ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತುತೂರಿಯ ಕರೆಗೆ ಕಿವಿಗೊಡುತ್ತಿದ್ದೀರಾ?

ತುತೂರಿಯ ಕರೆಗೆ ಕಿವಿಗೊಡುತ್ತಿದ್ದೀರಾ?

ಯೆಹೋವನು ಈ “ಕಡೇ ದಿವಸಗಳಲ್ಲಿ” ತನ್ನ ಜನರನ್ನು ಸರಿಯಾದ ದಾರಿಯಲ್ಲಿ ನಡೆಸ್ತಿದ್ದಾನೆ ಮತ್ತು ಅವ್ರು ತನಗೆ ಆಪ್ತರಾಗಿ ಉಳಿಯೋಕೆ ಏನೆಲ್ಲಾ ಬೇಕೋ ಅದನೆಲ್ಲ ಕೊಡ್ತಿದ್ದಾನೆ. (2 ತಿಮೊ. 3:1) ಆದ್ರೆ ನಾವೆಲ್ರೂ ಯೆಹೋವ ಹೇಳಿದಂತೆ ನಡ್ಕೋಬೇಕು. 40 ವರ್ಷ ಮರಳುಗಾಡಲ್ಲಿದ್ದ ಇಸ್ರಾಯೇಲ್ಯರ ಪರಿಸ್ಥಿತಿಯಲ್ಲೇ ನಾವೂ ಇದ್ದೇವೆ. ಅವ್ರು ತುತೂರಿಯ ಶಬ್ದ ಕೇಳಿಸ್ಕೊಂಡಾಗ ತಕ್ಷಣ ಪ್ರತಿಕ್ರಿಯಿಸಬೇಕಿತ್ತು.

ಯೆಹೋವನು ಮೋಶೆಗೆ ಬೆಳ್ಳಿಯ ಎರಡು ತುತೂರಿಗಳನ್ನು ಮಾಡಿಸಬೇಕು ಅಂತ ಹೇಳಿದ. ಅವುಗಳನ್ನು ‘ಜನ ಸಮೂಹವನ್ನ ಸೇರಿಸೋಕೂ ಮತ್ತು ದಂಡುಗಳನ್ನ ಹೊರಡಿಸೋಕೂ ಉಪಯೋಗಿಸಬೇಕಿತ್ತು.’ (ಅರ. 10:2) ಜನ್ರಿಗೆ ನಿರ್ದಿಷ್ಟವಾಗಿ ಏನು ಮಾಡಬೇಕು ಅನ್ನೋದನ್ನ ತಿಳ್ಸೋಕೆ ಯಾಜಕರು ತುತೂರಿಯನ್ನು ಬೇರೆ ಬೇರೆ ರೀತಿಯಲ್ಲಿ ಊದಬೇಕಿತ್ತು. (ಅರ. 10:3-8) ಇಂದು ದೇವಜನ್ರಿಗೆ ಬೇರೆ ಬೇರೆ ರೀತಿಯಲ್ಲಿ ಮಾರ್ಗದರ್ಶನ ಸಿಗ್ತಿದೆ. ಇವುಗಳಿಗೂ ಆಗಿನ ಕಾಲದಲ್ಲಿ ಊದುತ್ತಿದ್ದ ತುತೂರಿಯ ಕರೆಗಳಿಗೂ ಹೋಲಿಕೆ ಇದೆ. ಅವುಗಳಲ್ಲಿ ಮೂರನ್ನು ನೋಡೋಣ. (1) ಗುಂಪಾಗಿ ಸೇರಿಬರಲು ದೇವಜನ್ರಿಗೆ ಆಮಂತ್ರಣ. (2) ತರಬೇತಿ ಪಡಕೊಳ್ಳಲು ಹಿರಿಯರಿಗೆ ಆಮಂತ್ರಣ. (3) ಬದಲಾವಣೆಗಳಿಗೆ ಹೊಂದಾಣಿಕೆ.

ಗುಂಪಾಗಿ ಸೇರಿಬರಲು ಆಮಂತ್ರಣ

ಯೆಹೋವನು ‘ಜನ ಸಮೂಹಕ್ಕೆ’ ನಿರ್ದೇಶನ ಕೊಡ್ಬೇಕಿದ್ದಾಗ ಯಾಜಕರು ಎರಡು ತುತೂರಿಗಳನ್ನು ಊದಬೇಕಿತ್ತು. ಆಗ ಎಲ್ರೂ ದೇವದರ್ಶನ ಗುಡಾರದ ಪೂರ್ವದಿಕ್ಕಿನಲ್ಲಿ ಕೂಡಿ ಬರುತ್ತಿದ್ದರು. (ಅರ. 10:3) ಎಲ್ಲಾ ಕುಲದವ್ರು ದೇವದರ್ಶನ ಗುಡಾರದ ಸುತ್ತ ನಾಲ್ಕು ಭಾಗಗಳಾಗಿ ಪಾಳಯ (ಕ್ಯಾಂಪ್‌) ಮಾಡಿಕೊಂಡಿದ್ರು. ತುತೂರಿಗಳನ್ನು ಊದಿದಾಗ ಅವ್ರಿಗೆ ಚೆನ್ನಾಗಿ ಕೇಳಿಸ್ತಿತ್ತು. ದೇವದರ್ಶನ ಗುಡಾರದ ಬಾಗಿಲಿನ ಹತ್ರ ಇದ್ದೋರು ಕೆಲವೇ ನಿಮಿಷದಲ್ಲಿ ಬಂದುಬಿಡ್ತಿದ್ರು. ದೂರದಲ್ಲಿ ಇದ್ದವ್ರಿಗೆ ಬರೋಕೆ ಸಮ್ಯ ತಗಲುತ್ತಿತ್ತು. ಹತ್ರ ಇರಲಿ ದೂರ ಇರಲಿ ಎಲ್ರೂ ಕೂಡಿಬರಬೇಕು ಮತ್ತು ತಾನು ಕೊಡೋ ನಿರ್ದೇಶನಗಳನ್ನು ಪಡ್ಕೊಳ್ಳಬೇಕು ಅನ್ನೋದೇ ಯೆಹೋವನ ಉದ್ದೇಶವಾಗಿತ್ತು.

ಇಂದು ನಾವು ಇಸ್ರಾಯೇಲ್ಯರ ತರ ದೇವದರ್ಶನ ಗುಡಾರದ ಹತ್ರ ಸೇರಿ ಬರಲ್ಲ. ಆದ್ರೆ ಒಂದು ಗುಂಪಾಗಿ ಸೇರಿ ಬರೋಕೆ ನಮ್ಗೆ ಆಮಂತ್ರಣ ಸಿಗುತ್ತೆ. ಅವುಗಳಲ್ಲಿ ಪ್ರಾದೇಶಿಕ ಅಧಿವೇಶನ ಮತ್ತು ಬೇರೆ ವಿಶೇಷ ಸಮಾರಂಭ ಸೇರಿವೆ. ಅಲ್ಲಿ ತುಂಬ ಮುಖ್ಯವಾದ ನಿರ್ದೇಶನ, ಮಾಹಿತಿ ಸಿಗುತ್ತೆ. ಈ ಕಾರ್ಯಕ್ರಮಗಳು ವಿಶ್ವದೆಲ್ಲೆಡೆ ನಡೆಯುತ್ತವೆ. ಅವುಗಳಿಂದ ದೇವ ಜನರೆಲ್ರೂ ಪ್ರಯೋಜ್ನ ಪಡೀತಾರೆ. ಇಂಥ ಕಾರ್ಯಕ್ರಮಕ್ಕೆ ಹತ್ರದಿಂದಲೂ ದೂರದಿಂದಲೂ ಸೇರಿಬರ್ತಾರೆ, ಸಹವಾಸದಲ್ಲಿ ಆನಂದಿಸ್ತಾರೆ. ಆದ್ರೆ ಇದಕ್ಕಾಗಿ ಅವ್ರು ಅನೇಕ ತ್ಯಾಗ ಮಾಡಿ ಬರಬೇಕಾಗುತ್ತೆ. ಅವು ವ್ಯರ್ಥ ಅಂತ ಅವ್ರಿಗೆ ಯಾವತ್ತೂ ಅನಿಸಲ್ಲ.

ಕೆಲ್ವು ಜನ್ರು ತುಂಬ ದೂರ ಇರೋದ್ರಿಂದ ಇಂಥ ಕಾರ್ಯಕ್ರಮಗಳಿಗೆ ಹಾಜರಾಗಲು ಕಷ್ಟ ಆಗುತ್ತೆ. ಆದ್ರೆ ಟೆಕ್ನಾಲಜಿಯ ಸಹಾಯದಿಂದ ಅವ್ರಿರೋ ಜಾಗದಲ್ಲೇ ಈ ಕಾರ್ಯಕ್ರಮಗಳನ್ನು ನೋಡ್ಬಹುದು. ಉದಾಹರಣೆಗೆ, ಒಂದ್ಸಲ ಬೆನಿನ್‌ ಬ್ರಾಂಚ್‌ಗೆ ಮುಖ್ಯಕಾರ್ಯಾಲಯದ ಪ್ರತಿನಿಧಿ ಭೇಟಿ ನೀಡಿದ್ರು. ಅಲ್ಲಿ ನಡೆದ ಕಾರ್ಯಕ್ರಮವನ್ನು ಸಹಾರಾ ಮರುಭೂಮಿಯಲ್ಲಿರೋ ಆರ್ಲಿಟ್‌ ಅನ್ನೋ ಚಿಕ್ಕ ಪಟ್ಟಣದಲ್ಲಿ ನೇರ ಪ್ರಸಾರ ಮಾಡಲಾಯ್ತು. ಆ ಪಟ್ಟಣ ನೈಜರ್‌ನಲ್ಲಿದೆ. ಅದೊಂದು ಗಣಿ ಪ್ರದೇಶ. ಪ್ರಚಾರಕರು ಮತ್ತು ಆಸಕ್ತರು ಒಟ್ಟು 21 ಮಂದಿ ಆ ಕಾರ್ಯಕ್ರಮ ನೋಡಿದ್ರು. ಅವ್ರು ತುಂಬ ದೂರದಲ್ಲಿದ್ರೂ ಬೆನಿನ್‌ನಲ್ಲಿ ನಡೀತಿದ್ದ ಕಾರ್ಯಕ್ರಮಕ್ಕೆ ಹಾಜರಾಗಿದ್ದ 44,131 ಮಂದಿ ಜೊತೆಗೇ ಇದ್ದೇವೆ ಅಂತ ಅನಿಸ್ತು. ಒಬ್ಬ ಸಹೋದರ ಹೀಗೆ ಬರೆದ: “ಈ ಕಾರ್ಯಕ್ರಮ ನೋಡೋ ಏರ್ಪಾಡು ಮಾಡಿದ್ದಕ್ಕೆ ನಿಮ್ಗೆ ತುಂಬ ತುಂಬ ಥ್ಯಾಂಕ್ಸ್‌. ನೀವು ನಮ್ಮನ್ನು ಪ್ರೀತಿಸ್ತೀರಿ ಅಂತ ಮತ್ತೆ ತೋರಿಸಿಕೊಟ್ರಿ.”

ತರಬೇತಿ ಪಡಕೊಳ್ಳಲು ಹಿರಿಯರಿಗೆ ಆಮಂತ್ರಣ

ಯಾಜಕರು ಒಂದು ತುತೂರಿ ಊದಿದಾಗ ‘ಸಹಸ್ರಾಧಿಪತಿಗಳಾದ ಪ್ರಧಾನರು’ ದೇವದರ್ಶನ ಗುಡಾರದ ಹತ್ರ ಕೂಡಿ ಬರಬೇಕಿತ್ತು. (ಅರ. 10:4) ಅಲ್ಲಿ ಅವ್ರಿಗೆ ಮೋಶೆಯಿಂದ ಮಾಹಿತಿ ಮತ್ತು ತರಬೇತಿ ಸಿಗ್ತಿತ್ತು. ಇದ್ರಿಂದ ತಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗ್ಲಿಕ್ಕೆ ಸಹಾಯ ಆಗ್ತಿತ್ತು. ಆ ಪ್ರಧಾನರಲ್ಲಿ ನೀವೂ ಒಬ್ಬರಾಗಿದ್ದಿದ್ರೆ ಅಲ್ಲಿ ಹಾಜರಾಗಲು ಮತ್ತು ಪೂರ್ತಿ ಪ್ರಯೋಜನ ಪಡೆಯಲು ನಿಮ್ಮಿಂದ ಆಗೋದೆಲ್ಲವನ್ನು ಮಾಡ್ತಿದ್ರಲ್ವಾ?

ಸಭಾಹಿರಿಯರು “ಪ್ರಧಾನರು” ಅಲ್ಲ, ದೇವರ ಮಂದೆ ಮೇಲೆ ದೊರೆತನನೂ ಮಾಡಲ್ಲ. (1 ಪೇತ್ರ 5:1-3) ಅವ್ರು ಮಂದೆನ ಪರಿಪಾಲಿಸೋಕೆ ತಮ್ಮಿಂದಾದ ಎಲ್ಲವನ್ನು ಮಾಡ್ತಾರೆ. ಇದಕ್ಕಾಗಿ ಅವ್ರಿಗೆ ತರಬೇತಿನೂ ಸಿಗುತ್ತೆ. ಉದಾಹರಣೆಗೆ ರಾಜ್ಯ ಶುಶ್ರೂಷಾ ಶಾಲೆ. ಈ ಶಾಲೆಯಿಂದ ಸಭೆಯನ್ನು ಇನ್ನೂ ಉತ್ತಮವಾಗಿ ಹೇಗೆ ಪರಿಪಾಲಿಸಬಹುದು ಅನ್ನೋದನ್ನು ಹಿರಿಯರು ಕಲೀತಾರೆ. ಇದ್ರಿಂದಾಗಿ ಅವ್ರಷ್ಟೇ ಅಲ್ಲ ಸಭೆಯಲ್ಲಿರೋ ಎಲ್ರೂ ಯೆಹೋವನಿಗೆ ಆಪ್ತರಾಗೋಕೆ ಸಹಾಯ ಆಗುತ್ತೆ. ತರಬೇತಿ ಪಡಕೊಂಡ ಹಿರಿಯರು ಕಲಿತ ವಿಷ್ಯಗಳನ್ನ ಸಭೆಯಲ್ಲಿ ಅನ್ವಯಿಸ್ದಾಗ ಎಲ್ರಿಗೂ ಪ್ರಯೋಜನ ಸಿಗುತ್ತೆ.

ಬದಲಾವಣೆಗಳಿಗೆ ಹೊಂದಾಣಿಕೆ

ಯಾಜಕರು ಕೆಲವೊಮ್ಮೆ ಆರ್ಭಟವಾಗಿ ತುತೂರಿ ಊದಬೇಕಿತ್ತು. ಆಗ ಅಲ್ಲಿಂದ ಹೊರಡಲು ಯೆಹೋವ ಹೇಳ್ತಿದ್ದಾನೆ ಅನ್ನೋದು ಇಸ್ರಾಯೇಲ್ಯರಿಗೆ ಅರ್ಥವಾಗ್ತಿತ್ತು. (ಅರ. 10:5, 6) ಅವ್ರು ವ್ಯವಸ್ಥಿತವಾಗಿ ಹೋಗಬೇಕಿತ್ತು. ಅದು ಸುಲಭದ ಮಾತಾಗಿರಲಿಲ್ಲ. ಕೆಲವು ಇಸ್ರಾಯೇಲ್ಯರಿಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗೋದು ಅಷ್ಟು ಇಷ್ಟ ಆಗ್ತಿರಲಿಲ್ಲ. ಯಾಕೆ?

ಪದೇಪದೇ, ದಿಢೀರಂತ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕಲ್ಲಾ ಅಂತ ಕೆಲವ್ರಿಗೆ ಅನಿಸ್ತಿತ್ತು. ಮೇಘವು ದೇವದರ್ಶನ ಗುಡಾರದ ಮೇಲೆ ನಿಂತಿರುವಷ್ಟು ಸಮಯ ಅವ್ರು ಅಲ್ಲಿ ಕ್ಯಾಂಪ್‌ ಮಾಡಿಕೊಂಡಿರಬೇಕಿತ್ತು. ಮೇಘ ಮೇಲೆದ್ದ ಕೂಡಲೇ ಅವ್ರು ಹೊರಡಬೇಕಿತ್ತು. ‘ಕೆಲವು ಸಮಯಗಳಲ್ಲಿ ಮೇಘ ಸಾಯಂಕಾಲದಿಂದ ಹೊತ್ತಾರೆಯವರೆಗೂ ಇರುತ್ತಿತ್ತು.’ ಇನ್ನು ಕೆಲವೊಮ್ಮೆ ‘ಮೇಘ ಎರಡು ದಿನನೋ ಒಂದು ತಿಂಗಳೋ ಅಥ್ವಾ ಒಂದು ವರ್ಷನೋ ನಿಂತಿರುತ್ತಿತ್ತು.’ (ಅರ. 9:21, 22) ಹೀಗೆ ಇಸ್ರಾಯೇಲ್ಯರು ಎಷ್ಟು ಸಲ ಸ್ಥಳಾಂತರಿಸಿದ್ರು? ಸುಮಾರು 40 ಸ್ಥಳಗಳಲ್ಲಿ ಇಸ್ರಾಯೇಲ್ಯರು ಕ್ಯಾಂಪ್‌ ಹಾಕೊಂಡಿದ್ರು ಅಂತ ಅರಣ್ಯಕಾಂಡ 33 ನೇ ಅಧ್ಯಾಯ ತಿಳಿಸುತ್ತೆ.

ಕೆಲವೊಮ್ಮೆ ನೆರಳಿರೋ ಕಡೆ ಕ್ಯಾಂಪ್‌ ಹಾಕ್ತಿದ್ರು. ಅಂಥ ಮರಳುಗಾಡಿನಲ್ಲಿ ನೆರಳಿರೋ ಜಾಗ ಸಿಕ್ಕಿದಾಗ ಅವ್ರಿಗೆ ತುಂಬ ಖುಷಿಯಾಗ್ತಿತ್ತು. (ಧರ್ಮೋ. 1:19) ಅದಕ್ಕೆ ಇನ್ನೊಂದು ಕಡೆ ಹೋಗಬೇಕು ಅಂದಾಗ ಈ ತರ ಪರಿಸ್ಥಿತಿ ಅಲ್ಲಿ ಇರಲ್ವೇನೋ ಇನ್ನೂ ಕಷ್ಟವಾಗುತ್ತೇನೋ ಅಂತ ಯೋಚಿಸ್ತಿದ್ರು.

ಆರ್ಭಟವಾಗಿ ತುತೂರಿ ಊದಿದಾಗ ಎಲ್ರಿಗೂ ಕೇಳಿಸ್ತಿತ್ತು. ಆದ್ರೆ ಎಲ್ರು ಒಂದೇ ಸಮ್ಯದಲ್ಲಿ ಹೊರಡೋಕಾಗ್ತಿರಲಿಲ್ಲ. ಎಲ್ಲಾ ಕುಲದವ್ರು ತಮ್ಮ ಸರದಿ ಬರೋವರೆಗೆ ಕಾಯಬೇಕಿತ್ತು. ಮೊದಲ ಸಲ ಆರ್ಭಟವಾಗಿ ತುತೂರಿ ಊದಿದಾಗ ಪೂರ್ವ ದಿಕ್ಕಿನಲ್ಲಿರೋ ಯೆಹೂದ, ಇಸ್ಸಾಕಾರ್‌, ಜೆಬುಲೂನ್‌ ಕುಲದವ್ರು ಹೊರಡಬೇಕಿತ್ತು. (ಅರ. 2:3-7; 10:5, 6) ಎರಡನೇ ಸಲ ಊದಿದಾಗ ದಕ್ಷಿಣ ದಿಕ್ಕಿನಲ್ಲಿ ಕ್ಯಾಂಪ್‌ ಮಾಡಿಕೊಂಡಿದ್ದ ಮೂರು ಕುಲದವ್ರು ಹೊರಡ್ತಿದ್ರು. ಹೀಗೆ ತಮ್ಮ ಸರದಿ ಪ್ರಕಾರ ಎಲ್ಲಾ ಕುಲದವ್ರು ಹೊರಡ್ತಿದ್ರು.

ಸಂಘಟನೆಯಲ್ಲಿ ಬದಲಾವಣೆಗಳಾದಾಗ ಹೊಂದಿಕೊಳ್ಳಲು ನಿಮ್ಗೂ ಕಷ್ಟ ಆಗಬಹುದು. ಮತ್ತೆ ಮತ್ತೆ ಬದಲಾವಣೆ ಆಗ್ತಿದೆ ಅಂತ ಅನಿಸ್ಬಹುದು. ‘ಮುಂಚೆ ಇದ್ದಿದ್ದೇ ಚೆನ್ನಾಗಿತ್ತು, ಹೊಸ ಬದಲಾವಣೆ ಬೇಕಿರಲಿಲ್ಲ’ ಅಂತನೂ ಅನಿಸ್ಬಹುದು. ಒಂದು ಬದಲಾವಣೆಯಾದಾಗ ಅದಕ್ಕೆ ಹೊಂದಿಕೊಂಡು, ತಾಳ್ಮೆ ತೋರಿಸೋಕೆ ನಿಮ್ಗೆ ಕಷ್ಟ ಆಗ್ಬಹುದು. ಆದ್ರೆ ಸಮ್ಯ ಕಳೆದಂತೆ ಈ ಬದಲಾವಣೆಗಳು ನಮ್ಮ ಒಳ್ಳೇದಕ್ಕೇ ಅಂತ ಅರ್ಥ ಆಗುತ್ತೆ. ನಾವು ಅದಕ್ಕೆ ಹೊಂದಿಕೊಂಡಾಗ ಯೆಹೋವ ಖಂಡಿತ ಆಶೀರ್ವದಿಸ್ತಾನೆ.

ಯೆಹೋವನು ಲಕ್ಷಾಂತರ ಇಸ್ರಾಯೇಲ್ಯ ಪುರುಷ, ಸ್ತ್ರೀ ಮತ್ತು ಮಕ್ಕಳನ್ನು ಮರಳುಗಾಡಿನಲ್ಲಿ ಸುರಕ್ಷಿತವಾಗಿ ನಡೆಸಿದನು. ಆತನ ಸಲಹೆ ಸೂಚನೆಗಳು ಇಲ್ಲದೇ ಇರುತ್ತಿದ್ದರೆ ಅವ್ರು ಖಂಡಿತ ಬದುಕುಳಿಯುತ್ತಿರಲಿಲ್ಲ. ಈ ಕಡೇ ದಿವಸಗಳಲ್ಲಿ ಯೆಹೋವ ನಮ್ಮನ್ನು ಮಾರ್ಗದರ್ಶಿಸ್ತಿದ್ದಾನೆ. ನಾವಾತನಿಗೆ ಆಪ್ತರಾಗಿರೋಕೆ ಮತ್ತು ನಮ್ಮ ನಂಬಿಕೇನ ಬಲಪಡಿಸೋಕೆ ಸಹಾಯ ಮಾಡ್ತಿದ್ದಾನೆ. ತುತೂರಿ ಶಬ್ದಕ್ಕೆ ಕಿವಿಗೊಟ್ಟ ನಂಬಿಗಸ್ತ ಇಸ್ರಾಯೇಲ್ಯರಂತೆ ನಾವೂ ಇರೋಕೆ ನಮ್ಮಿಂದಾದ ಎಲ್ಲ ಪ್ರಯತ್ನ ಮಾಡೋಣ.