ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ಗೊತ್ತಿತ್ತಾ?

ನಿಮಗೆ ಗೊತ್ತಿತ್ತಾ?

ಯೇಸುವಿನ ಕಾಲದಲ್ಲಿ ಜನ ಯಾವುದಕ್ಕೆಲ್ಲಾ ತೆರಿಗೆ ಕಟ್ಟುತ್ತಿದ್ದರು?

ಹಿಂದಿನ ಕಾಲದಿಂದಾನೂ ಇಸ್ರಾಯೇಲ್ಯರು ಆರಾಧನೆಗಂತಾನೇ ಹಣವನ್ನು ಕಾಣಿಕೆಯಾಗಿ ಕೊಡುತ್ತಿದ್ದರು. ಆದ್ರೆ ಯೇಸುವಿನ ಕಾಲದಷ್ಟಕ್ಕೆ ಯೆಹೂದಿಗಳು ದೇವರ ಆರಾಧನೆಗೆ ಕಾಣಿಕೆಗಳನ್ನು ಕೊಡೋದ್ರ ಜೊತೆಗೆ ಬೇರೆ-ಬೇರೆದಕ್ಕೆಲ್ಲ ತೆರಿಗೆ ಕಟ್ಟುತ್ತಿದ್ದರು. ಇದ್ರಿಂದ ಜೀವನ ಮಾಡೋಕೆ ಅವ್ರಿಗೆ ಕಷ್ಟ ಆಗ್ತಿತ್ತು.

ಆಗ ದೇವದರ್ಶನ ಗುಡಾರಕ್ಕೆ ಮತ್ತು ದೇವಾಲಯಕ್ಕೆ ಯೆಹೂದ್ಯರು ಪ್ರತಿವರ್ಷ ದೇವರ ಆರಾಧನೆಗಂತ ಅರ್ಧ ಶೆಕೆಲ್‌ ಅಂದ್ರೆ ಎರಡು ದ್ರಾಕ್ಮಾ ನಾಣ್ಯಗಳನ್ನು ಕೊಡುತ್ತಿದ್ದರು. ಆದ್ರೆ ಮೊದಲನೇ ಶತಮಾನದಷ್ಟಕ್ಕೆ ಹೆರೋದ ಕಟ್ಟಿದ ಆಲಯದ ದುರಸ್ತಿಗೆ ಮತ್ತು ಬೇರೆ ಕೆಲಸಕ್ಕೆ ಈ ದ್ರಾಕ್ಮಾ ನಾಣ್ಯಗಳನ್ನು ಬಳಸಿಕೊಳ್ಳುತ್ತಿದ್ದರು. ಕೆಲವು ಯೆಹೂದಿಗಳು ಪೇತ್ರನ ಹತ್ತಿರ ಬಂದು ಯೇಸು ಈ ತೆರಿಗೆಯನ್ನು ಕಟ್ಟುತ್ತಾನಾ ಅಂತ ಕೇಳಿದ್ದಕ್ಕೆ, ಈ ತೆರಿಗೆಯನ್ನು ಕಟ್ಟೋದ್ರಲ್ಲಿ ಏನು ತಪ್ಪಿಲ್ಲ ಅಂತ ಹೇಳಿದನು. ಅಷ್ಟೇ ಅಲ್ಲ ಪೇತ್ರನಿಗೆ ಆ ತೆರಿಗೆ ಕಟ್ಟೋಕೆ ನಾಣ್ಯ ತಗೊಂಡು ಬಾ ಅಂತನೂ ಹೇಳಿದನು.—ಮತ್ತಾ. 17:24-27.

ಹಿಂದಿನ ಕಾಲದಲ್ಲಿ ಜನ್ರು ಬೆಳೆಯುತ್ತಿದ್ದ ಬೆಳೆಯಲ್ಲಿ ಅಥವಾ ಅವ್ರಿಗೆ ಬರ್ತಿದ್ದ ಆದಾಯದಲ್ಲಿ ಹತ್ತನೇ ಒಂದು ಭಾಗ ಕೊಡ್ಬೇಕಿತ್ತು. (ಯಾಜ. 27:30-32; ಅರ. 18:26-28) ಆದರೆ ಯೆಹೂದಿ ಧರ್ಮಗುರುಗಳು ಪುದೀನ, ಸಬ್ಸಿಗೆ, ಜೀರಿಗೆಯಲ್ಲೂ ಹತ್ತನೇ ಒಂದು ಭಾಗ ಕೊಡಿ ಅಂತ ಹೇಳುತ್ತಿದ್ದರು. ಹೀಗೆ ಅವರು ಬೆಳೆಯುತ್ತಿದ್ದ ತರಕಾರಿಯಲ್ಲೂ ಹತ್ತನೇ ಒಂದು ಭಾಗ ಕೇಳುತ್ತಿದ್ದರು. ಇಲ್ಲಿ ಹತ್ತನೇ ಒಂದು ಭಾಗ ಕೊಡೋದ್ರಲ್ಲಿ ಯೇಸು ಯಾವ ತಪ್ಪನ್ನೂ ಹುಡುಕ್ತಾ ಇಲ್ಲ. ಬದ್ಲಿಗೆ ಈ ಪಂಡಿತರು ಮತ್ತು ಫರಿಸಾಯರಲ್ಲಿದ್ದ ಕಪಟತನವನ್ನು ಜನ್ರಿಗೆ ತೋರಿಸಿಕೊಡುತ್ತಿದ್ದರು.—ಮತ್ತಾ. 23:23.

ಆಗಿನ ಕಾಲದಲ್ಲಿ ರೋಮನ್ನರು ಆಳುತ್ತಿದ್ದರಿಂದ ಬೇರೆ-ಬೇರೆ ತೆರಿಗೆಗಳನ್ನು ಕಟ್ಟಬೇಕು ಅಂತ ಜನ್ರಿಗೆ ಒತ್ತಡ ಹಾಕಿದ್ರು. ಅದ್ರಲ್ಲಿ ಒಂದು ಯಾವುದಂದ್ರೆ, ಜಮೀನು ಇದ್ದವರು ಬೆಳೆದ ಬೆಳೆಯಲ್ಲಿ ಕಾಲು ಭಾಗನ ತೆರಿಗೆಯಾಗಿ ಕಟ್ಟಬೇಕಿತ್ತು. ಜೊತೆಗೆ, ಪ್ರತಿ ಯೆಹೂದಿನೂ ತಲೆಗಂದಾಯ ಕಟ್ಟಬೇಕಿತ್ತು. ಈ ಕಂದಾಯದ ಬಗ್ಗೆ ಫರಿಸಾಯರು ಯೇಸು ಹತ್ರ ಕೇಳಿದಾಗ “ರಾಜಂದು ರಾಜನಿಗೆ ಕೊಡಿ, ದೇವರದ್ದು ದೇವ್ರಿಗೆ ಕೊಡಿ” ಅಂತ ಹೇಳಿದ.—ಮತ್ತಾ. 22:15-22.

ಇದೆಲ್ಲ ಸಾಲದು ಅಂತ, ವ್ಯಾಪಾರಿಗಳೂ ಆಮದು ರಫ್ತು ಆಗ್ತಿದ್ದ ಸರಕು ಸಾಮಗ್ರಿಗಳಿಗೆ ತೆರಿಗೆ ಕಟ್ಟಬೇಕಿತ್ತು. ಆ ತೆರಿಗೆಗಳನ್ನು ಬಂದರುಗಳಲ್ಲಿ, ಸೇತುವೆಗಳ ಹತ್ತಿರ, ಬೀದಿಗಳಲ್ಲಿ, ಪಟ್ಟಣದ ಬಾಗಿಲುಗಳ ಹತ್ತಿರ, ಸಂತೆಗಳಲ್ಲೆಲ್ಲಾ ವಸೂಲಿ ಮಾಡ್ತಿದ್ರು.

ಒಟ್ಟಿನಲ್ಲಿ ರೋಮನ್‌ ಆಳ್ವಿಕೆಯ ಕೆಳಗಿದ್ದ ಜನ್ರು, ಎಲ್ಲಾ ವಿಷ್ಯಕ್ಕೂ ತೆರಿಗೆ ಕಟ್ಟಬೇಕಿತ್ತು. ರೋಮನ್‌ ಇತಿಹಾಸಗಾರ ಟೆಸಿಟಸ್‌ ಪ್ರಕಾರ “ಯೇಸು ಭೂಮಿಯಲ್ಲಿದ್ದಾಗ, ತಿಬೆನಿಯನ ಆಳ್ವಿಕೆ ಕೆಳಗಿದ್ದ ಸಿರಿಯ ಮತ್ತು ಯೆಹೂದಿಯ ಜನ್ರು ತೆರಿಗೆಗಳನ್ನು ಕಟ್ಟಿ ಎಷ್ಟು ಸುಸ್ತಾಗಿ ಹೋಗಿದ್ರು ಅಂದ್ರೆ ತೆರಿಗೆಗಳನ್ನು ಕಡಿಮೆ ಮಾಡಿ ಅಂತ ಅವ್ರು ಬೇಡಿಕೊಳ್ಳುತ್ತಿದ್ದರು.”

ಇನ್ನೊಂದು ವಿಷ್ಯ ಏನಂದ್ರೆ ಜನ್ರು ಎಷ್ಟು ತೆರಿಗೆ ಕಟ್ಟಬೇಕಿತ್ತೋ ಅದಕ್ಕಿಂತ ಜಾಸ್ತಿ ಹಣ ಅವ್ರ ಕೈಯಿಂದ ಹೋಗ್ತಿತ್ತು. ಯಾಕಂದ್ರೆ ತೆರಿಗೆ ವಸೂಲಿ ಮಾಡ್ತಿದ್ದ ವಿಧಾನ ಸರಿಯಿರಲಿಲ್ಲ. ಆ ಕೆಲಸ ಸಿಗಬೇಕಂದ್ರೆ ಹರಾಜಲ್ಲಿ ತುಂಬ ದುಡ್ಡು ಕೊಟ್ಟು ಪಡ್ಕೋಬೇಕಿತ್ತು. ಕೆಲಸ ಸಿಕ್ಕ ಮೇಲೂ ಅವನು ನೇರವಾಗಿ ತೆರಿಗೆ ವಸೂಲಿ ಮಾಡೋಕೆ ಹೋಗ್ತಿರಲಿಲ್ಲ. ತನ್ನ ಕೈಕೆಳಗೆ ತುಂಬ ಕೆಲಸಗಾರರನ್ನು ಇಡ್ತಿದ್ದ. ಇವ್ರೆಲ್ಲ ಜನ್ರಿಂದ ತುಂಬ ಹಣ ಕೀಳ್ತಿದ್ರು. ಜಕ್ಕಾಯನ ಕೈಕೆಳಗೂ ಈ ತರ ತೆರಿಗೆ ವಸೂಲಿ ಮಾಡುವವರು ಇದ್ರು ಅಂತ ಕಾಣುತ್ತೆ. (ಲೂಕ 19:1, 2) ಅದಕ್ಕೆ ಜನ್ರಿಗೆ ತೆರಿಗೆ ವಸೂಲಿ ಮಾಡುವವರನ್ನ ಕಂಡ್ರೆ ಆಗ್ತಿರಲಿಲ್ಲ.