ಅಧ್ಯಯನ ಲೇಖನ 25
ಹಿರಿಯರೇ, ಗಿದ್ಯೋನನ ತರ ಇರಿ!
“ಗಿದ್ಯೋನ್ . . . ಬಗ್ಗೆ ನಾನು ವಿವ್ರವಾಗಿ ಹೇಳಬೇಕಾದ್ರೆ ನನಗೆ ಸಮಯ ಸಾಕಾಗಲ್ಲ.”—ಇಬ್ರಿ. 11:32.
ಗೀತೆ 63 ಸದಾ ನಿಷ್ಠರು
ಈ ಲೇಖನದಲ್ಲಿ ಏನಿದೆ? a
1. ಒಂದನೇ ಪೇತ್ರ 5:2ರಲ್ಲಿ ಹೇಳಿರೋ ತರ ಯೆಹೋವ ಹಿರಿಯರಿಗೆ ಯಾವ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾನೆ?
ಯೆಹೋವ ತನ್ನ ಜನ್ರನ್ನ ನೋಡ್ಕೊಳ್ಳೋ ಜವಾಬ್ದಾರಿಯನ್ನ ಹಿರಿಯರಿಗೆ ಕೊಟ್ಟಿದ್ದಾನೆ. ಆ ಜವಾಬ್ದಾರಿಯನ್ನ ಭಯಭಕ್ತಿಯಿಂದ, ಚೆನ್ನಾಗಿ ಮಾಡೋಕೆ ಅವರು ತಮ್ಮಿಂದ ಆಗೋದನ್ನೆಲ್ಲ ಮಾಡ್ತಿದ್ದಾರೆ. ‘ಕುರಿಗಳನ್ನ ಚೆನ್ನಾಗಿ ನೋಡ್ಕೊಳ್ಳೋ ಕುರುಬರ ತರ ಇರಬೇಕು’ ಅನ್ನೋ ಆಸೆನೂ ಅವ್ರಿಗಿದೆ.—ಯೆರೆ. 23:4; 1 ಪೇತ್ರ 5:2 ಓದಿ.
2. ಹಿರಿಯರಿಗೆ ತಮ್ಮ ನೇಮಕನ ಚೆನ್ನಾಗಿ ಮಾಡೋಕೆ ಯಾವಾಗೆಲ್ಲ ಕಷ್ಟ ಆಗುತ್ತೆ?
2 ಹಿರಿಯರಿಗೆ ಸಭೆಯಲ್ಲಿ ತುಂಬ ಕೆಲಸ ಇರುತ್ತೆ. ಆದ್ರೆ ಆ ಕೆಲಸನ್ನೆಲ್ಲ ಒಬ್ರೇ ಮಾಡಿದ್ರೆ ಅವ್ರಿಗೆ ತಮ್ಮ ಜವಾಬ್ದಾರಿಯನ್ನ ಚೆನ್ನಾಗಿ ಮಾಡಕ್ಕಾಗಲ್ಲ. ಅಮೆರಿಕಾದಲ್ಲಿರೋ ಸಹೋದರ ಟೋನಿಗೂ ಹೀಗೇ ಆಯ್ತು. ಅವರು ಹೇಳೋದೇನಂದ್ರೆ “ಕೊರೊನಾ ಶುರುವಾದಾಗ ಕೂಟಗಳನ್ನ ನಡೆಸೋಕೆ, ಸಿಹಿಸುದ್ದಿ ಸಾರೋಕೆ ಬೇಕಾದ ಏರ್ಪಾಡುಗಳನ್ನೆಲ್ಲ ನಾನೇ ಮಾಡ್ತಿದ್ದೆ. ಎಷ್ಟು ಕೆಲಸ ಮಾಡಿದ್ರೂ ಮುಗಿತಾನೇ ಇರಲಿಲ್ಲ. ಇದ್ರಿಂದ ಬೈಬಲ್ ಓದೋಕೆ, ಸಂಶೋಧನೆ ಮಾಡಿ ಅದ್ರ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡೋಕೆ, ಪ್ರಾರ್ಥನೆ ಮಾಡೋಕೆ ಸಮಯನೇ ಸಿಗ್ತಾ ಇರಲಿಲ್ಲ.” ಇದ್ರಿಂದ ಆ ಸಹೋದರನಿಗೆ ಇತಿಮಿತಿಗಳನ್ನ ಮನಸ್ಸಲ್ಲಿಟ್ಟು ಕೆಲಸ ಮಾಡಬೇಕಂತ ಗೊತ್ತಾಯ್ತು. ಕಾಸವೊದಲ್ಲಿರೋ ಇಲೆರ್ ಅನ್ನೋ ಹಿರಿಯನಿಗೂ ಒಂದು ಸಮಸ್ಯೆ ಬಂತು. ಅವ್ರಿದ್ದ ಜಾಗದಲ್ಲಿ ಯುದ್ಧ ನಡೀತಾ ಇದ್ದಿದ್ರಿಂದ ಆ ಸಮಯದಲ್ಲಿ ಸಂಘಟನೆ ಕೊಟ್ಟ ನಿರ್ದೇಶನವನ್ನ ಪಾಲಿಸೋಕೆ ಕಷ್ಟ ಅಂತ ಅವ್ರಿಗೆ ಅನಿಸ್ತು. ಅವರು ಹೇಳೋದು “ಸಹೋದರ ಸಹೋದರಿಯರಿಗೆ ಸಹಾಯ ಮಾಡಿ ಅಂತ ಬ್ರಾಂಚ್ ನಂಗೆ ಹೇಳ್ತು. ಆದ್ರೆ ಅದೆಲ್ಲ ಆಗೋ ಮಾತಲ್ಲ ಅಂತ ಅನಿಸ್ತಿತ್ತು. ಅದನ್ನ ಮಾಡೋಕೆ ನಂಗೆ ತುಂಬ ಧೈರ್ಯ ಬೇಕಿತ್ತು.” ಏಷ್ಯಾದಲ್ಲಿ ಮಿಷನರಿ ಆಗಿರೋ ಸಹೋದರ ಟಿಮ್‌ಗೆ ಪ್ರತಿದಿನ ತಮ್ಮ ಜವಾಬ್ದಾರಿಗಳನ್ನ ಮಾಡಿ ಮುಗಿಸೋಕೆ ಕಷ್ಟ ಆಗ್ತಿತ್ತು. “ನಂಗೆ ಆಗಾಗ ಈ ಕೆಲಸಗಳನ್ನೆಲ್ಲ ಮಾಡ್ತಾ ಮಾಡ್ತಾ ಸಾಕಾಗಿ ಹೋಗ್ತಿತ್ತು, ತುಂಬ ಸುಸ್ತಾಗಿ ಬಿಡ್ತಿದ್ದೆ” ಅಂತ ಆ ಸಹೋದರ ಹೇಳ್ತಾರೆ. ಈ ಹಿರಿಯರ ತರಾನೇ ಎಷ್ಟೋ ಹಿರಿಯರಿಗೆ ಅನಿಸಿರುತ್ತೆ. ಅವ್ರಿಗೆ ತಮ್ಮ ನೇಮಕನ ಚೆನ್ನಾಗಿ ಮಾಡೋಕೆ ಯಾವುದು ಸಹಾಯ ಮಾಡುತ್ತೆ ಅನ್ನೋದನ್ನ ಈಗ ನೋಡೋಣ.
3. ಗಿದ್ಯೋನನ ಬಗ್ಗೆ ತಿಳ್ಕೊಳ್ಳೋದ್ರಿಂದ ನಮ್ಮೆಲ್ರಿಗೂ ಯಾವ ಪ್ರಯೋಜನ ಇದೆ?
3 ಹಿರಿಯರಿಗೆ ನ್ಯಾಯಾಧೀಶನಾದ ಗಿದ್ಯೋನನ ಮಾದರಿ ಸಹಾಯ ಮಾಡುತ್ತೆ. (ಇಬ್ರಿ. 6:12; 11:32) ಅವನು ಯೆಹೋವನ ಜನ್ರನ್ನ ಒಬ್ಬ ಕುರುಬನ ತರ ನೋಡ್ಕೊಂಡ. ಅವ್ರನ್ನ ಕಾಪಾಡಿದ. (ನ್ಯಾಯ. 2:16; 1 ಪೂರ್ವ. 17:6) ಇವತ್ತು ಈ ಕೆಟ್ಟ ಲೋಕದಲ್ಲಿ ನಮ್ಮನ್ನ ಚೆನ್ನಾಗಿ ನೋಡ್ಕೊಳ್ಳೋಕೆ ಹಿರಿಯರನ್ನ ನೇಮಿಸಿದ್ದಾನೆ. (ಅ. ಕಾ. 20:28; 2 ತಿಮೊ. 3:1) ಗಿದ್ಯೋನನಿಂದ ಹಿರಿಯರು ಏನು ಕಲಿಬಹುದು ಅಂತ ನಾವೀಗ ನೋಡೋಣ. ಅವನ ತರ ದೀನತೆ ತೋರಿಸೋದು, ಇತಿಮಿತಿಗಳನ್ನ ಮನಸ್ಸಲ್ಲಿ ಇಟ್ಕೊಳ್ಳೋದು, ದೇವರ ಮಾತನ್ನ ಕೇಳೋದು ಮತ್ತು ತಾಳ್ಕೊಳ್ಳೋದು ಹೇಗೆ ಅಂತ ನೋಡೋಣ. ಇದನ್ನ ತಿಳ್ಕೊಳ್ಳೋದ್ರಿಂದ ನಮಗೆ ಹಿರಿಯರ ಮೇಲೆ ಇರೋ ಗೌರವ ಜಾಸ್ತಿ ಆಗುತ್ತೆ. ಅವ್ರಿಗೆ ಸಹಕಾರ ಕೊಡೋಕೆ ಇನ್ನೂ ಸುಲಭ ಆಗುತ್ತೆ.—ಇಬ್ರಿ. 13:17.
ದೀನತೆ ತೋರಿಸಿ, ಇತಿಮಿತಿಗಳನ್ನ ಅರ್ಥ ಮಾಡ್ಕೊಳ್ಳಿ
4. ಗಿದ್ಯೋನ ದೀನನಾಗಿದ್ದ ಮತ್ತು ತನ್ನ ಇತಿಮಿತಿಗಳನ್ನ ಅರ್ಥ ಮಾಡ್ಕೊಂಡಿದ್ದ ಅಂತ ಹೇಗೆ ಗೊತ್ತಾಗುತ್ತೆ?
4 ಗಿದ್ಯೋನನಿಗೆ ತುಂಬ ದೀನತೆ ಇತ್ತು. ಅವನು ತನ್ನ ಇತಿಮಿತಿಗಳನ್ನ ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದ. b ಒಂದು ಸಲ ಒಬ್ಬ ದೇವದೂತ ಬಂದು ಅವನಿಗೆ ‘ನೀನು ಇಸ್ರಾಯೇಲ್ಯರನ್ನ ಮಿದ್ಯಾನ್ಯರಿಂದ ಕಾಪಾಡಬೇಕು’ ಅಂತ ಹೇಳಿದ. ಆಗ ಅವನು “ಮನಸ್ಸೆ ಕುಲದಲ್ಲೇ ನನ್ನ ಮನೆತನ ತುಂಬ ಚಿಕ್ಕದು. ನನ್ನ ತಂದೆ ಕುಟುಂಬದಲ್ಲೇ ಸಾಮಾನ್ಯ ಮನುಷ್ಯ ನಾನು” ಅಂತ ಹೇಳಿದ. (ನ್ಯಾಯ. 6:15) ಈ ನೇಮಕನ ಮಾಡೋಕೆ ತನಗೆ ಯೋಗ್ಯತೆ ಇಲ್ಲ ಅಂತ ಗಿದ್ಯೋನ ಅಂದ್ಕೊಂಡ. ಆದ್ರೆ ಅವನು ಅದನ್ನ ಮಾಡ್ತಾನೆ ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತಿತ್ತು. ಯೆಹೋವನ ಸಹಾಯದಿಂದ ಗಿದ್ಯೋನ ಅದನ್ನ ಮಾಡಿ ಮುಗಿಸಿದ.
5. ದೀನತೆ ತೋರಿಸೋಕೆ, ತಮ್ಮ ಇತಿಮಿತಿಗಳನ್ನ ಅರ್ಥ ಮಾಡ್ಕೊಳ್ಳೋಕೆ ಹಿರಿಯರಿಗೆ ಯಾವಾಗ ಕಷ್ಟ ಆಗಬಹುದು?
5 ಹಿರಿಯರು ಎಲ್ಲಾ ವಿಷ್ಯದಲ್ಲೂ ದೀನತೆ ತೋರಿಸೋಕೆ, ತಮ್ಮ ಇತಿಮಿತಿಗಳನ್ನ ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನ ಮಾಡ್ತಾರೆ. (ಮೀಕ 6:8; ಅ. ಕಾ. 20:18, 19) ಅವರು ಯಾವತ್ತೂ ‘ನಾನು ಇದನ್ನ ಮಾಡಿದ್ದೀನಿ, ಅದನ್ನ ಮಾಡಿದ್ದೀನಿ. ನನ್ನಿಂದ ಮಾಡಕ್ಕಾಗದೇ ಇರೋದು ಏನೂ ಇಲ್ಲ’ ಅಂತ ಕೊಚ್ಕೊಳ್ಳಲ್ಲ. ತಮ್ಮಿಂದ ಏನಾದ್ರೂ ತಪ್ಪಾದ್ರೆ ತಕ್ಷಣ ‘ನಾನು ಯಾವುದಕ್ಕೂ ಲಾಯಕ್ಕಿಲ್ಲ’ ಅಂತ ಅಂದ್ಕೊಳ್ಳಲ್ಲ. ಆದ್ರೆ ಕೆಲವೊಮ್ಮೆ ಈ ತರ ದೀನತೆ ತೋರಿಸೋಕೆ, ತಮ್ಮ ಇತಿಮಿತಿಗಳನ್ನ ಅರ್ಥ ಮಾಡ್ಕೊಳ್ಳೋಕೆ ಅವ್ರಿಗೆ ಕಷ್ಟ ಆಗುತ್ತೆ. ಉದಾಹರಣೆಗೆ, ಕೆಲವರು ಅವರು ಮಾಡೋ ಒಂದು ನೇಮಕನ ನೋಡಿ ಹೊಗಳಬಹುದು, ಇನ್ನೊಂದು ನೇಮಕದಲ್ಲಿ ತಪ್ಪು ಹುಡುಕಬಹುದು. ಇನ್ನು ಕೆಲವೊಮ್ಮೆ ಹಿರಿಯರು ತುಂಬ ನೇಮಕಗಳನ್ನ ಮಾಡ್ತೀವಿ ಅಂತ ಒಪ್ಕೊಂಡಿರ್ತಾರೆ. ಆದ್ರೆ ಆಮೇಲೆ ಅದನ್ನ ಅವ್ರಿಂದ ಮಾಡಕ್ಕಾಗದೆ ಹೋಗಬಹುದು. ಹೀಗೆಲ್ಲಾ ಆದಾಗ ಗಿದ್ಯೋನನ ತರ ಅವರು ಏನು ಮಾಡಬೇಕು?
6. ಗಿದ್ಯೋನನ ತರ ಹಿರಿಯರು ತಮ್ಮ ಇತಿಮಿತಿಗಳನ್ನ ಅರ್ಥ ಮಾಡ್ಕೊಂಡ್ರೆ ಏನು ಮಾಡ್ತಾರೆ? (ಚಿತ್ರನೂ ನೋಡಿ.)
6 ಬೇರೆಯವ್ರಿಂದ ಸಹಾಯ ಪಡ್ಕೊಳ್ಳಿ. ತನ್ನ ಇತಿಮಿತಿಗಳನ್ನ ಅರ್ಥ ಮಾಡ್ಕೊಂಡಿರೋ ವ್ಯಕ್ತಿಗೆ ತನ್ನಿಂದ ಏನು ಮಾಡಕ್ಕಾಗುತ್ತೆ, ಏನು ಮಾಡಕ್ಕಾಗಲ್ಲ ಅನ್ನೋದು ಚೆನ್ನಾಗಿ ಗೊತ್ತಿರುತ್ತೆ. ಗಿದ್ಯೋನ ಕೂಡ ಅದೇ ರೀತಿ ಇದ್ದಿದ್ರಿಂದ ಅವನು ಬೇರೆಯವ್ರ ಸಹಾಯ ಪಡ್ಕೊಂಡ. (ನ್ಯಾಯ. 6:27, 35; 7:24) ಹಿರಿಯರು ಕೂಡ ಬೇರೆಯವ್ರ ಸಹಾಯ ಪಡ್ಕೊಳ್ತಾರೆ. ಟೋನಿಗೂ ಇದೆಷ್ಟು ಮುಖ್ಯ ಅಂತ ಅರ್ಥ ಆಯ್ತು. ಅವರು ಹೇಳೋದು “ನಾನು ಚಿಕ್ಕವಯಸ್ಸಿಂದಾನೂ ತುಂಬ ಕೆಲಸ ಮಾಡ್ತಾ ಬಂದಿದ್ರಿಂದ ಈಗ್ಲೂ ಜಾಸ್ತಿ ಕೆಲಸ ಮಾಡೋಕೆ ಒಪ್ಕೊಳ್ತಾ ಇದ್ದೆ. ಆದ್ರೆ ಅದನ್ನೆಲ್ಲ ಮಾಡಿ ಮುಗಿಸೋಕೆ ಆಗ್ತಾ ಇರಲಿಲ್ಲ. ಹಾಗಾಗಿ ಇತಿಮಿತಿಗಳನ್ನ ಅರ್ಥ ಮಾಡ್ಕೊಳ್ಳೋದು ಯಾಕಷ್ಟು ಮುಖ್ಯ ಅಂತ ಕುಟುಂಬ ಆರಾಧನೆಯಲ್ಲಿ ಮಾತಾಡಿದ್ವಿ. ‘ನಾನೆಲ್ಲಾದ್ರೂ ಸರಿ ಮಾಡ್ಕೊಬೇಕಾ’ ಅಂತ ನನ್ನ ಹೆಂಡ್ತಿ ಹತ್ರ ಕೇಳಿದೆ. ಅದ್ರ ಜೊತೆಗೆ jw.orgನಲ್ಲಿ ಯೇಸುವಿನಂತೆ ತರಬೇತಿ ನೀಡಿ, ಭರವಸೆ ಇಡಿ, ಜವಾಬ್ದಾರಿ ಕೊಡಿ ಅನ್ನೋ ವಿಡಿಯೋ ನೋಡಿದೆ.” ಆಮೇಲೆ ಟೋನಿ ಬೇರೆಯವ್ರ ಸಹಾಯ ಪಡ್ಕೊಳ್ಳೋಕೆ ಶುರು ಮಾಡಿದ್ರು. ಇದ್ರಿಂದ ಏನಾಯ್ತು? “ಸಭೆಯಲ್ಲಿರೋ ಕೆಲಸಗಳು ಚೆನ್ನಾಗಿ ನಡೀತಾ ಇದೆ. ಯೆಹೋವನ ಜೊತೆ ಇರೋ ಸ್ನೇಹನ ಇನ್ನೂ ಜಾಸ್ತಿ ಮಾಡ್ಕೊಳ್ಳೋಕೆ ತುಂಬ ಸಮಯ ಸಿಗ್ತಾ ಇದೆ” ಅಂತ ಟೋನಿ ಹೇಳ್ತಾರೆ.
7. ಬೇರೆಯವರು ತಪ್ಪಾಗಿ ಮಾತಾಡಿದಾಗ ಹಿರಿಯರು ಏನು ಮಾಡಬೇಕು? (ಯಾಕೋಬ 3:13)
7 ನಿಮ್ಮಲ್ಲಿ ಯಾರಾದ್ರೂ ತಪ್ಪು ಹುಡುಕಿದಾಗ ಕೋಪ ಮಾಡ್ಕೊಬೇಡಿ. ಹೀಗೆ ಮಾಡೋಕೆ ಹಿರಿಯರಿಗೆ ಗಿದ್ಯೋನನ ಮಾದರಿ ಸಹಾಯ ಮಾಡುತ್ತೆ. ಗಿದ್ಯೋನ ತುಂಬ ದೀನನಾಗಿದ್ದ. ಅವನಿಂದ ಕೂಡ ಕೆಲವೊಮ್ಮೆ ತಪ್ಪಾಗುತ್ತೆ ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು. ಅದಕ್ಕೆ ಎಫ್ರಾಯೀಮ್ಯರು ಅವನ ಮೇಲೆ ಜಗಳಕ್ಕೆ ಬಂದಾಗ ಅವನು ತಕ್ಷಣ ಕೋಪ ಮಾಡ್ಕೊಳ್ಳಲಿಲ್ಲ. (ನ್ಯಾಯ. 8:1-3) ಅವರು ಹೇಳೋದನ್ನ ತಾಳ್ಮೆಯಿಂದ ಕೇಳಿಸ್ಕೊಂಡ. ಆಮೇಲೆ ಸಮಾಧಾನವಾಗಿ ಉತ್ರ ಕೊಟ್ಟ. ಹೀಗೆ ಅವ್ರ ಕೋಪನ ತಣ್ಣಗೆ ಮಾಡಿದ. ಗಿದ್ಯೋನನ ತರ ಹಿರಿಯರು ಕೂಡ ತಮ್ಮ ಬಗ್ಗೆ ಯಾರಾದ್ರೂ ತಪ್ಪಾಗಿ ಮಾತಾಡಿದಾಗ ತಕ್ಷಣ ಕೋಪ ಮಾಡ್ಕೊಬಾರದು. ಅವರು ಹೇಳೋದನ್ನ ಚೆನ್ನಾಗಿ ಕೇಳಿಸ್ಕೊಬೇಕು. ಸಮಾಧಾನವಾಗಿ ಉತ್ರ ಕೊಡಬೇಕು. (ಯಾಕೋಬ 3:13 ಓದಿ.) ಹಿರಿಯರು ಹೀಗೆ ದೀನತೆ ತೋರಿಸಿದ್ರೆ ಸಭೆಯಲ್ಲಿ ಎಲ್ರೂ ಶಾಂತಿಯಿಂದ ಇರಕ್ಕಾಗುತ್ತೆ.
8. ಬೇರೆಯವರು ಹೊಗಳಿದಾಗ ಹಿರಿಯರು ಏನು ಮಾಡಬೇಕು? ಒಂದು ಉದಾಹರಣೆ ಕೊಡಿ.
8 ಹೊಗಳಿಕೆಯೆಲ್ಲಾ ಯೆಹೋವನಿಗೆ ಹೋಗೋ ತರ ನೋಡ್ಕೊಳ್ಳಿ. ಮಿದ್ಯಾನ್ಯರ ವಿರುದ್ಧ ಹೋರಾಡಿ ಗೆದ್ದಾಗ ಜನ್ರೆಲ್ಲ ಗಿದ್ಯೋನನನ್ನ ಹೊಗಳಿದ್ರು. ಆಗ ಅವನು ಆ ಹೊಗಳಿಕೆನ್ನೆಲ್ಲ ಯೆಹೋವನಿಗೆ ಕೊಟ್ಟ. (ನ್ಯಾಯ. 8:22, 23) ಹಿರಿಯರು ಗಿದ್ಯೋನನ ತರ ಹೇಗೆ ನಡ್ಕೊಬಹುದು? ಏನೇ ಮಾಡಿದ್ರೂ ಯೆಹೋವನಿಗೆ ಹೊಗಳಿಕೆ ಹೋಗೋ ತರ ನಡ್ಕೊಬೇಕು. (1 ಕೊರಿಂ. 4:6, 7) ಉದಾಹರಣೆಗೆ, ಟಾಕ್ ಕೊಡುವಾಗ ‘ಹೊಗಳಿಕೆ ಯೆಹೋವನಿಗೆ ಸಿಗ್ತಾ ಇದ್ಯಾ, ಇಲ್ಲ ನನಗೆ ಸಿಕ್ತಾ ಇದ್ಯಾ’ ಅಂತ ಯೋಚ್ನೆ ಮಾಡಿ. ಸಹೋದರರು ಹೊಗಳಿದಾಗ ಅವ್ರ ಗಮನ ಬೈಬಲ್ ಕಡೆಗೆ ಅಥವಾ ಸಂಘಟನೆಯಿಂದ ಸಿಗೋ ತರಬೇತಿ ಕಡೆಗೆ ಹೋಗೋ ತರ ಮಾಡಿ. ತಿಮೊತಿ ಅನ್ನೋ ಹಿರಿಯ ಏನು ಮಾಡಿದ್ರು ಅಂತ ನೋಡೋಣ. ಅವ್ರಿಗೆ ಟಾಕ್ ಕೊಡೋದಂದ್ರೆ ತುಂಬ ಇಷ್ಟ. ಹಿರಿಯನಾದ ಹೊಸದ್ರಲ್ಲಿ “ನಾನು ದೊಡ್ಡದೊಡ್ಡ ಪೀಠಿಕೆಗಳನ್ನ, ಉದಾಹರಣೆಗಳನ್ನ ಬಳಸ್ತಿದ್ದೆ. ಆಗ ಸಹೋದರರು ಬಂದು ನನ್ನನ್ನೇ ಹೊಗಳ್ತಾ ಇದ್ರು. ಇದ್ರಿಂದ ಯೆಹೋವನಿಗಾಗಲಿ ಬೈಬಲ್‌ಗಾಗಲಿ ಹೊಗಳಿಕೆ ಸಿಗ್ತಾ ಇರಲಿಲ್ಲ” ಅಂತ ಆ ಸಹೋದರ ಹೇಳ್ತಾರೆ. ಯೆಹೋವನಿಗೆ ಹೊಗಳಿಕೆ ಸಿಗೋ ತರ ಭಾಷಣ ಕೊಡಬೇಕು ಅಂತ ತಿಮೊತಿ ಅರ್ಥ ಮಾಡ್ಕೊಂಡ್ರು. ಆಮೇಲೆ ಕಲಿಸೋ ವಿಧಾನವನ್ನ ಬದಲಾಯಿಸ್ಕೊಂಡ್ರು. (ಜ್ಞಾನೋ. 27:21) ಆಗ ಏನಾಯ್ತು? ಆ ಸಹೋದರ ಏನು ಹೇಳ್ತಾರಂದ್ರೆ “ನಾನು ಭಾಷಣ ಕೊಟ್ಟ ಮೇಲೆ ಸಹೋದರರು ನನ್ನ ಹತ್ರ ಬಂದು ‘ನನಗೆ ಕಷ್ಟಗಳನ್ನ ಸಹಿಸ್ಕೊಳ್ಳೋಕೆ, ಯೆಹೋವ ದೇವರಿಗೆ ಇನ್ನೂ ಹತ್ರ ಆಗೋಕೆ ನಿಮ್ಮ ಭಾಷಣ ಸಹಾಯ ಮಾಡ್ತು’ ಅಂತ ಹೇಳ್ತಾರೆ. ಮುಂಚೆಗಿಂತ ಈಗ ನನಗೆ ತುಂಬ ಖುಷಿ ಆಗ್ತಿದೆ. ಯಾಕಂದ್ರೆ ಹೊಗಳಿಕೆಯೆಲ್ಲಾ ಯೆಹೋವನಿಗೆ ಸಿಗ್ತಾ ಇದೆ.”
ನಿರ್ದೇಶನ ಪಾಲಿಸಿ, ಧೈರ್ಯ ತೋರಿಸಿ
9. ಗಿದ್ಯೋನ ಯಾವಾಗೆಲ್ಲ ಯೆಹೋವ ಕೊಟ್ಟ ನಿರ್ದೇಶನವನ್ನ ಪಾಲಿಸಬೇಕಿತ್ತು ಮತ್ತು ಧೈರ್ಯ ತೋರಿಸಬೇಕಿತ್ತು? (ಮುಖಪುಟ ಚಿತ್ರ ನೋಡಿ.)
9 ಯೆಹೋವ ಗಿದ್ಯೋನನನ್ನ ನ್ಯಾಯಾಧೀಶನಾಗಿ ನೇಮಿಸಿದಾಗ ಅವನಿಗೆ ಕೆಲವು ಕೆಲಸಗಳನ್ನ ಕೊಟ್ಟನು. ಅದನ್ನ ಮಾಡೋದು ಅಷ್ಟು ಸುಲಭ ಆಗಿರಲಿಲ್ಲ. ಯಾಕಂದ್ರೆ ಅಪ್ಪ ಕಟ್ಟಿದ್ದ ಬಾಳನ ಯಜ್ಞವೇದಿಯನ್ನ ಅವನು ನಾಶ ಮಾಡಬೇಕಿತ್ತು. (ನ್ಯಾಯ. 6:25, 26) ಅಷ್ಟೇ ಅಲ್ಲ, ಅವನು ಸೈನ್ಯ ಕೂಡಿಸ್ಕೊಂಡ ಮೇಲೆ ಸೈನಿಕರನ್ನ ಕಡಿಮೆ ಮಾಡಬೇಕು ಅಂತ ಅವನಿಗೆ ಎರಡು ಸಲ ನಿರ್ದೇಶನ ಸಿಕ್ತು. (ನ್ಯಾಯ. 7:2-7) ಆಮೇಲೆ ಅವನು ಶತ್ರುಗಳ ಸೈನ್ಯದ ಮೇಲೆ ದಾಳಿ ಮಾಡೋಕೆ ಮಧ್ಯರಾತ್ರಿ ಹೋಗಬೇಕಿತ್ತು. (ನ್ಯಾಯ. 7:9-11) ಇದನ್ನೆಲ್ಲ ಮಾಡೋಕೆ ಕಷ್ಟ ಆದ್ರೂ ಅವನು ಯೆಹೋವ ದೇವರು ಕೊಟ್ಟ ನಿರ್ದೇಶನವನ್ನ ಪಾಲಿಸಬೇಕಿತ್ತು ಮತ್ತು ಧೈರ್ಯ ತೋರಿಸಬೇಕಿತ್ತು.
10. ಯಾವಾಗೆಲ್ಲ ಹಿರಿಯರಿಗೆ ನಿರ್ದೇಶನಗಳನ್ನ ಪಾಲಿಸೋಕೆ ಕಷ್ಟ ಆಗಬಹುದು?
10 ಯೆಹೋವನ ‘ಮಾತು ಕೇಳೋಕೆ’ ಹಿರಿಯರು ಯಾವಾಗ್ಲೂ ರೆಡಿ ಇರಬೇಕು. (ಯಾಕೋ. 3:17) ಆಗ ಬೈಬಲಿಂದ ಮತ್ತು ಸಂಘಟನೆಯಿಂದ ಬರೋ ನಿರ್ದೇಶನಗಳನ್ನ ಪಾಲಿಸೋಕೆ ಸುಲಭ ಆಗುತ್ತೆ. ಅವರು ಬೇರೆಯವ್ರಿಗೂ ಮಾದರಿಯಾಗಿ ಇರ್ತಾರೆ. ಆದ್ರೆ ಕೆಲವೊಮ್ಮೆ ಆ ನಿರ್ದೇಶನಗಳನ್ನ ಪಾಲಿಸೋದು ಕಷ್ಟ ಆಗಬಹುದು. ಯಾಕಂದ್ರೆ ಒಂದಾದ ಮೇಲೆ ಒಂದು ನಿರ್ದೇಶನಗಳು ಬರಬಹುದು. ಅದು ಆಗಾಗ ಬದಲಾಗ್ತಾ ಇರಬಹುದು. ಅಥವಾ ಆ ನಿರ್ದೇಶನವನ್ನ ಪಾಲಿಸೋದು ಅಷ್ಟು ಸರಿಯಲ್ಲ ಅಂತ ಅನಿಸಬಹುದು. ಅಷ್ಟೇ ಅಲ್ಲ, ಆ ನಿರ್ದೇಶನವನ್ನ ಪಾಲಿಸಿದ್ರೆ ಜೈಲಿಗೆ ಹೋಗೋ ಪರಿಸ್ಥಿತಿ ಬರುತ್ತೇನೋ ಅಂತ ಭಯ ಆಗಬಹುದು. ಇಂಥ ಸಂದರ್ಭದಲ್ಲೂ ಹಿರಿಯರು ಗಿದ್ಯೋನನ ತರ ಯೆಹೋವನ ಮಾತು ಕೇಳಬೇಕು. ಅದನ್ನ ಮಾಡೋದು ಹೇಗೆ?
11. ಹಿರಿಯರು ಏನು ಮಾಡಬೇಕು?
11 ನಿರ್ದೇಶನಗಳನ್ನ ಸರಿಯಾಗಿ ಅರ್ಥ ಮಾಡ್ಕೊಂಡು ಪಾಲಿಸಿ. ಗಿದ್ಯೋನನ ಅಪ್ಪ ಕಟ್ಟಿಸಿದ್ದ ಯಜ್ಞವೇದಿಯನ್ನ ಹೇಗೆ ಒಡೆದು ಹಾಕಬೇಕು, ಯೆಹೋವನಿಗೋಸ್ಕರ ಹೊಸ ಯಜ್ಞವೇದಿಯನ್ನ ಎಲ್ಲಿ ಕಟ್ಟಬೇಕು, ಅದ್ರ ಮೇಲೆ ಯಾವ ಪ್ರಾಣಿಯನ್ನ ಬಲಿಕೊಡಬೇಕು ಅಂತ ದೇವರು ಅವನಿಗೆ ಹೇಳಿದನು. ಆಗ ಅವನು ‘ಯೆಹೋವ ಹೇಳ್ತಿರೋದು ನಂಗೆ ಯಾಕೋ ಸರಿ ಅನಿಸ್ತಾ ಇಲ್ವಲ್ಲಾ’ ಅಂತ ಯೋಚ್ನೆ ಮಾಡಲಿಲ್ಲ. ಅವನು ದೇವರು ಹೇಳಿದ ಹಾಗೇ ಮಾಡಿದ. ಇವತ್ತು ಹಿರಿಯರಿಗೆ ಪತ್ರಗಳಲ್ಲಿ, ಪ್ರಕಟಣೆಗಳಲ್ಲಿ ತುಂಬ ನಿರ್ದೇಶನಗಳು ಬರುತ್ತೆ. ಅದು ನಮ್ಮ ಆರೋಗ್ಯಕ್ಕೆ, ಯೆಹೋವನ ಆರಾಧನೆಗೆ ಸಂಬಂಧಪಟ್ಟಿರುತ್ತೆ. ಇದನ್ನೆಲ್ಲ ಹಿರಿಯರು ಈಗಾಗ್ಲೇ ಪಾಲಿಸ್ತಿದ್ದಾರೆ. ಇದ್ರಿಂದ ಇಡೀ ಸಭೆ ಪ್ರಯೋಜನ ಪಡ್ಕೊಳ್ತಿದೆ. ಅದಕ್ಕೆ ನಾವು ಹಿರಿಯರನ್ನ ತುಂಬ ಮೆಚ್ಕೊಳ್ತೀವಿ!—ಕೀರ್ತ. 119:112.
12. ಸಂಘಟನೆ ಬದಲಾವಣೆ ಮಾಡಿದಾಗ ಇಬ್ರಿಯ 13:17 ಹೇಳೋ ತರ ಹಿರಿಯರು ಏನು ಮಾಡಬೇಕು?
12 ಬದಲಾವಣೆ ಆದಾಗ ಹೊಂದ್ಕೊಳ್ಳಿ. ಸೈನಿಕರನ್ನ ಕಡಿಮೆ ಮಾಡು ಅಂತ ಯೆಹೋವ ಗಿದ್ಯೋನನಿಗೆ ಹೇಳಿದನು. ಇದ್ರಿಂದ ಅವನು 99 ಪರ್ಸೆಂಟ್‌ಗಿಂತ ಜಾಸ್ತಿ ಜನ್ರನ್ನ ಮನೆಗೆ ಕಳಿಸಬೇಕಾಯ್ತು. (ನ್ಯಾಯ. 7:8) ಆಗ ಅವನಿಗೆ ‘ಈ ಟೈಮಲ್ಲಿ ಇದನ್ನ ಮಾಡಬೇಕಾ? ಇಷ್ಟು ಕಡಿಮೆ ಸೈನಿಕರನ್ನ ಇಟ್ಕೊಂಡು ನಾನೇನು ಮಾಡಲಿ?’ ಅಂತ ಅನಿಸಿರಬಹುದು. ಆದ್ರೂ ಅವನು ಯೆಹೋವನ ಮಾತು ಕೇಳಿದ. ಹಿರಿಯರು ಗಿದ್ಯೋನನ ತರ ಇರಬೇಕು. ಸಂಘಟನೆ ಏನೇ ಬದಲಾವಣೆ ಮಾಡ್ಕೊಳ್ಳೋಕೆ ಹೇಳಿದ್ರೂ ಅದನ್ನ ಮಾಡಬೇಕು. ಈಗಾಗ್ಲೇ ಹಿರಿಯರು ಇದನ್ನ ಮಾಡ್ತಿದ್ದಾರೆ. (ಇಬ್ರಿಯ 13:17 ಓದಿ.) ಅದಕ್ಕೊಂದು ಉದಾಹರಣೆ 2014ರಲ್ಲಿ ಆದ ಒಂದು ಬದಲಾವಣೆ. ಆ ವರ್ಷದಲ್ಲಿ ಸಂಘಟನೆ ಸಭಾಗೃಹಗಳನ್ನ, ಸಮ್ಮೇಳನ ಹಾಲ್‌ಗಳನ್ನ ಕಟ್ಟೋಕೆ ದುಡ್ಡಿನ ವ್ಯವಸ್ಥೆ ಮಾಡೋದ್ರ ಬಗ್ಗೆ ಒಂದು ಬದಲಾವಣೆ ಮಾಡ್ತು. (2 ಕೊರಿಂ. 8:12-14) ಅದೇನಂದ್ರೆ, ಸ್ಥಳೀಯ ಸಭೆಗಳು ‘ಇನ್ನು ಮುಂದೆ ಲೋನ್ ಕಟ್ಟಬೇಕಾಗಿಲ್ಲ’ ಅಂತ ಹೇಳ್ತು. ಅದ್ರ ಬದಲಿಗೆ ಲೋಕದ ಬೇರೆ ಬೇರೆ ಕಡೆ ಇರೋ ಸಹೋದರರು ಹಾಕೋ ಕಾಣಿಕೆಗಳಿಂದ ಎಲ್ಲಿ ಅಗತ್ಯ ಇದ್ಯೋ ಅಲ್ಲಿ ಸಭಾಗೃಹಗಳನ್ನ ಕಟ್ಟಲಾಗುತ್ತೆ ಅಂತ ಹೇಳ್ತು. ಹೋಸೆ ಅನ್ನೋ ಸಹೋದರ ಇದನ್ನ ಕೇಳಿದಾಗ ‘ಇದೆಲ್ಲ ಆಗೋ ಮಾತಲ್ಲ, ಈ ತರ ಆದ್ರೆ ಒಂದು ರಾಜ್ಯ ಸಭಾಗೃಹನೂ ಕಟ್ಟಕ್ಕಾಗಲ್ಲ. ಈ ಕಾಲದಲ್ಲಿ ಇದೆಲ್ಲ ನಡಿಯೋ ಮಾತೇ ಅಲ್ಲ’ ಅಂತ ಅಂದ್ಕೊಂಡ್ರು. ಹೋಸೆ ಈ ಬದಲಾವಣೆಗೆ ಹೊಂದ್ಕೊಳ್ಳೋಕೆ ಯಾವುದು ಸಹಾಯ ಮಾಡ್ತು? “ಜ್ಞಾನೋಕ್ತಿ 3:5, 6 ಯೆಹೋವನ ಮೇಲೆ ನಂಬಿಕೆ ಇಡಬೇಕು ಅಂತ ಹೇಳುತ್ತೆ. ನಾನು ಅದನ್ನೇ ಮಾಡ್ದೆ. ಸಂಘಟನೆ ಈಗ ಆ ದುಡ್ಡಿಂದ ಎಷ್ಟೋ ಸಭಾಗೃಹಗಳನ್ನ ಕಟ್ಟಿದೆ. ಅಷ್ಟೇ ಅಲ್ಲ, ಯೆಹೋವನ ಸೇವೇಲಿ ಬೇರೆ ಬೇರೆ ಕೆಲಸಗಳು ನಡಿಯೋ ಹಾಗೆನೂ ನೋಡ್ಕೊಳ್ತಿದೆ” ಅಂತ ಹೋಸೆ ಹೇಳ್ತಾರೆ.
13. (ಎ) ಗಿದ್ಯೋನನಿಗೆ ಏನು ಗೊತ್ತಿತ್ತು? (ಬಿ) ಹಿರಿಯರು ಗಿದ್ಯೋನನ ತರ ಏನು ಮಾಡಬೇಕು? (ಚಿತ್ರನೂ ನೋಡಿ.)
13 ಯೆಹೋವ ಹೇಳೋದನ್ನ ಧೈರ್ಯವಾಗಿ ಮಾಡಿ. ಯೆಹೋವ ಹೇಳಿದ್ದನ್ನ ಮಾಡೋಕೆ ಭಯ ಆದ್ರೂ, ಕಷ್ಟ ಆದ್ರೂ ಯೆಹೋವನ ಮಾತನ್ನ ಗಿದ್ಯೋನ ಕೇಳಿದ. (ನ್ಯಾಯ. 9:17) ಯೆಹೋವ ದೇವರು ಗಿದ್ಯೋನನಿಗೆ ಧೈರ್ಯ ತುಂಬಿದ ಮೇಲೆ ಅವನಿಗೆ ಯೆಹೋವನ ಮೇಲೆ ನಂಬಿಕೆ ಜಾಸ್ತಿ ಆಯ್ತು. ಆತನ ಜನ್ರನ್ನ ಕಾಪಾಡೋಕೆ ತನಗೆ ಸಹಾಯ ಮಾಡ್ತಾನೆ ಅಂತ ಗೊತ್ತಾಯ್ತು. ಯೆಹೋವನ ಕೆಲಸವನ್ನ ನಿಷೇಧ ಮಾಡಿರೋ ದೇಶಗಳಲ್ಲಿ ಹಿರಿಯರು ಗಿದ್ಯೋನನ ತರ ಇರಬೇಕು. ಅವರು ಈಗಾಗ್ಲೇ ಇಂಥ ಧೈರ್ಯನ ತೋರಿಸ್ತಾ ಇದ್ದಾರೆ. ಕೆಲಸ ಹೋಗಬಹುದು, ತಮ್ಮನ್ನ ಜೈಲಿಗೆ ಹಾಕಬಹುದು, ವಿಚಾರಣೆ ಮಾಡಬಹುದು, ಹೊಡಿಬಹುದು ಅಂತೆಲ್ಲ ಅವ್ರಿಗೆ ಗೊತ್ತು. ಆದ್ರೂ ಕೂಟಗಳನ್ನ ನಡಿಸೋಕೆ, ಸಿಹಿಸುದ್ದಿ ಸಾರೋಕೆ ಬೇಕಾದ ಏರ್ಪಾಡುಗಳನ್ನ ಮಾಡ್ತಾ ಇದ್ದಾರೆ. c ಮಹಾ ಸಂಕಟದ ಸಮಯದಲ್ಲೂ ಅವರು ಇದೇ ತರ ಧೈರ್ಯ ತೋರಿಸಬೇಕಾಗುತ್ತೆ. ಯಾಕಂದ್ರೆ ಆಗ ಬರೋ ನಿರ್ದೇಶನಗಳು ಇನ್ನೂ ಕಷ್ಟ ಇರುತ್ತೆ. ಉದಾಹರಣೆಗೆ, ಆ ಸಮಯದಲ್ಲಿ ಆಲಿಕಲ್ಲಿನ ತರ ಇರೋ ನ್ಯಾಯತೀರ್ಪಿನ ಸಂದೇಶನ ಜನ್ರಿಗೆ ಸಾರೋದು ಹೇಗೆ ಮತ್ತು ಮಾಗೋಗಿನ ಗೋಗ ಆಕ್ರಮಣ ಮಾಡಿದಾಗ ಏನು ಮಾಡಬೇಕು ಅನ್ನೋದ್ರ ಬಗ್ಗೆ ನಿರ್ದೇಶನ ಸಿಗಬಹುದು. ಆಗ ಹಿರಿಯರು ಧೈರ್ಯ ತೋರಿಸಬೇಕಾಗುತ್ತೆ.—ಯೆಹೆ. 38:18; ಪ್ರಕ. 16:21.
ಕಷ್ಟ ಆದ್ರೂ ಸುಸ್ತಾದ್ರೂ ತಾಳ್ಕೊಳ್ಳಿ
14. ನ್ಯಾಯಾಧೀಶನಾಗಿ ಕೆಲಸ ಮಾಡೋಕೆ ಗಿದ್ಯೋನನಿಗೆ ಯಾಕೆ ಅಷ್ಟು ಸುಲಭ ಆಗಿರಲಿಲ್ಲ?
14 ಗಿದ್ಯೋನ ನ್ಯಾಯಾಧೀಶನಾಗಿ ಕೆಲಸ ಮಾಡೋಕೆ ತುಂಬ ಶ್ರಮ ಹಾಕಬೇಕಿತ್ತು. ಅವನು ಮಧ್ಯರಾತ್ರಿಯಲ್ಲಿ ಮಿದ್ಯಾನ್ಯರ ಮೇಲೆ ದಾಳಿ ಮಾಡಿದ. ಆದ್ರೆ ಮಿದ್ಯಾನ್ಯರು ತಪ್ಪಿಸ್ಕೊಂಡು ಓಡಿದ್ರು. ಆಗ ಗಿದ್ಯೋನ ಇಜ್ರೇಲ್ ಕಣಿವೆಯಿಂದ ಯೋರ್ದನ್ ನದಿ ತನಕ ಅವ್ರನ್ನ ಅಟ್ಟಿಸ್ಕೊಂಡು ಹೋದ. ಅದನ್ನ ಮಾಡೋಕೆ ಅವನಿಗೆ ತುಂಬ ಕಷ್ಟ ಆಗಿರುತ್ತೆ. ಯಾಕಂದ್ರೆ ಆ ಪ್ರದೇಶದ ಸುತ್ತ ತುಂಬ ಗಿಡ-ಮರಗಳು ಇದ್ದಿರಬೇಕು. (ನ್ಯಾಯ. 7:22) ಗಿದ್ಯೋನನಿಗೆ ತುಂಬ ಸುಸ್ತಾಗಿ ಹೋಯ್ತು. ಹಾಗಂತ ಅವನು ‘ಸಾಕು ಹೋಗ್ಲಿ’ ಅಂತ ಅಂದ್ಕೊಂಡ್ನಾ? ಇಲ್ಲ. ಅವನು ಮತ್ತು ಅವನ 300 ಸೈನಿಕರು ಆ ನದಿಯನ್ನ ದಾಟಿ ಅವ್ರನ್ನ ಅಟ್ಟಿಸ್ಕೊಂಡು ಹೋದ್ರು. ಕೊನೆಗೆ ಅವ್ರನ್ನ ಸೋಲಿಸಿಬಿಟ್ರು.—ನ್ಯಾಯ. 8:4-12.
15. ಹಿರಿಯರಿಗೆ ಕೆಲವೊಮ್ಮೆ ಯಾಕೆ ಕಷ್ಟ ಆಗಬಹುದು?
15 ಹಿರಿಯರಿಗೆ ತಮ್ಮ ಕುಟುಂಬನ ನೋಡ್ಕೊಳ್ಳೋದರ ಜೊತೆಗೆ ಸಭೆಯನ್ನೂ ನೋಡ್ಕೊಳ್ಳುವಾಗ ಕೆಲವೊಮ್ಮೆ ತುಂಬ ಸುಸ್ತಾಗಿಬಿಡಬಹುದು. ‘ನನ್ನ ಕೈಯಿಂದ ಇನ್ನು ಆಗಲ್ಲ’ ಅಂತ ಅನಿಸಿಬಿಡಬಹುದು. ಆಗ ಹಿರಿಯರು ಗಿದ್ಯೋನನ ತರ ಏನು ಮಾಡಬೇಕು?
16-17. (ಎ) ಗಿದ್ಯೋನ ಏನಂತ ನಂಬಿದ್ದ? (ಬಿ) ಹಿರಿಯರು ಏನನ್ನ ನಂಬಬೇಕು? (ಯೆಶಾಯ 40:28-31) (ಚಿತ್ರನೂ ನೋಡಿ.)
16 ಯೆಹೋವ ಶಕ್ತಿ ಕೊಡ್ತಾನೆ ಅಂತ ನಂಬಿ. ಗಿದ್ಯೋನ ಕೂಡ ಅದನ್ನೇ ನಂಬಿದ. ಅದು ಸುಳ್ಳಾಗಲಿಲ್ಲ, ಯೆಹೋವ ಅವನಿಗೆ ಶಕ್ತಿ ಕೊಟ್ಟನು. (ನ್ಯಾಯ. 6:14, 34) ಒಂದು ಸಲ ಇಬ್ರು ಮಿದ್ಯಾನ್ಯ ರಾಜರನ್ನ ಗಿದ್ಯೋನ ಮತ್ತು ಅವನ ಸೈನಿಕರು ಅಟ್ಟಿಸ್ಕೊಂಡು ಹೋಗ್ತಿದ್ರು. ಆದ್ರೆ ಆ ರಾಜರು ಒಂಟೆ ಮೇಲೆ ಹೋಗ್ತಾ ಇದ್ದಿರಬಹುದು. ಹಾಗಾಗಿ ಓಡ್ತಾ ಅವ್ರನ್ನ ಹಿಡಿಯೋಕೆ ಇಸ್ರಾಯೇಲ್ಯರಿಗೆ ಕಷ್ಟ ಆಗಿರುತ್ತೆ. (ನ್ಯಾಯ. 8:12, 21) ಆದ್ರೂ ಯೆಹೋವ ದೇವರ ಸಹಾಯದಿಂದ ಇವರು ಆ ರಾಜರನ್ನ ಹಿಡಿದ್ರು. ಹಿರಿಯರು ಕೂಡ ಗಿದ್ಯೋನನ ತರ ತಮ್ಮ ನೇಮಕನ ಮಾಡೋಕೆ ಯೆಹೋವ ಶಕ್ತಿ ಕೊಡ್ತಾನೆ ಅಂತ ನಂಬಬೇಕು. ಯಾಕಂದ್ರೆ ಯೆಹೋವ “ಯಾವತ್ತೂ ದಣಿಯಲ್ಲ, ಯಾವತ್ತೂ ಬಳಲಿ ಹೋಗಲ್ಲ.” ಆತನು ಅವ್ರಿಗೆ ಬೇಕಾದ ಶಕ್ತಿನ ಕೊಟ್ಟೇ ಕೊಡ್ತಾನೆ.—ಯೆಶಾಯ 40:28-31 ಓದಿ.
17 ಹಾಸ್ಪಿಟಲ್ ಲಿಏಸಾನ್ ಕಮಿಟಿಯಲ್ಲಿ ಸೇವೆ ಮಾಡ್ತಿರೋ ಸಹೋದರ ಮ್ಯಾಥ್ಯು ಅವ್ರ ಉದಾಹರಣೆ ನೋಡಿ. ಅವರು ಏನು ಹೇಳ್ತಾರಂದ್ರೆ “ಫಿಲಿಪ್ಪಿ 4:13ರಲ್ಲಿ ಹೇಳಿರೋ ಮಾತು ನನ್ನ ಜೀವನದಲ್ಲಿ ನಿಜ ಆಗಿದೆ. ನನ್ನ ನೇಮಕನ ಮಾಡುವಾಗ ಎಷ್ಟೋ ಸಲ ಸುಸ್ತಾಗ್ತಿತ್ತು. ‘ನನ್ನಿಂದ ಇನ್ನು ಮಾಡಕ್ಕಾಗಲ್ಲ’ ಅಂತ ಅನಿಸ್ತಿತ್ತು. ಆಗೆಲ್ಲ ನಾನು ಯೆಹೋವ ದೇವರಿಗೆ ಪ್ರಾರ್ಥನೆ ಮಾಡ್ತಿದ್ದೆ. ನಮ್ಮ ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕೆ ಶಕ್ತಿ ಕೊಡಪ್ಪಾ, ಮನಸ್ಸು ಕೊಡಪ್ಪಾ ಅಂತ ಬೇಡ್ಕೊಳ್ತಿದ್ದೆ. ಆಗೆಲ್ಲ ಯೆಹೋವ ಪವಿತ್ರಶಕ್ತಿ ಕೊಟ್ಟು ನಂಗೆ ತಾಳ್ಕೊಳ್ಳೋಕೆ ಸಹಾಯ ಮಾಡಿದ್ದಾನೆ.” ಗಿದ್ಯೋನನ ತರ ಹಿರಿಯರು ಎಷ್ಟೇ ಕಷ್ಟ ಆದ್ರೂ ಯೆಹೋವನ ಜನ್ರನ್ನ ನೋಡ್ಕೊಳ್ಳೋಕೆ ತುಂಬ ಪ್ರಯತ್ನ ಹಾಕ್ತಿದ್ದಾರೆ. ಆದ್ರೆ ಎಲ್ಲಾನೂ ಒಬ್ರೇ ಮಾಡಕ್ಕಾಗಲ್ಲ ಅನ್ನೋದನ್ನ ಅವರು ಮನಸ್ಸಲ್ಲಿ ಇಟ್ಕೊಬೇಕು. ಅವ್ರಿಂದ ಎಷ್ಟಾಗುತ್ತೋ ಅಷ್ಟನ್ನ ಮಾಡಬೇಕು. ಅದನ್ನ ಮಾಡೋಕೆ ಶಕ್ತಿ ಕೊಡಪ್ಪಾ ಅಂತ ಯೆಹೋವ ದೇವರ ಹತ್ರ ಕೇಳಬೇಕು. ಆಗ ದೇವರು ಖಂಡಿತ ಬಲ ಕೊಡ್ತಾನೆ, ತಾಳ್ಕೊಳ್ಳೋಕೆ ಅವ್ರಿಗೆ ಸಹಾಯ ಮಾಡ್ತಾನೆ.—ಕೀರ್ತ. 116:1; ಫಿಲಿ. 2:13.
18. ಹಿರಿಯರು ಗಿದ್ಯೋನನ ತರ ಏನೆಲ್ಲಾ ಮಾಡಬೇಕು?
18 ಹಿರಿಯರು ಗಿದ್ಯೋನನಿಂದ ತುಂಬ ಪಾಠಗಳನ್ನ ಕಲಿಬಹುದು. ಅವರು ತಮ್ಮ ಇತಿಮಿತಿಗಳನ್ನ ಅರ್ಥ ಮಾಡ್ಕೊಬೇಕು. ತಮ್ಮಿಂದ ಎಷ್ಟಾಗುತ್ತೋ ಅಷ್ಟನ್ನ ಮಾಡಬೇಕು. ಯಾರಾದ್ರೂ ಅವ್ರಲ್ಲಿ ತಪ್ಪು ಹುಡುಕಿದಾಗ ಅಥವಾ ಅವ್ರನ್ನ ಹೊಗಳಿದಾಗ ದೀನತೆ ತೋರಿಸಬೇಕು. ಈ ಲೋಕದ ಅಂತ್ಯ ಹತ್ರ ಆಗ್ತಾ ಇರೋದ್ರಿಂದ ಅವರು ಈಗಿರೋ ಧೈರ್ಯನ ಇನ್ನೂ ಜಾಸ್ತಿ ತೋರಿಸಬೇಕು. ಏನೇ ನಿರ್ದೇಶನ ಬಂದ್ರೂ ಅದನ್ನ ಪಾಲಿಸೋಕೆ ಯಾವಾಗ್ಲೂ ರೆಡಿ ಇರಬೇಕು. ತಮ್ಮ ನೇಮಕನ ಮಾಡೋಕೆ ಕಷ್ಟ ಆದಾಗ, ಸುಸ್ತಾದಾಗ ಯೆಹೋವ ಅವ್ರಿಗೆ ಶಕ್ತಿ ಕೊಡ್ತಾನೆ ಅಂತ ನಂಬಬೇಕು. ಈಗಾಗ್ಲೇ ನಮ್ಮ ಹಿರಿಯರು ಇದನ್ನೆಲ್ಲ ಮಾಡ್ತಿದ್ದಾರೆ. ಇಂಥ ಹಿರಿಯರು ಸಿಕ್ಕಿರೋದು ದೊಡ್ಡ ಆಶೀರ್ವಾದ! ಹಾಗಾಗಿ ನಾವು ‘ಇಂಥ ಸಹೋದರರನ್ನ ಅಮೂಲ್ಯವಾಗಿ ನೋಡೋಣ!’—ಫಿಲಿ. 2:29.
ಗೀತೆ 82 ಕ್ರಿಸ್ತನ ಸೌಮ್ಯಭಾವವನ್ನು ಅನುಕರಿಸಿರಿ
a ಯೆಹೋವ ತನ್ನ ಜನ್ರನ್ನ ಚೆನ್ನಾಗಿ ನೋಡ್ಕೊಳ್ಳೋಕೆ ಮತ್ತು ಅವ್ರನ್ನ ಕಾಪಾಡೋಕೆ ಗಿದ್ಯೋನನನ್ನ ನೇಮಿಸಿದನು. ಈ ನೇಮಕನ ಮಾಡೋದು ಅವನಿಗೆ ಅಷ್ಟು ಸುಲಭ ಆಗಿರಲಿಲ್ಲ. ಆದ್ರೂ ಗಿದ್ಯೋನ 40 ವರ್ಷ ಯೆಹೋವ ಹೇಳಿದ ತರಾನೇ ಮಾಡಿದ. ಹಿರಿಯರಿಗೂ ಕೆಲವೊಮ್ಮೆ ತಮ್ಮ ನೇಮಕನ ಮಾಡೋಕೆ ಕಷ್ಟ ಆಗುತ್ತೆ. ಆಗ ಅವರು ಗಿದ್ಯೋನನ ತರ ಏನು ಮಾಡಬಹುದು?
b ದೀನತೆ ತೋರಿಸೋದಕ್ಕೂ ನಮ್ಮ ಇತಿಮಿತಿಗಳನ್ನ ಅರ್ಥ ಮಾಡ್ಕೊಳ್ಳೋದಕ್ಕೂ ಸಂಬಂಧ ಇದೆ. ನಾವು ನಮ್ಮ ಇತಿಮಿತಿಗಳನ್ನ ಅರ್ಥ ಮಾಡ್ಕೊಂಡ್ರೆ ‘ಬೇರೆಯವ್ರಿಗಿಂತ ನನಗೇ ಎಲ್ಲಾ ಗೊತ್ತು’ ಅಂದ್ಕೊಳ್ಳಲ್ಲ. ನಮ್ಮಿಂದ ಕೆಲವು ಕೆಲಸಗಳನ್ನ ಮಾಡಕ್ಕಾಗಲ್ಲ ಅಂತ ಒಪ್ಕೊಳ್ತೀವಿ. ದೀನತೆ ಇದ್ರೆ ಬೇರೆಯವ್ರನ್ನ ನಮಗಿಂತ ಶ್ರೇಷ್ಠವಾಗಿ ನೋಡ್ತೀವಿ. (ಫಿಲಿ. 2:3) ಹಾಗಾಗಿ ತನ್ನ ಇತಿಮಿತಿಗಳನ್ನ ಅರ್ಥ ಮಾಡ್ಕೊಂಡಿರೋ ವ್ಯಕ್ತಿ ದೀನತೆನೂ ತೋರಿಸ್ತಾನೆ.