಾನೆ. (ಯೋಹಾ. 3:16) ನಮ್ಮ ತಂದೆಯಂತೆ ನಾವು ಕೂಡ ಎಲ್ಲರಿಗೂ ಪ್ರೀತಿ ತೋರಿಸಲು ಇಷ್ಟಪಡುತ್ತೇವೆ. ಅದರಲ್ಲೂ “ನಂಬಿಕೆಯಲ್ಲಿ ನಮ್ಮ ಸಂಬಂಧಿಕರಂತಿರುವವರಿಗೆ” ‘ಅನುಕಂಪ, ಸಹೋದರ ಮಮತೆ ಮತ್ತು ಕೋಮಲ ಕನಿಕರ’ ತೋರಿಸುತ್ತೇವೆ. (1 ಪೇತ್ರ 3:8; ಗಲಾ. 6:10) ಯೆಹೋವನನ್ನು ಆರಾಧಿಸುವ ನಮ್ಮ ಸಹೋದರ-ಸಹೋದರಿಯರು ಒತ್ತಡವನ್ನು ಎದುರಿಸುವಾಗ ಅವರಿಗೆ ಸಹಾಯ ಮಾಡುತ್ತೇವೆ.

2. ಈ ಲೇಖನದಲ್ಲಿ ನಾವು ಏನು ಚರ್ಚಿಸಲಿದ್ದೇವೆ?

2 ಯೆಹೋವನನ್ನು ಆರಾಧಿಸಲು ಬಯಸುವ ಪ್ರತಿಯೊಬ್ಬರಿಗೂ ಒತ್ತಡ ಬಂದೇ ಬರುತ್ತದೆ. (ಮಾರ್ಕ 10:29, 30) ಈ ಲೋಕದ ಅಂತ್ಯ ಹತ್ತಿರ ಆಗುತ್ತಿರುವಾಗ ನಮಗೆ ಇನ್ನೂ ಜಾಸ್ತಿ ಕಷ್ಟಗಳು ಬರಬಹುದು. ಇದನ್ನೆಲ್ಲ ನಿಭಾಯಿಸಲು ನಾವು ಒಬ್ಬರಿಗೊಬ್ಬರು ಹೇಗೆ ಸಹಾಯ ಮಾಡಬಹುದು? ಇದಕ್ಕಾಗಿ ನಾವು ಈಗ ಲೋಟ, ಯೋಬ ಮತ್ತು ನೊವೊಮಿಯ ಅನುಭವಗಳ ಬಗ್ಗೆ ಚರ್ಚಿಸುತ್ತಾ ನಾವೇನು ಕಲಿಯಬಹುದು ಎಂದು ನೋಡೋಣ. ಅಷ್ಟೇ ಅಲ್ಲ, ಇಂದು ನಮ್ಮ ಸಹೋದರ-ಸಹೋದರಿಯರಿಗೆ ಬರುವ ಕೆಲವು ಕಷ್ಟಗಳ ಬಗ್ಗೆ ಮತ್ತು ಆ ಕಷ್ಟಗಳನ್ನು ನಿಭಾಯಿಸಲು ನಾವು ಹೇಗೆ ಅವರಿಗೆ ಸಹಾಯ ಮಾಡಬಹುದು ಅನ್ನುವುದರ ಬಗ್ಗೆ ಚರ್ಚಿಸೋಣ.

ತಾಳ್ಮೆಯಿಂದ ನಡಕೊಳ್ಳಿ

3. (ಎ) ಲೋಟನು 2 ಪೇತ್ರ 2:7, 8 ಹೇಳುವಂತೆ ಯಾವ ತಪ್ಪು ನಿರ್ಧಾರ ಮಾಡಿದನು? (ಬಿ) ಇದರ ಫಲಿತಾಂಶ ಏನಾಯಿತು?

3 ಲೋಟನು ಸೋದೋಮಿನ ನೀತಿಗೆಟ್ಟ ಜನರ ಮಧ್ಯೆ ವಾಸಿಸುವ ತೀರ್ಮಾನ ಮಾಡಿದ್ದು ದೊಡ್ಡ ತಪ್ಪಾಗಿತ್ತು. (2 ಪೇತ್ರ 2:7, 8 ಓದಿ.) ಸೋದೋಮ್‌ ತುಂಬ ಸಮೃದ್ಧವಾದ ಸ್ಥಳವಾಗಿತ್ತು. ಆದರೆ ಅಲ್ಲಿ ಹೋಗಿ ಲೋಟನು ತುಂಬ ಕಷ್ಟಪಡಬೇಕಾಯಿತು. (ಆದಿ. 13:8-13; 14:12) ಅವನ ಹೆಂಡತಿಗೆ ಆ ಪಟ್ಟಣ ತುಂಬ ಇಷ್ಟ ಆಗಿರಬೇಕು ಅಥವಾ ಅಲ್ಲಿನ ಕೆಲವು ಜನರು ಅವಳಿಗೆ ತುಂಬ ಇಷ್ಟ ಆಗಿರಬೇಕು. ಹಾಗಾಗಿ ಅವಳು ಯೆಹೋವನ ಮಾತನ್ನು ಮುರಿದಳು. ಆ ಪಟ್ಟಣದ ಮೇಲೆ ದೇವರು ಆಕಾಶದಿಂದ ಬೆಂಕಿ ಗಂಧಕಗಳನ್ನು ಸುರಿಸಿದಾಗ ಅವಳು ಪ್ರಾಣ ಕಳಕೊಂಡಳು. ಲೋಟನ ಇಬ್ಬರು ಹೆಣ್ಣುಮಕ್ಕಳ ಬಗ್ಗೆ ನೋಡಿ. ಆ ಪಟ್ಟಣದ ಹುಡುಗರ ಜೊತೆ ಅವರ ನಿಶ್ಚಿತಾರ್ಥ ಆಗಿತ್ತು. ಆದರೆ ಆ ಪಟ್ಟಣ ನಾಶವಾದಾಗ ಆ ಹುಡುಗರೂ ಪ್ರಾಣ ಕಳಕೊಂಡರು. ಲೋಟ ತನ್ನ ಮನೆ, ಆಸ್ತಿಪಾಸ್ತಿ ಕಳಕೊಂಡನು. ತುಂಬ ದುಃಖದ ವಿಷಯ ಏನೆಂದರೆ ಅವನು ತನ್ನ ಹೆಂಡತಿಯನ್ನೂ ಕಳಕೊಂಡನು. (ಆದಿ. 19:12-14, 17, 26) ಇಂಥ ಒತ್ತಡದ ಸಮಯದಲ್ಲಿ ಲೋಟನ ಜೊತೆ ಯೆಹೋವನು ತಾಳ್ಮೆಯಿಂದ ನಡಕೊಂಡನಾ?

ಯೆಹೋವನು ಲೋಟ ಮತ್ತು ಅವನ ಕುಟುಂಬದವರ ಮೇಲೆ ಕನಿಕರಪಟ್ಟು ಅವರನ್ನು ಕಾಪಾಡಲು ದೇವದೂತರನ್ನು ಕಳುಹಿಸಿದನು (ಪ್ಯಾರ 4 ನೋಡಿ)

4. ಯೆಹೋವನು ಲೋಟನ ಜೊತೆ ಹೇಗೆ ತಾಳ್ಮೆಯಿಂದ ನಡಕೊಂಡನು? (ಮುಖಪುಟ ಚಿತ್ರ ನೋಡಿ.)

4 ಲೋಟನು ಸೋದೋಮಿನಲ್ಲಿ ವಾಸಿಸುವ ತೀರ್ಮಾನ ತೆಗೆದುಕೊಂಡಿದ್ದರೂ ಆ ಪಟ್ಟಣವನ್ನು ನಾಶಮಾಡುವಾಗ ಯೆಹೋವನು ಅವನಿಗೆ ಕನಿಕರ ತೋರಿಸಿದನು. ಹೇಗೆಂದರೆ ಅವನನ್ನೂ ಅವನ ಕುಟುಂಬವನ್ನೂ ಕಾಪಾಡಲು ಇಬ್ಬರು ದೇವದೂತರನ್ನು ಕಳುಹಿಸಿದನು. ‘ಸೋದೋಮನ್ನು ಬಿಟ್ಟು ಬೇಗ ಓಡಿಹೋಗಿ‘ ಎಂದು ದೇವದೂತರು ಹೇಳಿದರೂ ಲೋಟ ‘ತಡಮಾಡುತ್ತಾ’ ಇದ್ದನು. ಆ ದೇವದೂತರು ಅವನ ಮತ್ತು ಅವನ ಕುಟುಂಬದ ಕೈಹಿಡಿದು ಪಟ್ಟಣದ ಹೊರಗೆ ತಂದು ಬಿಡಬೇಕಾಯಿತು. (ಆದಿ. 19:15, 16) ಆಮೇಲೆ ಬೆಟ್ಟಕ್ಕೆ ಓಡಿಹೋಗಿ ಎಂದು ಆ ದೇವದೂತರು ಹೇಳಿದರು. ಅದನ್ನು ಮಾಡುವ ಬದಲು ಹತ್ತಿರನೇ ಇದ್ದ ಒಂದು ಊರಿಗೆ ಓಡಿಹೋಗುತ್ತೇವೆ ಎಂದು ಲೋಟ ಕೇಳಿಕೊಂಡನು. (ಆದಿ. 19:17-20) ಆಗಲೂ ಯೆಹೋವನು ತಾಳ್ಮೆ ತೋರಿಸುತ್ತಾ ಅಲ್ಲಿಗೆ ಹೋಗಲು ಅನುಮತಿ ನೀಡಿದನು. ಆದರೆ ನಂತರ ಲೋಟನು ಆ ಊರಲ್ಲಿ ವಾಸಿಸಲು ಭಯಪಟ್ಟು ಯೆಹೋವನು ಮೊದಲು ಯಾವ ಬೆಟ್ಟದ ಪ್ರದೇಶಕ್ಕೆ ಹೋಗಲು ಹೇಳಿದ್ದನೋ ಅಲ್ಲಿಗೇ ಹೋಗಿ ವಾಸಿಸಿದನು. (ಆದಿ. 19:30) ದೇವರು ಲೋಟನ ಜೊತೆ ಎಷ್ಟು ತಾಳ್ಮೆಯಿಂದ ನಡಕೊಂಡನು! ದೇವರಂತೆ ನಾವು ಹೇಗೆ ತಾಳ್ಮೆಯಿಂದ ಇರಬಹುದು?

5-6. ನಾವು 1 ಥೆಸಲೊನೀಕ 5:14 ನ್ನು ಪಾಲಿಸುತ್ತಾ ಯೆಹೋವನಂತೆ ಹೇಗೆ ತಾಳ್ಮೆಯಿಂದ ನಡಕೊಳ್ಳಬಹುದು?

5 ಲೋಟನಂತೆ ನಮ್ಮ ಸಹೋದರ-ಸಹೋದರಿಯರಲ್ಲಿ ಯಾರಾದರೂ ತಪ್ಪಾದ ತೀರ್ಮಾನ ಮಾಡಿ ಅದರ ಪರಿಣಾಮಗಳನ್ನು ಅನುಭವಿಸುತ್ತಾ ಇರಬಹುದು. ಆಗ ನಾವು ಅವರ ಜೊತೆ ಹೇಗೆ ನಡಕೊಳ್ಳುತ್ತೇವೆ? ಅವರಿಗೆ ‘ನೀವು ಬಿತ್ತಿದ್ದನ್ನೇ ಕೊಯ್ಯುತ್ತಾ ಇದ್ದೀರಿ’ ಎಂದು ಹೇಳಿಬಿಡಲು ನಮಗೆ ಮನಸ್ಸಾಗಬಹುದು. (ಗಲಾ. 6:7) ಆದರೆ ಆ ರೀತಿ ಹೇಳುವ ಬದಲು ನಾವು ಯೆಹೋವನಂತೆ ನಡಕೊಳ್ಳಬೇಕು. ತಪ್ಪು ತೀರ್ಮಾನ ಮಾಡಿದ ಲೋಟನಿಗೆ ಆತನು ಸಹಾಯ ಮಾಡಿದನು. ಹೇಗೆ?

6 ಯೆಹೋವನು ದೇವದೂತರನ್ನು ಕಳುಹಿಸಿದ್ದು ಸೋದೋಮಿನ ನಾಶದ ಬಗ್ಗೆ ಲೋಟನಿಗೆ ಎಚ್ಚರಿಕೆ ನೀಡಲು ಮಾತ್ರ ಅಲ್ಲ. ಲೋಟನು ಅದರಿಂದ ಬಚಾವಾಗಲು ಸಹಾಯ ಮಾಡುವುದಕ್ಕಾಗಿಯೂ ಆ ದೇವದೂತರನ್ನು ಕಳುಹಿಸಿದನು. ಒಬ್ಬ ಸಹೋದರನು ಅಪಾಯಕ್ಕೆ ಸಿಕ್ಕಿಕೊಳ್ಳುವ ತರ ಇದ್ದರೆ ನಾವು ಸಹ ಎಚ್ಚರಿಸಬೇಕು. ಅಷ್ಟೇ ಅಲ್ಲ, ಅವನಿಗೆ ಸಹಾಯ ಕೂಡ ಮಾಡಬೇಕು. ಬೈಬಲಿಂದ ಸಿಕ್ಕಿದ ಬುದ್ಧಿವಾದವನ್ನು ಅವನು ಬೇಗನೆ ಪಾಲಿಸುತ್ತಿಲ್ಲ ಅಂತಾದರೆ ನಾವು ತಾಳ್ಮೆ ಕಳಕೊಳ್ಳಬಾರದು. ಆ ಸಹೋದರ ಉದ್ಧಾರ ಆಗಲ್ಲ ಅಂತ ನೆನಸಬಾರದು. ಅವನನ್ನು ದೂರ ಇಡಬಾರದು. ಬರೀ ಮಾತಿನಿಂದಲ್ಲ, ನಮ್ಮ ಕ್ರಿಯೆಗಳ ಮೂಲಕವೂ ಅವನಿಗೆ ಸಹಾಯ ಮಾಡಬೇಕು. (1 ಯೋಹಾ. 3:18) ಅವನು ಬೈಬಲಿನ ಬುದ್ಧಿವಾದವನ್ನು ಪಾಲಿಸಲು ನಾವು ಆ ಇಬ್ಬರು ದೇವದೂತರ ತರ ಪ್ರಾಯೋಗಿಕವಾಗಿ ಸಹಾಯ ಮಾಡಬೇಕು.—1 ಥೆಸಲೊನೀಕ 5:14 ಓದಿ.

7. ಲೋಟನ ಬಗ್ಗೆ ಯೆಹೋವನಿಗಿದ್ದ ಅಭಿಪ್ರಾಯದಿಂದ ನಾವೇನು ಕಲಿಯಬಹುದು?

7 ಲೋಟನ ತಪ್ಪುಗಳಿಗೆ ಮತ್ತು ಕುಂದುಕೊರತೆಗಳಿಗೆ ಯೆಹೋವನು ಗಮನ ಕೊಡಬಹುದಿತ್ತು. ಆದರೆ ಲೋಟನು ನೀತಿವಂತನಾಗಿದ್ದ ಎಂದು ಬರೆಯುವಂತೆ ಅಪೊಸ್ತಲ ಪೇತ್ರನನ್ನು ಪ್ರೇರಿಸಿದನು. ಯೆಹೋವನು ನಮ್ಮ ತಪ್ಪುಗಳನ್ನು ಕ್ಷಮಿಸುವುದನ್ನು ನೋಡುವಾಗ ನಮಗೆ ಸಂತೋಷ ಆಗುತ್ತದೆ ಅಲ್ವಾ? (ಕೀರ್ತ. 130:3) ಲೋಟನ ಬಗ್ಗೆ ಯೆಹೋವನಿಗಿದ್ದ ಅಭಿಪ್ರಾಯದಿಂದ ನಾವೇನು ಕಲಿಯಬಹುದು? ನಮ್ಮ ಸಹೋದರ-ಸಹೋದರಿಯರ ಒಳ್ಳೇ ಗುಣಗಳ ಕಡೆಗೆ ನಾವು ಗಮನ ಹರಿಸಿದರೆ ಅವರ ಜೊತೆ ತುಂಬ ತಾಳ್ಮೆಯಿಂದ ನಡಕೊಳ್ಳುತ್ತೇವೆ. ಆಗ ನಾವು ಕೊಡುವ ಸಹಾಯವನ್ನು ಸ್ವೀಕರಿಸಲು ಅವರಿಗೂ ಸುಲಭ ಆಗುತ್ತದೆ.

ಕನಿಕರ ತೋರಿಸಿ

8. ಕನಿಕರ ಇದ್ದರೆ ನಾವೇನು ಮಾಡುತ್ತೇವೆ?

8 ಯೋಬನು ಲೋಟನಂತೆ ಯಾವುದೇ ತಪ್ಪು ತೀರ್ಮಾನ ಮಾಡಿರಲಿಲ್ಲ. ಆದರೂ ತುಂಬ ಕಷ್ಟ ಅನುಭವಿಸಿದನು. ಅವನು ತನ್ನ ಆಸ್ತಿಪಾಸ್ತಿ, ಸ್ಥಾನಮಾನ ಮತ್ತು ಆರೋಗ್ಯ ಕಳಕೊಂಡನು. ಮಕ್ಕಳನ್ನೂ ಕಳಕೊಂಡನು. ಏನೋ ತಪ್ಪು ಮಾಡಿದ್ದಾನೆ, ಅದಕ್ಕೆ ಅವನಿಗೆ ಇಷ್ಟೊಂದು ಕಷ್ಟ ಅಂತ ಅವನ ಮೂರು ಸ್ನೇಹಿತರು ದೂರಿದರು. ಸಮಾಧಾನ ಹೇಳೋಕೆ ಅಂತ ಬಂದವರು ಅವನಿಗೆ ಸಂಕಟ ತಂದರು. ಅವರು ಯೋಬನಿಗೆ ಯಾಕೆ ಕನಿಕರ ತೋರಿಸಲಿಲ್ಲ? ಒಂದು ಕಾರಣ ಏನೆಂದರೆ, ಯೋಬನ ಪರಿಸ್ಥಿತಿಯನ್ನು ಅವರು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ. ಇದರಿಂದಾಗಿ ಅವರು ಯೋಬನ ಬಗ್ಗೆ ತಪ್ಪಾಗಿ ಯೋಚನೆ ಮಾಡಿ ತುಂಬ ಒರಟಾಗಿ ಮಾತಾಡಿದರು. ಈ ತಪ್ಪನ್ನು ನಾವು ಮಾಡದೆ ಇರಬೇಕೆಂದರೆ ಏನು ಮಾಡಬೇಕು? ಒಬ್ಬ ವ್ಯಕ್ತಿಯ ಪರಿಸ್ಥಿತಿ ಬಗ್ಗೆ ಎಲ್ಲ ಚೆನ್ನಾಗಿ ಗೊತ್ತಿರುವುದು ಯೆಹೋವನಿಗೆ ಮಾತ್ರ ಅನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಆ ವ್ಯಕ್ತಿ ತಾನು ಪಡುತ್ತಿರುವ ಕಷ್ಟದ ಬಗ್ಗೆ ಮಾತಾಡುವಾಗ ಗಮನಕೊಟ್ಟು ಕೇಳಬೇಕು. ಅವರ ನೋವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಹೀಗೆ ಮಾಡಿದರೆ ಮಾತ್ರ ಆ ಸಹೋದರ ಅಥವಾ ಸಹೋದರಿಗೆ ಅನುಕಂಪ ತೋರಿಸಲು ನಮ್ಮಿಂದ ಸಾಧ್ಯ ಆಗುತ್ತದೆ.

9. ನಮಗೆ ಕನಿಕರ ಇದ್ದರೆ ನಾವು ಏನು ಮಾಡಲ್ಲ? ಯಾಕೆ?

9 ನಮಗೆ ಕನಿಕರ ಇದ್ದರೆ ಒಬ್ಬರ ಕಷ್ಟದ ಬಗ್ಗೆ ಇನ್ನೊಬ್ಬರ ಹತ್ತಿರ ಹೇಳಿ ಅವರ ಹೆಸರು ಹಾಳುಮಾಡಲ್ಲ. ಹರಟೆ ಮಲ್ಲ ತನ್ನ ಮಾತಿನಿಂದ ಸಭೆಗೆ ಒಳ್ಳೇದು ಮಾಡಲ್ಲ, ಸಭೆಯನ್ನು ಒಡೆಯುತ್ತಾನೆ. (ಜ್ಞಾನೋ. 20:19; ರೋಮ. 14:19) ಹಾಳು ಹರಟೆ ಮಾತಾಡುವವರಿಗೆ ಬೇರೆಯವರ ಮೇಲೆ ದಯೆ ಇರಲ್ಲ, ಕತ್ತಿತಿವಿದ ಹಾಗೆ ಮಾತಾಡುತ್ತಾರೆ. ಅಂಥವರ ಮಾತು ಕಷ್ಟದಲ್ಲಿರುವವರಿಗೆ ಗಾಯದ ಮೇಲೆ ಬರೆ ಎಳೆದಂತೆ ಇರುತ್ತದೆ. (ಜ್ಞಾನೋ. 12:18; ಎಫೆ. 4:31, 32) ಆದ್ದರಿಂದ ಒಬ್ಬ ವ್ಯಕ್ತಿಯಲ್ಲಿ ಇರುವ ಒಳ್ಳೇ ಗುಣಗಳಿಗೆ ಗಮನ ಕೊಟ್ಟರೆ ಮತ್ತು ಅವರಿಗೆ ಇರುವ ಸಮಸ್ಯೆಗಳನ್ನು ನಿಭಾಯಿಸಲು ಹೇಗೆ ಸಹಾಯ ಮಾಡಬಹುದು ಅನ್ನುವುದಕ್ಕೆ ಗಮನ ಕೊಟ್ಟರೆ ಎಷ್ಟೋ ಒಳ್ಳೇದು ಅಲ್ವಾ?

ನಮ್ಮ ಒಬ್ಬ ಸಹೋದರ ಅಥವಾ ಸಹೋದರಿ ಕೋಪದಿಂದ, ಬೇಜಾರಿಂದ ದುಡುಕಿ ಮಾತಾಡುತ್ತಿದ್ದರೆ ತಾಳ್ಮೆಯಿಂದ ಕೇಳಿಸಿಕೊಳ್ಳಿ. ನಂತರ ಸರಿಯಾದ ಸಮಯ ನೋಡಿ ಅವರಿಗೆ ಸಮಾಧಾನವಾಗುವ ವಿಷಯಗಳನ್ನು ಹೇಳಿ (ಪ್ಯಾರ 10-11 ನೋಡಿ) *

10. (ಎ) ಯೋಬ 6:2, 3 ರಿಂದ ನಮಗೆ ಏನು ಗೊತ್ತಾಗುತ್ತದೆ? (ಬಿ) ನಾವೇನು ಮಾಡಬೇಕು?

10 ಯೋಬ 6:2, 3 ಓದಿ. ಯೋಬನು ಕೆಲವೊಮ್ಮೆ ಯೋಚಿಸದೆ ದುಡುಕಿ ಮಾತಾಡಿದ್ದನು. ಆದರೆ ಆಮೇಲೆ ತಾನು ಹೇಳಿದ ಕೆಲವು ಮಾತುಗಳು ತಪ್ಪಾಗಿದ್ದವು ಎಂದು ಒಪ್ಪಿಕೊಂಡನು. (ಯೋಬ 42:6) ಇಂದು ಕೆಲವರು ಒತ್ತಡದಲ್ಲಿರುವಾಗ ಯೋಬನ ತರ ದುಡುಕಿ ಮಾತಾಡಿ ಆಮೇಲೆ ‘ತಪ್ಪಾಗಿ ಮಾತಾಡಿಬಿಟ್ಟೆ’ ಎಂದು ಬೇಜಾರು ಮಾಡಿಕೊಳ್ಳುತ್ತಾರೆ. ಆಗ ನಾವು ಏನು ಮಾಡಬೇಕು? ಅವರನ್ನು ಖಂಡಿಸುವ ಬದಲು ಕನಿಕರದಿಂದ ನಡಕೊಳ್ಳಬೇಕು. ನೆನಪಿಡಿ, ಮನುಷ್ಯರು ಕಷ್ಟಪಡಬೇಕು ಅನ್ನೋದು ಯೆಹೋವ ದೇವರ ಉದ್ದೇಶ ಆಗಿರಲಿಲ್ಲ. ಆದ್ದರಿಂದ ನಿಷ್ಠೆಯಿಂದ ಯೆಹೋವನ ಸೇವೆ ಮಾಡುತ್ತಿರುವ ವ್ಯಕ್ತಿ ಕೂಡ ಒತ್ತಡದಲ್ಲಿರುವಾಗ ಯೋಚಿಸದೆ ದುಡುಕಿ ಮಾತಾಡಿಬಿಡುವ ಸಾಧ್ಯತೆ ಇದೆ. ಒಂದುವೇಳೆ ಅವನು ಯೆಹೋವನ ಬಗ್ಗೆ ಅಥವಾ ನಮ್ಮ ಬಗ್ಗೆ ತಪ್ಪಾಗಿ ಏನಾದರೂ ಹೇಳಿದರೂ ಕೋಪ ಮಾಡಿಕೊಳ್ಳಬಾರದು, ಅವನು ಕೆಟ್ಟವನು ಅಂತ ತೀರ್ಮಾನಿಸಿಬಿಡಬಾರದು.—ಜ್ಞಾನೋ. 19:11.

11. ಹಿರಿಯರು ಬುದ್ಧಿವಾದ ಹೇಳುವಾಗ ಎಲೀಹುವಿನಂತೆ ಏನು ಮಾಡುತ್ತಾರೆ?

11 ಕಷ್ಟ-ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಕೆಲವೊಮ್ಮೆ ಬುದ್ಧಿವಾದ ಅಥವಾ ಶಿಸ್ತು ಕೊಡಬೇಕಾಗುತ್ತದೆ. (ಗಲಾ. 6:1) ಇದನ್ನು ಹಿರಿಯರು ಹೇಗೆ ಮಾಡಬೇಕು? ಈ ವಿಷಯದಲ್ಲಿ ಹಿರಿಯರು ಎಲೀಹುವಿನಂತೆ ನಡಕೊಳ್ಳಬೇಕು. ಯೋಬನು ಮಾತಾಡುತ್ತಿರುವಾಗ ಎಲೀಹು ತುಂಬ ಅನುಕಂಪದಿಂದ ಕೇಳಿಸಿಕೊಂಡನು. (ಯೋಬ 33:6, 7) ಯೋಬನನ್ನು ಅರ್ಥಮಾಡಿಕೊಂಡ ಮೇಲೆನೇ ಬುದ್ಧಿವಾದ ಹೇಳಿದನು. ಅದೇ ರೀತಿ ಹಿರಿಯರು ಮೊದಲು ಆ ವ್ಯಕ್ತಿ ಮಾತಾಡುವಾಗ ಗಮನಕೊಟ್ಟು ಕೇಳಿಸಿಕೊಳ್ಳುತ್ತಾರೆ. ಅವನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ನಂತರ ಹೃದಯ ಮುಟ್ಟುವ ರೀತಿಯಲ್ಲಿ ಬುದ್ಧಿವಾದ ಹೇಳುತ್ತಾರೆ.

ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡಿ

12. ನೊವೊಮಿಯ ಗಂಡ ಮತ್ತು ಮಕ್ಕಳು ತೀರಿಕೊಂಡಾಗ ಆಕೆಯ ಮೇಲೆ ಯಾವ ಪರಿಣಾಮ ಆಯಿತು?

12 ನೊವೊಮಿಗೆ ಯೆಹೋವನ ಮೇಲೆ ಪ್ರೀತಿ ಇತ್ತು, ನಿಷ್ಠೆ ಇತ್ತು. ಆದರೆ ಅವಳ ಗಂಡ ಮತ್ತು ಇಬ್ಬರು ಗಂಡುಮಕ್ಕಳು ತೀರಿಕೊಂಡ ಮೇಲೆ ತನ್ನನ್ನು ಜನರು “ಮಾರಾ” ಅಂತ ಕರೆಯಬೇಕು ಎಂದು ಬಯಸಿದಳು. ಮಾರಾ ಅಂದರೆ ಕಹಿ ಎಂದರ್ಥ. (ರೂತ. 1:3, 5, 20, 21) ನೊವೊಮಿಗೆ ಕಷ್ಟ ಬಂದಾಗ ಅವಳ ಸೊಸೆಯಾದ ರೂತ ಅವಳ ಕೈ ಬಿಡಲಿಲ್ಲ, ಅವಳೊಟ್ಟಿಗೇ ಇದ್ದಳು. ಅವಳ ಅಗತ್ಯವನ್ನು ಪೂರೈಸಿದಳು. ಅಷ್ಟೇ ಅಲ್ಲ ಸಾಂತ್ವನ ಕೊಡುವ ರೀತಿಯಲ್ಲೂ ಮಾತಾಡಿದಳು. ನೊವೊಮಿಯ ಮೇಲಿದ್ದ ಪ್ರೀತಿಯನ್ನು, ತಾನು ಯಾವಾಗಲೂ ಅವಳ ಜೊತೆಯಲ್ಲಿ ಇರುತ್ತೇನೆ ಅನ್ನುವುದನ್ನು ರೂತಳು ಸರಳ ಮಾತುಗಳಲ್ಲಿ ಹೃದಯಾಳದಿಂದ ಹೇಳಿದಳು.—ರೂತ. 1:16, 17.

13. ಬಾಳಸಂಗಾತಿಯನ್ನು ಕಳಕೊಂಡವರಿಗೆ ನಾವು ಸಹಾಯ ಮಾಡಬೇಕು ಯಾಕೆ?

13 ನಮ್ಮ ಒಬ್ಬ ಸಹೋದರ ಅಥವಾ ಸಹೋದರಿಯ ಬಾಳಸಂಗಾತಿ ತೀರಿಕೊಂಡಾಗ ನಾವು ಅವರಿಗೆ ಸಹಾಯ ಮಾಡಬೇಕು. ಗಂಡ-ಹೆಂಡತಿ ಅಕ್ಕಪಕ್ಕ ಬೆಳೆದ ಎರಡು ಮರಗಳ ತರ ಇರುತ್ತಾರೆ. ವರ್ಷಗಳು ಹೋದಂತೆ ಆ ಮರಗಳ ಬೇರು ಒಂದಕ್ಕೊಂದು ಹೆಣೆದುಕೊಳ್ಳುತ್ತವೆ. ಅದರಲ್ಲಿ ಒಂದು ಮರವನ್ನು ಬೇರು ಸಮೇತ ಕಿತ್ತುಹಾಕಿದಾಗ ಅದರಿಂದ ಇನ್ನೊಂದು ಮರಕ್ಕೂ ಹಾನಿ ಆಗುತ್ತದೆ. ಅದೇ ರೀತಿ ಬಾಳಸಂಗಾತಿಯನ್ನು ಕಳಕೊಂಡವರಿಗೆ ತುಂಬ ಸಮಯದ ವರೆಗೆ ಏನೇನೋ ಯೋಚನೆ ಬಂದು ಅವರನ್ನು ಕಿತ್ತುತಿನ್ನುತ್ತದೆ. ಪೌಲಾ * ಎಂಬ ಸಹೋದರಿಯ ಗಂಡ ದಿಢೀರಂತ ತೀರಿಕೊಂಡರು. ಆ ಸಹೋದರಿ ಹೇಳುವುದು: “ನನ್ನ ಜೀವನ ತಲೆಕೆಳಗಾಯಿತು. ನನಗೆ ಶಕ್ತಿನೇ ಇಲ್ಲದೆ ಹೋಯಿತು. ಯಾಕೆಂದರೆ ಅವರು ನನಗೆ ಆಪ್ತ ಗೆಳೆಯ ಆಗಿದ್ದರು. ಅವರ ಹತ್ತಿರ ಎಲ್ಲ ಹೇಳಿಕೊಳ್ಳುತ್ತಿದ್ದೆ. ನನ್ನ ಕಷ್ಟ-ಸುಖದಲ್ಲಿ ಯಾವಾಗಲೂ ಜೊತೆಯಲ್ಲೇ ಇರುತ್ತಿದ್ದರು. ನನಗೇನೇ ಕಷ್ಟ ಇದ್ದರೂ ಅವರ ಹತ್ತಿರ ಹೇಳಿಕೊಂಡು ಅಳುತ್ತಿದ್ದೆ. ಅವರು ತೀರಿಕೊಂಡಾಗ ನನ್ನನ್ನೇ ಅರ್ಧ ಕಡಿದು ಹಾಕಿದಂತೆ ಇತ್ತು.”

ಬಾಳಸಂಗಾತಿಯನ್ನು ಕಳಕೊಂಡ ಸಹೋದರ-ಸಹೋದರಿಯರಿಗೆ ನಾವು ಹೇಗೆಲ್ಲ ಸಹಾಯ ಮಾಡಬಹುದು? (ಪ್ಯಾರ 14-15 ನೋಡಿ) *

14-15. ಬಾಳಸಂಗಾತಿಯನ್ನು ಕಳಕೊಂಡವರನ್ನು ನಾವು ಹೇಗೆ ಸಂತೈಸಬೇಕು?

14 ಬಾಳಸಂಗಾತಿಯನ್ನು ಕಳಕೊಂಡವರನ್ನು ನಾವು ಹೇಗೆ ಸಮಾಧಾನ ಮಾಡಬಹುದು? ನಾವು ಮಾಡಬೇಕಾದ ಒಂದು ಮುಖ್ಯವಾದ ವಿಷಯ ಏನೆಂದರೆ ಅವರ ಹತ್ತಿರ ಮಾತಾಡಬೇಕು. ನಮಗೆ ಮುಜುಗರವಾದರೂ, ಏನು ಹೇಳಬೇಕು ಅಂತ ಗೊತ್ತಾಗದೇ ಇದ್ದರೂ ಮಾತಾಡಬೇಕು. ಸಹೋದರಿ ಪೌಲಾ ಹೇಳುವುದು: “ಯಾರಾದರೂ ತೀರಿಕೊಂಡಾಗ ದುಃಖದಲ್ಲಿ ಇರುವ ಅವರ ಆಪ್ತರ ಹತ್ತಿರ ಮಾತಾಡೋಕೆ ಮುಜುಗರ ಆಗುತ್ತದೆ ನಿಜ. ತಮ್ಮ ಮಾತುಗಳಿಂದ ಅವರ ನೋವು ಎಲ್ಲಿ ಜಾಸ್ತಿ ಆಗಿಬಿಡುತ್ತೋ ಅನ್ನೋ ಭಯ ಇರುತ್ತದೆ. ಆದರೆ ಏನೂ ಮಾತಾಡದೆ ಇರುವುದಕ್ಕಿಂತ ಏನಾದರೂ ಮಾತಾಡುವುದೇ ಮೇಲು.” ದುಃಖದಲ್ಲಿ ಇರುವ ವ್ಯಕ್ತಿ ನಾವು ದೊಡ್ಡ ದೊಡ್ಡ ವಿಷಯವನ್ನು ಹೇಳಬೇಕು ಅಂತ ನಿರೀಕ್ಷಿಸುವುದಿಲ್ಲ. ಪೌಲಾ ಹೇಳುವುದು: “ನನ್ನ ಸ್ನೇಹಿತರು ನನ್ನ ಹತ್ತಿರ ‘ನಮಗೂ ತುಂಬ ದುಃಖ ಆಗುತ್ತಿದೆ’ ಅಂತ ಹೇಳುತ್ತಿದ್ದದ್ದೇ ನನಗೆ ಎಷ್ಟೋ ಸಮಾಧಾನ ಕೊಡುತ್ತಿತ್ತು.”

15 ವಿಲಿಯಮ್‌ ಅವರ ಹೆಂಡತಿ ಕೆಲವು ವರ್ಷಗಳ ಹಿಂದೆ ತೀರಿಹೋದರು. ವಿಲಿಯಮ್‌ ಹೇಳುವುದು: “ನನ್ನ ಹೆಂಡತಿಯ ಬಗ್ಗೆ ಬೇರೆಯವರು ಒಳ್ಳೇ ವಿಷಯಗಳನ್ನು ನೆನಪಿಸಿಕೊಂಡು ಹೇಳುವಾಗ ನನಗೆ ಸಾಂತ್ವನ ಸಿಗುತ್ತೆ. ಬೇರೆಯವರಿಗೆ ಅವಳ ಮೇಲೆ ಪ್ರೀತಿ-ಗೌರವ ಇತ್ತು ಅಂತ ಗೊತ್ತಾದಾಗ ಖುಷಿ ಆಗುತ್ತೆ. ಇದು ನನಗೆ ಎಷ್ಟು ಸಹಾಯ ಮಾಡುತ್ತೆ ಅಂತ ಮಾತಲ್ಲಿ ಹೇಳಕ್ಕಾಗಲ್ಲ. ಯಾಕೆಂದರೆ ನನ್ನ ಹೆಂಡತಿ ನನ್ನ ಜೀವ ಆಗಿದ್ದಳು, ನನ್ನ ಜೀವನನೇ ಆಗಿದ್ದಳು.” ಬಿಯಾಂಕ ಎಂಬ ಸಹೋದರಿ ಗಂಡನನ್ನು ಕಳಕೊಂಡರು. ಆ ಸಹೋದರಿ ಹೇಳುವುದು: “ನನ್ನ ಜೊತೆ ಯಾರಾದರೂ ಪ್ರಾರ್ಥನೆ ಮಾಡಿದಾಗ, ಒಂದೆರಡು ಬೈಬಲ್‌ ವಚನಗಳನ್ನು ನನಗೆ ಓದಿ ಹೇಳಿದಾಗ ಸಾಂತ್ವನ ಸಿಗುತ್ತೆ. ಅವರು ನನ್ನ ಹತ್ತಿರ ನನ್ನ ಗಂಡನ ಬಗ್ಗೆ ಮಾತಾಡಿದರೆ ಖುಷಿಯಾಗುತ್ತೆ. ನಾನೂ ನನ್ನ ಗಂಡನ ಬಗ್ಗೆ ಮಾತಾಡುವಾಗ ಅವರು ಕೇಳಿಸಿಕೊಂಡರೆ ನನಗೆ ತುಂಬ ಸಹಾಯ ಆಗುತ್ತೆ.”

16. (ಎ) ಆಪ್ತರನ್ನು ಕಳಕೊಂಡವರಿಗೆ ನಾವು ಯಾಕೆ ಸಹಾಯ ಮಾಡುತ್ತಾನೇ ಇರಬೇಕು? (ಬಿ) ಯಾಕೋಬ 1:27 ಹೇಳುವ ಪ್ರಕಾರ ನಮಗೆ ಯಾವ ಜವಾಬ್ದಾರಿ ಇದೆ?

16 ನೊವೊಮಿಯ ಜೊತೆನೇ ಇದ್ದು ರೂತಳು ಹೇಗೆ ಸಹಾಯ ಮಾಡಿದಳೋ ಅದೇ ರೀತಿ ಬಾಳಸಂಗಾತಿಯನ್ನು ಕಳಕೊಂಡವರಿಗೆ ನಾವು ಸಹಾಯ ಮಾಡುತ್ತಾನೇ ಇರಬೇಕು. ಸಹೋದರಿ ಪೌಲಾ ಹೇಳುವುದು: “ನನ್ನ ಗಂಡ ತೀರಿಕೊಂಡ ಸಮಯದಲ್ಲಿ ಸಹೋದರ-ಸಹೋದರಿಯರು ತುಂಬ ಸಹಾಯ ಮಾಡಿದರು. ಸಮಯ ಹೋಗುತ್ತಾ ಹೋಗುತ್ತಾ ಅವರು ಮೊದಲಿನ ತರನೇ ಅವರವರ ಕೆಲಸಕಾರ್ಯಗಳಲ್ಲಿ ಮುಳುಗಿಹೋದರು. ಆದರೆ ನನ್ನ ಜೀವನ ಮೊದಲಿನ ತರ ಇರಲಿಲ್ಲ. ತಮ್ಮ ಪ್ರೀತಿಯ ಜನರನ್ನು ಸಾವಿನಲ್ಲಿ ಕಳಕೊಂಡವರಿಗೆ ತಿಂಗಳಾನುಗಟ್ಟಲೆ, ಕೆಲವೊಮ್ಮೆ ವರ್ಷಾನುಗಟ್ಟಲೆ ಸಹಾಯ-ಸಾಂತ್ವನದ ಅಗತ್ಯವಿರುತ್ತದೆ. ಅದನ್ನು ಬೇರೆಯವರು ಅರ್ಥಮಾಡಿಕೊಳ್ಳುವುದು ತುಂಬ ಮುಖ್ಯ.” ನಿಜ, ಎಲ್ಲರೂ ಒಂದೇ ತರ ಇರಲ್ಲ. ಕೆಲವರು ತಮ್ಮ ಪರಿಸ್ಥಿತಿಗೆ ಬೇಗ ಹೊಂದಿಕೊಂಡು ಬಿಡುತ್ತಾರೆ. ಆದರೆ ಇನ್ನು ಕೆಲವರು ತಮ್ಮ ಸಂಗಾತಿ ಜೊತೆ ಕಳೆದ ಒಂದೊಂದು ಕ್ಷಣವನ್ನೂ ನೆನಪಿಸಿಕೊಂಡು ಅಳುತ್ತಾರೆ. ಅಷ್ಟೇ ಅಲ್ಲ, ದುಃಖವನ್ನು ವ್ಯಕ್ತಪಡಿಸುವ ರೀತಿನೂ ಬೇರೆ ಬೇರೆಯಾಗಿರುತ್ತದೆ. ಸಂಗಾತಿಯನ್ನು ಕಳಕೊಂಡು ನೋವು ಅನುಭವಿಸುತ್ತಿರುವ ಮನಸ್ಸುಗಳಿಗೆ ಸಾಂತ್ವನ ಕೊಡುವ ಸುಯೋಗ ಮತ್ತು ಜವಾಬ್ದಾರಿಯನ್ನು ಯೆಹೋವನು ನಮಗೆ ಕೊಟ್ಟಿದ್ದಾನೆ. ಅದನ್ನು ಮರೆಯದಿರೋಣ.ಯಾಕೋಬ 1:27 ಓದಿ.

17. ಗಂಡ ಅಥವಾ ಹೆಂಡತಿ ಬಿಟ್ಟುಹೋಗಿರುವ ವ್ಯಕ್ತಿಗಳಿಗೆ ನಾವು ಯಾಕೆ ಸಹಾಯ ಮಾಡಬೇಕು?

17 ಗಂಡ ಅಥವಾ ಹೆಂಡತಿ ಬಿಟ್ಟುಹೋದಾಗ ಸಹ ಕೆಲವರು ತುಂಬ ಕಷ್ಟ-ಒತ್ತಡವನ್ನು ಅನುಭವಿಸುತ್ತಾರೆ. ಜಾಯ್ಸ್‌ ಎಂಬ ಸಹೋದರಿಯನ್ನು ಅವಳ ಗಂಡ ಬಿಟ್ಟುಹೋದ. ಅವನಿಗೆ ಬೇರೆ ಸ್ತ್ರೀಯ ಜೊತೆ ಅನೈತಿಕ ಸಂಬಂಧ ಇತ್ತು. ಜಾಯ್ಸ್‌ ಹೇಳುವುದು: “ನನ್ನ ಗಂಡ ವಿಚ್ಛೇದನ ಕೊಟ್ಟಾಗ ನನಗೆ ತುಂಬಾ ನೋವಾಯಿತು. ಬಹುಶಃ ಅವರು ತೀರಿಹೋಗಿದ್ದರೂ ನನಗೆ ಇಷ್ಟು ನೋವು ಆಗುತ್ತಿರಲಿಲ್ಲವೇನೋ. ಅವರಿಗೆ ಅಪಘಾತ ಆಗಿನೋ ಅಥವಾ ಹುಷಾರಿಲ್ಲದೆನೋ ತೀರಿಹೋಗಿ ನನ್ನಿಂದ ದೂರ ಆಗಿದ್ದರೆ ಅದರಲ್ಲಿ ಅವರ ತಪ್ಪೇನು ಇರುತ್ತಿರಲಿಲ್ಲ. ಆದರೆ ಅವರು ನನ್ನನ್ನು ಬೇಡ ಅಂತ ಬಿಟ್ಟುಹೋದರು. ಇದರಿಂದ ನನಗೆ ತುಂಬ ಅವಮಾನ ಆಯಿತು.”

18. ಯಾರ ಬಾಳಸಂಗಾತಿ ತೀರಿಹೋಗಿದ್ದಾರೋ ಅಥವಾ ಬಿಟ್ಟುಹೋಗಿದ್ದಾರೋ ಅಂಥವರಿಗೆ ಸಹಾಯ ಮಾಡಲು ನಾವೇನು ಮಾಡಬಹುದು?

18 ಯಾರ ಬಾಳಸಂಗಾತಿ ತೀರಿಹೋಗಿದ್ದಾರೋ ಅಥವಾ ಬಿಟ್ಟುಹೋಗಿದ್ದಾರೋ ಅಂಥವರಿಗೆ ನಾವು ಮಾಡುವ ಚಿಕ್ಕಪುಟ್ಟ ಸಹಾಯ ನಾವು ಅವರನ್ನು ಪ್ರೀತಿಸುತ್ತೇವೆ ಅನ್ನುವ ಭರವಸೆ ತುಂಬುತ್ತದೆ. ಈ ಸಮಯದಲ್ಲೇ ಅವರಿಗೆ ಒಳ್ಳೇ ಸ್ನೇಹಿತರ ಅಗತ್ಯ ಇರುತ್ತದೆ. (ಜ್ಞಾನೋ. 17:17) ನೀವು ಹೇಗೆ ಅವರಿಗೆ ಒಬ್ಬ ಒಳ್ಳೇ ಸ್ನೇಹಿತರಾಗಿ ಇರಬಹುದು? ಊಟಕ್ಕೆ ಅವರನ್ನು ಮನೆಗೆ ಕರೆಯಬಹುದು. ಅವರನ್ನು ಹೊರಗೆ ಎಲ್ಲಾದರೂ ಕರಕೊಂಡು ಹೋಗಬಹುದು ಅಥವಾ ಸೇವೆಗೆ ಕರಕೊಂಡು ಹೋಗಬಹುದು. ಕೆಲವೊಮ್ಮೆ ಅವರನ್ನು ಕುಟುಂಬ ಆರಾಧನೆಗೆ ಕರೆಯಬಹುದು. ಹೀಗೆ ಮಾಡಿದರೆ ಯೆಹೋವನಿಗೆ ತುಂಬ ಸಂತೋಷ ಆಗುತ್ತದೆ. ಯಾಕೆಂದರೆ ಆತನು ‘ಮುರಿದ ಮನಸ್ಸುಳ್ಳವರಿಗೆ ನೆರವಾಗುತ್ತಾನೆ’ ಮತ್ತು ‘ವಿಧವೆಯರಿಗೆ ಸಹಾಯಕನಾಗಿದ್ದಾನೆ.’—ಕೀರ್ತ. 34:18; 68:5.

19. ನಾವೇನು ಮಾಡಬೇಕೆಂದು 1 ಪೇತ್ರ 3:8 ಹೇಳುತ್ತದೆ?

19 ದೇವರ ರಾಜ್ಯ ಭೂಮಿಯನ್ನು ಆಳುವ ಸಮಯ ತುಂಬ ಹತ್ತಿರದಲ್ಲಿದೆ. ಈಗ ಇರುವ ಯಾವ ‘ಕಷ್ಟಗಳೂ ಆಗ ಕಣ್ಣಿಗೆ ಬೀಳಲ್ಲ.’ ‘ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳಲ್ಲ, ಅದು ನೆನಪಿಗೆ ಬರುವುದೇ ಇಲ್ಲ.’ ಆ ಸಮಯಕ್ಕಾಗಿ ನಾವು ಕಾಯುತ್ತಾ ಇದ್ದೇವೆ. (ಯೆಶಾ. 65:16, 17) ಆ ಸಮಯ ಬರುವ ವರೆಗೂ ನಾವು ಒಬ್ಬರಿಗೊಬ್ಬರು ಸಹಾಯ ಮಾಡೋಣ. ಸಹೋದರ-ಸಹೋದರಿಯರನ್ನು ಪ್ರೀತಿಸುತ್ತೇವೆ ಎಂದು ನಮ್ಮ ಮಾತು-ಕ್ರಿಯೆಯ ಮೂಲಕ ತೋರಿಸಿಕೊಡೋಣ.—1 ಪೇತ್ರ 3:8 ಓದಿ.

ಗೀತೆ 75 ನಮ್ಮ ಅತ್ಯಾನಂದಕ್ಕೆ ಕಾರಣಗಳು

^ ಪ್ಯಾರ. 5 ಲೋಟ, ಯೋಬ ಮತ್ತು ನೊವೊಮಿ ನಿಷ್ಠೆಯಿಂದ ಯೆಹೋವನ ಸೇವೆಮಾಡಿದರು. ಆದರೆ ಅವರು ಜೀವನದಲ್ಲಿ ಒತ್ತಡಗಳನ್ನು ನಿಭಾಯಿಸಬೇಕಾಗಿತ್ತು. ಅವರ ಅನುಭವದಿಂದ ನಾವೇನು ಕಲಿಯಬಹುದೆಂದು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ. ನಮ್ಮ ಸಹೋದರ-ಸಹೋದರಿಯರು ಒತ್ತಡವನ್ನು ಎದುರಿಸುತ್ತಿರುವಾಗ ನಾವು ತಾಳ್ಮೆಯಿಂದ ನಡಕೊಳ್ಳುವುದು, ಕನಿಕರ ತೋರಿಸುವುದು ಮತ್ತು ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡುವುದು ಯಾಕೆ ಮುಖ್ಯ ಎಂದೂ ಚರ್ಚಿಸಲಿದ್ದೇವೆ.

^ ಪ್ಯಾರ. 13 ಈ ಲೇಖನದಲ್ಲಿ ಹೆಸರುಗಳನ್ನು ಬದಲಾಯಿಸಲಾಗಿದೆ.

^ ಪ್ಯಾರ. 57 ಚಿತ್ರ ವಿವರಣೆ: ಒಬ್ಬ ಸಹೋದರ ಕೋಪದಿಂದ ಮನಸ್ಸಿಗೆ ಅನಿಸಿದ್ದನ್ನೆಲ್ಲ ಹೇಳುತ್ತಿರುವಾಗ ಒಬ್ಬ ಹಿರಿಯ ತಾಳ್ಮೆಯಿಂದ ಕೇಳುತ್ತಿದ್ದಾರೆ. ಆ ಸಹೋದರನ ಕೋಪ ತಣ್ಣಗಾದ ಮೇಲೆ ಹಿರಿಯ ಪ್ರೀತಿಯಿಂದ ಕೆಲವು ಸಲಹೆಗಳನ್ನು ಕೊಡುತ್ತಿದ್ದಾರೆ.

^ ಪ್ಯಾರ. 59 ಚಿತ್ರ ವಿವರಣೆ: ಒಬ್ಬ ಗಂಡ-ಹೆಂಡತಿ ಒಬ್ಬ ಸಹೋದರನ ಮನೆಗೆ ಹೋಗಿ ಸಮಯ ಕಳೆಯುತ್ತಿದ್ದಾರೆ. ಆ ಸಹೋದರನ ಹೆಂಡತಿ ಇತ್ತೀಚೆಗೆ ತೀರಿಹೋಗಿದ್ದಾಳೆ. ಅವಳ ಜೊತೆ ಕಳೆದ ಮಧುರ ಕ್ಷಣಗಳ ಬಗ್ಗೆ ಅವರು ಆ ಸಹೋದರನ ಜೊತೆ ಮಾತಾಡುತ್ತಿದ್ದಾರೆ.