ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 24

“ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು”

“ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು”

“ನಾನು ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು. ಕರ್ತನೇ, ನನ್ನ ದೇವರೇ, ಮನಃಪೂರ್ವಕವಾಗಿ ನಿನ್ನನ್ನು ಕೊಂಡಾಡುವೆನು.”—ಕೀರ್ತ. 86:11, 12.

ಗೀತೆ 23 ಯೆಹೋವನು ನಮ್ಮ ಬಲ

ಕಿರುನೋಟ *

1. (ಎ) ದೇವಭಯ ಅಂದರೇನು? (ಬಿ) ಯೆಹೋವನನ್ನು ಪ್ರೀತಿಸುವ ಜನ್ರಿಗೆ ಈ ಭಯ ಯಾಕೆ ಇರ್ಬೇಕು?

ಸತ್ಯ ಕ್ರೈಸ್ತರು ದೇವ್ರನ್ನು ಪ್ರೀತಿಸ್ತಾರೆ ಮತ್ತು ಭಯನೂ ಪಡ್ತಾರೆ. ಪ್ರೀತಿ ಇದ್ದಲ್ಲಿ ಭಯ ಇರೋಕೆ ಸಾಧ್ಯ ಇಲ್ವಲ್ಲಾ ಅಂತ ಕೆಲವ್ರು ಯೋಚಿಸ್ಬಹುದು. ಆದ್ರೆ ನಾವಿಲ್ಲಿ ಹೇಳುತ್ತಿರೋ ಭಯ, ನಮ್ಮನ್ನು ಗಾಬರಿಪಡಿಸೋ ಗಡಗಡ ನಡುಗಿಸೋ ಭಯ ಅಲ್ಲ. ಬೇರೆ ರೀತಿಯ ಭಯದ ಬಗ್ಗೆ ಮಾತಾಡ್ತಿದ್ದೇವೆ. ಇಂಥ ಭಯ ಇರೋ ಜನ್ರಿಗೆ ದೇವ್ರ ಮೇಲೆ ತುಂಬ ಭಕ್ತಿ ಗೌರವ ಇರುತ್ತೆ. ಅವ್ರು ದೇವ್ರ ಜೊತೆಗಿರೋ ಸ್ನೇಹವನ್ನು ತುಂಬ ಮಾನ್ಯ ಮಾಡ್ತಾರೆ. ಹಾಗಾಗಿ ಆತನಿಗೆ ಇಷ್ಟ ಆಗದಿರೋ ಯಾವ ವಿಷ್ಯನೂ ಮಾಡದಿರೋಕೆ ತಮ್ಮಿಂದಾದ ಎಲ್ಲ ಪ್ರಯತ್ನ ಮಾಡ್ತಾರೆ.—ಕೀರ್ತ. 111:10; ಜ್ಞಾನೋ. 8:13.

2. ಕೀರ್ತನೆ 86:11 ರಲ್ಲಿರುವಂತೆ ಯಾವ ಎರಡು ವಿಷ್ಯಗಳ ಬಗ್ಗೆ ಚರ್ಚಿಸಲಿದ್ದೇವೆ?

2 ಕೀರ್ತನೆ 86:11 ಓದಿ. ದೇವ್ರ ಮೇಲಿನ ಭಯಭಕ್ತಿ ತುಂಬ ಮುಖ್ಯ ಅನ್ನೋದು ರಾಜ ದಾವೀದನಿಗೆ ಚೆನ್ನಾಗಿ ಅರ್ಥ ಆಗಿತ್ತು. ಅದು ಈ ವಚನದಿಂದ ಗೊತ್ತಾಗುತ್ತೆ. ದಾವೀದನ ಈ ಮಾತುಗಳ ಪ್ರಕಾರ ನಾವು ಹೇಗೆ ನಡಕೊಳ್ಬಹುದು ಅನ್ನೋದನ್ನು ನೋಡೋಣ. ಮೊದ್ಲಿಗೆ ದೇವ್ರ ಹೆಸ್ರ ಬಗ್ಗೆ ನಮಗ್ಯಾಕೆ ತುಂಬ ಗೌರವ ಇರ್ಬೇಕು ಅನ್ನೋದಕ್ಕಿರುವ ಕೆಲವು ಕಾರಣ ನೋಡೋಣ. ನಂತ್ರ ದೇವ್ರ ಹೆಸ್ರಿನ ಮೇಲಿರೋ ಭಯಭಕ್ತಿನಾ ನಮ್ಮ ದಿನನಿತ್ಯದ ಜೀವನದಲ್ಲಿ ಹೇಗೆ ತೋರಿಸ್ಬಹುದು ಅಂತ ಚರ್ಚಿಸೋಣ.

ಯೆಹೋವ ಹೆಸ್ರಿನ ಬಗ್ಗೆ ಯಾಕೆ ಗೌರವ ಇರ್ಬೇಕು?

3. ದೇವ್ರ ಹೆಸ್ರಿನ ಬಗ್ಗೆ ಭಯಭಕ್ತಿ ಇಟ್ಟುಕೊಳ್ಳಲು ಮೋಶೆಗೆ ಯಾವ ಅನುಭವ ಸಹಾಯ ಮಾಡಿರಬಹುದು?

3 ಮೋಶೆ ಹೋರೇಬ್‌ ಬೆಟ್ಟದ ಒಂದು ಬಂಡೆ ಸಂದಿಯಲ್ಲಿ ಕೂತು ಯೆಹೋವನ ಮಹಿಮೆ ತನ್ನ ಮುಂದೆ ದಾಟಿಹೋಗುವುದನ್ನು ನೋಡಿದ. ಆಗ ಅವನಿಗೆ ಹೇಗನಿಸಿರಬಹುದೆಂದು ಯೋಚಿಸಿ. ಈ ದೃಶ್ಯ ಎಂಥವ್ರಲ್ಲೂ ಭಯವಿಸ್ಮಯ ಹುಟ್ಟಿಸುವಂತಿತ್ತು. ನಂತರ ಮೋಶೆ ಮುಂದಿನ ಮಾತುಗಳನ್ನು ಕೇಳಿಸಿಕೊಂಡನು. ಬಹುಶಃ ಅದನ್ನು ಒಬ್ಬ ದೇವದೂತನು ಹೇಳಿರಬಹುದು: “ಯೆಹೋವ, ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು; ಸಾವಿರಾರು ತಲೆಗಳ ವರೆಗೂ ದಯೆತೋರಿಸುವವನು; ದೋಷಾಪರಾಧಪಾಪಗಳನ್ನು ಕ್ಷಮಿಸುವವನು.” (ವಿಮೋ. 33:17-23; 34:5-7) ಇದಾದ ನಂತ್ರ ಮೋಶೆ ಯೆಹೋವನ ಹೆಸ್ರನ್ನು ಬಳಸ್ವಾಗೆಲ್ಲಾ ಈ ಘಟನೆ ಖಂಡಿತ ನೆನಪಿಗೆ ಬಂದಿರುತ್ತೆ. ಈ ಕಾರಣದಿಂದಲೇ ಅವನು ಇಸ್ರಾಯೇಲ್‌ ಜನ್ರಿಗೆ “ನಿಮ್ಮ ದೇವರಾದ ಯೆಹೋವನೆಂಬ ಮಹಾಮಹಿಮೆಯುಳ್ಳ ಭಯಂಕರ ನಾಮದಲ್ಲಿ ನೀವು ಭಯಭಕ್ತಿಯುಳ್ಳವರಾಗಿ” ಅಂತ ಎಚ್ಚರಿಕೆ ಕೊಟ್ಟನು.—ಧರ್ಮೋ. 28:58.

4. ಯೆಹೋವನ ಯಾವ ಗುಣಗಳ ಬಗ್ಗೆ ಧ್ಯಾನಿಸಿದ್ರೆ ಆತನ ಮೇಲಿರೋ ಗೌರವ ಹೆಚ್ಚಾಗುತ್ತೆ?

4 ನಾವು ಯೆಹೋವನ ಹೆಸ್ರನ್ನು ಬರೀ ಹೇಳಿದ್ರೆ ಸಾಕಾಗಲ್ಲ, ಆತ ಯಾವ ರೀತಿಯ ದೇವ್ರು ಅನ್ನೋದನ್ನ ಧ್ಯಾನಿಸ್ಬೇಕು. ಆತನ ಗುಣಗಳಾದ ಶಕ್ತಿ, ವಿವೇಕ, ನ್ಯಾಯ ಮತ್ತು ಪ್ರೀತಿ ಬಗ್ಗೆನೂ ಧ್ಯಾನಿಸ್ಬೇಕು. ಈ ಗುಣಗಳು ಮತ್ತು ಆತನಲ್ಲಿರೋ ಇನ್ನೂ ಬೇರೆ ಗುಣಗಳ ಬಗ್ಗೆ ಯೋಚಿಸಿದಾಗ ಆತನ ಮೇಲಿರೋ ಭಯಭಕ್ತಿ, ಗೌರವ ಹೆಚ್ಚಾಗುತ್ತೆ.—ಕೀರ್ತ. 77:11-15.

5-6. (ಎ) ಯೆಹೋವ ಅನ್ನೋ ಹೆಸ್ರಿನ ಅರ್ಥವೇನು? (ಬಿ) ವಿಮೋಚನಕಾಂಡ 3:13, 14 ಮತ್ತು ಯೆಶಾಯ 64:8 ರ ಪ್ರಕಾರ ಯೆಹೋವ ಯಾವ ವಿಧಗಳಲ್ಲಿ ತನ್ನ ಉದ್ದೇಶ ನೆರವೇರಿಸ್ತಾನೆ?

5 ಯೆಹೋವ ಅನ್ನೋ ಹೆಸ್ರಿನ ಅರ್ಥವೇನು? ಅನೇಕ ವಿದ್ವಾಂಸರ ಪ್ರಕಾರ ಯೆಹೋವ ಅಂದ್ರೆ “ಆತನು ಆಗುವಂತೆ ಮಾಡುತ್ತಾನೆ.” ಅದರರ್ಥ ಯೆಹೋವ ತಾನು ಅಂದುಕೊಂಡಿದ್ದನ್ನು ಮಾಡೇ ಮಾಡ್ತಾನೆ. ಹೇಗೆ?

6 ಯೆಹೋವ ತನ್ನ ಉದ್ದೇಶ ನೆರವೇರಿಸಲು ಏನು ಬೇಕಾದ್ರೂ ಆಗುತ್ತಾನೆ. (ವಿಮೋಚನಕಾಂಡ 3:13, 14 ಓದಿ.) ಈ ವಚನದಲ್ಲಿ “ಇರುವಾತನೇ ಆಗಿದ್ದೇನೆ” ಅನ್ನೋದ್ರ ಅರ್ಥ “ನಾನು ಏನಾಗಬೇಕೆಂದು ಅಂದುಕೊಳ್ತೇನೋ ಅದಾಗುತ್ತೇನೆ” ಅಂತ. ದೇವ್ರ ವ್ಯಕ್ತಿತ್ವದ ಈ ಅದ್ಭುತ ಅಂಶದ ಬಗ್ಗೆ ನಾವು ಧ್ಯಾನಿಸಬೇಕಂತ ನಮ್ಮ ಪ್ರಕಾಶನಗಳಲ್ಲಿ ಆಗಾಗ ಉತ್ತೇಜನ ಸಿಗುತ್ತೆ. ಯೆಹೋವ ತನ್ನ ಉದ್ದೇಶ ನೆರವೇರಿಸಲು ಇನ್ನೊಂದು ವಿಷ್ಯವನ್ನೂ ಮಾಡ್ತಾನೆ. ತನ್ನ ಸೇವಕರು ಯಾವ ರೀತಿಯ ವ್ಯಕ್ತಿಗಳಾಗ್ಬೇಕೋ ಆ ರೀತಿ ಆಗುವಂತೆ ಮಾಡ್ತಾನೆ. (ಯೆಶಾಯ 64:8 ಓದಿ.) ಈ ವಿಧಗಳಲ್ಲಿ ತನ್ನ ಇಷ್ಟವನ್ನು ನೆರವೇರಿಸ್ತಾನೆ. ಅದನ್ನು ತಡೆಯೋಕೆ ಯಾವುದರಿಂದಲೂ ಸಾಧ್ಯವಿಲ್ಲ.—ಯೆಶಾ. 46:10, 11.

7. ಯೆಹೋವನ ಮೇಲೆ ಪ್ರೀತಿ ಗೌರವ ಬೆಳೆಸಿಕೊಳ್ಳಲು ನಾವೇನು ಮಾಡಬೇಕು?

7 ಯೆಹೋವ ನಮಗಾಗಿ ಮಾಡಿರೋ ವಿಷ್ಯಗಳ ಬಗ್ಗೆ ಮತ್ತು ನಮ್ಮಿಂದ ಆತನು ಮಾಡಿಸುತ್ತಿರೋ ವಿಷ್ಯಗಳ ಬಗ್ಗೆ ಧ್ಯಾನಿಸಿದ್ರೆ ನಾವು ಆತನ ಕಡೆಗೆ ಪ್ರೀತಿ, ಗೌರವ ಬೆಳೆಸಿಕೊಳ್ತೇವೆ. ಉದಾಹರಣೆಗೆ, ಆತನು ಮಾಡಿರೋ ಅದ್ಭುತ ಸೃಷ್ಟಿಯ ಬಗ್ಗೆ ಧ್ಯಾನಿಸುವಾಗ ನಾವು ನಿಬ್ಬೆರಗಾಗುತ್ತೇವೆ. (ಕೀರ್ತ. 8:3, 4) ಯೆಹೋವ ತನ್ನ ಉದ್ದೇಶ ನೆರವೇರಿಸಲು ನಮ್ಮನ್ನು ಹೇಗೆ ಬಳಸ್ತಾನೆ ಅನ್ನೋದ್ರ ಬಗ್ಗೆ ಧ್ಯಾನಿಸುವಾಗ್ಲೂ ನಮ್ಮ ಹೃದಯದಲ್ಲಿ ಆತನ ಬಗ್ಗೆ ಹೆಚ್ಚು ಗೌರವ ಮೂಡುತ್ತೆ. ನಿಜಕ್ಕೂ ಯೆಹೋವ ಅನ್ನೋ ಹೆಸ್ರೇ ಒಂದು ಅದ್ಭುತ! ಆ ಹೆಸ್ರು ನಮ್ಮ ತಂದೆಯ ವ್ಯಕ್ತಿತ್ವವನ್ನ ತೋರಿಸಿಕೊಡುತ್ತೆ. ಆತ ಈಗಾಗ್ಲೇ ಏನೆಲ್ಲಾ ಮಾಡಿದ್ದಾನೆ ಮತ್ತು ಮುಂದೆ ಏನೆಲ್ಲಾ ಮಾಡಲಿದ್ದಾನೆ ಅನ್ನೋದನ್ನು ತಿಳಿಸುತ್ತೆ.—ಕೀರ್ತ. 89:7, 8.

“ಯೆಹೋವನ ನಾಮಮಹತ್ವವನ್ನು ಪ್ರಕಟಿಸುವೆನು”

ಮೋಶೆ ಇಸ್ರಾಯೇಲ್ಯರಿಗೆ ಯೆಹೋವನ ಬಗ್ಗೆ, ಆತನ ಹೆಸ್ರಿನ ಬಗ್ಗೆ ಕಲಿಸಿದನು. ಇದ್ರಿಂದ ಅವರಿಗೆ ಚೈತನ್ಯ ಸಿಕ್ಕಿತು (ಪ್ಯಾರ 8 ನೋಡಿ) *

8. ಧರ್ಮೋಪದೇಶಕಾಂಡ 32:2, 3 ರಿಂದ ಯೆಹೋವ ಏನು ಬಯಸ್ತಾನೆ ಅಂತ ಗೊತ್ತಾಗುತ್ತೆ?

8 ಇಸ್ರಾಯೇಲ್ಯರು ಇನ್ನೇನು ಕಾನಾನ್‌ ದೇಶವನ್ನು ಪ್ರವೇಶಿಸಲಿದ್ದರು. ಆಗ ಯೆಹೋವನು ಮೋಶೆಗೆ ಒಂದು ಪದ್ಯವನ್ನು ಹೇಳಿಕೊಟ್ಟನು. (ಧರ್ಮೋ. 31:19) ಅದನ್ನು ಮೋಶೆ ಇಸ್ರಾಯೇಲ್ಯರಿಗೆ ಕಲಿಸಬೇಕಿತ್ತು. (ಧರ್ಮೋಪದೇಶಕಾಂಡ 32:3 ಓದಿ.) ವಚನ 3 ರ ಬಗ್ಗೆ ಧ್ಯಾನಿಸುವಾಗ ಯೆಹೋವನ ಬಗ್ಗೆ ಒಂದು ವಿಷ್ಯ ಗೊತ್ತಾಗುತ್ತೆ. ಏನಂದ್ರೆ ತನ್ನ ಹೆಸ್ರು ಪವಿತ್ರ ಅದನ್ನು ಯಾರೂ ಉಚ್ಚರಿಸಬಾರದು, ಅದನ್ನು ಬಚ್ಚಿಡಬೇಕು ಅಂತ ಆತನಿಗೆ ಇಷ್ಟವಿಲ್ಲ. ಎಲ್ಲರೂ ತನ್ನ ಹೆಸ್ರನ್ನು ತಿಳುಕೊಳ್ಳಬೇಕು ಅನ್ನೋದೇ ಆತನ ಆಸೆ! ಯೆಹೋವನ ಬಗ್ಗೆ, ಆತನ ಮಹಾನ್‌ ಹೆಸ್ರಿನ ಬಗ್ಗೆ ಕಲಿತದ್ದು ಇಸ್ರಾಯೇಲ್ಯರಿಗೆ ಸಿಕ್ಕ ಒಂದು ಸುಯೋಗವೇ ಆಗಿತ್ತು. ಮೋಶೆ ಅವ್ರಿಗೆ ಕಲಿಸಿದ್ದು ಹೇಗಿತ್ತೆಂದ್ರೆ ಹದವಾದ ಮಳೆ ಸಸಿಗಳನ್ನು ಪೋಷಿಸಿ ಚೈತನ್ಯ ಕೊಡುವಂಥ ರೀತಿಯಲ್ಲಿತ್ತು. (ಧರ್ಮೋ. 32:2) ಅವನು ಕಲಿಸಿದ್ದು ಅವ್ರ ನಂಬಿಕೆಯನ್ನು ಬಲಪಡಿಸಿ ಚೈತನ್ಯ ಕೊಡ್ತು. ನಾವು ಮೋಶೆ ತರ ಜನ್ರಿಗೆ ಹೇಗೆ ಕಲಿಸಬಹುದು?

9. ಯೆಹೋವ ಹೆಸ್ರಿನ ಪವಿತ್ರೀಕರಣದಲ್ಲಿ ನಾವು ಹೇಗೆ ಕೈಜೋಡಿಸಬಹುದು?

9 ಮನೆ-ಮನೆ ಸೇವೆ ಮಾಡ್ವಾಗ ಅಥ್ವಾ ಸಾರ್ವಜನಿಕ ಸ್ಥಳದಲ್ಲಿ ಸೇವೆ ಮಾಡ್ವಾಗ ದೇವ್ರ ಹೆಸ್ರು ಯೆಹೋವ ಅಂತ ಬೈಬಲಿಂದ ತೋರಿಸ್ಬಹುದು. ನಮ್ಮ ಸುಂದರ ಪ್ರಕಾಶನಗಳನ್ನು, ಮನಮುಟ್ಟುವಂಥ ವಿಡಿಯೋಗಳನ್ನು ಮತ್ತು ನಮ್ಮ ವೆಬ್‌ಸೈಟ್‌ನಲ್ಲಿರೋ ಮಾಹಿತಿಯನ್ನೂ ತೋರಿಸ್ಬಹುದು. ಕೆಲ್ಸದ ಸ್ಥಳದಲ್ಲಿ, ಶಾಲೆಯಲ್ಲಿ ಅಥವಾ ಪ್ರಯಾಣಿಸುವಾಗ ಯೆಹೋವನ ಬಗ್ಗೆ, ಆತನ ಗುಣಗಳ ಬಗ್ಗೆ ಮಾತಾಡೋಕೆ ನಮ್ಗೆ ಅವಕಾಶಗಳು ಸಿಗುತ್ತವೆ. ಜನ್ರಿಗೆ, ಯೆಹೋವ ಇಡೀ ಮಾನವಕುಲಕ್ಕಾಗಿ ಏನೆಲ್ಲಾ ಮಾಡಲಿದ್ದಾನೆ ಅನ್ನೋದನ್ನೂ ತಿಳಿಸ್ಬಹುದು. ಆಗ ಅವ್ರು ಯೆಹೋವ ತುಂಬ ಪ್ರೀತಿ ಮಾಡೋ ದೇವ್ರು ಅಂತ ಅರ್ಥ ಮಾಡ್ಕೋತಾರೆ. ನಾವು ಯೆಹೋವನ ಬಗ್ಗೆ ಸತ್ಯ ತಿಳಿಸ್ವಾಗ ಆತನ ಹೆಸ್ರಿನ ಪವಿತ್ರೀಕರಣಕ್ಕೆ ನಾವೂ ಕೈಜೋಡಿಸಿದಂತೆ ಆಗುತ್ತೆ. ದೇವ್ರ ಬಗ್ಗೆ ಜನ್ರು ನಂಬಿದ್ದ ವಿಷ್ಯಗಳು ಸುಳ್ಳು ಅಂತ ಅರ್ಥಮಾಡಿಕೊಳ್ಳಲು ನಾವು ಸಹಾಯ ಮಾಡಿದಂತೆ ಆಗುತ್ತೆ. ನಾವು ಬೈಬಲಿಂದ ಕಲಿಸೋ ವಿಷ್ಯಗಳು ಜನ್ರ ನಂಬಿಕೆಯನ್ನು ಬಲಪಡಿಸಿ ಚೈತನ್ಯ ಕೊಡುತ್ತವೆ.—ಯೆಶಾ. 65:13, 14.

10. ಬೈಬಲ್‌ ಸ್ಟಡಿ ಮಾಡ್ವಾಗ ನಮ್ಮ ವಿದ್ಯಾರ್ಥಿಗಳಿಗೆ ಬರೀ ದೇವ್ರ ನಿಯಮಗಳನ್ನು, ತತ್ವಗಳನ್ನು ಹೇಳಿಕೊಟ್ರೆ ಸಾಕಾಗುತ್ತಾ? ವಿವರಿಸಿ.

10 ಬೈಬಲ್‌ ಸ್ಟಡಿ ಮಾಡ್ವಾಗ ನಮ್ಮ ವಿದ್ಯಾರ್ಥಿಗಳು ದೇವ್ರ ಹೆಸ್ರನ್ನು, ಅದರ ಮಹತ್ವವನ್ನು ತಿಳುಕೊಳ್ಳಬೇಕು ಮತ್ತು ಬಳಸಬೇಕು ಅಂತ ನಾವು ಇಷ್ಟಪಡ್ತೇವೆ. ಇದನ್ನ ಮಾಡೋಕೆ ನಾವು ಬರೀ ಅವ್ರಿಗೆ ದೇವ್ರ ನಿಯಮಗಳನ್ನು, ಸಲಹೆ-ಸೂಚನೆಗಳನ್ನು ಮತ್ತು ಹೇಗೆ ನಡಕೊಳ್ಳಬೇಕು ಅನ್ನೋದನ್ನು ಕಲಿಸಿದ್ರೆ ಸಾಕಾಗುತ್ತಾ? ಒಬ್ಬ ಒಳ್ಳೇ ವಿದ್ಯಾರ್ಥಿ ದೇವ್ರ ನಿಯಮಗಳನ್ನು ಕಲೀಬಹುದು ಮತ್ತು ಇಷ್ಟಪಡ್ಲೂಬಹುದು. ಅದ್ರ ಜೊತೆಗೆ ಆ ನಿಯಮ ಕೊಟ್ಟಿರೋ ದೇವ್ರನ್ನು ಪ್ರೀತಿಸೋದು ಮುಖ್ಯ. ಹವ್ವಗೂ ದೇವ್ರ ನಿಯಮಗಳು ಗೊತ್ತಿತ್ತು. ಆದ್ರೆ ಆ ನಿಯಮ ಕೊಟ್ಟ ದೇವ್ರ ಮೇಲೆ ಅವಳಿಗಾಗಲಿ, ಆದಾಮನಿಗಾಗಲಿ ಪ್ರೀತಿ ಇರಲಿಲ್ಲ. (ಆದಿ. 3:1-6) ಹಾಗಾಗಿ ನಮ್ಮ ಬೈಬಲ್‌ ವಿದ್ಯಾರ್ಥಿಗಳಿಗೆ ದೇವ್ರ ನಿಯಮಗಳನ್ನು, ತತ್ವಗಳನ್ನು ಹೇಳಿಕೊಟ್ರೆ ಸಾಕಾಗಲ್ಲ. ದೇವ್ರ ಮೇಲೆ ಪ್ರೀತಿ ಬೆಳೆಸಿಕೊಳ್ಳೋದಕ್ಕೂ ನಾವು ಕಲಿಸಬೇಕು.

11. ದೇವ್ರ ನಿಯಮಗಳು, ತತ್ವಗಳ ಬಗ್ಗೆ ಕಲಿಸುವಾಗ ಅವನ್ನು ಕೊಟ್ಟಿರೋ ದೇವ್ರನ್ನು ಪ್ರೀತಿಸೋಕೆ ನಮ್ಮ ವಿದ್ಯಾರ್ಥಿಗಳಿಗೆ ನಾವು ಹೇಗೆ ಸಹಾಯ ಮಾಡ್ಬಹುದು?

11 ಯೆಹೋವನಿಗೆ ನಮ್ಮ ಮೇಲೆ ಪ್ರೀತಿ ಇರೋದ್ರಿಂದ ಮತ್ತು ನಮ್ಮ ಒಳಿತನ್ನು ಬಯಸೋದ್ರಿಂದ ನೀತಿನಿಯಮ, ತತ್ವಗಳನ್ನು ಕೊಟ್ಟಿದ್ದಾನೆ. (ಕೀರ್ತ. 119:97, 111, 112) ನಮ್ಮ ವಿದ್ಯಾರ್ಥಿಗಳು ಆ ನಿಯಮಗಳ ಹಿಂದಿರೋ ಯೆಹೋವನ ಪ್ರೀತಿ ಅರ್ಥಮಾಡಿಕೊಳ್ಳೋಕೆ ನಾವು ಸಹಾಯ ಮಾಡ್ಬೇಕು. ಅವ್ರಿಗೆ ಈ ಪ್ರಶ್ನೆಗಳನ್ನು ಕೇಳಬೇಕು: “ದೇವ್ರು ತನ್ನ ಸೇವಕರಿಗೆ ಇದನ್ನು ಮಾಡಿ ಅದನ್ನು ಮಾಡ್ಬೇಡಿ ಅಂತ ಯಾಕೆ ಹೇಳಿದ್ನು? ಇದ್ರಿಂದ ಆತನ ಬಗ್ಗೆ ಏನು ಗೊತ್ತಾಗುತ್ತೆ?” ಇಂಥ ಪ್ರಶ್ನೆ ಕೇಳಿದಾಗ ನಮ್ಮ ವಿದ್ಯಾರ್ಥಿಗಳು ಯೆಹೋವನ ಬಗ್ಗೆ ಯೋಚನೆ ಮಾಡ್ತಾರೆ ಮತ್ತು ಆತನ ಹೆಸ್ರಿನ ಕಡೆಗೆ ಭಯಭಕ್ತಿ ಬೆಳೆಸಿಕೊಳ್ತಾರೆ. ನಿಯಮಗಳನ್ನಷ್ಟೇ ಅಲ್ಲ ನಿಯಮ ಕೊಟ್ಟಿರೋ ದೇವ್ರನ್ನು ಪ್ರೀತಿಸ್ತಾರೆ. (ಕೀರ್ತ. 119:68) ಅವ್ರ ನಂಬಿಕೆಯೂ ಹೆಚ್ಚಾಗುತ್ತೆ ಮತ್ತು ಬರೋ ಕಷ್ಟಗಳನ್ನು ತಾಳಿಕೊಳ್ಳೋಕೆ ಸಾಧ್ಯವಾಗುತ್ತೆ.—1 ಕೊರಿಂ. 3:12-15.

“ನಾವು ಯೆಹೋವನ ಹೆಸರಿನಲ್ಲಿ ನಡೆಯುವೆವು”

ದಾವೀದನ ಮನಸ್ಸು ಒಮ್ಮೆ ಚಂಚಲವಾಯ್ತು (ಪ್ಯಾರ 12 ನೋಡಿ)

12. ಒಂದ್ಸಲ ದಾವೀದನ ಮನಸ್ಸು ಹೇಗೆ ಚಂಚಲವಾಯ್ತು? ಇದ್ರಿಂದ ಏನಾಯ್ತು?

12 ಕೀರ್ತನೆ 86:11 ರಲ್ಲಿ ರಾಜ ದಾವೀದನು “ಏಕಮನಸ್ಸನ್ನು ಅನುಗ್ರಹಿಸು” ಅಂತ ಬರೆದನು. ಏಕಮನಸ್ಸಿರುವುದು ಎಷ್ಟು ಪ್ರಾಮುಖ್ಯ ಅನ್ನುವುದು ದಾವೀದನಿಗೆ ಸ್ವಂತ ಅನುಭವದಿಂದ ಗೊತ್ತಿತ್ತು. ಒಂದುವೇಳೆ ಮನಸ್ಸು ಚಂಚಲವಾದ್ರೆ ಕೆಟ್ಟದ್ದನ್ನು ಮಾಡೋಕೆ ಪ್ರೇರೇಪಿಸುತ್ತೆ ಅನ್ನೋದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಒಂದ್ಸಲ, ಅವನು ಮನೆ ಮಾಳಿಗೆ ಮೇಲೆ ನಿಂತಿದ್ದಾಗ ಬೇರೊಬ್ಬನ ಹೆಂಡ್ತಿ ಸ್ನಾನ ಮಾಡುವುದನ್ನು ನೋಡಿದ. ಆಗ ದಾವೀದನ ಮನಸ್ಸು ಸ್ಥಿರವಾಗಿಯೇ ಇತ್ತಾ ಅಥ್ವಾ ಚಂಚಲವಾಯ್ತಾ? ‘ಮತ್ತೊಬ್ಬನ ಹೆಂಡತಿಯನ್ನು ಆಶಿಸಬಾರದು’ ಅಂತ ಯೆಹೋವ ಕೊಟ್ಟ ನಿಯಮ ಅವನಿಗೆ ಚೆನ್ನಾಗಿ ಗೊತ್ತಿತ್ತು. (ವಿಮೋ. 20:17) ಆದ್ರೂ ಅವನು ಅವಳನ್ನೇ ನೋಡ್ತಾ ನಿಂತ. ಅವನ ಮನಸ್ಸು ಚಂಚಲವಾಯ್ತು. ಯೆಹೋವನನ್ನು ಮೆಚ್ಚಿಸಬೇಕೆಂಬ ಬಯಕೆ ಇದ್ರೂ ಆ ಸ್ತ್ರೀಯನ್ನು ಪಡೆಯಬೇಕನ್ನೋ ಆಸೆನೂ ಹೃದಯದಲ್ಲಿ ಬೆಳೆದುಬಿಡ್ತು. ಯೆಹೋವನನ್ನು ಪ್ರೀತಿಸ್ತಿದ್ದ ದಾವೀದ ಈ ಸಂದರ್ಭದಲ್ಲಿ ತಪ್ಪಾದ ಆಸೆ ತೀರಿಸಿಕೊಳ್ಳೋಕೆ ಮುಂದಾದ. ಗಂಭೀರ ಪಾಪ ಮಾಡ್ಬಿಟ್ಟ. ಯೆಹೋವನ ಹೆಸ್ರಿಗೆ ಕಳಂಕ ತಂದುಬಿಟ್ಟ. ದಾವೀದ ಮಾಡಿದ ಪಾಪದ ಫಲವನ್ನು ಅವನ ಕುಟುಂಬ ಸದಸ್ಯರು ಮತ್ತು ಕೆಲವು ಮುಗ್ಧ ಜನ್ರು ಅನುಭವಿಸಬೇಕಾಗಿ ಬಂತು.—2 ಸಮು. 11:1-5, 14-17; 12:7-12.

13. ದಾವೀದನ ಹೃದಯ ಮತ್ತೆ ಯೆಹೋವನ ಕಡೆಗೇ ಪೂರ್ಣವಾಗಿ ತಿರುಗಿತು ಅನ್ನೋದು ನಮ್ಗೆ ಹೇಗೆ ಗೊತ್ತು?

13 ದಾವೀದ ಮಾಡಿದ ತಪ್ಪಿಗೆ ಯೆಹೋವನು ಶಿಸ್ತು ನೀಡಿದನು. ಅದನ್ನು ದಾವೀದ ಸ್ವೀಕರಿಸಿದ. ಇದ್ರಿಂದಾಗಿ ಯೆಹೋವನ ಸ್ನೇಹ ಪುನಃ ಗಳಿಸಿಕೊಳ್ಳೋಕೆ ಆಯ್ತು. (2 ಸಮು. 12:13; ಕೀರ್ತ. 51:2-4, 17) ಮನಸ್ಸು ಚಂಚಲವಾದ ಕಾರಣ ಏನೆಲ್ಲಾ ಅನಾಹುತಗಳು ನಡೆದುಹೋಯ್ತು ಅನ್ನೋದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಕೀರ್ತನೆ 86:11 ರಲ್ಲಿ ಅವನು ಹೇಳಿರೋ ಮಾತನ್ನು ಹೀಗೂ ಹೇಳ್ಬಹುದು: ‘ಚಂಚಲವಾಗದ ಮನಸ್ಸನ್ನು ನನಗೆ ಕೊಡು.’ ಯೆಹೋವ ಅವನ ಪ್ರಾರ್ಥನೆ ಕೇಳಿದನಾ? ಹೌದು. ಬೈಬಲ್‌ ದಾವೀದನ ಬಗ್ಗೆ ಹೀಗೆ ಹೇಳುತ್ತೆ: ‘ಅವನು ತನ್ನ ದೇವರಾದ ಯೆಹೋವನನ್ನು ಯಥಾರ್ಥಮನಸ್ಸಿನಿಂದ ಸೇವಿಸಿದನು.’—1 ಅರ. 11:4; 15:3.

14. ನಾವು ಯಾವ ಪ್ರಶ್ನೆ ಕೇಳಿಕೊಳ್ಳಬೇಕು ಮತ್ತು ಯಾಕೆ?

14 ದಾವೀದನ ಉದಾಹರಣೆ ನಮಗೆ ಉತ್ತೇಜನನೂ ಕೊಡುತ್ತೆ, ಪಾಠನೂ ಕಲಿಸುತ್ತೆ. ಅವ್ನು ಮಾಡಿದ ಗಂಭೀರ ತಪ್ಪು ಇಂದು ನಮಗೆ ಒಂದು ಎಚ್ಚರಿಕೆ ಕೊಡುತ್ತೆ. ನಾವು ಯೆಹೋವನ ಆರಾಧನೆಯನ್ನು ಈಗಷ್ಟೇ ಆರಂಭಿಸರಬಹುದು ಅಥ್ವಾ ವರ್ಷಗಳಿಂದ ಮಾಡ್ತಾ ಬಂದಿರಬಹುದು. ನಾವು ಈ ಪ್ರಶ್ನೆ ಕೇಳಿಕೊಳ್ಳಬೇಕು: ‘ಸೈತಾನ ತರುವ ಪರೀಕ್ಷೆಗಳಿಗೆ ಮಣಿಯದಿರುವಷ್ಟು ಮನಸ್ಸು ಸ್ಥಿರವಾಗಿದ್ಯಾ?’

ನಿಮ್ಮ ಹೃದಯ ಕೆಟ್ಟ ವಿಷ್ಯಗಳ ಕಡೆಗೆ ವಾಲೋಕೆ ಸೈತಾನ ಏನು ಬೇಕಾದ್ರೂ ಮಾಡ್ತಾನೆ. ಅವನಿಗೆ ಅದಕ್ಕೆ ಅವಕಾಶ ಕೊಡ್ಬೇಡಿ! (ಪ್ಯಾರ 15-16 ನೋಡಿ) *

15. ಅನೈತಿಕ ಯೋಚನೆಗಳು ಬರುವಂಥ ಚಿತ್ರಗಳನ್ನು ನೋಡದಂತೆ ದೇವಭಯ ಹೇಗೆ ತಡೆಯುತ್ತೆ?

15 ಉದಾಹರಣೆಗೆ ಅನೈತಿಕ ಯೋಚನೆ ಬರುವಂಥ ಒಂದು ಚಿತ್ರನ ನೀವು ಟಿವಿಯಲ್ಲೋ ಇಂಟರ್‌ನೆಟ್‌ನಲ್ಲೋ ನೋಡಿದ್ದೀರಿ ಅಂತ ಇಟ್ಟುಕೊಳ್ಳಿ. ಆಗೇನು ಮಾಡ್ತೀರಾ? ‘ಅದೇನಷ್ಟು ಕೆಟ್ಟದಿಲ್ಲ ಅಶ್ಲೀಲ ಚಿತ್ರಗಳು ಇದಕ್ಕಿಂತ ಕೆಟ್ಟದಾಗಿರುತ್ತವೆ’ ಅಂತ ನೀವು ಯೋಚಿಸಬಹುದು. ಆದ್ರೆ ನಿಮ್ಮ ಹೃದಯ ತಪ್ಪಾದ ವಿಷಯಗಳ ಕಡೆಗೆ ವಾಲುವಂತೆ ಸೈತಾನ ಮಾಡೋ ಕುತಂತ್ರ ಇದು. (2 ಕೊರಿಂ. 2:11) ಅಂಥ ಚಿತ್ರವನ್ನು ಸೌದೆ ಒಡೆಯೋ ಕೊಡಲಿಗೆ ಹೋಲಿಸಬಹುದು. ಮೊದ್ಲ ಸಲ ಕೊಡಲಿಯಿಂದ ಸೌದೆಗೆ ಹೊಡೆದಾಗ ಅದು ಎರಡು ಭಾಗ ಆಗಲ್ಲ. ಆದ್ರೆ ಮತ್ತೆ ಮತ್ತೆ ಹೊಡೆದಾಗ ಗಟ್ಟಿಯಾದ ಮರದ ತುಂಡು ಎರಡು ಭಾಗ ಆಗುತ್ತೆ. ಅನೈತಿಕ ಯೋಚನೆ ಹುಟ್ಟಿಸೋ ಚಿತ್ರಗಳು ಚೂಪಾದ ಕೊಡಲಿ ತರ ಇರುತ್ತೆ. ಆ ಚಿತ್ರಗಳಿಂದ ಅಷ್ಟೇನೂ ಹಾನಿ ಇಲ್ಲ ಅಂತ ಮತ್ತೆ ಮತ್ತೆ ನೋಡ್ತಾ ಇದ್ರೆ ಯೆಹೋವನ ವಿರುದ್ಧ ಪಾಪ ಮಾಡೋದಕ್ಕೆ ಪ್ರಚೋದಿಸುತ್ತೆ. ಆತನ ಜೊತೆ ಇರೋ ಸಂಬಂಧವನ್ನ ಕಡಿದು ಹಾಕುತ್ತೆ. ಹಾಗಾಗಿ ಇಂಥ ತಪ್ಪಾದ ವಿಷಯಗಳು ನಿಮ್ಮ ಹೃದಯದೊಳಗೆ ಬರೋಕೆ ಬಿಡಬೇಡಿ. ನಿಮ್ಮ ಮನಸ್ಸು ಪೂರ್ತಿ ಯೆಹೋವನನ್ನು ಮೆಚ್ಚಿಸಬೇಕೆಂಬ ಬಯಕೆ ಮಾತ್ರ ಇರಲಿ.

16. ತಪ್ಪು ಮಾಡುವ ಒತ್ತಡ ಬಂದಾಗ ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

16 ಸೈತಾನ ನಮ್ಮ ದಾರಿ ತಪ್ಪಿಸೋಕೆ ಬರೀ ಕೆಟ್ಟ ಚಿತ್ರಗಳನ್ನು ಉಪಯೋಗಿಸೋದಿಲ್ಲ. ಬೇರೆ ರೀತಿಯ ಪ್ರಯತ್ನನೂ ಮಾಡ್ತಾನೆ. ಆಗ ನಾವೇನು ಮಾಡ್ತೀವಿ? ಕೆಲವೊಮ್ಮೆ ‘ಇದೇನು ಅಷ್ಟು ದೊಡ್ಡ ತಪ್ಪಲ್ಲ’ ಅಂತ ನಮ್ಗೆ ಅನಿಸ್ಬಹುದು. ಉದಾಹರಣೆಗೆ ‘ಇದನ್ನು ಮಾಡಿದ್ರೆ ನಂಗೇನು ಬಹಿಷ್ಕಾರ ಆಗಲ್ಲ, ಅಂಥ ದೊಡ್ಡ ಪಾಪ ಏನಲ್ಲ’ ಅಂತ ನಾವು ಯೋಚಿಸಬಹುದು. ಈ ರೀತಿ ಯೋಚನೆ ಮಾಡ್ಲೇ ಬಾರದು. ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು: ‘ಸೈತಾನ ಈ ವಿಷಯ ಬಳಸಿ ನನ್ನ ಹೃದಯನ ತಪ್ಪಾದ ವಿಷ್ಯಗಳ ಕಡೆಗೆ ವಾಲೋ ತರ ಮಾಡ್ತಿದ್ದಾನಾ? ತಪ್ಪಾದ ಆಸೆಗಳಿಗೆ ನಾನು ಮಣಿದು ಬಿಟ್ಟರೆ ಯೆಹೋವನ ಹೆಸರಿಗೆ ಕಳಂಕ ತರುತ್ತೀನಾ? ನಾನು ಮಾಡೋ ವಿಷ್ಯ ದೇವರಿಗೆ ಇನ್ನೂ ಹತ್ರ ಆಗೋದಕ್ಕೆ ಸಹಾಯ ಮಾಡುತ್ತಾ ಅಥ್ವಾ ಆತನಿಂದ ಇನ್ನೂ ದೂರ ಹೋಗುವಂತೆ ಮಾಡುತ್ತಾ?’ ಈ ಪ್ರಶ್ನೆಗಳ ಬಗ್ಗೆ ಚೆನ್ನಾಗಿ ಧ್ಯಾನಿಸಿ. ನಿಮ್ಮನ್ನು ಹೃದಯ ವಂಚಿಸದೆ ಪ್ರಾಮಾಣಿಕವಾಗಿ ಉತ್ರ ಕೊಡೋಕೆ ಯೆಹೋವನತ್ರ ಸಹಾಯ ಕೇಳಿ. (ಯಾಕೋ. 1:5) ಈ ರೀತಿ ಮಾಡೋದು ನಮಗೆ ಸಂರಕ್ಷಣೆ ಕೊಡುತ್ತೆ ಮತ್ತು ತಪ್ಪು ಮಾಡುವ ಒತ್ತಡ ಬಂದಾಗ ದೃಢವಾಗಿ ತಿರಸ್ಕರಿಸೋಕೆ ಸಹಾಯ ಮಾಡುತ್ತೆ. ಆಗ ನಾವು ಸಹ ಯೇಸುವಿನಂತೆ, “ಸೈತಾನನೇ ತೊಲಗಿಹೋಗು!” ಅಂತ ಹೇಳೋಕಾಗುತ್ತೆ.—ಮತ್ತಾ. 4:10.

17. ಏಕಮನಸ್ಸು ಇಲ್ಲದಿದ್ರೆ ಏನಾಗುತ್ತೆ? ಉದಾಹರಣೆ ಕೊಡಿ.

17 ಏಕಮನಸ್ಸು ಇಲ್ಲದಿದ್ರೆ ತುಂಬ ಅಪಾಯ. ಒಂದು ಕ್ರೀಡಾ ತಂಡದಲ್ಲಿ ಒಗ್ಗಟ್ಟಿಲ್ಲ ಅಂತ ಅಂದ್ಕೊಳ್ಳಿ. ಕೆಲವ್ರಿಗೆ ‘ಟೀಮಲ್ಲಿ ನಾನೇ ನಂಬರ್‌ ಒನ್‌ ಆಗ್ಬೇಕು’ ಅನ್ನೋ ಆಸೆ ಇರುತ್ತೆ. ಇನ್ನು ಕೆಲವ್ರು ರೂಲ್ಸ್‌ ಪ್ರಕಾರ ಆಟ ಆಡಲ್ಲ ಮತ್ತು ಕೆಲವ್ರು ಕೋಚ್‌ ಹೇಳಿದಂತೆ ಆಟ ಆಡಲ್ಲ. ನಿಮಗೇನು ಅನ್ಸುತ್ತೆ? ಆ ತಂಡ ಗೆಲ್ಲುತ್ತಾ? ಇಲ್ಲ ತಾನೇ? ನಿಮ್ಮ ಹೃದಯ ಒಗ್ಗಟ್ಟಿರೋ ತಂಡದ ತರ ಇರಬೇಕು. ಅಂದ್ರೆ ನಿಮ್ಮ ಯೋಚನೆಗಳು, ಆಸೆ-ಆಕಾಂಕ್ಷೆಗಳು ಮತ್ತು ಭಾವನೆಗಳೆಲ್ಲಾ ಯೆಹೋವನ ನೀತಿ-ನಿಯಮಕ್ಕೆ ತಕ್ಕಂತೆ ಇರಬೇಕು. ನಮ್ಮ ಹೃದಯ ಯೆಹೋವನ ಆರಾಧನೆಯನ್ನು ಬಿಟ್ಟು ಬೇರೆ ವಿಷ್ಯಗಳ ಕಡೆ ವಾಲುವಂತೆ ಸೈತಾನ ತುಂಬ ಪ್ರಯತ್ನಿಸ್ತಾನೆ. ನಮ್ಮ ಆಸೆ-ಆಕಾಂಕ್ಷೆಗಳು ಯೋಚನೆಗಳು, ಭಾವನೆಗಳು ಯಾವುದೂ ಯೆಹೋವನ ತತ್ವಗಳಿಗೆ ತಕ್ಕ ಹಾಗೆ ಇರಬಾರದು ಅನ್ನೋದೇ ಅವ್ನ ಆಸೆ. ಆದ್ರೆ ನಿಮ್ಮ ಗುರಿ ಪೂರ್ಣ ಹೃದಯದಿಂದ ಯೆಹೋವನ ಸೇವೆ ಮಾಡೋದೇ ಆಗಿರಬೇಕು. (ಮತ್ತಾ. 22:36-38) ಹಾಗಾಗಿ ನಿಮ್ಮ ಮನಸ್ಸನ್ನು ಬೇರೆ ಕಡೆಗೆ ವಾಲಿಸಲು ಸೈತಾನನಿಗೆ ಅವಕಾಶ ಕೊಡಬೇಡಿ.

18. ಮೀಕ 4:5 ರಲ್ಲಿರುವಂತೆ ನಿಮ್ಮ ದೃಢತೀರ್ಮಾನವೇನು?

18 “ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕ ಮನಸ್ಸನ್ನು ಅನುಗ್ರಹಿಸು” ಅಂತ ದಾವೀದ ಯೆಹೋವನಿಗೆ ಪ್ರಾರ್ಥಿಸಿದನು. ನಾವೂ ಈ ಪ್ರಾರ್ಥನೆನ ಅನ್ವಯಿಸೋದಕ್ಕೆ ನಮ್ಮಿಂದಾಗೋ ಎಲ್ಲವನ್ನೂ ಮಾಡೋಣ. ಪ್ರತಿ ದಿನ ನಾವು ತಗೊಳ್ಳುವ ನಿರ್ಧಾರಗಳು ಚಿಕ್ಕದಿರಲಿ, ದೊಡ್ಡದಿರಲಿ ಅವು ಯೆಹೋವನ ಹೆಸ್ರಿಗೆ ಮಹಿಮೆ ತರುವಂತಿರಬೇಕು. ಇದನ್ನು ಮಾಡಿದ್ರೆ ಯೆಹೋವನ ಸಾಕ್ಷಿಗಳು ಎಂಬ ಹೆಸರಿಗೆ ತಕ್ಕ ಹಾಗೆ ಇರ್ತೇವೆ. (ಜ್ಞಾನೋ. 27:11) ಹಾಗೂ ಪ್ರವಾದಿ ಮೀಕನ ತರ ನಾವು ಸಹ “ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು” ಅಂತ ಹೇಳೋಕಾಗುತ್ತೆ.—ಮೀಕ 4:5.

ಗೀತೆ 56 ದಯವಿಟ್ಟು ನನ್ನ ಪ್ರಾರ್ಥನೆಯನ್ನು ಲಾಲಿಸು

^ ಪ್ಯಾರ. 5 ಈ ಲೇಖನದಲ್ಲಿ ದಾವೀದನು ಪ್ರಾರ್ಥನೆಯಲ್ಲಿ ಹೇಳಿದ ಮಾತುಗಳ ಬಗ್ಗೆ ಚರ್ಚಿಸಲಿದ್ದೇವೆ. ಆ ಮಾತುಗಳು ಕೀರ್ತನೆ 86:11, 12 ರಲ್ಲಿದೆ. ಯೆಹೋವನ ಹೆಸ್ರಿಗೆ ಭಯಪಡುವುದು ಅಂದರೇನು? ಆ ಮಹಾನ್‌ ಹೆಸ್ರಿಗೆ ನಾವ್ಯಾಕೆ ತುಂಬ ಗೌರವ ತೋರಿಸ್ಬೇಕು? ನಾವು ತಪ್ಪು ಮಾಡದಂತೆ ದೇವಭಯ ಹೇಗೆ ತಡೆಯುತ್ತೆ?

^ ಪ್ಯಾರ. 53 ಚಿತ್ರ ವಿವರಣೆ: ಮೋಶೆ ದೇವಜನ್ರಿಗೆ ಯೆಹೋವನನ್ನು ಮಹಿಮೆಪಡಿಸುವಂಥ ಪದ್ಯವನ್ನು ಕಲಿಸಿದನು.

^ ಪ್ಯಾರ. 57 ಚಿತ್ರ ವಿವರಣೆ: ಹವ್ವ ತಪ್ಪಾದ ಆಸೆಗಳಿಗೆ ಮಣಿದುಬಿಟ್ಟಳು. ಆದ್ರೆ ನಾವು ಅವಳ ತರ ಮಾಡಲ್ಲ. ತಪ್ಪಾದ ಆಸೆ ಹುಟ್ಟಿಸೋ ದೇವ್ರ ಹೆಸ್ರಿಗೆ ಕಳಂಕ ತರುವಂತೆ ಮಾಡೋ ಚಿತ್ರ ಅಥವಾ ಮೆಸೇಜ್‌ಗಳು ಬಂದಾಗ ನಾವು ನೋಡಲ್ಲ.