ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 27

ಯಾಕೆ ನಾವು ಯೆಹೋವನಿಗೆ ಭಯಪಡಬೇಕು?

ಯಾಕೆ ನಾವು ಯೆಹೋವನಿಗೆ ಭಯಪಡಬೇಕು?

“ಯೆಹೋವನಲ್ಲಿ ಭಯಭಕ್ತಿ ಇರೋರಿಗೆ ಮಾತ್ರ ಆತನ ಆಪ್ತ ಸ್ನೇಹ ಸಿಗುತ್ತೆ.”—ಕೀರ್ತ. 25:14.

ಗೀತೆ 49 ಯೆಹೋವನು ನಮ್ಮ ಆಶ್ರಯ

ಈ ಲೇಖನದಲ್ಲಿ ಏನಿದೆ? a

1-2. ಕೀರ್ತನೆ 25:14ರಲ್ಲಿ ಹೇಳೋ ತರ ಯೆಹೋವನ ಜೊತೆ ಆಪ್ತ ಸ್ನೇಹ ಬೆಳೆಸ್ಕೊಬೇಕಂದ್ರೆ ನಾವೇನು ಮಾಡಬೇಕು?

 ಒಬ್ರ ಜೊತೆ ಒಳ್ಳೇ ಫ್ರೆಂಡ್‌ ಆಗಿರೋಕೆ ನಮ್ಮಲ್ಲಿ ಎಂಥ ಗುಣಗಳು ಇರಬೇಕು? ನಾವು ಅವ್ರನ್ನ ಪ್ರೀತಿಸಬೇಕು, ಸಹಾಯ ಮಾಡೋಕೆ ಮುಂದೆ ಬರಬೇಕು ಅಲ್ವಾ? ನಮ್ಮ ಫ್ರೆಂಡ್ಸ್‌ಗೆ ನಾವು ಭಯಪಡ್ತೀವಾ? ‘ನಾನ್ಯಾಕೆ ಭಯಪಡಬೇಕು’ ಅಂತ ನೀವು ಅಂದ್ಕೊಬಹುದು. ಆದ್ರೆ ಈ ಲೇಖನದ ಮುಖ್ಯ ವಚನ ಹೇಳೋ ತರ ನಾವು ಯೆಹೋವನ ಜೊತೆ ಆಪ್ತ ಸ್ನೇಹ ಬೆಳೆಸ್ಕೊಬೇಕಂದ್ರೆ ನಾವು ‘ಆತನಿಗೆ ಭಯಪಡಲೇಬೇಕು.’ಕೀರ್ತನೆ 25:14 ಓದಿ.

2 ನಾವು ಎಷ್ಟೇ ವರ್ಷಗಳಿಂದ ಯೆಹೋವನ ಸೇವೆ ಮಾಡ್ತಾ ಇದ್ರೂ ನಾವು ಯೆಹೋವನಿಗೆ ಭಯಪಡಬೇಕು. ನಮಗೆ ಯೆಹೋವನ ಮೇಲೆ ಯಾವ ರೀತಿಯ ಭಯ ಇರಬೇಕು? ಆ ಭಯ ಬೆಳೆಸ್ಕೊಳ್ಳೋದು ಹೇಗೆ? ಮೇಲ್ವಿಚಾರಕನಾದ ಓಬದ್ಯ, ಮಹಾ ಪುರೋಹಿತ ಯೆಹೋಯಾದ ಮತ್ತು ರಾಜ ಯೆಹೋವಾಷನಿಂದ ನಾವೇನು ಕಲಿಬಹುದು?

ನಮಗೆ ಯೆಹೋವನ ಮೇಲೆ ಯಾವ ರೀತಿಯ ಭಯ ಇರಬೇಕು?

3. ಕೆಲವೊಮ್ಮೆ ನಾವು ಯಾಕೆ ಭಯಪಡ್ತೀವಿ? ಆ ರೀತಿ ಭಯ ಇರೋದು ಯಾಕೆ ಒಳ್ಳೇದು?

3 ನಮಗೆ ಏನಾದ್ರೂ ಅಪಾಯ ಆಗುತ್ತೆ ಅಂತ ಗೊತ್ತಾದ್ರೆ ಭಯಪಡ್ತೀವಿ. ಈ ರೀತಿಯ ಭಯ ಸರಿಯಾಗಿ ನಡ್ಕೊಳ್ಳೋಕೆ, ಸರಿಯಾದ ನಿರ್ಧಾರ ಮಾಡೋಕೆ ಸಹಾಯ ಮಾಡುತ್ತೆ. ಉದಾಹರಣೆಗೆ, ನಾವು ಒಂದು ಎತ್ತರವಾದ ಜಾಗದಲ್ಲಿ ನಡೀತಾ ಇದ್ದೀವಿ ಅಂದ್ಕೊಳ್ಳೋಣ, ಕೆಳಗೆ ಪ್ರಪಾತ ಇದೆ. ಅಲ್ಲಿಂದ ಬಿದ್ದುಹೋಗ್ತೀವಿ ಅನ್ನೋ ಭಯ ನಮಗಿದ್ರೆ ದಾರಿ ತುದಿಯಲ್ಲಿ ನಡಿಯೋಕೆ ಹೋಗಲ್ಲ. ನಮಗೆ ಗಾಯ ಆಗುತ್ತೆ ಅನ್ನೋ ಭಯ ಇದ್ರೆ ಯಾವಾಗ್ಲೂ ಹುಷಾರಾಗಿ ಕೆಲಸ ಮಾಡ್ತೀವಿ. ಫ್ರೆಂಡ್‌ಶಿಪ್‌ ಹಾಳಾಗುತ್ತೆ ಅನ್ನೋ ಭಯ ಇದ್ರೆ ನಮ್ಮ ಫ್ರೆಂಡ್ಸ್‌ಗೆ ನೋವಾಗೋ ತರ ಮಾತಾಡೋದಾಗಲಿ ನಡ್ಕೊಳ್ಳೋದಾಗಲಿ ಮಾಡಲ್ಲ.

4. ನಾವು ಯೆಹೋವನ ಮೇಲೆ ಎಂಥ ಭಯ ಬೆಳೆಸ್ಕೊಬೇಕು ಅನ್ನೋದು ಸೈತಾನನ ಆಸೆ?

4 ಯೆಹೋವ ದೇವರಂದ್ರೆ ನಾವು ಗಡಗಡ ಅಂತ ನಡುಗಬೇಕು ಅನ್ನೋದು ಸೈತಾನನ ಆಸೆ. ತುಂಬ ವರ್ಷಗಳ ಹಿಂದೆ ಎಲೀಫಜ ಯೋಬನಿಗೆ ಏನು ಹೇಳಿದ್ನೋ ಅದನ್ನೇ ನಾವು ಕೂಡ ನಂಬೋ ತರ ಸೈತಾನ ಮಾಡ್ತಿದ್ದಾನೆ. ‘ಯೆಹೋವ ದೇವರಿಗೆ ತುಂಬ ಕೋಪ ಇದೆ, ಆತನು ನಮಗೆ ಶಿಕ್ಷೆ ಕೊಡ್ತಾನೆ, ನಾವೇನೇ ಮಾಡಿದ್ರೂ ಆತನನ್ನ ಮೆಚ್ಚಿಸೋಕೆ ಆಗಲ್ಲ’ ಅಂತ ನಮ್ಮ ತಲೆಯಲ್ಲಿ ತುಂಬಿಸೋಕೆ ಪ್ರಯತ್ನ ಮಾಡ್ತಾನೆ. (ಯೋಬ 4:18, 19) ಇದನ್ನ ನಾವು ನಂಬಿಬಿಟ್ರೆ ಯೆಹೋವನ ಸೇವೆಯನ್ನ ನಿಲ್ಲಿಸಿಬಿಡ್ತೀವಿ ಅಂತ ಸೈತಾನನಿಗೆ ಚೆನ್ನಾಗಿ ಗೊತ್ತು. ಹಾಗಾಗಿ ನಾವು ಯೆಹೋವನ ಮೇಲೆ ಒಳ್ಳೇ ಭಯ ಬೆಳೆಸ್ಕೊಬೇಕು.

5. ನಮಗೆ ಯೆಹೋವನ ಮೇಲೆ ಯಾವ ರೀತಿಯ ಭಯ ಇರಬೇಕು?

5 ನಮಗೆ ಯೆಹೋವನ ಮೇಲೆ ಆ ತರದ ಭಯ ಇದ್ರೆ ನಾವು ಆತನನ್ನ ಪ್ರೀತಿಸ್ತೀವಿ. ಅಷ್ಟೇ ಅಲ್ಲ, ಆತನ ಜೊತೆ ಇರೋ ಸಂಬಂಧನ ಹಾಳು ಮಾಡ್ಕೊಳ್ಳೋ ಯಾವ ಕೆಲಸನೂ ಮಾಡಲ್ಲ. ಯೇಸುಗೂ ಯೆಹೋವನ ಮೇಲೆ ಇಂಥ ‘ಭಯನೇ’ ಇತ್ತು. (ಇಬ್ರಿ. 5:7) ಅಂದ್ರೆ ಹೆದರಿ ಗಡಗಡ ಅಂತ ನಡುಗೋ ಭಯ ಅಲ್ಲ. (ಯೆಶಾ. 11:2, 3) ಬದಲಿಗೆ ದೇವರ ಮೇಲೆ ತುಂಬ ಪ್ರೀತಿ ಇತ್ತು. ಆತನ ಮಾತು ಕೇಳಬೇಕು ಅನ್ನೋ ಮನಸ್ಸು ಯೇಸುಗೆ ಇತ್ತು. (ಯೋಹಾ. 14:21, 31) ಯೇಸು ತರನೇ ನಾವು ಯೆಹೋವನ ಮೇಲೆ ತುಂಬ ಗೌರವ, ಭಯಭಕ್ತಿ ಬೆಳೆಸ್ಕೊಬೇಕು. ಯಾಕಂದ್ರೆ ಆತನಲ್ಲಿ ಪ್ರೀತಿ, ವಿವೇಕ, ನ್ಯಾಯ, ಶಕ್ತಿ ಇದೆ. ಅಷ್ಟೇ ಅಲ್ಲ, ಆತನು ನಮ್ಮನ್ನ ತುಂಬ ಪ್ರೀತಿಸೋದ್ರಿಂದ ನಾವು ಆತನ ಮಾತನ್ನ ಕೇಳ್ತೀವಾ ಇಲ್ವಾ ಅನ್ನೋದನ್ನೂ ಗಮನಿಸ್ತಾನೆ. ನಾವು ಆತನ ಮಾತನ್ನ ಕೇಳಿದ್ರೆ ತುಂಬ ಖುಷಿಪಡ್ತಾನೆ, ಇಲ್ಲಾಂದ್ರೆ ತುಂಬ ನೋವಾಗುತ್ತೆ.—ಕೀರ್ತ. 78:41; ಜ್ಞಾನೋ. 27:11.

ದೇವರ ಮೇಲೆ ಭಯ ಬೆಳೆಸ್ಕೊಳ್ಳೋದು ಹೇಗೆ?

6. ದೇವರ ಮೇಲೆ ಭಯ ಬೆಳೆಸ್ಕೊಳ್ಳೋಕೆ ಸಹಾಯ ಮಾಡೋ ಒಂದು ವಿಷ್ಯ ಯಾವುದು? (ಕೀರ್ತನೆ 34:11)

6 ನಮಗೆ ಯಾರಿಗೂ ಹುಟ್ಟಿದಾಗಿಂದಾನೇ ದೇವರ ಮೇಲೆ ಭಯ ಇರಲ್ಲ. ಅದನ್ನ ನಾವು ಬೆಳೆಸ್ಕೊಬೇಕಾಗುತ್ತೆ. (ಕೀರ್ತನೆ 34:11 ಓದಿ.) ಇದನ್ನ ಮಾಡೋಕೆ ಸಹಾಯ ಮಾಡೋ ಒಂದು ವಿಷ್ಯ ‘ಸೃಷ್ಟಿಯನ್ನ’ ಚೆನ್ನಾಗಿ ಗಮನಿಸೋದು. ಹೀಗೆ ನಾವು ಮಾಡೋದ್ರಿಂದ ದೇವರ ಮೇಲಿರೋ ಗೌರವ, ಪ್ರೀತಿ ಜಾಸ್ತಿ ಆಗ್ತಾ ಹೋಗುತ್ತೆ. (ರೋಮ. 1:20) ಏಡ್ರಿಯನ್‌ ಅನ್ನೋ ಸಹೋದರಿ ಏನಂತಾರೆ ಅಂದ್ರೆ “ಸೃಷ್ಟಿನ ನೋಡಿದಾಗೆಲ್ಲ ‘ಅಬ್ಬಾ! ಯೆಹೋವ ಇದನ್ನ ಎಷ್ಟು ಚೆನ್ನಾಗಿ ಮಾಡಿದ್ದಾರೆ’ ಅಂತ ಆಶ್ಚರ್ಯ ಆಗುತ್ತೆ. ‘ಇಷ್ಟು ವಿವೇಕ ಇರೋ ದೇವರಿಗೆ ನನಗ್ಯಾವುದು ಒಳ್ಳೇದು ಅಂತ ಗೊತ್ತಿರಲ್ವಾ?’ ಅಂತ ಯೋಚ್ನೆ ಮಾಡ್ತೀನಿ.” ಈ ರೀತಿ ಸೃಷ್ಟಿ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಿದ್ರಿಂದ ಅವರು, “ನಂಗೆ ಜೀವ ಕೊಟ್ಟಿರೋ ದೇವರ ಜೊತೆ ನನಗಿರೋ ಸಂಬಂಧನೇ ಮುಖ್ಯ. ಯಾವ ವಿಷ್ಯನೂ ಅದನ್ನ ಹಾಳು ಮಾಡೋಕೆ ನಾನು ಬಿಡಲ್ಲ” ಅಂತ ಮನಸ್ಸಲ್ಲೇ ತೀರ್ಮಾನ ಮಾಡ್ಕೊಂಡ್ರು. ಈ ಸಹೋದರಿ ತರ ನೀವು ಕೂಡ ದೇವರು ಮಾಡಿರೋ ಸೃಷ್ಟಿ ಬಗ್ಗೆ ಈ ವಾರ ಸ್ವಲ್ಪ ಬಿಡುವು ಮಾಡ್ಕೊಂಡು ಯೋಚ್ನೆ ಮಾಡಿ. ಹೀಗೆ ಮಾಡಿದಾಗ ಆತನ ಮೇಲೆ ಪ್ರೀತಿ, ಗೌರವ ಇನ್ನೂ ಜಾಸ್ತಿ ಆಗುತ್ತೆ.—ಕೀರ್ತ. 111:2, 3.

7. ಯೆಹೋವನ ಮೇಲೆ ಭಯ ಬೆಳೆಸ್ಕೊಳ್ಳೋಕೆ ಪ್ರಾರ್ಥನೆ ಹೇಗೆ ಸಹಾಯ ಮಾಡುತ್ತೆ?

7 ದೇವರ ಮೇಲೆ ಭಯ ಬೆಳೆಸ್ಕೊಳ್ಳೋಕೆ ನಮಗೆ ಸಹಾಯ ಮಾಡೋ ಇನ್ನೊಂದು ವಿಷ್ಯ ಯಾವುದು? ಯಾವಾಗ್ಲೂ ಪ್ರಾರ್ಥನೆ ಮಾಡ್ತಾ ಇರೋದು. ನಾವು ಪ್ರಾರ್ಥನೆ ಮಾಡಿದಾಗೆಲ್ಲ ಯೆಹೋವ ದೇವರು ನಮಗೆ ಹತ್ರ ಆಗ್ತಾ ಇರ್ತಾನೆ. ಹೇಗೆ? ನಮಗೆ ಕಷ್ಟ ಬಂದಾಗ ಅದನ್ನ ತಾಳ್ಕೊಳ್ಳೋಕೆ ಸಹಾಯ ಮಾಡಪ್ಪಾ ಅಂತ ಬೇಡ್ಕೊಂಡಾಗ ಯೆಹೋವನಿಗೆ ಎಷ್ಟು ಶಕ್ತಿ ಇದೆ ಅಂತ ನೆನಪಾಗುತ್ತೆ. ನಮಗೋಸ್ಕರ ಬಿಡುಗಡೆ ಬೆಲೆ ಕೊಟ್ಟಿದ್ದಕ್ಕೆ ಆತನಿಗೆ ಥ್ಯಾಂಕ್ಸ್‌ ಹೇಳಿದಾಗ ಯೆಹೋವ ನಮ್ಮನ್ನ ಎಷ್ಟು ಪ್ರೀತಿಸ್ತಾನೆ ಅನ್ನೋದನ್ನ ಜ್ಞಾಪಿಸ್ಕೊಳ್ತೀವಿ. ಒಂದು ಸಮಸ್ಯೆಯಿಂದ ಹೊರಗೆ ಬರೋಕೆ ನಮಗೆ ಸಹಾಯ ಮಾಡಪ್ಪಾ ಅಂತ ಅಂಗಲಾಚಿ ಬೇಡ್ಕೊಂಡಾಗ ಯೆಹೋವನಿಗೆ ಎಷ್ಟು ವಿವೇಕ ಇದೆ ಅಂತ ನೆನಪಿಸ್ಕೊಳ್ತೀವಿ. ಹೀಗೆ ಪ್ರಾರ್ಥನೆ ಮಾಡೋದ್ರಿಂದ ಯೆಹೋವ ದೇವರ ಮೇಲೆ ಗೌರವ ಇನ್ನೂ ಜಾಸ್ತಿ ಆಗುತ್ತೆ. ಆಗ ಆತನ ಜೊತೆ ಇರೋ ಸ್ನೇಹ ಸಂಬಂಧನ ನಾವು ಯಾವ ಕಾರಣಕ್ಕೂ ಹಾಳು ಮಾಡ್ಕೊಳ್ಳಲ್ಲ.

8. ದೇವರ ಮೇಲೆ ಭಯ ಕಡಿಮೆ ಆಗದೆ ಇರೋಕೆ ನಾವು ಏನು ಮಾಡಬೇಕು?

8 ದೇವರ ಮೇಲೆ ಭಯ ಕಡಿಮೆ ಆಗದೆ ಇರೋಕೆ ಏನು ಮಾಡಬೇಕು? ಬೈಬಲನ್ನ ಓದಿ ಅಧ್ಯಯನ ಮಾಡಬೇಕು. ಅದ್ರಲ್ಲಿ ಒಳ್ಳೆಯವ್ರ ಉದಾಹರಣೆ, ಕೆಟ್ಟವ್ರ ಉದಾಹರಣೆನೂ ಇದೆ. ಇದ್ರಿಂದ ನಾವು ಕಲಿಬೇಕು. ನಾವೀಗ, ರಾಜ ಅಹಾಬನ ಅರಮನೆಯಲ್ಲಿ ಮೇಲ್ವಿಚಾರಕನಾಗಿದ್ದ ಓಬದ್ಯ ಮತ್ತು ಮಹಾ ಪುರೋಹಿತ ಯೆಹೋಯಾದನ ಬಗ್ಗೆ ಕಲಿಯೋಣ. ಇವರಿಬ್ರು ಕೊನೇ ತನಕ ಯೆಹೋವನ ಮೇಲೆ ನಂಬಿಕೆ ಇಟ್ಟಿದ್ರು. ಯೆಹೂದದ ರಾಜನಾದ ಯೆಹೋವಾಷನ ಬಗ್ಗೆ ಕೂಡ ಕಲಿಯೋಣ. ಇವನು ಮೊದ್ಲು ಯೆಹೋವನನ್ನ ಆರಾಧಿಸ್ತಿದ್ದ. ಆದ್ರೆ ಆಮೇಲೆ ದೇವರ ಮೇಲೆ ಭಯ ಕಳ್ಕೊಂಡುಬಿಟ್ಟ.

ದೇವರಿಗೆ ಭಯಪಟ್ಟ ಓಬದ್ಯನ ತರ ಧೈರ್ಯ ತೋರಿಸಿ

9. ದೇವರ ಮೇಲೆ ಭಯ ಇದ್ದಿದ್ರಿಂದ ಓಬದ್ಯನಿಗೆ ಏನು ಮಾಡಕ್ಕಾಯ್ತು? (1 ಅರಸು 18:3, 12)

9 “ಓಬದ್ಯ b ಯೆಹೋವನಿಗೆ ಭಯಪಡೋ ವ್ಯಕ್ತಿಯಾಗಿದ್ದ” ಅಂತ ಬೈಬಲ್‌ ಹೇಳುತ್ತೆ. (1 ಅರಸು 18:3, 12 ಓದಿ.) ದೇವರ ಮೇಲೆ ಭಯ ಇದ್ದಿದ್ರಿಂದಾನೇ ಅವನು ಪ್ರಾಮಾಣಿಕನಾಗಿದ್ದ, ನಂಬಿಗಸ್ತನಾಗಿದ್ದ. ರಾಜ ಇದನ್ನ ನೋಡಿನೇ ಅವನನ್ನ ಅರಮನೆಯ ಮೇಲ್ವಿಚಾರಕನಾಗಿ ಮಾಡಿದ. (ನೆಹೆಮೀಯ 7:2 ಹೋಲಿಸಿ.) ಅವನಿಗೆ ದೇವರ ಮೇಲೆ ಭಯ ಇದ್ದಿದ್ರಿಂದಾನೇ ತುಂಬ ಧೈರ್ಯ ತೋರಿಸೋಕೂ ಆಯ್ತು. ಯಾಕಂದ್ರೆ ಆ ಸಮಯದಲ್ಲಿ ರಾಜನಾಗಿದ್ದ ಅಹಾಬ “ಯೆಹೋವನ ದೃಷ್ಟಿಯಲ್ಲಿ . . . ಮುಂಚೆ ಇದ್ದ [ರಾಜರಿಗಿಂತ] ತುಂಬ ಕೆಟ್ಟವನಾಗಿದ್ದ.” (1 ಅರ. 16:30) ಅವನ ಹೆಂಡತಿ ಈಜೆಬೇಲ್‌ ಏನೂ ಕಮ್ಮಿ ಇರಲಿಲ್ಲ. ಅವಳು ಬಾಳನನ್ನ ಆರಾಧನೆ ಮಾಡ್ತಿದ್ದಳು. ಅವಳು ಯೆಹೋವನನ್ನ ಎಷ್ಟು ದ್ವೇಷಿಸ್ತಾ ಇದ್ದಳಂದ್ರೆ ಆತನ ಆರಾಧಕರನ್ನೆಲ್ಲ ತನ್ನ ಸಾಮ್ರಾಜ್ಯದಿಂದ ನಾಶ ಮಾಡಿಬಿಡಬೇಕು ಅಂದ್ಕೊಂಡಿದ್ದಳು. ಈಗಾಗ್ಲೇ ಅವಳು ಯೆಹೋವ ದೇವರ ಎಷ್ಟೋ ಪ್ರವಾದಿಗಳನ್ನ ಕೊಂದುಹಾಕಿದ್ದಳು. (1 ಅರ. 18:4) ಇಂಥ ಕಷ್ಟದ ಸಮಯದಲ್ಲೂ ಓಬದ್ಯ ಯೆಹೋವ ದೇವರನ್ನ ಆರಾಧನೆ ಮಾಡಿದ.

10. ಓಬದ್ಯ ಹೇಗೆ ಧೈರ್ಯ ತೋರಿಸಿದ?

10 ಓಬದ್ಯ ಹೇಗೆ ಧೈರ್ಯ ತೋರಿಸಿದ? ಈಜೆಬೇಲ್‌ ಯೆಹೋವನ ಪ್ರವಾದಿಗಳನ್ನ ಹುಡುಕಿ-ಹುಡುಕಿ ಕೊಲ್ತಾ ಇದ್ದಳು. ಆಗ ಓಬದ್ಯ “ಯೆಹೋವನ 100 ಪ್ರವಾದಿಗಳನ್ನ ಐವತ್ತರ ಎರಡು ಗುಂಪು ಮಾಡಿ ಗುಹೆಯಲ್ಲಿ ಬಚ್ಚಿಟ್ಟು ಅವ್ರಿಗೆ ಬೇಕಾದ ಊಟ, ನೀರು” ಕೊಡ್ತಾ ಇದ್ದ. (1 ಅರ. 18:13, 14) ಒಂದುವೇಳೆ ಓಬದ್ಯ ಸಿಕ್ಕಿಹಾಕೊಂಡಿದ್ರೆ ಅವನ ಕಥೆ ಮುಗಿತಿತ್ತು. ಎಷ್ಟೇ ಆದ್ರೂ ಅವನು ನಮ್ಮ ತರ ಮನುಷ್ಯನಾಗಿದ್ದ. ಅವನಿಗೂ ಸಾಯೋ ಆಸೆ ಇರಲಿಲ್ಲ. ಆದ್ರೂ ತನ್ನ ಪ್ರಾಣಕ್ಕಿಂತ ಯೆಹೋವನನ್ನ, ಆತನ ಆರಾಧಕರನ್ನ ತುಂಬ ಪ್ರೀತಿಸಿದ.

ನಿಷೇಧ ಇದ್ರೂ ಧೈರ್ಯದಿಂದ ಒಬ್ಬ ಸಹೋದರ ನಮ್ಮ ಪತ್ರಿಕೆಗಳನ್ನ ಸಹೋದರರಿಗೆ ತಂದ್ಕೊಡ್ತಾ ಇದ್ದಾನೆ (ಪ್ಯಾರ 11 ನೋಡಿ) d

11. ಇವತ್ತು ನಮ್ಮ ಸಹೋದರ ಸಹೋದರಿಯರು ಹೇಗೆ ಓಬದ್ಯನ ತರ ಇದ್ದಾರೆ? (ಚಿತ್ರನೂ ನೋಡಿ.)

11 ನಮ್ಮ ಕೆಲಸನ ನಿಷೇಧ ಮಾಡಿರೋ ದೇಶಗಳಲ್ಲಿ ಇವತ್ತು ಎಷ್ಟೋ ಯೆಹೋವನ ಸಾಕ್ಷಿಗಳು ಇದ್ದಾರೆ. ಇವರು ಅಧಿಕಾರಿಗಳ ಮಾತನ್ನ ಕೇಳೋದಾದ್ರೂ ಓಬದ್ಯನ ತರ ಯೆಹೋವನ ಆರಾಧನೆಯನ್ನ ಮಾತ್ರ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. (ಮತ್ತಾ. 22:21) ಇವ್ರಿಗೆ ದೇವರ ಮೇಲೆ ಭಯ ಇರೋದ್ರಿಂದ ಮನುಷ್ಯರಿಗಿಂತ ಹೆಚ್ಚಾಗಿ ದೇವರ ಮಾತನ್ನೇ ಕೇಳ್ತಾರೆ. (ಅ. ಕಾ. 5:29) ಅದಕ್ಕೇ ಅವರು, ನಿಷೇಧ ಇದ್ರೂ ಹುಷಾರಾಗಿ ಸಿಹಿಸುದ್ದಿ ಸಾರ್ತಾರೆ, ಕೂಟಗಳಿಗೆ ಸೇರಿ ಬರ್ತಾರೆ. (ಮತ್ತಾ. 10:16, 28) ಅಷ್ಟೇ ಅಲ್ಲ, ನಮ್ಮ ಸಹೋದರ ಸಹೋದರಿಯರಿಗೆ ಯೆಹೋವನ ಜೊತೆ ಒಳ್ಳೇ ಸಂಬಂಧ ಕಾಪಾಡ್ಕೊಳ್ಳೋಕೂ ಸಹಾಯ ಮಾಡ್ತಾರೆ. ಹೆನ್ರಿ ಅನ್ನೋ ಸಹೋದರನ ಉದಾಹರಣೆ ನೋಡಿ. ಇವರು ಆಫ್ರಿಕಾದ ಒಂದು ದೇಶದಲ್ಲಿ ಇದ್ದಾರೆ. ಒಂದು ಸಮಯದಲ್ಲಿ ಅಲ್ಲಿ ನಿಷೇಧ ಇತ್ತು. ಆಗ ಸಹೋದರರಿಗೆ ನಮ್ಮ ಪುಸ್ತಕ-ಪತ್ರಿಕೆಗಳನ್ನ ಹಂಚೋ ಕೆಲಸದಲ್ಲಿ ಅವರು ಸಹಾಯ ಮಾಡೋಕೆ ಮುಂದೆ ಬಂದ್ರು. ಇದ್ರ ಬಗ್ಗೆ ಅವರು ಏನು ಹೇಳ್ತಾರಂದ್ರೆ “ನನಗೆ ಸ್ವಲ್ಪ ಸಂಕೋಚ ಜಾಸ್ತಿ. ಯಾವಾಗ್ಲೂ ನನ್ನ ಪಾಡಿಗೆ ಇರ್ತೀನಿ. ಆದ್ರೆ ಯೆಹೋವನ ಮೇಲೆ ತುಂಬ ಗೌರವ ಇರೋದ್ರಿಂದ ಈ ಕೆಲಸ ಮಾಡೋಕೆ ಧೈರ್ಯ ಸಿಕ್ತು.” ಹೆನ್ರಿ ತರ ನೀವೂ ಧೈರ್ಯ ತೋರಿಸ್ತೀರಾ? ಯೆಹೋವನ ಮೇಲೆ ಭಯ ಬೆಳೆಸ್ಕೊಂಡ್ರೆ ನೀವು ಹೆನ್ರಿ ತರ ಇರ್ತೀರ.

ದೇವರಿಗೆ ಭಯಪಟ್ಟ ಯೆಹೋಯಾದನ ತರ ನಿಯತ್ತಿಂದ ಇರಿ

12. ಮಹಾ ಪುರೋಹಿತ ಯೆಹೋಯಾದ ಮತ್ತು ಅವಳ ಹೆಂಡತಿ ಕಷ್ಟ ಇದ್ರೂ ಹೇಗೆ ಯೆಹೋವನಿಗೆ ನಿಯತ್ತಾಗಿದ್ರು?

12 ಮಹಾ ಪುರೋಹಿತನಾಗಿದ್ದ ಯೆಹೋಯಾದನಿಗೆ ದೇವರ ಮೇಲೆ ಭಯ ಇತ್ತು. ಅವನು ಯೆಹೋವನಿಗೆ ನಿಯತ್ತಾಗಿದ್ದ. ಬೇರೆ ಜನ್ರಿಗೂ ಯೆಹೋವನನ್ನೇ ಆರಾಧಿಸೋಕೆ ಪ್ರೋತ್ಸಾಹಿಸ್ತಿದ್ದ. ಇದು ನಮಗೆ ಹೇಗೆ ಗೊತ್ತು? ಈಜೆಬೇಲಳ ಮಗಳಾದ ಅತಲ್ಯ ಕುತಂತ್ರದಿಂದ ರಾಣಿ ಆಗಿದ್ದಳು. ಇವಳನ್ನ ಕಂಡ್ರೆ ಜನ್ರೂ ತುಂಬ ಹೆದರುತ್ತಾ ಇದ್ರು. ತಾನೇ ರಾಣಿ ಆಗಿರಬೇಕು ಅನ್ನೋ ಆಸೆ ಅವಳಿಗೆ ಎಷ್ಟಿತ್ತಂದ್ರೆ ತನ್ನ ಸ್ವಂತ ಮೊಮ್ಮಕ್ಕಳನ್ನೇ ಸಾಯಿಸ್ತಾ ಬಂದಳು. ಅಂಥ ಕಲ್ಲುಹೃದಯ ಅವಳದ್ದು. (2 ಪೂರ್ವ. 22:10, 11) ಆದ್ರೆ ಯೆಹೋಯಾದನ ಹೆಂಡತಿ ಯೆಹೋಷೆಬ ಯೆಹೋವಾಷ ಅನ್ನೋ ಒಬ್ಬ ಹುಡುಗನನ್ನ ಅವಳಿಂದ ಕಾಪಾಡಿದಳು. ಗಂಡ-ಹೆಂಡತಿ ಇಬ್ರೂ ಸೇರಿ ಆ ಹುಡುಗನನ್ನ ಚೆನ್ನಾಗಿ ನೋಡ್ಕೊಂಡು ಬೆಳೆಸಿದ್ರು. ಹೀಗೆ ಅವರು ದಾವೀದನ ವಂಶದ ಕುಡಿಯನ್ನ ಕಾಪಾಡಿದ್ರು. ಯೆಹೋಯಾದ ಅತಲ್ಯಗೆ ಭಯಪಡಲಿಲ್ಲ. ಯೆಹೋವನಿಗೆ ಭಯಪಟ್ಟ, ಆತನಿಗೆ ನಿಯತ್ತಾಗಿದ್ದ.—ಜ್ಞಾನೋ. 29:25.

13. ಯೆಹೋಯಾದ ಯೆಹೋವನಿಗೆ ನಿಯತ್ತಾಗಿ ಇದ್ದೀನಿ ಅಂತ ಇನ್ನೂ ಒಂದು ಸಲ ಹೇಗೆ ತೋರಿಸ್ಕೊಟ್ಟ?

13 ಯೆಹೋವಾಷ ಏಳು ವರ್ಷದವನಾಗಿದ್ದಾಗ ಯೆಹೋಯಾದ ತಾನು ಯೆಹೋವನಿಗೆ ನಿಯತ್ತಾಗಿ ಇದ್ದೀನಿ ಅಂತ ಇನ್ನೂ ಒಂದು ಸಲ ತೋರಿಸ್ಕೊಟ್ಟ. ಹೇಗೆ? ದಾವೀದನ ವಂಶದವನಾಗಿದ್ದ ಯೆಹೋವಾಷನೇ ರಾಜ ಆಗೋಕೆ ಯೆಹೋಯಾದ ಒಂದು ಯೋಜನೆ ಮಾಡಿದ. ಅವನು ಅಂದ್ಕೊಂಡ ಹಾಗೆ ನಡೀದೆ ಹೋಗಿದ್ರೆ ಅವನ ಜೀವನೇ ಉಳೀತಾ ಇರಲಿಲ್ಲ. ಆದ್ರೆ ಯೆಹೋವನ ಆಶೀರ್ವಾದದಿಂದ ಅವನು ಅಂದ್ಕೊಂಡ ಹಾಗೇ ಆಯ್ತು. ಅವನು ಮುಖ್ಯಸ್ಥರು ಮತ್ತು ಲೇವಿಯರ ಸಹಾಯದಿಂದ ಯೆಹೋವಾಷನನ್ನ ರಾಜನಾಗಿ ಮಾಡಿದ. ಅತಲ್ಯಳನ್ನ ಸಾಯಿಸಿದ. (2 ಪೂರ್ವ. 23:1-5, 11, 12, 15; 24:1) “ಆಮೇಲೆ ಯೆಹೋಯಾದ ಯೆಹೋವನ ಜನ್ರಾಗೇ ಇರ್ತೀವಿ ಅಂತ ರಾಜನಿಂದ, ಜನ್ರಿಂದ ಯೆಹೋವನ ಜೊತೆ ಒಂದು ಒಪ್ಪಂದ ಮಾಡಿಸಿದ.” (2 ಅರ. 11:17) “ಅಷ್ಟೇ ಅಲ್ಲ, ಯಾವುದೇ ತರ ಅಶುದ್ಧರಾಗಿ ಇರೋರು ಯೆಹೋವನ ಆಲಯದ ಒಳಗೆ ಬರದ ಹಾಗೆ ಅದ್ರ ಬಾಗಿಲ ಹತ್ರ ಯೆಹೋಯಾದ ಬಾಗಿಲು ಕಾಯೋರನ್ನೂ ನೇಮಿಸಿದ.”—2 ಪೂರ್ವ. 23:19.

14. ಯೆಹೋವ ಯೆಹೋಯಾದನನ್ನ ಹೇಗೆ ಗೌರವಿಸಿದನು?

14 “ನನಗೆ ಗೌರವ ಕೊಡುವವರಿಗೆ ನಾನೂ ಗೌರವ ಕೊಡ್ತೀನಿ” ಅಂತ ಯೆಹೋವ ಹೇಳಿದ್ದನು. ತಾನು ಮಾತು ಕೊಟ್ಟ ಹಾಗೆ ಯೆಹೋಯಾದನನ್ನ ಯೆಹೋವ ಗೌರವಿಸಿದನು. (1 ಸಮು. 2:30) ಹೇಗಂದ್ರೆ, ಯೆಹೋಯಾದನಿಂದ ಎಲ್ರೂ ಕಲಿಬೇಕಂತ ಯೆಹೋವ ದೇವರು ಅವನ ಬಗ್ಗೆ ಬೈಬಲಲ್ಲಿ ಬರೆಸಿದನು. (ರೋಮ. 15:4) ಅಷ್ಟೇ ಅಲ್ಲ ಯೆಹೋಯಾದ ತೀರಿಕೊಂಡ ಮೇಲೆ “ಅವನನ್ನ ದಾವೀದಪಟ್ಟಣದಲ್ಲಿ ರಾಜರ ಸಮಾಧಿಯಲ್ಲಿ ಹೂಣಿಟ್ರು. ಯಾಕಂದ್ರೆ ಅವನು ಇಸ್ರಾಯೇಲಲ್ಲಿ ಒಳ್ಳೇ ಕೆಲಸಗಳನ್ನ ಮಾಡಿದ್ದ. ಅದ್ರಲ್ಲೂ ಸತ್ಯ ದೇವರ ವಿಷ್ಯದಲ್ಲಿ, ಆತನ ಆಲಯದ ವಿಷ್ಯದಲ್ಲಿ ಒಳ್ಳೇ ಕೆಲಸಗಳನ್ನ ಮಾಡಿದ್ದ.” ಹೀಗೆ ಯೆಹೋವ ಅವನಿಗೆ ರಾಜ ಮರ್ಯಾದೆ ಕೊಟ್ಟು ಸನ್ಮಾನಿಸಿದನು.—2 ಪೂರ್ವ. 24:15, 16.

ಯೆಹೋಯಾದನ ತರ ನಮಗೂ ದೇವರ ಮೇಲೆ ಭಯ ಇದ್ರೆ ಸಹೋದರ ಸಹೋದರಿಯರಿಗೆ ಸಹಾಯ ಮಾಡ್ತೀವಿ (ಪ್ಯಾರ 15 ನೋಡಿ) e

15. ಯೆಹೋಯಾದನಿಂದ ನಾವು ಏನೆಲ್ಲ ಕಲಿಬಹುದು? (ಚಿತ್ರನೂ ನೋಡಿ.)

15 ಯೆಹೋಯಾದನ ತರ ನಾವು ಕೂಡ ಯೆಹೋವನ ಮೇಲೆ ಭಯ ಬೆಳೆಸ್ಕೊಬಹುದು. ಯೆಹೋಯಾದನ ತರ ಹಿರಿಯರು ಸಭೆಯನ್ನ ಕಾಪಾಡಬೇಕು. (ಅ. ಕಾ. 20:28) ವಯಸ್ಸಾದವರು ಯೆಹೋವನ ಮೇಲೆ ಭಯ ಬೆಳೆಸ್ಕೊಬೇಕು, ಆತನಿಗೆ ನಿಯತ್ತಾಗಿ ಇರಬೇಕು. ಆಗ ಯೆಹೋವ ಅವ್ರನ್ನ ತನ್ನ ಸೇವೆಯಲ್ಲಿ ಉಪಯೋಗಿಸ್ತಾನೆ, ಮೂಲೆಗುಂಪು ಮಾಡಲ್ಲ. ಯೆಹೋವ ಯೆಹೋಯಾದನನ್ನ ಗೌರವಿಸಿದ ತರ ಯುವಕರು ವಯಸ್ಸಾದವರನ್ನ ಅದ್ರಲ್ಲೂ ತುಂಬ ವರ್ಷಗಳಿಂದ ಯೆಹೋವನ ಸೇವೆ ಮಾಡ್ತಾ ಇರೋರನ್ನ ಗೌರವಿಸಬೇಕು. (ಜ್ಞಾನೋ. 16:31) ಅಷ್ಟೇ ಅಲ್ಲ ಮುಖ್ಯಸ್ಥರು ಮತ್ತು ಲೇವಿಯರು ಯೆಹೋಯಾದನಿಗೆ ಸಹಕಾರ ಕೊಟ್ರು. ಅದೇ ತರ ನಾವು ಕೂಡ ‘ಮುಂದೆ ನಿಂತು ನಮ್ಮನ್ನ ನಡಿಸುವವ್ರಿಗೆ ಸಹಕಾರ ಕೊಟ್ಟು ಅವ್ರ ಮಾತನ್ನ ಕೇಳಬೇಕು.’—ಇಬ್ರಿ. 13:17.

ರಾಜ ಯೆಹೋವಾಷನ ತರ ಆಗಬೇಡಿ

16. ಹೋಗ್ತಾ ಹೋಗ್ತಾ ರಾಜ ಯೆಹೋವಾಷ ಎಂಥ ವ್ಯಕ್ತಿ ಆದ?

16 ಯೆಹೋಯಾದ ಯೆಹೋವಾಷನಿಗೆ ಯೆಹೋವನ ಬಗ್ಗೆ ಕಲಿಸ್ತಿದ್ದ. (2 ಅರ. 12:2) ಇದ್ರಿಂದ ರಾಜ ಯೆಹೋವಾಷ ತುಂಬ ಒಳ್ಳೆಯವನಾಗಿದ್ದ. ಯೆಹೋವ ದೇವರಿಗೆ ಏನಿಷ್ಟನೋ ಅದನ್ನೇ ಮಾಡ್ತಿದ್ದ. ಆದ್ರೆ ಯೆಹೋಯಾದ ತೀರಿಹೋದ ಮೇಲೆ ಈ ಯೆಹೋವಾಷ ಧರ್ಮಭ್ರಷ್ಟ ಅಧಿಕಾರಿಗಳ ಮಾತನ್ನ ಕೇಳೋಕೆ ಶುರುಮಾಡಿದ. ಇದ್ರಿಂದ ಏನಾಯ್ತು? ಅವನು ಮತ್ತು ಅವನ ಪ್ರಜೆಗಳು “ಪೂಜಾಕಂಬಗಳನ್ನ, ಮೂರ್ತಿಗಳನ್ನ ಆರಾಧಿಸೋಕೆ ಶುರುಮಾಡಿದ್ರು.” (2 ಪೂರ್ವ. 24:4, 17, 18) ಆಗ ಯೆಹೋವ ದೇವರಿಗೆ ತುಂಬ ನೋವಾಯ್ತು. ಆತನು “ಅವ್ರನ್ನ ಮತ್ತೆ ತನ್ನ ಹತ್ರ ವಾಪಸ್‌ ಕರ್ಕೊಂಡು ಬರೋಕೆ ಪ್ರವಾದಿಗಳನ್ನ ಕಳಿಸ್ತಾನೇ ಇದ್ದನು . . . ಆದ್ರೆ ಅವರು ಆತನ ಮಾತನ್ನ ಕಿವಿಗೆ ಹಾಕೊಳ್ಳಲಿಲ್ಲ.” ಯೆಹೋಯಾದನ ಮಗ ಜೆಕರ್ಯನ c ಮಾತನ್ನೂ ಯೆಹೋವಾಷ ಕೇಳಲಿಲ್ಲ. ಜೆಕರ್ಯ ಯೆಹೋವನ ಪ್ರವಾದಿ ಅಷ್ಟೇ ಅಲ್ಲ, ಪುರೋಹಿತನೂ ಆಗಿದ್ದ ಮತ್ತು ಯೆಹೋವಾಷನ ಅತ್ತೆ ಮಗನಾಗಿದ್ದ. ಯೆಹೋಯಾದನ ಕುಟುಂಬದವರು ತನಗೆ ಮಾಡಿದ ಉಪಕಾರನ ಯೆಹೋವಾಷ ಮರೆತು ಜೆಕರ್ಯನನ್ನ ಕೊಲ್ಲಿಸಿದ.—2 ಪೂರ್ವ. 22:11; 24:19-22.

17. ಯೆಹೋವಾಷನಿಗೆ ಏನಾಯ್ತು?

17 ಯೆಹೋವಾಷ ದೇವರಿಗೆ ಭಯಪಡದೇ ಇದ್ದಿದ್ರಿಂದ ಅವನ ಜೀವನದಲ್ಲಿ ಎಲ್ಲ ತಲೆಕೆಳಗೆ ಆಗ್ತಾ ಬಂತು. “ನನ್ನನ್ನ ಬೇಡ ಅಂದವ್ರನ್ನ ನಾನೂ ಬೇಡ ಅಂತೀನಿ” ಅಂತ ಯೆಹೋವ ಮುಂಚೆನೇ ಹೇಳಿದ್ದನು. ಈ ಮಾತು ಯೆಹೋವಾಷನ ಜೀವನದಲ್ಲಿ ನಿಜ ಆಯ್ತು. (1 ಸಮು. 2:30) ಅರಾಮ್ಯರ ಒಂದು ಚಿಕ್ಕ ಸೈನ್ಯ ಯೆಹೋವಾಷನ “ದೊಡ್ಡ ಸೈನ್ಯನ” ಸೋಲಿಸಿಬಿಡ್ತು. ಆಗ ‘ಯೆಹೋವಾಷನಿಗೆ ತುಂಬ ಗಾಯ’ ಆಯ್ತು. ಆ ಸಮಯದಲ್ಲಿ ಅವನ ಸ್ವಂತ ಸೇವಕರೇ ಸಂಚು ಮಾಡಿ ಅವನನ್ನ ಸಾಯಿಸಿಬಿಟ್ರು. ಯಾಕಂದ್ರೆ ಯೆಹೋವಾಷ ಜೆಕರ್ಯನನ್ನ ಕೊಲ್ಲಿಸಿದ್ದ. ಈ ಕೆಟ್ಟ ರಾಜನಿಗೆ ಕೊನೆಗೆ ಎಂಥ ಪರಿಸ್ಥಿತಿ ಬಂತಂದ್ರೆ ಅವನನ್ನ “ರಾಜರ ಸಮಾಧಿಯಲ್ಲಿ ಹೂಣಿಡಲಿಲ್ಲ.”—2 ಪೂರ್ವ. 24:23-25.

18. ಯೆಹೋವಾಷನ ತರ ಆಗದೆ ಇರೋಕೆ ಯೆರೆಮೀಯ 17:7, 8 ಹೇಗೆ ಸಹಾಯ ಮಾಡುತ್ತೆ?

18 ಯೆಹೋವಾಷನ ಉದಾಹರಣೆಯಿಂದ ನಾವೇನು ಕಲಿಬಹುದು? ಅವನು ಆಳವಾಗಿ ಬೇರುಬಿಟ್ಟಿರದ ಮರದ ತರ ಇದ್ದ. ಯೆಹೋಯಾದ ಅವನಿಗೆ ಬೆಂಬಲವಾಗಿ ನಿಂತಿದ್ದ. ಯಾವಾಗ ಯೆಹೋಯಾದ ತೀರಿಹೋದ್ನೋ ಆಗ ಯೆಹೋವಾಷ ಧರ್ಮಭ್ರಷ್ಟತೆ ಅನ್ನೋ ಬಿರುಗಾಳಿಗೆ ಬಿದ್ದುಹೋದ. ಅದೇ ತರ ನಮ್ಮ ಮನೆಯವರು ಸತ್ಯದಲ್ಲಿ ಇದ್ದಾರೆ ಅಂದತಕ್ಷಣ, ನಮ್ಮ ಸುತ್ತಮುತ್ತ ಸಹೋದರ ಸಹೋದರಿಯರು ಇದ್ದಾರೆ ಅಂದತಕ್ಷಣ ನಮ್ಮಲ್ಲೂ ದೇವಭಯ ಇದೆ ಅಂತ ಅರ್ಥ ಅಲ್ಲ. ಅದನ್ನ ನಾವೇ ಬೆಳೆಸ್ಕೊಬೇಕು. ಯೆಹೋವನ ಜೊತೆ ನಮ್ಮ ಸಂಬಂಧನ ಬಲವಾಗಿ ಇಟ್ಕೊಂಡು ಯಾವಾಗ್ಲೂ ಭಯಭಕ್ತಿಯಿಂದ ಇರಬೇಕಂದ್ರೆ ನಾವು ಬೈಬಲ್‌ ಓದಬೇಕು. ಓದಿದ್ರ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಬೇಕು. ಪ್ರಾರ್ಥನೆ ಮಾಡಬೇಕು.ಯೆರೆಮೀಯ 17:7, 8 ಓದಿ; ಕೊಲೊ. 2:6, 7.

19. ಯೆಹೋವ ನಮ್ಮ ಹತ್ರ ಏನು ಕೇಳ್ತಿದ್ದಾನೆ?

19 ಯೆಹೋವ ನಮ್ಮ ಹತ್ರ ಜಾಸ್ತಿ ಏನೂ ಕೇಳಲ್ಲ. ಆತ ನಮ್ಮ ಹತ್ರ ಕೇಳೋದು ಇಷ್ಟೆನೇ: “ಸತ್ಯ ದೇವರಿಗೆ ಭಯಪಡು ಮತ್ತು ಆತನ ಆಜ್ಞೆಗಳನ್ನ ಪಾಲಿಸು. ಇದೇ ಎಲ್ಲಾ ಮನುಷ್ಯರ ಕರ್ತವ್ಯ.” (ಪ್ರಸಂ. 12:13) ನಮಗೆ ದೇವರ ಮೇಲೆ ಭಯ ಇದ್ರೆ ಮುಂದೆ ಏನೇ ಕಷ್ಟ ಬಂದ್ರೂ ಹೆದರಿಕೊಳ್ಳಲ್ಲ. ಓಬದ್ಯನ ತರ ಧೈರ್ಯ ತೋರಿಸ್ತೀವಿ. ಯೆಹೋಯಾದನ ತರ ನಿಯತ್ತಾಗಿ ಇರ್ತೀವಿ. ಯಾವ ಕಾರಣಕ್ಕೂ ಯೆಹೋವನ ಜೊತೆ ಇರೋ ನಮ್ಮ ಸ್ನೇಹನ ಬಿಟ್ಟುಕೊಡಲ್ಲ.

ಗೀತೆ 152 ಯೆಹೋವ ನೀನೇ ಆಶ್ರಯ

a “ಭಯ” ಅನ್ನೋ ಪದ ಬೈಬಲಲ್ಲಿ ವಿಪರೀತ ಹೆದರಿಕೆ, ಗೌರವ, ವಿಸ್ಮಯ ಅಂತ ಸಂದರ್ಭಕ್ಕೆ ತಕ್ಕ ಹಾಗೆ ಬೇರೆ ಬೇರೆ ಅರ್ಥ ಕೊಡುತ್ತೆ. ನಮಗೆ ಯೆಹೋವನ ಮೇಲೆ ಯಾವ ರೀತಿಯ ಭಯ ಇರಬೇಕು? ನಾವು ಆತನ ಸೇವೆಯನ್ನ ಧೈರ್ಯವಾಗಿ ಮಾಡೋಕೆ ಮತ್ತು ಆತನಿಗೆ ನಿಯತ್ತಾಗಿ ಇರೋಕೆ ಈ ಭಯ ನಮಗೆ ಹೇಗೆ ಸಹಾಯ ಮಾಡುತ್ತೆ?

b ಈ ಓಬದ್ಯನೇ ಬೇರೆ, ಪ್ರವಾದಿ ಓಬದ್ಯನೇ ಬೇರೆ. ಪ್ರವಾದಿ ಓಬದ್ಯ ನೂರಾರು ವರ್ಷಗಳಾದ ಮೇಲೆ ಜೀವಿಸಿದ್ದ ಮತ್ತು ತನ್ನ ಹೆಸ್ರಲ್ಲೇ ಒಂದು ಬೈಬಲ್‌ ಪುಸ್ತಕನ ಬರೆದ.

c ಮತ್ತಾಯ 23:35ರಲ್ಲಿ “ಬರಕೀಯನ ಮಗ ಜಕರೀಯ” ಅಂತ ಇದೆ. ಬೈಬಲಲ್ಲಿ ಕೆಲವ್ರಿಗೆ ಹೇಗೆ ಎರಡು ಹೆಸ್ರು ಇತ್ತೋ ಅದೇ ತರ ಯೆಹೋಯಾದನಿಗೂ ಎರಡು ಹೆಸ್ರು ಇದ್ದಿರಬೇಕು. (ಮತ್ತಾ. 9:9 ಮತ್ತು ಮಾರ್ಕ 2:14 ಹೋಲಿಸಿ.) ಅಥವಾ ಬರಕೀಯ ಜೆಕರ್ಯನ ಅಜ್ಜ ಅಥವಾ ಪೂರ್ವಜ ಆಗಿರಬೇಕು.

d ಚಿತ್ರ ವಿವರಣೆ: ನಿಷೇಧ ಇರೋ ದೇಶದಲ್ಲಿ ನಮ್ಮ ಪುಸ್ತಕ-ಪತ್ರಿಕೆಗಳನ್ನ ಒಬ್ಬ ಸಹೋದರ ಹಂಚ್ತಾ ಇರೋದನ್ನ ತೋರಿಸಿದ್ದಾರೆ.

e ಚಿತ್ರ ವಿವರಣೆ: ಒಬ್ಬ ಯುವ ಸಹೋದರಿ ವಯಸ್ಸಾದ ಸಹೋದರಿಯಿಂದ ಫೋನಲ್ಲಿ ಸಿಹಿಸುದ್ದಿ ಸಾರೋದು ಹೇಗೆ ಅಂತ ಕಲಿತಾ ಇದ್ದಾರೆ. ಒಬ್ಬ ವಯಸ್ಸಾದ ಸಹೋದರ ಧೈರ್ಯದಿಂದ ಸಾರ್ವಜನಿಕ ಸಾಕ್ಷಿ ಮಾಡ್ತಿದ್ದಾರೆ. ಇನ್ನೊಬ್ಬ ವಯಸ್ಸಾದ ಸಹೋದರ ರಾಜ್ಯ ಸಭಾಗೃಹವನ್ನ ಹೇಗೆ ಚೆನ್ನಾಗಿ ನೋಡ್ಕೊಳ್ಳೋದು ಅಂತ ಹೇಳ್ಕೊಡ್ತಾ ಇದ್ದಾರೆ.