ಅಧ್ಯಯನ ಲೇಖನ 27
“ಯೆಹೋವನ ಮೇಲೆ ನಿರೀಕ್ಷೆ ಇಡು”
“ಯೆಹೋವನ ಮೇಲೆ ನಿರೀಕ್ಷೆ ಇಡು. ಧೈರ್ಯವಾಗಿ, ದೃಢವಾಗಿ ಇರು.”—ಕೀರ್ತ. 27:14.
ಗೀತೆ 135 ಕಡೇ ವರೆಗೆ ತಾಳಿಕೊಳ್ಳುವುದು
ಕಿರುನೋಟ *
1. (ಎ) ಯೆಹೋವ ನಮಗೆ ಯಾವ ನಿರೀಕ್ಷೆ ಕೊಟ್ಟಿದ್ದಾನೆ? (ಬಿ) ‘ಯೆಹೋವನ ಮೇಲೆ ನಿರೀಕ್ಷೆ ಇಡೋದು’ ಅಂದ್ರೆ ಏನು? (“ಪದವಿವರಣೆ” ನೋಡಿ.)
ಯೆಹೋವ ದೇವರು ನಮಗೆ ನಿರೀಕ್ಷೆ ಅನ್ನೋ ಬೆಳಕನ್ನ ಕೊಟ್ಟಿದ್ದಾನೆ. ಮುಂದೆ ದುಃಖ, ಸಾವು-ನೋವು ಎಲ್ಲಾನೂ ತೆಗೆದು ಹಾಕಿಬಿಡ್ತಾನೆ. (ಪ್ರಕ. 21:3, 4) ತನ್ನನ್ನ ನಂಬಿರೋ “ದೀನ” ಜನರಿಗೆ ಪರದೈಸಲ್ಲಿ ಜೀವಿಸೋ ಅವಕಾಶ ಕೊಡ್ತಾನೆ. (ಕೀರ್ತ. 37:9-11) ಆಗ ಆತನ ಜೊತೆ ನಮಗಿರೋ ಸ್ನೇಹ ಇನ್ನೂ ಜಾಸ್ತಿಯಾಗುತ್ತೆ. ಇದು ಎಂಥ ಅದ್ಭುತ ನಿರೀಕ್ಷೆ ಅಲ್ವಾ! ಆದ್ರೆ ತಾನು ಕೊಟ್ಟಿರೋ ಮಾತನ್ನ ಆತನು ಉಳಿಸಿಕೊಳ್ಳುತ್ತಾನಾ? ಯೆಹೋವ ಒಂದು ಸಲ ಮಾತು ಕೊಟ್ಟ ಮೇಲೆ ಅದನ್ನ ಮಾಡೇ ಮಾಡುತ್ತಾನೆ. ಹಾಗಾಗಿ ನಾವು ಕಣ್ಣು ಮುಚ್ಚಿಕೊಂಡು ‘ಯೆಹೋವನ ಮೇಲೆ ನಿರೀಕ್ಷೆ ಇಡಬಹುದು.’ * (ಕೀರ್ತ. 27:14) ಆತನು ಹೇಳಿದ್ದೆಲ್ಲಾ ನಡೆಯೋ ತನಕ ನಾವು ಖುಷಿಯಿಂದ ತಾಳ್ಮೆಯಿಂದ ಕಾಯಬೇಕು. ಹೀಗೆ ಮಾಡಿದ್ರೆ ಆತನ ಮೇಲೆ ನಿರೀಕ್ಷೆ ಇದೆ ಅಂತ ನಾವು ತೋರಿಸ್ತೀವಿ.—ಯೆಶಾ. 55:10, 11.
2. ಯೆಹೋವ ಯಾವ ಮಾತನ್ನು ಉಳಿಸಿಕೊಂಡಿದ್ದಾನೆ?
2 ಯೆಹೋವ ತಾನು ಕೊಟ್ಟ ಮಾತನ್ನ ಯಾವಾಗಲು ಉಳಿಸಿಕೊಂಡಿದ್ದಾನೆ. ಅದಕ್ಕೆ ಒಂದು ಉದಾಹರಣೆ ಪ್ರಕಟನೆ ಪುಸ್ತಕದಲ್ಲಿದೆ. ಅಲ್ಲಿ ಯೆಹೋವ ದೇವರು ಬೇರೆಬೇರೆ ದೇಶ, ಕುಲ, ಜಾತಿ, ಭಾಷೆಯಿಂದ ಜನ ಬರುತ್ತಾರೆ, ಒಗ್ಗಟ್ಟಾಗಿ ತನ್ನನ್ನು ಆರಾಧಿಸುತ್ತಾರೆ ಅಂತ ಮಾತು ಕೊಟ್ಟಿದ್ದನು. ಆ ಜನರನ್ನ ಬೈಬಲ್ “ದೊಡ್ಡ ಗುಂಪು” ಅಂತ ಕರೆಯುತ್ತೆ. (ಪ್ರಕ. 7:9, 10) ಆ ಮಾತು ಈಗ ನೆರವೇರುತ್ತಾ ಇದೆ. ಈ ದೊಡ್ಡ ಗುಂಪಲ್ಲಿ ಗಂಡಸರು, ಹೆಂಗಸರು, ಮಕ್ಕಳು ಎಲ್ಲರೂ ಇದ್ದಾರೆ. ಇವರು ಬೇರೆಬೇರೆ ಕುಲ, ಜಾತಿ, ಭಾಷೆ, ಹಿನ್ನೆಲೆಯಿಂದ ಬಂದಿದ್ದರೂ ಒಂದೇ ಕುಟುಂಬದವರ ತರ ಶಾಂತಿ, ಒಗ್ಗಟ್ಟಿಂದ ಯೆಹೋವನನ್ನು ಆರಾಧಿಸುತ್ತಿದ್ದಾರೆ. (ಕೀರ್ತ. 133:1; ಯೋಹಾ. 10:16) ಆದಷ್ಟು ಬೇಗ ಈ ಭೂಮಿ ಪರದೈಸಾಗುತ್ತೆ ಅಂತ ಇವರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದರ ಬಗ್ಗೆ ಹುರುಪಿಂದ ಜನರಿಗೆ ಸಿಹಿಸುದ್ದಿ ಸಾರುತ್ತಿದ್ದಾರೆ. (ಮತ್ತಾ. 28:19, 20; ಪ್ರಕ. 14:6, 7; 22:17) ಈ ದೊಡ್ಡ ಗುಂಪಿನಲ್ಲಿ ನೀವೂ ಒಬ್ಬರಾಗಿದ್ದರೆ ನಿಮಗೆ ಸಿಕ್ಕಿರೋ ಈ ನಿರೀಕ್ಷೆ ಒಂದು ದೊಡ್ಡ ಸೌಭಾಗ್ಯ ಅಂತ ಹೇಳಬಹುದು!
3. ಸೈತಾನನ ಗುರಿ ಏನು?
3 ಯಾವ ನಿರೀಕ್ಷೆನೂ ಇಲ್ಲದೆ ನಮ್ಮ ಬಾಳು ಕತ್ತಲಾಗಬೇಕು ಅಂತ ಸೈತಾನ ಬಯಸುತ್ತಾನೆ. ಯೆಹೋವ ನಮ್ಮನ್ನ ಪ್ರೀತಿಸಲ್ಲ, ಕೊಟ್ಟ ಮಾತನ್ನ ಉಳಿಸಿಕೊಳ್ಳಲ್ಲ ಅಂತ ನಾವು ನಂಬಬೇಕು ಅನ್ನೋದೇ ಅವನ ಗುರಿ. ಒಂದುವೇಳೆ ಸೈತಾನ ನಮ್ಮ ನಿರೀಕ್ಷೆನ ನಂದಿಸಿಬಿಟ್ಟರೆ ನಾವು ಧೈರ್ಯ ಕಳೆದುಕೊಳ್ಳುತ್ತೀವಿ, ಯೆಹೋವನ ಸೇವೆನೂ ಬಿಟ್ಟುಬಿಡುತ್ತೀವಿ. ಅವನು ಯೋಬನಿಗೂ ಇದೇ ತರ ಮಾಡಿದ.
4. ಈ ಲೇಖನದಲ್ಲಿ ಏನನ್ನ ಕಲಿತೀವಿ? (ಯೋಬ 1:9-12)
4 ಯೋಬ ಯೆಹೋವನ ಮೇಲೆ ಇರೋ ನಂಬಿಕೆನ ಕಳಕೊಳ್ಳೋ ತರ ಮಾಡೋಕೆ ಸೈತಾನ ಏನೆಲ್ಲಾ ಕುತಂತ್ರ ಮಾಡಿದ ಅಂತ ಈ ಲೇಖನದಲ್ಲಿ ನೋಡೋಣ. (ಯೋಬ 1:9-12 ಓದಿ.) ಅದರ ಜೊತೆಗೆ, ಯೋಬನಿಂದ ನಾವೇನು ಕಲೀಬಹುದು? ಯೆಹೋವ ನಮ್ಮನ್ನ ಪ್ರೀತಿಸ್ತಾನೆ, ತಾನು ಕೊಟ್ಟ ಮಾತನ್ನ ಯಾವಾಗಲೂ ಉಳಿಸಿಕೊಳ್ಳುತ್ತಾನೆ ಅಂತ ನೆನಪಲ್ಲಿ ಇಟ್ಟುಕೊಳ್ಳೋದು ಯಾಕೆ ಮುಖ್ಯ? ಅಂತನೂ ನೋಡೋಣ.
ಯೋಬನ ನಿರೀಕ್ಷೆಯನ್ನ ಕಿತ್ತುಕೊಳ್ಳೋಕೆ ಸೈತಾನ ಪ್ರಯತ್ನಿಸಿದ
5-6. ಒಂದೇ ದಿನದಲ್ಲಿ ಯೋಬನ ಜೀವನ ಹೇಗೆ ತಲೆಕೆಳಗಾಯ್ತು?
5 ಯೋಬನ ಜೀವನ ತುಂಬ ಚೆನ್ನಾಗಿತ್ತು. ಅವನು ಯೆಹೋವನಿಗೆ ಒಳ್ಳೇ ಸ್ನೇಹಿತನಾಗಿದ್ದ. ಅವನಿಗೆ ತುಂಬಿದ ಕುಟುಂಬ ಇತ್ತು. ಅವರೆಲ್ಲ ಒಗ್ಗಟ್ಟಿಂದ ಖುಷಿಖುಷಿಯಾಗಿದ್ರು. ಅವನು ದೊಡ್ಡ ಶ್ರೀಮಂತನಾಗಿದ್ದ. (ಯೋಬ 1:1-5) ಆದರೆ ಅವನು ಇದನ್ನೆಲ್ಲ ಒಂದೇ ದಿನದಲ್ಲಿ ಕಳಕೊಂಡ. ಮೊದಲು, ಅವನ ಆಸ್ತಿಪಾಸ್ತಿ ಎಲ್ಲಾ ಹೋಯಿತು. (ಯೋಬ 1:13-17) ಅವನ ಮಕ್ಕಳೆಲ್ಲ ಸತ್ತುಹೋದರು. ಸ್ವಲ್ಪ ಯೋಚನೆ ಮಾಡಿ ನೋಡಿ, ಒಂದು ಮಗು ಸತ್ತು ಹೋಯಿತು ಅಂದ್ರೆನೇ ಹೆತ್ತವರಿಗೆ ದುಃಖ ತಡಿಯೋಕಾಗಲ್ಲ. ಅಂಥದ್ರಲ್ಲಿ ಮನೆ ಕುಸಿದು ಬಿದ್ದು ಅವನ 10 ಜನ ಮಕ್ಕಳು ಸತ್ತು ಹೋದರು ಅಂತ ಕೇಳಿಸಿಕೊಂಡಾಗ ಯೋಬನಿಗೂ ಅವನ ಹೆಂಡತಿಗೂ ಇನ್ನೆಷ್ಟು ದುಃಖ ಆಗಿರಬೇಕು! ಅವರಿಗೆ ಉಸಿರೇ ನಿಂತುಹೋದ ಹಾಗೆ ಆಗಿರಬೇಕು. ಆಗ ಯೋಬ ತನ್ನ ಬಟ್ಟೆಯನ್ನ ಹರಿದುಕೊಂಡು ನೆಲದ ಮೇಲೆ ಬಿದ್ದು ಹೊರಳಾಡುತ್ತಿರೋದನ್ನ ಸ್ವಲ್ಪ ಊಹಿಸಿಕೊಳ್ಳಿ!—ಯೋಬ 1:18-20.
6 ಇದೂ ಸಾಲದು ಅಂತ ಸೈತಾನ ಯೋಬನಿಗೆ ಕೆಟ್ಟ ಕಾಯಿಲೆ ಬರೋ ತರ ಮಾಡಿ ಅವನ ಮಾನ-ಮರ್ಯಾದೆಯನ್ನ ಬೀದಿಗೆ ಎಳೆದುಬಿಟ್ಟ. (ಯೋಬ 2:6-8; 7:5) ಒಂದು ಕಾಲದಲ್ಲಿ ಜನರು ಯೋಬನನ್ನ ತುಂಬ ಗೌರವಿಸುತ್ತಿದ್ದರು. ಎಲ್ಲದಕ್ಕೂ ಅವನ ಹತ್ತಿರ ಬಂದು ಸಲಹೆ ಕೇಳುತ್ತಿದ್ದರು. (ಯೋಬ 31:18) ಮುಂಚೆ ಅವನಿಗೆ ತುಂಬ ಮರ್ಯಾದೆ ಕೊಡುತ್ತಿದ್ದ ಜನ ಈಗ ಅವನನ್ನ ನೋಡಿ ಅಸಹ್ಯ ಪಟ್ಟುಕೊಳ್ಳೋ ತರ ಆಗೋಯ್ತು. ಅವನನ್ನ ಊರಾಚೆ ಇಟ್ಟುಬಿಟ್ಟರು. ಅವನ ಅಣ್ಣ ತಮ್ಮಂದಿರು, ಅವನ ಸ್ನೇಹಿತರು ಅಷ್ಟೇ ಅಲ್ಲ, ಅವನ ಮನೆ ಕೆಲಸದವರೂ ಅವನನ್ನ ದೂರ ಇಟ್ಟುಬಿಟ್ಟರು.—ಯೋಬ 19:13, 14, 16.
7. (ಎ) ಯಾರು ಕಷ್ಟ ಕೊಡ್ತಿದ್ದಾರೆ ಅಂತ ಯೋಬ ಅಂದುಕೊಂಡ? ಆದ್ರೂ ಅವನೇನು ಮಾಡಲಿಲ್ಲ? (ಬಿ) ಚಿತ್ರದಲ್ಲಿ ಇರೋ ತರ ನಮಗೂ ಇವತ್ತು ಯಾವ ಕಷ್ಟಗಳು ಬರಬಹುದು?
7 ಯೆಹೋವನಿಗೆ ತನ್ನ ಮೇಲೆ ಕೋಪ ಬಂದಿದೆ ಅಂತ ಯೋಬ ನಂಬೋ ತರ ಸೈತಾನ ಮಾಡಿದ. ಉದಾಹರಣೆಗೆ, ಯೋಬನ ಮಕ್ಕಳೆಲ್ಲಾ ಮನೇಲಿ ಕೂತುಕೊಂಡು ಊಟ ಮಾಡ್ತಿದ್ದಾಗ ಜೋರಾಗಿ ಬಿರುಗಾಳಿ ಬೀಸೋ ತರ ಮಾಡಿ ಮನೆ ಕುಸಿದು ಬೀಳೋ ತರ ಮಾಡಿದ. (ಯೋಬ 1:18, 19) ಆಕಾಶದಿಂದ ಬೆಂಕಿ ಬೀಳೋ ತರ ಮಾಡಿ ಯೋಬನ ಕುರಿಗಳನ್ನ ಅವನ ಸೇವಕರನ್ನೆಲ್ಲಾ ಸಾಯಿಸಿಬಿಟ್ಟ. (ಯೋಬ 1:16) ಬಿರುಗಾಳಿ ಬೀಸೋದು, ಆಕಾಶದಿಂದ ಬೆಂಕಿ ಬೀಳೋದು, ಇದೆಲ್ಲಾ ಸಾಮಾನ್ಯವಾಗಿ ನಡಿಯೋ ವಿಷಯ ಅಲ್ಲ. ಇದನ್ನೆಲ್ಲಾ ಮಾಡ್ತಿರೋದು ಯೆಹೋವನೇ ಅಂತ ನಂಬಿಸೋಕೆ ಸೈತಾನ ಹೀಗೆಲ್ಲಾ ಮಾಡಿದ. ಅವನು ಅಂದುಕೊಂಡ ಹಾಗೇ ಆಯಿತು. ಯೆಹೋವನಿಗೆ ಕೋಪ ಬಂದಿರೋದ್ರಿಂದಾನೇ ಇದೆಲ್ಲಾ ನಡೀತಿದೆ ಅಂತ ಯೋಬನೂ ನಂಬಿಬಿಟ್ಟ. ಆದ್ರೂ ಯೋಬ ಯೆಹೋವನನ್ನು ಬೈಯಲಿಲ್ಲ. ಇಲ್ಲಿ ತನಕ ಒಳ್ಳೇ ವಿಷಯಗಳನ್ನ ಯೆಹೋವ ಕೊಟ್ಟಾಗ ನಾನು ತಗೊಂಡಿದ್ದೀನಿ ಅಂದಮೇಲೆ ಈಗ ಆತನು ಕೆಟ್ಟದ್ದನ್ನ ಕೊಟ್ಟಾಗ ಅದನ್ನೂ ತಗೋಬೇಕು ಅಂತ ಹೇಳಿದ. “ಯೆಹೋವನ ಹೆಸ್ರಿಗೆ ಯಾವಾಗ್ಲೂ ಹೊಗಳಿಕೆ ಸಿಗ್ಲಿ” ಅಂದ. (ಯೋಬ 1:20, 21; 2:10) ಯೋಬ ತನ್ನ ಆಸ್ತಿ-ಪಾಸ್ತಿ, ಮಕ್ಕಳು ಮತ್ತು ಆರೋಗ್ಯವನ್ನ ಕಳೆದುಕೊಂಡ. ಇಷ್ಟೆಲ್ಲಾ ಆದ್ರೂ ಅವನು ಯೆಹೋವನಿಗೆ ನಿಷ್ಠೆಯಿಂದ ಇದ್ದ. ಆದ್ರೆ ಸೈತಾನ ಇಷ್ಟಕ್ಕೆ ಸುಮ್ಮನಾಗಲಿಲ್ಲ.
8. ಸೈತಾನ ಯೋಬನ ವಿರುದ್ಧ ಯಾವ ಕುತಂತ್ರ ಮಾಡಿದ?
8 ಸೈತಾನ ಯೋಬನಿಗೆ ಗಾಯದ ಮೇಲೆ ಬರೆ ಎಳೆಯೋ ತರ ಇನ್ನೊಂದು ಕುತಂತ್ರವನ್ನೂ ಮಾಡಿದ. ಯೋಬನ ಸ್ನೇಹಿತರು ಅಂತ ಹೇಳಿಕೊಳ್ಳೋ 3 ಜನರನ್ನ ಸೈತಾನ ಯೋಬನ ಹತ್ರ ಕಳುಹಿಸಿದ. (ಯೋಬ 22:5-9) ತಾನು ಯಾವುದಕ್ಕೂ ಲಾಯಕ್ಕಿಲ್ಲ ಅಂತ ಯೋಬನಿಗೆ ಅನಿಸೋ ತರ ಅವರು ಮಾಡಿಬಿಟ್ರು. ಅವನೇನೋ ದೊಡ್ಡ ತಪ್ಪು ಮಾಡಿದ್ದಾನೆ ಅದಕ್ಕೆ ಅವನಿಗೆ ಇಷ್ಟೆಲ್ಲಾ ಕಷ್ಟ ಬರ್ತಿದೆ ಅಂತ ಹೇಳಿದ್ರು. ಅವನು ಇಲ್ಲಿ ತನಕ ಎಷ್ಟೇ ಒಳ್ಳೇ ಕೆಲಸ ಮಾಡಿದ್ರೂ ಅದನ್ನ ಯೆಹೋವ ದೇವರು ಲೆಕ್ಕಕ್ಕೆ ತಗೊಳಲ್ಲ ಅಂತ ಅವನಿಗೆ ಅನಿಸೋ ತರ ಮಾತಾಡಿಬಿಟ್ರು. (ಯೋಬ 4:18; 22:2, 3; 25:4) ಯೆಹೋವ ದೇವರು ಯೋಬನನ್ನ ಪ್ರೀತಿಸಲ್ಲ, ಅವನ ಮೇಲೆ ಅಕ್ಕರೆ ಇಲ್ಲ, ಅವನಿಗೆ ಸಹಾಯ ಮಾಡಲ್ಲ ಮತ್ತು ಯೋಬ ಯೆಹೋವನನ್ನು ಆರಾಧಿಸಿದ್ರೂ ಒಂದೇ ಆರಾಧಿಸದೆ ಇದ್ರೂ ಒಂದೇ ಅಂತ ನಂಬಿಸೋಕೆ ಅವರು ಪ್ರಯತ್ನ ಮಾಡುತ್ತಿದ್ದರು. ಅವರು ಆಡುತ್ತಿದ್ದ ಒಂದೊಂದು ಮಾತು ಯೋಬನಿಗಿದ್ದ ನಿರೀಕ್ಷೆಯ ಬೆಳಕನ್ನ ನಂದಿಸುತ್ತಾ ಹೋಯ್ತು.
9. ಯೋಬನಿಗೆ ಧೈರ್ಯವಾಗಿರೋಕೆ ಯಾವುದು ಸಹಾಯ ಮಾಡಿತು?
9 ಬೂದಿ ಮಧ್ಯೆ ಕೂತುಕೊಂಡು ಕ್ಷಣಕ್ಷಣಕ್ಕೂ ನೋವಲ್ಲಿ ನರಳುತ್ತಾ ಇದ್ದ ಯೋಬನನ್ನ ಸ್ವಲ್ಪ ಕಲ್ಪಿಸಿಕೊಳ್ಳಿ. (ಯೋಬ 2:8) ಅವನ ಸ್ನೇಹಿತರು ಚುಚ್ಚಿಚುಚ್ಚಿ ಮಾತಾಡುತ್ತಾ ಅವನಿಗೆ ಕೆಟ್ಟವನು ಅನ್ನೋ ಪಟ್ಟ ಕಟ್ತಿದ್ರು. ಅವನ ನೋವು ಸಮುದ್ರದ ಮರಳಿನಷ್ಟು ಭಾರವಾಗಿದೆ. ಮಕ್ಕಳನ್ನ ಕಳಕೊಂಡ ದುಃಖ ಅವನ ಹೃದಯನ ಕಿತ್ತು ತಿನ್ನುತ್ತಾ ಇದೆ. ಆದ್ರೂ ಯೋಬ ಏನು ಮಾತಾಡದೆ ಸುಮ್ಮನೆ ಕೂತಿದ್ದ. (ಯೋಬ 2:13–3:1) ಇದನ್ನು ನೋಡಿ ಆ ಮೂವರು ಸ್ನೇಹಿತರು, ಅವನು ಯೆಹೋವನನ್ನು ಬಿಟ್ಟುಬಿಡ್ತಾನೆ ಅಂತ ಅಂದುಕೊಂಡಿದ್ರೆ ಅದು ಅವರ ಮೂರ್ಖತನ. ಯಾಕಂದರೆ ಯೋಬ ಆ ಮೂವರನ್ನ ನೋಡಿ “ನಾನು ಸಾಯೋ ತನಕ ನಿಷ್ಠೆ ಕಾಪಾಡ್ಕೊಳ್ತೀನಿ!” ಅಂತ ನೇರವಾಗಿ ಹೇಳಿಬಿಟ್ಟ. (ಯೋಬ 27:5) ಇಷ್ಟೆಲ್ಲ ಕಷ್ಟ ಸಮಸ್ಯೆಗಳಿದ್ರೂ ಯೋಬನಿಗೆ ಧೈರ್ಯವಾಗಿರೋಕೆ ಯಾವುದು ಸಹಾಯ ಮಾಡ್ತು? ಅವನು ಸಮುದ್ರದ ತಳದಷ್ಟು ಕುಗ್ಗಿ ಹೋದರೂ ಯೆಹೋವ ತನ್ನನ್ನ ಕಾಪಾಡುತ್ತಾನೆ, ತನ್ನನ್ನ ಪ್ರೀತಿಸ್ತಾನೆ ಅನ್ನೋ ನಿರೀಕ್ಷೆಯನ್ನ ಕಳೆದುಕೊಳ್ಳಲಿಲ್ಲ. ಸತ್ತರೂ ಯೆಹೋವ ತನ್ನನ್ನ ಮತ್ತೆ ಜೀವಂತವಾಗಿ ಎಬ್ಬಿಸುತ್ತಾನೆ ಅಂತ ಅವನಿಗೆ ಗೊತ್ತಿತ್ತು.—ಯೋಬ 14:13-15.
ಯೋಬನ ತರ ಇರಿ
10. ಯೋಬನಿಗೆ ನಡೆದ ಘಟನೆಗಳು ನಮಗೆ ಏನನ್ನ ಕಲಿಸುತ್ತೆ?
10 ಯೋಬನಿಗೆ ನಡೆದ ಘಟನೆಗಳಿಂದ ನಾವು ಯಾವ ಪಾಠಗಳನ್ನ ಕಲಿತೀವಿ? ಸೈತಾನನಿಗೆ ನಮ್ಮನ್ನ ಯೆಹೋವನಿಂದ ದೂರ ಮಾಡೋಕಾಗಲ್ಲ ಮತ್ತು ಯೆಹೋವನಿಗೆ ನಮ್ಮ ಪರಿಸ್ಥಿತಿಗಳ ಬಗ್ಗೆ ಚೆನ್ನಾಗಿ ಗೊತ್ತು ಅಂತ ಕಲಿತ್ವಿ. ಅಷ್ಟೇ ಅಲ್ಲ, ಯೆಹೋವನಿಂದ ನಮ್ಮನ್ನ ದೂರ ಮಾಡೋಕೆ ಸೈತಾನ ಏನೆಲ್ಲಾ ಕುತಂತ್ರಗಳನ್ನ ಮಾಡ್ತಾನೆ ಅಂತನೂ ಅರ್ಥ ಮಾಡಿಕೊಂಡ್ವಿ. ಈಗ ಯೋಬನಿಂದ ನಾವು ಕೆಲವು ಪಾಠಗಳನ್ನ ಕಲಿಯೋಣ.
11. ನಾವು ಯೆಹೋವನ ಮೇಲೆ ಪೂರ್ತಿ ನಂಬಿಕೆಯಿಟ್ಟರೆ ಏನಾಗುತ್ತೆ? (ಯಾಕೋಬ 4:7)
11 ನಾವು ಯೆಹೋವನ ಮೇಲೆ ಪೂರ್ತಿ ನಂಬಿಕೆಯಿಟ್ಟರೆ ಎಂಥ ಕಷ್ಟಗಳನ್ನ ಬೇಕಾದರೂ ಸಹಿಸಿಕೊಳ್ಳೋಕೆ ಆಗುತ್ತೆ ಮತ್ತು ಸೈತಾನನನ್ನು ವಿರೋಧಿಸೋಕೆ ಆಗುತ್ತೆ ಅಂತ ಯೋಬನಿಂದ ನಾವು ಕಲಿತೀವಿ. ನಾವು ಸೈತಾನನನ್ನು ವಿರೋಧಿಸಿದರೆ ಅವನು ನಮ್ಮನ್ನ ಬಿಟ್ಟು ಓಡಿಹೋಗ್ತಾನೆ ಅಂತ ಬೈಬಲ್ ಹೇಳುತ್ತೆ.—ಯಾಕೋಬ 4:7 ಓದಿ.
12. ಯೋಬನಿಗೆ ತನ್ನ ಕಷ್ಟಗಳನ್ನು ಸಹಿಸಿಕೊಳ್ಳೋಕೆ ಯಾವ ನಿರೀಕ್ಷೆ ಸಹಾಯ ಮಾಡ್ತು?
12 ನಾವು ಈಗ ಸತ್ತುಹೋದರೂ ಮುಂದೆ ಯೆಹೋವ ನಮ್ಮನ್ನ ಮತ್ತೆ ಬದುಕಿಸ್ತಾನೆ ಅನ್ನೋ ನಿರೀಕ್ಷೆಯನ್ನ ನಾವು ಹಚ್ಚಹಸುರಾಗಿ ಇಟ್ಟುಕೊಳ್ಳಬೇಕು. ಯಾಕಂದ್ರೆ ನಾವು ಹಿಂದಿನ ಲೇಖನದಲ್ಲಿ ಕಲಿತ ಹಾಗೆ ಸೈತಾನ ನಮ್ಮ ವಿರುದ್ಧ ಸಾವಿನ ಭಯವನ್ನ ಅಸ್ತ್ರವಾಗಿ ಬಳಸುತ್ತಾನೆ ಮತ್ತು ಯೆಹೋವನ ಮೇಲಿರೋ ನಂಬಿಕೆನ ಕಳೆದುಕೊಳ್ಳೋ ತರ ಮಾಡೋಕೆ ಪ್ರಯತ್ನಿಸುತ್ತಿದ್ದಾನೆ. ಯೋಬನಿಗೂ ಅವನು ಅದನ್ನೇ ಮಾಡಿದ. ಯೋಬ ತನ್ನ ಜೀವವನ್ನ ಕಾಪಾಡಿಕೊಳ್ಳೋಕೆ ಏನು ಬೇಕಾದರೂ ಮಾಡ್ತಾನೆ, ಯೆಹೋವನ ಜೊತೆ ತನಗಿರೋ ಸ್ನೇಹನ ಬಿಟ್ಟು ಕೊಡೋಕೂ ರೆಡಿ ಇರ್ತಾನೆ ಅಂತ ಸೈತಾನ ಹೇಳಿದ. ಆದ್ರೆ ಅವನ ಪ್ರಯತ್ನವೆಲ್ಲಾ ಮಣ್ಣುಮುಕ್ತು. ಯೋಬನಿಗೆ ಸಾಯುವ ಪರಿಸ್ಥಿತಿ ಬಂದ್ರೂ ಅವನು ಯೆಹೋವ ದೇವರನ್ನ ಬಿಟ್ಟು ಹೋಗಲಿಲ್ಲ. ಯೆಹೋವ ತುಂಬ ಒಳ್ಳೆಯವನು, ಇವತ್ತಲ್ಲ ನಾಳೆ ಎಲ್ಲವನ್ನೂ ಸರಿಮಾಡ್ತಾನೆ ಅನ್ನೋ ನಿರೀಕ್ಷೆ ಯೋಬನಿಗಿತ್ತು. ಇದರಿಂದ ಯೋಬ ತನಗೆ ಬಂದ ಕಷ್ಟಗಳನ್ನ ಸಹಿಸಿಕೊಂಡನು. ಒಂದುವೇಳೆ ತಾನು ಬದುಕಿದ್ದಾಗ ಇದನ್ನೆಲ್ಲಾ ಸರಿಮಾಡಲಿಲ್ಲ ಅಂದ್ರೂ ತಾನು ಸತ್ತ ಮೇಲೆ ಯೆಹೋವ ಮತ್ತೆ ತನ್ನನ್ನ ಬದುಕಿಸುತ್ತಾನೆ ಅಂತ ಅವನು ಪೂರ್ತಿಯಾಗಿ ನಂಬಿದ್ದ. ನಮಗೂ ಈ ನಂಬಿಕೆ ಇದ್ರೆ ಸಾವೂ ಕೂಡ ನಮ್ಮನ್ನ ಯೆಹೋವನಿಂದ ದೂರ ಮಾಡೋಕೆ ಆಗಲ್ಲ.
13. ಸೈತಾನ ಯೋಬನ ವಿರುದ್ಧ ಮಾಡಿದ ಕುತಂತ್ರಗಳ ಬಗ್ಗೆ ನಾವು ಯಾಕೆ ತಿಳಿದುಕೊಂಡಿರಬೇಕು?
13 ಯೋಬನ ವಿರುದ್ಧ ಮಾಡಿದ ಕುತಂತ್ರಗಳನ್ನೇ ಸೈತಾನ ನಮ್ಮ ಮೇಲೂ ಪ್ರಯೋಗ ಮಾಡ್ತಾನೆ. ಹಾಗಾಗಿ ಆತನು ಮಾಡೋ ಕುತಂತ್ರಗಳ ಬಗ್ಗೆ ನಾವು ಚೆನ್ನಾಗಿ ತಿಳಿದುಕೊಂಡಿರಬೇಕು. “[ಯೋಬ ಮಾತ್ರ ಅಲ್ಲ] ಒಬ್ಬ ಮನುಷ್ಯ ತನ್ನ ಜೀವ ಹೋಗುತ್ತೆ ಅನ್ನುವಾಗ ಪ್ರಾಣ ಉಳಿಸ್ಕೊಳ್ಳೋಕೆ ತನ್ನ ಹತ್ರ ಇರೋದನ್ನೆಲ್ಲ ಕೊಟ್ಟುಬಿಡ್ತಾನೆ” ಅಂತ ಸೈತಾನ ಆರೋಪ ಹಾಕಿದ್ದಾನೆ. (ಯೋಬ 2:4, 5) ಅಂದ್ರೆ ನಮಗೆ ಯೆಹೋವನ ಮೇಲೆ ನಿಜವಾದ ಪ್ರೀತಿಯಿಲ್ಲ, ನಮ್ಮ ಜೀವ ಹೋಗೋ ಪರಿಸ್ಥಿತಿ ಬಂದಾಗ ಆತನನ್ನ ಬಿಟ್ಟು ಹೋಗ್ತೀವಿ ಅಂತ ಸೈತಾನ ಹೇಳ್ತಿದ್ದಾನೆ. ಅಷ್ಟೇ ಅಲ್ಲ, ಯೆಹೋವ ಕೂಡ ನಮ್ಮನ್ನ ಪ್ರೀತಿಸಲ್ಲ, ನಾವು ಆತನನ್ನು ಮೆಚ್ಚಿಸೋಕೆ ಏನು ಮಾಡಿದ್ರೂ ಅದನ್ನ ಆತನು ಲೆಕ್ಕಕ್ಕೇ ತೆಗೆದುಕೊಳ್ಳಲ್ಲ ಅಂತ ಹೇಳ್ತಿದ್ದಾನೆ. ಹಾಗಾಗಿ ಸೈತಾನನ ಕುತಂತ್ರಗಳ ಬಗ್ಗೆ ತಿಳಿದುಕೊಂಡಿರೋದ್ರಿಂದ ನಾವು ಅವನ ಬಲೆಗೆ ಬೀಳಲ್ಲ.
14. ನಮಗೆ ಬರೋ ಕಷ್ಟಗಳಿಂದ ಏನು ಪ್ರಯೋಜನ ಆಗುತ್ತೆ? ವಿವರಿಸಿ.
14 ನಮಗೆ ಕಷ್ಟಗಳು ಬಂದಾಗಲೇ ನಾವು ನಿಜವಾಗಲೂ ಎಂಥವರು ಅಂತ ತಿಳಿದುಕೊಳ್ಳೋಕೆ ಆಗೋದು. ಹಾಗಾಗಿ ಅವನ್ನ ನಮ್ಮ ಬಗ್ಗೆ ನಾವು ಚೆನ್ನಾಗಿ ತಿಳಿದುಕೊಳ್ಳೋಕೆ ಇರೋ ಅವಕಾಶ ಅಂದುಕೊಳ್ಳಬೇಕು. ಯೋಬನಿಗೆ ಬಂದ ಕಷ್ಟಗಳು ತನ್ನಲ್ಲಿ ಯಾವ ಕೊರತೆಗಳಿದೆ, ಏನನ್ನ ಸರಿಮಾಡಿಕೊಳ್ಳಬೇಕು ಅಂತ ತಿಳಿದುಕೊಳ್ಳೋಕೆ ಅವನಿಗೆ ಸಹಾಯ ಮಾಡ್ತು. ಉದಾಹರಣೆಗೆ, ಅವನು ದೀನತೆಯನ್ನ ಇನ್ನೂ ಜಾಸ್ತಿ ಬೆಳೆಸಿಕೊಳ್ಳಬೇಕಿತ್ತು. ಅದನ್ನ ಅವನು ಕಲಿತ. (ಯೋಬ 42:3) ಅದೇ ತರ ನಮಗೆ ಕಷ್ಟಗಳು ಬಂದಾಗಲೇ ನಮ್ಮ ಬಗ್ಗೆ ನಮಗೇ ಗೊತ್ತಿಲ್ಲದಿರೋ ಎಷ್ಟೋ ವಿಷಯಗಳನ್ನ ತಿಳಿದುಕೊಳ್ತೀವಿ. ನಿಕೋಲೆ * ಅನ್ನೋ ಸಹೋದರನಿಗೆ ಆರೋಗ್ಯ ಹದಗೆಟ್ಟಿದ್ರೂ ಅವರನ್ನ ಜೈಲಿಗೆ ಹಾಕಲಾಯಿತು. ಆ ಸಹೋದರ “ಸೆರೆಮನೆ ಒಂದು ಎಕ್ಸ್ರೇ ಮಿಷಿನ್ ಇದ್ದ ಹಾಗೆ, ಕ್ರೈಸ್ತರ ನಿಜವಾದ ಗುಣಗಳು ಅಲ್ಲಿ ಕಾಣಿಸುತ್ತೆ” ಅಂತ ಹೇಳಿದ. ನಾವು ನಮ್ಮಲ್ಲಿರೋ ಕೊರತೆಗಳನ್ನ ಮತ್ತು ಬಲಹೀನತೆಗಳನ್ನ ಕಂಡುಹಿಡಿದರೆ ಅದನ್ನ ಸರಿಮಾಡಿಕೊಳ್ಳಬಹುದು ಅಂತ ಇದರಿಂದ ಗೊತ್ತಾಗುತ್ತೆ.
15. ನಾವು ಯಾರ ಮಾತನ್ನು ಕೇಳಬೇಕು ಮತ್ತು ಯಾಕೆ?
15 ನಾವು ನಮ್ಮ ವಿರೋಧಿಗಳ ಮಾತುಗಳನ್ನಲ್ಲ, ಯೆಹೋವನ ಮಾತನ್ನ ಕೇಳಬೇಕು. ಯೋಬ ಇದನ್ನೇ ಮಾಡಿದ. ಯೆಹೋವ ದೇವರು ಅವನ ಹತ್ರ ಮಾತಾಡಿದಾಗ ತುಂಬ ಗಮನಕೊಟ್ಟು ಕೇಳಿಸಿಕೊಂಡ. ಯೆಹೋವ ಯೋಬನಿಗೆ, ‘ನಾನು ಮಾಡಿರೋ ಸೃಷ್ಟಿ ನಿನಗೆ ಕಾಣಿಸ್ತಿಲ್ವಾ? ನಾನು ನಿನ್ನನ್ನ ನೋಡಿಕೊಳ್ತೀನಿ ಅನ್ನೋ ನಂಬಿಕೆ ನಿನಗಿಲ್ವಾ? ನಿನಗೆ ಬಂದಿರೋ ಕಷ್ಟಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತು’ ಅಂತ ಹೇಳಿದನು. ಆಗ ಯೋಬ ಯೆಹೋವನ ಒಳ್ಳೇತನವನ್ನ ನೆನಪುಮಾಡಿಕೊಳ್ಳುತ್ತಾ “ನಿನ್ನ ಬಗ್ಗೆ ಕಿವಿಯಾರೆ ಕೇಳಿಸ್ಕೊಂಡಿದ್ದೆ, ಆದ್ರೆ ಈಗ ಕಣ್ಣಾರೆ ನೋಡಿದ್ದೀನಿ” ಅಂತ ದೀನತೆಯಿಂದ ಹೇಳಿದ. (ಯೋಬ 42:5) ಯೋಬ ಈ ಮಾತುಗಳನ್ನು ಹೇಳಿದಾಗ ಅವನಿನ್ನೂ ಬೂದಿಯಲ್ಲಿ ಕೂತುಕೊಂಡಿದ್ದ, ಮೈ ತುಂಬ ಹುಣ್ಣುಗಳಿಂದ ನರಳುತ್ತಾ ಇದ್ದ ಮತ್ತು ತನ್ನ ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿದ್ದ. ಹೀಗೆ ಯೆಹೋವ ದೇವರು ಯೋಬನಿಗೆ ತಾನು ಅವನನ್ನ ಇನ್ನೂ ಮರೆತಿಲ್ಲ, ಅವನ ಮೇಲಿರೋ ಪ್ರೀತಿ ಕಮ್ಮಿಯಾಗಿಲ್ಲ ಅಂತ ಅರ್ಥಮಾಡಿಸಿದನು.—ಯೋಬ 42:7, 8.
16. ಕಷ್ಟಗಳು ಬಂದಾಗ ನಾವು ಏನನ್ನ ಮನಸ್ಸಿನಲ್ಲಿಡಬೇಕು ಅಂತ ಯೆಶಾಯ 49:15,16 ಹೇಳುತ್ತೆ?
16 ಇವತ್ತು ಜನರು ನಮಗೆ ಅವಮಾನ ಮಾಡಬಹುದು ನಾವು ಯಾವುದಕ್ಕೂ ಲಾಯಕ್ಕಿಲ್ಲ ಅನ್ನೋ ತರ ನಮ್ಮ ಜೊತೆ ನಡ್ಕೊಳ್ಳಬಹುದು ಅವರು ನಮ್ಮ ಹೆಸರನ್ನ ಹಾಳುಮಾಡಬಹುದು ಅಥವಾ ನಮ್ಮ ಸಂಘಟನೆಗೆ ಕೆಟ್ಟ ಹೆಸರು ಬರೋ ತರ “ಇಲ್ಲಸಲ್ಲದ ಸುಳ್ಳುಗಳನ್ನ” ಹೇಳಬಹುದು. (ಮತ್ತಾ. 5:11) ಆದ್ರೆ ಯೋಬನಿಂದ ಕಲಿತ ಹಾಗೆ, ನಮಗೆ ಎಷ್ಟೇ ಕಷ್ಟ ಹಿಂಸೆಗಳು ಬಂದ್ರೂ ನಾವು ಯೆಹೋವನನ್ನು ಬಿಟ್ಟು ಹೋಗಲ್ಲ ಅನ್ನೋ ನಂಬಿಕೆ ಆತನಿಗೆ ನಮ್ಮ ಮೇಲಿದೆ. ಯೆಹೋವ ನಮ್ಮನ್ನ ತುಂಬ ಪ್ರೀತಿಸುತ್ತಾನೆ, ಯಾವತ್ತೂ ನಮ್ಮ ಕೈ ಬಿಡಲ್ಲ. (ಯೆಶಾಯ 49:15, 16 ಓದಿ.) ಹಾಗಾಗಿ ದೇವರ ವೈರಿಗಳು ನಮ್ಮ ಹೆಸರು ಹಾಳುಮಾಡೋಕೆ ಹಬ್ಬಿಸುತ್ತಿರೋ ಸುಳ್ಳು ಸುದ್ದಿಗಳಿಗೆ ನಾವು ಗಮನಕೊಡಬಾರದು. ಟರ್ಕಿಯಲ್ಲಿರೋ ಸಹೋದರ ಜೇಮ್ಸ್ ಮತ್ತು ಅವರ ಮನೆಯವರಿಗೆ ತುಂಬ ಹಿಂಸೆ ವಿರೋಧಗಳು ಬಂತು. ಅದರ ಬಗ್ಗೆ ಅವರು ಹೀಗೆ ಹೇಳ್ತಾರೆ: “ನಮ್ಮ ಬಗ್ಗೆ ಜನರು ಆಡೋ ಸುಳ್ಳು ಸುದ್ದಿಗಳಿಗೆ ಗಮನಕೊಟ್ರೆ, ನಾವು ಬೇಜಾರು ಮಾಡ್ಕೊಂಡು ಕುಗ್ಗಿ ಹೋಗ್ತೀವಿ ಅಂತ ನಮಗೆ ಅರ್ಥ ಆಯ್ತು. ಅದಕ್ಕೆ ನಾವು ದೇವರ ಸರ್ಕಾರದಲ್ಲಿ ಸಿಗೋ ಆಶೀರ್ವಾದಗಳ ಮೇಲೆ ಗಮನ ಕೊಟ್ವಿ ಮತ್ತು ಸಿಹಿಸುದ್ದಿ ಸಾರುತ್ತಾ ನಮ್ಮಿಂದ ಆದಷ್ಟು ಸೇವೆ ಮಾಡಿದ್ವಿ. ಇದರಿಂದ ನಾವು ಸಂತೋಷವಾಗಿ ಇರೋಕೆ ಆಯ್ತು.” ಯೋಬನ ತರ ನಾವು ಯೆಹೋವನ ಮಾತನ್ನ ಕೇಳಬೇಕು ಅದನ್ನ ಬಿಟ್ಟು ನಮ್ಮ ವೈರಿಗಳು ಹಬ್ಬಿಸೋ ಸುಳ್ಳು ಸುದ್ದಿಗಳಿಗೆ ಗಮನ ಕೊಟ್ರೆ ನಮ್ಮ ನಿರೀಕ್ಷೆಯನ್ನ ಮತ್ತು ನಂಬಿಕೆಯನ್ನ ಕಳೆದುಕೊಂಡುಬಿಡ್ತೀವಿ.
ನಿರೀಕ್ಷೆ ನಿಮಗೆ ಬಲ ಕೊಡುತ್ತೆ
17. ಇಬ್ರಿಯ 11ನೇ ಅಧ್ಯಾಯದಲ್ಲಿರೋ ನಂಬಿಗಸ್ತ ಸ್ತ್ರೀ ಪುರುಷರಿಂದ ನಾವೇನು ಕಲಿತೀವಿ?
17 ತಮ್ಮ ಜೀವನದಲ್ಲಿ ತುಂಬ ಕಷ್ಟಗಳನ್ನ ಅನುಭವಿಸಿದಾಗಲೂ ಎಷ್ಟೋ ಜನ ಅದನ್ನ ಧೈರ್ಯದಿಂದ ಸಹಿಸಿಕೊಂಡು ಯೆಹೋವನಿಗೆ ನಿಷ್ಠೆ ತೋರಿಸಿದ್ದಾರೆ. ಅಂಥವರಲ್ಲಿ ಯೋಬನೂ ಒಬ್ಬ. ಇವರನ್ನೆಲ್ಲಾ ಅಪೊಸ್ತಲ ಪೌಲ ಇಬ್ರಿಯರಿಗೆ ಬರೆದ ಪತ್ರದಲ್ಲಿ, ‘ದೊಡ್ಡ ಮೋಡದ ಹಾಗೆ ಇರುವ ಸಾಕ್ಷಿಗಳ ದೊಡ್ಡ ಗುಂಪು’ ಅಂತ ಕರೆದಿದ್ದಾನೆ. (ಇಬ್ರಿ. 12:1) ಇವರ ಜೀವನದಲ್ಲಿ ಕಷ್ಟಗಳ ಪ್ರವಾಹನೇ ಹರಿಯಿತು. ಆದ್ರೂ ಯೆಹೋವ ಅವರ ಮೇಲೆ ಇಟ್ಟಿದ್ದ ನಂಬಿಕೆನ ಅವರು ಉಳಿಸಿಕೊಂಡ್ರು. (ಇಬ್ರಿ. 11:36-40) ಆದ್ರೆ ಅವರು ಪಟ್ಟ ಕಷ್ಟ ಅವರು ತೋರಿಸಿದ ತಾಳ್ಮೆ ನೀರು ಪಾಲಾಯ್ತಾ? ಖಂಡಿತ ಇಲ್ಲ. ಯೆಹೋವ ಹೇಳಿರೋ ಎಲ್ಲಾ ಮಾತುಗಳು ನೆರವೇರೋದನ್ನ ಅವರು ನೋಡದೇ ಇದ್ರೂ ಯೆಹೋವನ ಮೇಲೆ ನಂಬಿಕೆಯಿಟ್ರು. ಅವರು ಯೆಹೋವನಿಗೆ ಇಷ್ಟ ಆಗೋ ತರ ನಡೆದುಕೊಂಡಿದ್ರಿಂದ, ಮುಂದೆ ಯೆಹೋವನ ಮಾತುಗಳು ನೆರವೇರುವಾಗ ಅದನ್ನ ಕಣ್ಣಾರೆ ನೋಡ್ತೀವಿ ಅನ್ನೋ ಭರವಸೆ ಅವರಿಗಿತ್ತು. (ಇಬ್ರಿ. 11:4, 5) ಯೆಹೋವನ ಮೇಲಿರೋ ನಂಬಿಕೆನ ಮತ್ತು ನಮಗಿರೋ ನಿರೀಕ್ಷೆನ ಕಳೆದುಕೊಳ್ಳಬಾರದು ಅಂತ ಇವರ ಮಾದರಿಯಿಂದ ನಾವು ಕಲಿತೀವಿ.
18. ನಿಮ್ಮ ನಿರ್ಧಾರ ಏನು? (ಇಬ್ರಿಯ 11:6)
18 ಇವತ್ತು ಲೋಕದಲ್ಲಿರೋ ಜನರು ಕೆಟ್ಟದ್ದರಿಂದ ಇನ್ನೂ ಕೆಟ್ಟದ್ದಕ್ಕೆ ಇಳಿಯುತ್ತಿದ್ದಾರೆ. (2 ತಿಮೊ. 3:13) ಸೈತಾನನೂ ದೇವರ ಜನರಿಗೆ ಹಿಂಸೆಗಳನ್ನ ತರುತ್ತಾ ಇದ್ದಾನೆ. ಮುಂದೆ ನಮಗೆ ಯಾವ ಕಷ್ಟ ಬರುತ್ತೋ ಗೊತ್ತಿಲ್ಲ, ಹಾಗಾಗಿ ‘ಜೀವ ಇರೋ ದೇವರ ಮೇಲೆ ನಾವು ಭರವಸೆ ಇಟ್ಟು’ ಆತನ ಸೇವೆಯನ್ನ ಮಾಡುತ್ತಾ ಇರೋಣ. (1 ತಿಮೊ. 4:10) ಯೆಹೋವ ಯೋಬನಿಗೆ ತೋರಿಸಿದ ಹಾಗೆ ನಮಗೂ ‘ಕೋಮಲ ಮಮತೆ ತೋರಿಸ್ತಾನೆ ಮತ್ತು ಆತನು ಕರುಣಾಮಯಿ ಆಗಿದ್ದಾನೆ’ ಅನ್ನೋದನ್ನ ನಾವು ಮರೆಯಬಾರದು. (ಯಾಕೋ. 5:11) “ಆತನನ್ನ ಶ್ರದ್ಧೆಯಿಂದ ಆರಾಧಿಸೋರನ್ನ ಆತನು ಆಶೀರ್ವಾದಿಸ್ತಾನೆ” ಅನ್ನೋದನ್ನ ಮನಸ್ಸಲ್ಲಿಟ್ಟು ನಾವೂ ಯೆಹೋವನಿಗೆ ನಿಷ್ಠೆ ತೋರಿಸೋಣ.—ಇಬ್ರಿಯ 11:6 ಓದಿ.
ಗೀತೆ 133 ನಿನ್ನ ವಿಮೋಚನೆಗಾಗಿ ದೇವರನ್ನು ಆಶ್ರಯಿಸು
^ ತುಂಬಾ ಕಷ್ಟಗಳನ್ನ ಸಹಿಸಿಕೊಂಡ ವ್ಯಕ್ತಿ ಅಂತ ಹೇಳಿದಾಗ ನಮ್ಮ ನೆನಪಿಗೆ ಬರೋದು ಯೋಬ. ಜೀವನ ಪೂರ್ತಿ ಅವನು ಯೆಹೋವನಿಗೆ ನಿಷ್ಠೆಯಿಂದ ಇದ್ದ. ಅವನ ಜೀವನದಲ್ಲಿ ನಡೆದ ಘಟನೆಗಳಿಂದ ನಾವು ತುಂಬ ವಿಷಯಗಳನ್ನ ಕಲಿಯಬಹುದು. ಉದಾಹರಣೆಗೆ ಸೈತಾನನಿಗೆ, ನಮ್ಮನ್ನ ಯೆಹೋವನಿಂದ ದೂರ ಮಾಡೋಕಾಗಲ್ಲ. ನಮ್ಮ ಪರಿಸ್ಥಿತಿಯನ್ನ ಯೆಹೋವ ತುಂಬ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾನೆ. ಯೋಬನಿಗೆ ಬಂದ ಕಷ್ಟಗಳನ್ನ ಯೆಹೋವ ಹೇಗೆ ಸರಿ ಮಾಡಿದನೋ ಅದೇ ತರ ನಮಗಿರೋ ಕಷ್ಟಗಳನ್ನ ಒಂದು ದಿನ ಸರಿ ಮಾಡ್ತಾನೆ. ಈ ನಂಬಿಕೆ ನಮಗಿದ್ದರೆ ‘ಯೆಹೋವನ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದೀವಿ’ ಅಂತ ಅರ್ಥ.
^ ಪದವಿವರಣೆ: “ನಿರೀಕ್ಷೆ” ಅನ್ನೋ ಹೀಬ್ರು ಪದಕ್ಕೆ ಇರೋ ಅರ್ಥ ಏನಂದ್ರೆ, ಮುಂದೆ ನಡಿಯೋ ಘಟನೆಗಳಿಗಾಗಿ ಕಾತುರದಿಂದ “ಕಾಯೋದು.” ಈ ಪದ, ನಾವು ಒಬ್ಬರನ್ನ ನಂಬಿದ್ದೀವಿ ಅಥವಾ ಅವರ ಮಾತಿನ ಮೇಲೆ ಭರವಸೆ ಇಟ್ಟಿದ್ದೀವಿ ಅನ್ನೋ ಅರ್ಥನೂ ಕೊಡುತ್ತೆ.—ಕೀರ್ತ. 25:2, 3; 62:5.
^ ಕೆಲವರ ಹೆಸರು ಬದಲಾಗಿದೆ.