ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 23

ಗೀತೆ 106 ಯೆಹೋವನ ಸ್ನೇಹವನ್ನು ಗಳಿಸುವುದು

ಯೆಹೋವ ನಮ್ಮನ್ನ ತನ್ನ ಅತಿಥಿಗಳಾಗಿ ಕರಿತಾನೆ

ಯೆಹೋವ ನಮ್ಮನ್ನ ತನ್ನ ಅತಿಥಿಗಳಾಗಿ ಕರಿತಾನೆ

“ನನ್ನ ಡೇರೆ ಅವ್ರ ಮಧ್ಯ ಇರುತ್ತೆ. ನಾನು ಅವ್ರ ದೇವರಾಗಿ ಇರ್ತಿನಿ.”ಯೆಹೆ. 37:27.

ಈ ಲೇಖನದಲ್ಲಿ ಏನಿದೆ?

ಯೆಹೋವನ ಡೇರೆಯಲ್ಲಿ ನಾವು ಅತಿಥಿಗಳಾಗಿ ಇರೋದು ಅಂದ್ರೆ ಏನು ಮತ್ತು ಅತಿಥಿಗಳಾಗಿರೋ ನಮ್ಮನ್ನ ಯೆಹೋವ ಹೇಗೆ ನೋಡ್ಕೊಳ್ತಾನೆ ಅಂತ ಕಲಿತೀವಿ.

1-2. ಯೆಹೋವ ದೇವರು ತನ್ನ ನಂಬಿಗಸ್ತ ಸೇವಕರಿಗೆ ಯಾವ ಸುಯೋಗ ಕೊಟ್ಟಿದ್ದಾನೆ?

 ಯೆಹೋವ ನಿಮ್ಮ ಜೀವನದಲ್ಲಿ ಯಾರಾಗಿದ್ದಾನೆ? ನೀವು ಕೆಲವೊಮ್ಮೆ ಯೆಹೋವ ನನಗೆ ಅಪ್ಪ ಆಗಿದ್ದಾನೆ, ನನಗೆ ದೇವರಾಗಿದ್ದಾನೆ ಅಥವಾ ನನ್ನ ಫ್ರೆಂಡ್‌ ಆಗಿದ್ದಾನೆ ಅಂತ ಹೇಳಬಹುದು. ಇದಷ್ಟೇ ಅಲ್ಲ, ಇನ್ನೂ ಬೇರೆಬೇರೆ ಪದಗಳಿಂದ ನೀವು ಯೆಹೋವನನ್ನ ವರ್ಣಿಸಬಹುದು. ಆದ್ರೆ ಯಾವತ್ತಾದ್ರೂ ನೀವು ಯೆಹೋವ ನನಗೆ ಆತಿಥ್ಯ ಮಾಡುವವನು ಅಂತ ಅಂದ್ಕೊಂಡಿದ್ದೀರಾ?

2 ರಾಜ ದಾವೀದ ಯೆಹೋವ ದೇವರನ್ನ ಆತಿಥ್ಯ ಮಾಡುವವನಾಗಿ ಮತ್ತು ಆತನ ಸೇವಕರನ್ನ ಅತಿಥಿಗಳಾಗಿ ವರ್ಣಿಸಿದ್ದಾನೆ. ಅದಕ್ಕೆ ಅವನು “ಯೆಹೋವನೇ, ನಿನ್ನ ಡೇರೆಯಲ್ಲಿ ಯಾರು ಅತಿಥಿಯಾಗಿ ಇರಬಹುದು? ನಿನ್ನ ಪವಿತ್ರ ಬೆಟ್ಟಕ್ಕೆ ಯಾರು ಬರಬಹುದು?” ಅಂತ ಕೇಳಿದ. (ಕೀರ್ತ. 15:1) ಅವನ ಮಾತಿನಿಂದ ನಮಗೆ ಏನು ಗೊತ್ತಾಗುತ್ತೆ? ನಾವು ಯೆಹೋವ ದೇವರ ಅತಿಥಿಗಳಾಗಬಹುದು. ಅಂದ್ರೆ ಆತನ ಸ್ನೇಹಿತರು ಆಗಬಹುದು ಅಂತ ಗೊತ್ತಾಗುತ್ತೆ. ಇದು ನಮ್ಮೆಲ್ಲರಿಗೂ ಸಿಕ್ಕಿರೋ ಒಂದು ದೊಡ್ಡ ಸುಯೋಗ ಅಲ್ವಾ?

ನಾವು ಯೆಹೋವನ ಅತಿಥಿಗಳಾಗಬೇಕು ಅಂತ ಆತನು ಇಷ್ಟಪಡ್ತಾನೆ

3. (ಎ) ಯೆಹೋವನ ಮೊದಲನೇ ಅತಿಥಿ ಯಾರಾಗಿದ್ರು? (ಬಿ) ಆತಿಥ್ಯ ಮಾಡಿದಾಗ ಯೆಹೋವನಿಗೆ ಮತ್ತು ಆತನ ಅತಿಥಿಗೆ ಹೇಗನಿಸಿತ್ತು?

3 ಯೆಹೋವ ದೇವರು ಎಲ್ಲವನ್ನ ಸೃಷ್ಟಿ ಮಾಡೋಕೆ ಮುಂಚೆ, ಒಬ್ಬನೇ ಇದ್ದ. ಆದ್ರೆ ಆತನು ತನ್ನ ಮೊದಲನೇ ಮಗನನ್ನ ಸೃಷ್ಟಿ ಮಾಡಿದ ಮೇಲೆ, ತನ್ನ ಸಾಂಕೇತಿಕ ಡೇರೆಗೆ ಅವನನ್ನ ಅತಿಥಿಯಾಗಿ ಕರೆದ. ಮೊದಲನೇ ಸಲ ಆತನು ಆತಿಥ್ಯ ಮಾಡಿದಾಗ ಆತನಿಗೆ ತುಂಬ ಸಂತೋಷ ಆಯ್ತು. ಆಗ ಅವ್ರಿಬ್ರಿಗೂ ಹೇಗೆ ಅನಿಸಿತ್ತು ಅಂತ ಬೈಬಲ್‌ ಹೇಳುತ್ತೆ. ಯೆಹೋವ ದೇವರು ಯೇಸುವನ್ನ “ನೋಡಿ ಖುಷಿಪಡ್ತಿದ್ದ” ಮತ್ತು ಯೇಸು ‘ಯೆಹೋವನ ಮುಂದೆ ಯಾವಾಗ್ಲೂ ನಗುನಗ್ತಾ ಇದ್ದ’ ಅಂತ ಹೇಳುತ್ತೆ.—ಜ್ಞಾನೋ. 8:30.

4. ಇನ್ನೂ ಯಾರೆಲ್ಲಾ ಯೆಹೋವನ ಅತಿಥಿಗಳಾದ್ರು?

4 ಯೆಹೋವ ದೇವರು ಆಮೇಲೆ ದೇವದೂತರನ್ನ ಸೃಷ್ಟಿ ಮಾಡಿದನು. ಆತನು ಅವರನ್ನೂ ತನ್ನ ಅತಿಥಿಗಳಾಗಿ ಕರೆದನು. ಇವ್ರನ್ನ “ದೇವರ ಮಕ್ಕಳು” ಅಂತ ಬೈಬಲ್‌ ಹೇಳುತ್ತೆ. ಇವರು ಯೆಹೋವನ ಜೊತೆ ಖುಷಿಯಾಗಿ ಇದ್ರು. (ಯೋಬ 38:7; ದಾನಿ. 7:10) ಸ್ವಲ್ಪ ಸಮಯದವರೆಗೆ ಯೆಹೋವ ಸ್ವರ್ಗದಲ್ಲಿ ಇರೋರನ್ನ ಮಾತ್ರ ಅತಿಥಿಗಳಾಗಿ ಕರೆದಿದ್ದನು. ಆದ್ರೆ ಆಮೇಲೆ ಆತನು ಭೂಮಿಯಲ್ಲಿ ಇರೋರನ್ನೂ ತನ್ನ ಡೇರೆಗೆ ಅತಿಥಿಗಳಾಗಿ ಕರೆದನು. ಅವರಲ್ಲಿ ಕೆಲವರು ಹನೋಕ, ನೋಹ, ಅಬ್ರಹಾಮ ಮತ್ತು ಯೋಬ ಆಗಿದ್ರು. ಈ ನಂಬಿಗಸ್ತ ಆರಾಧಕರು, ದೇವರ ಸ್ನೇಹಿತರಾಗಿದ್ರು ಮತ್ತು “ಸತ್ಯ ದೇವರಿಗೆ ಇಷ್ಟ ಆಗೋ ತರ” ನಡೆದ್ರು ಅಂತ ಬೈಬಲ್‌ ಹೇಳುತ್ತೆ.—ಆದಿ. 5:24; 6:9; ಯೋಬ 29:4; ಯೆಶಾ. 41:8.

5. ಯೆಹೆಜ್ಕೇಲ 37:26, 27 ರಲ್ಲಿರೋ ಭವಿಷ್ಯವಾಣಿಯಿಂದ ನಮಗೆ ಏನು ಗೊತ್ತಾಗುತ್ತೆ?

5 ಯೆಹೋವ ದೇವರು ನೂರಾರು ವರ್ಷಗಳಿಂದ ತನ್ನ ಸ್ನೇಹಿತರನ್ನ ಅತಿಥಿಗಳಾಗಿ ಕರಿತಾನೆ ಇದ್ದಾನೆ. (ಯೆಹೆಜ್ಕೇಲ 37:26, 27 ಓದಿ.) ಉದಾಹರಣೆಗೆ, ಯೆಹೆಜ್ಕೇಲನ ಭವಿಷ್ಯವಾಣಿಯಿಂದ ಯೆಹೋವ ತನ್ನ ನಂಬಿಗಸ್ತ ಸೇವಕರು ತನ್ನ ಜೊತೆ ಒಳ್ಳೇ ಸ್ನೇಹ ಸಂಬಂಧ ಬೆಳೆಸ್ಕೊಬೇಕು ಅಂತ ಇಷ್ಟಪಡ್ತಾನೆ ಅನ್ನೋದು ಗೊತ್ತಾಗುತ್ತೆ. ಆತನು “ಅವ್ರ ಜೊತೆ ಶಾಂತಿಯ ಒಪ್ಪಂದ ಮಾಡ್ಕೊಳ್ತೀನಿ” ಅಂತ ಮಾತುಕೊಟ್ಟಿದ್ದಾನೆ. ಸ್ವರ್ಗೀಯ ನಿರೀಕ್ಷೆ ಇರೋರು ಮತ್ತು ಭೂಮಿ ಮೇಲೆ ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಇರೋರು ‘ಒಂದೇ ಹಿಂಡಾಗಿ’ ಈ ಸಾಂಕೇತಿಕ ಡೇರೆಯಲ್ಲಿ ಒಗಟ್ಟಾಗಿ ಯೆಹೋವನನ್ನ ಆರಾಧಿಸೋ ಸಮಯವನ್ನ ಈ ಭವಿಷ್ಯವಾಣಿ ಸೂಚಿಸುತ್ತೆ. (ಯೋಹಾ. 10:16) ನಾವೀಗ ಅದನ್ನ ಕಣ್ಣಾರೆ ನೋಡ್ತಿದ್ದೀವಿ.

ನಾವು ಎಲ್ಲೇ ಇದ್ರೂ ಯೆಹೋವ ನಮ್ಮನ್ನ ನೋಡ್ಕೊತಾನೆ

6. ಯೆಹೋವನ ಡೇರೆಯಲ್ಲಿ ಯಾರು ಅತಿಥಿಗಳು ಆಗಬಹುದು? ಈ ಡೇರೆ ಬರೀ ಒಂದು ಜಾಗದಲ್ಲಿ ಅಷ್ಟೇ ಇರೋದಾ?

6 ಹಿಂದಿನ ಕಾಲದಲ್ಲಿ ಡೇರೆಯಲ್ಲಿ ಉಳ್ಕೊಳ್ಳೋರಿಗೆ ವಿಶ್ರಾಂತಿ ಪಡ್ಕೊಳೋಕೆ ಆಗ್ತಿತ್ತು ಮತ್ತು ಹವಾಮಾನದಲ್ಲಿ ಏನಾದ್ರೂ ಏರುಪೇರು ಆಗಿದ್ರೆ ಅವರಿಗೆ ಅದರಿಂದ ಸಂರಕ್ಷಣೆ ಸಿಕ್ತಿತ್ತು. ಅಷ್ಟೇ ಅಲ್ಲ ಅತಿಥಿಗಳನ್ನ ಕರೆದವರು ಅವರನ್ನ ಚೆನ್ನಾಗಿ ನೋಡ್ಕೊಬೇಕಿತ್ತು. ಅದೇ ತರ ನಾವು ನಮ್ಮನ್ನ ಯೆಹೋವನಿಗೆ ಸಮರ್ಪಿಸಿಕೊಂಡಾಗ ಆತನ ಸಾಂಕೇತಿಕ ಡೇರೆಯಲ್ಲಿ ಅತಿಥಿಗಳಾಗ್ತಿವಿ. (ಕೀರ್ತ. 61:4) ಈ ಡೇರೆಯಲ್ಲಿ ಯೆಹೋವನ ಜೊತೆ ನಮಗಿರೋ ಸ್ನೇಹನ ಇನ್ನೂ ಜಾಸ್ತಿ ಮಾಡ್ಕೊಳ್ಳೋಕೆ ಬೇಕಾದ ಸಹಾಯ ಸಿಗುತ್ತೆ ಮತ್ತು ಆತನು ಕರೆದಿರೋ ಬೇರೆ ಅತಿಥಿಗಳ ಜೊತೆ ಒಳ್ಳೆ ಫ್ರೆಂಡ್‌ಶಿಪ್‌ ಬೆಳೆಸ್ಕೊಳ್ಳೋಕೆ ಆಗುತ್ತೆ. ಈ ಸಾಂಕೇತಿಕ ಡೇರೆ ಬರೀ ಒಂದು ಜಾಗದಲ್ಲಿ ಅಷ್ಟೇ ಇಲ್ಲ. ಒಂದುವೇಳೆ ನೀವು ವಿಶೇಷ ಅಧಿವೇಶನಕ್ಕೆ ಬೇರೆ ಯಾವುದಾದ್ರೂ ದೇಶಕ್ಕೆ ಹೋಗಿರೋದಾದ್ರೆ ಅಲ್ಲೂ ನೀವು ಯೆಹೋವನ ಡೇರೆಯಲ್ಲಿ ಖುಷಿಖುಷಿಯಾಗಿರೋ ಅತಿಥಿಗಳನ್ನ ನೋಡಿರುತ್ತೀರ. ಹಾಗಾಗಿ ಈ ಡೇರೆ ಬರೀ ಒಂದೇ ಜಾಗದಲ್ಲಿ ಅಲ್ಲ ಯೆಹೋವನ ನಂಬಿಗಸ್ತ ಸೇವಕರು ಇರೋ ಕಡೆಯೆಲ್ಲ ಇದೆ ಅಂತ ಗೊತ್ತಾಗುತ್ತೆ.—ಪ್ರಕ. 21:3.

7. ತೀರಿ ಹೋಗಿರೋ ಯೆಹೋವನ ನಂಬಿಗಸ್ತ ಸೇವಕರು ಈಗ್ಲೂ ಆತನ ಡೇರೆಯಲ್ಲಿ ಅತಿಥಿಗಳಾಗಿದ್ದಾರೆ ಅಂತ ನಾವು ಯಾಕೆ ಹೇಳಬಹುದು? (ಚಿತ್ರ ನೋಡಿ.)

7 ತೀರಿ ಹೋಗಿರೋ ಯೆಹೋವನ ನಂಬಿಗಸ್ತ ಸೇವಕರು ಈಗ್ಲೂ ಯೆಹೋವನ ಡೇರೆಯಲ್ಲಿ ಅತಿಥಿಗಳಾಗಿದ್ದಾರಾ? ಹೌದು, ಅದನ್ನ ನಾವು ಹೇಗೆ ಹೇಳಬಹುದು? ಅವರು ತೀರಿ ಹೋದ್ರೂ ಯೆಹೋವ ಅವರನ್ನ ಮರೆತಿಲ್ಲ. ಆತನ ದೃಷ್ಟಿಯಲ್ಲಿ ಅವರು ಈಗ್ಲೂ ಜೀವಂತವಾಗಿದ್ದಾರೆ. ಅದಕ್ಕೆ ಯೇಸು “ಸತ್ತವರು ಮತ್ತೆ ಬದುಕೋ ವಿಷ್ಯಕ್ಕೆ ಬಂದ್ರೆ, ಮುಳ್ಳಿನ ಪೊದೆ ಹತ್ರ ಮೋಶೆ ದೇವರಿಗೆ ಏನು ಹೇಳಿದ? ಯೆಹೋವ ದೇವರು ‘ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು’ ಅಂತಲ್ವಾ? ಹಾಗಾದ್ರೆ ಆತನು ಸತ್ತವರಿಗಲ್ಲ, ಬದುಕಿರೋರಿಗೆ ದೇವರಾಗಿದ್ದಾನೆ. ಯಾಕಂದ್ರೆ ಅವ್ರೆಲ್ಲ ಆತನ ದೃಷ್ಟಿಯಲ್ಲಿ ಇನ್ನೂ ಬದುಕಿದ್ದಾರೆ” ಅಂತ ಹೇಳಿದನು.—ಲೂಕ 20:37, 38.

ಯೆಹೋವನ ನಂಬಿಗಸ್ತ ಸೇವಕರು ತೀರಿ ಹೋಗಿದ್ರೂ ಈಗ್ಲೂ ಅವರು ಯೆಹೋವನ ಡೇರೆಯಲ್ಲಿ ಅತಿಥಿಗಳಾಗಿದ್ದಾರೆ (ಪ್ಯಾರ 7 ನೋಡಿ)


ಅತಿಥಿಗಳಾಗಿರೋ ನಮಗೆ ಯಾವ ಪ್ರಯೋಜನ ಇದೆ ಮತ್ತು ನಾವೇನು ಮಾಡಬೇಕು

8. ಯೆಹೋವನ ಡೇರೆಯಲ್ಲಿ ಇರೋ ಅತಿಥಿಗಳಿಗೆ ಯಾವೆಲ್ಲ ಪ್ರಯೋಜನ ಸಿಗುತ್ತೆ?

8 ಒಂದು ಡೇರೆ ಒಬ್ಬ ವ್ಯಕ್ತಿಗೆ ವಿಶ್ರಾಂತಿ ಪಡ್ಕೊಳೋಕೆ ಸಹಾಯ ಮಾಡುತ್ತೆ ಮತ್ತು ಹವಾಮಾನದಲ್ಲಿ ಏರುಪೇರು ಆದಾಗ ಆಶ್ರಯ ಪಡ್ಕೊಳ್ಳೋಕ್ಕೂ ಸಹಾಯ ಮಾಡುತ್ತೆ. ಅದೇ ತರ ಯೆಹೋವನ ಡೇರೆಯಲ್ಲಿ ಇರೋ ಅತಿಥಿಗಳಿಗೆ ಆತನ ಜೊತೆ ಇರೋ ಸಂಬಂಧ ಹಾಳು ಮಾಡದೆ ಇರೋ ತರ ನೋಡ್ಕೊಳ್ಳೋಕೆ ಸಹಾಯ ಸಿಗುತ್ತೆ ಮತ್ತು ಹೊಸ ಲೋಕದ ನಿರೀಕ್ಷೆನೂ ಸಿಗುತ್ತೆ. ಹೇಗಂದ್ರೆ ನಾವು ಯೆಹೋವನಿಗೆ ಯಾವಾಗ್ಲೂ ಹತ್ರವಾಗಿದ್ರೆ ಸೈತಾನ ನಮಗೆ ಶಾಶ್ವತಕ್ಕೂ ಹಾನಿ ಮಾಡಕ್ಕಾಗಲ್ಲ. (ಕೀರ್ತ. 31:23; 1 ಯೋಹಾ. 3:8) ಅಷ್ಟೇ ಅಲ್ಲ ಯೆಹೋವನ ನಂಬಿಗಸ್ತ ಸೇವಕರನ್ನ ಈಗಷ್ಟೇ ಅಲ್ಲ ಹೊಸ ಲೋಕದಲ್ಲೂ ಕಾಪಾಡ್ತಾನೆ. ತನ್ನ ಜೊತೆ ಇರೋ ಸ್ನೇಹನ ಉಳಿಸ್ಕೊಳ್ಳೋಕೆ ಆತನು ಅವರಿಗೆ ಸಹಾಯ ಮಾಡ್ತಾನೆ ಮತ್ತು ಸಾವಿಂದಾನೂ ಕಾಪಾಡ್ತಾನೆ.—ಪ್ರಕ. 21:4.

9. ಯೆಹೋವ ತನ್ನ ಅತಿಥಿಗಳು ಹೇಗಿರಬೇಕು ಅಂತ ಇಷ್ಟಪಡ್ತಾನೆ?

9 ಯೆಹೋವನ ಡೇರೆಯಲ್ಲಿ ನಾವು ಅತಿಥಿಗಳಾಗಿದ್ರೆ ಯಾವಾಗ್ಲೂ ಆತನ ಫ್ರೆಂಡ್ಸ್‌ ಆಗಿ ಇರೋಕಾಗುತ್ತೆ. ಇದು ನಿಜವಾಗ್ಲೂ ನಮಗೆ ಸಿಕ್ಕಿರೋ ದೊಡ್ಡ ಸುಯೋಗ ಅಲ್ವಾ? ಆದರೆ ನಾವು ಯಾವಾಗ್ಲೂ ಆತನ ಅತಿಥಿಗಳಾಗಿರಬೇಕಾದ್ರೆ ಏನು ಮಾಡಬೇಕು? ನಿಮ್ಮನ್ನ ಯಾರಾದ್ರೂ ಮನೆಗೆ ಕರೆದ್ರೆ ಅತಿಥಿಗಳಾಗಿರೋ ನೀವು ಅವರಿಗೆ ಇಷ್ಟ ಆಗೋ ತರ ನಡ್ಕೊಳ್ತೀರ ಅಲ್ವಾ? ಉದಾಹರಣೆಗೆ ನೀವು ಚಪ್ಪಲಿ ಬಿಚ್ಚಿ ಒಳಗೆ ಬರಬೇಕು ಅಂತ ಅವರು ಇಷ್ಟಪಡಬಹುದು. ನೀವು ಅದನ್ನ ಮನಸಾರೆ ಮಾಡ್ತೀರಾ ಅಲ್ವಾ? ಅದೇ ತರ ಯೆಹೋವನ ಡೇರೆಯಲ್ಲಿ ಇರೋ ನಾವು ಯಾವಾಗ್ಲೂ ಅತಿಥಿಗಳಾಗಿ ಇರೋಕೆ ಯೆಹೋವ ನಮ್ಮಿಂದ ಏನು ಬಯಸ್ತಾನೆ ಅಂತ ತಿಳ್ಕೊಬೇಕು. ಯೆಹೋವನ ಮೇಲೆ ನಮಗೆ ಪ್ರೀತಿ ಇರೋದ್ರಿಂದ “ಆತನನ್ನ ತುಂಬ ಖುಷಿಪಡಿಸಬೇಕು” ಅಂತ ಇಷ್ಟಪಡ್ತೀವಿ. (ಕೊಲೊ. 1:10) ಅದಕ್ಕೆ ನಮ್ಮಿಂದಾದ ಎಲ್ಲಾ ಪ್ರಯತ್ನ ಮಾಡ್ತೀವಿ. ಯೆಹೋವ ನಮ್ಮ ಬೆಸ್ಟ್‌ ಫ್ರೆಂಡ್‌ ಆಗಿದ್ದಾನೆ ನಿಜ. ಆದರೆ ಆತನು ನಮ್ಮ ದೇವರು ಆಗಿದ್ದಾನೆ, ಅಪ್ಪನೂ ಆಗಿದ್ದಾನೆ. ಅದಕ್ಕೆ ಆತನು ಗೌರವ ಪಡ್ಕೊಳೋಕೆ ಯೋಗ್ಯನಾಗಿದ್ದಾನೆ. (ಕೀರ್ತ. 25:14) ಇದನ್ನ ನಾವು ಮನಸ್ಸಲ್ಲಿಟ್ರೆ ನಾವು ಯಾವಾಗ್ಲೂ ಆತನಿಗೆ ಗೌರವ ಕೊಡ್ತಾನೆ ಇರ್ತೀವಿ. ಅಷ್ಟೇ ಅಲ್ಲ ಆತನಿಗೆ ನೋವಾಗೋ ತರ ನಡ್ಕೊಳ್ಳಲ್ಲ. ಬದಲಿಗೆ ನಾವು ಯಾವಾಗ್ಲೂ ‘ಆತನ ಜೊತೆ ವಿನಮ್ರರಾಗಿ ನಡಿಯೋಕೆ’ ಇಷ್ಟಪಡ್ತೀವಿ.—ಮೀಕ 6:8.

ಯೆಹೋವ ಇಸ್ರಾಯೇಲ್ಯರಿಗೆ ಭೇದಭಾವ ಮಾಡಲಿಲ್ಲ

10-11. ಇಸ್ರಾಯೇಲ್ಯರು ಸಿನಾಯಿ ಕಾಡಲ್ಲಿದ್ದಾಗ ಯೆಹೋವ ಅವರ ಜೊತೆ ನಡ್ಕೊಂಡ ರೀತಿಯಿಂದ ನಮಗೆ ಏನು ಗೊತ್ತಾಗುತ್ತೆ?

10 ಯೆಹೋವ ತನ್ನ ಅತಿಥಿಗಳಿಗೆ ಭೇದಭಾವ ಮಾಡಲ್ಲ. (ರೋಮ. 2:11) ಇಸ್ರಾಯೇಲ್ಯರು ಸಿನಾಯಿ ಕಾಡಲ್ಲಿದ್ದಾಗ ಅವರ ಜೊತೆ ಆತನು ಹೇಗೆ ನಡ್ಕೊಂಡನೋ ಅದ್ರಿಂದ ಅದು ನಮಗೆ ಗೊತ್ತಾಗುತ್ತೆ.

11 ಯೆಹೋವ ದೇವರು ಇಸ್ರಾಯೇಲ್ಯರನ್ನ ಈಜಿಪ್ಟಿನಿಂದ ಬಿಡಿಸ್ಕೊಂಡು ಬಂದ್ಮೇಲೆ ದೇವದರ್ಶನ ಡೇರೆಯಲ್ಲಿ ಪುರೋಹಿತರನ್ನ ಸೇವೆ ಮಾಡೋಕೆ ನೇಮಿಸಿದನು. ಅಷ್ಟೇ ಅಲ್ಲ ಪವಿತ್ರ ಡೇರೆಯಲ್ಲಿ ಬೇರೆ ಕೆಲಸಗಳನ್ನ ಮಾಡೋಕೆ ಲೇವಿಯರನ್ನ ನೇಮಿಸಿದನು. ಹಾಗಂತ ದೇವದರ್ಶನ ಡೇರೆಯಲ್ಲಿ ಕೆಲಸ ಮಾಡ್ತಿದ್ದವರಿಗೆ ಮತ್ತು ಆ ಡೇರೆಯ ಹತ್ರ ಇದ್ದ ಜನರಿಗೆ ಯೆಹೋವ ಬೇರೆಯವರಿಗಿಂತ ವಿಶೇಷ ಕಾಳಜಿ ತೋರಿಸಿದನಾ? ಇಲ್ಲ. ಯೆಹೋವ ಭೇದಭಾವ ಮಾಡಲಿಲ್ಲ.

12. ಯೆಹೋವ ದೇವರು ಭೇದಭಾವ ಮಾಡಲ್ಲ ಅಂತ ಇಸ್ರಾಯೇಲ್ಯರ ಜೊತೆ ಆತನು ನಡ್ಕೊಂಡ ರೀತಿಯಿಂದ ನಮಗೆ ಹೇಗೆ ಗೊತ್ತಾಗುತ್ತೆ? (ವಿಮೋಚನಕಾಂಡ 40:38) (ಚಿತ್ರ ನೋಡಿ.)

12 ಪವಿತ್ರ ಡೇರೆಯಲ್ಲಿ ಕೆಲಸ ಮಾಡೋರು ಮತ್ತು ಆ ಡೇರೆಯ ಪಕ್ಕದಲ್ಲಿ ಇದ್ದವರು ಮಾತ್ರ ಅಲ್ಲ, ಎಲ್ಲ ಇಸ್ರಾಯೇಲ್ಯರು ಯೆಹೋವನಿಗೆ ಒಳ್ಳೆ ಫ್ರೆಂಡ್ಸ್‌ ಆಗಬಹುದಿತ್ತು. ಉದಾಹರಣೆಗೆ ಯೆಹೋವ ದೇವರು ಇಡೀ ಜನಾಂಗಕ್ಕೆ ಪವಿತ್ರ ಡೇರೆಯ ಮೇಲಿದ್ದ ಬೆಂಕಿ ಮತ್ತು ಮೋಡ ಕಾಣೋ ತರ ಮಾಡಿದನು. ಪವಿತ್ರ ಡೇರೆಯ ಮೇಲೆ ಮುಚ್ಚಿದ್ದ ಮೋಡ ಮೇಲೆ ಎದ್ದಾಗ ಅದು ದೂರದಲ್ಲಿರೋ ಇಸ್ರಾಯೇಲ್ಯರಿಗೂ ಕಾಣಿಸ್ತಿತ್ತು. (ವಿಮೋಚನಕಾಂಡ 40:38 ಓದಿ.) ಅದನ್ನ ನೋಡಿದ ತಕ್ಷಣ ಎಲ್ಲ ಇಸ್ರಾಯೇಲ್ಯರು ತಮ್ಮ ವಸ್ತುಗಳನ್ನೆಲ್ಲ ತಗೊಂಡು ಡೇರೆ ಕಿತ್ಕೊಂಡು ಆ ಮೋಡ ಹಿಂದೆನೇ ಒಟ್ಟೊಟ್ಟಿಗೆ ಹೋಗ್ತಿದ್ರು. (ಅರ. 9:15-23) ಅಷ್ಟೇ ಅಲ್ಲ ಅವರು ಹೊರಡೋ ಮುಂಚೆ ಬೆಳ್ಳಿ ತುತ್ತೂರಿಗಳಿಂದ ಶಬ್ದ ಬರ್ತಿತ್ತು. ಅದನ್ನ ಕೇಳಿದ ಮೇಲೆ ಅವರೆಲ್ರೂ ಹೊರಡ್ತಿದ್ರು. (ಅರ. 10:2) ಇದ್ರಿಂದ ನಮಗೆ ಏನು ಗೊತ್ತಾಗುತ್ತೆ? ಪವಿತ್ರ ಡೇರೆಯ ಪಕ್ಕದಲ್ಲಿ ಇದ್ದವರಷ್ಟೇ ಅಲ್ಲ ಅದೆಷ್ಟೇ ದೂರದಲ್ಲಿ ಇದ್ದವರೂ ಯೆಹೋವನ ಸ್ನೇಹಿತರು ಆಗಬಹುದಿತ್ತು ಅಂತ ಗೊತ್ತಾಗುತ್ತೆ. ಎಲ್ಲ ಇಸ್ರಾಯೇಲ್ಯರು ಯೆಹೋವನ ಅತಿಥಿಗಳು ಆಗಬಹುದಿತ್ತು. ಆತನು ತಮ್ಮನ್ನ ಕಾಪಾಡ್ತಾನೆ ಮತ್ತು ತಮಗೆ ನಿರ್ದೇಶನ ಕೊಡ್ತಾನೆ ಅಂತ ಅವರು ನಂಬಬಹುದಿತ್ತು. ಅದೇ ತರ ನಾವು ಇವತ್ತು ಈ ಲೋಕದ ಯಾವ ಮೂಲೆಯಲ್ಲಿ ಇದ್ದರೂ ಯೆಹೋವ ನಮ್ಮನ್ನ ಪ್ರೀತಿಸ್ತಾನೆ, ಯಾವಾಗ್ಲೂ ಚೆನ್ನಾಗಿ ನೋಡ್ಕೊಳ್ತಾನೆ ಮತ್ತು ನಮ್ಮನ್ನ ಕಾಪಾಡ್ತಾನೆ.

ದೇವದರ್ಶನ ಡೇರೆಯ ಏರ್ಪಾಡು ಯೆಹೋವ ಭೇದಭಾವ ಮಾಡಲ್ಲ ಅಂತ ತೋರಿಸಿ ಕೊಡ್ತು (ಪ್ಯಾರ 12 ನೋಡಿ)


ಯೆಹೋವ ಈಗ್ಲೂ ಭೇದಭಾವ ಮಾಡಲ್ಲ

13. ಯೆಹೋವ ಇವತ್ತು ಭೇದಭಾವ ಮಾಡ್ತಿಲ್ಲ ಅಂತ ನಾವು ಹೇಗೆ ಹೇಳಬಹುದು?

13 ಕೆಲವು ಸಹೋದರ ಸಹೋದರಿಯರು ಮುಖ್ಯ ಕಾರ್ಯಾಲಯದ ಹತ್ರದಲ್ಲಿದ್ದಾರೆ. ಇನ್ನು ಕೆಲವರು ಬ್ರಾಂಚ್‌ ಆಫೀಸ್‌ಗಳ ಹತ್ರದಲ್ಲಿ ಇದ್ದಾರೆ. ಕೆಲವರು ಬೆತೆಲ್‌ನಲ್ಲಿ ಕೆಲಸ ಮಾಡ್ತಿದ್ದಾರೆ. ಇದ್ರಿಂದಾಗಿ ಅಲ್ಲಿ ಅವ್ರಿಗೆ ಕೆಲಸ ಮಾಡೋಕೆ ಅಷ್ಟೇ ಅಲ್ಲ ಮುಂದೆ ನಿಂತು ನಡೆಸೋ ಸಹೋದರರ ಜೊತೆ ಚೆನ್ನಾಗಿ ಬೆರೆಯೋಕ್ಕೂ ಆಗ್ತಿದೆ. ಇನ್ನು ಕೆಲವರು ಸಂಚರಣ ಸೇವೆಯನ್ನ ಮಾಡ್ತಿದ್ದಾರೆ. ಇನ್ನು ಕೆಲವರು ವಿಶೇಷ ಪೂರ್ಣ ಸಮಯದ ಸೇವೆಯನ್ನ ಮಾಡ್ತಿದ್ದಾರೆ. ಆದ್ರೆ ನೀವು ಇದು ಯಾವುದನ್ನೂ ಮಾಡ್ತಿಲ್ಲ ಅಂದ್ರೆ ಬೇಜಾರಾಗಬೇಡಿ. ಯಾಕಂದ್ರೆ ನೀವೂ ಯೆಹೋವನ ಅತಿಥಿಗಳೇ. ಯೆಹೋವ ತನ್ನ ಎಲ್ಲ ಅತಿಥಿಗಳನ್ನ ಪ್ರೀತಿಸ್ತಾನೆ. ಅಷ್ಟೇ ಅಲ್ಲ ಆತನಿಗೆ ಒಬ್ಬೊಬ್ಬರ ಬಗ್ಗೆ ಚೆನ್ನಾಗಿ ಗೊತ್ತಿದೆ ಮತ್ತು ನಿಮ್ಮ ಬಗ್ಗೆ ಕಾಳಜಿನೂ ವಹಿಸ್ತಾನೆ. (1 ಪೇತ್ರ 5:7) ಯೆಹೋವ ತನ್ನ ಎಲ್ಲ ಸೇವಕರಿಗೂ ತನ್ನ ಜೊತೆ ಇರೋ ಸಂಬಂಧ ಗಟ್ಟಿ ಮಾಡ್ಕೊಳೋಕೆ ಸಹಾಯ ಮಾಡ್ತಾನೆ, ಅವರಿಗೆ ನಿರ್ದೇಶನ ಕೊಡ್ತಾನೆ ಮತ್ತು ಅವರನ್ನ ಕಾಪಾಡ್ತಾನೆ.

14. ಯೆಹೋವ ಭೇದಭಾವ ಮಾಡಲ್ಲ ಅನ್ನೋದಕ್ಕೆ ಇನ್ನೊಂದು ಉದಾಹರಣೆ ಕೊಡಿ?

14 ಯೆಹೋವ ತನ್ನ ಅತಿಥಿಗಳಿಗೆ ಭೇದಭಾವ ಮಾಡಲ್ಲ ಅನ್ನೋದಕ್ಕೆ ಇನ್ನೊಂದು ಉದಾಹರಣೆ ನೋಡಿ. ಇಡೀ ಲೋಕದಲ್ಲಿರೋ ಎಲ್ರಿಗೂ ಆತನು ಬೈಬಲ್‌ ಸಿಗೋ ತರ ಮಾಡಿದ್ದಾನೆ. ಬೈಬಲನ್ನ ಮೊದಲು ಹೀಬ್ರು, ಅರಾಮಿಕ್‌ ಮತ್ತು ಗ್ರೀಕ್‌ ಭಾಷೆಯಲ್ಲಿ ಬರೆಯಲಾಯ್ತು. ಹಾಗಂತ ಈ ಭಾಷೆ ಗೊತ್ತಿರೋರು ಮಾತ್ರ ಯೆಹೋವನ ಫ್ರೆಂಡ್ಸ್‌ ಆಗಬಹುದು ಅಂತ ಅರ್ಥನಾ? ಖಂಡಿತ ಇಲ್ಲ.—ಮತ್ತಾ. 11:25.

15. ಯೆಹೋವ ಭೇದಭಾವ ಮಾಡಲ್ಲ ಅನ್ನೋದಕ್ಕೆ ಇನ್ನೂ ಯಾವ ಕಾರಣ ಇದೆ? (ಚಿತ್ರ ನೋಡಿ.)

15 ಯೆಹೋವ ದೇವರು ಜಾಸ್ತಿ ಓದಿರೋರನ್ನ ಅಥವಾ ಬೈಬಲ್‌ ಬರೆದ ಮೂಲ ಭಾಷೆ ಗೊತ್ತಿರೋರನ್ನ ಮಾತ್ರ ಅಲ್ಲ ಎಲ್ರನ್ನ ಫ್ರೆಂಡ್‌ ಮಾಡ್ಕೊಳ್ತಾನೆ. ಅದಕ್ಕೆ ಆತನು ಬೈಬಲನ್ನ ಜಾಸ್ತಿ ಓದಿರೋರಿಗೆ ಅಷ್ಟೇ ಅಲ್ಲ ಇಡೀ ಲೋಕದಲ್ಲಿರೋ ಎಲ್ರಿಗೂ ಕೊಟ್ಟಿದ್ದಾನೆ. ಹಾಗಾಗಿ ಬೈಬಲ್‌ ಈಗ ಸಾವಿರಾರು ಭಾಷೆಗಳಲ್ಲಿ ಭಾಷಾಂತರ ಆಗಿದೆ. ಇದನ್ನ ಓದಿ ಜನರು ಪ್ರಯೋಜನ ಪಡ್ಕೊಳ್ತಿದ್ದಾರೆ ಮತ್ತು ಯೆಹೋವನ ಸ್ನೇಹಿತರು ಆಗೋದು ಹೇಗೆ ಅಂತ ಕಲಿತಿದ್ದಾರೆ.—2 ತಿಮೊ. 3:16, 17.

ಸಾವಿರಾರು ಭಾಷೆಯಲ್ಲಿ ಬೈಬಲ್‌ ಇರೋದನ್ನ ನೋಡುವಾಗ ಯೆಹೋವ ಭೇದಭಾವ ಮಾಡಲ್ಲ ಅಂತ ಗೊತ್ತಾಗುತ್ತೆ (ಪ್ಯಾರ 15 ನೋಡಿ)


ಯೆಹೋವನಿಗೆ “ಇಷ್ಟ ಆಗಿರೋದನ್ನ” ಮಾಡ್ತಾ ಇರಿ

16. ಯೆಹೋವನಿಗೆ ಇಷ್ಟ ಇರೋದನ್ನ ಮಾಡೋಕೆ ನಾವೇನು ಮಾಡಬೇಕು? (ಅಪೊಸ್ತಲರ ಕಾರ್ಯ 10:34, 35)

16 ಯೆಹೋವನ ಸಾಂಕೇತಿಕ ಡೇರೆಯಲ್ಲಿ ನಾವು ಅತಿಥಿಗಳಾಗಿರೋದು ನಮ್ಮೆಲ್ಲರಿಗೂ ಸಿಕ್ಕಿರೋ ಒಂದು ದೊಡ್ಡ ಸುಯೋಗ. ಯೆಹೋವ ತನ್ನ ಅತಿಥಿಗಳ ಜೊತೆ ದಯೆಯಿಂದ ನಡ್ಕೊಳ್ತಾನೆ. ಅವರನ್ನ ತುಂಬ ಪ್ರೀತಿಸ್ತಾನೆ ಮತ್ತು ಅವರನ್ನ ಚೆನ್ನಾಗಿ ನೋಡ್ಕೊಳ್ತಾನೆ. ಅಷ್ಟೇ ಅಲ್ಲ ನಾವು ಯಾವುದೇ ಜಾಗದಲ್ಲಿ ಇದ್ರೂ, ನಮ್ಮ ಹಿನ್ನೆಲೆ ಏನೇ ಆಗಿದ್ರೂ, ನಾವು ಎಷ್ಟೇ ಓದಿದ್ರೂ, ನಮ್ಮ ದೇಶ, ಭಾಷೆ, ಜಾತಿ, ನಮ್ಮ ವಯಸ್ಸು ಅದೇನೇ ಆಗಿದ್ರೂ ಯೆಹೋವ ಭೇದಭಾವ ಮಾಡದೆ ಎಲ್ರನ್ನೂ ಡೇರೆಗೆ ಖುಷಿಖುಷಿಯಾಗಿ ಸ್ವಾಗತಿಸ್ತಾನೆ. ಆದ್ರೆ ಯಾರು ಆತನ ಮಾತನ್ನ ಕೇಳ್ತಾರೋ ಅವರು ಮಾತ್ರ ಆತನ ಡೇರೆಯಲ್ಲಿ ಅತಿಥಿಗಳಾಗಿ ಇರೋಕೆ ಆಗುತ್ತೆ.—ಅಪೊಸ್ತಲರ ಕಾರ್ಯ 10:34, 35 ಓದಿ.

17. ಮುಂದಿನ ಲೇಖನದಲ್ಲಿ ನಾವೇನು ಕಲಿತೀವಿ?

17 ಕೀರ್ತನೆ 15:1ರಲ್ಲಿ ದಾವೀದ “ಯೆಹೋವನೇ, ನಿನ್ನ ಡೇರೆಯಲ್ಲಿ ಯಾರು ಅತಿಥಿಯಾಗಿ ಇರಬಹುದು? ನಿನ್ನ ಪವಿತ್ರ ಬೆಟ್ಟಕ್ಕೆ ಯಾರು ಬರಬಹುದು?” ಅಂತ ಪ್ರಶ್ನೆ ಕೇಳಿದ. ಈ ಪ್ರಶ್ನೆಗಳಿಗೆ ಉತ್ರ ಬರೆಯೋಕೆ ಯೆಹೋವ ದೇವರು ದಾವೀದನಿಗೆ ಸಹಾಯ ಮಾಡಿದನು. ನಾವು ಮುಂದಿನ ಲೇಖನದಲ್ಲಿ ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಳೋಕೆ ನಾವು ಏನು ಮಾಡಬೇಕು ಮತ್ತು ಯಾವಾಗ್ಲೂ ಆತನ ಸ್ನೇಹಿತರಾಗಿ ಇರೋಕೆ ನಾವೇನು ಮಾಡಬೇಕು ಅಂತ ಕಲಿಯೋಣ.

ಗೀತೆ 27 ಯೆಹೋವನ ಪಕ್ಷವಹಿಸು!