ಅಧ್ಯಯನ ಲೇಖನ 25
ಗೀತೆ 23 ಯೆಹೋವನು ನಮ್ಮ ಬಲ
“ಯೆಹೋವ ಜೀವ ಇರೋ ದೇವರು” ಅಂತ ಯಾವಾಗ್ಲೂ ನೆನಪಿಡಿ
“ಯೆಹೋವ ಜೀವ ಇರೋ ದೇವರು!”—ಕೀರ್ತ. 18:46.
ಈ ಲೇಖನದಲ್ಲಿ ಏನಿದೆ?
ನಾವು ‘ಜೀವ ಇರೋ ದೇವರನ್ನ’ ಆರಾಧಿಸ್ತಾ ಇದ್ದೀವಿ ಅನ್ನೋದನ್ನ ಮನಸ್ಸಲ್ಲಿ ಇಟ್ರೆ ನಮಗೆ ತುಂಬ ಪ್ರಯೋಜನ ಆಗುತ್ತೆ.
1. ಸಮಸ್ಯೆಗಳಿದ್ರೂ ಯೆಹೋವನ ಜನರಿಗೆ ಆರಾಧಿಸೋಕೆ ಯಾವುದು ಸಹಾಯ ಮಾಡುತ್ತೆ?
ನಾವು ಜೀವಿಸ್ತಿರೋ ಈ ದಿನಗಳಲ್ಲಿ “ಪರಿಸ್ಥಿತಿ ತುಂಬ ಹದಗೆಡುತ್ತೆ, ತುಂಬ ಕಷ್ಟ ಪಡಬೇಕಾಗುತ್ತೆ” ಅಂತ ಬೈಬಲ್ ಹೇಳುತ್ತೆ. (2 ತಿಮೊ. 3:1) ಸೈತಾನನ ಲೋಕದಲ್ಲಿ ಎಲ್ಲ ಜನರಿಗೆ ಒಂದಲ್ಲ ಒಂದು ಕಷ್ಟ ಇದ್ದೇ ಇರುತ್ತೆ. ಅದ್ರಲ್ಲೂ ನಾವು ಯೆಹೋವನ ಜನರು ಆಗಿರೋದ್ರಿಂದ ಹಿಂಸೆ ಮತ್ತು ವಿರೋಧನೂ ಬರುತ್ತೆ. ಈ ಸಮಸ್ಯೆಗಳಿದ್ರೂ ನಾವು ಯೆಹೋವನನ್ನ ಆರಾಧಿಸ್ತಾ ಇದ್ದೀವಿ. ಯಾಕೆ? ಯಾಕಂದ್ರೆ ಯೆಹೋವ “ಜೀವ ಇರೋ” ದೇವರು ಅಂತ ನಮಗೆ ಗೊತ್ತು.—ಯೆರೆ. 10:10; 2 ತಿಮೊ. 1:12.
2. ಯೆಹೋವನನ್ನ ನಾವು ಯಾಕೆ ಜೀವ ಇರೋ ದೇವರು ಅಂತ ಕರಿಬಹುದು?
2 ನಮಗೆ ಬರೋ ಒಂದೊಂದು ಕಷ್ಟಗಳನ್ನ ಯೆಹೋವ ನೋಡ್ತಾ ಇದ್ದಾನೆ. ಅಷ್ಟೇ ಅಲ್ಲ ನಮಗೆ ಸಹಾಯ ಮಾಡೋಕೆ ಆತನು ಯಾವಾಗ್ಲೂ ರೆಡಿ ಇದ್ದಾನೆ. (2 ಪೂರ್ವ. 16:9; ಕೀರ್ತ. 23:4) ಆತನನ್ನ ಜೀವ ಇರೋ ದೇವರು ಅಂತ ನಾವು ನೋಡಿದ್ರೆ ಸಮಸ್ಯೆಗಳನ್ನ ಸಹಿಸ್ಕೊಳ್ಳೋಕೆ ಶಕ್ತಿ ಸಿಗುತ್ತೆ. ದಾವೀದನಿಗೂ ಹೀಗೇ ಅನಿಸ್ತು. ಅದರ ಬಗ್ಗೆ ನಾವು ಈಗ ನೋಡೋಣ.
3. “ಯೆಹೋವ ಜೀವ ಇರೋ ದೇವರು” ಅಂತ ದಾವೀದ ಹೇಳಿದ ಮಾತಿನ ಅರ್ಥ ಏನು?
3 ದಾವೀದ ಯೆಹೋವನ ಬಗ್ಗೆ ಚೆನ್ನಾಗಿ ತಿಳ್ಕೊಂಡಿದ್ದ ಮತ್ತು ಆತನು ಸಹಾಯ ಮಾಡ್ತಾನೆ ಅನ್ನೋ ನಂಬಿಕೆನೂ ಇಟ್ಟಿದ್ದ. ಅವನನ್ನ ಸೌಲ ಮತ್ತು ಬೇರೆಯವರು ಕೊಲ್ಲೋಕೆ ನೋಡಿದಾಗ ಯೆಹೋವ ದೇವರ ಹತ್ರ ಸಹಾಯಕ್ಕಾಗಿ ಅವನು ಪ್ರಾರ್ಥಿಸಿದ. (ಕೀರ್ತ. 18:6) ಅವನ ಪ್ರಾರ್ಥನೆಗೆ ಯೆಹೋವ ದೇವರು ಉತ್ತರ ಕೊಟ್ಟರು ಮತ್ತು ಅವನಿಗೆ ಸಹಾಯನೂ ಮಾಡಿದ್ರು. ಆಮೇಲೆ ಅವನು “ಯೆಹೋವ ಜೀವ ಇರೋ ದೇವರು!” ಅಂತ ಹೇಳಿದ. (ಕೀರ್ತ. 18:46) ದಾವೀದ ಹೇಳಿದ ಮಾತಿನ ಅರ್ಥ ದೇವರು ಇದ್ದಾನೆ ಅಂತ ಹೇಳೋದು ಅಷ್ಟೇ ಆಗಿರಲಿಲ್ಲ. ಬದಲಿಗೆ “ಜೀವ ಇರೋ ದೇವರು ತನ್ನ ಸೇವಕರನ್ನ ಕಾದು ಕಾಪಾಡ್ತಾನೆ” ಅನ್ನೋ ನಂಬಿಕೆ ದಾವೀದನಿಗಿತ್ತು ಅಂತ ಒಂದು ರೆಫರೆನ್ಸ್ ಹೇಳುತ್ತೆ. ದಾವೀದನಿಗೆ ಯೆಹೋವ ಜೀವ ಇರೋ ದೇವರಂತ ತನ್ನ ಅನುಭವದಿಂದಲೇ ಅರ್ಥ ಆಯ್ತು. ಅದಕ್ಕೆ ಅವನು ಯೆಹೋವನನ್ನ ಯಾವಾಗ್ಲೂ ಆರಾಧಿಸಬೇಕು ಮತ್ತು ಆತನನ್ನ ಹೊಗಳಬೇಕು ಅಂತ ತೀರ್ಮಾನ ಮಾಡಿದ್ದ.—ಕೀರ್ತ. 18:28, 29, 49.
4. ಯೆಹೋವ ಜೀವ ಇರೋ ದೇವರು ಅಂತ ನಾವು ನಂಬಿದ್ರೆ ಏನು ಪ್ರಯೋಜನ ಆಗುತ್ತೆ?
4 ಯೆಹೋವ ಜೀವ ಇರೋ ದೇವರು ಅಂತ ನಾವು ನಂಬಿದ್ರೆ ಖುಷಿಖುಷಿಯಾಗಿ ನಮಗೆ ಆತನನ್ನ ಆರಾಧಿಸೋಕೆ ಆಗುತ್ತೆ. ಎಷ್ಟೇ ಕಷ್ಟಗಳು ಬಂದ್ರೂ ಅದನ್ನ ಸಹಿಸ್ಕೊಳ್ಳೋಕೆ ಶಕ್ತಿ ಸಿಗುತ್ತೆ ಮತ್ತು ಯಾವಾಗ್ಲೂ ಆತನ ಸೇವೆ ಮಾಡ್ತಾ ಇರೋಕೆ ಪ್ರೋತ್ಸಾಹ ಸಿಗುತ್ತೆ. ಅಷ್ಟೇ ಅಲ್ಲ ಆತನಿಗೆ ಯಾವಾಗ್ಲೂ ಹತ್ರ ಆಗಿರಬೇಕು ಅಂತಾನೂ ಅನಿಸುತ್ತೆ.
ಜೀವ ಇರೋ ದೇವರು ನಿಮಗೆ ಶಕ್ತಿ ಕೊಡ್ತಾನೆ
5. ಸಮಸ್ಯೆಗಳು ಬರುವಾಗ ನಾವು ಯಾವ ಭರವಸೆ ಇಡಬಹುದು? (ಫಿಲಿಪ್ಪಿ 4:13)
5 ಯೆಹೋವ ಜೀವ ಇರೋ ದೇವರು ಅನ್ನೋ ನಂಬಿಕೆ ಇರಬೇಕು. ಸಮಸ್ಯೆಗಳು ಬಂದಾಗ ಆತನು ನಮಗೆ ಸಹಾಯ ಮಾಡ್ತಾನೆ ಅನ್ನೋದನ್ನ ನಾವು ಮರಿಬಾರದು. ಹೀಗೆ ಮಾಡಿದ್ರೆ ಸಮಸ್ಯೆಗಳು ದೊಡ್ಡದಾಗಿರಲಿ ಚಿಕ್ಕದಾಗಿರಲಿ ಅದನ್ನ ಸಹಿಸ್ಕೊಳ್ಳೋಕೆ ನಮಗೆ ಖಂಡಿತ ಆಗುತ್ತೆ. ಸಮಸ್ಯೆ ಎಷ್ಟೇ ದೊಡ್ಡದಾಗಿದ್ರೂ ಅದು ಯೆಹೋವನ ಮುಂದೆ ಏನೇನೂ ಅಲ್ಲ. ಯಾಕಂದ್ರೆ ಆತನು ಸರ್ವಶಕ್ತ ದೇವರಾಗಿರೋದ್ರಿಂದ ನಮಗೆ ಬೇಕಾದ ಶಕ್ತಿಯನ್ನ ಕೊಟ್ಟೇ ಕೊಡ್ತಾನೆ. (ಫಿಲಿಪ್ಪಿ 4:13 ಓದಿ.) ಹಾಗಾಗಿ ಎಷ್ಟೇ ದೊಡ್ಡ ಸಮಸ್ಯೆ ಬಂದ್ರೂ ಅದನ್ನ ನಾವು ಧೈರ್ಯವಾಗಿ ಎದುರಿಸಬಹುದು. ಚಿಕ್ಕಚಿಕ್ಕ ಸಮಸ್ಯೆಗಳು ಬಂದಾಗ ಯೆಹೋವ ನಮಗೆ ಹೇಗೆಲ್ಲ ಸಹಾಯ ಮಾಡಿದ್ದಾನೆ ಅಂತ ನೆನಪಿಟ್ರೆ ದೊಡ್ಡದೊಡ್ಡ ಸಮಸ್ಯೆಗಳು ಬರುವಾಗ್ಲೂ ಆತನು ನಮಗೆ ಸಹಾಯ ಮಾಡ್ತಾನೆ ಅನ್ನೋ ಭರವಸೆ ಇಡಬಹುದು.
6. ಚಿಕ್ಕವನಾಗಿದ್ದಾಗ ದಾವೀದನಿಗೆ ಆದ ಯಾವ ಅನುಭವದಿಂದ ಯೆಹೋವನ ಮೇಲಿದ್ದ ಅವನ ನಂಬಿಕೆ ಜಾಸ್ತಿ ಆಯ್ತು?
6 ದಾವೀದನ ಜೀವನದಲ್ಲಿ ನಡೆದ ಎರಡು ಘಟನೆ ಅವನಿಗೆ ಯೆಹೋವನ ಮೇಲಿದ್ದ ಭರವಸೆ ಜಾಸ್ತಿ ಮಾಡ್ತು. ಅವನು ಚಿಕ್ಕವನಾಗಿದ್ದಾಗ ಏನಾಯ್ತು ನೋಡಿ. ಒಂದಿನ ಅವನು ಕುರಿಗಳನ್ನ ಮೇಯಿಸ್ತಿದ್ದಾಗ ಕರಡಿ ಬಂತು, ಇನ್ನೊಂದು ಸಲ ಸಿಂಹ ಬಂತು. ಆದರೆ ಅವನು ಆ ಎರಡು ಪ್ರಾಣಿಗಳನ್ನ ಕೊಂದು ತನ್ನ ಕುರಿಗಳನ್ನ ಕಾಪಾಡಿದ. ಇದೆಲ್ಲ ತನ್ನಿಂದಾನೇ ಆಗಿದ್ದು ಅಂತ ಅವನು ಯಾವತ್ತೂ ಅಂದ್ಕೊಂಡಿಲ್ಲ. ಬದಲಿಗೆ ಯೆಹೋವನ ಸಹಾಯದಿಂದನೇ ಮಾಡಿದ್ದು ಅಂತ ಅವನಿಗೆ ಗೊತ್ತಿತ್ತು. (1 ಸಮು. 17:34-37) ಇದು ಅವನ ಜೀವನದಲ್ಲೇ ಮರಿಯೋಕೆ ಆಗದಿರೋ ಘಟನೆಗಳಾಗಿತ್ತು. ಇದರ ಬಗ್ಗೆ ಅವನು ಯೋಚಿಸಿದಾಗ, ಜೀವ ಇರೋ ಯೆಹೋವ ದೇವರು ಮುಂದೇನೂ ತನಗೆ ಸಹಾಯ ಮಾಡ್ತಾನೆ ಅನ್ನೋ ನಂಬಿಕೆ ಜಾಸ್ತಿ ಆಯ್ತು.
7. (ಎ) ದಾವೀದ ಯಾವುದರ ಬಗ್ಗೆ ಯೋಚನೆ ಮಾಡಿದ? (ಬಿ) ಅದು ಗೊಲ್ಯಾತನ ವಿರುದ್ಧ ಹೋರಾಡೋಕೆ ಹೇಗೆ ಸಹಾಯ ಮಾಡಿತು?
7 ಇನ್ನೊಂದು ಸಲ ಏನಾಯ್ತು ಅಂತ ನೋಡಿ. ಹದಿವಯಸ್ಸಲ್ಲಿದ್ದ ದಾವೀದ ಒಂದು ಸಲ ಇಸ್ರಾಯೇಲ್ ಸೈನ್ಯ ಪಾಳೆಯ ಹಾಕಿದ್ದ ಜಾಗಕ್ಕೆ ಹೋಗ್ತಾನೆ. ಆಗ ಫಿಲಿಷ್ಟಿಯರ ಸೈನ್ಯದಲ್ಲಿದ್ದ ದೈತ್ಯನಾದ ಗೊಲ್ಯಾತ ಅನ್ನೋನು ‘ಇಸ್ರಾಯೇಲಿನ ಸೈನ್ಯಕ್ಕೆ ಸವಾಲು’ ಹಾಕಿದ್ರಿಂದ ಸೈನಿಕರೆಲ್ಲ ಕಂಗಾಲಾಗಿದ್ದಾರೆ ಅಂತ ಅವನಿಗೆ ಗೊತ್ತಾಗುತ್ತೆ. (1 ಸಮು. 17:10, 11) ಗೊಲ್ಯಾತನನ್ನ ನೋಡಿ ಮತ್ತು ಅವನು ಹೇಳಿದ್ದನ್ನ ಕೇಳಿಸ್ಕೊಂಡು ಸೈನಿಕರೆಲ್ಲ ತುಂಬ ಹೆದರಿಕೊಂಡಿದ್ರು. (1 ಸಮು. 17:24, 25) ಆದರೆ ದಾವೀದ ಅವರ ತರ ಯೋಚನೆ ಮಾಡ್ಲಿಲ್ಲ. ಗೊಲ್ಯಾತ ಇಸ್ರಾಯೇಲ್ಯರ ಸೈನ್ಯವನ್ನ ಅಷ್ಟೇ ಅಲ್ಲ “ಜೀವ ಇರೋ ದೇವರ ಸೈನ್ಯವನ್ನ” ಕೆಣಕ್ತಿದ್ದಾನೆ ಅಂತ ಅರ್ಥಮಾಡ್ಕೊಂಡ. (1 ಸಮು. 17:26) ಅವನು ಯೆಹೋವನ ಬಗ್ಗೆನೇ ಯೋಚನೆ ಮಾಡ್ತಿದ್ದ. ಹಿಂದೆ ತನ್ನ ಕುರಿಗಳನ್ನ ಕಾಪಾಡೋಕೆ ಯೆಹೋವ ಹೇಗೆ ಸಹಾಯ ಮಾಡಿದ್ನೋ ಹಾಗೆ ಈ ಸನ್ನಿವೇಶದಲ್ಲೂ ಸಹಾಯ ಮಾಡ್ತಾನೆ ಅಂತ ನಂಬಿಕೆ ಇಟ್ಟ. ಅದಕ್ಕೆ ದಾವೀದ ಯೆಹೋವನ ಸಹಾಯದಿಂದ ಗೊಲ್ಯಾತನ ವಿರುದ್ಧ ಹೋರಾಡಿ ಜಯಗಳಿಸ್ತಾನೆ.—1 ಸಮು. 17:45-51.
8. ಯೆಹೋವ ನಿಮಗೆ ಯಾವಾಗ್ಲೂ ಸಹಾಯ ಮಾಡ್ತಾನೆ ಅನ್ನೋ ನಂಬಿಕೆನ ಜಾಸ್ತಿ ಮಾಡ್ಕೊಳ್ಳೋಕೆ ನೀವೇನು ಮಾಡಬೇಕು? (ಚಿತ್ರ ನೋಡಿ.)
8 ಜೀವ ಇರೋ ದೇವರು ನಮಗೆ ಸಹಾಯ ಮಾಡೋಕೆ ಯಾವಾಗ್ಲೂ ರೆಡಿ ಇದ್ದಾನೆ ಅಂತ ಯೋಚಿಸುವಾಗ ಯಾವುದೇ ಸಮಸ್ಯೆ ಬಂದ್ರೂ ಅದನ್ನ ನಾವು ಜಯಿಸೋಕೆ ಆಗುತ್ತೆ. (ಕೀರ್ತ. 118:6) ಹಿಂದೆ ತನ್ನ ಸೇವಕರಿಗೆಲ್ಲ ಆತನು ಹೇಗೆ ಸಹಾಯ ಮಾಡಿದ ಅಂತ ಬೈಬಲಲ್ಲಿದೆ. ಅದನ್ನ ಓದುವಾಗ್ಲೂ ನಮಗೆ ಆತನ ಮೇಲೆ ನಂಬಿಕೆ ಜಾಸ್ತಿ ಆಗುತ್ತೆ. (ಯೆಶಾ. 37:17, 33-37) jw.orgನಲ್ಲಿ ನಮ್ಮ ಸಹೋದರ ಸಹೋದರಿಯರಿಗೆ ಆತನು ಹೇಗೆ ಸಹಾಯ ಮಾಡಿದ್ದಾನೆ ಅನ್ನೋ ಅನುಭವಗಳಿವೆ. ಅದರ ಬಗ್ಗೆ ಮತ್ತು ಯೆಹೋವ ನಿಮಗೆ ಹೇಗೆ ಸಹಾಯ ಮಾಡಿದ್ದಾನೆ ಅನ್ನೋದ್ರ ಬಗ್ಗೆ ಯೋಚಿಸಿ. ಯೆಹೋವ ನಿಮ್ಮನ್ನ ಕರಡಿಯಿಂದ, ಸಿಂಹದಿಂದ ಕಾಪಾಡಿರಲಿಕ್ಕಿಲ್ಲ ನಿಜ. ಆದರೆ ಖಂಡಿತ ನಿಮ್ಮ ಜೀವನದಲ್ಲಿ ತುಂಬ ಸಹಾಯ ಮಾಡಿರುತ್ತಾನೆ. ತನ್ನ ಸ್ನೇಹಿತರಾಗಿರೋಕೆ ನಿಮಗೆ ಅವಕಾಶ ಕೊಟ್ಟಿದ್ದಾನೆ. (ಯೋಹಾ. 6:44) ಅಷ್ಟೇ ಅಲ್ಲ ಆತನು ಇಲ್ಲಿವರೆಗೂ ಸಹಾಯ ಮಾಡಿದ್ರಿಂದಾನೇ ನಾವು ಈಗಲೂ ಸತ್ಯದಲ್ಲಿ ಇದ್ದೀವಿ. ನಿಮ್ಮ ಪ್ರಾರ್ಥನೆಗೆ ಆತನು ಹೇಗೆ ಉತ್ತರ ಕೊಟ್ಟಿದ್ದಾನೆ ಮತ್ತು ನಿಮಗೆ ಕಷ್ಟಗಳು ಬಂದಾಗ ಆತನು ಹೇಗೆ ಸಹಾಯ ಮಾಡಿದ್ದಾನೆ ಅಂತ ನೆನಪು ಮಾಡ್ಕೊಳ್ಳೋಕೆ ಆತನ ಹತ್ರ ಸಹಾಯ ಕೇಳಿ. ಈ ತರ ನೀವು ಯೋಚನೆ ಮಾಡಿದ್ರೆ ಯೆಹೋವ ನಿಮ್ಮನ್ನ ಯಾವಾಗ್ಲೂ ಕಾದು ಕಾಪಾಡ್ತಾನೆ ಅನ್ನೋ ಭರವಸೆ ಜಾಸ್ತಿ ಆಗುತ್ತೆ.
9. ಕಷ್ಟಗಳು ಬಂದಾಗ ನೀವು ಏನನ್ನ ನೆನಪಿಡಬೇಕು? (ಜ್ಞಾನೋಕ್ತಿ 27:11)
9 ಯೆಹೋವ ಜೀವ ಇರೋ ದೇವರು ಅಂತ ಅರ್ಥ ಮಾಡ್ಕೊಂಡ್ರೆ ಸಮಸ್ಯೆಗಳು ಬಂದಾಗ ನಾವು ಸೋತು ಹೋಗಲ್ಲ. ಯಾಕೆ ಹಾಗೆ ಹೇಳಬಹುದು? ಸಮಸ್ಯೆಗಳು ಬಂದಾಗ ನಾವು ಒಂದು ಪ್ರಾಮುಖ್ಯ ವಿಷಯನ ನೆನಪಲ್ಲಿಡಬೇಕು. ಅದೇನಂದ್ರೆ ಕಷ್ಟಗಳು ಬಂದಾಗ ನಾವು ಯೆಹೋವನನ್ನ ಬಿಟ್ಟುಬಿಡ್ತೀವಿ ಅಂತ ಸೈತಾನ ಆರೋಪ ಹಾಕಿದ್ದಾನೆ. (ಯೋಬ 1:10, 11; ಜ್ಞಾನೋಕ್ತಿ 27:11 ಓದಿ.) ಕಷ್ಟಗಳು ಬಂದಾಗ್ಲೂ ನಿಯತ್ತಾಗಿದ್ರೆ ನಮಗೆ ಯೆಹೋವನ ಮೇಲೆ ಎಷ್ಟು ಪ್ರೀತಿ ಇದೆ ಅಂತ ತೋರಿಸ್ತೀವಿ ಮತ್ತು ಸೈತಾನ ಸುಳ್ಳುಗಾರ ಅಂತ ನಿರೂಪಿಸ್ತೀವಿ. ಸರ್ಕಾರದಿಂದ ನೀವು ವಿರೋಧ ಎದುರಿಸ್ತಿದ್ದೀರಾ? ನಿಮಗೆ ಆರ್ಥಿಕ ಸಮಸ್ಯೆಗಳು ಇದೆಯಾ? ನೀವು ಸಿಹಿಸುದ್ದಿ ಹೇಳುವಾಗ ಜನರು ಕೇಳಿಸ್ಕೊಳ್ತಿಲ್ವಾ? ಅಥವಾ ನಿಮಗೆ ಬೇರೆ ಯಾವುದಾದ್ರೂ ಕಷ್ಟಗಳು ಇದೆಯಾ? ಹಾಗಿದ್ರೆ ಯೆಹೋವನ ಮನಸ್ಸನ್ನ ಖುಷಿ ಪಡಿಸೋಕೆ ಇದೆಲ್ಲ ಒಂದು ಅವಕಾಶ ಅಂತ ನೆನಸಿ. ಒಂದು ವಿಷಯ ನೆನಪಿಡಿ ನಿಮಗೆ ಸಹಿಸ್ಕೊಳ್ಳೋಕೆ ಆಗದೆ ಇರುವಷ್ಟು ಮಟ್ಟಿಗೆ ಕಷ್ಟ ಬರೋಕೆ ಆತನು ಬಿಡಲ್ಲ. (1ಕೊರಿಂ. 10:13) ಅಷ್ಟೇ ಅಲ್ಲ ಕಷ್ಟಗಳನ್ನ ಎದುರಿಸೋಕೆ ಬೇಕಾದ ಶಕ್ತಿನೂ ಕೊಡ್ತಾನೆ.
ಜೀವ ಇರೋ ದೇವರು ನಿಮಗೆ ಪ್ರತಿಫಲ ಕೊಟ್ಟೆ ಕೊಡ್ತಾನೆ
10. ತನ್ನನ್ನ ಆರಾಧಿಸೋರಿಗೆ ಜೀವ ಇರೋ ದೇವರು ಯಾವ ಪ್ರತಿಫಲ ಕೊಡ್ತಾನೆ?
10 ಯೆಹೋವ ತನ್ನನ್ನ ಆರಾಧಿಸೋರಿಗೆ ಪ್ರತಿಫಲ ಕೊಟ್ಟೆ ಕೊಡ್ತಾನೆ. (ಇಬ್ರಿ 11:6) ಈಗ ನಾವು ನೆಮ್ಮದಿಯಿಂದ ಸಂತೃಪ್ತಿಯಿಂದ ಜೀವನ ಮಾಡೋಕೆ ಆತನು ಸಹಾಯ ಮಾಡ್ತಾನೆ ಮತ್ತು ಮುಂದೆ ಹೊಸ ಲೋಕದಲ್ಲಿ ಶಾಶ್ವತವಾಗಿ ಜೀವಿಸೋ ಅವಕಾಶ ಕೊಡ್ತಾನೆ. ಈ ಪ್ರತಿಫಲ ಕೊಡೋಕೆ ಆತನಿಗೆ ಶಕ್ತಿ ಇರೋದ್ರಿಂದ ಮತ್ತು ಆಸೆ ಇರೋದ್ರಿಂದ ನಾವು ಆತನನ್ನ ನಂಬಬಹುದು. ಈ ನಂಬಿಕೆ ಇದ್ರೆ ನಾವು ಹಿಂದಿನ ಕಾಲದ ಸೇವಕರ ತರ ಯೆಹೋವನ ಸೇವೆಯಲ್ಲಿ ಬಿಜ಼ಿಯಾಗಿ ಇರ್ತೀವಿ. ಒಂದನೇ ಶತಮಾನದಲ್ಲಿ ಇದ್ದ ತಿಮೊತಿ ಕೂಡ ಇದನ್ನೇ ಮಾಡಿದ.—ಇಬ್ರಿ. 6:10-12.
11. ಸಹೋದರ ಸಹೋದರಿಯರಿಗೋಸ್ಕರ ತಿಮೊತಿ ಯಾಕೆ ಕಷ್ಟಪಟ್ಟು ಕೆಲಸ ಮಾಡಿದ? (1 ತಿಮೊತಿ 4:10)
11 1 ತಿಮೊತಿ 4:10 ಓದಿ. ತಿಮೊತಿಗೆ ಜೀವ ಇರೋ ದೇವರ ಮೇಲೆ ತುಂಬ ನಂಬಿಕೆ ಇತ್ತು. ಅದಕ್ಕೆ ಅವನು ಆತನ ಸೇವೆ ಮಾಡಿದ ಮತ್ತು ಸಹೋದರ ಸಹೋದರಿಯರಿಗೆ ಸಹಾಯ ಮಾಡಿದ. ಪೌಲ ಅವನಿಗೆ ಸಭೆಯಲ್ಲಿ ಚೆನ್ನಾಗಿ ಕಲಿಸೋಕೆ, ಚೆನ್ನಾಗಿ ಸಾರೋಕೆ ಪ್ರೋತ್ಸಾಹ ಕೊಟ್ಟ. ಅಷ್ಟೇ ಅಲ್ಲ ಚಿಕ್ಕವರಿಗೂ ದೊಡ್ಡವರಿಗೂ ಎಲ್ಲರಿಗೂ ಒಳ್ಳೆ ಮಾದರಿಯಾಗಿರು ಅಂತನೂ ಹೇಳಿದ. ಅವನು ಸಭೆಯಲ್ಲಿ ಇರೋರಿಗೆ ಸಲಹೆ ಕೊಡಬೇಕಿತ್ತು, ಪ್ರೀತಿಯಿಂದ ಬುದ್ಧಿ ಹೇಳಬೇಕಿತ್ತು. ಕಷ್ಟ ಆದ್ರೂ ಅವನು ಈ ನೇಮಕನ ಮಾಡಿದ. (1 ತಿಮೊ. 4:11-16; 2 ತಿಮೊ. 4:1-5) ತಾನು ಮಾಡೋ ಸೇವೆಯನ್ನ ಬೇರೆಯವರು ನೋಡಿಲ್ಲ ಅಂದ್ರೂ, ಅದಕ್ಕೆ ಬೆಲೆ ಕೊಟ್ಟಿಲ್ಲ ಅಂದ್ರೂ ಯೆಹೋವ ಅದಕ್ಕೆ ಪ್ರತಿಫಲ ಕೊಟ್ಟೆ ಕೊಡ್ತಾನೆ ಅನ್ನೋ ನಂಬಿಕೆ ತಿಮೊತಿಗಿತ್ತು.—ರೋಮ. 2:6, 7.
12. ಹಿರಿಯರು ಯಾಕೆ ಕಷ್ಟಪಟ್ಟು ಸೇವೆ ಮಾಡ್ತಾರೆ? (ಚಿತ್ರ ನೋಡಿ.)
12 ಅದೇ ತರ ಇವತ್ತು ಹಿರಿಯರು ಸಹ ತಾವು ಮಾಡ್ತಿರೋ ಸೇವೆಯನ್ನ ಯೆಹೋವ ನೋಡ್ತಿದ್ದಾನೆ ಮತ್ತು ಅದಕ್ಕೆ ತುಂಬ ಬೆಲೆ ಕೊಡ್ತಾನೆ ಅಂತ ನಂಬಬಹುದು. ಹಿರಿಯರು ಪರಿಪಾಲನಾ ಭೇಟಿಗಳನ್ನ ಮಾಡ್ತಾರೆ, ಸಭೆಯಲ್ಲಿ ಕಲಿಸ್ತಾರೆ, ಸಿಹಿಸುದ್ದಿ ಸಾರ್ತಾರೆ. ಎಷ್ಟೋ ಹಿರಿಯರು ನಿರ್ಮಾಣ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡ್ತಿದ್ದಾರೆ ಮತ್ತು ವಿಪತ್ತು ಪರಿಹಾರ ಕೆಲಸನೂ ಮಾಡ್ತಿದ್ದಾರೆ. ಇನ್ನು ಕೆಲವರು ರೋಗಿಗಳನ್ನು ಭೇಟಿಮಾಡುವ ಗುಂಪುಗಳಲ್ಲಿ (PVG), ಆಸ್ಪತ್ರೆ ಸಂಪರ್ಕ ಸಮಿತಿಯಲ್ಲಿ(HLC)ಕೆಲಸ ಮಾಡ್ತಿದ್ದಾರೆ. ಇಷ್ಟೆಲ್ಲ ಕೆಲಸ ಮಾಡ್ತಿರೋ ಹಿರಿಯರಿಗೆ ಈ ಏರ್ಪಾಡನ್ನ ಮಾಡಿರೋದು ಮನುಷ್ಯರಲ್ಲ ಯೆಹೋವನೇ ಅನ್ನೋ ನಂಬಿಕೆ ಇದೆ. ಇದ್ರಿಂದಾಗಿ ಅವರು ತಮಗೆ ಕೊಟ್ಟಿರೋ ಕೆಲಸನ ಮನಸ್ಸಾರೆ ಮಾಡ್ತಾರೆ ಮತ್ತು ತಾವು ಮಾಡೋ ಕೆಲಸಕ್ಕೆ ಯೆಹೋವ ಖಂಡಿತ ಪ್ರತಿಫಲ ಕೊಟ್ಟೆ ಕೊಡ್ತಾನೆ ಅನ್ನೋ ನಂಬಿಕೆನೂ ಅವರಿಗಿದೆ.—ಕೊಲೊ. 3:23, 24.
13. ನಾವು ಕಷ್ಟಪಟ್ಟು ಯೆಹೋವನ ಸೇವೆ ಮಾಡುವಾಗ ಆತನಿಗೆ ಹೇಗನಿಸುತ್ತೆ?
13 ಹಿರಿಯರಿಗೆ ಅಷ್ಟೇ ಅಲ್ಲ ನಮ್ಮೆಲ್ಲರಿಗೂ ಯೆಹೋವನ ಸೇವೆ ಮಾಡೋಕೆ ಆಗುತ್ತೆ. ನಾವು ಆತನ ಸೇವೆ ಮಾಡೋಕೆ ನಮ್ಮಿಂದಾದ ಎಲ್ಲ ಪ್ರಯತ್ನ ಮಾಡುವಾಗ ಆತನು ಅದನ್ನ ಮೆಚ್ಕೊಳ್ತಾನೆ. ಲೋಕವ್ಯಾಪಕ ಕೆಲಸಕ್ಕೆ ನಾವು ಚಿಕ್ಕ ಕಾಣಿಕೆ ಕೊಟ್ರೂ ಆತನು ಅದನ್ನ ಅಮೂಲ್ಯವಾಗಿ ನೋಡ್ತಾನೆ. ನಮಗೆ ನಾಚಿಕೆ ಸ್ವಭಾವ ಇದ್ರೂ ಕೂಟಗಳಲ್ಲಿ ಕೈ ಎತ್ತಿ ಉತ್ತರ ಕೊಡುವಾಗ, ನಮ್ಮ ಮನಸ್ಸಿಗೆ ನೋವು ಮಾಡಿರೋರನ್ನ ಕ್ಷಮಿಸುವಾಗ ಯೆಹೋವನಿಗೆ ತುಂಬ ಖುಷಿ ಆಗುತ್ತೆ. ಕೆಲವೊಮ್ಮೆ ನಾವು ಅಂದ್ಕೊಂಡಷ್ಟು ಸೇವೆ ಮಾಡೋಕೆ ಆಗದಿದ್ದಾಗ ತುಂಬ ಬೇಜಾರಾಗುತ್ತೆ. ಆದ್ರೆ ನಾವು ಹಾಕೋ ಪ್ರಯತ್ನನ ಯೆಹೋವ ಅಮೂಲ್ಯವಾಗಿ ನೋಡ್ತಾನೆ. ಅಷ್ಟೇ ಅಲ್ಲ ನಮ್ಮನ್ನ ಪ್ರೀತಿಸ್ತಾನೆ ಮತ್ತು ನಮಗೆ ಪ್ರತಿಫಲ ಕೊಟ್ಟೆ ಕೊಡ್ತಾನೆ.—ಲೂಕ 21:1-4.
ಜೀವ ಇರೋ ದೇವರಿಗೆ ಯಾವಾಗ್ಲೂ ಹತ್ರ ಆಗಿರಿ
14. ಯೆಹೋವನ ಜೊತೆ ಒಳ್ಳೆ ಸ್ನೇಹ ಬೆಳೆಸ್ಕೊಂಡ್ರೆ ಏನು ಪ್ರಯೋಜನ ಆಗುತ್ತೆ? (ಚಿತ್ರ ನೋಡಿ.)
14 ನಾವು ಯೆಹೋವನ ಜೊತೆ ಒಳ್ಳೆ ಫ್ರೆಂಡ್‌ಶಿಪ್ಪನ್ನ ಬೆಳೆಸ್ಕೊಂಡ್ರೆ ಆತನ ಮನಸ್ಸನ್ನ ಖುಷಿಪಡಿಸ್ತೀವಿ. ಯೋಸೇಫನೂ ಹಾಗೆ ಮಾಡಿದ. ಅನೈತಿಕತೆ ಮಾಡೋಕೆ ಒತ್ತಡ ಬಂದಾಗ ಯೆಹೋವ ಅದನ್ನ ಇಷ್ಟಪಡಲ್ಲ ಅಂತ ಅವನಿಗೆ ಗೊತ್ತಿತ್ತು. ಅದಕ್ಕೆ ಅವನು ತಪ್ಪು ಮಾಡಲಿಲ್ಲ. (ಆದಿ. 39:9) ನಾವು ಯೆಹೋವನ ಜೊತೆ ಒಳ್ಳೆ ಫ್ರೆಂಡ್‌ಶಿಪ್ಪನ್ನ ಬೆಳೆಸ್ಕೊಂಡ್ರೆ ಆತನ ವಾಕ್ಯವಾದ ಬೈಬಲನ್ನ ಓದೋಕೆ ಮತ್ತು ಆತನಿಗೆ ಪ್ರಾರ್ಥನೆ ಮಾಡೋಕೆ ಸಮಯ ಮಾಡ್ಕೊಳ್ತೀವಿ. ಆಗ ಆತನ ಜೊತೆಗಿರೋ ನಮ್ಮ ಸ್ನೇಹ ಸಂಬಂಧ ಇನ್ನೂ ಗಟ್ಟಿ ಆಗುತ್ತೆ. ಅಷ್ಟೇ ಅಲ್ಲ ನಾವು ಯೋಸೇಫನ ತರ ಯೆಹೋವನಿಗೆ ಇಷ್ಟ ಆಗದೇ ಇರೋದನ್ನ ಮಾಡಲ್ಲ.—ಯಾಕೋ. 4:8.
15. ಇಸ್ರಾಯೇಲ್ಯರಿಂದ ನಾವೇನು ಕಲಿತೀವಿ? (ಇಬ್ರಿಯ 3:12)
15 ಯೆಹೋವ ಜೀವ ಇರೋ ದೇವರು ಅನ್ನೋದನ್ನ ಯಾರು ಮರೆತುಬಿಡ್ತಾರೋ ಅವರು ಆತನಿಂದ ದೂರ ಹೋಗಿಬಿಡ್ತಾರೆ. ಇಸ್ರಾಯೇಲ್ಯರ ಬಗ್ಗೆ ನೋಡಿ. ಅವರಿಗೆ ಯೆಹೋವ ಇದ್ದಾನೆ ಅಂತ ಗೊತ್ತಿದ್ರೂ ಅವರು ಕಾಡಲ್ಲಿದ್ದಾಗ ಆತನು ತಮ್ಮನ್ನ ನೋಡ್ಕೊಳ್ತಾನಾ ಅಂತ ಸಂಶಯಪಟ್ರು. “ಯೆಹೋವ ನಮ್ಮ ಜೊತೆ ಇದ್ದಾನೋ ಇಲ್ವೋ?” ಅಂತ ಕೇಳಿದ್ರು. (ವಿಮೋ. 17:2, 7) ಅವರು ಈ ತರ ಯೋಚನೆ ಮಾಡಿ ಆತನ ವಿರುದ್ಧ ದಂಗೆ ಎದ್ರು. ನಾವು ಇವರ ತರ ಆಗೋಕೆ ಇಷ್ಟಪಡ್ತೀವಾ? ಇಲ್ಲ ಅಲ್ವಾ!—ಇಬ್ರಿಯ 3:12 ಓದಿ.
16. ಯಾವಾಗ ನಮ್ಮ ನಂಬಿಕೆ ಕಡಿಮೆ ಆಗಬಹುದು?
16 ನಾವು ಈ ಲೋಕದಲ್ಲಿ ಜೀವಿಸ್ತಾ ಇರೋದ್ರಿಂದ ಯಾವಾಗ್ಲೂ ಯೆಹೋವನಿಗೆ ಹತ್ರ ಆಗಿರೋಕೆ ಕಷ್ಟ ಆಗುತ್ತೆ. ಯಾಕಂದ್ರೆ ತುಂಬ ಜನ ದೇವರೇ ಇಲ್ಲ ಅಂತ ಹೇಳ್ತಾರೆ. ಇನ್ನು ಕೆಲವರು ದೇವರಿಗೆ ಇಷ್ಟ ಇಲ್ಲದೆ ಇರೋದನ್ನ ಮಾಡಿದ್ರೂ ಸಂತೋಷದಿಂದ ಜೀವನ ಮಾಡ್ತಿದ್ದಾರೆ ಅಂತ ನಮಗೆ ಅನಿಸುತ್ತೆ. ಇದನ್ನೆಲ್ಲ ನೋಡುವಾಗ ದೇವರ ಮೇಲೆ ನಮಗೆ ನಂಬಿಕೆ ಕಡಿಮೆ ಆಗಬಹುದು. ಅಷ್ಟೇ ಅಲ್ಲ ದೇವರು ಇದ್ದಾನೆ ಅನ್ನೋ ನಂಬಿಕೆ ನಮಗಿದ್ರೂ ಆತನು ನಮಗೆ ಸಹಾಯ ಮಾಡ್ತಾನಾ ಅನ್ನೋ ಸಂಶಯ ಬರಬಹುದು. 73ನೇ ಕೀರ್ತನೆ ಬರೆದ ಕೀರ್ತನೆಗಾರನಿಗೂ ಇದೇ ತರ ಅನಿಸ್ತು. ಅವನ ಸುತ್ತಮುತ್ತ ಇದ್ದವರು ದೇವರ ನಿಯಮನ ಮುರಿದ್ರೂ ತಮ್ಮ ಜೀವನದಲ್ಲಿ ಖುಷಿಖುಷಿಯಾಗಿದ್ರು. ಇದನ್ನ ನೋಡಿದಾಗ ದೇವರ ಸೇವೆ ಮಾಡಿದ್ರೆ ಏನಾದ್ರೂ ಪ್ರಯೋಜನ ಸಿಗುತ್ತಾ ಅಂತ ಅವನಿಗೆ ಅನಿಸ್ತು.—ಕೀರ್ತ. 73:11-13.
17. ಯೆಹೋವನಿಗೆ ಯಾವಾಗ್ಲೂ ಹತ್ರ ಆಗಿರೋಕೆ ನಮಗೇನು ಸಹಾಯ ಮಾಡುತ್ತೆ?
17 ಕೀರ್ತನೆಗಾರ ಆಮೇಲೆ ತನ್ನ ಯೋಚನೆಯನ್ನ ಬದಲಾಯಿಸಿಕೊಳ್ಳೋಕೆ ಯಾವುದು ಸಹಾಯ ಮಾಡಿತು? ಯೆಹೋವನನ್ನ ಮರೆತು ಜೀವನ ಮಾಡೋರಿಗೆ ಏನಾಗುತ್ತೆ ಅಂತ ಅವನು ಯೋಚನೆ ಮಾಡಿದ. (ಕೀರ್ತ. 73:18, 19, 27) ಅಷ್ಟೇ ಅಲ್ಲ ಯೆಹೋವನನ್ನ ಆರಾಧಿಸಿದ್ರೆ ಏನೆಲ್ಲ ಪ್ರಯೋಜನ ಆಗುತ್ತೆ ಅಂತನೂ ಯೋಚನೆ ಮಾಡಿದ. (ಕೀರ್ತ. 73:24) ಅದೇ ತರ ನಾವು ಯೆಹೋವ ಯಾವೆಲ್ಲ ಆಶೀರ್ವಾದ ಕೊಟ್ಟಿದ್ದಾನೆ ಅಂತ ಯೋಚನೆ ಮಾಡಬೇಕು. ಒಂದುವೇಳೆ ನಾವು ಯೆಹೋವನನ್ನ ಆರಾಧಿಸಲಿಲ್ಲ ಅಂದ್ರೆ ನಮಗೆ ಏನಾಗುತ್ತೆ ಅಂತ ಯೋಚನೆ ಮಾಡಬೇಕು. ಹೀಗೆ ಮಾಡಿದ್ರೆ ಯೆಹೋವನ ಜೊತೆಗಿರೋ ನಮ್ಮ ಫ್ರೆಂಡ್‌ಶಿಪ್ಪನ್ನ ಇನ್ನೂ ಗಟ್ಟಿ ಮಾಡ್ಕೊಳ್ತೀವಿ ಮತ್ತು ಆ ಕೀರ್ತನೆಗಾರನ ತರ, “ನನ್ನ ಪ್ರಕಾರ, ದೇವರಿಗೆ ಹತ್ತಿರ ಆಗೋದೇ ಒಳ್ಳೇದು” ಅಂತ ನಾವೂ ಹೇಳ್ತೀವಿ.—ಕೀರ್ತ. 73:28.
18. ಭವಿಷ್ಯದಲ್ಲಿ ನಮಗೆ ಎಷ್ಟೇ ಕಷ್ಟ ಬಂದ್ರೂ ನಾವು ಯಾಕೆ ಹೆದ್ರಲ್ಲ?
18 “ಜೀವ ಇರೋ ಸತ್ಯ ದೇವರ ಸೇವೆ” ಮಾಡ್ತಿರೋರಿಗೆ ಈ ಕೊನೆ ಕಾಲದಲ್ಲಿ ಎಷ್ಟೇ ಕಷ್ಟ ಬಂದ್ರೂ ಅದನ್ನ ಅವರು ಧೈರ್ಯವಾಗಿ ಎದುರಿಸಬಹುದು. (1ಥೆಸ. 1:9) ತನ್ನ ಸೇವೆ ಮಾಡ್ತಿರೋರನ್ನ ಯೆಹೋವ ಚೆನ್ನಾಗಿ ನೋಡ್ಕೊಳ್ತಾನೆ ಮತ್ತು ಅವರಿಗೆ ಸಹಾಯ ಮಾಡ್ತಾನೆ. ಹಿಂದೆ ತನ್ನ ಸೇವಕರನ್ನ ಹೇಗೆ ನೋಡ್ಕೊಂಡನೋ ಹಾಗೇ ಇವತ್ತೂ ತನ್ನ ಸೇವಕರನ್ನ ಆತನು ನೋಡ್ಕೊಳ್ತಾನೆ. (ಯೆಶಾ. 41:10) ಮುಂದೆ ಮಹಾಸಂಕಟ ಬರುವಾಗ್ಲೂ ಆತನು ನಮ್ಮ ಕೈಬಿಡಲ್ಲ, ನಮ್ಮ ಜೊತೆನೇ ಇರ್ತಾನೆ. ಆಗ ‘ನಾವು “ಯೆಹೋವ ನನಗೆ ಸಹಾಯ ಮಾಡ್ತಾನೆ. ನಾನು ಹೆದ್ರಲ್ಲ” ಅಂತ ಧೈರ್ಯವಾಗಿ ಹೇಳ್ತೀವಿ.’—ಇಬ್ರಿ. 13:5, 6
ಗೀತೆ 152 ಯೆಹೋವ ನೀನೇ ಆಶ್ರಯ