ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಗಲಾತ್ಯ 5:22, 23 ರಲ್ಲಿರೋ ಗುಣಗಳಷ್ಟೇ ಪವಿತ್ರಾತ್ಮದಿಂದ ಸಿಗೋದಾ?

ಈ ವಚನಗಳಲ್ಲಿ ಕ್ರೈಸ್ತರೆಲ್ಲರು ಬೆಳೆಸಿಕೊಳ್ಳಬೇಕಾದ ಒಂಬತ್ತು ಗುಣಗಳಿವೆ. “ಪವಿತ್ರಾತ್ಮದಿಂದ ಉಂಟಾಗುವ ಫಲವೇನೆಂದರೆ, ಪ್ರೀತಿ, ಆನಂದ, ಶಾಂತಿ, ತಾಳ್ಮೆ, ದಯೆ, ಒಳ್ಳೇತನ, ನಂಬಿಕೆ, ಸೌಮ್ಯಭಾವ, ಸ್ವನಿಯಂತ್ರಣ.” ಬರೀ ಈ ಒಂಬತ್ತು ಗುಣಗಳನ್ನು ಬೆಳೆಸಿಕೊಳ್ಳೋಕೆ ಪವಿತ್ರಾತ್ಮ ಸಹಾಯ ಮಾಡುತ್ತೆ ಅಂತ ನಾವು ಅಂದುಕೊಳ್ಳಬಾರದು. ಯಾಕೆ ಹಾಗೆ ಹೇಳ್ಬಹುದು?

ಇದರ ಹಿಂದಿರುವ ವಚನಗಳಲ್ಲಿ ಪೌಲ ಏನು ಬರೆದ ಅನ್ನೋದನ್ನು ಗಮನಿಸಿ. “ಶರೀರಭಾವದ ಕಾರ್ಯಗಳು . . . ಯಾವುವೆಂದರೆ, ಜಾರತ್ವ, ಅಶುದ್ಧತೆ, ಸಡಿಲು ನಡತೆ, ವಿಗ್ರಹಾರಾಧನೆ, ಪ್ರೇತವ್ಯವಹಾರ, ಹಗೆತನ, ಜಗಳ, ಹೊಟ್ಟೆಕಿಚ್ಚು, ಕೋಪದ ಕೆರಳುವಿಕೆಗಳು, ಕಲಹ, ಬೇಧಗಳು, ಪಂಥಗಳು, ಮತ್ಸರ, ಕುಡಿದು ಮತ್ತೇರಿದ ಸರದಿಗಳು, ಭಾರೀ ಮೋಜು ಇಂಥವುಗಳೇ.” (ಗಲಾ. 5:19-21) “ಶರೀರಭಾವದ ಕಾರ್ಯಗಳಲ್ಲಿ” ಪೌಲನು ಕೊಲೊಸ್ಸೆ 3:5 ರಲ್ಲಿ ತಿಳಿಸಿರುವ ಕೆಲ್ವು ವಿಷ್ಯಗಳನ್ನು ತಿಳಿಸಲಿಲ್ಲ. ಅದೇ ರೀತಿ ಪೌಲ ಈ ಒಂಬತ್ತು ಒಳ್ಳೇ ಗುಣಗಳ ಬಗ್ಗೆ ತಿಳಿಸಿದ ಮೇಲೆ “ಇವುಗಳನ್ನು ಯಾವ ಧರ್ಮಶಾಸ್ತ್ರವೂ ವಿರೋಧಿಸುವುದಿಲ್ಲ” ಅಂತ ಹೇಳಿದ. ಇದ್ರಿಂದ ನಮ್ಗೆ ಏನು ಗೊತ್ತಾಗುತ್ತೆ ಅಂದ್ರೆ ಪವಿತ್ರಾತ್ಮದ ಸಹಾಯದಿಂದ ನಾವು ಬೆಳೆಸಿಕೊಳ್ಳಬಹುದಾದ ಎಲ್ಲ ಒಳ್ಳೇ ಗುಣಗಳನ್ನು ಪೌಲ ಗಲಾತ್ಯ 5:22, 23 ರಲ್ಲಿ ಪಟ್ಟಿ ಮಾಡ್ಲಿಲ್ಲ.

ಪೌಲ ಎಫೆಸ ಸಭೆಗೆ ಬರೆದ ಮಾತಿನಿಂದ ಈ ವಿಷ್ಯ ಇನ್ನೂ ಸ್ಪಷ್ಟವಾಗುತ್ತೆ. ಆತ ಬರೆದಿದ್ದು, “ಬೆಳಕಿನ ಫಲವು ಎಲ್ಲ ರೀತಿಯ ಒಳ್ಳೇತನವನ್ನೂ ನೀತಿಯನ್ನೂ ಸತ್ಯವನ್ನೂ ಒಳಗೂಡಿದೆ.” (ಎಫೆ. 5:8, 9) ಇಲ್ಲಿ ಪೌಲ ತಿಳಿಸಿರೋ ಬೆಳಕಿನ ಫಲದಲ್ಲಿ ನೀತಿ, ಸತ್ಯದ ಜೊತೆಗೆ ಪವಿತ್ರಾತ್ಮದಿಂದ ಸಿಗೋ ಗುಣಗಳ ಪಟ್ಟಿಯಲ್ಲಿದ್ದ “ಒಳ್ಳೇತನ” ಕೂಡ ಸೇರಿದೆ. ಅಂದ್ರೆ ಬೇರೆ ಗುಣಗಳು ಪವಿತ್ರಾತ್ಮದಿಂದ ಸಿಗುತ್ತವೆ.

ಇನ್ನೊಂದು ಸಂದರ್ಭದಲ್ಲಿ ಪೌಲ ತಿಮೊಥೆಯನಿಗೆ, ‘ನೀತಿ, ದೇವಭಕ್ತಿ, ನಂಬಿಕೆ, ಪ್ರೀತಿ, ತಾಳ್ಮೆ, ಸೌಮ್ಯಭಾವವನ್ನು ಬೆನ್ನಟ್ಟು’ ಅಂತ ಸಲಹೆ ನೀಡಿದ. (1 ತಿಮೊ. 6:11) ಈ ಆರು ಗುಣಗಳಲ್ಲಿ ನಾಲ್ಕು ಗುಣಗಳಾದ ಪ್ರೀತಿ, ನಂಬಿಕೆ, ತಾಳ್ಮೆ, ಸೌಮ್ಯಭಾವ ಪವಿತ್ರಾತ್ಮದಿಂದ ಸಿಗೋ ಗುಣಗಳೂ ಆಗಿವೆ. ಈ ಗುಣಗಳ ಜೊತೆ ತಿಮೊಥೆಯ ನೀತಿ, ದೇವಭಕ್ತಿಯನ್ನು ಬೆಳೆಸಿಕೊಳ್ಳಬೇಕಾಗಿತ್ತು. ಅದಕ್ಕೆ ಅವ್ನಿಗೆ ಪವಿತ್ರಾತ್ಮದ ಸಹಾಯ ಬೇಕಿತ್ತು.—ಕೊಲೊಸ್ಸೆ 3:12; 2 ಪೇತ್ರ 1:5-7 ಹೋಲಿಸಿ.

ಇದ್ರಿಂದ ಗೊತ್ತಾಗೋದು ಏನಂದ್ರೆ ಗಲಾತ್ಯ 5:22, 23 ರಲ್ಲಿ ಕ್ರೈಸ್ತರು ಬೆಳೆಸಿಕೊಳ್ಳಬೇಕಾದ ಎಲ್ಲಾ ಒಳ್ಳೇ ಗುಣಗಳನ್ನು ಪೌಲ ಪಟ್ಟಿ ಮಾಡ್ಲಿಲ್ಲ. ಅಲ್ಲಿ ತಿಳಿಸಿರೋ ಒಂಬತ್ತು ಗುಣಗಳನ್ನು ಬೆಳೆಸಿಕೊಳ್ಳೋಕೆ ಪವಿತ್ರಾತ್ಮ ನಮಗೆ ಸಹಾಯ ಮಾಡುತ್ತೆ. ಆದ್ರೆ ನಾವು ಪ್ರೌಢ ಕ್ರೈಸ್ತರು ಆಗಬೇಕಂದ್ರೆ ಇನ್ನೂ ಬೇರೆ ಗುಣಗಳನ್ನೂ ಬೆಳೆಸಿಕೊಳ್ಳಬೇಕು “ಮತ್ತು ದೇವರ ಚಿತ್ತಕ್ಕನುಸಾರ ಸತ್ಯಾನುಗುಣವಾದ ನೀತಿಯಲ್ಲಿಯೂ ನಿಷ್ಠೆಯಲ್ಲಿಯೂ ಸೃಷ್ಟಿಸಲ್ಪಟ್ಟ ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಬೇಕು.”—ಎಫೆ. 4:24.