ಅಧ್ಯಯನ ಲೇಖನ 26
ಯೆಹೋವನ ದಿನಕ್ಕೆ ಸಿದ್ಧರಾಗಿ ಇರಿ!
“ಯೆಹೋವನ ದಿನ ರಾತ್ರಿಯಲ್ಲಿ ಕಳ್ಳ ಬರೋ ತರ ಬರುತ್ತೆ.”—1 ಥೆಸ. 5:2.
ಗೀತೆ 128 ಲೋಕದ ದೃಶ್ಯವು ಮಾರ್ಪಡುತ್ತಾ ಇದೆ
ಈ ಲೇಖನದಲ್ಲಿ ಏನಿದೆ? a
1. ಯೆಹೋವನ ದಿನ ಬಂದಾಗ ನಾವು ಜೀವ ಕಾಪಾಡ್ಕೊಳ್ಳೋಕೆ ಏನು ಮಾಡಬೇಕು?
“ಯೆಹೋವನ ದಿನ” ಅಂದ್ರೇನು? ಅದು ಹೇಗಿರುತ್ತೆ? ಆ ದಿನದಲ್ಲಿ ಯೆಹೋವ ತನ್ನ ಶತ್ರುಗಳನ್ನ ನಾಶ ಮಾಡ್ತಾನೆ ಮತ್ತು ತನ್ನ ಜನ್ರನ್ನ ಕಾಪಾಡ್ತಾನೆ. ಹಿಂದಿನ ಕಾಲದಲ್ಲೂ ಆತನು ಕೆಲವು ದೇಶಗಳಿಗೆ ಶಿಕ್ಷೆ ಕೊಟ್ಟಿದ್ದಾನೆ. (ಯೆಶಾ. 13:1, 6; ಯೆಹೆ. 13:5; ಚೆಫ. 1:8) ನಮ್ಮ ಕಾಲದಲ್ಲೂ ಇದು ನಡಿಯುತ್ತೆ. ಮಹಾ ಬಾಬೆಲ್ ಮೇಲೆ ಆಕ್ರಮಣ ಆದಾಗ “ಯೆಹೋವನ ದಿನ” ಶುರು ಆಗುತ್ತೆ. ಹರ್ಮಗೆದೋನ್ ಯುದ್ಧದಲ್ಲಿ ಕೊನೆ ಆಗುತ್ತೆ. ಆ “ದಿನ” ಬಂದಾಗ ಜೀವ ಕಾಪಾಡ್ಕೊಳ್ಳೋಕೆ ನಾವು ಈಗಿಂದಾನೇ ತಯಾರಾಗಿ ಇರಬೇಕು. ಅದಕ್ಕೆ ಯೇಸು, ‘ಮಹಾ ಸಂಕಟಕ್ಕೆ’ ಸಿದ್ಧರಾಗೋಕೆ ಅಷ್ಟೇ ಅಲ್ಲ ‘ಸಿದ್ಧರಾಗಿ ಇರೋಕೆ’ ಹೇಳಿದ್ದಾನೆ. ಅಂದ್ರೆ ನಾವು ಯಾವಾಗ್ಲೂ ಸಿದ್ಧರಾಗಿ ಇರಬೇಕು.—ಮತ್ತಾ. 24:21; ಲೂಕ 12:40.
2. ಅಪೊಸ್ತಲ ಪೌಲ ಥೆಸಲೊನೀಕದವ್ರಿಗೆ ಬರೆದ ಒಂದನೇ ಪತ್ರದಿಂದ ನಮಗೆ ಏನು ಸಹಾಯ ಆಗುತ್ತೆ?
2 ಪೌಲ ಒಂದನೇ ಥೆಸಲೊನೀಕ ಪತ್ರದಲ್ಲಿ ಕೆಲವು ಉದಾಹರಣೆಗಳನ್ನ ಬಳಸಿದ್ದಾನೆ. ಅದು ಕ್ರೈಸ್ತರಿಗೆ ಯೆಹೋವನ ದಿನಕ್ಕೆ ಸಿದ್ಧರಾಗಿ ಇರೋಕೆ ಸಹಾಯ ಮಾಡ್ತು. ಆ ದಿನ ಆಗ್ಲೇ ಬಂದುಬಿಡಲ್ಲ ಅಂತ ಪೌಲನಿಗೆ ಚೆನ್ನಾಗಿ ಗೊತ್ತಿತ್ತು. (2 ಥೆಸ. 2:1-3) ಆದ್ರೂ ಅದು ನಾಳೆನೇ ಬಂದುಬಿಡುತ್ತೆ ಅನ್ನೋ ತರ ಇರೋಕೆ ಸಹೋದರರಿಗೆ ಹೇಳಿದ. ನಾವು ಕೂಡ ಹಾಗೇ ಇರಬೇಕು. ಹಾಗಾಗಿ ಈ ಲೇಖನದಲ್ಲಿ (1) ಯೆಹೋವನ ದಿನ ಹೇಗೆ ಬರುತ್ತೆ, (2) ಆಗ ಯಾರೆಲ್ಲ ಜೀವ ಕಳ್ಕೊಳ್ತಾರೆ, (3) ಆದ್ರೆ ನಮ್ಮ ಜೀವ ಉಳಿಬೇಕಂದ್ರೆ ನಾವು ಯಾವ ತಯಾರಿ ಮಾಡ್ಕೊಬೇಕು ಅಂತ ನೋಡೋಣ.
ಯೆಹೋವನ ದಿನ ಹೇಗೆ ಬರುತ್ತೆ?
3. ಯೆಹೋವನ ದಿನ ಹೇಗೆ ಬರುತ್ತೆ? (ಚಿತ್ರನೂ ನೋಡಿ.)
3 “ರಾತ್ರಿಯಲ್ಲಿ ಕಳ್ಳ ಬರೋ ತರ ಬರುತ್ತೆ.” (1 ಥೆಸ. 5:2) ಯೆಹೋವನ ದಿನ ಹೇಗೆ ಬರುತ್ತೆ ಅನ್ನೋದಕ್ಕೆ ಪೌಲ ಕೊಟ್ಟ ಮೂರು ಉದಾಹರಣೆಯಲ್ಲಿ ಇದು ಮೊದಲನೇದು. ಕಳ್ಳರು ರಾತ್ರಿಯಲ್ಲಿ ಯಾರೂ ಎಚ್ಚರ ಇಲ್ಲದಾಗ ಇದ್ದಕ್ಕಿದ್ದ ಹಾಗೆ ಬರ್ತಾರೆ. ಅದೇ ತರ ಯೆಹೋವನ ದಿನ ದಿಢೀರಂತ ಬರುತ್ತೆ. ಆಗ ತುಂಬ ಜನ್ರಿಗೆ ಆಶ್ಚರ್ಯ ಆಗುತ್ತೆ. ಯೆಹೋವನ ದಿನದಲ್ಲಿ ಘಟನೆಗಳು ಬೇಗ ಬೇಗ ನಡಿತಾ ಇರೋದನ್ನ ನೋಡಿದಾಗ ಸತ್ಯಕ್ರೈಸ್ತರಿಗೂ ಆಶ್ಚರ್ಯ ಆಗಬಹುದು. ಆದ್ರೆ ಕೆಟ್ಟವ್ರ ಜೊತೆ ಅವರು ನಾಶ ಆಗಲ್ಲ.
4. ಯೆಹೋವನ ದಿನ ಹೇಗೆ ಹೆರಿಗೆ ನೋವಿನ ತರ ಇದೆ?
4 “ಗರ್ಭಿಣಿಗೆ ಹೆರಿಗೆ ನೋವು ಇದ್ದಕ್ಕಿದ್ದ ಹಾಗೆ ಬರೋ ತರ” ಬರುತ್ತೆ. (1 ಥೆಸ. 5:3) ಒಬ್ಬ ತುಂಬು ಗರ್ಭಿಣಿಗೆ ಯಾವಾಗ ಹೆರಿಗೆ ನೋವು ಬರುತ್ತೆ ಅಂತ ಗೊತ್ತಿರಲ್ಲ. ಆದ್ರೆ ಅದು ಬಂದೇ ಬರುತ್ತೆ ಅಂತ ಅವಳಿಗೆ ಗೊತ್ತಿರುತ್ತೆ. ಅದು ಬಂದಾಗ ಇದ್ದಕ್ಕಿದ್ದ ಹಾಗೆ ಬರುತ್ತೆ, ತುಂಬ ನೋವಿರುತ್ತೆ ಮತ್ತು ಅದನ್ನ ಯಾರಿಂದಾನೂ ತಡಿಯಕ್ಕಾಗಲ್ಲ. ಅದೇ ತರ ಯೆಹೋವನ ದಿನ ಯಾವ ಸಮಯದಲ್ಲಿ ಬರುತ್ತೆ ಅಂತ ನಮಗೆ ಗೊತ್ತಿಲ್ಲ. ಆದ್ರೆ ಅದು ಬಂದೇ ಬರುತ್ತೆ ಅಂತ ಗೊತ್ತು. ಅದು ದಿಢೀರಂತ ಬರುತ್ತೆ. ಆಗ ದೇವರು ಕೆಟ್ಟವ್ರಿಗೆ ಶಿಕ್ಷೆ ಕೊಡ್ತಾನೆ. ಅದ್ರಿಂದ ಅವರು ತಪ್ಪಿಸ್ಕೊಳ್ಳೋಕೆ ಆಗಲ್ಲ.
5. ಮಹಾ ಸಂಕಟ ಹೇಗೆ ನಸುಕಿನ ಬೆಳಕಿನ ತರ ಇದೆ?
5 ನಸುಕಿನ ಬೆಳಕಿನ ತರ ಬರುತ್ತೆ. ಪೌಲ ಕೊಟ್ಟ ಮೂರನೇ ಉದಾಹರಣೆಯಲ್ಲಿ, ರಾತ್ರಿ ಹೊತ್ತು ಕನ್ನ ಹಾಕೋ ಕಳ್ಳರ ಬಗ್ಗೆ ಹೇಳ್ತಾನೆ. ಆದ್ರೆ ಇಲ್ಲಿ ಪೌಲ ಯೆಹೋವನ ದಿನವನ್ನ ಕಳ್ಳರಿಗಲ್ಲ, ನಸುಕಿನ ಬೆಳಕಿಗೆ ಹೋಲಿಸಿದ್ದಾನೆ. (1 ಥೆಸ. 5:4) ಕಳ್ಳತನ ಮಾಡೋದ್ರಲ್ಲೇ ಮುಳುಗಿ ಹೋಗೋ ಕಳ್ಳರು ಇನ್ನೂ ಕತ್ತಲೆ ಇದೆ ಅಂದ್ಕೊಳ್ತಾರೆ. ಆದ್ರೆ ನಸುಕಿನ ಬೆಳಕು ಬಂದಾಗ ಸಿಕ್ಕಿಹಾಕೊಳ್ತಾರೆ. ಅದೇ ತರ ಕೆಲವರು ದೇವರಿಗೆ ಇಷ್ಟ ಇಲ್ಲದಿರೋ ಕೆಲಸಗಳನ್ನ ಮಾಡ್ತಾ ಇರ್ತಾರೆ. ಇಂಥವರು ಒಂದರ್ಥದಲ್ಲಿ ಕತ್ತಲೆಯಲ್ಲಿ ಇದ್ದಾರೆ. ಆದ್ರೆ ಮಹಾ ಸಂಕಟ ಇಂಥವ್ರ ಮೇಲೆ ಬೆಳಕು ಚೆಲ್ಲುತ್ತೆ. ನಾವು ಅಂಥ ಜನ್ರ ತರ ಇರಬಾರದು. ದೇವರಿಗೆ ಇಷ್ಟ ಇಲ್ಲದಿರೋ ಕೆಲಸಗಳಿಂದ ದೂರ ಇರಬೇಕು. ನಾವು “ಎಲ್ಲ ತರದ ಒಳ್ಳೇತನ” ತೋರಿಸಬೇಕು. ‘ನೀತಿಯ’ ಕೆಲಸಗಳನ್ನ ಮಾಡ್ತಾ ಇರಬೇಕು. ‘ಸತ್ಯದ’ ದಾರಿಯಲ್ಲೇ ನಡಿಬೇಕು. (ಎಫೆ. 5:8-12) ಯೆಹೋವನ ದಿನ ಬಂದಾಗ ಎಂಥ ಜನ್ರು ಉಳಿಯಲ್ಲ ಅಂತ ಹೇಳೋಕೆ ಪೌಲ ಇನ್ನೆರಡು ಉದಾಹರಣೆಗಳನ್ನ ಬಳಸಿದ್ದಾನೆ. ಅದನ್ನ ಮುಂದೆ ನೋಡೋಣ.
ಯೆಹೋವನ ದಿನದಲ್ಲಿ ಯಾರು ಉಳಿಯಲ್ಲ?
6. ಇವತ್ತು ತುಂಬ ಜನ ಯಾವ ಅರ್ಥದಲ್ಲಿ ನಿದ್ದೆ ಮಾಡ್ತಿದ್ದಾರೆ? (1 ಥೆಸಲೊನೀಕ 5:6, 7)
6 ‘ನಿದ್ದೆ ಮಾಡುವವರು.’ (1 ಥೆಸಲೊನೀಕ 5:6, 7 ಓದಿ.) ಯೆಹೋವನ ದಿನದಲ್ಲಿ ಯಾರು ಉಳಿಯಲ್ವೋ ಅವ್ರನ್ನ ನಿದ್ದೆ ಮಾಡ್ತಾ ಇರುವವ್ರಿಗೆ ಪೌಲ ಹೋಲಿಸಿದ್ದಾನೆ. ನಿದ್ದೆ ಮಾಡ್ತಾ ಇರುವವ್ರಿಗೆ ಹೊತ್ತು ಹೋಗೋದೂ ಗೊತ್ತಾಗಲ್ಲ, ಸುತ್ತಮುತ್ತ ಏನು ನಡಿತಿದೆ ಅಂತಾನೂ ಗೊತ್ತಾಗಲ್ಲ. ಹಾಗಾಗಿ ಒಂದು ದೊಡ್ಡ ಘಟನೆ ನಡೆದಾಗ ಅದು ನಡೆದಿದೆ ಅಂತಾನೂ ಗೊತ್ತಾಗಲ್ಲ, ಏನು ಮಾಡೋಕೂ ಆಗಲ್ಲ. ಇವತ್ತು ತುಂಬ ಜನ ಒಂದರ್ಥದಲ್ಲಿ ನಿದ್ದೆ ಮಾಡ್ತಾ ಇದ್ದಾರೆ. (ರೋಮ. 11:8) ನಾವು “ಕೊನೇ ದಿನಗಳಲ್ಲಿ” ಜೀವಿಸ್ತಾ ಇದ್ದೀವಿ ಮತ್ತು ಮಹಾ ಸಂಕಟ ತುಂಬ ಬೇಗ ಶುರು ಆಗುತ್ತೆ ಅನ್ನೋದಕ್ಕೆ ಕಣ್ಮುಂದೆನೇ ಸಾಕ್ಷಿಗಳಿದ್ರೂ ತುಂಬ ಜನ ಅದನ್ನ ತಲೆಗೇ ಹಾಕೊಳ್ಳಲ್ಲ. ಇನ್ನು ಕೆಲವರು ಲೋಕದಲ್ಲಿ ದೊಡ್ಡ ದೊಡ್ಡ ಘಟನೆಗಳು ನಡೆಯೋದನ್ನ ನೋಡಿದಾಗ ಸಿಹಿಸುದ್ದಿಗೆ ಸ್ವಲ್ಪ ಗಮನ ಕೊಡ್ತಾರೆ. ಆದ್ರೆ ಎಚ್ಚರವಾಗಿ ಇರೋ ಬದ್ಲು ಮತ್ತೆ ನಿದ್ದೆಗೆ ಜಾರುತ್ತಾರೆ. ದೇವರು ಒಂದಲ್ಲ ಒಂದಿನ ಕೆಟ್ಟವ್ರಿಗೆ ಶಿಕ್ಷೆ ಕೊಡ್ತಾನೆ ಅಂತ ಇನ್ನು ಕೆಲವ್ರಿಗೆ ಗೊತ್ತಿದ್ರೂ ಆ ದಿನ ಬರೋಕೆ ಇನ್ನೂ ತುಂಬ ಸಮಯ ಇದೆ ಅಂತ ನೆನಸ್ತಾರೆ. (2 ಪೇತ್ರ 3:3, 4) ಆದ್ರೆ ನಾವು ಈ ಜನ್ರ ತರ ಇಲ್ಲ. ಒಂದೊಂದು ದಿನ ಕಳೆದ ಹಾಗೆ ಇನ್ನೂ ಎಚ್ಚರವಾಗಿ ಇರ್ತೀವಿ. ಇದೆಷ್ಟು ಮುಖ್ಯ ಅಂತ ನಮಗೆ ಗೊತ್ತು.
7. ದೇವರು ನಾಶ ಮಾಡೋ ಜನ್ರು ಹೇಗೆ ಕುಡಿದು ಅಮಲಲ್ಲಿ ಇರೋ ಜನ್ರ ತರ ಇದ್ದಾರೆ?
7 “ಕುಡಿದ ಅಮಲಲ್ಲಿ ಇರುವವರು.” ಪೌಲ ದೇವರು ನಾಶ ಮಾಡೋ ಜನ್ರನ್ನ ಕುಡಿದು ಅಮಲಲ್ಲಿ ಇರುವವ್ರಿಗೆ ಹೋಲಿಸಿದ್ದಾನೆ. ಕಂಠಪೂರ್ತಿ ಕುಡಿದು ಅಮಲಲ್ಲಿ ಇರುವವರು ‘ಎಮ್ಮೆ ಮೇಲೆ ಮಳೆ ಸುರಿದ ಹಾಗೆ’ ಇರ್ತಾರೆ. ಅಂದ್ರೆ ಅವ್ರ ಸುತ್ತಮುತ್ತ ಏನೇ ನಡೆದ್ರೂ ಚುರುಕಾಗಿ ಪ್ರತಿಕ್ರಿಯಿಸೋಕೆ ಅವ್ರಿಗೆ ಆಗಲ್ಲ. ಜೊತೆಗೆ ಜೀವನದಲ್ಲಿ ಅವರು ತಗೊಳ್ಳೋ ತೀರ್ಮಾನಗಳು ಸರಿ ಇರಲ್ಲ. ಅದೇ ತರ ಕೆಟ್ಟವರು ದೇವರು ಕೊಡೋ ಎಚ್ಚರಿಕೆಗಳನ್ನ ಕಿವಿಗೇ ಹಾಕೊಳ್ಳಲ್ಲ. ಇದ್ರಿಂದ ತಮ್ಮ ಗುಂಡಿನ ತಾವೇ ತೋಡ್ಕೊಳ್ತಾರೆ. ಆದ್ರೆ ಕ್ರೈಸ್ತರು ಬುದ್ಧಿ ಉಪಯೋಗಿಸಬೇಕು, ಸ್ಪಷ್ಟವಾಗಿ ಯೋಚಿಸಬೇಕು ಅಂತ ಬೈಬಲ್ ಹೇಳುತ್ತೆ. (1 ಥೆಸ. 5:6) ಸ್ಪಷ್ಟವಾಗಿ ಯೋಚಿಸೋ ವ್ಯಕ್ತಿ ಹೇಗಿರ್ತಾನೆ ಅಂತ ಒಬ್ಬ ಬೈಬಲ್ ಪಂಡಿತ ಹೀಗೆ ವಿವರಿಸ್ತಾನೆ: “ಅವನು ಯಾವಾಗ್ಲೂ ಶಾಂತವಾಗಿ ಇರ್ತಾನೆ, ಜಾಸ್ತಿ ಟೆನ್ಶನ್ ಮಾಡ್ಕೊಳ್ಳಲ್ಲ. ಅವನ ಯೋಚ್ನೆ ಅವನ ಹತೋಟಿಯಲ್ಲಿ ಇರುತ್ತೆ. ಜೀವನದಲ್ಲಿ ಸರಿಯಾದ ತೀರ್ಮಾನಗಳನ್ನ ಮಾಡ್ತಾನೆ.” ನಾವು ಯಾಕೆ ಶಾಂತವಾಗಿ ಯೋಚಿಸಬೇಕು ಮತ್ತು ನಮ್ಮ ಯೋಚ್ನೆ ನಮ್ಮ ಹತೋಟಿಯಲ್ಲಿ ಇರಬೇಕು? ಹಾಗಿದ್ರೆನೇ ನಾವು ರಾಜಕೀಯ ಮತ್ತು ಸಾಮಾಜಿಕ ವಿಷ್ಯಗಳಲ್ಲಿ ಪಕ್ಷ ವಹಿಸಲ್ಲ. ಯೆಹೋವನ ದಿನ ಹತ್ರ ಆಗ್ತಾ ಹೋದ ಹಾಗೆ ಆ ವಿಷ್ಯಗಳಲ್ಲಿ ನಾವು ಪಕ್ಷ ವಹಿಸಬೇಕು ಅನ್ನೋ ಒತ್ತಡ ಜಾಸ್ತಿ ಆಗ್ತಾ ಹೋಗುತ್ತೆ. ಆಗ ನಾವೇನು ಮಾಡ್ತೀವಿ ಅಂತ ಈಗ ಚಿಂತಿಸೋ ಅಗತ್ಯ ಇಲ್ಲ. ಯಾಕಂದ್ರೆ ನಾವು ಶಾಂತ ಮನಸ್ಸಿಂದ ಸ್ಪಷ್ಟವಾಗಿ ಯೋಚಿಸ್ತಾ, ಸರಿಯಾದ ತೀರ್ಮಾನಗಳನ್ನ ಮಾಡೋಕೆ ಪವಿತ್ರಶಕ್ತಿ ಸಹಾಯ ಮಾಡುತ್ತೆ.—ಲೂಕ 12:11, 12.
ಯೆಹೋವನ ದಿನಕ್ಕೆ ತಯಾರಾಗಿ ಇರೋಕೆ ಏನು ಮಾಡಬೇಕು?
8. ನಾವು ಎಚ್ಚರವಾಗಿದ್ದು ತಯಾರಾಗಿ ಇರಬೇಕು ಅಂತ 1 ಥೆಸಲೊನೀಕ 5:8ರಿಂದ ಹೇಗೆ ಗೊತ್ತಾಗುತ್ತೆ? (ಚಿತ್ರನೂ ನೋಡಿ.)
8 “ಎದೆಕವಚ . . . ಶಿರಸ್ತ್ರಾಣ ಹಾಕೊಳ್ಳೋಣ.” ಯುದ್ಧಕ್ಕಾಗಿ ಯಾವಾಗ್ಲೂ ಎಚ್ಚರವಾಗಿದ್ದು ತಯಾರಾಗಿ ಇರೋ ಸೈನಿಕರಿಗೆ ಪೌಲ ನಮ್ಮನ್ನ ಹೋಲಿಸಿದ್ದಾನೆ. (1 ಥೆಸಲೊನೀಕ 5:8 ಓದಿ.) ಯುದ್ಧಕ್ಕೆ ಒಬ್ಬ ಸೈನಿಕ ಯಾವಾಗ್ಲೂ ರೆಡಿ ಇರಬೇಕು. ಅದೇ ತರ ನಾವು ಕೂಡ ಯೆಹೋವನ ದಿನಕ್ಕೆ ರೆಡಿ ಇರಬೇಕು. ಯಾಕಂದ್ರೆ ಯೆಹೋವನ ದಿನ ಯಾವಾಗ ಬೇಕಾದ್ರೂ ಬರಬಹುದು. ಹಾಗಾಗಿ ನಂಬಿಕೆ ಮತ್ತು ಪ್ರೀತಿಯ ಎದೆಕವಚ ಮತ್ತು ನಿರೀಕ್ಷೆಯ ಶಿರಸ್ತ್ರಾಣವನ್ನ ಹಾಕೊಂಡು ನಾವು ಯಾವಾಗ್ಲೂ ತಯಾರಾಗಿ ಇರಬೇಕು. ಈ ಗುಣಗಳು ನಮಗೆ ತುಂಬ ಸಹಾಯ ಮಾಡುತ್ತೆ.
9. ನಾವು ಯಾಕೆ ಜಾಸ್ತಿ ನಂಬಿಕೆ ಬೆಳೆಸ್ಕೊಬೇಕು?
9 ಎದೆಕವಚ ಸೈನಿಕರ ಹೃದಯ ಕಾಪಾಡ್ತಿತ್ತು. ಅದೇ ತರ ನಂಬಿಕೆ ಮತ್ತು ಪ್ರೀತಿ ಅನ್ನೋ ಗುಣಗಳು ನಮ್ಮ ಹೃದಯನ ಕಾಪಾಡುತ್ತೆ. ಈ ಗುಣಗಳು ನಾವು ಯೆಹೋವನ ಸೇವೆಯನ್ನ ಮಾಡ್ತಾ ಇರೋಕೆ ಮತ್ತು ಯೇಸು ತೋರಿಸ್ಕೊಟ್ಟ ದಾರಿಯಲ್ಲಿ ನಡೀತಾ ಇರೋಕೆ ಸಹಾಯ ಮಾಡುತ್ತೆ. ನಮಗೆ ನಂಬಿಕೆ ಇದ್ರೆ ಯೆಹೋವನನ್ನ ಪೂರ್ಣ ಹೃದಯದಿಂದ ಆರಾಧನೆ ಮಾಡುವವ್ರಿಗೆ ಆತನು ಪ್ರತಿಫಲ ಕೊಟ್ಟೇ ಕೊಡ್ತಾನೆ ಅನ್ನೋ ಗ್ಯಾರಂಟಿ ನಮಗೆ ಇರುತ್ತೆ. (ಇಬ್ರಿ. 11:6) ಅಷ್ಟೇ ಅಲ್ಲ, ಏನೇ ಕಷ್ಟ ಬಂದ್ರೂ ನಮ್ಮ ನಾಯಕನಾದ ಯೇಸುಗೆ ನಿಯತ್ತಾಗಿ ಇರ್ತೀವಿ. ನಮ್ಮಲ್ಲಿ ನಂಬಿಕೆ ಜಾಸ್ತಿ ಇದ್ರೆ ಕಷ್ಟಗಳು ಬಂದಾಗ ಅದನ್ನ ಧೈರ್ಯವಾಗಿ ಎದುರಿಸ್ತೀವಿ. ನಾವು ನಂಬಿಕೆ ಬೆಳೆಸ್ಕೊಳ್ಳೋದು ಹೇಗೆ? ಹಣಕಾಸಿನ ಸಮಸ್ಯೆ ಅಥವಾ ಹಿಂಸೆ ಬಂದಾಗ ನಮ್ಮ ಸಹೋದರ ಸಹೋದರಿಯರು ಹೇಗೆ ನಂಬಿಕೆ ತೋರಿಸಿದ್ರು ಅನ್ನೋದನ್ನ ತಿಳ್ಕೊಬೇಕು. ಆಗ ಅವ್ರ ತರ ನಾವು ಕೂಡ ಹಣದ ಹಿಂದೆ ಹೋಗಲ್ಲ. ನಮ್ಮ ಜೀವನವನ್ನ ಸರಳ ಮಾಡ್ಕೊಳ್ತೀವಿ. ನಮಗೆ ಯೆಹೋವ ದೇವರ ಸೇವೆ ಮಾಡೋದೇ ಮುಖ್ಯ ಅಂತ ತೋರಿಸ್ಕೊಡ್ತೀವಿ. b
10. ದೇವರ ಮೇಲೆ, ಜನ್ರ ಮೇಲೆ ಪ್ರೀತಿ ಇರೋದ್ರಿಂದ ನಾವೇನು ಮಾಡ್ತೀವಿ?
10 ನಮ್ಮಲ್ಲಿ ಪ್ರೀತಿ ಇದ್ರೆ ನಾವು ಯಾವಾಗ್ಲೂ ಎಚ್ಚರವಾಗಿ ಇರ್ತೀವಿ ಮತ್ತು ಸರಿಯಾಗಿ ಇರೋದನ್ನೇ ಮಾಡ್ತೀವಿ. (ಮತ್ತಾ. 22:37-39) ಯೆಹೋವ ದೇವರ ಮೇಲೆ ನಮಗೆ ಪ್ರೀತಿ ಇರೋದ್ರಿಂದ ಏನೇ ಕಷ್ಟ ಬಂದ್ರೂ ನಾವು ಸಾರೋದನ್ನ ನಿಲ್ಲಿಸಲ್ಲ. (2 ತಿಮೊ. 1:7, 8) ಯೆಹೋವ ದೇವರನ್ನ ಆರಾಧನೆ ಮಾಡದಿರೋ ಜನ್ರನ್ನೂ ನಾವು ಪ್ರೀತಿಸ್ತೀವಿ. ಅದಕ್ಕೆ ನಮ್ಮ ಟೆರಿಟೊರಿಯಲ್ಲಿ ಇರೋ ಜನ್ರಿಗೆ ಸಾರ್ತಾ ಇರ್ತೀವಿ. ಪತ್ರ ಬರೆದು ಅಥವಾ ಫೋನ್ ಮಾಡಿಯಾದ್ರೂ ಸಿಹಿಸುದ್ದಿ ಸಾರ್ತೀವಿ. ಒಂದಲ್ಲ ಒಂದಿನ ಅವರು ಬದಲಾಗಿ ಸರಿಯಾಗಿ ಇರೋದನ್ನ ಮಾಡ್ತಾರೆ ಅನ್ನೋ ನಿರೀಕ್ಷೆಯನ್ನ ನಾವು ಕಳ್ಕೊಳ್ಳಲ್ಲ.—ಯೆಹೆ. 18:27, 28.
11. ನಮಗೆ ಸಹೋದರ ಸಹೋದರಿಯರ ಮೇಲೆ ಪ್ರೀತಿ ಇದ್ರೆ ನಾವೇನು ಮಾಡ್ತೀವಿ? (1 ಥೆಸಲೊನೀಕ 5:11)
11 ಜನ್ರನ್ನ ಪ್ರೀತಿಸೋದ್ರ ಜೊತೆಗೆ ಸಹೋದರ ಸಹೋದರಿಯರನ್ನೂ ಪ್ರೀತಿಸಬೇಕು. ಹೇಗೆ? ನಾವು “ಒಬ್ರನ್ನೊಬ್ರು ಪ್ರೋತ್ಸಾಹಿಸ್ತಾ, ಬಲಪಡಿಸ್ತಾ” ಇರಬೇಕು. (1 ಥೆಸಲೊನೀಕ 5:11 ಓದಿ.) ಸೈನಿಕರು ಯುದ್ಧದಲ್ಲಿ ಒಬ್ರಿಗೊಬ್ರು ಸಹಾಯ ಮಾಡ್ಕೊಳ್ತಾರೆ. ಆದ್ರೆ ಕೆಲವೊಮ್ಮೆ ಅವ್ರಿಂದ ಒಬ್ರಿಗೊಬ್ರಿಗೆ ಗಾಯನೂ ಆಗಿಬಿಡುತ್ತೆ. ಆದ್ರೆ ಅದನ್ನ ಅವರು ಬೇಕುಬೇಕಂತ ಮಾಡಿರಲ್ಲ. ಅದೇ ತರ ಸಹೋದರ ಸಹೋದರಿಯರು ಕೆಲವೊಮ್ಮೆ ನಮಗೆ ನೋವು ಮಾಡಿಬಿಡಬಹುದು. ಆದ್ರೆ ಅವರು ಅದನ್ನ ಬೇಕೂಂತ ಮಾಡಿರಲ್ಲ. ಹಾಗಾಗಿ ನಾವು ಅದನ್ನೇ ಮನಸ್ಸಲ್ಲಿಟ್ಟು ಅವ್ರಿಗೆ ಸೇಡು ತೀರಿಸೋಕೆ ಹೋಗಬಾರದು. (1 ಥೆಸ. 5:13, 15) ಅಷ್ಟೇ ಅಲ್ಲ, ನಾವು ಸಭೆಯನ್ನ ನೋಡ್ಕೊಳ್ಳೋ ಸಹೋದರರನ್ನೂ ಪ್ರೀತಿಸಬೇಕು. (1 ಥೆಸ. 5:12) ಹೇಗೆ? ನಾವು ಅವ್ರನ್ನ ಗೌರವಿಸಬೇಕು. ಪೌಲ ಥೆಸಲೊನೀಕದವ್ರಿಗೆ ಈ ಪತ್ರ ಬರೆದಾಗ ಆ ಸಭೆ ಶುರುವಾಗಿ ಒಂದು ವರ್ಷ ಕೂಡ ಆಗಿರಲಿಲ್ಲ. ಹಿರಿಯರಿಗೆ ಅಷ್ಟು ಅನುಭವನೂ ಇರಲಿಲ್ಲ. ಅವ್ರಿಂದ ತಪ್ಪುಗಳೂ ಆಗಿರಬಹುದು. ಆದ್ರೂ ಅವರು ಸಭೆಗೋಸ್ಕರ ಕಷ್ಟಪಟ್ಟು ದುಡೀತಾ ಇದ್ದಿದ್ರಿಂದ ಸಭೆಯವರು ಅವ್ರನ್ನ ಗೌರವಿಸಬೇಕಿತ್ತು. ಇದ್ರಿಂದ ನಾವೇನು ಕಲಿತೀವಿ? ಮಹಾ ಸಂಕಟ ಹತ್ರ ಆಗ್ತಾ ಇದ್ದ ಹಾಗೆ ನಾವು ಹಿರಿಯರ ಮಾತನ್ನ ಇನ್ನೂ ಜಾಸ್ತಿ ಕೇಳಬೇಕಾಗುತ್ತೆ. ಯಾಕಂದ್ರೆ ಮಹಾ ಸಂಕಟದಲ್ಲಿ ಮುಖ್ಯ ಕಾರ್ಯಾಲಯ ಅಥವಾ ಬ್ರಾಂಚ್ ಆಫೀಸಿನ ಸಂಪರ್ಕ ಕಡಿದುಹೋಗಬಹುದು. ಆಗ ನಮಗೆ ನಿರ್ದೇಶನ ಸಿಗದೆ ಹೋಗಬಹುದು. ಇದ್ರಿಂದ ನಾವು ಹಿರಿಯರ ಮೇಲೆ ಆತುಕೊಳ್ಳಬೇಕಾಗುತ್ತೆ. ಹಾಗಾಗಿ ಈಗಿಂದಾನೇ ಹಿರಿಯರನ್ನ ಪ್ರೀತಿಸೋಕೆ, ಗೌರವಿಸೋಕೆ ಕಲಿಯೋಣ. ಏನೇ ಆದ್ರೂ ಒಂದು ವಿಷ್ಯ ನೆನಪಲ್ಲಿ ಇಡೋಣ. ಹಿರಿಯರಿಂದ ಆಗೋ ತಪ್ಪುಗಳನ್ನಲ್ಲ, ಬದಲಿಗೆ ಯೆಹೋವ ದೇವರೇ ಯೇಸು ಮೂಲಕ ಈ ಸಹೋದರರನ್ನ ನಡೆಸ್ತಾ ಇದ್ದಾನೆ ಅನ್ನೋದನ್ನ ಮನಸ್ಸಲ್ಲಿ ಇಡೋಣ.
12. ಸರಿಯಾಗಿ ಯೋಚ್ನೆ ಮಾಡೋಕೆ ನಮಗೆ ನಿರೀಕ್ಷೆ ಹೇಗೆ ಸಹಾಯ ಮಾಡುತ್ತೆ?
12 ಶಿರಸ್ತ್ರಾಣ ಸೈನಿಕರ ತಲೆ ಕಾಪಾಡುತ್ತೆ. ಅದೇ ತರ ರಕ್ಷಣೆಯ ನಿರೀಕ್ಷೆ ನಮಗೆ ಸರಿಯಾಗಿ ಯೋಚ್ನೆ ಮಾಡೋಕೆ ಸಹಾಯ ಮಾಡುತ್ತೆ. ನಮ್ಮ ನಿರೀಕ್ಷೆ ಗಟ್ಟಿಯಾಗಿ ಇದ್ರೆ ಈ ಲೋಕ ಕೊಡೋದೆಲ್ಲ ವ್ಯರ್ಥ ಅಂತ ಅರ್ಥ ಮಾಡ್ಕೊಳ್ತೀವಿ. (ಫಿಲಿ. 3:8) ಕಷ್ಟ ಬಂದಾಗ ನಾವು ಶಾಂತಿಯಿಂದ ಇರ್ತೀವಿ, ತಾಳ್ಕೊಳ್ತೀವಿ. ಆಫ್ರಿಕಾದಲ್ಲಿ ಸೇವೆ ಮಾಡ್ತಿರೋ ವಾಲಸ್ ಮತ್ತು ಲೊರಿಂಡ ಅನ್ನೋ ದಂಪತಿಯ ಉದಾಹರಣೆ ನೋಡಿ. ಮೂರೇ ವಾರದಲ್ಲಿ ಒಬ್ರು ಅಪ್ಪನನ್ನ, ಇನ್ನೊಬ್ರು ಅಮ್ಮನನ್ನ ಕಳ್ಕೊಂಡ್ರು. ಕೊರೊನಾ ಕಾಯಿಲೆ ತುಂಬ ಹರಡ್ತಾ ಇದ್ದಿದ್ರಿಂದ ಅವ್ರಿಗೆ ಮನೆಗೆ ಹೋಗೋಕೂ ಆಗಲಿಲ್ಲ. ವಾಲಸ್ ಏನು ಹೇಳ್ತಾರಂದ್ರೆ, “ನನಗೆ ನಂಬಿಕೆ ಇದೆ, ಅವರು ಮತ್ತೆ ಜೀವಂತವಾಗಿ ಬಂದೇ ಬರ್ತಾರೆ. ಹಾಗಾಗಿ ಅವರು ಸಾಯೋ ಮುಂಚೆ ಎಷ್ಟು ನರಳಾಡಿದ್ರು ಅನ್ನೋದನ್ನ ನೆನಪಿಸ್ಕೊಳ್ಳಲ್ಲ. ಬದ್ಲಿಗೆ ಹೊಸ ಲೋಕದಲ್ಲಿ ಅವರು ಖುಷಿಖುಷಿಯಾಗಿ ಇರೋದರ ಬಗ್ಗೆ ಯೋಚ್ನೆ ಮಾಡ್ತೀನಿ. ನನಗೆ ಅವ್ರ ನೆನಪಾದಾಗ, ಬೇಜಾರ್ ಆದಾಗ ಈ ನಿರೀಕ್ಷೆ ಬಗ್ಗೆ ಯೋಚ್ನೆ ಮಾಡೋದ್ರಿಂದ ನನ್ನ ಮನಸ್ಸಿಗೆ ಸಮಾಧಾನ ಸಿಗುತ್ತೆ.”
13. ಪವಿತ್ರಶಕ್ತಿ ನಮಗೆ ಸಹಾಯ ಮಾಡಬೇಕಂದ್ರೆ ನಾವೇನು ಮಾಡಬೇಕು?
13 “ಪವಿತ್ರಶಕ್ತಿ ಬೆಂಕಿ ತರ ನಿಮ್ಮಲ್ಲಿ ನಡಿಸೋ ಕೆಲಸಗಳನ್ನ ತಡಿಬೇಡಿ.” (1 ಥೆಸ. 5:19) ಪೌಲ ಪವಿತ್ರಶಕ್ತಿನ ಬೆಂಕಿಗೆ ಹೋಲಿಸಿದ. ಪವಿತ್ರಶಕ್ತಿ ನಮ್ಮಲ್ಲಿದ್ರೆ ನಾವು ಬೆಂಕಿ ತರ ಹೊಳಿತೀವಿ. ಅಂದ್ರೆ ಸರಿಯಾಗಿ ಇರೋದನ್ನ ಮಾಡೋಕೆ ನಮ್ಮಲ್ಲಿ ಹುರುಪು ಇರುತ್ತೆ. ಯೆಹೋವನ ಸೇವೆಯನ್ನ ಇನ್ನೂ ಜಾಸ್ತಿ ಮಾಡಕ್ಕಾಗುತ್ತೆ. (ರೋಮ. 12:11) ಪವಿತ್ರಶಕ್ತಿ ನಮಗೆ ಸಹಾಯ ಮಾಡಬೇಕಂದ್ರೆ ನಾವೇನು ಮಾಡಬೇಕು? ಪ್ರಾರ್ಥನೆ ಮಾಡಬೇಕು. ಬೈಬಲನ್ನ ಓದಿ ಅಧ್ಯಯನ ಮಾಡಬೇಕು. ಅಷ್ಟೇ ಅಲ್ಲ, ಪವಿತ್ರಶಕ್ತಿಯಿಂದ ನಡೀತಾ ಇರೋ ಈ ಸಂಘಟನೆ ಜೊತೆನೇ ನಾವು ಇರಬೇಕು. ಇದನ್ನೆಲ್ಲ ಮಾಡಿದ್ರೆ ‘ಪವಿತ್ರಶಕ್ತಿಯಿಂದ ಬರೋ ಗುಣಗಳನ್ನ’ ನಾವು ಬೆಳೆಸ್ಕೊಳ್ತೀವಿ.—ಗಲಾ. 5:22, 23.
14. ಪವಿತ್ರಶಕ್ತಿಯ ಸಹಾಯ ನಮಗೆ ಸಿಕ್ತಾ ಇರಬೇಕಂದ್ರೆ ನಾವೇನು ಮಾಡಬಾರದು? (ಚಿತ್ರನೂ ನೋಡಿ.)
14 ಪವಿತ್ರಶಕ್ತಿಯಿಂದ ಸಹಾಯ ಸಿಕ್ಕಿದ ಮೇಲೆ ಅದು “ನಿಮ್ಮಲ್ಲಿ ನಡಿಸೋ ಕೆಲಸಗಳನ್ನ ತಡಿಬೇಡಿ.” ಯೆಹೋವನಿಗೆ ಏನಿಷ್ಟಾನೋ ಅದೇ ತರ ಯಾರು ಯೋಚಿಸ್ತಾರೋ, ನಡ್ಕೊಳ್ತಾರೋ ಅವ್ರಿಗೆ ಮಾತ್ರ ದೇವರು ಪವಿತ್ರಶಕ್ತಿ ಕೊಡ್ತಾನೆ. ಅಸಹ್ಯವಾದ ವಿಷ್ಯಗಳ ಬಗ್ಗೆ ಯಾರು ಯೋಚಿಸ್ತಾರೋ, ಅದನ್ನೇ ಮಾಡ್ತಾರೋ ಅಂಥ ಜನ್ರಿಗೆ ಪವಿತ್ರಶಕ್ತಿನ ಕೊಡಲ್ಲ. (1 ಥೆಸ. 4:7, 8) ನಮಗೆ ಪವಿತ್ರಶಕ್ತಿ ಸಿಕ್ತಾ ಇರಬೇಕಂದ್ರೆ ನಾವು ‘ಭವಿಷ್ಯವಾಣಿಗಳನ್ನ ತಳ್ಳಿಹಾಕಬಾರದು.’ (1 ಥೆಸ. 5:20) ‘ಭವಿಷ್ಯವಾಣಿಗಳು’ ಅಂದ್ರೆ ಯೆಹೋವ ದೇವರು ಪವಿತ್ರಶಕ್ತಿಯಿಂದ ಬೈಬಲಲ್ಲಿ ಬರೆಸಿರೋ ಸಂದೇಶಗಳು. ಅದ್ರಲ್ಲಿ ಆತನ ದಿನದ ಬಗ್ಗೆ, ಆ ದಿನ ಎಷ್ಟು ಹತ್ರ ಇದೆ ಅನ್ನೋದ್ರ ಬಗ್ಗೆ ಇರೋ ವಿಷ್ಯಗಳೂ ಸೇರಿದೆ. ಹಾಗಾಗಿ ನಾವು ‘ಆ ದಿನ ತುಂಬಾ ದೂರದಲ್ಲಿದೆ, ನಾನು ಬದುಕಿರುವಾಗ ಅರ್ಮಗೆದೋನ್ ಬರಲ್ಲ’ ಅಂತ ಅಂದ್ಕೊಬಾರದು. ಬದಲಿಗೆ ಅದು ತುಂಬ ಹತ್ರ ಇದೆ ಅಂತ ಮನಸ್ಸಲ್ಲಿಡಬೇಕು. ಯೆಹೋವನಿಗೆ ಇಷ್ಟ ಆಗೋ ತರಾನೇ ನಡ್ಕೊಬೇಕು. ಪ್ರತಿದಿನ “ದೇವರ ಮೇಲೆ ಭಕ್ತಿ ಇದೆ ಅಂತ ತೋರಿಸೋ ಕೆಲಸಗಳನ್ನ ಮಾಡಬೇಕು.”—2 ಪೇತ್ರ 3:11, 12.
“ಎಲ್ಲವನ್ನ ಪರೀಕ್ಷಿಸಿ . . . ತಿಳ್ಕೊಳ್ಳಿ”
15. ಕೆಟ್ಟ ದೇವದೂತರಾಗಲಿ ಬೇರೆ ಯಾರೇ ಆಗಲಿ ಸುಳ್ಳು ಸುದ್ದಿ ಹಬ್ಬಿಸಿದಾಗ ಮೋಸಹೋಗದೆ ಇರೋಕೆ ನಾವು ಏನು ಮಾಡಬೇಕು? (1 ಥೆಸಲೊನೀಕ 5:21)
15 ಇನ್ನು ಸ್ವಲ್ಪ ಸಮಯದಲ್ಲೇ ದೇವರ ವಿರೋಧಿಗಳು “ಶಾಂತಿ ಇದೆ, ಸುರಕ್ಷಿತವಾಗಿ ಇದ್ದೀವಿ” ಅನ್ನೋ ಘೋಷಣೆ ಮಾಡ್ತಾರೆ. (1 ಥೆಸ. 5:3) ಇದ್ರ ಹಿಂದೆ ಇರೋದು ಕೆಟ್ಟ ದೇವದೂತರು. ಇದನ್ನ ಕೇಳಿ ತುಂಬ ಜನ ದಾರಿ ತಪ್ಪಬೇಕು ಅನ್ನೋದೇ ಅವ್ರ ಉದ್ದೇಶ. (ಪ್ರಕ. 16:13, 14) ನಾವು ದಾರಿ ತಪ್ಪುತ್ತೀವಾ? ‘ಎಲ್ಲವನ್ನ ಪರೀಕ್ಷಿಸಿ ಚೆನ್ನಾಗಿ ತಿಳ್ಕೊಂಡಿದ್ರೆ’ ನಾವು ಮೋಸಹೋಗಲ್ಲ. (1 ಥೆಸಲೊನೀಕ 5:21 ಓದಿ.) ಇಲ್ಲಿ ಪೌಲ “ಪರೀಕ್ಷಿಸಿ” ಅನ್ನೋದಕ್ಕೆ ಬಳಸಿರೋ ಗ್ರೀಕ್ ಪದ ಬೆಳ್ಳಿ ಬಂಗಾರವನ್ನ ಪರೀಕ್ಷಿಸೋದಕ್ಕೆ ಸೂಚಿಸುತ್ತೆ. ಹಾಗಾಗಿ ನಾವು ಒಂದು ಸುದ್ದಿ ಕೇಳಿದ ತಕ್ಷಣ ಅಥವಾ ಓದಿದ ತಕ್ಷಣ ಅದು ನಿಜಾನಾ ಅಂತ ಮೊದ್ಲು ಪರೀಕ್ಷಿಸಬೇಕು. ಇದನ್ನ ಥೆಸಲೊನೀಕದವರು ಮಾಡಬೇಕಿತ್ತು. ಆದ್ರೆ ಇದನ್ನ ಅವ್ರಿಗಿಂತ ನಾವು ಜಾಸ್ತಿ ಮಾಡಬೇಕು. ಯಾಕಂದ್ರೆ ಮಹಾ ಸಂಕಟ ತುಂಬ ಹತ್ರ ಇದೆ. ಹಾಗಾಗಿ ಯಾರಾದ್ರೂ ಏನಾದ್ರೂ ಹೇಳಿದ್ರೆ ಅದನ್ನ ಕಣ್ಮುಚ್ಚಿ ನಂಬಿಬಿಡಬಾರದು. ಬದಲಿಗೆ ಬೈಬಲ್ ಅದ್ರ ಬಗ್ಗೆ ಏನು ಹೇಳುತ್ತೆ, ಸಂಘಟನೆ ಏನು ಹೇಳುತ್ತೆ ಅಂತ ಪರೀಕ್ಷಿಸಿ ನೋಡಬೇಕು. ಹೀಗೆ ಮಾಡಿದ್ರೆ ಕೆಟ್ಟ ದೇವದೂತರು ಏನೇ ಸುಳ್ಳು ಸುದ್ದಿ ಹಬ್ಬಿಸಿದ್ರೂ ನಾವು ಮೋಸಹೋಗಲ್ಲ.—ಜ್ಞಾನೋ. 14:15; 1 ತಿಮೊ. 4:1.
16. (ಎ) ನಮಗೆ ಯಾವ ನಿರೀಕ್ಷೆ ಇದೆ? (ಬಿ) ನಾವು ಏನು ಮಾಡಬೇಕು?
16 ಯೆಹೋವನ ಜನ್ರು ಒಂದು ಗುಂಪಾಗಿ ಮಹಾ ಸಂಕಟವನ್ನ ಪಾರಾಗ್ತಾರೆ. ಆಗ ನಾವು ಬದುಕಿರಬಹುದು ಅಥವಾ ಸತ್ತುಹೋಗಿರಬಹುದು. ಯಾಕಂದ್ರೆ ನಾಳೆ ಏನಾಗುತ್ತೋ ನಮಗೆ ಗೊತ್ತಿಲ್ಲ. (ಯಾಕೋ. 4:14) ಆದ್ರೆ ಕೊನೇ ತನಕ ಯೆಹೋವನಿಗೆ ನಿಯತ್ತಾಗಿದ್ರೆ ನಾವೆಲ್ರೂ ಶಾಶ್ವತವಾಗಿ ಜೀವಿಸ್ತೀವಿ. ಅಭಿಷಿಕ್ತರು ಯೇಸು ಜೊತೆ ಸ್ವರ್ಗದಲ್ಲಿ ಇರ್ತಾರೆ. ಉಳಿದವರು ಇದೇ ಭೂಮಿಯಲ್ಲಿ ಪರದೈಸಲ್ಲಿ ಇರ್ತಾರೆ. ಈ ಅದ್ಭುತ ನಿರೀಕ್ಷೆಯನ್ನ ಯಾವಾಗ್ಲೂ ಮನಸ್ಸಲ್ಲಿ ಇಡೋಣ. ಯೆಹೋವನ ದಿನಕ್ಕಾಗಿ ಸದಾ ಸಿದ್ಧರಾಗಿ ಇರೋಣ!
ಗೀತೆ 133 ನಿನ್ನ ವಿಮೋಚನೆಗಾಗಿ ದೇವರನ್ನು ಆಶ್ರಯಿಸು
a “ಯೆಹೋವನ ದಿನ” ಅಂದ್ರೇನು? ಆ ದಿನ ಹೇಗೆ ಬರುತ್ತೆ? ಆ ದಿನ ಬಂದಾಗ ಯಾರು ಉಳಿತಾರೆ? ಯಾರು ಉಳಿಯಲ್ಲ? ಆ ದಿನಕ್ಕೆ ನಾವು ತಯಾರಾಗಿ ಇರೋಕೆ ಏನು ಮಾಡಬೇಕು? ಈ ಪ್ರಶ್ನೆಗಳಿಗೆಲ್ಲ ಒಂದನೇ ಥೆಸಲೊನೀಕ 5ನೇ ಅಧ್ಯಾಯದಲ್ಲಿ ಅಪೊಸ್ತಲ ಪೌಲ ಕೊಟ್ಟಿರೋ ಉದಾಹರಣೆಗಳಿಂದ ಉತ್ರ ತಿಳ್ಕೊಳ್ಳೋಣ.
b “ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು” ಸರಣಿ ಲೇಖನ ನೋಡಿ.