ಒಂದು ಪ್ರಾಚೀನ ಸುರುಳಿಯನ್ನು “ಬಿಚ್ಚಲಾಯಿತು”
1970ರಲ್ಲಿ ಏನ್ ಗೆಡೀಯಲ್ಲಿ ಒಂದು ಸುರುಳಿಯ ಅವಶೇಷ ಸಿಕ್ಕಿತು. ಅದು ಸುಟ್ಟುಹೋಗಿದ್ದರಿಂದ ಓದಲು ಸಾಧ್ಯವಾಗಿರಲಿಲ್ಲ. ತ್ರೀಡಿ ಸ್ಕ್ಯಾನ್ ಮಾಡಿದಾಗ ಅದರಲ್ಲಿ ಯಾಜಕಕಾಂಡದ ಭಾಗ ಇದೆ ಎಂದು ಗೊತ್ತಾಯಿತು. ಅದರಲ್ಲಿ ದೇವರ ಹೆಸರಿದೆ
1970ರಲ್ಲಿ ಇಸ್ರೇಲಿನ ಏನ್ ಗೆಡೀ ಎಂಬ ಸ್ಥಳದಲ್ಲಿ ಪುರಾತನಶಾಸ್ತ್ರಜ್ಞರಿಗೆ ಸುಟ್ಟುಹೋಗಿರುವ ಒಂದು ಸುರುಳಿ ಸಿಕ್ಕಿತು. ಈ ಏನ್ ಗೆಡೀ ಮೃತ ಸಮುದ್ರದ ಪಶ್ಚಿಮ ದಡದ ಹತ್ತಿರ ಇದೆ. ಒಂದು ಸಭಾಮಂದಿರ ಇದ್ದ ಸ್ಥಳವನ್ನು ಅಗೆಯುತ್ತಿದ್ದಾಗ ಅವರಿಗೆ ಈ ಸುರುಳಿ ಸಿಕ್ಕಿತು. ಈ ಸಭಾಮಂದಿರ ಇಡೀ ಊರೇ ನಾಶವಾದಾಗ ಬೆಂಕಿಯಲ್ಲಿ ಸುಟ್ಟುಹೋಗಿತ್ತು. ಈ ಘಟನೆ ಬಹುಶಃ ಕ್ರಿ.ಶ. ಆರನೇ ಶತಮಾನದಲ್ಲಿ ನಡೆದಿರಬೇಕು. ಸುರುಳಿಯಲ್ಲಿ ಏನು ಬರೆದಿದೆ ಎಂದು ಓದಲು ಆಗಲಿಲ್ಲ. ಅದನ್ನು ಬಿಚ್ಚಕ್ಕೂ ಆಗಲಿಲ್ಲ. ಯಾಕೆಂದರೆ ಅದನ್ನು ಬಿಚ್ಚಲು ಹೋದರೆ ಖಂಡಿತ ಪುಡಿಪುಡಿಯಾಗಿ ಬೀಳುತ್ತಿತ್ತು. ಆದರೆ ತ್ರೀಡಿ ಸ್ಕ್ಯಾನಿಂಗ್ ಮೂಲಕ ಅದರಲ್ಲಿ ಏನು ಬರೆದಿದೆ ಎಂದು ಗೊತ್ತಾಯಿತು. ಹೊಸ ಡಿಜಿಟಲ್ ಇಮೇಜಿಂಗ್ ಸಾಫ್ಟ್‌ವೇರ್ ಮೂಲಕ ಅದರಲ್ಲಿ ಬರೆದಿರುವುದನ್ನು ಓದಲು ಸಾಧ್ಯವಾಯಿತು.
ಸುರುಳಿಯಲ್ಲಿ ಏನಿತ್ತು? ಬೈಬಲಿನ ಯಾಜಕಕಾಂಡ ಪುಸ್ತಕದ ಆರಂಭದಲ್ಲಿರುವ ಕೆಲವು ವಚನಗಳು ಆ ಸುರುಳಿಯಲ್ಲಿತ್ತು. ಅದರಲ್ಲಿ ಹೀಬ್ರು ಭಾಷೆಯಲ್ಲಿರುವ ದೇವರ ಹೆಸರು ಚತುರಕ್ಷರಿಯಲ್ಲಿ ಇತ್ತು. ಈ ಸುರುಳಿಯನ್ನು ಕ್ರಿ.ಶ. 50ರಿಂದ ಕ್ರಿ.ಶ. 400ರ ಅವಧಿಯಲ್ಲಿ ಬರೆದಿರಬೇಕು. ಇದು ಕುಮ್ರಾನ್‌ನಲ್ಲಿ ಸಿಕ್ಕಿದ ಹಸ್ತಪ್ರತಿಗಳ ನಂತರ ಜನರ ಕೈಗೆ ಸಿಕ್ಕಿರುವ ಅತಿ ಹಳೆಯ ಹೀಬ್ರು ಶಾಸ್ತ್ರಗ್ರಂಥದ ಸುರುಳಿಯಾಗಿದೆ. ದ ಜೆರೂಸಲೇಮ್ ಪೋಸ್ಟ್ ಎಂಬ ವಾರ್ತಾಪತ್ರಿಕೆಯಲ್ಲಿ ಗಿಲ್ ಝೋಹಾರ್ ಎಂಬ ಪತ್ರಕರ್ತ ಏನು ಬರೆದರೆಂದರೆ, ಏನ್ ಗೆಡೀಯಲ್ಲಿ ಯಾಜಕಕಾಂಡ ಪುಸ್ತಕದ ಆರಂಭ ಭಾಗ ಇರುವ ಸುರುಳಿ ಸಿಗುವುದಕ್ಕೆ ಮುಂಚೆ ಬೈಬಲಿನ ಎರಡು ಪ್ರಾಚೀನ ಹಸ್ತಪ್ರತಿಗಳು ಸಿಕ್ಕಿದ್ದವು. ಒಂದು ಮೃತ ಸಮುದ್ರ ಸುರುಳಿ (ಸುಮಾರು ಕ್ರಿ.ಪೂ. 100ರಲ್ಲಿ ಬರೆದದ್ದು), ಇನ್ನೊಂದು ಅಲೆಪ್ಪೊ ಕೋಡೆಕ್ಸ್ (ಸುಮಾರು ಕ್ರಿ.ಶ. 930ರಲ್ಲಿ ಬರೆದದ್ದು). ಈ ಎರಡೂ ಹಸ್ತಪ್ರತಿಗಳ ಮಧ್ಯೆ 1,000 ವರ್ಷದ ಅಂತರವಿತ್ತು. ನಿಪುಣರು ಹೇಳುವ ಪ್ರಕಾರ, ಏನ್ ಗೆಡೀಯಲ್ಲಿ ಸಿಕ್ಕಿದ ಸುರುಳಿಯಿಂದ ಏನು ಗೊತ್ತಾಗುತ್ತದೆ ಅಂದರೆ ಒಂದು ಸಾವಿರ ವರ್ಷಗಳಲ್ಲಿ ಯೆಹೂದಿಗಳ ಪವಿತ್ರ ಗ್ರಂಥವಾದ ಟೋರಾದಲ್ಲಿರುವ ಮಾಹಿತಿ ಬದಲಾಗಿಲ್ಲ ಮತ್ತು ನಕಲುಗಾರರು ಯಾವುದೇ ತಪ್ಪಿಲ್ಲದೆ ನಕಲು ಮಾಡುತ್ತಾ ಬಂದಿದ್ದರು.