ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 26

ಗೀತೆ 49 ಯೆಹೋವನು ನಮ್ಮ ಆಶ್ರಯ

ಯೆಹೋವ ನಿಮ್ಮ ಬಂಡೆಯಾಗಿದ್ದಾನಾ?

ಯೆಹೋವ ನಿಮ್ಮ ಬಂಡೆಯಾಗಿದ್ದಾನಾ?

“ನಮ್ಮ ದೇವರಷ್ಟು ಗಟ್ಟಿಯಾಗಿ ನಿಂತಿರೋ ಬಂಡೆ ಯಾವುದೂ ಇಲ್ಲ.”1 ಸಮು. 2:2.

ಈ ಲೇಖನದಲ್ಲಿ ಏನಿದೆ?

ಯಾವ ಗುಣಗಳನ್ನ ಯೆಹೋವ ದೇವರು ತೋರಿಸ್ತಾ ಇರೋದ್ರಿಂದ ಆತನನ್ನ ಬಂಡೆಗೆ ಹೋಲಿಸಲಾಗಿದೆ ಮತ್ತು ಆ ಗುಣಗಳನ್ನ ನಾವು ಹೇಗೆ ತೋರಿಸಬಹುದು ಅನ್ನೋದನ್ನ ಈ ಲೇಖನದಲ್ಲಿ ಕಲಿತೀವಿ.

1. ಕೀರ್ತನೆ 18:46ರಲ್ಲಿ ದಾವೀದ ಯೆಹೋವನನ್ನ ಯಾವುದಕ್ಕೆ ಹೋಲಿಸಿ ಮಾತಾಡಿದ್ದಾನೆ?

 ನಾವೀಗ ಜೀವಿಸ್ತಾ ಇರೋ ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಸಮಸ್ಯೆಗಳು ಬರುತ್ತೆ. ಕೆಲವೊಂದು ಸಾರಿ ಅದು ನಮ್ಮ ಜೀವನವನ್ನೇ ತಲೆಕೆಳಗಾಗಿ ಮಾಡಿಬಿಡುತ್ತೆ. ಆದರೆ ಯೆಹೋವ ನಮಗೆ ಸಹಾಯ ಮಾಡ್ತಾನೆ. ಅದಕ್ಕೆ ನಾವು ಆತನಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ. ಹಿಂದಿನ ಲೇಖನದಲ್ಲೇ, ನಾವು “ಯೆಹೋವ ಜೀವ ಇರೋ ದೇವರು,” ಆತನು ಯಾವಾಗ್ಲೂ ನಮಗೆ ಸಹಾಯ ಮಾಡೋಕೆ ರೆಡಿ ಇರ್ತಾನೆ ಅಂತ ಕಲಿತ್ವಿ. (ಕೀರ್ತನೆ 18:46 ಓದಿ.) ಯೆಹೋವ ಮಾಡೋ ಸಹಾಯವನ್ನ ನಮ್ಮ ಜೀವನದಲ್ಲಿ ಅನುಭವಿಸಿ ನೋಡಿದಾಗ ಆತನು ನಿಜವಾಗ್ಲೂ ಜೀವ ಇರೋ ದೇವರು ಅಂತ ನಮಗೆ ಅರ್ಥ ಆಗುತ್ತೆ. ಆದ್ರೆ ದಾವೀದ ಅದೇ ವಚನದಲ್ಲಿ ಯೆಹೋವನನ್ನ ನನ್ನ “ಆಶ್ರಯ ಕೋಟೆ” ಅಂದ್ರೆ ಬಂಡೆ ಅಂತ ಹೇಳಿದ. ಇಲ್ಲಿ ದಾವೀದ ಜೀವ ಇರೋ ದೇವರನ್ನ ಜೀವ ಇಲ್ದಿರೋ ಬಂಡೆಗೆ ಹೋಲಿಸಿ ಯಾಕೆ ಮಾತಾಡ್ತಾ ಇದ್ದಾನೆ?

2. ಈ ಲೇಖನದಲ್ಲಿ ನಾವೇನು ಕಲಿತೀವಿ?

2 ಈ ಲೇಖನದಲ್ಲಿ ಯೆಹೋವನನ್ನ ಯಾಕೆ ಬಂಡೆಗೆ ಹೋಲಿಸಲಾಗಿದೆ ಮತ್ತು ಆತನಿಗೆ ಆ ಬಿರುದು ಕೊಟ್ಟಿರೋದ್ರಿಂದ ಆತನ ಬಗ್ಗೆ ನಾವೇನು ಕಲಿಯಬಹುದು ಅಂತ ನೋಡ್ತೀವಿ. ಅಷ್ಟೇ ಅಲ್ಲ, ನಾವು ಯೆಹೋವನನ್ನ ನಮ್ಮ ಬಂಡೆಯಾಗಿ ಮಾಡ್ಕೊಂಡು ಆತನ ಮೇಲೆ ಆತುಕೊಳ್ಳೋದು ಹೇಗೆ ಅಂತ ನೋಡ್ತೀವಿ. ಕೊನೆಗೆ ಆತನ ತರ ನಾವು ಆ ಗುಣಗಳನ್ನ ತೋರಿಸೋದು ಹೇಗೆ ಅಂತ ಕಲಿತೀವಿ.

ಯೆಹೋವನನ್ನ ಬಂಡೆಗೆ ಯಾಕೆ ಹೋಲಿಸಲಾಗಿದೆ?

3. ಬೈಬಲಲ್ಲಿ ಯಾಕೆ ಯೆಹೋವನನ್ನ ‘ಬಂಡೆಗೆ’ ಹೋಲಿಸಲಾಗಿದೆ? ( ಚಿತ್ರ ನೋಡಿ.)

3 ಯೆಹೋವನಲ್ಲಿರೋ ಅದ್ಭುತ ಗುಣಗಳನ್ನ ಅರ್ಥ ಮಾಡ್ಕೊಳ್ಳೋಕೆ ಬೈಬಲ್‌ ಆತನನ್ನ “ಬಂಡೆ” ಅಂತ ಹೇಳುತ್ತೆ. ಯೆಹೋವನ ಸೇವಕರು ಕೂಡ ಆತನಲ್ಲಿರೋ ಅದ್ಭುತ ಗುಣಗಳನ್ನ ಹೊಗಳುವಾಗ ಆತನನ್ನ ಬಂಡೆ ಅಂತ ಹೇಳಿದ್ದಾರೆ. ಆತನನ್ನ ಬಂಡೆ ಅಂತ ಮೊದಲನೇ ಸಲ ಹೇಳಿರೋದು ಧರ್ಮೋಪದೇಶಕಾಂಡ 32:4ರಲ್ಲಿ. ಹನ್ನ ತನ್ನ ಪ್ರಾರ್ಥನೆಯಲ್ಲಿ ಕೂಡ “ನಮ್ಮ ದೇವರಷ್ಟು ಗಟ್ಟಿಯಾಗಿ ನಿಂತಿರೋ ಬಂಡೆ ಯಾವುದೂ ಇಲ್ಲ” ಅಂತ ಹೇಳಿದಳು. (1 ಸಮು. 2:2) ಹಬಕ್ಕೂಕ ಯೆಹೋವನಿಗೆ “ಬಂಡೆಯೇ” ಅಂತ ಕರೆದ. (ಹಬ. 1:12) 73ನೇ ಕೀರ್ತನೆಯನ್ನ ಬರೆದ ಕೀರ್ತನೆಗಾರ, “ದೇವರು ನನ್ನ ಹೃದಯವನ್ನ ಕಾಪಾಡ್ತಾನೆ, ಆತನೇ ನನ್ನ ಬಂಡೆ” ಅಂತ ಬರೆದ. (ಕೀರ್ತ. 73:26) ಅಷ್ಟೇ ಅಲ್ಲ, ಸ್ವತಃ ಯೆಹೋವನೇ ತನ್ನನ್ನ ಬಂಡೆ ಅಂತ ಕರೆದಿದ್ದಾನೆ. (ಯೆಶಾ. 44:8) ಆತನು ಯಾವ ಮೂರು ಗುಣಗಳನ್ನ ತೋರಿಸೋದ್ರಿಂದ ಆತನನ್ನ ಬಂಡೆಗೆ ಹೋಲಿಸಲಾಗಿದೆ ಮತ್ತು ಆತನನ್ನ ನಮ್ಮ ಬಂಡೆ ಮಾಡ್ಕೊಳ್ಳೋದು ಹೇಗೆ ಅಂತ ಈಗ ಕಲಿಯೋಣ.—ಧರ್ಮೋ. 32:31.

ಯೆಹೋವನ ಸೇವಕರು ಆತನನ್ನ ಬಂಡೆಯಾಗಿ ನೋಡ್ತಾರೆ. (ಪ್ಯಾರ 3 ನೋಡಿ)


4. ಯೆಹೋವ ಹೇಗೆ ನಮ್ಮ ಆಶ್ರಯ ಆಗಿದ್ದಾನೆ? (ಕೀರ್ತನೆ 94:22)

4 ಯೆಹೋವ ನಮ್ಮ ಆಶ್ರಯ ಆಗಿದ್ದಾನೆ. ಬಿರುಗಾಳಿಯ ಸಮಯದಲ್ಲಿ ಬಂಡೆ ಆಶ್ರಯ ಕೊಡೋ ತರ ನಮ್ಮ ಜೀವನದಲ್ಲಿ ಸಮಸ್ಯೆಗಳು ಬಂದಾಗ ಯೆಹೋವ ನಮಗೆ ಬಂಡೆ ತರ ಆಶ್ರಯವಾಗಿ ಇರ್ತಾನೆ, ನಮ್ಮನ್ನ ಕಾಪಾಡ್ತಾನೆ. ನಮಗೆ ಆತನ ಜೊತೆ ಇರೋ ಸ್ನೇಹ ಸಂಬಂಧವನ್ನ ಕಾಪಾಡಿಕೊಳ್ಳೋಕೆ ಸಹಾಯ ಮಾಡ್ತಾನೆ. (ಕೀರ್ತನೆ 94:22 ಓದಿ.) ಅಷ್ಟೇ ಅಲ್ಲ, ಎಂಥದ್ದೇ ಸಮಸ್ಯೆ ಬಂದ್ರೂ ಅದ್ರಿಂದ ನಮಗೆ ಶಾಶ್ವತಕ್ಕೂ ಹಾನಿ ಆಗದೇ ಇರೋ ತರ ನೋಡ್ಕೊಳ್ತಾನೆ. ಈಗ ನಮ್ಮ ಶಾಂತಿ ನೆಮ್ಮದಿಯನ್ನ ಹಾಳು ಮಾಡೋ ಯಾವುದೇ ವಿಷ್ಯಗಳನ್ನ ಮುಂದೆ ತೆಗೆದು ಹಾಕ್ತೀನಿ ಅಂತನೂ ಮಾತು ಕೊಟ್ಟಿದ್ದಾನೆ.—ಯೆಹೆ. 34:25, 26.

5. ಬಂಡೆ ತರ ಇರೋ ಯೆಹೋವನನ್ನ ನಮ್ಮ ಆಶ್ರಯವಾಗಿ ಮಾಡ್ಕೊಳ್ಳೋದು ಹೇಗೆ?

5 ಬಂಡೆ ತರ ಇರೋ ಯೆಹೋವನನ್ನ ನಮ್ಮ ಆಶ್ರಯವಾಗಿ ಮಾಡ್ಕೊಳ್ಳೋ ಒಂದು ವಿಧ, ಆತನಿಗೆ ಪ್ರಾರ್ಥನೆ ಮಾಡೋದು. ನಾವು ಆತನಿಗೆ ಪ್ರಾರ್ಥನೆ ಮಾಡಿದಾಗ ನಮ್ಮ ತಿಳುವಳಿಕೆಗೂ ಮೀರಿದ ಶಾಂತಿಯನ್ನ ಕೊಡ್ತಾನೆ. (ಫಿಲಿ. 4:6, 7) ಸಹೋದರ ಆರ್ಟಮ್‌ ಅವರ ಅನುಭವ ನೋಡಿ. ಅವರು ತಮ್ಮ ನಂಬಿಕೆ ಕಾರಣ ಜೈಲಲ್ಲಿ ಇರಬೇಕಾಯ್ತು. ಅವರನ್ನ ವಿಚಾರಣೆ ಮಾಡಿದಾಗೆಲ್ಲ ಅವರ ಜೊತೆ ತುಂಬ ಕ್ರೂರವಾಗಿ ನಡ್ಕೊಳ್ತಿದ್ರು, ಅವಮಾನ ಮಾಡ್ತಿದ್ರು. ಆ ಸಹೋದರ ಹೇಳ್ತಾರೆ: “ಅಧಿಕಾರಿ ನನ್ನನ್ನ ವಿಚಾರಣೆ ಮಾಡೋಕೆ ಕರೆದಾಗೆಲ್ಲ ತುಂಬ ಚಿಂತೆ, ಒತ್ತಡ ಆಗ್ತಿತ್ತು. ಆಗ ನಾನು ಯೆಹೋವ ದೇವ್ರಿಗೆ ಪ್ರಾರ್ಥನೆ ಮಾಡ್ತಿದ್ದೆ. ದೇವರೇ ನನ್ನ ಮನಸ್ಸಿಗೆ ಶಾಂತಿ ಕೊಡು, ವಿವೇಕ ಕೊಡು ಅಂತ ಕೇಳ್ಕೊಳ್ತಿದ್ದೆ. . . . ಹೀಗೆ ಆ ಅಧಿಕಾರಿ ಎಷ್ಟೇ ಪ್ರಯತ್ನ ಮಾಡಿದ್ರೂ ನಾನು ಸೋತು ಹೋಗಲಿಲ್ಲ. ಯೆಹೋವ ದೇವರು ನನಗೆ ಸಹಾಯ ಮಾಡ್ತಾ ಇದ್ದಿದ್ರಿಂದ ನಾನು ಒಂದು ದೊಡ್ಡ ಕಲ್ಲಿನ ಗೋಡೆ ಹಿಂದೆ ನಿಂತಿದ್ದೀನಿ ಅಂತ ಅನಿಸ್ತು.”

6. ನಾವು ಯಾಕೆ ಯೆಹೋವನ ಮೇಲೆ ಭರವಸೆ ಇಡಬಹುದು? (ಯೆಶಾಯ 26:3, 4)

6 ಯೆಹೋವನ ಮೇಲೆ ನಾವು ಭರವಸೆ ಇಡಬಹುದು. ಒಂದು ದೊಡ್ಡ ಬಂಡೆ ತನ್ನ ಜಾಗವನ್ನ ಬಿಟ್ಟು ಕದಲಲ್ಲ. ಅದೇ ತರ ಯೆಹೋವನೂ ಕದಲಲ್ಲ. ಅಂದ್ರೆ ನಮಗೆ ಸಹಾಯ ಮಾಡೋಕೆ ಯಾವಾಗ್ಲೂ ರೆಡಿ ಆಗಿರ್ತಾನೆ. ಆತನು ಶಾಶ್ವತಕ್ಕೂ ಇರೋ ಬಂಡೆ ಆಗಿರೋದ್ರಿಂದ ನಾವು ಆತನ ಮೇಲೆ ಭರವಸೆ ಇಡಬಹುದು. (ಯೆಶಾಯ 26:3, 4 ಓದಿ.) ಜೀವ ಇರೋ ದೇವರು ಆಗಿರೋದ್ರಿಂದ ಮತ್ತು ಯಾವಾಗ್ಲೂ ಇರೋದ್ರಿಂದ ಆತನು ಕೊಟ್ಟಿರೋ ಮಾತನ್ನ ಉಳಿಸ್ಕೊಳ್ತಾನೆ. ನಮ್ಮ ಪ್ರಾರ್ಥನೆಗಳನ್ನ ಕೇಳಿಸ್ಕೊಳ್ತಾನೆ. ನಮಗೆ ಬೇಕಾಗಿರೋ ಸಹಾಯ ಮಾಡೇ ಮಾಡ್ತಾನೆ. ಆತನು ತನ್ನ ಸೇವಕರ ಜೊತೆ ಯಾವಾಗ್ಲೂ ನಿಷ್ಠೆಯಿಂದ ನಡ್ಕೊಳ್ತಾನೆ. (2 ಸಮು. 22:26) ಅದಕ್ಕೆ ನಾವು ಆತನ ಮೇಲೆ ಯಾವಾಗ್ಲೂ ಆತ್ಕೊಬಹುದು. ನಾವು ಆತನಿಗೋಸ್ಕರ ಮಾಡಿರೋದನ್ನ ಯಾವತ್ತೂ ಮರಿಯಲ್ಲ. ಅದಕ್ಕೆ ಪ್ರತಿಫಲ ಕೊಟ್ಟೇ ಕೊಡ್ತಾನೆ.—ಇಬ್ರಿ. 6:10; 11:6.

7. ಯೆಹೋವನ ಮೇಲೆ ಭರವಸೆ ಇಟ್ಟಾಗ ನಮಗೆ ಹೇಗೆ ಅನಿಸುತ್ತೆ? (ಚಿತ್ರ ನೋಡಿ.)

7 ಯೆಹೋವನನ್ನ ನಮ್ಮ ಬಂಡೆಯಾಗಿ ಮಾಡ್ಕೊಳ್ಳೋ ಇನ್ನೊಂದು ವಿಧ, ಆತನ ಮೇಲೆ ಪೂರ್ತಿ ಭರವಸೆ ಇಡೋ ಮೂಲಕ. ಕಷ್ಟದಲ್ಲಿ ಇದ್ದಾಗ್ಲೂ ಆತನ ಮಾತು ಕೇಳಿದ್ರೆ ನಮಗೇ ಒಳ್ಳೇದಾಗುತ್ತೆ. (ಯೆಶಾ. 48:17, 18) ಯೆಹೋವ ನಮಗೆ ಹೇಗೆ ಸಹಾಯ ಮಾಡ್ತಿದ್ದಾನೆ ಅಂತ ಅನುಭವಿಸಿ ನೋಡಿದಾಗ ಆತನ ಮೇಲೆ ನಮ್ಮ ಭರವಸೆ ಇನ್ನೂ ಜಾಸ್ತಿ ಆಗುತ್ತೆ. ಹೀಗೆ ಎಂಥದ್ದೇ ಕಷ್ಟ ಬಂದ್ರೂ ಅದನ್ನ ತಾಳ್ಕೊಳ್ಳೋಕೆ ಆತನು ನಮಗೆ ಸಹಾಯ ಮಾಡೇ ಮಾಡ್ತಾನೆ ಅಂತ ನಂಬ್ತೀವಿ. ಯಾರೂ ನಮಗೆ ಸಹಾಯ ಮಾಡೋಕೆ ಆಗದೇ ಇರುವಷ್ಟು ಕಷ್ಟದ ಸನ್ನಿವೇಶದಲ್ಲಿದ್ದಾಗ ಆತನೇ ನಮ್ಮ ಜೊತೆ ಇದ್ದು ಸಹಾಯ ಮಾಡ್ತಿರೋದನ್ನ ಕಣ್ಣಾರೆ ನೋಡ್ತೀವಿ. ಸಹೋದರ ವ್ಲಾಡಿಮೀರ್‌ ಅವರ ಅನುಭವ ನೋಡಿ. ಅವರು ಹೇಳ್ತಾರೆ: “ನಾನು ಜೈಲಲ್ಲಿ ಇದ್ದಾಗ ಯೆಹೋವ ನನ್ನ ಹತ್ರಾನೇ ಇದ್ದಾನೆ ಅಂತ ಅನಿಸ್ತು. ಅದು ನನ್ನ ಜೀವನದಲ್ಲೇ ಕಳೆದ ಒಳ್ಳೇ ಸಮಯ ಆಗಿತ್ತು. ಜೈಲಲ್ಲಿ ಒಂಟಿಯಾಗಿದ್ರಿಂದ ಸನ್ನಿವೇಶ ಕೈಮೀರಿ ಹೋಗಿದ್ರಿಂದ ಯೆಹೋವನ ಮೇಲೆ ಜಾಸ್ತಿ ಆತುಕೊಳ್ಳೋಕೆ ಕಲಿತೆ.”

ನಾವು ಯೆಹೋವನನ್ನ ಮೇಲೆ ಪೂರ್ತಿ ಆತುಕೊಳ್ಳುವಾಗ ಆತನನ್ನ ನಮ್ಮ ಬಂಡೆಯಾಗಿ ಮಾಡ್ಕೊಳ್ತೀವಿ. (ಪ್ಯಾರ 7 ನೋಡಿ)


8. (ಎ) ಯೆಹೋವ ಬಂಡೆ ತರ ಸ್ಥಿರವಾಗಿದ್ದಾನೆ ಅಂತ ಹೇಗೆ ಹೇಳಬಹುದು? (ಬಿ) ಯೆಹೋವ ನಮ್ಮ ಬಂಡೆ ಆಗಿರೋದ್ರಿಂದ ನಾವು ಏನಂತ ನಂಬಬಹುದು? (ಕೀರ್ತನೆ 62:6, 7)

8 ಯೆಹೋವ ಸ್ಥಿರವಾಗಿ ಇರ್ತಾನೆ. ದೊಡ್ಡ ಬಂಡೆ ಸ್ಥಿರವಾಗಿ ಕದಲದೇ ಇರೋ ತರ ಯೆಹೋವ ಸ್ಥಿರವಾಗಿ ಇರ್ತಾನೆ. ಆತನು ಯಾವತ್ತೂ ಬದಲಾಗಲ್ಲ. ಆತನ ವ್ಯಕ್ತಿತ್ವ, ಉದ್ದೇಶ ಯಾವತ್ತೂ ಬದಲಾಗಲ್ಲ. (ಮಲಾ. 3:6) ಏದೆನ್‌ ತೋಟದಲ್ಲಿ ಆದಾಮ ಮತ್ತು ಹವ್ವ ಯೆಹೋವನ ವಿರುದ್ಧ ದಂಗೆ ಎದ್ದಾಗ್ಲೂ ಆತನು ತನ್ನ ಉದ್ದೇಶವನ್ನ ಬದಲಾಯಿಸಲಿಲ್ಲ. ಅದಕ್ಕೆ ಅಪೊಸ್ತಲ ಪೌಲ ಯೆಹೋವನ ಬಗ್ಗೆ “ತನ್ನ ಸ್ವಭಾವದ ವಿರುದ್ಧ ನಡಿಯೋಕೆ ಆತನಿಗೆ ಸಾಧ್ಯನೇ ಇಲ್ಲ” ಅಂದ. (2 ತಿಮೊ. 2:13) ಅಂದ್ರೆ ಏನೇ ಆಗಲಿ, ಯಾರು ಏನೇ ಮಾಡಲಿ ಯೆಹೋವ ತನ್ನ ಗುಣಗಳನ್ನಾಗಲಿ, ಉದ್ದೇಶವನ್ನಾಗಲಿ, ನೀತಿ-ನಿಯಮಗಳನ್ನಾಗಲಿ ಬದಲಾಯಿಸ್ಕೊಳ್ಳಲ್ಲ. ಅದನ್ನ ಬಿಟ್ಟು ಕದಲಲ್ಲ. ಯೆಹೋವ ಯಾವತ್ತೂ ಬದಲಾಗದೇ ಇರೋದ್ರಿಂದ ಕಷ್ಟದ ಸಮಯದಲ್ಲಿ ಆತನು ನಮಗೆ ಸಹಾಯ ಮಾಡ್ತಾನೆ ಮತ್ತು ಮುಂದೆ ಏನು ಮಾಡ್ತಾನೆ ಅಂತ ಮಾತು ಕೊಟ್ಟಿದ್ದಾನೋ ಅದನ್ನ ಮಾಡ್ತಾನೆ ಅಂತ ನಂಬಬಹುದು.ಕೀರ್ತನೆ 62:6, 7 ಓದಿ.

9. ಸಹೋದರಿ ಟಟ್ಯಾನಾ ಅವರ ಅನುಭವದಿಂದ ನೀವೇನು ಕಲಿತ್ರಿ?

9 ಯೆಹೋವನನ್ನ ನಮ್ಮ ಬಂಡೆಯಾಗಿ ಮಾಡ್ಕೊಳ್ಳೋಕೆ ಇನ್ನೇನು ಮಾಡಬಹುದು? ಆತನು ಎಷ್ಟು ಒಳ್ಳೇ ದೇವರು ಮತ್ತು ನಮ್ಮ ಬಗ್ಗೆ ಮತ್ತು ಭೂಮಿ ಬಗ್ಗೆ ಏನೆಲ್ಲ ಉದ್ದೇಶ ಇಟ್ಕೊಂಡಿದ್ದಾನೆ ಅಂತ ಯೋಚಿಸಬೇಕು. ಈ ರೀತಿ ಯೋಚಿಸುವಾಗ ನಮಗೆ ಆತನ ಮೇಲೆ ಇನ್ನೂ ಭರವಸೆ ಜಾಸ್ತಿ ಆಗುತ್ತೆ. ಅಷ್ಟೇ ಅಲ್ಲ, ಕಷ್ಟಗಳು ಬಂದಾಗ ಶಾಂತಿಯಿಂದ ಇರೋಕೆ ಆಗುತ್ತೆ ಮತ್ತು ನಿಯತ್ತಾಗಿ ಇರೋಕೆ ಆಗುತ್ತೆ. (ಕೀರ್ತ. 16:8) ಸಹೋದರಿ ಟಟ್ಯಾನಾ ಅವರ ಅನುಭವ ನೋಡಿ. ಅವರು ತಮ್ಮ ನಂಬಿಕೆಯ ಕಾರಣ ಗೃಹಬಂಧನದಲ್ಲಿ ಇರಬೇಕಾಯ್ತು. ಅವರು ಹೇಳ್ತಾರೆ: “ನಾಲ್ಕು ಗೋಡೆಗಳ ಮಧ್ಯೆ ಇದ್ದಾಗ ತುಂಬ ಕಷ್ಟ ಆಗ್ತಿತ್ತು, ತುಂಬ ಬೇಜಾರಾಗ್ತಿತ್ತು. ನಾನು ಕುಗ್ಗಿ ಹೋಗಿದ್ದೆ.” ಆಮೇಲೆ ಅವರು ಯೆಹೋವನ ಬಗ್ಗೆ, ಆತನ ಉದ್ದೇಶದ ಬಗ್ಗೆ ಯೋಚಿಸಿದ್ರು. ಕಷ್ಟದ ಸಮಯದಲ್ಲಿ ಯೆಹೋವನಿಗೆ ನಿಯತ್ತಾಗಿ ಇರೋದು ಎಷ್ಟು ಪ್ರಾಮುಖ್ಯ ಅಂತಾನೂ ಯೋಚಿಸಿದ್ರು. ಇದ್ರಿಂದ ಅವ್ರಿಗೆ ಶಾಂತಿಯಿಂದ ಇರೋಕಾಯ್ತು ಮತ್ತು ಆ ಕಷ್ಟವನ್ನ ತಾಳಿಕೊಳ್ಳೋಕೆ ಆಯ್ತು. “ನಾನು ಯೆಹೋವನಿಗೆ ನಿಯತ್ತಾಗಿ ಇರೋದ್ರಿಂದಾನೇ ಈ ಎಲ್ಲ ಕಷ್ಟಗಳು ಬರ್ತಾ ಇದೆ ಅಂತ ಅರ್ಥ ಮಾಡ್ಕೊಂಡೆ. ನನ್ನ ಬಗ್ಗೆ ಆಗಲಿ, ನನಗೆ ಬರೋ ಕಷ್ಟಗಳ ಬಗ್ಗೆ ಆಗಲಿ ಯೋಚಿಸೋದನ್ನ ನಿಲ್ಲಿಸಿಬಿಟ್ಟೆ” ಅಂತ ಹೇಳ್ತಾರೆ.

10. ಈಗ ನಾವು ಯೆಹೋವನನ್ನ ನಮ್ಮ ಬಂಡೆ ಮಾಡ್ಕೊಳ್ಳೋದು ಹೇಗೆ?

10 ಹೋಗ್ತಾ ಹೋಗ್ತಾ ಜಾಸ್ತಿ ಕಷ್ಟ ಸಮಸ್ಯೆಗಳು ಬರೋದ್ರಿಂದ ನಾವು ಹಿಂದೆಂದಿಗಿಂತಲೂ ಹೆಚ್ಚು ಯೆಹೋವನ ಮೇಲೆ ಭರವಸೆ ಇಡಬೇಕಾಗುತ್ತೆ. ಅದಕ್ಕೆ ನಾವು ಈಗಿಂದಾನೇ ಏನೇ ಕಷ್ಟ ಬಂದ್ರೂ ಆತನಿಗೆ ನಿಯತ್ತಾಗಿ ಇರೋಕೆ ಯೆಹೋವ ಸಹಾಯ ಮಾಡೇ ಮಾಡ್ತಾನೆ ಅನ್ನೋ ನಂಬಿಕೆಯನ್ನ ಜಾಸ್ತಿ ಮಾಡ್ಕೊಬೇಕು. ಅದನ್ನ ಮಾಡೋದು ಹೇಗೆ? ಬೈಬಲ್‌ನಲ್ಲಿ ಇರೋ ನಂಬಿಗಸ್ತ ಸೇವಕರ ಬಗ್ಗೆ ಮತ್ತು ನಮ್ಮ ದಿನಗಳಲ್ಲಿರೋ ನಂಬಿಗಸ್ತ ಸೇವಕರ ಅನುಭವಗಳನ್ನ ಚೆನ್ನಾಗಿ ಓದಬೇಕು. ಯೆಹೋವ ಅವರಿಗೆ ಹೇಗೆಲ್ಲ ಸಹಾಯ ಮಾಡಿದ್ದಾನೆ, ಅವ್ರಿಗೆ ಹೇಗೆ ಬಂಡೆಯಾಗಿದ್ದ ಅಂತ ನಾವು ಚೆನ್ನಾಗಿ ಯೋಚಿಸಬೇಕು. ಹೀಗೆ ಮಾಡಿದ್ರೆ ನೀವೂ ಯೆಹೋವ ದೇವರನ್ನ ನಿಮ್ಮ ಬಂಡೆಯಾಗಿ ಮಾಡ್ಕೊಳ್ತೀರ.

ಬಂಡೆ ಆಗಿರೋ ಯೆಹೋವನ ತರ ಇರಿ

11. ಯೆಹೋವನಲ್ಲಿರೋ ಗುಣಗಳನ್ನ ನಾವೂ ಯಾಕೆ ತೋರಿಸಬೇಕು? (“ ಯುವ ಸಹೋದರರು ಇಡಬಹುದಾದ ಗುರಿ” ಅನ್ನೋ ಚೌಕ ನೋಡಿ.)

11 ಯೆಹೋವ ಯಾವ ಗುಣಗಳನ್ನ ತೋರಿಸ್ತಾ ಇರೋದ್ರಿಂದ ಆತನನ್ನ ಬಂಡೆಗೆ ಹೋಲಿಸಲಾಗಿದೆ ಅಂತ ಕಲಿತ್ವಿ. ಈಗ ನಾವು ಆ ಗುಣಗಳನ್ನ ಹೇಗೆ ತೋರಿಸೋದು ಅಂತ ನೋಡೋಣ. ನಾವು ಈ ಗುಣಗಳನ್ನ ಎಷ್ಟು ಹೆಚ್ಚಾಗಿ ತೋರಿಸ್ತೀವೋ ಅಷ್ಟೇ ಹೆಚ್ಚಾಗಿ ನಮ್ಮ ಸಭೆಯಲ್ಲಿರೋ ಇರೋರನ್ನ ಬಲಪಡಿಸೋಕೆ ಆಗುತ್ತೆ. ಯೇಸು ತನ್ನ ಶಿಷ್ಯ ಸೀಮೋನನಿಗೆ ಕೇಫ (ಗ್ರೀಕ್‌ ಭಾಷೆಯಲ್ಲಿ “ಪೇತ್ರ”) ಅನ್ನೋ ಹೆಸರನ್ನ ಕೊಟ್ಟ. ಇದರರ್ಥ “ಬಂಡೆಯ ಒಂದು ತುಂಡು” ಅಂತಾಗಿದೆ. (ಯೋಹಾ. 1:42) ಯೇಸು ಪೇತ್ರನಿಗೆ ಈ ಹೆಸರನ್ನ ಯಾಕೆ ಕೊಟ್ಟನು? ಮುಂದಿನ ದಿನಗಳಲ್ಲಿ ಪೇತ್ರ ಸಭೆಯಲ್ಲಿ ಇರೋರಿಗೆ ಸಾಂತ್ವನ ಕೊಡ್ತಾನೆ ಮತ್ತು ಅವರ ನಂಬಿಕೆಯನ್ನ ಬಲಪಡಿಸ್ತಾನೆ ಅಂತ ಯೇಸುಗೆ ಗೊತ್ತಿತ್ತು. ಹಿರಿಯರು “ನೆರಳು ಕೊಡೋ ದೊಡ್ಡ ಬಂಡೆ ತರ ಇರ್ತಾರೆ” ಅಂತ ಬೈಬಲ್‌ ಹೇಳುತ್ತೆ. (ಯೆಶಾ. 32:2) ಅಂದ್ರೆ ಹಿರಿಯರು ಸಹೋದರ ಸಹೋದರಿಯರನ್ನ ತುಂಬ ಕಾಳಜಿ ಮಾಡ್ತಾರೆ. ಅವರಷ್ಟೇ ಅಲ್ಲ, ನಾವೆಲ್ರೂ ಬಂಡೆ ತರ ಇರೋ ಯೆಹೋವನ ಗುಣಗಳನ್ನ ತೋರಿಸಿದ್ರೆ, ಸಭೆಯಲ್ಲಿ ಇರೋರನ್ನ ಪ್ರೋತ್ಸಾಹಿಸೋಕೆ ಆಗುತ್ತೆ ಮತ್ತು ಅವರ ನಂಬಿಕೆಯನ್ನ ಬಲಪಡಿಸೋಕೆ ಆಗುತ್ತೆ.—ಎಫೆ. 5:1.

12. ಸಹೋದರ ಸಹೋದರಿಯರಿಗೆ ನಾವು ಹೇಗೆ ಆಶ್ರಯ ಆಗಬಹುದು?

12 ನೀವು ಆಶ್ರಯವಾಗಿರಿ. ನೈಸರ್ಗಿಕ ವಿಪತ್ತುಗಳಾದಾಗ, ಜನ ದಂಗೆ ಎದ್ದಾಗ, ಯುದ್ಧಗಳಾದಾಗ ನಮ್ಮ ಸಹೋದರ ಸಹೋದರಿಯರು ತಮ್ಮ ಮನೆಗಳನ್ನ ಬಿಟ್ಟು ಬೇರೆ ಕಡೆ ಹೋಗಬೇಕಾಗುತ್ತೆ. ಆಗ ನೀವು ಅವ್ರನ್ನ ನಿಮ್ಮ ಮನೆಗೆ ಸ್ವಾಗತಿಸೋ ಮೂಲಕ ಅವ್ರಿಗೆ ನಿಜಕ್ಕೂ ಆಶ್ರಯ ಆಗಿರಬಹುದು. “ಕೊನೇ ದಿನಗಳಲ್ಲಿ” ಹೋಗ್ತಾ ಹೋಗ್ತಾ ಸನ್ನಿವೇಶ ಇನ್ನೂ ಹದಗೆಡುತ್ತೆ. (2 ತಿಮೊ. 3:1) ಆಗ ನಮ್ಮ ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕೆ ನಮಗೆ ತುಂಬ ಅವಕಾಶಗಳು ಸಿಗುತ್ತೆ. ಸಹೋದರ ಸಹೋದರಿಯರಿಗೆ ಸಾಂತ್ವನ ಕೊಡುವಾಗ, ಪ್ರೀತಿ ತೋರಿಸುವಾಗ ಅವ್ರಿಗೆ ಆಶ್ರಯ ಆಗಬಹುದು. ಅದನ್ನ ಮಾಡೋ ಒಂದು ವಿಧ, ಅವರು ಕೂಟಗಳಿಗೆ ಬಂದಾಗ ಪ್ರೀತಿಯಿಂದ ಸ್ವಾಗತಿಸಬೇಕು. ಅವರ ಜೊತೆ ಚೆನ್ನಾಗಿ ಮಾತಾಡಬೇಕು. ಎಲ್ರೂ ಖುಷಿಯಾಗಿ ಇರೋ ತರ ನೋಡ್ಕೊಬೇಕು. ಲೋಕದಲ್ಲಿ ಜನ ತುಂಬ ಕೆಟ್ಟದಾಗಿ ನಡ್ಕೊತಾರೆ. ಪ್ರೀತಿ ತಣ್ಣಗಾಗಿ ಹೋಗಿದೆ. ಇದ್ರಿಂದ ಸಹೋದರ ಸಹೋದರಿಯರು ಕುಗ್ಗಿ ಹೋಗಿರುತ್ತಾರೆ. ಅದಕ್ಕೆ ಕೂಟಗಳಲ್ಲಿ ಅವರನ್ನ ಪ್ರೋತ್ಸಾಹಿಸಬೇಕು, ಅವರನ್ನ ಪ್ರೀತಿಸ್ತೀವಿ ಅಂತ ತೋರಿಸ್ಕೊಡಬೇಕು.

13. ಹಿರಿಯರು ಸಹೋದರ ಸಹೋದರಿಯರಿಗೆ ಹೇಗೆ ಆಶ್ರಯ ಆಗಿರಬಹುದು? (ಚಿತ್ರ ನೋಡಿ.)

13 ಹಿರಿಯರು ಬೇರೆಯವ್ರಿಗೆ ಆಶ್ರಯವಾಗಿ ಇರಬಹುದು ಹೇಗೆ? ನೈಸರ್ಗಿಕ ವಿಪತ್ತುಗಳು ಆದಾಗ, ಇದ್ದಕ್ಕಿದ್ದಂತೆ ನಮ್ಮ ಸಹೋದರರ ಆರೋಗ್ಯ ಹಾಳಾದಾಗ ಅವರು ಕೂಡಲೇ ಸಹಾಯ ಮಾಡೋಕೆ ಬೇಕಾದ ಏರ್ಪಾಡುಗಳನ್ನ ಮಾಡ್ತಾರೆ. ಅಷ್ಟೇ ಅಲ್ಲ, ಸಹೋದರ ಸಹೋದರಿಯರಿಗೆ ಸಮಸ್ಯೆಗಳು ಬಂದಾಗ ಅವರ ನಂಬಿಕೆಯನ್ನ ಬಲಪಡಿಸ್ತಾರೆ. ಸಭೆಯಲ್ಲಿರೋರು ಹಿರಿಯರ ಹತ್ರ ಮಾತಾಡಬೇಕಂದ್ರೆ ಅವರು ಪ್ರೀತಿಯಿಂದ ಮಾತಾಡಿಸೋರು ಆಗಿರಬೇಕು, ಚೆನ್ನಾಗಿ ಕೇಳಿಸ್ಕೊಬೇಕು, ಬೇರೆಯವರ ಸಮಸ್ಯೆಗಳನ್ನ ಅರ್ಥ ಮಾಡ್ಕೊಬೇಕು. ಆಗ ಅವರು ಮುಂದೆ ಬಂದು ಹಿರಿಯರ ಸಹಾಯ ಕೇಳ್ತಾರೆ. ಒಬ್ಬ ಹಿರಿಯ ಈ ರೀತಿ ನಡ್ಕೊಂಡ್ರೆ ಸಭೆಯಲ್ಲಿ ಇರೋರಿಗೆ ಅವರು ತೋರಿಸೋ ಪ್ರೀತಿ ಅರ್ಥ ಆಗುತ್ತೆ. ಬೈಬಲಿಂದ ಸಲಹೆ ಕೊಟ್ಟಾಗ ಅದನ್ನ ಪಾಲಿಸೋಕೆ ಸುಲಭ ಆಗುತ್ತೆ.—1 ಥೆಸ. 2:7, 8, 11.

ಸಭೆಯಲ್ಲಿರೋ ಸಹೋದರ ಸಹೋದರಿಯರಿಗೆ ಎಂಥದ್ದೇ ಕಷ್ಟ ಬಂದ್ರೂ ಹಿರಿಯರು ಅವ್ರಿಗೆ ಆಶ್ರಯವಾಗಿ ಇರ್ತಾರೆ. (ಪ್ಯಾರ 13 ನೋಡಿ) a


14. ಬೇರೆಯವರು ನಮ್ಮ ಮೇಲೆ ಭರವಸೆ ಇಡಬೇಕು ಅಂದ್ರೆ ನಾವೇನು ಮಾಡಬೇಕು?

14 ಬೇರೆಯವರು ಭರವಸೆ ಇಡೋ ತರ ನಡ್ಕೊಳ್ಳಿ. ನಾವು ಸಹಾಯ ಮಾಡೋಕೆ ಯಾವಾಗ್ಲೂ ರೆಡಿ ಇರ್ತೀವಿ, ಕಷ್ಟ ಬಂದಾಗಲೂ ಅವರ ಜೊತೆ ಇರ್ತೀವಿ ಅಂತ ಸಭೆಯಲ್ಲಿ ಇರೋರಿಗೆ ನಮ್ಮ ಮೇಲೆ ಭರವಸೆ ಇರಬೇಕು. (ಜ್ಞಾನೋ. 17:17) ಆ ಭರವಸೆ ಬರಬೇಕಂದ್ರೆ ನಾವೇನು ಮಾಡಬೇಕು? ಯೆಹೋವನಲ್ಲಿರೋ ಗುಣಗಳನ್ನ ಯಾವಾಗ್ಲೂ ತೋರಿಸಬೇಕು. ಮಾತುಕೊಟ್ಟ ಹಾಗೆ ನಡ್ಕೋಬೇಕು. ಕೆಲಸಗಳನ್ನ ಸರಿಯಾದ ಸಮಯಕ್ಕೆ ಮಾಡಬೇಕು. (ಮತ್ತಾ. 5:37) ಸಹೋದರ ಸಹೋದರಿಯರಿಗೆ ಸಹಾಯ ಬೇಕಾದಾಗ ಅವರಿಗೆ ತಕ್ಷಣ ಸಹಾಯ ಮಾಡೋಕೆ ರೆಡಿ ಇರಬೇಕು. ನಮಗೆ ನೇಮಕಗಳು ಸಿಕ್ಕಾಗ ಕೊಟ್ಟಿರೋ ನಿರ್ದೇಶನಗಳ ಪ್ರಕಾರನೇ ಅದನ್ನ ಮಾಡಿ ಮುಗಿಸಬೇಕು. ಹೀಗೆ ನಾವು ಬೇರೆಯವರ ಭರವಸೆಯನ್ನ ಗಳಿಸೋಕೆ ಆಗುತ್ತೆ.

15. ಭರವಸೆ ಗಳಿಸಿರೋ ಹಿರಿಯರು ಸಭೆಗೆ ಹೇಗೆಲ್ಲ ಆಶೀರ್ವಾದ ಆಗಿದ್ದಾರೆ?

15 ಭರವಸೆ ಗಳಿಸಿರೋ ಹಿರಿಯರು ಸಭೆಗೆ ಆಶೀರ್ವಾದ ಆಗಿದ್ದಾರೆ. ಹೇಗಂದ್ರೆ ಸಹೋದರ ಸಹೋದರಿಯರಿಗೆ ಹಿರಿಯರನ್ನ ಅಥವಾ ತಮ್ಮ ಗುಂಪು ಮೇಲ್ವಿಚಾರಕರನ್ನ ಯಾವಾಗ ಬೇಕಾದ್ರು ಸಹಾಯ ಕೇಳಬಹುದು ಅಂತ ಗೊತ್ತಿದ್ರೆ ಅವರು ಜಾಸ್ತಿ ಚಿಂತೆ ಮಾಡೋ ಅವಶ್ಯಕತೆ ಇರಲ್ಲ. ಹಿರಿಯರು ಸಹಾಯ ಮಾಡೋಕೆ ಯಾವಾಗ್ಲೂ ರೆಡಿ ಇದ್ರೆ ಅವರು ನಮ್ಮನ್ನ ಪ್ರೀತಿಸ್ತಾರೆ, ಅವ್ರಿಗೆ ನಮ್ಮ ಬಗ್ಗೆ ಕಾಳಜಿ ಇದೆ ಅಂತ ಸಭೆಯಲ್ಲಿ ಇರೋರಿಗೆ ಅನಿಸುತ್ತೆ. ಹಿರಿಯರು ತಮಗೆ ಅನಿಸಿದ್ದನ್ನ ಅಲ್ಲದೆ, ಬೈಬಲಿಂದ, ಪ್ರಕಾಶನಗಳಿಂದ ಸಲಹೆಗಳನ್ನ ಕೊಟ್ರೆ ಸಭೆಯಲ್ಲಿ ಇರೋರಿಗೆ ಅವರ ಮೇಲೆ ಇನ್ನೂ ಭರವಸೆ ಹೆಚ್ಚಾಗುತ್ತೆ. ತಾವು ಹೇಳೋ ವೈಯಕ್ತಿಕ ವಿಷ್ಯಗಳನ್ನ ಹಿರಿಯರು ಬೇರೆ ಯಾರಿಗೂ ಹೇಳಲ್ಲ ಮತ್ತು ಅವರು ಮಾತುಕೊಟ್ಟಂತೆ ನಡ್ಕೊಳ್ತಾರೆ ಅಂತ ಅನಿಸಿದಾಗ ಅವರ ಮೇಲೆ ಇನ್ನೂ ಭರವಸೆ ಇಡ್ತಾರೆ.

16. ನಾವು ಸ್ಥಿರವಾಗಿ ಇದ್ರೆ ನಮಗೂ ಮತ್ತು ಬೇರೆಯವರಿಗೂ ಏನು ಪ್ರಯೋಜನ ಆಗುತ್ತೆ?

16 ಸ್ಥಿರವಾಗಿರಿ. ನೀವು ಸ್ಥಿರವಾಗಿದ್ರೆ ಸರಿಯಾಗಿ ಇರೋದನ್ನೇ ಮಾಡ್ತೀರ ಮತ್ತು ಯೆಹೋವನಿಗೆ ಇಷ್ಟ ಆಗೋ ತರ ನಿರ್ಣಯಗಳನ್ನ ಮಾಡ್ತೀರ. ಇದನ್ನ ಬೇರೆಯವರು ನೋಡಿ ಕಲಿತಾರೆ. ನಾವು ಬೈಬಲನ್ನ ಚೆನ್ನಾಗಿ ಅಧ್ಯಯನ ಮಾಡಿದಾಗ, ಯೆಹೋವನ ಮೇಲೆ ನಮ್ಮ ನಂಬಿಕೆಯನ್ನ ಬಲಪಡಿಸ್ಕೊಂಡಾಗ ನಿಯತ್ತಾಗಿ ಇರ್ತೀವಿ ಮತ್ತು ಆತನ ನೀತಿ ನಿಯಮಗಳನ್ನ ಪಾಲಿಸ್ತೀವಿ. ಆಗ ನಾವು ಸುಳ್ಳು ಬೋಧನೆಯ ಅಲೆಗಳಿಗೆ ಸಿಕ್ಕಿ ಸತ್ಯದಿಂದ ತೇಲಿ ಹೋಗಲ್ಲ. ಲೋಕದ ಯೋಚನೆಗಳು ನಮ್ಮನ್ನ ರೂಪಿಸೋಕೆ ಬಿಟ್ಟುಕೊಡಲ್ಲ. (ಎಫೆ. 4:14; ಯಾಕೋ. 1:6-8) ನಮಗೆ ಯೆಹೋವನ ಮೇಲೆ, ಆತನು ಕೊಟ್ಟಿರೋ ಮಾತಿನ ಮೇಲೆ ಭರವಸೆ ಇದ್ರೆ ಕೆಟ್ಟ ಸುದ್ದಿಗಳು ನಮ್ಮ ಕಿವಿಗೆ ಬಿದ್ದಾಗ ಚಿಂತೆ ಮಾಡಲ್ಲ, ಶಾಂತವಾಗಿ ಇರ್ತೀವಿ. (ಕೀರ್ತ. 112:7, 8) ಕಷ್ಟದಲ್ಲಿರೋ ಇರೋರಿಗೆ ಸಹಾಯ ಮಾಡೋಕೂ ಬಂದೆ ಬರ್ತೀವಿ.—1 ಥೆಸ. 3:2, 3.

17. ಸಹೋದರ ಸಹೋದರಿಯರು ಬಲವಾಗಿರೋಕೆ, ನೆಮ್ಮದಿಯಿಂದ ಇರೋಕೆ ಹಿರಿಯರು ಹೇಗೆ ಸಹಾಯ ಮಾಡ್ತಾರೆ?

17 ಹಿರಿಯರು ಎಲ್ಲ ವಿಷ್ಯಗಳಲ್ಲೂ ಇತಿಮಿತಿಯಿಂದ ಇರ್ತಾರೆ. ತಿಳುವಳಿಕೆಯಿಂದ ನಡ್ಕೊಳ್ತಾರೆ, ಶಿಸ್ತಿಂದ ಇರ್ತಾರೆ ಮತ್ತು ನಾನು ಹೇಳಿದ್ದೇ ಆಗಬೇಕು ಅನ್ನೋ ಗುಣ ಅವರಲ್ಲಿ ಇರಲ್ಲ. ಅವರು “ದೇವರ ಮಾತನ್ನ ಚಾಚೂತಪ್ಪದೆ” ಪಾಲಿಸ್ತಾರೆ. (ತೀತ 1:9; 1 ತಿಮೊ. 3:1-3) ಹಾಗಾಗಿ ಯೆಹೋವನ ಮೇಲೆ ನಂಬಿಕೆಯನ್ನ ಬೆಳೆಸ್ಕೊಳ್ಳೋಕೆ, ನೆಮ್ಮದಿಯಿಂದ ಇರೋಕೆ ಬೇರೆಯವರಿಗೆ ಸಹಾಯ ಮಾಡೋಕೆ ಆಗುತ್ತೆ. ಹಿರಿಯರು ತಪ್ಪದೇ ಕೂಟಗಳಿಗೆ ಹೋಗ್ತಾರೆ, ಸೇವೆ ಮಾಡ್ತಾರೆ ಮತ್ತು ವೈಯಕ್ತಿಕ ಅಧ್ಯಯನ ಮಾಡ್ತಾರೆ. ಹೀಗೆ ಅವರು ಬೇರೆಯವರಿಗೆ ಒಳ್ಳೇ ಮಾದರಿ ಆಗಿರ್ತಾರೆ. ಸಹೋದರ ಸಹೋದರಿಗೆ ಪರಿಪಾಲನಾ ಭೇಟಿ ಮಾಡುವಾಗ್ಲೂ ಈ ವಿಷ್ಯಗಳನ್ನ ಮಾಡೋಕೆ ಅವರಿಗೆ ಪ್ರೋತ್ಸಾಹ ಕೊಡ್ತಾರೆ. ಕಷ್ಟ-ಸಮಸ್ಯೆಗಳಿಂದ ಚಿಂತೆಯಲ್ಲಿ ಮುಳುಗಿ ಹೋದವರಿಗೆ ಹಿರಿಯರು ಯೆಹೋವನ ಮೇಲೆ ಭರವಸೆ ಇಡೋಕೆ ಮತ್ತು ಆತನ ಕೊಟ್ಟಿರೋ ಮಾತುಗಳ ಬಗ್ಗೆ ಯೋಚಿಸೋಕೆ ಅವ್ರಿಗೆ ಪ್ರೋತ್ಸಾಹಿಸ್ತಾರೆ.

18. ಯೆಹೋವನನ್ನ ಹೊಗಳೋಕೆ ಮತ್ತು ಆತನಿಗೆ ಹತ್ರ ಆಗೋಕೆ ನಾವು ಯಾಕೆ ಇಷ್ಟಪಡ್ತೀವಿ? (“ ಯೆಹೋವನಿಗೆ ಹತ್ರ ಆಗೋ ಒಂದು ವಿಧ” ಅನ್ನೋ ಚೌಕ ನೋಡಿ)

18 ಯೆಹೋವನ ಈ ಅದ್ಭುತ ಗುಣಗಳ ಬಗ್ಗೆ ಕಲಿತ ಮೇಲೆ ನಮಗೂ ರಾಜ ದಾವೀದನ ತರ “ನನ್ನ ಬಂಡೆಯಾಗಿರೋ ಯೆಹೋವನಿಗೆ ಹೊಗಳಿಕೆ ಸಿಗಲಿ” ಅಂತ ಹೇಳಬೇಕು ಅಂತ ಅನಿಸುತ್ತೆ. (ಕೀರ್ತ. 144:1) ಯೆಹೋವನ ಮೇಲೆ ನಾವು ಯಾವಾಗ್ಲೂ ಆತ್ಕೊಬಹುದು. ನಮ್ಮ ಜೀವನದುದ್ದಕ್ಕೂ, ಎಷ್ಟೇ ವಯಸ್ಸಾದ್ರೂ ಯೆಹೋವ ನಮ್ಮ ಕೈಬಿಡಲ್ಲ. ನಾವು ಆತನಿಗೆ ಯಾವಾಗ್ಲೂ ಹತ್ರ ಆಗಿರೋಕೆ ಆತನು ಸಹಾಯ ಮಾಡೇ ಮಾಡ್ತಾನೆ. ಆಗ ನಾವು “ಆತನು ನನ್ನ ಬಂಡೆ” ಅಂತ ದೃಢವಾಗಿ ಹೇಳಬಹುದು.—ಕೀರ್ತ. 92:14, 15.

ಗೀತೆ 133 ನಿನ್ನ ವಿಮೋಚನೆಗಾಗಿ ದೇವರನ್ನು ಆಶ್ರಯಿಸು

a ಮುಖಪುಟ : ರಾಜ್ಯ ಸಭಾಗೃಹದಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ಒಬ್ಬ ಸಹೋದರಿ ಇಬ್ಬರು ಹಿರಿಯರ ಹತ್ರ ಹೋಗಿ ಮಾತಾಡ್ತಿದ್ದಾರೆ.