ವಾಚಕರಿಂದ ಪ್ರಶ್ನೆಗಳು
ಯೇಸು ಹುಟ್ಟಿದ ಮೇಲೆ ಯೋಸೇಫ ಮತ್ತು ಮರಿಯ ತಮ್ಮ ಮನೆಯಿದ್ದ ನಜರೇತಿಗೆ ಹೋಗೋ ಬದ್ಲು ಬೆತ್ಲೆಹೇಮಲ್ಲೇ ಯಾಕೆ ಉಳ್ಕೊಂಡ್ರು?
ಯಾಕೆ ಅಂತ ಬೈಬಲಲ್ಲಿ ನೇರವಾಗಿ ಹೇಳಿಲ್ಲ. ಆದ್ರೆ ಅದ್ರಲ್ಲಿರೋ ಮಾಹಿತಿಗಳನ್ನ ನೋಡಿದ್ರೆ ಯೋಸೇಫ ಮತ್ತು ಮರಿಯ ನಜರೇತಿಗೆ ಹೋಗದೆ ಇರೋಕೆ ಕಾರಣ ಏನಿರಬಹುದು ಅಂತ ಗೊತ್ತಾಗುತ್ತೆ.
ಮರಿಯ ಗರ್ಭಿಣಿ ಆಗಿ ಮಗು ಹೆರ್ತಾಳೆ ಅಂತ ದೇವದೂತ ಹೇಳಿದಾಗ ಯೋಸೇಫ ಮತ್ತು ಮರಿಯ ಇಬ್ರೂ ನಜರೇತಲ್ಲೇ ಇದ್ರು. ಅವರು ಗಲಿಲಾಯದ ಈ ಪಟ್ಟಣದಲ್ಲೇ ವಾಸ ಮಾಡ್ತಿದ್ರು. (ಲೂಕ 1:26-31; 2:4) ಅಷ್ಟೇ ಅಲ್ಲ, ಅವರು ಈಜಿಪ್ಟಿಂದ ಬಂದಮೇಲೆ ಯೇಸುನ ಬೆಳೆಸಿದ್ದು ಇಲ್ಲೇನೇ. (ಮತ್ತಾ. 2:19-23) ಹಾಗಾಗಿ ಯೇಸು, ಯೋಸೇಫ ಮತ್ತು ಮರಿಯ ಮೂರು ಜನನೂ ನಜರೇತಿನವರು ಅಂತಾನೇ ಹೇಳಬಹುದು.
ಮರಿಯಗೆ ಎಲಿಸಬೆತ್ ಅನ್ನೋ ಒಬ್ಬ ಸಂಬಂಧಿಕಳು ಇದ್ದಳು. ಅವಳು ಯೆಹೂದದಲ್ಲಿ ಇದ್ದಳು. ಅವಳ ಗಂಡ ಪುರೋಹಿತ ಜಕರೀಯ, ಮಗ ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ. (ಲೂಕ 1:5, 9, 13, 36) ಅವಳನ್ನ ನೋಡೋಕೆ ಮರಿಯ ಯೆಹೂದಕ್ಕೆ ಹೋಗಿದ್ದಳು. ಅವಳು ಅಲ್ಲಿ ಮೂರು ತಿಂಗಳು ಇದ್ದು ನಜರೇತಿಗೆ ವಾಪಸ್ ಬಂದಿದ್ದಳು. (ಲೂಕ 1:39, 40, 56) ಹಾಗಾಗಿ ಅವಳಿಗೆ ಯೆಹೂದ ಪಟ್ಟಣದ ಬಗ್ಗೆ ಸ್ವಲ್ಪಮಟ್ಟಿಗೆ ಗೊತ್ತಿತ್ತು.
ಆಮೇಲೆ “ಜನ್ರು ಹೆಸ್ರನ್ನ ನೋಂದಾಯಿಸೋಕೆ” ತಮ್ಮತಮ್ಮ ಊರಿಗೆ ಹೋಗಬೇಕು ಅಂತ ರಾಜ ಆಜ್ಞೆ ಹೊರಡಿಸಿದ. ಹಾಗಾಗಿ ಯೋಸೇಫ ಮರಿಯನ ಕರ್ಕೊಂಡು ಬೆತ್ಲೆಹೇಮಿಗೆ ಹೋದ. ಇದು ‘ದಾವೀದನ ಊರಾಗಿತ್ತು.’ ಮೆಸ್ಸೀಯ ಬೆತ್ಲೆಹೇಮಲ್ಲಿ ಹುಟ್ತಾನೆ ಅನ್ನೋ ಭವಿಷ್ಯವಾಣಿನೂ ಇತ್ತು. (ಲೂಕ 2:3, 4; 1 ಸಮು. 17:15; 20:6; ಮೀಕ 5:2) ಅಲ್ಲಿ ಮರಿಯಗೆ ಯೇಸು ಹುಟ್ಟಿದನು. ಎಳೇ ಬಾಣಂತಿಯಾಗಿದ್ದ ಮರಿಯ ಈ ಕೈಗೂಸನ್ನ ಎತ್ಕೊಂಡು ತುಂಬ ದೂರ ಪ್ರಯಾಣ ಮಾಡೋದು ಬೇಡ ಅಂತ ಯೋಸೇಫ ಅಂದ್ಕೊಂಡು ಬೆತ್ಲೆಹೇಮಲ್ಲೇ ಉಳ್ಕೊಂಡ. ಅಲ್ಲಿಂದ ಸುಮಾರು 9 ಕಿಲೋಮೀಟರ್ ದೂರದಲ್ಲಿ ಯೆರೂಸಲೇಮ್ ಇತ್ತು. ಇದ್ರಿಂದ ಪುಟ್ಟ ಮಗುವಾಗಿದ್ದ ಯೇಸುನ ಎತ್ಕೊಂಡು ದೇವಾಲಯಕ್ಕೆ ಹೋಗೋಕೆ ಮತ್ತು ನಿಯಮ ಪುಸ್ತಕದಲ್ಲಿ ಹೇಳಿದ್ದ ಬಲಿಗಳನ್ನ ಕೊಡೋಕೆ ಸುಲಭ ಆಗ್ತಿತ್ತು.—ಯಾಜ. 12:2, 6-8; ಲೂಕ 2:22-24.
ದೇವದೂತ ಮರಿಯ ಹತ್ರ ಅವಳ ಮಗ ‘ದಾವೀದನ ಸಿಂಹಾಸನದಲ್ಲಿ ಕೂತು ರಾಜನಾಗಿ ಆಳ್ತಾನೆ’ ಅಂತ ಹೇಳಿದ್ದನು. ಹಾಗಾಗಿ ಯೇಸು ದಾವೀದನ ಊರಲ್ಲಿ ಹುಟ್ಟಿದ್ದು ಮರಿಯ ಮತ್ತು ಯೋಸೇಫಗೆ ತುಂಬ ಖುಷಿ ಆಗಿರುತ್ತೆ. (ಲೂಕ 1:32, 33; 2:11, 17) ಮುಂದೆ ಏನು ಮಾಡಬೇಕು ಅಂತ ದೇವರು ಹೇಳೋ ತನಕ ಇಲ್ಲೇ ಇರೋಣ ಅಂತ ಅವರು ಅಂದ್ಕೊಂಡಿರಬಹುದು.
ಅವರು ಬೆತ್ಲೆಹೇಮಲ್ಲಿ ಎಷ್ಟು ದಿನ ಇದ್ರು ಅಂತ ಬೈಬಲಲ್ಲಿ ಹೇಳಿಲ್ಲ. ಆದ್ರೆ ಜ್ಯೋತಿಷಿಗಳು ಅವ್ರನ್ನ ನೋಡೋಕೆ ಬಂದಾಗ ಅವರು ಒಂದು ಮನೆಯಲ್ಲಿದ್ರು ಅಂತ ಬೈಬಲ್ ಹೇಳುತ್ತೆ. ಅಷ್ಟೇ ಅಲ್ಲ, ಅದ್ರಲ್ಲಿ ಯೇಸುನ ‘ಎಳೇ ಕೂಸು’ ಅಂತ ಹೇಳಿಲ್ಲ, “ಮಗು” ಅಂತ ಹೇಳಿದೆ. (ಮತ್ತಾ. 2:11) ಇದ್ರಿಂದ ಯೋಸೇಫ ಮತ್ತು ಮರಿಯ ನಜರೇತಿಗೆ ಹೋಗೋ ಬದ್ಲು ಬೆತ್ಲೆಹೇಮಲ್ಲೇ ಉಳ್ಕೊಂಡಿದ್ರು ಅಂತ ಗೊತ್ತಾಗುತ್ತೆ.
ಹೆರೋದ “ಬೆತ್ಲೆಹೇಮ್ . . . ಊರಲ್ಲಿರೋ ಎರಡು ವರ್ಷದ ಒಳಗಿನ ಎಲ್ಲ ಗಂಡುಮಕ್ಕಳನ್ನ ಕೊಲ್ಲಿ ಅಂತ ಆಜ್ಞೆ ಕೊಟ್ಟ.” (ಮತ್ತಾ. 2:16) ಇದನ್ನ ಒಬ್ಬ ದೇವದೂತ ಯೋಸೇಫನಿಗೆ ಹೇಳಿದ. ಆಗ ಯೋಸೇಫ ಮತ್ತು ಮರಿಯ ಯೇಸುನ ಕರ್ಕೊಂಡು ಈಜಿಪ್ಟಿಗೆ ಹೋಗಿಬಿಟ್ರು. ಹೆರೋದ ಸಾಯೋ ತನಕ ಅವರು ಅಲ್ಲೇ ಇದ್ರು. ಆಮೇಲೆ ಯೋಸೇಫ ಅವ್ರನ್ನ ಬೆತ್ಲೆಹೇಮಿಗೆ ಕರ್ಕೊಂಡು ಬರೋ ಬದ್ಲು ನಜರೇತಿಗೆ ಯಾಕೆ ಹೋದ? ಯಾಕಂದ್ರೆ ಬೆತ್ಲೆಹೇಮಲ್ಲಿ ಹೆರೋದನ ಮಗ ಅರ್ಖೆಲಾಯ ಆಳ್ತಿದ್ದ. ಅವನು ತುಂಬ ಕ್ರೂರಿ ಆಗಿದ್ದ. ಅಷ್ಟೇ ಅಲ್ಲ, ಬೆತ್ಲೆಹೇಮಿಗೆ ಹೋಗಬೇಡ ಅಂತ ದೇವದೂತ ಯೋಸೇಫನಿಗೆ ಎಚ್ಚರಿಕೆ ಕೊಟ್ಟಿದ್ದ. ಅದಕ್ಕೆ ಯೋಸೇಫ ಅವನ ಕುಟುಂಬನ ಕರ್ಕೊಂಡು ನಜರೇತಿಗೆ ಬಂದುಬಿಟ್ಟ. ಅಲ್ಲಿ ಮಗನನ್ನ ಯೆಹೋವನಿಗೆ ಇಷ್ಟ ಆಗೋ ತರ ಬೆಳೆಸೋಕೆ ಅವ್ರಿಗೆ ಸುಲಭ ಆಗಿತ್ತು.—ಮತ್ತಾ. 2:19-22; 13:55; ಲೂಕ 2:39, 52.
ಯೇಸು ತೀರಿಹೋದ ಮೇಲೆ ಮನುಷ್ಯರಿಗೆ ಸ್ವರ್ಗಕ್ಕೆ ಹೋಗೋಕೆ ದಾರಿ ತೆರೀತು. ಆದ್ರೆ ನಮಗೆ ಗೊತ್ತಿರೋ ಹಾಗೆ ಯೋಸೇಫ ಯೇಸು ಸಾಯೋ ಮುಂಚೆನೇ ತೀರಿಹೋದ. ಹಾಗಾಗಿ ಯೋಸೇಫನನ್ನ ನಾವು ಇದೇ ಭೂಮಿ ಮೇಲೆ ಮತ್ತೆ ನೋಡ್ತೀವಿ. ಆಗ ಅವನು ಮತ್ತು ಮರಿಯ ಯೇಸು ಹುಟ್ಟಿದ ಮೇಲೂ ಯಾಕೆ ಬೆತ್ಲೆಹೇಮಲ್ಲೇ ಉಳ್ಕೊಂಡ್ರು ಅಂತ ಇನ್ನೂ ವಿವರವಾಗಿ ತಿಳ್ಕೊಬಹುದು.